ಸುಖವಾದ ಊಟವಾದ ಮೇಲೆ ಸುಮಾರು ಎರಡು ರಾತ್ರಿಗಳಿಂದ ನಿದ್ದೆಯಿಲ್ಲದೇ ಬಳಲಿದ್ದ ನನ್ನ ಕಣ್ಣುಗಳನ್ನು ಇನ್ನಿಲ್ಲದಂತೆ ಅಗಲವಾಗಿ ತೆರೆದು ಇರಿಸಿದ್ದು ‘ಕೃಷ್ಣಸಂಧಾನ’ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ. ಸುಮಾರು ಎರಡು ಗಂಟೆಗಳ ಕಾಲ ಆ ಭಾಷೆ, ವಾಗ್ವೈಖರಿ, ಹಾಸ್ಯ, ಅಭಿನಯಗಳು ಅದೆಂತಹ ಬೌದ್ಧಿಕ ಸಾಂತ್ವನವನ್ನು ನೀಡಿದವೆಂದರೆ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಸತತವಾಗಿ ಮೂರು ಗಂಟೆಗಳ ಉಪನ್ಯಾಸವನ್ನು ತಲ್ಲೀನಳಾಗಿ ಕೇಳಿಸಿಕೊಂಡು ನಂತರ ಅದನ್ನು ಅರಗಿಸಿಕೊಳ್ಳಲು ಮುಂದಿನ ಒಂದು ವಾರದ ಮಟ್ಟಿಗೆ ಹೆಣಗುತ್ತಿದ್ದೆನಲ್ಲ, ಇದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇನ್ನೊಂದು ಹತ್ತು ದಿನವಾದರೂ ನಿನ್ನ ತಲೆಗೆ ಬಿಡುವಿರುವುದಿಲ್ಲ, ಬಿಡು ಎಂದು ಕಣ್ಣು ಹೊಡೆಯುತ್ತಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನೇಳನೆಯ ಬರಹ
೨೦೧೯ ರ ಕೊನೆಯ ಕಾಲು ಭಾಗ. ಪ್ರೊ. ಪುರುಷೋತ್ತಮ ಬಿಳಿಮಲೆಯವರು ಫೇಸ್ ಬುಕ್ಕಿನಲ್ಲಿ ಹಾಕಿದ್ದ ‘ಮಮತೆಯ ಕರೆಯೋಲೆ’ ಯಲ್ಲಿದ್ದ ‘ಪುಸ್ತಕ ಬಿಡುಗಡೆ’, ‘ಬಿಳಿಮಲೆ ಮನೆ’, ‘ತಾಳಮದ್ದಳೆ’, ‘ಬೆಳದಿಂಗಳೂಟ’, ‘ಕಾಡಿನಲ್ಲಿ ಸುತ್ತಾಟ’, ‘ಪಟ್ಟಾಂಗ’ ದಂತಹ ಪದಗಳು ಕೋಟಿ ಯೋಜನವಿರಲಿ, ದಾಟಿ ಹೋಗುವ ಉತ್ಸಾಹವನ್ನು ನನ್ನಲ್ಲಿ ಹುಟ್ಟಿಸಿದ್ದವು. ನಾನೂ ಸಹ ಅಲ್ಲಿ ಕಾಣಿಸಿಕೊಳ್ಳಬಹುದು ಎಂದು ಬಿಳಿಮಲೆಯವರಿಗೆ ಮೆಸೇಜ್ ಕಳಿಸಿದಾಗ ಅವರು ಎಂದಿನ ಪ್ರೀತಿಔದಾರ್ಯದೊಂದಿಗೆ ‘ನೀವಿದ್ದರೆ ಅದಕ್ಕೆ ಇನ್ನಷ್ಟು ಕಳೆಗಟ್ಟುತ್ತದೆ’ ಎಂದು ಮಾರುತ್ತರಿಸಿದ್ದರು. ಡಿಸೆಂಬರ್ ತಿಂಗಳಿನ ಮೊದಲ ವಾರದಲ್ಲಿ ಹೋಗುವ ಯೋಚನೆಯಂತೂ ಮನಸ್ಸಿನಲ್ಲಿ ಇತ್ತು. ಈಗ ಒಂದು ತಿಂಗಳಷ್ಟು ಮೊದಲೇ ಹೋಗುವುದು ಹೇಗೆ ಎಂಬ ಲೆಕ್ಕಾಚಾರ ಸುರುವಾಯ್ತು.
ತಲೆಯಲ್ಲಿ ಈ ಗುಂಗಿಹುಳ ಕೊರೆಯಲು ಪ್ರಾರಂಭಿಸಿದಾಗಲೇ, ನಾನು ಸುಮಾರು ಹನ್ನೊಂದು ವರ್ಷಗಳಿಂದ ನೋಡಿಲ್ಲದ ಲಂಡನ್ ವಾಸಿ ಗೆಳತಿಯೊಬ್ಬಳು ನ್ಯೂಜಿಲ್ಯಾಂಡಿನ ಒಟಾಕಿ ವಿಶ್ವವಿದ್ಯಾಲಯದಲ್ಲಿ ನವೆಂಬರ್ ಮೂರನೆಯ ತಿಂಗಳಿನಲ್ಲಿ ನಡೆಯಲಿದ್ದ ಅಂತರಾಷ್ಟ್ರೀಯ ಮನಶಾಸ್ತ್ರೀಯ ಸಮ್ಮೇಳನದಲ್ಲಿ ತನ್ನದೇ ಪ್ರಾಸ್ತಾವಿಕ ಭಾಷಣವಿದೆ, ವೆಲ್ಲಿಂಗ್ಟನ್ನಲ್ಲಿ ಮೊದಲು ಇಳಿಯುವ ಯೋಚನೆಯಿದೆ ಎಂದು ಮೇಲ್ ಕಳಿಸಿದಾಗ ದ್ವಂದ್ವ ಸುರುವಾಗಿತ್ತು. ಲಂಡನ್ನಿನಲ್ಲಿ ಹತ್ತು ದಿನ ಉಳಿದು ಅವಳ ಆತಿಥ್ಯವನ್ನೂ ಪಡೆದುಕೊಂಡಿರುವಾಗ ಉಪ್ಪಿನ ಋಣದ ಹಂಗಿರಬೇಕಲ್ಲಾ? ಎರಡು ರಾತ್ರಿಗಳು ನಿದ್ದೆಯಿಲ್ಲದೇ ಹೊರಳಾಡಿದ ಮೇಲೆ ಸ್ವಾರ್ಥವೇ ಗೆದ್ದಿತ್ತು.
ಇದಕ್ಕೆ ಸ್ವಲ್ಪ ಹಿಂದೆ ನನ್ನ ‘ಬರ್ತೀಯಾ?… ಎಷ್ಟು?: ಭಾರತೀಯ ಸೂಳೆಲೋಕದ ಕಥೆಗಳು’ ಕೃತಿ ಅನುವಾದದ ಪರಕಾಯಪ್ರವೇಶದಂತಹ ಪ್ರಕ್ರಿಯೆಯಲ್ಲಿ ನನ್ನನ್ನು ಹಿಂಡಿ ಹಿಪ್ಪೆ ಮಾಡಿತ್ತು. ಹಲವಾರು ರಾತ್ರಿಗಳ ನಿದ್ದೆಗೇಡಿತನದ ಕಂಗಾಲಲ್ಲಿ ಕುಸಿದಾಗ ದಾರಿಯಿಲ್ಲದೇ ನನ್ನ ಡಾಕ್ಟರ್ ಸೂಸಿ ಹರಿಶ್ಚಂದ್ರನ್ನಳನ್ನು ಕಂಡು ಆ ಎಂದು ಬಾಯಿಬಿಟ್ಟುಕೊಂಡು ನನ್ನನ್ನು ಇಂಚಿಂಚಾಗಿ ನುಂಗುತ್ತಿರುವ ಈ ಖಿನ್ನತೆಯಿಂದ ಪಾರು ಮಾಡು ಎಂದು ಬೇಡಿಕೊಂಡಿದ್ದೆ. ಅತ್ಯಂತ ಕಡಿಮೆ ಪ್ರಮಾಣದ anti-dépression dosage ಕೊಟ್ಟು ಸಮಾಧಾನ ಮಾಡಿ ಕಳುಹಿಸಿದ್ದಳು. ಜಿಗಿಯುವ ಜೀವಚೈತನ್ಯ ಬೇಡ, ಕೊನೇ ಪಕ್ಷ ಮಾಡಬೇಕಾಗಿರುವ ದಿನನಿತ್ಯದ ಕೆಲಸಗಳನ್ನು ನಿಭಾಯಿಸುವ ಸಮತೋಲನಕ್ಕೂ ಒದ್ದಾಡುತ್ತಿದ್ದೆ.
ಸುಮಾರು ಎರಡು ವಾರಗಳಲ್ಲಿ ಮನಸ್ಸು ಒಂದು ಸ್ಥಿಮಿತಕ್ಕೆ ನಿಧಾನವಾಗಿ ಮರಳಹತ್ತಿತ್ತು. ಆದರೆ ಸುಪ್ತಕ್ಕೆ ಜಾರಿದ್ದ ರಣಹದ್ದುಗಳು ಮಾತ್ರ ಯಾವಾಗ ಮತ್ತೆ ಮೇಲೆದ್ದು ನನ್ನ ಹೃದಯ ಮೆದುಳುಗಳನ್ನು ಗೆಬರಿ ಗೋರಿಕೊಳ್ಳುವವೋ ಎಂಬ ಆತಂಕವಂತೂ ಇತ್ತು. Think about some soul therapy ಎಂದು ಸೂಸಿ ಸಲಹೆ ಕೊಟ್ಟಿದ್ದಳೇನೋ ಸರಿಯೇ. ನೋಡೋಣ ಎಂದು ಅತ್ತ ಸರಿಸಿದ್ದವಳಿಗೆ ಬಿಳಿಮಲೆಯ ಕಾರ್ಯಕ್ರಮದ ಕರೆಯೋಲೆ ‘ಇಲ್ಲಿದೆ ನೋಡು, soul therapy ಅವಕಾಶ!’ ಎಂದು ಕಿವಿಯಲ್ಲಿ ಪಿಸುಗುಟ್ಟಿದಂತೆ ಇತ್ತು.
ಫೇಸ್ ಬುಕ್ಕಿನಲ್ಲಿ ಎಷ್ಟೋ ಜನರ ಬರವಣಿಗೆಗಳನ್ನು ಓದುವಾಗ ಇವರಲ್ಲಿ ಕೆಲವರನ್ನಾದರೂ ಒಟ್ಟಿಗೆ ನೋಡುವ ಅವಕಾಶ ಸಿಗಬಹುದೆ ಎಂದು ಕನಸುತ್ತಿದ್ದೆ. ಆಪದ್ಭಾಂಧವ ಪುರುಷೋತ್ತಮರು ತಮ್ಮ ಜನಪ್ರೀತಿ ಮತ್ತು ಜೀವನಪ್ರೀತಿಗೆ ನಿದರ್ಶನವಾಗಿ ಸಮಸ್ತರನ್ನೂ ಬಾಚಿತಬ್ಬಿಕೊಳ್ಳುವಂತಹ ಕರೆಯೋಲೆಯನ್ನು ಫೇಸ್ ಬುಕ್ಕಿನಲ್ಲಿ ಹಾಕಿದ್ದರು.
ನ್ಯೂಜಿಲ್ಯಾಂಡಿನಿಂದ ಮೈಸೂರನ್ನು ತಲುಪಿದ ಮಾರನೆಯ ದಿನವೇ ಬಿಳಿಮಲೆಗೆ ಹೊರಟು ನಿಂತಾಗ ಅಯೋಧ್ಯೆ ತೀರ್ಪು ಇತ್ಯಾದಿ ಸುದ್ದಿಗಳು ಎಲ್ಲೋ ಸಿಕ್ಕಿಹಾಕಿಕೊಂಡರೆ ಎನ್ನುವ ಆತಂಕಕ್ಕೆ ದಾರಿ ಮಾಡಿಕೊಟ್ಟಿದ್ದವು. ನಡುರಾತ್ರಿಯ ನಂತರದ ಬಸ್ಸಿಗೆ ಕಾಯುತ್ತಿರುವಾಗ ಧೋ ಎಂದು ಸುರಿಯುತ್ತಿದ್ದ ಮಳೆ, ಬಸ್ ನಿಲ್ದಾಣದಲ್ಲಿ ಬುಸು ಬುಸು ಎಂದು ಸಿಗರೇಟು ಹೊಗೆಯನ್ನು ಬಿಡುತ್ತಾ ‘ಏನು ಈ ಹೊತ್ತಿನಲ್ಲಿ ಇಲ್ಲಿ?’ ಎಂದು ಪ್ರಶ್ನಿಸುತ್ತಿದ್ದ ಗಂಡು ಕಣ್ಣುಗಳ ಮತ್ತು ಕ್ಯಾರೆ ಎನ್ನದೆ ಧಸ್ಸೆಂದು ಬಿದ್ದುಕೊಂಡು ಆಗಾಗ ಮೈಯನ್ನೆಲ್ಲಾ ಪರಪರ ಕೆರೆದುಕೊಳ್ಳುತ್ತಿದ್ದ ನಾಯಿಗಳ ನಡುವೆ ಇರುಸು ಮುರುಸಿನಿಂದ ನನ್ನ ವಿದ್ಯಾರ್ಥಿ-ಮಗಳು ನವ್ಯಾಳ ಜೊತೆ ನಿಂತಿದ್ದಾಗ ತಿರುಗಿ ಮನೆಗೆ ಹೋಗಿ ಮಳೆಯನ್ನು ಆಲಿಸುತ್ತಾ ಬೆಚ್ಚಗೆ ತಾಚಿ ಮಾಡಿಕೊಂಡರೆ ಹೇಗೆ ಎಂಬ ಸೆಳೆತಕ್ಕೆ ಅರೆಕ್ಷಣ ಪಕ್ಕಾಗಿದ್ದೂ ಹೌದು. ಬೆಳಗಿನ ಜಾವದ ಎರಡು ಗಂಟೆಯ ಹೊತ್ತಿಗೆ ಧಡೂತಿ ಬಸ್ಸು ಬಂದು ನಿಂತಾಗ ಅಂಕೆಶಂಕೆಗಳನ್ನು ಆಚೆಗೊತ್ತಿ ಬಸ್ಸು ಹತ್ತಿ ‘ಏನೇ ಬರಲಿ, ಜೈ!’ ಎಂದಿದ್ದೆವು.

ಮುಂದಿನದೆಲ್ಲಾ ಸಾರಾಂಶದಲ್ಲಿ ಗಂಧರ್ವ ಕ್ಷಣಗಳು ಎಂದರೆ ತಪ್ಪಲ್ಲ. ರೇಣುಕಾ ನಿಡುಗುಂದಿ, ಸತ್ಯಾ, ಹೇಮಾ ವೆಂಕಟ್, ಶಿವಿ, ವೀಣಾ, ಪುನೀತ್, ಅಣ್ಣಿ, ಪರಮೇಶ್ವರ ಬಿಳಿಮಲೆ, ಶೋಭನಾ ಬಿಳಿಮಲೆ, ಅನನ್ಯ ಬಿಳಿಮಲೆ, ಹರ್ಷ ಕುಗ್ವೆ, ಸುರೇಶ ಕಂಜರ್ಪಣೆ, ದಿನೇಶ್ ಅಮೀನ್ ಮಟ್ಟು, ವಿವೇಕ ರೈ, ಗುಲಾಬಿ ಬಿಳಿಮಲೆ, …. ಅಯ್ಯಮ್ಮಾ! ಸುತ್ತ ಕಾಡು. ನಡುವೆ ಮದುವೆ ಮನೆಯ ಸಂಭ್ರಮವನ್ನು ನೆನಪಿಸುತ್ತಿದ್ದ ಚಪ್ಪರ. ಜೀಪಿಂದ ಇಳಿದು ಸೀದಾ ಹೋಗಿ ಆರು ಬಟ್ಟಲು ಇಡ್ಲಿ ಜೊತೆಗೆ ಎರಡು ವಡೆಯನ್ನೂ ಚಟ್ನಿ ಸಾಂಬಾರಿನಲ್ಲಿ ತಿಂದು ತೇಗಿ ನಂತರ ಅತ್ತಿತ್ತ ಕಣ್ಣು ಹಾಯಿಸಿದ್ದೆ.
‘ಇದು ಅಭಿನಂದನಾ ಸಮಾರಂಭವಲ್ಲ, ಬರೀ ಪುಸ್ತಕ ಬಿಡುಗಡೆ ಕಾರ್ಯಕ್ರಮ’ ಎಂದು ಆಗಾಗ್ಗೆ ಹೇಳುತ್ತಾ ಪುರುಷೋತ್ತಮ ಬಿಳಿಮಲೆಯವರು ಎಲ್ಲರನ್ನೂ ಒಂದು ರೀತಿಯ ಬೌದ್ಧಿಕ ಎಚ್ಚರದಲ್ಲಿ ಇಡಲು ಪ್ರಯತ್ನಿಸುತ್ತಿದ್ದರು. (‘ಬಿಳಿಮಲೆಯವರ ಸಾಹಿತ್ಯಶ್ರೀ ನೆಪದಲ್ಲಿ’ ಎಂಬ ಸಣ್ಣ ಲೇಖನವನ್ನು ಬರೆದಿದ್ದಾಗ ಎಲ್ಲರಿಗೆ ಕಾಣುವಂತೆ ಫೇಸ್ ಬುಕ್ಕಿನಲ್ಲಿ ಲೈಕ್ ಒತ್ತಿ, ನಂತರ ಖಾಸಗಿಯಾಗಿ ‘ಶೃದ್ಧಾಂಜಲಿ ಚೆನ್ನಾಗಿತ್ತು’ ಎಂದು ಕಿಚಾಯಿಸಿ ಮೇಲ್ ಕಳಿಸಿದ್ದು ನೆನಪಿಗೆ ಬಂತು) ಅವರ ಇಡೀ ಕುಟುಂಬ ಅದರಲ್ಲಿ ಪ್ರೀತಿಉತ್ಸಾಹಗಳಿಂದ ಪಾಲ್ಗೊಂಡಿದ್ದ ರೀತಿ ಮಾತ್ರ ನನ್ನಲ್ಲಿ ಕೆಲಕ್ಷಣಗಳ ಮಟ್ಟಿಗಾದರೂ ಹೊಟ್ಟೆಕಿಚ್ಚು ಹತ್ತಿಸಿದ್ದು ಸುಳ್ಳಲ್ಲ.
ನಗರದ ಬದುಕಿಗೆ ಒಗ್ಗಿಕೊಂಡಿದ್ದವರಿಗೆ ಆ ಮನೆ ಕಾಡಿನ ನಡುವಿನ ಕಣಿವೆಯಲ್ಲಿರುವಂತೆ ಅನ್ನಿಸುತ್ತದೆ. ಆದರೂ ಈ ಮಟ್ಟಿಗಿನ ಕಾರ್ಯಕ್ರಮವನ್ನು ಅಲ್ಲಿ ಏರ್ಪಡಿಸುವುದು logistical challenge ಎನ್ನುವುದು ನಿಜವೇ. ಮಧ್ಯಾಹ್ನದ ಊಟವಂತೂ ಲೊಟ್ಟೆ ಹೊಡೆಯದೇ ಮಾಡುವುದು ಸಾಧ್ಯವೇ ಇರಲಿಲ್ಲ. ಸುಖವಾದ ಊಟವಾದ ಮೇಲೆ ಸುಮಾರು ಎರಡು ರಾತ್ರಿಗಳಿಂದ ನಿದ್ದೆಯಿಲ್ಲದೇ ಬಳಲಿದ್ದ ನನ್ನ ಕಣ್ಣುಗಳನ್ನು ಇನ್ನಿಲ್ಲದಂತೆ ಅಗಲವಾಗಿ ತೆರೆದು ಇರಿಸಿದ್ದು ‘ಕೃಷ್ಣಸಂಧಾನ’ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ. ಸುಮಾರು ಎರಡು ಗಂಟೆಗಳ ಕಾಲ ಆ ಭಾಷೆ, ವಾಗ್ವೈಖರಿ, ಹಾಸ್ಯ, ಅಭಿನಯಗಳು ಅದೆಂತಹ ಬೌದ್ಧಿಕ ಸಾಂತ್ವನವನ್ನು ನೀಡಿದವೆಂದರೆ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಸತತವಾಗಿ ಮೂರು ಗಂಟೆಗಳ ಉಪನ್ಯಾಸವನ್ನು ತಲ್ಲೀನಳಾಗಿ ಕೇಳಿಸಿಕೊಂಡು ನಂತರ ಅದನ್ನು ಅರಗಿಸಿಕೊಳ್ಳಲು ಮುಂದಿನ ಒಂದು ವಾರದ ಮಟ್ಟಿಗೆ ಹೆಣಗುತ್ತಿದ್ದೆನಲ್ಲ, ಇದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇನ್ನೊಂದು ಹತ್ತು ದಿನವಾದರೂ ನಿನ್ನ ತಲೆಗೆ ಬಿಡುವಿರುವುದಿಲ್ಲ, ಬಿಡು ಎಂದು ಕಣ್ಣು ಹೊಡೆಯುತ್ತಿತ್ತು. ಪರಸ್ಪರ ಸಂವಾದವೇ ಸಂಕಷ್ಟಕ್ಕೆ ಸಿಲುಕಿ ಸ್ತಬ್ಧವಾಗಿರುವ ಈ ದಿನಗಳಲ್ಲಿ ಕೃಷ್ಣ-ವಿಧುರರ ಮತ್ತು ಕೃಷ್ಣ-ದುರ್ಯೋಧನರ ವಾಗ್ವಾದದ ರೀತಿ, ವಾದವೂ ಒಂದು ಶಕ್ತಿಯುತ ಸಂವಾದವಾಗಬಲ್ಲದು ಎಂದು ಮಂಡಿಸಿದ ರೀತಿ ನನ್ನ ಮೆದುಳನ್ನೇ ಅಪ್ಪಾಲೆ-ತಿಪ್ಪಾಲೆಗೆ ಒಡ್ಡಿ ಅಂತಹ ವಾದ-ಸಂವಾದವೂ ಒಂದು ಧ್ಯಾನದ ಸ್ಥಿತಿಯೇ ಅಂತನ್ನಿಸುವಂತೆ ಮಾಡಿತ್ತು. (ನಮ್ಮಲ್ಲಿ ವಾದ-ವಿವಾದ ಎನ್ನುವ ಪದ ಹೆಚ್ಚು ಬಳಕೆಯಲ್ಲಿದ್ದು ವಾದ-ಸಂವಾದ ಎನ್ನುವ ಸಾಧ್ಯತೆಯನ್ನೇ ಮಂಕುಗೊಳಿಸಿದೆ ಅಂತಲೂ ಅನ್ನಿಸಿತ್ತು.)
ಇರಲಿ, ರಾತ್ರಿ ಎಲ್ಲರೂ ಬೆಳದಿಂಗಳಲ್ಲಿ ಕಾಡು ಸುತ್ತಲು ಹೋದರಂತೆ. ನಾನು ಮಾತ್ರ ರಾತ್ರಿ ಊಟದ ಜೊತೆಗೆ ಒಂದು ಬಿಯರ್ ಕುಡಿದ ಮೇಲೆ (‘ಬಿಳಿಮಲೆಯಲ್ಲಿ ಕಳ್ಳು ಸಿಗುತ್ತಾ ಸಾರ್?’ ಅಂತ ನಾನು ಮುಂಚೆಯೇ ಕೇಳಿದ್ದೆ. fresh and warm ಎಂದು ಬಿಳಿಮಲೆಯವರು ಭರವಸೆ ಇತ್ತಿದ್ದರು. ಅವರು ಹತ್ತು ಮುಖಗಳನ್ನು, ಹತ್ತು ಜೊತೆ ಕೈಕಾಲುಗಳನ್ನು ಹೊತ್ತು ಅರೆಗಳಿಗೆಯೂ ಪುರುಸೊತ್ತಿಲ್ಲದೇ ಕಾರ್ಯಕ್ರಮವನ್ನು ನಿಭಾಯಿಸುತ್ತಾ ನಂತರ ಎಲ್ಲರನ್ನೂ ಮಧ್ಯರಾತ್ರಿಯವರೆಗೆ ಕಾಡಿಗೂ ಕರೆದುಕೊಂಡು ಹೋಗುವುದನ್ನು ನೋಡಿದಾಗ ನನ್ನ ಸಿಲ್ಲಿ ಬೇಡಿಕೆಯನ್ನು ಎತ್ತುವ ನೈತಿಕ ಧೈರ್ಯ ಬಾರದೇ ಹೋಯಿತು. ಮಾರನೇ ದಿನ ಬೆಳಿಗ್ಗೆ ನಮ್ಮನ್ನು ಮತ್ತೊಮ್ಮೆ ವಾಕಿಂಗ್ ಕರೆದುಕೊಂಡು ಹೋಗುವಾಗ ‘ಛೆ, ಹೌದಲ್ಲ!’ ಎಂದರು. ‘ಪರವಾಗಿಲ್ಲ ಸರ್, ಇನ್ನೊಮ್ಮೆ ಬಂದಾಗ’ ಎಂದು ಹೇಳದಿದ್ದರೆ ಇಳಿಸುವ ಉದ್ದೇಶದಲ್ಲಿ ತೋಳೇರಿಸಿಕೊಂಡು ಹೊರಟೇ ಬಿಡುತ್ತಿದ್ದರು ಅಂತನ್ನಿಸುತ್ತೆ) ಜೀಪು ಹತ್ತಿ ಪಂಜದಲ್ಲಿ ನಮ್ಮನ್ನು ಇಳಿಸಿದ್ದ ಹೋಟೆಲ್ಲಿಗೆ ಹೋಗಿ ಎಷ್ಟೋ ದಿನಗಳ ನಂತರದಲ್ಲಿ ಆವರಿಸಿಕೊಂಡಿದ್ದ ಗಾಢವಾದ ಸಮಾಧಾನದಲ್ಲಿ ಆಳವಾದ ನಿದ್ದೆಗೆ ಜಾರಿದ್ದೆ. ಸೂಸಿ ಹೇಳಿದ್ದ soul therapy ಬಹುಶಃ ಇದೇ ಆಗಿತ್ತೋ ಏನೋ.
ಆದರೂ ಅದು ಪೂರ್ಣವಾಗಿದ್ದು ನಾನು ಸತ್ಯಾ ಮತ್ತು ರೇಣುಕಾ ಮುಂದಿನ ಎರಡು ದಿನ ಮಂಗಳೂರಿನಲ್ಲಿ ಮಾಡಿದ ಮಸ್ತಿಯಲ್ಲಿ ಅಂತಲೂ ಸೇರಿಸಬೇಕು ಅಂತನ್ನಿಸುತ್ತೆ. ನಾವಿಳಿದುಕೊಂಡಿದ್ದು ಸತ್ಯಾರ ಕಿರಿಯ ಗೆಳತಿ ರಾಜ್ಯವರ್ಧಿನಿ ಅವರ ಮನೆಯಲ್ಲಿ. ಬೇಕಲ್ ಕೋಟೆ, ಮನೋರಮಾ ಭಟ್, ಚಂದ್ರಕಲಾ ನಂದಾವರ, ಪದ್ಮ ಶೆಣೈ ಅವರ ಭೇಟಿ, ಸಿಕ್ಕ ಶಾಲುಗಳು, ಬೀನಿ ಟೊಪ್ಪಿ, ಸಂಗೀತ, ಗಮಕ ವಾಚನ, ಗಿಳಿವಿಂಡು, ಸಮುದ್ರ ತೀರ, ಒಂದೆ ಎರಡೆ? ಸತ್ಯಾ ಒಬ್ಬ ಅದ್ಭುತ ಸಂಘಟನಕಾರ್ತಿ ಎಂಬುದರ ಸುಳುವು ಸಿಕ್ಕಿದ್ದು ಅಲ್ಲೇ.

ಎರಡು ದಿನ ನಾವು ಗೊತ್ತು ಮಾಡಿಕೊಂಡಿದ್ದ ಡ್ರೈವರೂಗಳು ಸಹ ಚರ್ಚೆಯ ಜೊತೆಜೊತೆಗೇ ಸಾಗುತ್ತಿದ್ದ ನಮ್ಮ ಖೊಳ್ಳನೆಯ ನಗು ಮತ್ತು ಹರಟೆಯಂತಹ ಉದ್ದೇಶರಹಿತ ಸಂಭ್ರಮಕ್ಕೆ ಮೀಸೆಯ ಅಂಚಿನಲ್ಲೇ ನಗುತ್ತಿದ್ದರು ಎಂಬ ಗುಮಾನಿ ನನಗಿದೆ. ಸತ್ಯಾ ಕಾರಿನಲ್ಲಿ ಕೂತ ತಕ್ಷಣವೇ ತಮ್ಮ ‘connect with everyone’ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಪ್ರಾರಂಭಿಸುತ್ತಿದ್ದರು.
‘ನಿಮ್ಮ ಹೆಸರೇನಪ್ಪಾ?’
‘ವೀರಭದ್ರ ಅಂತ ಮೇಡಂ.’
ಸಾಮಾನ್ಯವಾಗಿ ಅಂತ ಹೆಸರು ನಗು ಮೂಡಿಸುವುದನ್ನು ನಾನು ಗಮನಿಸಿದ್ದೇನೆ. ನಮ್ಮೊಂದಿಗೆ ಇದ್ದ ಹದಿಮೂರು ವರ್ಷದ ಅತ್ಯಂತ ಬುದ್ಧಿವಂತೆ ಐಸಿರಿ (ರಾಜ್ಯವರ್ಧಿನಿ ಅವರ ಮಗಳು) ಎಲ್ಲಿ ಮುಗ್ಧವಾಗಿ ನಕ್ಕುಬಿಡುತ್ತಾಳೋ ಅಂತನ್ನಿಸಿ ನಾನು ತಕ್ಷಣ ನೆನಪಿಗೆ ಬಂದ ಸತ್ಯವನ್ನೇ ಹೇಳಿ ಆ ಹೆಸರಿಗೆ ಘನತೆಯನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತಾ ‘ವೀರಭದ್ರ ನಮ್ಮ ಮನೆದೇವರು,’ ಎಂದೆ.
‘ಅಯ್ಯೋ ಹೌದಾ? ನಮ್ಮ ಅಪ್ಪನ ಕಡೆಯ ಮನೆದೇವರೂ ವೀರಭದ್ರನೇ!’ — ಸತ್ಯಾ ಉವಾಚ.
‘ಅಯ್ಯಯ್ಯೋ.. ನಮ್ಮ ಅಪ್ಪನ ಕಡೆಯ ಮನೆದೇವರೂ ವೀರಭದ್ರನೇ!!!’ — ರೇಣುಕಾ ಉದ್ಗರಿಸಿದರು.
ಖೊಳ್ ಎಂದು ಹರಿದ ನಗು, ಸಂಭ್ರಮ ಅಡಗಲು ಸ್ವಲ್ಪ ಹೊತ್ತೇ ಹಿಡಿದು ಮೂವರು ವೀರಭದ್ರಿಯರ ನಡುವೆ ಡ್ರೈವರ್ ವೀರಭದ್ರ ಸ್ವಲ್ಪ ಮಂಕಾದ ಅಂತನ್ನಿಸಿತು.
ಸ್ವಲ್ಪ ಹೆಚ್ಚಾಗಿಯೇ ನಕ್ಕದ್ದಕ್ಕೋ ಏನೋ, ನಾಶ್ತಾ ಮಾಡಲು ಇಳಿಯುವ ಹೊತ್ತಿಗೆ ಹಪಹಪವೆನ್ನುವಷ್ಟು ಹಸಿವಾಗಿತ್ತು. ಮಹಾ ಸಂಘಟನಕಾರ್ತಿ ಸತ್ಯಾ ಮುಂಚೆಯೇ ಫೋನ್ ಮಾಡಿ, ‘ಕೊಟ್ಟೆ ಕಡುಬುಂಟಾ? ಪತ್ರೊಡೆ ಉಂಟಾ? ನೀರುದೋಸೆ ಉಂಟಾ? ಗೋಳಿಬಜೆ ಉಂಟಾ? ಶ್ಯಾವಿಗೆ ಉಂಟಾ? ..ʼ ಇತ್ಯಾದಿ ಇತ್ಯಾದಿ ಕೇಳಿ ಖಚಿತಪಡಿಸಿಕೊಂಡಿದ್ದರು. ಹೋಗಿ ಕೂತ ತಕ್ಷಣ ‘ಮಂಗಳೂರು ಐಟಮ್ಮು ಏನೇನಿದೆಯೋ, ಎಲ್ಲವನ್ನೂ ಒಂದೊಂದು ತಗೊಂಡು ಬನ್ನಿ’ ಅಂತ ಅಪ್ಪಣೆಯಾಯ್ತು. ಆ ಮುತ್ತು ಎಂಬ ಹೆಸರಿನ ಹುಡುಗ ಹೊಸಬನೋ ಏನೋ, ಸರಿಯಾಗಿ ಕೇಳಿಸಿಕೊಳ್ಳುತ್ತಲೂ ಇರಲಿಲ್ಲ, ತರುತ್ತಲೂ ಇರಲಿಲ್ಲ. ಮಧ್ಯದಲ್ಲಿ ಒಬ್ಬರು ವಯಸ್ಸಾದವರು ಬಂದು ‘ಅಧಿಕಾರ ಹಸ್ತಾಂತರ’ ನಡೆಯಿತು. ಕೊನೆಯ ಮೇಜಿನಲ್ಲಿ ಕೂತದ್ದರಿಂದ ಈ ಸಮುದಾಯ ಭೋಜನ ಬೇರೆಯವರಿಗೆ ಕಾಣಿಸಲಿಲ್ಲ ಅಂತನ್ನಿಸುತ್ತೆ.
‘ಮತ್ತೆ ಏನು? ಬಿಲ್ಲು ಕೊಡುವುದಾ?’ ಎಂದು ಕೇಳಿದ ಎಪ್ಪತ್ತು ವರ್ಷದ ವಯಸ್ಸಿನ ಗಂಡಸರಿಗೆ ನಮ್ಮ ವೀರಭದ್ರಿ ನಂಬರ್ ಒನ್ (ಸತ್ಯಾ) ‘ಈಗ ಏನೇನು ಕೊಟ್ಟೀದೀರೋ, ಅದೆಲ್ಲವನ್ನೂ ಇನ್ನೊಮ್ಮೆ ಕೊಡಿ, ಆಮೇಲೆ ನೋಡೋಣ,’ ಅಂತ ತಣ್ಣಗೆ ಹೇಳಿದಾಗ ಆ ಗಂಡಸರ ಮುಖದಲ್ಲಿ ವಿಸ್ಮಯವಿತ್ತೋ, ಮೆಚ್ಚುಗೆಯಿತ್ತೋ ಸರಿಯಾಗಿ ಕಾಣಿಸಲಿಲ್ಲ. ಆದರೆ ಮುತ್ತುವಿಗೆ ಹೋಲಿಸಿದರೆ ಈ ಮನುಷ್ಯ ತನ್ನ ಕೆಲಸದಲ್ಲಿ ಮಹಾ ಚಾಣಾಕ್ಷನಂತೆ ಕಂಡರು. ಕಾಫಿಯೂ ಸರಬರಾಜಾಗಿ ಕೊನೆಗೆ ಒಂದು ನೀರಿನ ಬಾಟಲ್ ಕೊಡಿ ಎಂದು ಹೇಳಲಾಯ್ತು. ಅವರು ತಿರುಗಿ ಹೋಗುವಾಗ ‘ಎರಡು ಕೊಡಿ’ ಎಂದು ತಿದ್ದಲಾಯ್ತು. ಅವರಿಗೆ ಕೇಳಿಸಿತಾ ಇಲ್ಲವಾ ಎಂದಾಗ ಇಬ್ಬರು ಹೌದು ಎಂದರೆ ಮೂವರು ಇಲ್ಲ ಎಂದರು. ಆ ಮನುಷ್ಯರು ಲಘುವಾಗಿ ತಲೆಯಾಡಿಸಿದ್ದು ನನಗೆ ಕಾಣಿಸಿತ್ತು. ಆದರೂ ಕಾದು ನೋಡುವ, ಎರಡು ತಂದರೆ ಕಿವಿ ಸರಿಯಾಗಿ ಕೇಳಿಸುತ್ತದೆ ಅಂತ, ಇಲ್ಲದಿದ್ದರೆ ಇಲ್ಲ ಎಂದು ಮಾತಾಡಿಕೊಳ್ಳುತ್ತಿದ್ದಾಗ ಆ ಮನುಷ್ಯ ಎರಡನ್ನು ಕೈಯಲ್ಲಿ ಆಡಿಸುತ್ತಾ ತಂದದ್ದು ಕಾಣಿಸಿ ಮತ್ತೊಮ್ಮೆ ನಗು ಉಕ್ಕಿ ಹರಿಯಿತು. ‘ಯಂತ ನಗ್ತಾ ಇದೀರಾ?’ ಎಂದು ಕೇಳಿದ ಅವರಿಗೆ ‘ಈ ಪುಟ್ಟ ಹುಡುಗಿ (ಐಸಿರಿ) ನಿಮ್ಮ ಕೇಳಿಸಿಕೊಳ್ಳುವ ಶಕ್ತಿಯನ್ನ ಪರೀಕ್ಷೆ ಮಾಡ್ತಾ ಇದ್ದಳು,’ ಎಂದು ಹೇಳಿದಾಗ, ಅವರ ಮುಖ ಸ್ವಲ್ಪವೇ ಸ್ವಲ್ಪ ಬಿರುಸಾಗಿ, ‘ಮಂಡೆ ಸಮೇತ ನನಗೆ ಎಲ್ಲ ಸರಿ ಇದೆ ಗೊತ್ತುಂಟಾ?’ ಎಂದರು. ಅದರಲ್ಲಿ ಅಡಗಿರಬಹುದಾದ ಆಹ್ವಾನದ ಸುಳಿವು ಸಿಕ್ಕಿ ಅಯ್ಯೋ ಪುರುಷಾಹಂಕಾರವೇ ಅಂತನ್ನಿಸಿ ಇನ್ನಷ್ಟು ಖೊಳ್ಳನೆ ನಕ್ಕಿದ್ದೂ ಆಯ್ತು.

ಇರಲಿ, ಮಂಗಳೂರಿನ ಪಬ್ಬಾಸ್ ಐಸ್ ಕ್ರೀಮಿನ ಸಮಾರಾಧನೆಯೂ ನಡೆದು ಸರಿ ರಾತ್ರಿಯ ಹೊತ್ತಿಗೆ ಮೈಸೂರು ಬಸ್ಸು ಹತ್ತಿದಾಗ ವ್ಯಕ್ತಿನಾಮ ಮತ್ತು ಸ್ಥಳನಾಮ ಎರಡೂ ಆದ ಬಿಳಿಮಲೆಗೆ ಮನಸ್ಸು ಮೂಕವಾಗಿ ಕೃತಜ್ಞತೆಯನ್ನು ಸಲ್ಲಿಸಿತ್ತು.

