ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ದಾರಿಯೆಡೆಗೆ ನೋಡಿದರೆ ಆರಡಿ ಎತ್ತರದ ಚಂದದ ವ್ಯಕ್ತಿಯೊಬ್ಬರು ನಗುತ್ತಾ ಇವರೆಡೆಗೆ ಬರುತ್ತಿದ್ದರು. ಚೌಕಳಿ ಶರ್ಟು ಮತ್ತು ಬಿಳಿಯ ಪ್ಯಾಂಟಿನಲ್ಲಿ ಬಂದ ಅವರನ್ನು ಮಕ್ಕಳು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟರು. ಸೈಕಲ್ ಬೆಲ್ ಮಾಡುತ್ತಾ, ಸಮತಟ್ಟುಗೊಳಿಸಿದ ಮೈದಾನದ ತುಂಬಾ ಸೈಕಲ್ ಹೊಡೆಯುತ್ತ ಮಕ್ಕಳೆಡೆಗೆ ಕೈ ಬೀಸಿದರು. ಅವರ ಮುಗುಳ್ನಗೆಗೆ ಮನಸೋತ ಮಕ್ಕಳು ಹೋ ಎಂದು ಕೂಗುತ್ತಾ ಅವರ ಸೈಕಲ್ಲಿನ ಹಿಂದೆಯೇ ಹುಚ್ಚೆದ್ದು ಓಡತೊಡಗಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ

ಹೊಳೆಸಾಲಿನಿಂದ ಹೊರಟ ಮಕ್ಕಳ ದಂಡು ಅಂದು ಶಾಲೆಯಿಂದ ಮರಳಿ ಬರುವಾಗ ಕೋರಸ್ ಹಾಡುತ್ತಾ ಬಂದಿತ್ತು. “ಮುಂದಿನ ವಾರ ನಮ್ಮ ಸಾಲೆಗೆ ಇನ್ನೀನಬೆಟ್ಟರ್ ಬರುತ್ತಾರೆ.” ಎಂದು. ಇದನ್ನು ಕೇಳಿದ ಹೊಳೆಸಾಲಿನ ಹಿರಿಯರ ಮಂಜಾದ ಕಿವಿಗಳು ಚುರುಕಾದವು. ಅವರ ಪ್ರಾಯದ ಕಾಲದಲ್ಲಿ ಬಿಳಿಯ ಅಧಿಕಾರಿ ತಮ್ಮೂರಿನ ಹೊರಗಿರುವ ಬಂಗಲೆಗೆ ಬರುತ್ತಾನೆಂದರೆ ಇದೇ ರೀತಿ ಊರ ತುಂಬೆಲ್ಲಾ ನೌಕರರು ಡಂಗೂರ ಸಾರುತ್ತಿದ್ದರು. ಹೊಳೆಸಾಲಿನ ಊರಿಗೆ ಕಾಲು ದಾರಿಯಲ್ಲದೇ ರಸ್ತೆಯೆಂಬ ಅದ್ದೂರಿತನವೆಲ್ಲ ಇಲ್ಲದಿದ್ದರೂ ಊರ ಹೊರಗಿನ ಕಾಡಿನಲ್ಲಿರುವ ಬಿಳಿಯ ಅಧಿಕಾರಿಯ ಬಂಗಲೆಗೆ ಮಾತ್ರ ಕುದುರೆ ಸಾರೋಟು ಹೋಗಬಲ್ಲ ಮಣ್ಣಿನ ರಸ್ತೆಯಿತ್ತು. ವರ್ಷದಲ್ಲಿ ಎರಡೋ ಮೂರೋ ಬಾರಿ ಬರುವ ಅಧಿಕಾರಿಗಳಿಗೆಂದು ನಿರ್ಮಿಸಿದ್ದ ಈ ರಸ್ತೆಯಲ್ಲಿ ವರ್ಷವಿಡೀ ಎತ್ತಿನ ಗಾಡಿಗಳು ಕಾಡಿನಿಂದ ಕಟ್ಟಿಗೆ, ಸೊಪ್ಪಿನ ಹೊರೆ ಮತ್ತು ಕಾಡು ಉತ್ಪನ್ನಗಳನ್ನು ಹತ್ತಿರದ ಪೇಟೆಗೆ ಸಾಗಿಸುತ್ತಿದ್ದವು. ಆದರೆ ಅಧಿಕಾರಿ ಬರುವ ಡಂಗೂರ ಸಾರಿದರೆಂದರೆ ಯಾರೊಬ್ಬರೂ ತಮ್ಮ ಗಾಡಿಗಳನ್ನು ರಸ್ತೆಗಿಳಿಸಬಾರದೆಂಬ ಕಟ್ಟಾಜ್ಞೆಯಾಗುತ್ತಿತ್ತು. ಅಷ್ಟೇ ಅಲ್ಲ, ರವಿಕೆಯಿಲ್ಲದೇ ಬರಿಯ ಸೀರೆಯ ಸೆರಗಿನಲ್ಲಿಯೇ ಮೈಮುಚ್ಚಿಕೊಳ್ಳುವ ಹೆಂಗಸರು ಕೂಡ ಅವರ ಗಾಡಿಯೆದುರು ಬರುವಂತಿರಲಿಲ್ಲ ಎಂದು ಹೊಳೆಸಾಲಿನ ಸಾತಜ್ಜಿ ಬೊಚ್ಚು ಬಾಯಗಲಿಸಿ ಹೇಳುತ್ತಿದ್ದಳು. ಬಿಳಿಯ ಅಧಿಕಾರಿ ಊರಿಗೆ ಬರುತ್ತಾರೆಂದರೆ ರಸ್ತೆಗುಂಟ ಬೆಳೆದ ಗಿಡಗಂಟಿಗಳನ್ನೆಲ್ಲಾ ಸವರಿ ಹಸನು ಮಾಡಬೇಕಿತ್ತು. ರಸ್ತೆಗಡ್ಡವಾಗಿ ಬಿದ್ದ ಕಲ್ಲು, ಮರದ ದಿಮ್ಮಿಗಳನ್ನು ತೆರವುಗೊಳಿಸಬೇಕಿತ್ತು. ಕುದುರೆಯ ಸಾರೋಟಿನಲ್ಲಿ ಬರುವ ಬಿಳಿಯ ಅಧಿಕಾರಿಯನ್ನು ಊರಿನವರೆಲ್ಲ ಮರೆಯಲ್ಲಿ ನಿಂತು ನೋಡುತ್ತಿದ್ದರು. ಈ ಮಕ್ಕಳು ಕೋರಸ್‌ನಲ್ಲಿ ಇನ್ನೀಸಬೆಟ್ಟರ್ ಬರುತ್ತಾರೆ ಎಂದು ಕೂಗುತ್ತಾ ಬಂದಾಗ ಹೊಳೆಸಾಲಿನ ಹಿರಿಯರಿಗೆಲ್ಲ ಹಳೆಯ ದಿನಗಳು ಮತ್ತೆ ನೆನಪಾದವು.

ಹೀಗೆ ಹಳೆಯ ನೆನಪಿನಲ್ಲಿ ಕರಗಿಹೋದ ಹಿರಿಯರು ಈ ಬೆಟ್ಟರ್ ಬರುವಾಗಲೂ ಶಾಲೆಯಲ್ಲಿ ಏನೆಲ್ಲ ತಯಾರಿಗಳಿರಬಹುದು ಎಂದು ಮನೆಯಲ್ಲಿ ವರಾತ ಹಚ್ಚಿ ಮಕ್ಕಳ ತಂದೆಯಂದಿರನ್ನು ಮರುದಿನವೇ ಶಾಲೆಗೆ ಓಡಿಸಿದರು. ಒಂದು ಕೈಯ್ಯಲ್ಲಿ ಉಪ್ಪಿಟ್ಟಿನ ಚೀಲ, ಇನ್ನೊಂದು ಕೈಯ್ಯಲ್ಲಿ ದಾಖಲಾತಿ ಪುಸ್ತಕಗಳನ್ನು ನೇತಾಡಿಸಿಕೊಂಡು ಶಾಲೆಗೆ ಒಂಚೂರು ತಡವಾಗಿಯೇ ಬಂದ ಗೌಡ ಮಾಸ್ರ‍್ರು ಶಾಲೆಯೆದುರು ನಿಂತ ಹೊಂತಕಾರಿಗಳನ್ನು ಕಂಡು ತುಸು ಗಾಬರಿಯಾದರು. ಅದನ್ನು ತಮ್ಮ ಮುಖದಲ್ಲಿ ತೋರಿಸಿಕೊಳ್ಳದೇ, ನಮಸ್ಕಾರ ಮಾಸ್ರ‍್ರೇ ಎಂದು ತಮ್ಮೆದುರು ಕೈಕಟ್ಟಿ ನಿಂತವರಿಗೆ, “ನಮಸ್ಕಾರ ಮಾಡೂಕೆ ಎರಡೂ ಕೈಯ್ಯಲ್ಲಿ ಚೀಲ ಅದೆ, ಕಾಣೂದಿಲ್ವಾ?” ಎಂದು ಸ್ವಲ್ಪ ಬಿಗಿಯಾಗಿಯೇ ಹೇಳಿದರು. ಅಷ್ಟು ಕೇಳಿದ ಕೂಡಲೇ ಅವರ ಕೈಯ್ಯಲ್ಲಿರುವ ಕೈಚೀಲವನ್ನು ತೆಗೆದುಕೊಂಡ ಮಂಜು ಅದನ್ನು ಒಳಗಿನ ಕೋಣೆಯ ಟೇಬಲ್ ಮೇಲಿಟ್ಟ. ಈ ಶಾಲೆ ಪ್ರಾರಂಭವಾಗುವಾಗ ಬಂದ ಮೊದಲ ಮಾಸ್ರ‍್ರು ಇವರಾದರೆ ಮೊದಲ ವಿದ್ಯಾರ್ಥಿ ಅವನೇ ಆಗಿದ್ದ. ಹಾಗೂ ಹೀಗೂ ಗೌಡ ಮಾಸ್ರ‍್ರ ಕೈಯ್ಯಲ್ಲಿ ಕಿವಿ ಹಿಂಡಿಸಿಕೊಂಡು ಆರು ವರ್ಷದಲ್ಲಿ ನಾಲ್ಕು ತರಗತಿಗಳನ್ನು ಮುಗಿಸಿ ಶಾಲೆಯ ದಾರಿಗೆ ಕಲ್ಲು ಬೀರಿದ್ದ. ಮೊದಲೆಲ್ಲ ಮಾಸ್ರ‍್ರಿಂದ ಪೆಟ್ಟು ತಿಂದರೂ ಕೊನೆಯ ವರ್ಷದಲ್ಲಿ ಅವನೇ ಮುಖ್ಯಮಂತ್ರಿಯಾದ್ದರಿಂದ ಮಾಸ್ರ‍್ರ ಬಲಗೈ ಆಗಿಹೋಗಿದ್ದ. ಮಾಸ್ರ‍್ರು ಅಷ್ಟು ದೂರ ಬರುವಾಗಲೇ ಅವರ ಕೈಯ್ಯಿಂದ ಚೀಲವನ್ನು ತೆಗೆದುಕೊಂಡು ಬಂದು ಟೇಬಲ್ ಮೇಲೆ ಇಡುವುದು, ಮಾಸ್ರ‍್ರು ವಾಚ್ ನೋಡಿ ಸನ್ನೆ ಮಾಡಿದ ಕೂಡಲೇ ಬೆಲ್ ಹೊಡೆಯುವುದು, ಮಧ್ಯಾಹ್ನ ಶಾಲೆ ಬಿಡುವಾಗ ಮಾಸ್ರ‍್ರು ಕೊಟ್ಟ ಉಪ್ಪಿಟ್ಟಿನ ಕೊಟ್ಟೆಯನ್ನು ಸುರುವಿ ದೊಡ್ಡ ಬಾಣಲೆಯಲ್ಲಿ ಹಾಕಿ, ಶಾಲೆಯೆದುರಿನ ಬಾವಿಯಿಂದ ನೀರು ಸೇದಿ ತಂದು ಕಲಸುವುದು, ಅದನ್ನು ಒಂದೇ ಅಳತೆಯ ಉಂಡೆಯಾಗಿ ಮಾಡಿ ಶಾಲೆಯ ಎಲ್ಲ ಮಕ್ಕಳ ಕೈಯ್ಯಲ್ಲಿ ಇಡುವುದು, ನಡುನಡುವೆ ತನಗೆ ಚೂರು ದೊಡ್ಡ ಉಂಡೆ ಬೇಕೆಂದು ಆಸೆಗಣ್ಣು ಬಿಡುವ ಮಕ್ಕಳಿಗೆ ಹಾಗೆಲ್ಲ ಮಾಡುವುದು ಮಂತ್ರಿಯಾದ ತನ್ನ ಘನತೆಗೆ ತಕ್ಕುದಲ್ಲವೆಂದು ಮುಖಭಾವದಲ್ಲೇ ತೋರಿಸುವುದು ಹೀಗೆ ಇಡಿಯ ಶಾಲೆಯ ಆಧಾರಸ್ತಂಭವಾಗಿ ನಿಂತಿದ್ದ. ಮಾಸ್ರ‍್ರು ಗದ್ದೆ ಹೂಟಿಗೆಂದು ರಜೆ ಮಾಡಿದಾಗ, ಮೀಟಿಂಗ್ ಎಂದು ಕೇಂದ್ರ ಶಾಲೆಗೆ ಹೋದಾಗಲೆಲ್ಲ ಅವನೇ ನಿಂತು ಶಾಲೆಯನ್ನು ನಿಭಾಯಿಸುತ್ತಿದ್ದ. ಒಂದೇ ಕೋಣೆಯಿರುವ ಶಾಲೆಯ ಕೀಲಿಕೈ ಅವನ ಕೈಯ್ಯಲ್ಲೇ ಇರುತ್ತಿತ್ತು. ಅದು ಕಳೆದುಹೋಗಬಾರದೆಂದು ಅಪ್ಪನಿಗೆ ಹೇಳಿ ಬೀಟೆಮರದ ಚೂರನ್ನು ಚಂದಗೆ ಕೆತ್ತಿ ಒಂದು ಕೀ ಬಂಚನ್ನೂ ಮಾಡಿಸಿಕೊಂಡಿದ್ದ. ಶಾಲೆಯ ಕೀಯನ್ನು ಬರ‍್ರನೆ ತಿರುಗಿಸುತ್ತಾ, ಮೇಲಕ್ಕೆಸೆದು ಹಿಡಿಯುತ್ತಾ ಅವನು ಸಾಗುವ ಠೀವಿಯನ್ನು ನೋಡಿಯೇ ಮಕ್ಕಳು ಮುಂದಿನ ವರ್ಷ ತಾವು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿದ್ದರು.

ಮಂಜುವಿನ ಗುರುಸೇವೆಯಿಂದ ಖುಶಿಗೊಂಡ ಮಾಸ್ರ‍್ರು ಮಕ್ಕಳನ್ನೆಲ್ಲ ಒಳಗೆ ಶಿಸ್ತಾಗಿ ಕೂರಿಸಿ ಹೊರಗೆ ಬಂದು ಅವರೆಲ್ಲ ಬಂದ ಕಾರಣವೇನೆಂದು ಕೇಳಿದರು. ಶಾಲೆಗೆ ಇನ್ನಿಸಬೆಟ್ಟರ್ ಬರುತ್ತಿರುವುದರಿಂದ ಏನಾದರೂ ಕೆಲಸವಿರಬಹುದೆಂದು ಬಂದಿರುವುದಾಗಿ ಅವರು ಹೇಳಿದಾಗ ಮಾಸ್ರ‍್ರು ನಿಜಕ್ಕೂ ಭಾವುಕರಾದರು. “ಇಷ್ಟಕ್ಕಾದರೂ ನಿಮಗೆಲ್ಲ ಶಾಲೆ ನೆನಪಾಯ್ತಲ್ಲ. ನನ್ನ ಸರ್ವಿಸಿನಲ್ಲಿ ಇಷ್ಟರವರೆಗೆ ಶಾಲೆಗೆ ಇನ್ಸಪೆಕ್ಟರ್ ಬಂದಿದಿಲ್ಲ. ಈ ಸಲದವರು ಎಲ್ಲ ಶಾಲೆಗೆ ಹೋಗಲೇಬೇಕು ಅಂತ ಹಳ್ಳಿ ಶಾಲೆಗಳಿಗೂ ಬರ್ತಿದ್ದಾರೆ. ಶಾಲೆಯಲ್ಲಿ ಇಡಬೇಕಾದ ದಾಖಲೆಗಳ ಬಗ್ಗೆ ಮೊನ್ನೆ ಮೀಟಿಂಗ್ನಲ್ಲಿ ಹೇಳಿದ್ರು. ಅದೆಲ್ಲ ಮಾಡ್ತಾ ಕೂತ್ರೆ ಈ ಮಕ್ಕಳಿಗೆ ಕಲಿಸೋದನ್ನು ಬಿಡಬೇಕು ಅಷ್ಟೆ. ದೇವರು ಮೆಚ್ಚೋ ಹಾಗೆ ಪಾಠ ಮಾಡಿದ್ದೇನೆ. ಅದನ್ನೇ ಅವ್ರಿಗೂ ಹೇಳ್ತೇನೆ. ಏನಾಗ್ತದೋ ಆಗ್ಲಿ. ನೀವೆಲ್ಲ ಸೇರಿ ಮಾಡೋದೇನಿದೆ?” ಎಂದು ತನ್ನ ತಲೆಬಿಸಿಯನ್ನೆಲ್ಲ ಊರಿನ ಪಾಲಕರ ಮೇಲೆ ಹೊರೆಸಿದರು. ಅವರ ಮಾತುಗಳನ್ನು ಕೇಳಿದ ಮಂಜು, “ನೀವೇನ್ ತಲೆಬಿಸಿ ಮಾಡಬೇಡಿ ಮಾಸ್ರ‍್ರೇ. ಅವ್ರೇನಾದ್ರೂ ಹಾಂಗೆ, ಹೀಂಗೆ ಅಂದ್ರೆ ನನ್ನನ್ನು ಕರೀರಿ. ನಂಗೆ ಒಂದೊಂದು ಅಕ್ಸರ ಕಲ್ಸೂಕೆ ನೀವು ಎಷ್ಟು ಕಷ್ಟಪಟ್ಟಿದ್ದೀರಿ ಅನ್ನೋದನ್ನ ಅವ್ರಿಗೆ ಹೇಳ್ತೆ ನಾನು. ಆದ್ರೆ ಅವ್ರು ಬರೋವಾಗ ನಮ್ ಸಾಲಿ ಚೂರು ಚಂದ ಕಾಣ್ಬೇಕಲ್ಲ. ನಾವೆಲ್ಲ ಸೇರಿ ಇವತ್ತು ಸಾಲೆ ಮುಂದಿನ ಆಟದ ಮೈದಾನವನ್ನು ಸರಿ ಮಾಡ್ತೊ. ಮತ್ತೆ ನೀವ್ ಹೂಂ ಅಂದ್ರೆ ಇಲ್ಲೇ ಒಂದು ವಾಲಿಬಾಲ್ ಕೋರ್ಟ ಮಾಡ್ಕಂತೊ. ದಿನಾ ಸಂಜೆ ಬಂದು ಆಟ ಆಡಿ ತೆಂಗಿನ ಮರಕ್ಕೆಲ್ಲ ನೀರು ಹಾಕಿ ಹೋಗ್ತೊ.” ಎನ್ನುತ್ತಾ ಸ್ವಾಮಿಕಾರ್ಯ, ಸ್ವಕಾರ್ಯ ಎರಡನ್ನೂ ಒಟ್ಟಿಗೆ ಸಾಧಿಸಿಕೊಂಡ. ಆಟವಾಡುವ ನೆಪದಲ್ಲಿಯಾದರೂ ನಾಲ್ಕು ಹಳೆಯ ವಿದ್ಯಾರ್ಥಿಗಳು ಶಾಲೆಯೆಡೆಗೆ ಮುಖಮಾಡಲಿ ಎಂಬ ಆಸೆಯಿಂದ ಗೌಡ ಮಾಸ್ರ‍್ರು ಮಂಜನ ಮಾತಿಗೆ ತಲೆದೂಗಿದರು. ಮಾಸ್ರ‍್ರ ಅನುಮತಿ ಸಿಕ್ಕಿದ್ದೇ ತಡ, ಮಂಜನ ಗ್ಯಾಂಗು ಇಡಿಯ ಶಾಲೆಯ ಮೈದಾನವನ್ನು ಅಗೆದು, ಹರಡಿ ಸಮತಟ್ಟುಗೊಳಿಸಿ, ನಡುವಲ್ಲಿ ಒಂದು ವಾಲಿಬಾಲ್ ಕೋರ್ಟನ್ನು ಸಜ್ಜುಗೊಳಿಸಿ ಊರಿನೆಡೆಗೆ ಮರಳಿತು. ಇನ್ನೀಸಬೆಟ್ಟರು ಬರುವ ದಿನವನ್ನು ತಿಳಿಸಿದರೆ ಶಾಲೆಯ ಕೋಣೆಗೆ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸುವ ಹೆಚ್ಚುವರಿ ಹೊಣೆಯನ್ನೂ ಹೊತ್ತುಕೊಂಡಿತು.

ಶಾಲೆಗೆ ಇನ್ನೀಸಬೆಟ್ಟರ್ ಬರುವ ದಿನ ನಿಗದಿಯಾಯಿತು. ಹೊಳೆಸಾಲಿನ ಯುವಪಡೆ ಶಾಲೆಯನ್ನು ತಳಿರುತೋರಣಗಳಿಂದ ಸಿಂಗರಿಸಿತ್ತು. ನೀಲಿ ಮತ್ತವಳ ಗೆಳತಿಯರು ಸೇರಿ ಶಾಲೆಯ ಅಂಗಳದಲ್ಲಿ ಚಂದದ ರಂಗೋಲಿಯನ್ನು ಹಾಕಿದರು. ಮರುದಿನ ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡು ಬರುವಂತೆ ಮಾಸ್ರ‍್ರು ಹೇಳಿದ್ದರಿಂದ ಅಮ್ಮನಿಗೆ ವರಾತ ಹಚ್ಚಿ ಟ್ರಂಕಿನೊಳಗಿದ್ದ ಹೊಸಬಟ್ಟೆಯನ್ನು ತೆಗೆದಿಟ್ಟುಕೊಂಡರು. ಹೊಸ ಅಂಗಿ ಹಾಕಿದಾಗ ಮುಡಿಯಲೆಂದು ಹುಡುಗಿಯರೆಲ್ಲ ಕನಕಾಂಬರದ ಮಾಲೆಯನ್ನು ಹೆಣೆಸಿಟ್ಟುಕೊಂಡರು. ಬೆಳಿಗ್ಗೆ ಬೇಗನೆ ಬರಬೇಕೆಂದು ಮಾಸ್ರ‍್ರು ತಾಕೀತು ಮಾಡಿದ್ದರಿಂದ ರಾತ್ರಿಯ ನಿದ್ದೆಯನ್ನು ಕಳಕೊಂಡರು. ಬೆಳಗಿನ ಜಾವ ಮನೆಯವರೆಲ್ಲ ಏಳುವ ಮೊದಲೇ ಎದ್ದು, ಇದ್ದಿಲಿನಿಂದ ಹಲ್ಲನ್ನು ಗಸಗಸನೆ ತಿಕ್ಕಿ, ಸೀಗೆಕಾಯಿ ಪುಡಿಯಿಂದ ಮೈಸುಲಿದು ಹೋಗುವಂತೆ ಉಜ್ಜಿ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ಶಾಲೆಗೆ ಸಿದ್ಧರಾದರು. ಮಕ್ಕಳ ಉತ್ಸಾಹವನ್ನು ನೋಡಿದ ತಾಯಂದಿರಿಗೆ ಮಾದೇವಿಯ ಮಾತನ್ನು ಕೇಳಿ ಇವರನ್ನು ಶಾಲೆಗೆ ಕಳಿಸಿದ್ದು ಎಷ್ಟು ಒಳ್ಳೆಯದಾಯಿತು ಅನಿಸಿತು. ಹುಡುಗಿಯರ ಗುಂಪು ಕನಕಾಂಬರವನ್ನು ನೆತ್ತಿಯವರೆಗೂ ಏರಿಸಿ ತನ್ನನ್ನು ದಾಟಿ ಶಾಲೆಯೆಡೆಗೆ ಹೋಗುವಾಗ ಹೂವಿನ ಪುಟ್ಟ ತೇರೊಂದು ಚಲಿಸುತ್ತಿರುವಂತೆ ಹೊಳೆಗೆ ಭಾಸವಾಯಿತು.

ಶಾಲೆಯ ಅಂಗಳದಲ್ಲಿ ಎಂದಿಗಿಂತ ಮೊದಲೇ ಸೇರಿದ್ದ ಹುಡುಗಿಯರು ಚೂರೇ ಚೂರು ಹಾಳಾಗಿದ್ದ ರಂಗೋಲಿಯನ್ನು ಸರಿಪಡಿಸತೊಡಗಿದರೆ ಹುಡುಗರು ಏಣಿಯೇರಿ ಶಾಲೆಯ ತೋರಣವನ್ನು ಇನ್ನಷ್ಟು ಒಪ್ಪಗೊಳಿಸಿದರು. ಮಾಸ್ರ‍್ರಿನ್ನೂ ಶಾಲೆಗೆ ಬಂದಿರಲಿಲ್ಲ. ಅಷ್ಟರಲ್ಲಿ ಸೈಕಲ್ ಬೆಲ್ಲಿನ ಕಿಣಿಕಿಣಿ ಶಬ್ದ ಕೇಳಿತು. ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ದಾರಿಯೆಡೆಗೆ ನೋಡಿದರೆ ಆರಡಿ ಎತ್ತರದ ಚಂದದ ವ್ಯಕ್ತಿಯೊಬ್ಬರು ನಗುತ್ತಾ ಇವರೆಡೆಗೆ ಬರುತ್ತಿದ್ದರು. ಚೌಕಳಿ ಶರ್ಟು ಮತ್ತು ಬಿಳಿಯ ಪ್ಯಾಂಟಿನಲ್ಲಿ ಬಂದ ಅವರನ್ನು ಮಕ್ಕಳು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟರು. ಸೈಕಲ್ ಬೆಲ್ ಮಾಡುತ್ತಾ, ಸಮತಟ್ಟುಗೊಳಿಸಿದ ಮೈದಾನದ ತುಂಬಾ ಸೈಕಲ್ ಹೊಡೆಯುತ್ತ ಮಕ್ಕಳೆಡೆಗೆ ಕೈ ಬೀಸಿದರು. ಅವರ ಮುಗುಳ್ನಗೆಗೆ ಮನಸೋತ ಮಕ್ಕಳು ಹೋ ಎಂದು ಕೂಗುತ್ತಾ ಅವರ ಸೈಕಲ್ಲಿನ ಹಿಂದೆಯೇ ಹುಚ್ಚೆದ್ದು ಓಡತೊಡಗಿದರು. ಅಷ್ಟರಲ್ಲಿ ಆವರಣಕ್ಕೆ ಬಂದ ಮಾಸ್ರ‍್ರು ತನ್ನ ಮೇಲಧಿಕಾರಿ ಈ ರೀತಿ ಮಕ್ಕಳೊಂದಿಗೆ ಸೈಕಲ್ ಸರ್ಕಸ್ ಮಾಡುತ್ತಿರುವುದನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟು ನಿಂತರು. ಮಾಸ್ರ‍್ರು ಬಂದುದನ್ನು ಕಂಡ ಇನ್ಸಪೆಕ್ಟರ್, “ಬನ್ನಿ, ಬನ್ನಿ ಮಾಸ್ರ‍್ರೇ, ನೀವು ಬರೋದು ಇನ್ನೊಂಚೂರು ತಡ ಆಗಿದ್ರೆ ಈ ಮಕ್ಕಳ ಜತೆಗೆ ಒಂದು ಮ್ಯಾಚ್ ವಾಲಿಬಾಲ್ ಆಡ್ತಿದ್ದೆ” ಎಂದು ಸ್ನೇಹದ ಹಸ್ತ ಚಾಚಿದರು.

ಹೇಗೋ, ಏನೋ ಎಂಬ ಚಿಂತೆಯಲ್ಲಿದ್ದ ಗೌಡಮಾಸ್ರ‍್ರು ಅವರ ವರ್ತನೆಯಿಂದ ನಿರಾಳರಾಗಿ ಮಕ್ಕಳನ್ನೆಲ್ಲ ಪ್ರಾರ್ಥನೆಗೆಂದು ಸಾಲಲ್ಲಿ ನಿಲ್ಲಿಸಿದರು. ನಡುನಡುವೆ ಹುಡುಗಿಯರ ತಲೆಯ ಕನಕಾಂಬರವನ್ನು ಎಳೆಯುವ ಹುಡುಗರನ್ನು ಕಣ್ಣುಬಿಟ್ಟು ಹೆದರಿಸಿದರು. ಎಲ್ಲರೂ ಒಕ್ಕೊರಲಿನಲ್ಲಿ ‘ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಎಂದು ಹಾಡುತ್ತಿದ್ದರೆ ಅಧಿಕಾರಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ತರಗತಿಯ ಒಳಗೆ ವಿದ್ಯಾರ್ಥಿಗಳಿಂದ ಪಾಠ ಓದಿಸಿ ಕೇಳಿ ಖುಶಿಪಟ್ಟರು. ಬೋರ್ಡಿನ ಮೇಲೆ ಪುಟ್ಟ ಪುಟ್ಟ ಲೆಕ್ಕ ಬರೆದು ಬಿಡಿಸಲು ಹೇಳಿದರು. ಮೊದಲು ಲೆಕ್ಕ ಬಿಡಿಸಿ ತಂದ ಮಕ್ಕಳ ಮುಖದ ಮೇಲೆ ಕೆಂಪು ಶಾಯಿಯಲ್ಲಿ ಗುಡ್ ಎಂದು ಬರೆದರು. ನಾಚಿಕೆಯಿಂದ ಮಕ್ಕಳ ಮುಖವೂ ಶಾಯಿಯಂತೆ ಕೆಂಪೇರಿತು. ಮೂರನೇ ತರಗತಿಯ ಮಕ್ಕಳು ಮಾಡಿದ ಕೋಲಾಟವನ್ನು ಮೆಚ್ಚಿಕೊಂಡರು. ನಾಲ್ಕನೇ ತರಗತಿಯವರು ಅಭಿನಯಿಸಿದ ಏಕಲವ್ಯ ನಾಟಕವನ್ನು ನೋಡಿ ಆನಂದಿಸಿದರು. ಮಾಸ್ರ‍್ರ ದಾಖಲೆ ಪುಸ್ತಕಗಳನ್ನು ನೋಡಿ ನಖರಾ ಮಾಡದೇ ಸರಸರನೆ ಸಹಿ ಮಾಡಿದರು. ಹೋಗುವ ಮೊದಲು ಮಾಸ್ರ‍್ರು ನೀಲಿಯ ಹತ್ತಿರ ಹಾಡೊಂದನ್ನು ಹಾಡುವಂತೆ ಹೇಳಿದರು. ನೀಲಿ ತನ್ನ ಎರಡು ಜಡೆಗಳನ್ನು ಸರಿಪಡಿಸಿಕೊಂಡು, ಕೈಗಳನ್ನು ಕಾಲಿನ ಇಕ್ಕೆಲಗಳಲ್ಲಿ ನೇರವಾಗಿ ಇಳಿಬಿಟ್ಟು ನಿಂತು,
ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೇಳರಾರೆಂದು
ಅರಳಿ ನಿಂತಿರೆ ನನಗೆ ದೇವ ದರುಶನವಿಲ್ಲ
ಪಸರಿಸುವ ಪರಿಮಳವ ಆಸ್ವಾದಿಸುವರಿಲ್ಲ
ಎಂದು ಹರಿವ ಹೊಳೆಯಂತೆ ಕಲಕಲನೆ ಹಾಡಿದಳು. ತನ್ಮಯತೆಯಿಂದ ಹಾಡನ್ನು ಆಲಿಸಿದ ಅಧಿಕಾರಿ ಈ ವರ್ಷ ತಾಲೂಕು ಕೇಂದ್ರದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಡಲು ನೀಲಿಯನ್ನು ಕರೆದುಕೊಂಡು ಬರಲು ತಿಳಿಸಿದರಲ್ಲದೇ, ಅಲ್ಲಿಗೆ ಬರುವ ಶಾಸಕರಲ್ಲಿ ತಾನು ಹೊಳೆಸಾಲಿನ ಹೊಳೆಗೊಂದು ಸೇತುವೆಯನ್ನು ಕಟ್ಟುವಂತೆ ವಿನಂತಿಸುವುದಾಗಿಯೂ, ಅದಕ್ಕೆಂದು ಊರಿನವರ ವತಿಯಿಂದ ಒಂದು ಅರ್ಜಿಯನ್ನೂ ಮಾಸ್ರ‍್ರು ತರಬೇಕೆಂದು ತಾಕೀತು ಮಾಡಿದರು. ನಗುನಗುತ್ತಾ ಮಕ್ಕಳೆಡೆಗೆ ಕೈಬೀಸಿ ಸೈಕಲ್ಲನ್ನೇರಿ ಮಾಯವಾದರು.

ಮಾಸ್ರ‍್ರು ಗದ್ದೆ ಹೂಟಿಗೆಂದು ರಜೆ ಮಾಡಿದಾಗ, ಮೀಟಿಂಗ್ ಎಂದು ಕೇಂದ್ರ ಶಾಲೆಗೆ ಹೋದಾಗಲೆಲ್ಲ ಅವನೇ ನಿಂತು ಶಾಲೆಯನ್ನು ನಿಭಾಯಿಸುತ್ತಿದ್ದ. ಒಂದೇ ಕೋಣೆಯಿರುವ ಶಾಲೆಯ ಕೀಲಿಕೈ ಅವನ ಕೈಯ್ಯಲ್ಲೇ ಇರುತ್ತಿತ್ತು. ಅದು ಕಳೆದುಹೋಗಬಾರದೆಂದು ಅಪ್ಪನಿಗೆ ಹೇಳಿ ಬೀಟೆಮರದ ಚೂರನ್ನು ಚಂದಗೆ ಕೆತ್ತಿ ಒಂದು ಕೀ ಬಂಚನ್ನೂ ಮಾಡಿಸಿಕೊಂಡಿದ್ದ.

ಮರುದಿನವಿಡೀ ಎಲ್ಲ ಮಕ್ಕಳ ಬಾಯಲ್ಲೂ ಬರಿಯ ಇನ್ನಿಸಬೆಟ್ಟರ ಸುದ್ದಿಯೆ. ದೊಡ್ಡವರಾದಮೇಲೆ ಸಾರಾಯಿ ಹಿಡಿಯುವ ಅಬಕಾರಿ ನೌಕರರೋ ಅಥವಾ ಪೋಲೀಸರೋ ಆಗಬೇಕೆಂದು ಕನಸು ಕಟ್ಟಿದ ಕೆಲವು ಹುಡುಗರಂತೂ ತಾವೆಲ್ಲ ಪಕ್ಕಾ ಇನ್ನಿಸಬೆಟ್ಟರೇ ಆಗುವುದು ಎಂದು ಪ್ರತಿಜ್ಞೆ ಮಾಡಿಬಿಟ್ಟರು. ಆ ಇನ್ನೀಸಬೆಟ್ಟರು ಬಂದಾಗ ತಮ್ಮ ಮಾಸ್ರ‍್ರು ತೋರಿಸುತ್ತಿದ್ದ ಗೌರವ ಅವರನ್ನೆಲ್ಲ ಹಾಗೆ ಯೋಚಿಸುವಂತೆ ಪ್ರೇರೇಪಿಸಿತ್ತು. ತಮ್ಮ ಊರಿನ ನೀಲಿ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಡಲು ತಾಲೂಕು ಕೇಂದ್ರಕ್ಕೆ ಹೋಗುತ್ತಾಳೆ ಎಂಬ ವಿಷಯವಂತೂ ಮಳೆಗಾಲದ ನೆರೆಯಂತೆ ಊರತುಂಬಾ ಹರಡಿತು. ಇತ್ತ ಮಾಸ್ರ‍್ರಿಗೂ ಒಂದು ಬಗೆಯ ಆತಂಕ. ಮೀಟಿಂಗಿಗೆಂದು ಕೇಂದ್ರಶಾಲೆಗೆ ಹೋದದ್ದು ಬಿಟ್ಟರೆ ತಾಲೂಕು ಕೇಂದ್ರಕ್ಕೆಲ್ಲ ಅವರು ಹೋದದ್ದೇ ಕಡಿಮೆ. ಅಲ್ಲಿ ಅಷ್ಟು ದೊಡ್ಡ ಪ್ರೋಗ್ರಾಂ ನಡೆಯುವಾಗ ಹೇಗೋ? ಏನೋ? ನೀಲಿಯನ್ನೆಲ್ಲ ಹಾಡಲು ವೇದಿಕೆಗೆ ಕರೆಯುವರೋ ಇಲ್ಲವೊ? ಮೊದಲೇ ಸಾವಿರಾರು ಜನಸೇರುವ ಆ ಮೈದಾನದಲ್ಲಿ ಈ ಅಧಿಕಾರಿಯನ್ನು ಎಲ್ಲಿಯೆಂದು ಹುಡುಕುವುದು? ಈ ಕಾಡಿನ ಮಗು ನೀಲಿ ಆ ದೊಡ್ಡ ವೇದಿಕೆಯಲ್ಲಿ ಹಾಡುವುದಾದರೂ ಹೌದಾ? ಹೀಗೆಲ್ಲ ಆಲೋಚನೆಗಳು ಒಂದರ ಮೇಲೊಂದು ಬಂದು ಛೇ! ಆ ಅಧಿಕಾರಿ ಬರದಿದ್ದರೇ ಚೆನ್ನಾಗಿತ್ತು ಅನಿಸಿಬಿಟ್ಟಿತು. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳನ್ನೆಲ್ಲ ಸಾಲಲ್ಲಿ ಸೇರಿಸಿ ಊರತುಂಬಾ ಮೆರವಣಿಗೆ ನಡೆಸುವುದು ಅವರಿಗೆ ಅತ್ಯಂತ ಪ್ರಿಯವಾಗಿದ್ದು ಈ ಸಲ ಹೇಗೆ ನಡೆಸುವುದು? ಎಂಬುದೂ ಬಗೆಹರಿಯಲಿಲ್ಲ. ಅದೇನೇ ಇರಲಿ, ಶಾಲೆಯ ಧ್ವಜದ ಕಂಬ ಮಾತ್ರ ಆ ದಿನ ಖಾಲಿಯಿರಬಾರದೆಂದು ಮಂಜನನ್ನು ಕರೆದು ಧ್ವಜಾರೋಹಣದ ಜವಾಬ್ದಾರಿಯನ್ನು ಅವನಿಗೆ ವಹಿಸಿದರು. ಊರ ಮುಖಂಡರನ್ನು ಧ್ವಜವೇರಿಸಲು ಶಾಲೆಗೆ ಬರಲು ಒಪ್ಪಿಸಿದರು. ಮಕ್ಕಳಿಗೆ ಕೊಡಲೆಂದು ಚಾಕಲೇಟ್ ಡಬ್ಬವನ್ನು ತಂದು ಕಪಾಟಿನಲ್ಲಿಟ್ಟರು.

ಪುಟ್ಟ ನೀಲಿ ಮೊದಲ ಬಾರಿಗೆ ತಾಲೂಕು ಕೇಂದ್ರವನ್ನು ನೋಡಿದಳು. ಶಾಲೆಯಲ್ಲಿ ಸದಾ ಗಂಭೀರವಾಗಿರುವ ಮಾಸ್ರ‍್ರು ಪೇಟೆಯಲ್ಲಿ ತನ್ನನ್ನು ಕೈಹಿಡಿದು ರಸ್ತೆ ದಾಟಿಸುವಾಗ ಅವಳಿಗೆ ಖುಶಿಯೆನಿಸಿತು. ಅವರು ಅಲ್ಲಿಗೆ ತಲುಪುವಾಗಲೇ ಮೈದಾನದ ತುಂಬ ಜನರು ಸೇರಿದ್ದರು. ಬೇರೆ ಬೇರೆ ಬಣ್ಣದ ಯುನಿಫಾರಂ ಧರಿಸಿದ ವಿದ್ಯಾರ್ಥಿಗಳ ಗುಂಪು ಪರೇಡ್‌ಗೆ ಸಿದ್ಧವಾಗಿ ನಿಂತಿತ್ತು. ಪೇಟವನ್ನು ಕಟ್ಟಿಕೊಂಡ ವಾದ್ಯಗಾರರು ಬ್ಯಾಂಡ್ ಬಾರಿಸಲು ತಯಾರಾಗಿದ್ದರು. ದೊಡ್ಡ ಧ್ವಜಸ್ತಂಭದ ಮೇಲೆ ದೇಶದ ಬಾವುಟ ಇನ್ನೇನು ಅರಳಲು ಕಾಯುತ್ತಿತ್ತು. ಮಾಸ್ರ‍್ರು ನೀಲಿಯ ಕೈಹಿಡಿದು ಜನರ ನಡುವೆ ದಾರಿಮಾಡಿಕೊಳ್ಳುತ್ತ ಧ್ವಜದ ಕಟ್ಟೆಯೆಡೆಗೆ ನಡೆದರು. ಇವರನ್ನು ದೂರದಿಂದಲೇ ನೋಡಿ ಕೈಬೀಸಿದ ಅಧಿಕಾರಿ ನಗುತ್ತಾ ಬರಮಾಡಿಕೊಂಡರು. ಕಾರಿನಲ್ಲಿ ಬರ್ ಎಂದು ಬಂದಿಳಿದ ಶಾಸಕರಿಗೆ ಮಾಸ್ರ‍್ರ ಕೈಯ್ಯಿಂದ ಅರ್ಜಿಯನ್ನು ಪಡೆದು ನೀಡಿದರು. ನಂತರ ಧ್ವಜಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಪಥಸಂಚಲನ ಮುಗಿದೊಡನೆ ಹಾಡಿನ ಸ್ಪರ್ಧೆ ನಡೆಯುವ ಹಾಲಿಗೆ ಮಾಸ್ರ‍್ರು ನೀಲಿಯನ್ನು ಕರೆದುಕೊಂಡು ಹೋದರು. ಬೆಳಗಿನಿಂದ ಬಿಸಿಲಲ್ಲಿ ನಿಂತು ಬಾಯಾರಿರಬಹುದೆಂದು ಲಿಂಬೆಹುಳಿಯ ಪೆಪ್ಪರಮೆಂಟನ್ನು ಖರೀದಿಸಿ ತಂದುಕೊಟ್ಟರು. ಹಾಲಿನ ಹಿಂಭಾಗದಲ್ಲಿ ನಿಲ್ಲಿಸಿ ಮತ್ತೊಮ್ಮೆ ಮೆಲ್ಲಗೆ ಹಾಡನ್ನು ಹಾಡಿಸಿದರು. ನೀಲಿಯ ಹೆಸರನ್ನು ಕರೆಯುತ್ತಿದ್ದಂತೆ ಅವಳನ್ನು ಕೈಹಿಡಿದು ವೇದಿಕೆ ಹತ್ತಿಸಿದರು. ಮೊದಲ ಬಾರಿಗೆ ವೇದಿಕೆಯೇರಿದ ನೀಲಿ ಒಂದಿನಿತೂ ಹೆದರದೇ ಕಾಡಮಲ್ಲಿಗೆ ಹಾಡನ್ನು ಹಾಡಿದಳು. ಮಾಸ್ರ‍್ರು ನೀಲಿಯ ತಲೆಸವರಿ ಬೆನ್ನುತಟ್ಟಿದರು. ದೂರದಲ್ಲಿದ್ದ ಅಧಿಕಾರಿ ಗೆಲುವಿನ ಚಿಹ್ನೆ ತೋರಿಸಿದರು. ಸ್ಪರ್ಧೆ ಮುಗಿದೊಡನೆ ಹೊರಟುಬಿಡಬೇಕೆಂದಿದ್ದ ಮಾಸ್ರ‍್ರಿಗೆ ನೀಲಿ ಹಾಡಿದ ರೀತಿಯನ್ನು ನೋಡಿ ಫಲಿತಾಂಶವನ್ನು ಕಾಯಬೇಕು ಅನಿಸಿತು. ಅವರು ಎಣಿಸಿದಂತೆ ನೀಲಿಗೆ ಸಮಾಧಾನಕರ ಬಹುಮಾನವೂ ಬಂತು. ಪುಸ್ತಕವೊಂದನ್ನು ಬಹುಮಾನವಾಗಿ ಪಡೆದು ಮನೆಗೆ ಹೊರಟರು.

ನೀಲಿಗೆ ಬಹುಮಾನವಾಗಿ ಬಂದ ಪುಸ್ತಕ ಹೊಳೆಸಾಲಿನ ಸಂಜೆಗಳನ್ನೇ ಬದಲಿಸಿಬಿಟ್ಟಿತು. ಮಹಾಭಾರತದ ಕಥೆಯನ್ನು ಸರಳಭಾಷೆಯಲ್ಲಿ ಹೇಳುವ ಆ ಪುಸ್ತಕ ನೀಲಿಯ ಅಪ್ಪನಿಗೆ ಬಹಳ ಹಿಡಿಸಿತು. ದಿನವೂ ಅದರ ಒಂದೊಂದೆ ಅಧ್ಯಾಯವನ್ನು ನೀಲಿಯಿಂದ ಓದಿಸಿ ಕೇಳುವುದು ಅವರ ಚಾಳಿಯಾಯಿತು. ಕ್ರಮೇಣ ಕಥೆ ಕೇಳಲು ಸುತ್ತಮುತ್ತಲಿನ ಮನೆಯವರೂ ಬಂದು ಕೂರುವುದು, ಅದರಲ್ಲಿ ಬರುವ ಪಾತ್ರಗಳ ಬಗ್ಗೆ ಚರ್ಚಿಸುವುದು, ಯಕ್ಷಗಾನದಲ್ಲಿ ಆ ಪಾತ್ರಗಳನ್ನು ಮಾಡಿದವರ ಬಗೆಗೆ ಮಾತನಾಡುವುದು ಹೀಗೆಯೇ ಮಹಾಭಾರತ ಹೊಳೆಸಾಲಿನಲ್ಲಿ ಹರಿಯತೊಡಗಿತು. ಪುಸ್ತಕದಲ್ಲಿರುವ ಉತ್ತರನ ಪೌರುಷ ಅಧ್ಯಾಯವಂತೂ ಅದೆಷ್ಟು ಹಾಸ್ಯಮಯವಾಗಿತ್ತೆಂದರೆ ನೀಲಿ ಅದನ್ನು ಓದುವಾಗ ಕೇಳುವವರೆಲ್ಲ ನಕ್ಕು, ನಕ್ಕು ಹಣ್ಣಾಗುತ್ತಿದ್ದರು. ಕೌರವನ ಸೈನ್ಯವನ್ನು ನೋಡಿದ ಉತ್ತರ ಬ್ಬೆ …ಬ್ಬೆ…ಬ್ಬೆ ಎಂದು ತಡವರಿಸುತ್ತಿದ್ದರೆ ಸುತ್ತಲಿನವರೆಲ್ಲ ತಮ್ಮೂರಿನ ಕೊಚ್ಚಿಗೆ ರಾಯರನ್ನು ನೆನಪಿಸಿಕೊಂಡು ಬಿದ್ದು ಬಿದ್ದು ನಗುತ್ತಿದ್ದರು. ಕ್ರಮೇಣ ಅಧ್ಯಾಯವಿಡೀ ಕೇರಿಯ ಮಕ್ಕಳಿಗೆ ಬಾಯಿಪಾಠವಾಗಿ, ಒಬ್ಬೊಬ್ಬರು ಒಂದೊಂದು ಪಾತ್ರದ ಮಾತುಗಳನ್ನು ಹೇಳುತ್ತಾ, ಅಭಿನಯಿಸುತ್ತಾ ಹೊಳೆಸಾಲಿನ ಮಕ್ಕಳ ನಾಟಕ ಕಂಪನಿಯೊಂದು ತಯಾರಾಗಿಬಿಟ್ಟಿತು.

ಈ ಮಕ್ಕಳ ಮಂಗಾಟವನ್ನು ಮನೆಯಂಗಳದಲ್ಲಿ ನೋಡುತ್ತ, ಕವಳ ತಿನ್ನುತ್ತ ಕುಳಿತ ಕೆಲವರಿಗೆ ಗಡಂಗಿನ ದಾರಿ ಹಿಡಿಯುವುದು ಮರೆತುಹೋಗತೊಡಗಿತು. ಮಕ್ಕಳ ಉತ್ಸಾಹವನ್ನು ನೋಡಿದ ಪಾಲಕರು ಈ ಸಲ ಶಾಲೆಯಲ್ಲಿ ಗ್ಯಾದರಿಂಗ್ ಮಾಡಿದರೆ ಹೇಗೆ? ಎಂದು ಯೋಜನೆ ಹೊಸೆಯತೊಡಗಿದರು. ಮಂಜನಂತೂ ಎಲ್ಲ ಊರಲ್ಲಿ ನಡೆಯುವ ಶಾಲೆಯ ಗ್ಯಾದರಿಂಗ್ ನಮ್ಮೂರಿನಲ್ಲಿ ಇನ್ನೂ ನಡೆದಿಲ್ಲವೆಂದು ನೊಂದುಕೊಳ್ಳುತ್ತಾ, ಶಾಲೆಯ ಮೊದಲ ವಿದ್ಯಾರ್ಥಿಯಾದ ತಾನೆ ಅದರ ಮುಂದಾಳತ್ವವನ್ನು ವಹಿಸಿಕೊಂಡುಬಿಟ್ಟ. ಊರಿನವರ ಉತ್ಸಾಹಕ್ಕೆ ತಲೆಬಾಗಿದ ಮಾಸ್ರ‍್ರು ಮುಖ್ಯ ಅತಿಥಿಯಾಗಿ ತಮ್ಮ ಅಧಿಕಾರಿಯನ್ನೇ ಕರೆಸುವ ಯೋಜನೆ ಹಾಕಿಕೊಂಡರು. ಇಡಿಯ ಊರು ಶಾಲೆಯ ಗ್ಯಾದರಿಂಗ್ ನಡೆಸುವ ಸಂಭ್ರಮದಲ್ಲಿ ಮುಳುಗಿದ್ದನ್ನು ಕಂಡ ಹೊಳೆಸಾಲ ಹೊಳೆಯು ತಾನೂ ಅದನ್ನು ನೋಡುವಂತಿದ್ದರೆ ಎಂದು ಹಂಬಲಿಸತೊಡಗಿತು.