ಬಣ್ಣದ ಗಣೇಶ ಮೂರ್ತಿಯ ಆರಾಧನೆಯ ಪರಿಕಲ್ಪನೆಯಲ್ಲಿರುವ ತೊಡಕುಗಳು ಜನರ ಅರಿವಿಗೆ ಬರುತ್ತಿರುವಾಗ ಸಾವಯವ ಮೂರ್ತಿಗಳ ಕಡೆಗೆ ಜನರ ಒಲವು ಹೆಚ್ಚುತ್ತಿವೆ. ಹೀಗೆ ಆರಾಧಿಸುವ ಗಣೇಶ ಮೂರ್ತಿಗಳಲ್ಲಿ ಗಿಡಗಳ ಬೀಜಗಳನ್ನು ಇರಿಸಿದರೆ, ಹಬ್ಬ ಮುಗಿದು ನವರಾತ್ರಿಯನ್ನು ಎದುರು ನೋಡುವಾಗ, ಇತ್ತ ಅಂಗಳದಲ್ಲಿ ಗಿಡಗಳು ಹುಲುಸಾಗಿ ಬೆಳೆದಿರುತ್ತವೆ. ಹಬ್ಬದ ಸಂಭ್ರಮ ಹೀಗೆ ನಿಧಾನಗತಿಯಲ್ಲಿ ದೀರ್ಘಕಾಲ ಮನಸ್ಸಿನಲ್ಲಿ ಉಳಿದರೆ ಅದಕ್ಕಿಂತ ದೊಡ್ಡ ಖುಷಿ ಯಾವುದಿದೆ ?
ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಓದಿಗಾಗಿ.
‘ಗಣೇಶ ಹಬ್ಬ ಈ ಬಾರಿ ಒಂದು ಹಿಡಿ ಹೆಚ್ಚಿನ ಖುಷಿಯೊಂದಿಗೆ ಆಗಮಿಸಿದೆ. ಅಂದರೆ ಮನೆಯಲ್ಲಿ ಶುಕ್ರವಾರ ಗಣೇಶನನ್ನು ಕೂರಿಸಿದ ಬಳಿಕ ಅಂದೇ ಸಂಜೆ ನಾವು ಗಣೇಶನನ್ನು ಕಳಿಸುವುದಿಲ್ಲ. ಅವನು ಕರುಣಿಸುವ ವಿದ್ಯೆಬುದ್ಧಿಯೆಲ್ಲ ಅವನೊಡನೆ ಹೊರಟು ಹೋಗಬಾರದಲ್ವಾ ಹಾಗಾಗಿ ಯಾವೆಲ್ಲಾ ವರ್ಷಗಳಲ್ಲಿ ಶುಕ್ರವಾರ ಅಥವಾ ಮಂಗಳವಾರ ಗಣೇಶನನ್ನು ಕೂರಿಸುತ್ತೇವೆಯೊ, ಆವಾಗೆಲ್ಲ ಎರಡು ದಿನ ಹಬ್ಬ ಮಾಡುತ್ತೇವೆ’ ಎನ್ನುತ್ತ ತಮ್ಮ ಮನೆಗೆ ತಂದಿರುವ ಪರಿಸರ ಸ್ನೇಹಿ ಗಣೇಶನನ್ನು ತೋರಿಸಿದರು ಬೆಂಗಳೂರಿನ ಶರಧಿ ಬಲ್ಲಾಳ್.
ವರ್ಷವಿಡೀ ಹತ್ತಾರು ಹಬ್ಬಗಳು ಮನೆ ಮತ್ತು ಮನಸ್ಸನ್ನು ತುಂಬಿದರೂ, ಗಣೇಶ ಹಬ್ಬದ ಸಂಭ್ರಮ ವಿಭಿನ್ನವಾದುದು. ಒಂದೊಂದು ಊರುಗಳಲ್ಲಿ ಒಂದೊಂದು ರೀತಿಯ ನಂಬಿಕೆ. ಒಬ್ಬೊಬ್ಬರದು ಒಂದೊಂದು ತೆರನಾದ ನಂಬಿಕೆ. ಗಣೇಶದೇವರಿಗೆ ಸಂಬಂಧಿಸಿದ ಇಂತಹ ನೂರಾರು ನಂಬಿಕೆಗಳನ್ನು ಒಂದೆಡೆ ಸೇರಿಸಿಕೊಂಡು ಸಾರ್ವಜನಿಕ ಆಚರಣೆಗಳನ್ನು ಮಾಡುವುದು ಒಂದು ಸವಾಲೂ ಹೌದು. ಸಾರ್ವಜನಿಕ ಆಚರಣೆಗಳೆಂದರೆ ಅಲ್ಲಿ ಹತ್ತಾರು ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತ, ಒಂದು ನಿರ್ಧಾರವನ್ನು ಮನ್ನಿಸುತ್ತ, ಒಟ್ಟು ಕಾರ್ಯಕ್ರಮವನ್ನು ಚಂದಗಾಣಿಸುವ ಆಶಯದೊಂದಿಗೆ ದುಡಿಯುವುದು. ಭಕ್ತಿ ಪ್ರಧಾನವಾದ ಸಾರ್ವಜನಿಕ ಆಚರಣೆಗಳಲ್ಲಿ ಭಿನ್ನಾಭಿಪ್ರಾಯಗಳು ಸ್ವಲ್ಪ ಕಡಿಮೆಯೇ ಎನ್ನಬೇಕು.
ಈ ಬಾರಿ ಹಬ್ಬವೇನೋ ಎರಡು ದಿನಗಳದ್ದು. ಆದರೆ ಕೋವಿಡ್ ಸೋಂಕಿನ ಭಯದ ಕಾರಣದಿಂದಾಗಿ, ಸಂಭ್ರಮದಲ್ಲಿ ನಿರಾಳತೆಯೇನೂ ಇಲ್ಲ. ಅದ್ಧೂರಿ ಆಚರಣೆಗೆ ಸರ್ಕಾರ ಅವಕಾಶ ಕೊಟ್ಟಿಲ್ಲ ಎನ್ನುವುದು ಒಂದು ವಿಚಾರವಾದರೆ, ಹೆಚ್ಚು ಜನರನ್ನು ಸೇರಿಸುವುದು ಸರಿಯಲ್ಲ ಎಂಬ ಅಳುಕು ಎದೆಯೊಳಗೇ. ಆದರೆ ಮನೆಮಟ್ಟಕ್ಕೆ ಹಬ್ಬ ಮಾಡುವವರು ಎಂದಿನಂತೆ ಖುಷಿಯನ್ನು ಕಾಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಚೌತಿಯ ಹಬ್ಬ ವರ್ಷದಲ್ಲಿ ಒಂದು ದಿವಸ ಬರುವುದಾದರೂ, ಗಣೇಶ ಮೂರ್ತಿಯನ್ನು ತಯಾರಿಸುವವರು ವರ್ಷವಿಡೀ ಈ ಬಗ್ಗೆ ಯೋಚನೆ ಮಾಡುತ್ತ, ಕೆಲಸ ಮಾಡುತ್ತ ಇರುತ್ತಾರೆ. ಕಲಾತ್ಮಕ ಮೂರ್ತಿಗಳನ್ನು ರೂಪಿಸುವ ಈ ಕಲಾವಿದರ ಬದುಕು ಕಳೆದ ವರ್ಷವೂ, ಈ ವರ್ಷವೂ ಅತಂತ್ರವಾಗಿದೆ. ಕಳೆದ ವರ್ಷ ಕೋವಿಡ್ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ನಿಂದಾಗಿ, ಎಷ್ಟೋ ಗಣೇಶ ಮೂರ್ತಿಗಳು ಪೂಜೆಯಿಲ್ಲದೇ ಸುಮ್ಮನಿರಬೇಕಾಯಿತು. ಮೂರ್ತಿತಯಾರಕರು ಆದಾಯವಿಲ್ಲದೇ ಕಂಗಾಲಾಗಬೇಕಾಯಿತು. ಹಾಗೆ ನೋಡಿದರೆ, ಈ ವರ್ಷವೇ ಪೂಜೆಗಳಿಗೆ ಅವಕಾಶ ದೊರೆತಿದ್ದು, ಆತಂಕ, ಅಳುಕುಗಳನ್ನು ಮೀರಿ ಸರಳ ಆಚರಣೆಗಳನ್ನು ಮಾಡುವುದು ಸಾಧ್ಯವಾಗಿದೆ. ಮಂಕು ಹಿಡಿದಿರುವ ಮನಸ್ಸುಗಳಿಗೆ ಸಂಭ್ರಮಿಸುವ ಅವಕಾಶ ದೊರೆತಂತಾಗಿದೆ ಎಂದು ಮೂರ್ತಿ ತಯಾರಕರನೇಕರು ಹಗುರಾಗಿದ್ದಾರೆ.
ಈ ಬಾರಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕಲಾವಿದರೆಲ್ಲರೂ ಆತಂಕದಲ್ಲಿಯೇ ಇದ್ದರು. ಕೋವಿಡ್ ಎರಡನೇ ಅಲೆಯ ಆಘಾತದಿಂದ ಚೇತರಿಸಿಕೊಳ್ಳಲು ದೀರ್ಘ ಸಮಯ ಬೇಕಾದುದರಿಂದ, ಜನರಲ್ಲಿ ಗಣೇಶೋತ್ಸವನ್ನು ಆಚರಿಸುವ ಹುಮ್ಮಸ್ಸು ಎಷ್ಟರ ಮಟ್ಟಿಗೆ ಇರಬಹುದು ಎಂಬ ಆತಂಕ ಇದ್ದೇ ಇತ್ತು. ಆದರೆ ಸರ್ಕಾರವು ಐದು ದಿನಗಳ ಆಚರಣೆಗೆ ಅವಕಾಶ ಕೊಟ್ಟಿದೆ. ಸಾರ್ವಜನಿಕವಾಗಿ ಪೂಜೆಗೊಳ್ಳುವ ಗಣೇಶ ನಾಲ್ಕು ಅಡಿಗಿಂತ ಎತ್ತರ ಇರಬಾರದು ಎಂದು ಕಂಡಿಷನ್ ಹಾಕಿದೆ. ಗಣೇಶೋತ್ಸವದ ಜೊತೆಗೇ ಸಾವಿರಾರು ನಂಬಿಕೆಗಳು ಥಳುಕು ಹಾಕಿಕೊಂಡಿವೆಯಲ್ಲ. ಪ್ರತೀವರ್ಷ ಗಣೇಶ ಮೂರ್ತಿಯ ಎತ್ತರ ಒಂದು ನೂಲಿನಷ್ಟಾದರೂ ಹೆಚ್ಚಿರಬೇಕು ಎಂಬ ನಂಬಿಕೆ ಶರಧಿ ಬಲ್ಲಾಳ್ ಗೂ ಇದೆ. ಸದ್ಯಕ್ಕಂತೂ ಅನುಕೂಲಶಾಸ್ತ್ರಕ್ಕೆ ಶರಣಾಗುವುದು ಎಂದು ಅವರು ನಂಬಿದ್ದಾರೆ. ಸರ್ಕಾರಕ್ಕೆ ಹೀಗೆ ಮಾರ್ಗದರ್ಶನ ನೀಡುವಂತೆ ದೇವರೇ ಬುದ್ಧಿಕೊಟ್ಟಿದ್ದಾರೆ ಎಂದು ಅವರು ತಮ್ಮ ನಂಬಿಕೆಯ ಬುಡ ಅಲ್ಲಾಡದಂತೆ ಕಾಪಾಡಿಕೊಂಡಿದ್ದಾರೆ. ಹೀಗೆ ಪರಿಸರ ಸ್ನೇಹೀ ಗಣೇಶನ ಕಡೆಗೆ ಈ ಬಾರಿ ಹೆಚ್ಚಿನ ಜನರು ಒಲವು ತೋರಿದ್ದಂತೂ ಹೌದು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಾರಿ ಅರಿಶಿಣ, ರಾಗಿಹಿಟ್ಟು ಮುಂತಾದವುಗಳ ಮಿಶ್ರಣದಿಂದ ಮಾಡಿದ ಗಣೇಶ ಮೂರ್ತಿಗಳನ್ನು ಬಳಸುವಂತೆ ಅಭಿಯಾನವನ್ನೇ ಕೈಗೊಂಡಿತ್ತು. ಹೀಗೆ ಪೀತವರ್ಣದ ಗಣೇಶನನ್ನು ಪೂಜಿಸಿದ ಬಳಿಕ ಸೆಲ್ಫಿ ತೆಗೆದುಕೊಂಡು ಕಳುಹಿಸುವಂತೆ ಮಂಡಳಿಯು ಹೇಳಿದೆ.
ಸಾರ್ವಜನಿಕ ಆಚರಣೆಗಳೆಂದರೆ ಅಲ್ಲಿ ಹತ್ತಾರು ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತ, ಒಂದು ನಿರ್ಧಾರವನ್ನು ಮನ್ನಿಸುತ್ತ, ಒಟ್ಟು ಕಾರ್ಯಕ್ರಮವನ್ನು ಚಂದಗಾಣಿಸುವ ಆಶಯದೊಂದಿಗೆ ದುಡಿಯುವುದು. ಭಕ್ತಿ ಪ್ರಧಾನವಾದ ಸಾರ್ವಜನಿಕ ಆಚರಣೆಗಳಲ್ಲಿ ಭಿನ್ನಾಭಿಪ್ರಾಯಗಳು ಸ್ವಲ್ಪ ಕಡಿಮೆಯೇ ಎನ್ನಬೇಕು.
ಹದಿನೈದು ವರ್ಷಗಳಿಂದ ಹೀಗೆ ಪರಿಸರ ಸ್ನೇಹಿ ಗಣೇಶನನ್ನೇ ಆರಾಧಿಸಲು ಆರಂಭಿಸಿದವರು ಹಾವೇರಿ ಜಿಲ್ಲೆಯ ಲಕ್ಮಾಪುರ ಮೂಲದ ಮೀನಾಕ್ಷಿ ಪೂಜಾರ್. ಶಿಕ್ಷಕಿ ಆಗಿರುವ ಅವರು ಪರಿಸರದ ಮೇಲಿನ ಪ್ರೀತಿಯಿಂದ ಗಣೇಶನ ಆರಾಧನೆಯ ಕ್ರಮವನ್ನೂ ಬದಲಾಯಿಸಬೇಕು ಎಂದು ಬಯಸಿದವರು. ಅದಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹವಾಗಿ ಧಾರವಾಡದ ಮಂಜುನಾಥ್ ಹಿರೇಮಠ್ ಅವರ ಪ್ರಯತ್ನಗಳು ಗಮನ ಸೆಳೆದವು. ರಾಸಾಯನಿಕ ಬಣ್ಣಗಳನ್ನು ಬಳಸದೇ ಕೇವಲ ಮಣ್ಣು, ಗಂಧ, ಮಸಿ, ಅರಿಶಿಣ ಕುಂಕುಮ ಬಳಸಿ ಅವರು ಗಣೇಶ ದೇವರನ್ನು ಆಕರ್ಷಕವಾಗಿ ಮಾಡುತ್ತಿದ್ದರು. ತಮ್ಮ 15ನೇ ವಯಸ್ಸಿನಲ್ಲಿಯೇ ಅವರು ಈ ಮೂರ್ತಿತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡವರು. ಮೂರ್ತಿ ತಯಾರಿಕೆಯಲ್ಲಿ ಅವರಿಗೀಗ 30 ವರ್ಷಗಳ ಅನುಭವ.
ಬಣ್ಣ ಬಸಳದೇ ಮಾಡುವ ಮೂರ್ತಿಗಳ ಕುರಿತು ಜನರಲ್ಲಿ ಹೆಚ್ಚಿನ ಆಕರ್ಷಣೆ ಮೂಡಿಸುವ ಕುರಿತು ಅವರು ಅನೇಕ ಎನ್. ಜಿ.ಒ. ಜೊತೆಗೆ ಪ್ರಚಾರ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ. ಪ್ರಾತ್ಯಕ್ಷಿಕೆಗಳನ್ನು ತೋರಿಸಿ, ಜನರ ನಂಬಿಕೆಗಳಿಗೆ ಘಾಸಿಯಾಗದಂತೆ ಜನರ ಮನಸ್ಸು ಪರಿವರ್ತಿಸಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಸಫಲರಾಗಿದ್ದಾರೆ ಕೂಡ.
ಸಾವಯವ ಮಣ್ಣಿನಿಂದ ತಯಾರಿಸುವ ಗಣೇಶನ ವಿಗ್ರಹದಲ್ಲಿ ಮಂಜುನಾಥ್ ಅವರು ತರಕಾರಿ ಬೀಜ, ಅಥವಾ ತುಳಸಿಯ ಬೀಜಗಳನ್ನು ಇರಿಸಿಕೊಡುತ್ತಾರೆ. ಪುಟ್ಟ ಗಣೇಶ ಮೂರ್ತಿಯಾದರೆ ಬೀಜಗಳನ್ನು ಪ್ರತ್ಯೇಕ ಪೊಟ್ಟಣಗಳಲ್ಲಿ ಕೊಡುತ್ತಾರೆ. ಪೂಜೆ ಮುಗಿಸಿದ ಬಳಿಕ ಹಬ್ಬದ ದಿನ ಸಂಜೆ, ಗಣಪತಿದೇವರ ಮೂರ್ತಿಯನ್ನು ಒಂದು ದೊಡ್ಡ ಬಕೆಟ್ ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುವುದು ನಗರಗಳಲ್ಲಿ ವಾಡಿಕೆ ತಾನೇ. ಹೀಗೆ ವಿಸರ್ಜನೆ ಮಾಡಿದ ಗಣಪತಿ ವಿಗ್ರಹವು ಮರುದಿವಸ ಮಣ್ಣಾಗಿ ಪರಿವರ್ತನೆಯಾಗುತ್ತದೆ. ಯಾವುದೇ ರಾಸಾಯನಿಕಗಳ ಸೋಂಕಿಲ್ಲದ ಈ ಫಲವತ್ತಾದ ಮಣ್ಣಿನಲ್ಲಿ ಬೀಜಗಳನ್ನು ಹಾಕಿದಾಗ ಕೆಲವು ದಿನಗಳಲ್ಲಿ ಅದು ಮೊಳಕೆಯೊಡೆದು ಸಸಿಯಾಗುತ್ತದೆ. ದೊಡ್ಡ ಗಾತ್ರದ ಮೂರ್ತಿಯಾದರೆ, ಮೂರ್ತಿಯ ಒಳಭಾಗದಲ್ಲಿರುವ ಟೊಳ್ಳು ಜಾಗದಲ್ಲಿಯೇ ಮಂಜುನಾಥ್ ಅವರು ಬೀಜಗಳನ್ನು ಇರಿಸಿರುತ್ತಾರೆ. ಹೀಗೆ ವಿಸರ್ಜನೆಯ ನಂತರ ಸಿಗುವ ಮಣ್ಣನ್ನು ಪೋಷಿಸಿದರೆ ಕೆಲವೇ ದಿನಗಳಲ್ಲಿ ಹುಲುಸಾದ ಗಿಡ ಬೆಳೆಯುತ್ತದೆ.
ಮೀನಾಕ್ಷಿ ಪೂಜಾರ್ ಮದುವೆಯಾಗಿ ಧಾರವಾಡದ ಆಂಜನೇಯ ನಗರಕ್ಕೆ ಬಂದಾಗ ಗಂಡನ ಮನೆಯವರಿಗೂ ಪರಿಸರ ಸ್ನೇಹಿ ಮೂರ್ತಿಯ ಆರಾಧನೆಯ ಮಹತ್ವವನ್ನು ವಿವರಿಸಿದರು. ‘ನಾನು ಟೀಚರ್ ಕೆಲಸ ಮಾಡುತ್ತಿದ್ದೆ. ಆದ್ದರಿಂದ ನನ್ನ ಈ ಪ್ರಯತ್ನವನ್ನು ಅನೇಕ ಮಂದಿ ಮಕ್ಕಳು ಗಮನಿಸುತ್ತಿದ್ದರು. ರಾಸಾಯನಿಕ ಲೇಪಿಸಿದ ಗಣೇಶನನ್ನು ಬಳಸಬೇಡಿ ಎಂದು ಮಕ್ಕಳಿಗೆ ಹೇಳುತ್ತಿದ್ದೆ. ಆದರೆ ನಾನೇ ನುಡಿದಂತೆ ನಡೆಯಬೇಕಲ್ಲವೇ. ಇದೀಗ ಹಾವೇರಿಯಲ್ಲಿ ಅನೇಕ ಮನೆಗಳಲ್ಲಿ ಪರಿಸರ ಸ್ನೇಹೀ ಗಣೇಶನನ್ನು ಪೂಜಿಸುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ.
‘ಧಾರವಾಡದ ಮನೆಗೆ ಬಂದ ಬಳಿಕ, ಇತ್ತೀಚಿನ ವರ್ಷಗಳಲ್ಲಿ ಪ್ರತೀ ವರ್ಷ ಇಂತಹ ಬೀಜಯುಕ್ತ ಗಣೇಶನನ್ನೇ ಪೂಜಿಸಿದ್ದರು. ಹೀಗೆ ಪೂಜಿಸಿದ ಗಣೇಶ ವಿಗ್ರಹದ ಮಣ್ಣಲ್ಲಿ ರಾಗಿ, ಹೆಸರು ಕಾಳು, ಹೀರೇಕಾಯಿ, ಟೊಮೆಟೊ, ತುಳಸಿ ಹೀಗೆ ವಿವಿಧ ಗಿಡಗಳು ಬೆಳೆದಿವೆ. ‘ಒಂದಡಿ ಎತ್ತರದ ಮೂರ್ತಿಯನ್ನು ನಾವು ಪ್ರತೀ ವರ್ಷ ಮನೆಯಲ್ಲಿ ಪೂಜಿಸುತ್ತೇವೆ. ಈ ಮೂರ್ತಿಯ ಮಣ್ಣಲ್ಲಿ ಒಮ್ಮೆ ರಾಗಿ ಗಿಡಗಳು ಬೆಳೆದವು. ಮತ್ತೊಮ್ಮೆ ಪಚ್ಚೆ ಹೆಸರು ಕಾಳು ಮನೆಗೆ ತಕ್ಕಷ್ಟು ಬೆಳೆದೆವು. ಮತ್ತೊಂದು ವರ್ಷ ಹೀರೇಕಾಯಿ ಗಿಡ ಹುಟ್ಟಿ, ಬಳ್ಳಿಯೆಲ್ಲಾ ಹರಡಿ, ಬಳ್ಳಿ ತುಂಬಾ ಹೀರೇಕಾಯಿ ಆಗಿದ್ದವು. ನಮ್ಮ ಮನೆಗೂ ಅಕ್ಕಪಕ್ಕದ ಮನೆಗೂ ಪ್ರಸಾದ ರೂಪದಲ್ಲಿ ಕೊಟ್ಟೆವು’ ಎಂದು ಮೀನಾಕ್ಷಿ ನೆನಪಿಸಿಕೊಂಡರು. ಈ ವರ್ಷ ಮನೆಗೆ ತಂದ ಮೂರ್ತಿಯಲ್ಲಿ ಮಣ್ಣಿನಲ್ಲಿ ಯಾವ ಗಿಡ ಬೆಳೆಯಬಹುದು ಎಂಬ ಕುತೂಹಲ ಅವರಿಗಿದೆ. ಹನ್ನೊಂದು ದಿನಗಳ ಸುದೀರ್ಘ ಹಬ್ಬ ಅವರ ಮನೆಯಲ್ಲಿ ನಡೆಯಲಿದೆ.
ಹೀಗೆ ಸಾವಯವ ಸ್ವರೂಪದ ಮೂರ್ತಿಗಳನ್ನು ಮಾಡುವ ಮಂಜುನಾಥ್ ಹೀರೇಮಠ ಅವರದ್ದು ಈ ಕ್ಷೇತ್ರದಲ್ಲಿ ದೀರ್ಘವಾದ ಪಯಣ. ಕಳೆದ ವರ್ಷ ಮೂರ್ತಿಗಳು ಮನೆಯಲ್ಲಿಯೇ ಉಳಿದಾಗ ಅವರಿಗೆ ಅನೇಕ ಮಂದಿ ಅನಿವಾಸಿ ಕನ್ನಡಿಗರು ನೆರವಾಗಿದ್ದರು. ಗಣಪತಿದೇವರ ಆರಾಧಕರನೇಕರು ಆನ್ ಲೈನ್ ನಲ್ಲಿಯೇ ಪೂಜೆಗಳನ್ನು ಸಲ್ಲಿಸಿದ್ದರು. ಈ ಬಾರಿಯೂ ಇಂತಹ ವರ್ಚುವಲ್ ಪೂಜೆಗಳನ್ನು ನಡೆಸಲಿದ್ದಾರೆ. ಅಂದಹಾಗೆ ಅವರು ಈ ವರ್ಷ ತಯಾರಿಸಿ ಮಾರಿದ ಮೂರ್ತಿಗಳ ಸಂಖ್ಯೆ ಒಂದು ಸಾವಿರ.
ಇದೊಂಥರಾ ಜೀವ ತುಂಬಿದ ಗಣೇಶ ಮೂರ್ತಿಯ ಆರಾಧನೆ ಮಾಡಿದಂತೆ. ಅಂದರೆ ಹಬ್ಬದ ದಿನದಂದೇ ಸಂಜೆವೇಳೆಗೆ ಸಂಭ್ರಮವೆಲ್ಲವೂ ಮುಕ್ತಾಯವಾಗುವುದಿಲ್ಲ. ಬೀಜಗಳು ಮೊಳಕೆಯೊಡೆದವೇ ಎಂದು ನೋಡುವ ಮಕ್ಕಳು, ಅವು ಗಿಡವಾದಾಗ ನೀರು ಹಾಕಿ ಪೋಷಿಸುವ ಅಕ್ಕರೆ, ಫಲ ಮೂಡಿದಾಗ ಮೂಡುವ ಕೃತಾರ್ಥತೆ ಎಲ್ಲವೂ ಹಬ್ಬಕ್ಕೆ ಹೆಚ್ಚಿನ ಅರ್ಥವನ್ನು ಕೊಡುತ್ತವೆ. ಹಬ್ಬದ ಸಂಭ್ರಮವೇನಿದ್ದರೂ ಇಂತಹ ಕೃತಾರ್ಥತೆಯಲ್ಲಿದೆಯೇ ಹೊರತು, ವೈಭವದಲ್ಲಿ ಇಲ್ಲವಲ್ಲ.
ಅಂದಹಾಗೆ ಶರಧಿ ಬಲ್ಲಾಳ್ ಮನಸ್ಸು ಪರಿವರ್ತನೆ ಬದಲಾಗಲು ಕಾರಣ ಅವಳ ಮಗನೇ. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ವಿಗ್ರಹದಿಂದ ಆಗುವ ಸಮಸ್ಯೆಗಳ ಬಗ್ಗೆ ಶಾಲೆಯಲ್ಲಿ ಕೇಳಿ ತಿಳಿದುಕೊಂಡ ಮಗ ಶಶಾಂಕ್ ಸಾವಯವ ಗಣೇಶ ಮೂರ್ತಿ ತರುವಂತೆ ಆಗ್ರಹಿಸಿದ್ದ. ಬದಲಾವಣೆಗಳು ಹೀಗೆ ಮಕ್ಕಳಿಂದಾದರೂ ಆರಂಭವಾಗಲಿ ಎಂದು ಶರಧಿ, ತನ್ನ ಮನಸ್ಸು ಬದಲಾಯಿಸಿದ್ದರು.
ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಬಿ.ಎಸ್. ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ತಮ್ಮ ಹುಟ್ಟೂರು ಚಿತ್ರದುರ್ಗದಲ್ಲಿ ಸೂಪರ್ ಮಾರ್ಕೆಟ್ ತೆರೆದು, ಹುಟ್ಟೂರಿನಲ್ಲಿಯೇ ಬದುಕುವ ನಿರ್ಧಾರ ತೆಗೆದುಕೊಂಡವರು. ಈ ವರ್ಷ ಮೊತ್ತ ಮೊದಲ ಬಾರಿಗೆ ಸೀಡ್ ಗಣೇಶ ಅಂದರೆ ತುಳಸೀಬೀಜಗಳನ್ನು ಇರಿಸಿದ ಸಾವಯವ ಗಣೇಶ ವಿಗ್ರಹವನ್ನು ಪೂಜಿಸಲು ನಿರ್ಧರಿಸಿದ್ದಾರೆ. ‘ಬೆಂಗಳೂರಿನಲ್ಲಿ ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ರೋಷನ್ ರೇ ಅವರು ಕೊರಿಯರ್ ನಲ್ಲಿ ಸೀಡ್ ಗಣೇಶ ಮೂರ್ತಿಯನ್ನು ಕಳುಹಿಸಿದ್ದಾರೆ. ಸುಮಾರು ಎಂಟು ಇಂಚಿನಷ್ಟು ಎತ್ತರ ಇರುವ ಪುಟಾಣಿ ಗಣೇಶ ವಿಗ್ರಹದ ಬೆನ್ನಿನ ಭಾಗದಲ್ಲಿ ತುಳಸೀಬೀಜಗಳನ್ನು ಅಂಟಿಸಲಾಗಿದೆ. ಚೌತಿ ಪೂಜೆಯ ಬಳಿಕ, ವಿಗ್ರಹ ವಿಸರ್ಜನೆ ಮಾಡಿ, ಗಿಡಗಳನ್ನು ನಿರೀಕ್ಷಿಸುತ್ತಿರುತ್ತೇನೆ’ ಎಂದು ಸಂದೀಪ್ ಬಿ.ಎಸ್. ಸಂಭ್ರಮದಲ್ಲಿ ಹೇಳಿಕೊಂಡರು.
ರೋಷನ್ ರೇ ಮೂಲತಃ ಬಂಗಾಳದವರು. ಆದರೆ ಓದು, ಬದುಕು ಸಾಗಿಸಲು ಬೆಂಗಳೂರು ಆಸರೆಯಾಗಿದೆ. ಪರಿಸರಕ್ಕೆ ಸಂಬಂಧಿಸಿದ ಹತ್ತಾರು ಯೋಜನೆಗಳನ್ನು ನಿರ್ವಹಿಸುತ್ತಿರುವ ರೋಷನ್ ಅವರು, ಕಳುಹಿಸುವ ಪುಟ್ಟ ಗಣಪ, ಸೆಣಬಿನ ಚೀಲದಲ್ಲಿ ಮಣ್ಣಿನ ಎರಡು ಹಣತೆಗಳ ಜೊತೆಗೆ ಮನೆಯನ್ನು ಕೊರಿಯರ್ ಮೂಲಕವೇ ತಲುಪುತ್ತಾನೆ.
ಬದಲಾವಣೆ ನಮ್ಮಿಂದ ಶುರುವಾಗಲಿ ಅಲ್ಲವೇ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.