“ಮಗಳಿಗೆ ನೌಕರಿ ಸಿಕ್ಕರೆ ಗುಂಡಪ್ಪನ ಬಡತನ ದೂರಾಗ್ತದೆ. ನಾವಂತೂ ಇಡೀ ಜೀವನ ಬಡತನದಾಗೇ ಕಳೆದವಿ. ಮೊದಲು ಹ್ಯಾಂಗ ಇದ್ದೇವೋ ಈಗಲೂ ಹಂಗೇ ಇದ್ದೀವಿ. ನಮ್ಮಿಂದ ಹೊಸ ಮನೆ ಕಟ್ಟಿಸೋದಾಗಲಿ ಹಳೆ ಮನೆ ರಿಪೇರಿ ಮಾಡಿಸೋದಾಗಲಿ ಯಾವದೂ ಆಗಲಿಲ್ಲ” ಅಂತ ಸುಭಾಷ ನೊಂದು ನುಡಿದಾಗ “ನಮ್ಮ ಮಕ್ಕಳು ಆವಾಗ ಸರಿಯಾಗಿ ಓದಲಿಲ್ಲ, ನಾವೂ ಹೆಚ್ಚಿನ ಪ್ರೋತ್ಸಾಹ ನೀಡಲಿಲ್ಲ. ಈಗ ಅದರ ಬಗ್ಗೆ ಯೋಚನೆ ಮಾಡಿದರ ಯಾವ ಫಲವಿಲ್ಲ. ಕಾಲ ಮಿಂಚಿ ಹೋಗಿದೆ” ಅಂತ ದೊಡ್ಡ ಸಂಗಪ್ಪ ಸಮಜಾಯಿಷಿ ನೀಡಿದ.
ಶರಣಗೌಡ ಬಿ ಪಾಟೀಲ ಬರೆದ ಪ್ರಬಂಧ ನಿಮ್ಮ ಓದಿಗೆ
ಆ ಊರು ಬಹಳ ದೊಡ್ಡದೇನಲ್ಲ. ನೂರಿನ್ನೂರು ಮನೆ ಅಷ್ಟೇ; ಅದು ನಗರದಿಂದ ದೂರಿರುವ ಕಾರಣಕ್ಕೋ ಏನೋ ಅಭಿವೃದ್ಧಿ ಅನ್ನುವದು ಗಗನ ಕುಸುಮವಾಗೇ ಉಳಿದಿತ್ತು. ಬೇರೆ ಊರುಗಳಿಗೆ ಹೋಲಿಸಿದರೆ ಅದು ತೀರಾನೇ ಹಿಂದುಳಿದಿದ್ದು ಗೊತ್ತಾಗುತಿತ್ತು. ಉಬ್ಬು ತಗ್ಗು ಗೋಡೆಯ ಕಲ್ಲಿನ ಮನೆಗಳು ಸುಣ್ಣಬಣ್ಣ ಕಾಣದೆ ಅಂದಗೆಟ್ಟು ಹೋಗಿದ್ದವು. ಊರ ಸಮೀಪ ಹಳ್ಳ ಕೊಳ್ಳ ಕೆರೆ ಕಾಲುವೆ ಇಲ್ಲದ ಕಾರಣ ನೀರಾವರಿ ವ್ಯವಸ್ಥೆಯೂ ಇರಲಿಲ್ಲ. ಸಕಾಲಕ್ಕೆ ಮಳೆ ಬಂದರೆ ಬೆಳೆ ಇಲ್ಲದಿದ್ದರೆ ನಷ್ಟವೇ ಗತಿ, ಒಂದೋ ಎರಡೋ ಹೋಟಲು ಕಿರಾಣಿ ಅಂಗಡಿ ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಇಂತಹ ಊರಲ್ಲಿ ಇದ್ದದರಲ್ಲೇ ಶಿಸ್ತಾಗಿ ಕಾಣುವ ಮನೆಯೊಂದಿತ್ತು. ಅದನ್ನು ಎಲ್ಲರೂ ರಾಜಕ್ಕಳ ಮನೆ ಅಂತಲೇ ಕರೆಯುತಿದ್ದರು. ಮನೆಯ ಸುತ್ತಲೂ ಕಲ್ಲಿನ ಕಂಪೌಂಡು; ಅದಕ್ಕೊಂದು ಬಣ್ಣ ಬಳಿದ ತಗಡಿನ ಗೇಟು, ಅಂಗಳದಲ್ಲಿ ಬಗೆ ಬಗೆಯ ಹೂವಿನ ಗಿಡಗಳು ಕಣ್ಮನ ಸೆಳೆಯುತಿದ್ದವು. ಕೆಂಪು ನೀಲಿ ಗುಲಾಬಿ ಬಣ್ಣದ ಹೂಗಳು ರಸ್ತೆಗೆ ಹೋಗಿ ಬರುವವರ ಮೂಗಿಗೆ ಘಮ್ ಅಂತ ವಾಸನೆ ಬಡಿದು ಖುಷಿ ನೀಡುತಿದ್ದವು.
ಎಲ್ಲ ಮನೆಗಳಲ್ಲಿ ಅದೊಂದೇ ಭಿನ್ನವಾಗಿ ಕಂಡಾಗ “ಅದ್ಯಾರ ಮನೆ” ಅಂತ ಹೊಸಬರು ಊರಿಗೆ ಬಂದಾಗ ಸಹಜವಾಗಿ ಪ್ರಶ್ನಿಸುತ್ತಿದ್ದರು. “ರಾಜಕ್ಕಳ ಮನೆ” ಅನ್ನುವ ಉತ್ತರವೇ ಎಲ್ಲರ ಬಾಯಿಂದ ಕೇಳಿ ಬರುತ್ತಿತ್ತು. ಜನ ಹಾಗೆ ಕರೆದಾಗ ಗುಂಡಪ್ಪನಿಗೆ ಬೇಸರದ ಬದಲಿಗೆ ಖುಷಿಯಾಗುತಿತ್ತು. ಮಗಳ ಹೆಸರಿನಿಂದ ಕರೆದರೆ ತಪ್ಪೇನಿದೆ? ಅವಳಿಗೆ ಬಿಟ್ಟು ನಮಗ್ಯಾರಿದ್ದಾರೆ, ನಮಗೆ ಗಂಡು ಅಂದ್ರೂ ಅವಳೇ ಹೆಣ್ಣಂದ್ರು ಅವಳೇ, ನಾವು ಮಾಡೋದೆಲ್ಲ ಅವಳ ಸಲುವಾಗೇ ಅಲ್ಲವೇ ಅಂತ ಸಮಾಧಾನ ಪಟ್ಟು ಮುಗುಳ್ನಗೆ ಬೀರುತ್ತಿದ್ದ.
ಗುಂಡಪ್ಪನಿಗೆ ನಿತ್ಯ ಹತ್ತಾರು ಸಮಸ್ಯೆ ಕಾಡಿದರೂ ಮಗಳಿಗೆ ಯಾವ ಕೊರತೆಯಾಗದಂತೆ ನೋಡಿಕೊಳ್ಳುತಿದ್ದ. ಮಗಳು ಕಾಲೇಜಿಗೆ ಹೋಗ್ತಾಳೆ ಅಂತ ಅಮ್ಮ ಕೂಡ ಹೆಚ್ಚಿನ ಕಾಳಜಿ ತೋರಿ ಬಗೆ ಬಗೆಯ ಅಡುಗೆ ಮಾಡಿ ಉಣಿಸಿ ತಿನಿಸಿ ಬುತ್ತಿ ಕಟ್ಟಿ ಕೊಡುತ್ತಿದ್ದಳು.
ಗುಂಡಪ್ಪನಿಗೆ ಹಿರಿಯರಿಂದ ಬಂದ ಒಂದೆರಡು ಎಕರೆ ಜಮೀನು ಹೊರತು ಪಡಿಸಿದರೆ ಬೇರೆ ಯಾವುದೇ ಆದಾಯ ಇರಲಿಲ್ಲ. ಹೆಂಡತಿಯ ಜೊತೆ ಆಗಾಗ ಕೂಲಿ ಕೆಲಸಕ್ಕೂ ಹೋಗುತ್ತಿದ್ದ. ದುಡಿಮೆಯೇ ದೇವರು ಅಂತ ನಂಬಿ ಸಂಸಾರದ ಬಂಡಿ ಸಾಗಿಸುತ್ತಿದ್ದ. ಬಡತನ ಅನ್ನುವದು ನಿರಂತರ ಕಾಡುತ್ತಲೇ ಇತ್ತು. ಒಂದೆರಡು ಜೊತೆ ಬಟ್ಟೆ ಬಿಟ್ಟರೆ ಇವನ ಹತ್ತಿರ ಬೇರೆ ಬಟ್ಟೆಯೂ ಇರಲಿಲ್ಲ ಹಬ್ಬ, ಜಾತ್ರೆ ಉತ್ಸವ ಬಂದಾಗಲೂ ಹೊಸ ಬಟ್ಟೆ ಧರಿಸುತಿರಲಿಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಇಲ್ಲದಿದ್ದರೆ ಸಂಕಟ ನಾವಾಗೇ ಮೈಮೇಲೆ ಎಳೆದುಕೊಂಡಂತಾಗುತ್ತದೆ ಅಂತ ಹೆಂಡತಿಯ ಮುಂದೆ ಆಗಾಗ ಹೇಳುತಿದ್ದ ಇವನ ಮಾತಿಗೆ ಅವಳೂ ತಲೆಯಾಡಿಸುತಿದ್ದಳು. ಅವರಾಡಿದ ಮಾತು ಕಿವಿಗೆ ಬಿದ್ದಾಗ ರಾಜಕ್ಕಳಿಗೆ ಕಸಿವಿಸಿಯಾಗುತಿತ್ತು.
“ಅಪ್ಪ ಇದು ಕೇವಲ ತಮಗೆ ಮಾತ್ರ ಅನ್ವಯಿಸಿಕೊಳ್ತಾನೆ ಹೊರತು ನನಗಲ್ಲ. ನನಗ್ಯಾವ ಕೊರತೆ ಆಗದಂತೆ ನೋಡಿಕೊಳ್ತಾನೆ, ನಾನು ಬೇಡವೆಂದರು ವರ್ಷದಲ್ಲಿ ಮೂರ್ನಾಲ್ಕು ಸಲ ಹೊಸ ಬಟ್ಟೆ ಕೊಡಿಸ್ತಾನೆ. ಯಾವುದಕ್ಕೂ ಲೆಕ್ಕಾ ಹಾಕೋದಿಲ್ಲ” ಅಂತ ಯೋಚಿಸುತ್ತಿದ್ದಳು.
“ಹೊಸ ಹೊಸ ಬಟ್ಟೆ ನನಗೇ ಕೊಡಸ್ತೀರಿ, ನೀವು ಯಾವಾಗ ಕೊಂಡ್ಕೋತೀರಿ” ಅಂತ ರಾಜಕ್ಕ ಒಮ್ಮೆ ಪ್ರಶ್ನಿಸಿದಾಗ
“ನಮಗ್ಯಾಕೆ ಬೇಕು ಹೊಸ ಬಟ್ಟೆ? ನಾವೇನು ನಿನ್ನಂಗ ಕಾಲೇಜಿಗೆ ಹೋಗುವವರಾ? ನೀನು ಹೊಸ ಬಟ್ಟೆ ಹಾಕೊಂಡು ಹೋದರೆ ಛೊಲೋ ಕಾಣಸ್ತಾದೆ” ಅಂತ ಅಪ್ಪ ಸಮಜಾಯಿಸಿ ನೀಡಿದರೆ “ನಾವೆಲ್ಲ ಹೊಲ ನೆಲ ಕೂಲಿ ನಾಲಿ ಅಂತ ಹೋಗುವವರು, ನಿನ್ನಂಗ ಉಡೋ ತೊಡೋ ವಯಸ್ಸೂ ನಮ್ಮದಲ್ಲ” ಅಂತ ಅಮ್ಮನೂ ಹೇಳಿ ಬಾಯಿ ಮುಚ್ಚಿಸುತಿದ್ದಳು.
ರಸ್ತೆ ಸರಿಯಿಲ್ಲ ಅನ್ನುವ ಕಾರಣಕ್ಕೆ ಊರಿಗೆ ಬಸ್ ಕೂಡ ಒಮ್ಮೆ ಬಂದು ಹೋದರೆ ಮುಗಿಯಿತು ಮತ್ತೆ ಮರುದಿನವೇ ಬರುತಿತ್ತು. ಸಂತೀ ಪ್ಯಾಟಿ ಅಂತ ಜನ ಬೇರೆ ಕಡೆ ಹೋಗಬೇಕಾದರೆ ಅದೇ ಬಸ್ಸಲ್ಲಿ ಹೋಗಬೇಕು ಅದು ಬರದಿದ್ದರೆ ನಾಲ್ಕೈದು ಕಿಲೋಮೀಟರ ಕಾಲ್ನಡಿಗೆಯಿಂದ ನಡೆದು ಬೇರೆ ವಾಹನ ಹತ್ತಬೇಕು, ಎತ್ತಿನ ಬಂಡಿ ಹೊರತು ಪಡಿಸಿ ಯಾರ ಬಳಿಯೂ ದ್ವಿಚಕ್ರ ವಾಹನವಾಗಲಿ ಮತ್ತೊಂದಾಗಲಿ ಇರಲಿಲ್ಲ.
ರಾಜಕ್ಕ ನಿತ್ಯ ಬಸ್ಸಲ್ಲಿ ಕಾಲೇಜಿಗೆ ಅಡ್ಡಾಡುವದು ನೋಡಿ “ನೀನು ನಮ್ಮ ಬಸ್ಸಿನ ಖಾಯಂ ಪ್ಯಾಸೆಂಜರ್” ಅಂತ ಕಂಡಕ್ಟರ್ ಡ್ರೈವರ್ ಕೂಡ ನಕರಾ ಮಾಡುತ್ತಿದ್ದರು. ಅವರ ಮಾತಿಗೆ ತಲೆಯಾಡಿಸಿ ರಾಜಕ್ಕ ಮುಗುಳ್ನಗೆ ಬೀರುತ್ತಿದ್ದಳು.
ರಾಜಕ್ಕಳಿಗೆ ಹೊರತು ಪಡಿಸಿ ಊರಲ್ಲಿ ಯಾರೊಬ್ಬರೂ ಕಾಲೇಜ ಮೆಟ್ಟಿಲು ಹತ್ತಿರಲಿಲ್ಲ. ಎಲ್ಲರೂ ಮಧ್ಯದಲ್ಲೇ ಶಾಲೆ ಬಿಟ್ಟವರಾಗಿದ್ದರು. ಎಲ್ಲರಂತೆ ನಾನಾಗಬಾರದು. ಗುರಿ ಮುಟ್ಟೋ ತನಕ ಓದಬೇಕು. ಏನೇ ಅಡ್ಡಿ ಆತಂಕ ಎದುರಾದರು ಧೈರ್ಯವಾಗಿ ಎದುರಿಸಬೇಕು ಅಂತ ದೃಢ ನಿರ್ಧಾರ ಮಾಡಿಯೇ ರಾಜಕ್ಕ ಓದು ಮುಂದುವರೆಸಿದಳು.
“ನಿನ್ನ ಮಗಳು ಓದಿನಲ್ಲಿ ಹುಶಾರಿದ್ದಾಳೆ ಯಾವುದೇ ಕಾರಣಕ್ಕೂ ಓದು ಬಿಡಿಸಬೇಡ. ಕಾಲೇಜಿಗೆ ಸೇರಿಸಿ ಸರಿಯಾಗಿ ಓದಿಸು. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ ಚನ್ನಾಗಿ ಓದಿ ಛೊಲೋ ನೌಕರಿ ಸಿಕ್ಕರೆ ನಿನಗೂ ಕೀರ್ತಿ ನಿಮಗೂ ಕೀರ್ತಿ…” ಅಂತ ಮಾಸ್ತರ ಒಂದಿನ ಗುಂಡಪ್ಪನಿಗೆ ಮುದ್ದಾಮ ಕರೆಸಿ ಸಲಹೆ ನೀಡಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಮಗಳಿಗೆ ಕಾಲೇಜು ಸೇರಿಸಿದ್ದ.
ಮುಂಜಾನೆ ಸೂರ್ಯ ಇಣುಕುವ ಹೊತ್ತಿಗೆ ರಾಜಕ್ಕ ಎಲ್ಲರಿಗಿಂತ ಬೇಗ ಎದ್ದು, ಜಳಕಾ ಮಾಡಿ ಬಣ್ಣದ ಸೀರೆ ತೊಟ್ಟು ಬಗೆ ಬಗೆಯ ಹೂ ಮುಡಿದು ಪುಸ್ತಕ ನೋಟಬುಕ್ ಪೆನ್ನು ಬ್ಯಾಗಿಗಿಳಿಸಿಕೊಂಡು ಕಾಲೇಜಿಗೆ ಹೊಗುತ್ತಿದ್ದಳು. ಹೋಗುವ ಮುಂಚೆ “ಅವ್ವಾ ನಾ ಹೋಗಿ ಬರ್ತೀನಿ…” ಅಂತ ಹೇಳುವದು ಮರೆಯುತ್ತಿರಲಿಲ್ಲ. ಹುಶಾರಾಗಿ ಹೋಗಿ ಬಾರೇ.. ಕಣ್ಬೆಳಕು ಇರುವಾಗ್ಲೇ ಮನೆ ಸೇರಿ ಬಿಡು ಅಂತ ಅಮ್ಮನ ಮಾತಿಗೆ ತಲೆಯಾಡಿಸಿ ಹೊರಗೆ ಹೆಜ್ಜೆ ಇರಿಸುತಿದ್ದಳು.
ರಾಜಕ್ಕ ಶಿಸ್ತು, ಸಮಯ ಪಾಲನೆ ಬೆಳೆಸಿಕೊಂಡಿದ್ದಳು. ಇವಳಿಗೆ ನೋಡಿ ಎಲ್ಲರೂ ಬೆರಗಾಗುತಿದ್ದರು. ಕೈಯಲ್ಲಿನ ವಾಚು ಪದೇ ಪದೇ ನೋಡಿಕೊಳ್ಳುತ್ತಾ ಹೆಜ್ಜೆಯ ವೇಗ ಹೆಚ್ಚಿಸಿಕೊಳ್ಳುತ್ತಿದ್ದಳು. ಹೋಟಲ್ ಕಿರಾಣಿ ಅಂಗಡಿ ಗುಡಿಗುಂಡಾರ ಮುಂದೆ ಕುಳಿತವರು ಇವಳ ಕಡೆ ನೋಡಿ
“ರಾಜಕ್ಕ ಓದಿನಲ್ಲಿ ಮುಂದಿದ್ದಾಳೆ, ಪ್ರಯತ್ನಕ್ಕೆ ಫಲ ಸಿಕ್ಕರೆ ಅಪ್ಪ ಕಲಿಸಿದ್ದಕ್ಕೂ, ಮಗಳು ಕಲಿತಿದ್ದಕ್ಕೂ ಸಾರ್ಥಕವಾಗ್ತಾದೆ” ಅಂತ ಮಾತಾಡುತಿದ್ದರು.
“ಕಲಿತ ವಿದ್ಯೆ ವ್ಯರ್ಥ ಆಗೋದಿಲ್ಲ ಒಂದಲ್ಲ ಒಂದಿನ ಫಲ ಕೊಟ್ಟೇ ಕೊಡ್ತಾದೆ” ಅಂತ ಊರಿನ ಪ್ರಮುಖನೆನಿಕೊಂಡ ರಾಜಶೇಖರಪ್ಪ ಒಂದಿನ ನಡು ಊರ ಕಟ್ಟೆಗೆ ಕುಳಿತು ಹೇಳಿದಾಗ “ರಾಜಕ್ಕ ರಾತ್ರಿ ಕಣ್ಣಿಗೆ ಕಣ್ಣು ಹಚ್ಚಿ ನಿದ್ದೆ ಮಾಡ್ತಾಳೋ ಇಲ್ಲವೋ ಗೊತ್ತಿಲ್ಲ ಸದಾ ಓದಿನಲ್ಲೇ ಇರ್ತಾಳೆ” ಅಂತ ಪಕ್ಕದ ಮನೆ ನಿಜಲಿಂಗನೂ ಧನಿಗೂಡಿಸಿದ.
“ಮಗಳಿಗೆ ನೌಕರಿ ಸಿಕ್ಕರೆ ಗುಂಡಪ್ಪನ ಬಡತನ ದೂರಾಗ್ತದೆ. ನಾವಂತೂ ಇಡೀ ಜೀವನ ಬಡತನದಾಗೇ ಕಳೆದವಿ. ಮೊದಲು ಹ್ಯಾಂಗ ಇದ್ದೇವೋ ಈಗಲೂ ಹಂಗೇ ಇದ್ದೀವಿ. ನಮ್ಮಿಂದ ಹೊಸ ಮನೆ ಕಟ್ಟಿಸೋದಾಗಲಿ ಹಳೆ ಮನೆ ರಿಪೇರಿ ಮಾಡಿಸೋದಾಗಲಿ ಯಾವದೂ ಆಗಲಿಲ್ಲ” ಅಂತ ಸುಭಾಷ ನೊಂದು ನುಡಿದಾಗ
“ನಮ್ಮ ಮಕ್ಕಳು ಆವಾಗ ಸರಿಯಾಗಿ ಓದಲಿಲ್ಲ, ನಾವೂ ಹೆಚ್ಚಿನ ಪ್ರೋತ್ಸಾಹ ನೀಡಲಿಲ್ಲ. ಈಗ ಅದರ ಬಗ್ಗೆ ಯೋಚನೆ ಮಾಡಿದರ ಯಾವ ಫಲವಿಲ್ಲ. ಕಾಲ ಮಿಂಚಿ ಹೋಗಿದೆ” ಅಂತ ದೊಡ್ಡ ಸಂಗಪ್ಪ ಸಮಜಾಯಿಷಿ ನೀಡಿದ.
ಬಡತನ ಅನ್ನುವದು ನಿರಂತರ ಕಾಡುತ್ತಲೇ ಇತ್ತು. ಒಂದೆರಡು ಜೊತೆ ಬಟ್ಟೆ ಬಿಟ್ಟರೆ ಇವನ ಹತ್ತಿರ ಬೇರೆ ಬಟ್ಟೆಯೂ ಇರಲಿಲ್ಲ ಹಬ್ಬ, ಜಾತ್ರೆ ಉತ್ಸವ ಬಂದಾಗಲೂ ಹೊಸ ಬಟ್ಟೆ ಧರಿಸುತಿರಲಿಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಇಲ್ಲದಿದ್ದರೆ ಸಂಕಟ ನಾವಾಗೇ ಮೈಮೇಲೆ ಎಳೆದುಕೊಂಡಂತಾಗುತ್ತದೆ ಅಂತ ಹೆಂಡತಿಯ ಮುಂದೆ ಆಗಾಗ ಹೇಳುತಿದ್ದ ಇವನ ಮಾತಿಗೆ ಅವಳೂ ತಲೆಯಾಡಿಸುತಿದ್ದಳು.
ರಾಜಕ್ಕಳಿಗೆ ಛೊಲೋ ನೌಕರಿ ಸಿಗೋದ್ರಲ್ಲಿ ಯಾವ ಅನುಮಾನವೂ ಇಲ್ಲ ಅಂತ ರಾಜಶೇಖರಪ್ಪ ವಿಶ್ವಾಸ ಹೊರ ಹಾಕಿದಾಗ
“ಮಗಳು ಬೆಳೆದು ನಿಂತರೂ ಯಾಕೋ ಗುಂಡಪ್ಪ ಇನ್ನೂ ಮದುವೆ ಯೋಚನೆ ಮಾಡ್ತಿಲ್ಲ. ಬೇರೆ ಕಡೆ ಸಂಬಂಧ ಹುಡುಕುವ ಬದಲಿಗೆ ತಂಗಿಯ ಮಗ ರಮೇಶನಿಗೆ ಕೊಟ್ಟು ಮದುವೆ ಮಾಡಬೇಕು. ಕಳ್ಳುಬಳ್ಳಿ ಸಂಬಂಧ ಗಟ್ಟಿಯಾಗ್ತಾದೆ” ಅಂತ ಅಣ್ಣಪ್ಪ ಸಲಹೆ ನೀಡಿದ.
“ಆತನ ಜೊತೆ ಮದುವೆಗೆ ರಾಜಕ್ಕ ಒಪ್ಪಬೇಕಲ್ಲ? ಸುಮ್ಮನೆ ಒಳಗಿನ ಸಂಬಂಧ ಅಂತ ಒತ್ತಾಯದಿಂದ ಮದುವೆ ಮಾಡಿದರೆ ಹೇಗೆ? ಆತನ ಜೊತೆ ಮದುವೆ ಮಾಡಲು ಗುಂಡಪ್ಪನಿಗೂ ಮನಸ್ಸಿಲ್ಲ” ಅಂತ ರಾಜಶೇಖರಪ್ಪ ಹೇಳಿದಾಗ ಎಲ್ಲರೂ ತಲೆಯಾಡಿಸಿ ಮೌನವಾದರು.
ಗುಂಡಪ್ಪನಿಗೂ ಇಂಥಹ ಪ್ರಶ್ನೆಗಳೇ ಎದುರಾಗಿ ಆಗಾಗ ಇಕ್ಕಟ್ಟಿಗೆ ಸಿಲುಕಿಸುತಿದ್ದವು ಮಗಳ ಮದುವೆಗೆ ಅವಸರ ಬೇಡ. ಓದು ಮುಗಿದ ಮೇಲೆ ಮಾಡಿದರಾಯಿತು ಅಂತ ಯೋಚಿಸುತ್ತಿದ್ದ. ರಾಜಕ್ಕಳಿಗೆ ನೌಕರೀ ಸಿಕ್ಕರೆ ವರದಕ್ಷಿಣೆ ವರೋಪಚಾರ ಇಲ್ಲದೆ ಮದುವೆ ಮಾಡಬಹುದು ಅಂತ ಅನೇಕರು ಆಗಾಗ ಇವನಿಗೆ ಧೈರ್ಯ ತುಂಬುತ್ತಿದ್ದರು.
ಯಾರಾದರು ಊರಿಗೆ ಹೊಸಬರು ಬಂದರೆ ಅವರಿಗೆ ಗುಂಡಪ್ಪ ಮುದ್ದಾಮ ಹೋಟಲಿಗೆ ಕರೆದುಕೊಂಡ ಹೋಗಿ ಚಹಾ ಕುಡಿಸಿ “ನನ್ನ ಮಗಳು ಓದುತಿದ್ದಾಳೆ, ನಿಮ್ಮ ಕಡೆ ಯಾರಾದರು ಛೊಲೋ ವರ ಇದ್ದರೆ ಹೇಳ್ರಿ ತಕ್ಕ ಮಟ್ಟಿಗೆ ಖರ್ಚು ಮಾಡಿ ಕೊಡ್ತೀನಿ” ಅಂತ ಹೇಳುತ್ತಿದ್ದ.
ಮಗಳ ಮದುವೆಗೆ ಯಾಕೆ ಅವಸರ ಮಾಡೋದು? ನಮಗೇನು ಹತ್ತೆಂಟು ಮಕ್ಕಳಾ? ಓದು ಮುಗಿದ ಮ್ಯಾಲ ಛೊಲೋ ವರ ಹುಡುಕಿ ಮದುವೆ ಮಾಡೋಣ ಅಂತ ಹೆಂಡತಿಯೂ ಸಲಹೆ ನೀಡುತಿದ್ದಳು. ರಾಜಕ್ಕ ಕಾಲೇಜಿಗೆ ಹೋಗಿ ಬರುವಾಗ ರಮೇಶ ರಸ್ತೆ ಪಕ್ಕದ ಕಟ್ಟೆಗೆ ಕುಳಿತು ಮೊಬೈಲಿನಲ್ಲಿ ಜೋರಾಗಿ ಸಿನಿಮಾ ಹಾಡು ಹಚ್ಚಿ ಇವಳ ಗಮನ ಸೆಳೆಯುವ ಪ್ರಯತ್ನ ಮಾಡುತಿದ್ದ. ಇವಳು ಮಾತ್ರ ಆತನ ಕಡೆ ದೃಷ್ಟಿ ಹರಿಸದೆ ತಾನಾಯಿತು ತನ್ನ ಕಾಲೇಜಾಯಿತು ಅಂತ ಹೊರಟು ಹೋಗುತಿದ್ದಳು.
ರಮೇಶ ಸೋಮಾರಿ ಅನ್ನುವದು ಇಡೀ ಊರಿಗೇ ಗೊತ್ತಿತ್ತು. ಆತ ಓದುವ ವಯಸ್ಸಿಗೆ ಓದಲಿಲ್ಲ. ಸಧ್ಯ ಯಾವ ಕೆಲಸವೂ ಮಾಡದೇ ಸೋಮಾರಿಯಾಗಿ ಕಾಲ ಕಳೆಯುತಿದ್ದ.
ದಿನಗಳು ಉರುಳಿದವು ಸ್ವಲ್ಪ ದಿನಗಳ ನಂತರ ರಾಜಕ್ಕಳ ಓದು ಮುಗಿದು ತಕ್ಷಣ ಬೆಂಗಳೂರಿನ ಆಫೀಸೊಂದರಲ್ಲಿ ನೌಕರಿಯೂ ಸಿಕ್ಕಿತು, ಮಗಳಿಗೆ ನೌಕರಿ ಸಿಕ್ಕಿದ್ದು ಗುಂಡಪ್ಪನಿಗೆ ಎಲ್ಲಿಲ್ಲದ ಖುಷಿಯಾಯಿತು. ಊರು ಕೇರಿ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ . “ನೀನು ಮಗಳಿಗೆ ಸಾಲೀ ಕಲಿಸಿದ್ದು ಸಾರ್ಥಕವಾಯಿತು” ಅಂತ ಎಲ್ಲರೂ ಹೊಗಳಿದರು.
“ನೀವು ಇಲ್ಲಿದ್ದು ಏನು ಮಾಡತೀರಿ ನನ್ನ ಜೊತೆ ಬೆಂಗಳೂರಿಗೆ ಬಂದು ಬಿಡಿ ಇಷ್ಟು ದಿವಸ ನನ್ನ ಸಲುವಾಗಿ ಸಾಕಷ್ಟು ಹೈರಾಣಾಗಿದ್ದೀರಿ ಈಗ ಆರಾಮಾಗಿರಬಹುದು ಅಂತ ರಾಜಕ್ಕ ಅಪ್ಪ ಅಮ್ಮನಿಗೆ ಒತ್ತಾಯಿಸಿದಾಗ ಅವರು ನಯವಾಗಿ ನಿರಾಕರಿಸಿ,
“ನಾವು ಎಲ್ಲಿಗೂ ಬರೋದಿಲ್ಲ ಇಲ್ಲೇ ಇರ್ತೀವಿ ನಮ್ಮೂರೇ ನಮಗ ಚಂದ ನೀನು ಚನ್ನಾಗಿದ್ದರೆ ಅಷ್ಟೇ ಸಾಕು” ಅಂತ ಹೇಳಿದರು ಆಗ ಬೇರೆ ದಾರಿ ಇಲ್ಲದೇ ಸುಮ್ಮನಾಗಬೇಕಾಯಿತು.
ಅವತ್ತು ರಾಜಕ್ಕ ಊರ ಜಾತ್ರೆಗೆ ಬಂದಾಗ ಒಬ್ಬಳೇ ಬರದೆ ಆಫೀಸಿನ ಸಹೋದ್ಯೋಗಿ ಪ್ರಶಾಂತನಿಗೂ ಕರೆದುಕೊಂಡ ಬಂದಿದ್ದಳು. ಪ್ರಶಾಂತ ನೋಡಲು ಸುಂದರವಾಗಿದ್ದ. ಆತನ ನಯ ವಿನಯ ನೋಡಿ ಆತನ ಬಗ್ಗೆ ತಿಳಿದುಕೊಳ್ಳಲು ಗುಂಡಪ್ಪನಿಗೆ ಬಹಳ ದಿನ ಬೇಕಾಗಲಿಲ್ಲ.
“ನೀವು ಒಪ್ಪಿಗೆ ಕೊಟ್ಟರೆ ನಾನು ವರದಕ್ಷಿಣೆ ವರೋಪಚಾರ ಯಾವದೂ ಇಲ್ಲದೆ ನಿಮ್ಮ ಮಗಳ ಜೊತೆ ಮದುವೆಯಾಗ್ತೀನಿ ಅಂತ ಪ್ರಶಾಂತ ಮನದಾಸೆ ಬಿಚ್ಚಿಟ್ಟಾಗ ಗುಂಡಪ್ಪನಿಗೆ ಎಲ್ಲಿಲ್ಲದ ಖುಷಿಯಾಯಿತು. ರಾಜಕ್ಕಳ ಕಡೆ ನೋಡಿದಾಗ ಅವಳೂ ಒಪ್ಪಿಗೆ ಸೂಚಿಸಿ ಮುಗುಳ್ನಗೆ ಬೀರಿದಳು.
ನೀವಿಬ್ಬರೂ ಒಪ್ಪಿದ ಮೇಲೆ ನನ್ನದೇನಿದೆ ಅಂತ ಗುಂಡಪ್ಪ ಒಂದಿನ ಊರ ಬಸವಣ್ಣ ದೇವರ ಗುಡಿಯ ಮುಂದೆ ಇವರಿಬ್ಬರ ಮದುವೆ ಕಾರ್ಯ ನೆರವೇರಿಸಿದ. ಊರ ಜನಾ ಅಕ್ಷತೆ ಹಾಕಿ ವಧು ವರರನ್ನು ಶುಭ ಹಾರೈಸಿದರು.
ಮರುದಿನ ರಾಜಕ್ಕ ಗಂಡನ ಜೊತೆ ಬೆಂಗಳೂರಿಗೆ ಹೋಗುವಾಗ ರಮೇಶ ಎಂದಿನಂತೆ ಕಟ್ಟೆಗೆ ಕುಳಿತು ಮೊಬೈಲಿನಲ್ಲಿ ಕೈಯಾಡಿಸುತ್ತಿದ್ದ ಇವರಿಗೆ ನೋಡಿದ ಕೂಡಲೇ ಆತನ ಮನಸ್ಸು ಕಸಿವಿಸಿಯಾಯಿತು ತಕ್ಷಣ ಮೊಬೈಲ ಬಂದ ಮಾಡಿ ಯೋಚನೆಯಲ್ಲಿ ಮುಳುಗಿ “ನಾನು ತಪ್ಪು ಮಾಡಿದೆ ಓದುವ ವಯಸ್ಸಿನಲ್ಲಿ ಸರಿಯಾಗಿ ಓದಿ ಕೆಲಸಕ್ಕೆ ಸೇರಿಕೊಂಡಿದ್ದರೆ ರಾಜಕ್ಕ ನನ್ನನ್ನೇ ಮದುವೆಯಾಗ್ತಿದ್ದಳು. ಆದರೀಗ ಏನ್ಮಾಡೋದು ಕಾಲ ಮಿಂಚಿ ಹೋಗಿದೆ ವ್ಯರ್ಥ, ಚಿಂತೆ ಮಾಡಿದರು ಫಲವಿಲ್ಲ” ಅಂತ ಪಶ್ಚಾತ್ತಾಪವಾಗಿ ಮನೆ ಕಡೆ ಹೆಜ್ಜೆಹಾಕಿದ!