ನ್ಯಾಷನಲ್ ಜಿಯೋಗ್ರಾಫಿಕ್ ಚ್ಯಾನೆಲ್ ನಲ್ಲಿ ಆಫ್ರಿಕಾದ ಮಸಾಯ್ ಮಾರಾ ಕಾಡಿನಲ್ಲಿ ಹಸಿದ ಹುಲಿಗಳು ಬೇಟೆಯಾಡುವುದನ್ನು ನೀವು ನೋಡಿರಬಹುದು. ಹುಲಿ ತನ್ನ ಬೇಟೆಯನ್ನು ಬಲು ಜಾಣ್ಮೆಯಿಂದ ಅಷ್ಟೇ ಎಚ್ಚರಿಕೆಯಿಂದ ಗುಂಪಿನಲ್ಲಿರುವ ಅತಿ ದುರ್ಬಲವಾದ ಪ್ರಾಣಿಯನ್ನೇ ಆಯ್ದುಕೊಂಡಿರುತ್ತದೆ. ಕಾರಣವಿಷ್ಟೇ ಹುಲಿಗೆ ಸುಲಭವಾಗಿ ಯಾವುದೇ ಪ್ರತಿರೋಧವಿಲ್ಲದೆ ತನ್ನ ಆಹಾರ ಸಂಪಾದಿಸಬೇಕೆನ್ನುವ ಇರಾದೆಯಷ್ಟೇ. ಸದ್ಯಕ್ಕೆ ಇಡೀ ಜಗತ್ತನ್ನು ಅಕ್ಷರಶಃ ನಡುಗಿಸುತ್ತಿರುವ ಕೊರೋನಾ ವೈರಸ್ ಕೂಡ ನರಹಂತಕ. ಈ ನರಹಂತಕ ರೋಗ ಪ್ರತಿನಿರೋಧಕ ದುರ್ಬಲವಿಲರುವ ಮನುಷ್ಯನ ದೇಹ ಪ್ರವೇಶಿಸಿ ತನ್ನ ರಕ್ಕಸ ಸಾಮ್ರಾಜ್ಯ ವಿಸ್ತರಿಸಿ ಗೆಲುವಿನ ಅಟ್ಟಹಾಸ ಮೆರೆಯುತ್ತದೆ.
ಡಾ. ಲಕ್ಷ್ಮಣ ವಿ.ಎ. ಅಂಕಣ

 

ನಟ್ಟಿರುಳಿನ ಬೆಂಗಳೂರಿನ ಬೀದಿಗಳಲ್ಲಿ ಸಾವು ನಡೆಯುತ್ತಿದೆ. ಮೆಲ್ಲಗೆ ಬಾಗಿಲು ತೆರೆದು ಆಡಲು ಕರೆಯುತ್ತಿದೆ… ಕಂದಮ್ಮಗಳ, ಮುದುಕರ, ಯುವಕರ… ಈ ಹಿಂದೆ ಇಷ್ಟು ನಾಯಿಗಳೂ ಬೊಗಳುತ್ತಿರಲಿಲ್ಲ. ಅದೆಲ್ಲಿಂದ ಬಂದವೋ ಹಿಂಡು ಹಿಂಡಾಗಿ, ಯಾವುದೋ ಅಪಶಕುನದಂತೆ ಗೋಳಿಡುತ್ತಿವೆ. ಮಾರ್ಚ್ ನ ಧಗೆಗೆ ರಸ್ತೆಗಳು ರಸ್ತೆಯ ಮೇಲಿನ ಮಾಸ್ಕು ಧರಿಸಿದ ಮನುಷ್ಯರೂ ಏಕಕಾಲಕ್ಕೆ ಬೆವರಿ ಕಣ್ಣುಗಳಲ್ಲಿ ಸಾವಿನ ಭಯ ಹೊತ್ತು ಅಲ್ಲಲ್ಲಿ ನೆರಳಿದ್ದಲ್ಲಿ ನಿಂತು ತರಕಾರಿಗೆ, ಹಾಲಿಗೆ ಕಾಯುತ್ತಿದ್ದಾರೆ. ಮನೆಯೊಳಗೆ ಕುಂತ ಇವರ ಮಡದಿಯರು ಟೀವಿ ಸಿರಿಯಲಗಳೂ ಬೋರಾಗಿ ಕೈ ಕೊಳೆಯಾಗಿರದಿದ್ದರೂ ಮತ್ತೆ ಮತ್ತೆ ಸಿಂಕಿನೆಡೆಗೆ ತೆರಳಿ ಕೈ ತೊಳೆಯುತ್ತಿದ್ದಾರೆ. ಎಷ್ಟು ಕೈ ತೊಳೆಯುವುದು? ಇಡೀ ಅರೇಬಿಯಾದ ಅತ್ತರು ಹಾಕಿ ತೊಳೆದರೂ ಹಸನಾಗದ ಲೇಡಿಮ್ಯಾಕ್ ಬೆತ್ ಳ ರಕ್ತಸಿಕ್ತ ಕೈಗಳು.

ಕೊರೋನಾ ಹೆಸರು ಎಷ್ಟು ಚಂದವಿದೆಯಲ್ಲ, ಹೌದು ಸಾವಿನ ರೂಪಕದ ಕೊರೋನಾದ ಮೇಲೆ ಕವಿತೆ ಬರೆದಿದ್ದಾರೆ, ಪದ ಕಟ್ಟಿ ಹಾಡಿದ್ದಾರೆ, ಟೀವಿಯವರ ಗಂಟಲು ಕೊರೋನಾ ಮಾರಿಗೆ ಬಿದ್ದು ಹೋಗಿದೆ. ಪೇಪರು ಹಾಕುವ ಹುಡುಗರು ಪೇಪರು ಮುಟ್ಟಿದರೆ ಈ ಮಾರಿ ಮೆಟ್ಟುತ್ತದೆಯೆಂದು ಕೆಲಸ ಬಿಟ್ಟು ಊರಿಗೆ ಮರಳಿವೆ. ಹಾಳೂರಿನಲ್ಲಿ ಉಳಿದವರಿಗೆ ಪ್ರತಿರಾತ್ರಿ ದುಸ್ವಪ್ನಗಳು, ಕೊರೋನಾ.. ಕೊರೋನಾ.

ಪ್ರತಿದಿನ ಸಾವಿನ ನೆರಳಿನಲ್ಲಿ ಬದುಕುವ ಮನುಷ್ಯನಿಗೆ ಸಾವಿನ ಭಯ ಅಷ್ಟಾಗಿ ಕಾಡುವುದಿಲ್ಲ. ಆದರೆ ಯಾವಾಗ ಇದು ತನ್ನ ಮನೆಯ ಬಾಗಿಲನ್ನೆ ತಟ್ಟುತ್ತದೆ ಎನ್ನುವಾಗ ಅವನು ಬೆವರುತ್ತಾನೆ… ಅಧೀರನಾಗುತ್ತಾನೆ… ಹತಾಶನಾಗುತ್ತಾನೆ. ಇಷ್ಟು ದಿನ ಕೂಡಿಟ್ಟ ಕಾಂಚಾಣ ಮಡದಿ ಮಕ್ಕಳು ಆಸ್ತಿ ಸೈಟು ಮನೆ ಬಂಗಲೆ ಕಾರು ಸಾಮ್ರಾಜ್ಯ ಮಾಂಡಳೀಕರ ಕಪ್ಪು ಕಾಣಿಕೆ ಎಲ್ಲ ನೆನಪಾಗಿ ಬದುಕೊಂದು ಲೊಳಲೊಟ್ಟೆ ಎನಿಸಲು ಶುರುವಾಗುತ್ತದೆ. ಇಲ್ಲ ಬರಲಾರದು ಸಾವು ನನ್ನ ಬಾಧಿಸಲಾರದು. ಅಷ್ಟಕ್ಕೂ ನಾನು ತುಂಬಾ ಸ್ಟ್ರಾಂಗು, ಪ್ರತಿದಿನ ಯೋಗ ವ್ಯಾಯಾಮ ಸೂರ್ಯನಮಸ್ಕಾರ ಮಾಡುತ್ತೇನೆ… ಉಹುಂ ಕರೆಗಂಟೆ ಒತ್ತುತ್ತಿದೆ.. ಸಾವು!!

ಸಾವಿನ ಹೊಸ್ತಿಲಿನಲಿ ಮನುಷ್ಯನ ನಡುವಳಿಕೆಗಳನ್ನು ಸಮರ್ಥವಾಗಿ ಹಿಡಿದಿಟ್ಟ ಸಿನೇಮಾ ಅಂದರೆ ಟೈಟಾನಿಕ್.  1999 ರ ಆಸುಪಾಸಿನಲ್ಲಿ ಟೈಟಾನಿಕ್ ಸಿನೇಮಾ ಬಂದಿತ್ತು. ಹುಬ್ಬಳ್ಳಿಯ ಸಿನೇಮಾ ಟಾಕೀಜಿನಲ್ಲಿ ಎರಡೆರಡು ಸಲ ನೋಡಿದ್ದೆ. ಅಪರೂಪದಲ್ಲಿ ಅಪರೂಪದ ಸಿನೇಮಾಗಳನ್ನು ಮಾತ್ರ ನಾನು ಎರಡೆರಡು ಸಲ ನೋಡುತ್ತಿದ್ದೆ. ಆ ಕಾಲದಲ್ಲಿ ಸಿನೇಮಾ ಹುಚ್ಚಿನ ನನ್ನ ಗೆಳೆಯರಿದ್ದರು, ಅವರು ಒಂದೇ ಸಿನೇಮಾ ಹತ್ತತ್ತು ಸಾರಿ ನೋಡಿ ಬರುತ್ತಿದ್ದರು. ಅವರ ತಾಳ್ಮೆಯ ಶಕ್ತಿಯೆಡೆಗೆ ನನಗಿನ್ನೂ ಬೆರಗಿದೆ.

ಆದರೆ ನನಗೆ ಆ ಸಿನೇಮಾಕ್ಕಿಂತ ಲಂಕೇಶ್ ರು ಈ ಚಿತ್ರಕ್ಕೊಂದು ಸೂಕ್ಷ್ಮ ಒಳನೋಟವನ್ನು ದಕ್ಕಿಸಿದ್ದರು. ಅದನ್ನು ಮಾತ್ರ ಎಷ್ಟು ಬಾರಿ ಓದಿದೆನೊ ಗೊತ್ತಿಲ್ಲ. ಆಪತ್ ಕಾಲದಲ್ಲಿ ಮನುಷ್ಯನ ಲಾಲಸೆ ಬದುಕುಳಿಯುವ ಆಸೆ ಮೂರು ಡೆಕ್ಕರುಗಳ ಆ ಸಿನೇಮಾ ಸಮಾಜದ ಮೂರುಸ್ತರದ ಜನರ ನಡುವಳಿಕೆ, ದುರಂತದ ನಡುವೆಯೂ ಅರಳಿ ಅಮರವಾಗುವ ಆ ಪ್ರೇಮ…..

ಯಾಕೋ ಕೊರೋನಾ ಕಾಲದಲ್ಲಿ ಆ ಸಿನೇಮಾ ಲಂಕೇಶರ ಬರಹ ಮತ್ತೆ ಮತ್ತೆ ನೆನಪಾಗಿ ಕಾಡುತ್ತಿವೆ. ಸದ್ಯಕ್ಕೆ ಈ ಭೂಮಿ ಮುಳುಗುತ್ತಿರುವ ಟೈಟಾನಿಕ್ ನಂತೆಯೂ, ಈ ದುಃಖದಲ್ಲೂ ಕವಿತೆ ಕತೆ ಹಾಡು ಹೇಳಿಕೊಂಡಿರುವವರು ಡೆಕ್ಕಿನ ಮೇಲೆ ವೈಯೋಲಿನ್ ನುಡಿಸುತ್ತ ನಿಂತವರಂತೆಯೂ, ಜೀವರಕ್ಷಾ ಕವಚ ಬೋಟು ಸಿಕ್ಕವರಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಕ್ಕವರಂತೆಯೂ, ಸಿಗದವರು ಪಾಳಿಯಲ್ಲಿ ನಿಂತವರಂತೆಯೂ, ದೋಣಿಗಾಗಿ ಲಂಚ ಕೊಡುವವರೂ ಉಳಿದವರು ಏನು ಮಾಡಬೇಕೆಂದು ತೋಚದಂತವರಾಗಿಯೂ, ಇನ್ನುಳಿದವರು ಏನೇನೂ ಆಗಿಲ್ಲವೆಂಬ ದಿವ್ಯ ಉದಾಸೀನತೆಯಿಂದಲೂ, ಆದರೂ ಹಣೆಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬ ಸ್ಮಶಾನ ವೈರಾಗ್ಯದಲ್ಲಿಯೂ…..

ಮತ್ತು ಪ್ರೇಮಿಗಳು ಜಾಕ್ ಮತ್ತು ಕೇಟ್ ನಂತೆ ಡೆಕ್ಕಿನ ಮುಂಭಾಗದಲ್ಲಿ ಟೈಟಾನಿಕ್ ಸಿನೇಮಾದ ಸ್ಟಿಲ್ ಚಿತ್ರ ಕೊಡುವವರಂತೆ ಮುತ್ತಿನ ಗಮ್ಮತ್ತಿನಲ್ಲಿ ಉನ್ಮತ್ತರಾಗಿ…. ಬಾಂಬು, ಬಂದೂಕು, ಅಣ್ವಸ್ತ್ರ ಮನುಕುಲವನ್ನು ನಾಶಮಾಡಬಲ್ಲವೆಂದು ತಿಳಿದಿದ್ದೆ. ಉಹುಂ! ಒಂದು ವೈರಸ್ ಇಡೀ ಮನುಕುಲವನ್ನೇ ಚಿಂದಿ ಮಾಡಿ ಉಡಾಯಿಸಬಲ್ಲದು.

ಅಲ್ಬ ಕಮೂವಿನ “ಪ್ಲೇಗ್”ಎಂಬ ಕಾದಂಬರಿಯೂ ಮನುಷ್ಯನ ವಿಪ್ಲವ ಕಾಲದ ಸೂಕ್ಷ್ಮ ನಡುವಳಿಕೆಗಳನ್ನು ಹಿಡಿದಿಡುವ ಎಲ್ಲ ಕಾಲಕ್ಕೂ ಸಲ್ಲುವ ಕಾದಂಬರಿ. ಕ್ರಿ ಶ. ಏಳನೇಯ ಶತಮಾನದಿಂದಲೂ ಈ ಪ್ಲೇಗು, ಫ್ಲೂ, ಕಾಲರಾ ಮನುಷ್ಯನ ಬೆನ್ನಿಗೆ ಮಹಾಪಿಡುಗುಗಳಾಗಿ ನಾಗರೀಕತೆಯ ಅರ್ಧ ಜನಸಂಖ್ಯೆಗಳನ್ನೇ ನುಂಗುತ್ತ ಮನುಷ್ಯನ ಲಾಲಸೆ ದುರಾಸೆಗೆ ಬ್ರೇಕು ಹಾಕುತ್ತಲೇ ಬಂದಿರುವುದು ದಾಖಲಾಗಿದೆ.

ಬ್ಲ್ಯಾಕ್ ಡೆತ್ ಹೆಸರಿನ ಭಯಾನಕ ಸಾಂಕ್ರಾಮಿಕ ರೋಗ ಮಧ್ಯ ಯುಗದ ಯುರೋಪಿನ ಇನ್ನೂರು ಮಿಲಿಯನ್ ಜನಸಂಖ್ಯೆಯನ್ನೇ ನುಂಗಿ ನೀರು ಕುಡಿದಿತ್ತು. ತರುವಾಯದ ಕಾಲರ ಫ್ಲೂ ಹೆಚ್ಚೂ ಕಡಿಮೆ ಭೂಗೋಳದ ಅರ್ಧ ಜನಸಂಖ್ಯೆಯನ್ನೇ ತಿಂದು ಹಾಕಿವೆ. ಇತ್ತೀಚಿಗೆ ಏಡ್ಸ್ ಕಾಯಿಲೆಗೆ 2005 ರಿಂದ 2012 ರ ವರೆಗೆ ಜಗತ್ತಿನಾದ್ಯಂತ 36 ಮಿಲಿಯನ್ ಸಾವುಗಳಾಗಿವೆ, ಆಗುತ್ತಲೇ ಇವೆ.

ಕೊರೋನಾ ಹೆಸರು ಎಷ್ಟು ಚಂದವಿದೆಯಲ್ಲ, ಹೌದು ಸಾವಿನ ರೂಪಕದ ಕೊರೋನಾದ ಮೇಲೆ ಕವಿತೆ ಬರೆದಿದ್ದಾರೆ, ಪದ ಕಟ್ಟಿ ಹಾಡಿದ್ದಾರೆ, ಟೀವಿಯವರ ಗಂಟಲು ಕೊರೋನಾ ಮಾರಿಗೆ ಬಿದ್ದು ಹೋಗಿದೆ. ಪೇಪರು ಹಾಕುವ ಹುಡುಗರು ಪೇಪರು ಮುಟ್ಟಿದರೆ ಈ ಮಾರಿ ಮೆಟ್ಟುತ್ತದೆಯೆಂದು ಕೆಲಸ ಬಿಟ್ಟು ಊರಿಗೆ ಮರಳಿವೆ.

ಈಗ ಗಾಳಿಯಲಿ ಬೆರತಿರುವ ಕೊರೋನಾ ಎಂಬ ಸಾವಿನ ರೂಪಕ ಭಾರತದ ಮುಖಕೆ ಮಾಸ್ಕು ಹಾಕಿದೆ. ಜಗತ್ತು ಈ ಕರೋನಾದ ಅಟ್ಟಹಾಸದ ಎದುರು ಮಂಡಿಯೂರಿ ಶರಣಾಗಿದೆ. ಚೈನಾ, ಇಟಲಿ, ಸ್ಪೇನ್, ಅಮೇರಿಕಾ …..
ಪ್ರಾರ್ಥನೆಯೊಂದೇ ನಮ್ಮ ಮುಂದೆ ಉಳಿದಿರುವ ದಾರಿ

ಇದ್ದಕ್ಕಿದ್ದಂತೆ ಒಂದು
ಪವಾಡ ಜರುಗಿಹೋಗಲಿ!
ಗಾಳಿಯಲಿ ಬೆರೆತ ಬೇನೆ
ನಿನ್ನ ಮೂರನೇ ಕಣ್ಣಿನ ಉರಿಗೆ
ಸುಟ್ಟುಬೂದಿಯಾಗಲಿ

ನ್ಯಾಷನಲ್ ಜಿಯೋಗ್ರಾಫಿಕ್ ಚ್ಯಾನೆಲ್ ನಲ್ಲಿ ಆಫ್ರಿಕಾದ ಮಸಾಯ್ ಮಾರಾ ಕಾಡಿನಲ್ಲಿ ಹಸಿದ ಹುಲಿಗಳು ಬೇಟೆಯಾಡುವುದನ್ನು ನೀವು ನೋಡಿರಬಹುದು. ಹುಲಿ ತನ್ನ ಬೇಟೆಯನ್ನು ಬಲು ಜಾಣ್ಮೆಯಿಂದ ಅಷ್ಟೇ ಎಚ್ಚರಿಕೆಯಿಂದ ಗುಂಪಿನಲ್ಲಿರುವ ಅತಿ ದುರ್ಬಲವಾದ ಪ್ರಾಣಿಯನ್ನೇ ಆಯ್ದುಕೊಂಡಿರುತ್ತದೆ. ಕಾರಣವಿಷ್ಟೇ ಹುಲಿಗೆ ಸುಲಭವಾಗಿ ಯಾವುದೇ ಪ್ರತಿರೋಧವಿಲ್ಲದೆ ತನ್ನ ಆಹಾರ ಸಂಪಾದಿಸಬೇಕೆನ್ನುವ ಇರಾದೆಯಷ್ಟೇ. ಸದ್ಯಕ್ಕೆ ಇಡೀ ಜಗತ್ತನ್ನು ಅಕ್ಷರಶಃ ನಡುಗಿಸುತ್ತಿರುವ ಕೊರೋನಾ ವೈರಸ್ ಕೂಡ ನರಹಂತಕ. ಈ ನರಹಂತಕ ರೋಗ ಪ್ರತಿನಿರೋಧಕ ದುರ್ಬಲವಿಲರುವ ಮನುಷ್ಯನ ದೇಹ ಪ್ರವೇಶಿಸಿ ತನ್ನ ರಕ್ಕಸ ಸಾಮ್ರಾಜ್ಯ ವಿಸ್ತರಿಸಿ ಗೆಲುವಿನ ಅಟ್ಟಹಾಸ ಮೆರೆಯುತ್ತದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಕೊರೋನಾ ಇನ್ನೇನು ಸಾಮುದಾಯಿಕವಾಗಿ ದಾಳಿಮಾಡಲು ಸಂಚು ಹೊತ್ತ ರಕ್ಕಸಪಡೆಯಂತೆ ಸಿದ್ಧವಾಗಿ ನಿಂತಿದೆ. ಯಾವುದೇ ದೇಶಕ್ಕೆ ಈ ಮೂರನೇ ಹಂತವನ್ನು ಎದುರಿಸಿ ನಿಲ್ಲುವುದು ಬಹಳ ಮಹತ್ವದ್ದಾಗಿರುತ್ತದೆ. ಚೈನಾ, ಇಟಲಿ, ಸ್ಪೇನ್, ಇರಾನ್ ನಂತಹ ದೇಶಗಳು ಇಲ್ಲಿ ಸೋತಿವೆ. ಅವರ ಸೋಲು ಇಲ್ಲಿ ನಮಗೆ ಗೆಲುವಿನ ಪಾಠವಾಗಬೇಕು. ನಾವು ಗೆಲ್ಲಬೇಕೆಂದರೆ ನಮ್ಮ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ದೇಶದ ಮೇಲಿನ ಈ ವೈರಸ್ ಯುದ್ಧದಲ್ಲಿ ಪ್ರತಿಯೊಬ್ಬ ಪ್ರಜೆಯೂ ಯೋಧನೆ. ಇಲ್ಲಿ ಮದ್ದು ಗುಂಡುಗಳಿಂದ ಸೆಣಸಬೇಕಿಲ್ಲ, ಕೇವಲ ನಮ್ಮ ಮನೋಬಲದಿಂದ ವೈಯುಕ್ತಿಕ ಶುಚಿತ್ವದಿಂದ ಗುಂಪಿನಿಂದ ದೂರವಿರುವುದರಿಂದ ಗೆಲ್ಲಬೇಕಿದೆ.

ಕೆಮ್ಮಿದವರೆಲ್ಲ ಕೊರೋನ ರೋಗಿಗಳಲ್ಲ, ಸೀನಿದವರೆಲ್ಲ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕಿಲ್ಲ. 1.4 ಬಿಲಿಯನ್ ಜನಸಂಖ್ಯೆ ಇರುವ ಭಾರತದಲ್ಲೀಗ ಕೇವಲ ನೆಗಡಿ ಬಂದ ಮಾತ್ರಕ್ಕೆ ರಕ್ತತಪಾಸಣೆಗೆ ಸರದಿಯಲ್ಲಿ ನಿಂತರೆ ಪರೀಕ್ಷಾಕೇಂದ್ರಗಳ ಮೇಲಿನ ಒತ್ತಡವನ್ನೂ ಮತ್ತು ಅವುಗಳ ನಿಖರ ಫಲಿತಾಂಶಗಳನ್ನು ಹೇಗೆ ನಿರೀಕ್ಷಿಸುವುದು? ಈ ರೀತಿಯ ಅನವಶ್ಯಕ ಟೆನ್ಷನ್ ಗಳು ಇನ್ನಷ್ಟು ಆಪತ್ತುಗಳನ್ನೇ ತಂದುಕೊಡುತ್ತವೆ.

ಒಂದು ವೇಳೆ ನೀವು ಕೊರೋನಾ ವೈರಸ್ಸು ಸೋಂಕಿತರೇ ಆಗಿದ್ದರೆ, ಸೋಂಕು ತಗುಲಿದ ಮೊದಲ ದಿನ ಕೊಂಚ ಆಯಾಸ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಎರಡನೆಯ ದಿನ ಸ್ವಲ್ಪ ಮೈ ಬಿಸಿಯಾಗುತ್ತದೆ. ನಾಲ್ಕನೇ ದಿನ ತೀವ್ರತೆರನಾದ ಜ್ವರ ಮತ್ತು ತಲೆ ನೋವು ಮತ್ತು ಶೀತ ಕಾಣಿಸಿಕೊಳ್ಳುತ್ತದೆ. ಐದನೇಯ ದಿನ ಹೊಟ್ಟೆಯಲ್ಲಿ ಸಂಕಟ ಹೊಟ್ಟೆ ನೋವು ಭೇದಿಯೂ ಕಾಣಿಸಿಕೊಳ್ಳುತ್ತದೆ. ಆರನೇಯ ದಿನ ಜ್ವರ ಕಡಿಮೆಯಾಗುತ್ತದೆ. ಏಳು ಹಾಗು ಎಂಟನೇಯ ದಿನ ಜ್ವರ ಶೀತ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಎಂಟನೇ ದಿನದ ನಂತರ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾಗಿದ್ದು ಶೀತ ಕಡಿಮೆಯಾಗದಿದ್ದರೆ ಅಥವ ನೀವೆಂದೂ ಈ ಹಿಂದೆ ಅನುಭವಕ್ಕೆ ಬಾರದ ಆಯಾಸ ಬಳಲಿಕೆ ಕಂಡುಬಂದರೆ…….

ನೋಡಿ, ನಮಗೆಲ್ಲ ಮೂಗಿರುವವರೆಗೆ ನೆಗಡಿ ಆಗಿಯೇ ಆಗುತ್ತದೆ. ಇದನ್ನು common cold ಸಾಮಾನ್ಯ ಶೀತ ಎಂದು ಕರೆಯುತ್ತೇವೆ. ಈ ನೆಗಡಿಗೆ ಕೆಲವೊಬ್ಬರು ಔಷಧಿಯನ್ನು ನೆಚ್ಚಿಕೊಳ್ಳದೇ ಮನೆ ಔಷಧಿಯಿಂದ ಗುಣಪಡಿಸಿಕೊಳ್ಳುತ್ತಾರೆ. ಇನ್ನು ಹಲವರು ಶೀತದ ಮಾತ್ರೆಗೆ ನೆಗಡಿ ಕಡಿಮೆಮಾಡಿಕೊಳ್ಳುವ ಅಭ್ಯಾಸವಾಗಿರುತ್ತದೆ. ಇಲ್ಲಿ ಔಷಧಿ ತೆಗೆದುಕೊಂಡರೂ ನೆಗಡಿ ವಾಸಿಯಾಗುತ್ತದೆ, ತೆಗೆದುಕೊಳ್ಳದಿದ್ದರೂ ವಾಸಿಯಾಗುತ್ತದೆ. ಆದರೆ ಮುಖ್ಯ ಇವರಿಗೆ ಇಲ್ಲಿ ಗುಳಿಗೆ ಎನ್ನುವ ಮಂತ್ರ ಇವರನ್ನು ಸಂತೈಸಿರುತ್ತದೆ. ಇನ್ನು ಹಲವರಿಗೆ ನೆಗಡಿಯೆಂದರೆ ಸಾಕು ಆ್ಯಂಟಿಬಯೋಟಿಕ್ಸು ತೆಗೆದುಕೊಂಡಾಗ ಮಾತ್ರ ಕಡಿಮೆಯಾಗುತ್ತದೆ. ಈ ವ್ಯಕ್ತಿಗಳಲ್ಲಿ ಶ್ವಾಸನಾಳ ಮತ್ತು ಶ್ವಾಸ ಚೀಲಗಳು ಬಹಳ ಸೂಕ್ಷ್ಮ ಸ್ವಭಾವದ ಜೀವಕಣಗಳಿಂದ ನಿರ್ಮಿತಗೊಂಡಿರುತ್ತವೆ.. ಇಂತಹವರಿಗೆ ಕೆಮ್ಮು ಬರಲು ಶೀತ ಅಷ್ಟೇ ಅಲ್ಲ ಎಣ್ಣೆ ಪದಾರ್ಥ, ಮೊಟ್ಟೆ, ಕುರಿಮಾಂಸ, ಧೂಪ, ಧೂಳು, ಪರಾಗರೇಣು, ಹೂವಿನ ವಾಸನೆ, ಗಂಧದ ಕಡ್ಡಿಯ ವಾಸನೆಗೂ ತಕ್ಷಣ ಸೀನಿ ಬಿಡುತ್ತಾರೆ. ಕೆಲವೊಂದು ರೋಗಾಣುಗಳು ಇಂತಹ ದುರ್ಬಲ ವ್ಯಕ್ತಿತ್ವವನ್ನ ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ದಾಳಿಯಿಡಲು ಕಾಯ್ದು ಕುಳಿತಿರುತ್ತವೆ. ಈಗ ಇಂತಹ ವ್ಯಕ್ತಿಗಳಲ್ಲಿ ಈ ರಾಕ್ಷಸ ಹಸಿವಿನ ಕೊರೋನಾ ಸ್ವಲ್ಪ ತೊಂದರೆ ಕೊಡುವ ಅಪಾಯವಿರುತ್ತದೆ. ಮತ್ತು ಬಹುತೇಕವಾಗಿ ಇವರು ಕೊರೋನಾ ವೈರಸ್ಸಿನೊಂದಿಗೆ ಸೆಣೆಸಿ ಗೆದ್ದೂ ಬಿಡುತ್ತಾರೆ.

ಈಗ ಸಾಮಾನ್ಯ ಶೀತ ವಾಸಿಯಾಗುವ ಸಮಯಕ್ಕಿಂತ ಹೆಚ್ಚಿನ ಸಮಯ ಅಂದರೆ ಎಂಟನೇ ದಿನದ ತರುವಾಯವೂ ನಿಮಗೆ ಮೇಲಿನ ಲಕ್ಷಣಗಳು ಕಡಿಮೆಯಾಗದಿದ್ದರೆ ನೀವು ವಿದೇಶದಿಂದ ವಾಪಸು ಬಂದಿದ್ದರೆ, ಹೆಚ್ಚಿನ ಸಾರ್ವಜನಿಕ ಸಂಪರ್ಕ ಹೊಂದಿದವರಾಗಿದ್ದರೆ ನಿಮಗೆ ಅನುಮಾನವಿದ್ದಲ್ಲಿ ಮಾತ್ರ ಕೊರೋನಾ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ. ಬಹುತೇಕ ರೋಗಿಗಳಲ್ಲಿ ಈ ಕೊರೋನಾ ತನ್ನ ಯಾವುದೇ ಗುಣಲಕ್ಷಣಗಳನ್ನು ರೋಗದ ಚಿಹ್ನೆಗಳನ್ನು ತೋರಿಸದೇ ಮಾಯವಾಗಿರುತ್ತದೆ.

ಶೇಕಡಾ ಎಂಬತ್ತೈದರಷ್ಟು ರೋಗಿಗಳಿಗೆ ಈ ಕೊರೋನಾ ಬಂದಿದ್ದರೂ ಸ್ವತಃ ರೋಗಿಗಳಿಗೆ ಗೊತ್ತಾಗದಂತೆಯೇ ಬಂದು ಹೋಗಿರುತ್ತದೆ. ಇತ್ತೀಚಿಗೆ ನೀವು ಕೆಮ್ಮು ನೆಗಡಿಯಿಂದ ವಾಸಿಯಾಗಿದ್ದರೆ ಕೊರೋನಾ ನಿಮ್ಮ ದೇಹದಿಂದ ಬೈ ಪಾಸ ಆದರೂ ಆಗಿರಲೂಬಹುದು.