Advertisement
ಓದು ಮುಗಿದ ನಂತರದ ಪ್ರಾರಂಭದ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಓದು ಮುಗಿದ ನಂತರದ ಪ್ರಾರಂಭದ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಜಿಲ್ಲಾವಾರು ನೇಮಕವಿದ್ದ ಕಾರಣ ನನಗೆ 2 ಜಿಲ್ಲೆಗಳಿಗೆ ಅರ್ಜಿ ಹಾಕಲು ಹಣ ಇಲ್ಲದ ಕಾರಣ ಬರೀ ಒಂದೇ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸಿದೆ, ಅದೂ ಮೈಸೂರಿನಲ್ಲಿ. ಕೆಲಸವನ್ನು ಗಿಟ್ಟಿಸಲೇ ಬೇಕೆಂಬ ಹಠವಿಡಿದು ಓದಿದೆ. ನಾನು ಮೈಸೂರಿನಲ್ಲಿಯೇ ಅರ್ಜಿ ಹಾಕಲು ಕಾರಣ ಅಲ್ಲಿ ನನ್ನ ಗೆಳೆಯನ ಅಣ್ಣನೊಬ್ಬನು ಓದುತ್ತಿದ್ದ. ಪರೀಕ್ಷೆ ಬರೆಯುವ ದಿನ ಅವನ ರೂಮಿನಲ್ಲಿ ಉಳಿಯಬಹುದು. ಬೇರೆ ಕಡೆ ಉಳಿದು ಖರ್ಚು ಮಾಡಲು ಹಣದ ತೊಂದರೆ ಇದ್ದುದರಿಂದ ನಾನು ಮೈಸೂರು ಒಂದಕ್ಕೇ ಅರ್ಜಿ ಹಾಕಲು ತೀರ್ಮಾನಿಸಿದ್ದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆ
ʼ ಸರಣಿಯ ಐವತ್ತೊಂದನೆಯ ಕಂತು ನಿಮ್ಮ ಓದಿಗೆ

ಓಡುವ ಕುದುರೆ ಸುತ್ತಲಿನಲ್ಲಿದ್ದುದನ್ನು ನೋಡಬಾರದೆಂದು ಅದರ ಕಣ್ಣಿಗೆ ಕಣ್ಕಾಪು ಕಟ್ಟಿರುತ್ತಾರೆ. ಇದರಿಂದಾಗಿ ಆ ಕುದುರೆಯು ನೇರವಾದ ದೃಷ್ಟಿಯನ್ನಿಟ್ಟುಕೊಂಡು ಓಡುತ್ತದೆ. ಇದೇ ರೀತಿ ಜಾಬ್ ಓರಿಯೆಂಟೆಡ್ ಕೋರ್ಸ್‌ಗಳನ್ನು ಓದುತ್ತಿರುವವರಿಗೆ ಅವರ ಉಪನ್ಯಾಸಕರು ಹಾಗೂ ಅವರ ಪೋಷಕರೂ ಅಲ್ಲದೇ ಸಮಾಜವೂ ಸಹ ಅವರು ಬೇಗನೇ ಅವರು ಓದಿದ ಕೋರ್ಸಿನ  ಕೆಲಸಕ್ಕೇ ಹೋಗಲಿ ಎಂದು ಬಯಸುತ್ತಾರೆ. ಒಂದೊಮ್ಮೆ ಅವರು ಓದಿದ ಕೋರ್ಸ್ ಕೆಲಸ ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದರೆ ಅವರಿಗೆ ಜನ ನೂರೆಂಟು ಪ್ರಶ್ನೆಗಳನ್ನು ಮಾಡ್ತಾರೆ!! ನನಗೂ ಟಿಸಿಹೆಚ್ ಮುಗಿದ ನಂತರ ಮನೆಯಲ್ಲಿ ಇದ್ದಾಗ ಹಲವರು ನನಗೂ ಇದೇ ರೀತಿ ಪ್ರಶ್ನೆ ಮಾಡ್ತಾ ಇದ್ದರು. ‘ಕೆಲಸ ಸಿಗಲಿಲ್ವಾ?’  ‘ಸರ್ಕಾರದವರು ಯಾವಾಗ ಕೆಲಸಕ್ಕೆ ಅರ್ಜಿ ಕರೀತಾರೆ?’  ‘ಒಂದೊಮ್ಮೆ ಕೆಲಸ ಸಿಗದಿದ್ದರೆ ಏನು ಮಾಡ್ತೀಯಾ?’ ‘ಜೀವನ ಮಾಡೋದು ಕಷ್ಟ ಅಲ್ವಾ?’  ಎಂದು ಪದೇ ಪದೇ ಪ್ರಶ್ನಿಸುತ್ತಿದ್ದರು. ಊರಲ್ಲಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದರೂ ಇದೇ ಪ್ರಶ್ನೆ! ‘ಈ ಭಾಗ್ಯಕ್ಕೆ ಓದಬೇಕಾಗಿತ್ತ?!’ ‘ಓದಿಗೆ ಇನವೆಸ್ಟ್ ಮಾಡೋ ದುಡ್ಡಲ್ಲಿ ತೋಟನಾದ್ರೂ ಮಾಡಿದ್ದರೆ ಆರಾಮಾಗಿ ಇರಬಹುದಿತ್ತು’  ಎಂದು ಕುಟುಕುತ್ತಿದ್ದರು.. ಇನ್ನೂ ಕೆಲವರು ‘ನಮ್ ಜಾತಿ ಜನಕ್ಕೆ ಎಲ್ಲಿ ಕೆಲಸ ಸಿಗುತ್ತೆ?’  ಎಂದು ಕಾಲೆಳೆಯುತ್ತಿದ್ದರು!! ಯುವಕರ ಮನೋಭಾವದಲ್ಲೂ ಹಲವು ಉಪನ್ಯಾಸಕರು ‘ಜಾಬ್’ ಎಂಬ ಕಣ್ಕಾಪು ಕಟ್ಟಿ ನಮಗೆ ಜಗತ್ತಿನ ಇತರೆ ಕೆಲಸಗಳು, ಅವಕಾಶಗಳ ಬಗ್ಗೆ ಹೇಳುವುದೇ ಇಲ್ಲ.. ಇದರಿಂದಾಗಿ ಎಷ್ಟೋ ಜನಕ್ಕೆ ಬಯಸಿದ ಜಾಬ್ ಸಿಗದೇ ಇದ್ದಾಗ ತಾವು ಜಿಗುಪ್ಸಿತರಾಗಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುವ ಅಥವಾ ಮಾನಸಿಕವಾಗಿ ಡಿಪ್ರೆಷನ್‌ಗೆ ಹೋಗಿರುವ ಉದಾಹರಣೆಗಳೂ ಇವೆ!!

ನಾನು ಟಿಸಿಹೆಚ್ ಕೋರ್ಸ್ ಮುಗಿಸಿಕೊಂಡು ಬಂದು ನನ್ನ ಸ್ವಂತ ಊರಲ್ಲಿ ಹೆಚ್ಚು ದಿನ ಇರಲಿಲ್ಲ. ನನ್ನ ಅಜ್ಜಿ ಮನೆಗೆ ಹೋದೆ. ಅಲ್ಲಿ ಒಂದು ಖಾಸಗಿ ಶಾಲೆಗೆ ಹೋಗಲು ಪ್ರಾರಂಭಿಸಿದೆ. ಅಲ್ಲಿ ಕೊಡುತ್ತಿದ್ದ ಮೂರಂಕಿ ಸಂಬಳಕ್ಕೆ ಬೇಸತ್ತು ಮನೆಪಾಠವನ್ನು ಮಾಡಲು ಶುರು ಮಾಡಿದೆ. ಮೊದ ಮೊದಲು ಕೆಲವೇ ವಿದ್ಯಾರ್ಥಿಗಳು ಬಂದರೂ ನಂತರ ಅವರ ಸಂಖ್ಯೆಯಲ್ಲಿ ಏರುಗತಿಯಾಗುತ್ತಾ ಹೋಯಿತು. ಅವರಿಂದ ತಿಂಗಳಿಗೆ ಬರೀ 20 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತಿದ್ದೆ. ಕೆಲವರು ಈ ಹಣವನ್ನೂ ಕೊಡಲೂ ಲೆಕ್ಕ ಹಾಕುತ್ತಿದ್ದರು. ಆಗ ನನಗೆ ಬೇಸರವಾಗಿ ದಾವಣಗೆರೆಯ ಒಂದು ರೆಸಿಡೆನ್ಷಿಯಲ್ ಶಾಲೆಗೆ ಶಿಕ್ಷಕನಾಗಿ ಸೇರಿಕೊಂಡೆ. ಅಲ್ಲೂ ಸಹ ವೇತನ ಮೂರಂಕಿಯದ್ದೇ ಆಗಿತ್ತು. ನಮ್ಮ ಹೆಡ್ ಮಾಸ್ಟರ್ ವೇತನ ಕೊಡುವಾಗ 10 ರೂಪಾಯಿಗಳ ನೋಟುಗಳನ್ನೇ  ಕೊಡುತ್ತಿದ್ದರು. ಅವನ್ನು ಎಣಿಸಲು ಬಹಳ ಹೊತ್ತು ಹಿಡಿಯುತ್ತಿತ್ತೇ ವಿನಃ ಅದು ಏನಕ್ಕೂ ಸಾಲುತ್ತಿರಲಿಲ್ಲ. ಜೊತೆಗೆ ಈ ಶಾಲೆಯ ಅನುಭವಗಳು ವಿಶೇಷವಾಗಿದ್ದವು.

ವಸತಿ ಶಾಲೆ ಆಗಿದ್ದರಿಂದ ಈ ಶಾಲೆಯಲ್ಲಿ ನನಗೆ ಉಳಿದುಕೊಳ್ಳಲು ಅವಕಾಶವಿತ್ತು. ನನಗೆ ಊಟ ಹಾಗೂ ವಸತಿಯ ಸೌಲಭ್ಯವಿತ್ತು. ಆದರೆ ಸಂಜೆ ವೇಳೆ ಹಾಗೂ ಬೆಳಗ್ಗೆ ಮಕ್ಕಳಿಗೆ ಪಾಠ ಮಾಡಬೇಕಾಗಿತ್ತು. ಮತ್ತು ಸ್ಟಡಿ ಹವರ್ಸ್ ಎಂದು ಹಾಸ್ಟೆಲ್ಲಿನಲ್ಲಿ ಇದ್ದ ಮಕ್ಕಳನ್ನು ಓದಿಸಬೇಕಾಗಿತ್ತು. ಆ ಹಾಸ್ಟೆಲ್ಲಿನಲ್ಲಿದ್ದ ಮಕ್ಕಳು ಸಿರಿವಂತ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದರು. ನಾನು ತಿಂಗಳಿಗೆ ದುಡಿಯೋ ಹಣವನ್ನು ತಿಂಗಳಿಗೊಂದು ಪೇರೆಂಟ್ಸ್ ಮೀಟಿಂಗ್ ಇದ್ದಾಗ ಬಂದ ಪೇರೆಂಟ್ಸ್ ಅವರ ಮಗುವಿಗೆ ಅಂದು ಹೊರಗಡೆಯ ಸ್ನ್ಯಾಕ್ಸ್‌ಗೆಂದು ನಾವು ಗಳಿಸುವಷ್ಟೇ ಹಣವನ್ನು ವ್ಯಯಿಸುತ್ತಿದ್ದರು!! ಸಂಜೆ ಅವರು ರೂಮಿಗೆ ಬಂದಾಗ ಅವರ ಬ್ಯಾಗಿನಲ್ಲಿರುವ ಸಿಹಿತಿಂಡಿಗಳು ಇತರೆ ಬೇಕರಿ ಪದಾರ್ಥಗಳನ್ನು ನೋಡಿದಾಗ ನನಗೆ ಈ ಫೀಲಿಂಗ್ ಬರುತ್ತಿತ್ತು. ಶಾಲೆಯಲ್ಲಿಯೂ ಪಾಠ, ಸಂಜೆಯೂ ಪಾಠ ಮಕ್ಕಳೊಂದಿಗೆಯೇ ಇರುವುದು, ಹೊರಗಡೆ ಎಲ್ಲೂ ಹೋಗಲು ಅವಕಾಶವಿಲ್ಲದಿರುವುದು ನನಗೆ ತುಂಬಾ ಬೇಸರವನ್ನು ತರಿಸುತ್ತಿತ್ತು. ‘ಚಿನ್ನದ ಪಂಜರದಲ್ಲಿಟ್ಟ ಗಿಳಿಯಂತೆ ನಾನು’  ಎಂದೆನಿಸುತ್ತಿತ್ತು. ಹೇಳದೇ ಕೇಳದೇ ಶಾಲೆ ಬಿಟ್ಟು ಹೋಗೋಣವೆಂದರೂ ನನ್ನ ಮೂಲ ಅಂಕಪಟ್ಟಿಗಳನ್ನೆಲ್ಲಾ ಈ ಶಾಲೆಯವರು ತೆಗೆದುಕೊಂಡಿದ್ದರು. ಅಷ್ಟಕ್ಕೂ ಬಿಟ್ಟು ಹೋಗುವುದಾದರೂ ಎಲ್ಲಿಗೆ? ವಾಪಸ್ ಊರಿಗೆ ಹೋದರೆ ಮರ್ಯಾದೆ ಇರುವುದಿಲ್ಲ. ನಮ್ಮಜ್ಜಿ ಮನೆಗೆ ಹೋಗೋಣವೆಂದರೆ ಹೇಗೆ ಹೋಗೋದಪ್ಪ? ಎಂದುಕೊಂಡು ಮನಸ್ಸಲ್ಲಿ ನೋವನ್ನು ತಿನ್ನುತ್ತಿದ್ದೆ.

ಈ ನೋವಿನ ಪ್ರಭಾವದಿಂದಾಗಿ ಮಕ್ಕಳಿಗೆ ಅಷ್ಟು ಸ್ಟ್ರಿಕ್ಟ್ ಮಾಡುತ್ತಿರಲಿಲ್ಲ. ಅವರ ಸ್ಟಡಿ ಹವರ್ಸ್‌ನಲ್ಲಿ ಬೇಕಾದ್ರೆ ಮಲಗಿಕೊಳ್ಳಿ ಆದ್ರೆ ಗಲಾಟೆ ಮಾತ್ರ ಮಾಡಬೇಡಿ ಎಂದು ಹೇಳಿ ನಾನೂ ಹಾಗೆಯೇ ಮಲಗುತ್ತಿದ್ದೆ. ಮಕ್ಕಳಿಗೆ ಒತ್ತಡವನ್ನು ಹಾಕ್ತಾ ಇರಲಿಲ್ಲ. ಆ ಶಾಲೆಯಲ್ಲಿ ಶಾಲಾ ಬಿಲ್ಡಿಂಗ್ ಹಾಗೂ ಮಕ್ಕಳ ಹಾಸ್ಟೆಲ್ ಒಂದೇ ಬಿಲ್ಡಿಂಗ್ ನಲ್ಲಿತ್ತು. ನನಗೆ ಕಡಿಮೆ ಸಂಬಳ ಎಂದು ಹೇಳಿಕೊಂಡರೆ ಬೇರೆಯವರಿಗೂ ನನ್ನಷ್ಟೇ ಇತ್ತು!! ಮಕ್ಕಳಿಗೆ ಮಲಗಲು ಕಾಟ್ ವ್ಯವಸ್ಥೆಯಿತ್ತು. ಕಬ್ಬಿಣದ ಮಂಚಗಳು ಕೆಳಗೊಂದು ಹಾಗೂ ಮೇಲೊಂದು ಮಂಚವು ಅಟ್ಯಾಚ್ ರೀತಿಯಲ್ಲಿ ಇರುತ್ತಿತ್ತು. ಮೇಲಿನ ಮಂಚದವರು ಕೆಳಗೆ ಇಳಿದು ಬರಲು ಸ್ಟೆಪ್ಸ್‌ಗಳು ಇದ್ದವು. ಒಮ್ಮೆ ಹಾಗೆಯೇ ಮಲಗಿರುವಾಗ ನಮ್ಮ ಹಾಸ್ಟೆಲ್ ಊರ ಹೊರಗೆ ಇದ್ದಿದ್ದುರಿಂದ ಗಾಳಿ ಜೋರಾಗಿ ಬೀಸಿದ ಶಬ್ದವು ಕೇಳುತ್ತಿತ್ತು. ಬೀಸಿದ ರಭಸಕ್ಕೆ ಕಿಟಕಿಗಳು ಶಬ್ದ ಮಾಡುತ್ತಿದ್ದವು. ನಾನು ನನಗೆಂದೇ ಮೀಸಲಾಗಿದ್ದ ಮಂಚದಲ್ಲಿ ಮಲಗಿರಲು ಈ ಶಬ್ದವು ನನ್ನಲ್ಲಿ ಭಯವನ್ನು ಅಂದು ತುಸು ಹೆಚ್ಚೇ ಉಂಟು ಮಾಡಿತ್ತು. ಆಗ ನನ್ನ ಪಕ್ಕದ ಕಾಟಿನಲ್ಲಿ ಅಪ್ ಸ್ಟೇರಿನ ಕಾಟಿನ ಮೇಲೆ ಮಲಗಿದ್ದ ಹುಡುಗನೊಬ್ಬನು ನಿದ್ದೆಗಣ್ಣಿನಲ್ಲಿಯೇ ಕೆಳಕ್ಕೆ ಇಳಿಯುವುದನ್ನು ನಾನು ನೋಡಿದೆ. ಆಗ ನನಗೆ ವಿಪರೀತ ಭಯ ಉಂಟಾಯಿತು. ಅವನು ನಿದ್ದೆಗಣ್ಣಿನಲ್ಲಿಯೇ ಕೆಳಗಿಳಿಯುತ್ತಾ ಅದೇ ರೀತಿ ನಡೆದು ಹೋದನು. ನನಗಾಗ ಏನಪ್ಪಾ ಇದು? ನಾನು ಏನು ಮಾಡುವುದು? ದೆವ್ವ  ಗಿವ್ವ ಎಂಬ ಆಲೋಚನೆಗಳು ನನ್ನ ಮನದಲ್ಲಿ ಸುಳಿದು ಹೆದರಿ ನಡುಗಿಬಿಟ್ಟೆ. ಅವನು ಮುಂದಕ್ಕೆ ಹೋದದ್ದೇ, ನಾನು ನಿಧಾನಕ್ಕೆ ಕೆಳಗಿಳಿದು ಬೇರೊಬ್ಬನ ಕಾಟಿನಲ್ಲಿ ಹೋಗಿ ಮಲಗಿಬಿಟ್ಟೆ. ಮೈ ತುಂಬಾ ರಗ್ಗು ಹೊದ್ದುಕೊಂಡು ಆ ಹುಡುಗ ಏನು ಮಾಡುತ್ತಿರಬಹುದು ಎಂದು ಹಾಗೆಯೇ ಮುಖದ ಭಾಗ ಮಾತ್ರ ತೆಗೆದು ನೋಡಿದೆ. ಅವನು ಬಾಗಿಲ ಬಳಿ ಹೋಗಿ ಹಾಕಿದ ಮೇಲಿನ ಚಿಲಕವನ್ನು ತೆಗೆಯಲು ಹಾರಿ ಹಾರಿ ಪ್ರಯತ್ನಿಸಿದ. ಆದರೆ ಅದು ಸಿಗಲಿಲ್ಲ. ಅವನು ಕೊನೆಗೆ ಮತ್ತೆ ವಾಪಾಸ್ ಆಗಿ ತನ್ನ ಕಾಟಿನ ಮೇಲೆ ಹೋಗಿ ಮಲಗಿಕೊಂಡ. ನಾನು ಅವನು ಮಲಗಿಕೊಂಡದ್ದು ಖಾತ್ರಿಯಾದ ನಂತರವೇ ನನ್ನ ಜಾಗಕ್ಕೆ ಬಂದು ಮಲಗಿದೆ. ಮಾರನೇ ದಿನ ಆ ಹುಡುಗನಿಗೆ ಇದರ ಬಗ್ಗೆ ಕೇಳಲು ಅವನು ನನಗೇನು ಗೊತ್ತಿಲ್ಲ ಸರ್ ಎಂದ. ನಂತರವೇ ತಿಳಿದದ್ದು ಅವನಿಗೆ ನಿದ್ದೆಯಲ್ಲಿ ನಡೆದು ಹೋಗುವ ಒಂದು ಸಮಸ್ಯೆ ಇದೆಯೆಂದು!!

ನನಗೆ ಆ ಶಾಲೆಯಲ್ಲಿದ್ದಾಗ ಪದೇ ಪದೇ ಹುಶಾರಿಲ್ಲದಂತೆ ಆಗುವುದು, ಬಂದ ವೇತನವೆಲ್ಲಾ ಆಸ್ಪತ್ರೆಯ ಖರ್ಚಿಗೇ ಸಾಕಾಗುವುದು ಅಲ್ಲದೇ ಇನ್ನೂ ಹೆಚ್ಚಿನ ಸಾಲವಾಗುವುದು ಮಾಮೂಲಾಗಿತ್ತು. ಅದೇನೋ ಒಂದು ಮಾತು ಹೇಳ್ತಾರಲ್ಲಾ… ‘ಬಾಳೇಕಾಯಿ ತಿಂದದಕ್ಕೂ ತೋಟ ಕಾದದ್ದಕ್ಕೂ ಸಮವಾಯ್ತು’ ಅಂತಾ ಹಾಗೆ ಆಗ್ತಿತ್ತು ನನ್ನ ಕಥೆ!! ಅದಕ್ಕೆಂದೇ ನಾನು ಶಾಲೆ ಬಿಡಲು ತೀರ್ಮಾನಿಸಿದೆ. ಹೇಳದೇ ಕೇಳದೇ ಊರಿಗೆ ಹೋದೆ. ಒಂದೆರಡು ದಿನ ಬಿಟ್ಟು ಬಂದು ಮೂಲ ಅಂಕಪಟ್ಟಿಗಳನ್ನೂ ಶಾಲೆಯವರಿಂದ ವಾಪಾಸ್  ಪಡೆದು  ಊರಿಗೆ ಹೋಗಿ ಸಿಇಟಿ ಪರೀಕ್ಷೆಗೆ ಓದಲು ಕುಳಿತೆ. ಪ್ರತೀದಿನವೂ ಬರೀ ಓದೋದೇ ಕೆಲಸ. ಸರ್ಕಾರದವರು ಶಿಕ್ಷಕರ ಹುದ್ದೆಗೆ ಅರ್ಜಿ ಕರೆಯುತ್ತಾರೆಂದು ಯಾವ ಖಾಸಗೀ ಶಾಲೆಗೂ ಹೋಗಲಿಲ್ಲ. ಬರೀ ಓದು ಓದು ಓದು ಮಾತ್ರ ನನ್ನ ಜೀವನವಾಗಿತ್ತು. ದಿನಕ್ಕೆ ಏನಿಲ್ಲವೆಂದರೂ 14 ಘಂಟೆ ಓದುತ್ತಿದ್ದೆ!! ಪರೀಕ್ಷೆಗೆ ತುಂಬಾ  ಚೆನ್ನಾಗಿ ತಯಾರಿ ನಡೆಸಿದ್ದೆ.

ನಿರೀಕ್ಷೆಯಂತೆಯೇ  ಸರ್ಕಾರದವರು  ಶಿಕ್ಷಕರ ಹುದ್ದೆಗೆ ಅರ್ಜಿ ಕರೆದರು. ಆಗ ಅರ್ಜಿ ಹಾಕಲಿಕ್ಕೂ ನನ್ನ ಬಳಿ ಹಣ ಇರಲಿಲ್ಲ. ಹಾಗಂತಾ ನನಗೆ ಸಂಬಂಧಿಕರ ಬಳಿ ಕೈಚಾಚಲು ಇಷ್ಟವಿರಲಿಲ್ಲ. ನನ್ನ ಆತ್ಮೀಯ ಗೆಳೆಯ ತಿಪ್ಪೇಸ್ವಾಮಿಗೆ ಇದರ ಬಗ್ಗೆ ಒಂದು ಪತ್ರ ಬರೆದೆ. ಆಗ ಮೊಬೈಲ್ ಏನೂ ಇರದ ಕಾರಣ ಅವನೂ ಪತ್ರದ ಮೂಲಕವೇ ನನಗೆ ಉತ್ತರ ಕೊಟ್ಟ. ಅಲ್ಲದೇ ನಾನು ಹೇಳಿದ್ದ ಜಾಗಕ್ಕೆ ಬಂದು ಅವನು ನನಗೆ ಅರ್ಜಿ ಹಾಕಲು ಹಣ ಕೊಟ್ಟು ಹೋದ. ಆಗ ಜಿಲ್ಲಾವಾರು ನೇಮಕವಿದ್ದ ಕಾರಣ ನನಗೆ 2 ಜಿಲ್ಲೆಗಳಿಗೆ ಅರ್ಜಿ ಹಾಕಲು ಹಣ ಇಲ್ಲದ ಕಾರಣ ಬರೀ ಒಂದೇ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸಿದೆ, ಅದೂ ಮೈಸೂರಿನಲ್ಲಿ. ಕೆಲಸವನ್ನು ಗಿಟ್ಟಿಸಲೇ ಬೇಕೆಂಬ ಹಠವಿಡಿದು ಓದಿದೆ. ನಾನು ಮೈಸೂರಿನಲ್ಲಿಯೇ ಅರ್ಜಿ ಹಾಕಲು ಕಾರಣ ಅಲ್ಲಿ ನನ್ನ ಗೆಳೆಯನ ಅಣ್ಣನೊಬ್ಬನು ಓದುತ್ತಿದ್ದ. ಪರೀಕ್ಷೆ ಬರೆಯುವ ದಿನ ಅವನ ರೂಮಿನಲ್ಲಿ ಉಳಿಯಬಹುದು. ಬೇರೆ ಕಡೆ ಉಳಿದು ಖರ್ಚು ಮಾಡಲು ಹಣದ ತೊಂದರೆ ಇದ್ದುದರಿಂದ ನಾನು ಮೈಸೂರು ಒಂದಕ್ಕೇ ಅರ್ಜಿ ಹಾಕಲು ತೀರ್ಮಾನಿಸಿದ್ದೆ! ಇದೇ ರೀತಿ ನಾನು ಅಲ್ಲಿಗೆ ಹೋಗಿ ಪರೀಕ್ಷೆ ಬರೆದೆ. ಆದರೆ ಪರೀಕ್ಷೆ ಬರೆಯುವಾಗ ನಾನು ಗೊತ್ತಿದ್ದ ಉತ್ತರದ ಬದಲು ಬೇರೆ ಉತ್ತರಕ್ಕೆ ಓಎಂಆರ್ ಶೀಟಿನಲ್ಲಿ ಟಿಕ್ ಹಾಕಿಬಿಟ್ಟೆ. ಇದು ನನಗೆ ಗೊತ್ತಾಯಿತು. ಈ ಹಿಂದಿನ ಬ್ಯಾಚಿನವರು ಒಂದು ಅಂಕ ಮಿಸ್ ಆದರೂ ಕೆಲಸ ಸಿಗೋದಿಲ್ಲ ಎಂಬ ಭಯವಿಡಿಸಿದ್ದ ಕಾರಣ ನನಗೆ ಪರೀಕ್ಷಾ ಹಾಲ್ ನಲ್ಲಿ ಸಿಕ್ಕಾಪಟ್ಟೆ ಟೆನ್ಷನ್ ಆಯ್ತು. ಆ  ಉತ್ತರವನ್ನು ಅಳಿಸಲು ಪ್ರಯತ್ನಪಟ್ಟೆ. ಅದು ಸಾಧ್ಯವಾಗದಾದಾಗ ಒಂದು ಕ್ಷಣ ಸುಮ್ಮನೆ ಕುಳಿತು ನಂತರ ಸಾವರಿಸಿಕೊಂಡು ಪರೀಕ್ಷೆ ಬರೆದೆ. ಬಂದು ನೋಡಿದಾಗ ನಾ ಮಾಡಿದ ಒಂದು ದೊಡ್ಡ ಮಿಸ್ಟೇಕ್ ಏನೆಂದರೆ ನೆಗಟೀವ್ ಮಾರ್ಕ್ಸ್ ಇಲ್ಲದಿದ್ದಾಗಿಯೂ ಕೂಡ ನಾನು ಸಮಯದ ಅಭಾವದಿಂದಾಗಿ 14 ಪ್ರಶ್ನೆಗಳನ್ನು ಉತ್ತರಿಸಿದೇ ಹಾಗೆಯೇ ಬಿಟ್ಟಿದ್ದೆ. ಇದು ಹೊರಗಡೆ ಹೋದಾಗ ಹೇಗೆ ತಿಳಿಯಿತೆಂದರೆ ನನ್ನ ಮಿತ್ರನೊಬ್ಬ ಕೇಳಿದ ಪ್ರಶ್ನೆಗಳಿಗೆ ಎಲ್ಲಾ ಸರಿಯುತ್ತರ ಕೊಟ್ಟೆನಾದರೂ ಓಎಂಆರ್ ಶೀಟಿನಲ್ಲಿ ಹಾಕದಿರುವುದು ಕಾರ್ಬನ್ ಕಾಪಿಯಿಂದಾಗಿ ತಿಳಿಯಿತು. ಮುಂದೇನಾಯ್ತು ಎಂಬುದನ್ನು ಮುಂದೆ ತಿಳಿಯೋಣ.

ಒಂದು ಮಾತಂತೂ ಸತ್ಯ. ನಮ್ಮ ನಿಜವಾದ ಮಿತ್ರನಾರು ಎಂಬುದು ನಮಗೆ ನಮ್ಮ ಕಷ್ಟದ ದಿನಗಳಲ್ಲಿ ಮಾತ್ರ ನಮಗೆ ತಿಳಿಯುತ್ತೆ. ಅಲ್ಲಿಯವರೆಗೂ ನಾವು ಎಲ್ಲರನ್ನೂ ನಮ್ಮ ಗೆಳೆಯರು ಎಂದು ಅಂದುಕೊಂಡಿರುತ್ತೇವೆ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ