ಈ ಬಾರಿಯ ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಈಗಾಗಲೇ ಅಭ್ಯರ್ಥಿಗಳು ಬಂದಾಗಿದೆ, ಹೊಸದಾಗಿ ಇನ್ಯಾರು ಬರುವುದಿದೆ ಎಂದು ಯೋಚಿಸಿದಾಗ, ಗುರುದೇವರು ಇನ್ನಿಬ್ಬರು ಬರುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಜಯಕ್ಕನ ಸಮಾಧಿಯಿಂದ ಗುರುದೇವರ ನಿವಾಸಕ್ಕೆ ಮಾತಾಜೀಯವರು ಹೋಗಿ ತಮ್ಮ ಮನಸ್ಸಿನಲ್ಲಿದದ್ದನ್ನು ಹೇಳುವ ಮೊದಲೇ, ‘ದಕ್ಷಿಣ ಕಡೆಯಿಂದ ಒಬ್ಬ ಬರ್ತಾನೆ. ಅವನಿಗೆ ಸಾಧನೆಗಳನ್ನ ಮಾಡಿಸಿ, ಮೌನ ಕಾರ್ಯಕ್ರಮಕ್ಕೆ ತಯಾರು ಮಾಡಬೇಕು. ಅವನ ಬಗ್ಗೆ ನೀವು ವಿಶೇಷವಾಗಿ ಗಮನವಿಡಿ’ ಎಂದು ಹೇಳಿದರು.
ಸುಪ್ರೀತ್ ಕೆ.ಎನ್. ಅವರ ಹೊಸ ಕಾದಂಬರಿ ‘ಉತ್ತರ’ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

 

ಸ್ಕಂದ ಹೃಷಿಕೇಶದಲ್ಲಿ ಬಸ್ಸಿನಿಂದ ಇಳಿದಾಗ ಜೋರು ಮಳೆ. ಬಸ್ ನಿಲ್ದಾಣದಲ್ಲಿ ಪಾದಗಳು ಮುಳುಗುವಷ್ಟು ನೀರು ತುಂಬಿತ್ತು. ಸುತ್ತಲು ಏನಿದೆ ಎಂದು ನೋಡಲು ಕೂಡ ಬಿಡದೇ ಮಳೆಯು ಅವನ ಮುಖಕ್ಕೆ ಬಾರಿಸುತ್ತಿತ್ತು. ಆ ಪ್ರದೇಶದಲ್ಲಿ ಮಳೆ ಬಹಳ ಸಹಜವಾದ್ದರಿಂದ ಜನ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಲೇ ಇದ್ದರು. ಮಳೆಯ ಮಧ್ಯೆ ಮನುಷ್ಯರ ಆಕೃತಿ ಅಸ್ಪಷ್ಟವಾಗಿ ಅವನಿಗೆ ಕಂಡಿತು. ಅಲ್ಲೇ ನಡೆದು ಹೋಗುತ್ತಿದ್ದವನನ್ನು ಉತ್ತರಾಶ್ರಮ ಎಷ್ಟು ದೂರವಾಗುತ್ತೆ ಎಂದು ಕೇಳಿದ. ಆ ವ್ಯಕ್ತಿ ಎರಡು ಕಿಲೋಮೀಟರ್ ಎಂದ. ಚೆನ್ನಾಗಿ ನಡೆದು, ಪರ್ವತಗಳನ್ನು ಹತ್ತಿ-ಇಳಿದು ಅಭ್ಯಾಸವಾಗಿದ್ದ ಅವನಿಗೆ ಎರಡು ಕಿಲೋಮೀಟರ್ ನಡೆಯುವುದು ಕಷ್ಟವಾಗಿರಲಿಲ್ಲ. ಆದರೆ ಆದಷ್ಟು ಬೇಗ ಆಶ್ರಮ ನೋಡಬೇಕು ಎನ್ನುವ ಕುತೂಹಲದಿಂದ ಅವನಿಗೆ ನಡೆಯುವಷ್ಟು ತಾಳ್ಮೆಯಿರದೆ, ಆಟೋದಲ್ಲಿ ಹೋಗಲು ತೀರ್ಮಾನಿಸಿ, ಬಸ್ ನಿಲ್ದಾಣದಿಂದ ಹೊರಗೆ ಬಂದ.

ಸ್ಕಂದ ಬಸ್ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆಯೇ, ಆಟೋದವರು, “ಎಲ್ಲಿ? ಎಲ್ಲಿ?’’ ಎಂದು ಹಿಂದಿಯಲ್ಲಿ ಕೇಳುತ್ತಾ ಅವನ ಸುತ್ತ ಮುತ್ತಿಕೊಂಡರು. ಸ್ಕಂದ, “ಉತ್ತರಾಶ್ರಮ’’ ಎಂದ. ಆಟೋದವರು, ‘ನಾನು ಹೋಗ್ತೀನಿ… ನಾನು ಹೋಗ್ತೀನಿ…’ ಎಂದು ತಮ್ಮಲ್ಲೇ ಮಾತನಾಡಿಕೊಂಡು, ಕಡೆಗೂ ಯಾರು ಹೋಗಬೇಕೆಂದು ತೀರ್ಮಾನಿಸಿಕೊಂಡರು. ಸ್ಕಂದ ಚಾಲಕ ತೋರಿಸಿದ ಆಟೋ ಹತ್ತಿದ. ಆಟೋದ ಎರಡೂ ಕಡೆಗೂ ಟಾರ್ಪಲ್ಲನ್ನು ನೇತು ಹಾಕಲಾಗಿತ್ತು. ಒಳಗೆ ಕುಳಿತಿರುವ ಪ್ರಯಾಣಿಕರು ನೆನೆಯಬಾರದೆಂದು ಅದನ್ನು ನೇತು ಹಾಕಿದ್ದರು. ಅವನು ಟಾರ್ಪಲ್ ಸರಿಸಿ ಒಳಗೆ ಹತ್ತಿ ಕುಳಿತ. ಆಟೋ ನಿಧಾನವಾಗಿ ಉತ್ತರಾಶ್ರಮದ ಕಡೆ ಚಲಿಸಿತು. ಅವನು ಆಗೊಮ್ಮೆ ಈಗೊಮ್ಮೆ ಟಾರ್ಪಲ್ ಸರಿಸಿ, ರಸ್ತೆಯನ್ನು ನೋಡುತ್ತಿದ್ದ.

(ಸುಪ್ರೀತ್ ಕೆ.ಎನ್.)

ಉತ್ತರಾಶ್ರಮದಿಂದ ನೂರು ಅಡಿ ದೂರದಲ್ಲಿ ಆಟೋ ನಿಂತಿತು. ಅಲ್ಲಿಂದ ಮುಂದಕ್ಕೆ ಆಶ್ರಮದ ವಾಹನಗಳಿಗಳಷ್ಟೇ ಪ್ರವೇಶವಿತ್ತು. ಸ್ಕಂದ ಆಟೋದಿಂದ ಇಳಿದು, ಚಾಲಕನಿಗೆ ದುಡ್ಡು ಕೊಟ್ಟು, ಆಶ್ರಮದ ಕಡೆ ಹೆಜ್ಜೆ ಹಾಕಿದ. ಪ್ರತಿಹೆಜ್ಜೆಯನ್ನು ಇಡುವಾಗಲು ಅವನಿಗೆ ರೋಮಾಂಚನ. ಗುರುದೇವರ ಲೇಖನಗಳನ್ನು ಓದಿದ್ದ. ಅವರ ಸಂದರ್ಶನಗಳನ್ನು ನೋಡಿದ್ದ. ಆಶ್ರಮದ ವೀಡಿಯೋಗಳನ್ನು ನೋಡಿದ್ದ. ಸಹನಾಳಿಂದ ಆಶ್ರಮದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ. ಅವಳೂ ಆಶ್ರಮ ನೋಡಿರಲಿಲ್ಲ. ಆದರೂ ಇಲ್ಲಿ ಕೆಲವರ ಸಂಪರ್ಕವಿದೆ ಎಂದು ಹೇಳಿದ್ದಳು. ಅವಳು ನನ್ನನ್ನು ಒಪ್ಪಿ, ಇಬ್ಬರೂ ಒಟ್ಟಿಗೆ ಆಶ್ರಮಕ್ಕೆ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಮದುವೆಯೇ ಆಗಲ್ಲ ಎನ್ನುತ್ತಾಳೆ ಎಂದುಕೊಳ್ಳುವಾಗ ಸಣ್ಣಗೆ ನೋವು ಕಾಣಿಸಿಕೊಳ್ಳಲು ಶುರುವಾಯಿತು. ಬೇಡ, ಅವಳ ಬಗ್ಗೆ ಯೋಚನೆಯೇ ಬೇಡ. ಸುಮ್ಮನೆ ಹಿಂಸೆಯಾಗುತ್ತೆ ಎಂದುಕೊಂಡು ಆಶ್ರಮದ ಮುಂದೆ ಬಂದು ನಿಂತಾಗ ಮತ್ತಷ್ಟು ರೋಮಾಂಚನವಾಯಿತು. ಜೋರಾಗಿ ಸುರಿಯುತ್ತಿದ್ದ ಮಳೆಯು ಮುಖಕ್ಕೆ ಬಾರಿಸುತ್ತಿದ್ದರೂ; ಕಷ್ಟಪಟ್ಟು ಕಣ್ಣು ಅರಳಿಸಿ ನೋಡಿದ. `ಉತ್ತರಾಶ್ರಮ’ ಎಂದು ಸಂಸ್ಕೃತದಲ್ಲಿ ದಪ್ಪ ಅಕ್ಷರಗಳಲ್ಲಿ ಬರೆದಿತ್ತು. ಅದರ ಕೆಳಗೆ ಚಿಕ್ಕ ಅಕ್ಷರಗಳಲ್ಲಿ ಇಂಗ್ಲಿಷ್, ಹಿಂದಿ ಹಾಗೂ ದಕ್ಷಿಣ ಭಾರತದ ಭಾಷೆಗಳಲ್ಲಿ ಬರೆದಿತ್ತು. ಅಲ್ಲಲ್ಲಿ ಗುರುದೇವರ ದೊಡ್ಡ ಭಾವಚಿತ್ರಗಳು. ಬಿಳಿ ಬಟ್ಟೆ ಧರಿಸಿ, ಕೊಡೆ ಹಿಡಿದುಕೊಂಡು ಓಡಾಡುತ್ತಿರುವ ಸ್ವಯಂಸೇವಕರು ಕಂಡರು.

ಸ್ಕಂದ ಆಶ್ರಮದ ಒಳಗೆ ಹೋದ. ಬೆಂಗಳೂರಿನಲ್ಲಿ ತನ್ನ ಮನೆಯ ಹತ್ತಿರವಿದ್ದ ರಾಮಕೃಷ್ಣಾಶ್ರಮಕ್ಕೆ ಹೋಗಿದ್ದು ಬಿಟ್ಟರೆ; ಇನ್ಯಾವ ಆಶ್ರಮಕ್ಕೂ ಅವನು ಹೋಗಿರಲಿಲ್ಲ. ರಾಮಕೃಷ್ಣಾಶ್ರಮ ಇದರಷ್ಟು ದೊಡ್ಡದಿರಲಿಲ್ಲ: ಗೇಟಿನೊಳಗೆ ಪ್ರವೇಶಿಸುತ್ತಿದ್ದಂತೆಯೇ ಎದುರಿಗೆ ಮಂದಿರ ಕಾಣುತ್ತಿತ್ತು. ಆದರೆ ಇಲ್ಲಿ ಟಾರು ರಸ್ತೆಯಿದೆ. ಸುತ್ತಮುತ್ತ ಮಂದಿರಗಳು ಕಾಣುತ್ತಿಲ್ಲವಲ್ಲ ಎಂದುಕೊಳ್ಳುವಾಗಲೇ ಮಳೆಯ ನಡುವೆ ಅಸ್ಪಷ್ಟವಾಗಿ ಎತ್ತರವಾದ ಶ್ರೀಚಕ್ರಯಂತ್ರ ಕಾಣಿಸಿತು. ಶ್ರೀಚಕ್ರ ಯಂತ್ರದ ಬಗ್ಗೆ ಅಪಾರ ಭಕ್ತಿಯಿದ್ದು, ಅದನ್ನು ಪೂಜಿಸುತ್ತಿದ್ದ ಅವನು; ಅದನ್ನು ನೋಡುತ್ತಿದ್ದಂತೆ ಕೈಮುಗಿದ. ಅದನ್ನು ಸ್ಥಾಪಿಸುವಾಗ ಎಷ್ಟೆಲ್ಲಾ ಧ್ಯಾನ-ಜಪಗಳು ನಡೆದಿವೆ ಎಂದು ಸಹನಾ ಹೇಳಿದ್ದು ನೆನಪಾಗಿ ಮತ್ತಷ್ಟು ಭಕ್ತಿ ಮೂಡಿತು. ಶ್ರೀಚಕ್ರಯಂತ್ರದ ಮಂದಿರದೊಳಗೆ ಹೋಗಿ ದೇವಿಯ ದರ್ಶನ ಮಾಡಬೇಕು ಎಂದುಕೊಂಡ. ಆದರೆ ಸ್ನಾನವಾಗಿರಲಿಲ್ಲ. ಮೊದಲು ಸ್ನಾನ ಮಾಡಿ ನಂತರ ಹೋಗೋಣವೆಂದು ನಿರ್ಧರಿಸಿದ. ಮಳೆಯಲ್ಲಿ ನೆನೆಯುತ್ತಲೇ ಇದ್ದೀನಿ ಇನ್ನೆಂಥ ಸ್ನಾನವೆಂದು ಕೊಂಡರೂ; ಮನಸ್ಸು ಒಪ್ಪಲಿಲ್ಲ.

ಸ್ಕಂದ ಈಗ ಆಶ್ರಮದೊಳಗೆ ಬಂದಾಗಿತ್ತು. ಇಲ್ಲಿ ಉಳಿಯಲು ಯಾರನ್ನು ವಿಚಾರಿಸಬೇಕು ಎಂದು ತಿಳಿಯಲಿಲ್ಲ. ಗೇಟಿನ ಬಳಿಯಿದ್ದ ಕಾವಲುಗಾರನ ಹತ್ತಿರ ಹೋದ. ಅವನು “ನಮಸ್ತೆ ಸಾಬ್” ಎಂದ. ಇವನು ತನಗೆ ಬರುತ್ತಿದ್ದ ಅಲ್ಪಸ್ವಲ್ಪ ಹಿಂದಿಯಲ್ಲಿ, “ಆಶ್ರಮದಲ್ಲಿ ಒಂದು ವಾರ ಇರೋಕೆ ಯಾರನ್ನ ಕೇಳಬೇಕು’’ ಎಂದು ವಿಚಾರಿಸಿದ. ಆತ ಇದೇ ರಸ್ತೆಯಲ್ಲಿ ಹೋದರೆ ಎಡಕ್ಕೆ ಒಂದು ಕಛೇರಿಯಿದೆ, ಅಲ್ಲಿ ವಿಚಾರಿಸಿ” ಎಂದು ಹೇಳಿದ. ಕಾವಲುಗಾರ ತೋರಿಸಿದ ದಾರಿಯಲ್ಲಿ ಇವನು ನಡೆದ.

ಬೆಂಗಳೂರಿನಲ್ಲಿ ಆಧುನಿಕ ಶೈಲಿಯ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿದ್ದ ಅವನಿಗೆ; ಈ ಆಶ್ರಮದ ಕಟ್ಟಡಗಳ ವಿನ್ಯಾಸ ಬಹಳ ಇಷ್ಟವಾಯಿತು. ಎಲ್ಲೂ ಆಧುನಿಕ ಶೈಲಿಯನ್ನು ಬಳಸದೆ ಸುಮಾರು ಐವತ್ತು ವರ್ಷಗಳ ಹಿಂದಿನ ವಿನ್ಯಾಸವನ್ನು ಬಳಸಿದ್ದರು. ರಸ್ತೆಯ ಎರಡು ಭಾಗಗಳಲ್ಲೂ ಹುಲ್ಲು, ಅಲ್ಲಲ್ಲಿ ಕೂರಲು ಕಲ್ಲು ಬೆಂಚು, ಅದರ ಪಕ್ಕದಲ್ಲೇ ಕಸದ ಡಬ್ಬ, ಎಷ್ಟು ಮಳೆ ಸುರಿದರೂ ನೀರನ್ನು ಇಂಗಿಕೊಳ್ಳುವ ಚಿಕ್ಕ ಗುಂಡಿಗಳು.

ಸ್ಕಂದ ಕಾವಲುಗಾರ ಹೇಳಿದ ಕಛೇರಿಗೆ ಹೋದ. ಹೊರಗಿನಿಂದ ಹಳೆ ಶೈಲಿಯಲ್ಲಿ ವಿನ್ಯಾಸ ಮಾಡಿರುವ ಕಟ್ಟಡವಾದರೂ; ಒಳಗೆ ಹೋಗುತ್ತಿದ್ದಂತೆಯೇ ಅತ್ಯಾಧುನಿಕ ಕಂಪ್ಯೂಟರ್‍ಗಳಿರುವುದು ಅವನ ಕಣ್ಣಿಗೆ ಬಿತ್ತು. ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಬೇಕು, ಈ ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿರುವ ಶಾಖೆಗಳನ್ನೆಲ್ಲ ನಿಭಾಯಿಸಬೇಕು, ಸಾವಿರಾರು ಸ್ವಯಂಸೇವಕರು ಆಶ್ರಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಇಂಥ ಅತ್ಯಾಧುನಿಕ ಕಂಪ್ಯೂಟರ್‍ಗಳ ಅವಶ್ಯಕತೆ ಖಂಡಿತಾ ಇರುತ್ತದೆ ಎಂದು ಅವನು ಬೇಗನೇ ಅರ್ಥ ಮಾಡಿಕೊಂಡ.

ಕಛೇರಿಯ ಒಳಗೆ ಇಬ್ಬರು ಸ್ವಾಮಿಗಳು, ಒಬ್ಬರು ಮಾತಾಜೀ ಮತ್ತು ನಾಲ್ಕು ಸ್ವಯಂ ಸೇವಕರು ಕುಳಿತಿದ್ದರು. ಸ್ಕಂದ ಒಬ್ಬ ಸ್ವಯಂ ಸೇವಕನ ಬಳಿ ತನ್ನ ಹೆಸರು ಹೇಳಿ, ಊರು ಹೇಳಿ, ಒಂದು ವಾರದ ಮಟ್ಟಿಗೆ ಆಶ್ರಮದಲ್ಲಿ ಉಳಿಯಲು ಬಂದಿದ್ದೀನಿ. ಕಳೆದ ವಾರವೇ ಕರೆ ಮಾಡಿದ್ದೆ, ರೂಮುಗಳು ಖಾಲಿ ಇಲ್ಲವೆಂದು ಒಂದು ವಾರ ಬಿಟ್ಟು ಬರಲು ಹೇಳಿದರು, ಹಾಗಾಗಿ ಈಗ ಬಂದಿದ್ದೀನಿ, ಅವಕಾಶ ಕೊಟ್ಟರೆ ಸೇವೆ ಮಾಡುತ್ತೀನಿ ಎಂದು ಹೇಳಿದ. ಅಲ್ಲೇ ಕುಳಿತಿದ್ದ ಮಾತಾಜೀ, ಕೆಲವು ಕ್ಷಣಗಳು ಇವನ ಮುಖ ನೋಡಿ, ಇವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು, “ನನ್ನ ಹೆಸರು ಚಂದ್ರಹಾಸ ಮಾತಾಜೀ. ಸೇವೆ ಮಾಡುವುದರ ಬಗ್ಗೆ ನಾನು ಸಂಜೆ ಮಾತಾಡ್ತೀನಿ. ಈಗ ಸದ್ಯಕ್ಕೆ ಗೆಸ್ಟ್ ರೂಮಿನಲ್ಲಿ ನಿಮ್ಮ ಬ್ಯಾಗಿಟ್ಟು, ಮಂದಿರಗಳ ದರ್ಶನ ಮಾಡಿ. ನಂತರ ಆರು ಮುಕ್ಕಾಲರ ಹೊತ್ತಿಗೆ ಭೋಜನಾಲಯದಲ್ಲಿ ಊಟ ಮಾಡಿ…” ಎಂದರು. ಮಾತಾಜೀ ಪ್ರತಿ ಪದವನ್ನು ನಿಧಾನವಾಗಿ ಮೃದುವಾಗಿ ಮುಖದ ಮೇಲೊಂದು ನಗುವಿಟ್ಟುಕೊಂಡು ಹೇಳಿದರು. ಜೊತೆಗೆ ಕನ್ನಡದಲ್ಲಿ ಮಾತನಾಡಿದರು. ಇವನಿಗೆ ಅದರಿಂದ ಆಶ್ಚರ್ಯ ಮತ್ತು ಆನಂದವಾಯಿಗಿ, “ಸರಿ” ಎಂದ. ಮಾತಾಜೀ ಸ್ವಯಂ ಸೇವಕನಿಗೆ, ಅತಿಥಿ ಗೃಹವನ್ನು ತೋರಿಸಲು ಹೇಳಿದರು. ಇವನು ಸ್ವಯಂ ಸೇವಕನ ಜೊತೆ ಅಥಿತಿ ಗೃಹದ ಕಡೆ ಹೊರಟ.

ಚಂದ್ರಹಾಸ ಮಾತಾಜೀ ಕೈಯಲ್ಲಿ ಕೊಡೆಯನ್ನು ಹಿಡಿದು ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ಆಶ್ರಮದ ಹಿಂಭಾಗಕ್ಕೆ ಹೋದರು. ಈ ದಿನ ಬೆಳಿಗ್ಗೆ ಅವರು ಜಯಕ್ಕನ ಸಮಾಧಿಯ ಬಳಿ ಹೋಗಿ ಕುಳಿತ್ತಿದ್ದಾಗಲೇ; ಇಂದು ಆಶ್ರಮಕ್ಕೆ ಯಾರೋ ಬರುತ್ತಾರೆ, ಅವರಿಗೆ ಮಾರ್ಗದರ್ಶನದ ಅಗತ್ಯವಿದೆ ಎಂದು ಅವರಿಗೆ ಅನ್ನಿಸಿತ್ತು. ಈ ಬಾರಿಯ ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಈಗಾಗಲೇ ಅಭ್ಯರ್ಥಿಗಳು ಬಂದಾಗಿದೆ, ಹೊಸದಾಗಿ ಇನ್ಯಾರು ಬರುವುದಿದೆ ಎಂದು ಯೋಚಿಸಿದಾಗ, ಗುರುದೇವರು ಇನ್ನಿಬ್ಬರು ಬರುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಜಯಕ್ಕನ ಸಮಾಧಿಯಿಂದ ಗುರುದೇವರ ನಿವಾಸಕ್ಕೆ ಮಾತಾಜೀಯವರು ಹೋಗಿ ತಮ್ಮ ಮನಸ್ಸಿನಲ್ಲಿದದ್ದನ್ನು ಹೇಳುವ ಮೊದಲೇ, ‘ದಕ್ಷಿಣ ಕಡೆಯಿಂದ ಒಬ್ಬ ಬರ್ತಾನೆ. ಅವನಿಗೆ ಸಾಧನೆಗಳನ್ನ ಮಾಡಿಸಿ, ಮೌನ ಕಾರ್ಯಕ್ರಮಕ್ಕೆ ತಯಾರು ಮಾಡಬೇಕು. ಅವನ ಬಗ್ಗೆ ನೀವು ವಿಶೇಷವಾಗಿ ಗಮನವಿಡಿ’ ಎಂದು ಹೇಳಿದರು. ಗುರುದೇವರಿಗೆ ಹೊಸದಾಗಿ ಹೇಳುವುದು ಏನಿದೆ? ಅವರಿಗೇ ಎಲ್ಲಾ ಗೊತ್ತು ಎಂದುಕೊಳ್ಳುತ್ತಾ ಮಾತಾಜೀ. ‘ಸಾಕ್ಷಾತ್ಕಾರಕ್ಕೆ ಇನ್ನು ಇಬ್ರು ಬರ್ತಾರೆ ಅಂದಿದ್ರಿ. ಇವತ್ತು ಬರೋದು ಒಬ್ರು ಆಂತಾಯ್ತು. ಇನ್ನೊಬ್ರು ಯಾವಾಗ ಬರ್ತಾರೆ ಗುರುದೇವ?’ ಎಂದು ಕೇಳಿದಾಗ, ಗುರುದೇವರು ಮುಗುಳ್ನಕ್ಕು, ‘ಸಮಯ ಬಂದಾಗ ಕರೆಸ್ಕೋತಿನಿ’ ಎಂದು ಹೇಳಿ, ‘ಆ ಹುಡುಗ ಬಂದ ಮೇಲೆ ನನಗೆ ತಿಳಿಸಿ’ ಎಂದರು.

ಮಾತಾಜೀ ಗುರುದೇವರ ನಿವಾಸಕ್ಕೆ ಹೋಗಿ ಬೆಂಗಳೂರಿನಿಂದ ಸ್ಕಂದ ಎನ್ನುವ ವ್ಯಕ್ತಿ ಬಂದಿದ್ದಾನೆ. ಒಂದು ವಾರದ ಮಟ್ಟಿಗೆ ಆಶ್ರಮದಲ್ಲಿರಲು ಇಷ್ಟಪಟ್ಟಿದ್ದಾನೆ, ಬೇಕಿದ್ದರೆ ಸೇವೆ ಮಾಡಲು ಸಿದ್ಧನಿದ್ದಾನೆ. ಆತ ಕಳೆದವಾರವೇ ಕರೆ ಮಾಡಿದ್ದನಂತೆ. ಅಥಿತಿ ಗೃಹಗಳು ಖಾಲಿಯಿರಲಿಲ್ಲವಾದ್ದರಿಂದ ನಮ್ಮ ಸ್ವಯಂಸೇವಕರು ಒಂದು ವಾರ ಬಿಟ್ಟು ಬರಲು ಹೇಳಿದ್ದಾರೆ. ನೀವು ಹೇಳಿದ ವ್ಯಕ್ತಿ ಇವನೇ ಇರಬಹುದು ಎನ್ನಿಸಿತು. ಹಾಗಾಗಿ ತಿಳಿಸಲು ಬಂದೆ ಎಂದರು. ಗುರುದೇವರು, “ಅವನೇ’’ ಎಂದು ಹೇಳಿ, “ಸದ್ಯಕ್ಕೆ ಒಂದು ವಾರ ಇರಲಿ. ಸಮಯ ನೋಡಿಕೊಂಡು ಸಾಕ್ಷಾತ್ಕಾರ ಕಾರ್ಯಕ್ರಮದ ಬಗ್ಗೆ ಹೇಳಿ. ಬೇರೆ ಸಾಧನೆಗಳಿಗೆ ಹೇಗೆ ತಯಾರು ಮಾಡಬೇಕು ಎಂಬುದು ನಿಮಗೇ ಗೊತ್ತಿದೆ. ಆದರೆ ಮೌನದ ಬಗ್ಗೆ ಏನೂ ಹೇಳಬೇಡಿ’’ ಎಂದರು. ಮಾತಾಜೀ, “ಸರಿ ಗುರುದೇವ’’ ಎಂದು ಹೇಳಿ, “ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಬಂದಿದ್ದಾರಲ್ಲ ಬೇರೆ ಅಭ್ಯರ್ಥಿಗಳು ಅವರನ್ನ ನೀವು ಹೇಳಿದ ಬೇರೆ ಬೇರೆ ಸಾಧನೆಗಳಲ್ಲಿ ತೊಡಗಿಸಬೇಕು. ನೀವು ಹೇಳಿದ ಹಾಗೆ ಒಬ್ಬಬ್ಬರ ನಿಗಾ ನೋಡೋಕೆ ಮಾತಾಜೀ ಮತ್ತೆ ಸ್ವಾಮಿಗೆ ವಹಿಸಿದ್ದೀನಿ. ಈಗ ಬಂದಿರುವವನ ನಿಗಾ ನಾನು ನೋಡ್ತೀನಿ…’’ ಎಂದರು.

ಸುತ್ತಮುತ್ತ ಮಂದಿರಗಳು ಕಾಣುತ್ತಿಲ್ಲವಲ್ಲ ಎಂದುಕೊಳ್ಳುವಾಗಲೇ ಮಳೆಯ ನಡುವೆ ಅಸ್ಪಷ್ಟವಾಗಿ ಎತ್ತರವಾದ ಶ್ರೀಚಕ್ರಯಂತ್ರ ಕಾಣಿಸಿತು. ಶ್ರೀಚಕ್ರ ಯಂತ್ರದ ಬಗ್ಗೆ ಅಪಾರ ಭಕ್ತಿಯಿದ್ದು, ಅದನ್ನು ಪೂಜಿಸುತ್ತಿದ್ದ ಅವನು; ಅದನ್ನು ನೋಡುತ್ತಿದ್ದಂತೆ ಕೈಮುಗಿದ.

“ಸರಿ, ಸಮಯ ನೋಡಿಕೊಂಡು, ಅವನ ಹಿನ್ನೆಲೆ, ಯಾಕೆ ಆಶ್ರಮಕ್ಕೆ ಬಂದಿದಾನೆ ಪ್ರತಿಯೊಂದನ್ನು ತಿಳ್ಕೊಳ್ಳಿ. ವಿಶೇಷವಾದ ಕಾರಣವೇನಿಲ್ಲ. ಅವನಿಗೆ ಬೇರೆ ಇನ್ನೇನಾದರು ಸಾಧನೆಗಳು ಮಾಡಿಸಬಹುದಾ ಅಂತ ನಿಮಗೇ ಗೊತ್ತಾಗುತ್ತೆ” ಎಂದರು ಗುರುದೇವ.

“ಸರಿ ಗುರುದೇವ’’ ಎಂದು ಮಾತಾಜೀ ಅವರ ನಿವಾಸದಿಂದ ಆಶ್ರಮದ ಮುಂಭಾಗದಲ್ಲಿದ್ದ ತಮ್ಮ ಕಛೇರಿಗೆ ಬಂದರು. ಆಶ್ರಮದಲ್ಲಿ ವಿಶೇಷವಾದ ಸಾಧನೆಗಳಿಗೆ ಬರುವವರು ತಾವು ತಮ್ಮ ಸ್ವಂತ ಇಚ್ಛೆಯಿಂದ ಬಂದಿದ್ದೀವಿ ಎಂದುಕೊಂಡಿರುತ್ತಾರೆ. ಆದರೆ ಅವರನ್ನು ಕರೆಸಿಕೊಳ್ಳುವುದು ಗುರುದೇವ. ಅವರು ಆಶ್ರಮಕ್ಕೆ ಬರುವಂತಹ ಸಂದರ್ಭವನ್ನು ಅವರೇ ಸೃಷ್ಟಿಸುತ್ತಾರೆ. ಎಷ್ಟೋ ಜನರಿಗೆ ಇಲ್ಲಿಗೆ ಬರಲು ಬಲವಾದ ಕಾರಣಗಳಿರುವುದಿಲ್ಲ. ಚಿಕ್ಕಪುಟ್ಟ ಕಾರಣಗಳನ್ನೇ ದೊಡ್ಡದು ಎಂದುಕೊಂಡು ಆಶ್ರಮಕ್ಕೆ ಬಂದು ಸಾಧನೆ ಶುರು ಮಾಡುತ್ತಾರೆ. ಆಶ್ರಮಕ್ಕೆ ಬರಲು ಕಾರಣವೊಂದು ನೆಪವಷ್ಟೇ. ಕೆಲವರಿಗಂತೂ ಕಾರಣವೇ ಇರುವುದಿಲ್ಲ. ಬರಬೇಕು ಅನ್ನಿಸಿತು ಬಂದೆ ಎನ್ನುತ್ತಾರೆ. ಸಮಯ ನೋಡಿಕೊಂಡು ಸ್ಕಂದನ ಜೊತೆ ಮಾತನಾಡುತ್ತೀನಿ ಎಂದು ನಿರ್ಧರಿಸಿದರು ಮಾತಾಜೀ. ಅವರಿಂದ ಕೊಂಚ ದೂರದಲ್ಲಿ ಕುಳಿತಿದ್ದ ಸ್ವಯಂ ಸೇವಕಿ, “ಈ ಲೇಖನ ಕನ್ನಡಕ್ಕೆ ಅನುವಾದ ಆಗಬೇಕು ಮಾತಾಜೀ’’ ಎಂದು ಹಿಂದಿಯಲ್ಲಿ ಹೇಳಿದಳು. ಮಾತಾಜೀ ಲೇಖನವನ್ನು ಒಮ್ಮೆ ಓದಿ, ಅದನ್ನು ಸಹನಾಳಿಗೆ ಇ-ಮೇಲ್ ಮಾಡಿದರು.

ಸ್ಕಂದ ಅತಿಥಿ ಗೃಹದಲ್ಲಿ ಸ್ನಾನ ಮಾಡಿ, ಕೊಡೆಯನ್ನು ಹಿಡಿದುಕೊಂಡು ಶ್ರೀಚಕ್ರಯಂತ್ರ ಮಂದಿರದ ಕಡೆ ಹೆಜ್ಜೆ ಹಾಕಿದ. ಮಂದಿರದ ಕಡೆ ಹೆಜ್ಜೆ ಹಾಕುವಾಗ ಅವನ ಮನಸ್ಸು ರೋಮಾಂಚನಗೊಳ್ಳುತ್ತಿತ್ತು. ಎಷ್ಟು ಎತ್ತರವಿದೆ ಈ ಶ್ರೀಚಕ್ರಯಂತ್ರ. ನಮ್ಮ ಮನೆಯಲ್ಲಿರುವುದು ಬಹಳ ಪುಟ್ಟದ್ದು. ನಮ್ಮ ಮನೆಗೆ ಶ್ರೀಚಕ್ರಯಂತ್ರ ಬರುತ್ತದೆ, ನಾನು ಶ್ರೀಚಕ್ರಯಂತ್ರ ಪೂಜಿಸುತ್ತೀನಿ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಶ್ರೀಚಕ್ರಯಂತ್ರ ಎನ್ನುವ ಪದ ನನ್ನ ಕಿವಿಗೆ ಬಿದ್ದಿತ್ತು. ಏಳನೇ ಕ್ಲಾಸಿನಲ್ಲಿ ಸಂನ್ಯಾಸಿಯೊಬ್ಬರು ಶ್ರೀಚಕ್ರ ಪೂಜೆ ಮಾಡುವುದು ನೋಡಿದ ಮೇಲೆ ನನ್ನೊಳಗೆ ಏನೋ ಆಗಲು ಶುರುವಾಯಿತಾದರೂ, ನಾನು ಶ್ರೀಚಕ್ರಯಂತ್ರದ ಬಗ್ಗೆ ತುಂಬಾ ಯೋಚಿಸಿರಲಿಲ್ಲ. ಶ್ಯಾಮ ಪ್ರಸಾದರ ಮನೆಗೆ ಸಂಗೀತ ಕಲಿಯಲು ಹೋಗಲು ಶುರುಮಾಡಿದ ಮೇಲೆ; ಅವರ ಕಟ್ಟಡದಲ್ಲೇ ಬಾಡಿಗೆಗೆ ಇದ್ದ ಜಗನ್ನಾಥ ಶಾಸ್ತ್ರಿಗಳು ಆಗಾಗ ಶ್ಯಾಮಪ್ರಸಾದರ ಮನೆ ಬರುತ್ತಿದ್ದರು. ಅವರು ಶ್ರೀಚಕ್ರ ಉಪಾಸನೆಯ ಬಗ್ಗೆ ಶ್ಯಾಮ ಪ್ರಸಾದರ ಜೊತೆ ಮಾತನಾಡುತ್ತಿದ್ದರು. ಆಗಲೇ ನಾನು ಅದರ ಬಗ್ಗೆ ಸರಿಯಾಗಿ ಗಮನ ಕೊಟ್ಟಿದ್ದು. ಶ್ರೀಚಕ್ರಯಂತ್ರ; ರಾಜಯಂತ್ರವೆಂದು, ಜಗನ್ಮಾತೆ ಲಲಿತಾ ಪರಮೇಶ್ವರಿ ವಾಸಿಸುವ ಜಾಗವೆಂದು, ಆ ಯಂತ್ರವನ್ನು ಉಪಾಸನೆ ಮಾಡಲು ಎಷ್ಟೋ ಜನ್ಮಗಳ ಪುಣ್ಯವಿರಬೇಕೆಂದು, ಅದಕ್ಕೆ ಮಂತ್ರೋಪದೇಶವಾಗಿರಬೇಕೆಂದು ಹೇಳಿದರು. ನಾನು ಕುತೂಹಲದಿಂದ ಯಾವ ಮಂತ್ರವೆಂದು ಕೇಳಿದೆ. ಗಾಯತ್ರಿ ಮಂತ್ರದ ನಂತರ ಮಹಾಗಣಪತಿ ಮಂತ್ರ, ಮೇಧಾ ದಕ್ಷಿಣಾಮೂರ್ತಿ ಮಂತ್ರ, ಬಾಲತ್ರಿಪುರಸುಂದರಿ, ಪಂಚದಶೀ ಈ ಮಂತ್ರಗಳು ಉಪದೇಶವಾಗಿರಬೇಕು, ಪಂಚದಶೀ ನಂತರ ಷೋಡಶೀ, ಮಹಾಷೋಡಶೀ ಮಂತ್ರಗಳೂ ಇವೆ; ಎಂದು ಹೇಳಿದರು. ಗಾಯತ್ರಿ ಬಿಟ್ಟು ಇನ್ಯಾವ ಮಂತ್ರವೂ ನನಗೆ ಗೊತ್ತಿರಲಿಲ್ಲ. ಶಾಸ್ತ್ರಿಗಳು ಇವೆಲ್ಲಾ ಹೇಳಿದಾಗ ಆಶ್ಚರ್ಯವಾಯಿತು. ನಿಮಗೆ ಎಲ್ಲಾ ಮಂತ್ರಗಳು ಆಗಿವೆಯೇ? ಎಂದು ಕುತೂಹಲದಿಂದ ಕೇಳಿದೆ. ‘ಇಲ್ಲ, ಬಾಲಮಂತ್ರದ ತನಕ ಆಗಿದೆ. ಬಾಲಮಂತ್ರ ನನಗೆ ಹತ್ತೊಂಬತ್ತು ವರ್ಷವಿದ್ದಾಗಲೇ ಆಯ್ತು. ಈಗ ಎಪ್ಪತ್ತಾರು ವರ್ಷ. ಇನ್ನೂ ಪಂಚದಶೀ ಆಗಲಿ ಅಂತ ಕಾಯ್ತಿದ್ದೀನಿ. ನನಗೆ ಉಪದೇಶ ಕೊಟ್ಟೋರು, “ಪರವಾಗಿಲ್ಲ ಬಾಲ ಆಗಿದ್ಯಾಲ್ಲ, ಶ್ರೀಚಕ್ರ ಪೂಜೆ ಮಾಡು” ಅಂದ್ರು. ಅದಕ್ಕೆ ಮಾಡ್ತೀದೀನಿ’ ಎಂದರು. ಆ ನಂತರ ಅವಕಾಶ ಸಿಕ್ಕಾಗಲ್ಲೆಲ್ಲಾ ಶಾಸ್ತ್ರಿಗಳಿಂದ ಶ್ರೀಚಕ್ರಯಂತ್ರದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ.

ನನ್ನ ಜೊತೆಯೇ ಸಂಗೀತ ಕಲಿಯುತ್ತಿದ್ದ ಒಬ್ಬ, ನನ್ನನ್ನು ನವರಾತ್ರಿಯಲ್ಲಿ ಮುರುಳಿಯವರ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಕರೆದುಕೊಂಡು ಹೋದ. ಮುರುಳಿಯವರ ಮನೆ, ಅವರು ಮಾಡುತ್ತಿದ್ದ ಪೂಜೆ, ತ್ರಿಶತಿಯನ್ನು ಹೇಳುತ್ತಾ ಶ್ರೀಚಕ್ರ ಯಂತ್ರವನ್ನು ಅರ್ಚನೆ ಮಾಡುತ್ತಿದ್ದ ರೀತಿ ಇವೆಲ್ಲಾ ನನ್ನ ಮನಸ್ಸಿನಲ್ಲಿ ಹರ್ಷವನ್ನುಂಟು ಮಾಡಿದವು. ಆಗ ಅವರಿಗೆ ಸುಮಾರು ನಲವತ್ತೈದು ವರ್ಷವಿರಬಹುದು. ಅವರ ಪರಿಚಯವಾದ ಮೇಲೆ ಬಿಡುವಿದ್ದಾಗಲೆಲ್ಲ ಅವರ ಮನೆಗೆ ಹೋಗುತ್ತಿದ್ದೆ. ಅಲ್ಲೂ ಕೂಡ ಶ್ರೀಚಕ್ರಯಂತ್ರ, ಮಂತ್ರ ಜಪ, ಶ್ರೀವಿದ್ಯಾ ಸಾಧನೆ; ಬರೀ ಇವೇ ಮಾತಾಗುತ್ತಿತ್ತು. ಒಮ್ಮೆ ಮುರುಳಿಯವರೊಂದಿಗೆ ಮಾತನಾಡುತ್ತಿದ್ದಾಗ, `ಇಷ್ಟೆಲ್ಲಾ ಪ್ರಶ್ನೆಗಳನ್ನ ಕೇಳ್ತಿಯಲ್ಲ, ಮೊದಲು ಸಂಧ್ಯಾವಂದನೆ ಮಾಡು’ ಎಂದರು. ಅವರು ಹೇಳಿದ ರೀತಿ ನನ್ನ ಮನಸ್ಸಿಗೆ ನಾಟಿತು. ದೇವರು ಎಂದರೇನು? ದೈವ ಸಾಕ್ಷಾತ್ಕಾರವೆಂದರೇನು? ಇವುಗಳ ಬಗ್ಗೆ ಯೋಚಿಸಿದರೂ, ಸಂಧ್ಯಾವಂದನೆ ಮಾಡಬೇಕು, ದೇವರ ಪೂಜೆ ಮಾಡಬೇಕು ಎಂದು ಯಾವತ್ತೂ ಅನಿಸಿರಲಿಲ್ಲ. ಮುರುಳಿಯವರ ಜೊತೆ ಮತ್ತು ಶಾಸ್ತ್ರಿಗಳ ಜೊತೆ ಈ ವಿಷಯಗಳ ಬಗ್ಗೆ ಮಾತನಾಡಿದ ಮೇಲೆ ಶ್ರದ್ಧೆ ಮೂಡುತ್ತಿತ್ತು. ಮುರುಳಿಯವರು ಹಾಗೆ ಹೇಳಿದ ಕೂಡಲೇ, ‘ನೀವೇ ಸಂಧ್ಯಾವಂದನೆ ಪಾಠ ಮಾಡಿ’ ಎಂದು ವಿನಂತಿಸಿದೆ. ಆದರೆ ಅವರು ಪಾಠ ಮಾಡಲು ಒಪ್ಪಲಿಲ್ಲ. ಶಾಸ್ತ್ರಿಗಳನ್ನು ಕೇಳೋಣವೆಂದು ನಿರ್ಧರಿಸಿದೆ. ನನಗೆ ಮುರುಳಿಯವರಿಂದಲೇ ಕಲಿಯಲು ಇಷ್ಟವಿತ್ತು. ಶಾಸ್ತ್ರಿಗಳಿಗಿಂತಲೂ ಮುರುಳಿಯವರಿಗೆ ಹೆಚ್ಚಿನ ಸಾಧನೆಯಾಗಿದೆ ಎನ್ನುವುದು ನನ್ನ ನಂಬಿಕೆಯಾಗಿತ್ತು. ಜೊತೆಗೆ ಶಾಸ್ತ್ರಿಗಳಿಗೆ ಬಾಲಮಂತ್ರದ ತನಕ ಆಗಿದೆಯಷ್ಟೇ. ಆದರೆ ಮುರುಳಿಯವರಿಗೆ ಮಹಾಷೋಡಶೀ ಮಂತ್ರ ಕೂಡ ಆಗಿತ್ತು. ಅದನ್ನು ಮುರುಳಿಯವರು ಹೇಳಿಕೊಂಡಿದ್ದಲ್ಲ; ಮುರಳಿಯವರ ಮಗ ಅಭಿ ನನಗೆ ಹೇಳಿದ್ದು. ಮುರುಳಿಯವರು ಪಾಠ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದರಿಂದ ನಾನು ಶಾಸ್ತ್ರಿಗಳನ್ನು ಕೇಳಿದೆ. ಅವರು ಪಾಠ ಹೇಳಲು ಒಪ್ಪಿದರು. ಬೆಳಿಗ್ಗೆ ಏಳರಿಂದ ಒಂಭತ್ತರ ತನಕ ಸಂಗೀತ ಪಾಠ. ಒಂಭತ್ತರಿಂದ ಹನ್ನೊಂದರ ತನಕ ಸಂಧ್ಯಾವಂದನೆ ಪಾಠ. ನಂತರ ಮನೆಗೆ ಬಂದು ಸಂಗೀತಾಭ್ಯಾಸ; ಹೀಗೆ ನಡೆಯುತ್ತಿತ್ತು. ಸಂಧ್ಯಾವಂದನೆ ಪಾಠವಾದ ಮೇಲೆ ಮೊದಲು ನೂರಾಎಂಟು ಗಾಯತ್ರಿ ಮಾಡಲು ಶುರುಮಾಡಿದೆ. ನಂತರ ಸಾವಿರ, ಹಾಗೆ ಎರಡು ಸಾವಿರ, ಐದು ಸಾವಿರ ಗಾಯತ್ರಿ ಜಪವನ್ನು ಮಾಡುತ್ತಿದ್ದೆ. ದೇವರ ಪೂಜೆ ಕಲಿಯಬೇಕು ಎಂದು ಆಸೆಯಾಯಿತು. ಶಾಸ್ತ್ರಿಗಳು ಮೊದಲು ಗಣೇಶ ಸೂಕ್ತ, ಪುರುಷ ಸೂಕ್ತ, ಶ್ರೀಸೂಕ್ತಗಳನ್ನು ಹೇಳಿಕೊಟ್ಟು, ನಂತರ ದೇವರ ಪೂಜೆ ಕಲಿಸಿದರು. ದೇವರ ಪೂಜೆ ಕಲಿಸಿ, ಅವರ ಬಳಿಯಿದ್ದ ಲಲಿತಾ ಪರಮೇಶ್ವರಿ ವಿಗ್ರಹವನ್ನು ಕೊಟ್ಟು, ಇನ್ನು ಮುಂದೆ ನೀನೇ ಪೂಜೆ ಮಾಡು ಎಂದರು. ನಿಜವಾದ ಬದಲಾವಣೆ ಶುರುವಾಗಿದ್ದೆ ಅಮ್ಮನವರಿಗೆ ಪೂಜೆ ಶುರು ಮಾಡಿದ ಮೇಲೆ. ನಾನು ಮಾಡುತ್ತಿರುವುದು ಹೊಸದಲ್ಲ, ಈಗಾಗಲೇ ಇವೆಲ್ಲಾ ನನಗೆ ಗೊತ್ತಿದೆ ಎನಿಸುತ್ತಿತ್ತು. ರಾತ್ರಿಯೆಲ್ಲಾ ವಿಚಿತ್ರ ಕನಸುಗಳು ಬೀಳಲು ಶುರುವಾಯಿತು. ದೇವರ ಪೂಜೆ ಶುರು ಮಾಡಿದ ಕೆಲ ತಿಂಗಳಿನ ನಂತರ ಒಮ್ಮೆ ನನ್ನ ಕನಸಿನಲ್ಲಿ ಗುರುದೇವರು ಬಂದು ನನ್ನ ತಲೆಯ ಮೇಲೆ ಶ್ರೀಚಕ್ರ ಯಂತ್ರವನ್ನಿಟ್ಟಿರು. ತಕ್ಷಣ ಎಚ್ಚರವಾಯಿತು. ಒಂದು ರೀತಿ ಆನಂದ. ಮತ್ತೊಂದು ಕಡೆ ಭಯ. ಮರುದಿನ ನಾನು ಶಾಸ್ತ್ರಿಗಳ ಮನೆಗೆ ಹೋದಾಗ, `ನೀನು ಬರೋದನ್ನೇ ಕಾಯ್ತಿದೆ. ನಿನ್ನೆ ಕನಸಿನಲ್ಲಿ ನನಗೆ ಬಾಲಮಂತ್ರ ಉಪದೇಶ ಕೊಟ್ಟೋರು ಬಂದು, ನಿನಗೆ ಬಲಮಂತ್ರ ಉಪದೇಶ ಕೊಡು, ಜೊತೆಗೆ ಶ್ರೀಚಕ್ರಾನೂ ಕೊಡು ಎಂದರು’ ಎಂದು ಹೇಳಿ, `ಬಾಲಾ ಮಂತ್ರಕ್ಕೂ ಮೊದಲು ದಕ್ಷಿಣಾಮೂರ್ತಿ, ಮಹಾ ಗಣಪತಿ ಮಂತ್ರಗಳು ಉಪದೇಶವಾಗಬೇಕು. ಅವೂ ಕೊಡ್ತೀನಿ. ತಪ್ಪದೇ ಜಪ ಮಾಡಿಕೊಂಡು ಹೋಗು’ ಎಂದರು. ಇದೆಂಥಹ ವಿಚಿತ್ರವೆನಿಸಿತು. ನನಗೆ ಬಿದ್ದ ಕನಸಿನ ಬಗ್ಗೆ ಶಾಸ್ತ್ರಿಗಳಿಗೆ ಹೇಳಿದೆ. ಅವರು, `ಎಲ್ಲಾ ಜಗನ್ಮಾತೆಯ ಸಂಕಲ್ಪ’ ಎಂದು ಹೇಳಿ, ನನಗೆ ಮಂತ್ರೋಪದೇಶ ಮಾಡಿ, ಶ್ರೀಚಕ್ರವನ್ನು ಅನುಗ್ರಹ ಮಾಡಿದರು. ನಾನು ಅವರ ಕಾಲಿಗೆ ನಮಸ್ಕಾರ ಮಾಡಿದೆ. `ನನಗೆ ತುಂಬಾ ಗೊತ್ತಿಲ್ಲ. ಬರುವ ದೇವರ ಪೂಜೆ ಮಂತ್ರಗಳನ್ನೆಲ್ಲಾ ನಿನಗೆ ಕಲಿಸಿದ್ದೀನಿ. ಚಂಡಿಕಾ ನವಾಕ್ಷರಿ ಬಿಟ್ಟು, ನನಗೆ ಉಪದೇಶವಾಗಿರೋ ಮಂತ್ರಗಳನ್ನೂ ನಿನಗೆ ಉಪದೇಶ ಮಾಡಿದ್ದೀನಿ. ನಿನಗೆ ದುರ್ಗಾಸಪ್ತಶತೀ ಪಾಠ ಮಾಡಿ, ನವಾಕ್ಷರಿ ಮಂತ್ರಾನೂ ಉಪದೇಶ ಮಾಡ್ತೀನಿ. ನಿನ್ನ ಸಾಧನೆ ಇಷ್ಟಕ್ಕೆ ನಿಲ್ಲದಿರಲಿ. ಇನ್ನು ಮುಂದೆ ತುಂಬಾ ಇದೆ. ನಿನಗೆ ಒಳ್ಳೆ ಗುರು ಸಿಕ್ಕು, ನಿನ್ನ ಇನ್ನೂ ಎತ್ತರಕ್ಕೆ ಕರೆದುಕೊಂಡು ಹೋಗಲಿ’ ಎಂದು ಆಶೀರ್ವದಿಸಿದರು. ನಾನು ನಡೆದ ವಿಷಯವನ್ನೆಲ್ಲಾ ಮುರುಳಿಯವರಿಗೆ ಹೇಳಿದೆ. ಅವರು, `ಆಯ್ತಪ್ಪ, ಒಳ್ಳೆದಾಗಲಿ’ ಎಂದರು.

ಸ್ಕಂದ ತನಗೆ ಶ್ರೀಚಕ್ರ ಅನುಗ್ರಹವಾಗಿದ್ದನ್ನು ನೆನಪಿಸಿಕೊಂಡು, ಶ್ರೀಚಕ್ರಯಂತ್ರ ಮಂದಿರದೊಳಗೆ ಹೋದ. ಸುಮಾರು ಐದು ಅಡಿ ಎತ್ತರದ ಅಮೃತಶಿಲೆಯ ಲಲಿತಾಮಹಾ ತ್ರಿಪುರಸುಂದರಿಯ ವಿಗ್ರಹ. ಎಷ್ಟು ಪ್ರಶಾಂತವಿದೆ ದೇವಿಯ ಮುಖದಲ್ಲಿ ಎಂದುಕೊಂಡು ತಾಯಿಗೆ ನಮಸ್ಕಾರ ಮಾಡಿ, ಅಲ್ಲೇ ಕುಳಿತು ಕಣ್ಣು ಮುಚ್ಚಿದ. ಮೊದಲ ಕೆಲವು ಕ್ಷಣಗಳು ಏನೂ ಆಗಲಿಲ್ಲ. ನಂತರ ನಿಧಾನವಾಗಿ ಯಾವುದೋ ಶಕ್ತಿ ಮೈಯೆಲ್ಲಾ ಪ್ರವಹಿಸಿದಂತಹ ಭಾವ. ಏನೋ ತನ್ನನ್ನು ಸೆಳೆಯುತ್ತಿರುವಂತೆ, ತನ್ನ ದೇಹವೆಲ್ಲ ಕಬ್ಬಿಣವಾದಂತೆ, ಯಾವುದೋ ಆಯಸ್ಕಾಂತೀಯ ಶಕ್ತಿಯೂ ಎಳೆಯುತ್ತಿರುವಂತೆ, ಅವನ ಬಾಯಿಂದ ಮಹಾಷೋಡಶೀ ಮಂತ್ರವೂ ಬರುತ್ತಿದೆ. ಇದು ನನಗೆ ಉಪದೇಶವೇ ಆಗಿಲ್ಲವಲ್ಲ ಎಂದುಕೊಂಡ. ಇವೆಲ್ಲದರ ಮಧ್ಯೆ ಮನಸ್ಸಿನಲ್ಲಿ ಏನೋ ಸಂಕಟ. ಸಂಕಟದ ಹಿಂದೆ ಆನಂದ. ಆನಂದದ ಹಿಂದೆ ಸಂಕಟ. ಅವನಿಗೆ ಸಂಕಟ-ಆನಂದ ಎರಡೂ ಒಮ್ಮೆಲೇ ಆಗುತ್ತಿದೆ. ಬೆನ್ನಿನ ಆಳದಲ್ಲಿ ಏನೋ ಜರುಗಿದಂತಾಗಿ ಅದು ನಿಧಾನವಾಗಿ ಮೇಲೇರಿ ಮೇಲೇರಿ, ಇನ್ನೂ ಮೇಲೇರಿ ತನ್ನ ಕುತ್ತಿಗೆಯ ಭಾಗವನ್ನು ಪ್ರವೇಶಿಸಿ, ಅಲ್ಲಿಂದ ಇನ್ನೂ ಮೇಲೇರಿ ತನ್ನ ತಲೆಯಿಂದ ಹೊರ ಹೋಗಿ ಶ್ರೀಚಕ್ರಯಂತ್ರ ಮಂದಿರದ ಬಿಂದುವನ್ನು ಸಂಪರ್ಕಿಸಿದಾಗ ಅವನ ಮೈಯೆಲ್ಲಾ ನಡುಗಿ ಹೋಯಿತು. ಅವನಿಗೆ ಅದನ್ನು ತಡೆಯಲಾಗದೆ ಕಣ್ಣುಬಿಟ್ಟ. ಹೊರಗೆ ಜೋರು ಮಳೆ ಸುರಿಯುತ್ತಿದೆ. ಆದರೂ ಮೈ ಸಣ್ಣಗೆ ಬೆವರಿದಂತಾಯಿತು. ಆದರೆ ಶ್ರೀಚಕ್ರಯಂತ್ರದ ಅಪಾರವಾದ ಶಕ್ತಿಯ ಬಗ್ಗೆ ತಿಳಿದ್ದಿದ್ದ ಅವನಿಗೆ ಆಶ್ಚರ್ಯವೇನೂ ಆಗಲಿಲ್ಲ.

(ಕೃತಿ: ಉತ್ತರ (ಕಾದಂಬರಿ), ಲೇಖಕರು: ಸುಪ್ರೀತ್‌ ಕೆ.ಎನ್., ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್‌, ಬೆಲೆ: 250/-)