Advertisement
ಮಹಾದೇವಿಯಕ್ಕನೆಂಬ ಬೆಳಕು…: ಸುಭದ್ರಾ ಹೆಗಡೆ ಬರಹ

ಮಹಾದೇವಿಯಕ್ಕನೆಂಬ ಬೆಳಕು…: ಸುಭದ್ರಾ ಹೆಗಡೆ ಬರಹ

ಅಕ್ಕನ ವಚನಗಳನ್ನು ಉದಾರಿಸುತ್ತ, ಆ ಘಟನೆಗಳಿಗೆ ಪೂರಕವಾಗುವಂತೆ ಕತೆಗಳನ್ನು ಹೇಳುವುದು ಈ ಕೃತಿಯ ಮತ್ತೊಂದು ವಿಶೇಷತೆ. ರಾಜ ಮನೆತನದ ರೀತಿ-ರಿವಾಜುಗಳನ್ನು ಸ್ವತಂತ್ರ ಮನೋಭಾವದ ಅಕ್ಕನಿಗೆ ಸಹಿಸುವುದು ಸಹಜವಾಗಿಯೇ ಕಷ್ಟವಾಗಿ, ಆ ರಾಜ ವೈಭೋಗವನ್ನೆಲ್ಲ ಧಿಕ್ಕರಿಸಿ ಹೊರ ನಡೆಯುತ್ತಾಳೆ. ಅಲ್ಲಿಂದ ಅಕ್ಕನ ಅಪರಿಮಿತ ಹುಡುಕಾಟ ನಿರಂತರವಾಗಿ ಸಾಗುತ್ತದೆ. ಒಂಟಿ ಹೆಣ್ಣು ಅರೆವಸ್ತ್ರ ಧರಿಸಿ ನಡೆವ ದಾರಿಯಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೀರೋದ್ಧಾತ ಮನಸ್ಸುಳ್ಳ ಛಲಗಾತಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅದ್ಭುತವಾಗಿ ಕೆತ್ತಿದ್ದಾರೆ ಲೇಖಕಿಯವರು. ಅಕ್ಕನ ವ್ಯಕ್ತಿತ್ವದ ಅನಾವರಣವಾದ ರೀತಿ ಅಸದೃಶ್ಯವಾಗಿದೆ.
ಡಾ.
ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕುರಿತು ಸುಭದ್ರಾ ಹೆಗಡೆ ಬರಹ

ಡಾ|ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’ ಕಾದಂಬರಿ ಅತ್ಯಂತ ವಿಶಿಷ್ಟ ಕೃತಿಯಾಗಿದೆ. ಇದು ೧೨ನೇ ಶತಮಾನದ ಮಹಾನ್ ಶಿವಶರಣೆ, ವಚನಕಾರ್ತಿ ಮಹಾದೇವಿಯಕ್ಕನ ಕುರಿತಾಗಿ ಬರೆದ ಕೃತಿ. ಅನುಪಮಾ ಅವರ ಈ ಕೃತಿಯ ಮಹಾದೇವಿ ತನ್ನೊಳಗನ್ನು ಶೋಧಿಸುತ್ತಾ, ತನ್ನ ಪರಿಮಿತಿಯನ್ನು ವಿಸ್ತರಿಸುತ್ತಾ ಎತ್ತರೆತ್ತರಕ್ಕೆ ಏರುತ್ತಾ ಬೆಳಕಾಗಿ, ಲೋಕವೇ ಮೆಚ್ಚುವ ಅಕ್ಕನಾಗಿ ಬೆಳೆಯುವ ರೀತಿಯನ್ನು ಅತ್ಯಂತ ಸೂಕ್ಷ್ಮವಾಗಿ, ಸುಂದರವಾಗಿ ಲೇಖಕಿ ಇಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ೧೨ನೇ ಶತಮಾನದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸ್ಥಿತಿ-ಗತಿಗಳನ್ನು ಸ್ಥಿತ್ಯಂತರಗಳನ್ನು ಇಲ್ಲಿ ವಿವರಿಸಿದ್ದಾರೆ. ಆ ಕಾಲಘಟ್ಟದಲ್ಲಿ ನಿಂತು ನೋಡಿರುವ ಘಟನೆಗಳೇನೋ ಅನ್ನಿಸುವಷ್ಟು ನೈಜ ನಿರೂಪಣೆ, ಸನ್ನಿವೇಶಗಳ ಜೋಡಣೆ, ನಿರ್ವಹಣೆ ಎಲ್ಲವೂ ಅನೂಹ್ಯವಾಗಿದೆ. ಅಕ್ಕನ ಬಾಲ್ಯ, ಯೌವ್ವನ, ಅವಳಲ್ಲಿ ಹುದುಗಿರುವ ಧೈರ್ಯ, ಸ್ಥೈರ್ಯ, ಮುಖ್ಯವಾಗಿ ಏಕೆ? ಏನು? ಎನ್ನುವ ಕುತೂಹಲಕ್ಕೆ ಉತ್ತರ ಹುಡುಕುವ ರೀತಿ ವಿಭಿನ್ನವಾಗಿದೆ.

(ಡಾ. ಎಚ್.ಎಸ್. ಅನುಪಮಾ)

ಈ ಕಾದಂಬರಿಯಲ್ಲಿ ಬರುವ ಶರಣ-ಶರಣೆಯರ ಬದುಕು ಸಾಮಾಜಿಕ ಕಟ್ಟು-ಕಟ್ಟಳೆಗಳನ್ನು ದಾಟಿ ಬರುವ ರೀತಿ, ಅವುಗಳನ್ನು ಬೆಳೆದು ನಿಲ್ಲುವ ಪ್ರಬುದ್ಧತೆ ಪ್ರಸಂಗಗಳೆಲ್ಲವೂ ಒಂದಕ್ಕೊಂದು ಪೋಣಿಸಿದಂತೆ ಇದ್ದು, ಎಲ್ಲಿಯೂ ಅತಿಶಯೋಕ್ತಿಯಿಲ್ಲ. ಅಕ್ಕ ಮಹಾದೇವಿ ರಾಜನನ್ನು, ರಾಜ್ಯವನ್ನು, ತಂದೆ-ತಾಯಿಯನ್ನು, ತನ್ನವರೆಲ್ಲರನ್ನೂ ತೊರೆದು ಲೌಕಿಕವನ್ನು ಮೀರಿ ತರ್ಕಕ್ಕೆ ನಿಲುಕದ ಅಲೌಕಿಕವನ್ನು ಕಾಣಲು, ಎಡರು-ತೊಡರುಗಳನ್ನು ಎದುರಿಸುತ್ತಾ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ನೆಲೆಯಾದ ಶ್ರೀಶೈಲದತ್ತ ಹೋಗುವಾಗಿನ ದೃಶ್ಯಾವಳಿಗಳು ಕಣ್ಣಿಗೆ ಕಟ್ಟುವಂತೆ, ಅಕ್ಕನೇ ಎದುರಿಗೆ ನಿಂತಂತೆ ಭಾಸವಾಗುತ್ತದೆ. ಜೀವಂತಿಕೆ, ಲವಲವಿಕೆ, ಭಾಷೆಯ ಸೊಗಡು ಪ್ರತೀ ಪಾತ್ರಗಳಲ್ಲಿ ಎದ್ದು ಕಾಣುವಂತಿದೆ. ಅಕ್ಕನ ಮನದಾಳದ ಮಾತುಗಳಿಗೆ ಅಕ್ಷರ ರೂಪವನ್ನು ನೀಡಿ ಡಾ|ಅನುಪಮಾ ಅವರು ಇದನ್ನು ಹೆಣೆದಿರುವುದು ಸೋಜಿಗವೇ ಸರಿ. ಲೇಖಕಿಯವರಲ್ಲಿ ಇರುವ ವಿಸ್ತಾರವಾದ ಓದು, ಆಳವಾದ ಜ್ಞಾನ, ಓದಿನ ಜೊತೆಗಿನ ಚಿಂತನೆ, ಗತಕಾಲದ ವ್ಯಕ್ತಿಗಳನ್ನು ವರ್ತಮಾನಕ್ಕೆ ತಂದು ಮರುಸೃಷ್ಟಿಸುವ ಕಲೆಗಾರಿಕೆ, ಸೃಜನಶೀಲತೆ ಅದ್ಭುತ.

ಅಕ್ಕನ ವಚನಗಳನ್ನು ಉದಾರಿಸುತ್ತ, ಆ ಘಟನೆಗಳಿಗೆ ಪೂರಕವಾಗುವಂತೆ ಕತೆಗಳನ್ನು ಹೇಳುವುದು ಈ ಕೃತಿಯ ಮತ್ತೊಂದು ವಿಶೇಷತೆ. ರಾಜ ಮನೆತನದ ರೀತಿ-ರಿವಾಜುಗಳನ್ನು ಸ್ವತಂತ್ರ ಮನೋಭಾವದ ಅಕ್ಕನಿಗೆ ಸಹಿಸುವುದು ಸಹಜವಾಗಿಯೇ ಕಷ್ಟವಾಗಿ, ಆ ರಾಜ ವೈಭೋಗವನ್ನೆಲ್ಲ ಧಿಕ್ಕರಿಸಿ ಹೊರ ನಡೆಯುತ್ತಾಳೆ. ಅಲ್ಲಿಂದ ಅಕ್ಕನ ಅಪರಿಮಿತ ಹುಡುಕಾಟ ನಿರಂತರವಾಗಿ ಸಾಗುತ್ತದೆ. ಒಂಟಿ ಹೆಣ್ಣು ಅರೆವಸ್ತ್ರ ಧರಿಸಿ ನಡೆವ ದಾರಿಯಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೀರೋದ್ಧಾತ ಮನಸ್ಸುಳ್ಳ ಛಲಗಾತಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅದ್ಭುತವಾಗಿ ಕೆತ್ತಿದ್ದಾರೆ ಲೇಖಕಿಯವರು. ಅಕ್ಕನ ವ್ಯಕ್ತಿತ್ವದ ಅನಾವರಣವಾದ ರೀತಿ ಅಸದೃಶ್ಯವಾಗಿದೆ. ಕಾಲಗರ್ಭದಲ್ಲಿ ಅಡಗಿ ಹೋದ ಮಹಾನ್ ವ್ಯಕ್ತಿಗಳನ್ನು, ಸನ್ನಿವೇಶ, ಘಟನೆಗಳನ್ನು, ಜೀವ ತಳೆದು ನಿಲ್ಲುವಂತೆ ಮಾಡುವುದು ಈ ಕಾದಂಬರಿಯ ಹೆಗ್ಗಳಿಕೆ. ಆ ತಾಕತ್ತು ಲೇಖಕಿಯವರಲ್ಲಿ ಅಡಗಿದೆ. ಅರಿವಿನ ವಿಸ್ತಾರ ಪಥವನ್ನು ತೋರಿಸುವ ಅಕ್ಕ ಸರ್ವಕಾಲಕ್ಕೂ ಸ್ತುತ್ಯಾರ್ಹಳು.

ಡಾ| ಅನುಪಮಾ ಅವರಲ್ಲಿ ಅಡಗಿರುವ ಪ್ರತಿಭೆ, ಸರಳತೆ, ಮಾನವ ಪ್ರೀತಿ, ಹೃದಯವಂತಿಕೆ, ಅವರಲ್ಲಿ ಇರುವ ಅರಿವಿನ ಬೆಳಕು ಕೂಡ ಮಹಾನ್ ಬೆಳಕಾಗಿರುವ ಅಕ್ಕನ ವ್ಯಕ್ತಿತ್ವವನ್ನು ಸಶಕ್ತವಾಗಿ ಕಡೆದಿಡಲು ಸಾಧ್ಯವಾಯಿತು. ಮತ್ತೆ ಮತ್ತೆ ಓದಿಸಿಕೊಂಡು ಹೋಗಬಹುದಾದ ಈ ಕಾದಂಬರಿ, ಕನ್ನಡ ಸಾರಸ್ವತ ಲೋಕಕ್ಕೆ ಶ್ರೀಮತಿ ಎಚ್.ಎಸ್. ಅನುಪಮಾ ಅವರು ನೀಡಿರುವ ದೊಡ್ಡ ಕೊಡುಗೆ ಅಂತಲೇ ಹೇಳಬಹುದು.

(ಕೃತಿ: ಬೆಳಗಿನೊಳಗು ಮಹಾದೇವಿಯಕ್ಕ (ಕಾದಂಬರಿ), ಲೇಖಕರು: ಡಾ. ಎಚ್.ಎಸ್.‌ ಅನುಪಮಾ, ಪ್ರಕಾಶಕರು: ಲಡಾಯಿ ಪ್ರಕಾಶನ (9480286844), ಗದಗ, ಬೆಲೆ: 650/-) )

About The Author

ಸುಭದ್ರಾ ಹೆಗಡೆ

ಸುಭದ್ರ ಹೆಗಡೆ ಮೂಲತಃ ಹೊನ್ನಾವರದ ಕೆರೆಕೋಣದವರು, ಪ್ರಸ್ತುತ ಇಂಗ್ಲೆಂಡ್ ನಿವಾಸಿ. 30 ವರ್ಷಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡದ ಅನೇಕ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಒಲವು ಹೊಂದಿರುವ ಇವರು ಕಥೆ ಕವನ ಬರೆಯುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಇದೀಗ ತಮ್ಮ ಬಿಡುವಿನ ಸಮಯವನ್ನು ಓದಿಗೆ, ಬರವಣಿಗೆಗೆ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಅನೇಕ ಲೇಖನಗಳು, ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

5 Comments

  1. ಸದಾನಂದ ಪಾಟೀಲ

    ಮತ್ತೊಂದು ಚಂದದ ವಿಮರ್ಶೆ ಸುಭದ್ರಾ ಅವರಿಂದ ಬಂದಿದೆ. ಸಹಜ ಸ್ವಭಾವ ಸಮತೋಲ ಭಾವದ ಕೃತಿ ವಿಮರ್ಶೆ ಇದು. ಮತ್ತಷ್ಟು ಕೃತಿಗಳ ನಿರೀಕ್ಷೆ ನಮ್ಮದು.
    ಸದಾನಂದ ಪಾಟೀಲ

    Reply
  2. Deepa

    ವಿಮರ್ಶಾ ಲೇಖನ ಅತ್ಯುತ್ತಮ ವಾಗಿ ಮೂಡಿ ಬಂದಿದೆ.ಅಭಿನಂದನೆಗಳು💐

    Reply
  3. Name *Gajanan Bhat

    ಈ ಕೃತಯ ಸಾರವನ್ನು ಸುಭದ್ರಾ ಹೆಗಡೆಯವರು ಚಂದವಾದ ಭಾಷೆಯಲ್ಲಿ ವಿಮರ್ಶೆ ಮಾಡಿರುತ್ತಾರೆ. ಶರಣೆಯರ ಜೀವನವನ್ನು ಲೇಖಕಿಯರು ಮಾತ್ರ ನಿರೂಪಿಸ ಬಲ್ಲರು. ಈ ಕೃತಿಯನ್ನು ನಾನು ಇಂಡಿಯಾಗೆ ಹೋದಮೇಲೆ ಖಂಡಿತ ಓದುತ್ತೆನೆ.

    Reply
  4. ಗೀತಾ ಹಾಸ್ಯಗಾರ.

    ಬೆಳಗಿನೊಳಗು ಅಕ್ಕ ಮಹಾದೇವಿ ….. ಬಗ್ಗೆ ಸುಂದರವಾಗಿ ವಿಮರ್ಶೆಯನ್ನು ಪ್ರತಿಕ್ರಿಯಿಸಿದ್ದೀರಿ ಸುಭದ್ರಾ ಮೇಡಂ.

    Reply
  5. ಶ್ರೀಪಾದ

    ಬೆಳಗಿನೊಳಗು ಮಹಾದೇವಿಯಕ್ಕ ಇದು ಡಾ.ಎಚ್.ಎಸ್.ಅನುಪಮ ಅವರ ಸುದೀರ್ಘ ಕಾದಂಬರಿ. ಅಕ್ಕನ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಲೇಖಕಿ ತಮ್ಮ ಚಿಂತನೆ ಮತ್ತು ವಿ ವೈಚಾರಿಕತೆಯ ನಿಕಷಕ್ಕೆ ಒಡ್ಡಿ ಸರಳವಾಗಿ ಮತ್ತು ಅಷ್ಟೆ‌ಗಹನವಾಗಿ ನಿರೂಪಿಸಿದ್ದರೆ. ೨೧ನೇಯ ಶತಮಾನದ ಗಮನಾರ್ಹ ಸಾಹಿತಿ ಸಮಾಜ ಸುಧಾರಕಿ ಹಾಗು ಆ್ಯಕ್ಟಿವಿಸ್ಟ ಆಗಿ ಅವರು ಸುಳಿದೆಗೆದು ಬೆಳೆಯುತ್ತಲೆ ಇದ್ದಾರೆ.
    ಕವಯತ್ರಿ ಸುಭದ್ರಾ ಹೇಗಡೆಯವರು ಈ ಕಾದಂಬರಿಯ ಒಳ ಹೊರಗನ್ನು ಓದುಗರಿಗೆ ಪರಿಚಯಿಸುತ್ತಾ ವಿಮರ್ಶೆಯ ನೆಲದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಡಿದ್ದಾರೆ. ಬದುಕಿನ ಜೀವಪರ ಸಾಧನೆಯ ಅಪಾರಕ್ಕೆ ತುಡಿವ ನನ್ನ ಪರಿಚಯದ ಈ ಇಬ್ಬರಿಕೆ ಹಾರ್ದಿಕ ಅಭಿನಂದನೆಗಳು. ಡಾ.ಶ್ರೀಪಾದ ಶೆಟ್ಟಿ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ