ಸಮಕಾಲೀನತೆಯ ಬಿಕ್ಕಟ್ಟುಗಳಿಗೆ ಯುವ ತಲೆಮಾರು ತಮ್ಮನ್ನು ತಾವು ಒಡ್ಡಿಕೊಳ್ಳುತ್ತ ಮುಂದೆ ಸಾಗಿರುವುದರಿಂದ ಹೊಸತಲೆಮಾರಿನ ಕತೆಗಾರರ ಜೀವನಾನುಭವದ ಸ್ವರೂಪ ಈಗ ಬೇರೆಯಾಗಿದೆ. ಅದಕ್ಕೆ ಇವರು ಇಲ್ಲಿ ಪುಸ್ತಕಕ್ಕೆ ಬಳಸಿದ ಶಿರೋನಾಮೆ ‘ಫೀಫೋ’ನೂ ಒಂದು ಸಣ್ಣ ಸಾಕ್ಷಿ. ಫೀಫೋ ಇದು ಕಂಪ್ಯೂಟರಿನ ಭಾಷೆ, ಫಸ್ಟ್ ಇನ್ ಫಸ್ಟ್ ಔಟ್. ನಮ್ಮ ನೆನಪುಗಳು ಮತ್ತು ಅನುಭವಗಳು ಸ್ಮೃತಿ ಪಟಲದಲ್ಲಿ ಸರತಿ ಸಾಲಿನಲ್ಲಿ ನಿಂತಿರುತ್ತವೆ, ಮೊದಲು ನಿಂತದ್ದು ಮೊದಲು ಹೊರಬರಲೇ ಬೇಕು.
ಮಧುಸೂದನ್ 
ವೈ.ಎನ್.‌ ಬರೆದ ‘ಫಿಫೋ’ ಕಥಾಸಂಕಲನದ ಕುರಿತು ಸುನಂದಾ ಪ್ರಕಾಶ್ ಕಡಮೆ ಬರೆದ ಬರಹ ಇಲ್ಲಿದೆ. 

 

ಹದಿನೈದಿಪ್ಪತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ನಡೆದ ಸಣ್ಣ ಕತೆಗಳ ಕುರಿತಾದ ವಿಚಾರ ಸಂಕೀರ್ಣವೊಂದರಲ್ಲಿ ಡಾ.ಕೀರ್ತಿನಾಥ ಕುರ್ತಕೋಟಿಯವರು ‘ಕನ್ನಡದ ನವೋದಯ ಕಾಲದಲ್ಲಿ ಭಾವಗೀತೆಗೆ ಹೇಗೋ ಹಾಗೆ ಈಗ ಸಣ್ಣ ಕತೆಗೆ ಪರ್ವಕಾಲ ಬಂದಂತಾಗಿದೆ’ ಅಂತ ಹೇಳಿದ್ದನ್ನು ಕೇಳಿದ್ದೆ. ಆ ಪರ್ವಕಾಲ ಇನ್ನೂ ನಿಂತಿಲ್ಲ, ಮಧುಸೂದನರಂತಹ ಕನ್ನಡದ ಹಲವಾರು ಹೊಸ ಕತೆಗಾರರಲ್ಲಿ ಅದು ಪ್ರವಹಿಸುತ್ತ ಮುನ್ನಡೆಯುತ್ತಿದೆ. ಫೀಫೋ ಹೆಸರೇ ಸೂಚಿಸುವಂತೆ ಇದೊಂದು ವಿಭಿನ್ನ ರೀತಿಯ ಕತೆಗಳ ಸಂಕಲನ. ವರ್ತಮಾನದ ಜೀವಂತ ಅನುಭವಗಳು ಇಂಥ ಯುವ ಕತೆಗಾರರನ್ನು ಈಗ ಕಾಡತೊಡಗಿವೆ. ಮತ್ತವು ಅಷ್ಟೇ ತಾಜಾ ಮತ್ತು ತನ್ನೊಳಗಿನ ಆಶಯದಲ್ಲಿ ವಿಭಿನ್ನತೆಯನ್ನು ಕಾಪಿಟ್ಟುಕೊಂಡಿದೆ. ಪುಸ್ತಕ ಕೈಲಿ ಹಿಡಿದರೆ ಅಲ್ಲಿಯ ಎಲ್ಲ ಕತೆಗಳನ್ನೂ ಓದಿ ಮುಗಿಸಿಯೇ ಕೆಳಕ್ಕಿಡಬೇಕು ಅನ್ನಿಸುವಷ್ಟು ಇಲ್ಲಿಯ ಲೋಕದಲ್ಲಿ ಬಹಳಷ್ಟು ಕಾಡಿಸುವ ಸಂಗತಿಗಳಿವೆ. ನಿರೂಪಣೆಯ ಹೊಸತನವನ್ನು ಸವಿಯಲು ನಾವು ಮಧುಸೂದನರಂತಹ ಕೆಲವು ಹೊಸಬರ ಕತೆಗಳನ್ನು ಓದಬೇಕಿದೆ. ಎಷ್ಟು ನಿರಾಳ ನಿರ್ಲಿಪ್ತ ಭಾವದಿಂದ ಕತೆ ಹೇಳುತ್ತಾರೆಂದರೆ, ಎಂಥ ಭಾವೋದ್ವೇಗದ ಸನ್ನಿವೇಶಗಳಲ್ಲೂ ಬದುಕಿನ ನಾನಾ ಮಗ್ಗುಲುಗಳನ್ನು ತೆರೆದು ತೋರುವ ಶಕ್ತಿಯನ್ನು ಇಲ್ಲಿಯ ಕತೆಗಳು ಪಡೆದುಕೊಳ್ಳುತ್ತವೆ.

(ಮಧುಸೂದನ ವೈ.ಎನ್.)

ಇದು ಮಧುಸೂದನ ವೈ.ಎನ್. ಅವರ ಎರಡನೆಯ ಕಥಾ ಸಂಕಲನ, ಈ ಹಿಂದೆ ಅವರು ಬರೆದ ‘ಕಾರೇ ಹಣ್ಣು’ ಮೊದಲ ಸಂಕಲನದ ಕತೆಗಳನ್ನು ನಾನು ಓದಿದ್ದೆ. ಆಗಲೇ ಅಲ್ಲಿ ಅವರು ಬಳಸಿದ ಮೈಮರೆಸುವ ಭಾಷೆಯನ್ನು ನಾನು ಮೆಚ್ಚಿದ್ದೆ. ಇಲ್ಲಿಯ ‘ಪಾದಗಳು’ ಎಂಬ ನನಗಿಷ್ಟದ ಒಂದು ಕತೆಯಲ್ಲಿ ‘ನೀನು ಭಾಷೆಯಿಂದ ಅರ್ಥ ಹುಟ್ಟಿಸಿಕೊಳ್ತಿದೀಯ, ನಾನು ಅರ್ಥದಿಂದ ಭಾಷೆ ವಿವರಿಸ್ತಿದೀನಿ’ ಎಂಬ ಒಂದು ಮಾತು ಬರುತ್ತದೆ. ಇಲ್ಲಿಯ ಕತೆಗಳಿಗೂ ಈ ಮಾತು ಅನ್ವಯಿಸುವಂತಿದೆ. ಕತೆಗಳು ಅದರ ಸಂವೇದನಾಶೀಲ ಭಾಷೆಯಿಂದಲೇ ವಿವಿಧ ಅರ್ಥವನ್ನು ಹೊಮ್ಮಿಸುತ್ತವೆ, ಹಾಗೆ ಸಿಗುವ ಅರ್ಥದಿಂದಲೇ ನಾವು ಭಾಷೆಯ ಆಂತರ್ಯವನ್ನು ಸವಿಯಬಹುದು. ಕೊನೆಗೂ ಕತೆಗಳು ಒಬ್ಬರಿಂದ ಇನ್ನೊಬ್ಬರಿಗೆ ದಾಟುವುದು ಇಂಥ ಪರಿಣಾಮಕಾರೀ ಭಾಷಾ ಮಾಧ್ಯಮದಿಂದಲೇ ಅಲ್ಲವೇ.

ಸಮಕಾಲೀನತೆಯ ಬಿಕ್ಕಟ್ಟುಗಳಿಗೆ ಯುವ ತಲೆಮಾರು ತಮ್ಮನ್ನು ತಾವು ಒಡ್ಡಿಕೊಳ್ಳುತ್ತ ಮುಂದೆ ಸಾಗಿರುವುದರಿಂದ ಹೊಸತಲೆಮಾರಿನ ಕತೆಗಾರರ ಜೀವನಾನುಭವದ ಸ್ವರೂಪ ಈಗ ಬೇರೆಯಾಗಿದೆ. ಅದಕ್ಕೆ ಇವರು ಇಲ್ಲಿ ಪುಸ್ತಕಕ್ಕೆ ಬಳಸಿದ ಶಿರೋನಾಮೆ ‘ಫೀಫೋ’ನೂ ಒಂದು ಸಣ್ಣ ಸಾಕ್ಷಿ. ಫೀಫೋ ಇದು ಕಂಪ್ಯೂಟರಿನ ಭಾಷೆ, ಫಸ್ಟ್ ಇನ್ ಫಸ್ಟ್ ಔಟ್, ಮೊದಲು ನಿಂತದ್ದು ಮೊದಲು ಹೊರ ಬರುತ್ತದೆ ಎಂದು ಮಧುಸೂದನ್ ಈ ಹೆಸರನ್ನು ಸಂಕಲನಕ್ಕೆ ಇಟ್ಟ ಉದ್ದೇಶದ ಕುರಿತು ವಿವರಿಸುತ್ತ ಹೇಳುತ್ತಾರೆ. ನಿಜ, ನಮ್ಮ ನೆನಪುಗಳು ಮತ್ತು ಅನುಭವಗಳು ಸ್ಮೃತಿ ಪಟಲದಲ್ಲಿ ಸರತಿ ಸಾಲಿನಲ್ಲಿ ನಿಂತಿರುತ್ತವೆ, ಮೊದಲು ನಿಂತದ್ದು ಮೊದಲು ಹೊರಬರಲೇ ಬೇಕು, ಹಾಗೆಯೇ ಇಲ್ಲಿಯ ಅದೇ ‘ಪಾದಗಳು’ ಕತೆಯಲ್ಲಿ ‘ಮನುಷ್ಯ ಸುಖವನ್ನಾಗಲೀ ದುಃಖವನ್ನಾಗಲೀ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು’ ಎಂಬ ಇನ್ನೊಂದು ಮಾತು ಬರುತ್ತದೆ. ಆದರೆ ಕತೆಗಳಲ್ಲಿ ಅವುಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ಧಾರಾಳವಾಗಿ ಹೊರಹಾಕಲು ಆಸ್ಪದವಿದೆ. ಕತೆಗಾರರಿಗೆ ತೀವ್ರವಾಗಿ ತಟ್ಟಿದ ಸಂಗತಿಗಳು ಸಹಜವಾಗಿಯೇ ಮೊದಲ ಸಾಲಿನಲ್ಲೇ ನಿಂತಿರುತ್ತವೆ, ಅಂತೆಯೇ ಅವೇ ನೈಜವಾಗಿ ಇಲ್ಲಿ ಮೈದಾಳಿವೆ.
ಹೀಗೆ ತನ್ನಿಂದ ತಾನೇ ಸೃಷ್ಟಿಸಿಕೊಂಡಿರುವ ಸಹಜ ಭಾಷೆಯಿಂದ ಇಲ್ಲಿಯ ಕತೆಗಳು ಓದಲು ತುಂಬ ಸಹನೀಯವೂ ಆಕರ್ಷಕವೂ ಆಗಿ ಸೆಳೆಯುವುದನ್ನು ನಾವು ಗಮನಿಸಿದರೆ, ಇಲ್ಲಿಯ ‘ಕಣಿವೆಯಲ್ಲೊಂದು ಸಂಜೆ’ ಕತೆಯಲ್ಲಿ, ಮಳೆಯ ರಾಣಾ ರಂಪಾಟದಲ್ಲಿ ಶಾಲೆಗೆ ರಜೆ ಇದ್ದಾಗ, ವಸತಿ ಶಾಲೆಯಲ್ಲಿ ಮಕ್ಕಳು ನಿರಾಳರಾಗಿ ಆಡುವ ಹರಟುವ ಉಣ್ಣುವ ಸಂದರ್ಭವನ್ನು ‘ಸ್ವರ್ಗಲೋಕವು ಶಾಲೆಯ ವಿರುದ್ಧ ದೂರು ದಾಖಲಿಸುವುದು ಸುಳ್ಳಲ್ಲ’ ಅಂತ ಲೇಖಕ ಬರೆಯುತ್ತಾರೆ. ಭಾಷೆಯನ್ನು ಒಂದು ರೂಪಕ ಶಕ್ತಿಯನ್ನಾಗಿ ಮಧು ಬಳಸಬಲ್ಲರು ಎಂಬುದಕ್ಕೂ ಇದು ಸಾಕ್ಷಿ, ಇಲ್ಲಿ ‘ಸುವರ್ಣ ನದಿ ತುಂಬಿದ ಗರ್ಭಿಣಿಯಾಗಿದ್ದಳು’ ಅನ್ನುವುದು ಕೂಡ, ಓದುಗರನ್ನು ತನ್ನೊಂದಿಗೆ ಸಂವಾದಕ್ಕೆ ಎಳೆಯುವಂಥವು.

ಇಲ್ಲಿಯ ಕೆಲವು ಕತೆಗಳಲ್ಲಿ ಮಧು ಬಳಸುವ ಪ್ರತಿಮೆಗಳಿಗೆ ನಾಟಕೀಯ ಸ್ವಭಾವಗಳು ದಕ್ಕುತ್ತವೆ, ಭ್ರಾಮಕ ಅನುಭವಗಳೋ ಅಥವಾ ನಿಜವೋ ಅಂತ ಅರಿಕೆಗೆ ಬರುವ ಮಂಚೇ ಅವುಗಳನ್ನು ಸಹಜ ಅನುಭವಗಳಾಗಿ ಪರಿವರ್ತಿಸುವ ರೀತಿ ಚೆನ್ನಾಗಿದೆ, ಇದಕ್ಕೆ ಉದಾಹರಣೆಯಾಗಿ ‘ಅನಾಹಿತ’ ಕತೆಯನ್ನು ನಾವಿಲ್ಲಿ ಓದಬಹುದು. ಬೋಜರಾಜನೆಂಬ ವೃದ್ಧ ಉದ್ಯಾನವದ ಕಾರಂಜಿಯ ನೀರು ಅನಾಹಿತಳಾಗಿ ಮಾರ್ಪಾಡಾಗಿ ಅನುಭವಿಸುವ ಸಂಕಟಗಳು ಇಲ್ಲಿದೆ, ಮನುಷ್ಯ ನೀರಾಗುವುದು, ನೀರು ಮನುಷ್ಯನಾಗುವುದು ಒಂದು ರೀತಿಯ ವಿಸ್ಮಯಕಾರೀ ದಾರಿ. ಸೃಜನಶೀಲತೆಯ ಪರಾಕಾಷ್ಠೆಯಲ್ಲಿ ಕಥೆ ಮಿಂದೇಳುತ್ತದೆ. ಇದು ನಮ್ಮೊಳಗೊಂದು ವಿಚಿತ್ರ ಬಗೆಯ ತಳಮಳವನ್ನು ಕೂಡ ಮಡುಗಟ್ಟಿಸುವಂಥದ್ದು. ಇಂಥ ಅಸಂಗತತೆಗಳು ಹೆಚ್ಚಾಗಿ ಕವಿತೆಗಳಲ್ಲಿ ಘಟಿಸುತ್ತಿರುತ್ತವೆ, ಹಾಗೆಯೇ ಇಂಥ ಕತೆಗಳನ್ನು ಒಂದು ಉತ್ತಮ ಕವಿತೆಯಂತೆಯೂ ನಾವು ಓದಿಕೊಳ್ಳಬಹುದು. ಇಲ್ಲೊಂದು ಸೂಕ್ಷ್ಮವೂ ಗಾಢವೂ ಆದ ಅರ್ಥಪೂರ್ಣ ವ್ಯಂಗ್ಯವಿದೆ.

ಕತೆಗಳು ಅದರ ಸಂವೇದನಾಶೀಲ ಭಾಷೆಯಿಂದಲೇ ವಿವಿಧ ಅರ್ಥವನ್ನು ಹೊಮ್ಮಿಸುತ್ತವೆ, ಹಾಗೆ ಸಿಗುವ ಅರ್ಥದಿಂದಲೇ ನಾವು ಭಾಷೆಯ ಆಂತರ್ಯವನ್ನು ಸವಿಯಬಹುದು. ಕೊನೆಗೂ ಕತೆಗಳು ಒಬ್ಬರಿಂದ ಇನ್ನೊಬ್ಬರಿಗೆ ದಾಟುವುದು ಇಂಥ ಪರಿಣಾಮಕಾರೀ ಭಾಷಾ ಮಾಧ್ಯಮದಿಂದಲೇ ಅಲ್ಲವೇ.

ಹೀಗೆ ಪುಟದಿಂದ ಪುಟಕ್ಕೆ ಹೊಸ ಕತೆಗಳು ಹುಟ್ಟಿಕೊಳ್ಳುವ ಬಗೆಯನ್ನು ನಾವು ಇಲ್ಲಿಯ ಮೊದಲ ಕತೆಯಾದ ‘ಒಂದು ಅ(ಸಹ್ಯ) ಕತೆ’ ಯಲ್ಲಿ ಕಾಣಬಹುದು. ಬೆಟ್ಟದಿಂದ ನಾವು ಪ್ರಪಾತಕ್ಕೆ ಹಾರುತ್ತಿರುವಾಗಲೇ ನಮಗೆ ರೆಕ್ಕೆಗಳು ಮೂಡಿಬಿಡಬಹುದು, ನಾವು ಕಥೆಯಲ್ಲಿ ನಾಯಕನನ್ನು ಖಳನಂತೆಯೂ ಖಳನನ್ನು ನಾಯಕನಂತೆಯೂ ಸೃಷ್ಟಿಸಬಹುದು, ಓದುಗ ಹಾಗೂ ಬರವಣಿಗೆಯ ಪ್ರಪಂಚದೊಳಗೇ ಸುತ್ತುವ ವಿಕ್ಷಿಪ್ತ ಕಥಾ ಪಾತ್ರಗಳು ಇಲ್ಲಿ ಮನುಷ್ಯನ ಸಹಜ ಗುಣ ಸ್ವಭಾವಗಳನ್ನು ನಾಜೂಕಾಗಿ ಹಿಡಿದಿಡುತ್ತ ಸಾಗುತ್ತವೆ. ಇಲ್ಲಿ ಹೇಳದೇ ಉಳಿದಿರುವ ಹಲವು ಕಥನಗಳ ವಿಸ್ತಾರಗಳು ಪಡೆಯುತ್ತ ಸಾಗುವ ಸಂಗತಿಗಳೇ ಇನ್ನೊಂದು ಹೊಸ ಕತೆಯ ಹುಟ್ಟಿಗೆ ಕಾರಣವಾಗುತ್ತವೆ. ಒಟ್ಟಾರೆಯಾಗಿ ಈ ಕತೆಯಲ್ಲಿ ಅನಾಮಿಕ ಬರಹಗಾರನೊಬ್ಬನ ಪ್ರಾಮಾಣಿಕ ಅನಿಸಿಕೆಗಳು ದಂಡು ದಂಡಾಗಿ ಪ್ರವೇಶ ಪಡೆದು ನಮ್ಮ ಓದುವ ಕ್ಷಣಗಳನ್ನು ಜಾಗ್ರತಗೊಳಿಸುತ್ತವೆ. ಇಲ್ಲಿಯ ಇಂಥ ಕೆಲವು ಕತೆಗಳಲ್ಲಿ ಒಂದು ಬೆರಗು ಇದೆ. ಒಂದು ಹೊಸತನ ಇದೆ. ವಿಶ್ಲೇಷಣೆಗೆ ವಿಮರ್ಶೆಗೆ ಒಡ್ಡಿಕೊಳ್ಳದ ವಿಲಕ್ಷಣ ಬಿಂಬಗಳಿವೆ.

ಇಲ್ಲಿ ಘಟಿಸುವ ಸಾವುಗಳು ಒಂದು ಬಗೆಯ ವಿಷಾದವನ್ನು ತುಂಬುವಂಥವು, ಪುನಃ ‘ಪಾದಗಳು’ ಕತೆಯನ್ನು ತೆಗೆದುಕೊಂಡರೆ, ಇಲ್ಲಿ ‘ಸಾರಿ ಡ್ಯಾಡ್’ ನ ನಿಜವಾದ ಅರ್ಥವೇನು? ಮಗನ ಆತ್ಮಹತ್ಯೆಗೆ ಕಾರಣ ಹುಡುಕದೇ ಅದನ್ನು ಮುಚ್ಚಿ ಹಾಕಲೋಸುಗ ಅವನ ತಂದೆ ಹೃದಯಾಘಾತ ಅಂತ ಬರೆಸುತ್ತಾನೆ, ಮಹಾಶ್ವೇತಾದೇವಿಯವರ ಹಜಾರ್ ಚೌರೇಶಿ ಮಾ ಕೃತಿಯಲ್ಲಿ ಕೂಡ ಆ ಹುಡುಗನ ತಂದೆ ಹೀಗೇ ವರ್ತಿಸುತ್ತಾನೆ. ಅಣ್ಣನ ಸಾವಿನ ಅರಿವೂ ಕೂಡ ಇಲ್ಲದ ಮುಗ್ಧ ತಂಗಿ ಅವನ ಶವವನ್ನು ಹೊತ್ತು ಸಾಗುತ್ತಿದ್ದ ವಾಹನದ ಹಾರ್ನ್ ಭಾರಿಸಿ ಭಾರಿಸಿ ಸಂತೋಷ ವ್ಯಕ್ತಪಡಿಸುತ್ತಿರುತ್ತಾಳೆ ಎಂಬಲ್ಲಿ ಕತೆಗಾರರು ‘ಸಾವಿನ ಘನತೆಗೆ ಕಪಾಳಕ್ಕೆ ಹೊಡೆದಂತಿತ್ತು’ ಎಂಬಂಥ ವಾಕ್ಯವನ್ನು ಬಳಸುತ್ತಾರೆ. ಅಂದರೆ ಸ್ವಂತ ಮಗನ ಸಾವಿಗಿಂತ ತನ್ನ ಪ್ರತಿಷ್ಠೆಗಳು ಹೇಗೆ ಮುಖ್ಯವಾಗುತ್ತವಲ್ಲ, ಅದು ಸಾವಿನ ಘನತೆಗೆ ಇರುವ ತೂಕವನ್ನು ಇಕ್ಕಟ್ಟಿನಲ್ಲಿ ನಿಲ್ಲಿಸುವಂಥದ್ದು.

ಹೀಗೆ ಸಾವು ತುಂಬ ಕತೆಗಳಲ್ಲಿ ಮತ್ತೆ ಮತ್ತೆ ತನ್ನ ಸತ್ಯದ ಹೊದಿಕೆಯನ್ನು ಬಿಚ್ಚಿಡುತ್ತದೆ. ಹಲವು ಬಾರಿ ಕತೆಗಳಲ್ಲಿ ನಾಯಿಗಳೂ ಹಾವುಗಳಂತಹ ಕೀಟಗಳೂ ಪಾತ್ರಗಳಾಗಿ ಬರುವದಿದೆ, ‘ಮುಸ್ಸಂಜೆಯಲ್ಲಿ ಜರುಗುವುದೆಲ್ಲ ಮಧುರ ಕತ್ತಲೆಗಳಲ್ಲ’ ಕತೆಯನ್ನು ನಾವಿಲ್ಲಿ ಹೆಸರಿಸಬಹುದು. ತುಂಬಿದ ಬೀದಿಯಲ್ಲಿ ಹಾವೊಂದು ಪ್ರತ್ಯಕ್ಷವಾದರೆ ಅಲ್ಲಿಯ ನಾಯಿಗಳ ಹಿಂಡು ಮತ್ತು ಅಲ್ಲಿಯ ಮನುಷ್ಯರು ಹೇಗೆ ವರ್ತಿಸುತ್ತಾರೆ ಎಂಬ ವಿವರಗಳು ಒಂದೊಳ್ಳೆಯ ಚಿತ್ರವಾಗಿ ಇಲ್ಲಿ ಕಣ್ಣು ತುಂಬುತ್ತದೆ, ಜೀವಿಯೊಂದು ಬೆಂಕಿಯಲ್ಲಿ ಹಾರಿ ಪ್ರಾಣತ್ಯಾಗ ಮಾಡುವಾಗ ಅಲ್ಲಿ ಮಡುಗಟ್ಟುವ ಮಿಡುಕಾಟದ ತೀಕ್ಷ್ಣ ಕಂಪನ ಹುಬೇಹೂಬಾಗಿ ಇಲ್ಲಿ ಮೂಡಿದೆ. ಕೋವಿಡ್ ಸಮಯದಲ್ಲಿ ಮನೆಯಲ್ಲಿರುವ ವೃದ್ಧರ ಪಾಡನ್ನು ಹೇಳುವ ಕತೆ ಎಂದರೆ ‘ಇರುಳ ರೆಕ್ಕೆಗಳು’ ಇಲ್ಲಿ ಮಧ್ಯದ ಮಗನ ಮನೆಯಲ್ಲಿ ವಾಸಿಸುವ ಅಜ್ಜಿಯೊಬ್ಬಳು, ಮಗ ಸೊಸೆ ಇಬ್ಬರೂ ಕೊವಿಡ್ ಪಾಸಿಟಿವ್‌ಗೆ ಒಳಗಾಗಿ ಆಸ್ಪತ್ರೆ ಸೇರಿ, ಅಲ್ಲಿಂದ ಬಹುದಿನಗಳ ನಂತರ ಹುಷಾರಾಗಿ ಮನೆಗೆ ಹಿಂತಿರುಗುವದರೊಳಗೆ, ಮನೆಯಲ್ಲಿಯ ಒಂಟಿ ಅಜ್ಜಿಯ ಮನಸ್ಥಿತಿಗಳನ್ನು ಅವಳ ಬಾಳಿನ ವೈರುಧ್ಯಗಳನ್ನು ಕರುಣಾಜನಕವಾಗಿ ಇಲ್ಲಿ ಹಿಡಿದಿದ್ದಾರೆ. ಹೀಗೆ ನಮ್ಮನ್ನು ತಟ್ಟುವ ಇಲ್ಲಿ ಹಲವರದು ಅಸಹಾಯಕ ಜೀವನ ಯಾತನೆಗಳು.

ಇಲ್ಲಿಯ ಕಥನ ಪ್ರಪಂಚ ಹೆಚ್ಚಾಗಿ ಕಾಡು ಮೇಡು ಬೆಟ್ಟ ಗುಡ್ಡಗಳಲ್ಲಿ ನಡೆಯುತ್ತದೆ. ಮಲೆನಾಡ ಪರಿಸರ ಬಿಡದೇ ತೀವ್ರವಾಗಿ ಕಾಡುತ್ತದೆ, ಬೆಟ್ಟದ ಮಧ್ಯೆ ಇರುವ ವಸತಿ ಶಾಲೆಯ ಪ್ರಿನ್ಸಿಪಾಲರು ಜವಾನರು ಹಾಗೂ ತುಂಟ ಮಕ್ಕಳು ಸ್ವಾರಸ್ಯಕರ ಘಟನೆಗಳನ್ನು ಅನುಭವಿಸುವ ಪರಿಯನ್ನು ಅಷ್ಟೇ ಆಸಕ್ತಿದಾಯಕವಾಗಿ ಹಿಡಿದಿಡುತ್ತಾರೆ. ಪ್ರತಿಯೊಬ್ಬ ಲೇಖಕನಿಗೆ ತನ್ನ ಬಾಲ್ಯ ಮತ್ತು ಅಂದಂದಿನ ಪರಿಸರ ಗಾಢವಾದ ಪ್ರಭಾವ ಬಿರುತ್ತದೆ. ಅಂಥದೊಂದು ಕತೆ ‘ಬೆಳ್ಳಿಗೆರೆ’ ಕಲ್ಲುಗುಡ್ಡ ಜೇನುಮಲೆಯಲ್ಲಿರುವ ಶಾಲೆ, ವಸತಿ ಶಾಲೆಯ ಅನುಭವಗಳು, ವಿದ್ಯಾರ್ಥಿಗಳಾದ ವಿನೋದ ಮತ್ತು ನವೀನ ಇಬ್ಬರ ಬಾಲ್ಯದ ತುಂಟಾಟಗಳು, ಬದುಕಿನ ಬಗ್ಗೆ ಅವರಿಗಿರುವ ಮುಗ್ಧ ನೋಟಗಳು ಇಲ್ಲಿ ಕಾಣುತ್ತವೆ, ಮತ್ತು ಅವರಿಬ್ಬರ ಪಾಲಕರಿಗೆ ತಮ್ಮ ಮಕ್ಕಳ ಶಿಕ್ಷಣದ ಕುರಿತಾಗಿರುವ ಅಪಾರ ಕಳಕಳಿ ಮೆಚ್ಚುವಂಥದ್ದು.

ತಾತ್ವಿಕ ಚಿಂತನೆಗಳನ್ನು ಉದ್ದೀಪಿಸುವ ತುಂಬ ಕುತೂಹಲಭರಿತ ಕತೆ ‘ಬೇಟೆ’. ತರುಣ, ಸಬುದ್ಧ-ಪ್ರಬುದ್ಧರಂಥ ಬೇಟೆಗಾರರು, ಹಿಮಕರಡಿ, ಹಾಗೂ ದೂರ ದೇಶದ ರಾಜ, ಗುರುಗಳು ತರುಣನಿಗೆ ನೀಡಿದ ಗಂಟು, ಇವಿಷ್ಟರಲ್ಲೇ ವಿಸ್ಮಯದ ಕತೆಯನ್ನು ಹೆಣೆದಿರುವ ಮಧುಸೂದನ ಸಹೃದಯಿಗಳನ್ನು ಹೊಸದೊಂದೇ ಲೋಕಕ್ಕೆ ಕರೆದೊಯ್ಯುತ್ತಾರೆ. ಹಾಗೆಯೇ ಇಲ್ಲಿಯ ‘ಓಯಾಸಿಸ್’ ಕತೆಯಲ್ಲಿ ಒಂದು ಮಾತು ಬರುತ್ತದೆ ‘ಮನುಷ್ಯನಿಗೆ ನ್ಯಾಯಕ್ಕಿಂತ ನಿಸರ್ಗದತ್ತ ಪ್ರೀತಿಯ ಹುಡುಕಾಟ ಮುಖ್ಯವಾಗಬೇಕು’ ಎಂಬ ಸಾಲು ಅದು, ಅಪರಾಧ ಹಾಗೂ ಅಪರಾಧೀ ಪ್ರಜ್ಞೆ, ಅದು ಮೀಟುವ ಸ್ವರಗಳು, ಎಬ್ಬಿಸುವ ಕಂಪನಗಳು ಹಲವು ಬಗೆಯಲ್ಲಿ ಯೋಚನೆಗೆ ಹಚ್ಚುವಂಥವು. ಹೀಗೆಯೇ ಸಹ ಜೀವನದಲ್ಲಿ ತುಂಬ ವರ್ಷಗಳ ಕಾಲ ಇರುವ ಜೋಡಿಗಳಿಬ್ಬರ ನಡುವಿನ ಸಂಬಂಧಗಳ ವಿವಿಧ ಮಗ್ಗಲುಗಳನ್ನು ತೆರೆದು ತೋರುವ ಕತೆ ‘ಪ್ರದಕ್ಷಿಣೆ’.

ತಲೆಮಾರುಗಳು ಅವಸಾನವಾದ ಕಥನವನ್ನು ಯಾವುದೇ ಅಸಹಜತೆಯಿಲ್ಲದೇ ಇಲ್ಲಿಯ ‘ಭವ್ಯ’ ಕತೆ ನಿರೂಪಿಸುತ್ತದೆ. ಕ್ರೂರಿ ತಂದೆಯಿಂದ ಶೋಷಣೆಗೊಳಗಾಗಿ ಹಿಂಸೆ ಅನುಭವಿಸುವ ಮಗನ ವ್ಯಥೆಯ ಕತೆ ಒಂದೆಡೆಯಾದರೆ, ಹೆಣ್ಣಿನ ಬದುಕನ್ನು ಕಟ್ಟಿಹಾಕುವ ಹುನ್ನಾರಗಳ ಪರಿಚಯವನ್ನು ಇನ್ನೊಂದೆಡೆಯಿಂದ ಮಾಡಿಕೊಡುತ್ತದೆ. ಅಂತಃಕರಣದ ಮನುಷ್ಯ ಸಂಬಂಧಗಳಿಗೆ ಮಾದರಿಯಾಗಿ ನಿಲ್ಲುವ ಕತೆ ‘ಕಣ್ಮಣಿಯ ಅಭಿಲಾಷೆ’. ‘ನಿರಾಳವಾಗುವುದು’ ಎಂಬ ಸಂಗತಿಗೆ ಒಬ್ಬೊಬ್ಬರಲ್ಲಿ ಒಂದೊಂದು ಅರ್ಥ, ನಾವೇ ಕಟ್ಟಿಕೊಂಡ ಈ ಚೌಕಟ್ಟಿನಿಂದ ಹೊರಬರಲು ಹವಣಿಸುವ ಮನುಷ್ಯ ಆಗಾಗ ಅಥವಾ ಒಂಟಿಯಾಗಿದ್ದಾಗ ನಾಗರಿಕತೆಯಿಂದ ನೈಜತೆಯತ್ತ ಹೊರಳುತ್ತಿರುತ್ತಾನೆ. ಅಂಥದ್ದೊಂದು ಮನಸ್ಥಿತಿಯನ್ನು ನಾವು ‘ಕೆಲವೊಮ್ಮೆ ಹೀಗಾಗಿ ಬಿಡುತ್ತದೆ’ ಕತೆಯ ಭಾಗ್ಯಮ್ಮಳಲ್ಲಿ ಕಾಣಬಹುದು. ಅವಳ ಬೆತ್ತಲೆ ಜಗತ್ತಿನ ಮನಸ್ಥಿತಿಯಲ್ಲಿ ಅರಳಿಕೊಳ್ಳುವ ಹೊಸತನವು ಹೊಸಹುಟ್ಟನ್ನು ಕೂಡ ಪಡೆಯಬಲ್ಲ ಅವಕಾಶವುಳ್ಳದ್ದು. ಹಾಗಾದರೆ ನಾಗರಿಕತೆಯೆಂಬುದು ಅಖಂಡವಾಗಿ ನಾವು ಕಟ್ಟಿಕೊಂಡ ಕೃತಕ ಜಗತ್ತೇ ಹಾಗಾದರೆ? ಎಂಬೆಲ್ಲ ಪ್ರಶ್ನೆಗಳನ್ನು ಈ ಕತೆ ಚರ್ಚೆಗೆ ತರುತ್ತದೆ.

ಹೀಗೆ ಮಧು ಅವರ ವಸ್ತು ವ್ಯಾಪ್ತಿ ದೊಡ್ಡದು. ಇಲ್ಲಿ ವಿಷಯ ವೈವಿಧ್ಯಗಳಿವೆ ಅಂತೆಯೇ ಇಲ್ಲಿಯ ಧಾಟಿ ಹೊಸತನದ್ದು, ಒಂದೆರಡು ಪ್ಯಾರಗಳಲ್ಲೇ ಇಡಿಯಾದ ಘಟನೆಗಳನ್ನು ಕಟೆದು ನಿಲ್ಲಿಸುವ ಚಿತ್ರಕ ಶಕ್ತಿ ಮಧು ಅವರಲ್ಲಿದೆ. ಯಾವುದೇ ಅಬ್ಬರವಿಲ್ಲದೆ ತುಂಬ ಆಪ್ಯಾಯಮಾನವಾಗಿ ತಮ್ಮ ಕತೆಗಳನ್ನು ಅವರು ಓದುಗರಿಗೆ ದಾಟಿಸುತ್ತಾರೆ, ಕತೆಗಳ ಮಣ್ಣಿನ ಗುಣ, ಪಾತ್ರ ಮತ್ತು ಜೀವಂತ ಭಾಷೆಗಳಿಂದಾಗಿ ಕತೆಗಳು ಓದುಗರಿಗೆ ಸಂತೋಷ ನೀಡುವಲ್ಲಿ ಸಫಲವಾಗುತ್ತವೆ. ಎಲ್ಲ ಒಟ್ಟಿಗೇ ಓದಿದಾಗ ಕತೆಗಾರರ ಬಾಲ್ಯದ ಬಹುದೊಡ್ಡ ಜಗತ್ತು ತೆರೆದುಕೊಳ್ಳುತ್ತದೆ. ಬರವಣಿಗೆಯಲ್ಲಿರುವ ಸೃಜನಶೀಲತೆ ಕತೆಯನ್ನು ಎಲ್ಲಿಯೂ ದುರ್ಬಲವಾಗಿಸಲು ಬಿಡುವುದಿಲ್ಲ, ಇದೇ ಕತೆಗಾರನ ಶಕ್ತಿ, ಜೀವನದ ಬಗೆಬಗೆಯ ಅನುಭವಗಳನ್ನು ಪ್ರತಿಬಿಂಬಿಸುವ ಇಲ್ಲಿನ 13 ಕತೆಗಳಲ್ಲಿ ಮನುಷ್ಯ ಮನುಷ್ಯರ ಮಧ್ಯೆಯ ಅವಿನಾಭಾವ ಸಂಬಂಧಗಳ ಶೋಧನೆ ಎದ್ದು ಕಾಣುತ್ತದೆ. ಒಟ್ಟಾರೆಯಾಗಿ ಮಧುಸೂದನ ಅವರ ಕಥೆ ಕಟ್ಟುವ ಈ ಬಗೆಯ ಆದ್ರ ಕೌಶಲ್ಯವನ್ನು ಮೆಚ್ಚಲೇಬೇಕು ಅನ್ನಿಸುವಂತಿದೆ.

(ಕೃತಿ: ಫೀ ಫೋ (ಕಥಾ ಸಂಕಲನ), ಲೇಖಕರು: ಮಧುಸೂದನ ವೈ.ಎನ್.‌, ಪ್ರಕಾಶನ: ಬಹುರೂಪಿ, ಬೆಲೆ: 200/-)