ನನ್ನ ತಂದೆಯ ಕಡೆಯಿಂದ ಹಣ ಪಡೆದು ಏನೋ ತರಲು ನನ್ನ ತಾಯಿ ತಿಳಿಸುತ್ತಿದ್ದಳು. ನಾನು ಮರೆಗುಳಿಯಾಗಿದ್ದರಿಂದ ಅಂಗಿಯ ಕೆಳಗೆ ಗಂಟು ಹಾಕಿ ಕಳಿಸುತ್ತಿದ್ದಳು. ಶ್ರೀ ಸಿದ್ಧೇಶ್ವರ ರಸ್ತೆಯ ಮರಗಳ ಸಾಲಿನ ನೆರಳಲ್ಲಿ ನನ್ನ ತಂದೆಯ ಬಳಿ ಹೋಗುವ ಮೊದಲೆ ಅಂಗಿಯ ಗಂಟು ಹಾಕಿದ ವಿಚಾರವೇ ಮರೆತುಹೋಗುತ್ತಿತ್ತು! ಹೀಗೇಕೆ ಗಂಟು ಹಾಕಿಕೊಂಡಿರುವೆ ಎಂದು ನನಗೆ ನಾನೇ ಬೇಸರಪಟ್ಟುಕೊಂಡು ಅದನ್ನು ಬಿಚ್ಚುತ್ತಿದ್ದೆ. ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋದಾಗ ಸೇಂಗಾ ಕೊಡಿಸಲು ಹೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 36ನೆಯ ಕಂತು ಇಲ್ಲಿದೆ.

ನಾನು ಬಾಲಕನಾಗಿದ್ದಾಗ ವಿಜಾಪುರದ ಸಿದ್ಧೇಶ್ವರ ಗುಡಿಯ ಬಳಿ ಬಹಳ ಸಮಯ ಕಳೆದಿದ್ದೇನೆ. ಅದು ವಿಜಾಪುರದಲ್ಲೇ ಅತಿದೊಡ್ಡ ಗುಡಿ. 12ನೇ ಶತಮಾನದ ಶರಣ ಸಿದ್ಧರಾಮೇಶ್ವರರ ತೋರು ಗದ್ದುಗೆ ಇರುವ ಗುಡಿ ಅದು. ಸಿದ್ಧೇಶ್ವರನೇ ನಮ್ಮ ನಗರದೇವತೆ. ಆ ಮನೋಹರವಾದ ಕಲ್ಗುಡಿಯನ್ನು ಸೋಲಾಪುರದ ವಾಸ್ತುಶಿಲ್ಪಿಯ ಉಸ್ತುವಾರಿಯಲ್ಲಿ ಕಟ್ಟಲಾಗಿದೆ ಎಂದು ನನ್ನ ತಂದೆ ಹೇಳುತ್ತಿದ್ದರು. ನಾನು 1951ರಲ್ಲಿ ಜನಿಸುವ ಮೊದಲೇ ಕಟ್ಟಿದ ದೇವಾಲಯ ಅದು.

ಸೋಲಾಪುರದ ಆ ವಾಸ್ತುಶಿಲ್ಪಿ ಪ್ರತಿ ಕಲ್ಲಿನ ಬಗ್ಗೆ ಕಾಳಜಿ ವಹಿಸುತ್ತಿದ್ದ. ದಿನಕ್ಕೆ ಎಷ್ಟು ಬೇಕೋ ಅಷ್ಟೇ ಕೆಲಸ ಮಾಡಿಸುತ್ತಿದ್ದ. ಆತ ಗಡಿಬಿಡಿಯಲ್ಲಿ ಮತ್ತು ಸಮಯಮೀರಿ ಕೆಲಸ ಮಾಡಿಸುತ್ತಿರಲಿಲ್ಲ ಎಂದು ನನ್ನ ತಂದೆ ಹೇಳಿದ್ದು ನೆನಪಿದೆ. ಕಟ್ಟಡ ಮುಕ್ತಾಯದ ಹಂತದಲ್ಲಿದ್ದಾಗ ಅವರು ನೋಡಿರಬಹುದು. ಹೆಬ್ಬಾಗಿಲ ಕೆಂಪು ಕಲ್ಲಿನ ಮೇಲೆ ದೇವಸ್ಥಾನದ ಹೆಸರನ್ನು ಮರಾಠಿ (ದೇವನಾಗರಿ) ಲಿಪಿಯಲ್ಲಿ ಸುಂದರವಾಗಿ ಕೆತ್ತಿ ಕರಿಕಲ್ಲಿನ ಇನ್ಲೇ ಮಾಡಲಾಗಿದೆ. (ಕರಿಕಲ್ಲನ್ನು ನೀಟಾಗಿ ಕೊರೆದು ಆ ಕೆತ್ತನೆಯಲ್ಲಿ ಜೋಡಿಸಲಾಗಿದೆ). ಕನ್ನಡ ಮರಾಠಿ ಜಗಳದ ಸಂದರ್ಭದಲ್ಲಿ ಅದರ ಮೇಲೆ ಪೇಂಟ್ ಬಳಿದು ಕನ್ನಡದಲ್ಲಿ ಬರೆಯಲಾಯಿತು. ನಂತರ ‘ಶ್ರೀ ಸಿದ್ಧೇಶ್ವರ ದೇವಾಲಯ’ ಎಂದು ಬೋರ್ಡ್ ಬರೆದು ಹಚ್ಚಲಾಯಿತು.

(ವಿಜಾಪುರದ ಶ್ರೀ ಸಿದ್ಧೇಶ್ವರ ದೇವಾಲಯ)

ಗುಡಿಯ ಹೆಬ್ಬಾಗಿಲ ಮೇಲಿನ ಮುಖ್ಯ ಗೋಪುರ ಮತ್ತು ಅದರ ಅಕ್ಕಪಕ್ಕದ ಗೋಪುರಗಳನ್ನು ಬಹಳ ವರ್ಷಗಳ ನಂತರ ನಿರ್ಮಿಸಲಾಯಿತು. ಅವುಗಳ ನಿರ್ಮಾಣವಾಗುವಾಗ ನನಗೆ ಸ್ವಲ್ಪ ಬೇಸರವೆನಿಸಿತ್ತು. ಶಿಲ್ಪಕಲೆಗೆ ಎಲ್ಲಿ ಕುಂದುಂಟಾಗುವುದೊ ಎಂದು ಅನಿಸುತ್ತಿತ್ತು. ಆ ಗೋಪುರಗಳು ಎಷ್ಟೇ ಸುಂದರವಾಗಿದ್ದರೂ ಮೂಲ ಶಿಲಾ ಕಟ್ಟಡದ ಶಿಲ್ಪಕಲಾ ವೈಭವಕ್ಕೆ ಸಮ ಬರಲಾರವು ಎಂಬ ನನ್ನ ಭಾವನೆ ಹಾಗೇ ಉಳಿದುಕೊಂಡಿದೆ.

ಅದರ ಗರ್ಭಗುಡಿಯ ಮುಂದಣ ಭವನದ ವಿಸ್ತಾರ ಎಷ್ಟು ದೊಡ್ಡದಾಗಿದೆ ಎಂದರೆ, ಆ ದಿನಗಳಲ್ಲಿ ಶ್ರೀಮಂತರ ಮದುವೆಗಳು ಕೂಡ ಅಲ್ಲೇ ನಡೆಯುತ್ತಿದ್ದವು. ಆ ವಿಶಾಲ ಗುಡಿ ಒಳಗೂ ಸುಂದರ, ಹೊರಗೂ ಸುಂದರ. ಅದರ ಒಳಾಗಂಣದ ಸೌಂದರ್ಯ ಯಾವ ಅರಮನೆಗೂ ಕಡಿಮೆ ಇಲ್ಲ. ಒಳಗೆ ಇಳಿಬಿಟ್ಟ ಕಲಾತ್ಮಕ ಗಾಜಿನ ಶೋ ಪೀಸ್‍ಗಳು ಭವನದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೇ ಪ್ರತಿಧ್ವನಿಯಾಗದಂತೆ ತಡೆಯುವ ಕಾರ್ಯ ಮಾಡುತ್ತಿದ್ದವು. (ಈಗ ಅವು ಏನಾಗಿವೆಯೋ ಗೊತ್ತಿಲ್ಲ.)

ಗುಡಿಯ ಬಲಬದಿಯಲ್ಲಿ ಸ್ವಲ್ಪ ಹಿಂದೆ ಶಿವಾನುಭವ ಮಂಟಪವಿದ್ದು ಸಾವಿರಾರು ಜನ ಕುಳಿತು ಪ್ರವಚನ ಕೇಳುವಷ್ಟು ದೊಡ್ಡದಾಗಿದೆ. ಅಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ಮತ್ತು ವಚನ ಪ್ರಣೀತ ಸಂಗನಬಸವ ಸ್ವಾಮಿಗಳ (ಬಂಥನಾಳ ಶಿವಯೋಗಿ) ಪ್ರವಚನ ಕೇಳುತ್ತಲೇ ನಾ ಬೆಳೆದದ್ದು.

ವಿಜಾಪುರದಲ್ಲಿ ಸ್ಟೇಷನ್ ರೋಡ್ ಬಿಟ್ಟರೆ ಶ್ರೀ ಸಿದ್ಧೇಶ್ವರ ರಸ್ತೆಯೆ (ಎಸ್.ಎಸ್. ರೋಡ್) ಮುಖ್ಯ ರಸ್ತೆಯಾಗಿದೆ. ಎಸ್.ಎಸ್. ರೋಡ್ ಎಡಬಲಗಳು ವಿವಿಧ ಅಂಗಡಿಗಳಿಂದ ಕೂಡಿವೆ. ಈ ಗುಡಿಯ ನಿರ್ಮಾಣಕ್ಕೆ ಸೋಲಾಪುರದ ಲಿಂಗಾಯತ ಉದ್ದಿಮೆದಾರರು ಮತ್ತು ದೊಡ್ಡ ವ್ಯಾಪಾರಿಗಳು ಮುಖ್ಯ ಕಾರಣ ಎಂದು ಕೇಳಿದ ನೆನಪು. ಸ್ಥಳೀಯ ವ್ಯಾಪಾರಿಗಳ ಸಹಾಯಹಸ್ತವಂತೂ ಇದ್ದೇ ಇರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಲು ತರುವ ರೈತರಿಂದ ಅಡತಿ ಅಂಗಡಿ ದಲಾಲರು ಗುಡಿ ಫಂಡನ್ನು ವಸೂಲಿ ಮಾಡಿರಲೂ ಸಾಕು. ಹೀಗೆ ಸೊಲ್ಲಾಪುರದ ಸಿದ್ಧರಾಮ ವಿಜಾಪುರದಲ್ಲಿ ತಳವೂರಿದ.

(ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕ್ ಮತ್ತು ರಸ್ತೆ)

ವಿಜಾಪುರದಿಂದ ಉತ್ತರಕ್ಕೆ ನೂರು ಕಿ.ಮೀ. ದೂರದಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಸೊಲ್ಲಾಪುರ ಇದೆ. ಸೊಲ್ಲಾಪುರದಲ್ಲಿನ ಸಿದ್ಧೇಶ್ವರ ಗುಡಿಯಲ್ಲಿ ಕರ್ತೃಗದ್ದುಗೆ ಇದೆ. ಆ ಗುಡಿ ವಿಜಾಪುರದ ಗುಡಿಯಷ್ಟು ಅದ್ಧೂರಿಯಾಗಿಲ್ಲ. ಅದರೆ ಬೃಹತ್ ಕೆರೆ ಮತ್ತು ವಿಶಾಲವಾದ ಪ್ರಾಂಗಣವಿರುವುದರಿಂದ ಅದರ ಸೌಂದರ್ಯ ವಿಶಿಷ್ಟವಾದುದು.

ಒಂದು ಸಲ ಕಾಲೇಜಿನಲ್ಲಿದ್ದಾಗ ಗೆಳೆಯರ ಜೊತೆಗೂಡಿ ಸೊಲ್ಲಾಪುರಕ್ಕೆ ಹೋಗಿದ್ದೆ. ಆಗ ಅಲ್ಲಿನ ಸಿದ್ಧೇಶ್ವರ ಗುಡಿಗೆ ಹೋದೆವು. ಎಲ್ಲ ಗೆಳೆಯರು ಪೂಜೆಗೆ ತೆಂಗಿನಕಾಯಿ ತೆಗೆದುಕೊಂಡರು. ನನಗೂ ತೆಗೆದುಕೊಳ್ಳಲು ಹೇಳಿದರು. ವಿಚಾರವಾದಿಗಳು ಹೀಗೆಲ್ಲ ತೆಂಗಿನಕಾಯಿ ಒಡೆಯುವುದಿಲ್ಲ ಎಂದು ಹೇಳಿದೆ. ಅಂತೂ ಅಲ್ಲೆಲ್ಲ ಸುತ್ತಾಡಿದ ನಂತರ ಸಾಯಂಕಾಲ ನಮ್ಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರೆಡ್ ಬಸ್ ಹಿಡಿದು ವಾಪಸ್ ಬರುವಾಗ, ಮಹಾರಾಷ್ಟ್ರ ಗಡಿ ದಾಟಿ ಕರ್ನಾಟಕದೊಳಗೆ ಬಂದ ಸ್ವಲ್ಪ ಹೊತ್ತಲ್ಲೇ ಬಸ್ ಕೆಟ್ಟು ನಿಂತಿತು. ಸಮೀಪದಲ್ಲಿ ಯಾವ ಹಳ್ಳಿಯಾಗಲಿ, ಗುಡಿಸಲುಗಳಾಗಲಿ ಇರಲಿಲ್ಲ. ಒಂದೆರಡು ಗಂಟೆಯ ನಂತರ ವಿಜಾಪುರಕ್ಕೆ ಹೋಗುವ ಇನ್ನೊಂದು ಬಸ್ ಬಂದಿತು. ಅದನ್ನು ನಮ್ಮ ಕಂಡಕ್ಟರ್ ನಿಲ್ಲಿಸಿದ. ಅದರಲ್ಲಿ ಕಾಲಿಡಲೂ ಜಾಗವಿರಲಿಲ್ಲ. ಆ ಬಸ್ಸಿನ ಕಂಡಕ್ಟರ್ ವಿಜಾಪುರಕ್ಕೆ ಹೋಗಿ ಇನ್ನೊಂದು ಬಸ್ ಕಳಸುವವರೆಗೆ ನಾವು ಅಲ್ಲೇ ನಿಲ್ಲಬೇಕಾಯಿತು.

ಬಸ್ ದಾರಿ ಕಾಯುತ್ತ ಕತ್ತಲಾಯಿತು. ಊಟದ ಸಮಯ ದಾಟಿದ್ದರಿಂದ ಬಹಳ ಹಸಿವಾಗಿತ್ತು. ಗೆಳೆಯರು ತಮ್ಮ ತಮ್ಮ ಕೊಬ್ಬರಿ ಹೋಳುಗಳನ್ನು ಹೊರಗೆ ತೆಗೆದು ಒಡೆದು ಚೂರು ಮಾಡಿದರು. ಎಲ್ಲರೂ ತಿನ್ನತೊಡಗಿದೆವು. ಅವರಲ್ಲೊಬ್ಬ ‘ಗೊತ್ತಾಯ್ತಾ ದೇವರ ಮಹಿಮೆ. ಕೊಬ್ಬರಿ ಇಲ್ಲದಿದ್ದರೆ ಹಸಿವಿನಿಂದ ಒದ್ದಾಡುತ್ತಿದ್ದಿ’ ಎಂದ. ‘ಬಸ್ ಕೆಡ್ಸೋದು, ದಾರಿ ಮೇಲೆ ಕಾಯ್ಸೋದು, ಕೊಬ್ರಿ ತಿನ್ಸೋದು ದೇವರ ಕೆಲ್ಸಾನಾ’ ಎಂದೆ. ಎಲ್ಲರೂ ನಕ್ಕರು. ಅಂತೂ ಕೊನೆಗೆ ಬಸ್ ಬಂದಿತು. ಮಧ್ಯರಾತ್ರಿ ಮನೆ ಸೇರಿದೆವು.

ಅದೇನೇ ಇದ್ದರೂ ವಿಜಾಪುರದ ಸಿದ್ಧೇಶ್ವರ ಗುಡಿ ನನ್ನ ಬಾಲ್ಯದ ಬದುಕಿನ ಭಾಗವಾಗಿತ್ತು. ನನ್ನ ಅಜ್ಜಿ ಅಲ್ಲೇ ಸಮೀಪದ ಬೇವಿನ ಮರದ ಕೆಳಗೆ ಬಾಳೆಹಣ್ಣು ಮತ್ತು ಮಾವಿನ ಸೀಜನ್‌ನಲ್ಲಿ ಮಾವಿನ ಹಣ್ಣು ಮಾರುತ್ತಿದ್ದಳು. ಪ್ರಾಥಮಿಕ ಶಾಲೆಯಲ್ಲಿದ್ದಾಗ ತೆಗ್ಗಿನ ಸಾಲಿ ಬಿಟ್ಟ ನಂತರ ಬಹಳಷ್ಟು ಸಲ ಅಜ್ಜಿಯ ಕಡೆಗೆ ಹೋಗುತ್ತಿದ್ದೆ. ಏನಾದರೂ ಹೊಟೆಲ್‌ನಿಂದ ತರಿಸಿ ತಿನ್ನಲು ಕೊಡುತ್ತಿದ್ದಳು. ಸಾಲಿ ಸಮೀಪವಿದ್ದುದರಿಂದ ಕೆಲವೊಂದು ಸಲ ಮಧ್ಯಾಹ್ನದ ಊಟಕ್ಕೆ ಅವಳ ಬಳಿಯೇ ಹೋಗುತ್ತಿದ್ದೆ. ಮೊದಲೇ ತಿಳಿಸಿದಂತೆ ಅಲ್ಲಿ ನನ್ನ ತಾಯಿ ನನಗೂ ಬುತ್ತಿ ತಂದು ಇಟ್ಟಿರುತ್ತಿದ್ದಳು. ಆಗ ಸಿದ್ಧೇಶ್ವರ ಗುಡಿಯ ಹೊರ ಭಾಗದ ಒಂದು ಮೂಲೆ ಹತ್ತಿ ಕುಳಿತು ಬುತ್ತಿ ಬಿಚ್ಚುತ್ತಿದ್ದೆ.

(ಶ್ರೀ ಸಿದ್ಧೇಶ್ವರ ದೇವಾಲಯದ ಗರ್ಭಗುಡಿ)

ಒಂದು ಸಲ ಹೀಗೆ ಊಟ ಮಾಡುವಾಗ ಒಬ್ಬ ಹಸಿದ ವ್ಯಕ್ತಿ ಬಂದ. ಅವನಿಗೂ ರೊಟ್ಟಿ ಕೊಟ್ಟು, ಊರು ಕೇಳಿದೆ. ಹುನಗುಂದ ಎಂದು ತಿಳಿಸಿದ. ಸಮೀಪದಲ್ಲಿ ಕೂಡಲಸಂಗಮ ಕ್ಷೇತ್ರ ಇದ್ದುದರ ಬಗ್ಗೆ ಮತ್ತು ಅಲ್ಲಿನ ಕೃಷ್ಣಾನದಿಯ ಬಗ್ಗೆ ತಿಳಿಸಿದ. ಶಾಲಾ ಪಠ್ಯದಲ್ಲಿ ಹುನಗುಂದ ತಾಲ್ಲೂಕಿನ ಹೆಸರು ಮತ್ತು ಕೃಷ್ಣಾನದಿಯ ಬಗ್ಗೆ ಓದಿದ ಕಾರಣ ಖುಷಿ ಎನಿಸಿತು. ಆ ನೋಡದ ಊರಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಆತನಿಗೆ ಇನ್ನೂ ಒಂದು ರೊಟ್ಟಿ ಕೊಟ್ಟೆ. ನಾನು ಒಂದು ರೊಟ್ಟಿ ತಿನ್ನುವುದರೊಳಗಾಗಿ ಆತ ಎರಡು ರೊಟ್ಟಿ ತಿಂದು ಖುಷಿಯಿಂದ ಹೋದ. ಊಟದ ನಂತರ ಗುಡಿಯ ಮುಂದೆ ತೆಂಗಿನಕಾಯಿ ಮಾರುವ ಶಂಕರ ಮಾಮಾಗೆ ಭೇಟಿಯಾದ ನಂತರ ಮರಳಿ ಶಾಲೆಗೆ ಹೋದೆ.

ಶನಿವಾರ ಅರ್ಧ ದಿನದ ಶಾಲೆ ಮುಗಿದ ಮೇಲೆ ಹೆಚ್ಚಾಗಿ ಅಜ್ಜಿಯ ಕಡೆ ಬಂದು ಗುಡಿಯ ಸುತ್ತ ತಿರುಗುವುದು. ಗುಡಿಯ ಒಳಗಡೆ ಹೋಗಿ ಕೂಡುವುದು. ಪಂಚಮುಖಿ ನಾಗರ ಹೆಡೆಯ ಕೆಳಗೆ ಇರುವ ಮೀಸೆ ಸಿದ್ಧರಾಮನ ಎದೆಮಟ್ಟದ ಬೆಳ್ಳಿಮೂರ್ತಿಯ ಸೌಂದರ್ಯಕ್ಕೆ ಬೆರಗಾಗಿ ಕೈಮುಗಿದು ನೋಡುತ್ತ ನಿಲ್ಲವುದು ನಡೆದೇ ಇತ್ತು. ಗುಡಿಯ ಹಿಂದಿನ ಸಣ್ಣ ಗುಡಿಗಳು ಮತ್ತು ನಾಗರಕಲ್ಲನ್ನು ನೋಡಿ ಶಿವಾನುಭವ ಮಂಟಪಕ್ಕೆ ಬರುತ್ತಿದ್ದೆ. ನಂತರ ಗುಡಿಯ ಎದುರಿಗೆ, ಎಡಭಾಗದಲ್ಲಿ ಇರುವ ಸಿದ್ಧೇಶ್ವರ ಕೋ ಆಪರೇಟಿವ್ ಬ್ಯಾಂಕ್ ಒಳಗಡೆ ಹೋಗಿ ಅಂಜೂರ ಗಿಡದವರೆಗೆ ಸುತ್ತುಹೊಡೆದು ಮತ್ತೆ ಅಜ್ಜಿಗೆ ಭೇಟಿಯಾಗಿ ಪಾಟಿ ಚೀಲವನ್ನು ತೆಗೆದುಕೊಂಡು ಮನೆಗೆ ಹೋಗುವುದು ವಾಡಿಕೆ ಆಗಿತ್ತು.

ಅಜ್ಜಿಯ ಪಕ್ಕದಲ್ಲಿ ಇನ್ನೊಬ್ಬಳು ಹಣ್ಣುಹಣ್ಣಾದ ಅಜ್ಜಿ ಬಾಳೆಹಣ್ಣು ಮಾರುತ್ತಿದ್ದಳು. ಅವಳ ಮಗ ಜೊತೆಯಲ್ಲಿರುತ್ತಿದ್ದ. ಆತನ ಹೆಸರು ಬಹಾದ್ದೂರ್. ಆತನಿಗೆ ಯಕೃತ ರೋಗವಿತ್ತು. ಅರ್ಜುನ ಮಾಮಾನ ತೋಟದ ಬೇಲಿಯಲ್ಲಿ ಸಾಲಾಗಿ ಬೆಳೆದ ಹೂಸಲಕ್ಕಿಯ ಎಲೆಗಳನ್ನು ಸಂಗ್ರಹಿಸಿ ಒಯ್ದು ಜಜ್ಜಿ ರಸ ಮಾಡಿ ಕುಡಿಯುತ್ತ ಬದುಕಿದ್ದ. ಹೀಗೆ ಲೀವರ್ ಸಮಸ್ಯೆಗೆ ನಮ್ಮ ಜನ ಔಷಧಿ ಕಂಡುಹಿಡಿದಿದ್ದರು!

ಶ್ರೀ ಸಿದ್ಧೇಶ್ವರ ರಸ್ತೆಗುಂಟ ಮರಗಳ ಸಾಲುಗಳಿದ್ದವು ಅವು ಗಾಂಧಿಚೌಕದವರೆಗೂ ಹರಡಿದ್ದವು. ನಾನು ಆ ನೆರಳಲ್ಲಿ ಹಾಯ್ದು ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋಗುತ್ತಿದ್ದೆ. ನಾನು ಸಣ್ಣವನಿರುವಾಗಲೇ, ಸಿದ್ಧೇಶ್ವರ ರಸ್ತೆ ಅಗಲ ಮಾಡುವ ಮಾಸ್ಟರ್ ಪ್ಲ್ಯಾನ್ ಜಾರಿಗೊಳಿಸಲಾಯಿತು. ಆಗ ಎಲ್ಲ ಮರಗಳನ್ನು ಕಡಿಯಲಾಯಿತು. ಆದರೆ ಕೊನೆಗೂ ಹೊಸ ಸಸಿಗಳನ್ನು ನೆಡುವ ಪ್ರಜ್ಞೆ ಬರಲಿಲ್ಲ. ಆ ಸುಂದರವಾದ ಸಾಲು ಮರಗಳು ವಿಜಾಪುರದ ದಾರಿಹೋಕರಿಗೆ ತಂಪನೆರೆಯುತ್ತಿದ್ದವು.

(ತಾಜಬಾವಡಿ)

ಗೆಳೆಯರು ತಮ್ಮ ತಮ್ಮ ಕೊಬ್ಬರಿ ಹೋಳುಗಳನ್ನು ಹೊರಗೆ ತೆಗೆದು ಒಡೆದು ಚೂರು ಮಾಡಿದರು. ಎಲ್ಲರೂ ತಿನ್ನತೊಡಗಿದೆವು. ಅವರಲ್ಲೊಬ್ಬ ‘ಗೊತ್ತಾಯ್ತಾ ದೇವರ ಮಹಿಮೆ. ಕೊಬ್ಬರಿ ಇಲ್ಲದಿದ್ದರೆ ಹಸಿವಿನಿಂದ ಒದ್ದಾಡುತ್ತಿದ್ದಿ’ ಎಂದ. ‘ಬಸ್ ಕೆಡ್ಸೋದು, ದಾರಿ ಮೇಲೆ ಕಾಯ್ಸೋದು, ಕೊಬ್ರಿ ತಿನ್ಸೋದು ದೇವರ ಕೆಲ್ಸಾನಾ’ ಎಂದೆ. ಎಲ್ಲರೂ ನಕ್ಕರು.

ಒಂದು ಕಾಲಕ್ಕೆ ಭಾರಿ ಬಿಸಿಲಿನ ವಿಜಾಪುರ ಮಾವು, ಸೀತಾಪಲ, ಬಾರಿಕಾಯಿ, ಬಳುವಲಕಾಯಿ ಮುಂತಾದ ಹಣ್ಣುಗಳಿಗೆ ಪ್ರಸಿದ್ಧವಾಗಿತ್ತು. ತಾಜಬಾವಡಿ, ಚಂದಾಬಾವಡಿಯಂಥ ಬಾವಿಗಳಲ್ಲದೆ ಇತರೆ ನೂರಾರು ಸಣ್ಣ ದೊಡ್ಡ ಬಾವಿಗಳು ಮತ್ತು ಕೆರೆಗಳಿಂದ ವಿಜಾಪುರ ಪ್ರಸಿದ್ಧವಾಗಿತ್ತು. ಇಲ್ಲಿಯ ಬಾವಿಗಳು, ಕೆರೆಗಳು, ವಿಜಾಪುರ ಸುತ್ತ ಇರುವ ಬೃಹತ್ ಕೋಟೆಗೆ ಹತ್ತಿಕೊಂಡಿರುವ ನೀರುಳ್ಳ ಕಂದಕಗಳು, ತೋಟಗಳು, ಐತಿಹಾಸಿಕ ಕಟ್ಟಡಗಳು, ಉದ್ಯಾನವನಗಳು ಹಾಗೂ ಕಾರಂಜಿಗಳು ದೆಹಲಿಯನ್ನೂ ಮೀರಿಸಿದ್ದವು. ಎಲ್ಲ ಐತಿಹಾಸಿಕ ಕಟ್ಟಡಗಳ ಮುಂದಿನ ಕಲ್ಯಾಣಿಗಳು ನೀರಿನಿಂದ ತುಂಬಿಕೊಂಡು ಕಾರಂಜಿಯನ್ನು ಹೊಂದಿದ್ದವು. ಬೇಗಂ ತಾಲಾಬ್‌ನಿಂದ ಈ ಕಲ್ಯಾಣಿಗಳಿಗೆ ಮತ್ತು ನಗರದ ವಿವಿಧ ಕಡೆಗಳಲ್ಲಿ ಕಟ್ಟಿದ ಬೃಹತ್ತಾದ ನೀರಿನ ಗಂಜ್‌ಗಳಿಗೆ ಕುಡಿಯುವ ನೀರಿನ ಪೂರೈಕೆ ಆಗುತ್ತಿತ್ತು. ನಾವು ಚಿಕ್ಕವರಿದ್ದಾಗ ಚೀನಿಮಣ್ಣಿನ ನೀರಿನ ಕೊಳವೆಗಳು ಮನೆಗಳ ಪಾಯಾ ಹಡ್ಡುವಾಗ ಸಿಗುತ್ತಿದ್ದವು. ಆ ಕಾಲದಲ್ಲಿ ನೀರುಪೂರೈಕೆ ವಿಚಾರದಲ್ಲಿ ರೋಮ ನಗರ ನಂತರದ ಸ್ಥಾನ ವಿಜಾಪುರ ನಗರ ಪಡೆದಿತ್ತು!

ಬ್ರಿಟಿಷರು ಸ್ಟೇಷನ್ ರೋಡ್ ಹತ್ತಿಕೊಂಡಂತೆ ಆಸಾರ ಮಹಲ್ ಎದುರು ಬೃಹತ್ತಾದ ರಾಣೀ ಬಗೀಚಾ ನಿರ್ಮಿಸಿದ್ದರು. ಈ ಉದ್ಯಾನವನ ಸದಾ ಹಸಿರಿನಿಂದ ಮತ್ತು ಹೂ ಬಳ್ಳಿಗಳಿಂದ ತುಂಬಿಕೊಂಡು ನಯನಮನೋಹರವಾಗಿತ್ತು. ಬೃಹತ್ತಾಗಿದ್ದ ಅದು ವಿಜಾಪುರದ ಶ್ವಾಸಕೋಶದಂತಿತ್ತು.

(7ನೇ ಎಡ್ವರ್ಡ್ ಕಾರಂಜಿ)

(7ನೇ ಎಡ್ವರ್ಡ್ 1901ನೇ ಜನವರಿ 22ರಿಂದ 1910ನೇ ಮೇ 6ರಂದು ನಿಧನವಾಗುವ ವರೆಗೆ ಭಾರತದ ಚಕ್ರವರ್ತಿಯಾಗಿದ್ದ. ಆ ಚಕ್ರವರ್ತಿಯ ಸ್ಮರಣಾರ್ಥ ಅಂದಿನ ವೈಸರಾಯ್ ಮತ್ತು ಗವರ್ನರ್ ಜನರಲ್ ಆಗಿದ್ದ ಬರೋನ್ ಹಾರ್ಡಿಂಜ್ ಒಂದನೇ ನವೆಂಬರ್ 1913ರಲ್ಲಿ ಈ ಉದ್ಯಾನವನದ ಶಂಕುಸ್ಥಾಪನೆ ನೆರವೇರಿಸಿದ್ದ. ಆತ 1910ರಿಂದ 1916ರ ವರೆಗೆ ಈ ಹುದ್ದೆಯಲ್ಲಿದ್ದ. ಉದ್ಯಾನವನದ ಮಧ್ಯೆ 1920ರಲ್ಲಿ 7ನೇ ಎಡ್ವರ್ಡ್‍ನ ಮುಖದ ಉಬ್ಬುಶಿಲ್ಪದೊಂದಿಗೆ ಸುಂದರವಾಗಿ ಅಮೃತಶಿಲೆಯ ಕಾರಂಜಿ ನಿರ್ಮಿಸಲಾಗಿತ್ತು.)

ಬಾಲಕರಿದ್ದಾಗ ನಮಗೆ ಆ ರಾಣೀ ಬಗೀಚಾ ಸುಂದರ ಲೋಕದ ಅನುಭವ ಕೊಡುತ್ತಿತ್ತು. ಅದನ್ನು ನೆನಪಿಸಿಕೊಂಡಾಗ ಇಂದಿಗೂ ಬೇಸರ ಆವರಿಸುತ್ತದೆ. ಅಂಥ ಉದ್ಯಾನವನಗಳನ್ನು ಉಳಿಸಿಕೊಳ್ಳಲಿಕ್ಕಾಗದಷ್ಟು ನಮ್ಮ ವ್ಯವಸ್ಥೆ ಹಾಳಾಗಿದೆ. ಅದು ಎಷ್ಟು ದೊಡ್ಡದಿತ್ತೆಂದರೆ ಅದರ ಒಂದು ಭಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗಿದೆ. ಇನ್ನೊಂದು ಭಾಗದಲ್ಲಿ ಸರ್ಕಾರಿ ಕಟ್ಟಡಗಳು ತಲೆ ಎತ್ತಿವೆ. ಅದೆಷ್ಟೋ ಅಂಗಡಿ ಮುಂಗಟ್ಟುಗಳಿಗೆ ಆ ಪ್ರದೇಶ ಆಶ್ರಯತಾಣವಾಗಿದೆ. ಹಿಂದೆ ನೋಡಿದರೆ ದೂರದಲ್ಲಿ 7ನೇ ಎಡ್ವರ್ಡ್‍ನ ಕಾರಂಜಿ ಅನಾಥವಾಗಿ ನಿಂತಿದೆ. ಅದಕ್ಕೂ ಹಿಂದೆ ಮತ್ತು ಎಡ ಬಲ ಇರುವ ಜಾಗದಲ್ಲಿ ಒಂದಿಷ್ಟು ಒತ್ತುವರಿಯೂ ಆಗಿರಬಹುದು. ಇತಿಹಾಸದ ಪ್ರಜ್ಞೆ ಇದ್ದ ಯಾರೂ ಹೀಗೆ ಮಾಡಲಾರರು.

ನಮ್ಮ ವಿಜಾಪುರದ ಪೂರ್ವಜರು ಎಲ್ಲೆಡೆ ಅಸಂಖ್ಯ ಗಿಡಮರಗಳನ್ನು ಬೆಳೆದು ವಿಜಾಪುರದ ಬಿರುಬಿಸಿಲನ್ನು ತಡೆದಿದ್ದರು. ಉಪ್ಪಲಿಬುರುಜ್ ಮೇಲೆ ನಿಂತು ವಿಜಾಪುರ ನಗರ ನೋಡುವಾಗ ಹಸಿರಿನಿಂದ ತುಂಬಿದಂತೆ ಕಾಣುತ್ತಿತ್ತು. ಐತಿಹಾಸಿಕ ಕಟ್ಟಡಗಳು ಮತ್ತು ಇತರ ದೊಡ್ಡ ಕಟ್ಟಡಗಳು ಬಿಟ್ಟರೆ ಎಲ್ಲಿ ನೋಡಿದಲ್ಲಿ ಮರಗಳೇ ಕಾಣುತ್ತಿದ್ದವು. ಆದರೆ ಪರಿಸರ ನಾಶದ ಈ ದಿನಗಳಲ್ಲಿ ಆ ದಿನಗಳು ಗತಿಸಿಹೋದವು.

ನನ್ನ ತಂದೆಯ ಕಡೆಯಿಂದ ಹಣ ಪಡೆದು ಏನೋ ತರಲು ನನ್ನ ತಾಯಿ ತಿಳಿಸುತ್ತಿದ್ದಳು. ನಾನು ಮರೆಗುಳಿಯಾಗಿದ್ದರಿಂದ ಅಂಗಿಯ ಕೆಳಗೆ ಗಂಟು ಹಾಕಿ ಕಳಿಸುತ್ತಿದ್ದಳು. ಶ್ರೀ ಸಿದ್ಧೇಶ್ವರ ರಸ್ತೆಯ ಮರಗಳ ಸಾಲಿನ ನೆರಳಲ್ಲಿ ನನ್ನ ತಂದೆಯ ಬಳಿ ಹೋಗುವ ಮೊದಲೆ ಅಂಗಿಯ ಗಂಟು ಹಾಕಿದ ವಿಚಾರವೇ ಮರೆತುಹೋಗುತ್ತಿತ್ತು! ಹೀಗೇಕೆ ಗಂಟು ಹಾಕಿಕೊಂಡಿರುವೆ ಎಂದು ನನಗೆ ನಾನೇ ಬೇಸರಪಟ್ಟುಕೊಂಡು ಅದನ್ನು ಬಿಚ್ಚುತ್ತಿದ್ದೆ. ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋದಾಗ ಸೇಂಗಾ ಕೊಡಿಸಲು ಹೇಳುತ್ತಿದ್ದೆ. ಕೈಗೆಟಕುವ ದರದಲ್ಲಿ ಸಿಗುವ ಸೇಂಗಾ ಬೆಲ್ಲ ಎಂದರೆ ಬಡ ಹುಡುಗರಿಗೆ ಪಂಚಪ್ರಾಣವಾಗಿದ್ದ ದಿನಗಳವು.

ವಿಜಾಪುರದ ಮಾರುಕಟ್ಟೆಯಲ್ಲಿ ವಿಶಿಷ್ಟವಾದ ಹುರಿದ ಸೇಂಗಾ ಸಿಗುತ್ತವೆ. ಅವುಗಳನ್ನು ಉಸುಕಿನಲ್ಲಿ ಹುರಿಯುತ್ತಾರೆ ಎಂದು ಕೇಳಿದ್ದೇನೆ. ಆ ರುಚಿಯೇ ಬೇರೆ. ಆ ಸೇಂಗಾ ತೆಗೆದುಕೊಂಡು ಅಡತಿ ಅಂಗಡಿಯ ವಖಾರದಲ್ಲಿ ಒಟ್ಟಿದ ಬೆಲ್ಲದ ಪೆಂಟಿಗಳ ಕಡೆಗೆ ಹೋಗುತ್ತಿದ್ದೆ. ಆ ಬೆಲ್ಲದ ಪೆಂಟಿಗಳ ಮೇಲೆ ಹೋಲ್‌ಸೇಲ್ ಖರೀದಿದಾರರು ಸ್ಯಾಂಪಲ್ ನೋಡಿ ಇಟ್ಟಿರುವ ಕಣ್ಣಿಗಳನ್ನು ಒಂದೊಂದೇ ತೆಗೆದುಕೊಂಡು ಬೆಲ್ಲದ ಜೋಡಿ ತಿನ್ನುವ ಆನಂದವೇ ಆನಂದ. ಜೊತೆಗೆ ಡಿ.ಸಿ. ಕರೆಂಟಿನ (ಆಗ ಎ.ಸಿ. ಕರೆಂಟ್ ಇದ್ದಿದ್ದಿಲ್ಲ) ಲೈಟ್ ಬಟನ್ ಆನ್ ಆಫ್ ಮಾಡುವ ಚೇಷ್ಟೆ ಬೇರೆ. ಅಲ್ಲೀಬಾದಿಯಲ್ಲಿದ್ದಾಗ ವಿದ್ಯುದ್ದೀಪಗಳ ಕಲ್ಪನೆಯೆ ಇರಲಿಲ್ಲ. ವಿಜಾಪುರಕ್ಕೆ ಬಂದ ಮೇಲೆ ಯಾವುದೇ ಬಾಡಿಗೆ ಮನೆಯಲ್ಲಿ ಆ ವ್ಯವಸ್ಥೆ ಇರಲಿಲ್ಲ. ಚಿಮಣಿ (ಸೀಮೆ ಎಣ್ಣೆ ಬುಡ್ಡಿ) ಬೆಳಕೇ ಗತಿ.

ಆ ಕಾಲದಲ್ಲಿ ವಿಜಾಪುರಕ್ಕೆ ‘ಫಕೀರ ಬಸ್ತಿ’ ಎಂದು ಬಡ ಜನರು ಹತಾಶರಾಗಿ ಕರೆಯುತ್ತಿದ್ದರು. ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಇರಲಿಲ್ಲ. ಎಲ್ಲೆಂದರಲ್ಲಿ ನೂರಾರು ಮಸೀದಿಗಳು ಮತ್ತು ಹಾಳು ಬಾವಿಗಳಿದ್ದವು. ಅನೇಕ ನಿರ್ಗತಿಕರು, ಬಡವರು ಮತ್ತು ವಯಸ್ಸಾದವರು ಹೀಗೆ ಖಾಲಿಬಿದ್ದ ಮಸೀದಿಗಳ ಒಳಗೆ ಮಲಗುತ್ತಿದ್ದರು. ಇಂಥವರಲ್ಲಿ ಬಹುಪಾಲು ಮಂದಿ ಒಂದಿಷ್ಟು ಸೇಂಗಾ ಮತ್ತು ಬೆಲ್ಲ ತಿಂದು ನೀರು ಕುಡಿದು ಮಲಗುವ ಪರಿಸ್ಥಿತಿ ಇತ್ತು.

(ಶ್ರೀ ಸಿದ್ಧೇಶ್ವರ ದೇವಾಲಯದ ಒಳಾಂಗಣ.)

ಹಾವುಗಾರರು, ಕೈಚಳಕ ಮಾಡುವವರು, ಕರಡಿ ಕುಣಿತದವರು, ಮಂಗನ ಆಡಿಸುವವರು, ಸಸ್ಯ ಹಾಗೂ ಪ್ರಾಣಿಜನ್ಯ ಔಷಧಿ ಮಾರುವವರು ಬಜಾರದಲ್ಲಿ ಬಂದರೆ ಸಾಕು. ಸುತ್ತುವರಿದು ಗಂಟೆಗಂಟಲೆ ನೋಡುತ್ತ ನಿಲ್ಲುವುದೇ ನಿರುದ್ಯೋಗಿಗಳ ಕೆಲಸವಾಗಿತ್ತು. ಆ ಔಷಧಿ ಮಾರುವ ನಿರಕ್ಷರಿಗಳು ನಾಟಿವೈದ್ಯರೂ ಆಗಿರುತ್ತಿದ್ದರು. ಅವರು ನಾಡಿ ಪರೀಕ್ಷೆ ಮಾಡುತ್ತಿದ್ದರು. ಶಕ್ತಿವರ್ಧಕ ಔಷಧಿ ಮಾರುತ್ತಿದ್ದರು. ಗುಪ್ತರೋಗ, ಸೊಂಟನೋವು, ಮೊಳಕಾಲು ನೋವಿಗೂ ಔಷಧಿ ರೆಡಿ ಇರುತ್ತಿತ್ತು. ಯಾರದಾದರೂ ಹಲ್ಲು ನೋಯುತ್ತಿದ್ದರೆ ಯಾವುದೋ ಪೌಡರ್ ಹಚ್ಚಿ ಹಲ್ಲು ಕಿತ್ತು ಅವರ ಕೈಯಲ್ಲಿ ಕೊಡುತ್ತಿದ್ದರು. ಹೀಗೆ ಅದೊಂದು ವಿಚಿತ್ರ ವರ್ಣರಂಜಿತ ಜಗತ್ತಾಗಿತ್ತು.

ಜನಸಮುದಾಯದ ವಾರದ ಸಂತೆ, ಕುರಿ ಕೋಳಿ ದನಗಳ ಸಂತೆ, ಬಟ್ಟೆ ಖರೀದಿ ಮುಂತಾದ ಪ್ರಸಂಗಗಳು ಮಾತುಗಾರಿಕೆಯಿಂದ ಕೂಡಿರುತ್ತಿದ್ದವು. ಚೌಕಾಷಿ ಮಾಡುವುದು ಗಿರಾಕಿಗಳ ಆಜನ್ಮಸಿದ್ಧ ಹಕ್ಕಾಗಿತ್ತು. ವಸ್ತುಗಳ ಬೆಲೆಗಳ ವಿಚಾರದಲ್ಲಿ ಕೊಸರಾಟ ನಡೆದೇ ಇರುತ್ತಿತ್ತು. ಮಾಲೀಕ ಹೆಚ್ಚಿನ ಬೆಲೆ ಹೇಳುವುದು, ಗಿರಾಕಿ ಕಡಿಮೆ ಕೇಳುವುದು, ಮುಂದೆ ಹೋದ ಹಾಗೆ ಮಾಡಿ ಮತ್ತೆ ವಾಪಸ್ ಬಂದು ಕೇಳುವುದು. ವ್ಯಾಪಾರ ಕುದುರದಿದ್ದರೆ ನಾಲ್ಕಾರು ಅಂಗಡಿಗಳನ್ನು ಸುತ್ತಿಕೊಂಡು ಬರುವುದು. ಕೊನೆಗೆ ಮೊದಲಿನ ಅಂಗಡಿಯಲ್ಲಿ ಕೊಸರಾಟದಿಂದ ಬಂದ ರೇಟೇ ಸರಿ ಎಂದನಿಸಿ ಅಲ್ಲಿಗೇ ಹೋಗಿ ಖರೀದಿಸುವುದು ನಡೆದೇ ಇರುತ್ತಿತ್ತು. ಕೊನೆಗೆ ಅವರೆಲ್ಲ ಒಂದಾಗಿ ನಗುತ್ತ ವ್ಯವಹಾರ ಮುಗಿಸುತ್ತಿದ್ದರು. ಇಂಥ ಸಂದರ್ಭಗಳಲ್ಲಿ ಅವರ ಮಾತಿನ ವರಸೆ ಕೇಳುವ ಖುಷಿಯೇ ಬೇರೆ.

ನಮ್ಮ ಜನಸಾಮಾನ್ಯರ ದೈನಂದಿನ ಭಾಷಾ ಸಾಮರ್ಥ್ಯ, ತರ್ಕಬದ್ಧವಾದ ಸಂಭಾಷಣೆ, ಇದ್ದುದರಲ್ಲೇ ಚೆನ್ನಾಗಿ ಬದುಕುವ ಚಾಣಾಕ್ಷತನ, ನಾಲ್ಕು ದುಡ್ಡು ಉಳಿಸಿಕೊಳ್ಳುವಲ್ಲಿನ ಶ್ರಮ, ಆದರೂ ವ್ಯಾಪಾರಿಗಳದ್ದೇ ಗುಪ್ತ ವಿಜಯ ಎಲ್ಲವೂ ನಿತ್ಯ ಜೀವನದ ಆಗುಹೋಗುಗಳಲ್ಲಿ ಸ್ಥಾನ ಪಡೆದಿದ್ದವು. ಸಿದ್ಧೇಶ್ವರ ಗುಡಿ ರಸ್ತೆಯ ಎರಡೂ ಕಡೆ ಕಿಲೋ ಮೀಟರ್ ಉದ್ದ ರವಿವಾರ ಸಂತೆ ನಡೆಯುತ್ತಿತ್ತು. ಸಂತೆಯಲ್ಲಿ ಹಳ್ಳಿಗರು ಕೂಡ ತಮ್ಮ ತೋಟ, ಹೊಲಗಳ ವಸ್ತುಗಳನ್ನು ಮಾರಾಟಕ್ಕೆ ತರುತ್ತಿದ್ದರು. ದೈನಂದಿನ ಬದುಕಿಗೆ ಬೇಕಾದ ಎಲ್ಲ ನಮೂನೆಯ ವಸ್ತುಗಳ ಮಾರಾಟವಾಗುತ್ತಿತ್ತು. ತಂದೆಯ ಬೆನ್ನು ಹತ್ತಿ ರವಿವಾರ ಸಂತೆಗೆ ಹೋಗುವುದು ಸಂತೋಷ ಕೊಡುತ್ತಿತ್ತು. ಅವರು ಮನೆಗೆ ಬೇಕಾದ ಏನೆಲ್ಲ ಕೊಂಡರೂ ಮಕ್ಕಳಿಗಾಗಿ ಕಬ್ಬು, ಪೇರು, ಸೇವು ಚುರುಮುರಿ, ಬಿಸಿಬಿಸಿ ಮಿರ್ಚಿಭಜಿ ಮುಂತಾದವು ಗ್ಯಾರಂಟಿ.

ಸಾಮಾನು ಸರಂಜಾಮುಗಳಿಂದ ಉರಿಗೆ ಹೋಗುವವರು ಮತ್ತು ಊರಿಂದ ಬರುವವರು ಹೆಚ್ಚಾಗಿ ಟಾಂಗಾ ಬಳಸುತ್ತಿದ್ದರು. ಉಳಿದಂತೆ ಕೆಲ ವೈದ್ಯರು, ವಕೀಲರು ಮತ್ತು ಅಧಿಕಾರಿಗಳು ಕೂಡ ಟಾಂಗಾ ಬಳಸುತ್ತಿದರು. ಬಹುತೇಕ ಜನರು ಶಾಲೆ, ಕಾಲೇಜು, ಕಚೇರಿ ಮತ್ತು ತಮ್ಮ ತಮ್ಮ ಉದ್ಯೋಗಗಳಿಗೆ ನಡೆಯುತ್ತಲೇ ಹೋಗುತ್ತಿದ್ದರು.
ಧೋತರ, ನೆಹರೂ ಷರ್ಟ್, ರುಮಾಲು, ಇಜಾರ (ಪೈಜಾಮ) ಉದ್ದ ತೋಳಿನ ಅಂಗಿ, ಗಾಂಧಿ ಟೋಪಿ ಎಲ್ಲೆಡೆ ಹೆಚ್ಚಾಗಿ ಕಾಣುತ್ತಿದ್ದವು. ‘ವಿಜಾಪುರದಾಗ ಇಜಾರದವರು ಹಜಾರ ಮಂದಿ’ ಎಂದು ಹೊರಗಿನವರು ಹೇಳುತ್ತಿದ್ದರು. ಬಟ್ಟೆಗಳಲ್ಲಿ ಬಿಳಿಯ ಬಣ್ಣದ್ದೇ ಕಾರುಬಾರು. ಉಳಿದಂತೆ ಪ್ರಾಧ್ಯಾಪಕರು, ಎಂಜಿನಿಯರ್‌ಗಳು, ಡಾಕ್ಟರು ಮುಂತಾದವರು ಪ್ಯಾಂಟು ಕೋಟುಗಳಿಗೆ ಹೊಂದಿಕೊಂಡಿದ್ದರು. ಹಳ್ಳಿಯವರು, ವಿವಿಧ ವ್ಯಾಪಾರಿಗಳು, ಅಡತಿ ಅಂಗಡಿಯವರು ಎಷ್ಟೇ ಶ್ರೀಮಂತರಿದ್ದರೂ ಬಟ್ಟೆ ವಿಚಾರದಲ್ಲಿ ಷೋಕಿ ಮಾಡುತ್ತಿರಲಿಲ್ಲ. ಕೆಲ ಊರಗೌಡರು ಧೋತರ ಮತ್ತು ಫುಲ್‌ಷರ್ಟ್ ಮೇಲೆ ಕೋಟ್ ಹಾಕಿಕೊಂಡು ರುಮಾಲು ಸುತ್ತಿಕೊಳ್ಳುತ್ತಿದ್ದರು. ರಟ್ಟಿನ ಕರಿಟೊಪ್ಪಿಗೆಗಳು ಕೂಡ ಚಾಲ್ತಿಯಲ್ಲಿದ್ದವು. ಮಕ್ಕಳಿಗೆ ಪ್ರೀತಿಯಿಂದ ಜರಿಟೋಪಿ ಹಾಕುತ್ತಿದ್ದರು.

ಹೆಣ್ಣುಮಕ್ಕಳು ಹೆಚ್ಚಾಗಿ ಇಳಕಲ್ ಸೀರೆಯ ಕಡೆಗೆ ಒಲವು ತೋರಿಸುತ್ತಿದ್ದರು. ಬಡವರಿಂದ ಶ್ರೀಮಂತರ ವರೆಗೆ ಎಲ್ಲ ಪ್ರಕಾರದ ಇಳಕಲ್ ಸೀರೆಗಳು ವಿವಿಧ ದರಗಳಲ್ಲಿ ಸಿಗುತ್ತಿದ್ದವು. ಹಳ್ಳಿಯ ಹೆಣ್ಣುಮಕ್ಕಳು ಒಂಬತ್ತು ಮೊಳದ ಸೀರೆ ಉಟ್ಟರೆ, ಲಂಗ ತೊಡುವ ಯುವತಿಯರು ಆರು ಮೊಳದ ಪತ್ತಲ ಉಡುತ್ತಿದ್ದರು. ಹುಡುಗಿಯರು ಲಂಗ ದಾವಣಿ ತೊಡುತ್ತಿದ್ದರು. ಅವರಲ್ಲಿನ ಕೆಲವರಿಗೆ ಪಂಜಾಬಿ ಡ್ರೆಸ್ ಫ್ಯಾಷನ್ ಆಗಿತ್ತು. ಮುಂದೆ ಕೆಲ ವರ್ಷಗಳ ನಂತರ ಹೈಸ್ಕೂಲು ಮತ್ತು ಕೆಲ ಕಾಲೇಜು ಹುಡುಗಿಯರಲ್ಲಿ ಸ್ಕರ್ಟ್ ಮತ್ತು ಟಿ ಷರ್ಟ್ ಟ್ರೆಂಡ್ ಬೆಳೆದು ಉಡುಪಿನ ವಿಚಾರದಲ್ಲಿ ದೊಡ್ಡ ಕ್ರಾಂತಿಯೆ ಆಯಿತು. ಹುಡುಗರು ಬೆಲ್ ಬಾಟಂ ಪ್ಯಾಂಟ್ ಮತ್ತು ಟಿ ಷರ್ಟ್‌ಗೆ ಮಾರುಹೋದರು. ಯುವತಿಯರಲ್ಲಿನ ಈ ಸ್ಕರ್ಟ್ ಕ್ರಾಂತಿಯಿಂದ ಪಾಲಕರು ಬೆಚ್ಚಿ ಬಿದ್ದರು. ನಮ್ಮ ಕಡೆಯ ಯವತಿಯರ ಬದುಕಿನಲ್ಲಿ ಮೊದಲ ಕ್ರಾಂತಿಕಾರಿ ಹೆಜ್ಜೆ ಇದಾಗಿತ್ತು. ಕಾಲೇಜು ಹುಡುಗಿಯರಲ್ಲಿ ಕೂಡ ಕೆಲವರು ಸ್ಕರ್ಟ್ ಧರಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡಿದರು. ತಮ್ಮ ಹೆಣ್ಣುಮಕ್ಕಳು ಮೊಳಕಾಲು ಕಾಣುವ ಸ್ಕರ್ಟ್ ಹಾಕುವುದಕ್ಕೆ ಕೆಲ ಪಾಲಕರು ವಿರೋಧ ವ್ಯಕ್ತಪಡಿಸಿದಾಗ ಆ ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದರು. ಕೆಲವರು ದಿನಗಟ್ಟಲೆ ಊಟ ಬಿಟ್ಟು ಸತ್ಯಾಗ್ರಹ ಮಾಡಿದರು. ಕೊನೆಗೂ ಪಾಲಕರು ಮಣಿಯಲೇ ಬೇಕಾಯಿತು. ಕೆಲ ಪ್ರಾಧ್ಯಾಪಕರು ಯುವತಿಯರಿಗೆ ಸಾಂಸ್ಕೃತಿಕ ಉಪದೇಶ ಮಾಡಿದರೂ ಪ್ರಯೋಜನವಾಗಲಿಲ್ಲ. 60ರ ದಶಕದ ಉತ್ತರಾರ್ಧ ಮತ್ತು 70ರ ದಶಕದ ಪೂರ್ವಾರ್ಧದಲ್ಲಿ ಸ್ಕರ್ಟ್ ಪ್ರಭಾವ ಜೋರಾಗಿತ್ತು. ಮಹಿಳೆಯರ ಈ ಸ್ಕರ್ಟ್ ರೆವಲ್ಯೂಷನ್ ಐತಿಹಾಸಿಕವಾಗಿದೆ. ಇಂಥ ಅನೇಕ ಕ್ರಾಂತಿಗಳು ಸಮಾಜದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಬದಲಾವಣೆ ನಿರಂತರವಾಗಿರುತ್ತದೆ.

ಯಾವುದೇ ಬದಲಾವಣೆ ಮಾನವ ಸಂಬಂಧಗಳನ್ನು ಕಳೆದುಕೊಳ್ಳುವಂಥದ್ದಿರಬಾರದು. ಮೊನ್ನೆ ನನ್ನ ಕಿರಿಯ ಮಗಳು ಬೆಂಗಳೂರಿನಿಂದ ಕರೆ ಮಾಡಿದ್ದಳು. ಧಾರವಾಡ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಲು ತಿಳಿಸಿದಳು. ಏಕೆ ಎಂದು ಕೇಳಿದಾಗ ಆಕೆ ಹೇಳಿದ್ದು: ನೀವಿದ್ದ ಜಾಗದಲ್ಲಿ ಒಂದು ವಸ್ತು ಕೂಡ ಸಿಗುವುದಿಲ್ಲ. ದೂರದ ಅಂಗಡಿಗಳಿಗೆ ಹೋಗಬೇಕು, ಇನ್ನೂ ದೂರದ ಪೇಟೆಗೆ ಹೋಗಬೇಕು, ಇಲ್ಲದಿದ್ದರೆ ತರಕಾರಿ ಮುಂತಾದ ವಸ್ತು ಮಾರುವವರು ಮನೆ ಮುಂದೆ ಬರುವವರೆಗೆ ಕಾಯಕಬೇಕು ಎಂದು ಮುಂತಾಗಿ ತಿಳಿಸಿದಳು.

ಅವಳು ಬೆಂಗಳೂರಲ್ಲಿ ಬೆಳೆದು ಇಂಗ್ಲಂಡ್‌ನಲ್ಲಿ ಇದ್ದು ಮರಳಿ ಬೆಂಗಳೂರಿಗೆ ಬಂದವಳು. ಈಗ ಅಮೆರಿಕದ ಮಕ್ಕಳಿಗೆ ಆನ್‌ಲೈನ್ ಇಂಗ್ಲಿಷ್ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಫೋನ್ ಪೇ, ಗೂಗಲ್ ಪೇ ಅಥವಾ ಫೋನ್ ಮೂಲಕ ತನ್ನ ಮನೆಗೆ ಬೇಕಾದುದನ್ನು ತರಿಸಿಕೊಳ್ಳುತ್ತಾಳೆ. ಅನೇಕ ಸಲ ಊಟವನ್ನು ಕೂಡ. ಮನೆಗೆ ಬೇಕಾದ ಚಿಕ್ಕಪುಟ್ಟ ಮತ್ತು ದೊಡ್ಡ ಉಪಕರಣಗಳು ಕೋರಿಯರ್ ಮೂಲಕ ಮನೆಗೆ ಬರುತ್ತವೆ. ಹೋಗಲೇ ಬೇಕೆಂದರೆ ಮಾಲ್‌ಗಳು ಇದ್ದಾವಲ್ಲಾ.

ಆಧುನಿಕ ಜಗತ್ತಿನಲ್ಲಿ ಸಂಪರ್ಕ ಸಾಧನಗಳು ಬಹಳಷ್ಟಾಗಿವೆ. ಆದರೆ ಅವೆಲ್ಲ ಮಾನವ ಸಂಪರ್ಕವನ್ನು ತಪ್ಪಿಸುತ್ತಿವೆ. ಹಣವೊಂದಿದ್ದರೆ ಸಾಕು; ಎಲ್ಲ ಈಜಿ.
ಯಾರ ಭೇಟಿಯೂ ಇಲ್ಲದೆ ಜಗತ್ತಿನಲ್ಲಿ ಬದುಕುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ದೊಡ್ಡ ನಗರಗಳ ಐಷಾರಾಮಿ ಬದುಕಿನ ಜನರು ತಮ್ಮ ಪರಿಸರದಲ್ಲಿನ ಜನರ ಜೊತೆ ಸಂಬಂಧ ಇಟ್ಟುಕೊಳ್ಳಲೂ ಹಿಂಜರಿಯುತ್ತಾರೆ. ಅವರ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೂ ಗೊತ್ತಿರುವುದಿಲ್ಲ. ಟಿ.ವಿ. ಸೀರಿಯಲ್‌ಗಳ ಪಾತ್ರಗಳೇ ಅವರಿಗೆ ಆಪ್ತವಾಗುತ್ತವೆ. ದೈತ್ಯನಗರಗಳಲ್ಲಿ ಇವೆಲ್ಲ ಅನಿವಾರ್ಯವಾಗಿರಬಹುದು. ಆದರೆ ಪಟ್ಟಣ ಪ್ರದೇಶಗಳಲ್ಲಿ ಮತ್ತು ಚಿಕ್ಕ ನಗರಗಳಲ್ಲಿ ಕೂಡ ಈ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ಮಾನವನ ಭಾಷೆ ಮತ್ತು ಸಾಂಸ್ಕೃತಿಕ ಸಂಬಂಧಗಳ ಮೇಲೂ ಪೆಟ್ಟು ಬೀಳುತ್ತಿದೆ. ಸಂಬಂಧಗಳು ಸ್ಥಗಿತಗೊಳ್ಳುತ್ತಿವೆ. ಮೊಬೈಲ್ ಸಂಬಂಧಗಳು ಹೆಚ್ಚಾಗುತ್ತಿವೆ.

ನಮ್ಮ ಮನೆಯ ಬಳಿ ಹಾಲು, ಮೊಸರು, ತರಕಾರಿ, ಜೇನು, ಕಂಬಳಿ, ಜಮಖಾನೆ, ಪ್ಲ್ಯಾಸ್ಟಿಕ್ ಚಾಪೆ, ಕುರ್ಚಿ, ಇತರೆ ಅಡುಗೆ ಮನೆಗೆ ಬೇಕಾದ ಸಾಮಾನು ಮಾರುವರು ಬರುತ್ತಾರೆ. ಮುಂದುಗಡೆಯ ಖಾಲಿ ಜಾಗದಲ್ಲಿ ಹಸಿರು ಇರುವುದರಿಂದ ಎಮ್ಮೆ ಆಕಳು ಹೊಡೆದುಕೊಂಡು ಬರುತ್ತಾರೆ. ಗಿಡಗಂಟಿಗಳಿರುವುದರಿಂದ ಆಡುಗಳನ್ನು ತೆಗೆದುಕೊಂಡು ಬರುತ್ತಾರೆ. ಸಣ್ಣಪುಟ್ಟ ಸ್ಟೀಲ್ ಸಾಮಾನುಗಳನ್ನು ಕೊಟ್ಟು ಬಾಚಿಕೊಂಡು ಉದುರಿದ ಕೂದಲು ಒಯ್ಯುವವರೂ ಬರುತ್ತಾರೆ. ಚಾಕುಚೂರಿ ರಿಪೇರಿ ಮಾಡುವವರು ಬರುತ್ತಾರೆ. ಖಾಲಿ ಬಿದ್ದ ಸೈಟುಗಳಲ್ಲಿ ಗಿಡಗಂಟಿಗಳು ಬೆಳೆದ ಕಾರಣ ಗೊಲ್ಲರು ಹಂದಿಗಳನ್ನು ತಂದು ಬಿಡುತ್ತಾರೆ. ಗಾಳಿಪಟ ಆಡುವ ಮಕ್ಕಳು, ಹೋಳಿ ಹುಣ್ಣಿಮೆಯಲ್ಲಿ ಹಲಗೆ ಬಾರಿಸುವ ಮಕ್ಕಳು, ನನ್ನ ಮನೆ ಮುಂದಿನ ಸ್ಟಾರ್ ಫ್ರೂಟ್ ಗಿಡದ ಹಣ್ಣುಗಳಿಗಾಗಿ ಆಚೆ ಈಚೆ ಮನೆಯ ಮಕ್ಕಳು ಬರುತ್ತವೆ. ನುಗ್ಗೆಕಾಯಿ ಇಲ್ಲವೆ ತೊಪ್ಪಲಿಗಾಗಿ, ಅರಿಷಿನ ಎಲೆಗಾಗಿ, ಲೋಳಸರಕ್ಕಾಗಿ ಅವರಿವರು ಬರುತ್ತಲೇ ಇರುತ್ತಾರೆ. ತಿಂಗಳಿಗೊಮ್ಮೆಯಾದರೂ ಪಾಪ ಗೂರ್ಕಾ ಬರುತ್ತಾನೆ. ಹೀಗೆ ಜೀವನ ನಮ್ಮ ಏರಿಯಾಗೆ ಭೇಟಿ ಕೊಡುತ್ತಲೇ ಇರುತ್ತದೆ. ಆಗಾಗ ಇಂಥ ಜೀವನದ ಜೊತೆ ನನ್ನ ಮಾತುಕತೆ ನಡೆದೇ ಇರುತ್ತದೆ.

ಜನರ ಸಣ್ಣತನ, ದೊಡ್ಡತನ, ಪ್ರೀತಿ, ಸ್ನೇಹ, ಗಾಳಿಮಾತು, ಸ್ವಾರ್ಥ, ಉದಾತ್ತ ಚಿಂತನೆಗಳು, ವೈವಿಧ್ಯಮಯವಾದ ಮಾತಿನ ವೈಖರಿ, ಸಂದರ್ಭಕ್ಕೆ ತಕ್ಕಂತೆ ಮಾತಿನ ಬಳಕೆಯ ಚಾಣಾಕ್ಷತನ, ಏನೇ ಆದರೂ ಸಂಬಂಧಗಳನ್ನು ಕೆಡಸಿಕೊಳ್ಳದೆ ಮುಂದುವರಿಯುವ ಸಂಯಮ ಮುಂತಾದ ಅವರ ಗುಣಗಳು ನಮಗೆ ಅರಿವಿಲ್ಲದ ಲೋಕವೊಂದರ ದರ್ಶನ ಮಾಡಿಸುತ್ತವೆ. ಒಟ್ಟಾರೆ ಅವರ ಬದುಕು ಅರ್ಥವಾಗದೆ ನಮ್ಮ ಬದುಕು ವ್ಯರ್ಥ.

(ಚಿತ್ರಗಳು: ಸುನೀಲಕುಮಾರ ಸುಧಾಕರ)