Advertisement
ದಾದಾಪೀರ್ ಜೈಮನ್‌ ಹೊಸ ಕೃತಿ ‘ಕನ್ನಡಿಯೊಳಗಿನ ಪದ’  ಕವನ ಸಂಕಲನದ ಕೆಲವು ಕವಿತೆಗಳು

ದಾದಾಪೀರ್ ಜೈಮನ್‌ ಹೊಸ ಕೃತಿ ‘ಕನ್ನಡಿಯೊಳಗಿನ ಪದ’ ಕವನ ಸಂಕಲನದ ಕೆಲವು ಕವಿತೆಗಳು

1
ಅಮ್ಮ ಕಟ್ಟಿದ ಹೂ

ಅಮ್ಮ ಹೂ ಕಟ್ಟುತ್ತಿದ್ದಳು
ಮಲ್ಲಿಗೆ ಕನಕಾಂಬರ
ಅದರ ನಡುವೆ ಕಾಮಕಸ್ತೂರಿ
ಆಗೊಮ್ಮೆ ಈಗೊಮ್ಮೆ ಸಂಪಿಗೆ
ದೀಪಾವಳಿ ಹೊತ್ತಲ್ಲಿ ಬೆಳಕಿನ ಬಣ್ಣದ ಚೆಂಡು ಹೂ ಸೇವಂತಿಗೆ
ಕಪ್ಪು ಇರುಳುಗಳಲ್ಲಿ
ಗುಡಿಸಲ ಬಾಗಿಲಿಗೆ ಗಂಧವನ್ನೇ ಆವಾಹಿಸುವ ಹಾಗೆ
ಅಮ್ಮ ಘಮಲನ್ನು ಕಟ್ಟುತ್ತಿದ್ದಳು
ತನ್ನೆರಡು ಕೈಯಿಂದಲೇ ಲೋಕ ಕಟ್ಟಿಕೊಳ್ಳುತ್ತಿದೆ
ಯೆನ್ನುವ ಶ್ರದ್ಧೆಯಲ್ಲಿ
ಅಮ್ಮ ಹೂ ಕಟ್ಟುತ್ತಿದ್ದಳು
ನಾನು ಜೋಡಿಸಿಡುತ್ತಿದ್ದೆ

ಗಂಧದ ದೇವರ ನಿದ್ದೆಯಿಂದ ಎಬ್ಬಿಸುವ ಹಾಗೆ
ಹೂಗಳ ಮೇಲೆ ನೀರು ಚಿಮುಕಿಸಿ
ಅಂಗಳಕ್ಕೆ ನೀರು ಚೆಲ್ಲಿದ ಹಾಗೆ
ದಾರವನ್ನು ತೇವಗೊಳಿಸಿ
ಒಂದು ಕೈಬೆರಳಲ್ಲಿ ಜೋಡಿಹೂಗಳ ಹಿಡಿದು
ಮತ್ತೊಂದು ಕೈಯ ಬೆರಳುಗಳಲ್ಲಿ
ಪ್ರತಿ ಮದುಮಕ್ಕಳಿಗೂ
ದೃಷ್ಟಿ ತೆಗೆದು ಆಶೀರ್ವಾದ ಮಾಡುವಂತೆ
ಅಮ್ಮ ಹೂ ಕಟ್ಟುತ್ತಿದ್ದಳು
ನಾನವಳನ್ನೇ ನೋಡುತ್ತಿದ್ದೆ

ಅಮ್ಮ ಬೀಡಿಯನ್ನೂ ಕಟ್ಟುತ್ತಿದ್ದಳು
ಲೋಕದ ನಶೆಯ ಮಾಯೆ
ತಾನೇ ಎನ್ನುವ ಗತ್ತಿನಲ್ಲಿ
ಶ್ವಾಸಕ್ಕೂ ಮೆದುಳಿಗೂ ನಶೆಯ ನಂಟು
ಬೆಸೆವ ನಿಧಿಯನ್ನೇ ತುಂಬುವಂತೆ
ತಂಬಾಕು ಸುರಿದು
ಅದರ ನೆತ್ತಿಯ ಮೇಲೆ ಮೊಟಕುವಂತೆ ಮುಚ್ಚಿ
ಬಿದಿರ ಮರದ ಮೇಲೆ ಜೋಡಿಸಿಡುತ್ತಿದ್ದಳು
ನಾನು ಮುಟ್ಟಲು ಹೋದರೆ
ಕೈಗೆ ಸಿಗದೇ ಹೋಗುವಂತೆ
ಅವಳೆ ಕಟ್ಟಿದ ಬೀಡಿಯನ್ನು
ಎತ್ತಿಡುತ್ತಿದ್ದಳು ಅಟ್ಟದ ಮೇಲೆ

ಅಮ್ಮ ಕಸೂತಿ ಹಾಕುತ್ತಿದ್ದಳು
ಬಣ್ಣ ಬಣ್ಣದ ವುಲ್ಲನ್‌ ದಾರಗಳು
ಅವಳ ಚಮತ್ಕಾರದ ಕೈಗಳಲ್ಲಿ
ಬಾಗಿಲ ತೋರಣವಾಗುತ್ತಿದ್ದವು
ತನಗೆ ತೋಚಿದ ಹಾಗೆ
ಸೊಟ್ಟಂಬಟ್ಟ
ಚಂದ್ರ, ನಕ್ಷತ್ರ, ಐದು ದಳದ ಹೂಗಳು
ಅಂಚಿಗೆ ಬಿಡಿಸಿಡುತ್ತಿದ್ದಳು
ನಾನೀಗ ಅಮ್ಮನ ನೆನಪಾದಾಗಲೆಲ್ಲ
ತಾರಸಿಯ ಮೇಲೆ ಅಂಗಾತ ಮಲಗಿ
ಆಕಾಶ ನೋಡಿದಾಗ
ಕಾಣುವುದು
ಅಮ್ಮ ಬಿಡಿಸಿದ ಚಂದ್ರ
ಅಮ್ಮ ಬಿಡಿಸಿದ ನಕ್ಷತ್ರ

ಅಮ್ಮ ತನ್ನ ಹಳೆ ಸೀರೆಯ ಸೀಳಿ
ಕಾಲೊರೆಸುವ ಮ್ಯಾಟ್‌ ಮಾಡುತ್ತಿದ್ದಳು
ಬಡತನ ಬೋರಾದಾಗ
ಗೋಣಿಚೀಲವ ಚರಂಡಿಗೆಸೆದು
ಅಮ್ಮನ ಸೀರೆಯ ಮ್ಯಾಟ್‌
ಹೊಸ್ತಿಲ ಈಚೆಗೆ ಸೀರೆ ಸೂರ್ಯನಂತೆ
ಸಗಣಿ ಸಾರಿಸಿದ ಅಂಗಳದೊಳಗೆ
ಹಾಯಾಗಿ ಹೊಳೆಯುತ್ತಿತ್ತು

ಊರಿಗೆ ಹೋಗುವ ಮುಂಚೆ
ಕೇಳುತ್ತಾಳೆ
ಏನ ಮಾಡಲಿ ಎಂದು?
‘ಈಗಲೂ ನಂಬಿಸು
ಬೇಯಿಸಿದ ಆಲೂಗಡ್ಡೆಯನ್ನೇ ಚಿಕನ್ನೆಂದು’
ಆಡಿದರೆ ಹಾಡುತ್ತಾಳೆ
ಹೊಗಳಿದರೆ ತಿವಿಯುತ್ತಾಳೆ
ಅಮ್ಮ ಮತ್ತು ಅನ್ನ
ನಂಬಿದರೆ ಮೋಸವಿಲ್ಲ ಮಗನೆ
ತನ್ನ ಕೈಯನ್ನೆ ಬಳಸಿ
ಮಾಡುತ್ತಾಳೆ ಆಶೀರ್ವಾದ ಅನ್ನಪೂರ್ಣೇಯ ಹಾಗೆ

ಅಮ್ಮ ಕಟ್ಟಿದಳು
ಕಟ್ಟುತ್ತಲೇ ಇರುವಳು
ತನಗೆ ತೋಚಿದ ಹಾಗೆ
ಹೂವನ್ನು, ಬದುಕಿಸುವ ನಶೆಯನ್ನು
ಕಾಲೊರೆಸುವ ನೆಲವನ್ನು
ಅಮ್ಮ ಓದಿದ್ದರೆ
ಈಗ ಕವಿತೆಯನ್ನೂ ಕಟ್ಟುತ್ತಿದ್ದಳು
ಅನಿವಾರ್ಯತೆಗಳಿಗೆ ಅಂಜುವಾಗ
ಅಮ್ಮ ನೆನಪಾಗುತ್ತಾಳೆ
ನೇವರಿಸಿದಂತಾಗುತ್ತದೆ
ಏನನ್ನಾದರೂ ಕಟ್ಟುತ್ತಲೇ ಬದುಕಿದ
ಅವಳ ಕೈಬೆರಳುಗಳ…

2
ಉಜಾಲಾ ಅಂಗಿ

ನಾನು ನೀಲಿಯಲ್ಲಿ ಅದ್ದಿ ತೆಗೆದ ಅಂಗಿ
ನೀನು ಈ ಶಹರದ ರಾತ್ರಿಗಳು
ಕೈ ಕೈ ಹಿಡಿದು
ನಡೆವಾಗ
ದೊಡ್ಡ ಶಹರವನ್ನು
ಕೈ ಬೆರಳುಗಳ ಅಳತೆಗೆ ಚಿಕ್ಕದಾಗಿಸಿದ ಮೋಡಿ ನಿನ್ನ ಪ್ರೀತಿ
ಬೆಸೆದ ಆ ಕೈ ಬೆರಳುಗಳ ಬಿಸುಪು
ನಡುಗುವ
ಚಳಿಗಾಲವನ್ನೇ ಮರೆಸುವ ಹಾಗೆ ನಿನ್ನ ಪ್ರೀತಿ

ಆಕಾಶ ನೀಲಿಯ ಕೆಳಗೆ
ನೀಲಿ ಅಂಗಿಯ ಕಳಚಿ
ನೀಲಿ ಮುತ್ತನು ಕೊಟ್ಟು
ಒಳಗೂ ಹೊರಗೂ ಪುಳಕ
ನಿನ್ನ ನೋಡಲು ಕಾತರದ ತವಕ
ನನ್ನ ನೀಲಿ ಹೊಳಪು ಕಣ್ಣುಗಳಲ್ಲಿ

ನೀನು ಈ ಶಹರದ ರಾತ್ರಿಗಳು
ನಿನ್ನ ಹುಡುಕುವಾಗೆಲ್ಲ
ನಿನ್ನ ಆ ನಿಗೂಢ ಮೂಲೆಗಳ
ಗಾಢ ನೀಲಿಯ ಬಯಕೆಗಳಿಗೂ
ಹೂ
ಎಂದದ್ದು ಯಾವ ನೀಲಿಯ ಹುಚ್ಚಿಗೆ?
ನಿನಗೆಷ್ಟು ನೀಲಿ ಬೇಕಿತ್ತು ಹುಡುಗ?
ತಿಳಿನೀಲಿ? ಆಕಾಶ ನೀಲಿ? ಸಮುದ್ರ ನೀಲಿ?
ಅಮ್ಮ ಅದ್ದಿ ತೆಗೆದ ಉಜಾಲಾ ಅಂಗಿಯ ನೀಲಿ?
ಮತ್ತೆಷ್ಟು ನೀಲಿ ಬೇಕಿತ್ತು?
ನಿನ್ನ ನರನಾಡಿಗಳಿಗೆ ಯಾಕಷ್ಟು ನೀಲಿ ಹಸಿವು?
ನಿನ್ನ ಹಸಿವೆ ನಿನ್ನ ಕೊಂದ ದಿನ
ನೀನು ಈ ಶಹರದ ನೀಲಿ ರಾತ್ರಿಗಳಲ್ಲಿ ಕರಗಿ ಹೋದ ದಿನ
ನಿನ್ನ ನೀಲಿ ದೇಹವ
ನೋಡಲು ಧೈರ್ಯವಾಗಿರಲಿಲ್ಲ ನನಗೆ..

ಅಂದಿನಿಂದ
ಈ ರಾತ್ರಿಗಳು
ಭಯ ಹುಟ್ಟಿಸುತ್ತವೆ
ಯಾವ ನೀಲಿಯು ನೀಲಿಯೆನಿಸುವುದಿಲ್ಲ
ಎಷ್ಟು ನಡೆದರು ಶಹರದ ರಸ್ತೆಗಳು ಮುಗಿಯುವುದಿಲ್ಲ ಈಗ
ಮೈ ಕೊರೆವ ಚಳಿ ಹುಟ್ಟಿಸುತ್ತದೆ ನಡುಕ
ಈ ರಾತ್ರಿಯ ನಿಗೂಢಗಳಿಗೆ
ನರನಾಡಿಗಳಿಗೆ
ರಾಕ್ಷಸ ನೀಲಿಯ ಹಸಿವು
ನೀನಿಲ್ಲದ ನೀಲಿ ರಾತ್ರಿಗಳಿಗೆ
ಅದರ ಸುಳಿಯಲ್ಲಿ ಮುಳುಗಿಸುವ ಹುನ್ನಾರ

ಕಳೆದು ಹೋದ ಹುಡುಗನೇ
ಕರಗಿ ಹೋದ ಹುಡುಗನೇ
ನೀನಿಲ್ಲದೆಯೂ
ನನ್ನ ಆಕಾಶದ ನೀಲಿಯನ್ನು ಉಳಿಸಿಕೊಳ್ಳಬೇಕು ನಾನು
ನೀನು ಈಗ ನೆನಪಿನ ನೀಲಿ ಎಂದು ಒಪ್ಪಿಕೊಳ್ಳಬೇಕು ನಾನು..

ಒಂದೊಂದೇ ಹೆಜ್ಜೆ ಒಂದೊಂದೇ ಹೆಜ್ಜೆ
ಒಬ್ಬಂಟಿ ಹೆಜ್ಜೆ
ನಡೆಯುತ್ತಾ ನಡೆಯುತ್ತಾ ನಡೆಯುತ್ತಾ
ಹುಡುಕಿಕೊಳ್ಳಬೇಕು
ಅಮ್ಮ ಅದ್ದಿ ತೆಗೆದಿದ್ದ ಅದೇ ಅಂಗಿ
ಅದರ ಮುಗ್ಧ ಉಜಾಲಾ ನೀಲಿ ಅಂಗಿ

3
ತೊಗಲಿಗಂಟಿದ ಕೇಡು

ಆದಿ
ಕಾಲ ಪುರುಷನೂ
ಭೂಮಿ ತಾಯಿಯೂ
ಆಗಿ
ಹುಟ್ಟಿದ ಪ್ರತಿ ಮಕ್ಕಳನ್ನೂ
ಗಬಕ್ ಎಂದು ನುಂಗಿ ನೀರು ಕುಡಿಯುವ ಅವನಿಗೆ
ಸೆಡ್ಡು ಹೊಡೆಯಲೆಂದೆ ಬದುಕಿಸುತ್ತಾಳೆ
ಒಬ್ಬನ ಗುಟ್ಟಾಗಿ
ಮಗನು ಬೆಳೆದು
ಕತ್ತರಿಸುತ್ತಾನೆ ತಂದೆ ಕಾಲನ ಶಿಶ್ನ
ಉಳಿಯುತ್ತಾನೆ ಮಗ
ಉಳಿಯುತ್ತಾನೆ ಅರೆಜೀವದ ತಂದೆ
ಉಳಿಯುತ್ತದೆ ನಿಲುಕದ ಮಂಜಿನ ಚೂರಿ
ಉಳಿದ ಅಂದಿನಿಂದ
ತಂದೆ ಮಗನ ನಡುವಿನ ವಿಲಕ್ಷಣ ಉರಿ ಇನ್ನೂ ನಿಂತಿಲ್ಲ
ಹುಟ್ಟಿದ ಮಕ್ಕಳನ್ನೇ ನುಂಗುವ ದಾಹ ಇನ್ನೂ ಆರಿಲ್ಲ
ಪುರುಷ ಪುರುಷನನ್ನೇ ಕೊಲ್ಲುವುದು ಸಾಮಾನ್ಯ ಇನ್ನೂ ಹೋಗಿಲ್ಲ
ಇದೀಗ ಶುರುವಾಗಿದೆ ಅನಾದಿ ಆಟ
ತೊಗಲಿಗೆ ಅಂಟಿದೆ ಕೇಡು
ಮುಗಿಯುವುದಿಲ್ಲ
ಮುಂದುವರೆಯುತ್ತದೆ…

[*ಗ್ರೀಕ್ ಪುರಾಣಗಳಲ್ಲಿ ಕಾಲನನ್ನು ತಂದೆಯೆಂದು ಭೂಮಿಯನ್ನು ತಾಯಿಯೆಂದೂ ಪರಿಗಣಿಸುತ್ತಾರೆ]

4
ಪ್ರೀತಿಯೆಂದರೆ…

ಪ್ರೀತಿಯೆಂದರೆ ಭೂಗೋಳದ ಪ್ರತಿ ಅಕ್ಷಾಂಶ ರೇಖಾಂಶದ ಛೇದ

ಪ್ರೀತಿಯೆಂದರೆ ಅಕ್ಷರ, ಅಂಕೆ ಮತ್ತು ಶಬ್ದಗಳ ಬೆಸೆವ ಕೊಂಡಿ

ಪ್ರೀತಿಯೆಂದರೆ ಯುದ್ಧ ರದ್ದಾಗುವ ಸೈನಿಕನ ಕನಸು

ಪ್ರೀತಿಯೆಂದರೆ ಸಾಕ್ಷಿಗಳ ಹಂಗಿಲ್ಲದ ದೇಶಭಕ್ತಿ

ಪ್ರೀತಿಯೆಂದರೆ ಶೃಂಗಾರದ ನಂತರ ನಿದ್ದೆ ಹೋಗಲು ಬಳಸುವ ಬಿಸಿ ಅಪ್ಪುಗೆ

ಪ್ರೀತಿಯೆಂದರೆ ಸದಾ ಎಚ್ಚರವಿರುವ ಶಹರ; ದುಡಿವ ಜನರ ನಿದ್ರೆಗಾಗಿ ಹಾಡುವ ಜೋಗುಳ

ಪ್ರೀತಿಯೆಂದರೆ ತಲುಪಬೇಕಾದ ಬಯಲ ಬಾಗಿಲು

ಪ್ರೀತಿಯೆಂದರೆ ಪಂಚಭೂತಗಳ ನಡುವಿನ ನಿಜದ ವ್ಯವಹಾರ

ಪ್ರೀತಿಯೆಂದರೆ ಪ್ರಯಾಣಿಕರಿಗಾಗಿ ಕಾಯುವ ಕಿಟಕಿ ಬದಿಯ ಸೀಟು

ಪ್ರೀತಿಯೆಂದರೆ ದಡ ಸೇರಿದ ಮೇಲೆ ನೆನಪಿನಲ್ಲುಳಿವ ಅಂಬಿಗನ ಆಕೃತಿ

ಪ್ರೀತಿಯೆಂದರೆ ಮುಷ್ಟಿಗಾತ್ರದ ಹೃದಯದೊಳಗೆ ಮುಗಿಲಿನೆತ್ತರಕೆ ಬೆಳೆಯಬೇಕಾದ ಆಲದಮರ

ಪ್ರೀತಿಯೆಂದರೆ ದಾರಿ ಕಾಣದ ನಾವು ಹಿಡಿದುಕೊಂಡ ದೇವರ ಕೈ…
ಪ್ರೀತಿಯೆಂದರೆ ಸ್ವಪ್ನ ಸುಂದರಿ ಅರ್ಥ ಮಾಡಿಸಿದ ಮಿತಿ ಮೀರುವ ಘನತತ್ವ

ಪ್ರೀತಿಯೆಂದರೆ ನ್ಯಾಯ ಕೇಳುವ ಸೌಜನ್ಯ

ಕಡೆಗೂ
ಪ್ರೀತಿಯೆಂದರೆ ನಾವು… ಪ್ರೀತಿಯೆಂದರೆ ನೀವು

 

About The Author

ದಾದಾಪೀರ್ ಜೈಮನ್

ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ 'ಪರ್ದಾ & ಪಾಲಿಗಮಿ' ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch  ಅವರ 'ಬ್ಯಾರೆನ್ ಲ್ಯಾಂಡ್' ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ