ತಾನು ನಡೆಯುವ ಶೈಲಿಯನ್ನೂ, ಮಾತನಾಡುವ ಶೈಲಿಯನ್ನೂ ಅಣಕಿಸುವ ಕೇರಿಯ ಇತರ ಮಕ್ಕಳಿಂದ ತಪ್ಪಿಸಿಕೊಳ್ಳಲು ಶಗ್ಗಿಗಿರುವ ಆಶ್ರಯ ಮನೆಯೊಂದೇ. ಮುಂದೆ ಟೀನೇಜಿನಲ್ಲೊಮ್ಮೆ ಹುಡುಗಿಯೊಬ್ಬಳು ಅವನಿಗೆ ಮನಸೋತು “ನೀನು ನನ್ನ ಎದೆ ಮುಟ್ಟಬಹುದು ಬೇಕಿದ್ದರೆ” ಎಂದು ಅವನಿಗೆ ತನ್ನ ದೇಹ ಮುಟ್ಟಲು ಅನುಮತಿ ಕೊಟ್ಟಾಗ “ಬೇಡ, ನನಗೆ ಆಸಕ್ತಿಯಿಲ್ಲ. ನಿನ್ನ ಕೂದಲ ಸಿಕ್ಕು ಬೇಕಿದ್ದರೆ ಬಿಡಿಸಿ ಕೊಡುತ್ತೇನೆ” ಎನ್ನುತ್ತಾನೆ.
ಕಾವ್ಯಾ ಕಡಮೆ ಬರೆಯುವ ‘ಬುಕ್‌ ಚೆಕ್‌ʼ ನಲ್ಲಿ ಈ ವಾರ ‘ಶಗ್ಗಿ ಬೇನ್‌’ ಕಾದಂಬರಿ

 

ಈ ಬಾರಿಯ ಬೂಕರ್ ಪ್ರಶಸ್ತಿ ಪಡೆದ ‘ಶಗ್ಗಿ ಬೇನ್’ ತಾಯಿ ಮಗನ ಸಂಬಂಧವನ್ನು ಅಗೆದಗೆದು ಬರಿದು ಮಾಡುವ ಕಥೆ. ಸ್ಕಾಟ್‍ಲ್ಯಾಂಡಿನಲ್ಲಿ ಬೆಳೆದು ಈಗ ನ್ಯೂಯಾರ್ಕ್ ಪಟ್ಟಣದಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಲವತ್ನಾಲ್ಕು ವರ್ಷದ ಕಾದಂಬರಿಕಾರ ಡಗ್ಲಸ್ ಸ್ಟೂವರ್ಟ್ ಈ ಕೃತಿಯನ್ನು ತಮ್ಮ ಆತ್ಮಕತಾತ್ಮಕ ಸೃಷ್ಟಿ ಎಂದು ಹೇಳಿಕೊಂಡಿದ್ದಾರೆ.

ಶಗ್ಗಿ ಬೇನ್ ಎಂಬ ಪುಟ್ಟ ಹುಡುಗ ನಾಲ್ಕೋ ಐದೋ ವರ್ಷದವನಿರುವಾಗ ಶುರುವಾಗುವ ಕಾದಂಬರಿ ಅವನು ಹದಿನೈದು ವರ್ಷ ತಲುಪಿದಾಗ ಮುಗಿಯುತ್ತದೆ. ಪೂರ್ತಿ ಕಥೆ ನಡೆಯುವುದು ಸ್ಕಾಟ್‍ಲ್ಯಾಂಡಿನ ಗ್ಲಾಸ್‍ಗೋ ಎಂಬ ಪಟ್ಟಣದಲ್ಲಿ. ಯೂರೋಪಿನ ನಗರವೊಂದರಲ್ಲಿ ನಡೆಯುವ ಕಥೆ ಎಂದ ತಕ್ಷಣ ಆಧುನಿಕತೆಯಲ್ಲಿ ಮಿಂದು ಬಂದಂತೆ ತೋರುವ ಸಿಟಿಯ ಥಳುಕಿನ ಚಿತ್ರಣ ಇಲ್ಲಿಲ್ಲ. ಹಾಗಂತ ವಿಕ್ಟೋರಿನ್ ಕಾಲದ ಮಹಲುಗಳೂ ಇಲ್ಲಿಲ್ಲ.

ಶಗ್ಗಿ ಬೇನ್ ಕಥೆ ನಡೆಯುವುದೆಲ್ಲ ಗ್ಲಾಸ್‍ಗೋ ಪಟ್ಟಣದ ಟೆನೆಮೆಂಟ್ ವಠಾರದಲ್ಲಿ. ಕುಡಿತದ ಚಟಕ್ಕೆ ದಾಸಳಾದ ಶಗ್ಗಿಯ ತಾಯಿ ಆಗ್ನೆಸ್ ಮತ್ತು ಅವಳನ್ನು ಕಾಪಾಡಿಕೊಳ್ಳಲು ಎಲ್ಲವನ್ನೂ ಪಣಕ್ಕಿಡುವ ಪುಟ್ಟ ಶಗ್ಗಿಯ ನಡುವಿನ ಸಂಬಂಧದ ಎಳೆಯೇ ಕಥೆಯ ಹಂದರ. ಅದರ ಜೊತೆಗೆ ತಾನು ಸಲಿಂಗಿ ಎಂಬುದನ್ನು ಹಂತಹಂತವಾಗಿ ಕಂಡುಕೊಳ್ಳುವ ಶಗ್ಗಿಯ ಜ್ಞಾನೋದಯದ ಕತೆಯೂ ಹೌದು. ಆಗ್ನೆಸ್‍ ಳಿಗೆ ಟೀನೇಜಿನಲ್ಲಿಯೇ ಮದುವೆಯಾಗಿ ಕ್ಯಾಥರಿನ್ ಮತ್ತು ಲೀಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ಶಗ್ಗಿ ಬೇನ್ ಎಂಬ ಶೋಕೀಲಾಲ ಟ್ಯಾಕ್ಸಿ ಡ್ರೈವರ್‍ ನನ್ನು ತಂದೆ ತಾಯಿಯ ಮಾತು ಮೀರಿ ಆಕೆ ಮದುವೆಯಾಗುತ್ತಾಳೆ. ಹುಟ್ಟಿದ ಮಗುವಿಗೂ ಶಗ್ಗಿ ಎಂದೇ ಹೆಸರಿಡುತ್ತಾಳೆ.

ಗಂಡನಾದ ಬಿಗ್ ಶಗ್‍ ನ ಟ್ಯಾಕ್ಸಿ ಡ್ರೈವಿಂಗ್ ವ್ಯವಹಾರ ಒಂದು ಹಂತಕ್ಕೆ ಬರುವ ತನಕ ಆಗ್ನೆಸ್ ಮೂವರೂ ಮಕ್ಕಳ ಜೊತೆಗೆ ತನ್ನ ತಂದೆ ತಾಯಿಯ ಮನೆಯಲ್ಲೇ ಇರಬೇಕೆಂದು ನಿರ್ಧರಿಸುತ್ತಾಳೆ. ಆಕೆಯ ಕುಡಿತ ಹೆಚ್ಚಾದಾಗ ಅವಳ ತಂದೆ “ಕ್ರಿಸ್ತ ನೀನೇ ಕಾಪಾಡು” ಎಂದು ದೊಣ್ಣೆಯಲ್ಲಿ ಹೊಡೆಯುತ್ತಾರೆ. ಆ ವಿವರ ಓದಿದಾಗ ನನಗೆ ನಮ್ಮ ಕಡೆ ಮೈಮೇಲೆ ದೆವ್ವ ಬಂದವರನ್ನು ದೇವರ ಹೆಸರು ಹೇಳಿ ಹೊಡೆಯುತ್ತಾರಲ್ಲ, ಅದೇ ನೆನಪಾಯಿತು.

(ಡಗ್ಲಸ್ ಸ್ಟೂವರ್ಟ್)

ತನ್ನನ್ನು ದ್ವೇಷಿಸುವ ಆಗ್ನೆಸ್‍ ಳ ತಂದೆ ತಾಯಿಯರ ಮೇಲೆ ಸೇಡು ತೀರಿಸಿಕೊಳ್ಳಲೆಂಬಂತೆ ಬಿಗ್ ಶಗ್ ಹೆಂಡತಿಯನ್ನೂ, ಮೂವರು ಮಕ್ಕಳನ್ನೂ ಸರ್ಕಾರ ಬಡತನ ರೇಖೆಗಿಂಥ ಕೆಳಗಿರುವ ಜನರಿಗೆ ನೀಡುವ ಟೆನೆಮೆಂಟ್ ವಠಾರಕ್ಕೆ ಕರೆತಂದು ಅವರನ್ನಲ್ಲೇ ಬಿಟ್ಟು ತಾನು ಪರಾರಿಯಾಗುತ್ತಾನೆ. ಕಾರಿನಲ್ಲಿ ಕುಳಿತ ಕೊಳಕು ಮಕ್ಕಳ, ಕುಡುಕ ಹೆಂಡತಿಯ ನೋಟ ಸಹಿಸಲಸಾಧ್ಯವಾಗಿ ಬಿಗ್ ಶಗ್ ಬಿಟ್ಟುಹೋಗುವ ನಿರ್ಧಾರ ಮಾಡಿರಬಹುದು ಎಂದು ಊಹಿಸುತ್ತಾನೆ ಪುಟ್ಟ ಶಗ್ಗಿ. “ಜೊತೆಗಿರುವ ಇಚ್ಛೆಯಿಲ್ಲದಿದ್ದರೆ ನನ್ನನ್ನ್ಯಾಕೆ ಇಲ್ಲಿ ಕರೆತಂದೆ?” ಎಂದು ಕೇಳಿತ್ತಾಳೆ ಆಗ್ನೆಸ್. “ನೀನು ಅವರ ಮನೆ ಬಿಟ್ಟು ಬರುತ್ತೀಯೋ ಇಲ್ಲವೋ ಎಂದು ನನಗೆ ನೋಡಬೇಕಿತ್ತು” ಎಂದವನೇ ಬಿಗ್ ಶಗ್ ಹೊರಟು ಹೋಗುತ್ತಾನೆ.

ಬಿಗ್ ಶಗ್ ಹೊರಟ ಮೇಲೆ ಆಗ್ನೆಸ್‍ ಳ ಕುಡಿತದ ಚಟಕ್ಕೆ ಅಂಕೆಯೇ ಇಲ್ಲದ ಹಾಗಾಗುತ್ತದೆ. ದೊಡ್ಡಮಗಳು ಕ್ಯಾಥರಿನ್ ಶ್ರೀಮಂತನೊಬ್ಬನನ್ನು ಸಣ್ಣ ವಯಸ್ಸಿನಲ್ಲೇ ಮದುವೆಯಾಗಿ ತಾಯಿಯೊಡನೆ ಸಂಬಂಧ ಕಡೆದುಕೊಳ್ಳುತ್ತಾಳೆ. ಚಿತ್ರಕಲೆಯಲ್ಲಿ ಪ್ರತಿಭಾವಂತನಾದ ಮಗ ಲೀಕ್ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕೆಂಬ ಛಲದಿಂದ ದುಡಿಯಲು ಶುರುಮಾಡಿ ಒಂದೇ ಸೂರಡಿಗೆ ಇದ್ದರೂ ತಾಯಿಯನ್ನು ನಿರ್ಲಕ್ಷ್ಯ ಮಾಡುತ್ತಾನೆ. ಇನ್ನುಳಿದ ಶಗ್ಗಿಗೆ ಮಾತ್ರ ಅಮ್ಮನನ್ನು ಅವಳಷ್ಟಕ್ಕೆ ಅವಳನ್ನು ಬಿಡಲು ಆಗುವುದಿಲ್ಲ. ಕುಡುಕಳಾದರೂ ಅವನಿಗೆ ಅಮ್ಮ ಅಮ್ಮನೇ.

ಬಿಗ್ ಶಗ್ ಆಗಲೇ ಇನ್ನೊಬ್ಬ ಹೆಂಗಸನ್ನು ಮದುವೆಯಾಗಿ ಬೇರೆ ಮನೆಯಲ್ಲಿದ್ದಾನೆ. ವಾರಕ್ಕೆರಡು ದಿನ ಸರ್ಕಾರದವರು ಮಕ್ಕಳನ್ನು ನೋಡಿಕೊಳ್ಳಲು ತಾಯಿಗೆ ಇಂತಿಷ್ಟು ಎಂದು ಕೊಡುವ ಹಣದಲ್ಲೇ ಆಗ್ನೆಸ್‍ ಳ ಮನೆ ನಡೆಯಬೇಕು. ಜೊತೆಗೆ ಅವಳ ಕುಡಿತದ ಚಟಕ್ಕೂ ಕಾಸು ಮಿಕ್ಕಬೇಕು. ಚೆಕ್ ಇಸಿದುಕೊಳ್ಳಲು ಹೋಗುವ ದಿನ ಆಗ್ನೆಸ್ ಸೊಗಸಾಗಿ ಡ್ರೆಸ್ ಮಾಡಿಕೊಳ್ಳುತ್ತಾಳೆ. ನಾವು ಬಡವರು ಎಂಬುದನ್ನು ಪರರಿಗೆ ಗೊತ್ತುಮಾಡಿಕೊಡಬೇಕಿಲ್ಲ ಎಂಬುದು ಅವಳ ಸಮರ್ಥನೆ. ದಿನಸಿ ಅಂಗಡಿಗೆ ಹೋಗುತ್ತಲೇ ಆ ವಾರಕ್ಕೆ ಬೇಕಾದ ತರಕಾರಿಯ ಟಿನ್‍ ಗಳನ್ನೂ, ದಿನ ಬಳಕೆಯ ವಸ್ತುಗಳನ್ನೂ ಕೊಳ್ಳುತ್ತಾಳೆ. ನಂತರ ಏನನ್ನೋ ಮರೆತಂತೆ ನಟಿಸುತ್ತ “ಓಹ್ ಮರೆತೇಬಿಟ್ಟಿದ್ದೆ, ಅದನ್ನೂ ಕೊಡಿ” ಎಂದು ಸರಾಯಿಯ ಪ್ಯಾಕೇಟುಗಳತ್ತ ಕೈ ನೆಡುತ್ತಾಳೆ.

“ಎಷ್ಟಾಯಿತು?” ಎಂದು ಕೇಳಿದಾಗ ನಾಲ್ಕಾರು ಪೌಂಡುಗಳು ಹೆಚ್ಚಾಗಿದ್ದು ಗೊತ್ತಾಗುತ್ತದೆ. ಆಗ ಒಂದೊಂದೇ ತರಕಾರಿಯ ಕ್ಯಾನ್‍ ಗಳನ್ನು ಹಿಂತಿರುಗಿಸಿ “ಈಗ ಸರಿಹೋಯಿತೇ? ಈಗ ಸರಿಹೋಯಿತೇ?” ಎಂದು ಹೇಳುತ್ತಲೇ ಇದ್ದಾಳೆ. ಕೆಲವೊಮ್ಮೆ ದಿನಸಿಯನ್ನು ಉದ್ರಿ ಬರೆಸಿ ತಂದಿದ್ದೂ ಇದೆ. ಅಂಗಡಿಯವನಿಗೆ ಇದ್ಯಾವುದೂ ಹೊಸದಲ್ಲ. ವಾರಕ್ಕೆರಡು ಬಾರಿ ಇದೇ ಆಟ ಹೂಡುವ ಆಗ್ನೆಸ್‍ ಳನ್ನು ಬಹಳ ದಿನಗಳಿಂದ ಕಂಡವನೇ ಅವನು. ಆದರೂ ಗಮನಿಸದವನಂತೆ ಇದ್ದಾನೆ. ಜೊತೆಗೆ ಹೋಗಿರುವ ಶಗ್ಗಿ ಮಾತ್ರ ಈ ನಾಟಕವನ್ನೆಲ್ಲ ಕಂಡು ತಾಯಿಯ ಕೋಟಿನ ಹಿಂದೆ ಮುಖ ಹುದುಗಿಸುತ್ತಾನೆ.

ವಾರಕ್ಕೆ ಬೇಕಾಗುವಷ್ಟು ಊಟ ತಂದಿಲ್ಲದ ದಿನ ಶಗ್ಗಿ ಅಣ್ಣ ಲೀಕ್‍ ನಿಂದ ಬೈಸಿಕೊಂಡಿದ್ದಾನೆ. ಅವಳಿಗೆ ಸಾರಾಯಿ ಕೊಳ್ಳುವ ಮೊದಲು ಎಲ್ಲರಿಗೂ ಸಾಕಾಗುವಷ್ಟು ಊಟದ ಕ್ಯಾನ್‍ ಗಳಿವೆ ಅಂತ ಮೊದಲು ಖಚಿತಪಡಿಸಿಕೋ ಅಂತ ಬುದ್ಧಿ ಹೇಳಿಸಿಕೊಂಡಿದ್ದಾನೆ.

ಬೇರೆ ಕಥಾ ಹಂದರಗಳಲ್ಲಿ ಉಪೇಕ್ಷೆಗೊಳಪಡುವ ಪಾತ್ರಗಳಾಗಿಯೋ, ಹಾಸ್ಯದ ಸರಕುಗಳಾಗಿಯೋ ಬಳಸಿಕೊಳ್ಳುವ ಪಾತ್ರಗಳು ಆಗ್ನೆಸ್ ಮತ್ತು ಶಗ್ಗಿಯದು. ಈ ಕಾದಂಬರಿಯಲ್ಲಿ ಆ ಪಾತ್ರಗಳೊಟ್ಟಿಗೇ ನಿಂತು ಜಗತ್ತು ನೋಡಲು ಸಾಧ್ಯವಾಗಿರುವುದು ಹೊಸತಾಗಿದೆ.

ಶಗ್ಗಿಗೆ ಮಾತ್ರ ಅಮ್ಮನನ್ನು ಅವಳಷ್ಟಕ್ಕೆ ಅವಳನ್ನು ಬಿಡಲು ಆಗುವುದಿಲ್ಲ. ಕುಡುಕಳಾದರೂ ಅವನಿಗೆ ಅಮ್ಮ ಅಮ್ಮನೇ.

ಕುಡಿದಾಗ ಅಮ್ಮನ ಬೇರೆಯದೇ ರೂಪವನ್ನು ಕಾಣುತ್ತಾನೆ ಶಗ್ಗಿ. ತನ್ನ ಹಳೆಯ ಪ್ರಿಯಕರು ಮತ್ತು ಅವರು ಮಾಡಿದ ಮೋಸ ಆಕೆಗೆ ನೆನಪಾಗುವುದು ಕುಡಿದಾಗಲೇ. ಒಬ್ಬೊಬ್ಬರನ್ನೇ ಸರತಿಯಲ್ಲಿ ಫೋನಿನಲ್ಲಿ ಕರೆದು ಅವರನ್ನು ವಾಚಾಮಗೋಚರ ಬೈಯ್ಯುತ್ತಾಳೆ. ಪುಟ್ಟ ಬಾಲಕನ ಮುಂದೆ ಆಡಬಾರದ ನುಡಿಗಟ್ಟುಗಳೂ, ಹೇಳಬಾರದ ಘಟನೆಗಳೂ ಆ ಮಾತುಗಳಲ್ಲಿ ಬಂದು ಹೋಗುತ್ತವೆ. ಎಷ್ಟೋ ಬಾರಿ ಈ ಗಂಡಸರಿಗೆ ಆಗ್ನೆಸ್‍ ಳ ನೆನಪೂ ಇರುವುದಿಲ್ಲ. ಹಾಗಂತ ಅವಳು ಕರೆ ಮಾಡುವುದನ್ನೇನೂ ನಿಲ್ಲಿಸುವುದಿಲ್ಲ. “ಶಗ್ಗಿ, ಆ ಫೋನ್‍ ಬುಕ್ ತೆಗೆದುಕೊಂಡು ಬಾ” ಎಂದು ಆಗ್ನೆಸ್ ಹೇಳಿದ ತಕ್ಷಣ ಶಗ್ಗಿಗೆ ಇವತ್ತು ಯಾರ ಗ್ರಹಚಾರ ಬಿಡಿಸುವುದಿದೆಯೋ ಎಂದು ದಿಗಿಲಾಗುತ್ತದೆ.

ಅವರಿಗೆಲ್ಲ ಫೋನು ಹಚ್ಚಿಕೊಡಬೇಕಾದವನು ಅವನು. ಅತ್ತ ಕಡೆಯಿಂದ ಆ ಹಳೆಯ ಪ್ರಿಯಕರ ಫೋನು ತೆಗೆದುಕೊಂಡ ತಕ್ಷಣ ಆಗ್ನೆಸ್ ರಿಸೀವರ್ ತೆಗೆದುಕೊಂಡು “ಯೂ ಬಾಸ್ಟರ್ಡ್, ನೆನಪಿದೆಯಾ ನೀನೇನು ಹೇಳಿದ್ದೆ ಆ ದಿನ…” ಎಂದು ಪ್ರವರ ಶುರು ಮಾಡಬೇಕು.

ಶಗ್ಗಿ ಬಿಡುವಾದಾಗಲೆಲ್ಲ ಫೋನ್‍ ಬುಕ್ಕಿನ ನಂಬರುಗಳನ್ನು ಗೊತ್ತಾಗದಂತೆ ಬದಲಿಸುತ್ತಾನೆ. 6 ಇದ್ದದ್ದನ್ನು 8 ಮಾಡುತ್ತಾನೆ. 1 ಇದ್ದುದನ್ನು 9 ಮಾಡುತ್ತಾನೆ. ಆ ಫೋನ್‍ ಬುಕ್ಕು ಕೆಂಪು ಬಣ್ಣದ ಚಿತ್ತುಕಾಟುಗಳಿಂದ ತುಂಬಿ ಹೋಗಿದೆ. ಪ್ರತೀ ಹೆಸರಿನ ಕೆಳಗೂ ಆ ವ್ಯಕ್ತಿಯ ಕುರಿತಾದ ವಿವರಗಳಿವೆ. “ಇವಳು ಬಿಚ್. ನನ್ನ ಗಂಡನ್ನ ಕದ್ದವಳು,” “ಇವರು ಒಳ್ಳೆಯವರು, ಅಂದು ಎಷ್ಟು ಸಹಾಯ ಮಾಡಿದ್ದರಲ್ಲ,” “ಟ್ಯಾಕ್ಸಿ, ಅರ್ಜಂಟಿಗೆ ಬೇಕಿದ್ದರೆ…” ಹೀಗೇ ಸಾಗುತ್ತವೆ ಆ ವಿವರಗಳು.

ಒಮ್ಮೆ ಮಾತ್ರ, ಒಂದೇ ಒಂದು ಬಾರಿ ಆಗ್ನೆಸ್ ಕುಡಿಯುವುದನ್ನು ಬಿಟ್ಟುಬಿಡಬೇಕೆಂದು ಪ್ರತಿಜ್ಞೆ ಮಾಡುತ್ತಾಳೆ. ಒಂದು ವರ್ಷ ಆ ವ್ರತವನ್ನು ಪಾಲಿಸುತ್ತಾಳೆ ಕೂಡ. ಆಗ ಲೀಕ್ ಮತ್ತು ಶಗ್ಗಿ ಸಂಭ್ರಮಪಡುವ ಪರಿ ಅಷ್ಟಿಷ್ಟಲ್ಲ. ರುಚಿಯಾದ ಅಡುಗೆ ಮಾಡಲು ಶುರು ಮಾಡುತ್ತಾಳೆ. ತಲೆಯಲ್ಲಿ ಕುಡಿತದ ಯೋಚನೆ ಬರಬಾರದು ಎಂದು ರಾತ್ರಿ ಪಾಳಿಯ ಕೆಲಸವೊಂದನ್ನು ಹಿಡಿಯುತ್ತಾಳೆ. ಪೆಟ್ರೋಲ್ ಬಂಕ್‍ ವೊಂದಕ್ಕೆ ಅಂಟಿಕೊಂಡಿರುವ ಅಂಗಡಿಯಲ್ಲಿ ಅವಳು ಕೆಲಸಕ್ಕೆ ಸೇರಿದಾಗಿನಿಂದ ಆ ಅಂಗಡಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಮಾತನಾಡಲು ಯಾರೂ ಇಲ್ಲದ ಟ್ಯಾಕ್ಸಿ ಡ್ರೈವರುಗಳು ಸಿಗರೇಟನ್ನೋ, ಚಿಪ್ಸನ್ನೋ ಕೊಳ್ಳುತ್ತ ಗಲ್ಲಾದ ಮೇಲೆ ಕುಳಿತ ಈ ಸುಂದರ ಹೆಂಗಸಿನೊಡನೆ ತಮ್ಮ ಮನಸ್ಸು ಬಿಚ್ಚುತ್ತಾರೆ, ಅಳಲು ಹೇಳಿಕೊಳ್ಳುತ್ತಾರೆ. ಆಗ್ನೆಸ್‍ ಳೂ ತನಗೆ ತಿಳಿದ ಸಾಂತ್ವನ ಹೇಳುತ್ತಾಳೆ.

ಆಗ ಸಿಗುವವನೇ ಯೂಜೀನ್. ಆಗ್ನೆಸ್‍ ಳ ಮನಸ್ಸಿನಲ್ಲಿ ಹೊಸದೊಂದು ಹೂವನ್ನು ಚಿಗುರೊಡೆಸಿದವನು. ಶಗ್ಗಿಗೂ ಅವನು ಇಷ್ಟವಾಗಿದ್ದಾನೆ. “ನೀನು ನನ್ನ ಹೊಸ ಡ್ಯಾಡಿ ಆಗುತ್ತೀಯಂತೆ ಹೌದೇ?” ಎಂದ ಶಗ್ಗಿಗೆ ಯೂಜೀನ್ ಉತ್ತರಿಸದೇ ಮುಗುಳ್ನಕ್ಕು ನಡೆದಿದ್ದಾನೆ. ಈಗ ಒಂದೇ ಒಂದು ಗ್ಲಾಸು ವೈನನ್ನೂ ಮುಟ್ಟದಿರುವ ಆಗ್ನೆಸ್‍ ಳ ಮೇಲೆ ಮಾತ್ರ ಯೂಜೀನ್‍ ನಿಗೆ ಅಸಹನೆಯಿದೆ. ಪಾಶ್ಚಿಮಾತ್ಯ ಸಮಾಜದಲ್ಲಿ ಹಿತಮಿತವಾಗಿ ಕುಡಿಯುವುದು ಸಹಜವಾದುದರಿಂದ ಅವನಿಗೆ ಆಗ್ನೆಸ್‍ ಳ ಈ ಗುಣ ಅಸಹಜವಾಗಿ ಕಂಡಿದೆ.

ಒಮ್ಮೆ ಹೊಟೇಲಿಗೆ ಕರೆದುಕೊಂಡು ಹೋಗಿ ಮದುವೆಯ ಸಾಧ್ಯತೆಯ ಮಾತಾಡುತ್ತಾನೆ. ಅದು ಆಗ್ನೆಸ್‍ ಳಲ್ಲಿ ಸಡಗರವನ್ನುಂಟು ಮಾಡಿದೆ. ಅವಳಿಗಿರುವ ಕೊನೆಯ ಪರೀಕ್ಷೆಯೆಂಬಂತೆ ವೈನ್ ಗ್ಲಾಸೊಂದನ್ನು ಮುಂದಿಟ್ಟು ಕುಡಿ ಎನ್ನುತ್ತಾನೆ. ಅವಳು ಎಷ್ಟು ಬೇಡವೆಂದರೂ ಕೇಳುವುದಿಲ್ಲ. “ಇಲ್ಲ, ಒಮ್ಮೆ ಕುಡಿದರೆ ಮತ್ತೂ ಬೇಕೆನಿಸುತ್ತದೆ ಒತ್ತಾಯ ಮಾಡಬೇಡ” ಅಂತ ಅವಳೆಂದರೆ “ಅದೆಲ್ಲ ಭ್ರಮೆಯಷ್ಟೇ” ಎಂದು ಪುಸಲಾಯಿಸುತ್ತಾನೆ.

ಅಂದು ಕೈಗೆತ್ತಿಕೊಂಡ ಗ್ಲಾಸನ್ನು ಆಗ್ನೆಸ್ ಇನ್ನ್ಯಾವತ್ತೂ ಬಿಡುವುದಿಲ್ಲ. ಅವಳ ಕುಡಿತದ ಚಟ ಮೊದಲಿಗಿಂತ ಹೆಚ್ಚಾದುದನ್ನು ಲೀಕ್ ಮತ್ತು ಶಗ್ಗಿ ಅಸಹಾಯಕರಾಗಿ ನೋಡುತ್ತ ನಿಲ್ಲುವಂತಾಗುತ್ತದೆ. ಕೆಲಸ ಕಳೆದುಕೊಂಡು, ಯೂಜೀನ್‍ ನಿಂದಲೂ ದೂರವಾಗಿ ಹತ್ತಿಕ್ಕಲಾರದ ಬೆಂಕಿಯನ್ನು ನಂದಿಸಲೆಂಬಂತೆ ಆಗ್ನೆಸ್ ಕುಡಿಯಲು ಶುರು ಮಾಡುತ್ತಾಳೆ. ಕೋಪದಲ್ಲಿ ಒಮ್ಮೆ ಲೀಕ್‍ ನನ್ನು ಮನೆಬಿಟ್ಟು ತೊಲಗು ಎಂದು ಬೈಯ್ಯುತ್ತಾಳೆ. ಅದಕ್ಕೇ ಕಾಯುತ್ತಿದ್ದವನಂತೆ ಅವನು ಬ್ಯಾಗಿನಲ್ಲಿ ಬಟ್ಟೆ ತುಂಬಿಕೊಂಡು ಹೊರಡುತ್ತಾನೆ.

ಮನುಷ್ಯರ ನಡುವಿನ ಸಂಬಂಧದ ಎಳೆಗಳನ್ನು ಎಷ್ಟು ಬಿಡಿಸಲು ಯತ್ನಿಸಿದರೂ ಸಂಪೂರ್ಣವಾಗಿ ಬಿಡಿಸಲಾಗದೇನೋ. ಆಗ್ನೆಸ್ ಮತ್ತು ಶಗ್ಗಿಯ ಬಂಧವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾದರೂ ಶಗ್ಗಿ ಬೇನ್ ಕಾದಂಬರಿಯನ್ನು ಒಮ್ಮೆ ಓದಬೇಕು. ತಾಯಿ ಮಗನನ್ನು, ಅವರನ್ನು ಹಿಡಿದಿಡುವ ವೃತ್ತದಲ್ಲಿ ಎಷ್ಟು ಬಗೆಯಲ್ಲಿ ವರ್ಣಿಸಬಹುದೋ, ಅಷ್ಟೂ ಸಾಧ್ಯತೆಗಳನ್ನು ಡಗ್ಲಸ್ ಸ್ಟೂವರ್ಟ್ ಇಲ್ಲಿ ಅನಾವರಣಗೊಳಿಸಿದ್ದಾರೆ. ಇನ್ನೂ ಇನ್ನೂ ಹೆಚ್ಚು ಚಿಂತಿಸಲು ಹಚ್ಚುತ್ತಾರೆ. ಕುಡಿಯುತ್ತ ಕುರ್ಚಿಯ ಮೇಲೇ ನಿದ್ದೆ ಹೋಗಿರುವ ತಾಯಿಯನ್ನು ಮೃದುವಾಗಿ ಎತ್ತಿ ಹಾಸಿಗೆಯಲ್ಲಿ ಮಲಗಿಸಿ, ಚಪ್ಪಲಿಗಳನ್ನು ಅಷ್ಟೇ ಮೆಲುವಾಗಿ ತೆಗೆದು, ಎದೆ ಬಿಗಿಯುವ ಬ್ರಾ ಹುಕ್ಕುಗಳನ್ನು ಬಿಚ್ಚಿ ಅವಳನ್ನು ಆರಾಮದಾಯಕ ನಿದಿರೆಗೆ ಜಾರಲು ಅನುವು ಮಾಡಿಕೊಡುವ ಶಗ್ಗಿಯ ಪ್ರತಿಮೆಯನ್ನು ಯಾವ ಭಾಷೆಯಲ್ಲಿ ಹಿಡಿದಿಡುವುದು?

ಸ್ಕಾಟ್‍ಲ್ಯಾಂಡಿನ ನಗರ ಪ್ರದೇಶ, ಅಲ್ಲಿನ ಒಂದು ವರ್ಗದ ಜನರ ತುಮುಲಗಳು, ಅವರ ಆಸೆಗಳು, ಕನಸುಗಳು ಕಾದಂಬರಿಯುದ್ದಕ್ಕೂ ಹರಡಿಕೊಂಡಿವೆ. ನೋವನ್ನು ನೋವಿನಿಂದಲೇ ಮುಟ್ಟಲೆಂಬಂತೆ ಬಳಸಿಕೊಂಡಿರುವ ಸ್ಕಾಟಿಶ್ ಪಲುಕಿನ ಭಾಷೆಯೂ ಹೊಸತಾಗಿದೆ.

ತಾನು ನಡೆಯುವ ಶೈಲಿಯನ್ನೂ, ಮಾತನಾಡುವ ಶೈಲಿಯನ್ನೂ ಅಣಕಿಸುವ ಕೇರಿಯ ಇತರ ಮಕ್ಕಳಿಂದ ತಪ್ಪಿಸಿಕೊಳ್ಳಲು ಶಗ್ಗಿಗಿರುವ ಆಶ್ರಯ ಮನೆಯೊಂದೇ. ಮುಂದೆ ಟೀನೇಜಿನಲ್ಲೊಮ್ಮೆ ಹುಡುಗಿಯೊಬ್ಬಳು ಅವನಿಗೆ ಮನಸೋತು “ನೀನು ನನ್ನ ಎದೆ ಮುಟ್ಟಬಹುದು ಬೇಕಿದ್ದರೆ” ಎಂದು ಅವನಿಗೆ ತನ್ನ ದೇಹ ಮುಟ್ಟಲು ಅನುಮತಿ ಕೊಟ್ಟಾಗ “ಬೇಡ, ನನಗೆ ಆಸಕ್ತಿಯಿಲ್ಲ. ನಿನ್ನ ಕೂದಲ ಸಿಕ್ಕು ಬೇಕಿದ್ದರೆ ಬಿಡಿಸಿ ಕೊಡುತ್ತೇನೆ” ಎನ್ನುತ್ತಾನೆ. ಮುಸ್ಸಂಜೆಯ ಇಳಿಹೊತ್ತು ಪಾರ್ಕಿನ ಬೆಂಚಿನ ಮೇಲೆ ಶಗ್ಗಿ ಆಕೆಯ ಉದ್ದ ಕೂದಲನ್ನು ಬಾಚುತ್ತ ಕುಳಿತ ಚಿತ್ರ ಕಣ್ಮುಂದೆ ಬರುತ್ತದೆ.

ನನಗೆ ಈ ಕಾದಂಬರಿಯಲ್ಲಿ ಬಹು ಇಷ್ಟವಾದ ಸಂಗತಿಯೆಂದರೆ, ಎಲ್ಲೂ ‘ತಾಯಿಯೇ ದೇವರು’ ತರಹದ ನೈತಿಕ ಪೊಲೀಸ್‍ ಗಿರಿ ಇಲ್ಲದಿರುವುದು. ಆಗ್ನೆಸ್‍ ಳಿಗೆ ನೈತಿಕವಾಗಿ ಯಾವುದೇ ಪಶ್ಚಾತಾಪವಿಲ್ಲ. ಅವಳಿಗೆ ಹೇಗೆ ಬೇಕೋ ಹಾಗಿದ್ದಾಳೆ. ಶಗ್ಗಿಯೂ ಬೇರೆ ತಾಯಂದಿರನ್ನು ತೋರಿಸಿ ಅಮ್ಮನನ್ನು ಹಂಗಿಸುವುದಿಲ್ಲ. ಆಕೆಯನ್ನು ನಿಯಂತ್ರಿಸಲಾರ ಅವನು. ಬೇರೆ ಹೇಗೂ ಬದುಕಲು ಗೊತ್ತಿಲ್ಲದೇ ಅವನು ನಿಂತಿದ್ದಾನೆ ಅಮ್ಮನೊಡನೆ. ಅವಳ ಎಲ್ಲ ಕೋಪಗಳ ಜೊತೆಗೇ ಸಹಿಸಿದ್ದಾನೆ ಅವಳನ್ನು. ಪ್ರೀತಿ- ಅದು ಇರುವುದೇ ಹೌದಾದರೆ, ಪ್ರೀತಿಸಿದ್ದಾನೆ.

ಶಗ್ಗಿ ಬೇನ್ ಕಾದಂಬರಿ ಜರಡಿ ಹಿಡಿಯುವುದು ಪ್ರೇಮದ ಮೂರ್ತರೂಪವನ್ನು ಘನವಾಗಿ ಹಿಡಿದಿಡುವ ತಾಯಿ-ಮಗನ ಸಂಬಂಧ ಸೂಕ್ಷ್ಮಕ್ಕೆ, ಅದು ಕಲುಕುವ ಪ್ರಜ್ಞೆಯ ಪದರಗಳಿಗೆ. ಶಗ್ಗಿ ಮತ್ತು ಅವನ ಅಮ್ಮ ನಿಂತಿರುವ ನಿಲುತಾಣದಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾರೆವು.