ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಕ್ರೌರ್ಯ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

ಪೈ: ಈ ಚಿತ್ರದ ಸ್ಥಾಯೀ ಭಾವ ಶೀರ್ಷಿಕೆ ಸೂಚಿಸುವ ಕ್ರೌರ್ಯ. ಅದಕ್ಕೆ ಕೊನೆಯ ತನಕ ಬಲಿಯಾಗುವವಳು ರಂಗಜ್ಜಿ.

ಗಿರೀಶ್: 80-90ರ ದಶಕದಲ್ಲಿ ಕನ್ನಡ ಸಿನಿಮಾವೂ ಸೇರಿದಂತೆ ಭಾರತೀಯ ಭಾಷಾ ಚಿತçಗಳಲ್ಲಿ ಕ್ರೌರ್ಯ ಪ್ರಧಾನ ಗುಣವಾಗಿತ್ತು. ಈ ಚಿತ್ರದ ಶೀರ್ಷಿಕೆ ಕೇಳಿ ಅನೇಕರು ನಾನು ಮಾಡಹೊರಟಿದ್ದೂ ಅದೇ ರೀತಿಯ ಸಿನಿಮಾ ಎಂದು ಭಾವಿಸಿದ್ದರು. ಕ್ರೌರ್ಯ ಅಂದರೆ ದೈಹಿಕ ಕ್ರೌರ್ಯ ಮಾತ್ರ ಅಲ್ಲ, ಮಾನಸಿಕ ಹಿಂಸೆಯೂ ಕ್ರೌರ್ಯವೇ. ಇನ್ನೊಬ್ಬರ ಬಗ್ಗೆ ಸಹಿಷ್ಣುತೆ ಇಲ್ಲದಿರುವುದು, ಅಸಹನೆ ತೋರಿಸುವುದೂ ಕ್ರೌರ್ಯವೇ. ಜೈನ ಸಿದ್ಧಾಂತದಲ್ಲಿ ಸಂಕಲ್ಪ ಹಿಂಸೆಯೂ ಕ್ರೌರ್ಯದ ಇನ್ನೊಂದು ಮುಖ. ಶಾರೀರಿಕ ಹಿಂಸೆ ನೀಡುವ ನೋವು ಕ್ಷಣಿಕ. ಅದರಿಂದಾದ ಗಾಯ ನಾಲ್ಕು ದಿನ ಆದಮೇಲೆ ಮಾಯುತ್ತದೆ. ಗಾಯ ಗುಣವಾದ ಮೇಲೆ ನೋವೂ ಮರೆಯಾಗುತ್ತದೆ. ಆದರೆ ಮಾನಸಿಕ ಹಿಂಸೆ ಮನುಷ್ಯನನ್ನು ಜರ್ಝರಿತನನ್ನಾಗಿಸುತ್ತದೆ. ಈ ಚಿತ್ರದಲ್ಲಿ ರಂಗಜ್ಜಿ ಅನುಭವಿಸುವ ಕ್ರೌರ್ಯ ಆ ರೀತಿಯದು.

ಜಾಗತೀಕರಣದಲ್ಲಿ ಮನುಷ್ಯ ಸಂಬಂಧಗಳೂ ಬದಲಾಗಿವೆ. ಈ ಮೊದಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನಾಥ ಸಂಬಂಧಿಕರೊಬ್ಬರು ಮನೆಗೆ ಬಂದುಳಿದರೆ ಮಾನವೀಯ ಅನುಕಂಪದಿAದ ಅವರನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಆವತ್ತಿನ ದಿನಮಾನದಲ್ಲಿ ಹೊಸ ಜೀವವೊಂದನ್ನು ಸಾಕಲು ಹೆಚ್ಚಿನ ಹಣ ಬೇಕಾಗುತ್ತದೆ ಎನ್ನುವುದನ್ನಾಗಲೀ, ತಮ್ಮ ಏಕಾಂತ (privacy)ವನ್ನು ಹಾಳು ಮಾಡುತ್ತದೆಯೆನ್ನುವುದನ್ನಾಗಲೀ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಇವತ್ತಿನ ಯುಗಧರ್ಮವೇ ಬದಲಾಗಿದೆ. ಜೀವನ ಪಯಣದಲ್ಲಿ ಲಾಭ ನಷ್ಟಕ್ಕೇ ಆದ್ಯತೆ. ಹಾಗಾಗಿ ಪರಿಸ್ಥಿತಿಯ ಕೂಸಾಗಿರುವ ರಾಜಣ್ಣ ಮತ್ತು ಸುಬ್ಬಣ್ಣ ಇಬ್ಬರನ್ನೂ ಖಳರಂತೆ ನೋಡದೇ ಸಮಚಿತ್ತದಿಂದ, ಅವರ ಮೇಲಿರುವ ಒತ್ತಡಗಳ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

****

ಪೈ: ಚಿತ್ರದಲ್ಲಿ ಕತೆ ಹೇಳುವ ವಿಷಯ ಮತ್ತೆ ಮತ್ತೆ ಪ್ರಸ್ತಾಪವಾಗುತ್ತದೆ. ಆ ಎಲ್ಲಾ ಕತೆಗಳಲ್ಲೂ ಕಾಣಬರುವ ಒಂದು ವಿವರ ಪ್ರಯಾಣ. ಅಜ್ಜಿಗೆ ಜೀವನದಲ್ಲಿ ಜಿಗುಪ್ಸೆ ಬಂದಾಗ ಮೂರ್ತಿ ಅವಳನ್ನು ಕತೆ ಹೇಳಲು ಪೀಡಿಸುತ್ತಾನೆ. ಆಗಲಾದರೂ ಆಕೆಗೆ ಉತ್ಸಾಹ ಬರಬಹುದು ಅಂತ. ಆಗ ಆಕೆ ನನ್ನ ಕತೆಗಳೆಲ್ಲವೂ ಖರ್ಚಾಯಿತು ಎನ್ನುತ್ತಾಳೆ. ಆಗ ಕತೆಗೆ ಬೇರೊಂದು ಅರ್ಥ ಬರುತ್ತದೆ.

ಗಿರೀಶ್: ಈ ಸಿನಿಮಾದಲ್ಲಿ ಮೂರು ಪ್ರಯಾಣಗಳ ಪ್ರಸ್ತಾಪ ಬರುತ್ತದೆ. ಮೊದಲನೆಯದು ಬಂಡಲ್ ಕತೆಯಲ್ಲಿ ಬರುವ ಅಜ್ಜಿಯು ಚಂದ್ರಲೋಕಕ್ಕೆ ಹೋದ ಪಯಣ. ಇದು ಫ್ಯಾಂಟಸಿ. ಈ ಕತೆಯಲ್ಲಿ ಅಜ್ಜಿ ಯಶಸ್ವಿಯಾಗಿ ಚಂದ್ರಲೋಕ ತಲುಪುತ್ತಾಳೆ. ಎರಡನೆಯ ಕತೆ ಅಜ್ಜಿ ಹೇಳುವ ಮಹಾಭಾರತದ ಕತೆ. ಕುರುಕ್ಷೇತ್ರ ಯುದ್ಧದಿಂದಾದ ಸಾವು ನೋವುಗಳಿಗೆ ಬೇಸತ್ತ ಪಾಂಡವರು ರಾಜ್ಯಭಾರವನ್ನು ಮಕ್ಕಳಿಗೆ ವಹಿಸಿ ಸ್ವರ್ಗಾರೋಹಣಕ್ಕೆ ಹೊರಡುತ್ತಾರೆ. ಈ ಪಯಣದಲ್ಲಿ ಯಮಧರ್ಮರಾಯನು ಯುಧಿಷ್ಟಿರನಿಗೆ ಅವನ ಗೆಲುವು ಗೆಲುವಲ್ಲ ಎಂದು ತಿಳಿಯ ಹೇಳುತ್ತಾನೆ. ಈ ಪೌರಾಣಿಕ ಕತೆಯಲ್ಲಿ ಯಾವುದು ನೀತಿ ಯಾವುದು ಅನೀತಿ ಎಂಬ ಜಿಜ್ಞಾಸೆ ಇದೆ. ಮೂರನೆಯ ಕತೆ ಅಜ್ಜಿ ಬೆಂಗಳೂರಿನಿAದ ವಾಪಸ್ಸಾಗುವ ವಾಸ್ತವದ ಕತೆ. ಈ ಪಯಣದಲ್ಲಿ ಅಜ್ಜಿ ಸೋತು, ನಿರಾಶಳಾಗಿ, ಸಾಯುತ್ತಾಳೆ. ಮೂರು ಪಯಣ, ಮೂರು ಫಲಿತಾಂಶ.

ಹಿಂದೂಗಳ ಧಾರ್ಮಿಕ ನಂಬಿಕೆಯಲ್ಲಿ ಯಾತ್ರೆಗೆ-ತೀರ್ಥಯಾತ್ರೆಗೆ-ಬಹಳ ಮಹತ್ವ ಇದೆ. ಯಾತ್ರೆಯಿಂದಾಗಿ ಮನುಷ್ಯರು ಸ್ವ ದಿಂದ ಬಿಡಿಸಿಕೊಂಡು ಲೋಕದ ಹಿತಾಸಕ್ತಿಯತ್ತ ಗಮನ ಹರಿಸುತ್ತಾರೆ ಎಂಬುದು ಇಲ್ಲಿನ ತಿರುಳು. ನಾನು, ನನ್ನ ಮನೆ, ನನ್ನ ಆಸ್ತಿ ಎಂಬ ಲೌಕಿಕ ಮೋಹದಿಂದ ಬಿಡುಗಡೆಯಾಗಲು ಈ ಯಾತ್ರೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇಲ್ಲಿದೆ. ಇದೇ ರೀತಿಯ ನಂಬಿಕೆ ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮದಲ್ಲೂ ಇವೆ. ನಿದರ್ಶನಕ್ಕಾಗಿ ಇಂಗ್ಮರ್ ಬರ್ಗ್ಮನ್‌ನ ‘ವೈಲ್ಡ್ ಸ್ಟ್ರಾಬರ್ರೀಸ್’, ‘ಸೆವೆಂಥ್ ಸೀಲ್’ ಇತ್ಯಾದಿ ಚಿತ್ರಗಳನ್ನು ಹಾಗೂ ಮೊರಕ್ಕೋ ದೇಶದ ಇಸ್ಮಾಯಿಲ್ ಫರೂಕ್ಕಿಯವರ ‘ಲೆ ಗ್ರಾಂಡ್ ವೊಯೆಜ್’ನ್ನು ಉಲ್ಲೇಖಿಸಬಹುದು. ‘ಕ್ರೌರ್ಯ’ ಚಿತ್ರದಲ್ಲಿಯ ರಂಗಜ್ಜಿಯ ಯಾತ್ರೆ ಮಾತ್ರ ತಾನು ಯಾರಿಗೂ ಬೇಡವಾಗಿದ್ದೇನೆ ಎಂಬ ಅರಿವನ್ನು ಅವಳಲ್ಲಿ ಹುಟ್ಟಿಸುತ್ತದೆ. ಇಲ್ಲಿ ನಾವು ಕಾಣುವುದು ವಿಷಾದದ ಛಾಯೆಯಿರುವ ಅರಿವು.


ಪೈ: ಈ ಚಿತ್ರವನ್ನು ನೀವು ಬಿ.ವಿ. ಕಾರಂತರಿಗೆ ಅರ್ಪಣೆ ಮಾಡಿದ್ದೀರಿ.

ಗಿರೀಶ್: ಅದಕ್ಕೆ ಒಂದು ಕಾರಣವಿದೆ. ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದರು. ಆದರೆ ಭೂಪಾಲ್‌ನಲ್ಲಿ ನಡೆದ ಘಟನೆ ಅವರನ್ನು ಆಗ ಮಾನಸಿಕವಾಗಿ ತುಂಬಾ ಕುಗ್ಗಿಸಿತ್ತು. ಅದರಿಂದ ಹೊರಬರಲು ಅವರು ಆ್ಯಂಟಿ ಡಿಪ್ರೆಸೆಂಟ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಅವರಿಗೆ ನಿಗದಿತ ಸಮಯದಲ್ಲಿ ಸಂಗೀತ ಸಂಯೋಜಿಸಲು ಸಾಧ್ಯವಾಗಲಿಲ್ಲ. ಆ ವೇಳೆಗಾಗಲೇ ಧ್ವನಿ ಪುನರ್‌ಮುದ್ರಣ ಹಾಗೂ ಸೆನ್ಸಾರ್ ದಿನಾಂಕ ಎಲ್ಲವೂ ನಿಶ್ಚಯವಾಗಿತ್ತಾದ್ದರಿಂದ ಪ್ರೇಮಾ ಕಾರಂತರ ಸಲಹೆಯಂತೆ ನಾವು ಇನ್ನೊಬ್ಬ ಸಂಗೀತ ನಿರ್ದೇಶಕರನ್ನು ನಿಯೋಜಿಸಿಕೊಳ್ಳಬೇಕಾಯ್ತು. ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ. ಪ್ರೇಮಾ ಕಾರಂತರ ಪುಸ್ತಕವೂ ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಒಟ್ಟೊಟ್ಟಿಗೇ ಹತ್ತಾರು ನಾಟಕಗಳನ್ನು, ಹತ್ತಾರು ಊರುಗಳಲ್ಲಿ ಮಾಡಿಸುತ್ತಾ, ನಾಟಕಗಳಿಗೆ, ಸಿನಿಮಾಗಳಿಗೆ ಸಂಗೀತವನ್ನೂ ನೀಡುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದ ಅದಮ್ಯ ಚೈತನ್ಯದ ಬಿ.ವಿ. ಕಾರಂತರನ್ನು ಈ ರೀತಿ ಕೀಳರಿಮೆ ಹುಟ್ಟಿಸಿ ಕ್ರಿಯಾ ವಿಹೀನರನ್ನಾಗಿ ಮಾಡಿದ್ದು ನಿಜವಾದ ಕ್ರೌರ್ಯ ಅಲ್ಲವೇ? ಆದುದರಿಂದ ಈ ಚಿತ್ರವನ್ನು ಅವರಿಗೆ ಅರ್ಪಿಸುವುದೇ ಸೂಕ್ತ ಎನ್ನಿಸಿತು.