Advertisement
ಇದು ಕಲ್ಲು ಕರಗುವ ಸಮಯ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಇದು ಕಲ್ಲು ಕರಗುವ ಸಮಯ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ನಮ್ಮ ಯಾಣದ ಈ ಕಪ್ಪುಶಿಖರ ಒಂದಲ್ಲ, ಹತ್ತಲ್ಲ, ನೂರಲ್ಲ, ಬರೋಬ್ಬರಿ ೨೭೦ ಕೋಟಿ ವರ್ಷಗಳಷ್ಟು ಹಳೇದು. ಅಂದ್ರೇ, ಭೂಮಿ ಮೇಲೆ ಮನುಷ್ಯರೇ ಇರ್ಲಿಲ್ಲ; ನಮಗೆ ಗೊತ್ತಿರೋ ಯಾವ ಪ್ರಾಣಿ ಪಕ್ಷಿಗಳೂ ಇರ್ಲಿಲ್ಲ; ನಿನ್ ಫೇವರೆಟ್ ಡೈನೋಸಾರ್ ಕೂಡ ಇರ್ಲಿಲ್ಲ; ಈ ಯಾಣದ ಕಪ್ಪುಶಿಲೆಗಳು ಮೊದಲ ಬಾರಿಗೆ ಹೀಗೆ ಎದ್ದುನಿಂತಾಗ ಕೆಲವೇ ಬಗೆಯ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳು ಇದ್ವು ಅಷ್ಟೇ. ಅಂದಿನಿಂದ ಇಂದಿನವರೆಗೆ ಇಲ್ಲೇ ನಿಂತು, ಇಡೀ ಭೂಮಿ ಬದಲಾಗೋದನ್ನ ಕೋಟ್ಯಾನುಕೋಟಿ ವರ್ಷಗಳಿಂದ ನೋಡ್ತಾ ಇದೆ ನಮ್ಮ ಈ ಯಾಣದ ಶಿಲೆಗಳು! ಎಂಥಾ ಅದ್ಭುತ ಅಲ್ವಾ?” ಎಂದ ಮತ್ತೊಮ್ಮೆ ಆ ಬೃಹತ್ ಶಿಲಾಗುಹೆಗಳನ್ನು ಕಣ್ಣರಳಿಸಿ ನೋಡುತ್ತಾ.
ಕ್ಷಮಾ
ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿಮೂರನೆಯ ಕತೆ

ಬೇಸಿಗೆ ಮುಗಿಯುತ್ತಾ ಮಳೆಗಾಲ ಕಾಲಿಟ್ಟಿದ್ದರೂ, ಅಂದು ಏಕೋ ಮೋಡಕ್ಕೆ ಮಳೆಸುರಿಸುವ ಉಮೇದಿರಲಿಲ್ಲ. ಮುಸ್ಸಂಜೆಯ ಹೊತ್ತು; ಚಿನಿವಾರರು ಕಾಯಿಸಿದ ಚಿನ್ನವನ್ನು ನೀರಿನಲ್ಲಿ ಅದ್ದಿದ ಹಾಗೆ, ದಿನವೆಲ್ಲಾ  ಕುದಿಯುತ್ತಿದ್ದ ನೇಸರ ತಣ್ಣಗೆ ಮೋಡದ ಮುಸುಕೆಳೆದು ಮಲಗಲು ಅಣಿಯಾಗಿದ್ದ. ಆ ಸಂಜೆ ಕಾವ್ಯಳ ಮನೆಯಲ್ಲಿ ಪಾನಿಪೂರಿ ಸಂಭ್ರಮ. ಮನೆಯ ಹಿರಿಯರೆಲ್ಲಾ ಈ ಮಕ್ಕಳ ಪಾನಿಪೂರಿ ಹುಚ್ಚಿಗೆ ನಗಾಡುತ್ತಾ, ಅಚ್ಚರಿ ಪಡುತ್ತಾರೆ. ಅದರ ಪರಿವೆಯೇ ಇಲ್ಲದಂತೆ, ಮನೆಯಲ್ಲೇ ಮಾಡಿದ ಪಾನಿಪೂರಿ ಸವಿಯುತ್ತಾ ಮಾತಿನ ಚಟಾಕಿಯನ್ನೂ ಚಪ್ಪರಿಸುತ್ತಿದ್ದ ಈ ಗುಂಪು ತಮ್ಮ ಲೋಕದಲ್ಲೇ ಮುಳುಗಿದ್ದರು.

ಆಗ ವರ್ಣ “ಬಾವಾ, ಪಾನಿ ಅಂತೂ ಸೂಪರ್ರಾಗಿದೆ. ಸಖತ್ ಹುಳಿ, ಸಖತ್ ಖಾರ – ಆಹಾ ಅದ್ಭುತ!” ಎಂದು ವಿವರಿಸುತ್ತಾ ಒಂದೊಂದೇ ಪೂರಿಯನ್ನು ಬಾಯೊಳಗೆ ಪೋಣಿಸುತ್ತಿದ್ದಳು. ಆಗ ವಿಭಾ “ಹೂಂ, ನಿಜ್ವಾಗ್ಲೂ ಸೂಪರ್! ಜೊತೆಗೆ ಸ್ವೀಟ್ ಪಾನಿ ಸೇರ್ಸ್ಕೊಂಡ್ರೇ, ಇನ್ನೂ ಮಜಾ ಇದೆ!” ಎಂದು ಒಂದೊಂದೇ ಪೂರಿಯನ್ನು ಗುಳುಂ ಮಾಡಹತ್ತಿದಳು. ಇವರ ಆಟಾಟೋಪದಲ್ಲಿ ತನಗೆಲ್ಲಿ ಪಾನಿಪೂರಿ ಕಡಿಮೆಯಾಗುತ್ತೋ ಎಂದು ತಲೆಕೆಡಿಸಿಕೊಂಡ ಸಮುದ್ರ, ಮಾತಾಡಲೂ ಸಮಯ ವ್ಯರ್ಥ ಮಾಡದಂತೆ, ಬಾಯಿಗೆ ಬಿಡುವಿಲ್ಲದಂತೆ ಪಾನಿಪೂರಿ ಚಪ್ಪರಿಸತೊಡಗಿದ. ಇದೆಲ್ಲಾ ಓದಿ ನಿಮಗೂ ಬಾಯಲ್ಲಿ ನೀರು ಬಂತೇ? ಕಾವ್ಯ ಮತ್ತು ಪ್ರಕಾಶ್ – ಇಬ್ಬರ ಪರಿಸ್ಥಿತಿಯೂ ಹಾಗೇ ಆಗಿತ್ತು; ಈ ಬೇಸಿಗೆ ರಜೆ ಸವಿಯುವ ಮೂರೂ ಮಕ್ಕಳ ಸಂಭ್ರಮ ನೋಡಿ ಸಂತಸ ಪಡುತ್ತಾ, ಇಬ್ಬರೂ ಹೊಸ ಹೊಸ ಪೂರಿಗಳಿಗೆ ಒಳಹೂರಣ ತುಂಬಿ ತುಂಬಿ ಇವರ ಮುಂದಿಡುತ್ತಾ, ಬಾಯಲ್ಲಿ ನೀರು ಸುರಿಸುತ್ತಾ ತಮ್ಮ ಸರದಿಗೆ ಕಾಯುತ್ತಿದ್ದರು! ಅಂತೂ ಈ ಸಂಭ್ರಮ ಮುಗಿದು, ಮಾತಿಗೆ ಕುಳಿತಾಗ ಸಮುದ್ರ “ಅಮ್ಮಾ, ಇವತ್ತು ಎಲ್ಲಾ ಸರಿ, ಪಾನಿಪೂರಿಯಲ್ಲಿ ಏನೋ ಒಂಚೂರು ಕಮ್ಮಿ ಆಗಿತ್ತಾ ಅಂತ!” ಎಂದ ಅಮ್ಮನ ಕಾಲೆಳೆಯಲು!

ಆಗ ವಿಭಾ, “ಹೂಂ ಕಣೋ ಸಮುದ್ರ; ಸ್ವಲ್ಪ ಬೇಡದ ‘ಬ್ಯಾಕ್ಟೀರಿಯಾ’ ಕಮ್ಮಿ ಆಗಿತ್ತು. ಹೊರಗೆ ಕೈತೊಳೆಯದೆ, ಗ್ಲೌವ್ಸ್ ಯೂಸ್ ಮಾಡದೇ ಪಾನಿಪೂರಿ ಮಾಡಿ ಮಾರ್ತಾರಲ್ಲ, ಅಲ್ಲಿ ಇದ್ದಂಥಾ ಕೊಳೆಯ ರುಚಿಯಿಲ್ಲ ನೋಡು!” ಎಂದಳು ನಗುತ್ತಾ; ಆಗ ವರ್ಣಾ “ಅಯ್ಯಪ್ಪಾ, ಥೂ, ಸುಮ್ನಿರು ವಿಭಕ್ಕಾ!” ಎಂದಳು ಮುಖ ಸಿಂಡರಿಸುತ್ತಾ. ಎಲ್ಲರ ನಗುವಿನ ಹಾಯಿದೋಣಿಗೆ ಮತ್ತೊಂದು ಅಲೆ ಸಿಕ್ಕಂತಾಯಿತು. ಅಷ್ಟರಲ್ಲಿ ವಿಭಾ, “ಕಾವ್ಯಕ್ಕಾ, ನಾಳೆ ಎಷ್ಟು ಹೊತ್ತಿಗೆ ಹೊರಡೋದು ಬೆಳಿಗ್ಗೆ ಶಿರಸಿಗೆ?” ಎಂದಳು. ಆಗ ಕಾವ್ಯ, “ಬೆಳಗಿನ ಜಾವವೇ ಹೊರಡೋಣ ವಿಭಾ; ಹೇಗೂ ಅಷ್ಟು ದೂರ ಹೋಗ್ತಿದೀವಿ, ಯಾಣಕ್ಕೂ ಹೋಗೋಣಾಂತಾ” ಎಂದಳು. ಯಾಣದ ಹೆಸರು ಕೇಳುತ್ತಲೇ ಎಲ್ಲರೂ ಉಲ್ಲಸಿತರಾದರು.

ಸಮುದ್ರನಿಗಂತೂ ಭೂಗೋಳದ ಬಗ್ಗೆ ಕಲಿಯಲು ಎಲ್ಲಿಲ್ಲದ ಆಸಕ್ತಿ; ಯಾಣದ ಬಂಡೆಗಳ ಬಗ್ಗೆ ಓದಿ ತಿಳಿದುಕೊಂಡಿದ್ದ ಅವನಿಗಂತೂ ಖುದ್ದಾಗಿ ನೋಡುವ ತವಕ; ವಿಭಾ ಮತ್ತು ವರ್ಣರೂ ಮರುದಿನದ ಪ್ರವಾಸದ ಗುಂಗಲ್ಲೇ ಬೇಗ ಮಲಗಿ, ಉತ್ಸಾಹದಿಂದ ತಯಾರಾದರು. ಬೆಳಗಿನ ಜಾವಕ್ಕೇ ಹೊರಟ ಈ ಗುಂಪು, ಬೆಳಗ್ಗೆ ೧೧ಕ್ಕೆ ಯಾಣದಲ್ಲಿದ್ದರು. ಕಾರ್ ನಿಲ್ಲಿಸಿ, ಹಸಿರು ಕಾನನದ ನಡುವೆ ನಡೆಯುತ್ತಾ, ಮಾತಾಡುತ್ತಾ, ಮರಗಳನ್ನು ಗುರುತಿಸುತ್ತಾ ಸಾಗಿದ್ದ ಇವರನ್ನು ಫಕ್ಕನೆ ಬೆಚ್ಚಿಬೀಳಿಸಿ ಮಂತ್ರಮುಗ್ಧರಾಗಿಸಿದ್ದು ಎದುರಿಗೆ ತಿರುವಿನಲ್ಲಿ  ಪ್ರತ್ಯಕ್ಷವಾದ ಬೃಹತ್ ಕಡುಗಪ್ಪು ಶಿಲೆ! ಮಾತಾಡುತ್ತಿದ್ದ ಎಲ್ಲರೂ ಒಮ್ಮೆಲೇ ಮೂಕವಾದರು. ನೆಲದಿಂದ ಅಷ್ಟೆತ್ತರ, ನೀಲಿ ಆಗಸದ ನಡುವೆ ಗಗನಚುಂಬಿಯಾಗಿ ನಿಂತಿತ್ತು ಯಾಣದ ಮೋಹಿನಿ ಶಿಖರ ಮತ್ತು ಭೈರವೇಶ್ವರ ಶಿಖರ. ಒಂದೇ ಕ್ಷಣಕ್ಕೆ ಎಲ್ಲರಿಗೂ ‘ನಾವೆಷ್ಟು ಚಿಕ್ಕವರು’ ಎನಿಸುವಂತೆ ಶತಮಾನಗಳಿಂದ ಕಾಲೂರಿ ನಿಂತಿದ್ದ ಶಿಲೆಗಳು ಎದುರಿಗೆ ಅವಿರ್ಭವಿಸಿತ್ತು. ಹತ್ತಿರತ್ತಿರ ಸಾಗುತ್ತಿದ್ದಂತೆ ಯಾಣದ ಶಿಖರದ ನಡುವಿನ ಕೊರಕಲುಗಳಿಂದ ಸೃಷ್ಟಿಯಾದ ಅದ್ಭುತ ಶಿಲಾರೂಪ ತನ್ನನ್ನೇ ತೆರೆದುಕೊಳ್ಳುತ್ತಾ, ಎಲ್ಲರನ್ನೂ ಭೂಮಿಯ ಇತಿಹಾಸದ ಬಗ್ಗೆ, ಗತಕಾಲದ ಬಗ್ಗೆ ಯೋಚಿಸುವಂತೆ ಮಾಡಿತು. ಇವರ ಧ್ಯಾನಸ್ಥ ಸ್ಥಿತಿಗೆ ಭಂಗ ಬಂದದ್ದು ಪಕ್ಕದಲ್ಲಿ ಯಾರೋ “ಹೇ, ಇದು ವಾಲ್ಕೆನೋ ಇಂದ ಆಗಿರೋದಂತೋ; ಜ್ವಾಲಾಮುಖಿ ಸುರ್ದೂ ಸುರ್ದೂ ಹಿಂಗಾಗಿರೋದಂತೆ. ಅಷ್ಟೇ, ಒಂದು ಕೋಟಿ ವರ್ಷ ಹಳೇದಂತೇ.” ಎಂದು ಪುಂಖಾನುಪುಂಖವಾಗಿ ಕಿರುಚುತ್ತಾ ಸಾಗಿದಾಗ.

ಇಂತಹ ನಿಸರ್ಗದ ಅದ್ಭುತ ಸೃಷ್ಟಿಯನ್ನು ಕಣ್ದುಂಬಿಸಿಕೊಳ್ಳಲೂ ಬಿಡದ ಜೋರು ಬಾಯಿಯ, ಅನಾಗರಿಕ ಪ್ರವಾಸಿಗಳ ಬಗ್ಗೆ ಬೈದುಕೊಳ್ತಾ ಇದ್ದ ಪ್ರಕಾಶನಿಗೆ ಮಗ ಸಮುದ್ರ “ಹೌದಾ ಅಪ್ಪ? ಅವರು ಹೇಳಿದ್ದು ನಿಜಾನಾ? ನಾನು ಓದಿದ್ರಲ್ಲಿ ಹಾಗಿರ್ಲಿಲ್ವಲ್ಲ? ಬರೀ ಒಂದು ಕೋಟಿ ವರ್ಷ ಹಳೇದಾ ಯಾಣದ ಶಿಲೆಗಳು?” ಅಂತ ಕೇಳಿದ.

ಆಗ ಪ್ರಕಾಶ್, “ನೀನು ಓದಿರೋದು ಸರಿಯಾಗೇ ಇದೆ ಸಮುದ್ರಾ! ನಮ್ಮ ಯಾಣದ ಈ ಕಪ್ಪುಶಿಖರ ಒಂದಲ್ಲ, ಹತ್ತಲ್ಲ, ನೂರಲ್ಲ, ಬರೋಬ್ಬರಿ ೨೭೦ ಕೋಟಿ ವರ್ಷಗಳಷ್ಟು ಹಳೇದು. ಅಂದ್ರೇ, ಭೂಮಿ ಮೇಲೆ ಮನುಷ್ಯರೇ ಇರ್ಲಿಲ್ಲ; ನಮಗೆ ಗೊತ್ತಿರೋ ಯಾವ ಪ್ರಾಣಿ ಪಕ್ಷಿಗಳೂ ಇರ್ಲಿಲ್ಲ; ನಿನ್ ಫೇವರೆಟ್ ಡೈನೋಸಾರ್ ಕೂಡ ಇರ್ಲಿಲ್ಲ; ಈ ಯಾಣದ ಕಪ್ಪುಶಿಲೆಗಳು ಮೊದಲ ಬಾರಿಗೆ ಹೀಗೆ ಎದ್ದುನಿಂತಾಗ ಕೆಲವೇ ಬಗೆಯ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳು ಇದ್ವು ಅಷ್ಟೇ. ಅಂದಿನಿಂದ ಇಂದಿನವರೆಗೆ ಇಲ್ಲೇ ನಿಂತು, ಇಡೀ ಭೂಮಿ ಬದಲಾಗೋದನ್ನ ಕೋಟ್ಯಾನುಕೋಟಿ ವರ್ಷಗಳಿಂದ ನೋಡ್ತಾ ಇದೆ ನಮ್ಮ ಈ ಯಾಣದ ಶಿಲೆಗಳು! ಎಂಥಾ ಅದ್ಭುತ ಅಲ್ವಾ?” ಎಂದ ಮತ್ತೊಮ್ಮೆ ಆ ಬೃಹತ್ ಶಿಲಾಗುಹೆಗಳನ್ನು ಕಣ್ಣರಳಿಸಿ ನೋಡುತ್ತಾ.

ಆಗ ವರ್ಣಾ, “ಅಬ್ಬಾ ಅಷ್ಟು ಹಳೇದಾ ಬಾವ? ಇಷ್ಟು ಹಳೇ ಬಂಡೆಗಳನ್ನ ನಾನು ನೋಡೆ ಇಲ್ಲ ಬಿಡಿ” ಎಂದಳು. ಆಗ ವಿಭಾ, “ವರ್ಣಾ, ನೀನು ಇದಕ್ಕಿಂತ್ಲೂ ಹಳೇ ಬಂಡೇನಾ ನೋಡಿದೀಯಾ, ಸರಿಯಾಗಿ ಜ್ಞಾಪಿಸ್ಕೋ” ಎಂದಳು. ಮನಸಲ್ಲೇ ತಾನು ಟ್ರಿಪ್ ಹೋಗಿದ್ದ ಸ್ಥಳಗಳನ್ನೆಲ್ಲಾ ಜ್ಞಾಪಿಸಿಕೊಂಡು, ಯಾವುದಿರಬಹುದು ಎಂದು ಯೋಚಿಸುತ್ತಿದ್ದಾಗ, ಕಾವ್ಯ ನಗುತ್ತಾ “ಒಂದು ಕ್ಲೂ ಕೊಡ್ಲಾ ವರ್ಣಾ? ಅದು ಬೆಂಗಳೂರಲ್ಲೇ ಇದೆ!” ಎಂದಳು. ಆಗ ವರ್ಣ, “ಓಹ್, ನಮ್ ಲಾಲ್ಬಾಗ್ ಅಲ್ಲಿರೋ ಬಂಡೆ ಅಲ್ವಾ?” ಎಂದಳು. ಆಗ ವಿಭಾ “ಕರೆಕ್ಟ್! ಅವತ್ತೊಂದಿನ ನಾನು, ಅಪ್ಪ, ಅಮ್ಮ ಹೋಗಿದ್ವಿ ಲಾಲ್ ಬಾಗಿಗೆ. ಅಲ್ಲಿ ಒಬ್ಬರು ‘ನೇಚರ್ ವಾಕ್’ ಅಂತ ಸುಮಾರು ಮಕ್ಕಳನ್ನ ಕರ್ಕೊಂಡು ಬಂದಿದ್ರು. ಅವ್ರು ಹೇಳಿದ್ದು ಆ ಬಂಡೆ ೩೪೦ ಕೋಟಿ ವರ್ಷ ಹಳೇದಂತೆ!” ಎಂದು ವಿವರಿಸಿದಳು.

ಇಷ್ಟೆಲ್ಲಾ ಮಾತಾಡುತ್ತಾ, ಯಾಣದ ಪ್ರಸಿದ್ಧ ಗುಹೆಗಳ ಒಳಗೆ ಹತ್ತೋಕೆ ಪ್ರಾರಂಭಿಸಿದರು. ನಯನಮನೋಹರವಾಗಿದ್ದ, ಜೊತೆಗೆ ಭೂಗೋಳದ ಇತಿಹಾಸದೊಳಕ್ಕೇ ಕರೆದೊಯ್ಯುತ್ತಿದ್ದ ಯಾಣದ ಕಡುಗಪ್ಪು ಶಿಲೆಗಳ ಪರಿಯನ್ನು, ಖುದ್ದು ನೋಡಿ ಅನುಭವಿಸಿಯೇ ತೀರಬೇಕು. ಕೊರಕಲುಗಳಲ್ಲಿ ನಿಸರ್ಗವೇ ಅರಳಿಸಿದ್ದ ಕಲೆಗೆ ಮಾರುಹೋಗದವರೇ ಇಲ್ಲವೇನೋ. ಇವರೆಲ್ಲರ ಉತ್ಸಾಹ ಕಂಡು, ಮೆಲುದನಿಯಲ್ಲಿ ಅಲ್ಲಿನ ವೈಜ್ಞಾನಿಕ ಇತಿಹಾಸದ ಬಗ್ಗೆ ವಿವರಿಸತೊಡಗಿದಳು ಕಾವ್ಯ. “ಆಗ್ಲೇ ಅವರ್ಯಾರೋ ಹೇಳಿದ ಹಾಗೆ ಈ ಗುಹೆಗಳು ಜ್ವಾಲಾಮುಖಿಯಿಂದ ಆದದ್ದಲ್ಲ. ಪರೋಕ್ಷವಾಗಿ ಎಲ್ಲಿಯದೊ ಜ್ವಾಲಾಮುಖಿಯ ಶಾಖವು ಈ ಬಂಡೆಗಳ ರಚನೆಗೆ ಕೊಂಚ ಸಹಕರಿಸಿರಲೂಬಹುದು; ಆದ್ರೆ, ಈ ಶಿಲೆಗಳು ಭೂಮಿಯ ಮೇಲ್ಪದರದ ಟೆಕ್ಟಾನಿಕ್ ಫಲಕಗಳ ಕೈಚಳಕದಿಂದ ಹೀಗೆ ಆಗಿರೋದು.” ಎಂದಳು.

ಆಗ ಸಮುದ್ರ, “ಅಮ್ಮ, ಸಮುದ್ರಗಳು, ಬೆಟ್ಟಗಳು, ಜ್ವಾಲಾಮುಖಿ, ಭೂಕಂಪ – ಇದಕ್ಕೆಲ್ಲಾ ಇವೇ ಟೆಕ್ಟಾನಿಕ್ ಪ್ಲೇಟ್ಸ್ ಕಾರಣ ಅಲ್ವಾ?” ಎಂದ. ಜಾಣ ಮಗನ ತಲೆ ಸವರುತ್ತಾ, “ಹೌದು ಕಂದ; ಭೂಮಿಯ ಮೇಲ್ಪದರದಲ್ಲಿರೋ ಈ ಫಲಕಗಳು, ಸದಾ ಚಲಿಸ್ತಾ ಇರತ್ವೆ; ಒಂದಕ್ಕೊಂದು ಡಿಕ್ಕಿ ಹೊಡೆದಾಗ, ಒಂದರಿಂದ ಒಂದು ದೂರ ಹೋಗುತ್ತವೆ ಅಥವಾ ಒಂದರ ಮೇಲೊಂದು ಕೂಡಿಕೊಂಡು ಎತ್ತರಕ್ಕೆ ಬೆಳೆಯುತ್ವೆ; ಅಲ್ಲಿ ಉಂಟಾದ ಅಪರಿಮಿತ ಒತ್ತಡವನ್ನ ಭೂಕಂಪದ ಮೂಲಕ ಹೊರಹಾಕತ್ತೆ; ಆಳವಾದ ಕಣಿವೆಯನ್ನ, ಎತ್ತರದ ಪರ್ವತಗಳನ್ನ ಸೃಷ್ಟಿಸುತ್ವೆ; ಭೂಮಿಯ ಒಳಗಿರುವ ಕುದಿಯೋ ‘ಮ್ಯಾಗ್ಮಾ’ ಇದ್ಯಲ್ವಾ? ಅದರ ಮೇಲೆ ಇವು ತೇಲ್ತಾ, ಚಲಿಸ್ತಾ ಇರತ್ವೆ. ಈಗ್ಲೂ ನಮ್ಮ ಕಾಲ ಕೆಳಗಿನ ಭೂಮಿಯಲ್ಲೂ ಹೀಗೆ ಫಲಕಗಳು ಚಲಿಸ್ತಾನೇ ಇವೆ.” ಎಂದಳು ಕಾವ್ಯ.

ಆಗ ವರ್ಣ, “ಮತ್ತೆ ನಮಗ್ಯಾಕೆ ಅದು ಅನುಭವಕ್ಕೆ ಬರ್ತಾ ಇಲ್ಲಾ?” ಎಂದಳು ಕುತೂಹಲದಿಂದ. ಆಗ ಪ್ರಕಾಶ್, “ಆ ಫಲಕಗಳು ವರ್ಷಕ್ಕೆ ಸುಮಾರು ೧೫ ಸೆಂಟಿಮೀಟರ್ ಚಲಿಸತ್ವೆ ಅಷ್ಟೆ. ಹಾಗಾಗಿ, ಅದೆಷ್ಟು ಸ್ಲೋ ಇರ್ಬಹುದು ಯೋಚಿಸು. ಆ ಪ್ಲೇಟುಗಳು ಡಿಕ್ಕಿ ಹೊಡೆದು, ಲಾಕ್ ಆಗಿ, ಜೋರು ಅಲುಗಾಡಿದಾಗ ಮಾತ್ರ ನಮಗೆ ಭೂಕಂಪದ ಮೂಲಕ ನಮ್ಮ ಕೆಳಗಿನ ನೆಲ ಅಲ್ಲಾಡೋದು ಅನುಭವಕ್ಕೆ ಬರತ್ತೆ.” ಎಂದನು.

ಆಗ ಕಾವ್ಯ ಮುಂದುವರೆಸುತ್ತಾ, “ಈ ಯಾಣದ ಶಿಖರವನ್ನೇ ನೋಡಿ! ಕೋಟ್ಯಂತರ ವರ್ಷಗಳಲ್ಲಿ, ಟೆಕ್ಟಾನಿಕ್ ಫಲಕಗಳು ಡಿಕ್ಕಿ ಹೊಡೆಯುತ್ತಾ, ಒಂದು ಕಾಲದಲ್ಲಿ ಕೆಳಗೆಲ್ಲೋ ಭೂಗತವಾಗಿದ್ದ ಬಂಡೆಗಳನ್ನ, ನಿಧಾನವಾಗಿ ಮೇಲಕ್ಕೆ ಕಳಿಸಿದಾಗ, ಸೃಷ್ಟಿಯಾಗಿರೋ ಅದ್ಭುತವೇ ಇದು. ಜೊತೆಗೆ ಮಳೆ, ಗಾಳಿ, ಬಿಸಿಲು ಎಲ್ಲಾ ಸೇರ್ಕೊಂಡು ಇಷ್ಟು ವಿಭಿನ್ನವಾದ, ಅನನ್ಯವಾದ ರೂಪ ಕೊಟ್ಟಿವೆ.” ಎಂದಳು.

ಆಗ ವಿಭಾ, “ಈ ಬಂಡೆಗಳ ಒಳಗೆ ಕೆಮಿಕಲಿ ಏನಿರತ್ತೆ?” ಎಂದು ಕೇಳಿದಳು. ಆಗ ಕಾವ್ಯ “ಇಲ್ನೋಡು ವಿಭಾ, ಈ ಕೊರಕಲು ನೋಡು ಈ ಬಂಡೆಪಕ್ಕದಲ್ಲಿ” ಎಂದು ತೋರಿಸಿದಳು. ವಿವರಣೆಯನ್ನು ಮುಂದುವರೆಸುತ್ತಾ “ಹೀಗೆ ಮಳೆನೀರಿನಲ್ಲಿ ವರ್ಷಾನುಗಟ್ಟಲೆ ಕರಗಿ, ರೂಪ ಬದಲಾಯಿಸಿಕೊಂಡಿದೆ ಅಂದ್ರೆ ಸಾಮಾನ್ಯವಾಗಿ ಇದ್ರಲ್ಲಿ ಸುಣ್ಣದ ಅಂಶ ಇರತ್ತೆ. ರಾಸಾಯನಿಕವಾಗಿ ಇದಕ್ಕೆ ಹೆಸರು ‘ಕ್ಯಾಲ್ಸಿಯಮ್ ಕಾರ್ಬೊನೇಟ್’ ಅಂತ; ಇಲ್ಲಿ ಯಾಣದಲ್ಲಿ ಕಂಡುಬರೋ ಬಂಡೆಗಳನ್ನ ‘ಡೋಲೋಮೈಟಿಕ್ ಲೈಮ್ ಸ್ಟೋನ್’ ಬಂಡೆಗಳು ಅಂತಾರೆ. ಅಂದ್ರೆ, ಒಂದಷ್ಟು ಮ್ಯಾಗ್ನೀಸಿಯಮ್, ಜೊತೆಗೆ ಸುಣ್ಣದ ಅಂಶ ಇರುವ ವಿಶೇಷ ಸುಣ್ಣದ ಕಲ್ಲುಗಳು ಅಂತ.” ಎಂದಳು.

ಆಗ ಪ್ರಕಾಶ್, “ಕೋಟ್ಯಂತರ ವರ್ಷಗಳಿಂದ ಮಳೆ ನೀರು ಬಿದ್ದೂ ಬಿದ್ದೂ  ಹಳ್ಳದ ಹಾಗೆ, ಕೊರಕಲುಗಳ ಹಾಗೆ ಆಗತ್ತಲ್ಲ; ಅದೂ ಕೂಡ ಆಗಿರತ್ತೆ. ಜೊತೆಗೆ, ನಮ್ಮ ಮಳೆ ನೀರಲ್ಲಿ ಸ್ವಲ್ಪ ಆಸಿಡ್ ಅಂಶ ಇರತ್ತೆ. ಆ ಮಳೆನೀರಲ್ಲಿರೋ ‘ಕಾರ್ಬೋನಿಕ್ ಆಮ್ಲ’ದ ದಯದಿಂದ ರಾಸಾಯನಿಕವಾಗಿ ಈ ಸುಣ್ಣದ ಕಲ್ಲು ಕರಗುತ್ತಾ, ರೂಪಾಂತರವಾಗತ್ತೆ. ಇದಕ್ಕೆ ‘ಕಾರ್ಸ್ಟ್ ಪ್ರಕ್ರಿಯೆ’ ಅಂತಾರೆ. ಜೊತೆಗೆ ಗಾಳಿ, ಬಿಸಿಲು ಎಲ್ಲಾ ಸೇರ್ಕೊಂಡು ನಮ್ಮ ಬಂಡೆಗಳನ್ನ ಪರೀಕ್ಷಿಸ್ತಾನೇ ಇರ್ತವೆ, ಬದಲಾಯಿಸ್ತಾನೇ ಇರ್ತವೆ” ಎಂದನು.

ಆಗ ವಿಭಾ, “ಹೌದಲ್ವಾ? ಅಷ್ಟೇ ಅಲ್ಲ; ಅಲ್ನೋಡಿ, ಇಂಥಾ ಬಂಡೆಗಳ ಮಧ್ಯೆ ಕೂಡ ಅಲ್ಲಲ್ಲಿ ಪಾಚಿ, ಸಣ್ಣ ಸಣ್ಣ ಗಿಡಗಳು, ಜೊತೆಗೆ ಅಷ್ಟೆತ್ರದ ಮರಗಳು ಕೂಡ ಬೆಳ್ಕೊಂಡಿವೆ. ಅವುಗಳ ಬೇರುಗಳು, ಕಾಂಡಗಳು ಕೂಡ ಈ ಬಂಡೆಗಳನ್ನ ಬೆಂಡ್ ಮಾಡಿ, ಕೊರೆದು, ಮುರಿದು ಹೊಸ ರೂಪ ಕೊಡತ್ವೆ.” ಎಂದಳು. ಆಗ ವರ್ಣ “ನಿಜಾ ವಿಭಕ್ಕ, ಜೊತೆಗೆ ಕಣ್ಣಿಗೆ ಕಾಣದ ಸೂಕ್ಷ್ಮಾಣುಗಳೂ ತಮ್ಮದೇ ಕೆಮಿಕಲ್ಸ್ ಹಾಕಿ, ಬಂಡೆಯಲ್ಲಿರೋ ಅಂಶಗಳನ್ನ ತೊಗೊಳಕ್ಕೆ ಅಂತ ಏನೇನೋ ಮಾಡತ್ವಲ್ಲ? ಆಗ್ಲೂ ಬದಲಾಗತ್ತೆ ಬಂಡೆಯ ರೂಪ” ಎಂದಳು.

ಈ ಜಾಣಮಕ್ಕಳ ಮಾತಿಗೆ, ಆಸಕ್ತಿಗೆ ತಲೆದೂಗುತ್ತಾ ಪ್ರಕಾಶ್ ಮತ್ತು ಕಾವ್ಯ, ಆ ನಯನ ಮನೋಹರ ಬಂಡೆಗಳ, ನಡುವೆ ಕಂಡ ಕೀಟಗಳ, ಗಿಡಗಳ ಬಗ್ಗೆ ಮಾತಾಡುತ್ತಾ, ನಡುನಡುವೆ ಮೌನವಾಗುತ್ತಾ ಯಾಣದ ಸೌಂದರ್ಯವನ್ನು ಮನದುಂಬಿಸಿಕೊಂಡರು. ಭೂಮಿಯ ೭ ಖಂಡಗಳೂ ಅಂದು ತಾವಿದ್ದಲಿಂದ ಈಗ ತಾವಿರುವಲ್ಲಿಗೆ ಚಲಿಸಿದ್ದನ್ನು, ಲಕ್ಷಾಂತರ ಜೀವಿಗಳ ಉಗಮ ಮತ್ತು ಅಳಿವನ್ನು, ಕೋಟ್ಯಂತರ ಸೂರ್ಯೋದಯ ಸೂರ್ಯಾಸ್ತಗಳನ್ನು ಕಂಡಿವೆ ಈ ಬೃಹತ್ ಶಿಖರಗಳು! ಇಲ್ಲಿ ಪ್ರತಿ ಕೊರಕಲೂ ಕಥೆಯೊಂದನ್ನು ಹೇಳುತ್ತವೆ, ಅದನ್ನು ಗಮನಿಸುವ ಮನಸ್ಸಿರಬೇಕಷ್ಟೇ!  ‘ರಾಷ್ಟ್ರೀಯ ಪ್ರಾಮುಖ್ಯತೆಯ ಭೌಗೋಳಿಕ ಪರಂಪರೆಯ ತಾಣ’ ಎಂದು ಮಾನ್ಯತೆ ಪಡೆದಿರುವ ಯಾಣದಿಂದ ಹೊರಟ ಇವರ ಪ್ರಯಾಣ ಮುಂದೆಲ್ಲಿ ಸಾಗಿತು, ಮತ್ತೇನೇನು ಕಂಡರು ಎಂದು ಮುಂದಿನ ಸಂಚಿಕೆಯಲ್ಲಿ ಓದೋಣ, ನಾವೂ ಇವರೊಟ್ಟಿಗೆ ಪುಕ್ಕಟೆ ಪ್ರವಾಸ ಮಾಡೋಣ!

(ಹಿಂದಿನ ಕಂತು: ಸುಯ್ಯೆಂದು ಹಾಡುವ ಸೊಳ್ಳೆಯ ಸುದ್ದಿ)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ�‌ ಗೋಪಾಲ�‌ ಬರೆದ ಈ ಭಾನ�ವಾರದ ಕತೆ “ಆಟ�
https://tinyurl.com/5575hs6r

ಮದ�ವೆ ಮದ�ವೆ ಆ ಸಿಹಿ ಪದವೆ
ಲಾಸ�‌ ವೇಗಸ�‌ನ ‘ಲಿಟಲ� ವೈಟ� ವೆಡ�ಡಿಂಗ� ಚಾಪೆಲ�’ ಕ�ರಿತ� ಅಚಲ ಸೇತ� ಬರಹ
https://tinyurl.com/2v28abrv

ಭಾರತಕ�ಕೆ ಹತ�ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜ� ಅಂಕಣ “ಅನೇಕ ಅಮೆರಿಕಾ� ನಿಮ�ಮ ಓದಿಗೆ
https://tinyurl.com/35mrwwsn

ಭವ�ಯ ಟಿ.ಎಸ�. ಬರೆದ ಈ ದಿನದ ಕವಿತೆ

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ