Advertisement
ಇರಾನಿಗೂ ಹಿಂದೂಸ್ತಾನಕ್ಕೂ ಅಂಟಿರುವ ಸಾವಿರಾರು ವರ್ಷಗಳ ನಂಟು: ಶೇಷಾದ್ರಿ ಗಂಜೂರು ಬರಹ

ಇರಾನಿಗೂ ಹಿಂದೂಸ್ತಾನಕ್ಕೂ ಅಂಟಿರುವ ಸಾವಿರಾರು ವರ್ಷಗಳ ನಂಟು: ಶೇಷಾದ್ರಿ ಗಂಜೂರು ಬರಹ

ಗಹನವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅವಕ್ಕೆ ಭಾರತದೊಂದಿಗೆ ಸಂಬಂಧ ಕಲ್ಪಿಸುವುದನ್ನು ಪರ್ಷಿಯನ್ ಕಾವ್ಯಪರಂಪರೆಯಲ್ಲಿ ನಾವು ಮತ್ತೆ ಮತ್ತೆ ಕಾಣಬಹುದು. ಉದಾಹರಣೆಗೆ, ಫಿರ್ದೂಸಿಯ ಒಂದು ಶತಮಾನದ ನಂತರ ಬಂದ ನಿಜ಼ಾಮಿ ಗಂಜಾವಿಯ ಹಫ್ತ್ ಪೇಕಾರ್ ಕಾವ್ಯದಲ್ಲಿ ಭಾರತೀಯ ರಾಜಕುಮಾರಿಯೊಬ್ಬಳು ಆ ಕಥನದ ನಾಯಕ ಬೆಹ್ರಾಮನಿಗೆ ಆತ್ಮ ಸಂಯಮದ ಮಹತ್ವವನ್ನು ಹೇಳಿಕೊಡುತ್ತಾಳೆ.
ಇರಾನಿಗೂ ಹಿಂದೂಸ್ತಾನಕ್ಕೂ ಇರುವ  ನಂಟಿನ ಕುರಿತು ಶೇಷಾದ್ರಿ ಗಂಜೂರು ಬರಹ

“ಏನಪ್ಪಾ, ಹುಷಾರಾಗಿದ್ದೀಯಾ? ನಿನ್ನನ್ನು ನೋಡಿ ತುಂಬಾ ಖುಷಿಯಾಯ್ತು!” ಕನ್ನಡದ ಈ ಸರಳ ವಾಕ್ಯಗಳ “ಹುಷಾರು”, “ಖುಷಿ” ಇವು ಪರ್ಷಿಯಾದಿಂದ – ಅಂದರೆ, ಇಂದಿನ ಇರಾನಿನಿಂದ ಆಗಮಿಸಿ ಈಗ ನಮ್ಮವೇ ಆಗಿರುವ ಪದಗಳು. ಅಂತಹ, ನಮ್ಮದೆಂದೇ ಭಾವಿಸಿ ಬಳಸುವ, ದಿನ ನಿತ್ಯದ ಪದಗಳು ಕನ್ನಡದಲ್ಲಿ ಇನ್ನೆಷ್ಟೋ ಇವೆ. ಉದಾಹರಣೆಗೆ ಕಚೇರಿ, ಕಾಗದ, ಖಾಲಿ, ಇತ್ಯಾದಿ. ಹೀಗೆ ಇರಾನಿನಿಂದ ನಮ್ಮಲ್ಲಿಗೆ ಬಂದಿರುವುದು ಕೇವಲ ಪದಗಳಷ್ಟೇ ಅಲ್ಲ; ಹಲವು ವಸ್ತು-ವಿಚಾರಗಳು ಸಹ ಹೀಗೆಯೇ ಆಗಮಿಸಿವೆ. ತಹಸೀಲ್ದಾರ್, ಗುಲಾಬಿ (ಹೂವು ಮತ್ತು ಪದ) ಇಂತಹ ಆಮದಿಗೆ ಎರಡು ಉದಾಹರಣೆಗಳಷ್ಟೆ. ಅಂದಹಾಗೆ, “ಆಮದು” ಎನ್ನುವ ಕನ್ನಡ ಪದವೇ ಒಂದು ಪರ್ಷಿಯನ್ ಆಮದು!

ಹಲವು ದಶಕಗಳಿಂದ ಇರಾನ್ ಎಂದರೆ ಅಯಾತೊಲ್ಲಾಗಳು; ಧರ್ಮಾಂಧತೆ; ಹೆಜ್ಬುಲ್ಲಾ – ಹಾಮಾಸ್‌ಗಳಂತಹ ತೀವ್ರವಾದಿಗಳೊಂದಿಗೆ ಇರುವ ಅವರ ಒಡನಾಟ; ಅಮೆರಿಕಾ ಒಬ್ಬ ಮಹಾ ಸೈತಾನ – ಇಸ್ರೇಲನ್ನು ಭೂಪಟದಿಂದಲೇ ನಾಶಮಾಡುತ್ತೇವೆ ಎಂದು ಗರ್ಜಿಸುವ ಜನನಾಯಕರು; ಅಲ್ಲಿನ ಪೆಟ್ರೋಲಿಯಂ ಸಂಪತ್ತು ಇವಷ್ಟೇ ಸುದ್ದಿಯಲ್ಲಿರುತ್ತವೆ. ಆದರೆ, ಮಧ್ಯ ಪ್ರಾಚ್ಯದಲ್ಲಿ ಇಂದು ನಡೆಯುತ್ತಿರುವ ಬಾಂಬ್ ದಾಳಿಗಳು, ಸಾವಿರಾರು ಅಮಾಯಕರ ಮರಣ, ಗುಲಾಬಿ-ಗುಲ್ಕನ್ನಿನಿಂದ ಹಿಡಿದು ಖಾಲಿ-ಕಾಗದದವರೆಗೆ ಏನೆಲ್ಲವನ್ನೂ ನಮಗೆ ನೀಡಿರುವ ಇರಾನ್ ನಮ್ಮಿಂದ ಪಡೆದದ್ದೇನು? ಇದಕ್ಕೆ ಹಲವಾರು ಉತ್ತರಗಳಿವೆ. ಉದಾಹರಣೆಗೆ ಸಾಂಬಾರ ಪದಾರ್ಥಗಳು, ಸಕ್ಕರೆ, ನವಿರು ವಸ್ತ್ರಗಳು, ವಜ್ರ-ಆಭರಣಗಳು… ಹೀಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಆದರೆ, ಇರಾನಿನ ಕಾವ್ಯ-ಕಥನಗಳನ್ನು ಗಮನಿಸಿದರೆ, ಅಲ್ಲಿನ ಕವಿಗಳು ಮತ್ತೆ ಮತ್ತೆ  ಕಾಣುವ, ಲೌಕಿಕ ಸಂಪತ್ತುಗಳ ಪಟ್ಟಿಯನ್ನು ಮೀರಿದ ಇನ್ನೊಂದು ಭಾರತ ಕಾಣುತ್ತದೆ; ಜ್ಞಾನ, ಆಧ್ಯಾತ್ಮ, ಕತೆ-ಕಾವ್ಯಗಳ ಭಂಡಾರವೆನಿಸಿದ ಭಾರತ.

ಸಾವಿರ ವರ್ಷಕ್ಕೂ ಹಿಂದೆ, ಪರ್ಷಿಯನ್ ಕವಿ ಫಿರ್ದೂಸಿ ತನ್ನ ಶಹನಾಮೆ ಕಥನದಲ್ಲಿ, ಇಡೀ ಜಗತ್ತನ್ನೇ ಗೆದ್ದಿದ್ದರೂ ಆಂತರ್ಯದಲ್ಲಿ ಅತೃಪ್ತನಾಗಿರುವ ಸಿಕಂದರನನ್ನು ಮೈಮೇಲೆ ಬಟ್ಟೆಯೂ ಇಲ್ಲದೆ ಗೆಡ್ಡೆ-ಗೆಣಸುಗಳನ್ನೇ ತಿನ್ನುತ್ತಾ ಗುಹೆಯೊಂದರಲ್ಲಿ ಬದುಕುತ್ತಿದ್ದರೂ ತೃಪ್ತನಾಗಿರುವ ಭಾರತೀಯ ಸಾಧುವಿನ ಎದುರಿಗೆ ನಿಲ್ಲಿಸುತ್ತಾನೆ. ಅದು ಮೇಲ್ನೋಟಕ್ಕೆ ಸಿಕಂದರ-ಸಾಧುವಿನ ವೈರುಧ್ಯವಾದರೂ, ಬಾಹ್ಯ/ಆಂತರ್ಯ, ಪಾಶ್ಚಾತ್ಯ/ಪೌರ್ವಾತ್ಯ ಚಿಂತನೆಗಳ ಕುರಿತಾದ ರೂಪಕವೂ ಹೌದು. ಇದರಲ್ಲಿ ಫಿರ್ದೂಸಿ ಯಾರ ಪರ ನಿಲ್ಲುತ್ತಾನೆ ಎಂಬುದನ್ನು ಹೇಳಲೇಬೇಕಿಲ್ಲ.

ಗಹನವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅವಕ್ಕೆ ಭಾರತದೊಂದಿಗೆ ಸಂಬಂಧ ಕಲ್ಪಿಸುವುದನ್ನು ಪರ್ಷಿಯನ್ ಕಾವ್ಯಪರಂಪರೆಯಲ್ಲಿ ನಾವು ಮತ್ತೆ ಮತ್ತೆ ಕಾಣಬಹುದು. ಉದಾಹರಣೆಗೆ, ಫಿರ್ದೂಸಿಯ ಒಂದು ಶತಮಾನದ ನಂತರ ಬಂದ ನಿಜ಼ಾಮಿ ಗಂಜಾವಿಯ ಹಫ್ತ್ ಪೇಕಾರ್ ಕಾವ್ಯದಲ್ಲಿ ಭಾರತೀಯ ರಾಜಕುಮಾರಿಯೊಬ್ಬಳು ಆ ಕಥನದ ನಾಯಕ ಬೆಹ್ರಾಮನಿಗೆ ಆತ್ಮ ಸಂಯಮದ ಮಹತ್ವವನ್ನು ಹೇಳಿಕೊಡುತ್ತಾಳೆ.

ಗಂಜಾವಿಯ ನಂತರ ಬಂದ, ಹದಿಮೂರನೆಯ ಶತಮಾನದ ಮಹಾಕವಿ ರೂಮಿಯ ಕಾವ್ಯಗಳಲ್ಲಂತೂ  ಭಾರತದ ಈ ನಂಟು ಮತ್ತಷ್ಟು ಸುಂದರವಾಗಿ, ಅರ್ಥಪೂರ್ಣವಾಗಿ ರೂಪಗೊಳ್ಳುತ್ತದೆ. ಉದಾಹರಣೆಗೆ, ರೂಮಿ ಹೇಳುವ ಭಾರತೀಯ ಗಿಳಿಯ ಕತೆ.

ಒಂದಾನೊಂದು ಕಾಲದಲ್ಲಿ ಇರಾನಿನಲ್ಲಿ ಒಬ್ಬ ಸಿರಿವಂತ ವರ್ತಕ ಇರುತ್ತಾನೆ. ಅವನ ಬಳಿ ಭಾರತದಿಂದ ತಂದ ಗಿಳಿಯೊಂದು ಇರುತ್ತದೆ. ಅದನ್ನು ಅವನು ಬಂಗಾರದ ಪಂಜರದಲ್ಲಿಟ್ಟು ಅತ್ಯಂತ ಪ್ರೀತಿಯಿಂದ ಸಾಕುತ್ತಿರುತ್ತಾನೆ.

ಒಮ್ಮೆ ಅವನು ವ್ಯಾಪಾರಕ್ಕೆಂದು ಭಾರತಕ್ಕೆ ಹೋಗಬೇಕಾಗುತ್ತದೆ. ತೆರಳುವ ಮುನ್ನ, ತನ್ನ ಮುದ್ದಿನ ಗಿಳಿಗೆ ಹೇಳುತ್ತಾನೆ “ನಿನ್ನ ತಾಯ್ನಾಡಾದ ಭಾರತಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ನಿನಗೇನು ತರಲಿ?”

ಆ ಗಿಣಿ ಹೇಳುತ್ತದೆ “ನನಗೇನೂ ಬೇಡ. ಆದರೆ, ಅಲ್ಲಿ ಗಿಳಿಗಳು ಕಂಡರೆ ಅವಕ್ಕೆ ಹೇಳು ನಾನಿಲ್ಲಿ ಬಂಗಾರದ ಪಂಜರದಲ್ಲಿದ್ದೇನೆ ಎಂದು. ಅವು ಹೇಗಿವೆ ಎಂದು ಕೇಳು”

ವರ್ತಕ ಭಾರತಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಮರದ ಮೇಲೆ ಕುಳಿತ ಗಿಳಿಯೊಂದು ಕಾಣುತ್ತದೆ. ಅವನು ಅದಕ್ಕೆ ತನ್ನ ಗಿಳಿ ಹೇಳಿದ ಮಾತನ್ನು ಹೇಳುತ್ತಾನೆ. ಅದನ್ನು ಕೇಳಿದ ತಕ್ಷಣ ಮರದ ಮೇಲಿದ್ದ ಆ ಗಿಳಿ ನಡುಗಿ ಕೆಳಗೆ ಬಿದ್ದು ಸಾಯುತ್ತದೆ. “ಅರೆ, ಭಾರತೀಯ ಗಿಳಿಗಳು ಇಷ್ಟು ಮೃದು ಸ್ವಭಾವದವೇ?”  ಎಂದು ವರ್ತಕನಿಗೆ ಅತ್ಯಂತ ಆಶ್ಚರ್ಯವೂ, ದುಃಖವೂ ಆಗುತ್ತದೆ.

ವ್ಯಾಪಾರ ಮುಗಿಸಿ ವಾಪಸಾಗುವ ವರ್ತಕ, ತನ್ನ ಪಂಜರದ ಗಿಳಿಗೆ ಭಾರತದಲ್ಲಾದ ವಿಷಯವನ್ನು ಹೇಳುತ್ತಾನೆ. ಅದನ್ನು ಕೇಳಿದ ತಕ್ಷಣವೇ, ಅವನ ಗಿಳಿಯೂ ನಡುಗಿ ಪಂಜರದೊಳಗೇ ಸತ್ತು ಬೀಳುತ್ತದೆ. ತನ್ನ ಮುದ್ದಿನ ಗಿಳಿಯ ಸಾವಿನಿಂದ ಅಪಾರ ದುಃಖ-ಆಘಾತಕ್ಕೊಳಗಾಗುವ ಆ ವರ್ತಕ, ಆ ಗಿಳಿಯನ್ನು ಪಂಜರದಿಂದ ತೆಗೆದು ಹೊರಗಿಡುತ್ತಾನೆ.

ತತ್ ಕ್ಷಣವೇ, ಆ ಗಿಳಿ ಹಾರಿ ಮರದ ರೆಂಬೆಯ ಮೇಲೆ ಕುಳಿತು ಹೇಳುತ್ತದೆ. “ನನ್ನ ಆ ಭಾರತೀಯ ಮಿತ್ರ ನಿನ್ನ ಮಾತು ಕೇಳಿ ಸಾಯಲಿಲ್ಲ. ಬದಲಿಗೆ ನನಗೊಂದು ಸಂದೇಶವನ್ನು ಕಳುಹಿಸಿತು. ಅಷ್ಟೇ.”

ರೂಮಿಯ ಈ ಭಾರತೀಯ ಗಿಳಿಯ ಕತೆಯನ್ನು ವಿವಿಧ ಮಜಲುಗಳಲ್ಲಿ ವಿಶ್ಲೇಷಿಸಬಹುದು. ಅದನ್ನು ಲೌಕಿಕ ಪಂಜರದಿಂದ ಆತ್ಮದ ಮುಕ್ತಿಯ ಭಾರತೀಯ ವೇದಾಂತದ ರೂಪಕದಂತೆ ವಿಶ್ಲೇಷಿಸುವುದೂ ಇದೆ.

*****

ಇದು ಭಾರತದಲ್ಲಿ ಹಲವರಿಗೆ ತಿಳಿಯದಿರಬಹುದು, ಮುಘಲ್ ದೊರೆ ಔರಂಗಜೇಬನ ಅಣ್ಣ ದಾರಾ ಶಿಕೋ ಹದಿನೇಳನೆಯ ಶತಮಾನದಲ್ಲಿ ಪ್ರಮುಖ ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿ(ಸಿ)ದ. ಆಸಕ್ತಿಯ ವಿಚಾರವೆಂದರೆ, ಅಂದಿನಿಂದ, ಕಟ್ಟಾ ಮುಸ್ಲಿಂ ಧರ್ಮಾಂಧರೆಂದೇ ಕುಖ್ಯಾತಿ ಪಡೆದಿರುವ ಅಯಾತೊಲ್ಲಾ ಖೊಮೇನಿ ನಾಯಕತ್ವದಲ್ಲಿ ೧೯೭೯ರಲ್ಲಿ ಕ್ರಾಂತಿಯಾಗಿ, ಇರಾನ್ ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾದ ನಂತರವೂ, ಈ ಅನುವಾದಗಳು ಇನ್ನೂ ಪ್ರಿಂಟಿನಲ್ಲಿವೆ!  ಇದಕ್ಕೆ ಕಾರಣವೂ ಇದೆ: ಇರಾನಿನ ಸೂಫಿ ಪರಂಪರೆಯ ಹಲವರ ಪ್ರಕಾರ ಉಪನಿಷತ್ತುಗಳು ಅನಂತದ ಏಕತೆಯನ್ನು ತೋರುವ, ಕುರಾನಿನಲ್ಲಿ ಪ್ರಸ್ತಾಪವಾಗುವ ರಹಸ್ಯ ಪುಸ್ತಕವೇ  (ಕಿತಾಬ್-ಅಲ್-ಮಕ್ನೂನ್) ಆಗಿದೆ.

*****

ಇರಾನ್ ಅನ್ನು ಧಾರ್ಮಿಕ ರಾಷ್ಟ್ರ ಮಾಡಿ, ಇಂದಿನ ದಾಳಿ-ಹಿಂಸೆ-ಸಾವುಗಳ ಹೋಮಕ್ಕೆ ೧೯೭೯ರಲ್ಲಿ ಕಿಡಿ ಹೊತ್ತಿಸಿದ ಅಯಾತೊಲ್ಲಾ ರುಹೊಲ್ಲಾ ಖೊಮೇನಿಯವರ ಬೇರುಗಳನ್ನೂ ನಾವು ಗಮನಿಸಬೇಕು.

ಅವರ ತಾತ ಸೈಯದ್ ಅಹ್ಮದ್ ಮುಸವಿಯವರು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಕಿಂತೂರ್ ಗ್ರಾಮದವರು. ೧೮೩೦ರಲ್ಲಿ ಭಾರತ ಬಿಟ್ಟು ಇರಾಕಿನ ನಜಾಫ್ ನಗರಕ್ಕೆ ಹೋಗುವ ಅವರು ಅಲ್ಲಿಂದ ಇರಾನಿನ ಖೊಮೇನ್ ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಅವರು ಭಾರತ ಬಿಟ್ಟರೂ, ಭಾರತ ಅವರನ್ನು ಬಿಡುವುದಿಲ್ಲ. ಅವರನ್ನು ಮತ್ತು ಅವರ ಕುಟುಂಬವನ್ನು ಭಾರತೀಯ ಎಂದೇ ಗುರುತಿಸಲಾಗುತ್ತದೆ. ಅವರ ಹೆಸರಿಗೆ “ಅಲ್-

ಹಿಂದಿ” ಅಂಟುತ್ತದೆ. (ಪರ್ಷಿಯನ್ನಿನಲ್ಲಿ “ಅಲ್-ಹಿಂದಿ” ಎಂದರೆ, ಹಿಂದೂಸ್ತಾನದವ ಎಂದೇ ಅರ್ಥ).

ಖೊಮೇನಿಯವರ ಸ್ವಂತ ಅಣ್ಣ ಅಯಾತೊಲ್ಲಾ ಮುರ್ತಜ಼ಾ ತಮ್ಮ ಹೆಸರಿನೊಂದಿಗೆ “ಅಲ್-ಹಿಂದಿ” ಉಪನಾಮವನ್ನೂ ಬಳಸುತ್ತಿದ್ದರು. ಆದರೆ, ೧೯೨೧ರಲ್ಲಿ ಕುಟುಂಬದ ಹೆಸರುಗಳ ಕುರಿತಾದ ಕಾನೂನು ಜಾರಿಗೆ ಬಂದನಂತರ ರುಹೊಲ್ಲಾ ತಮ್ಮ ಹೆಸರಿಗೆ, ಖೊಮೇನ್ ಪಟ್ಟಣದ ಸೂಚಕವಾಗಿ “ಖೊಮೇನಿ”ಯನ್ನು ಸೇರಿಸಿಕೊಳ್ಳುತ್ತಾರೆ. ಅಯಾತೊಲ್ಲಾ ಖೊಮೇನಿಯಾಗುತ್ತಾರೆ.

ಇಂದು, ಖೊಮೇನಿ ಎಂದರೆ ಕಣ್ಮುಂದೆ ನಿಲ್ಲುವುದು ಧಾರ್ಮಿಕ-ರಾಜಕೀಯ ನಾಯಕನ ಗಡ್ಡಾಧಾರಿ ಕಾಠಿಣ್ಯದ ಮುಖ. ಆದರೆ, ಅದೇ ಖೊಮೇನಿ ಒಂದೊಮ್ಮೆ ಕವಿ ಕೂಡ. ಅವರ ಗಜ಼ಲ್‍ಗಳಲ್ಲೂ ಮದ್ಯ-ಮಧುಶಾಲೆ-ಮದನಾಂಗಿಯನ್ನು ರೂಪಕಗಳಾಗಿ ಬಳಸುವ ಗಾಲಿಬ್‌ನ ಪರ್ಷಿಯನ್ ಕಾವ್ಯದ ಸಬಕ್-ಎ-ಹಿಂದಿ (“ಭಾರತೀಯ ಶೈಲಿ”) ಎದ್ದು ಕಾಣುತ್ತದೆ. ಇನ್ನೂ ಕುತೂಹಲದ ವಿಚಾರ ಎಂದರೆ, ಧಾರ್ಮಿಕ-ರಾಜಕೀಯ ವಿಚಾರಗಳಲ್ಲಿ “ಖೊಮೇನಿ” ಆಗಿರುವ ಅವರು, ತಮ್ಮ ಕಾವ್ಯಗಳಲ್ಲಿ ಹಲವೆಡೆ “ಹಿಂದಿ” ಎಂದರೆ “ಭಾರತೀಯ” ಎನ್ನುವ ಕಾವ್ಯನಾಮ ಬಳಸುತ್ತಾರೆ.

“ಹಿಂದಿ! ಮಧುಶಾಲೆಯೆಡೆಗೆ ನಡೆ
ಈ ಮಠ-ಮದರಸಗಳ ತಪವ ಬಿಡು
ಮದಿರೆಯ ಹನಿಯೊಂದೇ ಸಾಕು
ಕಪಟದ ಕೊಳೆಯ ತೊಳೆಯಲು” (ಖೊಮೇನಿಯವರ “ದಿವಾನ್-ಎ-ಇಮಾಮ್” ನಿಂದ)

About The Author

ಶೇಷಾದ್ರಿ ಗಂಜೂರು

ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ