ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು. ಒಂದೊಂದು ವಿಷಯವನ್ನು ಕೇಳಿ ಹುಬ್ಬೇರಿಸಿದಾಗೆಲ್ಲ ಬೇಬಿ ಎಂಬ ದೇವತೆಯ ಪ್ರಭಾವಳಿಗೆ ಇನ್ನಷ್ಟು ಮಿನುಗು!
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೆಂಟನೆಯ ಕಂತು
ಮೊದಲ ಪ್ರೀತಿ ಕಳೆದುಕೊಂಡಿದ್ದು ನನಗೂ ನೋವು ತಂದಿತ್ತು. ಅವರ ಪ್ರೀತಿಯನ್ನು ನಾನು ಮನಸಾರೆ ಒಪ್ಪಿದ್ದೆ. ನಾನು ಒಪ್ಪಿದ್ದನ್ನು ತಿಳಿಯುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದ್ದ ಅವನು. ನಾಟಕದಲ್ಲೂ ಕೂಡಿ ಅಭಿನಯಿಸುವ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿದ್ದದ್ದು. ಕೇಳಬೇಕೆ! ಅದೆಷ್ಟು ನಕ್ಕಿದ್ದೆವೊ! ಪ್ರೀತಿಯ ಅನುಭವಕ್ಕೆ ಹದಿನೈದು ದಿನಗಳೂ ಆಗಿರಲಿಲ್ಲ. ನಾನವನನ್ನು ಮದುವೆಯಾಗಬೇಕೆಂದಿದ್ದೇನೆ, ನೀನವನನ್ನು ನೋಡಬೇಡ ಎಂದಾಗ ಎಷ್ಟೆಲ್ಲ ಯೋಚನೆಗಳು ಸುಳಿದಾಡಿತ್ತು! ನಾನಾಗಿ ಬಯಸಿದ, ಬೇಡಿದ, ಅಲವತ್ತುಕೊಂಡ ಪ್ರೀತಿಯಲ್ಲ; ತಾನಾಗಿಯೇ ಬಂದು ನನ್ನೊಳಗನ್ನು ಬೆರೆತದ್ದು. ಅಗಲಿ ಇರಲಾರದಷ್ಟು ಸಂಕಟ. ಆದರೇನು ಪ್ರೀತಿ ಎಂಬುದು ನಮ್ಮಿಬ್ಬರ ಕೈಯಲ್ಲೂ ಓಡಾಡಿಕೊಂಡಿರಲು ಆಟಿಕೆಯ ವಸ್ತುವೇನೂ ಅಲ್ಲವಲ್ಲಾ, ಹಾಗಾಗಿ ಬೇಬಿಗಾಗಿ ಪ್ರೀತಿಯನ್ನೇ ಬಿಟ್ಟುಕೊಟ್ಟೆ.
ಒಂದು ತಿಂಗಳು ಆತ ತನ್ನ ಪ್ರೀತಿ ಒಪ್ಪುವಂತೆ ಪೀಡಿಸಿದ್ದ. ಮನದ ಮೂಲೆಯಲ್ಲಿ ಕೂದಲೆಳೆಯಷ್ಟು ಆತನಿಗಾಗಿ ಜಾಗ ನೀಡಿದ್ದೆ. ಅಷ್ಟಕ್ಕೆ ಇಷ್ಟು ನೋವು, ಇನ್ನೆಲ್ಲಿಯಾದರೂ ಆತ ಪೂರ್ತಿ ಆವರಿಸಿದ್ದರೆ ವಿರಹದುರಿಯಲ್ಲಿ ಬೆಂದು ಕರಕಲಾಗುತ್ತಿದ್ದೆ! ಹಾಗೆ ನೋಡಿದರೆ, ನಾನಾಗಿಯೇ ಯಾರಲ್ಲೂ ಪ್ರೀತಿ ನಿವೇದನೆ ಮಾಡಿಕೊಂಡೇ ಇಲ್ಲ. ಬದುಕಿಗೆ ಪ್ರವೇಶ ಪಡೆದವರೆಲ್ಲ, ಅವರ ಪ್ರೀತಿಯ ಕನಸಿನ ಲೋಕಕ್ಕೆ ನನ್ನ ಕರೆದೊಯ್ದವರು. ಆ ಲೋಕದಲ್ಲಿ ಸಾಂಗತ್ಯದ ಮಹಲನ್ನು ಕಟ್ಟಿಕೊಂಡಿದ್ದೆ. ವಿಪರ್ಯಾಸ ಎಂದರೆ ಅವರಿಂದ ದೂರಾದ ಮೇಲೆ, ಪ್ರೇಮಜಗತ್ತಿಗೆ ಜೊತೆಯಾಗಿ ನಡೆದ ಹೆಜ್ಜೆಯ ಗುರುತುಗಳೂ ಉಳಿಯದಷ್ಟು ಅಳಿಸಿಹೋಯಿತು.
ನಿಮಗನ್ನಿಸಬಹುದು, ಆದ ಪ್ರೀತಿ ಇಷ್ಟು ಬೇಗ ಕಳೆದುಹೋಯಿತಾ ಎಂದು. ಆದರೆ ಬೇಬಿಯ ಮೈಮಾಟ ಎಂಥವರನ್ನೂ ಬೆರಗುಗೊಳಿಸುವಂತಿತ್ತು. ನನ್ನ ಮಟ್ಟಿಗೆ ಅವಳೊಂದು ಗಂಧರ್ವ ಕನ್ಯೆಯೇ ಸರಿ. ನನ್ನ ಮುಖ ಚೆಲುವು ನೋಡಿದಾಗೆಲ್ಲ ಅವಳು, ‘ಏ ಸರಸು, ನಿನ್ ಮುಖ ಮಾತ್ರ ಕೊಟ್ಬಿಡೆ. ನಾನಿಲ್ಲಿ ಇರಲ್ಲ ಕಣೆ’ ಎನ್ನುತ್ತಿದ್ದಳು. ಅವಳ ಸೌಂದರ್ಯ ಪ್ರಜ್ಞೆ, ತೊಟ್ಟ ಬಟ್ಟೆಗೆ ಅವಳಿಂದ ಹೆಚ್ಚುತ್ತಿದ್ದ ಅಂದ, ನಿಲ್ಲುವ ಭಂಗಿ, ನಡೆಯುವ ಶೈಲಿಗೆಲ್ಲ ಮನಸೋಲದವರು ಅರಸಿಕರೇ. ಮೆಹಬೂಬನೂ ಶರಣಾದ. ಅಷ್ಟೇ. ಆಕರ್ಷಣೆ ಎಂಬುದು ಎಂದೂ ಪ್ರೀತಿಯಾಗಲಾರದು. ಇವರಿಬ್ಬರದೂ ಹಾಗೇ ಆಯಿತು. ಮದುವೆಯ ಹಾದಿಯತ್ತ ಸಾಗದೇ, ಅರ್ಧದಲ್ಲೇ ಬಂಧ ಮುರಿದುಬಿತ್ತು.
ಈ ಬೇಬಿಯಕ್ಕನೇ ಮುಂದೆ ನನಗೆ ಸಂಬಂಧಿಯಾಗಿದ್ದು. ಈಗಲೂ ಇವರ ಮಕ್ಕಳು ಫೋನ್ ಮಾಡುತ್ತಲೇ ಇರುತ್ತಾರೆ. ಹಾಂ, ಬೇಬಿಯಕ್ಕ ತನ್ನ ಪ್ರೇಮದ ರೋಚಕ ಕತೆಗಳನ್ನು ಮಕ್ಕಳೊಂದಿಗೆ ಹೇಳಿ ನೆನಪಾಗಿಟ್ಟುಕೊಂಡಿದ್ದಾಳೆ. ಆ ದಿನಗಳನ್ನು ನೆನೆದಾಗ ನನ್ನ ಮತ್ತವಳ ಕಣ್ಣಾಲಿಗಳು ತುಂಬುತ್ತವೆ. ಮದುವೆಯಾಗಿ ಹೊಲದ ಕೆಲಸಗಳ ನಡುವೆ ನನ್ನ ನಾ ಕಳೆದುಕೊಂಡಿದ್ದಾಗ, ಎಚ್ಚರಿಸಿದ್ದು, ಮತ್ತೆ ರಂಗಭೂಮಿಗೆ ಕರೆತಂದದ್ದು ಇದೇ ಬೇಬಿಯಕ್ಕನೇ. ಕೊರಳಿಗೆ ಕಟ್ಟಿಕೊಂಡ ಕರಿಮಣಿ ಬೇಲಿಯಂತೆ ತಡೆಗಾವಲಿಯಂತೆ ತಡೆಯುತ್ತಿದ್ದಾಗ, ಸಂಸಾರವನ್ನು ತೂಗಿಸಿಕೊಂಡು ಹೋಗುವ ಜಾಣ್ತನ ಕಲಿಸಿದ ಬೇಬಿಯಕ್ಕನನ್ನು ಹೇಗೆ ತಾನೆ ಮರೆಯಲಿ ಹೇಳಿ!
ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು. ಒಂದೊಂದು ವಿಷಯವನ್ನು ಕೇಳಿ ಹುಬ್ಬೇರಿಸಿದಾಗೆಲ್ಲ ಬೇಬಿ ಎಂಬ ದೇವತೆಯ ಪ್ರಭಾವಳಿಗೆ ಇನ್ನಷ್ಟು ಮಿನುಗು!
ಅಂತೂ ಬೇಬಿ ಬಂದಾಗ, ಅವಳ ಬಿನ್ನಾಣ, ವೈಯ್ಯಾರವನ್ನು ನೋಡಿದ್ದೇ ನೋಡಿದ್ದು. ಈಗಿನ ಕಾಲದವರು ಹಾಕುವ ಗೋಗಲ್ಸ್, 1960ರ ದಶಕದಲ್ಲಾಗಲೇ ಅವಳ ಮುಖದಲ್ಲಿ ಮಿಂಚುತ್ತಿತ್ತು. ಸುಗಂಧದ್ರವ್ಯ, ವೆಲ್ವೆಟ್ ಉಡುಪು, ಮೇಕಪ್, ಮುತ್ತು ಪೋಣಿಸಿದಂತಿದ್ದ ಚಪ್ಪಲಿಗಳು ಅಬ್ಬಾ! ಅದೇನು ಸೊಗಸು, ಎಂಥಾ ಬಿಂಕ! ಎಲ್ಲರೂ ಆಕರ್ಷಣೆಗೊಂಡಿದ್ದು ಮಾತ್ರ ನಿಜ.
ರಾಮದುರ್ಗದ ಕ್ಯಾಂಪ್ ಸರಿಸುಮಾರು ಮೂರುವರೆ ತಿಂಗಳು ನಡೆಯಿತು. ಥಿಯೇಟರ್ ವ್ಯವಸ್ಥೆಯನ್ನು ರಾಮದುರ್ಗದವರಿಗೇ ವಹಿಸಿದ್ದರು. ಮಳೆ ಬಂದರೂ ಸೋರದಂಥ ಕಂಚಿ ಥಿಯೇಟರ್ ರೀತಿಯಲ್ಲಿ ಟೆಂಟ್ ಕಟ್ಟಿದ್ದರು. ಇನ್ನು ಕುರ್ಚಿಗಳನ್ನೆಲ್ಲ ಬಾಡಿಗೆ ತರುತ್ತಿದ್ದದ್ದು ಹೆಚ್ಚುವರಿ ಖರ್ಚು. ಅದರೊಂದಿಗೆ ನೆಲದ ಬಾಡಿಗೆ, ಬೋರ್ಡಿಂಗ್ ವ್ಯವಸ್ಥೆ, ಕಲಾವಿದರು, ನೇಪಥ್ಯದಲ್ಲಿ ದುಡಿವ ಕೆಲಸಗಾರರಿಗೆ ಸಂಬಳ ಭರಿಸಲು ಕಂಪೆನಿಯ ಮಾಲೀಕರು ಹರಸಾಹಸ ಪಡುತ್ತಿದ್ದರು. ಆಗ ತಾನೇ ಶುರುವಾಗಿದ್ದ ಕಂಪೆನಿ ಬೇರೆ. ಅದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ನಾಟಕದ ಕಲೆಕ್ಷನ್ ಕಡಿಮೆಯಾಗುತ್ತಲೇ ಇತ್ತು.
ಅವಳು ಕ್ಯಾಂಪಿಗೆ ಬಂದದ್ದೇ, ಉಸ್ತುವಾರಿ ಜವಾಬ್ದಾರಿಯನ್ನೇ ಪಡೆದುಕೊಂಡಳು. ತಲೆವಾನ ಬಿ.ಪಿ.ಸಣ್ಣಪ್ಪನವರು ಸಾಲ ಕೇಳುವುದಕ್ಕೆಂದು ಬಂದವರನ್ನೆಲ್ಲ ಮಗಳು ಬೇಬಿ ಹತ್ತಿರ ಹೋಗಿರೆಂದು ಕಳಿಸುತ್ತಿದ್ದರು. ಬೇಬಿ ನಾಜೂಕಿನ ಮಾತುಗಳನ್ನು ಹೇಗೆ ಆಡುತ್ತಿದ್ದಳೆಂದರೆ ಕಂಡವರು ಮೂಗಿನ ಮೇಲೆ ಬೆರಳಿಡಬೇಕು! ‘ಹೊಸ ಕಂಪೆನಿ. ಈಗ ಒಂದೊಂದೇ ನಾಟಕ ಮಾಡ್ತಿರೋದು. ಈಗ್ಲೇ ನೀವು ಸಾಲ ಕೇಳಿದ್ರೆ ಹೇಗೆ ಹೇಳಿ? ಕಂಪೆನಿಯನ್ನೇ ನಂಬಿ ಕೂತ ನಮ್ಮೆಲ್ಲರ ಮೇಲೆ ನಿಮಗೆ ಕರುಣೆಯೇ ಇಲ್ವಾ? ನಿಂತ ಕಾಲಲ್ಲೇ ಸಾಲ ಕೊಡಬೇಕು ಅಂದರೆ ನಮಗೂ ಕಷ್ಟ ಆಗತ್ತೆ. ಒಂದಷ್ಟು ಸಮಯ ಕೊಡಿ. ಖಂಡಿತ, ನಿಮ್ಮೆಲ್ಲರ ಸಾಲ ತೀರಿಸ್ತೇವೆ’ – ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ಸಲೀಸು ಮಾತು. ತಾಳ ಮೇಳ ಹೇಗೆ ಒಂದಾಗುತ್ತಿತ್ತು ಎಂದರೆ ಅದುವರೆಗೂ ರೇಗಾಡುತ್ತಿದ್ದ ಜನರನ್ನೆಲ್ಲ, ‘ಆಯ್ತು ಬಿಡ್ರಿ’ ಎಂದು ಸುಮ್ಮನಾಗುತ್ತಿದ್ದರು. ಹೀಗೆ ಮಾತಿನ ಕಲೆಗಾರಿಕೆ ಸಿದ್ಧಿಸಿಕೊಂಡಿದ್ದ ಬೇಬಿ ಸಾಲ ಕೇಳಲು ಬಂದವರನ್ನೆಲ್ಲ ವಾಪಾಸು ಕಳಿಸುತ್ತಿದ್ದಳು.
ಆವರೆಗೂ ಕಲಾವಿದರೆಲ್ಲ ಕಷ್ಟಪಟ್ಟು ಕಂಪೆನಿಗಾಗಿಯೇ ದುಡಿಯುತ್ತಿದ್ದರು. ಊಟವನ್ನು ಹೊರತುಪಡಿಸಿ, ಮತ್ಯಾವ ಅಗತ್ಯಕ್ಕೂ ಕಂಪೆನಿಯ ಮಾಲೀಕರಲ್ಲಿ ದುಡ್ಡು ಕೇಳುತ್ತಿರಲಿಲ್ಲ. ಮೊದಲೆಲ್ಲ ಮಾಲೀಕರು, ಮುಂದಿನ ಕ್ಯಾಂಪಿನಲ್ಲಿ ಸಂಬಳ ಒಟ್ಟು ಸೇರಿಸಿ ನೀಡುತ್ತೇವೆ ಎಂದಿದ್ದರು. ಕಡೆಕಡೆಗೆ ಊಟವಾದರೂ ಸಿಕ್ಕರೆ ಸಾಕು ಎಂಬಂಥ ಸ್ಥಿತಿ ನಿರ್ಮಾಣವಾಯ್ತು.
ಪರಿಣಿತ ಕಲಾವಿದರ ತಂಡವೇ ಕಂಪೆನಿಯಲ್ಲಿ ಇದ್ದದ್ದು. ಕಲಾವಿದರಾಗಿ ಅಣ್ಣಿಗೇರಿ ಹುಸೇನ್ ಸಾಬ್, ಲೋಕೇಶ್, ಹಂಸನೂರಿನ ರಾಧಾ, ನಂಜಪ್ಪ, ಉಪ್ಪಿನ ಬೆಟಗೇರಿ ಚಂದ್ರಯ್ಯ, ಹಾಸ್ಯ ಪಾತ್ರಗಾರರಾಗಿ ಹೂವಿನ ಹಡಗಲಿಯ ಮೆಹಬೂಬ್ ಅಲಿ, ಅವರಿಗೆ ಸಾಥ್ ನೀಡುತ್ತಿದ್ದದ್ದು ಜಕ್ಲಿ ಈಶ್ವರ್, ದಾವಣಗೆರೆ ಲಕ್ಷ್ಮೀಬಾಯಿಯ ಸುಮಧುರ ಕಂಠ, ಬೇಬಿಯ ಹಾಡುಗಾರಿಕೆ, ತುರುಬಿನ ಬಸವರಾಜು ಅವರ ಪೂಜಾ ನೃತ್ಯವಿರುತ್ತಿತ್ತು, ನನ್ನ ಅಭಿನಯವನ್ನೂ ಜನ ಮೆಚ್ಚುತ್ತಿದ್ದರು. ಇಷ್ಟೆಲ್ಲ ಇರುವಾಗ ಆಡಿದ ನಾಟಕ ಹಿಟ್ ಆಗದೇ ಇರುತ್ತದೆಯೇ? ಬಹುತೇಕ ನಾಟಕಗಳು ಹಿಟ್ ಆದವು. ದೊಡ್ಡ ಮೊತ್ತದ ಕಲೆಕ್ಷನ್ ಕೂಡ ಆಯಿತು. ದುಡ್ಡು ಬರುತ್ತಿದ್ದಂತೆ ಕಂಪೆನಿಯ ಸಾಲ ತೀರಿಸುತ್ತಿದ್ದರು.
ಆದರೆ ನಾಟಕದಿಂದ ಬಂದ ದುಡ್ಡನ್ನೆಲ್ಲ ಒಟ್ಟು ಸೇರಿಸಿ, ಮಾಲೀಕರು ಕಲಾವಿದರಿಗೆಲ್ಲ ನಾಳೆ ಸಂಬಳ ಕೊಡುತ್ತಾರೆ ಎಂಬ ವಿಷಯ ಬೆಳಕಿನ ವೇಗದಷ್ಟೇ ಓಡಿ ಎಲ್ಲರ ಕಿವಿ ಸೇರಿತ್ತು. ರಾತ್ರಿ ಪೂರ್ತಿ ಬೆಳಕು ಹರಿಯುವುದನ್ನೇ ಕಲಾವಿದರೆಲ್ಲ ಕಾಯುತ್ತಿದ್ದರು. ಯಾರಿಗಾದರೂ ಒಂದೇ ಒಂದು ಅವಕಾಶ ಸಿಕ್ಕಿದ್ದರೆ ಸೂರ್ಯನಿಗೆ ಪತ್ರ ಬರೆದು ‘ಬೇಗ ಬಾ ಮಾರಾಯ’ ಎಂದು ಕರೆಯುತ್ತಿದ್ದರೊ ಏನೊ! ಅಂತೂ ರಾತ್ರಿ ಕಳೆದು ಹಗಲೇನೊ ಆಯ್ತು ಸರಿ, ದುರ್ದೈವ ಎಂದರೆ ಸಂಬಳ ನೀಡಬೇಕಿದ್ದ ಕಂಪೆನಿಯ ಮಾಲೀಕರಾದ ಬಿ.ಪಿ.ಸಣ್ಣಪ್ಪನವರು ದುಡ್ಡನ್ನೆಲ್ಲ ಕದ್ದು, ಅಲ್ಲಿಂದ ಪರಾರಿಯಾಗಿದ್ದರು!
ಮುಂದುವರೆಯುವುದು…
(ಹಿಂದಿನ ಕಂತು:ಪ್ರೀತಿಯ ಸುಳಿಯಲ್ಲಿ ಸಿಲುಕಿ…)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

