ತಾವು ಸೇವೆ ಸಲ್ಲಿಸುವ ಪತ್ರಿಕೆ ಮತ್ತು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪತ್ರಿಕಾ ಮಾಲೀಕರ ಬಗ್ಗೆ ಅವರಿಗೆ ಅಪಾರವಾದ ಗೌರವ. ಅವರು ಮಾಲೀಕರಿಗೆ “ಖಾವಂದರು” ಎಂದು ಕರೆದಾಗ ನಾಕು ನಕ್ಕಿದ್ದೆ. ಮಾಲೀಕರು ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ತಮಗಾದ ಅನ್ಯಾಯದ ಬಗ್ಗೆ ಅವರು ಎಂದೂ ಮಾಲೀಕರ ಮುಂದೆ ಉಸುರಲಿಲ್ಲ. ತಮ್ಮ ಮೇಲೆ ಆಗುತ್ತಿದ್ದ ಅನ್ಯಾಯವನ್ನು ಅವರಿವರ ಮಂದೆ ಹೇಳಿಕೊಂಡು ಗೋಳಾಡಿದವರೂ ಅಲ್ಲ. ಮಾಡುವ ಕೆಲಸದಲ್ಲಿ ಚ್ಯುತಿ ಬರಬಾರದು ಎಂದು ಅವರು ಆಶಿಸುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 70ನೇ ಕಂತು ನಿಮ್ಮ ಓದಿಗೆ
ಅರ್ಧ ಶತಮಾನದಷ್ಟು ಹಿಂದಿನ ಮಾತು. 1975 ರಲ್ಲಿ ನಾನು ಎಂ.ಎ. ಮೊದಲ ವರ್ಷ ಮುಗಿದ ಮೇಲೆ ಪತ್ರಕರ್ತನಾಗುವ ಬಯಕೆಯಿಂದ ಪ್ರಜಾವಾಣಿಗೆ ಅರ್ಜಿ ಸಲ್ಲಿಸಿದೆ. ಕರೆ ಬಂದಿತು. ಪತ್ರಿಕಾ ಲೋಕದ ಬಗ್ಗೆ ಆಕರ್ಷಣೆ ಇದ್ದರೂ ಪತ್ರಿಕಾಲಯದಲ್ಲಿ ಕಾರ್ಯನಿರ್ವಹಿಸುವ ಅನುಭವವಿಲ್ಲದ್ದರಿಂದ ಅಳಕುತ್ತ ಹೋದೆ.
ವಿಜಾಪುರದಲ್ಲಿದ್ದಾಗ; ವಿದ್ಯಾರ್ಥಿ ದೆಸೆಯಲ್ಲೇ ನಮ್ಮ ಹೋರಾಟಗಳ ಸುದ್ದಿಯನ್ನು ಸಂಯುಕ್ತ ಕರ್ನಾಟಕಕ್ಕೆ ಬರೆದು ಪೋಸ್ಟ್ ಮಾಡುತ್ತಿದ್ದೆ. ಅವರು ಓ.ಸು. (ಓರ್ವ ಸುದ್ದಿಗಾರ) ಎಂದು ಪ್ರಕಟಿಸುತ್ತಿದ್ದರು. ಹೀಗೆ ಬರೆಯುವುದು ಮತ್ತು ಪತ್ರಿಕೆ ಓದೋದು ಬಿಟ್ಟರೆ ನನಗೆ ಪತ್ರಿಕಾಲಯದ ಯಾವುದೇ ಅನುಭವವಿರಲಿಲ್ಲ. ಇಂಥ ಸ್ಥಿತಿಯಲ್ಲಿ ಸಂದರ್ಶನಕ್ಕೆ ಪ್ರಜಾವಾಣಿಯಿಂದ ಕರೆ ಬಂದ ಕಾರಣ ಬೆಂಗಳೂರಿಗೆ ಹೊರಟೆ.
ಆಗ ಪ್ರಜಾವಾಣಿ ಕಚೇರಿ ಮುಂಭಾಗದ ಹಳೆ ಕಟ್ಟಡದಲ್ಲಿತ್ತು. (ಹೊಸ ಕಟ್ಟಡ ನಂತರ ಆದದ್ದು.) ಪ್ರಜಾವಾಣಿಯ ಪುರವಣಿಯನ್ನು ನೋಡಿಕೊಳ್ಳುತ್ತಿದ್ದ ಬಿ.ವಿ. ವೈಕುಂಠರಾಜು ಅವರು ಅದಾಗಲೆ ಧಾರವಾಡದಲ್ಲಿ ಜರುಗಿದ “ನಾಳೆಯ ಕನ್ನಡ ಸಾಹಿತ್ಯ” ಸಮ್ಮೇಳನದಲ್ಲಿ ಪರಿಚಿತರಾಗಿದ್ದರು. ಅದೊಂದು ವಿಶಿಷ್ಟ ಸಮ್ಮೇಳನವಾಗಿತ್ತು. ರಾಜ್ಯದ ಬಹುತೇಕ ಪ್ರಮುಖ ಸಾಹಿತಿಗಳು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗೋಷ್ಠಿಗಳಲ್ಲಿ ನಡೆಯುವ ಚರ್ಚೆಯಲ್ಲಿ ನಾನು ಉತ್ಸಾಹದಿಂದ ಭಾಗವಹಿಸುತ್ತಿದ್ದೆ. ನಾನು ಕೇಳುವ ಪ್ರಶ್ನೆಗಳಿಗೆ ವೈಕುಂಠರಾಜು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿಸಿದ್ದರು.
ಸಂದರ್ಶನಕ್ಕಾಗಿ ಪ್ರಜಾವಾಣಿ ಕಚೇರಿಯೊಳಗೆ ಹೋದ ಕೂಡಲೆ, ಈ ಹಿನ್ನೆಲೆಯ ಕಾರಣ ಮೊದಲಿಗೆ ವೈಕುಂಠರಾಜು ಅವರನ್ನು ಭೇಟಿಯಾದೆ. ನಂತರ ನಡೆದ ಟೆಸ್ಟಲ್ಲಿ 14 ಪ್ರಶ್ನೆಗಳಿಗೆ ಉತ್ತರ ಬರೆದೆ. ಗ್ರಾಮೀಣ ಸುದ್ದಿಗಾರರ ಸುದ್ದಿಯನ್ನು ಎಡಿಟ್ ಮಾಡುವುದು, ಪಿ.ಟಿ.ಐ. ಮತ್ತು ಯು.ಎನ್.ಐ. ಸುದ್ದಿಗಳನ್ನು ಅನುವಾದಿಸುವುದು. ರೋಮನ್ ಲಿಪಿಯಲ್ಲಿ ಬರುವ ಕನ್ನಡ ಸುದ್ದಿಯನ್ನು ಕನ್ನಡ ಲಿಪಿಗೆ ಇಳಿಸುವುದು. ಶಬ್ದಗಳ ಸಮೂಹದಲ್ಲಿ ಸರಿ ಮತ್ತು ತಪ್ಪುಗಳನ್ನು ವಿಂಗಡಿಸುವುದು, ಚಿತ್ರಕ್ಕೆ ಕ್ಯಾಪ್ಷನ್ ಬರೆಯೋದು, ಸುದ್ದಿಗೆ ಶೀರ್ಷಿಕೆ ಕೊಡೋದು, ಸುದ್ದಿಯೊಂದಕ್ಕೆ ಸರಿಯಾದ ಇಂಟ್ರೋ ಸಿದ್ಧಪಡಿಸೋದು ಮುಂತಾದವುಗಳನ್ನು ಸರಿಯಾಗಿಯೆ ಮಾಡಿದೆ. ಇವೆಲ್ಲ ಹೊಸ ಅನುಭವ. ಆದರೆ ಸಂದರ್ಶನಕ್ಕೆ ಬರುವಾಗ ಇವನ್ನೆಲ್ಲ ಒಂದಿಷ್ಟು ತಿಳಿದುಕೊಂಡು ಬಂದಿದ್ದೆ.
ಈ ಟೆಸ್ಟ್ ನಡೆದ ಸಂದರ್ಭದಲ್ಲಿ ನಾನು ಒಬ್ಬ ಗಟ್ಟಿಮುಟ್ಟಾದ ಪತ್ರಕರ್ತರನ್ನು ನೋಡಿದೆ. ಅವರು ಕೈಯಲ್ಲಿ ಕೆಲ ಕಾಗದ ಪತ್ರಗಳನ್ನು ಹಿಡಿದುಕೊಂಡು ಹೊರಗಡೆಯಿಂದ ಬಂದರು. ಯಾರ ಜೊತೆಯೂ ಮಾತನಾಡದೆ ತಮ್ಮಷ್ಟಕ್ಕೆ ತಾವು ಒಂದು ಕಡೆ ಕುಳಿತು ಬರೆಯತೊಡಗಿದರು. ನನಗೆ ಅವರ ಏಕಾಗ್ರತೆ ಮತ್ತು ಕರ್ತವ್ಯದಲ್ಲಿನ ತಲ್ಲೀನತೆ ಹಿಡಿಸಿತು.
ಅಂತೂ ಟೆಸ್ಟ್ ಬರೆದ ಖುಷಿಯಿಂದ ಧಾರವಾಡಕ್ಕೆ ವಾಪಸಾದೆ. ಮುಂದೆ ಸ್ವಲ್ಪ ದಿನಗಳ ನಂತರ ಬಂದು ಭೇಟಿಯಾಗಬೇಕೆಂದು ಪ್ರಜಾವಾಣಿಯಿಂದ ಕರೆ ಬಂದಿತು. ಭೇಟಿಯ ಹಿಂದಿನ ದಿನವೇ ಮಿತ್ರ ಮಹಾದೇವ ಹೊರಟ್ಟಿ ಜೊತೆ ಬೆಂಗಳೂರಿಗೆ ಹೋದೆ. ಅದೇ ದಿನ ಸಾಯಂಕಾಲ ಸಚಿವ ಕೆ.ಎಚ್. ರಂಗನಾಥ ಅವರನ್ನು ಭೇಟಿಯಾದೆವು. ಕೆಲ ತಿಂಗಳುಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಫ್ಯಾಸಿಸ್ಟ್ ವಿರೋಧಿ ಸಮ್ಮೇಳನದಲ್ಲಿ ಅವರ ಪರಿಚಯವಾಗಿತ್ತು. ಸಮ್ಮೇಳನದ ಮುನ್ನಾದಿನಗಳಲ್ಲಿ ನಡೆಯುತ್ತಿದ್ದ ಸಿದ್ಧತಾ ಸಭೆಗಳಲ್ಲಿ ನಾನೂ ಭಾಗವಹಿಸುತ್ತ ಕ್ರಿಯಾಶೀಲವಾಗಿದ್ದರಿಂದ ಮತ್ತು ಹೊರಟ್ಟಿ ಜೊತೆ ಭೇಟಿಯಾಗುತ್ತಿದ್ದ ಕಾರಣ ಅವರು ನನ್ನ ಬಗ್ಗೆ ಕಾಳಜಿ ಹೊಂದಿದ್ದರು. ಪ್ರಜಾವಾಣಿ ಕರೆಯ ವಿಚಾರ ತಿಳಿದಾಗ ಅವರಿಗೆ ಖುಷಿಯಾಯಿತು. ಆಗ ಸುದ್ದಿ ಸಂಪಾದಕರಾಗಿದ್ದ ವೈ.ಎನ್.ಕೆ. ಅವರಿಗೆ ಫೋನ್ ಮಾಡಿ ನನ್ನ ಕುರಿತು ಮಾತನಾಡಿದರು.
ನಾನು ಮರುದಿನ ಬೆಳಿಗ್ಗೆ ಸಂಪಾದಕ ಟಿ.ಎಸ್.ಆರ್. ಅವರನ್ನು ಕಾಣಲು ಹೋದೆ. ಅವರು ಒಳಗೆ ಕರೆದರು. ಬಹಳ ಸಿಟ್ಟಲ್ಲಿ ಇದ್ದರು. ಇಲ್ಲಿ ಯಾರ ಪ್ರಭಾವವೂ ನಡೆಯುವುದಿಲ್ಲ ಎಂದರು. ಹಿಂದಿನ ದಿನ ರಂಗನಾಥ ಸಾಹೇಬರು ವೈ.ಎನ್.ಕೆ. ಜೊತೆ ಮಾತನಾಡಿದ್ದು ನೆನಪಾಯಿತು. ನಾನು ಸಮಜಾಯಿಷಿ ನೀಡಲು ಪ್ರಯತ್ನಿಸಿದೆ. ಅವರ ಪಿತ್ತ ನೆತ್ತಿಗೇರಿತ್ತು. ನಾನು ಬಹಳೇ ಮೆಚ್ಚಿಕೊಂಡಿದ್ದ ರಂಗನಾಥ ಸಾಹೇಬರ ಬಗ್ಗೆ ಅವರು ಕೇರ್ ಮಾಡದೆ ಅದೇನೋ ಹೇಳಿದರು. ನಾನು ಬಹಳ ಜೋರಾಗಿ ತೋರುಬೆರಳು ತೋರಿಸುತ್ತ “ಸ್ಟಾಪ್” ಎಂದೆ. ಅವರು ಗಾಬರಿಯಿಂದ ಎದ್ದು ನಿಂತರು. ನಾನು ಜೋರಾಗಿ ಬಾಗಿಲು ತೆಗೆದು ಹೊರಗೆ ಬಂದೆ. ನಾನು ಕುದಿಯುತ್ತಿದ್ದೆ. ವೈಕುಂಠರಾಜು ಕರೆದರು. “ಬಹಳ ತಪ್ಪು ಮಾಡಿದ್ರಿ. ಅವರು ದೊಡ್ಡ ಮನುಷ್ಯರು” ಎಂದರು. “ಅವರು ರಂಗನಾಥರನ್ನು ಟೀಕಿಸಿ ಕೊಡುವ ನೌಕರಿ ನನಗೆ ಬೇಡ. ನಿಮ್ಮ ಕಾಳಜಿಗೆ ಥ್ಯಾಂಕ್ಸ್” ಎಂದು ಹೇಳಿ ಅದೇ ಉದ್ವಿಗ್ನ ಮನಸ್ಥಿತಿಯಲ್ಲಿ ಹೊರಗೆ ಬಂದೆ. ಕೆಳಗಡೆ ಕಾಯುತ್ತಿದ್ದ ಹೊರಟ್ಟಿಗೂ ನನ್ನ ಬಗ್ಗೆ ಬೇಸರವಾಯಿತು. ‘ಸ್ವಲ್ಪ ಸಮಾಧಾನ ತಾಳಿದ್ದರೆ ಪ್ರಜಾವಾಣಿ ಸೇರುತ್ತಿದ್ದೆ’ ಎಂದ. ಇಲ್ಲ ಎಷ್ಟೇ ಸಮಸ್ಯೆ ಇದ್ದರೂ ನಾನು ಎಂ.ಎ. ಮುಗಿಸಬೇಕು ಎಂದು ತಿಳಿಸಿದೆ. ಹತಾಶ ಸ್ಥಿತಿಯಲ್ಲಿದ್ದರೂ ನನ್ನ ಕಮ್ಯುನಿಸ್ಟ್ ಮನಸ್ಥಿತಿಗೆ ಖುಷಿ ಪಟ್ಟೆ.
ಇದೆಲ್ಲ ಹೊರಟ್ಟಿ ಮೂಲಕ ರಂಗನಾಥ ಸಾಹೇಬರಿಗೆ ಗೊತ್ತಾಯಿತು. ಬದುಕಿಗೆ ಹೊಸದೊಂದು ತಿರುವು ತಂದಿತು. ನನ್ನ ಎಂ.ಎ. ಮುಗಿದ ನಂತರ ಅವರು ನನ್ನನ್ನು ಕರೆಸಿ ಕರ್ನಾಟಕ ಸರ್ಕಾರದ ಕೃಷಿ ಮಾರುಕಟ್ಟೆ ಮಂಡಳಿ ಹೊರಡಿಸುತ್ತಿದ್ದ ಕೃಷಿಪೇಟೆ ಮಾಸಪತ್ರಿಕೆಯ ಉಪ ಸಂಪಾದಕ ಮಾಡಿದರು. ನಾಲ್ಕು ವರ್ಷಗಳ ನಂತರ ಮಂಡಳಿಯವರು ಡೆಪ್ಯೂಟೇಷನ್ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಡೆವೆಲೆಪ್‌ಮೆಂಟ್ ಸ್ಟಡೀಜ್ (ಐ.ಡಿ.ಎಸ್)ಗೆ ಎಂ.ಎ.ಎಂ.ಎಂ. (ಮಾಸ್ಟರ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್) ಓದಲು ಕಳಿಸಿದ್ದರು. ಅಲ್ಲಿ ನಾನು ಪಿ.ಯು.ಸಿ.ಎಲ್. ನಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯನಾದೆ. ಕೆ.ಎನ್. ಹರಿಕುಮಾರ ಖಜಾಂಚಿಯಾಗಿದ್ದರು. ಅನಂತಮೂರ್ತಿ ಕಾರ್ಯದರ್ಶಿಯಾಗಿದ್ದ ನೆನಪು. ಅನಂತಮೂರ್ತಿ ಮತ್ತು ದೇವನೂರು ಸೇರಿ ಹರಿಕುಮಾರ ಅವರಿಗೆ ನನ್ನ ಕುರಿತು ತಿಳಿಸಿದರು. ಹೆಚ್ಚಿನ ಸಂಬಳದ ಸರ್ಕಾರಿ ನೌಕರಿ ಬಿಟ್ಟು ಕಡಿಮೆ ಸಂಬಳದ ಪ್ರಜಾವಾಣಿ ಸೇರುವುದು ಮನೆಯವರಿಗೆಲ್ಲ ಬೇಸರದ ವಿಚಾರವಾಗಿತ್ತು. ಎಪ್ಪತ್ತರ ದಶಕದ ಸಾಮಾಜಿಕ ಚಳವಳಿಗಳು ನನ್ನನ್ನು ಪ್ರಜಾವಾಣಿಗೆ ಸೇರಲು ಒತ್ತಾಯಿಸಿದವು.
1983ರಲ್ಲಿ ಪ್ರಜಾವಾಣಿ ಸೇರಿದ ದಿನವೇ ಶೈಲೇಶಚಂದ್ರ ಗುಪ್ತ ಅವರ ಭೇಟಿಯಾಯಿತು. 1975ರಲ್ಲಿ ಮೊದಲ ಬಾರಿಗೆ ನೋಡಿದ ಗಂಭೀರ ವ್ಯಕ್ತಿಯೆ ಇವರು. ‘ಕಾಸು ಕಿಮ್ಮತ್ತು’ ಮತ್ತು ‘ಸರಕು ಸಂಪತ್ತು” ಕಾಲಂ ಮೂಲಕ ಗುಪ್ತ ಅವರು ಅದಾಗಲೇ ಪ್ರಜಾವಾಣಿ ಓದುಗರಿಗೆ ಪರಿಚಿತರಾಗಿದ್ದರು. ತಲೆಬೇಸರದ ವ್ಯವಹಾರಗಳ ಕುರಿತು ಅವರು ಮನಂಬುಗುವಂತೆ ಹೇಳುವ ಕಲೆ ಸಾಧಿಸಿದ್ದರು. ಅವರ ಭಾಷಾ ಪ್ರೌಡಿಮೆ ಸರಳತೆಯನ್ನು ಸಾಕ್ಷಾತ್ಕರಿಸಿಕೊಂಡಿತ್ತು. ಬಹುಶಃ ಐ.ಕೆ. ಜಹಾಗೀರದಾರ್ ಮತ್ತು ಗುಪ್ತ ಅವರ ಹಾಗೆ ಜನಮನಕ್ಕೆ ಶೀಘ್ರವೆ ತಲಪುವ ಹಾಗೆ ಭಾಷೆಯನ್ನು ಬಳಿಸಿರುವ ಪತ್ರಕರ್ತರು ಬಹಳ ಕಡಿಮೆ ಎಂದೇ ಹೇಳಬಹುದು. (ಈಗಂತೂ ಮಾಧ್ಯಮ ಭಾಷೆಯೆಂಬುದು ಕಾಲಕಸವಾಗುತ್ತಿದೆ.)
ಶೈಲೇಶ್ ಅವರು ಅರ್ಧ ಶತಮಾನ ಒಬ್ಬ ನೈಷ್ಠಿಕ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಪತ್ರಿಕಾರಂಗವನ್ನು ಧರ್ಮವಾಗಿ ಸ್ವೀಕರಿಸಿದ್ದರು. ತಾವಾಯಿತು ತಮ್ಮ ಕೆಲಸವಾಯಿತು ಎಂಬುದು ಅವರ ದಿನಚರಿಯ ಬಹುಮುಖ್ಯ ನೀತಿ. ತಾವೊಬ್ಬ ಪ್ರತಿಭಾವಂತ ಪತ್ರಕರ್ತ ಎಂಬ ಅಹಂ ಅವರನ್ನು ಎಂದೂ ಕಾಡಲಿಲ್ಲ. ದೊಡ್ಡ ದೊಡ್ದ ರಾಜಕೀಯ ವ್ಯಕ್ತಿಗಳನ್ನು, ದೊಡ್ಡ ಅಧಿಕಾರಿಗಳನ್ನು ಭೇಟಿಯಾಗಿ ಪುಳಕಗೊಳ್ಳುವ ಪತ್ರಕರ್ತರು ಅವರಾಗಿರಲಿಲ್ಲ. ಅಂಥ ಸಂದರ್ಭಗಳ ಕುರಿತು ಅವರು ಎಂದೂ ಮಾತನಾಡಲಿಲ್ಲ. ಅಷ್ಟೇ ಅಲ್ಲದೆ ಹಾಗೆ ಭೇಟಿಯಾಗಿ ನೆನಪಿಟ್ಟುಕೊಳ್ಳುವ ಸ್ವಭಾವದವರೂ ಅವರಲ್ಲ. ಇನ್ನೂ ಆಶ್ಚರ್ಯವೆಂದರೆ ಆ ಕಾಲದ ಅನೇಕ ಹಿರಿಯ ಪತ್ರಕರ್ತರಿಗೆ ಇದ್ದಂಥ ಯಾವ ಹವ್ಯಾಸಗಳೂ ಅವರಿಗೆ ಇರಲಿಲ್ಲ. ‘ಸೇದುವುದು, ಕುಡಿಯುವುದು, ಪ್ರೆಸ್ ಕ್ಲಬ್‌ಗೆ ಹೋಗಿ ಇಸ್ಪಿಟ್ ಆಡುವುದು ಮುಂತಾದವುಗಳಲ್ಲಿ ಒಂದಾದರೂ ಇರದಿದ್ದರೆ ಅದು ಹೇಗೆ ಪತ್ರಕರ್ತರಾಗುತ್ತಾರೆ’ ಎಂದು ತಮಾಷೆ ಮಾಡುವ ದಿನಗಳವು. ಈ ಮಾನದಂಡಗಳ ಪ್ರಕಾರ ಅವರು ಪತ್ರಕರ್ತರಾಗಿರಲಿಲ್ಲ!
ಶೈಲೇಶ್ ಅವರು ಚೆನ್ನಾಗಿ ಊಟ ತಿಂಡಿ ಮಾಡುವುದರಲ್ಲಿ ನಿಸ್ಸೀಮರು. ಎಲ್ಲಿ ಇಡ್ಲಿ ವಡೆ ಸಾಂಬರ್ ಚೆನ್ನಾಗಿ ಸಿಗುತ್ತದೆ. ಯಾವ ಹೋಟೆಲ್ ದೋಸೆ ರುಚಿಕಟ್ಟಾಗಿರುತ್ತದೆ. ಎಲ್ಲಿ ಶ್ಯಾವಿಗೆ ಉಪ್ಪಿಟ್ಟು ಚೆನ್ನಾಗಿ ಮಾಡುತ್ತಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಒಂದೆರಡು ಸಲ ರಜೆಯಲ್ಲಿ ಅವರು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನ ಸಂದಿಗೊಂದಿಗಳಲ್ಲಿರುವ ಇಂಥ ರುಚಿಕರ ಖಾದ್ಯವಸ್ತುಗಳು ಸಿಗುವ ಅಂಗಡಿಗಳಿಗೆ ಕರೆದುಕೊಂಡು ಹೋಗಿದ್ದರು. ಅವು ಚಿಕ್ಕ ಮತ್ತು ಚೊಕ್ಕ ಹೋಟೆಲ್‌ಗಳಾಗಿದ್ದು ತಮ್ಮದೇ ಅದ ವೈಶಿಷ್ಟ್ಯವನ್ನು ಹೊಂದಿದ್ದವು.
ಹಾಗೆಲ್ಲ ತಿನ್ನುತ್ತ ತಿರುಗುವ ಸಂದರ್ಭದಲ್ಲಿ ಹಳೆಯ ಬೆಂಗಳೂರಿನ ಪರಂಪರೆಯ ಅನೇಕ ಆಕರ್ಷಕ ಸಂಗತಿಗಳನ್ನು ಹೇಳುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಿದ್ದಂತೆ ಬೆಂಗಳೂರು ಬದಲಾಗುತ್ತ ಬಂದ ಚರಿತ್ರೆ ನನ್ನ ಮನದಲ್ಲಿ ಮೂಡುತ್ತಿತ್ತು. ಅವುಗಳಲ್ಲಿ ಅನೇಕವು ರೂಪಕಗಳಾಗಿ ಉಳಿದಿವೆ.
ಕಂಟೋನ್ಮೆಂಟ್ ಪ್ರದೇಶದಲ್ಲಿ ಎತ್ತು ಕುದುರೆಗಳಿಗೆ ನಾಲು ತಯಾರಿಸುವ ವ್ಯಕ್ತಿ, ಕಾಸಿದ ನಾಲನ್ನು ತಣ್ಣಗಾಗಿಸುವುದಕ್ಕಾಗಿ ಸ್ವಲ್ಪ ಹೊಂಡ ತೆಗೆದಾಗ ಅದು ನೀರು ತುಂಬಿ ತುಳುಕುತ್ತಿದ್ದ ವಿಚಾರ ಹೇಳಿದರು. ಈ ಸಂಗತಿ ಕೇಳಿದಾಗ; 80 ಕೆರೆಗಳಿದ್ದ ಬೆಂಗಳೂರಿನ ಭೂಮಿಯಲ್ಲಿ ನೀರಿನ ಮಟ್ಟ ಎಷ್ಟೊಂದು ಮೇಲೆ ಇತ್ತು ಎಂಬುದರ ಅರಿವಾಗದೆ ಇರದು. ಈಗಿರುವ ಪರಿಸ್ಥಿತಿ ನೋಡಿದರೆ ಎಂಥ ಹಾಹಾಕಾರದ ಭವಿಷ್ಯ ಕಾಣಬಹುದು ಎಂಬ ಕಲ್ಪನೆ ತಾನಾಗಿಯೆ ಮೂಡುವುದು.
ಕೇವಲ ಸುದ್ದಿ ಬರೆಯುವ ಪತ್ರಿಕೋದ್ಯೋಗಿ ಅವರಾಗಿರಲಿಲ್ಲ. ಸಾಮಾನ್ಯ ಜ್ಞಾನ, ಇತಿಹಾಸ, ವರ್ತಮಾನ, ಸಮಾಜ ಬೆಳೆದುಬಂದ ಬಗೆ, ಮಾನವಸಂಬಂಧಗಳು, ವಾಣಿಜ್ಯ ವ್ಯವಹಾರಗಳು, ದೊಡ್ಡ ಮನುಷ್ಯರ ನಡವಳಿಕೆಗಳು ಮುಂತಾದವು ಅವರ ಚಿಂತನೆಗಳಲ್ಲಿ ಹಾಸುಹೊಕ್ಕಾಗಿದ್ದವು.
ಅವರ ಭಾಷಾಜ್ಞಾನ ಇಂದಿನವರಲ್ಲಿ ಕಾಣಸಿಗದು. ಪತ್ರಿಕಾ ಭಾಷೆಯನ್ನು ಹೇಗೆ ಬಳಸಬೇಕು ಮತ್ತು ಬೆಳೆಸಬೇಕು, ಹೊಸ ಶಬ್ದಗಳನ್ನು ಯಾವರೀತಿಯ ತರ್ಕ ಮತ್ತು ಶಬ್ದವ್ಯುತ್ಪತ್ತಿಯ ಆಧಾರದ ಮೇಲೆ ಸೃಷ್ಟಿ ಮಾಡಬೇಕು ಎಂಬುದರ ಕುರಿತು ಅವರು ಚಿಂತನೆ ಮಡುತ್ತಿದ್ದರು. ಮಾಲೀಕರ ಜೊತೆ ಚರ್ಚಿಸಿ; ಹೊಸದಾಗಿ ಸೇರಿದ ಯುವ ಪತ್ರಕರ್ತರಿಗಾಗಿ ಸುಮಾರು ಒಂದು ತಿಂಗಳ ಕಾಲ ಪ್ರತಿದಿನ ಒಂದು ಗಂಟೆ ಭಾಷಾ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತಿದ್ದರು. ಆಗ ಕನ್ನಡ ವ್ಯಾಕರಣ ಹೇಳಿಕೊಡುವ ಜವಾಬ್ದಾರಿ ನನ್ನದಾಗಿದ್ದರಿಂದ ಹೆಚ್ಚು ಕ್ಲಾಸುಗಳು ಸಿಗುತ್ತಿದ್ದವು. ನಾನು ವ್ಯಾಕರಣ ಹೇಳುವ ಶೈಲಿ ಮತ್ತು ಸರಳವಾಗಿ ಸೃಷ್ಟಿಸುವ ವ್ಯಾಖ್ಯಾನಗಳನ್ನು ಅವರು ಮೆಚ್ಚಿಕೊಂಡಿದ್ದರು. ಕ್ಲಾಸಲ್ಲಿ ಗಂಭೀರವಾಗಿ ಕುಳಿತು ಕೇಳಿ ಖುಷಿಪಡುತ್ತಿದ್ದರು. ಅವರದು ಸದಾ ಹೊಸದನ್ನು ಕಲಿಯುವ ಮನಸ್ಸು. ಅವರು ಸದಾ ಬದುಕಿನ ವಿದ್ಯಾರ್ಥಿ ಆಗುವುದರಲ್ಲಿ ಮಗ್ನರಾಗಿರುತ್ತಿದ್ದರು. ಪ್ರಜಾವಾಣಿ ಸ್ಟೈಲ್ ಬುಕ್ ಅನ್ನು ವಿಸ್ತೃತವಾಗಿ ತಯಾರಿಸುವ ಯೋಚನೆ ಅವರದಾಗಿತ್ತು. ಪ್ರಜಾವಾಣಿಯಲ್ಲಿ ಪ್ರತಿದಿನ ಬರುವ ತಪ್ಪನ್ನು ಗುರುತಿಸಿ ಬೋರ್ಡ್ ಮೇಲೆ ತಪ್ಪು ಒಪ್ಪುಗಳನ್ನು ಬರೆಯುವ ಜವಾಬ್ದಾರಿ ನನಗೆ ವಹಿಸಿದ್ದರು.
ಅವರು ಗುಣಗ್ರಾಹಿ. ಯುವಕರನ್ನು ಬೆಳೆಸುವಲ್ಲಿ ಅವರು ತೋರುವ ಆಸಕ್ತಿ ಬಹಳ ಮುಖ್ಯವಾದುದು. ಪ್ರತಿಯೊಬ್ಬ ಪತ್ರಕರ್ತನ ಬರವಣಿಗೆಯ ಗುಣದೋಷಗಳನ್ನು ಗಮನಿಸುವ ತೀಕ್ಷ್ಣಮತಿ ಅವರಾಗಿದ್ದರು. ಚೆನ್ನಾಗಿ ಬರೆಯುವವರನ್ನು ಹುರಿದುಂಬಿಸುತ್ತಿದ್ದರು. ಅರೆಕಾಲಿಕ ವರದಿಗಾರರಿಗೆ ಬೈಲೈನ್ ಕೊಡುವ ಪದ್ಧತಿಯನ್ನು ಅವರು ಪ್ರಾರಂಭಿಸಿದರು ಎಂಬ ನೆನಪು. ನಾನು ಕಲಬುರಗಿ ವಿಭಾಗದ ಮುಖ್ಯಸ್ಥನಾಗಿದ್ದಾಗ ಅವರು ಪ್ರಜಾವಣಿಯ ಮುಖ್ಯಸ್ಥರಾಗಿದ್ದರು. ಆಗಿನ ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಪ್ರತಿಯೊಬ್ಬ ಅರೆಕಾಲಿಕ ವರದಿಗಾರನ ಉತ್ತಮ ಲೇಖನಗಳಿಗೆ ಬೈಲೈನ್ ಕೊಟ್ಟು ಕಳಿಸುವಾಗ ಅವರು ಎಂದೂ ತೆಗೆಯಲಿಲ್ಲ. ಮುಂದೆ ಇದೊಂದು ಪರಂಪರೆಯಾಗಿ ಬೆಳೆಯಲು ಅವರೇ ಕಾರಣ ಎಂಬುದು ನೆನಪಾಗುತ್ತಿದೆ.
ಕಲಬುರಗಿ ವಿಭಾಗದ ಪ್ರಜಾವಾಣಿ ಮುಖ್ಯಸ್ಥನಾಗಿ ಹೋದ ಹೊಸದರಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಕಚೇರಿಯಲ್ಲಿ ಒಬ್ಬ ಪತ್ರಕರ್ತೆ ಇದ್ದಳು. ಆಕೆ ಕಚೇರಿಗೆ ಬಂದ ಕೂಡಲೆ ನಾನು ಬರುವ ಮೊದಲು ಇನ್‌ಚಾರ್ಜ್ ಆಗಿದ್ದ ಕುಲಬಾಂಧವನಿಗೆ “ನಮಸ್ಕಾರಾ ಸರ್” ಎಂದು ಬರುತ್ತಿದ್ದಳು. ನಾನು ಅಂಥವುಗಳಿಗೆಲ್ಲ ತಲೆ ಕೆಡಿಸಿಕೊಳ್ಳುವವನಲ್ಲ. ಸರಿಯಾಗಿ ಕೆಲಸ ಮಾಡಿದರೆ ಸಾಕು ಎಂಬ ಸ್ವಭಾವ ನನ್ನದು. ಮಹಿಳೆಯಾದ ಕಾರಣ ರಾತ್ರಿ ಎಂಟು ಗಂಟೆಗೆ ಅವಳನ್ನು ಫೋಟೊಗ್ರಾಫರ್ ಬೈಕಲ್ಲಿ ಮನೆಗೆ ಕಳಿಸುತ್ತಿದ್ದೆ. ನಾವೆಲ್ಲ ಏನಿಲ್ಲೆಂದರೂ ರಾತ್ರಿ 10.30ರ ವರೆಗೆ ಕೆಲಸ ಮಾಡಬೇಕಿತ್ತು.
ತಾವೊಬ್ಬ ಪ್ರತಿಭಾವಂತ ಪತ್ರಕರ್ತ ಎಂಬ ಅಹಂ ಅವರನ್ನು ಎಂದೂ ಕಾಡಲಿಲ್ಲ. ದೊಡ್ಡ ದೊಡ್ದ ರಾಜಕೀಯ ವ್ಯಕ್ತಿಗಳನ್ನು, ದೊಡ್ಡ ಅಧಿಕಾರಿಗಳನ್ನು ಭೇಟಿಯಾಗಿ ಪುಳಕಗೊಳ್ಳುವ ಪತ್ರಕರ್ತರು ಅವರಾಗಿರಲಿಲ್ಲ. ಅಂಥ ಸಂದರ್ಭಗಳ ಕುರಿತು ಅವರು ಎಂದೂ ಮಾತನಾಡಲಿಲ್ಲ. ಅಷ್ಟೇ ಅಲ್ಲದೆ ಹಾಗೆ ಭೇಟಿಯಾಗಿ ನೆನಪಿಟ್ಟುಕೊಳ್ಳುವ ಸ್ವಭಾವದವರೂ ಅವರಲ್ಲ.
ಒಂದು ಸಲ ಆಕೆ ನನಗೆ ತಿಳಿಸದೆ, ಕುಲಬಾಂಧವನಿಗೆ ಹೇಳಿ ನಾಲ್ಕು ದಿನ ರಜೆ ಹಾಕಿ ಹೋದಳು. ನಾನು ಕೇಳಿದಾಗ ಆತ “ಸುದ್ದಿ ಸಂಪಾದಕರಿಗೆ ಹೇಳಿ ರಜೆ ಹಾಕಿದ್ದಾಳೆ” ಎಂದು ಆಕೆಯ ಕುಲಬಾಂಧವ ತಿಳಿಸಿದ. ನಾನು ಶೈಲೇಶ್ ಅವರಿಗೆ ಫೋನ್ ಮಾಡಿ; ನಾಲ್ಕು ದಿನ ಸುದ್ದಿ ಸಂಪಾದಕರನ್ನು ಕಳಿಸಲು ವಿನಂತಿಸಿದೆ. “ಏಕೆ” ಎಂದು ಕೇಳಿದರು. ‘ಇಲ್ಲಿ ಸ್ಟಾಫ್ ಕೊರತೆ ಇದೆ. ಕೆಲವರು ಮೊದಲೇ ರಜೆ ಹಾಕಿ ಹೋಗಿದ್ದಾರೆ. ಅಂಥದ್ದರಲ್ಲಿ ಈ ಪತ್ರಕರ್ತೆ ನನಗೆ ತಿಳಿಸದೆ ಸುದ್ದಿ ಸಂಪಾದಕರಿಗೆ ಹೇಳಿ ಹೋಗಿದ್ದಾಳಂತೆ. ಇಲ್ಲಿ ಜನ ಇಲ್ಲ. ಆ ಸುದ್ದಿ ಸಂಪಾದಕರನ್ನು ಬೇಗ ಕಳಿಸಿ’ ಎಂದೆ. ಅವರಿಗೆ ಬಹಳ ಸಿಟ್ಟು ಬಂತು. ‘ರೆಡ್ ಇಂಕಿನಿಂದ ಅಬ್ಸೆಂಟ್ ಹಾಕಿ’ ಎಂದು ಹೇಳಿದರು. ಆಕೆ ವಾಪಸ್ ಬಂದಾಗ ಬಹಳ ಗಲಿಬಿಲಿಗೊಂಡಳು. ಅತ್ತು ಕರೆದು ಕಾಲು ಬಿದ್ದಳು. ತನ್ನ ಸರ್ವೀಸ್ ಉದ್ದಕ್ಕೂ ಈ ಗುರುತು ಉಳಿಯುತ್ತದೆ ಎಂದು ಗೋಳಾಡಿದಳು. ತನ್ನ ಕುಲಬಾಂಧವನ ಮಾತು ಕೇಳಿ ಹಾಗೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಳು. ಅವನನ್ನು ಶಪಿಸಿದಳು.
‘ಈಗ ಏನೂ ಮಾಡಲಿಕ್ಕಾಗದು. ನೀನು ನನಗೆ ನಮಸ್ಕಾರ ಮಾಡಬೇಕಿಲ್ಲ. ಆದರೆ ಸರಿಯಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದೆ. ಕೌಟುಂಬಿಕ ಸಮಸ್ಯೆಗಳಿದ್ದ ಕಾರಣ ಮುಂದೆ ಅವಳ ವರ್ಗಾವಣೆಗೂ ಸಹಾಯ ಮಾಡಿದೆ.
ಶೈಲೇಶಚಂದ್ರ ಗುಪ್ತ ಅವರಿಗೆ ಪತ್ರಿಕೆಗಳೇ ಧರ್ಮಗ್ರಂಥ. ಇಂದಿಗೂ ಪತ್ರಿಕೆಗಳನ್ನು ಅವರು ಶ್ರದ್ಧೆಯಿಂದ ಓದುವ ಸ್ವಭಾವದವರು. ಪತ್ರಿಕೆಗೆ ಬರೆಯುವುದಷ್ಟೇ ಅಲ್ಲ, ಬೇರೆಯವರು ಬರೆದದ್ದನ್ನು ಶ್ರದ್ಧೆಯಿಂದ ಓದುವುದು ಕೂಡ ಮುಖ್ಯ ಎಂದು ಹೇಳುತ್ತಿದ್ದರು. ಹೀಗೆ ಅವರು ನಡೆದಂತೆ ನುಡಿಯುವ ಸ್ವಭಾವದವರು.
ತಾವು ಸೇವೆ ಸಲ್ಲಿಸುವ ಪತ್ರಿಕೆ ಮತ್ತು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪತ್ರಿಕಾ ಮಾಲೀಕರ ಬಗ್ಗೆ ಅವರಿಗೆ ಅಪಾರವಾದ ಗೌರವ. ಅವರು ಮಾಲೀಕರಿಗೆ “ಖಾವಂದರು” ಎಂದು ಕರೆದಾಗ ನಾಕು ನಕ್ಕಿದ್ದೆ. ಮಾಲೀಕರು ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ತಮಗಾದ ಅನ್ಯಾಯದ ಬಗ್ಗೆ ಅವರು ಎಂದೂ ಮಾಲೀಕರ ಮುಂದೆ ಉಸುರಲಿಲ್ಲ. ತಮ್ಮ ಮೇಲೆ ಆಗುತ್ತಿದ್ದ ಅನ್ಯಾಯವನ್ನು ಅವರಿವರ ಮಂದೆ ಹೇಳಿಕೊಂಡು ಗೋಳಾಡಿದವರೂ ಅಲ್ಲ. ಅವರು ಬಹಳ ಗಂಭೀರ ಸ್ವಭಾವದವರು. ಮಾಡುವ ಕೆಲಸದಲ್ಲಿ ಚ್ಯುತಿ ಬರಬಾರದು ಎಂದು ಅವರು ಆಶಿಸುತ್ತಿದ್ದರು. ಯಾರೇ ಆಗಲಿ, ಏನಾದರೂ ತಪ್ಪು ಮಾಡಿದರೆ ಕೂಡಲೆ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಹೀಗಾಗಿ ಅವರೆಂದರೆ ಕೆಲವರಿಗೆ ಭಯ. ಆದರೆ ಅವರದು ಕ್ಷಣಿಕ ಕೋಪ ಎಂಬುದು ನನಗೆ ಗೊತ್ತಿತ್ತು. ಅವರು ಅದನ್ನೆಲ್ಲ ಮರುಕ್ಷಣವೇ ಮರೆತುಬಿಡುತ್ತಿದ್ದರು.
ಬಹುಶಃ ಪತ್ರಿಕಾ ಕಚೇರಿಯಲ್ಲಿ ಅವರ ಜೊತೆ ಬಹಳ ತಮಾಷೆ ಮಾಡುವ ವ್ಯಕ್ತಿ ಎಂದರೆ ನಾನೇ. ನನ್ನ ಸಹೋದ್ಯೋಗಿ ಬಿ.ಎಂ. ಹನೀಫ್ ಬ್ಯಾರಿ (ವ್ಯಾಪಾರಿ) ಸಮಾಜದವರು. ಅವರ ಒಡನಾಟ ಕೂಡ ಇವರ ಜೊತೆ ಇತ್ತು. ಹನೀಫ್ ಕಾಣದೆ ಇದ್ದಾಗ, “ಎಲ್ಲಿ ನಿಮ್ಮ ಕುಲಬಾಂಧವ” ಎಂದು ಕೇಳುತ್ತಿದ್ದೆ. ಆಗ ನನಗೆ ಅವರು “ಯು ಆರ್ ಇನ್‌ಕ್ರೆಡಿಬಲ್” ಎಂದು ಛೇಡಿಸುತ್ತಿದ್ದರು.
ಅವರ ಸಂಯಮ ಕೂಡ ಅಗಾಧವಾದುದು. ಸುಮಾರು 14 ವರ್ಷಗಳ ಕಾಲ ಉಪ ಸಂಪಾದಕರಾಗೇ ಉಳಿದರು. ಆದರೆ ಎಂದೂ ಗೊಣಗಲಿಲ್ಲ. ನಾನು ಒಮ್ಮೆ ತಮಾಷೆ ಮಾಡುತ್ತ “ನೀವು ಹಿರಿಯ ಉಪ ಸಂಪಾದಕರಾದ ದಿನವೇ ನಾನು ರಾಜೀನಾಮೆ ಕೊಟ್ಟು ಹೋಗುವೆ” ಎಂದೆ. ಅವರು “ನೋಡುವಾ” ಎಂದು ಹೇಳುತ್ತ ಹೋದರು. ಕೆಲ ತಿಂಗಳುಗಳ ನಂತರ ಅವರು ಮುಖ್ಯ ಉಪ ಸಂಪಾದಕರಾಗಿ ಬಡ್ತಿ ಹೊಂದಿದರು. ಆಗ ನಾನು ಜನರಲ್ ಡೆಸ್ಕಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಒಂದು ದಿನ ಬಂದು “ನಾ ಚೀಫ್ ಸಬ್ ಆಗಿದ್ದೀನಿ, ರಾಜೀನಾಮೆ ಕೊಡ್ರಿ” ಎಂದರು. ನಾನು ನಗುತ್ತ “ನೀವು ಚೀಫ್ ಸಬ್ ಆಗಿರಬಹುದು, ಆದರೆ ನಿಮ್ಮ ಜೀವನದಲ್ಲಿ ಸೀನಿಯರ್ ಸಬ್ ಆಗಲು ಸಾಧ್ಯವೇ ಇಲ್ಲ” ಎಂದಾಗ ಅವರು ಬಹಳ ನಕ್ಕಿದ್ದರು. ಅವರಿಗೆ ಆದ ಅನ್ಯಾಯ ತಿಳಿದಾಗ ಮಾಲೀಕರು ಒಮ್ಮೆಗೆ ಚೀಫ್ ಸಬ್ ಮಾಡಿದ್ದರು. ಹೀಗಾಗಿ ‘ಅವರಿಗೆ ಸೀನಿಯರ್ ಸಬ್ ಎಡಿಟರ್ ಆಗುವ ಯೋಗ ಬರಲಿಲ್ಲ’ ಎಂದು ಹೇಳಿದೆ.
ಮುಂದೆ ಅವರು ಪ್ರಜಾವಾಣಿ ಪತ್ರಿಕೆಯ ಮುಖ್ಯಸ್ಥರಾದರು. ಆ ಸಂದರ್ಭದಲ್ಲಿ ಕೂಡ ಅವರ ಜೀವನ ವಿಧಾನದಲ್ಲಿ ಬದಲಾವಣೆಯಾಗಲಿಲ್ಲ. ಅವರ ಉಡುಪುಗಳಲ್ಲಿ ಕೂಡ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಪತ್ರಿಕಾಲಯ ಅವರಿಗೆ ಸದಾ ದೇವಾಲಯದ ಹಾಗೆಯೆ ಕಾಣುತ್ತಿತ್ತು. ಎಲ್ಲರೂ ತಮಗೆ ನಿರ್ವಹಿಸಿದ ಕಾರ್ಯಗಳನ್ನು ನಿಷ್ಠೆಯಿಂದ ನಿಭಾಯಿಸಬೇಕು ಎಂಬುದು ಅವರ ಆಶಯವಾಗಿತ್ತು. ಅದಕ್ಕೆ ಚ್ಯುತಿ ಬಂದರೆ ಅವರಿಗೆ ಸಹಜವಾಗಿಯೇ ಕೋಪ ಬರುತ್ತಿತ್ತು. ಅವರು ಪತ್ರಿಕೆಯ ಮುಖ್ಯಸ್ಥರಾದಾಗ್ಯೂ ರಿಸೆಪ್ಷನ್ ಬಳಿಯ ಟ್ರೇನಲ್ಲಿ ಸರ್ವಾಜನಿಕರು ಇಟ್ಟಿರುವ ಪತ್ರಿಕಾ ಪ್ರಕಟಣೆಯ ಲಕೋಟೆಗಳನ್ನು ತೆಗೆದುಕೊಂಡು ಬರುವುದನ್ನು ನಿಲ್ಲಿಸಲಿಲ್ಲ. ‘ಅದು ಸಿಪಾಯಿಯ ಕೆಲಸ’ ಎಂದು ಉಪ ಸಂಪಾದಕರು ಕೂಡ ತಿಳಿದುಕೊಂಡಿದ್ದರು. ಆದರೆ ಅದು ಪತ್ರಕರ್ತರ ನೈತಿಕ ಜಬಾಬ್ದಾರಿ ಎಂದು ಶೈಲೇಶ್ ಅವರು ಭಾವಿಸಿದ್ದರು.
ಬೆಂಗಳೂರಿನ ಪತ್ರಿಕಾ ಕಚೇರಿಯಲ್ಲಿದ್ದಾಗ ನನ್ನ ಬಗ್ಗೆ ಅನೇಕ ಹಿರಿಯ ಪತ್ರಕರ್ತರಿಗೆ ಬೇಸರವಿತ್ತು. ನಾನು ಸದಾ ಕಿರಿಯರ ಪರವಾಗಿ ವಾದಿಸುವುದು ಅವರಿಗೆ ಹಿಡಿಸುತ್ತಿರಲಿಲ್ಲ. ಅಲ್ಲದೆ ನನ್ನ ಸಾಮಾಜಿಕ ಸಂಬಂಧ ಅವರಿಗೆ ವಿಚಿತ್ರ ಎನಿಸುತ್ತಿತ್ತು. ರಾತ್ರಿ ಪಾಳಿ ಇದ್ದಾಗ ಹಗಲು ಹೊತ್ತಿನಲ್ಲಿ ಸಭೆಗಳಿಗೆ ಹೋಗುವುದು, ಮಧ್ಯಾಹ್ನದ ಪಾಳಿ ಇದ್ದಾಗ ಬೆಳಗಿನ ಸಭೆಗಳಿಗೆ ಹೋಗುವುದು, ಬೆಳಗಿನ ಪಾಳಿಯಲ್ಲಿದ್ದಾಗ ಸಂಜೆಯ ಸಭೆಗಳಲ್ಲಿ ಹೋಗುವುದು ನನ್ನ ಹವ್ಯಾಸವಾಗಿತ್ತು. ವಾರದ ರಜೆಗಳು ಕೂಡ ಇಂಥ ಸಭೆಗಳಲ್ಲಿ ಭಾಷಣಕ್ಕಾಗಿ ಮೀಸಲಿರುತ್ತಿದ್ದವು. ಒಂದೊಂದು ಸಲ ಅನಿವಾರ್ಯವಾಗಿ ಕೆಲಸದ ವೇಳೆಯಲ್ಲೇ ಭಾಷಣ ಮಾಡುವ ಪರಿಸ್ಥಿತಿ ಬಂದಾಗ ರಜೆ ಹಾಕಿ ಹೋಗುತ್ತಿದ್ದೆ.
ಶೈಲೇಶ್ ಅವರು ಪತ್ರಿಕೆಯ ಮುಖ್ಯಸ್ಥರಾಗಿದ್ದಾಗ ಮೂರು ದಿನ ರಜೆ ಹಾಕಿದ್ದರು. ಆ ಸಂದರ್ಭದಲ್ಲಿ ನಾನು ಅನಿವಾರ್ಯವಾಗಿ ಒಂದು ದಿನ ರಜೆ ಹಾಕಿ ಭಾಷಣ ಮಾಡಲು ಹೋಗಿದ್ದೆ. ಅವರು ವಾಪಸ್ ಬಂದ ದಿನ, ಎಂದಿನಂತೆ ಮುಖ್ಯ ಉಪ ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ವರದಿಗಾರರು ಮುಂತಾದವರ ಸಭೆ ಕರೆದರು. ಆಗ ಅದಾರೋ ಸಭೆಯಲ್ಲಿ ನನ್ನ ವಿರುದ್ಧ ಚಾಡಿ ಹೇಳಿದರು. ಅದು ಬಹಳ ಗುರುತರವಾದ ಸುಳ್ಳಾಗಿತ್ತು. ನಾನು ಹೇಳದೆ ಕೇಳದೆ ಕಚೇರಿಗೆ ಬರದೆ ಭಾಷಣ ಮಾಡಲು ಹೋಗುವುದಾಗಿ ಅವರ ತಲೆ ತುಂಬಿದ್ದರು. ಶಿಸ್ತನ್ನೇ ಮೈಗೂಡಿಸಿಕೊಂಡಿದ್ದ ಶೈಲೇಶ್ ಅವರಿಗೆ ಬಹಳ ಸಿಟ್ಟು ಬಂದು ನನ್ನನ್ನು ಕರೆಸಿದರು. ಹಾಗೆ ಸುಳ್ಳು ಹೇಳಿದವರಿಗೆ ಕಸಿವಿಸಿಯಾಗಿರಬಹುದು. ಏಕೆಂದರೆ ಬಹಳಷ್ಟು ಸಂಪಾದಕರು ಸುಳ್ಳುಗಳನ್ನೇ ನಂಬುತ್ತಾರೆ. ಆ ಸುಳ್ಳನ್ನು ಒರೆಗಲ್ಲಿಗೆ ಹಚ್ಚುವುದಕ್ಕೆ ಹೋಗುವುದಿಲ್ಲ. ಆದರೆ ಶೈಲೇಶ್ ಅವರ ಜಾಯಮಾನ ಎಲ್ಲವನ್ನೂ ಒರೆಗಲ್ಲಿಗೆ ಹಚ್ಚುವುದೇ ಆಗಿದೆ. ಅವರು ಕರೆ ಕಳಿಸಿದಾಗ ನಾನು ಹೋದೆ. ಅವರಿಗೆ ಬಹಳ ಸಿಟ್ಟು ಬಂದಿತ್ತು. ‘ಏನ್ರಿ ಮೊನ್ನೆ ಎಲ್ಲಿ ಹೊಗಿದ್ರಿ’ ಎಂದರು. ‘ನೀವು ಮೂರು ದಿನ ಇದ್ದಿದ್ದಿಲ್ಲ ಎಲ್ಲಿ ಹೋಗಿದ್ರಿ’ ಎಂದೆ. ‘ನಾನು ತಿರುಪತಿಗೆ ಹೋಗಿದ್ದೆ’ ಎಂದರು. ‘ರಜೆ ಹಾಕಿ ಹೋಗಿದ್ರಾ ಅಥವಾ ಹಾಗೇ ಹೋಗಿದ್ರಾ’ ಎಂದೆ. ‘ಏನ್ರಿ ಹಾಗೆ ಕೇಳ್ತಿರಿ ಮೂರು ದಿನ ರಜೆ ಹಾಕಿ ಹೋಗಿದ್ದೆ’ ಎಂದರು. ‘ನಾನೂ ರಜೆ ಹಾಕಿ ಹೋಗಿದ್ದೆ. ವೇದಿಕೆಯೆ ನನ್ನ ತಿರುಪತಿ’ ಎಂದೆ. ಅವರು ಕೂಡಲೆ ಸಿಪಾಯಿಯನ್ನು ಕರೆದು ಹಾಜರಿ ಪುಸ್ತಕ ತರಿಸಿದರು. ಸುದ್ದಿ ಸಂಪಾದಕರು ರಜೆ ಬರೆದಿದ್ದರು. ನನ್ನ ರಜೆಯ ಪತ್ರವೂ ಅಲ್ಲೇ ಇತ್ತು. ಅವರು ಕೂಡಲೆ ಎದ್ದು ನಿಂತು ಕ್ಷಮೆ ಕೇಳಿದರು. ನಾನು ನಮಸ್ಕರಿಸಿ ಹೊರ ಬಂದೆ. ಇವರು ನಮ್ಮ ರಾಜಾ ಶೈಲೇಶಚಂದ್ರ ಗುಪ್ತ. ಸತ್ಯಕ್ಕಾಗಿ ತುಡಿಯುವವರು. ಸತ್ಯಕ್ಕೆ ತಲೆಬಾಗುವವರು.
ನಾವು ಇಂದಿಗೂ ಆತ್ಮೀಯರಾಗೇ ಇದ್ದೇವೆ. ಅವರ ಕರ್ತವ್ಯನಿಷ್ಠೆ ನನ್ನ ಬದುಕಿನಲ್ಲಿ ದಿಕ್ಸೂಚಿಯಾಗಿ ನಿಂತಿದೆ. ಧಾರವಾಡದಿಂದ ಬೆಂಗಳೂರಿಗೆ ಹೋದಾಗ ಅವರಿಗೂ ಸಮಯ ಸಿಕ್ಕರೆ ಮತ್ತೆ ಜೊತೆಯಾಗಿ ರುಚಿ ಶುಚಿಯಾಗಿರುವ ಅದು ಇದು ತಿನ್ನುತ್ತ ಕಮರ್ಷಿಯಲ್ ಸ್ಟ್ರೀಟ್ ಸುತ್ತುವ ದಿನ ಬರಲೆಂದು ಆಶಿಸುತ್ತೇನೆ.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.