ಕನ್ನಡದ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಅಗಲಿ ಇಂದಿಗೆ ಒಂದು ವರ್ಷ. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ನಾಗಶ್ರೀ ನೆನಪಿಗೆ ಅವರದೇ ಮೂರು ಕವಿತೆಗಳು ಇಲ್ಲಿವೆ

1

ಹಂಬಲದ ಹೊತ್ತು ಕಾಣುವ ಸುಖ
ನೀನಿರಬಹುದು
ಈ ಮಿಂದ ಕೂದಲುಗಳು
ಎಷ್ಟು ಹಾಯಾಗಿ ಹಾರಾಡುತ್ತಿದೆ
ಅಲ್ಲೇ ಇರುವೆ ನೀನು
ಒದ್ದೆ ಮಣ್ಣಿನ ಮುದ್ದೆಯಲ್ಲಲ್ಲ
ಒಂದು ರಾಶಿ ಬಿಳಿ ಮರಳಿನ
ಏಕಾಂತದಲ್ಲಿ
ಈಗ ನೋಡು ನನ್ನೊಳಗೆ ಹೊರಗೆ
ನೀನಿಲ್ಲ; ಒಡನೆ ಬೀಸುವ ಗಾಳಿಗೂ ಹದವಿಲ್ಲ
ಕೈಹಿಡಿದು ನಿನ್ನೊಡನೆ ನಡೆವ
ನಮ್ಮ ನೆರಳಿನಷ್ಟು
ಇಲ್ಲಿರುವ ಬಣ್ಣಗಳು ಚಂದವಿಲ್ಲ
ಹಾಡಿಗೆ ಮೂಡುವ ಜೀವವೇ
ವಿಸ್ಮಯಕ್ಕೆ ಕುದಿಯುವ ಮೌನವೇ
ಅತೀ ದೂರದವರೆಗಿನ ಸಂಕಟವೇ
ಸೊಬಗೆಂದರೆ ನೀನೇ ಇರಬೇಕು
ನಾನಿರುವ ತೀರವೇ
ಹೇಗೆ ಪ್ರೀತಿಸಲಿ ನಿನ್ನ
ನನ್ನ ನೀನುಗಳೆಲ್ಲಾ ನೀನಾಗು
ಕತ್ತು ಕೊಂಕಿಸಿ ಕಾಲು ಚಾಚಿ ಕೈ ನೀಡಿ
ಒಂದಿಷ್ಟೂ ಕಾರಣವಿರದೆ ನಕ್ಕು
ನನ್ನನ್ನು ಸುಮ್ಮನೆ ಹಾಗೆ ಒಡ್ಡಿಕೊಳ್ಳಲು ಬಿಡು

 

 

 

 

 

 

 

2

ಏನೋ ಆಗುತ್ತಿದೆ ಅಲ್ಲಿ ನಿನಗೆ
ಹಾಗೆಂದೇ ಆಕಾಶ ಬಣ್ಣಗಳು
ಬದಲಾಗಿ ನನಗೆ ತೋರಿಸುತ್ತಿದೆ
ನಿನ್ನ ಕಣ್ಣಿನ ಬೊಂಬೆ ಚಲಿಸಿದಂತೆ
ಇಲ್ಲಿ ಚಿತ್ರಗಳು ಕದಲುತ್ತಿವೆ
ಮುರುಟಿಕೊಂಡ ಈ ಸಂಜೆಗೆ
ಅಂಗಾತ ಮಲಗಿ ಕಣ್ಣ ಎರಡು
ತುದಿಗಳಲ್ಲಿ ನೀರು ಹರಿದು
ಕಿವಿಯ ಆಳಕ್ಕೆ ಇಳಿಯುತಿದೆ
ಮತ್ತೆ ನೀನು ಮೈತುಂಬಿಕೊಳ್ಳ ಬೇಕಾದರೆ
ದಿನವಿಡೀ ನಿನ್ನ ಕರುಳ ಸಂಕಟದಲ್ಲಿ
ಇರಬೇಕು ನಾನು
ನೀ ಬಂದೆಯೆಂದು, ಇಲ್ಲಿರುವೆಯೆಂದು
ಸ್ವಲ್ಪ ಹೊರಗೆ ಅಡ್ಡಾಡಿ ಬಂದರೆ
ಬಣ್ಣ ಇರದ ಖಾಲಿ ಕಣ್ಣಿರೊಂದು
ಹುಡುಕಿ ಬಿಗಿಯಾಗಿ ಎದೆಗಪ್ಪುವುದು
ಈ ಹೊತ್ತಲ್ಲದ ಹೊತ್ತಲ್ಲಿ
ಮೂರು ಹಾದಿ ಕೂಡುವಲ್ಲಿ
ನೀ ಯಾಕೆ ಬರಬಾರದು?
ನಮ್ಮದೊಂದು ಕಲ್ಲು ಬೆಂಚು
ಇನ್ನೂ ಹಾಗೇ ಇರುವುದು
ಯಾರಿಟ್ಟರೋ! ಯಾರಿಗೆ ಕೇಳಲಿ
ನನಗೆ ಉಸಿರು ತುಂಬಿಸಿದವನು
ಇದ್ದರೆ ಅವನೇ ಇಟ್ಟಿರಬಹುದು
ತಪ್ಪಿಸಲಾರದ ನಡೆದಾಡುವ
ಗಡಿಯಾರಗಳು ನಾವು
ಗಂಟೆ ಹೊಡೆದರೆ
ಹಕ್ಕಿಗಳೂ ಮನೆಗೆ ನಡೆಯಬೇಕು
ಈ ಕಲ್ಲ ಬೆಂಚಿಗೂ
ಕತ್ತಲಾವರಿಸುತ್ತದೆ, ಅದಿರಲಿ,
ಈ ಕೇಳದ ಮನಸ್ಸಿಗೂ ಹೇಳದೆ
ಗಾಳಿಯ ಬುಡಕ್ಕೆ ಸಿಕ್ಕಿಸಿ ಅದನ್ನು
ಅಲ್ಲಿಗೆ ಕಳಿಸಿರುವೆ
ತೇಲಿಕೊಂಡು ಬಿಸಿಲಿನ ಮೈಮುಟ್ಟಿ
ಎದ್ದ ಧೂಳಿಗೆ ಇದ್ದಲ್ಲೇ ತಿರುಗಿಕೊಂಡಿ
ಹಾರುವ ತರಗೆಲೆಗಳನ್ನು ಸಿಕ್ಕಿಸಿಕೊಂಡು
ಹಾರುತ್ತಿದೆ
ಎಲ್ಲಾ ಸಾಕೆಂದು,
ಕಡಲ ಎದುರಿಗೆ ಕುಳಿತುಬಿಟ್ಟೆ
ಹುಟ್ಟಿಸಿ ನಡೆದು ಹೋಗಿರುವ
ನಿನ್ನ ಸಾವಿರ ಹೆಜ್ಜೆಯಲ್ಲಿ
ಒಂದೆರಡನ್ನಾದರೂ ಹುಡುಕುತ್ತಾ
ಏನು ಸುಖ
ಒಂದಿಲ್ಲಿದೆ. ಎರಡು ದಿನ
ನಡೆದ ಮೇಲೆ ಇನ್ನೊಂದು ಸಿಗುವುದು
ಅಲ್ಲಿಯತನಕ ಅಪ್ಪಿ ನಿನ್ನಲ್ಲಿಗೆ
ಮರಳುವ ಅಲೆಗಳು ಕನ್ನಡಿಯಲ್ಲಿ
ನಿನ್ನನ್ನು ಕಾಣಿಸುತ್ತಿದೆ.

3

ಮಲಗಿಕೊಂಡಿರುವೆ ನಾನು
ಎಲ್ಲ ಅವಷ್ಟಕ್ಕೆ ಅವು ಸುಖವಾಗಿರುವಾಗ
ನನ್ನಷ್ಟಕ್ಕೆ ನಾನು
ಹೀಗೆಲ್ಲ ಯಾಕಾಗಬೇಕು
ಎಲ್ಲಾ ಕೊಟ್ಟು ಏನೂ ಉಳಿಸದೆ ಬಿಟ್ಟು
ಹೇಗೆ ಬಂದೆನೋ ಹಾಗೇ ಹೋಗುವೆ
ಇವೆಲ್ಲ ಇರುವುದೇ ಹೀಗೆ
ಸೌಖ್ಯವಿರಲಿ ಎಲ್ಲವಕ್ಕೂ
ಮುಂದೆ ಏನೋ ಇರಬಹುದು
ಕನಸಲ್ಲಿ ಬಂದ ದ್ವೀಪ
ಕೋಮಲ ಕವಿತೆಗಳು, ಹೋಲಿಕೆಗಳು
ಹೀಗೆ ಮತ್ತೆ ಬೇಕಿರಲಿಲ್ಲ
ಈ ಒರಟು ಪದಗಳು
ತಲೆನೇವರಿಸುವುದು
ಒಂದು ದೊಡ್ಡ ಹಾಳೆಯಲ್ಲಿ
ಚಿತ್ರಗಳು ಕುಳಿತಿವೆ ಅಲುಗಾಡದೆ
ಗಂಡು ಹೆಣ್ಣು ಅದು ಇದು ಎಲ್ಲವೂ
ಗಾಳಿಬೀಸಿದರೂ ಯಾರೂ
ಕದಲುತ್ತಿಲ್ಲ ಹಾಗೆಯೇ ಇದ್ದ ಹಾಗೆಯೇ
ಅಲ್ಲಿಂದ ಎದ್ದು ಬಂದಿರುವೆ ನಾನು
ಜೀವಂತವಾಗಿ