ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೇಳನೆಯ ಬರಹ
ಚೆಲುವು ಕನ್ನಡ ನಾಡಗುಡಿಯಲಿ
ಹಲವು ಕನ್ನಡ ಕವಿಗಳು
ಬೆಳಗುತಿರುವರು ಕ್ಷಾತ್ರತೇಜದಿ
ಮೆರೆದು ಬಾಳಿದ ಕಲಿಗಳು
ಕವಿ ಶ್ರೀಏ.ಕೆ.ರಾಮೇಶ್ವರ್ ಅವರ ಚೆನ್ನುಡಿ ಇದು. ಹೌದು. ಕನ್ನಡ ನಾಡಿನಲ್ಲಿ ಅನೇಕ ಸಂತರು, ವಿಚಾರವಂತರು, ವಿವೇಕಿಗಳು ಬಾಳಿ ಬದುಕಿ, ತಮ್ಮ ಜ್ಞಾನಸಂಪತ್ತನ್ನು ಧಾರೆಯೆರೆದು ನಮ್ಮ ಬಾಳನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹವರು ಪ್ರಾತಃಸ್ಮರಣೀಯರು. ಇವರಲ್ಲಿ ಕನಕದಾಸರು ಮುಖ್ಯರಾದವರು.
ಜೀವವನ್ನು `ತನುಸಂಚಾರಿ’ ಎಂದು ತಮ್ಮ ಕಾವ್ಯವಾದ `ಹರಿಭಕ್ತಿಸಾರ’ದಲ್ಲಿ ಕರೆದ ಕನಕದಾಸರು ಹುಟ್ಟಿದ್ದು ಇಂದಿಗೆ ಸುಮಾರು ಐನೂರೈವತ್ತು ವರ್ಷಗಳ ಹಿಂದೆ, ಅಂದರೆ 1488ರಲ್ಲಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 390 ಕಿಲೋಮೀಟರ್ ದೂರವಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಎನ್ನುವ ಗ್ರಾಮದಲ್ಲಿ. ಈ ಊರಿನಲ್ಲಿದ್ದ ಹಾಲುಮತದ ಹಂಡೆಕುರುಬ ಜನಾಂಗಕ್ಕೆ ಸೇರಿದ ಬೀರಪ್ಪ ನಾಯಕ ಮತ್ತು ಬಚ್ಚಮ್ಮ ಅವರಿಗೆ ಬಹುಕಾಲದಿಂದ ಮಕ್ಕಳಾಗಿರಲಿಲ್ಲ. ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಹುಟ್ಟಿದ ಗಂಡು ಮಗುವಿಗೆ ತಿಮ್ಮಪ್ಪನ ಹೆಸರನ್ನೇ ಇಟ್ಟರೆಂಬುದು ಪ್ರತೀತಿ. ಮುಂದೆ ಕನಕದಾಸರಾಗಿ ಹೆಸರಾದದ್ದು ಈ ತಿಮ್ಮಪ್ಪನೇ. ತಂದೆ ಬೀರಪ್ಪನು ಪ್ರತಿಷ್ಠಿತ ವಿಜಯನಗರ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟ ದಣ್ಣಾಯಕ ಆಗಿದ್ದರು. ತಂದೆಯೊಬ್ಬರು ಮಗನಿಗೆ ಕೊಡಬಹುದಾದ ಅತ್ಯಮೂಲ್ಯ ಸಂಪತ್ತು ಅಂದರೆ ವಿದ್ಯೆಯನ್ನು ಅವರು ತಿಮ್ಮಪ್ಪನಿಗೆ ಕೊಡಿಸಿದರು. ತಮ್ಮ ಸ್ನೇಹಿತರಾಗಿದ್ದ ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿಯಲ್ಲಿ ತಮ್ಮ ಮಗನನ್ನು ಶಿಕ್ಷಣಕ್ಕಾಗಿ ಸೇರಿಸಿದರು. ಈ ಗುರುಗಳು ತಮ್ಮ ಶಿಷ್ಯನಿಗೆ ಅರ್ಥಶಾಸ್ತ್ರ, ಧರ್ಮಶಾಸ್ತ್ರ, ತರ್ಕ ಮೀಮಾಂಸೆ, ಛಂದಸ್ಸು, ವ್ಯಾಕರಣ ಮುಂತಾದವನ್ನು ಹೇಳಿಕೊಟ್ಟರು, ನಾವು ಗಮನಿಸಬೇಕಾದ ವಿಷಯವೆಂದರೆ ಶ್ರೀನಿವಾಸಾಚಾರ್ಯರು ತಿಮ್ಮಪ್ಪನಿಗೆ ರಾಮಾಯಣ, ಮಹಾಭಾರತ, ಭಾಗವತ, ಪಂಚತಂತ್ರ, ವಿಷ್ಣುಪುರಾಣ, ಬ್ರಹತ್ಕಥೆಯೇ ಮೊದಲಾದ ಕಾವ್ಯ, ಪುರಾಣಗಳಿಂದ ಕಥೆಗಳನ್ನು ಆಯ್ದು ಸ್ವಾರಸ್ಯಕರವಾಗಿ ಹೇಳಿಕೊಡುತ್ತಿದ್ದುದು. ತಿಮ್ಮಪ್ಪನಿಗೆ ಕಥೆಗಳೆಂದರೆ ಬಹು ಅಚ್ಚುಮೆಚ್ಚು. ಕಥೆ ಕೇಳುತ್ತಾ ಕೇಳುತ್ತಾ ಅವನು ಬೇರೊಂದು ಲೋಕಕ್ಕೆ ಹೋಗಿಬಿಡುತ್ತಿದ್ದ. ಇದ್ದಲ್ಲೇ ಕಥೆಕಟ್ಟಿ ಹೇಳಬಲ್ಲ, ಕಣ್ಣಿಗೆಕಂಡ ವಿಚಾರಗಳನ್ನು ಪದಕಟ್ಟಿ ಹಾಡಬಲ್ಲ ಇವನ ಭಾಷಾ ಶಕ್ತಿ ಮತ್ತು ಕಲ್ಪನಾ ಸಾಮರ್ಥ್ಯಕ್ಕೆ ಸ್ವತಃ ಗುರುಗಳೇ ಬೆರಗಾಗುತ್ತಿದ್ದರು. ಮಕ್ಕಳ ಮನಸ್ಸಿನ ಬೆಳವಣಿಗೆಯಲ್ಲಿ ಕಲ್ಪನಾ ಶಕ್ತಿ ಅಂದರೆ ಇಮ್ಯಾಜಿನೇಷನ್ ಅನ್ನುವುದು ಬುದ್ಧಿಮತ್ತೆಗಿಂತ ಮುಖ್ಯವಾದುದು ಎಂದು ಯುಗಪ್ರವರ್ತಕ ಭೌತವಿಜ್ಞಾನಿ ಐನ್‌ಸ್ಟೈನ್ ಅವರು ಹೇಳಿರುವುದನ್ನು ನಾವು ಗಮನಿಸಬಹುದು. ಕಥೆಗಳ ಮೂಲಕ ತಿಮ್ಮಪ್ಪನೆಂಬ ಎಳೆ ಹುಡುಗನ ಮನಸ್ಸಿನಲ್ಲಿ ಉಂಟಾದ ಭಾವಸಂಸ್ಕಾರವು ಮುಂದೆ ಅವನ ಜೀವನದ ಹೆಜ್ಜೆಹೆಜ್ಜೆಯಲ್ಲೂ ಪ್ರಭಾವ ಬೀರಿತು. ದಾನಗುಣ, ಪರೋಪಕಾರ, ಜೀವದಯೆ, ಮೇಲ್ಪದರದ ಒಳಗಿನ ಸತ್ಯವನ್ನು ನೋಡುವ ಗುಣ, ನೇರ ನಿಷ್ಠುರ ಅಭಿವ್ಯಕ್ತಿ ಮೊದಲಾದ ಗುಣಗಳು ಅವರಲ್ಲಿ ಮೂಡಲು ಇದು ಕಾರಣವಾಯಿತು.
ವಿದ್ಯೆಯಲ್ಲಿ ಮಾತ್ರವಲ್ಲದೆ ಯುದ್ಧದಾಟದಲ್ಲೂ ಆಸಕ್ತನಾಗಿದ್ದ ಮಗನಿಗೆ ಅವನ ತಂದೆಯು ಕತ್ತಿವರಸೆ, ಅಂಗಸಾಧನೆ, ಕುದುರೆ ಸವಾರಿ, ಬಿಲ್ವಿದ್ಯೆ ಮುಂತಾದ ಸಮರಕಲೆಗಳನ್ನೂ ಕಲಿಸುವ ಏರ್ಪಾಡು ಮಾಡಿದರು. ಸತತ ಪರಿಶ್ರಮದಿಂದ ಸಾಧನೆ ಮಾಡಿ, ತಿಮ್ಮಪ್ಪ ಒಳ್ಳೆ ಕಲಿಯಾಗಿಯೂ ಹೆಸರು ಮಾಡಿದ. ತನ್ನ ತಾರುಣ್ಯಾವಸ್ಥೆಯಲ್ಲಿಯೇ ತನ್ನ ಮೊದಲ ಗುರುವಾದ ತಂದೆಯನ್ನು ಕಳೆದುಕೊಂಡ ನೋವು ಅನುಭವಿಸಿದ ತಿಮ್ಮಪ್ಪ. ಹೀಗಾಗಿ ಇಪ್ಪತ್ತರ ಚಿಕ್ಕವಯಸ್ಸಿನಲ್ಲೇ ಇವನು ನಾಯಕನಾಗುವ ಹೊಣೆಗಾರಿಕೆ ಹೊರಬೇಕಾಯಿತು. ಯುದ್ಧದಲ್ಲಿ ಜಯಶಾಲಿಯಾಗಿ ಬರುತ್ತಿದ್ದ ಇವನಿಗೆ ಸುತ್ತಮುತ್ತಲ ಪಾಳೇಗಾರರರು ವಿಶೇಷ ಗೌರವಕೊಡುತ್ತಿದ್ದರು. ಮುಂದೆ ಕನಕದಾಸರೇ ಬರೆದಂತೆ `ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ, ಇಷ್ಟವೆಂದು ತಿಳಿದು ಈ ಸಂಸಾರ ಹೊರುವುದು’ಎಂಬ ಮಾತಿಗೆ ತಕ್ಕ ಹಾಗೆ ತಾಯಿಯ ಒತ್ತಾಸೆಯಿಂದ ಲಕ್ಷ್ಮೀ ಎಂಬ ಹುಡುಗಿಯೊಂದಿಗೆ ಅವನ ಮದುವೆಯಾಯಿತು, ಒಂದು ಮಗು ಕೂಡ ಆಯಿತು.
ಸಂಸಾರ ಸುಖವೇನೋ ಎಂಬ ಭಾವ ಬರುವಂತೆ ಎಲ್ಲವೂ ನಡೆಯುತ್ತಿದ್ದಾಗ ತಿಮ್ಮಪ್ಪ ನಾಯಕನಿಗೆ ಭೂಮಿ ಅಗೆಸುವಾಗ ಏಳು ಕೊಪ್ಪರಿಗೆ ನಿಧಿ ಸಿಕ್ಕಿತು. ಅದನ್ನು ಅವನು ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಕಟ್ಟೆಗಳ ನಿರ್ಮಾಣ, ಅಸಹಾಯಕರಿಗೆ ದಾನಧರ್ಮ ಮುಂತಾದ ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸಿದ್ದರಿಂದ ಜನರು ತಿಮ್ಮಪ್ಪ ನಾಯಕನನ್ನು ಕನಕಪ್ಪ ನಾಯಕನೆಂದು ಪ್ರೀತಿಯಿಂದ ಕರೆಯಲಾರಂಭಿಸಿದರು.
ಜೀವನದ ದಾರಿ ಅನೂಹ್ಯವಲ್ಲವೇ? ಸುಖವಾಗಿ ಸಾಗುತ್ತಿದ್ದ ಕನಕಪ್ಪನ ಬದುಕಿನಲ್ಲಿ ತಾಯಿಯ ಸಾವು, ತನ್ನ ಮಗುವಿನ ಸಾವು, ಹೆಂಡತಿಯ ಮನೋರೋಗ ಮತ್ತು ಸಾವು ಹಾಗೂ ಯುದ್ಧದಲ್ಲಿನ ಸೋಲು ಬದುಕನ್ನು ತಾತಾಚರ್ಯರು ಮತ್ತು ವ್ಯಾಸರಾಯರ ಬಳಿ ಕನಕದಾಸರು ಮೋಕ್ಷ ಸಾಧನೆಗೆ ಮಾರ್ಗವನ್ನು ಕೇಳಿದರು. ಗುರು ವ್ಯಾಸರಾಯರು ಇವರ ಜ್ಞಾನಕ್ಕೆ ಮೆಚ್ಚಿ ತಲೆದೂಗಿದರೂ ಅವರ ಶಿಷ್ಯ ಪರಂಪರೆಯು ಕನಕರನ್ನು ಒಪ್ಪಿಕೊಳ್ಳಲಿಲ್ಲ. ಹೆಜ್ಜೆ ಹೆಜ್ಜೆಗೂ ಎದುರಾದ ಸವಾಲುಗಳನ್ನು ಕನಕದಾಸರು ತಮ್ಮ ತಾಳ್ಮೆ, ದೃಢತೆ ಮತ್ತು ಗುರುಗಳ ಪ್ರೋತ್ಸಾಹದಿಂದ ಗೆದ್ದರು. ಒಂದು ಉದಾಹರಣೆಯನ್ನು ನೋಡೋಣ. ವ್ಯಾಸಮಠದಲ್ಲಿ ಮೋಕ್ಷದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ವ್ಯಾಸರಾಯರು `ಯಾರು ವೈಕುಂಠಕ್ಕೆ ಹೋಗುತ್ತೀರಿ?’ಎಂದು ಕೇಳಿದಾಗ ಅನೇಕ ಅಹಂಕಾರಿ ಶಿಷ್ಯರು `ನಾನು ಹೋಗುತ್ತೇನೆ’, `ನಾನು ಹೋಗುತ್ತೇನೆ’ ಎನ್ನುತ್ತಾರೆ. ಕನಕದಾಸರು `ಇವರ‍್ಯಾರೂ ಹೋಗುವುದಿಲ್ಲ, ನಾನು ಹೋದರೆ ಹೋದೇನು’ ಅನ್ನುತ್ತಾರೆ. ಇದರಿಂದ ಇನ್ನೂ ಕೋಪಗೊಂಡ ಶಿಷ್ಯರನ್ನು ಗುರುಗಳು ಸಮಾಧಾನಿಸಿ ಇದರ ಒಳಮರ್ಮವನ್ನು ಹೇಳುತ್ತಾರೆ. ನಾನು ಎಂದರೆ ಅಹಂಕಾರ ಭಾವ, ಅದು ಹೋದರೆ ವೈಕುಂಠಕ್ಕೆ ಹೋಗಬಹುದು ಎಂಬುದು ಇದರ ಅರ್ಥ. ಕನಕದಾಸರು ಇಂತಹ ಸವಾಲುಗಳನ್ನು ಎದುರಿಸಿ ಹರಿದಾಸರಾಗಿ ಗಟ್ಟಿಯಾಗಿ ನೆಲೆನಿಂತದ್ದು. ಅಗ್ನಿದಿವ್ಯಗಳು ಅವು.
ಹರಿದಾಸರಾದ ಮೇಲೆ ಕನಕರು ಒಂದೇಕಡೆ ನೆಲೆ ನಿಲ್ಲಲಿಲ್ಲ. ಹಂಪಿಯಿಂದ ಪ್ರಾರಂಭಿಸಿ ತಿರುಪತಿ, ಕನಕಗಿರಿ, ಶ್ರೀರಂಗಂ, ಬೇಲೂರು, ಮೋಲುಕೋಟೆ, ಶ್ರೀರಂಗ ಪಟ್ಟಣ, ಶಿವನ ಸಮುದ್ರ, ಮಹಾದೇವಪುರ, ಸೋಸಲೆ, ಪುರಿ, ಗಯಾ, ಮಥುರಾದ್ವಾರಕೆ, ರಾಜಸ್ಥಾನ, ಉಡುಪಿ ಹೀಗೆ ಸಾಕಷ್ಟು ದೂರದೂರ ಓಡಾಡಿ, ವಿವಿಧ ಕ್ಷೇತ್ರಗಳನ್ನು ದಾಸರ ದಾಸನಾಗಿ ಸಂದರ್ಶಿಸಿ ತತ್ವಪ್ರಚಾರ ಮಾಡಿದರು. ತಮ್ಮ ಜೀವಿತದ ಕೊನೆಯಲ್ಲಿ ಕಾಗಿನೆಲೆಯಲ್ಲಿ ನೆಲೆ ನಿಂತು ತಮ್ಮ ಆರಾಧ್ಯದೈವವಾದ ಆದಿಕೇಶವನನ್ನು ಭಜಿಸುತ್ತಾ ಬದುಕಿದರು. 90 ವರ್ಷಗಳ ತುಂಬು ಬಾಳನ್ನು ಬಾಳಿ ಸುಮಾರು 1578ರಲ್ಲಿ ದೇಹತ್ಯಾಗ ಮಾಡಿದರು.
******
`ನಾನು ನಾನು ಎನ್ನದಿರೋ ಹೀನಮಾನವ, ಜ್ಞಾನದಿಂಧ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ’ ಎಂದು ಎಚ್ಚರಿಸಿದವರು ಕನಕದಾಸರು. ತಮ್ಮ ಗುರುಗಳು `ದೇವರಿಲ್ಲದ ಸ್ಥಳದಲ್ಲಿ ಬಾಳೆಹಣ್ಣು ತಿಂದು ಬನ್ನಿ’ಎಂದು ಹೇಳಿದಾಗ ದೇವರಿಲ್ಲದ ಸ್ಥಳ ಎಲ್ಲೂ ಇಲ್ಲ ಎಂದು ಬಾಳೆಯ ಹಣ್ಣನ್ನು ಹಾಗೆಯೇ ಇವರು ತಂದ ಕಥೆಯನ್ನು ಕನ್ನಡಿಗರು ಎಂದೂ ಮರೆಯಲಾರರು. `ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ, ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ, ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ, ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ’ ಎಂದು ಕೇಳಿ ಈ ಸೃಷ್ಟಿಯ ವಿಸ್ಮಯ ಹಾಗೂ ಮಾನವ ಪ್ರಜ್ಞೆಯ ಸಂಬಂಧವನ್ನು ಕುರಿತು ನಾವು ಚಿಂತಿಸುವಂತೆ ಮಾಡಿದವರು. ಜಾತಿಮೂಢರು ಉಡುಪಿಯ ಕೃಷ್ಣನ ದರ್ಶನಕ್ಕೆ ತಮಗೆ ಅವಕಾಶ ನೀಡದಿದ್ದಾಗ `ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ’ ಎಂದು ಆರ್ತವಾಗಿ ಬೇಡಿದವರು. ಇವರ ನೈಜ ಭಕ್ತಿಗೆ ಮೆಚ್ಚಿ ಉಡುಪಿ ಕೃಷ್ಣನ ಮೂರ್ತಿಯು ಹಿಂದಕ್ಕೆ ತಿರುಗಿ ನಿಂತು ಆ ದೇವಾಲಯದಲ್ಲಿ ಕನಕನ ಕಿಂಡಿಯು ಏರ್ಪಟ್ಟದ್ದು ಕನ್ನಡ ನಾಡಿನ ಜನಪ್ರಿಯ ಐತಿಹ್ಯಗಳಲ್ಲಿ ಒಂದು. `ಕುಲ ಕುಲ ಕುಲವೆಂದು ಹೊಡೆದಾಡುವಿರಿ ನಿಮ್ಮಕುಲದ ನೆಲೆಯನೇನಾದರು ಬಲ್ಲಿರಾ’ಎಂದು ಪ್ರಶ್ನಿಸಿ ಕುಲದ ಆಚೆಗಿನ ಮಾನವೀಯ ಗುಣಗಳನ್ನು ನೋಡುವಂತೆ ಜನರನ್ನು ಪ್ರೇರೇಪಿಸಿದವರು. `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ’ ಎಂಬ ಜೀವನದ ಕಟು ವಾಸ್ತವವವನ್ನು ಕಣ್ಣಿಗೆ ಕಾಣಿಸಿದವರು. `ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ’ ಎಂದು ಬಾಳಿನ ಅಂತಿಮ ಸತ್ಯವನ್ನು ಕಾಣಿಸಿದವರು. ಅದಕ್ಕಾಗಿಯೇ `ಏನೂ ಇಲ್ಲದ ಎರಡು ದಿನದ ಸಂಸಾರ, ಜ್ಞಾನದಲಿ ದಾನಧರ್ಮವ ಮಾಡಿರಯ್ಯ, ಹಸಿದು ಬಂದವರಿಗೆ ಅಶನವೀಯಲು ಬೇಕು, ಶಿಶುಗಳಿಗೆ ಪಾಲ್ಬೆಣ್ಣೆ ಉಣಿಸಲೇಬೇಕು, ಹಸನಾದ ಭೂಮಿಯನು ಧಾರೆಯೆರೆಯಲು ಬೇಕು, ಪುಸಿಯಾಡದೆಲೆ ಭಾಷೆ ನಡೆಸಲೇಬೇಕು’ ಎಂಬ ಉತ್ತಮ ಜೀವನದ ವಿವೇಕವನ್ನು ಹೇಳಿಕೊಟ್ಟವರು. `ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮಾ’ ಎಂದು ಹಾಡಿ, ಆ ಮೂಲಕ ನಮಗೆ ಇಷ್ಟವಾದ ಒಂದು ಗಣೇಶ ಪ್ರಾರ್ಥನೆಯನ್ನು ಕೊಟ್ಟವರು. ನೇರ ನಿಷ್ಠುರ ನುಡಿಯಾಡಲು ಹಿಂಜರಿಯದ ಈ ವಿಶಿಷ್ಟ, ವೈಚಾರಿಕ ಮನೋಭಾವದ ಸಂತರು `ಅಹುದಾದರಹುದೆನ್ನಿ, ಇಲ್ಲವಾದರಿಲ್ಲವೆನ್ನಿ, ದೇವರಿಲ್ಲದಗುಡಿಯು ಪಾಳು ಬಿದ್ದಂಗಡಿಯು, ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ, ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು, ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು’ಎಂದು ದಿಟ್ಟವಾಗಿ ನುಡಿದವರು. `ಸೋರೆಯೊಳು ಸುರೆತುಂಬಿ ಮೇಲೆ ಹೂವಿನ ಹಾರ ಹಾಕಿ ಗೀರುಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ, ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು ಸಾರಿ ಸಾರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ. ನಾರಾಯಣ ಅಚ್ಯುತಾನಂತಾದಿಕೇಶವನ ಸಾರಾಮೃತವನುಂಡು ಸುಖಿಸೊ ಲಂಡಜೀವವೆ ಎಲೊ ಭಂಡಜೀವವೆ’ ಎಂದು ಎಗ್ಗುಸಿಗ್ಗಿಲ್ಲದೆ ಹೇಳಿದವರು. `ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ ಎಂದು ನೊಂದಜೀವರನ್ನು ಸಮಾಧಾನ ಮಾಡಿದವರು. `ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ, ಮಾನಹೀನನಾಗಿ ಬಾಳ್ವ ಮನುಜನೇತಕೆ, ನ್ಯೂನ ಹೆಚ್ಚು ನೋಡುವಲ್ಲಿ ಇರುವುದೇತಕೆ, ತನ್ನ ಬಳಗವೆರಸಿ ಉಣ್ಣದ ಭಾಗ್ಯವೇತಕೆ’ ಎಂದು ನಿತ್ಯಜೀವನದಲ್ಲಿ ನಾವು ಬದುಕಬೇಕಾದ ರೀತಿಯನ್ನು ಮಾಡಿ ನೋಡಬಲ್ಲ ಅಂದರೆ ಕಾರ್ಯುಸಾಧ್ಯ (ಪ್ರ್ಯಾಕ್ಟಿಕಲ್) ಎಂಬ ರೀತಿಯಲ್ಲಿ ತಿಳಿಸಿಕೊಟ್ಟರು.
****
ಮಣ್ಣಿನಲಿ ಬಂಧಿಸಿದ ದೇಹವ
ಮಣ್ಣುಗೂಡಿಸಬೇಡ: ಜ್ಞಾನದ
ಕಣ್ಣದೃಷ್ಟಿಯನಿಟ್ಟು ರಕ್ಷಿಸು ನಮ್ಮನನವರತ
ಕನಕದಾಸರ ಶತಕಕಾವ್ಯ `ಹರಿಭಕ್ತಿಸಾರ’ವು ಕನ್ನಡದ ಜನರ ಮೆಚ್ಚಿನ ಪಾರಾಯಣ ಕಾವ್ಯವಾಗಿದೆ. ಕನಕದಾಸರ ಹಾಡುಗಳನ್ನು ನಮ್ಮ ಸಂದರ್ಭದ ಹಾಡುಗಾರರು ಮತ್ತು ಕನ್ನಡ ಸಿನಿಮಾಕ್ಷೇತ್ರದವರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಪಠ್ಯಪುಸ್ತಕಗಳ ಮೂಲಕ ಅವು ನಮ್ಮ ಮಕ್ಕಳ ಮನಸ್ಸನ್ನು ಪ್ರವೇಶಿಸಿವೆ. ಅಕ್ಕ ಮಹಾದೇವಿಯು ತನ್ನ ದಿಟ್ಟತೆ ವಿಭಿನ್ನತೆಗಳಿಂದ ಕನ್ನಡ ಮನಸ್ಸನ್ನು ಕಾಡಿದಂತೆ ಕನಕದಾಸರು ಕೂಡ ಕಾಡಿದ್ದಾರೆ. ದಿವಂಗತ ಮೇಷ್ಟ್ರು ಕಿ.ರಂ.ನಾಗರಾಜ್ ಅವರು `ಕಾಲಜ್ಞಾನಿ ಕನಕ’ ಎಂಬ ನಾಟಕ ಬರೆದಿದ್ದಾರೆ. ಭರತನಾಟ್ಯ ಕ್ಷೇತ್ರವೂ ಕೂಡ ಕನಕರನ್ನು ಅಭಿಮಾನದಿಂದ ಸ್ವೀಕರಿಸಿದೆ. ಕನಕದಾಸರ ಕೊಡುಗೆಯನ್ನು ನಾಡಿಗೆ ಉತ್ತಮ ರೀತಿಯಲ್ಲಿ ಪರಿಚಯಿಸುವಲ್ಲಿ ಕರ್ನಾಟಕ ಸರ್ಕಾರದ `ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಕೊಡುಗೆ ಗಮನೀಯವಾದದ್ದು’. ಕಾ.ತ.ಚಿಕ್ಕಣ್ಣನವರ ಸಂಪಾದನೆಯಲ್ಲಿ ಇದರ ಮೂಲಕ ಪ್ರಕಟಗೊಂಡ `ಕನಕ ಓದು– ಕನಕ ಅರಿವು ಶಿಬಿರದ ಕೈಪಿಡಿ’ ಯು ಕನಕದಾಸರನ್ನು ಕುರಿತ ಉತ್ತಮವಾದ ವಾಚಿಕೆಯಾಗಿದೆ.
ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ. ಉಪಭೋಗಯುಗದ ಕೊಳ್ಳುಬಾಕತನದ ಪ್ರವಾಹದಲ್ಲಿ ತರಗೆಲೆಗಳೋಪಾದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ನಾವು `ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ’ ಎಂದು ಆಗಾಗ ನೆನಪಿಸಿಕೊಳ್ಳಬೇಕಲ್ಲವೇ?
ಕನ್ನಡ ಭಾಷೆಯ ಅಂತರಂಗನಾದವನ್ನು ಕನಕದಾಸರು ಅರ್ಥ ಮಾಡಿಕೊಂಡ ರೀತಿಯು ಭಾಷಾಭ್ಯಾಸಿಗಳ ಸಂಭ್ರಮ. ಭಾಷೆಯನ್ನು ಕಣ್ಣಿಟ್ಟು ನೋಡಿ, ಕಿವಿಯಿಟ್ಟು ಕೇಳಿ ಸವಿಯುವವರಿಗೆ ಇವರ ಭಾಷೆಯು ಬಲು ಸೊಗಸು ಅನ್ನಿಸುವಂಥದ್ದು. ಉದಾಹರಣೆಗೆ, ಕನಕನ ಮುಂಡಿಗೆಗಳು. ಇವು ತುಂಬ ಚಮತ್ಕಾರಿಕ ಹಾಗೂ ಪ್ರತಿಭಾಸಂಪನ್ನವಾದಂಥವು. ಒಗಟಿನಂತೆ ಭಾಸವಾಗುವ ಇವು ಕವಿಯಿಂದ ಅಪಾರ ಬುದ್ಧಿಶಕ್ತಿ ಮತ್ತು ಭಾಷಾಸಾಮರ್ಥ್ಯವನ್ನು ಬೇಡುತ್ತವೆ. ಉದಾಹರಣೆಗೆ “ಪರಮಪುರುಷ ನೀನೆಲ್ಲಿ ಕಾಯಿ, ಸರಸಿಯೊಳಗೆ ಕರಿ ಕೂಗಲು ಕಾಯಿ, ಹಿರಿದು ಮಾಡಿದ ಪಾಪ ನುಗ್ಗೆ ಕಾಯಿ, ಹರಿ ನಿನ್ನ ಧ್ಯಾನ ಬಾಳೆಕಾಯಿ, ಕ್ರೂರ ವ್ಯಾಧಿಗಳೆಲ್ಲ ಹೀರೆಕಾಯಿ, ಘೋರ ದುಷ್ಕೃತ್ಯಗಳು ಸೋರೆಕಾಯಿ, ಭಾರತಕಥೆ ಕರ್ಣತುಪ್ಪಿರೆ ಕಾಯಿ, ವಾರಿಜಾಕ್ಷನೆ ಗತಿಯೆಂದಿಪ್ಪೆ ಕಾಯಿ”. ತರಕಾರಿಗಳ ಹೆಸರನ್ನು ಬಳಸಿಕೊಂಡು ಭಕ್ತಿಯ ಮಹಿಮೆಯನ್ನು ಮತ್ತು ಬಾಳಿನ ನಿಜವನ್ನು ಶ್ಲೇಷೆಯಲ್ಲಿ ಹೇಳಿರುವ ಮುಂಡಿಗೆ ಇದು.
ಹಳ್ಳಿಯಲ್ಲಿ ಹುಟ್ಟಿ, ದಂಡನಾಯಕರಾಗಿ ಮುಂದೆ ಹರಿದಾಸರಾಗಿ, ದಾಸಶ್ರೇಷ್ಠರೆನಿಸಿಕೊಂಡು ನಂತರ ಸಂತರೆಂದು ಪ್ರೀತ್ಯಾದರಗಳಿಂದ ಮನ್ನಣೆ ಪಡೆದ ಕನಕದಾಸರು `ಮೋಹನತರಂಗಿಣಿ’, `ನಳಚರಿತ್ರೆ’, `ರಾಮಧಾನ್ಯಚರಿತ್ರೆ’, ಮತ್ತು `ಹರಿಭಕ್ತಿಸಾರ’ ಎಂಬ ನಾಲ್ಕು ಕಾವ್ಯಗಳನ್ನು, 312ಕ್ಕೂ ಹೆಚ್ಚು ಜನಪ್ರಿಯ ಕೀರ್ತನೆಗಳನ್ನು ರಚಿಸಿದ್ದಾರೆ. ಉಗಾಭೋಗಗಳನ್ನು, ಮುಂಡಿಗೆಗಳನ್ನು, ಉದಯರಾಗಗಳನ್ನು ರಚಿಸಿ ಕೇವಲ ಕೀರ್ತನಕಾರರಾಗಿ ಉಳಿಯದೆ ಕವಿಯಾಗಿ ಹೆಸರಾಗಿದ್ದಾರೆ. ಯಾರನ್ನೂ ವರ್ಜ್ಯವೆಂದು ಭಾವಿಸದೆ ವಿಶ್ವವನ್ನು ತಬ್ಬಿಕೊಂಡು ಎಲ್ಲರೊಳಗೊಂದಾಗಿ ಬಾಳಿ ಬದುಕಲು ಹೇಳಿಕೊಟ್ಟು ಪ್ರೀತಿಯಿಂದ ಜ್ಞಾನಮಾರ್ಗ ತೋರುವ ಸಂತರಾಗಿದ್ದಾರೆ. ಬದುಕಿನ ಅರ್ಥದ ಬಗ್ಗೆ ಒಳನೋಟ ನೀಡಿದ ದಾರ್ಶನಿಕರಾಗಿದ್ದಾರೆ.
ಬಂಜಗೆರೆ ಜಯಪ್ರಕಾಶ್ ಅವರು ಸೂಕ್ತವಾಗಿ ಹೇಳಿದಂತೆ ಇವರು `ಕನ್ನಡದ ವಿವೇಕ’. ಅಂಥ ಮಹನೀಯರಿರುವುದು ಈ ನಾಡ ಪುಣ್ಯ.

ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿ ಅರುಹಿಂದ ನೆನೆಯಲಿಲ್ಲ ಮನ ತಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿ
ನೊಂದು ಬೆಂದುಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ
ಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದು
ಇಂದು ಕಾಣೋ ದೇಹದಲಿ ಪಿಂಡಾಂಡ – ಹಾಗೆ ಬ್ರಹ್ಮಾಂಡ
ಹೊಂದಿ ಹರಿಯ ಧ್ಯಾನವನು ಮಾಡಿ ವಿವೇಕದಿ ಮು-
ಕುಂದನಿಂದ ಮುಕುತಿಯ ಬೇಡು ಕಾಣೋ – ನೀ ನೊಡು ಕಾಣೋ.
ಈ ಬಾಳನ್ನು ಒಂದು ಹಣ್ಣು ಎಂದು ಭಾವಿಸುವುದಾದರೆ ಕನಕದಾಸರು ಹೇಗೆ ಬದುಕಬೇಕು ಎಂಬ ಘನತತ್ವವನ್ನು ತುಂಬ ಸರಳವಾಗಿ ಹೇಳಿದ್ದಾರೆ ಅನ್ನಿಸುತ್ತೆ. ಒಂದು – ಹಂಚಿತಿನ್ನು, ಎರಡು – ಸಿಪ್ಪೆಯಲ್ಲಿ ವಿರಮಿಸದೆ ತಿರುಳನ್ನು ನೋಡು. ಕನಕದಾಸರು ಹಚ್ಚಿದ ಅರಿವು ಎಂಬ ದೀಪ ನಮ್ಮ ಬಾಳನ್ನು ಸದಾ ಬೆಳಗಲಿ ಎಂದು ಹಾರೈಸೋಣ. ಕನಕ ದಾಸರಲ್ಲಿನ ಜೀವನ ವಿವೇಕದ ವ್ಯಾಪ್ತಿಯು ಕನ್ನಡಿಗರ ಪ್ರಾಪ್ತಿಯೇ ಸರಿ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
