ಮೇಲೆ ಹತ್ತುವ ಪ್ರಯತ್ನದಲ್ಲಿಯೇ ಅದೇನನ್ನು ಹತ್ತಿ ಮೀರಿದರೋ, ಅಂತೂ ಎಲ್ಲ ಕೈದಿಗಳೂ ಕೆಳಗಿಳಿದು ಬಂದರು! ಕೆಳಗಿದ್ದ ಪೊಲೀಸರು ಅಷ್ಟೊತ್ತಿಗೆ ಕಾಫಿ, ನೀರು, ಜ್ಯೂಸ್, ಸಿಗರೇಟು ಇತ್ಯಾದಿಗಳಿಗೆ ಅಲ್ಲಿಲ್ಲಿ ಚೆದುರಿದ್ದರು. ಕೊನೆಗೆ ಕೈದಿಗಳೇ ಹೋಗಿ ಅಲ್ಲಿಲ್ಲಿ ಹುಡುಕಿ ಎಲ್ಲ ಪೊಲೀಸರನ್ನೂ ಕರೆದುತಂದರಂತೆ! ತಪ್ಪಿಸಿಕೊಳ್ಳುವುದಲ್ಲ, ನಮಗೆ ಬಿಡುಗಡೆ ಆದೇಶ ಬಂದಿದ್ದರೂ ಬೇಸರವಾಗುತ್ತಿತ್ತು. ಇನ್ನೆರಡು ದಿನದಲ್ಲಿ ನಮ್ಮ ನಾಟಕದ ಪ್ರದರ್ಶನವಿತ್ತು, ಎಂದು ಆ ಕೈದಿ ಕಥೆಯನ್ನು ಮುಗಿಸಿದರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತನೆ ಬರಹ
ಮೊನ್ನೆ ಭಾನುವಾರ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಬೇರೇನೂ ಕಾರಣಕ್ಕೆ ಅಲ್ಲ, ಅಲ್ಲಿ ನನ್ನ ಸ್ನೇಹಿತರ ‘ಕೈದಿಗಳ ಕಥನ’ ಬಿಡುಗಡೆಯಾಗಬೇಕಿದ್ದ ಪುಸ್ತಕಗಳಲ್ಲಿ ಒಂದಾಗಿತ್ತು.
ಕಳೆದ ಇಪ್ಪತ್ತೈದು ವರ್ಷಗಳಿಂದ ಹಲವಾರು ಜೈಲುಗಳಲ್ಲಿ ರಂಗಶಿಬಿರಗಳನ್ನು ನಡೆಸಿ ಕಾರ್ನಾಡರ ‘ತಲೆದಂಡ’ ವೂ ಸೇರಿದಂತೆ ಸುಮಾರು ಇಪ್ಪತ್ಮೂರು ನಾಟಕಗಳನ್ನು ಆಡಿಸಿದ್ದ, ಮತ್ತು ಅವು ಮುನ್ನೂರು ಪ್ರದರ್ಶನಗಳನ್ನು ಕಾಣುವಂತೆ ಮಾಡಿದ್ದ ಹುಲಗಪ್ಪ ಕಟ್ಟೀಮನಿ ಅಲ್ಲಿಗೆ ಬರುವುದರಲ್ಲಿದ್ದರು. ಅವರಿಗೆ ನನ್ನ ಪರಿಚಯವಿಲ್ಲ. ಆದರೆ ಆತ ನಾನು ತುಂಬ ಗೌರವಿಸುವ ವ್ಯಕ್ತಿಗಳಲ್ಲಿ ಒಬ್ಬರು.
ಅಷ್ಟೇ ಅಲ್ಲ, ನನಗೆ ಇಷ್ಟವಾಗುವ ವಿದ್ವಾಂಸ ಓ ಎಲ್ ನಾಗಭೂಷಣಸ್ವಾಮಿ ಅದರ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರಿಗೆ ನನ್ನ ರೂಮಿಯನ್ನು ಕೊಡಬೇಕಿತ್ತು ಸಹ.
ಜೊತೆಗೆ ಜೀವಾವಧಿ ಶಿಕ್ಷೆ ಅನುಭವಿಸಿ ರಂಗಕರ್ಮಿಯಾಗಿ ಬದಲಾಯಿಸಿ ಹೊರಗೆ ಬಂದಿದ್ದ ಕೈದಿಗಳೂ ಸಹ ಮಾತಾಡುವರಿದ್ದರು. ಕಟ್ಟೀಮನಿ ಒಂದು ಕ್ರಾಂತಿಯನ್ನೇ ನಡೆಸಿದ್ದರು ಅಂತನ್ನಿಸಿತ್ತು. ಬಿವಿ ಕಾರಂತರ ಗರಡಿಯಲ್ಲಿ ಪಳಗಿದ ವ್ಯಕ್ತಿ. ಎಷ್ಟು ಸಮರ್ಥವಾಗಿ ಗುರುಕಾಣಿಕೆಯನ್ನು ಸಲ್ಲಿಸಿದ್ದರು ಅಂತನ್ನಿಸಿತ್ತು. ಇಡೀ ದೇಶದಲ್ಲಿ ಈ ತರಹದ ಪ್ರಯೋಗವನ್ನು ನಡೆಸಿದ ಮೊದಲ ನಿದರ್ಶನ ಇದು, ನನಗೆ ತಿಳಿದ ಮಟ್ಟಿಗೆ.
ಒಂದೆರಡು ಪ್ರಸಂಗಗಳು ಮನಸ್ಸಿನಲ್ಲಿ ಉಳಿದುಕೊಂಡುಬಿಟ್ಟವು. ಕಾಸರಗೋಡಿನಲ್ಲಿ ಒಮ್ಮೆ ರಂಗತಾಲೀಮು ನಡೆಯುತ್ತಿದ್ದಾಗ ಪವರ್ ಕಟ್ ಆಗಿ ಸುಮಾರು ಹೊತ್ತು ಬರಲಿಲ್ಲವಂತೆ. ಮಾರನೆಯ ರಾತ್ರಿಯೇ ಒಂದು ಪ್ರದರ್ಶನವಿತ್ತು. ಪತ್ರಕರ್ತ ಗಣೇಶ ಅಮೀನಗಡರು ಒಬ್ಬ ಕೈದಿಯೊಂದಿಗೆ ಹಾಸ್ಯವಾಗಿ, ‘ನೋಡಿ ತಪ್ಪಿಸಿಕೊಳ್ಳಲು ಒಂದು ಭಾರೀ ಛಾನ್ಸ್!’ ಎಂದರಂತೆ. ಅದಕ್ಕೆ ಆ ಕೈದಿ, ‘ಅಯ್ಯಯ್ಯೋ, ನಾನು ತಪ್ಪಿಸಿಕೊಂಡರೆ ನನ್ನ ಪಾತ್ರದ ಗತಿ?’ ಎಂದಿದ್ದರಂತೆ.
ಕಲೆಗೆ ಇರುವ ಶಕ್ತಿ!
ಇನ್ನೊಮ್ಮೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಕೈದಿಗಳನ್ನು ಕರೆದುಕೊಂಡು ಹೋಗಲು ಅನುಮತಿ ಸಿಕ್ಕಿದ್ದು ಕೆಲವು ಕೈದಿ-ರಂಗಕರ್ಮಿಗಳನ್ನು ಕಟ್ಟೀಮನಿ ತಮ್ಮ ಸುಪರ್ದಿಯಲ್ಲಿ ಕರೆದೊಯ್ದಿದ್ದರಂತೆ. ಅಲ್ಲಿ ಹೋದ ಮೇಲೆ ಕೈದಿಗಳು ಬಾಹುಬಲಿಯ ತಲೆಯನ್ನು ತಲುಪಿ ಅಲ್ಲಿಂದ ನೋಡಬೇಕು ಎಂದು ಬೇಡಿಕೊಂಡರು. ಕಟ್ಟೀಮನಿಯವರಿಗೆ ಪೀಕಲಾಟ! ಡಿಐಜಿಗೆ ಫೋನಾಯಿಸಿ ಕೇಳಿದರೆ ‘ನಿಮ್ಮ ಜವಾಬ್ದಾರಿ’ ಎಂದರಂತೆ.
ಕೈದಿಗಳಿಗೆ ಕೋರ್ಟಿಗೋ ಇನ್ನೊಂದು ಜೈಲಿಗೋ ಕರೆದೊಯ್ಯುವಾಗ ಬೇಡಿ ಹಾಕಿರುತ್ತಾರೆ. ಆದರೂ ಸಿಕ್ಕ ಸಿಕ್ಕ ದೇವಸ್ಥಾನಗಳಲ್ಲಿ ಇಳಿದು ನಮಿಸುವ ಹಂಬಲ ಅವರಿಗೆ. ಪೊಲೀಸರಿಗೆ ಇನ್ನಿಲ್ಲದಂತೆ ಗೋಗರೆಯುತ್ತಾರೆ. ಪೊಲೀಸರು ಅವರ ಜೊತೆ ತಾವೂ ಇಳಿದು ನಮಸ್ಕರಿಸಿ ಅಡ್ಡಬಿದ್ದು ಅವರು ಮಾಡಿದ್ದೆಲ್ಲವನ್ನೂ ತಾವೂ ಮಾಡುವ ಕರುಣೆ ತೋರಿಸುತ್ತಾರೆ.
ಬದುಕಲ್ಲಿರುವ ತಳಗಟ್ಟಿನ ಸ್ವಾತಂತ್ರ್ಯದ ಸುಖದಿಂದ ವಂಚಿತರಾದವರಿಗೆ ಮಾತ್ರ ನಿಜವಾದ ಭಕ್ತಿಯ ಅರ್ಥ ತಿಳಿದಿರುತ್ತದೆ ಅಂತನ್ನಿಸುತ್ತದೆ.
ಈಗ ಕೈದಿಗಳ ಜೊತೆ ಬಾಹುಬಲಿಗೆ ಹಾಕಿದ್ದ ಅಷ್ಟು ಎತ್ತರದ ಅಟ್ಟವನ್ನು ಹತ್ತಲು ಏರಲು ಎಲ್ಲ ಪೊಲೀಸರೂ ತಯಾರಾಗಿರಲಿಲ್ಲ. ಕೈದಿಗಳು ಹತ್ತು ಮಂದಿ ಇದ್ದರೆ ಕಾವಲಿಗೆ ಇಪ್ಪತ್ತು ಮಂದಿ ಪೊಲೀಸರನ್ನು ನಿಯಮಿಸಲಾಗಿರುತ್ತದೆ. ಬಂದಿದ್ದ ಎಲ್ಲ ಕೈದಿಗಳೂ ಹತ್ತಲು ಹೋದರೆ ಕೆಳಗೆ ಕೆಲವು ಪೊಲೀಸರು ಉಳಿದುಕೊಂಡಿದ್ದರು.
ಕಟ್ಟೀಮನಿಯವರಿಗೆ ಎದೆಯಲ್ಲಿ ದವಡವ. ಹತ್ತುತ್ತಿದ್ದ ಸಾಮಾನ್ಯ ಮಂದಿಯ ನಡುವೆ ಕೈದಿಗಳನ್ನು ಗುರುತಿಸಲು ಇದ್ದಿದ್ದು ಕೇವಲ ಅವರ ಬಿಳಿಯ ವೇಷ ಮತ್ತು ಬಿಳಿಯ ಟೊಪ್ಪಿ. ಏನು ಬೇಕಾದರೂ ನಡೆಯಬಹುದು. ದೊಪ್ಪನೆ ಕೆಳಗೆ ಬಿದ್ದು ಆತ್ಮಹತ್ಯೆಗೆ ಸಹ ಪ್ರಯತ್ನಿಸಬಹುದು. ಶೌಚಾಲಯಕ್ಕೆ ಹೋದಾಗ ಸಹ ಪೂರ್ತಿ ಮರೆಯಾಗುವ ಸ್ವಾತಂತ್ರ್ಯವಿಲ್ಲದ ಕೈದಿಗಳು ಈಗ ಅದನ್ನು ಪ್ರಯತ್ನಿಸಿದರೆ?
ಕಟ್ಟಿಮನಿಯವರ ಕಣ್ಣೊಳಗೆ ನೇರಳೆ ಬಣ್ಣದ ಗುಳ್ಳೆಗಳು ಒಡೆಯಹತ್ತಿದ್ದವು!

ಹಾಗೇನೂ ಆಗಲಿಲ್ಲ. ಮೇಲೆ ಹತ್ತುವ ಪ್ರಯತ್ನದಲ್ಲಿಯೇ ಅದೇನನ್ನು ಹತ್ತಿ ಮೀರಿದರೋ, ಅಂತೂ ಎಲ್ಲ ಕೈದಿಗಳೂ ಕೆಳಗಿಳಿದು ಬಂದರು! ಕೆಳಗಿದ್ದ ಪೊಲೀಸರು ಅಷ್ಟೊತ್ತಿಗೆ ಕಾಫಿ, ನೀರು, ಜ್ಯೂಸ್, ಸಿಗರೇಟು ಇತ್ಯಾದಿಗಳಿಗೆ ಅಲ್ಲಿಲ್ಲಿ ಚೆದುರಿದ್ದರು. ಕೊನೆಗೆ ಕೈದಿಗಳೇ ಹೋಗಿ ಅಲ್ಲಿಲ್ಲಿ ಹುಡುಕಿ ಎಲ್ಲ ಪೊಲೀಸರನ್ನೂ ಕರೆದುತಂದರಂತೆ!
ತಪ್ಪಿಸಿಕೊಳ್ಳುವುದಲ್ಲ, ನಮಗೆ ಬಿಡುಗಡೆ ಆದೇಶ ಬಂದಿದ್ದರೂ ಬೇಸರವಾಗುತ್ತಿತ್ತು. ಇನ್ನೆರಡು ದಿನದಲ್ಲಿ ನಮ್ಮ ನಾಟಕದ ಪ್ರದರ್ಶನವಿತ್ತು, ಎಂದು ಆ ಕೈದಿ ಕಥೆಯನ್ನು ಮುಗಿಸಿದರು.
ಒಮ್ಮೆ ತಾಲೀಮು ನೋಡಲು ಸ್ವತಃ ಕಾರ್ನಾಡರೇ ಬಂದಿದ್ದರಂತೆ. ಇಷ್ಟು ಗಂಭೀರವಾಗಿ, ಇಷ್ಟು ತಾದಾತ್ಮ್ಯದಲ್ಲಿ, ಇಷ್ಟು ಅದ್ಭುತವಾಗಿ ಕೈದಿಗಳು ಅಭಿನಯಿಸಬಲ್ಲರೇ ಎಂದು ಬೆರಗಾಗಿದ್ದರಂತೆ.
ಜೈಲಿನ ಒಳಗೆ ಇರುವವರು ಅಪರಾಧಿಗಳು ಅಂತ ಅಂದುಕೊಂಡಿದ್ದೆವು. ಹೊರಗೆ ಬಂದ ಮೇಲೆ ಎಂತೆಂಥ ಅಪರಾಧಿಗಳು ಇದ್ದಾರೆ, ನಮ್ಮನ್ನೆಲ್ಲ ಆಳುತ್ತಿದ್ದಾರೆ ಎಂದು ಅರ್ಥವಾಯಿತು, ನಿಜ ಹೇಳಬೇಕೆಂದರೆ ಹೊರಗಿರುವವರಿಗಿಂತ ಒಳಗಿರುವವರಲ್ಲೇ ಎಷ್ಟೊ ಮಾನವೀಯತೆ ಇದೆ ಅಂತ ಅನ್ನಿಸಿದೆ — ಎಂದರು ಇನ್ನೊಬ್ಬ ಕೈದಿ.

ಕೇಳುತ್ತಾ, ಕೇಳುತ್ತಾ, ನನ್ನ ಮನಸ್ಸು ಇನ್ನೆಲ್ಲೊ ಮಗ್ನವಾಗಿತ್ತು. ಎಲ್ಲೊ ಒಂದು ಕಡೆ ಕಳೆದ ನಾಲ್ಕೂವರೆ ವರ್ಷದಲ್ಲಿ ಹೆಚ್ಚು ಕಮ್ಮಿ ನನ್ನ ಧ್ಯಾನಕ್ಕೆಂದು ಹೋಗುತ್ತಿದ್ದ ನನ್ನ ಅನುಭವ ತದ್ವಿರುದ್ಧ ಅಂತನ್ನಿಸಿತು. ಮಧ್ಯಮವರ್ಗದ ಭಕ್ತರ ಅಬ್ಬರ ಬಿಡಿ, ಅದು ಯಾವತ್ತಿನದೇ. ಆದರೆ ಕೋಪ, ತಾಪ, ಹರಕುಬಾಯಿ, ಸ್ಪರ್ಧೆ ಇತ್ಯಾದಿಗಳ ನೆಲೆಯಲ್ಲಿ ಅಲ್ಲಿ ಒಳಗಿರುವವರಿಗಿಂತ, ಅಲ್ಲಿಗೆ ಬರುವವರಿಗಿಂತ, ಹೊರಗಿನವರು ಹೆಚ್ಚು ಪ್ರಾಮಾಣಿಕರಿರಬಹುದು!
ಕೊನೆಪಕ್ಷ ಆ ದುರ್ಗುಣಗಳೆಲ್ಲ ತಮ್ಮಲ್ಲಿದೆ ಎಂದು ಒಪ್ಪಿಕೊಳ್ಳುತ್ತಾರೆ!

