ಈ ‘ಮಾನ’ ಎಂದಾಗ ಮೊನ್ನೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತವೇ ನೆನಪಾಗುತ್ತದೆ. ‘ವಿಮಾನ’ ಬರೆ ಪ್ರಯಾಣಿಕರನ್ನು ಹೊತ್ತು ಸಾಗುವುದಲ್ಲ. ದೇವಾಲಯದ ಗರ್ಭಗುಡಿಯ ಮೇಲ್ಭಾಗದ ಗೋಪುರಕ್ಕೂ ‘ವಿಮಾನ’ ಎಂದು ಕರೆಯುತ್ತಾರೆ. ವಿಚಿತ್ರ ಎಂದರೆ ಪಾರ್ಥೀವ ಶರೀರವನ್ನು ಸಾಗಿಸುವ ಬಿದಿರಿನ ಜೋಡಣೆಗೂ ವಿಮಾನವೆನ್ನುವರು. ಒಂದೊಮ್ಮೆ ತಿರುಪತಿ ಗೋವಿಂದರಾಜ ದೇವಸ್ಥಾನವನ್ನು ವೀಕ್ಷಣೆ ಮಾಡುತ್ತಾ ಇದು ‘ವಿಮಾನ ಗೋಪುರ’ ಎಂದು ವಿವರಿಸುತ್ತಿದ್ದಂತೆ ನಿಜವಾಗಿ ವಿಮಾನವೊಂದು ಹಾರಿ ಹೋಗಿದ್ದು ಇಲ್ಲಿ ನೆನಪಾಗುತ್ತಿದೆ…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತನೆಯ ಬರಹ ನಿಮ್ಮ ಓದಿಗೆ

ಇತ್ತೀಚೆಗೆ ಬಾಲ ಕಾರ್ಮಿಕರ ದಿನವಾಯಿತು. ಬಾಲ ಕಾರ್ಮಿಕರ ಬಗ್ಗೆ, ಕಿಶೋರ ಕಾರ್ಮಿಕರ ಬಗ್ಗೆ ಅತ್ಯಂತ ಕಳಕಳಿಯ ಮಾತುಗಳು ಬಂದವು. ನನಗೂ ಸರಿ ಅನ್ನಿಸಿತು. ಆದರೆ ಬಾಲಕಾರ್ಮಿಕರ ಬಗ್ಗೆಯೂ ಯೋಚನೆ ಆಯಿತು. ಬಲವೇ ಬಲ. ಇದು ಕಾರ್ಮಿಕರ ಮೂಲ. ಬಲದಿಂದ ಇವರ ದುಡಿತ ಬಿಸಿಲ ದುಡಿತವೇ ಅಲ್ವೆ? ಅನ್ನಿಸಿತು. ಇಷ್ಟು ಆಲೋಚಿಸುವಾಗಲೆ ನನ್ನ ಮನದಾಳವನ್ನು ಅದು ಹೇಗೆ ಅರಿತವೋ ಗೊತ್ತಿಲ್ಲ ನಮ್ಮ ಮನೆಯ ಹೂವಿನ ಗಿಡಗಳನ್ನು ಅಗೆದು, ಜಿಗಿದು ಹಾಳು ಮಾಡಲು ಒಂದಿಬ್ಬರು ಬಾಲವಿರುವ(ಮಂಗಗಳು) ಕಾರ್ಮಿಕರು ಬಂದಿದ್ದರು. ಆಚೀಚೆಯವರು ನಿಂತು ನೋಡುವುದಲ್ಲದೆ ನಮ್ಮ ಮನೆಗೂ ಈ ಬಾಲ ಇರುವ ಕಾರ್ಮಿಕರು ಕೆಲಸ ಪ್ರಾರಂಭಿಸಿದರೆ ಏನು ಗತಿ? ಎಂದೇ ಇದ್ದಂತೆ ಆನಿಸಿತು. ಕಡೆಗೆ ಬಾಲವಿರುವ ಕಾರ್ಮಿಕರಿಗೆ ಬಾಳೆ ಹಣ್ಣು ತುಂಬಾ ಇಷ್ಟ ಎನ್ನುತ್ತಾ ಬಾಳೆ ಹಣ್ಣನ್ನು ಕೊಡುತ್ತಲೆ ಅವು ತೆಗೆದುಕೊಂಡು ಹೊರಟವು. ಅಷ್ಟರಲ್ಲಿ ಹುಡುಗನೊಬ್ಬ ಬಂದು ಎಷ್ಟು ಉದ್ದದ ‘ಬಾಳ’ ಇದಕ್ಕೆ ‘ಬಾಲೆ’ಹಣ್ಣು ಕೊಟ್ಟರು ಎನ್ನುತ್ತಿದ್ದಂತೆ (ಹಣ್ಣು ಕೊಟ್ಟರೆ ಕಣ್ಣು ಕೀಳುವ ಜನರಿರುತ್ತಾರೆ ಅವರ ಬಗ್ಗೆ ಹುಷಾರಾಗಿರಬೇಕು) ನನಗೆ ಎಷ್ಟು ಸಾಮ್ಯದ ಅಕ್ಷರಗಳು ಲ>ಳ ಅಕ್ಷರಗಳು ಅನ್ನಿಸಿತು. ಬರೆಯುವಾಗ ಇಷ್ಟೆ ತಾನೆ ಎನಿಸುತ್ತದೆ. ಆದರೆ ಅದರ ಅರ್ಥ ಎಷ್ಟು ವಿಭಿನ್ನ ಸ್ವಲ್ಪ ಎಡವಿದರೂ ಅಪಾರ್ಥವಾಗುತ್ತವೆ ಎನಿಸಿತು.

‘ಬಾಲೆ’ ಎಂದರೆ ನಮ್ಮ ನುಡಿ ಕನ್ನಡದಲ್ಲಿ ‘ಹುಡುಗಿ’ ಎಂದಾದರೆ ಅದೆ ‘ಬಾಳೆ’ ಎಂದರೆ ಒಂದು ಜಾತಿಯ ಮೀನು ಎಂದರ್ಥ. ‘ಬಾಳ್’ ಎಂದರೆ ಹಳಗನ್ನಡದಲ್ಲಿ ಕತ್ತಿ ಎಂದಾಗುತ್ತದೆ. ಅದನ್ನು ಹಾಗೆ ಸ್ವಲ್ಪ ತಿರುಚಿ ‘ಬಾಲ್’ ಎಂದು ಇಂಗ್ಲೀಷ್‌ನಲ್ಲಿ ಓದಿಕೊಂಡರೆ ‘ಚೆಂಡು’ ಎಂದಾಗುತ್ತದೆ. ಅದು ಕನ್ನಡದಲ್ಲಿ ‘ಉ’ ಕಾರಾಂತ್ಯವಾದರೆ ‘ಬಾಲು’ ಹಿಂದಿಯಲ್ಲಿ ‘ಕರಡಿ’ ಎಂಬರ್ಥವನ್ನು ಕೊಡುತ್ತದೆ. ತಿರುಗಿ ಮಂಗನ ವಿಚಾರಕ್ಕೆ ಬಂದರೆ ನನಗೆ ನನ್ನ ಮಗನ ನಡುವೆ ಸೊನ್ನೆಯೊಂದು ಸೇರಿ ಮನೆಯೆಲ್ಲಾ ರಂಪಾಟವಾಗಿದೆ ಎಂಬ ಚುಟುಕ ನೆನೆಹಿಗೆ ಬಂತು. ಕೆಲವೊಮ್ಮೆ ಮಕ್ಕಳು ಸೊನ್ನೆ(ಮಂಗ)ಯೊಂದನ್ನು ಅವಗಾಹಿಸಿಕೊಂಡು ಅದೇ ರೀತಿ ಆಡಿಬಿಟ್ಟರೆ ಮನೆಯೆಲ್ಲಾ ರಂಪವೇ ಆಗಿ ಮನೆಯ ವಸ್ತುಗಳೆಲ್ಲಾ ಕಸದಬುಟ್ಟಿ ಪಾಲಾಗುತ್ತವೆ. ‘ಪಾಲು’ ಪದವನ್ನು ಉಲ್ಲೇಖಿಸಿಕೊಂಡಿರುವ ‘ಉಕ್ಕಿದ ಹಾಲು ಒಲೆಪಾಲು ಪಾಲು’ ಎಂಬ ಗಾದೆಯೇ ಇದೆಯಲ್ಲಾ. ಕೆಲವು ಸಸ್ಯಗಳು ಸ್ರವಿಸುವ ದ್ರವಕ್ಕೆ ‘ಪಾಲು’ ಎನ್ನುತ್ತಾರೆ ಇನ್ನು ಪ್ಯಾಕೆಟ್ ಹಾಲು ಸ್ಲಿಮ್ ಹಾಲನ್ನು ಉಪಯೋಗಿಸುವುದು ಎಲ್ಲರಿಗೂ ತಿಳಿದಿರುವಂಥದ್ದು. ಅದನ್ನೆ ವ್ಯಾವಹಾರಿಕವಾಗಿ ತೆಗೆದುಕೊಂಡರೆ ಆಸ್ತಿ ವಿಭಾಗ ಮಾಡಿಕೊಳ್ಳುವುದು ಎಂದಾಗುತ್ತದೆ. ಸಾಗುವಳಿ ಮಾಡದ ಭೂಮಿಯನ್ನು ಅಥವಾ ವಾರಸುದಾರರು ಜಾಗೃತೆ ಮಾಡುತ್ತಿಲ್ಲ. ಆ ಜಾಗಕ್ಕೆ ಹೇಳುವವರು ಕೇಳುವವರು ಇಲ್ಲ ಎಂದೆನಿಸಿದರೆ ಅದನ್ನು ‘ಪಾಳು ಭೂಮಿ’ ಎನ್ನುವರು. ಳ>ಲ, ಲ>ಳ ಗಳು ಕನ್ನಡ ಭಾಷಾ ವೈಶಿಷ್ಟ್ಯಗಳಲ್ಲಿ ಒಂದು. ಸಂಸ್ಕೃತ ಭಾಷೆಯ ‘ಲ’ಕಾರಕ್ಕೆ ಬದಲಾಗಿ ಬಳಸುವ ‘ಳ” ಕಾರವನ್ನು ಕೇಶಿರಾಜ ‘ಕ್ಷಳ’ ಎಂಬುದಾಗಿ ವಿಶ್ಲೇಷಿಸಿದ್ದಾನೆ. ಉದಾಹರಣೆಗೆ ಕಮಲ>ಕಮಳ, ಕಾಲಿದಾಸ> ಕಾಳಿದಾಸ. ಜಲ>ಜಳ, ಅನಲ>ಅನಳ, ಫಲ>ಫಳ, ನಿರ್ಮಲ>ನಿರ್ಮಳ ಇತ್ಯಾದಿ. ಕ್ಷಳ ದ ‘ಳ’ ಕನ್ನಡ ಹೊರತುಪಡಿಸಿ ಇತರ ದ್ರಾವಿಡ ಭಾಷೆಗಳಲ್ಲಿ ಇಲ್ಲ. ಇದಲ್ಲದೆ ಹಳಗನ್ನಡದ ಧ್ವನಿ ಬದಲಾವಣೆಯಾಗುವಾಗ ‘ಪ’ಕಾರ, ‘ಹ’ಕಾರ ಗಳು ಆಗುತ್ತವೆ. ಅದಕ್ಕೆ ಉದಾಹರಣೆಯಾಗಿ ಪಾಲು>ಹಾಲು, ಪಲ್ಲಿ>ಹಲ್ಲಿ, ಪುಲಿ>ಹುಲಿ, ಪಡೆ>ಹಡೆ, ಪತ್ತು>ಹತ್ತು, ಪಳ್ಳಿ>ಹಳ್ಳಿ ಮುಂತಾದವು. ಅಂದಹಾಗೆ ‘ಪಳ್ಳಿ’ ಎಂದರೆ ಶಾಲೆ ಎಂಬ ಅರ್ಥವೂ ಇದೆ. ‘ಹಳ್ಳಿ’ ಎಂದರೆ ಕಡಿಮೆ ಜನಸಂಖ್ಯೆ ಹೊಂದಿರುವ ಕೃಷಿಕ ಸಮುದಾಯದವರು ಹೆಚ್ಚಿರುವ ಪ್ರದೇಶ ಎಂದಾಗುತ್ತದೆ. ‘ಹಳ್ಳಿ’ ಎಂದಾಗ ನೆನಪಾದದ್ದು. ‘ಡೆಲ್ಲಿ ಮಾನ ಹಳ್ಳಿಯಲ್ಲಿ ಹೋಯಿತು’ ಎನ್ನುವ ಮಾತು. ಇದು ನಗರದ ಅವ್ಯವಸ್ಥೆಯನ್ನು ಹೇಳುತ್ತದೆ.

ಈ ‘ಮಾನ’ ಎಂದಾಗ ಮೊನ್ನೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತವೇ ನೆನಪಾಗುತ್ತದೆ. ‘ವಿಮಾನ’ ಬರೆ ಪ್ರಯಾಣಿಕರನ್ನು ಹೊತ್ತು ಸಾಗುವುದಲ್ಲ. ದೇವಾಲಯದ ಗರ್ಭಗುಡಿಯ ಮೇಲ್ಭಾಗದ ಗೋಪುರಕ್ಕೂ ‘ವಿಮಾನ’ ಎಂದು ಕರೆಯುತ್ತಾರೆ. ವಿಚಿತ್ರ ಎಂದರೆ ಪಾರ್ಥೀವ ಶರೀರವನ್ನು ಸಾಗಿಸುವ ಬಿದಿರಿನ ಜೋಡಣೆಗೂ ವಿಮಾನವೆನ್ನುವರು. ಒಂದೊಮ್ಮೆ ತಿರುಪತಿ ಗೋವಿಂದರಾಜ ದೇವಸ್ಥಾನವನ್ನು ವೀಕ್ಷಣೆ ಮಾಡುತ್ತಾ ಇದು ‘ವಿಮಾನ ಗೋಪುರ’ ಎಂದು ವಿವರಿಸುತ್ತಿದ್ದಂತೆ ನಿಜವಾಗಿ ವಿಮಾನವೊಂದು ಹಾರಿ ಹೋಗಿದ್ದು ಇಲ್ಲಿ ನೆನಪಾಗುತ್ತಿದೆ…

‘ವಿಮಾನ’ ಪದ ಜೀವವಿದ್ದಾಗ ಜೀವ ಹೋದ ನಂತರ ಬಳಕೆಯಾಗುವುದು ಈ ಹಿನ್ನೆಲೆಯಲ್ಲಿ ಅಹಮದಾಬಾದ್ ವಿಮಾನ ದುರಂತವನ್ನು ನೆನಪಿಸಿಕೊಂಡರೆ ಬಹಳ ವಿಷಾದ ಅನ್ನಿಸುತ್ತದೆ. ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಅತ್ಯಂತ ಭಯಾನಕ. 242 ಜನರಲ್ಲಿ ಒಬ್ಬರು ಬದುಕುಳಿದದ್ದು ಪವಾಡದಲ್ಲಿ ಪವಾಡವೇ ಸರಿ! ಇದು ಹೇಗಾಗಿರಬಹುದು ಎಂದು ಯೋಚಿಸಿದಾಗಲೆಲ್ಲಾ ಹೌದಾ! ನಿಜವೇ? ಅನ್ನಿಸುತ್ತದೆ. ಆತ ಪ್ರಜ್ಞೆ ತಪ್ಪಿರಬಹುದು. ವಿಮಾನ ಬಿದ್ದು ಭಾಗವಾದಾಗ ಕಿಟಕಿಯಂಚಿನಲ್ಲಿಯೇ ಇದ್ದ ಕಾರಣವೋ ಅಲ್ಲಿ ಜಾಗವಿತ್ತು ಎನ್ನುವ ಕಾರಣಕ್ಕೆ ಅಲ್ಲಿಂದ ಬಿದ್ದಿರಬಹುದು. ‘ನನಗೆ ಎಚ್ಚರವಾದಾಗ ಸುತ್ತಲೂ ಹೆಣಗಳಿದ್ದವು. ಅಷ್ಟರಲ್ಲಿ ಆ್ಯಂಬುಲೆನ್ಸ್ ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿತು’ ಎಂದಿರುವ ಅವರ ಮಾತುಗಳು ಬಂದಾಗ ಅವರ ಮನಃಸ್ಥಿತಿ ಹೇಗಿದ್ದಿರಬಹುದು? ನಾವು ಊಹಿಸಲು ಅಸಾಧ್ಯ. ವಿಮಾನ ಸಂಪೂರ್ಣ ಹೊತ್ತು ಉರಿದಿದೆ. ವಾತಾವರಣ ಸಂಪೂರ್ಣ ಕಲುಷಿತವಾಗಿದೆ ಮರಣ ಹೊಂದಿದವರ ಗುರುತು ಪತ್ತೆ ಮಾಡಲು ಡಿ.ಎನ್.ಎ. ಪರೀಕ್ಷೆ ಮಾಡಬೇಕು 1000 ಡಿಗ್ರಿ ಉಷ್ಣಾಂಶ ಅಲ್ಲಿದ್ದ ಕಾರಣ ಡಿಎನ್ಎ ಪರೀಕ್ಷೆ ಮಾಡುವಲ್ಲಿ ಸವಾಲುಗಳು ಇವೆ ಎನ್ನುವ ಮಾತುಗಳು, ಸೆಲ್ಫಿ ಹಂಚಿಕೊಂಡ ಕುಟುಂಬ, ಗಂಡನನ್ನು ಭೇಟಿಯಾಗಲು ಹೊರಟ ನವವಧು, ಚೊಚ್ಚಲ ಬಾಣಂತನಕ್ಕೆ ಹೊರಟ ಪೋಷಕರು, ಆಗಷ್ಟೆ ಊಟಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಈ ಎಲ್ಲಾ ಪರಿಪ್ರೇಕ್ಷಗಳನ್ನು ನೋಡುತ್ತಾ ಹೋದರೆ ಸಾವು ಎಷ್ಟು ಅನಿಶ್ಚಿತ ಎಂದೆನಿಸುತ್ತದೆ. ಕನಸುಗಳನ್ನು ಹೊತ್ತ ಆಸೆಕಂಗಳು ಮತ್ತೆ ತೆರೆಯಲು ಅವಕಾಶವೇ ಆಗಿಲ್ಲವಲ್ಲ ಎಂಬ ವಿಷಾದ ಸುಳಿಯುತ್ತದೆ. ಇದು ಹಿಂದೆ ಮಂಗಳೂರಿನಲ್ಲಿ ನಡೆದ ವಿಮಾನ ದುರಂತವನ್ನೂ ನೆನಪಿಸುತ್ತದೆ. ಇವುಗಳ ನಡುವೆ ಬದುಕಿ ಉಳಿದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಮಾತ್ರ ಸವ್ಯಸಾಚಿ ಅನ್ನಿಸುತ್ತದೆ.

ಇಂಥದ್ದೆ ನೈಜ ಘಟನೆಯ ವಸ್ತುವಾಗಿರುವ ಇಂಗ್ಲಿಷಿನ ‘ಮಿರಾಕಲ್ ಇನ್ ದ ಆಂಡಿಸ್’ ಕನ್ನಡದ ‘ಪರ್ವತದಲ್ಲಿ ಪವಾಡ’ ಈ ಕೃತಿ ನ್ಯಾಂಡೊ ಪರಾಡೊ ಎಂಬ ಛಲ ಬಿಡದ ತ್ರಿವಿಕ್ರಮನ ಸಾಹಸ ಗಾಥೆಯನ್ನು ಹೇಳುತ್ತದೆ. ೧೯೭೨ರ ಘಟನೆ ಕೃತಿ ರೂಪಕ್ಕೆ ಇಳಿದದ್ದು ೧೯೯೦ ರ ದಶಕದಲ್ಲಿ. ಮನೋಬಲವೊಂದಿದ್ದರೆ ಎಂಥದ್ದನ್ನೂ ಮನುಷ್ಯ ಮೆಟ್ಟಿ ನಿಲ್ಲಬಲ್ಲ ಎಂಬುದಕ್ಕೆ ಇದೊಂದು ಸರೂಪ ಉದಾಹರಣೆ. ರಗ್ಬಿ ಆಟಗಾರರು ಬಹಳ ಉತ್ಸಾಹದಿಂದ ಪಾಲ್ಗೊಳ್ಳಲು ತೆರಳುತ್ತಿದ್ದದ ಪ್ರಯಾಣ, ಜೊತೆಗೆ ಸ್ನೇಹಿತರು, ಬಂಧುಗಳು, ವಿಮಾನ ಚಾಲಕ, ಸಹಚಾಲಕ ಸೇರಿ ೪೫ ಜನರು ವಿಮಾನದಲ್ಲಿ ಇರುತ್ತಾರೆ. ಪ್ರಯಾಣದ ಆರಂಭ ಅತ್ಯಂತ ಉತ್ಸಾಹದಿಂದಲೇ ಕೂಡಿರುತ್ತದೆ. ನಂತರದಲ್ಲಿ ನಡೆದದ್ದು ಹಿಮಚ್ಛಾದಿತ ಆಂಡೀಸ್ ಪರ್ವತದ ನಡುವೆ ವಿಮಾನ ಅಪಘಾತ. ಮನುಷ್ಯನ ಅಸ್ತಿತ್ವಕ್ಕೆ ಸವಾಲೆಸೆಯುವ ಪ್ರಕೃತಿಯ ಭೀಕರ ಸವಾಲು. “ನೈತಿಕ ಮೌಲ್ಯವುಳ್ಳ ಪಂದ್ಯವಾಗಿತ್ತು. ನಮ್ಮ ಗುರಿ ಮುಟ್ಟುವ ದಾರಿಯಲ್ಲಿ ಕಲಿಯುವ ಮನೋಭಾವ ಹೋರಾಟ, ತ್ಯಾಗ ಮನೋಭಾವ ಇವುಗಳನ್ನು ಯಾವ ಆಟವೂ ಕಲಿಸಲಾರದು” ಎಂದು ಅನುವಾದಕಿ ಸಂಯುಕ್ತಾ ಪುಲಿಗಲ್ ಅವರು ಹೇಳಿದ್ದಾರೆ. ಸಾಹಸಿ ನ್ಯಾಂಡೊ ಪರಾಡೊನ ಸಾಹಸ ಗಾಥೆಯ ಒಳಪದರಗಳು ಹತ್ತು ಧ್ವನಿ ಪೂರ್ಣವಾದ ಅಧ್ಯಾಯಗಳಲ್ಲಿ ಅನಾವರಣಗೊಳ್ಳುತ್ತವೆ.

ಕಥಾನಾಯಕ ನ್ಯಾಂಡೊ ಸ್ವಭಾವತಃ ನಾಚಿಕೆಯುಳ್ಳವರಾಗಿರುತ್ತಾರೆ… ಆದರೆ ಎಲ್ಲಾ ಹದಿಹರೆಯದ ಹುಡುಗರಿಗೆ ಇರುವ ಸಹಜ ಆಸೆ ಹೊಂದಿದ್ದ ನ್ಯಾಂಡೊ ಸ್ನೇಹಿತ ಪಂಚಿಟೊನನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಾರೆ. ಆತನಿಗೆ ಸಹಜವಾಗಿ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂಬ ಕಾರಣಕ್ಕೆ ನ್ಯಾಂಡೊ ಕೂಡ ಹೆಣ್ಣು ಮಕ್ಕಳನ್ನು ಸೆಳೆಯಲು ಹೋಗಿ ಪೇಚಿಗೆ ಸಿಲುಕುವ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾರೆ. ನೋವಿನಲ್ಲೂ ನೆನಪಿಸಿಕೊಳ್ಳುತ್ತಾರೆಯೇ? ಎಂದರೆ ಇಲ್ಲ! ಅದಕ್ಕೂ ಕಾರಣವಿದೆ. ನ್ಯಾಂಡೊ ತನ್ನ ತಾಯಿ ಹಾಗು ತಂಗಿಯ ಜೊತೆಗೆ ಪ್ರಯಾಣಿಸುತ್ತಾ ಇರುತ್ತಾರೆ. ವಿಮಾನ ಅಪಘಾತದಲ್ಲಿ ಮೊದಲು ತಾಯಿ ಹಾಗೆ ನಂತರ ಸೂಜಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಸ್ನೇಹಿತನ ಮೂಲಕ ಈ ವಿಚಾರಗಳು ಅನಾವರಣಗೊಳ್ಳುತ್ತವೆ. ಇಲ್ಲಿ ನಾಯಕನಿಗೆ ತನ್ನ ತಂದೆಯ ಬಗ್ಗೆ ಇನ್ನಿಲ್ಲದ ಪ್ರೇಮ. ತಂದೆಯ ನೆನಪು ನಾಯಕನಿಗೆ ಕೃತಿಯ ಉದ್ದಕ್ಕೂ ಛಾಯೆಯಂತೆ ಇರುವುದು ಇಲ್ಲಿನ ವಿಶೇಷ. ನ್ಯಾಂಡೊನ ತಂದೆ ತನ್ನ ಹಾರ್ಡ್‌ವೇರ್ ಬಿಸಿನೆಸ್ ಬಗ್ಗೆ ಮಾಹಿತಿನೀಡುವುದು ಮಾರ್ಮಿಕವಾಗಿದೆ. ಬಾಲ್ಯದಲ್ಲಿ ತಾನು ಕಳೆದುಕೊಂಡಿದ್ದ ತಂದೆಯ ಪ್ರೀತಿಯನ್ನು ನ್ಯಾಂಡೊನ ತಂದೆ ಮಗನಿಗೆ ನೀಡಬಯಸುತ್ತಾನೆ.

ವಿಮಾನ ಆಂಡಿಸ್ ಪರ್ವತ ಸಾಲಿನಲ್ಲಿ ಅಪ್ಪಳಿಸುವ ಮುನ್ಸೂಚನೆ ತಿಳಿದಾಗ ನ್ಯಾಂಡೊ ತನ್ನ ತಂಗಿ ಹಾಗು ತಾಯಿಯ ಮುಖವನ್ನು ಧೈರ್ಯದಿಂದಲೇ ನೋಡುತ್ತಾನೆ. ಅಪಘಾತದ ನಂತರ ಗಾಯಾಳುಗಳು ಒಬ್ಬೊಬ್ಬರೂ ಒಬ್ಬೊಬ್ಬರಿಗೆ ಸಹಾಯ ಮಾಡುವುದು, ಆರೈಕೆ ಮಾಡುವುದು ಕರುಳು ಹಿಂಡುವಂತಿದೆ. ಆಘಾತದಲ್ಲಿ ಆಘಾತ ಎಂಬಂತೆ ಮತ್ತೆ ಹಿಮಪಾತವಾಗುತ್ತದೆ. ಬೆಚ್ಚಗಿನ ವಾತಾವರಣದಲ್ಲಿ ಇದ್ದವರು ಅನುಭವಿಸುವ ಚಳಿಯ ಪಡಿಪಾಟಲು ಇಲ್ಲಿ ಹೇಳತೀರದು.

(ನ್ಯಾಂಡೊ ಪರಾಡೊ)

‘ಒಂದು ವಾಗ್ದಾನ’ ಎಂಬ ಅಧ್ಯಾಯದಲ್ಲಿ ಪಕೃತಿ ವಿಕೋಪದ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಸುಳುಹುಗಳನ್ನು ಚೆನ್ನಾಗಿ ನೀಡಲಾಗಿದೆ. “ಅಳು ದೇಹದ ಉಪ್ಪನ್ನು ಕಡಿಮೆ ಮಾಡುತ್ತದೆ” ಎಂಬ ವಾಕ್ಯವಂತೂ ಅನೇಕ ಅರ್ಥಗಳನ್ನು ಧ್ವನಿಸುತ್ತದೆ. ರ‍್ತುರೋನ ಎಂಬಾತನ ಧೃಡತೆ ಮತ್ತು ವೈಚಾರಿಕ ನಿಲುವುಗಳು, ಚಳಿಯ ಭೀಕರತೆಯನ್ನು ಕುರಿತಂತೆ ಆತನಾಡುವ ಮಾತುಗಳು ಪ್ರಕೃತಿಯ ವೈರುಧ್ಯಗಳ ಕುರಿತು ಹೊಸ ಗ್ರಹಿಕೆಗಳನ್ನು ನೀಡುತ್ತದೆ. ಅಧ್ಯಾಯ ನಾಲ್ಕರಲ್ಲಿ ಕರ‍್ಟಿಲೋಸ್ “ಉಳಿದೇ ಉಳಿಯುತ್ತೇª” ಎಂಬ ಭರವಸೆಯ ಮಾತುಗಳು ಉಳಿದವರನ್ನು ಬದುಕಲು ಪ್ರೇರೇಪಿಸುತ್ತವೆ. ಕೋಪ, ಅಸಹನೆ, ದೇವರೊಂದಿಗೆ ನಿರಾಶಾಭಾವ, ಬೇರೆಯವರ ಮೇಲೆ ಕೊಪ ಮಾಡಿಕೊಳ್ಳುವುದು, ಬೈಯುವುದು, ಕೆಣಕುವ ಮೂಲಕ ಜೀವನೋತ್ಸಾಹ ತುಂಬುವುದು ಅತ್ಯಂತ ಹೃದ್ಯವಾಗಿದೆ. ಹಿಮವನ್ನು ನೀರಾಗಿಸಿಕೊಂಡು ಕುಡಿಯುವುದು ಅದಕ್ಕೆ ಅವರು ಮಾಡುವ ತಂತ್ರಗಳು ಅವರ ಅನಿವಾರ್ಯತೆಯನ್ನು ಹೇಳುತ್ತವೆ. ಎರಡು ಹೋಳಾಗಿ ಪತನಕ್ಕೀಡಾದ ವಿಮಾನದ ಮುಂಭಾಗದಲ್ಲಿ ಗಾಯಾಳುಗಳು ಇರುತ್ತಾರೆ. ಎರಡನೆ ಭಾಗದಲ್ಲಿ ಯಾರೂ ಇರುವುದಿಲ್ಲ. ಅಲ್ಲಿದ್ದ ಆಹಾರ ಪದಾರ್ಥಗಳೆಲ್ಲ ಖಾಲಿಯಾದ ನಂತರ ಕಡೆಯದಾಗಿ ಉಳಿದ ಕಡಲೆ ಚಾಕಲೇಟಿನ ಪ್ರಸಂಗ ನೋವಿನ ಛಾಯೆ ಉಳ್ಳದ್ದಾಗಿದೆ. ನ್ಯಾಂಡೊ ಪರಾಡೊ ಕಡಲೆ ಚಾಕಲೇಟಿನ ಮೇಲ್ಪದರವನ್ನು ಮೊದಲು ಚೀಪುತ್ತಾರೆ. ಉಳಿದ ಕಡಲೆ ಬೀಜವನ್ನು ಎರಡನೆ ದಿನ ಮೂರನೆ ದಿನ ಉಳಿದ ಅರ್ಧ ಕಡಲೆ ಬೀಜವನ್ನು ಗಂಟೆಗಟ್ಟಲೆ ಬಾಯಲ್ಲಿಟ್ಟುಕೊಳ್ಳುವುದು ಎಂತಹವರಲ್ಲಿಯೂ ಕರುಣೆ ತರಿಸುತ್ತದೆ .

ಬದುಕಲು ಆಹಾರ ಬೇಕು; ಆದರೆ ಅದು ದೊರೆಯದೇ ಹೋದಾಗ ಸತ್ತ ಪೈಲೆಟ್ ಹಾಗು ಸಹ ಪೈಲೆಟ್‌ಗಳ ಶವವನ್ನು ಮೊದಲು ತಿನ್ನಲು ಬಯಸುತ್ತಾರೆ. ಈ ಅಪಘಾತಕ್ಕೆ ಅವರೇ ನೇರ ಕಾರಣ ಎಂಬ ಆಕ್ರೋಶಕ್ಕೆ. ಆದರೆ ವಿಧಿಯ ಅಟ್ಟಹಾಸಕ್ಕೆ ಮತ್ತೊಬ್ಬರನ್ನು ಗುರಿಯಾಗಿಸುವುದು ಸರಿಯಲ್ಲ. ಅವನ ಅಭಿಪ್ರಾಯ ಅವನ ಭಾವನಾತ್ಮಕತೆಯನ್ನು ಹೇಳುತ್ತದೆ.

ತನ್ನ ಮೊಂಡುತನದಿಂದಲೇ ಸೆಳೆಯುವ ರಾಬರ್ಟ್ ನಾಯಕನ್ನು ಮುನ್ನಡೆಸುವವನಾಗಿದ್ದಾನೆ. ಮನುಷ್ಯ ಪ್ರಪಂಚವನ್ನು ತಲುಪುವ ಹೊತ್ತಿಗೆ ಈ ತುಕ್ಕು ಹಿಡಿದ ಟಿನ್ ವಿಮಾನದಿಂದಲೇ ಉದುರಿರಬೇಕು ಎಂದು ಹತಾಶೆಯಿಂದ ಪರಾಡೊ ಹೇಳಿದರೆ ಸೆಗಣಿಯನ್ನು ತೋರಿಸಿ ಇದು ವಿಮಾನದಿಂದ ಹೇಗೆ ಬಿದ್ದಿರಬಹುದು? ವಿಮಾನಯಾನದಲ್ಲಿ ಕಿಟಕಿಗಳು ಮುಚ್ಚಿರುತ್ತವೆ ಅದು ಹೇಗೆ? ಎನ್ನುತ್ತಾನೆ. ಅವನ ಒರಟುತನದಲ್ಲೂ ಗಾಯಾಳುಗಳನ್ನು ಶುಶ್ರೂಷೆ ಮಾಡುವಾಗಿನ ಅವನ ಕಾಳಜಿ, ತಲ್ಲೀನತೆಗಳು ಮೆಚ್ಚುವಂತಹವು. ಹಿಮಪರ್ವತಗಳನ್ನು ದಾಟಿ ಬದುಕುವ ಸಾಧ್ಯತೆಯನ್ನು ಅರಸಲು ಹೊರಡುವಾಗ ಪೆರಾಡೊಗೆ ತನ್ನಕ್ಕ ಗ್ರೇಸಿಯ, ಅವಳ ಚಿಕ್ಕ ಮಗು ತನ್ನ ತಾಯಿ ಆ ಮಗುವಿಗೆ ಕೊಂಡಿದ್ದ ಪುಟ್ಟ ಶೂಗಳು ನೆನಪಿಗೆ ಬರುತ್ತವೆ. ಒಂದು ರೀತಿಯ ನಾಯಕನ ಹಾಗೆಯೆ ಇದ್ದ ನ್ಯಾಂಡೊ ಪರಾಡೊನ ತಾಯಿ ಹಾಗು ತಂಗಿಯ ಶವವನ್ನು ಸೇವಿಸಬಾರದು ಎಂದು ಎಲ್ಲರೂ ತೀರ್ಮಾನಿಸಿರುತ್ತಾರೆ. ಕಡೆಗೆ ಬದುಕುವ ಸಾಧ್ಯತೆಯನ್ನು ಅರಸಲು ಅನುವಾದಾಗ ನಾಯಕ ತಂಗಿ ಹಾಗು ತಾಯಿಯ ಶವವನ್ನು ಉಪಯೋಗಿಸಿಕೊಳ್ಳಿ ಎನ್ನುವುದು ಅಂತಃಕರಣವನ್ನು ಕಲಕುತ್ತದೆ. ವಿಮಾನ ಪತನವಾದಾಗ ಅಲ್ಲಿದ್ದ ಗಾಯಾಳುಗಳು ಜೀವ ಉಳಿಸಿಕೊಳ್ಳಲು ಮಾತ್ರ ಸತ್ತ ಸಹ ಪ್ರಯಾಣಿಕರ ಮಾಂಸ ತಿನ್ನುತ್ತಿದ್ದರೇ ವಿನಃ ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲ ಎಂಬುದು ಇಲ್ಲಿ ಮುಖ್ಯ ವಿಚಾರ.

ರೆಡಿಯೋದ ಮೂಲಕ ಏನಾಗುತ್ತಿದೆ ಎಂದು ತಿಳಿಯುವ ಕುತೂಹಲವಿರುತ್ತದೆ. ಒಮ್ಮೆ ಸರಕಾರ ಹುಡುಕುವುದನ್ನು ಕೈಬಿಟ್ಟಿದ್ದೇವೆ ಎಂದಾಗ ನಿರಾಶರಾಗುತ್ತಾರೆ. ಇನ್ನೊಮ್ಮೆ ಪೈಲೆಟ್ ಕ್ಯಾಬಿನ್ನಿನ್ನಲ್ಲಿದ್ದ ಸಲಕರಣೆಗಳನ್ನು ಬಳಸಿ ರೇಡಿಯೋ ಸಂದೇಶ ಕೇಳಿಸಿಕೊಂಡಾಗ ಸಂತೋಷವಾಗುತ್ತಾರೆ. ಹಿಮದಲ್ಲಿ ನಡೆಯಲು ಪತನಗೊಂಡ ವಿಮಾನದ ಕುರ್ಚಿಗಳ ಭಾಗ ಬಳಸಿಕೊಳ್ಳುವುದು ಒಂದರಮೇಲೊಂದು ಬಟ್ಟೆ ಹಾಕಿಕೊಳ್ಳುವುದು ಚಾರಣದ ಅನುಭವವಿಲ್ಲದೇ ಇದ್ದರೂ ಸಿದ್ಧತೆ ಮಾಡಿಕೊಳ್ಳುವುದು ಅವರ ಜಿವನೋತ್ಸಾಹವನ್ನು ಸಾಬೀತು ಮಾಡುತ್ತದೆ. ಸತ್ತ ಸ್ನೇಹಿತ ಪೆಂಚಿಟೊನ ಗಡಿಯಾರವನ್ನು ಧರಿಸಿ ಹೊರಡುವ ಪ್ರಸಂಗ ಅವರಿಗೆ ಆಹಾರವೆಂದು ಸಹ ಪ್ರಯಾಣಿಕರ ಮಾಂಸವನ್ನೇ ಪ್ಯಾಕ್ ಮಾಡಿ ಕಳುಹಿಸುವುದು ಇವೆಲ್ಲ ಮನುಷ್ಯನ ಬದುಕಿನ ಅತಂತ್ರತೆಯನ್ನು ಸರಿದೂಗಿಸುವ ಪ್ರಯತ್ನಗಳಾಗಿ ಭಾಸವಾಗುತ್ತವೆ. ನೀರಿನ ಮೂಲ ಹುಡುಕಿ ಇಲ್ಲಿ ಮನುಷ್ಯ ಅಸ್ತಿತ್ವ ಇದೆ ಎಂದು ಜನರಿಗಾಗಿ ಎದುರು ನೋಡುವ ಪ್ರಸಂಗ ಕುತೂಹಲ ಕೆರಳಿಸುತ್ತದೆ. ಪತನಗೊಂಡ ವಿಮಾನದ ಹಿಂಭಾಗದಲ್ಲಿ ನ್ಯಾಂಡೊ ಪೆರಾಡೊನ ತಾಯಿಯ ಬ್ಯಾಗ್ ಸಿಗುತ್ತದೆ. ಅಲ್ಲಿ ಚಾಕಲೇಟ್ಗಳು, ಲಿಪ್ಸ್ಟಿಕ್ ಸಿಕ್ಕಾಗ ಸಹಜವಾಗಿ ಸಂತೋಷಿಸುವ ನ್ಯಾಂಡೊ ಅದನ್ನು ಚಳಿಯ ಕಾರಣಕ್ಕೆ ತುಟಿ ಒಣಗಿದಾಗ ಬಳಸಿಕೊಳುತ್ತಾನೆ.

ಡಿಸೆಂಬರ್ ೧೯ರಂದು ನಾನು ಮೊದಲು ಸೋಲೊಪ್ಪುತ್ತೇನೊ? ಇಲ್ಲ ನನ್ನ ಹರಿದ ಚಪ್ಪಲಿಗಳೋ? ಎಂಬಲ್ಲಿ ಅವನ ಬದುಕಿನ ಆಸೆ ತಂದೆಯ ಮೇಲಿನ ಪ್ರೀತಿ ಎಷ್ಟು ಆಳವಾಗಿತ್ತು ಎಂಬುದನ್ನು ಹೇಳುತ್ತದೆ. ಕುದುರೆಯ ಮೇಲೆ ಬಂದ ವ್ಯಕ್ತಿಗೆ ಅವರು ಸಂದೇಶ ಕಳಿಸುವುದು ಆ ಸಂದೇಶ ನೀರಿಗೆ ಬೀಳಬಹುದೇ? ಎಂದು ಭಯಪಡುವುದು, ನಂತರ ಗುಡಿಸಲುಗಳಿಗೆ ಹೋಗಿ ನ್ಯಾಂಡೊ ಮಾಡಿದ ಅಡುಗೆಯನ್ನು ಸಾಕು, ಬೇಡ ಎನ್ನದೆ ತಿನ್ನುವುದು ಹಸಿವಿನ ತೀವ್ರತೆಯನ್ನು ಹೇಳುವಂತಿದೆ. ಅಪಘಾತದಲ್ಲಿ ಬದುಕುಳಿದವರ ಸಂದರ್ಶನಕ್ಕೆ ಬಂದ ವರದಿಗಾರರೊಂದಿಗೆ ಮಾತನಾಡಲಾಗದೇ ಇರುವುದು, ಎಷ್ಟೋ ದಿನಗಳವರೆಗೆ ತಂದೆಯ ಜೊತೆಗೆ ಇರುವುದು ನ್ಯಾಂಡೊ ಪೆರಾಡೊನ ನಾಚಿಕೆ ಸ್ವಾಭಾವವನ್ನು ಹೇಳುತ್ತವೆ. ಸಹ -ಪ್ರಯಾಣಿಕರನ್ನು ಕರೆತರಲು ಒತ್ತಡ ಹೇರುವುದು, ಅವರಿಗಾಗಿ ಮತ್ತೆ ಪ್ರತಿಕೂಲ ಸನ್ನಿವೇಶದಲ್ಲೂ ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣ ಮಾಡುವುದು ನಾಯಕನ ಉದಾತ್ತತೆಯನ್ನು ಹೇಳುತ್ತವೆ. ವಿದೇಶಿಯರಿಗೆ ಕುಟುಂಬ ಪ್ರೀತಿ ಇರುವುದಿಲ್ಲ, ಪರಸ್ಪರ ಕಾಳಜಿ ಇರುವುದಿಲ್ಲ ಎಂಬ ನಮ್ಮ ಸಾಮಾನ್ಯ ಅಭಿಪ್ರಾಯಕ್ಕೆ ನ್ಯಾಂಡೊ ಪರಾಡೊನ ಕುಟುಂಬ ವ್ಯತಿರಿಕ್ತವಾಗಿದೆ.

ಹಾರ್ಡ್‌ವೇರ್ ವ್ಯಾಪಾರಿಯ ಮಗ ನ್ಯಾಂಡೊ ಪರಾಡೊ ಹಾರ್ಡ್ ಆಗಿ ಹಿಮಪರ್ವತಗಳನ್ನು ಹತ್ತಿ ಬದುಕುವ ಸಾಧ್ಯತೆಗಳನ್ನು ಅರಸದೆ ಹೋಗಿದ್ದರೆ ಅವರ ‘ಮಿರಾಕಲ್ ಇನ್ ದ ಆಂಡೀಸ್’ ಕೃತಿ ಬರುತ್ತ ಇರಲಿಲ್ಲ. ಹೊರಟ ನಲವತ್ತೊಂದು ಪ್ರಯಾಣಿಕರ ಪೈಕಿ ಪರಾಡೊ ಸೇರಿದಂತೆ ಹದಿನಾರು ಮಂದಿ ಉಳಿಯುತ್ತಿರಲಿಲ್ಲ. ಕಡೆಗೆ ಎಲ್ಲಾ ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲು ಸ್ಟ್ರೆಚರ್ ಬಳಸಿದರೆ ನ್ಯಾಂಡೊ ಮಾತ್ರ ನಡೆದೇ ಹೋಗುತ್ತಾರೆ. ಬದುಕಿ ಬಂದವರಿಗೆಲ್ಲ ಆಪ್ತಸಮಾಲೋಚನೆ ಮಾಡಿಸಬೇಕೆಂದಾಗ ಎಲ್ಲರೂ ಅದನ್ನು ತಿರಸ್ಕರಿಸಿ ನಾವೆಲ್ಲಾ ಮಾನಸಿಕವಾಗಿ ಸಧೃಢರಾಗಿದ್ದೇವೆ ಎಂಬ ನಿಲುವು ಓದುಗರ ಮನೋಬಲವನ್ನು ವೃದ್ಧಿ ಪಡಿಸುತ್ತದೆ. ಸದ್ಯ ನ್ಯಾಂಡೊ ಪರಾಡೊ ಜಾಹೀರಾತು, ದೂರದರ್ಶನ ಕಾರ್ಯಕ್ರಮ ನಿರೂಪಣೆ, ಮಾಡುತ್ತಾರೆ. ಉರುಗ್ವೆಯ ಮಾಂಟೆವಿಡಿಯೋದಲ್ಲಿ ಪತ್ನಿ ವೆರೋನಿಕ್, ಮಕ್ಕಳಾದ ವೆರೋನಿಕಾ, ಸಿಸಿಲಿಯಾರೊಡನೆ ವಾಸವಾಗಿದ್ದಾರೆ. ನ್ಯಾಂಡೊ ಪೆರಾಡೊ ಅವರ ಹಿಮಪರ್ವತ ವಾಸದ ಅನುಭವವನ್ನು ಕನ್ನಡಿಗರಿಗೂ ತಮ್ಮ ‘ಪರ‍್ವತದಲ್ಲಿ ಪವಾಡ’ ಕೃತಿಯ ಮೂಲಕ ಮಾಡಿಸಿರುವವರು ಸಂಯುಕ್ತ ಪುಲಿಗಲ್‌ರವರು.

ಈಗಾಗಲೇ ನಡೆದಿರುವ ಇಂಥ ಸಾಕಷ್ಟು ವಿಮಾನ ದುರಂತಗಳಲ್ಲಿ ಅತ್ಯಂತ ಭೀಕರ ಎನ್ನುವ ಅಪಘಾತ ಅಹಮದಾಬಾದನಲ್ಲಿ ನಡೆದಿದೆ. ಇದೊಂದು ಸರಣಿ ದುರಂತ; ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸಹ ಅಸುನೀಗಿದ್ದಾರೆ. ಮಡಿದವರ ಆತ್ಮಕ್ಕೆ ಶಾಂತಿಕೋರುತ್ತಾ ಬದುಕುಳಿದ ರಮೇಶ್ ವಿಶ್ವಾಸ್ ಅವರನ್ನೂ ನೆನಪಿಸಿಕೊಳ್ಳುತ್ತಾ ಇದನ್ನು ಭಾರತದ ಎರಡನೆ ದೊಡ್ಡ ವಿಮಾನ ದುರಂತ ಎನ್ನಲಾಗುತ್ತಿದೆ. ಇನ್ನೊಮ್ಮೆ ಎಲ್ಲಿಯೂ ಇಂಥ ಅಪಘಾತಗಳು ಸಂಭವಿಸದಿರಲಿ ಎಂದು ಆಶಿಸೋಣವೇ!