Advertisement
ಕಾರ್ಯಕ್ರಮದ ಲೆಕ್ಕಾಚಾರಗಳು: ಎಚ್. ಗೋಪಾಲಕೃಷ್ಣ ಸರಣಿ

ಕಾರ್ಯಕ್ರಮದ ಲೆಕ್ಕಾಚಾರಗಳು: ಎಚ್. ಗೋಪಾಲಕೃಷ್ಣ ಸರಣಿ

ಇದೇ ತರಹದ ಅನುಭವ ಎರಡು ಮೂರು ಸಲ ಬೇರೆ ಬೇರೆ ಸಂದರ್ಭಗಳಲ್ಲಿ ಆಯಿತು. ಜತೆಯಲ್ಲಿದ್ದವರು ಹುರಿದುoಬಿಸಿ ನನ್ನ ಹಕ್ಕುಗಳ ರಕ್ಷಣೆಗಾಗಿ ಜಗಳಕ್ಕೆ ಪ್ರೆರೇಪಿಸಿದ್ದರು. ಜಗಳ ಸಹ ಆಡಿದ್ದೆ! ಜಗಳದ ಎಫೆಕ್ಟ್ ಬೇರೆ ರೀತಿ ಆಯಿತು. ಆಗಿದ್ದು ಬೇರೆ ರೀತಿ ಅಂದರೆ ಕಾಸು ಗೀಸು ಹೆಸರು ಬರುವಂತಹ ಸರ್ಕಾರದ ಪ್ರಾಯೋಜಿತ ಕೆಲಸಗಳಿಂದ ದೂರ ಆದೆ. ಇದು ತುಂಬಾ ತಡವಾಗಿ ಈಚೆಗೆ ಅರಿವಿಗೆ ಬಂತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೯ನೇ ಬರಹ ನಿಮ್ಮ ಓದಿಗೆ

ಹಿಂದಿನ ಎಪಿಸೋಡು ಹೀಗೆ ಮಂಗಳ ಹಾಡಿತ್ತು. ಎಪಿಸೋಡಿನ ಲೆಕ್ಕಕ್ಕೆ ಎರಡು ಮೂರು ಪಾಯಿಂಟ್ ಸೇರಿಸಿದೆನಾ..

“…ಹೀಗೆ ಸಾರ್. ಅವರನ್ನ ಒಂದು ಭಾಷಣಕ್ಕೆ ಕರಿಬೇಕಿತ್ತು… ” ಅಂತ ನನ್ನ ಪುರಾಣ ಬಿಟ್ಟೆ.

“ಅಯ್ಯೋ ಹೌದೇ? ಮಲ್ಲೇಶ್ವರದಲ್ಲಿ ಮೀಟಿಂಗು ಅಂತ ಹೇಳ್ತಾ ಇದ್ರು. ಬಸ್ ಸ್ಟಾಪಲ್ಲಿ ಇಲ್ಲ ಅಂದರೆ ಮಲ್ಲೇಶ್ವರದಲ್ಲಿ ಸಿಗ್ತಾರೆ….” ಅಂತ ಸ್ವಗತ ಮಾಡಿಕೊಂಡರು. ಸ್ವಗತ ಅಂದರೆ ಗೊತ್ತು ತಾನೇ? ಅವರಿಗೆ ಅವರೇ ಮಾತಾಡಿಕೊಳ್ತಾರೆ ನೋಡಿ ಅದಕ್ಕೆ ಸ್ವಗತ ಅಂತ ಹೆಸರು.

ಮಲ್ಲೇಶ್ವರದಲ್ಲಿ ಮೀಟಿಂಗ್ ಅಂದರೆ ಮಲ್ಲೇಶ್ವರದ ಯಾವ ಭಾಗದಲ್ಲಿ, ಯಾವ ಜಾಗದಲ್ಲಿ ಎನ್ನುವ ಮತ್ತೊಂದು ಯಕ್ಷಪ್ರಶ್ನೆ ತಲೆಯಲ್ಲಿ ಉದ್ಭವ ಆಯ್ತಾ?

ಎದುರಿನ ಕೃಷ್ಣಭಟ್ಟರು ಬಾಯಿ ತೆರೆದರು. ಅವರ ಹೆಸರು ಈಗಾಗಲೇ ಹೇಳಿದ್ದರು.

ನನ್ನ ಯಕ್ಷಪ್ರಶ್ನೆ ಅವರಿಗೆ ಟೆಲಿಪತಿ ಮೂಲಕ ರವಾನೆ ಆಗಿರಬೇಕು ಅಂತ ಕಾಣುತ್ತೆ. ಟೆಲಿಪತಿ ಅಂದರೆ ಗೊತ್ತು ತಾನೇ? ನಮ್ಮ ಮನಸಿನ ಯೋಚನೆಗಳು ಯಾರಿಗೆ ತಲುಪಬೇಕೋ ಅವರಿಗೆ ಮೆದುಳಿನ ಮೂಲಕ ನಾವು ಬಾಯಿಗೆ ಬೀಗ ಹಾಕಿಕೊಂಡಿದ್ದರೂ ಸೇರುತ್ತದಂತೆ. ಇದಕ್ಕೆ ಟೆಲಿಪತಿ ಎನ್ನುತ್ತಾರೆ. ಗಂಡ ಹೆಂಡರಲ್ಲಿ ಇದು ತುಂಬಾ ತೀವ್ರ ಎಂದು ಹೇಳುತ್ತಾರೆ. ಒಂದು ಪುಟ್ಟ ಉದಾಹರಣೆ ಅಂದರೆ ಗಂಡ ಹೊಗೆ ಸೇದಲು ಪ್ಲಾನಿಸುತ್ತಿರುವುದು ಹೆಂಡತಿಗೆ ಟೆಲಿಪತಿ ಆಗಿ ಬಿಡುತ್ತದೆ!

“ಮಲ್ಲೇಶ್ವರದ ಗಾಂಧೀ ಸಂಘದಲ್ಲಿ ಮೀಟಿಂಗು ಅಂತ ಹೇಳ್ತಾ ಇದ್ದಹಾಗಿತ್ತು. ಅಲ್ಲಿ ಹೋದರೆ ಸಿಗಬಹುದು ಅಂತ ಕಾಣ್ಸುತ್ತೆ….” ಅಂದರು.

ಆಗ ಬೆಂಗಳೂರು ಇನ್ನೂ ಬೆಂಗಳೂರೇ ಆಗಿದ್ದ ಕಾಲ. ಫ್ಲೈ ಓವರು ಮೆಟ್ರೋ ಪೆಟ್ರೋ ರಿಂಗ್ ರೋಡು ಪಿಂಗ್ ರೋಡು ಇಲ್ಲದ ಸ್ವರ್ಗ ಆಗ ಬೆಂಗಳೂರು. ಒಂದು ತುದಿಯಿಂದ ಇನ್ನೊಂದು ತುದಿಗೆ ಒಂದು ಗಂಟೇಲಿ ಹೋಗಬಹುದಾಗಿದ್ದ ಕಾಲ. ಸೆಂಟ್ರಲ್ ಕಾಲೇಜು, ಗವರ್ನಮೆಂಟ್ ಕಾಲೇಜು ಮಧ್ಯೆ ರಸ್ತೆ. ರಸ್ತೆಯ ಎರಡೂ ಕಡೆ ಬಸ್ ಸ್ಟಾಪು. ಎಲ್ಲಿಗೆ ಬೇಕೋ ಅಲ್ಲಿಗೆ ಅಥವಾ ಅದರ ಸಮೀಪ ಹೋಗಿ ಸೇರಬಹುದು. ಈ ವೇಳೆಗೆ ಬಸ್ ಸ್ಟಾಪ್ ಹತ್ತಿರ ಬಂದಿದ್ದೆವು……..

ಈಗ ಮುಂದಕ್ಕೆ ಓಡೋಣವೇ..

ಸೆಂಟ್ರಲ್ ಕಾಲೇಜು ಅದರ ಎದುರು GAS ಕಾಲೇಜು. ಮಧ್ಯ ರಸ್ತೆ. ಇನ್ನೂ ಒನ್ ವೇ ಇಲ್ಲಿಗೆ ಪಾದಾರ್ಪಣೆ ಮಾಡಿರಲಿಲ್ಲ. ಅದರಿಂದ ಮಲ್ಲೇಶ್ವರದ ಕಡೆ ಹೋಗುವ ಬಸ್ಸಿಗೆ ನಿಂತೆ. ಕೃಷ್ಣಭಟ್ಟರು ಜತೆಗೆ ನಿಂತರು. ಅವರು ಇನ್ನೂ ಮುಂದೆ ಹೋಗಬೇಕಿತ್ತು. ಬಸ್ ಬಂತಾ, ಅದನ್ನು ಹತ್ತಿದೆ. ಆಗ ಈಗಿನ ಹಾಗೆ ಬಸ್ಸಿಗೆ ನೂಕು ನುಗ್ಗುಲು ಇರ್ತಾ ಇರ್ಲಿಲ್ಲ ಮತ್ತು ಫುಟ್ ಬೋರ್ಡ್ ಪ್ರಯಾಣ ಇನ್ನೂ ಆಗ ತಾನೇ ಹುಟ್ಟಿತ್ತು. ನನ್ನ ವಯಸ್ಸಿನವರು ಹೋಗುತ್ತಿದ್ದ ಬಸ್ಸನ್ನು ಓಡಿ ಹತ್ತುವುದು ಸಾಮಾನ್ಯ ಅನಿಸಿತ್ತು. ಈಗೊಂದು ಹದಿನೈದು ವರ್ಷಗಳಿಂದ ಓಡುವ ಬಸ್ ಹತ್ತಲಾಗದಂತೆ ಅದಕ್ಕೆ ಬಾಗಿಲು ಚಿಲಕ ಬೀಗ ಅಳವಡಿಸಲಾಗಿದೆ! ನನ್ನಂತಹ ಎಪ್ಪತ್ತರ ಯುವಕರಿಗೆ ಲಗಾಮಿಸಲಾಗಿದೆ ಅಂದರೆ ಲಗಾಮು ಹಾಕಲಾಗಿದೆ! ಲಗಾಮಿಸಲಾಗಿದೆ ಎನ್ನುವುದು ಭುವನೇಶ್ವರಿ ತಾಯಿಗೆ ನನ್ನ ಲೇಟೆಸ್ಟ್ ಉಡುಗೊರೆ!

ಮಲ್ಲೇಶ್ವರ ಸರ್ಕಲ್‌ನಲ್ಲಿ ಇಳಿದು ಐದು ನಿಮಿಷ ನಡೆದರೆ ಗಾಂಧೀ ಸಾಹಿತ್ಯ ಸಂಘ.. ಇದು ನಮ್ಮ ಆಡುಂಬೊಲ..! ಈ ಪದಕ್ಕೆ ವಿವರಣೆ ಕೊಡಬೇಕು ತಾನೇ ಚೆನ್ನಾಗಿ ಅರ್ಥ ಆಗಬೇಕು ಅಂದರೆ?

“ಆಡುಂಬೊಲ” = ಆಡಿ ಬೆಳೆದ, ಚೆನ್ನಾಗಿ ಪರಿಚಿತವಾದ, ಒಲವು ಬೆಳೆದ, ತನ್ನ ಕೈವಶದಂತಿರುವ ಸ್ಥಳ ಅಥವಾ ಪರಿಸರ ಎಂಬ ಅರ್ಥದಲ್ಲಿ ಬಳಸುತ್ತಾರೆ.

ಉದಾಹರಣೆಗಳು:

“ಇದು ನನಗೆ ಆಡುಂಬೊಲ ಮೈದಾನ.” → ಇದು ನನಗೆ ಚೆನ್ನಾಗಿ ಪರಿಚಿತವಾದ ಮೈದಾನ; ಇಲ್ಲಿ ನಾನು ಸಾಕಷ್ಟು ಆಡಿದ್ದೇನೆ.

“ಆಡುಂಬೊಲ ನೆಲದಲ್ಲಿ ಅವನು ಅದ್ಭುತ ಪ್ರದರ್ಶನ ನೀಡಿದ.” → ತಾನು ಚೆನ್ನಾಗಿ ತಿಳಿದಿರುವ, ಅಭ್ಯಾಸವಿರುವ ಸ್ಥಳದಲ್ಲಿ ಅವನು ಉತ್ತಮವಾಗಿ ಆಡಿದ.

ಇಲ್ಲಿ “ಆಡುಂಬೊಲ” ಎಂದರೆ ಪರಿಚಿತ, ಒಗ್ಗಿಕೊಂಡ, ತನ್ನ ಮನೆಯಂತಾಗಿರುವ ಎಂಬ ಭಾವವನ್ನು ಕೊಡುತ್ತದೆ. ಕ್ರೀಡಾ ಬರಹಗಳಲ್ಲಿ “home ground”, “favourite hunting ground” ಅಥವಾ “familiar territory” ಎಂಬ ಅರ್ಥಕ್ಕೆ ಸಮೀಪವಾಗಿ ಬಳಸಲಾಗುತ್ತದೆ.

ಗಾಂಧೀ ಸಾಹಿತ್ಯ ಸಂಘ ಸೇರಿದೆ. ಇನ್ನೂ ಕಾರ್ಯಕ್ರಮ ಶುರು ಆಗಿರಲಿಲ್ಲ. ಇದ್ದ ಮೂರು ಜನರಲ್ಲಿ ಮಿತ್ರರು ಯಾರು ಅಂತ ಬಾಗಿಲ ಹತ್ತಿರ ಕೂತವರನ್ನು ಕೇಳಿ ಅವರ ಮುಂದೆ ನಿಂತೆ. ಮಾತಿನಲ್ಲಿ ಮಗ್ನರಾಗಿದ್ದ ಅವರಿಗೆ ಇದ್ದಕ್ಕಿದ್ದ ಹಾಗೆ ಕರಿಮೋಡ ಇಡೀ ಆಕಾಶ ಆವರಿಸಿದ ಅನುಭವ ಆಗಿರಬೇಕು. (ನಾನು ಆಗ ನೂರಾ ಐವತ್ತು ಕೇಜಿ ತೂಕ, ಆರಡಿ ಮೀರಿದ ಎತ್ತರ ಇದ್ದೋನು…!)

ನನ್ನ ಪ್ರವರ ಹೇಳಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ. ಆಗಲಿ ಬರ್ತೀನಿ ಅಂತ ಒಂದೇ ಪದದಲ್ಲಿ ಉತ್ತರ ನೀಡಿದರು. ಎನ್ಕ್ವೈರಿ ಇಲ್ಲ ವಾಹನದ ಬಗ್ಗೆ ಮಾತಿಲ್ಲ ಬರ್ತೀನಿ ಅಂದರಲ್ಲ…!

ಸಾರ್ ಗುರುತು ಹಾಕ್ಕೋಳ್ಳಿ ಅಂದೆ.

ಸರೀಪ್ಪಾ ಅಂದರು! ಇಂತಹ ಸುಲಭದ ಸಹಜ ನಡವಳಿಕೆ ಇವರನ್ನು ಜನಪ್ರಿಯರನ್ನಾಗಿ ಮತ್ತು ಅವರ ಆಳವಾದ ಜ್ಞಾನ ಉತ್ತಮ ವಾಗ್ಮಿಯನ್ನಾಗಿ ರೂಪಿಸಿದೆ ಎಂದು ಖುಷಿಯಾಯಿತು. ನಂತರ ಮಾರನೇ ವಾರವೋ ಅದರ ಮರು ವಾರವೋ ಆಗಲೇ ಪರಿಚಿತರಾಗಿದ್ದ ಶ್ರೀ ಎಂ ಎಸ್ ನರಸಿಂಹ ಮೂರ್ತಿ ಮತ್ತು ಶ್ರೀ ಮಿತ್ರಾ ಅವರೂ ಸೇರಿ ಹಾಸ್ಯ ಸಂಜೆ ಹೆಸರಿನ ಕಾರ್ಯಕ್ರಮ ನಡೆಸಿಕೊಟ್ಟರು. ಸಣ್ಣ ಪುಟ್ಟ ವಯಸ್ಸಿನ ಹುಡುಗರು ಬಹಳ ಉತ್ಸಾಹದಿಂದ ಈ ಕಾರ್ಯಕ್ರದಲ್ಲಿ ಭಾಗವಹಿಸಿದರು.

ಮುಂದಿನ ಹಾಸ್ಯೋತ್ಸವಗಳಿಗೆ ಇದು ಒಂದು ರೀತಿ ಫೌಂಡೇಶನ್ ಆಯಿತು. ಇದು ಮೊದಲ ಭೇಟಿ ಮಿತ್ರಾ ಅವರ ಸಂಗಡ.

ಎರಡನೇ ಭೇಟಿ ಇನ್ನೊಂದು ವಿಚಿತ್ರದ್ದು. ಒಂದು ದಿನ ಮಲ್ಲಿಗೆ ಪತ್ರಿಕೆಯ ಸಂಪಾದಕರು ಫೋನ್ ಮಾಡಿದರು. ಆಗ ಶ್ರೀ ಗಂಡಸಿ ವಿಶ್ವೇಶ್ವರ ಅವರು ಸಂಪಾದಕರು.( ಈಗ ಅವರಿಲ್ಲ. ಅರಸೀಕೆರೆಗೆ ಹೋಗಬೇಕಾದರೆ ಗಂಡಸಿ ಊರು ಸಿಗುತ್ತೆ. ಊರಿನ ಹೆಸರು ಕಂಡ ಕೂಡಲೇ ಗಂಡಸಿ ವಿಶ್ವೇಶ್ವರ ಅವರ ಡಿಸೈನ್ ಡಿಸೈನ್ ಗಡ್ಡದ ಮುಖ ಎದುರು ಬಂದು ನಿಲ್ಲುತ್ತೆ)ಈ ಮೊದಲು ಒಂದೆರೆಡು ಸಲ ಅವರ ಭೇಟಿ ಆಗಿತ್ತು. ಹೆಚ್ಚಿನ ಪರಿಚಯ ಬೆಳೆದಿರಲಿಲ್ಲ. ಇವರನ್ನು ನೋಡಿದ ಕೂಡಲೇ ನನಗೆ ಪ್ರೊ ಎಂ ಡಿ ನಂಜುಂಡಸ್ವಾಮಿ ನೆನಪಾಗಿದ್ದರು! ಕಾರಣ ಇಬ್ಬರ ಗಡ್ಡವೂ ವಿಚಿತ್ರವಾಗಿತ್ತು ಮತ್ತು ರೇಜರ್ ಆಗಲಿ ಕತ್ತಿ ಆಗಲಿ ಗಡ್ಡಕ್ಕೆ ಉಪಯೋಗಿಸಬೇಕಾದರೆ ಅತಿ ಬುದ್ಧಿವಂತಿಕೆ, ಜಾಗರೂಕತೆ ಮತ್ತು ಕೌಶಲ್ಯ ಅತಿ ಅಗತ್ಯ ಅನಿಸಿತ್ತು. ವಿಚಿತ್ರ ಡಿಸೈನ್‌ಗಳು, ಎಲ್ಲೆಲ್ಲೋ ವಕ್ರವಾಗಿ ಸುತ್ತುವ ಕೂದಲ ಜಾಡು, ಒಂದೇ ಉದ್ದಕ್ಕೆ ಒಂದೊಂದೇ ಕೂದಲು ಹಿಡಿದು ಸ್ಕೇಲ್‌ನಲ್ಲಿ ಉದ್ದ ನೋಡಿ ಕತ್ತರಿಸಿದ್ದ ಗಡ್ಡದ ಕೂದಲು..! ನೋಡುತ್ತಾ ನೋಡುತ್ತಾ ಮೈ ಮರೆತು ಹೋಗಿತ್ತು.

ಜತೆಗೆ ಹೀಗೆ ಗಡ್ಡ ಬಿಡಲು ಅದೆಷ್ಟು ಸಮಯ ಇದಕ್ಕಾಗಿಯೇ ಮೀಸಲು ಇಡಬೇಕು ಎಂದು ಲೆಕ್ಕ ಹಾಕಿದ್ದೆ. ಪೂರ್ತಿ ಮುಖದ ಮೇಲಿನ ಕೂದಲು ಶೇವಿಸಲು ಸರಾಸರಿ ಹತ್ತು ನಿಮಿಷ ಆದರೆ ಈ ರೀತಿಯ ಗಡ್ಡಕ್ಕೆ ಒಂದೂವರೆ ಗಂಟೆ ಮೀರಿ ಬೇಕಾಗುತ್ತದೆ ಎಂದು ಲೆಕ್ಕ ಪರಿಶೋಧನೆ ಆಗಿತ್ತು! ಒಂದುಸಲ ಗಡ್ಡ ಮಾಡಿಕೊಳ್ಳಲು ಇಷ್ಟು ಸಮಯ ಅಂದರೆ ತಿಂಗಳಿಗೆ ಎರಡು ಸಲ ಆದರೆ ವರ್ಷಕ್ಕೆ ಎಷ್ಟು ಸಮಯ ಬೇಕು? ಮಸಲಾ ಅವರು ಎಂಬತ್ತು ವರ್ಷ ಬದುಕಿದರೆ ಅಲ್ಲಿಯವರೆಗೆ ಈ ಗಡ್ಡಕ್ಕೆ ಎಷ್ಟು ಸಮಯ ಡಿವೋಟ್ ಮಾಡಬೇಕು? ಇಷ್ಟೊಂದು ಚಟುವಟಿಕೆಯ ಮನುಸರು ಬರೀ ಒಂದು ಗಡ್ಡಕ್ಕೆ ಇಷ್ಟೊಂದು ಸಮಯ ಮೀಸಲಿಡೋದು ಒಂದು ರೀತಿ ಸಾರ್ವಜನಿಕರ ಸಮಯದ ಅಪವ್ಯಯ ಅಲ್ಲವೇ(ಸಾರ್ವಜನಿಕರ ಸಮಯ ಅಂತ ಯಾಕೆ ಹೇಳಿದೆ ಅಂದರೆ ಸಮಾಜಕ್ಕೆ ಕೆಲಸ ಮಾಡೋರು ಸಾರ್ವಜನಿಕ ಆಸ್ತಿ!)…. ಹೀಗೆ ನನ್ನ ಯೋಚನೆ ಹರಿದಿತ್ತು!

ಇವರಿಬ್ಬರೂ ಬರೀ ಗಡ್ಡಕ್ಕೋಸ್ಕರ ಇಷ್ಟೊಂದು ಸಮಯ ಹೇಗೆ ಹೊಂದಿಸುತ್ತಾರೆ ಎಂದು ಆಶ್ಚರ್ಯ ಪಡುತ್ತಿದ್ದೆ. ಇದರ ಬಗ್ಗೆ ಯಾರಾದರೂ ವಿದ್ವಾಂಸರು ಒಂದು ಥೀಸಿಸ್ ಬರೆದು ಡಾಕ್ಟರೇಟ್ ಪಡೆಯಲಿ ಎಂದು ನನ್ನ ಅಭಿಪ್ರಾಯ! ಇದು ಹಾಗಿರಲಿ.

ಶ್ರೀ ಗಂಡಸಿ ವಿಶ್ವೇಶ್ವರ ಫೋನ್ ಮಾಡಿದ್ದರು ಅಂದೆ.”ಅಕಾಡೆಮಿ ವಾರ್ಷಿಕ ಸಂಕಲನದಲ್ಲಿ ನಿಮ್ಮ ಲೇಖನ ನೋಡಿದೆ…..” ಅಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಆಗ ವಾರ್ಷಿಕ ಸಂಕಲನಗಳನ್ನು ಕತೆ, ಪ್ರಬಂಧ, ಕವಿತೆ.. ಹೀಗೆ ವಿವಿಧ ಪ್ರಾಕಾರದಲ್ಲಿ ಪ್ರಕಟಿಸುತ್ತಿತ್ತು. ಆಯಾ ವರ್ಷದಲ್ಲಿ ಪ್ರಕಟವಾದ ಉತ್ತಮ ಲೇಖನಗಳು ಹೀಗೆ ಸಂಕಲನ ರೂಪದಲ್ಲಿ ಬರುತ್ತಿದ್ದವು. ಈಗ ಸದರಿ ಕಾರ್ಯ ಮುಂದುವರೆದಿದೆಯೋ ಇಲ್ಲವೋ ತಿಳಿಯದು. ಕಾರಣ ಈಚೆಗೆ ನನ್ನ ಯಾವ ಲೇಖನವನ್ನೂ ಕೇಳಿ ಯಾರೂ ಸಂಪರ್ಕಿಸಿಲ್ಲ! ಬಹುಶಃ ದಶವಾರ್ಷಿಕ ಸಂಕಲನದಲ್ಲಿ ಲೇಖನ ಪ್ರಕಟ ಆಗಿತ್ತು ಅಂತ ಕಾಣುತ್ತೆ..

“ಹೌದಾ ಸಾರ್? ಯಾವುದು ಲೇಖನ….” ಅಂದೆ.

“ಇರಿ ಪುಸ್ತಕ ಇಲ್ಲೇ ಇದೆ ನೋಡ್ತೀನಿ..” ಅಂದರು. ಪುಸ್ತಕದ ಹಾಳೆ ತಿರುವಿ ಹಾಕಿದ ಪರ ಪರ ಶಬ್ದ ಕೇಳಿಸಿತು.

“ಹಾಂ ಸಿಕ್ತು….”

ಲೇಖನದ ಹೆಸರು ಹೇಳಿದರು.

“ಹೋ ಹೌದಾ..” ಅಂದೆ. ವಾರ್ಷಿಕ ಸಂಕಲನದಲ್ಲಿ ಲೇಖನ ಪ್ರಕಟ ಆಗೋದು ಎಂದರೆ ಸಾಮಾನ್ಯವೇ? ಮನಸಿನಲ್ಲಿ ಖುಷಿ ಉಕ್ಕಿತ್ತು ಅಂತ ವಿವರಿಸಿ ಹೇಳಬೇಕಿಲ್ಲ!

“ನಿಮಗೆ ಗೊತ್ತಿಲವೇನ್ರಿ, ಲೇಖನ ತಗೊಂಡಿದ್ದು, ಪ್ರಿಂಟ್ ಆಗಿದ್ದು….?”

“ಇಲ್ಲ ಸಾರ್. ಎಲ್ಲೋ ಅವರು ಮರೆತಿರಬೇಕು….”

“ಅದು ಹೇಗೆ ಮರೀತಾರೆ? ಮಿತ್ರಾ ಅವರು ಸಂಪಾದಕರು. ನಿಮ್ಮ ಅನುಮತಿ ಇಲ್ಲದೇ ಲೇಖನ ಹಾಕಬಾರದು…”

“ಹೌದಾ ಸಾರ್…”

“ಏನ್ರೀ ಹೀಗೆ ಕೇಳ್ತೀರಿ? ನಿಮ್ಮ ಹಕ್ಕಿನ ಉಲ್ಲಂಘನೆ ಅದು…” ಅಂತ ಅದರ ಆಗು ಹೋಗು ತಿಳಿಸಿದರು.

“ಹೋಗಿ ಅವರನ್ನ ಕೇಳಿ…”

“ಅವರ ಮನೆ ಗೊತ್ತಿಲ್ಲ ಸಾರ್….”

ಅವರ ಮನೆ ಎಲ್ಲಿ ಬರುತ್ತೆ ಅಂತ ಹೇಗೆ ಹೋಗಬೇಕು, ಯಾವ ಸಂದಿಯಲ್ಲಿ ತಿರುಗಬೇಕು ಮೊದಲಾದ ವಿವರ ಹೇಳಿದರು!

ಮಿತ್ರಾ ಅವರ ಹತ್ತಿರ ಅನುಮತಿ ಇಲ್ಲದೇ ಲೇಖನ ತಗೊಂಡಿದ್ದು ಕಾಪಿರೈಟ್ ಉಲ್ಲಂಘನೆ ಅಂತ ಹೇಳಬೇಕು… ಅಂತ ತಾಖೀತು ಮಾಡಿದ್ದರು. ನನ್ನ ತಲೆಯೂ ಹೀಗೇ ಯೋಚಿಸಿತ್ತು. ಹೊಸದಾಗಿ ಬರೆಯಲು ಶುರು ಮಾಡಿದವರಿಗೆ ಒಂದೆರೆಡು ಕೊಂಬು ಬೆಳೆದಿರುತ್ತೆ ಮತ್ತು ತಮ್ಮ ಬರಹ ಸರ್ವಶ್ರೇಷ್ಠ ಎನ್ನುವ ಹಮ್ಮು ಒಳಗೊಳಗೇ ಹುಟ್ಟಿ ಹೆಮ್ಮರವಾಗಿ ಬೆಳೆದಿರುತ್ತೆ. ಸರ್ಕಾರದ ಒಂದು ಸಂಸ್ಥೆ ಅನುಮತಿ ಇಲ್ಲದೇ ನಿಮ್ಮ ಲೇಖನ ಪ್ರಕಟಿಸಿದೆ ಎಂದರೆ ಎಷ್ಟು ಕೋಟಿ ಕಾಂಪೆನ್ಸೇಷನ್‌ ಕೇಳಬಹುದು ಎಂದು ತಲೆಯಲ್ಲಿ ಹುಳ ಓಡಾಡಲು ಶುರು ಆಗುತ್ತೆ.

ಮಿತ್ರಾ ಅವರ ಮನೆ ಆಗ ರಾಜಾಜಿನಗರದಲ್ಲಿತ್ತು. ಅವರನ್ನ ಭಾಷಣಕ್ಕೆ ಮಲ್ಲೇಶ್ವರದ ಗಾಂಧೀ ಸಂಘಕ್ಕೆ ಆಹ್ವಾನಿಸಿದಾಗ ಅವರ ಮನೆ ವಿಳಾಸ ತೆಗೆದುಕೊಳ್ಳದೇ ಇದ್ದ ನನ್ನ ಅಜ್ಞಾನ ಮತ್ತು un professional ವ್ಯವಹಾರ ಈಗ ಗೊತ್ತಾಯಿತು!

ಎರಡು ಮೂರು ದಿನದಲ್ಲಿ ಅಲ್ಲ ಮಾರನೇ ದಿವಸವೇ ಬೆಳಿಗ್ಗೆ ಬೆಳಿಗ್ಗೆ ಇನ್ನೂ ಏಳು ಗಂಟೆಯೂ ಆಗಿಲ್ಲ ಮಿತ್ರಾ ಅವರ ಮನೆ ಬಾಗಿಲು ಬಡಿದೆ. ಮೊದಲನೇ ಮಹಡಿಲಿ ಅವರ ಮನೆ. ಬಸ್ ಸ್ಟಾಪನಿಂದ ಎರಡು ಮೂರು ನಿಮಿಷ ನಡೆದರೆ ಅವರ ಮನೆ. ಬಾಗಿಲು ತೆರೆಯಿತು. ಮಿತ್ರಾ ಅವರೇ ಬಾಗಿಲು ತೆರೆದದ್ದು ಅವರ ಕೈಲಿ ಒಂದು ಡಬರಿ!

“ಹಾಲಿನವನು ಬಂದ ಅಂತ ಅಂದ್ಕೊಂಡೆ….” ಅಂತ ಮುಖ ಸಪ್ಪಗೆ ಮಾಡಿಕೊಂಡರು. ನಾನೇ ಮುಂದುವರೆಸಿದೆ. ನನ್ನ ಪರಿಚಯ ಹೇಳಿದೆ. “ಅಕಾಡೆಮಿ ಸಂಕಲನದಲ್ಲಿ ನನ್ನ ಲೇಖನ ಪ್ರಕಟವಾಗಿದೆ. ನನಗೆ ಗೊತ್ತೇ ಇಲ್ಲ….” ಅಂತೇನೋ ನನ್ನ ಮಾತು ಶುರು ಆಗಿರಬೇಕು.

“ಅಕಾಡೆಮಿ ಆಫೀಸಿಗೆ ಹೋಗಿ, ಚೆಕ್ ಕೊಡ್ತಾರೆ…” ಬಾಗಿಲಿನ ಹಲಗೆ ಮುಚ್ಚುವ ಹಾಗೆ ಮುಂದೆ ಬಂತು..!

ಸರಿ ಸಾರ್ ಅಂತ ಮೆಟ್ಟಲು ಇಳಿದೆ!

ಇದೇ ತರಹದ ಅನುಭವ ಎರಡು ಮೂರು ಸಲ ಬೇರೆ ಬೇರೆ ಸಂದರ್ಭಗಳಲ್ಲಿ ಆಯಿತು. ಜತೆಯಲ್ಲಿದ್ದವರು ಹುರಿದುoಬಿಸಿ ನನ್ನ ಹಕ್ಕುಗಳ ರಕ್ಷಣೆಗಾಗಿ ಜಗಳಕ್ಕೆ ಪ್ರೆರೇಪಿಸಿದ್ದರು. ಜಗಳ ಸಹ ಆಡಿದ್ದೆ! ಜಗಳದ ಎಫೆಕ್ಟ್ ಬೇರೆ ರೀತಿ ಆಯಿತು. ಆಗಿದ್ದು ಬೇರೆ ರೀತಿ ಅಂದರೆ ಕಾಸು ಗೀಸು ಹೆಸರು ಬರುವಂತಹ ಸರ್ಕಾರದ ಪ್ರಾಯೋಜಿತ ಕೆಲಸಗಳಿಂದ ದೂರ ಆದೆ. ಇದು ತುಂಬಾ ತಡವಾಗಿ ಈಚೆಗೆ ಅರಿವಿಗೆ ಬಂತು!

ಚೆಲ್ಲಿರುವ ಹಾಲು ಅಲ್ಲ ಚೆಲ್ಲಿರುವ ಹೆಂಡ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎನ್ನುವ ದಾರ್ಶನಿಕ (philosophical) ನಿಲುವು ತಗೊಂಡೆ!

ಮೂರನೇ ಅನುಭವ ಸ್ವಲ್ಪ ವಿಭಿನ್ನವಾದದ್ದು. ಅದನ್ನು ಚಿಕ್ಕದಾಗಿ ಹೇಳಿ ಮುಗಿಸಿಬಿಡುವೆ.

ತುರುವೇಕೆರೆ ಪ್ರಸಾದ್ ಒಬ್ಬ ಒಳ್ಳೆಯ ಹಾಸ್ಯ ಬರಹಗಾರರಾಗಿ ಆಗ ರೂಪುಗೊಳ್ಳುತ್ತಿದ್ದರು. ಒಳ್ಳೇ ಮಿಡಲ್, ಹಾಸ್ಯ ಬರಹಗಳು ಕನ್ನಡ ಪತ್ರಿಕೆಗಳಲ್ಲಿ ವಿಪುಲವಾಗಿ ಪ್ರಕಟ ಆಗುತ್ತಿತ್ತು. ನಮ್ಮ ಪರಿಚಯವೂ ಆಗಿತ್ತು. ಇವರ ಮೊದಲ ಸಂಕಲನ ತುರುವೇಕೆರೆಯಲ್ಲಿ ಬಿಡುಗಡೆ. ಪ್ರಸಾದ್ ಕಾರ್ಯಕ್ರಮಕ್ಕೆ ನಾನು, ಕೃಷ್ಣ ಹಾಗೂ ಗೌತಮ ಮೂರೂ ಜನ ಮಿತ್ರಾ ಅವರ ಜತೆ ಹೋಗುವುದು ಎಂದು ನಿಶ್ಚಯ ಆಗಿತ್ತು. ಪ್ರಸಾದ್ ಒಂದು ಕಾರಿನ ವ್ಯವಸ್ಥೆ ಮಾಡಿದ್ದರು. ಕೃಷ್ಣ ಗೌತಮ ಕಾರಿನಲ್ಲಿ ಬೆಂಗಳೂರಿನ ಒಂದು ತುದಿಯಿಂದ ಹೊರಡುವುದು, ಮಿತ್ರಾ ಅವರ ಮನೆ ಸಮೀಪ ನಾನು ಅವರನ್ನು ಸೇರಿಕೊಳ್ಳುವುದು. ಮಿತ್ರಾ ಅವರನ್ನು ಕರೆದುಕೊಂಡು ತುರುವೇಕೆರೆ ಸೇರಿ ಅಲ್ಲಿನ ಕಾರ್ಯಕ್ರಮ ಮುಗಿಸಿ ನಮ್ಮ ನಮ್ಮ ಗೂಡು ಸೇರುವುದು ಇದು ಪ್ಲಾನಿಸಿದ್ದ ಕಾರ್ಯಕ್ರಮದ ರೂಪುರೇಷೆ!

ಸರಿ ನಾವು ಮೂರೂ ಜನ ಒಟ್ಟಾದೆವು, ಮಿತ್ರಾ ಅವರ ಮನೆ ಮುಂದೆ ಕಾರು ನಿಂತಿತು. ಮಹಡಿ ಏರಿ ಬಾಗಿಲು ಬಡೆದೆವು.

ಬಾಗಿಲು ತೆರೆಯಿತು. ಬನೀನು ದಟ್ಟಿ ಉಟ್ಟಿದ್ದ ಮಿತ್ರಾ ಎದುರು ನಿಂತರು.

ಸಾರ್ ಆಗಲೇ ರೆಡಿ ಇರ್ತಾರೆ, ಕಾಫಿ ಕೊಡ್ತಾರೆ, ಕಾಫಿ ಕುಡಿದು ಅಲ್ಲಿಂದ ಹೊರಡುವುದು ಎನ್ನುವ ನಮ್ಮ ಪೂರ್ವದ ಯೋಜನೆ ಎಲ್ಲೋ ಉಲ್ಟಾ ಹೊಡೀತಿದೆ ಅನಿಸಿತು.

“ಏನು ಎಲ್ಲರೂ ಇಷ್ಟು ಬೇಗ ಬಂದಿದ್ದೀರಿ…? ”

ತುರುವೇಕೆರೆ ಕಾರ್ಯಕ್ರಮ ನೆನಪಿಸಿದೆವು.

“ನೀವು ಹೋಗಿದ್ದು ಬನ್ನಿ, ನಾನು ಬರಕ್ಕೆ ಆಗಲ್ಲ…” ಅಂತ ಯಾರದ್ದೋ ಸಾವಿನ ಸುದ್ದಿ ಹೇಳಿದರು!

ಮೆಟ್ಟಿಲು ಇಳಿದು ಕೆಳಗೆ ಬಂದೆವು.

ನಾವು ಹೋಗೋದೂ ಕ್ಯಾನ್ಸಲ್ ಮಾಡಿದರೆ ಹೇಗೆ ಅಂತ ಒಂದು ವೇವರಿಂಗ್ ಥಾಟ್ ಮನಸಿಗೆ ಬಂತಾ? ವೇವರಿಂಗ್ ಥಾಟ್ ಅಂದರೆ ಒಂದು ಆಳವಿಲ್ಲದ ಹಗುರು ಯೋಚನೆ ತಲೆಯಲ್ಲಿ ಹುಟ್ಟುವುದು!

ಪ್ರಸಾದ್ ಕಾರ್ ಅರೇಂಜ್ ಮಾಡಿ ಕಳ್ಸಿದಾರೆ. ಯಾರೂ ಹೋಗಲಿಲ್ಲ ಅಂದರೆ ಕಾರ್ ಖಾಲಿ ಹೋಗುತ್ತೆ ಜತೆಗೆ ಕಾರ್ಯಕ್ರಮ ನಡೆಸಲು ಅದೇನೇನು ವ್ಯವಸ್ಥೆ ಮಾಡಿಕೊಂಡಿರ್ತಾರೋ ಅದನ್ನೆಲ್ಲ ಕಾನ್ಸಲ್ ಮಾಡಬೇಕಾಗುತ್ತೆ. ಲಾಸ್ಟ್ ಹವರ್‌ನಲ್ಲಿ ಇಂತಹ ತೊಂದರೆ ಕೊಡಬಹುದೇ? ಜತೆಯ ಒಬ್ಬ ಹಾಸ್ಯಬರಹಗಾರನಿಗೆ ಇಂತಹ ಮನಃಕ್ಲೇಶ ಕೊಡಬಹುದೇ ಎನ್ನುವ ಹೊಯ್ದಾಟ ಒಂದೆರೆಡು ಸೆಕೆಂಡ್ ನಮ್ಮ ಮನಸಿನಲ್ಲಿ ಆಗಿರಬೇಕು.

“ನಡೀರಿ ನಾವೇ ಮ್ಯಾನೇಜ್ ಮಾಡೋಣ..” ಅಂದ ಕೃಷ್ಣ. ಕಾರು ಏರಿದೆವು.

“ಪುಸ್ತಕದ ಬಗ್ಗೆ ನೀವು ಮಾತಾಡಿ..” ಅಂದರು ಅವರಿಬ್ಬರೂ.

“ಪುಸ್ತಕವನ್ನೇ ನೋಡಿಲ್ಲವಲ್ಲಾ…..” ಅಂತ ನನ್ನ ಸಮಸ್ಯೆ ವಿವರಿಸಿದೆ.

“ಅವರ ಲೇಖನ ಓದಿದೀರಲ್ಲಾ ಪ್ರಕಟ ಆದ ಹಾಗೆ? ಅದನ್ನ ಹೇಳಿಬಿಡಿ…”

ಅವರಿಬ್ಬರೂ ಬೇರೆ ಜನರಲ್ ವಿಷಯ ಮಾತಾಡೋದು ಅಂತ ಆಯ್ತು. ಅಲ್ಲಿ ತುಮಕೂರಿನ ಹಲವು ಲೇಖಕರ ಪರಿಚಯ ಆಯಿತು. ಈವರೆಗೆ ಬರೀ ಪತ್ರಿಕೆಗಳಲ್ಲಿ ನೋಡಿದ ಹೆಸರಿನ ಮೂಲಕ ಗೊತ್ತಿದ್ದವರು ಸ್ನೇಹಿತರಾದರು. ಮಣ್ಣೇರಾಜು ಸಿದ್ದರಾಜು ಮೊದಲಾದ ಪ್ರಸಿದ್ಧರ ಭೇಟಿ ಆಗಲೇ ಆಗಿದ್ದು.

ಒಟ್ಟಿನಲ್ಲಿ ತುರುವೇಕೆರೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯ್ತು ಅಂತ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಬರುವಾಗ ನಾವು ನಾವೇ ಬೆನ್ನು ಚಪ್ಪರಿಸಿಕೊಂಡೆವು!

ಇದು ಮಿತ್ರಾ ಅವರ ಮೊದ ಮೊದಲ ಭೇಟಿಯ ಸವಿ ನೆನಪುಗಳು! ಮಿತ್ರಾ ಅವರು ನಿಧಾನಕ್ಕೆ ನಮ್ಮ ನಾಯಕನ ಸ್ಥಾನ ಅಲಂಕರಿಸಿದ್ದು ಮುಂದಿನ ಕತೆ.

ಅಪರಂಜಿ ಹತ್ತನೇ ಹುಟ್ಟಿದಹಬ್ಬದ ಕಾರ್ಯಕ್ರಮದ ಬಗ್ಗೆ ಹೇಳಿದ್ದೆ. ಹಾಸ್ಯೋತ್ಸವದ ಬಗ್ಗೆ ಹೇಳಲು ಹೊರಟಿದ್ದೆ ತಾನೇ ಹಿಂದಿನ ಎಪಿಸೋಡುಗಳಲ್ಲಿ..? ಈಗ ಮುಂದಕ್ಕೆ..

ಹಾಸ್ಯೋತ್ಸವದ ಒಂದು vague ಕಲ್ಪನೆ ತಲೆಯಲ್ಲಿ ರುಪುಗೊಳ್ಳುತ್ತಿತ್ತು. ಅದು ಒಂದು ಘನೀಭೂತ ಸ್ಥಿತಿ ತಲುಪಿದೆ ಅನಿಸಿದಾಗ ಸಭಾಂಗಣ ಬುಕ್ ಮಾಡಲು ಭಾರತೀಯ ವಿದ್ಯಾಭವನಕ್ಕೆ ನಾನು ಮತ್ತು ಕೃಷ್ಣ ಹೋದೆವು.

ಆಗ ಶ್ರೀ ಮತ್ತೂರು ಕೃಷ್ಣಮೂರ್ತಿ ಅವರು ವಿದ್ಯಾ ಭವನದ ಅಧ್ಯಕ್ಷರು, ಶ್ರೀ ಶಿವಪ್ಪ ಅವರು ಅಲ್ಲಿನ ಇಲಾಖೆ ಒಂದರ ಮುಖ್ಯರು.

ಹೀಗೆ ಹಾಲ್ ಬುಕ್ ಮಾಡಲು ಬಂದ ವಿಷಯ ತಿಳಿಸಿದೆವು. ಶಿವಪ್ಪ ಅವರು ನಗುನಗುತ್ತಾ ಪಕ್ಕೆ ಹಿಡಿದುಕೊಂಡರು. ಮತ್ತೂರು ಅವರು ಮುಖದಲ್ಲಿ ಮುಗುಳ್ನಗೆ ಸೂಸುತ್ತಾ ಶಿವಪ್ಪನವರ ಕಡೆ ನೋಡುತ್ತಿದ್ದಾರೆ..

ಪ್ರಿಯ ಓದುಗ ಮೇಲಿನಷ್ಟು ಬೆರಳಲ್ಲಿ ಕುಟ್ಟಿ ಸೇವ್ ಮಾಡಿದ್ದೆ. ನಿನ್ನೆ ರಾತ್ರಿ (1/7/26 ಬುಧವಾರ )ಒಂದು ಆಘಾತದ ಸುದ್ದಿ ಬಂತು. ಈಚೆಗೆ ನಾನು ಅನೇಕ ಸಲ ನೆನೆಸಿಕೊಂಡಿದ್ದ ಗೆಳೆಯ ಶ್ರೀ ಕೃಷ್ಣ ಸುಬ್ಬರಾವ್ ದೇವರ ಪಾದ ಸೇರಿದ ಸುದ್ದಿ ಅದು. ಕೆಲ ದಿನಗಳ ಅಸೌಖ್ಯದ ನಂತರ ಕೃಷ್ಣ ಬಾರದ ಊರಿಗೆ ಪಯಣಿಸಿದ್ದ. ಕಣ್ಣು ಮಂಜಾಗುತ್ತಿದೆ ಮತ್ತು ಕೈ ಮುಂದೆ ಓಡುತ್ತಿಲ್ಲ. ಕೃಷ್ಣನ ಬಗ್ಗೆ ಒಂದು ಪುಟ್ಟ ಟಿಪ್ಪಣಿ..

ಶ್ರೀ ಕೃಷ್ಣ ಸುಬ್ಬರಾವ್ : ಕನ್ನಡ ಸಾರಸ್ವತ ಲೋಕದಲ್ಲಿ ಹಾಸ್ಯ ಸಾಹಿತ್ಯ ಪ್ರಸರಣಕ್ಕೆ ಅತ್ಯಪೂರ್ವ ಕೊಡುಗೆ ನೀಡಿದ ಶ್ರೀ ಕೃಷ್ಣ ಸುಬ್ಬರಾವ್ ಅವರು ಇಂದು ಸಂಜೆ(1/7/2026) ನಿಧನರಾದರು. ಹಾಸ್ಯೋತ್ಸವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದ ಇವರು ಸಭ್ಯ ಹಾಗೂ ಸದಭಿರುಚಿಯ ಹಾಸ್ಯ ಪ್ರಚಾರಕರೂ ಆಗಿದ್ದರು. ಹಾಸ್ಯಬ್ರಹ್ಮ ಟ್ರಸ್ಟ್ ನ ಸಂಸ್ಥಾಪಕ ಮುಖ್ಯ ಟ್ರಸ್ಟಿಯಾಗಿ ಅನೇಕ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳ ರೂವಾರಿ ಶ್ರೀ ಕೃಷ್ಣ ಅವರು. ಅವರ ಜತೆ ನಾಲ್ಕು ದಶಕಕ್ಕೂ ಮೀರಿದ ಸ್ನೇಹ ನನ್ನದು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ…. ಹೀಗೇನೋ ಒಂದು ನಾಲ್ಕು ಸಾಲು ಗೆಳೆಯರ ಗುಂಪಿಗೆ ರವಾನಿಸಿದೆ….!

ಕತೆ ಮತ್ತೆ ಒಂದು ಗ್ಯಾಪ್‌ನ ನಂತರ ಮುಂದುವರೆಸುತ್ತೇನೆ..

ಇನ್ನೂ ಇದೆ

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ