“ಯಾವುದೇ ಜ್ಞಾನಾರ್ಥಿ ನಿನ್ನನ್ನು ಹುಡುಕಿ ಬಂದರೆ ನೀನು ಎರಡನೆಯ ಯೋಚನೆ ಮಾಡದೆ ನಿನ್ನಲ್ಲಿರುವ ಜ್ಞಾನವನ್ನು ಹಂಚಬೇಕು. ತನ್ನ ಕುಟುಂಬದ ಸದಸ್ಯರಲ್ಲದವರಿಗೆ ಸಂಗೀತ ಹೇಳಿಕೊಡಲು ಹಿಂಜರಿಯುವ ಉಸ್ತಾದರನ್ನು ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಬೇರೆ ಬೇರೆ ಗುರುಗಳಿಂದ ಕಲಿಯುವಾಗ ನಾನು ಅನುಭವಿಸಿದ ತೊಂದರೆ, ನೋವು ಮತ್ತು ಕಷ್ಟ ನಿನ್ನಿಂದ ಊಹಿಸಲು ಸಾಧ್ಯವಿಲ್ಲ. ಎಲ್ಲ ಕಷ್ಟಗಳ ನಡುವೆಯೂ ನನ್ನ ಭಿಕ್ಷಾ ಪಾತ್ರೆಯಲ್ಲಿ ಏನನ್ನು ಸಂಗ್ರಹಿಸಲು ಸಾಧ್ಯವಾಯಿತು ಅದನ್ನು ನಾನು ಧಾರಾಳವಾಗಿ ಹಂಚಿದ್ದೇನೆ. ಕಲಿಯುವ ಹಸಿವು ಇರುವವರಿಗೆ ಕಲಿಸದೇ ಇರುವುದು ಮಹಾಪಾಪ.”
ಅಪೂರ್ವ ಸಂಗೀತಗಾರ್ತಿ ಅನ್ನಪೂರ್ಣಾ ದೇವಿಯವರ ಕುರಿತು ಅತುಲ್ ಮರ್ಚಂಟ್ ಜಟಾಯು ಬರೆದ “ಅನ್ನಪೂರ್ಣಾ ದೇವಿ” ಕೃತಿಯನ್ನು ಎನ್. ಸಂಧ್ಯಾರಾಣಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತ ದೇವಿಕಾ ನಾಗೇಶ್ ಬರಹ ಇಲ್ಲಿದೆ.
“ಮಹಾನ್ ವ್ಯಕ್ತಿಗಳು ತಲುಪಿದ ಸ್ಥಾಪಿಸಿಕೊಂಡ ಎತ್ತರಗಳು ಹಠಾತ್ ಜಿಗಿತದಿಂದ ಸಾಧಿಸಲ್ಪಟ್ಟವಲ್ಲ. ಜೊತೆಗಾರರೆಲ್ಲ ಮಲಗಿ ನಿದ್ರಿಸುತ್ತಿದ್ದಾಗಲೂ ಅವರು ಔನತ್ಯಕ್ಕೇರಲು ಕತ್ತಲಿನಲ್ಲೂ ಶ್ರಮಿಸುತ್ತಿದ್ದರು”. ಹೆನ್ರಿ ವರ್ಡ್ಸ್ ವರ್ತ್
ಲಾಂಗ್ ಫೆಲೋ ಅವರ ಈ ಮಾತುಗಳು ಈ ಪ್ರಪಂಚದ ಪ್ರತಿಯೊಬ್ಬ ಖ್ಯಾತ ಸಾಧಕರ, ಕಲಾವಿದರ ಬದುಕಿನ ಕಟು ವಾಸ್ತವ. ಆದರೆ ಸಾಧನೆಯಷ್ಟೇ ಸಾಲದು, ಮೌನ ಧ್ಯಾನಸ್ಥ ಮನಸ್ಥಿತಿಯೂ ಬೇಕು ಎನ್ನುವುದನ್ನು ಅಜ್ಞಾತವಾಗಿಯೇ ಉಳಿದ “ಅಪೂರ್ವ ಸಂಗೀತ ಕಲಾವಿದೆಯ ಅಶ್ರುತ ಕಥನ ಅನ್ನಪೂರ್ಣಾ ದೇವಿ” ನಿರೂಪಿಸುತ್ತದೆ. ಅತುಲ್ ಮರ್ಚಂಟ್ ಜಟಾಯು ಇಂಗ್ಲೀಷ್‌ನಲ್ಲಿ ಬರೆದ ಈ ಕಥಾನಕವನ್ನು ಕನ್ನಡದ್ದೇ ಕಥಾನಕ ಎನ್ನುವ ಭಾವಾಭಿವ್ಯಕ್ತಿಯೊಂದಿಗೆ ಕಟ್ಟಿಕೊಟ್ಟವರು ಎನ್. ಸಂಧ್ಯಾರಾಣಿ.
“ಎಷ್ಟೋ ವರ್ಷಗಳಿಗೊಮ್ಮೆ ಮಾನವ ಬದುಕುಗಳನ್ನು ಸ್ಪರ್ಶಿಸುವ ಒಂದು ಮಹಾನ್ ಆಧ್ಯಾತ್ಮಿಕ ಮತ್ತು ಸಂಗೀತಾತ್ಮಕ ಪ್ರತಿಭಾ ಶಕ್ತಿಯನ್ನು ಅರಿಯುವಲ್ಲಿ ಮಾಡಿದ ಒಂದು ಪ್ರಾಮಾಣಿಕ ಪ್ರಯತ್ನ” ಎನ್ನುವ ಮಾತುಗಳು ಈ ಕೃತಿಯ ಕನ್ನಡ ಇಂಗ್ಲಿಷ್ ಲೇಖಕರಿಬ್ಬರ ಪಾಲಿಗೂ ಸಲ್ಲತಕ್ಕ ಮಾತು. ವಿಶೇಷವೆಂದರೆ ಈ ಜೀವನ ಕಥನ ಮೈಹರ್‌ನ ಬಾಬಾ ಉಸ್ತಾದ್ ಅಲ್ಲಾವುದ್ದೀನ್ ಖಾನ್‌ರ ಗುರುಕುಲದಲ್ಲಿ ಸಂಗೀತ ಸಾಧನೆಯಲ್ಲಿ ಪಳಗಿದ ಶಿಷ್ಯರ, ಮಕ್ಕಳ, ಮೊಮ್ಮಕ್ಕಳ ಕಥೆಯೊಂದಿಗೆ ಆ ಕಾಲದ ಜೀವನ ದೃಷ್ಟಿಯ ಸಂಕೀರ್ಣ ಚಿತ್ರಣವನ್ನು ಕಟ್ಟಿಕೊಡುತ್ತದೆ.

(ಎನ್. ಸಂಧ್ಯಾರಾಣಿ)
ಮೈಹರ್‌ನ ರಾಜ ಬ್ರಿಜ್ ನಾಥ್ ಸಿಂಗ್‌ನ ಆಸ್ಥಾನ ಸಂಗೀತಗಾರರಾಗಿದ್ದ ಬಾಬಾ ಅಲ್ಲಾವುದ್ದೀನ್ ಖಾನ್ ಇತಿಹಾಸಕಂಡ ಮಹಾನ್ ಸಂಗೀತಗಾರ ಮಿಯಾ ತಾನ್ ಸೇನ್ ವಂಶಕ್ಕೆ ಸೇರಿದ ವಜೀರ್ ಖಾನರ ಶಿಷ್ಯರು. 30 ಕ್ಕಿಂತಲೂ ಹೆಚ್ಚು ವಾದ್ಯಗಳನ್ನು ನುಡಿಸಬಲ್ಲ ನಾಡಿನ ಖ್ಯಾತ ಸಂಗೀತ ಕಲಾವಿದರಾದ ಇವರು ಪ್ರತಿದಿನ ತ್ರಿಕೂಟ ಪರ್ವತದ ಶಾರದ ಮಾತೆಯ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರ ಅಷ್ಟೇ ನಿಷ್ಠೆಯಿಂದ ಸ್ಥಳೀಯ ಮಸೀದಿಗೆ ಹೋಗಿ ನಮಾಜ್ ಸಲ್ಲಿಸುತ್ತಿದ್ದರು. ಇವರ ಪತ್ನಿ ಅಮಾಯಕ ಹೆಣ್ಣು ಮಗಳು ಮದೀನ ಬೇಗಂ. ಇವರು ತನ್ನ ಪತ್ನಿಯ ಮೇಲಿನ ಪ್ರೀತಿಯಿಂದ ಕಟ್ಟಿಸಿದ ಮದೀನಾ ಭವನ ಒಂದಿಷ್ಟು ಸಂಗೀತ ಕಲಾವಿದರಿಗೆ ಆಶ್ರಯ ತಾಣವಾಗಿತ್ತು. ‘ಮದನ್ ಮಂಜರಿ’ ಬಾಬಾ ಪತ್ನಿಗಾಗಿ ಸೃಜಿಸಿದ ರಾಗ. ಈ ದಂಪತಿಗಳ ಮಗಳು ರೋಶನಾರ, ಮೈಹರ್‌ನ ರಾಜ ಬ್ರಿಜ್ ನಾಥ್ ಸಿಂಗ್ ಈಕೆಗೆ ಇಟ್ಟ ಹೆಸರು ಅನ್ನಪೂರ್ಣಾ ದೇವಿ. ತಂದೆ ಬಾಬಾ ಇವಳ ಸಂಗೀತ ಮತ್ತು ಅಧ್ಯಾತ್ಮದ ಗುರು.
ಅನ್ನಪೂರ್ಣಾ ದೇವಿಯ ತಾಯಿ ಮದೀನಾ ಬೇಗಂ ಗುಟ್ಟಾಗಿ ಕವಿತೆ ಬರೆಯುತ್ತಿದ್ದರು.
“ಅಲ್ಲಿ ನಿನ್ನ ಜಮೀನ್ದಾರಿಕೆ ಇರುವುದಿಲ್ಲ
ಅಲ್ಲಿ ನಿನ್ನ ರೂಪಾಯಿ ಪೈಸೆ ಇರುವುದಿಲ್ಲ
ಅಲ್ಲಿ ನಿನ್ನ ನೀಲಮಣಿ ಕುದುರೆ ಇರುವುದಿಲ್ಲ
ಸ್ಮಶಾನದಲ್ಲಿ ಇರುವುದು ಘೋರ ಅಂಧಕಾರ ಮಾತ್ರ” ಸ್ವತಹ ಅನ್ನಪೂರ್ಣಾ ದೇವಿ ಹೇಳುವಂತೆ “ನಾನು ಅಡುಗೆ ಕಲಿತದ್ದು ಅಮ್ಮನಿಂದ. ಅಡುಗೆಗೆ ಬೇಕಾದ ಅತ್ಯಂತ ಮುಖ್ಯ ಸಾಮಗ್ರಿ ಎಂದರೆ ಅಡುಗೆ ಮಾಡುವವರಿಂದ ಅದು ಪಡೆದುಕೊಳ್ಳುವ ಪ್ರೀತಿ ಮತ್ತು ಅಂತಃಕರಣ” ಈ ಅಡುಗೆಮನೆ ಆಧ್ಯಾತ್ಮವನ್ನು ಅದೇ ಲಹರಿಯಲ್ಲಿ ತನ್ನ ಜೀವನದ ಉದ್ದಕ್ಕೂ ತನ್ನ ಸಹಚರ್ಯಕ್ಕೆ ಬಂದವರೆಲ್ಲರಿಗೂ ಭೇದವಿಲ್ಲದೆ ಸಂಗೀತದ ಜೊತೆ ಜೊತೆಗೆ ಉಣ ಬಡಿಸಿದವರು ಅನ್ನಪೂರ್ಣಾ ದೇವಿ.
“ಯಾವುದೇ ಜ್ಞಾನಾರ್ಥಿ ನಿನ್ನನ್ನು ಹುಡುಕಿ ಬಂದರೆ ನೀನು ಎರಡನೆಯ ಯೋಚನೆ ಮಾಡದೆ ನಿನ್ನಲ್ಲಿರುವ ಜ್ಞಾನವನ್ನು ಹಂಚಬೇಕು. ತನ್ನ ಕುಟುಂಬದ ಸದಸ್ಯರಲ್ಲದವರಿಗೆ ಸಂಗೀತ ಹೇಳಿಕೊಡಲು ಹಿಂಜರಿಯುವ ಉಸ್ತಾದರನ್ನು ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಬೇರೆ ಬೇರೆ ಗುರುಗಳಿಂದ ಕಲಿಯುವಾಗ ನಾನು ಅನುಭವಿಸಿದ ತೊಂದರೆ, ನೋವು ಮತ್ತು ಕಷ್ಟ ನಿನ್ನಿಂದ ಊಹಿಸಲು ಸಾಧ್ಯವಿಲ್ಲ. ಎಲ್ಲ ಕಷ್ಟಗಳ ನಡುವೆಯೂ ನನ್ನ ಭಿಕ್ಷಾ ಪಾತ್ರೆಯಲ್ಲಿ ಏನನ್ನು ಸಂಗ್ರಹಿಸಲು ಸಾಧ್ಯವಾಯಿತು ಅದನ್ನು ನಾನು ಧಾರಾಳವಾಗಿ ಹಂಚಿದ್ದೇನೆ. ಕಲಿಯುವ ಹಸಿವು ಇರುವವರಿಗೆ ಕಲಿಸದೇ ಇರುವುದು ಮಹಾಪಾಪ.” ಬಾಬಾ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಮಾತಿದು. ತಂದೆಯ ಈ ಮಾತನ್ನು ಅಕ್ಷರಶಃ ಪಾಲಿಸಿದ ಮಗಳು ಅನ್ನಪೂರ್ಣಾ ದೇವಿ. ಇದು ಅವಧೂತರ ರೀತಿಯಲ್ಲದೆ ಇನ್ನೇನು?
ಅನ್ನಪೂರ್ಣಾ ದೇವಿಯ ಅಣ್ಣ ಸ್ವರ ಸಾಮ್ರಾಟ್ ಖ್ಯಾತಿಯ ಉಸ್ತಾದ್ ಅಲಿ ಅಕ್ಬರ್ ಖಾನ್ ಮತ್ತು ಪಂಡಿತ್ ರವಿಶಂಕರ್ ಗುರು ಬಾಬಾ ಅಲ್ಲಾವುದ್ದೀನ್ ಖಾನ್‌ರ ಗರಡಿಯಲ್ಲಿ ಮೈಹರ್‌ನ ಸಂಗೀತ ಶಾಲೆಯಲ್ಲಿ ಅರಳಿದ ಅದ್ಭುತ ಸಂಗೀತ ಪ್ರತಿಭೆಗಳು. ಖ್ಯಾತ ನೃತ್ಯ ಕಲಾವಿದ ಉದಯ ಶಂಕರ್ ಪಂಡಿತ್ ರವಿಶಂಕರ್ ಅವರ ಅಣ್ಣ. ತಮ್ಮನ ಬದುಕು ನೇರ್ಪುಗೊಳಿಸಲು ಗುರು ಬಾಬಾರಲ್ಲಿ ಅವರು ಇಟ್ಟ ಬೇಡಿಕೆಯಂತೆ ತನ್ನ ಮಗಳು ಅನ್ನಪೂರ್ಣಾ ದೇವಿಯನ್ನು ಬಾಬಾ ಅವರು ತನ್ನ ವಿದ್ಯಾರ್ಥಿ ರವಿಶಂಕರನಿಗೆ ವಿವಾಹ ಮಾಡಿಕೊಟ್ಟರು. ಹಿರಿಮಗಳು ಜಹನಾರಾಳ ವಿಫಲ ಮದುವೆ ನಂತರದ ಅವಳ ಸಾವಿನಿಂದ ನೊಂದಿದ್ದ ಕುಟುಂಬವು ತನ್ನ ವಿಧೇಯ ವಿದ್ಯಾರ್ಥಿ ಹಾಗೂ ಸಂಗೀತ ಕಲಾವಿದನಾಗಿದ್ದ ಪಂಡಿತ್ ರವಿಶಂಕರ್ ಜೊತೆ ಕಿರಿಮಗಳು ಅನ್ನಪೂರ್ಣಾಳ ವಿವಾಹವು ಯಶಸ್ವಿಯಾಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು. ಅದ್ಭುತ ಸಂಗೀತ ಪ್ರತಿಭೆಯಾಗಿದ್ದ ಪತ್ನಿ ಅನ್ನಪೂರ್ಣಾಳ ಕಾರಣದಿಂದ ತನ್ನ ಪ್ರಗತಿಗೆ ತೊಡಕಾಗುತ್ತದೆ ಎನ್ನುವ ಪಂಡಿತ್ ರವಿಶಂಕರರ ಅಸೂಯೆಯ ಕಾರಣದಿಂದ ವೇದಿಕೆಯಲ್ಲಿ ತಾನು ಕಾರ್ಯಕ್ರಮ ನೀಡುವುದಿಲ್ಲ ಎಂದು ಗಂಡನಿಗೆ ಅನ್ನಪೂರ್ಣಾ ದೇವಿ ಪ್ರತಿಜ್ಞೆ ಮಾಡಿದ್ದರು, ಮಾತ್ರವಲ್ಲ ಜೀವನದುದ್ದಕ್ಕೂ ನುಡಿದಂತೆ ನಡೆದುಕೊಂಡರು ಕೂಡ. ತಂದೆ ಬಾಬಾ, ಮಗ ಶುಭೋ ಕಾರಣಕ್ಕಾಗಿ ರವಿಶಂಕರ್ ಜೊತೆಗಿನ ವಿವಾಹವನ್ನು ಉಳಿಸಿಕೊಳ್ಳಲು ಬಯಸಿದ್ದ ಅನ್ನಪೂರ್ಣಾ ಈ ಮದುವೆಗಾಗಿ ಯಾವುದೇ ಬೆಲೆಯನ್ನು ತೆರಲು ಸಿದ್ಧರಿದ್ದರು. ಅಜ್ಞಾತವಾಗಿ ಉಳಿದು ತನ್ನ ಸಂಗೀತ ಸಾಧನೆಯನ್ನು ಮುಂದುವರಿಸುತ್ತಾ ತಾನು ಕಲಿತದ್ದಷ್ಟನ್ನೂ ತನ್ನ ವಿದ್ಯಾರ್ಥಿಗಳಿಗೆ ಕಲಿಸುತ್ತಾ ಉಳಿಯುವುದಾಗಿ ನಿರ್ಧರಿಸಿದರು. ಆದರೆ ಹೀಗಿದ್ದೂ ಪಂಡಿತ್ ರವಿಶಂಕರ್ ಜೊತೆ ಅವರ ವಿವಾಹ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ನಂತರದ 18 ವರ್ಷ ಈ ದಂಪತಿಗಳ ಮಗ ಶುಭೋ ಸಂಗೀತ ಸಾಧನೆ ಮಾಡುತ್ತಾ ತಾಯಿಯ ಜೊತೆ ಉಳಿದ. ನಂತರ ತಂದೆ ಕರೆದಾಗ ಅವರ ಜೊತೆ ವಿದೇಶಕ್ಕೆ ಹೋದ. ಅಲ್ಲಿಯೂ ಅವನ ಜೀವನ ಸುಖಾಂತವಾಗಲಿಲ್ಲ. ಈ ಅವಧಿಯಲ್ಲಿ ಆಕಾಶ್ ಗಂಗಾದ 6Aಮನೆಯಲ್ಲಿ ಏಕಾಂಗಿಯಾಗಿ ಉಳಿದ ಅನ್ನಪೂರ್ಣಾ ಅಲ್ಲಿ ತನ್ನ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವುದರ ಜೊತೆಗೆ ಅವರ ಹೊಟ್ಟೆಯ ಹಸಿವನ್ನೂ ನೀಗಿಸುತ್ತ, ತಾಯಿ ಪ್ರೀತಿಯನ್ನು ನೀಡಿದರು. ಹಂಚಿತಿನ್ನುವ ಇವರ ಸಹಜ ಜೀವನಕ್ರಮದ ಮೂಲ ಧಾತುವಾದ ಪ್ರೀತಿಯ ಕಾರಣದಿಂದ ಪ್ರಾಣಿ ಪಕ್ಷಿಗಳು, ಕಾಗೆ ಪಾರಿವಾಳಗಳು ಇವರ ಸಂಗಾತಿಯಾಗಿದ್ದವು. ಈ ಕಾಲಕ್ಕೆ ಹೊರ ಜಗತ್ತಿನ ಸಂಪರ್ಕವನ್ನು ಸಂಪೂರ್ಣ ಕಡಿದುಕೊಂಡಿದ್ದ ಈಕೆ ಘನತೆಯ ಬದುಕು ಮನುಷ್ಯರೇನು ಪ್ರಾಣಿಗಳದೂ ಹಕ್ಕು ಎನ್ನುವ ಸಂದೇಶವನ್ನು ಇವರ ಸಂಪರ್ಕಕ್ಕೆ ಬಂದ ವಿದ್ವತ್ ಬಳಗಕ್ಕೆ ತನ್ನ ನಡೆಯಿಂದ ತೋರಿಸಿ ಕೊಟ್ಟರು.

ಖ್ಯಾತ ಬಾನ್ಸುರಿ ವಾದಕ ಹರಿಪ್ರಸಾದ್ ಚೌರಾಸಿಯ ಸಂಗೀತವನ್ನು ಸಿದ್ಧಾಂತವಾಗಿ ಕಲಿಯಲು ಅನ್ನಪೂರ್ಣಾ ದೇವಿಯಲ್ಲಿ ಹೋಗಿ ಅವರ ಮಗನೇ ಆಗಿ ಹೋದವರು. ಆಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಹರಿಪ್ರಸಾದ್ ಚೌರಾಸಿಯ “…ಸಂಗೀತಸಾಧನೆಯಲ್ಲಿ ನಿರತನಾಗಿದ್ದರೂ… ನನ್ನೊಳಗಿನ ಖಾಲಿತನ ಇದ್ದೇ ಇತ್ತು. ನನಗೆ ದಾರಿ ತೋರುವ ಒಂದು ಬೆಳಕಿನ ಅಗತ್ಯ ಇತ್ತು. ನನ್ನ ಆತ್ಮವನ್ನು ಬಂಧ ಮುಕ್ತಗೊಳಿಸಲು ನನ್ನ ಸಂಗೀತಕ್ಕೆ ರೆಕ್ಕೆಗಳನ್ನು ಕೊಡಲು ನನ್ನನ್ನು ಶಾಂತಗೊಳಿಸಿ ನನ್ನ ಸಂಗೀತದಾಳಕ್ಕೆ ಇಳಿಯುವಂತೆ ಮಾಡಲು ನನಗೆ ಒಬ್ಬ ಗುರುವಿನ ಅಗತ್ಯವಿತ್ತು… ಅಂತಹ ಗುರುವನ್ನು ನಾನು ಗುರು ಮಾ ರಲ್ಲಿ ಕಂಡೆ…”
ಕೃತಿಯ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು ಇವು. ಈ ಹಿನ್ನೆಲೆಯಲ್ಲಿ ಗುರು ಮಾ ಅವರ ಮಾತು ಹೆಚ್ಚು ಅರ್ಥಪೂರ್ಣ ಅನಿಸುತ್ತದೆ. “ತಾರಾಪಟ್ಟ ಗಳಿಸಿದ ಕೂಡಲೇ ಕಲಾವಿದ ಅನ್ವೇಷಣೆಯನ್ನು ನಿಲ್ಲಿಸಿ ಬಿಡುತ್ತಾನೆ. ತನ್ನ ಹುಡುಕಾಟದಲ್ಲಿರುವವರಿಗೆ ಶಾರದಾ ಮಾ ಇಡುವ ಕಡೆಯ ಪರೀಕ್ಷೆ ತಾರಾಪಟ್ಟ. ಈ ಪರೀಕ್ಷೆಯಲ್ಲಿ ತೇರ್ಗಡೆ ಆಗುವವರು ಕೆಲವೇ ಕೆಲವು ಮಂದಿ. ಪ್ರಶಸ್ತಿ ಮತ್ತು ಪುರಸ್ಕಾರಗಳು ಆಧ್ಯಾತ್ಮದ ಹಾದಿಯಲ್ಲಿ ತೊಡಕಾಗಬಹುದು. ಒಬ್ಬ ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಾಶ ಮಾಡುವ ಅತ್ಯಂತ ಸುಲಭದ ವಿಧಾನ ಎಂದರೆ ಆ ವ್ಯಕ್ತಿಗೆ ಪುರಸ್ಕಾರ ಮಾಡುವುದು ಚಪ್ಪಾಳೆಗಳು, ಹೊಗಳಿಕೆ, ಪ್ರಶಸ್ತಿಗಳನ್ನು ಕೊಡುವುದು. ಬಹುಮಾನಗಳು ಕಲಾವಿದರ ಅಹಂ ಅನ್ನು ರಾಕ್ಷಸಾಕಾರಕ್ಕೆ ಉದ್ದೀಪಿಸುವ ಮತ್ತು ಅವರ ಆಧ್ಯಾತ್ಮಿಕ ಪತನಕ್ಕೆ ಹಾದಿಯಾಗುವ ಖಚಿತ ಕಾರಣಗಳು.”
ಪಂಡಿತ ರವಿ ಶಂಕರರ ಜೊತೆಗೆ ಬದುಕುತ್ತಿಲ್ಲ ಎಂದಮೇಲೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಬೇಕಿದೆಯೇ? ವೇದಿಕೆಯಲ್ಲಿ ಹಾಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರೆ ನಿರಾಕರಿಸಿ ‘ಮೀರೆಯಾಗಿರುವುದೇ ತನಗೆ ಇಷ್ಟ’ ಎನ್ನುತ್ತಿದ್ದರು.
ಅನ್ನಪೂರ್ಣಾದೇವಿ ತಮ್ಮ ಮಾಜಿ ಪತಿಯಿಂದ ದೂರವಾಗಿದ್ದರೂ ನಿರಂತರ ಮಾತಿನ ಹಿಂಸೆ, ಅವಹೇಳನವನ್ನು ಅನುಭವಿಸುತ್ತಿದ್ದರು. ಮಗನ ಅಕಾಲ ಮರಣ ಅನ್ನಪೂರ್ಣಾ ದೇವಿಯವರನ್ನು ಮಾನಸಿಕ ಖಿನ್ನತೆಗೆ ದೂಡಿತ್ತು.

(ಅತುಲ್ ಮರ್ಚಂಟ್ ಜಟಾಯು)
ಉಸ್ತಾದ್ ಆಲಿ ಅಕ್ಬರ್ ಖಾನ್ ಅನ್ನಪೂರ್ಣಾ ದೇವಿಯ ಅಣ್ಣ. ಇವರು ಅಮೆರಿಕಾದಲ್ಲಿ ನಡೆಸುತ್ತಿದ್ದ ಸಂಗೀತ ಶಾಲೆಯ ವಿದ್ಯಾರ್ಥಿಯಾಗಿದ್ದ ಪ್ರೊಫೆಸರ್ ರೂಶಿ ಪಾಂಡ್ಯ(ವರ್ತನೆ ವಿಜ್ಞಾನದ ಪ್ರೊಫೆಸರ್ ) ಈತ ಸಂಗೀತ ಕಲಿಯುವುದಕ್ಕಾಗಿ ಕೆನಡಾದಿಂದ ಅಮೆರಿಕಕ್ಕೆ ಬರುತ್ತಿದ್ದರು. ಒಮ್ಮೆ ಇವರು ಅಮೆರಿಕಾದ ತನ್ನ ಗುರುಗಳ ಸಂಗೀತ ಶಾಲೆಗೆ ಪಾಠಕ್ಕೆ ಹೋಗಿದ್ದಾಗ ಭಾರತದಲ್ಲಿ ತಮ್ಮ ವೃತ್ತಿ ಸಂಬಂಧ ವಿದ್ಯಾರ್ಥಿಗಳಿಗೆ ಸೆಮಿನಾರ್ ನಡೆಸುತ್ತಿರುವುದರ ಬಗ್ಗೆ ಹೇಳಿದರು. ಇವರಿಗೆ ನಿರಂತರ ಸಂಗೀತ ಕಲಿಕೆಗೆ ಹಾಜರಾಗಲು ಆಗುತ್ತಿರುವ ಅನನುಕೂಲತೆಯ ಬಗ್ಗೆ ಮಾತನಾಡುವಾಗ ಉಸ್ತಾದ್ ಆಲಿ ಅಕ್ಬರ್ ಖಾನ್ ಭಾರತದಲ್ಲಿರುವ ತಮ್ಮ ತಂಗಿ ಅನ್ನಪೂರ್ಣಾಳಲ್ಲಿ ಸಂಗೀತ ಅಭ್ಯಾಸವನ್ನು ಮುಂದುವರಿಸುವಂತೆ ಸಲಹೆ ನೀಡಿದರು. ಮಾತ್ರವಲ್ಲ, ತಂಗಿಗೂ ತನ್ನ ವಿದ್ಯಾರ್ಥಿಯ ಬಗ್ಗೆ ಬರೆದು ಆತನಿಗೆ ಸಂಗೀತ ಕಲಿಸುವಂತೆ ಶಿಫಾರಸು ಪತ್ರ ಕಳುಹಿಸಿದ್ದರು. ಆಗ ಗಂಡ ಮಗ ದೂರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅನ್ನಪೂರ್ಣಾ ದೇವಿ ಅಣ್ಣನಿಗೆ ಬೇಸರ ಮಾಡಬಾರದು ಎನ್ನುವ ಕಾರಣಕ್ಕೆ ರೂಶಿಗೆ ಸಂಗೀತ ಕಲಿಸಲು ಒಪ್ಪಿದ್ದರು. ಆದರೆ ಇದಾಗಿ ಸ್ವಲ್ಪ ಸಮಯದ ನಂತರ ಅನಾರೋಗ್ಯ ಮತ್ತು ಖಿನ್ನತೆಯ ಕಾರಣದಿಂದ ಹಾಸಿಗೆ ಹಿಡಿದಿದ್ದ ಅವರನ್ನು ನೋಡಿಕೊಳ್ಳಲು ಯಾರಾದರೂ ಅವರ ಜೊತೆಗಿರಬೇಕು ಎನ್ನುವ ಡಾಕ್ಟರ್‌ರ ಸಲಹೆಯನ್ನು ಪರಿಗಣಿಸಿ ರೂಶಿ ಅವರ ಜೊತೆಗೆ ನಿಲ್ಲುವುದಾಗಿ ನಿಶ್ಚಯಿಸಿದರು. ಆಗ ಪತಿಯಿಂದ ದೂರವಾಗಿದ್ದ ಅನ್ನಪೂರ್ಣಾ ದೇವಿಯವರು ಲೋಕದ ಅಪವಾದಕ್ಕೆ ಅಂಜಿ ಈತ ತನ್ನ ಜೊತೆಗಿರುವುದು ಒಪ್ಪದೇ ಇದ್ದಾಗ ರೂಶಿ ಅವರನ್ನು ಮದುವೆಯಾಗುವುದಾಗಿ ಆಗ ಯಾರಿಗೂ ಅಂಜಬೇಕಾಗಿಲ್ಲ ಎನ್ನುವುದಾಗಿ ಹೇಳಿದರು. ತನಗಿಂತ ಹದಿಮೂರು ವರುಷ ಚಿಕ್ಕವರಿದ್ದ ರೂಶಿಯನ್ನು ಮೊದಲು ಆಕೆ ವಿವಾಹವಾಗಲು ಒಪ್ಪಲಿಲ್ಲ. ಆಗ ರೂಶಿ ಲೋಕದ ಕಣ್ಣಿಗೆ ಅಷ್ಟೇ ಗಂಡನಾಗಿರುತ್ತೇನೆ. ಕೆನಡಾ ಬಿಟ್ಟು ಇಲ್ಲೆ ನೆಲೆಸುತ್ತೇನೆ ಎಂದಾಗ ಗುರು ಮಾ “ನನಗೆ ಮನುಷ್ಯತ್ವದ ಬಗ್ಗೆ ನಂಬಿಕೆ ಹೊರಟುಹೋಗಿದೆ. ನನ್ನ ಪತಿ ಮಗ ಮತ್ತು ಅತ್ಯುತ್ತಮ ವಿದ್ಯಾರ್ಥಿಗಳಿಂದಲೇ ನಾನು ವಿಫಲತೆಗೆ ತುತ್ತಾಗಿದ್ದೇನೆ. ಯಾವುದೇ ವಿದ್ಯಾರ್ಥಿಗಳಿಗೆ ಒಂದು ರೂಪಾಯಿ ಶುಲ್ಕವನ್ನು ಹೇಳದೆ ನಾನು ಮತ್ತು ಬಾಬಾ ನಿರ್ವಂಚನೆಯಿಂದ ಸಂಗೀತ ಕಲಿಸಿದ್ದೇವೆ. ಆದರೆ ಅವರೆಲ್ಲ ತಮ್ಮದೇ ಸ್ವಾರ್ಥ ಕಾರಣಗಳಿಗಾಗಿ ನಮ್ಮನ್ನು ಶೋಷಿಸಿದ್ದಾರೆ. ನನ್ನ ಮಗನಂತೆ ನನ್ನ ವಿದ್ಯಾರ್ಥಿಗಳಿಗೂ ಅಡುಗೆ ಮಾಡಿ ಉಣ ಬಡಿಸಿದ್ದೇನೆ. ಆದರೆ ಒಮ್ಮೆ ಪ್ರಖ್ಯಾತರಾದ ನಂತರ ಅವರೆಲ್ಲ ನನ್ನನ್ನು ಬಿಟ್ಟು ಹೋದರು” ಎಂದು ಹೇಳಿದ್ದರು. ಆದರೆ ಕೊನೆಗೆ ತನ್ನೊಳಗೆ ಕೊರೆಯುತ್ತಿದ್ದ ಖಿನ್ನತೆಯಿಂದ ಹೊರಗೆ ಬಂದು ತನ್ನ ಸಂಗೀತ ಸಾಧನೆಯನ್ನುಆ ಮೂಲಕ ಆಧ್ಯಾತ್ಮದ ಪಯಣವನ್ನು ಸುಗಮವಾಗಿ ಮುಂದುವರಿಸಬಹುದು ಎನ್ನುವ ಏಕೈಕ ಉದ್ದೇಶದಿಂದ ರೂಶಿಯವರನ್ನು ವಿವಾಹವಾದರು. ಈ ವಿವಾಹದ ನಂತರ ರೂಶಿ ಅವರ ಮೂಲಕ ಅನ್ನಪೂರ್ಣಾದೇವಿ ಯವರು ವೇದಿಕೆಯಲ್ಲಿ ಹಾಡುವಂತೆ ಮನ ಒಲಿಸಲು ಅವರ ವಿದ್ಯಾರ್ಥಿಗಳು ಪ್ರಯತ್ನಿಸಿದ್ದರು. ಆಗ ರೂಶಿ ‘ಮನ ಶಾಸ್ತ್ರದಲ್ಲಿ ಹೇಳುವಂತೆ ಜನ ಮೂಲಭೂತವಾಗಿ ಮೂರು ನೆಲೆಗಳಿಂದ ಕಾರ್ಯ ನಿರ್ವಹಿಸುತ್ತಾರೆ. ವಿಲಾಸದ ಪ್ರೇರಣೆ, ವಾಸ್ತವದ ಪ್ರೇರಣೆ, ಮೌಲ್ಯಗಳ ಪ್ರೇರಣೆ’ ಎಂದು ಮೌಲ್ಯಗಳ ಬಗ್ಗೆ ನಂಬಿಕೆ ಇರುವ ಅನ್ನಪೂರ್ಣಾಗೆ ಒತ್ತಾಯ ಸಲ್ಲದು ಎಂದು ಹೇಳಿ ಸುಮ್ಮನಾಗಿಸಿದ್ದರು. ಕುತೂಹಲದ ಸಂಗತಿ ಎಂದರೆ ಅತುಲ್ ಅನ್ನಪೂರ್ಣಾ ದೇವಿಯ ಶಿಷ್ಯನಾದದ್ದು ರೂಶಿಜಿ ಮೂಲಕ.
ರೂಶಿಯವರು ಅನ್ನಪೂರ್ಣಾ ದೇವಿಯವರು ತೀರಿಕೊಳ್ಳುವ ಮೊದಲೇ ತೀರಿಕೊಂಡರು. ನಂತರ ಅನ್ನಪೂರ್ಣಾದೇವಿಯ ವಿದ್ಯಾರ್ಥಿಗಳಾದ ಸುರೇಶ್, ನಿತ್ಯಾನಂದ, ಅತುಲ್ ಗುರುಮಾ ರನ್ನು ಅವರ ವಯೋಸಹಜ ಅರಳುಮರುಳು ವಿಚಲಿತ ಮನಸ್ಥಿತಿ, ಅನಾರೋಗ್ಯದ ಸ್ಥಿತಿಯಲ್ಲಿ ಯಾವುದೇ ಕುಂದಾಗದಂತೆ ಮಗುವಿನ ಹಾಗೆ ನೋಡಿಕೊಂಡರು.
ಸಂಗೀತ ಮತ್ತು ತಾತ್ವಿಕತೆ ಈ ಎರಡರಲ್ಲೂ ಗುರುಮಾ ಬಾಬಾರ ಮಗಳೇ. “ದಾನ ಮಾಡುವುದು ಹಣ ಮಾಡುವುದಕ್ಕಿಂತ ಕಠಿಣ ದಾನ ಮಾಡುವ ಕಲೆ ಕೆಲವರಿಗಷ್ಟೇ ಗೊತ್ತು. ನೀನು ಕೊಡುವ ದಾನ ನಿನ್ನ ಅಹಂ ಅನ್ನು ಉತ್ತೇಜಿಸಬಾರದು ಅಥವಾ ಅದು ತೆಗೆದುಕೊಳ್ಳುವವರ ಆತ್ಮ ಗೌರವವನ್ನು ಕುಂಠಿತಗೊಳಿಸಬಾರದು” ಎನ್ನುತ್ತಿದ್ದರು. ಅನ್ನಪೂರ್ಣಾ ದೇವಿ ತನ್ನ ಮೊದಲ ಗಂಡ ದೂರವಾದ ನಂತರವೂ ನಿರಂತರ ಆತನಿಂದ ನಿಂದೆಗೆ ಒಳಗಾಗಿದ್ದರೂ ಯಾವತ್ತೂ ಆತನನ್ನು ದ್ವೇಷಿಸಲಿಲ್ಲ. ಆತನ ಮೇಲಿನ ಆಕೆಯ ಪ್ರೀತಿ ಗೌರವ ಆಗಾಗ್ಗೆ ತನ್ನ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ವ್ಯಕ್ತವಾಗುತ್ತಿತ್ತು. ಸಂಗೀತ ಜಗತ್ತಿನ ವಿಮರ್ಶೆಗಳಿಗೆ ಉತ್ತರವಾಗಿ ಆಕೆ ಕೆಲವೊಮ್ಮೆ ತನ್ನ ವಿದ್ಯಾರ್ಥಿಗಳೊಂದಿಗೆ ಹೇಳುವಾಗ “ರಾಗ್ ಬೈರಾಗಿ” ಪಂಡಿತ್ ರವಿಶಂಕರರು ಸೃಷ್ಟಿಸಿದ ರಾಗ… ಈಗ ಸಂಗೀತ ಕಲಿಯುತ್ತಿರುವ ಚಿಕ್ಕ ವಯಸ್ಸಿನ ಹುಡುಗರಲ್ಲಿ ಅರಿವು ಕಮ್ಮಿ, ಅಹಂಕಾರ ಜಾಸ್ತಿ ಇರುತ್ತದೆ. ಪಂಡಿತ್‌ಜಿ ಅವರ ಸ್ತರವನ್ನು ಮುಟ್ಟಲು ಈತ ಎಷ್ಟು ಜನ್ಮಗಳನ್ನು ಎತ್ತಬೇಕು” ಎನ್ನುತ್ತಿದ್ದರು.

ಋಜು ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾದ ಅನ್ನಪೂರ್ಣಾ ದೇವಿ ತಮ್ಮ ಆತ್ಮ ಸಾಕ್ಷಿ ಮತ್ತು ನಂಬಿದ ಮೌಲ್ಯಗಳಿಗೆ ಬದ್ಧರಾಗಿದ್ದರು. ಪಂಡಿತ್ ರವಿಶಂಕರ್ ಜೊತೆಗಿನ ತನ್ನ ವಿವಾಹ ಉಳಿಸುವ ಸಲುವಾಗಿ ಯಾವುದೇ ವೇದಿಕೆಯಲ್ಲಿ ಯಾವತ್ತೂ ಪ್ರದರ್ಶನ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ವಿವಾಹ ಮುರಿದು ಬಿದ್ದಾಗಲೂ ತನ್ನ ತೀರ್ಮಾನದಿಂದ ಹಿಂಜರಿಯದೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ತನ್ನ ಸಂಗೀತದ ಸಾಧನೆಯನ್ನು ಅಧ್ಯಾತ್ಮದ ಉತ್ತುಂಗದತ್ತ ಕೊಂಡು ಹೋದರು. ತ್ರಿಕಾಲ ಜ್ಞಾನಿಯಾದ ಇವರು ಪ್ರಶಸ್ತಿ ಪುರಸ್ಕಾರ ಇತ್ಯಾದಿ ಯಾವುದೇ ಪ್ರಲೋಭನೆಗೆ ಒಳಗಾಗದೆ ಸಂಗೀತದ ಆರಾಧನೆಮಾಡುತ್ತ ಏಕಾಂಗಿಯಾಗಿ ಉಳಿದರು. ಸಂಗೀತ ಮತ್ತು ಪ್ರೀತಿಯನ್ನು ತನ್ನ ವಿದ್ಯಾರ್ಥಿಗಳಿಗೆ ಧಾರಾಳವಾಗಿ ಹಂಚಿದ ಇವರು ಪ್ರತಿಯಾಗಿ ಅವರಿಂದ ಬಯಸಿದ್ದು ಬದ್ಧತೆ ಮಾತ್ರ. ಅವಧೂತ ಪರಂಪರೆಯ ಕೊನೆಯ ಕೊಂಡಿಯಾಗಿ ಅಜ್ಞಾತವಾಗಿ ಬದುಕಿದ ಇವರು ಶರಣರ ಜೀವನ ಮರಣದಲ್ಲಿ ಕಾಣು ಎನ್ನುವಂತೆ 2018ರವರೆಗೂ ತಮ್ಮೊಡನೆ ಇದ್ದರು ಎನ್ನುವುದೇ ಅವರ ವಿದ್ಯಾರ್ಥಿ ಪರಂಪರೆಗೆ ಯೋಗ ಭಾಗ್ಯವಾಗಿತ್ತು.
(ಕೃತಿ: ಅನ್ನಪೂರ್ಣಾ ದೇವಿ (ಸಂಗೀತಗಾರ್ತಿ ಅನ್ನಪೂರ್ಣಾ ದೇವಿಯವರ ಕುರಿತ ಕೃತಿ, ಇಂಗ್ಲಿಷ್ ಮೂಲ: ಅತುಲ್ ಮರ್ಚಂಟ್ ಜಟಾಯು, ಕನ್ನಡಕ್ಕೆ: ಎನ್. ಸಂಧ್ಯಾರಾಣಿ, ಪ್ರಕಾಶಕರು: ನುಡಿ ಪುಸ್ತಕ, ಬೆಲೆ: 549/-)

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.

