ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ. ಸರೋಜಮ್ಮ ಕಾಲದಿಂದಲೂ ತನ್ನ ಸಾಕಿಕೊಳ್ಳುವಷ್ಟು ದುಡಿಯುತ್ತಿದ್ದರಿಂದ ಅವಳು ಯಾರ ಮೇಲೂ ಅವಲಂಬಿಸಿರಲಿಲ್ಲ.
ಆರ್. ಪವನ್ ಕುಮಾರ್ ಬರೆದ ಕತೆ “ಗುರುತು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಕೈಯಲ್ಲಿದ್ದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್ ಒಂದೊಂದು ಉರುಳಾಗಿ ಕುತ್ತಿಗೆ ಬಿಗಿಯುತ್ತಿವೆ ಎನಿಸಿತು ಸರೋಜಮ್ಮನಿಗೆ. ಇದೆಲ್ಲಾ ಬೆಂಕಿಗೆ ಹಾಕಿ ನೆಮ್ಮದಿಯಿಂದ ಇರುವ ಎಂದರೆ ಅದು ಸಾಧ್ಯವಾಗುವಂತದ್ದಲ್ಲ. ಈಗ ಸರ್ಕಾರದ ಸೇವೆ, ಸವಲತ್ತುಗಳ ಪಡೆಯಲು ಇವೆಲ್ಲಾ ಮನುಷ್ಯನಿಗಿಂತ ಮುಖ್ಯವಾಗಿ ತೋರುತ್ತಿದ್ದವು. ಯಾವುದೇ ಸರ್ಕಾರಿ ಕಛೇರಿಗೆ ಹೋದರು ಅಲ್ಲೆಲ್ಲಾ ಈ ದಾಖಲೆಗಳದೆ ಆಟ. ಮನುಷ್ಯ ನಿಮಿತ್ತವಾಗಿದ್ದ. ಇವುಗಳಲ್ಲಿ ಚೂರು ವ್ಯತ್ಯಾಸವಾಗುವಂತಿರಲಿಲ್ಲ. ಸರಿಪಡಿಸಿಕೊಳ್ಳಲು ಕಛೇರಿಗಳ ಅಲೆಯುವುದು ಅನಿವಾರ್ಯವಾಗಿತ್ತು. ಒಂದೇ ರೀತಿಯ ಮಾಹಿತಿಯನ್ನು ಎಲ್ಲಾ ದಾಖಲೆಗಳು ಹೊಂದಿರಬೇಕಿದ್ದ ಕಾರಣ, ಇದೇ ದೊಡ್ಡ ಸಮಸ್ಯೆಯಾಗಿ ಸೋರಜಮ್ಮನ ಬಾಳಿನಲ್ಲಿ ತೂರಿತ್ತು. ಅವಳ ಮೇಲಿನ ದಾಖಲೆಗಳೆಲ್ಲವು ಒಂದಕ್ಕಿಂತ ಒಂದು ಅಸಮಂಜಸವಾಗಿದ್ದವು. ಒಂದೊಂದರಲ್ಲೂ ಸರೋಜ, ಸರೋಜಮ್ಮ, ಸರೋಜಿ ಹೀಗೆ ಅವಳ ಹೆಸರಿನ ವಿವಿಧ ಸ್ವರೂಪಗಳನ್ನು ಅವು ಹೊಂದಿದ್ದವು. ಇವೆಲ್ಲಾ ಆ ಕಾಲಘಟ್ಟದಲ್ಲಿ ಮುಂದಿನ ಅವಘಡಗಳ ಬಲ್ಲದೆ ಮನೆ ಬಾಗಿಲಿಗೆ ಬಂದವರು ತಾವು ಕೇಳಿದ್ದನ್ನು ನಮೂದಿಸುವ ಮೂಲಕ ರೂಪುಗೊಂಡು, ಮತ್ತೆ ನವೀಕರಣಗೊಳ್ಳದೆ ಹೇಗೋ ಕಾಲ ನಡೆದಿತ್ತು. ಇನ್ನೂ ಜನ್ಮ ದಿನಾಂಕ, ವರ್ಷಗಳು ಅಷ್ಟೇ ಒಂದು ಅಂದಾಜಿನ ಮೇಲೆ ಸರೋಜಮ್ಮ ಹೇಳಿದ್ದನ್ನ ಆಧರಿಸಿ ದಾಖಲಾಗಿತ್ತು. ಆದರೆ, ಕಾಲ ಬದಲಾದಂತೆ ಬಂದ ಹೊಸ ತಂತ್ರಜ್ಞಾನ ಈ ಸೇವೆ, ಸವಲತ್ತುಗಳ ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ವಿನೂತನಗೊಳಿಸಲು ಮುಂದಾದಾಗ ಸರೋಜಮ್ಮನ ಈ ಚಿತ್ರವಿಚಿತ್ರ ದಾಖಲೆಗಳೆಲ್ಲ ಗಾಡಿ ಚಕ್ರಕ್ಕೆ ಸಿಲುಕಿದ ಹಪ್ಪಳವಾದವು. ಇವುಗಳನ್ನು ಸರಿಪಡಿಸಿ ತರುವತನಕ ಅವಳಿಗೆ ಕೊಡುವ ಸೇವೆ ಸವಲತ್ತುಗಳಿಗೆ ಕೊಕ್ಕೆ ಬಿದ್ದಿತ್ತು. ಮೊದಲೆ ಯಾರು ಇರದೆ ತನ್ನ ಒಂಟಿತನದಿಂದ ಗತಿಗೆಟ್ಟಿದ್ದ ಸರೋಜಮ್ಮ ಈ ನಿರ್ಧಾರಗಳಿಂದ ಮತ್ತಷ್ಟೂ ಪೇಚಿಗೆ ಸಿಲುಕಿದಳು. ಅವಳಿಗೆ ಈ ಕಛೇರಿಗಳ ಓಡಾಟ ಹೊಸ ಅನುಭವವಾಗಿತ್ತು.
ತೊಂದರೆ ಬಂದಿದ್ದು ಹೀಗೆ ಕುಳಿತು ಚಿಂತಿಸಿದರೆ ಬಗೆಹರಿಯುವುದಿಲ್ಲವೆಂದು ಅವಳು ಅರಿತುಕೊಂಡಿದ್ದಳು. ತಾನೇ ಇವುಗಳ ಕಾರ್ಯರೂಪಕ್ಕೆ ಇಳಿಯುವಂತೆ ಆರಂಭಿಕವಾಗಿ ಆಹಾರ ಇಲಾಖೆಗೆ ಬಂದು ತನ್ನ ಸಮಸ್ಯೆಯನ್ನು ಈ ದಾಖಲೆಗಳ ಮುಂದಿಟ್ಟು ಬಿಡಿಸಿದಳು. ಅವಳ ಈ ದಾಖಲೆಗಳನ್ನು ನೋಡಿದ ಗುಮಾಸ್ತ ಬೆಳಗಿನಿಂದ ಇಂಥಾ ಹತ್ತಾರು ಜನರ ಒಂದೇ ಸಮಸ್ಯೆಯ ಬೇರೆ ಬೇರೆ ಸ್ವರೂಪಗಳ ನೋಡಿ ರೋಸತ್ತಿ ಹೋಗಿದ್ದವನು ಹಣೆಚೆಚ್ಚಿಕೊಂಡು “ಇದ್ಯಾವುದು ಒಂದಕ್ಕೊಂದು ಸಂಬಂಧವೇ ಇಲ್ಲವಲ್ಲಮ್ಮಾ. ಹೋಗಿ ಇವೆಲ್ಲಾ ಸರಿಮಾಡಿಸಿಕೊಂಡು ಬಾ” ಎಂದು ಜೋರಾಗಿ ಹೇಳಿದ. ಸರೋಜಮ್ಮನಿಗೆ ವಯೋಸಹಜವಾಗಿ ಕಿವಿಗಳು ಮಂದವಾಗಿದ್ದ ಕಾರಣ ಅವಳಿಗೆ ಏನೇ ಹೇಳಬೇಕಾದರು ಕೇಳಬೇಕಾದರು ಗಟ್ಟಿಯಾಗಿ, ಜೋರಾಗಿ ಹೇಳಬೇಕಾಗಿತ್ತು. ಇಲ್ಲವಾದರೆ ಅವಳು ಮುಖಮುಖ ನೋಡುತ್ತ “ಕೇಳಿಸಲ್ಲಿಲ್ರಾ ನೀವು ಹೇಳಿದ್ದು. ನನ್ಗೆ ಕಿವಿ ವಸಿ ಕಿವುಡು” ಎಂದು ತನ್ನ ನ್ಯೂನತೆಯನ್ನು ಮುಚ್ಚಿಕೊಳ್ಳದೆ ಹೇಳುತ್ತಿದ್ದಳು. ಆಗ ಅವಳ ಮುಖದಲ್ಲಿ ಇದರ ಬಗ್ಗೆ ಬೇಸರವು ಮತ್ತು ಮತ್ತೆ ಮತ್ತೆ ಕೇಳುವ ತನ್ನ ದೈನೇಸಿ ಸ್ಥಿತಿಯು ವ್ಯಕ್ತವಾಗುತ್ತಿತ್ತು. ವಯಸ್ಸಾದ ಕಾರಣ ಇವಳ ಮೇಲೆ ಅನೇಕರಿಗೆ ರೇಜಿಗೆ ಉಂಟಾದರು ಸಹಿಸಿಕೊಂಡಿದ್ದರು. ಕಛೇರಿಯಲ್ಲಿ ಇವಳ ಮುಂದೆ ಕೂಗಾಡಿದರೆ ನೋಡುವವರ ಕಣ್ಣಿನಲ್ಲಿ ತಾವು ಅಪರಾಧಿಯಾಗಿಯು ಈ ಮುದುಕಿ ಬಡಪಾಯಿಯಾಗಿಯು ಕಾಣುತ್ತಿದ್ದಳು. ಇದರಿಂದ ಗುಮಾಸ್ತನಿಗೆ ಇವಳನ್ನು ಅಲ್ಲಿಂದ ಸಾಗಾಕುವುದೇ ದೊಡ್ಡ ತಲೆನೋವಾಗಿತ್ತು. ಒಂದು ಹೇಳಿದರೆ ಮತ್ತೊಂದು ಕೇಳುತ್ತಿದ್ದಳು. ಅದಕ್ಕೆಲ್ಲಾ ಉತ್ತರಿಸುವಷ್ಟು ವ್ಯವಧಾನ ಅವನಲ್ಲಿರಲಿಲ್ಲ. ಅವನು ಮಾಡಬೇಕಾದ ಕೆಲಸ ಬಂಡಿಯಷ್ಟಿದ್ದ ಕಾರಣ ಸರೋಜಮ್ಮನಿಗೆ ಇಲ್ಲಿಂದ ಹೋಗಿ ಹೊರಗಡೆ ಬೇರೆ ಯಾರನ್ನಾದರು ಇದರ ಬಗ್ಗೆ ಕೇಳೆಂದು ಹೇಳಿದ.
ಇವಳಿಗೆ ಎಷ್ಟು ಹೇಳಿದರು ಈ ಹೊಸ ವ್ಯವಸ್ಥೆಯ ಬದಲಾವಣೆಗಳನ್ನು ಅರ್ಥ ಮಾಡಿಸಲು ಯಾರಿಂದಲೂ ಆಗುತ್ತಿರಲಿಲ್ಲ. ಅವಳ ದಾಖಲೆಗಳಲ್ಲಿದ್ದ ಲೋಪಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರೆ “ಹಿಂದೆಲ್ಲಾ ಹಿಂಗಾಗಲಿಲ್ಲ, ಎಲ್ಲಾ ಸರಿಗೆ ಇತ್ತು. ಈಗ್ಯಾಕೆ ಹಿಂಗ್ ಮಾಡಾರು” ಎಂದು ತನ್ನ ಕೊಳೆ ತುಂಬಿದ ತಲೆಯ ಕೆರೆಯುತ್ತಿದ್ದಳು. ಅವಳ ಪ್ರಕಾರ ಈ ದಾಖಲೆಯಲ್ಲಿರುವುದು ಮತ್ತು ತಾನು ಎಲ್ಲವೂ ಒಂದೇ ಆಗಿದ್ದು, ಅದಕ್ಕೆ ತನಗಿಂತ ಜೀವಂತ ಸಾಕ್ಷಿಬೇಕೆ ಎಂಬುದು ಅವಳ ವಾದವಾಗಿತ್ತು. ಇದನ್ನು ಹಲವರ ಮುಂದೆ ಮಂಡಿಸಿದಳಾದರು, ಅವರಲ್ಲಿ ಇದಕ್ಕೆ ಸಮರ್ಥ ಉತ್ತರವಿರಲಿಲ್ಲ. ಅದರಲ್ಲೂ ಸೈಬರ್ ಸೆಂಟರ್‌ನ ರಮೇಶ ಅಗತ್ಯ ದಾಖಲೆಗಳ ತಿದ್ದುಪಡಿಗೆ ಈ ಸರೋಜಮ್ಮ ಪಡುತ್ತಿರುವ ಪಾಡು ನೋಡಿದವನು “ಥೂ ಈ ಸರ್ಕಾರದವ್ರು ಮಾಡೋದು ಒಂದೊಂದಲ್ಲಾ. ಇಲ್ಲಿ ವ್ಯಕ್ತಿ ಮುಖ್ಯನಾ? ದಾಖಲೆ ಮುಖ್ಯನಾ ಅನ್ನೋದು ದೊಡ್ಡ ತಲೆ ನೋವು” ಎಂದರೆ ಸರೋಜಮ್ಮ “ನಾನೇ ಜೀವಂತ ಇದೀನಿ ನಾನೀರೋಕೆ ಕಾಗಜ ಕೊಡು ಅಂದ್ರೇ ಏನ್ ಮಾಡೋದು” ರಮೇಶ “ದಾಖಲೆ ತಂದು ಕೊಡೋದು” ಸರೋಜಮ್ಮ “ತಗೋ ಇಲ್ಲಾ ಆದವಲ್ಲಾ” ಎಂದು ತನ್ನ ಅಷ್ಟು ದಾಖಲೆಗಳ ಅವನ ಮುಂದೆ ಒಡ್ಡುತ್ತಲೆ ರಮೇಶ ಅವುಗಳ ಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸಿದ. ಯಾವುದೋ ಬಡಪೆಟ್ಟಿಗೆಯೊಳಗೆ ಕುಳಿತು ಈಗಷ್ಟೇ ಎದ್ದು ಬಂದಂತ್ತಿದ್ದ ಅವುಗಳ ಮೇಲೆ ಜಿರಳೆಗಳ ಮಾರಕದಾಳಿಯಾಗಿತ್ತು. ಸಾಧ್ಯವಾಗುವ ಕಡೆಯಲ್ಲಿ ಅವು ಇವುಗಳನ್ನು ತಿಂದು ಉಳಿಸಿದ್ದವು. ಸಾಸಿವೆಕಾಳಿನ ಗಾತ್ರದ ಒಂದಷ್ಟು ಗಲೀಜು ಅವಳು ಪ್ಲಾಸ್ಟಿಕ್ ಕವರ್‌ನೊಳಗೆ ಕುಳಿತಿತ್ತು. ಪುಣ್ಯವೆಂದರೆ ಬರೀಯ ಕಾಗದವನ್ನು ಅವುಗಳಿಗೆ ಪೂರ್ತಿ ತಿನ್ನಲಾಗಿರಲಿಲ್ಲ. ಆದರೆ, ಸಾಕಷ್ಟು ರುಚಿ ನೋಡಿ ಅದರ ಅಸಲಿಯತ್ತನ್ನೆ ಬದಲಿಸಿದ್ದವು. ರಮೇಶನಿಗೆ ಇವುಗಳ ನೋಡುತ್ತಲೆ ಇದೆಲ್ಲಾ ಯಾವ ಕಾಲದವೋ ಅನಿಸಿ ಅವನ ಮುಂದಿದ್ದ ಟೇಬಲ್ ಕ್ಷಣಾರ್ಧದಲ್ಲೆ ಕಸದ ತೊಟ್ಟಿಯಾಯಿತು. ಗಿರಾಕಿಗಳು ಬರುವ ಹೊತ್ತಿನಲ್ಲಿ ಈ ಅವಸ್ಥೆ ಕಂಡವನು ಸರೋಜಮ್ಮನ ಮೇಲೆ ಕೋಪ ಬಂದು “ಅವ್ರಗೆ ಬೇಕಾಗಿರೋದು ಸರಿಯಾದ ದಾಖಲೆ ನಿನ್ನ ಈ ಕಸ ಅಲ್ಲ. ಕೊಟ್ರೆ ನಿನ್ನ ಕೆಲ್ಸ ಆಗ್ತಾದೆ. ಇಲ್ಲ ಎಲ್ಲಾ ಬಿಟ್ಟು ತೆಪ್ಪಗೆ ಮನೆಲೀರು” ಎಂದು ರೇಗಿದ. ಅವಳು ಮರುಮಾತನಾಡದೆ ತಬ್ಬಿಬ್ಬಾದಳು. ಅವನು ಕಸಪೊರಕೆ ಹಿಡಿದು ಆ ಗಲೀಜನ್ನು ಸ್ವಚ್ಚ ಮಾಡಲು ಮುಂದಾದ.
ಸುಮಾರು ಎರಡು ತಿಂಗಳಿನಿಂದ ಸರೋಜಮ್ಮನಿಗೆ ಪಡಿತರ ಕೊಡಲು ನಿಲ್ಲಿಸಲಾಗಿತ್ತು. ಇದಕ್ಕೆ ಕಾರಣ ಅವಳ ಪಡಿತರಕ್ಕೆ ಆಧಾರ ಕಾರ್ಡ್ ಲಿಂಕ್ ಆಗಿದ್ದು, ಅದು ಆಪ್‌ಡೇಟ್ ಆಗಿರಲಿಲ್ಲ ಮತ್ತು ಬಯೋ ಮೆಟ್ರಿಕ್‌ನಲ್ಲಿ ಅವಳ ಯಾವ ಬೆಟ್ಟಿನ ಗುರುತುಗಳು ಸಿಗದೆ, ಇತ್ತ ಆಧಾರ್‌ಕಾರ್ಡ್ಗೆ ಮೊಬೈಲ್ ಸಂಖ್ಯೆ ಸೇರಿಸದ ಕಾರಣ ಓಟಿಪಿಯು ಬರದೆ ಅಕ್ಕಿ ಪಡೆದುಕೊಳ್ಳಲು ವಿಫಲವಾಗಿದ್ದಳು. ಇನ್ನೂ ಪಡಿತರ ಕೇಂದ್ರದ ಮುಂದೆ ತಾಸುಗಟ್ಟಲೆ ನಿಂತು ಅಕ್ಕಿ ಸಿಗದೆ ನಿರಾಶೆಯಿಂದ ತನ್ನ ಕೈಬೆರಳುಗಳ ನೋಡಿಕೊಂಡಳು. ಅವು ನಿರಂತರವಾಗಿ ಇವಳು ಮಾಡುತ್ತಿದ್ದ ಮನೆಕೆಲಸದ ತೊಳೆದು, ಉಜ್ಜುವಿಕೆಯಿಂದ ಸಂಪೂರ್ಣ ಸವೆದು ಬೇಕಾದ ಗುರುತಿನಿಂದ ಮಾಯವಾಗಿದ್ದವು. ಹಿಂದೆಲ್ಲಾ ಯಾರು ಇರದ ವೇಳೆಯಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಕೊನೆಗೆ ಬೆಟ್ಟು ಬರಲು ಸಫಲವಾಗಿ ಅಕ್ಕಿ ಪಡೆಯುತ್ತಿದ್ದಳು. ಆದರೆ, ತಿಂಗಳುಗಳು ಉರುಳಿದಂತೆ ಅವಳ ಕೈಬೆರಳುಗಳನ್ನು ಎಷ್ಟೇ ಗೋಡಗೆ ಉಜ್ಜಿದರು, ವಿಕ್ಸ್‌ನಿಂದ ತೀಡಿದರು ಬಯೋಮೆಟ್ರಿಕ್‌ನಲ್ಲಿ ಅವುಗಳ ಪತ್ತೆಯೇ ಇರಲಿಲ್ಲ. ಇದಕ್ಕೆ ಪಡಿತರದ ಅಂಗಡಿಯವನು ಆದಷ್ಟು ಪ್ರಯತ್ನಿಸಿ ಅದು ಸಾಧ್ಯವಾಗದಿರುವಾಗ “ನಿನ್ನ ಬೆಟ್ಟುಗಳೆಲ್ಲಾ ಸಮದು ಹೋಗಾದೆ. ಇನ್ನು ಈ ಬೆಟ್ಟು ಬರೋದು ಆಗಾದೆ ಇರೋ ಕೆಲ್ಸ. ನೀನು ತಾಲ್ಲೂಕು ಆಫೀಸ್‌ಗೆ ಹೋಗಿ ಈ ಆಧಾರ್ ಕಾರ್ಡ್ಗೆ ನಿನ್ನ ಮೊಬೈಲ್ ನಂಬರ್ ಲಿಂಕ್ ಮಾಡಿಸಿಕೊಂಡು ತಗೋ ಬಾ ಆಗಾ ಓಟಿಪಿ ಬತ್ತುದೇ ಅಕ್ಕಿ ಕೊಡ್ತೀನಿ” ಎಂದು ಹೇಳಿದ್ದ. ಅಲ್ಲಿಂದ ಸರೋಜಮ್ಮನ ಕೆಲಸ ತಾಲ್ಲೂಕು ಕಛೇರಿ ಅಲೆಯುವುದಾಯಿತು. ಹಾಗೆ ಉದ್ದೇಶ ಪೂರ್ವಕವಾಗಿ ಯಾರೋ ಸರೋಜಮ್ಮ ಸತ್ತು ಹೋಗಿರುವಳೆಂದು ಇಲಾಖೆಗೆ ತಪ್ಪು ಮಾಹಿತಿ ನೀಡಿ ಅವಳ ಪಿಂಚಣಿಯನ್ನು ರದ್ದುಗೊಳಿಸಿದ್ದರು. ಈ ಸುದ್ದಿ ತಿಳಿದು ತಾನು ಬದುಕಿರುವೆನೆಂದು ಬಾಯಿ ಬಡಿದುಕೊಂಡಳಾದರು, ಇದನ್ನು ಆ ಇಲಾಖೆಯ ಮಟ್ಟದಲ್ಲೆ ಸರಿಪಡಿಸಬೇಕಾದ ಕಾರಣ ಅದು ಇವಳಿಂದ ಅಗತ್ಯ ದಾಖಲೆಗಳ ಕೇಳಿತ್ತು. ಅದಕ್ಕೂ ಇವಳ ಅಪ್‌ಡೇಟ್ ಆದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಹಣ ವರ್ಗಾವಣೆ ಮಾಡಲು ಅಕೌಂಟ್ ನಂಬರ್ ಬೇಕಾಗಿತ್ತು. ಇದಕ್ಕಾಗಿ ಸರೋಜಮ್ಮ ಇಷ್ಟೊಂದು ಪರದಾಡುತ್ತಿದ್ದಳು. ಈ ಪಡಿತರ ಮತ್ತು ಪಿಂಚಣಿ ಇವೆರೆಡು ಸದ್ಯಕ್ಕೆ ಅವಳ ಬದುಕಿನ ಬಹುಮುಖ್ಯ ಆಧಾರವಾಗಿದ್ದು ಇದರಿಂದಲೆ ಅವಳು ಜೀವ ಹಿಡಿದು ಬದುಕಿದ್ದಳು. ತನ್ನ ಆರೋಗ್ಯವಿದ್ದು ದೇಹದಲ್ಲಿ ಶಕ್ತಿಯಿರುವತನಕ ಅವರಿವರ ಮನೆಗಳಲ್ಲಿ ಮನೆಕೆಲಸ ಮಾಡಿದವಳು ಶಕ್ತಿ ಸೋಲುತ್ತಲೆ ಮೂಲೆ ಸೇರಿದ್ದಳು. ಇವಳ ನೋಡಿಕೊಳ್ಳಲು ಗಂಡ, ಮಕ್ಕಳೆಂದು ಯಾರು ಇರಲಿಲ್ಲ. ಗಂಡ ತೀರಿ ಹೋಗಿ ಬಹಳ ವರ್ಷಗಳೇ ಕಳೆದಿತ್ತು. ಇದ್ದೊಬ್ಬ ಮಗಾ ಎಲ್ಲೋ ಇರುವನೆಂಬ ಭರವಸೆಯ ಹೊರತು, ನಾಲ್ಕಾರು ವರ್ಷಗಳಿಂದ ಅವನ ಮುಖದರ್ಶನವಾಗಿರಲಿಲ್ಲ. ಅವನಿಗೆ ಒಂದು ಮದುವೆ ಮಾಡಿದ್ದಳಾದರು, ಅವನು ಕಲಿತ ಚಟಗಳಿಂದ ಆಗಾಗ ಹೆಂಡತಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಆಕೆ ಸಹಿಸುವುತನಕ ಸಹಿಸಿದವಳು ಕೊನೆಗೆ `ಈ ಹಾಳದ್‌ವ್ನ ಬಾಳು ಇಷ್ಟೇ. ಇವನಿಂದ ನನ್ಗೆ ಸುಖವಿಲ್ಲ’ ಎಂದು ಇನ್ನೊಬ್ಬನೊಂದಿಗೆ ಓಡಿ ಹೋಗಿದ್ದಳು. ಇದರಿಂದೆ ಅವಳು ಸಾಕಷ್ಟು ಚಿಂತಿಸಿ ಈ ನಿರ್ಧಾರ ಕೈಗೊಂಡಿದ್ದಳು. ಅವಳಿಗೆ ಇತ್ತ ಗಂಡನ ಕಾಟ ಹೀಗಾದರೆ, ಅತ್ತ ಅತ್ತೆ ಸರೋಜಮ್ಮನ ಕಾಟ ಇನ್ನೊಂದು ತರವಾಗಿತ್ತು. ಕಂಡಕಂಡವರ ಬಳಿ `ಇವ್ಳ ಕಟ್ಕಂಡೇ ನನ್ಮಗ ಹಾಳಾದ. ಗೊಡ್ಡದನ ಇವಳು’ ಎಂದು ಹೇಳಿಕೊಂಡು ತಿರುಗುತ್ತಿದ್ದಳು. ಈ ವಿಚಾರವಾಗಿ ಅತ್ತೆ, ಸೊಸೆಯ ನಡುವೆ ಬೀದಿರಂಪಾಟಗಳು ತುಂಬಾ ನಡೆದಿದ್ದವು. ಇಲ್ಲಿ ಒಬ್ಬರು ಮತ್ತೊಬ್ಬರನ್ನು ವಾಚಾಮಗೋಚರ ಬೈದುಕೊಂಡು ತಮ್ಮೊಳಗಿನ ಸಿಟ್ಟು, ಅಸಹನೆ, ಸಂಕಟಗಳ ಹೊರಹಾಕಿ ತಣ್ಣಗೆ ಆಗುತ್ತಿದ್ದರು.
ಇನ್ನೂ ಅತ್ತೆಯ ಈ ಗೊಡ್ಡು ಎನ್ನುವ ಮಾತು ಕೇಳೆ ಕೆರಳಿದ ಸೊಸೆ ಅವಳ ಮಗನ ಕೊರತೆಯ ಎತ್ತಿ ತೋರಿಸಲು ರಾತ್ರಿ ಅವನು ಬರುವತನಕ ಕಾದು ಜಗಳಕ್ಕೆ ಇಳಿಯುತ್ತಿದ್ದಳು. ಅವನು ಕುಡಿದು ಬಂದಿದ್ದರಿಂದ ಯಾವುದೇ ಪೌರುಷ ತೋರಿಸದೆ ಮೆತ್ತಗೆ ಮುದುರಿ ಮಲಗಿ ಬಿಡುತ್ತಿದ್ದ. ಇದ ಕಂಡ ಸೊಸೆ “ಇಂಥಾ ನಾರ್ಮಧ್ನಾ ತಂದು ನನ್ನ ಕೊರಳಿಗೆ ಕಟ್ಟೋ ಬದ್ಲು ಒಂದು ಗುಂಡುಕಲ್ಲು ಕಟ್ಟಿದ್ರೆ ಆಯ್ತಿತ್ತು. ಕೆಟ್ಟು ಬೀಜನಾ ತಂದು ಭೂಮಿನಾ ಅನ್ನೋದಲ್ಲ” ಎಂದು ಗಟ್ಟಿಯಾಗಿ ಕಿರುಚುತ್ತ ಇಂಥವನ ಕಟ್ಟಿಕೊಂಡು ತಾನು ಅನುಭವಿಸುತ್ತಿರುವ ನರಕಯಾತನೆಯನ್ನು ಹೊರಗೆ ಹಾಕುತ್ತಿದ್ದಳು. ಸರೋಜಮ್ಮನಿಗೆ ತನ್ನ ಮಗನಾ ಈ ಲೋಪ ಕಾಣುತ್ತಲೆ ಬೇರೆ ವಾಕ್ಯಗಳು ಬಾಯಿಂದ ಹೊರಡುತ್ತಿರಲಿಲ್ಲ. ಸೊಸೆಯನ್ನು ಈ ವಿಚಾರವಾಗಿ ಕೆಣಕಿದಷ್ಟು ತನ್ನ ಮಾನಗೇಡೆಂದು ತೆಪ್ಪಗಾದಳು. ಹಾಗೆ ಸೊಸೆಯ ಸಹಜ ದೇಹ ಬಯಕೆಗಳು ಉರಿಯುವತನಕ ಉರಿದು ಕೊನೆಗೆ ಸಿಕ್ಕದ್ದಕ್ಕೆ ಹಬ್ಬಿಕೊಳ್ಳುವ ಬಳ್ಳಿಯಂತಾಗಿತ್ತು. ಇದರಿಂದ ಅವಳು ಮತ್ತೊಬ್ಬನೊಂದಿಗೆ ಸಂಗ ಬೆಳೆಸಿದ್ದಳು. ಅದು ಎದುರು ಮನೆಯ ಹೊಸ ಕಟ್ಟಡ ನಿರ್ಮಾಣದ ಕರ‍್ಯಕ್ಕೆ ಬಂದಿದ್ದ ಗಾರೆ ಕೆಲಸದವನ ಜೊತೆಗೆ. ಅವನು ಎಲ್ಲಿಂದಲೋ ಇಲ್ಲಿಗೆ ಕೂಲಿಗೆ ಬಂದವನು ಇಲ್ಲಿ ಸುಲಭಕ್ಕೆ ಸಿಕ್ಕವಳನ್ನು ಅಂಟಿಕೊಂಡ. ದಿನನಿತ್ಯ ಈ ಸಂಸಾರದ ರಂಪಾಟಗಳ ನೋಡುತ್ತಿದ್ದವನು, ಸಮಾಧಾನ ಮಾಡುವ ನೆಪದಲ್ಲಿ ಬಂದು ಇವಳಿಗೆ ಹತ್ತಿರವಾಗಿದ್ದ. ಈ ಆಪ್ತತೆ ಮುಂದೆ ಸಲಿಗೆಯಾಗಿ ಬೆಳೆದು ಹೊಸ ಸಂಬಂಧವಾಗಿ ರೂಪ ಪಡೆದಿತ್ತು. ಊರಿನಲ್ಲಿ ಈ ವಿಷಯ ಎಲ್ಲರಿಗೂ ತಿಳಿಯಲು ಕೊನೆಗೆ ಅವಳು ಇಲ್ಲಿದ್ದರೆ ಬೇಡದ ಪ್ರಸಂಗಗಳು ಎದುರಾಗಿ ಬೇಡದ ಮಾತುಗಳು ಬಂದು ನೆರಹೊರೆಯವರೊಂದಿಗೆ ವೈಶಮ್ಯ ಶುರುವಾಗುತ್ತದೆ ಎಂದು ಚಿಂತಿಸಿದಳು. ಆ ನಂತರ ಇನ್ನೂ ಇಲ್ಲಿರಲಾರದೆ ಅವನೊಂದಿಗೆ ಎಲ್ಲಾದರು ದೂರ ಹೋಗುವ ಗಟ್ಟಿ ನಿರ್ಧಾರ ಮಾಡಿ ಒಂದು ರಾತ್ರಿ ಸರೋಜಮ್ಮನ ಬಳಿಯಿದ್ದ ಹಳೇಯ ಪುಡಿಗಾಸು ಚಿನ್ನವನ್ನು ಕದ್ದು ತನ್ನ ಪ್ರಿಯಕರನೊಂದಿಗೆ ಜಾಗ ಖಾಲಿ ಮಾಡಿದ್ದಳು.
ಈ ಘಟನೆಯನ್ನು ಸರೋಜಮ್ಮ ಬಾಯಿಬಾಯಿ ಬಡಿದುಕೊಂಡು ದೊಡ್ಡದಾಗಿ ಕೂಗುತ್ತ ಅವಳನ್ನು, ಅವಳ ಪ್ರಿಯಕರನನ್ನು ಹೀನಾಮಾನ ಬೈದು ಶಾಪವಾಕಿ ನಟಿಕೆ ಮುರಿದಿದ್ದಳು. ತನ್ನ ಮಗನ ನ್ಯೂನತೆ ಅರಿವಾದ ನಂತರ ಇವರಿಬ್ಬರ ಸಂಬಂಧದ ಬಗ್ಗೆ ಅವಳಿಗೆ ಒಳ ಮನದಲ್ಲಿ ಯಾವುದೇ ತಕರಾರಿಲ್ಲದೆ ಹೋದರು, ಓಡಿ ಹೋಗುವವಳು ಆಪತ್ತ್ ಕಾಲಕ್ಕೆಂದು ತವರಿನ ನೆನಪಿಗಾಗಿ ಇಲ್ಲಿಯತನಕ ತನ್ನ ಗಂಡ, ಮಗನಿಗೂ ತೋರಿಸದೆ ಬಿಚ್ಚಿಟ್ಟುಕೊಂಡಿದ್ದ ತನ್ನ ಪುಡಿ ಒಡವೆಯನ್ನು ಯಾವುದೋ ಹಳೆಯ ಜಿದ್ದಿನಿಂದ ಕದ್ದು ಹೋಗಿದ್ದು ಮಾತ್ರ ಸಹಿಸಿಕೊಳ್ಳಲಾಗಲಿಲ್ಲ. ಅವಳು ದುರುದ್ದೇಶದಿಂದಲೆ ಹೀಗೆ ಮಾಡಿ ಹೋಗಿದ್ದಾಳೆಂದು ಸಿಕ್ಕರೆ ಅವಳ ಪೊಲೀಸರಿಗೆ ಹಿಡಿದು ಕೊಡುವ ಮಾತಾಡುತ್ತಿದ್ದಳು. ಸೊಸೆಗೆ ಸರೋಜಮ್ಮ ಬಚ್ಚಿಟ್ಟು ಆಗಾಗ ಪರೀಕ್ಷಿಸಿಕೊಳ್ಳುತ್ತಿದ್ದ ಈ ಚಿನ್ನದ ಮೇಲೆ ಯಾವಾಗಲೊ ಕಣ್ಣಿತ್ತು. ಅವಳು ಎಷ್ಟು ಕೇಳಿಕೊಂಡರು ಇವಳು ತೋರಿಸಿರಲಿಲ್ಲ. ಇದರಿಂದ ಅವಳಿಗೆ ಈ ಗಂಟಿನ ಮೇಲಿನ ಮೋಹ ಅತಿಯಾಗಿ ಅದೊಂದು ದೊಡ್ಡ ಮೊತ್ತವಾಗಬಹುದೆಂದು ಭಾವಿಸಿದ್ದವಳಿಗೆ ಅದನ್ನು ಕದ್ದು ತಂದು ಪೊಟ್ಟಣದಿಂದ ಬಿಡಿಸಿ ನೋಡಲು ಬೇಸರವಾಯಿತು. ಅದು ಬಿಳಿಚಿನ್ನವಾಗಿದ್ದು ಅದನ್ನು ಮಾರಿದರೆ ಬರುವ ಹಣ ಎಲ್ಲಿಗೂ ಎಟಕುತ್ತಿರಲಿಲ್ಲ. ಆದ್ದರಿಂದ ಇದನ್ನು ಮತ್ತೆ ಹಿಂತಿರುಗಿಸಲು ಹೋದರೆ ಈಗಾಗಲೇ ಕೆರಳಿ ಕೆಂಡವಾಗಿರುವ ಸರೋಜಮ್ಮನಿಂದ ಆಗುವ ಫಜೀತಿಗಳಿಗೆ ಹೆದರಿ ಸುಮ್ಮನೆ ಜತೆಗೆ ಕೊಂಡೊಯ್ದಿದ್ದಳು. ಮಗ ಈ ಘಟನೆಯಿಂದ ಹಲ್ಲು ಮಸೆದು ಸಿಕ್ಕರೆ ಹೆಂಡತಿಯನ್ನು ಕಡಿದು ತುಂಡು ಮಾಡಿ ಹೊಳೆಗೆ ಎಸೆಯುವುದಾಗಿ ಕುಣಿದಾಡಿದವನು ವಾರಗಳು ಕಳೆಯುತ್ತಲೆ ಮಂಕಾಗಿದ್ದ. ಅವನಿಗೆ ಅವಳ ಮೇಲೆ ಆಸ್ತಕಿ ಮತ್ತು ಆಸ್ಥೆ ಎರಡು ಇರಲಿಲ್ಲ. ಹೆಸರಿಗಷ್ಟೇ ಹೆಂಡತಿ ಮಾಡಿಕೊಂಡು ಸಾಧ್ಯವಾದಾಗ ತನ್ನ ಪುರುಷಾಂಹಕಾರವನ್ನ ಅವಳ ಮೇಲೆ ತೋರಿಸುತ್ತಿದ್ದ. ಇದರ ಹೊರತು ಜವಾಬ್ದಾರಿಯುತವಾಗಿ ದುಡಿದು ತಂದು ಅವಳ ಸಾಕಬೇಕು, ಸಂಸಾರ ನಡೆಸಬೇಕೆನ್ನುವ ಯಾವ ಇರಾದೆಯು ಅವನಿಗಿರಲಿಲ್ಲ. ಇದಕ್ಕೆ ಸರೋಜಮ್ಮ ಮಗನ ಈ ಬುದ್ಧಿ ಕಂಡು `ಅಪ್ಪನ ಚಾಳಿ ಎಲ್ಲೋದ್ದು ಥೂ ಬೇವರ್ಸಿ ನನ್ಮಗ್ನೇ’ ಎಂದು ಸಿಟ್ಟಿನಲ್ಲಿ ಉಗಿಯುತ್ತಿದ್ದಳು. ಇಷ್ಟೆಲ್ಲಾದರ ನಡುವೆಯು ಅವಳಿಗೆ ತಾನು ಹೆತ್ತು, ಸಾಕಿಸಲುಹಿದ ಮಗಾ ಎನ್ನುವ ಮಮಕಾರ ಅವನ ಮೇಲಿತ್ತು. ತನ್ನ ಸೊಸೆ ಮೇಲೆ ಅವಳಿಗೆ ಕಿಡಿಕಾರಲಿದ್ದಿದ್ದು ಒಂದೇ ಕಾರಣ. ಅದು ಅವಳು ಇವನನ್ನು ಯಾವ ರೀತಿಯಲ್ಲಾದರು ಸರಿ ತನ್ನ ತೆಕ್ಕೆಯಲ್ಲಿ ಕೆಡವಿಕೊಂಡು ಪಳಗಿಸದೇ ಹೋಗಿದ್ದು. ಹಿಂದೆ ತಾನು ಮದುವೆಯಾದ ಹೊಸತರಲ್ಲಿ ತನ್ನ ಗಂಡನ ಹೀಗೆ ಪಳಗಿಸಿಕೊಂಡು, ಹತೋಟಿಯಲ್ಲಿಟ್ಟುಕೊಳ್ಳಲಾಗದ ಆ ಪ್ರತೀಕಾರಕ್ಕೆ ಸೊಸೆಯ ಮೂಲಕ ತನ್ನ ಮಗನ ಮೇಲೆ ಅದನ್ನ ತೀರಿಸಿಕೊಳ್ಳಲು ಹವಣಿಸಿದ್ದಳು. ಆದರೆ, ಅಪ್ಪ, ಮಗಾ ಇಬ್ಬರು ಈ ಹೆಂಗಸರ ವಿಷಯದಲ್ಲಿ ಬಹಳ ಪಕಡಾಗಳಿದ್ದರು. ದೇಹದ ತೆವಲು ಹತ್ತಿದಾಗ ಮಾತ್ರ ತೀಟೆ ತೀರಿಸಿಕೊಳ್ಳಲು ಸನಿಹ ಸುಳಿದಾಡುತ್ತಿದ್ದವರು, ಆ ನಂತರ ಅಲ್ಲಿಂದ ಇವರ ಹಿಡಿತಕ್ಕೆ ಸಿಗದೆ ಹಾರಿ ಬಿಡುತ್ತಿದ್ದರು. ಕಾಲಕ್ರಮೇಣ ಈ ಚಪಲಗಳು ಕಡಿಮೆಯಾಗುತ್ತಲೆ ತಾವು ಕಲಿತ ಇತರೆ ದುಶ್ಚಟಗಳಿಗೆ ಸಂಪೂರ್ಣವಾಗಿ ಮೈ, ಮನಸ್ಸುಗಳ ಒಪ್ಪಿಸಿ ಸಂಸಾರದ ಜವಾಬ್ದಾರಿಗಳಿಂದ ಹೊರಗೆ ಉಳಿದೇ ಅವನತಿ ಹೊಂದಿದ್ದರು.
ಈ ಸೊಸೆ ಹೋದ ದುಃಖ ಮನೆಯಲ್ಲಿ ಬಹಳ ದಿನ ಉಳಿಯಲಿಲ್ಲ. ಸರೋಜಮ್ಮ ಅವಳಿಂದ ಇದನ್ನೂ ಎಂದೋ ನಿರೀಕ್ಷಿಸಿದ್ದಳು. ಸೊಸೆ ಗಾರೆಯವನೊಂದಿಗೆ ಬೆಳಸಿದ್ದ ಸಂಬಂಧ ಅವಳಿಗೆ ತಿಳಿದಿತ್ತಾದರು, ಮಗನ ಹೊಣೆಗೇಡಿತನದ ಕಾರಣ ಏನೂ ಮಾಡಲಾಗಲಿಲ್ಲ. ಅವರಿಬ್ಬರು ನಿರ್ಮಾಣ ಹಂತದ ಮನೆಯಲ್ಲಿ ಸಮಯವಾದಗೆಲ್ಲಾ ಕೂಡುತ್ತಿದ್ದರು. ಅತ್ತೆ, ಸೊಸೆಯ ನಡುವೆ ಈ ವಿಷಯಕ್ಕೆ ಹತ್ತಿ ಉರಿಯುತ್ತಿದ್ದು ಬೀದಿಗೆ ಬಿದ್ದರೆ ತನ್ನ ಮಾನ ಹೋಗುವ ಕಾರಣಕ್ಕೆ ಸರೋಜಮ್ಮ ಸಮ್ಮನಿದ್ದಳು. ಸೊಸೆ ಮಾತ್ರ ಇದಕ್ಕೆ ಕೇರ್ ಮಾಡಿರಲಿಲ್ಲ. ಅವಳಿಗೆ ಬದುಕಿನ ಹೊಸ ರುಚಿ ದೊರಕಿತ್ತು. ಇದರಿಂದ ಗಂಡ ಅವಳಿಗೆ ಲೆಕ್ಕಕ್ಕೆ ಬರಲಿಲ್ಲ. ಆ ಗಾರೆಯವನು ಇವಳ ಬೇಡಿಕೆಗಳಿಗೆ ಅನುಗುಣವಾಗಿ ಪ್ರತಿಯೊಂದನ್ನು ಒದಗಿಸುತ್ತಿದ್ದ. ಒಟ್ಟಾರೆ ಈ ಸಂಬಂಧ ಸುಖದ ಆಪೇಕ್ಷೆಯಲ್ಲಿ ಗಟ್ಟಿಯಾಗಿತ್ತು. ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ. ಸರೋಜಮ್ಮ ಕಾಲದಿಂದಲೂ ತನ್ನ ಸಾಕಿಕೊಳ್ಳುವಷ್ಟು ದುಡಿಯುತ್ತಿದ್ದರಿಂದ ಅವಳು ಯಾರ ಮೇಲೂ ಅವಲಂಬಿಸಿರಲಿಲ್ಲ. ವಾಸಿಸಲು ಸ್ವಂತಕ್ಕೆ ಅಷ್ಟು ಅಗಲ ನೆಲೆಯಿದ್ದು, ಅದನ್ನು ತಗಡು, ಸಿಮೆಂಟ್‌ನಿಂದ ಸಮಸ್ಯೆಯಾದಾಗ ತಾನೇ ದುರಸ್ಥಿ ಮಾಡಿಕೊಳ್ಳುತ್ತಿದ್ದಳು. ಗಂಡನ ಕಡೆಯಿಂದ ಅವಳಿಗಾದ ಏಕೈಕ ಉಪಕಾರವೆಂದರೆ ಅದು ಈ ಮನೆಯನ್ನು ಅವನು ತನ್ನ ಚಟಗಳಿಗೆ ಬೇರೆಯವರಿಗೆ ಮಾರಿಕೊಳ್ಳದೇ ಉಳಿಸಿ ಹೋಗಿದ್ದಾಗಿತ್ತು. ಇನ್ನೂ ಅವನು ಈ ಸಂಸಾರದಲ್ಲಿ ದುಡಿದು ತಂದು ಸಾಕುವುದೆಲ್ಲ ಎಂದೂ ಮುಗಿದ ಅಧ್ಯಾಯ. ಈ ಕಾರಣಕ್ಕೆ ಗಂಡ, ಮಗ ಇಬ್ಬರು ಉಢಾಳರಾದರು ಅವಳಿಗೆ ಅಂತಾ ಹೊಡೆತ ಕೊಡಲಿಲ್ಲ. ಮುಂದೆ ತನ್ನ ಪಾಲಿಗೆ ಬಂದ ಬದುಕನ್ನ ತನಗಾದಷ್ಟು ಕಳೆಯುವುದು ಅವಳ ಉದ್ದೇಶವಾಗಿತ್ತು. ಮನೆಕೆಲಸ ಮಾಡಿ ತಂದ ಹಣವನ್ನು ಉಳಿಸಿ ಯಾರಾದರು ಸರಿ ತನ್ನ ಹೆಣ ಎತ್ತಿ, ಒಂದು ತಿಥಿ ಮಾಡಲೆಂಬ ಕಾರಣಕ್ಕೆ ಕೂಡಿಟ್ಟಿದ್ದಳು. ಅವಳೊಳಗೆ ಇದನ್ನು ಮಗನೇ ನಿರ್ವಹಿಸಿದರೆ ಚಂದವೆನ್ನುವ ಆಸೆಯಿತ್ತಾದರು, `ಈ ಕಳ್ಳ ಬಡ್ಡಿಮಗಾ ದುಡ್ಡಿನಾಸೆಗೆ ನನ್ನ ಹೆಣಾ ಹೊಳೆಗೆ ಎಸೆದ್ರೇ ಏನ್ ಗತಿ’ ಎಂಬ ಚಿಂತೆಯಿತ್ತು. ಅದಕ್ಕೆ ಮಗನಿಂದ ತನ್ನ ಈ ಹಣವನ್ನು ಭದ್ರವಾಗಿ ಬಚ್ಚಿಡಲು ಬ್ಯಾಂಕ್‌ನಲ್ಲಿ ಪರಿಚಿತರ ಸಹಾಯದೊಂದಿಗೆ ಉಳಿತಾಯ ಖಾತೆ ತೆರೆದು ತಿಂಗಳ ಸಂಬಳದಲ್ಲಿ ಉಳಿದ ಹಣವನ್ನು ಅಲ್ಲಿಗೆ ಜಮಾ ಮಾಡುತ್ತಿದ್ದಳು. ಮನೆಯಲ್ಲಿದ್ದರೆ ಇಷ್ಟೊತ್ತಿಗೆ ಮಗಾ ಸರೋಜಮ್ಮನ ಮೇಲೆ ದಾಳಿ ಮಾಡಿಯಾದರು ಸರಿ ಅದನ್ನು ವಶಪಡಿಸಿಕೊಂಡವನು ವಾರಗಳತನಕ ನೆಶೆಯಲ್ಲಿ ತೇಲಾಡಿ ಬಿಡುತ್ತಿದ್ದ. ಇದನ್ನು ಅರಿತೇ ಸರೋಜಮ್ಮ ಬ್ಯಾಂಕ್ ಅನ್ನು ಆರಿಸಿಕೊಂಡಿದ್ದಳು. ಇದಕ್ಕೂ ಅವನು ಮನೆಯಲ್ಲಿ ಜಗಳ ತೆಗೆದು ಕೂಗಾಡಿ, ರೇಗಾಡುತ್ತಿದ್ದನಾದರು ಅವಳು ಕದಲುತ್ತಿರಲಿಲ್ಲ. ಅವನು ತನಗಾದಷ್ಟು ಬೈದುಕೊಂಡು ಹೋಗುತ್ತಿದ್ದ. ಇದರಿಂದ ಸರೋಜಮ್ಮನಿಗೆ ಅವನ ಮೇಲಿನ ಮಗನೆಂಬುವ ಆಸೆ ದೂರ ಸರಿಯುತ್ತಿತ್ತು. ತನ್ನ ಪರಿಚಿತರ ಬಳಿ “ಈ ನರಜನ್ಮ ಇನ್ಯಾವ ಜನ್ಮಕ್ಕೂ ಬೇಡಕಪ್ಪೊ. ಒಂದು ಹುಳವಾಗಿ ಹುಟ್ಟಿದ್ದರು ಪರವಾಯಿಲ್ಲ. ನಿಮ್ಮಂಥ ಧರ್ಮಾತ್ಮರ‍್ರು ನಾಲ್ಕಾಜನ ಸೇರಿ ನನ್ನ ಹೆಣಾ ಎತ್ತಿಸಿ ಬುಡ್ರೀ ಸಾಕು. ಇದ್ಯಾವ ಬಾಳಾಟ ಮಾಡೋಕೆ ಹುಟ್ಟಿದ್ನೋ ಪಾಪಮುಂಡೇ ನಾನು” ಎಂದು ಕಣ್ಣೀರಾಗುತ್ತಿದ್ದಳು. ಇವಳ ಈ ದುಃಖ ಕೇಳುಗರ ಮನಕಲಕುತ್ತಿತ್ತು.
ಈ ಕಾರ್ಡ್‌ಗಳ ತಿದ್ದುಪಡಿ ಪ್ರಕ್ರಿಯೆಗಳು ತೀರಾ ಸರಳವಾಗಿರಲಿಲ್ಲ. ಅವು ಕೂಡ ಬದಲಾವಣೆಗೆ ಸೂಕ್ತವಾದ ಕೆಲ ದಾಖಲೆಗಳ ಬೇಡುತ್ತಿದ್ದವು. ಮೊದಲಿಗೆ ಆಧಾರ್‌ಕಾರ್ಡ್‌ನ ತಿದ್ದುಪಡಿ ಕೆಲಸವಾಗಬೇಕಿತ್ತು ಆ ನಂತರ ಉಳಿದವುಗಳ ಸರದಿ. ಈ ಸಂದರ್ಭದಲ್ಲಿ ಆಧಾರಕಾರ್ಡ್ ತಿದ್ದುಪಡಿ ಕೇಂದ್ರಗಳನ್ನ ನೋಡಿದರೆ ಸಾಕು ಸರೋಜಮ್ಮನಿಗೆ ಬವಳಿ ಬಂದಂತೆ ಆಗಿತ್ತು. ಅಷ್ಟು ಉದ್ದದ ಸಾಲು. ಜನ ಬೆಳಿಗ್ಗೆ ಆರಕ್ಕೆಲ್ಲಾ ಬಂದು ಟೋಕನ್ ತೆಗೆದುಕೊಳ್ಳಲು ಕ್ಯೂ ನಿಲ್ಲುತ್ತಿದ್ದರು. ದಿನಕ್ಕೆ ಇಂತಿಷ್ಟೆ ಜನರಿಗೆ ಈ ಟೋಕನ್‌ಗಳು ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ. ಸರೋಜಮ್ಮ ಮಂಡಿನೋವಿನ ನಡುವೆಯೇ ಈ ಟೋಕನ್‌ಗಾಗಿ ಒಂದೆರೆಡು ದಿನ ಬಂದು ಈ ದಟ್ಟ ಜನಸಂದಣಿಯ ನಡುವೆ ಅದು ಸಿಗದೆ ನಿರಾಶೆಯಾಗಿದ್ದಳು. ಈ ಊರಿನಲ್ಲಿ ಬೇರೆ ಆಧಾರ್ ಕೇಂದ್ರ ತೆರೆಯಲಾಗದ ಕಾರಣ ಒಂದಕ್ಕೆ ಎಲ್ಲಾ ಮುಗಿಬಿದ್ದಿದ್ದರು. ಸಣ್ಣ ಮಕ್ಕಳಿಗೆ ಹೊಸ ಆಧಾರ್ ಕಾರ್ಡ್ ಮಾಡಿಸಲು, ತಪ್ಪಿದ್ದರೆ ತಿದ್ದುಪಡಿ ಮಾಡಿಸಲು, ಹಾಗೆ ಸರ್ಕಾರದ ಹೊಸ ಸವಲತ್ತುಗಳ ಪಡೆದುಕೊಳ್ಳಲು ಮೊಬೈಲ್ ನಂಬರ್ ಲಿಂಕ್ ಆಗಿ ಅದು ಅಪ್‌ಡೇಟ್ ಆಗಿರಬೇಕಿತ್ತು. ಈ ಕಾರಣಗಳಿಂದ ಆಧಾರ್ ಕೇಂದ್ರಗಳು ಗದ್ದಲದ ಗೂಡಾಗಿದ್ದವು. ಜನಸಂದಣಿಯಲ್ಲಿ ನೂಕಾಟ, ತಳ್ಳಾಟಗಳಾಗುತ್ತ ಕೆಲವು ಹೆಂಗಸರ ನಡುವೆ ಜಗಳಗಳು ಏರ್ಪಟ್ಟು ಕಾಳಗವೇ ನಡೆದು ಹೋಗುವುದೇನೋ ಎನ್ನುವಾಗ ಸಿಬ್ಬಂದಿ ಬಂದು “ನೀವೀಗೆ ಗಲಾಟೆ ಮಾಡಿದ್ರೆ. ಏನಾದ್ರು ಮಾಡ್ಕಂಡು ಸಾಯ್ರೀ ಅಂತಾ ನಾನು ಬೀಗ ಹಾಕ್ಕೊಂಡು ಹೋಗ್ತೀನಿ ಅಷ್ಟೆ. ಏನ್ ನೀವೇ ಸರೀನಾ ಜನ? ಖಾಲಿ ಬಿದ್ದಾಗ ಯಾರು ಬರಲಿಲ್ಲ. ಈಗಾ ಮುತ್ಕೊಂಡು ನಮ್ಮ ಪ್ರಾಣ ತೆಗಿತೀದ್ದೀರಿ” ಎಂದು ಗದರತ್ತಲೆ ತೆಪ್ಪಗಾಗುತ್ತಿದ್ದರು. ಆದರೆ, ಅವರೊಳಗಿನ ವೈಮನಸ್ಸಿನ ಕಲಹದ ವಿಷ ಮಾತ್ರ ಕರಗುತ್ತಿರಲಿಲ್ಲ. ತಮ್ಮ ಕಾರ್ಯ ಮುಗಿಯುವವರೆಗೂ ಸಿಣಿಸಿಣಿ ಎನ್ನುತ್ತಿದ್ದರು.
ಇದರ ನಡುವೆಯೇ ಸರೋಜಮ್ಮ ದೊಡ್ಡ ಯುದ್ಧ ಗೆದ್ದವಳಂತೆ ಒಂದು ಟೋಕನ್ ಪಡೆದುಕೊಂಡಿದ್ದಳು. ಇದರಿಂದ ಅವಳ ಜೀವಕ್ಕೆ ಎಷ್ಟೋ ಸಮಾಧಾನವಾಗಿತ್ತು. ಟೋಕನ್ ಸಿಕ್ಕರೂ ಅವಳ ಸರದಿಗೆ ಸಂಜೆಯತನಕ ಕಾಯಲೇ ಬೇಕಿತ್ತು. ಅದು ಎರಡು ದಿನದಿಂದ ಇವಳ ಅಲೆದಾಟ ನೋಡಲಾಗದೆ ವಯಸ್ಸಾದವಳೆಂಬ ಕಾರಣಕ್ಕೆ ರಿಯಾಯಿತಿಯಲ್ಲಿ ಈ ದಿನದ ಕೋಟಾ ಮುಗಿದ ಮೇಲೆ ಕೊಟ್ಟ ಒಂದು ಹೆಚ್ಚುವರಿ ಟೋಕನ್ ಅದಾಗಿತ್ತು. ಇದು ಸರೋಜಮ್ಮನ ಮನಸ್ಸಿಗೆ ಹೋಗಲಿಲ್ಲ. ಆ ಕಾರಣ ಅವಳು ಅಂದು ಮರಳಿ ಮನೆಗೆ ಹಿಂತಿರುಗಿ ಸಂಜೆಯ ಹೊತ್ತಿಗೆ ಬರುವ ಪ್ರಯತ್ನ ಮಾಡದೇ ತನ್ನ ಈಗ ಕರೆಯಬಹುದು, ಆಗ ಕರೆಯಬಹುದೆಂದು ಕಾಯುತ್ತ ಕುಳಿತಳು. ಟೋಕನ್ ಸಿಕ್ಕ ಮೇಲೆ ಸರದಿ ಸಾಲಿರಲಿಲ್ಲ. ಕೇಂದ್ರದ ಮುಂದಿನ ಪ್ರಾಂಗಣದಲ್ಲಿ ಎಲ್ಲಾದರು ಕುಳಿತು ಟೋಕನ್ ನಂಬರ್ ಕರೆದವರು ಒಳಗೆ ಹೋಗಬೇಕಿತ್ತು ಅಷ್ಟೆ. ತನ್ನ ಸುತ್ತಲಿನ ಜನ ಸಂದಣಿ ಸಮಯವಾದಂತೆ ಆವಿಯಾಗುವಾಗ ಸರೋಜಮ್ಮ ತನ್ನ ಕರೆಯಲಿಲ್ಲವೆಂದು ಚಡಪಡಿಸುತ್ತಿದ್ದಳು. ಕಾಫಿ, ಟೀಗೆ ಹೊರಬಂದ ಸಿಬ್ಬಂದಿ ಬಳಿ “ಅಪ್ಪಾ ನನ್ನ ಕರಿಲಿಲ್ಲ. ಹೊತ್ತಾರೆನೇ ಬಂದವಳು ನಾನು” ಎನ್ನಲೂ ಅವರು “ಕರೀತಾರೆ ಕುತ್ಕೋ. ಅದ್ನೇ ಸೀಲು ಸೈನ್ ಹಾಕೋ ಕೆಲ್ಸವಾ ನಿಮಿಷಕ್ಕೆ ಮುಗಿಸೋಕೆ” ಎಂದು ಹೋಗುತ್ತಿದ್ದರು. ಅವರಿಗೂ ಈ ವಿಚಿತ್ರ ಜನಗಳ ಜತೆ ಬಡಿದಾಡಿ ತಲೆಕೆಟ್ಟು ಗೊಬ್ಬರವಾಗಿತ್ತು. ಈ ಕಾರಣ ಅವರಿಗೆ ಯಾರ ಮೇಲೂ ಸಹನೆ, ಕರುಣೆ ತೋರಿಸುವ ವ್ಯವಧಾನವಿರಲಿಲ್ಲ. ಸರೋಜಮ್ಮನಿಗೆ ಒಂದೆಡೆ ಹೊಟ್ಟೆ ಹಸಿವು, ಇನ್ನೊಂದೆಡೆ ಅತ್ತ ಹೋದರೆ ಇತ್ತ ಕರೆದರೆನ್ನುವ ಭೀತಿ. ಹೀಗೆ ಮಧ್ಯಾಹ್ನದತನಕ ಕಾಲ ಹಾಕಿದವಳು ಊಟದ ಸಮಯ ಬಂದು ಸಿಬ್ಬಂದಿ ಹೊರ ಹೊರಟಾಗ ತಾನು ಧೈರ್ಯ ಮಾಡಿ ಕೇಂದ್ರದಿಂದ ಆಚೆ ಬಂದವಳು ಆ ಬಿಸಿಲಿನಲ್ಲೆ ಒಂದು ಟೀ, ಎರಡು ಬನ್ನು ತಿಂದು ಹಸಿವಿನ ತೀವ್ರತೆಯ ಕಮ್ಮಿ ಮಾಡಿಕೊಂಡಳು. ಅವಳಿಗೆ ಹೊಟ್ಟೆ ತುಂಬಾ ಹಿಟ್ಟು, ಅನ್ನ ಉಂಡು ಅಭ್ಯಾಸವಿದ್ದ ಕಾರಣ ಇದು ಎಲ್ಲಿಗೂ ಎಟುಕಲಿಲ್ಲ. ಆದರೂ ಗುಟುಕು ಜೀವ ಬಂದಂತೆ ಆಗಲು ತೃಪ್ತಿ ಪಟ್ಟು ಮರದ ನೆರಳಿನ ಕಲ್ಲು ಹಾಸಿನ ಮೇಲೆ ಬಂದು ಕುಳಿತಳು.

ಗಾಳಿ ಬೀಸಿದಂತೆ ಜೀವಕ್ಕೆ ತಣ್ಣಗಾಗಲು ಅವಳ ಕಣ್ಣುಗಳು ಸುತ್ತಲಿನ ವಾತಾವರಣ ಗಮನಿಸಿತು. ಎಲ್ಲಾ ನಾನಾ ಥರದವರು. ತಿದ್ದುಪಡಿಗೆ ಬಂದು ಕಾಯುತ್ತ ಮೊದಲು ಇದೊಂದು ಮುಗಿದರೆ ಸಾಕೆಂದು ಉಸಿರು ತಗೆಯುತ್ತಿದ್ದರು. ಇದೊಂದು ಗುರುತಿನ ಚೀಟಿ ಮನುಷ್ಯನ ಪಾಲಿಗೆ ಇಷ್ಟೊಂದು ಮುಖ್ಯವೇ ಎಂಬ ಪ್ರಶ್ನೆ ಸರೋಜಮ್ಮನ ತಲೆಗೆ ಬಂತು. ಇದಿಲ್ಲವಾದರೆ ಸರ್ಕಾರದ ಯಾವುದೇ ಸೇವೆ, ಸವಲತ್ತುಗಳ ಪಡೆಯಲಾಗದೆಂಬ ನಿಯಮ ತುಸು ಕಠಿಣವೆನಿಸಿತ್ತು. ಜೀವಂತವಾಗಿರುವ ಈ ಮನುಷ್ಯನಿಗಿಂತ ಬರಿಯ ಕಾಗದ, ಪತ್ರಗಳೇ ಈ ರೀತಿ ಸಾರ್ವಭೌಮತ್ವ ಮೆರೆಯುವಾಗ ಮನುಷ್ಯ ಜೀವಕ್ಕೆ ಏನು ಬೆಲೆ ಎಂದುಕೊಂಡಳು. ಎಲ್ಲೋದರು ಬರಿಯ ದಾಖಲೆಗಳೇ ಮುಖ್ಯವಾಗಿರುವಾಗ ಮನುಷ್ಯ ಅದರ ಮುಂದೆ ತೃಣವೆನಿಸಿದ. ತನ್ನ ತಲೆಗೆ ಬಂದಂತೆ ಇದನ್ನೆಲ್ಲ ಯೋಚಿಸುತ್ತ ಕುಳಿತ ಸರೋಜಮ್ಮನಿಗೆ ಸಮಯ ಹೋಗುವುದು ತಿಳಿಯಲಿಲ್ಲ. ಹಾಗೆ ಇವಳೊಬ್ಬ ಹಿರಿಯ ನಾಗರೀಕಳೆಂದು ಉದಾರತೆ ತೋರುವ ಮನಸ್ಸು ಅಲ್ಲಿನ ಯಾರಿಗೂ ಇರಲಿಲ್ಲ. ಈ ಕಾರಣ ಸರೋಜಮ್ಮ ಕಡೆಯಲ್ಲಿ ತನ್ನ ಸರದಿ ಬರುವತನಕ ಕಾಯಲೇಬೇಕಿತ್ತು. ಕಾಯುತ್ತಿದ್ದವರ ಬಳಿ “ನಿಲ್ಲಕ್ಕ ಆಗೋಲ್ಲ ಮಂಡಿನೋವು ವಸಿ ನನ್ನ ಒಳಕ್ಕೆ ಬುಡ್ರವ್ವಾ” ಎಂದು ಕೇಳಿಕೊಂಡರು ಅವರು ಈ ತಿದ್ದುಪಡಿಗಾಗಿ ತಾವು ಪಟ್ಟ ಶ್ರಮ, ಒಂದು ದಿನದ ಮಟ್ಟಿಗೆ ಮಾಡಿರುವ ತ್ಯಾಗಗಳ ಹೇಳಿ “ಅಮ್ಮೋ ನೀನಾದರೆ ಒಬ್ಬಳು ಹೆಂಗೋ ನಡೀತುದೇ. ನಾವು ಮಕ್ಕಳು ಮರಿ ಇರೋರು ಏನ್ ಮಾಡೋದೇಳು? ಬೆಳಿಗ್ಗಿಂದಾ ಸಂಜೆತನಕ ಇಲ್ಲೆ ಆಯ್ತಲ್ಲ. ಇನ್ನೂ ಮನೆಗೆ ಹೋಗಿ ಕೆಲ್ಸ, ಅಡುಗೆ ಮಾಡೋರು ಯಾರು?” ಎಂದು ಸಮಜಾಯಿಷಿಕೊಡುತ್ತಿದ್ದರು. ಇದು ಮುಂದೆ ಸರೋಜಮ್ಮನ ಮಾತನಾಡದ ಹಾಗೆ ತಡೆದಿತ್ತು. ಇದರಿಂದ ಅವಳ ಮಗ ಮತ್ತು ಅವನ ಅಜೀರ್ಣವಾದ ಸಂಸಾರ ನೆನಪಾಯಿತು. ಆ ಸಂಸಾರ ಇದ್ದಿದ್ದರೆ ಇದೇ ರೀತಿ ತೂಗುತ್ತಿತ್ತೇನೋ ಎಂದುಕೊಂಡು ಅದನ್ನು ವಿನಾಕರಣ ಮುರಿದ ವಿಧಿಗೆ ಅಷ್ಟು ಉಗಿದಳು. ಇಳಿವಯಸ್ಸಿನಲ್ಲಿ ತನ್ನ ಈ ನರಕಕ್ಕೆ ತಳ್ಳುವಲ್ಲಿ ಮಗನ ಪಾತ್ರವು ಹಿರಿದಾದ ಕಾರಣ ನೊಂದುಕೊಂಡಳು.
ಕೊನೆಗೂ ಆಧಾರ್ ಕೇಂದ್ರದ ಆವರಣ ಸಂಪೂರ್ಣ ಖಾಲಿಯಾಗಿ ಅದರಲ್ಲಿ ಉಳಿದ ಒಂಟಿ ಮರದಂತೆ ಸರೋಜಮ್ಮ ಒಬ್ಬಳೇ ಉಳಿದಿದ್ದಳು. ಅವಳಿಗೆ ತನ್ನ ಒಳಗೆ ಕರೆಯುತ್ತಲೆ ಖುಷಿಯಾಯಿತು. ಬೆಳಗ್ಗಿನಿಂದ ಕೆಲಸದಲ್ಲಿ ಬೇಸತ್ತ ಸಿಬ್ಬಂದಿಗೆ ಈ ಮುದುಕಿ ಕೊನೆಯವಳೆಂಬ ನಿರಾಳತೆ ಮುಖದಲ್ಲಿ ಮೂಡುತ್ತಲೆ ತುಸು ಚೇತರಿಕೆ ಕಂಡಿತು. ಬಂದ ಸರೋಜಮ್ಮ ತನ್ನ ಸುಕ್ಕುಗಟ್ಟುತ್ತಿದ್ದ ಮುಖದಲ್ಲಿ ನಗು ಅರಳಿಸಿಕೊಂಡು ಎದುರು ಕುಳಿತವನಿಗೆ ಕೈ ಮುಗಿದಳು. ಅವನಿಗೆ ಇವಳ ಈ ವಿಧೇಯತೆ ತುಂಬಾ ಇಷ್ಟವಾಯಿತು. “ಬಾ ಅಜ್ಜಿ ಇಲ್ಲಿ ಕುಂತೋಕೋ” ಎಂದು ಹೇಳಿದ. ಸರೋಜಮ್ಮನಿಗೆ ಅದು ಸರಿಯಾಗಿ ಕೇಳಿಸಲಿಲ್ಲ. ನಿಂತೇ ಇದ್ದಳು. ಅವನು ಮತ್ತೆ ಮುಖ ನೋಡಲು ನಕ್ಕಳು. ಅವನಿಗೆ ಇವಳ ಸಮಸ್ಯೆ ಅರ್ಥವಾದಂತೆ ಸ್ವಲ್ಪ ಜೋರಾಗಿ ಹೇಳಿದ. ಸರೋಜಮ್ಮ ಬಂದು ಕುಳಿತಳು. ಇದೇ ದನಿಯನ್ನು ಮುಂದುವರೆಸಿದ. ಅವಳ ಆಧಾರ್ ಕಾರ್ಡ್ ಪಡೆದು ತಾನೇ ಅರ್ಜಿ ತುಂಬಿಕೊಂಡವನು ಕಡೆಯಲ್ಲಿ ಅವಳಿಗೆ ಸಹಿ ಮಾಡಲು ಬಾರದ ಕಾರಣಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡ. ನಂತರ ಅರ್ಜಿಯಲ್ಲಿ ತುಂಬಲು ಮರೆತ ಮೊಬೈಲ್ ನಂಬರ್ ಕೇಳಲು ಸರೋಜಮ್ಮ ಮಾಸಿದ ಒಂದು ಚೀಟಿ ಕೊಟ್ಟಳು. ಅದು ಇನ್ನೇನೂ ಸಿಗಿದು ನಾಲ್ಕು ಪಾಲಾಗುವುದರಲ್ಲಿತ್ತು. ಅದರಲ್ಲಿ ಮಂಕಾದ ಸಂಖ್ಯೆಗಳ ನೋಡಿ ಅರ್ಜಿಯಲ್ಲಿ ತುಂಬಿಸಿದ. ಸರೋಜಮ್ಮ ತನ್ನ ಕಷ್ಟ ಹೇಳಲು ಶುರುಮಾಡಿದಳು. ಈ ಆಧಾರ್‌ಕಾರ್ಡ್ ತಿದ್ದುಪಡಿಯಾಗದೆ ತನಾಗದ ನಷ್ಟವನ್ನ ಮನಮುಟ್ಟುವಂತೆ ಹೇಳುವಾಗ ಅವನು ತಾಳ್ಮೆಯಿಂದ ಕೇಳಿಸಿಕೊಂಡು “ಈ ಕಾರ್ಡ್ಗಳು ಬಂದು ಮನುಷ್ಯನ ಬೆಲೆ ಯಾವತ್ತೋ ಹೋಯ್ತು. ನೀನಿದ್ದೀಯಾ ಅನ್ನುದಕ್ಕೆ ಇದಷ್ಟೇ ಗುರುತು, ನೀನಲ್ಲ” ಎಂದೇಳುತ್ತ ವೆಬ್ ಕ್ಯಾಮರಾದಲ್ಲಿ ಅವಳ ಫೋಟೋ ಕ್ಲಿಕಿಸಿದ. ನಂತರ ಅವಳ ಕೈಬೆರಳುಗಳಂತೂ ಎಷ್ಟು ಪ್ರಯತ್ನಿಸಿದರು ಅವಳ ಗುರುತು ನೀಡಲಿಲ್ಲ. “ಅಜ್ಜಿ ನಿನ್ನ ಕೈಬೆರಳುಗಳು ಬರೋಲ್ಲ. ಮೊಬೈಲ್ ನಂಬರ್ ಹಾಕಿ ಓಟಿಪಿ ಬರೋ ಹಾಗೆ ಮಾಡ್ತೀನಿ. ಪೋನ್ ರೀಚಾರ್ಜ್ ಮಾಡಿಸಿದ್ಯಾ” ಎಂದರೆ ಅರ್ಥವಾಗದೆ ಸರೋಜಮ್ಮ ಮುಖ ನೋಡಲು “ಪೋನ್ ಬರುತ್ತಾ” “ನನ್ಗೆ ಯಾರು ಮಾಡರಪ್ಪ” “ಮೊದ್ಲು ಮಾಡಿಸು” “ಅದ್ಕೆ ಯಾವ್ ಆಫೀಸ್‌ಗೆ ಹೋಗ್‌ಬೇಕು” “ಇದಕ್ಕೆ ಯಾವ ಆಫೀಸ್ ಬೇಡ. ಕರೆನ್ಸಿ ಅಂಗಡಿಗೆ ಹೋಗಿ ಈ ನಂಬರ್ ಕೊಡು ಹಾಕೊಡ್ತಾರೆ” “ಐ ತಿಂಗಳಾದ್ರೆ ಇದ್ಕೇ ಇನ್ನೂರೂಪಾಯಿ ಎಲ್ಲಿ ತರ್ಲಪ್ಪ ನಾನು? ಅದು ಉಳಿದ್ರೆ ಎಷ್ಟು ವಾಸಿ ನನ್ಗೆ ಬಿಪಿ ಮಾತ್ರೆಗೆ ಆಯ್ತುದೆ” “ಏನೂ ಮಾಡೋಕ್ಕಾಗಲ್ಲ ಮಾಡಿಸ್ಲೇಬೇಕು. ನಿನ್ನ ಕೈಬೆರಳಂತೂ ಬಯೋ ಮೆಟ್ರಿಕ್ ಅಲ್ಲಿ ಬರಲ್ಲೋ ಓಟಿಪಿ ಬರೋಕೆ ಪೋನ್ ಬೇಕೆಬೇಕು” ಎಂದಾಗ ಅವಳಿಗೆ ಮುಂದೆ ಮಾತನಾಡಲು ಏನು ತಿಳಿಯದೆ ಮುಖ ಪೆಚ್ಚಗಾಯಿತು. ನಂತರ ಅವನು ಸರೋಜಮ್ಮನಿಗೆ ಕಣ್ಣುಗಳ ಅಗಲಕ್ಕೆ ತೆರೆಯುವಂತೆ ಮತ್ತು ಕ್ಷಣಕಾಲ ಹಾಗೆ ಇರುವಂತೆ ಹೇಳಿ ಅವಳ ಕಣ್ಣುಗಳ ಚಿತ್ರವನ್ನು ಉಪಕರಣದ ಮೂಲಕ ದಾಖಲಿಸಿಕೊಂಡ.
ಸರೋಜಮ್ಮ ಕುಳಿತಲ್ಲೆ ಅವನ ಮುಂದಿನ ಸೂಚನೆಗಾಗಿ ಕಾಯುತ್ತಿದ್ದಳು. ಅವನು ಇವಳಿಂದ ಪಡೆದುಕೊಂಡ ಗುರುತುಗಳನ್ನು ಫೀಡ್ ಮಾಡುತ್ತಿದ್ದ. ಈ ಪ್ರಕ್ರಿಯೆ ಸಂಪೂರ್ಣವಾಗಲು “ಸರಿ ಎಲ್ಲಾ ಆಯ್ತು. ಇನ್ನೊಂದು ಹದಿನೈದು ದಿನಕ್ಕೆ ಪೋನ್‌ಗೆ ಮೇಸೆಜ್ ಬರುತ್ತೆ. ಆಮೇಲೆ ಮನೆಗೆ ಹೊಸ ಆಧಾರ್ ಕಾರ್ಡ್ ಬರುತ್ತೆ. ಈಗ ನೀನು ನೂರು ರೂಪಾಯಿ ಕೊಟ್ಟು ನಡೀ ಅಜ್ಜಿ” ಎಂದಾಗ ಸರೋಜಮ್ಮ ಏನೋ ಥಟ್ಟನೆ ನೆನೆಪಿಸಿಕೊಂಡು “ಅಪ್ಪಾ ಅದ್ನೇ ಹೆಸ್ರು ಬದಲಾಗದಂತೆ ನೋಡಿ ವಸಿ ಸರಿ ಮಾಡಾಪ್ಪ” ಎಂದು ತನ್ನ ಕೈ ಚೀಲದಲ್ಲಿದ್ದ ರೇಷನ್ ಕಾರ್ಡ್, ವೋಟರ್ ಐಡಿಗಳ ತಗೆದುಕೊಟ್ಟಳು. ಅವನು ಅವುಗಳನ್ನು ಗಮನಿಸುತ್ತಲೆ “ಇದು ಮೊದ್ಲೇ ಹೇಳೋದಲ್ವಾ ಅಜ್ಜಿ. ಇಲ್ಲಿ ಒಂದೊಂದರಲ್ಲಿ ಒಂದೊಂದ ತರ ಇದೆ. ನಿನ್ನ ನಿಜವಾದ ಹೆಸರೇನು?” ಸರೋಜಮ್ಮನಿಗೆ ಕ್ಷಣ ಅದೇನೆಂದು ಹೊಳೆಯಲಿಲ್ಲ. ಅವಳ ಹೆಸರನ್ನು ನಾಲ್ಕಾರು ರೀತಿ ಕರೆಯುವುದರಿಂದ ಇಲ್ಲಿಗೆ ಯಾವುದು ಹೇಳುವುದೆಂದು ಚಡಪಡಿಸಿದಳು. ಅವನು “ಸರಿಗೇಳು ಯಾವುದು ಅಂತಾ ಇಲ್ಲಿ ಚೇಂಜ್ ಮಾಡ್ತೀನಿ” ಎಂದ. ಅವಳಿಗೆ ಸರೋಜ, ಸರೋಜಮ್ಮ, ಸರೋಜಿ ಎನ್ನುವುದು ಗಲಿಬಿಲಿ ಮಾಡಿತು. ಇದನ್ನು ಅರಿತವನು ಸಮಯವಾಗುತ್ತಿದ್ದ ಕಾರಣ ತಾನೇ ರೇಷನ್ ಕಾರ್ಡ್ ನೋಡಿ ಅದರಲ್ಲಿದ್ದ ಸರೋಜಮ್ಮ ಎನ್ನುವ ಹೆಸರನ್ನು ಫೈನಲ್ ಮಾಡಿದ. ಹಿಂದಿನ ಆಧಾರ್ ಕಾರ್ಡ್ನಲ್ಲಿದ್ದ ಸರೋಜ ಈಗ ಸರೋಜಮ್ಮನಾಗಿ ಬದಲಾಯಿತು. “ಇನ್ನು ಯಾರೇ ನಿನ್ನ ಹೆಸ್ರು ಕೇಳಿದ್ರು ಸರೋಜಮ್ಮ ಅಂತೇಳು” ಎಂದು ಸೂಚಿಸಿದವನೇ ಹೆಸರನ್ನು ತಿದ್ದುಪಡಿ ಮಾಡಿ ಇನ್ನೊಮ್ಮೆ ಆಪ್ಡೇಟ್ ಮಾಡಿದ. ಸರೋಜಮ್ಮ ಅದಕ್ಕೆ ಸರಿ ಎಂದು ತಲೆಯಾಡಿಸಿದಳು. ನಂತರ ಪ್ರಿಂಟ್ ಬಂದ ಒಂದು ಕಾಗದದ ಅರ್ಧವನ್ನು ಅವಳಿಗೆ ರಸೀದಿ ರೂಪದಲ್ಲಿ ಹರಿದು ಕೊಟ್ಟ. ಸರೋಜಮ್ಮ ತನ್ನ ಸೀರೆ ನೆರಿಗೆಯಲ್ಲಿ ಮುದುರಿ ಮಡಚಿಟ್ಟಿದ್ದ ನೂರು ರೂಪಾಯಿಯ ಒಂದು ಹೊಸ ನೋಟನ್ನು ಅವನ ಮುಂದಿಟ್ಟಳು. ಅವನು ಈ ಹೊಸ ನೋಟಿನ ದುಃಸ್ಥಿತಿ ಕಂಡು ಬೆಚ್ಚಿದ. ಸರೋಜಮ್ಮ ಅವನಿಂದ ದೊಡ್ಡ ಉಪಕಾರವಾದಂತೆ ಕೈ ಮುಗಿದ ಕಾರಣ ಅವನು ಈ ನೋಟಿನ ಬಗ್ಗೆ ಹೇಳಲು ಕೆಲ ವಾಕ್ಯಗಳು ಬಾಯಿಗೆ ಬಂದರು ಅದನ್ನು ತಡೆದು ಏನು ಮಾತನಾಡಲಿಲ್ಲ.
ಸರೋಜಮ್ಮನ ಆಧಾರ್ ಕಾರ್ಡ್ ತಿದ್ದುಪಡಿ ಕಾರ್ಯ ಮುಗಿದಿತ್ತು. ಆದರೆ, ಅದರ ಮುಂದಿನ ಪ್ರಕ್ರಿಯೆ ಪೂರ್ಣಗೊಂಡು ಅವಳ ನಂಬರ್‌ಗೆ ಯಾವ ಮಾಹಿತಿಯು ಹದಿನೈದು ದಿನವಾದರು ಬಂದಿರಲಿಲ್ಲ. ಇದರಿಂದ ಅವಳ ಈ ತಿಂಗಳ ಪಡಿತರವು ಕೈ ತಪ್ಪಿತ್ತು. ಸರೋಜಮ್ಮ ಸೈಬರ್ ಸೆಂಟರ್‌ಗೆ ಹೋಗಿ ರಮೇಶನ ವಿಚಾರಿಸಿದಾಗ ಅವನು “ಅದು ಹೀಗೆ ಅಂತಾ ಹೇಳಿಕ್ಕೆ ಬರೋದಿಲ್ಲ. ಕೆಲವರಿಗೆ ಒಂದು ತಿಂಗಳಾದರು ಬಂದಿಲ್ಲ ಏನು ಮಾಡೋಣ” ಎಂದಾಗ ಸರೋಜಮ್ಮ “ಇದು ಬರದೆ ಅವ್ರು ಅಕ್ಕಿ ಕೊಡೋಲ್ಲ ಅಂತಾರೇ. ಹಿಂಗಾದರೆ ನಮ್ಮಂಥವ್ರ ಹೆಂಗ್ ಜೀವ್ನ್ ಮಾಡೋದಪ್ಪ” ರಮೇಶ “ಹೋಗ್ ಅಲ್ಲಿ ವಿಚಾರಿಸು ಇನ್ನೊಂದು ಸಾರಿ” “ನಾನು ಪೋನ್‌ಗೆ ಕೆಲ್ಸ ಇಲ್ದೇ ದುಡ್ಡು ಬೇರೆ ಹಾಕಿಸ್ದೇ. ಅದು ನೋಡಿದ್ರೆ ತಿಂಗಳು ಬರೋದಿಲ್ಲ. ಅಷ್ಟರಲ್ಲಿ ಅಕ್ಕಿ ತಗಳೋವಾ ಅಂದ್ರೆ ನೀನು ಬಂದಿಲ್ಲ ಅನ್ತೀಯಾ” “ಅದೇ ಅಲ್ಲಿ ಹೋಗಿ ಕೇಳು. ಬಂದಿದ್ರೇ ನನಗೇನು ಚೆಕ್ ಮಾಡಿ ಒಂದು ಪ್ರಿಂಟ್‌ಔಟ್ ತೆಗೆದು ಕೊಡೋದು ಕಷ್ಟವೇ” “ಯಾರ್ನ ಕೇಳ್ಲಿ” “ಬಿಟ್ಟಿ ಸಿಕ್ತಾನೆ ಅಂತಾ ಬಂದ್ ನನಗ್ಯಾಕೆ ಹಿಂಗ್ ಕಾಟ ಕೊಡ್ತೀಯಾ. ತಾಲ್ಲೂಕು ಆಫೀಸ್‌ಲ್ಲಿ ಹೋಗಿ ಕೇಳು” ಎಂದು ಸ್ವಲ್ಪ ಗಟ್ಟಿಯಾಗಿ ಗದರಿದ. ಇದರಿಂದ ಪರಸ್ಥಿತಿ ಅರಿತುಕೊಂಡ ಸರೋಜಮ್ಮ ರಮೇಶನಿಗೆ ಮರು ಮಾತನಾಡಲಿಲ್ಲ. ಅವಳಿಗೆ ಸದ್ಯಕ್ಕೆ ಈ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಇನ್ನೊಬ್ಬರ ಸಹಾಯದ ಅವಶ್ಯಕತೆಯಿತ್ತು. ತಾಲ್ಲೂಕು ಕಛೇರಿಯಲ್ಲಿನ ಮರೆಮಾಚಿದಂತಿರುವ ಕೆಲ ದಲ್ಲಾಳಿಗಳು ಇವಳ ಕಕಾರ್ಯವನ್ನು ಹೂ ಎತ್ತಿದಂತೆ ಮಾಡಬಲ್ಲವರಾದರು, ಅದರಿಂದ ತಮಗೆ ಯಾವುದೇ ವೈಯಕ್ತಿಕ ಲಾಭವಿಲ್ಲದ ಕಾರಣ ಹಿಂದೆ ಸರಿದಿದ್ದರು. ಇನ್ನೂ ಇವಳ ಹೆಸರು ವೋಟರ್ ಲಿಸ್ಟ್‌ನಿಂದ ಡಿಲೀಟ್ ಆಗಿದ್ದ ಕಾರಣ ಮತಕ್ಕಾಗಿ ಸರೋಜಮ್ಮನ ಓಲೈಸುವ ಅವಶ್ಯಕತೆ ಇಲ್ಲದ್ದಕ್ಕೆ ಇಲ್ಲಿನ ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರ‍್ಯಾರು ಈ ಸಮಸ್ಯೆ ಪರಿಹರಿಸಲು ಆಸಕ್ತಿ ತೋರಿಸಲಿಲ್ಲ. ಸರೋಜಮ್ಮ ಇವರುಗಳ ಮನೆ ಬಾಗಿಲುಗಳ ಅಲೆದು ಸಾಕಾಗಿದ್ದಳು. ಅವರು ಎದುರಿಗೆ ಸಿಕ್ಕರೆ ಎಂದಿನಂತೆ ಭರವಸೆ ನೀಡುತ್ತಿದ್ದರೆ ಹೊರತು ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿರಲಿಲ್ಲ. ಇದರಿಂದ ಬೇಸತ್ತು ಈ ಕೆಲಸವಾಗಬೇಕಾದರೆ ಎಲ್ಲದಕ್ಕೂ ಈಗಾ ಸರೋಜಮ್ಮನೇ ಮುಂದೆ ನಿಲ್ಲಬೇಕಿತ್ತು.
ಬದುಕನ್ನ ಒಂದು ಹೋರಾಟದಂತೆ ಭಾವಿಸಿ ಇಲ್ಲಿಯತನಕ ಬಂದಿದ್ದ ಸರೋಜಮ್ಮನಿಗೆ ಇದನ್ನೂ ನೋಡೇ ಬಿಡುವ ಎನಿಸಿತ್ತು. ಈ ಕ್ರಿಯೆಗಳಿಗೆ ಅವಳು ಮಾನಸಿಕವಾಗಿ ಸಿದ್ಧವಾಗಿದ್ದರಿಂದ ಮತ್ತೆ ತನ್ನ ಸವಾರಿಯನ್ನು ತಾಲ್ಲೂಕು ಕಛೇರಿ ಕಡೆ ಬೆಳೆಸಿದಳು. ಅವಳ ಕಾಲುಗಳು ನಿರಂತರವಾಗಿ ಮೆಟ್ಟಿಲುಗಳ ಹತ್ತಿ ಇಳಿದು ನೋಯುತ್ತಿದ್ದವು. ರಾತ್ರಿಯಾದರೆ ಅವಕ್ಕೆ ತೈಲಗಳಿಂದ ಉಜ್ಜಿ ಬಿಸಿನೀರು ಬಿಟ್ಟು ಈ ನೋವಿನಿಂದ ಸ್ವಲ್ಪ ಹಗುರಾಗುತ್ತಿದ್ದಳು. ಮತ್ತೆ ಬೆಳಿಗ್ಗೆ ಅಲೆಯುವ, ಮೆಟ್ಟಿಲುಗಳ ಹತ್ತಿ, ಇಳಿಯುವ ಕೆಲಸವಾಗುತ್ತಿತ್ತು. ಈಗ ತಾಲ್ಲೂಕು ಕಛೇರಿಯ ಆಹಾರ ಇಲಾಖೆಯು ಎರಡನೇ ಅಂತಸ್ತಿನಲ್ಲಿತ್ತು. ಅಲ್ಲಿಗೆ ಹತ್ತಿ ಹೋಗುವುದು ಸರೋಜಮ್ಮನಿಗೆ ಹಿಂಸೆಯಾಗಿದ್ದು, ಬೇರೆ ಆಯ್ಕೆಯಿರಲಿಲ್ಲ. ದಾರಿಯಲ್ಲಿ ನಡೆದು ಬರುವಾಗ ಅವಳ ತಲೆಯಲ್ಲಿ ಏನೇನೋ ಕೆಟ್ಟ ಯೋಚನೆಗಳು. ತನ್ನ ಈ ಪಾಡು ಯಾವ ಸುಖಕ್ಕಾಗಿ ಮತ್ತು ಯಾರ ಹಿತಕ್ಕಾಗಿ ಎನ್ನುವ ಪ್ರಶ್ನೆ? ಕಳೆದ ವಾರದಿಂದ ಬಹಳ ಬಳಲಿದಂತಿದ್ದಳು. ದೇಹದಲ್ಲಿ ಎಂದಿನ ಚೈತನ್ಯವಿರಲಿಲ್ಲ. ಇಲ್ಲಿಯತನಕ ಎಲ್ಲೂ ಪತ್ತೆ ಸಿಗದೆ ಮೆರೆಯಾಗಿ ಹೋದ ಮಗ ರಾತ್ರಿಯ ವೇಳೆ ಬೀಳುತ್ತಿದ್ದ ಕೆಟ್ಟ ಕನಸಿನಲ್ಲಿ ಬಂದು ಕ್ಷುಲ್ಲಕ ವಿಷಯಗಳಿಗೆ ಜಗಳ ಕಾಯುತ್ತಿದ್ದ. ಅವಳನ್ನು ಕಾಸಿಗಾಗಿ ಪೀಡಿಸುತ್ತ ಹಲ್ಲೆಗೆ ಮುಂದಾಗಿದ್ದ. ಸರೋಜಮ್ಮ ಗಾಬರಿ ಬಿದ್ದು ಕಿರುಚುತ್ತ ಎಚ್ಚರಗೊಂಡು ನೋಡಿದರೆ ಅದು ಪೂರಾ ಕತ್ತಲ ರಾತ್ರಿ. ಇದರ ನಂತರ ಅವಳಿಗೆ ನಿದ್ದೆ ಬರುತ್ತಿರಲಿಲ್ಲ. ಘಟಿಸಿ ಹೋದ ಹಳೆಯದನ್ನೆಲ್ಲ ನೆನಸಿಕೊಂಡು ತನ್ನ ಸ್ಥಿತಿಗೆ ಕೊರಗುತ್ತಿದ್ದಳು. ಈ ಕೊರಗುವಿಕೆ ಅವಳ ಶಕ್ತಿಯನ್ನ ಇನ್ನಷ್ಟು ಕುಂದಿಸಿತ್ತು. ನಿಧಾನವಾಗಿ ಮೆಟ್ಟಿಲುಗಳ ಹತ್ತಿಕೊಂಡು ಸರೋಜಮ್ಮ ಆಹಾರ ಇಲಾಖೆ ಕಛೇರಿ ಒಳಗೆ ಬಂದಳು. ಕುಳಿತು ಯಾವುದೋ ಕೆಲಸ ಮಾಡುತ್ತಿದ್ದ ಗುಮಾಸ್ತ ಇವಳ ಮುಖ ನೋಡುತ್ತಲೆ ಒಂದೇ ಸಾರಿಗೆ “ಅದು ಆಪಡೇಟ್ ಆಗ್ದೇ ನಾನು ಏನು ಮಾಡೋಕೆ ಆಗೋಲ್ಲ. ಅದು ಆಗೋತನಕ ನೀನು ಕಾಯ್ಲೇಬೇಕು” ಎನ್ನುತ್ತಲೆ ಸರೋಜಮ್ಮ ಸಣ್ಣ ಅಳುದನಿಯಲ್ಲಿ “ಅಪ್ಪಾ, ನನಗೆ ಅಕ್ಕಿ ಕೊಟ್ಟು ಮೂರು ತಿಂಗಳಾಯಿತು” ಎಂದಾಗ ಆ ಗುಮಾಸ್ತನಿಗೆ ಮುದುಕಿಯ ಈ ಸ್ವರ ಹಾಗೂ ನಿರಾಶೆಯ ಮುಖಭಾವ ಕ್ಷಣ ಅಂತಃಕರಣ ಕಲುಕಿತು. ಸರಿಸುಮಾರು ದಿನಗಳಿಂದ ಇವಳ ಪರಿಪಟಾಲು ನೋಡಿದ್ದ ಅವನು ಈ ವ್ಯವಸ್ಥೆಯಲ್ಲಿ ಇಂತವರು ಸಿಕ್ಕಿ ನಲುಗುವುದನ್ನ ಏನೆಂದು ಅರ್ಥೈಸಿಕೊಳ್ಳುವುದೆಂದು ತಿಳಿಯದಾದ.
ಆಧಾರ್ ಕಾರ್ಡ್ ತಿದ್ದುಪಡಿಯ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಲೋಪದೋಷಗಳೊಂದಿಗೆ ಸರ್ವರ್ ಡೌನ್ ಮತ್ತು ಓವರ್‌ಲೋಡ್‌ನಿಂದಾಗಿ ಈ ಥರ ಸಮಸ್ಯೆಗಳು ಸಾಮಾನ್ಯವಾಗಿದ್ದು, ಕೆಲವರ ಕಾರ್ಡ್ಗಳು ನಾನಾ ಕಾರಣಗಳಿಂದ ಆಪ್‌ಡೇಟ್ ಆಗಲು ತಿಂಗಳಗಳತನಕ ಸಮಯ ಬೇಡುತ್ತಿತ್ತು. ಅಲ್ಲಿಯತನಕ ಕಾಯದ ಈ ಮುದುಕಿ ಕಛೇರಿಯನ್ನು ಅಲೆದು ಸವೆಸುತ್ತಿದ್ದಳು. ಗುಮಾಸ್ತ ಕೆಲ ಹೊತ್ತು ಚಿಂತಿಸಿದವನು ಇದಕ್ಕೆ ಪರ್ಯಾಯವಾಗಿ ತಾತ್ಕಲಿಕ ಪರಿಹಾರವೆಂಬಂತೆ ಸರೋಜಮ್ಮನಿಗೆ ಒಂದು ಚೀಟಿ ಬರೆದು ಅದರಲ್ಲಿ ಇಲಾಖೆಯ ಸೀಲು ಒತ್ತಿ ತನ್ನ ಸಹಿ ಮಾಡಿಕೊಟ್ಟು “ಇದ್ನ್ ತಗೊಂಡು ಹೋಗಿ ಈ ತಿಂಗಳು ರೇಷನ್ ತಗೋ. ಮುಂದಿನ ತಿಂಗಳೊಳಗೆ ಆಧಾರ್‌ಕಾರ್ಡ್ ಬಂದ್ರೆ ಅದ್ನ್ ಇಲ್ಲಿಂದ್ಲೇ ರೇಷನ್ ಕಾರ್ಡಲ್ಲಿ ಆಪ್‌ಡೇಟ್ ಮಾಡ್ತೀನಿ ನೀನು ಏನ್ ಮತ್ತೆ ಇಲ್ಲಿಗೆ ಬರೋದು ಬೇಡ. ಡಿಪೋಗೆ ನಿನ್ನ ಪೋನ್ ತಗೊಂಡು ಹೋಗು ಓಟಿಪಿ ಬರುತ್ತೆ ಅಕ್ಕಿ ತಗೋ” ಎಂದರೆ ಸರೋಜಮ್ಮ ಈ ಮಾತಿನಿಂದ ಸಂತೃಪ್ತಳಾದಂತೆ ಎರಡು ಕೈ ಮುಗಿದು “ಅಪ್ಪಾ ನಿನ್ಗೆ ಧರ್ಮಾ ಬರ್ಲಿ” ಎಂದು ಹನಿಗಣ್ಣಾದಳು. ಅವಳ ನಿರಂತರ ಅಲೆದಾಟದಿಂದ ಬದುಕಿನ ಒಂದು ಬವಣೆ ಮುಗಿಯುತ್ತಲೆ ಇನ್ನೊಂದು ಎಚ್ಚರವಾಗಿ ಮುನ್ನಲೆಗೆ ಬಂತು. ಅದನ್ನು ತಡಮಾಡದೆ ಸರೋಜಮ್ಮ ಗುಮಾಸ್ತನ ಮುಂದೆ ನಿವೇದಿಸಿಕೊಂಡಳು. “ಅಪ್ಪಾ ಯಾರೋ ಮನೆಹಾಳ್ ಮುಂಡೇ ಮಕ್ಕಳು ಬದುಕಿರೋ ನನ್ನ ಸತ್ತೊಗವಳೇ ಅಂತಾ ಸುಳ್ಳು ಹೇಳಿ ನನ್ನ ಪಿಂಚಿನ್ನು ನಿಲ್ಲಿಸು ಬುಟ್ಟುವ್ರೇ ಇದೊಂದು ಸರಿ ಮಾಡಕೊಡಪ್ಪಾ” ಎಂದಾಗ ಹಳ್ಳಕ್ಕೆ ಬಿದ್ದ ತೋಳಕ್ಕೆ ಆಳಿಗೊಂದು ಕಲ್ಲಿನಂತೆ ಕಷ್ಟಕ್ಕೆ ಬಿದ್ದ ಈ ಮುದುಕಿಗೆ ಅನಾಮತ್ತು ಸಮಸ್ಯೆಗಳ ಸರಮಾಲೆಯೇ ಸುತ್ತಿಕೊಂಡಿರುವುದ ಕಂಡು ಗುಮಾಸ್ತ ಮರುಗಿದ. ಆದರೆ, ಅವನು ಇಲಾಖೆ ಬೇರೆಯಾದ್ದರಿಂದ ಈ ವಿಚಾರದಲ್ಲಿ ಏನು ಮಾಡುವಂತಿರದ ಕಾರಣ ಅವಳಿಗೆ ಸಮಾಧಾನವಾಗಿ “ಅದು ನಮ್ಮ ಇಲಾಖೆಗೆ ಬರಲ್ಲ. ಕೆಳಗಡೆ ಹೋಗಿ ಟ್ರೇಜಿರಿಲಿ ವಿಚಾರಿಸು” ಎಂದು ತಾನು ಬರೆದದ್ದನ್ನು ಕೊಟ್ಟವನು ತನ್ನ ಕೆಲಸದಲ್ಲಿ ಮುಳುಗಿದ. ಸರೋಜಮ್ಮ ಅವನಿಂದ ಬೇರೇನೋ ನಿರೀಕ್ಷಿಸಿ ಕೆಲ ಹೊತ್ತು ನಿಂತವಳಿಗೆ ಅವನು ಹೇಳಿದ್ದು ಅರ್ಥವಾಗಲಿಲ್ಲ. ಇನ್ನೊಮ್ಮೆ ಕೇಳಲು ಇವಳಿಗೂ ಅಂಜಿಕೆಯಾಗಿ ಕೊಟ್ಟ ಚೀಟಿಯ ಭದ್ರವಾಗಿ ಹಿಡಿದು ಅಲ್ಲಿಂದ ಹೊರಗೆ ಬಂದಳು. ಅವಳ ಸುತ್ತ ತಾಲ್ಲೂಕು ಕಛೇರಿಯ ಹಲವು ಇಲಾಖೆಯ ಕೊಠಡಿಗಳು ನವಗ್ರಹದಂತೆ ಸುತ್ತು ಹಾಕುತ್ತಿದ್ದವು. ಸರೋಜಮ್ಮನಿಗೆ ಒಂದೇ ಸಮ ತಲೆ ತಿರುಗುತ್ತಿತ್ತು. ಅಲ್ಲೇ ತುಸು ಕುಳಿತು ಸುಧಾರಿಸಿಕೊಂಡು ಮತ್ತೆ ಆ ಕೆಲಸಕ್ಕೆ ಇನ್ನೊಮ್ಮೆ ಬರುವುದು ಏನೆಂದು ಈಗಲೇ ಅದನ್ನು ಮುಗಿಸಿಕೊಂಡು ಹೋಗಲು ನಿರ್ಧರಿಸಿದ್ದಳು. ಆಗಾ ಸುತ್ತಲಿನ ಈ ಕೊಠಡಿಗಳಲ್ಲಿ ಯಾವುದನ್ನು ಹೊಕ್ಕುವುದೆಂದು ತಿಳಿಯಲಿಲ್ಲ. ಆದರೆ, ಗುಮಾಸ್ತ ಹೇಳಿದ ಕೆಳಗಡೆ ಎನ್ನುವ ಪದ ನೆನಪಾಗುತ್ತಲೆ ಅಲ್ಲಿಂದ ಕೆಳಗೆ ಇಳಿಯಲು ಶುರುಮಾಡಿದಳು. ತಲೆ ಸುತ್ತ ಕಮ್ಮಿಯಾಗಿರಲಿಲ್ಲ. ಇದರಿಂದ ಎರಡು ಹೆಜ್ಜೆಗಳು ಹಾಕುತ್ತಲೆ ಮೆಟ್ಟಿಲುಗಳು ಇಳಿಯುವಾಗ ಆಯತಪ್ಪಿ ಅಲ್ಲಿಂದ ಕೆಳಗೆ ಉರುಳುತ್ತ ಬಿದ್ದಳು. ಆ ಬೀಳುವ ಭರಕ್ಕೆ ಅವಳ ಕೈಲ್ಲಿದ್ದ ದಾಖಲೆಗಳು, ಅದರ ಜೆರಾಕ್ಸ್ ಪ್ರತಿ ಸುತ್ತ ಚೆಲ್ಲಾಡಿ ಹೋಯಿತು.ಆ

ಆಗಾಲೇ ಮೂರು ದಿನಗಳು ಕಳೆದಿತ್ತು. ಸರೋಜಮ್ಮ ತಾಲ್ಲೂಕು ಕಛೇರಿಯಲ್ಲಿ ಬಿದ್ದು ಕಾಲು ಮುರಿದುಕೊಂಡು ಹಾಸಿಗೆಯಲ್ಲಿ ಮಲಗಿ. ಅವಳು ತಾಲ್ಲೂಕು ಕಛೇರಿಯಲ್ಲಿ ಉರುಳಿ ಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಹೀಗೆ ಕೆಲವು ಹಿರಿಯ ನಾಗರೀಕರು ಸರ್ಕಾರಿ ಸೇವೆ, ಸವಲತ್ತುಗಳಿಗೆ ಕಛೇರಿಗಳ ಅಲೆದು ಬೆಂಡಾಗುವುದು ಪತ್ರಿಕೆಗಳಲ್ಲಿ ಆಕ್ರೋಶದಿಂದ ಇದೊಂದು ವ್ಯವಸ್ಥೆಯ ಸೋಲಿನಂತೆ ಪ್ರಕಟವಾಗಿ, ಈ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗಳಾಗಿ, ಈ ರೀತಿಯ ಘಟನೆಗಳು ಮುಂದೆ ಸಂಭವಿಸದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಂಡು ತ್ವರಿತವಾಗಿ ಇಂಥವರ ಸಮಸ್ಯೆಗಳ ಬಗೆಹರಿಸಿ ಕೊಡುವಂತೆ ಜಿಲ್ಲಾಧಿಕಾರಿಯಿಂದ ಕೆಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿತ್ತು. ಹಾಗೆ ಇದರ ವಿನಹಃ ಇಂಥಾ ಪ್ರಕರಣಗಳು ಮರುಕಳಿಸಿದರೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯು ತಿಳಿಸಲಾಗಿತ್ತು. ಇತ್ತ ತನ್ನ ಪಾಲಿನ ಪಡಿತರ ಮತ್ತು ಪಿಂಚುಣಿ ಪಡೆದುಕೊಳ್ಳಲು ಪರದಾಡುವಾಗ ಬಿದ್ದು ಹಾಸಿಗೆ ಹಿಡಿದ ಸರೋಜಮ್ಮನನ್ನು ಸರ್ಕಾರದ ಪರವಾಗಿ ಕೆಲವು ಅಧಿಕಾರಿಗಳು ಬಂದು ಆರೋಗ್ಯ ವಿಚಾರಿಸಿ ನೋಡಿ ಹೋದರು. ಅವಳು ಬದುಕಿರುವಾಗಲೇ ಸತ್ತಿರುವಳೆಂದು ಇಲಾಖೆಗೆ ತಪ್ಪು ಮಾಹಿತಿ ನೀಡಿ ಅವಳ ಪಿಂಚಣಿ ನಿಲ್ಲಿಸಿ ಇಷ್ಟೆಲ್ಲಾ ಅವಂತಾರಗಳಿಗೆ ಕಾರಣವಾದವರ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದರು. ಹಾಗೆ ಅವಳಿಂದ ಆಗಬೇಕಾದ ಕರ‍್ಯಗಳ ಬಗ್ಗೆ ವಿವರಗಳ ಪಡೆದವರು ಇನ್ನೊಂದು ಎರಡ್ಮೂರು ದಿನದಲ್ಲಿ ಅವಳ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಇದರ ಮೇಲೆ ಸರೋಜಮ್ಮನಿಗೆ ಯಾವುದೇ ಆಸೆಗಳಿರಲಿಲ್ಲ. ಅವಳ ಜೀವ ಮಲಗಿದ್ದಲ್ಲೆ ಸಾವು ಬದುಕಿನ ನಡುವೆ ಜೀಕಾಡುತ್ತ, ಈ ಇಹಬಂಧನವನ್ನು ಒಮ್ಮೆಗೆ ಕಡಿದುಕೊಂಡರೆ ಸಾಕೆಂದು ಮನಸ್ಸು ಬಯಸುತ್ತಿತ್ತು. ಇಂಥಾ ಪರಿಸ್ಥಿತಿಯಲ್ಲಿ ಹಾಸಿಗೆ ಹಿಡಿದು ಮಲಗಿದ ಸರೋಜಮ್ಮನ ಆರೈಕೆ ಮಾಡಲು ಯಾರು ಇರಲಿಲ್ಲ. ಇದ್ದೊಬ್ಬ ಮಗನದು ದಿಕ್ಕಿಲ್ಲದ ಕತೆಯಾದರೆ, ದೂರದ ಸಂಬಂಧಿಕರಿಗೆ ಇವಳ ಈ ಸ್ಥಿತಿಯ ಕುರಿತು ಸುದ್ದಿಗಳು ಹೋದವೇ ಹೊರತು ಅವರು ತಮ್ಮದೇ ಕಷ್ಟಗಳ ಹೇಳಿಕೊಂಡು ಇತ್ತ ಬರಲಿಲ್ಲ. ಇನ್ನೂ ಈ ಸಮಾಜವೆಂಬುವ ವ್ಯೂಹದಲ್ಲಿ ಮನುಷ್ಯನಿಗೆ ಮನುಷ್ಯನಷ್ಟೇ ಆಗಬೇಕೆನ್ನುವ ತತ್ವದಂತೆ ಅಕ್ಕಪಕ್ಕದ ಮನೆಯವರು ಸರೋಜಮ್ಮನಿಗೆ ಮಾನವೀಯತೆ ದೃಷ್ಟಿಯಿಂದ ಊಟ, ತಿಂಡಿಗಳ ಕೊಡುತ್ತಿದ್ದರು. ಇದರ ಹೊರತಾಗಿ ಅವಳು ಒಬ್ಬೊಂಟಿಯಾಗಿ ಈ ಬದುಕಿನ ವಿರುದ್ಧ ಇಲ್ಲಿಯತನಕ ಸೆಣಸಾಡಿ ಕೊನೆಗೆ ಸೋತವಳಂತೆ ಮಲಗಿದ್ದಳು. ಸಾವು ಹೊಸ್ತಿಲು ದಾಟಿ ಒಳಗೆ ಬರಲು ಯೋಚಿಸುತ್ತಿತ್ತು. ಅವಳು ಅದನ್ನೆ ಕಾಯುತ್ತಿದ್ದಳು. ಆ ದಿನ ಮಧ್ಯರಾತ್ರಿಯಲ್ಲಿ ಅವಳ ಕಣ್ಣಿಗಿನ್ನೂ ನಿದ್ದೆ ಬಂದಿರಲಿಲ್ಲ. ಕತ್ತಲೆಯಲ್ಲೆ ಬಾದಿಸುತ್ತಿದ್ದ ನೋವಿಗೆ ನರಳುತ್ತ ತನ್ನ ಗತವನ್ನು ಮೆಲುಕು ಹಾಕುತ್ತಿದ್ದಳು. ಅದರಲ್ಲಿ ಅವಳ ಹುಟ್ಟಿನಿಂದ ಇಲ್ಲಿಯತನಕ ನಡೆದ ಮುಖ್ಯ ಘಟನೆಗಳೆಲ್ಲವು ಬಂದು ಹೋದವು. ಅವುಗಳಲ್ಲಿನ ಬೇರೆ ಬೇರೆ ಭಾವಗಳ ಸ್ಮರಿಸುವಾಗ ಅವಳ ಮೊಬೈಲ್‌ಗೆ ನಿಮ್ಮ ಆಧಾರ್‌ಕಾರ್ಡ್ ಆಪ್‌ಡೇಟ್ ಆಗಿದ್ದು, ಇನ್ನೂ ಮೂರು ದಿನಗಳ ನಂತರ ಇದರ ಕಾಫಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು ಮೇಸೆಜ್ ಬಂದಿತ್ತು. ಅದು ಬಂದ ಸದ್ದಿಗೂ, ಬೆಳಕಿಗೂ ಸರೋಜಮ್ಮನ ಗಮನ ಅತ್ತ ಹೋಯಿತು. ಆದರೆ ಅದು ಏನೆಂದು ಅವಳಿಗೆ ತಿಳಿಯಲಿಲ್ಲ. ಮೊಬೈಲ್ ಸ್ಕ್ರೀನ್ ಬೆಳಕು ಆಫ್ ಆಗುವತನಕ ನೋಡುತ್ತ ಅದು ಆರುತ್ತಲೆ ದೇಹಕ್ಕೆನೋ ಭಾರವೆನಿಸಿತು. ಉಸಿರನ್ನು ಒಳಗಿನಿಂದ ಹೊರಗೆ ತೆಗೆದವಳು ಮೆಲ್ಲಗೆ ಕಣ್ಣು ಮುಚ್ಚಿದಳು. ಇನ್ನೂ ಅವಳ ಪಾಲಿಗೆ ನಾಳಿನ ಬೆಳಕು ಕಾಣಲಿಲ್ಲ.

ಆರ್. ಪವನ್ ಕುಮಾರ್ ಮೂಲತಃ ಶ್ರೀರಂಗಪಟ್ಟಣದವರು. ಸಿನಿಮಾ ಮತ್ತು ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ಮತ್ತು ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ
