ಉದ್ಯೋಗ ಬೇಟೆಯಲ್ಲಿರುವ ಜನರಿಗೆ ಕೊಡುವ ಧನಸಹಾಯ ಆ ಒಬ್ಬ ವ್ಯಕ್ತಿಯ ಜೀವನಕ್ಕೇ ಸಾಲದಾಗಿದೆ. ಬೇಸತ್ತು ಯಾವುದಾದರೂ ಸರಿಯೇ ಹೇಗಾದರೂ ಸರಿಯೇ ಕೆಲಸವನ್ನು ಹಿಡಿಯೋಣವೆಂದು ಹೊರಟರೆ ಆ ಉದ್ಯೋಗದಿಂದ ಬರುವ ಆದಾಯ ಏತಕ್ಕೂ ಸಾಲುವುದಿಲ್ಲ. ತಮಗೆ ಒಗ್ಗದ ಉದ್ಯೋಗವನ್ನು ಮಾಡುವ ಅನಿವಾರ್ಯತೆ ಹಲವರಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತದೆ. ಮಾನಸಿಕ ರೋಗಗಳು ಕಾಣಿಸುತ್ತವೆ. ಜೊತೆಗೆ ಅಲ್ಲಿಯವರೆಗೂ ಸರಕಾರ ಕೊಡುತ್ತಿದ್ದ ಧನಸಹಾಯಕ್ಕೂ ಕೊಕ್. ಆರ್ಥಿಕ ಸಬಲತೆ ಕುರಿತು ಕೆಲಸ ಮಾಡುವ ಸ್ವಯಂಸೇವಾ ಸಂಘಟನೆಗಳಿಗೆ, ಕಾರ್ಯಕರ್ತರಿಗೆ ನಿರಂತರ ಕೆಲಸವಿದ್ದರೂ ಅವರ ಮಾನಸಿಕ ಸದೃಢತೆಗೂ ಧಕ್ಕೆ ಬರುವ ಸೂಚನೆಗಳಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ
ಸತತವಾದ ಬೆಲೆಯೇರಿಕೆ, ದಿನ ಕಳೆದಷ್ಟೂ ತುಟ್ಟಿಯಾಗುತ್ತಿರುವ ನಿತ್ಯಜೀವನ ಆಸ್ಟ್ರೇಲಿಯಾದ ಸಾಮಾನ್ಯ ಜನರ ನಿದ್ದೆ ಕಸಿದಿದೆ. ಇದೇ ವಾರ ಕೇಂದ್ರ ಸರಕಾರವು ಎರಡು ವಾರಕ್ಕೊಮ್ಮೆ ತಾನು ನೀಡುವ ಯೋಗಕ್ಷೇಮ ಧನಸಹಾಯಗಳಲ್ಲಿ (welfare benefits) ಕೆಲವನ್ನು 3.7% ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಅವುಗಳಲ್ಲಿ ಮುಖ್ಯವಾದವು ಕೆಲಸದ ಬೇಟೆಯಲ್ಲಿರುವ ನಿರುದ್ಯೋಗಿಗಳಿಗೆ ಕೊಡುವ ಸಹಾಯವು ಪ್ರತಿ ಎರಡು ವಾರಗಳಿಗೊಮ್ಮೆ 25 ಡಾಲರ್ ಹೆಚ್ಚಲಿದೆ. ಒಬ್ಬಂಟಿಯಾಗಿ ಬದುಕುತ್ತಿರುವವರಿಗೆ ಸಿಗುವ ವೃದ್ಧಾಪ್ಯ ವೇತನ ಮತ್ತು ವಿಕಲತೆ ವೇತನದಲ್ಲಿ ಎರಡು ವಾರಕ್ಕೊಮ್ಮೆ 37 ಡಾಲರ್ ಹೆಚ್ಚುವರಿ ಕಾಣಿಸಲಿದೆ. ಈ ಗುಂಪುಗಳ ಪಟ್ಟಿಯಲ್ಲಿರುವವರಿಗೆ ಹೆಚ್ಚಲಿರುವ 3.7% ಧನಸಹಾಯ ಅಷ್ಟೇನೂ ನೆಮ್ಮದಿ ತಂದಿಲ್ಲ. ಜನರು ಅದು ಸಮುದ್ರದಲ್ಲಿ ಬೀಳುವ ಒಂದು ಹನಿ, ಅದರಿಂದೇನೂ ನಮ್ಮ ದಿನನಿತ್ಯದ ಬವಣೆ ತಪ್ಪುವುದಿಲ್ಲ ಎಂದಿದ್ದಾರೆ.
ಯೋಗಕ್ಷೇಮ ಧನಸಹಾಯದ ಅನೇಕ ಕಾರ್ಯಯೋಜನೆಗಳಿದ್ದರೂ ಆ ಬಗೆಯ ಧನಸಹಾಯ ಎಲ್ಲರಿಗೂ ಸುಲಭವಾಗಿ ಎಟುಕುವುದಿಲ್ಲ. ಅವನ್ನು ಪಡೆಯಲು ಅರ್ಜಿ ಹಾಕಿಕೊಳ್ಳುವ ಮಂದಿ ಸರಕಾರಕ್ಕೆ ಹಲವಾರು ಸಾಕ್ಷಿ, ಆಧಾರಗಳನ್ನು ಒದಗಿಸಬೇಕು. ಆದರೂ ಕೂಡ ಧನಸಹಾಯ ಸಿಗುತ್ತದೆಂಬ ಭರವಸೆಯಿರುವುದಿಲ್ಲ. ಕಾರಣ ಕಠಿಣ ವ್ಯವಸ್ಥೆ, ಅದರಲ್ಲಿರುವ ಅನೇಕ ಅಡ್ಡಗೋಡೆಗಳನ್ನು ದಾಟುವುದು ಅನೇಕರಿಗೆ ಸುಲಭಸಾಧ್ಯವಿರುವುದಿಲ್ಲ. ಉದಾಹರಣೆಗೆ ಕುಟುಂಬದಲ್ಲಿನ ಒಬ್ಬ ವ್ಯಕ್ತಿ ಉದ್ಯೋಗ ಸಬಲತೆ ಮತ್ತು ಉದ್ಯೋಗ ಹುಡುಕಾಟ ಎನ್ನುವ ಕಾರ್ಯಯೋಜನೆಗೆ ಸೇರಿದ ಧನಸಹಾಯಕ್ಕೆಂದು ಅರ್ಜಿ ಸಲ್ಲಿಸಬೇಕಾದರೆ ಅವರ ಮನೆಯಲ್ಲಿ ವಾಸಿಸುವ (ಒಂದೇ ಮನೆ ವಿಳಾಸವಿರುವ) ಇತರೆ ಎಲ್ಲಾ ಉದ್ಯೋಗ-ವಯಸ್ಕರ ಮಾಹಿತಿ ಮತ್ತು ಉದ್ಯೋಗದಲ್ಲಿರುವವರ ಆದಾಯ ವಿವರಗಳನ್ನು ಕೊಡಬೇಕು. ಎಲ್ಲರಿಗೂ ಸೇರಿರುವ ಎಲ್ಲಾ ಬಗೆಯ ಆಸ್ತಿ ವಿವರಗಳನ್ನು (ಮನೆ, ವಾಹನಗಳು, ಪೀಠೋಪಕರಣ ಇತ್ಯಾದಿ) ಕೊಡಬೇಕು. ಸರಕಾರದ ಧನಸಹಾಯ ವಿಭಾಗದ (Centrelink) ಕೆಲಸಗಾರರು ಸೂತ್ರಗಳನ್ನು ಬಳಸಿ ಹೀಗೆ ಎಲ್ಲದರ ಆರ್ಥಿಕ ಮೌಲ್ಯವನ್ನು ಲೆಕ್ಕ ಹಾಕಿ ಅರ್ಜಿದಾರರಿಗೆ ಎಷ್ಟು ಧನಸಹಾಯ ಸಿಗುತ್ತದೆ ಎಂದು ತಿಳಿಸುತ್ತಾರೆ. ಅನೇಕ ವೇಳೆ ಸರಕಾರವು ನಿಗದಿ ಮಾಡಿರುವ ಸಹಾಯದ ಹಣಕ್ಕೂ ನಿಜವಾಗಿಯೂ ಮಂಜೂರಾಗುವ ಹಣಕ್ಕೂ ವ್ಯತ್ಯಾಸವಿದ್ದು ಅದು ಕಡಿಮೆಯಾಗುವ ಸಂಭವವೇ ಹೆಚ್ಚು.
ಸದ್ಯದ ಬೆಲೆಯೇರಿಕೆಗೆ ಬರೋಣವಂತೆ. ದೇಶದ ಎಲ್ಲೆಡೆಯಲ್ಲೂ, ಮಧ್ಯಮ ಮತ್ತು ಕೆಳಮಧ್ಯಮ ಆದಾಯವರ್ಗದ ಜನರಿಗೆ ಬೆಲೆಯೇರಿಕೆಯು ದುಃಸ್ವಪ್ನವಾಗಿದೆ. ಕೊಳ್ಳುವ ದಿನಸಿ, ತರಕಾರಿ, ಹಣ್ಣು, ಮಾಂಸ, ಹೈನು ಪದಾರ್ಥಗಳು, ಕಾರಿಗೆ ತುಂಬುವ ಪೆಟ್ರೋಲ್ ಮತ್ತು ಡೀಸೆಲ್, ದಿನನಿತ್ಯ ಬಳಕೆಯ ಇತರೆ ವಸ್ತುಗಳ ಬೆಲೆಗಳು ಏರುತ್ತಲೇ ಇರುತ್ತಿದೆ. ಜನರ ಜೀವನಶೈಲಿ ಬದಲಾಗುತ್ತಿದೆ. ಎಲ್ಲಿ ಯಾವ ಸೂಪರ್ ಮಾರ್ಕೆಟ್ ಬೆಲೆಗಳನ್ನು ಇಳಿಸಿದೆ, ಈ ವಾರ ಯಾವ ಸ್ಟೇಷನ್ನಿನಲ್ಲಿ ಪೆಟ್ರೋಲ್ ಕಡಿಮೆ ದರದಲ್ಲಿ ಸಿಗುತ್ತದೆ ಎನ್ನುವುದು ಎಲ್ಲರ ಮಾತಾಗಿದೆ.
ಪ್ರತಿವಾರ ಪೆಟ್ರೋಲ್ ದರ ಎಲ್ಲಿ ಕಡಿಮೆಯಾಗಿದೆ ಎನ್ನುವುದು ನಮ್ಮೆಲ್ಲರ ಬೆಂಬಿಡದ ಹುಡುಕಾಟವಾಗಿದೆ. ರೇಡಿಯೋದಲ್ಲಿ ಪ್ರಕಟಿಸುವ ಮಾಹಿತಿ, ಉದ್ಯೋಗಸ್ಥಳದಲ್ಲಿ ದೊರೆಯುವ ಸಮಾಚಾರವಲ್ಲದೆ ನಾನು ವಾರಕ್ಕೊಮ್ಮೆ ಭೇಟಿಯಾಗುವ ‘ಮಹಿಳಾ ನಡಿಗೆ’ ಗುಂಪಿನಲ್ಲೂ ಕೂಡ ‘ಕಡಿಮೆ ದರಗಳೆಲ್ಲಿವೆ’ ಅನ್ನುವುದು ಮುಖ್ಯಸುದ್ದಿಯಾಗಿದೆ.
ಅನೇಕ ದೇಶಗಳಲ್ಲಿ ನಿತ್ಯಜೀವನದ ವೆಚ್ಚಗಳು ಹೆಚ್ಚಿರುವುದು, ಹೆಚ್ಚುತ್ತಲೇ ಇರುವುದು ಹೊಸತೇನಲ್ಲ. ಆದರೆ ನಮ್ಮಲ್ಲಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಸ್ವಲ್ಪ ಮಟ್ಟಿಗೆ ಬೆಲೆಗಳು ಎಗ್ಗದೇ ಕುಗ್ಗದೇ ಒಂದೇ ಸ್ತರದಲ್ಲಿದ್ದವು. ಕೋವಿಡ್-19 ಕೂಡ ಅದಕ್ಕೆ ಇಂಬು ಕೊಟ್ಟಿತ್ತು. ಆದರೆ ಈ ಎಂಟು ತಿಂಗಳುಗಳಲ್ಲಿ ಏಕಾಏಕಿ ಬೆಲೆಗಳು ಗಗನಕ್ಕೇರಿವೆ. ಯುಕ್ರೇನ್ ದೇಶದ ವಿರುದ್ಧ ರಷ್ಯಾ ದೇಶವು ನಡೆಸಿರುವ ಸಮರವೇ ಈ ಪಾಟಿ ಬೆಲೆಯೇರಿಕೆಗೆ ಕಾರಣ ಎಂದು ಅಮೆರಿಕ, ಬ್ರಿಟನ್ ಮತ್ತು ಯೂರೋಪ್ ದೇಶಗಳು ಹೇಳಿವೆ. ಅದು ನಿಜವೇ ಹೌದು. ತೈಲ ಮತ್ತು ಇತರ ಇಂಧನಗಳ ಪೂರೈಕೆಗೆ ದೊಡ್ಡ ಹೊಡೆತ ಬಿದ್ದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಮದು-ರಫ್ತುಗಳು ಏರುಪೇರಾಗಿವೆ.
‘Welfare Benefits’ ಎನ್ನುವ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳಿರುವ ಅಮೆರಿಕ, ಯುನೈಟೆಡ್ ಕಿಂಗ್ಡಮ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಸರಕಾರಗಳು ಕಡಿಮೆ ಆದಾಯ ವರ್ಗದ ಜನರಿಗೆ ತಾವು ಕೊಡುವ ವಿವಿಧ ಯೋಗಕ್ಷೇಮ ಧನಸಹಾಯವನ್ನು ಏರಿಸಬೇಕಾಗಿದೆ.
ಮತ್ತೆ ನಮ್ಮ ಆಸ್ಟ್ರೇಲಿಯಾದ ಪರಿಸ್ಥಿತಿಗೆ ಬರೋಣ. ಸದ್ಯದ ಈ ವಿಪರೀತ ಬೆಲೆಯೇರಿಕೆ ಪರಸ್ಥಿತಿ ಕಳೆದ ಮೂವತ್ತು ವರ್ಷಗಳಲ್ಲಿ ಯಾವತ್ತೂ ಇದ್ದಿರಲಿಲ್ಲವೆಂದು ಜನರು ಮತ್ತು ಜನಸಮುದಾಯ ಸಂಸ್ಥೆಗಳು ಹೇಳುತ್ತಿದ್ದಾರೆ. ಮಾಧ್ಯಮಗಳು ನಡೆಸಿದ ಸಂದರ್ಶನಗಳು ಕೆಲ ಆಸಕ್ತಿಕರ ವಿಷಯಗಳ ಮೇಲೆ ಬೆಳಕು ಚೆಲ್ಲಿವೆ. ಸರಕಾರಿ ವೃದ್ಧಾಪ್ಯ ವೇತನದ ಜೊತೆಗೆ ತಮ್ಮದೇ ಆದ ಪಿಂಚಣಿ ಇದ್ದರೂ ಕೂಡ ವಯಸ್ಸಾದವರು ಬೆಲೆಯೇರಿಕೆಯ ಬವಣೆಯಿಂದ ಬಳಲುತ್ತಿದ್ದಾರೆ. ಏರುತ್ತಿರುವ ವಯಸ್ಸಿನಿಂದ ಬರುವ ಆರೋಗ್ಯ ಸಮಸ್ಯೆಗಳು, ಔಷಧಿ-ವೈದ್ಯಕೀಯ ಆರೈಕೆ ತುಟ್ಟಿಯಾಗಿದೆ. ಆದರೆ ಆರೋಗ್ಯಕ್ಕೆ ಮೀಸಲಿಟ್ಟಿದ್ದ ಹಣವನ್ನು ಈಗ ಆಹಾರ, ಇಂಧನ ಮತ್ತು ದಿನನಿತ್ಯ ಬಳಕೆಯ ಪದಾರ್ಥಗಳಿಗೆ ವ್ಯಯಿಸಬೇಕಿದೆ. ಇದೇ ರೀತಿ ಚಿಕ್ಕ ಮಕ್ಕಳಿರುವ ಕುಟುಂಬಗಳಲ್ಲಿ ಕೂಡ ಅಲ್ಲಿ ಸಲ್ಲಬೇಕಿದ್ದ ಹಣವನ್ನು ಇಲ್ಲಿ ಉಪಯೋಗಿಸಬೇಕಾದ ಅನಿವಾರ್ಯತೆಯಿದೆ ಎನ್ನುವ ಸನ್ನಿವೇಶವಿದೆ.
ಉದ್ಯೋಗ ಬೇಟೆಯಲ್ಲಿರುವ ಜನರಿಗೆ ಕೊಡುವ ಧನಸಹಾಯ ಆ ಒಬ್ಬ ವ್ಯಕ್ತಿಯ ಜೀವನಕ್ಕೇ ಸಾಲದಾಗಿದೆ. ಬೇಸತ್ತು ಯಾವುದಾದರೂ ಸರಿಯೇ ಹೇಗಾದರೂ ಸರಿಯೇ ಕೆಲಸವನ್ನು ಹಿಡಿಯೋಣವೆಂದು ಹೊರಟರೆ ಆ ಉದ್ಯೋಗದಿಂದ ಬರುವ ಆದಾಯ ಏತಕ್ಕೂ ಸಾಲುವುದಿಲ್ಲ. ತಮಗೆ ಒಗ್ಗದ ಉದ್ಯೋಗವನ್ನು ಮಾಡುವ ಅನಿವಾರ್ಯತೆ ಹಲವರಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತದೆ. ಮಾನಸಿಕ ರೋಗಗಳು ಕಾಣಿಸುತ್ತವೆ. ಜೊತೆಗೆ ಅಲ್ಲಿಯವರೆಗೂ ಸರಕಾರ ಕೊಡುತ್ತಿದ್ದ ಧನಸಹಾಯಕ್ಕೂ ಕೊಕ್. ಆರ್ಥಿಕ ಸಬಲತೆ ಕುರಿತು ಕೆಲಸ ಮಾಡುವ ಸ್ವಯಂಸೇವಾ ಸಂಘಟನೆಗಳಿಗೆ, ಕಾರ್ಯಕರ್ತರಿಗೆ ನಿರಂತರ ಕೆಲಸವಿದ್ದರೂ ಅವರ ಮಾನಸಿಕ ಸದೃಢತೆಗೂ ಧಕ್ಕೆ ಬರುವ ಸೂಚನೆಗಳಿವೆ.
ಇನ್ನೊಂದು ಮುಖ್ಯ ವಿಷಯವೆಂದರೆ ಈ ವರ್ಷ ದೇಶದ ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ಚಿಕ್ಕ ಪಟ್ಟಣಗಳಲ್ಲಿ, ಊರುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಬೆಲೆಯೇರಿಕೆ ತಡೆಯಲಾರದೆ ಮುಖ್ಯನಗರಗಳಿಗೆ ವಲಸೆ ಹೋಗುತ್ತಿವೆ. ಕಾರಣ ಅವರಿರುವ ಸಣ್ಣಪುಟ್ಟ ಊರುಗಳಿಗೆ ಆಹಾರ, ಇಂಧನ, ದಿನನಿತ್ಯದ ವಸ್ತುಗಳ ಸರಬರಾಜು ಕುಂಠಿತವಾಗಿದೆ. ಗಗನಕ್ಕೇರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಅವಶ್ಯಕ ವಸ್ತುಗಳನ್ನು ಪೂರೈಸುತ್ತಿದ್ದ ಟ್ರಕ್ ಮತ್ತು ಲಾರಿಗಳು ಆ ಊರುಗಳಿಗೆ ಹೋಗುತ್ತಿಲ್ಲ. ಅಲ್ಲಿನ ಜನರಿಗೆ ಬೇಕಿರುವ ಪದಾರ್ಥಗಳು ಸಿಕ್ಕುತ್ತಿಲ್ಲ. ಕ್ರಮೇಣವಾಗಿ ಸ್ಥಳೀಯ ಉದ್ಯೋಗಗಳು ಮಾಯವಾಗುತ್ತಿವೆ. ಸರಕಾರದ ಅಲ್ಪಸ್ವಲ್ಪ ಯೋಗಕ್ಷೇಮ ಧನಸಹಾಯವನ್ನು ಅವಲಂಬಿಸುವುದಕ್ಕಿಂತ ನಗರಗಳಿಗೆ ವಲಸೆ ಹೋಗಿ ಅಲ್ಲಿ ವಾಸಿಸುವುದು ಕುಟುಂಬಗಳಿಗೆ ಒಳ್ಳೆಯದು ಎನ್ನುವ ಅಭಿಪ್ರಾಯ ಒಮ್ಮತವಾಗಿದೆ. ಒಂದೊಮ್ಮೆ ಈ ಕುಟುಂಬಗಳು ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿದ್ದು ಅದನ್ನು ಬಾಡಿಗೆಗೆ ಕೊಟ್ಟು ತಾವು ನಗರಗಳಿಗೆ ಹೋಗೋಣವೆಂದರೂ ಎಲ್ಲರೂ ಬಿಟ್ಟುಹೋಗುತ್ತಿರುವ ಊರಿಗೆ ಯಾರು ಹೊಸಬರು ಬಂದಾರು? ಇನ್ನೊಂದು ಆತಂಕವೆಂದರೆ ಕಳೆದ ತಿಂಗಳುಗಳಲ್ಲಿ ಹತ್ತು ಬಾರಿ ಮನೆಸಾಲದ ಮೇಲಿರುವ (mortgage) ಬಡ್ಡಿದರವನ್ನು ಏರಿಸಿರುವುದು. ಪ್ರತಿ ತಿಂಗಳು ಮನೆಸಾಲದ ಬಡ್ಡಿ ಮತ್ತು ಅಸಲು ಎರಡನ್ನೂ ಕಟ್ಟುವುದಕ್ಕೆ ಜನರು ಪುನಃ ಬ್ಯಾಂಕುಗಳ ಮೊರೆ ಹೋಗುತ್ತಿದ್ದಾರೆ. ಸಾಲವೆಂಬ ವಿಷವು ಬಗೆಬಗೆ ರೂಪಗಳಲ್ಲಿ ಮೈತಾಳುತ್ತಿದೆ.
ಹಾಗೆ ಉದ್ಯೋಗ ಮಾಡುವ ವಯಸ್ಕರ ಕುಟುಂಬಗಳು ನಗರಗಳಿಗೆ ವಲಸೆ ಹೋದರೆ ಸಣ್ಣ ಊರುಗಳಲ್ಲಿ ಉಳಿಯುವವರು ವೃದ್ಧರು ಮತ್ತು ಪಿಂಚಣಿದಾರರು. ಇರುವ ಮೂರು ಮತ್ತೊಂದು ಮಂದಿಗೇಕೆ ಸೌಲಭ್ಯಗಳು, ಪದಾರ್ಥಗಳ ಪೂರೈಕೆ ಬೇಕು ಎನ್ನುವ ಅನಾದಾರ ಕಾಣುತ್ತಿದೆ. ಇದರಿಂದ ನಗರಗಳಿಂದ ಸಾವಿರಾರು ಕಿಲೋಮೀಟರ್ ದೂರವಿರುವ ಸಣ್ಣ ಊರುಗಳ ಜನರ ಸಮಸ್ಯೆಗಳು ವೃದ್ಧಿಸುತ್ತಿವೆ. ತಮ್ಮ ಊರು, ತಮ್ಮ ನೆಲವೆಂದು ಭಾವನಾತ್ಮಕ ಸಂಬಂಧಗಳಿಗೆ ಅಂಟಿಕೊಂಡು ಉಳಿದುಕೊಳ್ಳುವ ಮಂದಿಯ ಮಾನಸಿಕ ಆರೋಗ್ಯ ಕೆಡುತ್ತಿದೆ. ಖಿನ್ನತೆ, ಮಾನಸಿಕ ಕ್ಷೋಭೆ ಹೆಚ್ಚಿದೆ. ಹಲವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮೂಡುತ್ತಿದೆ ಎಂದು ಆರೋಗ್ಯ ಕಾರ್ಯಕರ್ತರು ಹೇಳುತ್ತಿದ್ದಾರೆ. ಪರಿಸ್ಥಿತಿ ಎಲ್ಲಿಗೆ ಮುಟ್ಟುವುದೋ ಯಾರು ಬಲ್ಲರು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.