Advertisement
ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ನನ್ನ ಸರದ ಕತೆ”

ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ನನ್ನ ಸರದ ಕತೆ”

“ನನ್ನ ಸೊಸೆ ಆರತಿ ಸಿಂಗಪೂರಿನಿಂದ ತಂದುಕೊಟ್ಟಳು” ಎಂದು ನನ್ನನ್ನು ಹೊಗಳಿದರು. ನಾನು ಬಿಕೋ ಎನ್ನುವ ನನ್ನ ಮದುವೆಯ ಹಳೆಯ ಸರವನ್ನೇ ತೊಟ್ಟಿದ್ದೆ. ನನ್ನ ಅಕ್ಕ ತಂಗಿಯರು ನಮ್ಮ ಅತ್ತೆಯನ್ನು ಮನಸಾರೆ ಬೈದುಕೊಂಡರು. ನನ್ನ ಅಮ್ಮ ಆಕೆಯನ್ನು ಶಪಿಸಿದರು – ಈ ಮುದುಕಿಗೆ ಏನುಬಂತು! ನಾನು ಹೇಳುವುದಾದರೂ ಏನಿತ್ತು? ಏನೂ ಹೇಳದೆ ಮದುವೆಯಲ್ಲಿ ನಗುನಗುತ್ತಾ ಇದ್ದೆ. ಒಳಗೆ ಬೇಜಾರು ಇದ್ದೇ ಇತ್ತು.
ಸಿಡ್ನಿ ಶ್ರೀನಿವಾಸ್ ಬರೆದ  ಕತೆ “ನನ್ನ ಸರದ ಕತೆ” ನಿಮ್ಮ ಈ ಭಾನುವಾರದ ಓದಿಗೆ

ಈ ಆರತಿ ಏನೋ ಹೇಳ್ಕೋತಾ ಇರ್ತಾಳೆ ಅನ್ನಬೇಡಿ. ಇದನ್ನ ಕೇಳಿ. ನನ್ನ ಚಿನ್ನದ ಸರದ ಕತೆ. ತುಂಬಾ ಚೆನ್ನಾಗಿದೆ. ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ ನಿಮಗೆ ಹೇಳಿದ್ದೀನಿ. ಶ್ರೀಧರ್ ಜೊತೆ ನನ್ನ ಮದುವೆ ಆದಾಗ ನನಗೆ ಹದಿನೆಂಟು ವರ್ಷ. ಚೆನ್ನಾಗಿ ಓದಿದ್ದ ಹುಡುಗ, ಕೆಮಿಸ್ಟ್ರಿಯಲ್ಲಿ ರ್ಯಾಂಕ್ ತೆಗೆದಿದ್ದರು ಇವರು. ಪಾರ್ಲೆ ಕಂಪನಿಯಲ್ಲಿ ಒಳ್ಳೆ ಕೆಲಸ. ಮದುವೆ ಆಗಿದ್ದು 1957ರಲ್ಲಿ. ಮುಂಬೈ ವಾಸ ಶುರು ಆಯ್ತು. ಆಮೇಲೆ ಮಕ್ಕಳು, 60ರಲ್ಲಿ ಶ್ರೀರಾಮ್, 65ರಲ್ಲಿ ಮಂಗಳ, ನಂತರ ಇಲ್ಲಿ ಸಿಡ್ನಿಯಲ್ಲಿ  73ರಲ್ಲಿ ವನಿತಾ.  ನಿಮಗೆ ಗೊತ್ತಿರೋ ಹಾಗೆ  ಈಗ ಇವರೆಲ್ಲಾ ದೊಡ್ದವರಾಗಿದ್ದಾರೆ; ಎಲ್ಲರಿಗೂ ಮದುವೆ, ಮಕ್ಕಳು ಎಲ್ಲಾ ಆಗಿವೆ.

1972ರಲ್ಲಿ ಇವರಿಗೆ ಸಿಡ್ನಿಯಲ್ಲಿ ಒಳ್ಳೆ ಕೆಲಸ ಸಿಕ್ಕಿತು, ದೊಡ್ಡ ಕಂಪೆನಿಯಲ್ಲಿ.  ಯಾವುದೋ ಚಾಕೊಲೇಟ್ ಮಾಡೋ ಫಾಕ್ಟರಿ. ಇವರೇ ಅದನ್ನ ಸ್ಥಾಪಿಸಿ, ಬೆಳೆಸಬೇಕಾಗಿತ್ತು. ಫುಡ್ ಎಂಜಿನಿಯರ್ ಆದ ಶ್ರೀಧರ್ ಇಂತಹ ಕೆಲಸಕ್ಕೆ ಎತ್ತಿದ ಕೈ ಅಂತ ಚಿಕ್ಕ ವಯಸ್ಸಿನಲ್ಲಿಯೇ ಹೆಸರು ಗಳಿಸಿದ್ದರು. ಮದುವೆ ಆದಮೇಲೆ  ಅಮೆರಿಕಾಕ್ಕೆ ಬೇರೆ ಹೋಗಿದ್ದರು, ಟ್ರೈನಿಂಗಿಗೋಸ್ಕರ. ಬಹಳ ಮಂದಿ ಇವರ ಹೆಸರನ್ನು ಈ ಕೆಲಸಕ್ಕೆ ಶಿಫಾರಸ್ ಮಾಡಿದರು. ಇವರಿಗೂ ಇಂತಹ ಕೆಲಸ ಅಂದರೆ ಇಷ್ಟ. ಮನೇಲಿ ತಂದೆ ತಾಯಿ ಯಾರ ಮಾತನ್ನೂ ಕೇಳಲಿಲ್ಲ. ಯಾರಿಗೂ ಇವರು ದೇಶ ಬಿಡೋದು ಬೇಕಿಲ್ಲ. ನನಗೂ ಇಷ್ಟ ಇರಲಿಲ್ಲ. ಅಲ್ಲೇ ಒಳ್ಳೆ ಕೆಲಸ ಇತ್ತು.  ಕೈತುಂಬ ಸಂಬಳ. ಮನೆ, ಆಳು ಕಾಳು, ಕಾರು ಡ್ರೈವರ್ ಎಲ್ಲಾನೂ ಬಿಟ್ಟು ಏನೂ ಗೊತ್ತಿಲ್ಲದ ಆಸ್ಟ್ರೇಲಿಯಾಗೆ ಹೋಗೋದೇ ಅಂತ ನನಗೆ. ಇವರು ಯಾರ ಮಾತನ್ನಾದರೂ ಕೇಳಿಯಾರು, ನನ್ನ ಮಾತನ್ನು ಕೇಳುತ್ತಿರಲಿಲ್ಲ. ಹಿಡಿದ ಹಟ. ಪ್ರೀತಿ ಇಲ್ಲಾ ಅಂತ ಅಲ್ಲ. ಅದು ಅಗಾಧವಾಗಿಯೇ ಇತ್ತು. ನಾನು ಅವರ ಹತ್ತಿರದ ಸಂಬಂಧಿ ಬೇರೆ! ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದರು. ಅಂತೂ ದೇಶ ಬಿಟ್ಟು ಬಂದುಬಿಟ್ಟೆವು.

ಸಿಡ್ನಿ ಜೀವನ ಚೆನ್ನಾಗಿತ್ತು. ಹಾಲು, ಹಣ್ಣು ಎಲ್ಲಾ ಯಥೇಚ್ಛ. ಅಕ್ಕಿ- ಬೇಳೆ, ಬೇಕೂ ಅಂದರೆ  ಹದಿನೈದು ಕಿಲೋಮೀಟರ್ ಡ್ರೈವ್ ಮಾಡಿಕೊಂಡು ಯಾರೋ ವಿಯೆಟ್ನಾಮಿನವನು ಇಟ್ಟುಕೊಂಡಿದ್ದ ಅಂಗಡಿಗೆ ಹೋಗಬೇಕಿತ್ತು. ನಾವು ತಿಂಗಳಿಗೆ ಒಮ್ಮೆ ಹೋಗಿ ಬೇಕಿದ್ದ ಸಾಮಾನುಗಳನ್ನು ಕೊಳ್ಳುತ್ತಿದ್ದೆವು. ಮಕ್ಕಳಿಗೆ ಶಾಲೆ ಬಹಳ ಹಿಡಿಸಿತು. ಇವಕ್ಕೆ ಹೋಲಿಸಿದರೆ ನಮ್ಮ ಊರಿನ ಶಾಲೆಗಳು ಮಿಲಿಟರಿ ಕ್ಯಾಂಪುಗಳು ಎನ್ನಿ. ಮಕ್ಕಳಿಗೆ ಸ್ನೇಹಿತರೂ ಸಿಕ್ಕರು. ಆದರೆ ವನಿತಾಗೆ ಆಗ ಇನ್ನೂ ಒಂದು ವರ್ಷವೂ ಇಲ್ಲ. ಮನೆಯಲ್ಲಿ ನನ್ನ ಜತೆ ಇರುತ್ತಿದ್ದಳು.

73ರಲ್ಲಿ ನಮ್ಮ ಚಿಕ್ಕಮ್ಮನ ಮಗಳ ಮದುವೆ, ಬೆಂಗಳೂರಿನಲ್ಲಿ. ಹುಡುಗಿ ನನಗಿಂತ ತೀರಾ ಚಿಕ್ಕವಳು. ನನಗೆ ಹೋಗುವಾಸೆ. ಇವರಿಗೋ ಸದಾ ಕೆಲಸ. ಎಷ್ಟೋ ದಿನ ರಾತ್ರಿ ಕೂಡ ಮನೆಗೆ ಬರ್ತಾ ಇರಲಿಲ್ಲ. ಕೆಲಸ ಇದ್ದ್ರೆ, ಮತ್ತಾವುದರ ಬಗ್ಗೇನೂ ಗಮನ ಇಲ್ಲ. ಇವರನ್ನ “ನೀವೂ ಬನ್ನಿ. ನಿಮ್ಮ ತಂದೆ ತಾಯಿ ಎಲ್ಲರನ್ನೂ ನೋಡಬಹುದು” ಎಂದು ಕರೆದೆ.  “ನಾನು ಬರೋದು ಆಗೋದಿಲ್ಲ. ನೀನು ಬೇಕಾದರೆ ಒಂದು ತಿಂಗಳು ಹೋಗಿ ಬಾ. ನಾನು ಮದುವೆ ಸಮಯಕ್ಕೆ ಬರ್ತೀನಿ. ನಂತರ ಎಲ್ಲಾ ಒಟ್ಟಿಗೆ ವಾಪಸ್ ಬರೋಣ.” ಎಂದು ಬಿಟ್ಟರು. ನನಗೋ ಖುಶಿ ಒಂದು ಕಡೆ. ಮತ್ತೆ ಊರಿಗೆ ಹೋಗಿ ಅಮ್ಮ, ಅಪ್ಪ, ಎಲ್ಲರನ್ನೂ ನೋಡಬಹುದು ಅಂತ. ಆದರೆ ಈ ಮೂರು ಮಕ್ಕಳನ್ನೂ ಹೇಗೆ ಕರೆದುಕೊಂಡುಹೋಗಲಿ ಎಂಬ ಚಿಂತೆ ಬೇರೆ.

ಹೇಗೋ ಹೋಗೋದು ಅಂತ ಮನಸ್ಸು ಮಾಡಿದೆ. ಇವರು ಆಗ ಇದ್ದ ಒಬ್ಬನೇ ಇಂಡಿಯನ್ ಟ್ರಾವೆಲ್ ಏಜೆಂಟ್ ಕಿಶನ್ ಲಾಲ್‌ಗೆ ಹೇಳಿ ಸಿಡ್ನಿ, ಸಿಂಗಪೂರ್, ಮದರಾಸು (ಆಗ ಅದು ಇನ್ನೂ ಚೆನ್ನೈ ಆಗಿರಲಿಲ್ಲ) ಮತ್ತೆ ಹಾಗೆ ವಾಪಸ್ಸು ಬರುವಹಾಗೆ ಬುಕ್ ಮಾಡಿಸಿದರು. ಮದರಾಸಿನಲ್ಲಿ ನನ್ನ ತಮ್ಮ ಬಂದು ನಮ್ಮನ್ನೆಲ್ಲಾ ಬೆಂಗಳೂರಿಗೆ ಟ್ರೈನಿನಲ್ಲಿ ಅಥವಾ ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋಗುವ ಏರ್ಪಾಟಾಯಿತು. ವಾಪಸ್ ಬರುವಾಗ ಇವರು ಇರೋದ್ರಿಂದ ಯೋಚನೆ ಮಾಡಬೇಕಾಗಿರಲಿಲ್ಲ.

ಆ ಕಾಲದಲ್ಲಿ ಹೊರದೇಶದಿಂದ ಊರಿಗೆ ಹೋಗುವುದು ಎಂದರೆ ಸಾಮಾನ್ಯವೇ? ನಮಗೆ ಗುರುತಿದ್ದ ಎಲ್ಲರೂ ಏನಾದರೂ ಗಿಫ್ಟ್ ಬಯಸುತ್ತಿದ್ದರು. ನಮ್ಮದು ದೊಡ್ಡ ಕುಟುಂಬ ಬೇರೆ. ಮಕ್ಕಳು ಮರಿ ಜಾಸ್ತಿ. ಸಿಡ್ನಿ ಬಿಡೋದು ಇನ್ನೂ ತಿಂಗಳು ಇದ್ದಾಗಲೇ ನನ್ನ ಶಾಪಿಂಗ್ ಶುರು ಆಯಿತು. ದಿನಾ, ಪ್ರ್ಯಾಮ್‌ನಲ್ಲಿ ವನಿತಾನ ಕೂಡಿಸಿಕೊಂಡು ಹೋಗಿ ಏನಾದರೂ ತರುತ್ತಿದ್ದೆ.  ಮಕ್ಕಳ ಬಟ್ಟೆ, ಆಟದ ಸಾಮಾನು ಹೆಚ್ಚು ಅನ್ನಿ. ಇವರು ನೋಡಿದಾಗೆಲ್ಲಾ ಗೇಲಿ ಮಾಡುತ್ತಿದ್ದರು. “ನೀನು ತಾನೆ ಇವನ್ನೆಲ್ಲಾ ಹೊತ್ತುಕೊಂಡು ಹೋಗೋದು.  ನನಗೇನು ಆಗಬೇಕು. ಕೋಳ್ಳೊದಕ್ಕೆ ಮೊದಲು ನೀನು ತೊಗೋಳೋದನ್ನ ನಿನ್ನ ಜನ ಇಷ್ಟ ಪಡ್ತಾರಾ ಯೋಚನೆ ಮಾಡು.” ಅಂತ ಹೇಳ್ತಾ ಇದ್ದ್ರು. ಇವರ ಬಾಯಲ್ಲಿ ಯಾವಾಗಲೂ ಇಂತಹ ಮಾತೇ.  ನಾನು ಹೆಚ್ಚಾಗಿ ಗಮನಕ್ಕೆ ತೊಗೋತಿರಲಿಲ್ಲ.

ಚಿಕ್ಕಾ ಪುಟ್ಟಾ ಸಾಮಾನು ತೊಗೊಂಡು ಆಯಿತು. ಆದರೆ ಸ್ವಲ್ಪ ಆದರೂ ಒಡವೆ ತೊಗೋ ಬೇಡವೆ? ಇವರಿಗೆ ಹೇಳಿದೆ,

“ರೀ, ಹುಡುಗೀಗೆ ಓದ್ಸೋಕೆ ಏನಾದರೂ ಒಡವೆ ತೊಗೋ ಬೇಕು ಅಲ್ವಾ? ಆಸ್ಟ್ರೇಲಿಯಾದಿಂದ ಬಂದವರು ಏನು ಕೊಟ್ಟರು ಅಂತಾ ಎಲ್ಲಾ ಕೇಳ್ತಾರೆ. ನೀವೆನಂತೀರಿ?”

ಇವರು ಕೊಟ್ಟ ಉತ್ತರ ಕೇಳಿ ದಂಗಾದೆ.

“ಹೌದು. ನೀನು ಹೇಳೋದು ಸರಿ. ಹೇಗಿದ್ರೂ ನೀನು ಸಿಂಗಪೂರ್ ಮೂಲಕ ಹೋಗ್ತೀಯ.  ಅಲ್ಲಿ ಚಿನ್ನ, ಬೆಳ್ಳಿ  ಅಗ್ಗ ಬೇರೆ. ನಾನು ನಿನ್ನ ಕೈಗೆ 400 ಅಥವಾ 500 ಅಮೆರಿಕನ್ ಡಾಲರ್ ಕೊಡ್ತೀನಿ. ಅಲ್ಲಿ ಏನು ಬೇಕಾದರೂ ಕೊಂಡುಕೋ.”

ದುಡ್ಡು ಕಾಸಿನ ವಿಚಾರದಲ್ಲಿ ಧಾರಾಳಿ ಆತ.  ನಿಜ. ಆದರೆ ಒಂದೇ ಸಲಕ್ಕೆ ಅಷ್ಟು ದುಡ್ಡು ಕೊಡ್ತಾರೆ ಅಂತ ಊಹಿಸಿರಲಿಲ್ಲ ನಾನು.

ಹೊರಡೋ ದಿನಾ ಬಂತು. ಹೇಗಪ್ಪಾ ಈ ಮೂರು ಮಕ್ಕಳನ್ನೂ ನಿಭಾಯಿಸಿ ಕರೆದುಕೊಂಡು ಹೋಗೋದು ಅಂತ ಯೋಚನೆ ಮಾಡ್ತಾ ಇದ್ದೆ.  ಅಷ್ಟು ಹೊತ್ತಿಗೆ ಇವರು ಎಲ್ಲೋ ಪತ್ತೆ ಹಚ್ಚಿದರು. ಯಾರೋ ಭಾರತೀಯ ಹೆಂಗಸು ಸಿಡ್ನಿಯಿಂದ ಸಿಂಗಪೂರಿಗೆ ನಾನು ಹೋಗುವ ದಿನವೇ ಹೋಗುವರಿದ್ದರು. ಅವರ ಪರಿಚಯವೂ ಆಯಿತು. ಅವರು ಸಿಂಗಪೂರಿನಲ್ಲಿಯೂ ನನಗೆ ಸಹಾಯ ಮಾಡುವುದಾಗಿ ಹೇಳಿದರು. ಅವರ ಹೆಸರು ವಾಸಂತಿ ಅಂತ. ನನಗಿಂತ ದೊಡ್ದವರು.

ಇವರೇ ಬಂದು ಸಿಡ್ನಿ ಏರ್ ಪೋರ್ಟ್ ನಲ್ಲಿ ನಮ್ಮನ್ನು ಬಿಟ್ಟರು. ಚೆಕ್ ಇನ್, ಎಮಿಗ್ರೇಷನ್ ಆಗುವವರೆಗೂ ಅಲ್ಲಿಯೇ ಇದ್ದು, ನನ್ನ ಕೈಗೆ 500 ಅಮೆರಿಕನ್ ಡಾಲರಿನ ಟ್ರಾವೆಲರ್ಸ್ ಚೆಕ್ ಕೊಟ್ಟರು. ಆಗ ಡಾಲರಿನ ಬೆಲೆ ಐದು ರೂಪಾಯಿ ಇದ್ದಿರಬೇಕು. ಮರೆತುಹೋಗಿದೆ. ಈಗ ಅದು ಎಂಬತ್ತು ನೂರರ ವರೆಗೆ ಹೋಗಿದೆ.

ರಾತ್ರಿ ಪ್ರಯಾಣ. ಪ್ಲೇನಿನಲ್ಲಿ ಕುಳಿತಾಗ ವಾಸಂತಿ ಬಹಳ ಸಹಾಯಮಾಡಿದರು. ಇನ್ನೂ ಮಗುವಾಗಿದ್ದ ವನಿತಾ ಅತ್ತಾಗ ಅವರೇ ಸಮಾಧಾನ ಮಾಡುತ್ತಿದ್ದರು. ಶ್ರೀರಾಮ್, ಮಂಗಳ  ಅವರು ದೊಡ್ಡವರು. ಏರ್ ಹೋಸ್ಟೆಸ್  ಕೊಟ್ಟದ್ದನ್ನೆಲ್ಲಾ ತಿಂದರು, ಕುಡಿದರು. ಸಾಕಷ್ಟು ನಿದ್ದೆ ಮಾಡಿದರು. ನಾನು ಹಣ್ಣು ಬಿಟ್ಟು ಮತ್ತೇನನ್ನೂ ತೆಗೆದುಕೊಳ್ಳಲಿಲ್ಲ. ಹತ್ತು ಗಂಟೆಗಳು ಹೇಗೋ ಸಾಗಿದವು.  ಮರುದಿನ ಬೆಳಿಗ್ಗೆ ಸಿಂಗಪೂರ್ ತಲಪಿದೆವು.

ಪ್ಲೇನಿನಿಂದ ಹೊರಬರುತ್ತಿದ್ದಂತೇ ಅಲ್ಲೊಬ್ಬ “ಆರತಿ” ಎಂದು ನನ್ನ ಹೆಸರಿದ್ದ ಫಲಕವನ್ನು ಹಿಡಿದು ನಿಂತಿದ್ದ. ನನಗೋ ಆಶ್ಚರ್ಯ. ಅವನ ಬಳಿ ಹೋದೆ. ಆಗ ತಿಳಿಯಿತು, ಶ್ರೀಧರ್ ಏಜೆಂಟಿನ ಮೂಲಕ ಇದನ್ನು ವ್ಯವಸ್ಥೆ ಮಾಡಿದ್ದರು. ಆತ ಮತ್ತು ಅವನ ಸಹಾಯಕ  ಮಕ್ಕಳನ್ನು ಕರೆದುಕೊಂಡು, ಮಗುವನ್ನು ಪ್ರಾಮ್ ಒಂದರಲ್ಲಿ ಮಲಗಿಸಿಕೊಂಡು, ನಮ್ಮನ್ನು ಪಾಸ್ ಪೋರ್ಟ್ ಚೆಕ್‌ನತ್ತ ಕೊಂಡೊಯ್ದರು. ಸಂಪ್ರದಾಯಗಳು ಮುಗಿದ ಮೇಲೆ ಹೊರಗಿದ್ದ ಬಸ್ಸಿಗೆ ನಮ್ಮನ್ನು ಕರೆದುಕೊಂಡು ಬಂದರು. ಬಸ್ ನಮ್ಮನ್ನು ಒಂದು ಹೋಟೆಲಿನಲ್ಲಿ ಬಿಟ್ಟಿತು. ಡ್ರೈವರ್ ಹೇಳಿದ, “ಸಂಜೆ ಆರಕ್ಕೆ  ಸಿದ್ಧವಾಗಿರಿ. ಬಂದು ನಿಮ್ಮನ್ನು ಮತ್ತೆ ಏರ್ ಪೊರ್ಟಿಗೆ ಕರೆದುಕೊಂಡು ಹೋಗುತ್ತೇವೆ.”

ದೊಡ್ದ ಹೋಟೆಲ್ ಅದು. ಅಲ್ಲಿ ನಮಗಾಗಿ ಒಂದು ರೂಮು. ವಾಸಂತಿ “ನೀವು ಊಟ, ವಿರಾಮ ಮುಗಿಸಿ. ನಾನು ಎರಡು ಗಂಟೆಗೆ ಬರುತ್ತೇನೆ. ಶಾಪಿಂಗ್ ಮಾಡಿಸುತ್ತೇನೆ.” ಎಂದು ತಮ್ಮ ಮನೆಯತ್ತ ಹೊರಟರು. ನಾನು ಮತ್ತು ಮಕ್ಕಳು ಸ್ನಾನ ಮುಗಿಸಿ ಬೆಳಗಿನ ತಿಂಡಿಗೆ ಕೂತೆವು. ಸ್ವಯಂ ಸಹಾಯಕ ಪದ್ಧತಿ. ಮಕ್ಕಳಂತೂ ಕಂಠಪೂರ್ತಿ ಬ್ರೆಡ್, ಜಾಮ್, ಮೊಟ್ಟೆ, ಹಣ್ಣುಗಳು, ಐಸ್ ಕ್ರೀಮ್, ಇತ್ಯಾದಿ, ಇತ್ಯಾದಿ ತಿಂದರು. ಹನ್ನೆರಡಕ್ಕೆ ಊಟ ಬೇರೆ!

ಎರಡು ಗಂಟೆಗೆಲ್ಲಾ ವಾಸಂತಿ ಹಾಜರ್ ಆದರು. ದೊಡ್ಡ ಮಕ್ಕಳನ್ನು ಹೋಟೆಲಿನಲ್ಲಿಯೇ ಬಿಟ್ಟು ನಾವಿಬ್ಬರು ಮತ್ತು ವನಿತಾ ಶಾಪಿಂಗ್ ಹೊರಟೆವು. ಆಗ ಸಿಂಗಪೂರಿನಲ್ಲಿ ಈಗಿರುವ ಮುಸ್ತಾಫಾ, ಬಾಟು ಪಹಾಡ್ ಯಾವುವೂ ಇರಲಿಲ್ಲ. ಅಲ್ಲಿಯ ಸೆರಂಗೂನ್ ರಸ್ತೆಯಲ್ಲಿ ತಮಿಳರು ನಡೆಸುತ್ತಿದ್ದ ಹಲವಾರು ಚಿನ್ನ ಬೆಳ್ಳಿ ಅಂಗಡಿಗಳಿದ್ದವು. ಒಂದೆರಡನ್ನು ಇಣುಕಿಹಾಕಿಯಾಯಿತು. ನಂತರ ವಾಸಂತಿಗೆ ತಿಳಿದಿದ್ದ ಮತ್ತು ಆಕೆಗೆ ಅತಿ ನಂಬಿಕೆಯಿದ್ದ ಅಂಗಡಿಯನ್ನು ಪ್ರವೇಶಿಸಿದೆವು. ಎಲ್ಲೆಲ್ಲೂ ಜಿಗ ಜಿಗ, ಚಿನ್ನ, ಬೆಳ್ಳಿ, ವಜ್ರ. ಅಂತಹ ಜನರೇನೂ ಇರಲಿಲ್ಲ.

ಕೂಲಂಕುಶವಾಗಿ ಚಿನ್ನದ ಸರಗಳು, ಉಂಗುರಗಳು ಬಳೆಗಳನ್ನು ನೋಡಿದೆವು. ಎಲ್ಲವೂ ಚೆನ್ನ ಎನಿಸಿದವು. ಏನನ್ನು ಕೊಳ್ಳುವುದು ಎಂಬುದೇ ದೊಡ್ಡ ಪ್ರಶ್ನೆ ಆಯಿತು. ಅಲ್ಲಿದ್ದ ಹೆಂಗಸು ಸಿಬ್ಬಂದಿಗಳು ನನ್ನನ್ನು ಪ್ರೇರೇಪಿಸುತ್ತಿದ್ದರು. ಸರವನ್ನು ನನ್ನ ಕುತ್ತಿಗೆಗೆ ಹಾಕಿ ಕನ್ನಡಿಯಲ್ಲಿ ತೋರಿಸಿದರು. “ಈ ಬಳೆ ನಿಮಗೆ ಚೆಂದ. ಈ ಬಳೆ ನಿಮಗೆ ಹೊಂದುತ್ತೆ” ಎಂದು  ತೋರಿಸಿದ್ದೇ ತೋರಿಸಿದ್ದು. ಜೊತೆಗೆ ವಾಸಂತಿಯ ಶಿಫಾರಸ್ ಬೆರೆ. “ಇಲ್ಲಿ ಸಿಗೋದೆಲ್ಲಾ ಗ್ಯಾರೆಂಟಿ. ಇದಕ್ಕಿಂತ ಒಳ್ಳೆ ಅಂಗಡಿ ಬೆರೆ ಇಲ್ಲ ಸಿಂಗಪೂರಿನಲ್ಲಿ.”

ನಾನು ಪದೇ ಪದೇ ನೋಡುತ್ತಿದ್ದ ಎರಡೆಳೆಯ ಸರವನ್ನು ನೋಡಿ ಅವರು ಹೇಳಿದರು, “ಇದು ನಿಮಗೆ ಹೇಳಿ ಮಾಡಿಸಿದ್ದು.   ಬರೀ 120 ಡಾಲರ್. ಕಣ್ಣು ಮುಚ್ಚಿಕೊಂಡು ತಗೋಳಿ.” ಅಂಗಡಿಯ ಹೆಂಗಸರೂ ಇದೇ ಮಾತನಾಡಿದರು. ನನಗೂ ಹಾಗೆಯೆ ಅನ್ನಿಸಿತು. ನನ್ನ ಕತ್ತಿನಲ್ಲಿ ಅದು ಎದ್ದು ಕಾಣಿಸುತ್ತಿತ್ತು. ಅದನ್ನು ಪಕ್ಕಕ್ಕೆ ಇರಿಸಿದೆ. ನಂತರ ಬಳೆಗಳ ಬೇಟೆ. ಅದಕ್ಕೇ ಬೇರೆಯ ವಿಭಾಗ. ಅಲ್ಲಿ ಇಲ್ಲಿ ತಲಾಶು ಮಾಡಿ ಹತ್ತು ಬಳೆಗಳನ್ನು ಆರಿಸಿ ಆಯಿತು. ಅವಲ್ಲಿ ಎರಡು ಮದುವೆ ಹುಡುಗಿಗೆ ಎಂದುಕೊಂಡೆ. ಸಮಯ ಬೇರೆ ಮೀರುತ್ತಿತ್ತು. ನಾವು ನಾಲ್ಕು ಗಂಟೆಗೆ ಹೋಟೆಲ್ಲಿಗೆ ವಾಪಸ್ ಹೋಗುವ ತವಕ ಬೇರೆ. ಸರ, ಬಳೆ ಕೊಂಡಿದ್ದಾಯಿತು. ಅಂಗಡಿಯವನೇ ನನ್ನನ್ನು ಪಕ್ಕದ ಬ್ಯಾಂಕಿಗೆ ಕರೆದೊಯ್ದು  ಟ್ರಾವೆಲರ್ಸ್ ಚೆಕ್ಕನ್ನು ಕ್ಯಾಶ್ ಮಾಡಿಸಿಕೊಟ್ಟ. ಇವರು ಕೊಟ್ಟಿದ್ದ ಐನೂರು ಡಾಲರುಗಳಲ್ಲಿ ಮುನ್ನೂರು ಖರ್ಚಾಗಿ ಹೋಗಿತ್ತು. ಎಲ್ಲಾ ನನ್ನ ಮೇಲೆಯೇ, ನನಗಾಗಿಯೇ!

ಇನ್ನು ನಾವು ಕೊಡೋ ಗಿಫ್ಟ್ ಗಳು ಬಾಕಿ ಇದ್ದವು. ಮದುವೆ ಹುಡುಗನಿಗೆ ಏನನ್ನೂ ಕೊಂಡಿರಲಿಲ್ಲ. ಒಂದು ಕ್ಯಾಮೆರಾ ಸಿಕ್ಕೀತೆ ವಿಚಾರಿಸಿದೆ. ವಾಸಂತಿ ಹತ್ತಿರವೇ ಇದ್ದ ಮತ್ತೊಂದು ಅಂಗಡಿಗೆ ಕೊಂಡೊಯ್ದರು. ಏನೇ ಆದರೂ ಇಂಡಿಯಾದಿಂದ ಹೋದವರಿಗೆ ಸೆರಂಗೂನ್ ರಸ್ತೆ ಎಂದರೆ ಸ್ವರ್ಗ ಅಲ್ಲವೇ? ಅಂದು ಕೂಡ ಹಾಗೆಯೇ. ಅಲ್ಲಿ ಸಿಗದ ವಸ್ತು ಇಲ್ಲ. ಅಗ್ಗದ ಬೆಲೆಗೇ ಕ್ಯಾಮೆರಾ ಸಿಕ್ಕಿತು. ಆಗ ನನಗೆ ನಮ್ಮ ಅತ್ತೆಯ ನೆನಪಾಯಿತು. ಅವರಿಗೆ ಏನನ್ನಾದರೂ ಕೊಳ್ಳಬೇಕು ಎನಿಸಿತು. ಯೋಚನೆ ಮಾಡಿದೆ. ನನ್ನ ಮಾವನವರ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ದೋಸೆ ಅಥವಾ ಇಡ್ಲಿ ಆಗಲೇ ಬೇಕು. ಪಾಪ ನಮ್ಮತ್ತೆ ನಿತ್ಯವೂ ಬೇಕಾದ ಹಿಟ್ಟನ್ನು ರುಬ್ಬುತ್ತಿದ್ದರು. ಅವರೇಕೆ ಕಷ್ಟ ಪಡಬೇಕು? ಅವರಿಗೆ ಒಂದು ಮಿಕ್ಸರ್ ಕೊಡಿಸಿದರೆ ಹೇಗೆ? ಅದೂ ಅಲ್ಲದೇ ಸಿಂಗಪೂರಿಗೆ ಬರುತ್ತಿದ್ದ ಭಾರತೀಯರೆಲ್ಲಾ ಹಿಂದಿರುಗುವಾಗ ಒಂದು ಮಿಕ್ಸರ್, ಒಂದು ಕ್ಯಾಮೆರಾ, ತರಹಾವರಿ ಸೀರೆಗಳು ಇವನ್ನೆಲ್ಲಾ ತರುವುದು ವಾಡಿಕೆಯಾಗಿತ್ತು. ಕ್ಯಾಮೆರಾ ಕೊಂಡ ಅಂಗಡಿಯಲ್ಲಿಯೇ ಮಿಕ್ಸರ್‌ಗಳೂ ಇದ್ದವು. ಕೇವಲ ಇಪ್ಪತ್ತೈದು ಡಾಲರುಗಳು. ಅದನ್ನೂ ಕೊಂಡೆ. ಸಂಗೀತದ ಕ್ಯಾಸೆಟ್ಟುಗಳಿದ್ದವು. ನನಗೆ ಸಂಗೀತ ಬಲು ಪ್ರಿಯ. ಎರಡು, ಮೂರು ಡಾಲರುಗಳಿಗೆಲ್ಲಾ ಸಿಗುತ್ತಿದ್ದವು. ಅವನ್ನೂ ಕೊಂಡಿದ್ದಾಯಿತು. ಹೀಗೆಯೇ ಮತ್ತಷ್ಟು ಚಿಕ್ಕ ಪುಟ್ಟ ವಸ್ತುಗಳು. ಕೊನೆಗೆ ವನಿತಾ ವಿಪರೀತ ಹಟಮಾಡಿದಾಗ ಶಾಪಿಂಗ್ ಸಾಕು ಎನ್ನಿಸಿತು.  ತೆಗೆದುಕೊಂಡಿದ್ದ ವಸ್ತುಗಳನ್ನೆಲ್ಲಾ ಟ್ಯಾಕ್ಸಿಯಲ್ಲಿ ಇಟ್ಟುಕೊಂಡು ನೋಡಿಕೊಂಡೆ. ಇವರು ನನಗೆ ಕೊಟ್ಟಿದ್ದ ಐನೂರು ಡಾಲರುಗಳಲ್ಲಿ 450 ರಷ್ಟು ಖರ್ಚಾಗಿತ್ತು. “ಅಯ್ಯೋ ಹೀಗೆ ಹಿಂದೆ ಮುಂದೆ ನೋಡದೆ ದುಡ್ಡು ಚೆಲ್ಲಿ ಬಿಟ್ಟೆನಲ್ಲಾ, ಅವರಿಗೆ ಕೋಪ ಬಂದರೆ ಏನು ಗತಿ? ಅವರೇನೋ ಹೇಗೆ ಬೇಕಾದರೂ ಖರ್ಚು ಮಾಡಿಕೋ ಎಂದಿದ್ದರು. ಆದರೆ ನನಗೆ ವಿವೇಕ ಬೇಡವೆ? ಅದೂ ಅಲ್ಲದೇ ಮಿಕ್ಕವರಿಗೆ ಕೊಡೋ ಗಿಫ್ಟಿಗಿಂತ ನನ್ನ ಸರ ಬಳೇಗೇ ಹೆಚ್ಚು ಕೊಟ್ಟದ್ದೇನೆ. ಸಧ್ಯ ಇವರು ಏನೂ  ಹೇಳದೆ ಹೋದರೆ ಸರಿ.” ಹೀಗೆ ಏನೇನೋ ಯೋಚನೆ ಮಾಡಿಕೊಂಡು ಕೂತಿದ್ದೆ. ವಾಸಂತಿ ಕೇಳಿದರು, “ಏಕೆ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿ ಬಿಟ್ಟಿರಿ?” ನಾನು ನನಗೆ ಅನ್ನಿಸಿದ್ದನ್ನು ಹೇಳಿಕೊಂಡೆ. “ನೀವೂ ಸರಿ. ಜನ ದುಡ್ಡು ಖರ್ಚು ಮಾಡೋದಕ್ಕೇ ಸಿಂಗಪೂರಿಗೆ ಬರ್ತಾರೆ. ಸಾವಿರಾರು ಡಾಲರ್ ಸುರೀತಾರೆ ಇಲ್ಲಿ. ನೀವು ಖರ್ಚು ಮಾಡಿರೋದು ಏನು ಮಹಾ?” ಸಂಜೆಗೆ ಮುಂಚೆಯೆ ಹೋಟೆಲ್ ಸೇರಿದೆವು. ಇವರು ಮದುವೆಗೆ ಬೆಂಗಳೂರಿಗೆ ಬಂದಾಗ ಅವರು ಕೊಟ್ಟಿದ್ದ ದುಡ್ಡು ಎಲ್ಲಾ ಖರ್ಚಾದದ್ದನ್ನು ಹೆದರಿಕೊಂಡೇ ಹೇಳಿಕೊಂಡೆ. ಸಧ್ಯ, ಅವರು ಒಳ್ಳೇ ಮೂಡಿನಲ್ಲಿ ಇದ್ದರು. “ದುಡ್ದು ಇರೋದು ಖರ್ಚು ಮಾಡೋದಕ್ಕೇ ಅಲ್ಲವಾ?  ಒಳ್ಳೇದಾಯಿತು ಬಿಡು” ಎಂದರು. ಗೆದ್ದೆ ಅಂದ್ಕೊಂಡೆ ನಾನು.

ಶ್ರೀರಾಮ್, ಮಂಗಳ  ಇಬ್ಬರೂ ನಾವು ಬರೋದನ್ನೇ ಕಾಯ್ತಾಇದ್ದ್ರು. ಅವರಿಬ್ಬರಿಗೂ ಕೋಪಾನೂ ಬಂದಿತ್ತು, ನಾನು ಬರೋದಕ್ಕೆ ತಡ ಮಾಡಿದೆ ಅಂತ. ಅವರಿಗೆ ಏನೋ ಆಟದ ಸಾಮಾನು ಕೊಂಡಿದ್ದೆ. ನೋಡಿ ಸುಮ್ಮನಾದರು. ಮತ್ತೆ ಏರ್ ಪೋರ್ಟಿಗೆ ಹೋಗಬೇಕು. ರಾತ್ರಿ ಎಂಟಕ್ಕೆ ಫ್ಲೈಟು. ಆರಕ್ಕೆ ಬಸ್ ಬರೋದಿತ್ತು. ನಾನು ಮಕ್ಕಳು ಎಲ್ಲಾ ಬೇಗ ಬೇಗ ಸಿದ್ಧವಾಗಿ ಐದೂ ಕಾಲಿಗೆಲ್ಲಾ ರೂಮ್ ಬಿಟ್ಟು ಹೊಟೆಲಿನ ಲೌಂಜ್ ನಲ್ಲಿ ಕೂತೆವು.

“ತೀರಾ ಬೇಗ ಬಂದಿದ್ದೀರ. ಬೇಕಾದರೆ ರೂಮಿನಲ್ಲೇ ಇರಿ. ಬಸ್ ಬಂದಾಗ ಕರೀತೀವಿ.”

“ಪರವಾಗಿಲ್ಲ”, ಅಂತ ನಾವು ಅಲ್ಲಿಯೇ ಕೂತೆವು.  ಹೇಗಿದ್ದರೂ ನಮ್ಮ ಲಗೇಜೆಲ್ಲಾ ಸಿಡ್ನಿಯಿಂದ ಮದರಾಸಿಗೆ ನೇರ ಹೋಗುತ್ತಿತ್ತು. ಇಲ್ಲಿಗೆ ಬರೀ ಒಂದೊಂದು ಕ್ಯಾಬಿನ್ ಬ್ಯಾಗ್ ತೆಗೆದುಕೊಂಡು ಬಂದಿದ್ದೆವು. ಈಗ ಸಿಂಗಪೂರಿನಲ್ಲಿ ಒಂದೆರಡು ಬ್ಯಾಗ್ ಸೇರಿಕೊಂಡಿದ್ದವು.

ಮಕ್ಕಳು ಅಲ್ಲಿಯೇ ಏನೋ ಆಡಿಕೊಂಡಿದ್ದರು. ನಾನು ಸುಮ್ಮನೇ ಕೂತಿದ್ದೆ. ನಾನು ಮಾಡಿದ್ದ ಶಾಪಿಂಗ್ ಯೋಚನೆ ಒಂದು ಕಡೆ, ಎರಡು ವರ್ಷದ ನಂತರ ಊರಿನಲ್ಲಿ ಅಮ್ಮ, ಅಪ್ಪ ಎಲ್ಲರನ್ನೂ ನೋಡುವ ತವಕ ಮತ್ತೊಂದು ಕಡೆ.

ಆರು ಗಂಟೆ ಆಯಿತು, ಬಸ್ ಬರಲಿಲ್ಲ. ಆರೂ ಕಾಲಾಯಿತು. ಇನ್ನೂ ಬರಲಿಲ್ಲ. ಹೋಟೆಲಿನ ರಿಸೆಪ್ಷನ್ನಿನಲಿ ವಿಚಾರಿಸಿದೆ. “ಏನೋ ಲೇಟಾಗಿದೆ ಅನ್ಸುತ್ತೆ. ತಡೀರಿ, ಬರುತ್ತೆ” ಅಂದರು. ಆರೂವರೆ ಆಯಿತು. ಬಸ್ ಬರಲಿಲ್ಲ. ನನಗೆ ಹೆದರಿಕೆ ಆಯಿತು. ಮತ್ತೆ ಕೇಳಿದೆ. ಅದೇ ಉತ್ತರ. ಇನ್ನು ಫ್ಲೈಟು ತಪ್ಪುವುದು ಖಂಡಿತ ಎನ್ನಿಸಿತು. ಯಾಕಾದರೂ ಹೋಟೆಲ್ಲಿಗೆ ಬಂದೆನೋ, ಏರ್ ಪೋರ್ಟಿನಲ್ಲೇ ಇದ್ದರೆ ಚೆನ್ನಾಗಿತ್ತು ಅನ್ನಿಸಿತು. ಒಮ್ಮೆಗೇ ನನಗೆ ಆಳು ಬಂತು. ರಿಸೆಪ್ಷನ್ನಿನಲ್ಲಿ ಅಂಗಲಾಚಿದೆ. ಇನ್ನು ಫ್ಲೈಟಿಗೆ ಒಂದು ಗಂಟೆ ಮಾತ್ರ ಇದೆ. ಏನು ಗತಿ? ಆಗ ಅವನಿಗೆ ಅರಿವಾಯಿತು. ಕೂಡಲೇ ಟ್ಯಾಕ್ಸಿಯನ್ನು ಕರೆದು ನಮ್ಮನ್ನು ಕೂಡಿಸಿದ. ಅಲ್ಲದೇ ಏರ್ ಪೋರ್ಟೀಗೆ ಫೋನ್ ಮಾಡಿ ನಾವು ಬರುತ್ತಿರುವುದಾಗಿ ಹೇಳಿದ. ಆಗ ಅವೆಲ್ಲಾ ನಡೀತಿತ್ತು. ಈಗಿನ ಹಾಗಲ್ಲ. ಸಿಡ್ನೀಲಿ ದಿನಕ್ಕೆ ಹತ್ತೋ ಏನೋ ಫ್ಲೈಟು, ಸಿಂಗಪೂರಿನಲ್ಲಿ ಸ್ವಲ್ಪ ಜಾಸ್ತಿ. ಈಗ ನೂರಾರು ಫ್ಲೈಟುಗಳು. ಯಾರೂ ಕೇಳೊಲ್ಲ. ನಾವೇ ಜವಾಬ್ದಾರಿ ವಹಿಸಬೇಕು.

ಟ್ಯಾಕ್ಸಿಯವನು ಬೇಗಲೇ ಏರ್ ಪೋರ್ಟ್ ಮುಟ್ಟಿಸಿದ. ಅಲ್ಲಿ ಇಬ್ಬರು ಹುಡುಗಿಯರು ನಮ್ಮನ್ನೇ ಕಾದು ನಿಂತಿದ್ದರು. ಅವರು ನಮ್ಮ ಪಾಸ್ ಪೋರ್ಟ್ ಕಂಟ್ರೋಲ್ ಮುಗಿಸಿ, ಒಳಗೆ ಕರೆದುಕೊಂಡು ಹೋಗಿ ಪ್ಲೇನಿನಲ್ಲಿ ಕೂಡಿಸಿದರು. ನನಗೆ ಉಸಿರಾಡುವಂತಾಯಿತು.  ಮತ್ತೆ ಐದಾರು ಗಂಟೆಗಳ ಪ್ರಯಾಣ. ಮದರಾಸಿನಲ್ಲಿ ಮಧ್ಯರಾತ್ರಿ ಮೀರಿದ್ದಾಗ ನಾವು ಲ್ಯಾಂಡ್ ಆದೆವು. ಪಾಸ್ ಪೋರ್ಟ್ ಕಂಟ್ರೋಲ್, ಕಸ್ಟಮ್ಸ್ ಮುಗಿಸಿದೆವು. ನಾನು ಬುದ್ಧಿ ತಿಳಿದು ಚಿನ್ನದ ಸರಾನ್ನ ನಾನೇ ತೊಟ್ಟಿದ್ದೆ. ಬಳೆಗಳನ್ನೆಲ್ಲಾ ಮಂಗಳಾಗೆ ತೊಡಿಸಿದ್ದೆ. ಕಸ್ಟಮಿನವರು ಏನೂ ಕೇಳದೇ ಹೊರಗೆ ಬಿಟ್ಟರು. ಅಲ್ಲಿ ಕಾದಿದ್ದ ನನ್ನ ತಮ್ಮ ಅನಂತನ ಮುಖ ನೋಡಿ, “ಇನ್ನು ಪರವಾಗಿಲ್ಲ. ಗೆದ್ದೆ. ಅವನು ನೋಡ್ಕೋತಾನೆ” ಅಂತ ನಕ್ಕೆ.

ಕೂಡಲೇ ಒಂದು ಟ್ಯಾಕ್ಸಿ ಮಾಡಿ ಅವನು ನಮ್ಮನ್ನು ವುಡ್ ಲ್ಯಾಂಡ್ಸ್ ಹೋಟೆಲ್ಲಿಗೆ ಕರೆತಂದ. ಅಲ್ಲಿ ಬೆಳಗಿನವರೆಗೂ ಇದ್ದು ಮರುದಿನ ಬೃಂದಾವನ್ ಟ್ರೈನ್ ಹತ್ತಿದೆವು. ಬೆಂಗಳೂರಿನಲ್ಲಿ ಇಳಿದು ಚಾಮರಾಜ ಪೇಟೆಯಲ್ಲಿರೋ ನಮ್ಮ ಮನೆ ತಲಪಿದಾಗ ಸುಸ್ತಾಗಿಹೋಗಿತ್ತು. ಅಮ್ಮ, ಅಪ್ಪ ಎಲ್ಲರನ್ನ ನೋಡಿ ಸಂತೋಷವೂ ಆಯಿತು. ಮಲಗಿವಳು ಎದ್ದದ್ದು ಮರುದಿನವೇ.

ನನಗೂ ಒಂದು ಸಂದೇಹ ಇತ್ತು. ಊರಿನಲ್ಲಿ ನಮ್ಮ ಮನೆಯಲ್ಲಿ ತಂಗುವುದೋ ಅಥವಾ ಅತ್ತೆಯಮನೆಯಲ್ಲಿ ತಂಗುವುದೋ. ಇವರನ್ನು ಕೇಳಿದ್ದೆ. “ನಿನ್ನಿಷ್ಟ” ಎಂದಿದ್ದರು.  ನಮ್ಮ ಮನೆಯಲ್ಲಿ ಮದುವೆ ಬೇರೆ.  ಬಂದು ಹೋಗುವರ ಸಂಖ್ಯೆ ಹೆಚ್ಚು. ಕೆಲವರಂತೂ ನನ್ನನ್ನು ನೋಡಲೆಂದೇ ಬರುತ್ತಿದ್ದರು. ನಮ್ಮ ಕುಟುಂಬದಿಂದ ಹೊರದೇಶಕ್ಕೆ ಹೋದ ಮೊದಲ ಹೆಂಗಸು ನಾನು. ಕೆಲವರಿಗೆ ನಾನು ತಂದಿದ್ದ ಗಿಫ್ಟುಗಳನ್ನು ಕೊಟ್ಟೆ. ಸಾಮಾನ್ಯವಾಗಿ ಎಲ್ಲರೂ “ನಮಗೇಕೆ ಇದನ್ನೆಲ್ಲಾ ತಂದ್ರಿ, ಬೇಕಾಗಿರಲಿಲ್ಲ” ಎಂದು ಹೇಳಿದರು. ಆದರೂ ಎಲ್ಲರೂ ಕೊಟ್ಟಿದ್ದನ್ನು ತೆಗೆದುಕೊಂಡು ಹೋದರು ಅನ್ನಿ. ನೋಡಿದವರೆಲ್ಲಾ ನಾನು ತಂದಿದ್ದ ಸರಾನ ಹೊಗಳಿದ್ದೇ ಹೊಗಳಿದ್ದು. “ಎಷ್ಟು ಚೆನ್ನಾಗಿದೆ ಈ ಡಿಸೈನು. ಇಲ್ಲಿ ಈ ತರಹ ಸರ ಮಾಡೋರೇ ಇಲ್ಲ” ನಮ್ಮ ತಾಯಿ, ನನ್ನ ಅಕ್ಕ ತಂಗಿಯರು ಎಲ್ಲರಿಗೂ ಆ ಸರ ಇಷ್ಟವಾಯಿತು. “ನೀನು ಲಕ್ಕಿ ಬಿಡು. ಎಂಥ ಗಂಡ. ಎಷ್ಟೊಂದು ಕೊಡಿಸಿದ್ದಾರೆ. ಅಲ್ಲಿ ಸುಖವಾಗಿದ್ದೀಯ. ಮುಖ ನೋಡಿದರೆ ಗೊತ್ತಾಗುತ್ತೆ.”

ಮೂರುದಿನ ಮನೆಯಲ್ಲಿದ್ದು ಸುಸ್ತು ನೀಗಿಸಿಕೊಂಡು ಬಸವನಗುಡಿಯಲ್ಲಿದ್ದ ಅತ್ತೆಯ ಮನೆಗೆ ಹೋದೆ.

“ನೀನು ಬಂದದ್ದು ಗೊತ್ತಾಯಿತು. ಆರಾಮವಾಗಿದ್ದೀಯಾ? ಶ್ರೀರಾಮ್, ಮಂಗಳ  ಎಲ್ಲಾ ಮೊನ್ನೆ ಬಂದಿದ್ರು. ಚನ್ನಾಗಾಗಿದಾರೆ. ಏನೇ ಆದರೂ ಫಾರಿನ್ ಅಲ್ಲವಾ?” ಎಂದರು ನಮ್ಮತ್ತೆ.

“ನೀವು ಹ್ಯಾಗಿದ್ದೀರಾ? ಮಾವನವರ ಆರೋಗ್ಯ ಹೇಗಿದೆ?” ವಿಚಾರಿಸಿದೆ.

ಮಾತು ಊಟ ಎಲ್ಲಾ ಅಲ್ಲಿಯೇ ಆಯಿತು. ನಾನು ತಂದಿದ್ದ ಮಿಕ್ಸರನ್ನು ಅವರಿಗೆ ಕೊಟ್ಟೆ. ಅದನ್ನು ಹೊರತೆಗೆದು ನೋಡಿದರು. ಹೇಗೆ ಉಪಯೋಗಿಸುವುದು ಹೇಳಿದೆ. ಅವರೇನೂ ಹೇಳಲಿಲ್ಲ. ಈಕೆಗೆ ಕೃತಜ್ಞತೆ ಇಲ್ಲ ಎನ್ನಿಸಿತು ನನಗೆ. ನಂತರ ನನ್ನ ಸರವನ್ನೂ ತೋರಿಸಿದೆ. “ಚೆನ್ನಾಗಿದೆ. ಅಂತಹ ದೇಶದಲ್ಲಿ ಇದ್ದರೆ ಇಂಥದನ್ನ ಸುಲಭವಾಗಿ ಕೊಳ್ಳಬಹುದು ಅಲ್ಲವೇ?” ಎಂದರು. “ಹೌದು” ಎಂದು ನಾನು ತಾಯಿಯ ಮನೆಗೆ ಹಿಂದಿರುಗಿದೆ.

ಎರಡು ದಿನಗಳ ನಂತರ ಮತ್ತೆ ಅತ್ತೆಯಮನೆಗೆ ಹೋಗಿದ್ದೆ. ಮನೆಯಲ್ಲಿ ಮತ್ತಾರೂ ಇರಲಿಲ್ಲ. ಆಗ ಅತ್ತೆ ಬಾಯಿಬಿಟ್ಟರು.

“ಆರತಿ, ಆ ಮಿಕ್ಸರ್ ಏನೋ ತಂದಿದ್ದೀಯಲ್ಲ ಅದನ್ನ ನೋಡಿದೆ. ನನಗೆ ಅದು ಆಗೋದಿಲ್ಲ. ಅದನ್ನ ಬಳಸೋದಕ್ಕಿಂತ ಈ ಒರಳು, ರುಬ್ಬುಗುಂಡು ಎಷ್ಟೋ ವಾಸಿ. ಹಿಟ್ಟು ಚೆನ್ನಾಗಿ ಆಗುತ್ತೆ. ಇದು ತೀರಾ ಚಿಕ್ಕದು. ಈ ಮಿಕ್ಸರನ್ನ ಇನ್ನಾರಿಗಾರದರೂ ಕೊಡು. ಪರವಾಗಿಲ್ಲ.”

“ಇಲ್ಲಾ ಅತ್ತೆ, ನಿಮಗೇ ಅಂತಾನೇ ತಂದೆ ಅದನ್ನ.”

“ನೀನು ಏನೂ ತಿಳ್ಕೊಳ್ಳದಿದ್ದರೆ ಒಂದು ಮಾತು ಹೇಳ್ತೀನಿ.”

“ಏನತ್ತೆ ಹೇಳಿ.”

“ನನಗೆ ಏನಾದರೂ ಕೊಡಬೇಕು ಅಂತ ನಿನಗೆ ಅನ್ನಿಸಿದರೆ ನನಗೆ ಆ ಸರಾನ ಕೊಡು.“

ಅವಾಕ್ಕಾದೆ. ಏನು ಹೇಳಲಿ ನಾನು?

“ಬೇಕಾದರೆ, ಶ್ರೀಧರನ್ನ ಕೇಳು. ಅವನು ಹೂ ಅಂದರೆ ಕೊಡು. ಇನ್ನೇನು ಅವನೂ ಮದುವೆಗೆ ಬರ್ತಾನಲ್ವಾ?”

“ಅವರು ಬರಲಿ” ಎಂದು ಅಲ್ಲಿಂದ ಕಳಚಿಕೊಂಡಿದ್ದೆ ಅಂದು. ಶ್ರೀಧರ್ ಬರುವವರೆಗೆ ಅಲ್ಲಿಗೆ ಮತ್ತೆ ಹೋಗಲೇ ಇಲ್ಲ. ತಂದಿದ್ದ ಮಿಕ್ಸರನ್ನು ಮನೆಗೆ ತಂದೆ. ನನ್ನ ಅಣ್ಣನ ಮಗಳು ಮನಸಾರೆ ಮೆಚ್ಚಿ ಮನೆಗೆ ತೆಗೆದುಕೊಂಡು ಹೋದಳು.

ನನಗೆ ಮುಂದೆ ಒಂದೆರಡು ದಿವಸ ಅದೇ ಯೋಚನೆ ಆಯಿತು – “ಇದೇನು ಅತ್ತೆ ಹೀಗೆ ಕೇಳಿಬಿಟ್ಟ್ರು. ನಾನೇನು ಮಾಡಲಿ ಈಗ?”

ಮದುವೆಗೆ ಎರಡು ದಿನ ಇದ್ದಹಾಗೆ ಶ್ರೀಧರ್ ಬಂದಿಳಿದರು. ಆಗ ನಾನು ಅಮ್ಮನ ಮನೆ ಬಿಟ್ಟು ಅತ್ತೆಯ ಮನೆಯಲ್ಲಿ ತಂಗಿದೆ.

ಇವರಲ್ಲಿ ಆದದ್ದನ್ನು ಹೇಳಿಕೊಂಡೆ. ಅವರು ಆಶ್ಚರ್ಯ ಪಟ್ಟರು. ಕೋಪವಿಲ್ಲ. ಅವರು ಹೇಳಿದರು,

“ಅವಳಿಗೆ ಆಸೆ ಜಾಸ್ತಿ. ನಮ್ಮ ಮನೇಲಿ ದುಡ್ಡುಕಾಸು ಕಡಿಮೆ. ಚಿನ್ನ ಬೆಳ್ಳಿ ಕೊಳ್ಳುವ ಹಾಗಿಲ್ಲ. ಅದಕ್ಕೇ ಕೇಳಿದ್ದಾಳೆ. ಅಲ್ಲದೇ ಅವಳು ಇನ್ನಾರನ್ನ ಕೇಳಬೇಕು? ಸುಮ್ಮನೆ ಕೊಟ್ಟುಬಿಡು. ನೀನು ಸಿಂಗಪೂರಿಗೆ ಮತ್ತೆ ಹೋದಾಗ ಇದೇ ಸರಾನ್ನ ತಿರುಗ ಕೊಳ್ಳಬಹುದು ಅಲ್ಲವಾ? “

ನಾನೂ ಯೋಚನೆ ಮಾಡಿದೆ. ಅತ್ತೆಯ ವಯಸ್ಸು ಇನ್ನೂ 52 ವರ್ಷ. ಪಾಪ, ಅವರಿಗೆ ಜೀವನದಲ್ಲಿ ಸದಾ ಗೋಳೇ.  ಏನೋ ಒಮ್ಮೆ ಬಾಯಿತಪ್ಪಿ ಕೇಳಿದ್ದಾರೆ.  ಸದಾ ಕೇಳುವವರಲ್ಲ. ಆಸ್ಟ್ರೇಲಿಯಾದಲ್ಲಿ ವಾಸವಿರುವ ನಾನು ಮುಂದೆ ಬೆಂಗಳೂರಿಗೆ ಬಂದಾಗಲೆಲ್ಲಾ ಸಿಂಗಪೂರಿಗೆ ಹೋಗಲೇ ಬೇಕು. ಮುಂದೆ ಇನ್ನೂ ಒಳ್ಳೆ ಡಿಸೈನ್ ಸಿಗಬಹುದು.  ಈಗ ಇವರು ಹೇಳಿದ ಹಾಗೇ ಆಗಲಿ.

ಮರುದಿನವೇ ಶ್ರೀಧರ್ ಎದುರೇ ಅತ್ತೆಗೆ ಸರವನ್ನು ಕೊಟ್ಟುಬಿಟ್ಟೆ. ಮನಸ್ಸಿಗೆ ಕಸಿವಿಸಿ ಆಯಿತು.  ಈ ಅತ್ತೆ ಆದರೋ ಮದುವೆಯಲ್ಲಿ ಅದೇ ಸರವನ್ನು ತೊಟ್ಟು ಎಲ್ಲರಿಗೂ ತೋರಿಸಿ,

“ನನ್ನ ಸೊಸೆ ಆರತಿ ಸಿಂಗಪೂರಿನಿಂದ ತಂದುಕೊಟ್ಟಳು” ಎಂದು ನನ್ನನ್ನು ಹೊಗಳಿದರು. ನಾನು ಬಿಕೋ ಎನ್ನುವ ನನ್ನ ಮದುವೆಯ ಹಳೆಯ ಸರವನ್ನೇ ತೊಟ್ಟಿದ್ದೆ. ನನ್ನ ಅಕ್ಕ ತಂಗಿಯರು ನಮ್ಮ ಅತ್ತೆಯನ್ನು ಮನಸಾರೆ ಬೈದುಕೊಂಡರು. ನನ್ನ ಅಮ್ಮ ಆಕೆಯನ್ನು ಶಪಿಸಿದರು – ಈ ಮುದುಕಿಗೆ ಏನುಬಂತು! ನಾನು ಹೇಳುವುದಾದರೂ ಏನಿತ್ತು? ಏನೂ ಹೇಳದೆ ಮದುವೆಯಲ್ಲಿ ನಗುನಗುತ್ತಾ ಇದ್ದೆ. ಒಳಗೆ ಬೇಜಾರು ಇದ್ದೇ ಇತ್ತು.

ಅದಾಗಿ ಇಪ್ಪತ್ತು ವರ್ಷಗಳ ನಂತರ  ನಮ್ಮ ಮಾವ ತೀರಿಕೊಂಡರು. ಈ ಅವಧಿಯಲ್ಲಿ ನಾವು ಹಲವಾರು ಬಾರಿ ಬೆಂಗಳೂರಿಗೆ ಹೋಗಿದ್ದೆವು, ಸಿಂಗಪೂರದಲ್ಲಿ ಸಾಕಷ್ಟು ಚಿನ್ನ, ವಜ್ರ ಕೊಂಡಿದ್ದೆವು. ಅತ್ತೆಗೂ ಅದೂ ಇದೂ ಖರೀದಿ ಮಾಡಿದೆವು. ಆದರೆ ಅವರು ಯಾವುದನ್ನೂ ನಮ್ಮಿಂದ ತೆಗೆದುಕೊಳ್ಳಲಿಲ್ಲ. “ನನಗೇಕೆ ತರುತ್ತೀರಿ. ನಿಮಗೇ ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಕೊಡಿಸಿ” ಎನ್ನುತ್ತಿದ್ದರು.

ಮಾವನವರ ತಿಥಿ ಇತ್ಯಾದಿಗಳು ಮುಗಿದವು. ಯಾರೂ ಹತ್ತಿರವಿರದಿದ್ದಾಗ ಅತ್ತೆ ನನ್ನನ್ನು ಕರೆದು ಆ ಸರವನ್ನು ನನ್ನ ಕೈಯ್ಯಲ್ಲಿ ಇಟ್ಟು ಹೇಳಿದರು,

“ಆರತಿ, ಇನ್ನು ಈ ಸರ ನನಗೆ ಬೇಡ. ಇನ್ನು ನಾನು ವೇಷ ಭೂಷಣ ತೊಡಬಾರದು. ಇದನ್ನು ನಿನ್ನ ಹೆಣ್ಣುಮಕ್ಕಳಿಗೆ ಕೊಡು.”

“ಬೇಡ ಅತ್ತೆ, ನಿಮ್ಮ ಹತ್ತಿರಾನೆ ಇರಲಿ ಇದು.”

“ಇಲ್ಲ, ನನ್ನ ಹತ್ತಿರ ಇದ್ದರೆ ಎಲ್ಲರಿಗೂ ಇದರ ಮೇಲೇನೇ ಕಣ್ಣು. ನಾನು ಮತ್ತೆ ಯಾರಿಗಾದರೂ ಕೊಟ್ಟರೆ ನೂರು ಮಾತಾಡ್ತಾರೆ. ಅದರ ಬದಲು, ಆರತಿ ಸರ ಅದು. ಅವಳಿಗೇ ವಾಪಸ್ ಕೊಟ್ಟೆ ಅಂದರೆ ಯಾರೂ ಮಾತಾಡೋದಿಲ್ಲ. ಅದು ನ್ಯಾಯ ತಾನೆ?”

ನೋಡಿ, ಆ ಸರ ಆಗ ಸಿಡ್ನಿಗೆ ಬಂತು. ಆ ವೇಳೆಗೆ ನನ್ನ ಹತ್ತಿರ ಬೇಕಾದಷ್ಟು ಒಡವೆ ಇದ್ದವು. ಮಕ್ಕಳಿಗೂ ಸಾಕಷ್ಟು ಮಾಡಿಸಿದ್ದೆ. ಮಂಗಳ , ವನಿತಾ ಇಬ್ಬರ ಮುಂದೇನೂ ಸರ ಹಿಡಿದೆ. ಅವರಿಬ್ಬರೂ “ಡೋಂಟ್ ಬಿ ಸಿಲ್ಲಿ, ಮಮ್, ಇವೆಲ್ಲಾ ನಮಗೆ ಬೇಡ. ನೀನೇ ಯಾರಿಗಾರದೂ ಕೊಡು” ಎಂದುಬಿಟ್ಟರು.  ಮಾವನವರು ಹೋದ ಎರಡು ವರ್ಷಕ್ಕೇ ಅತ್ತೇನೂ ತೀರಿಕೊಂಡರು. ಇನ್ನು ಮಾರ್ಚ್ ಬಂದರೆ ಇವರು ಹೋಗಿ ಐದು ವರ್ಷ ಆಗುತ್ತೆ. ನನ್ನ ಒಡವೆ ಎಲ್ಲಾ ಬ್ಯಾಂಕಿನಲ್ಲಿ ಈಗ ಜೋಪಾನವಾಗಿವೆ. ನನಗೂ ಈಗ 82 ವಯಸ್ಸು. ನನಗೆ ಯಾಕೆ ಬೇಕು ಒಡವೆ ಹೇಳಿ? ಇನ್ನು ಮಂಗಳ  ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾಳೆ, ವನಿತಾ ಡಾಕ್ಟರು. ಇಬ್ಬರಿಗೂ ಇಬ್ಬಿಬ್ಬರು ಮಕ್ಕಳು. ಶ್ರೀರಾಮ ಲಾಯರು. ಅವನಿಗೂ ಇಬ್ಬರು ಮಕ್ಕಳು. ಎಲ್ಲರೂ ಬೇಕಾದಷ್ಟು ಚಿನ್ನ  ಬೆಳ್ಳಿ ತೊಗೊಂಡಿದ್ದಾರೆ. ಮನೆ ಮಠ ಮಾಡಿಕೊಂಡಿದ್ದಾರೆ.  ಆ ಸರ ಮಾತ್ರ ಬ್ಯಾಂಕಿನಲ್ಲಿ ಕೂತಿರುತ್ತೆ.

ತುಂಬಾ ಮಾತಾಡಿದೀನಿ. ನಿಮಗೆ ಬೋರ್ ಆಗಲಿಲ್ಲಾ ತಾನೇ?

About The Author

ಸಿಡ್ನಿ ಶ್ರೀನಿವಾಸ್

ಮೂಲತಃ ಬೆಂಗಳೂರಿನವರಾದ ಸಿಡ್ನಿ ಶ್ರೀನಿವಾಸ (ಕರ್ಕೆನಹಳ್ಳಿ ಶ್ರೀನಿವಾಸ), ಸದ್ಯ ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾರೆ. ಅಲನ್ ಟೂರಿಂಗ್ ಫೋರ್ಡ್, ಅಲ್ಬರ್ಟ್ ಐನ್ ಸ್ಟಿನ್, ಐಸಾಕ್ ನ್ಯೂಟನ್, ಗೆಲಿಲಿಯೊ, ಮೇರಿ ಕ್ಯೂರಿ, ಶ್ರೀನಿವಾಸ ರಾಮಾನುಜನ್ ಇವರ ಕುರಿತು ಜೀವನ ಚಿತ್ರಗಳನ್ನು ಚಿತ್ರಿಸಿರುವ ಕೃತಿಗಳನ್ನು ರಚಿಸಿದ್ದಾರೆ.  ಲ್ಯಾಂಗ್ಲೊ ಪಾರ್ಕರ್ ಎ.ಕೆ. ಅವರ ಕೃತಿಯನ್ನು ‘ಆಸ್ಟ್ರೇಲಿಯಾದ ಜಾನಪದ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ