ನಿನ್ನೆ ಹದ ಮಣ್ಣ ನೆಲ
ಇಂದು ಮಿದು ಮೈಯ ಮಸಣ
ಕಾಲಿಟ್ಟಲ್ಲಿ ಮಗುವೊಂದು ಮಲಗಿದೆ
ಬಿಳಿಯ ಅರಿವೆ ಹೊದ್ದು ಶಾಂತವಾಗಿ
ಮತ್ತೆ ಶಾಲೆಗೆ ಹೊರಡುವ ಚಿಂತೆಯಿಲ್ಲದೆ
ಗೊತ್ತಿರಲಿಲ್ಲ ಅವಕ್ಕೆ
ಅದೇ ಕೊನೆಯೆಂದು
ಎದುರು ಕೂತ ಗೆಳತಿಗೆ
ಬೆಂಚಿನಡಿಯಿಂದ ಕಾಲು ತಾಕಿಸಿ
ಕಾಟ ಕೊಟ್ಟ ನೆನಪಿನ ನಗುವಿನ್ನೂ
ಬಾಕಿಯಿತ್ತು
ಅರ್ಧ ಬರೆದ ಆನೆಯ ಚಿತ್ರಕ್ಕೆ
ಕೆಂಪು ನೆತ್ತರ ಬಣ್ಣವಿನ್ನೂ ಬಳಿಯುವುದಿತ್ತು
ಕ್ಷಮಿಸಿ… ಕೆಂಪಲ್ಲ, ಕಂದು ಬಣ್ಣ
ಮೊನ್ನೆ ಮೊನ್ನೆ
ಅಪ್ಪ ಕೊಡಿಸಿದ್ದ
ಬೊಂಬೆ ಚಿತ್ರದ ಥರ್ಮಾಸು
ಇನ್ನೇನು ಗೆಳತಿಗೆ ತೋರಿಸುವುದಿತ್ತು
ಮುನಿಸು ಮರೆತು
ಅವಳ ಬಳಿ ಮಾತಾಡುವುದಿತ್ತು
ಆಡದ ಮಾತೆಷ್ಟು
ಹಾಗೆಯೇ ಉಳಿಯಿತು
ಕದ್ದ ಪೆನ್ಸಿಲ್ಲು
ಗೊತ್ತಾಗದ ಹಾಗೆ
ಪಕ್ಕದವಳ ಬ್ಯಾಗಿಗೆ ತುರುಕಿ
ಸಿಕ್ಕಿ ಬಿದ್ದು ಕಳ್ಳಿಯಾಗುವುದಿತ್ತು
ಬಿದ್ದು ಸಿಕ್ಕ, ಮಣ್ಣೊರೆಸಿಟ್ಟ
ಮಾವಿನ ಕಾಯಿ
ನಾಳೆಯೊಂದು ದಿನದಲಿ
ಹಣ್ಣಾಗುವುದಿತ್ತು
ಟೀಚರು ಕೊಟ್ಟುಹೋದ
ಹೋಂ ವರ್ಕಿನ ತಲೆನೋವಿತ್ತು
ಚೂರೇ ಚೂರು ಬರೆದುಕೊಡೆಂದು
ಅಮ್ಮನಿಗೆ ಕಾಡಿಸುವುದಿತ್ತು
ಸಂಜೆಯಾಗಿದ್ದಿದ್ದರೆ
ಒಂದು ಬಾಯ್ ಆದರೂ
ಹೇಳಿ ಹೊರಡಬಹುದಿತ್ತು
ಗೊತ್ತಿರಲಿಲ್ಲ ಮಕ್ಕಳಿಗೆ
ಹೊತ್ತು ಕಂತುವ ಮುನ್ನ
ಕಡುಗೆಂಪು ಕಡಲಿನಲಿ
ಸೂರ್ಯ ಮುಳುಗುತ್ತಾನೆಂದು
ತೋಡಿಟ್ಟ ಗುಂಡಿಗಳು
ಕಾಣಿಸುತ್ತಿವೆ
ಜೋಡಿಸಿಟ್ಟ
ಕ್ಲಾಸ್ ರೂಮಿನ ಬೆಂಚಿನಂತೆ
ಮಕ್ಕಳು ಈಗಷ್ಟೇ
ಮಧ್ಯಾಹ್ನದ ಅನ್ನವುಂಡು
ತಣ್ಣಗೆ ಮಲಗಿದಂತೆ
ಇರಾನಿನ ಗಾಂಧಿ ಆಸ್ಪತ್ರೆ
ಗಾಯಗೊಂಡಿದೆ ದಾಳಿಗೆ
ಇಂಡಿಯಾದ ರೇಡಿಯೋದಿಂದ
ಹಾಡೊಂದು ತೇಲಿದೆ ಗಾಳಿಗೆ
“ವೈಷ್ಣವ ಜನ ತೋ ತೇನೆ ಕಹಿಯೆ ಜೆ
ಪೀಡ್ ಪರಾಯಿ ಜಾಣೇ ರೇ
ಪರ್ ದುಃಖೇ ಉಪಕಾರ್ ಕರೇ ತೊಯೆ
ಮನ್ ಅಭಿಮಾನ್ ನ ಆಣೇ ರೇ…”
(ಇರಾನಿನ ಶಾಲೆಯೊಂದರ ಮೇಲೆ ನಡೆದ ಭೀಕರ ದಾಳಿ ಅಂದಾಜು 150 ಮಕ್ಕಳ ಸಾವಿಗೆ ಕಾರಣವಾಯಿತು. ಸಣ್ಣಪುಟ್ಟ ಕನಸುಗಳ ಮಕ್ಕಳ ಜಗತ್ತು ನಾಳೆ ಇಲ್ಲದೆ, ಕ್ಷಣದಾಚೆಗಿನ ಜಗತ್ತೇ ಇಲ್ಲದೆ ಮರೆಯಾಗಿ ಹೋದದ್ದನ್ನು ಕವಿತೆಯಲ್ಲಿ ದಾಖಲಿಸಲು ಪ್ರಯತ್ನಿಸಿರುವೆ. ‘ವೈಷ್ಞವ ಜನ ತೋ…’ ಮಹಾತ್ಮ ಗಾಂಧಿಯವರ ಅತ್ಯಂತ ಪ್ರಿಯವಾದ ಭಜನೆಯ ಹಾಡು. ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಹಾಡು, ‘ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಜಗವನ್ನೇ…’ ಎಂಬ ಸಾಲಿನೊಂದಿಗೆ ಆರಂಭವಾಗುತ್ತದೆ..)

ಶರೀಫ್ ಕಾಡುಮಠ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಸಮಾಜಮುಖಿ ಮಾಸಿಕ, ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.
