Advertisement
ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಹೀಗೆ ಆಯ್ತಂತೆ: ಒಮ್ಮೆ ಒಂದು ಕಚೇರಿಯವರ ಬಳಿ ದೇವರು ಪ್ರತ್ಯಕ್ಷನಾಗಿ ‘ನಿಮಗೇನು ವರ ಬೇಕು’ ಎಂದು ಕೇಳಿದನಂತೆ. ಆಗ ಬಾಸಿಗೂ ಮೊದಲೇ ಅವರ ಸಿಬ್ಬಂದಿಯೊಬ್ಬನು ‘ನಾನು ಅಮೇರಿಕಾಗೆ ಹೋಗುವ  ವರ ನೀಡು’ ಎಂದನಂತೆ. ತಕ್ಷಣ ದೇವರು ‘ತಥಾಸ್ತು’ ಎಂದನಂತೆ. ಮತ್ತೊಬ್ಬನೂ ಸಹ ‘ನಾನು ಲಂಡನ್‌ಗೆ ಹೋಗುವಂತೆ ಮಾಡು’ ಎಂದಾಗ ದೇವರು ಹಾಗೆ ಮಾಡಿದನಂತೆ. ಆಗ ಬಾಸಿನ ಸರದಿಯಲ್ಲಿ ದೇವರ ವರ ಕೇಳುವಾಗ ಅವನಿಗಿಂತ ಮುಂಚೆ ಅವರ ನೌಕರರು ವರ ಕೇಳಿದ್ದಕ್ಕೆ ಸಿಟ್ಟು ಬಂದು ಅವರಿಬ್ಬರೂ ಕಚೇರಿಗೆ ವಾಪಸ್ಸು ಬರುವ ಹಾಗೆ ಮಾಡು ಎಂದು ಕೇಳಿದನಂತೆ!!
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೈದನೆಯ ಕಂತು ನಿಮ್ಮ ಓದಿಗೆ

ಹಿಂದಿನ‌ ಸಂಚಿಕೆಯಲ್ಲಿ  ಒಂದು ಸಂಸ್ಥೆಯ ಬಾಸ್‌ಗಳು ಎನ್ನುವುದರ ಬಗ್ಗೆ ತಿಳಿಸುತ್ತೇನೆ ಎಂದಿದ್ದೆ… ಇಲ್ಲಿಯ ಅನುಭವಗಳೆಲ್ಲಾ ನನ್ನವೇ ಅಂತಲ್ಲ. ಪರರ ಅನಿಸಿಕೆಗಳ ಜೊತೆ ಚೂರು ಪಾರು ನನ್ನವು ಇದ್ದರೂ ಇರಬಹುದು… ಅಂತಹ ಅನುಭವಗಳನ್ನೆಲ್ಲಾ ಹೆಕ್ಕಿ ತಮ್ಮ‌‌ ಮುಂದೆ ಹೇಳಲಿದ್ದೇನೆ… ಬಾಸ್‌ಗಳು ಹೀಗಿದ್ದರೆ ಎಷ್ಟೊಂದು ಚೆಂದ ಅಲ್ವಾ? ಎಂದು ನಿಮಗೂ ಈ‌ ಲೇಖನ ಓದಿದ ತರುವಾಯ ಅನಿಸಬಹುದು… ಹಾಗಾದ್ರೆ ಮತ್ತೇಕೆ ತಡ…. ಲೇಖನ ಓದೋಕೆ ಶುರು ಮಾಡಿ.

ಯಾವುದೇ ಒಂದು ಕಛೇರಿಯಾಗಲಿ, ಸಂಸ್ಥೆಯಾಗಲಿ ಅದರ ಉನ್ನತಿಯು ಅವನತಿಯು ಅಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಮೇಲೆ ಅವಲಂಬನೆಯಾಗಿರುತ್ತದೆ. ಆ ಕೆಲಸವನ್ನು ಸಂಘಟಿಸಲು ಒಬ್ಬ ಬಾಸ್ ಬೇಕಾಗುತ್ತದೆ. ಇಲ್ಲಿ ಬಾಸ್ ಎಲ್ಲಾ ಅಲ್ಲ. ಹಾಗಂತಾ ಬಾಸ್ ಇಲ್ಲದೆಯೂ ನಡೆಯುವುದಿಲ್ಲ! ಒಂದು ಸಂಸ್ಥೆಯ ಯಶಸ್ಸು, ಅಪಯಶಸ್ಸನ್ನು ಅಲ್ಲಿರುವ ಬಾಸ್ ಮೇಲೆ ಹೊರಿಸುವ ಪದ್ಧತಿ ಬಹು ಹಿಂದಿನಿಂದ ಬಂದಿದೆ. ಇದನ್ನು ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತು ಪುಷ್ಠೀಕರಿಸುವುದು. ಈ ಕಾರಣ ಬಾಸ್‌ಗಳ ಕಾರ್ಯವೈಖರಿ ಬಹು ಎಚ್ಚರದಿಂದ ಇರಬೇಕಾಗುತ್ತದೆ. ಹೀಗೆ ಪರಿಚಿತ ಸಾಫ್ಟ್‌ವೇರ್ ಇಂಜಿನಿಯರ್ ಬಳಿ ಮಾತನಾಡುತ್ತಾ ಇದ್ದಾಗ ಅವರು “ಸರ್ ನಮ್ಮ ಮ್ಯಾನೇಜರ್ ಸರಿಯಿಲ್ಲ ಸರ್. ಬರೀ ಬಕೆಟ್ ಹಿಡಿಯೋರಿಗೆ ಮಾತ್ರ ಬೆಲೆ ಕೊಡ್ತಾರೆ. ಎಷ್ಟೇ ನಿಯತ್ತಿನಿಂದ ಕೆಲಸ ಮಾಡಿದ್ರೂ ನಮಗೆ ಸಲ್ಲಬೇಕಾದ ಪ್ರಮೋಷನ್‌ಗೆ ತೊಡರುಗಾಲು ಹಾಕಿ ಬರೀ ಬಕೆಟ್ ಹಿಡಿಯೋರನ್ನು ಮಾತ್ರ ಪರಿಗಣಿಸ್ತಾರೆ” ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ರು. ಇಲ್ಲಿ ಅವರು ಹೇಳಿದ ಸಾಕಷ್ಟು ಪ್ರಚಲಿತದಲ್ಲಿರುವ, ಈಗ ಬಹಳಷ್ಟು ಜನ ಬಳಸುವ ಬಕೇಟ್ ಪದದ ಅರ್ಥ ‘ಮಸ್ಕಾ ಹೊಡೆಯುವುದು’ ಹಿಂದೆ ರಾಜರಿಗೆ ಇದ್ದಂತೆ ಹೊಗಳುಭಟರು ಮಾಡಿದಂತೆ ಹೊಗಳುವುದು ಎಂಬುದಾಗಿದೆ! ಈ ಪದವನ್ನು ನಾನು ಬೇರೆ ಬೇರೆ ಕ್ಷೇತ್ರದಲ್ಲಿರುವವರ ಬಾಯಲ್ಲಿ ಕೇಳಿದ್ದೇನೆ. ಹೊಗಳಿಕೆ ಎಂಬುದು ಹುಲುಮಾನವರಿಗೆ  ಪ್ರಿಯವಾಗಿರುವುದರಿಂದ ಬಹುಷಃ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕೆಲವರು ತಮ್ಮ ವೃತ್ತಿಯಲ್ಲಿ ಪ್ರಾವೀಣ್ಯತೆಯ ಕೊರತೆಯಿಂದಲೋ(?) ಅಥವಾ ರಜಾಸೌಲಭ್ಯ ಮತ್ತಿತರ ಅವಕಾಶಗಳನ್ನುಪಡೆಯಲೋ(?), ಸುಮ್ನೆ ವಿರೋಧ ಹಾಕಿಕೊಂಡು ಯಾಕೆ ಬೇಕಪ್ಪಾ ತೊಂದರೆ ಅನುಭವಿಸೋದು ಎಂಬ ಭಯದಿಂದಲೋ ಇಷ್ಟವಿಲ್ಲದಿದ್ದರೂ ಮೇಲ್ನೋಟಕ್ಕೆ ತಮ್ಮ ಬಾಸಿಗೆ ‘ಹುಜೂರ್’ ಎನ್ನುತ್ತಾ ಕಾಲಕಳೆಯುತ್ತಿರುತ್ತಾರೆ. ಆದರೆ ಬಾಸ್‌ಗಳು ಹೀಗಿರಬಾರದು. ಬಾಸ್ ಹುದ್ದೆ ಶಾಶ್ವತವಲ್ಲ. ಆ ಹುದ್ದೆ ಹೋದಾಗಲೂ ಅವರಿಗೆ ಗೌರವ ಸಿಗಬೇಕೆಂದರೆ ಅವರು ಮಹಾನ್ ವ್ಯಕ್ತಿಗಳ ನಿದರ್ಶನಗಳನ್ನು ತಿಳಿಯುವುದು ಒಳಿತು.

ಜಗತ್ತನ್ನು ಗೆಲ್ಲಲು ಹೊರಟ ಅಲೆಗ್ಸಾಂಡರನಿಗೆ ಮರಳುಗಾಡಿನಲ್ಲಿ ತುಂಬಾ ಬಾಯಾರಿಕೆ ಆಯ್ತಂತೆ. ಆಗ ಅವನ ಸೇನೆಯಲ್ಲಿರುವ ಸೈನಿಕರು ಬಹಳ ಕಡೆ ಹುಡುಕಿ ಅವನಿಗೆ ನೀರನ್ನು ಹುಡುಕಿ ತಂದರಂತೆ. ಸಾಕಷ್ಟು ಬಾಯಾರಿದ್ದ ಅಲೆಗ್ಸಾಂಡರ್ ಇನ್ನೇನು ಬಾಯಲ್ಲಿ ನೀರನ್ನು ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವನು ಸೈನಿಕರನ್ನು ಕುರಿತು ‘ನಿಮಗೆ ಕುಡಿಯಲು ನೀರು ಸಿಕ್ಕಿದೆಯಾ?’ ಎಂದು ಕೇಳಿದನಂತೆ. ಆಗ ಅವರು ‘ಇಲ್ಲಾ ಪ್ರಭುಗಳೆ, ನೀವು ಕುಡಿಯಿರಿ’ ಎಂದಾಗ ಅವನು ಸಾಕಷ್ಟು ಬಾಯಾರಿದ್ದಾಗ್ಯೂ ನೀರನ್ನು ನೆಲಕ್ಕೆ ಚೆಲ್ಲಿ ‘ನಿಮಗೆ ಇರದ ನೀರು ನಮಗೂ ಬೇಡ’ ಎಂದನಂತೆ! ಈ ಸನ್ನಿವೇಶದಿಂದ ನಮಗೆ ತಿಳಿಯುವುದೇನೆಂದರೆ ಬಾಸ್‌ಗಳು ಯಾವತ್ತೂ ಬರಿ ಸ್ವಾರ್ಥ ಹಿತಾಸಕ್ತಿಯ ಬಗ್ಗೆ ಯೋಚಿಸಬಾರದು. ತಂಡದವರ ಹಿತಾಸಕ್ತಿಯ ಕುರಿತೂ ಯೋಚಿಸಬೇಕು. ಹೀಗೆ ಮಾಡಿದವರು ಸರ್ವರಿಗೂ ಪ್ರಿಯವಾಗುತ್ತಾರೆ.

ಇದೇ ರೀತಿಯ ಇನ್ನೊಂದು ನಿದರ್ಶನ ಹೇಳಬೇಕೆನಿಸುತ್ತಿದೆ. ಒಮ್ಮೆ ಅಬ್ದುಲ್ ಕಲಾಂ ಅವರು ಸರಿಸುಮಾರು 70 ವಿಜ್ಞಾನಿಗಳನ್ನೊಳಗೊಂಡ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವಾಗ ಒಬ್ಬ ವಿಜ್ಞಾನಿಯೊಬ್ಬರು ಕಲಾಂ ಅವರ ಬಳಿ ಬಂದು ‘ನಾನು ನನ್ನ ಮಕ್ಕಳನ್ನು 5:30 ಕ್ಕೆ ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗಬೇಕಾಗಿದೆ. ಆ ಸಮಯಕ್ಕೆ ಮನೆಗೆ ಹೋಗಲು ಅನುಮತಿ ಕೊಡಿ’ ಎಂದು ಕೇಳಿದರಂತೆ. ಆಗ ಅವರು ಅನುಮತಿಸಿದರಂತೆ. ಕಾರ್ಯನಿರತವಾದ ಆ ವ್ಯಕ್ತಿ ಈ ವಿಷಯವನ್ನು ಮರೆತೇ ಬಿಟ್ಟು ಕೆಲಸದಲ್ಲಿ ತಲ್ಲೀನನಾದನಂತೆ. ಸರಿಸುಮಾರು7:30 ರ ಹೊತ್ತಿಗೆ ಆ ವಿಜ್ಞಾನಿಗೆ ತಮ್ಮ ಮಕ್ಕಳಿಗೆ ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗುವ ಪ್ರಾಮಿಸ್ ಮಾಡಿರುವುದು ನೆನಪಾಗಿ ತಕ್ಷಣ ಮನೆಯಲ್ಲಿ ಎಲ್ಲಿ ನನ್ನ ಮಕ್ಕಳು ಹೆಂಡತಿ ಬೇಸರವಾಗಿದ್ದಾರೋ ಎಂಬ ಟೆನ್ಶನ್ ನಿಂದ ಮನೆಗೆ ಬಂದು ನೋಡಿದಾಗ ಹೆಂಡತಿ ನಗುನಗುತ್ತಲೇ ಅವರನ್ನು ಸ್ವೀಕರಿಸಿದರಂತೆ. ಅವರಿಗೆ ಅಚ್ಚರಿಯಾಗಿ ಮಕ್ಕಳ ಬಗ್ಗೆ ವಿಚಾರಿಸಿದಾಗ ಅವರನ್ನು 5:15 ಕ್ಕೆ ಕಲಾಂ ಅವರೇ ಬಂದು ಮಕ್ಕಳನ್ನು ವಸ್ತು ಪ್ರದರ್ಶನಕ್ಕೆ ಕರೆದೊಯ್ದದ್ದನ್ನು ಕೇಳಿ ಅವರಿಗೆ ತುಂಬಾ ಅಚ್ಚರಿಯಾಯ್ತಂತೆ. ಕೆಲಸದಲ್ಲಿ ನಿರತನಾದ ವಿಜ್ಞಾನಿಯನ್ನುನೋಡಿ ಅವರ ಕೆಲಸಕ್ಕೆ ತೊಂದರೆಯಾಗಬಾರದೆಂದು ಕಲಾಮರೇ  ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ. ಈ ಘಟನೆಯಿಂದ ತಿಳಿಯುವುದೇನೆಂದರೆ ಬಾಸ್‌ಗಳು ತಮ್ಮ ಅಧೀನ ವ್ಯಕ್ತಿಗಳ ಕಷ್ಟಕ್ಕೂ ನೆರವಾಗಬೇಕು ಎಂದು.

ಒಂದು ಸಂಸ್ಥೆಯಲ್ಲಿ ವಿವಿಧ ಹಿನ್ನೆಲೆ, ಜಾತಿ, ಪ್ರದೇಶದಿಂದ ಬಂದವರಿರಬಹುದು. ಆಗ ಬಾಸ್ ಆದವರು ಎಲ್ಲರನ್ನೂ ಸಮಭಾವದಿಂದ ನೋಡಬೇಕು. ತಾವು ಯಾರದ್ದೋ, ಯಾವುದೋ ವಿಚಾರದಲ್ಲಿ ಪೂರ್ವಾಗ್ರಹಪೀಡಿತರಾಗಿ ವರ್ತಿಸಬಾರದು. ಕೆಲವರನ್ನಷ್ಟೇ ಆಪ್ತರನ್ನಾಗಿರಿಸಿಕೊಂಡು ಮತ್ತೊಬ್ಬರನ್ನು ದೂರವಿರಿಸುವ ಮನೋಭಾವ ತೋರಬಾರದು. ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಬಾರದು. ಕೆಲಸಗಾರರಲ್ಲಿ ಎಲ್ಲರ ಎದುರಿಗೆ ಒಬ್ಬರನ್ನೇ ಹೊಗಳುವುದು, ಮತ್ತೊಬ್ಬರನ್ನು ತೆಗಳುವುದು ಮಾಡಬಾರದು. ಯಾವುದೇ ತೀರ್ಮಾನ ಕೈಗೊಳ್ಳುವಾಗ ಏಕಾಂಗಿಯಾಗಿ ತೀರ್ಮಾನ ಕೈಗೊಳ್ಳದೇ ‘ಒಬ್ಬರಿಗಿಂತ ಇಬ್ಬರು ಉತ್ತಮ’ ಎಂಬಂತೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಎಲ್ಲ ಅನಿಸಿಕೆ ಪಡೆದು  ಯಾರದ್ದು ಸರಿ ಎನಿಸುತ್ತದೆಯೋ ಅದನ್ನು ಬಾಸ್  ಆದವರು ಜಾರಿಗೆ ತರಬೇಕು.

‘ಒಬ್ಬರು ಇನ್ನೊಬ್ಬರಂತಿಲ್ಲ’ ಎಂಬಂತೆ ಒಬ್ಬರು ಒಂದು ವಿಚಾರದಲ್ಲಿ ಸ್ಟ್ರಾಂಗ್ ಇರಬಹುದು. ಮತ್ತೊಂದು ವಿಚಾರದಲ್ಲಿ ವೀಕ್ ಇರಬಹುದು. ಆಗ ಬಾಸ್ ಆದವರು ಯಾರದ್ದೋ ಒಬ್ಬರ ವೀಕ್ನೆಸ್ಸನ್ನೇ ಹೇಳುತ್ತಾ ಮತ್ತೆ ಮತ್ತೆ ಅವರು ವೀಕ್ ಆಗುವಂತೆ ಮಾಡಬಾರದು. ಕೆಲವರು ಬಾಸ್ ಆದ ತಕ್ಷಣ ‘ಬಾಸಿಸಂ’ ಪ್ರದರ್ಶಿಸಲು ಹೋಗಬಹುದು. ಕೆಲವರು ಎಲ್ಲರೊಡಗೂಡಿ ಕೆಲಸ ಮಾಡಲು ಹೋಗಬಹುದು. ಒಂದು ಕಡೆ ಕೆಲಸ ನಿರ್ವಹಿಸುವಾಗ ‘ಅಹಂ’ ‘ಇಗೋ’ ಯಾರಲ್ಲೂ ಬರಬಾರದು. ‘ನಾನು’ ಬದಲಾಗಿ ‘ನಾವು’ ಆಗಬೇಕು.ಒಂದೆಡೆ ಕೆಲಸ ಮಾಡುವಾಗ ಒಂದು ಕುಟುಂಬದಂತೆ ಕೆಲಸ ಮಾಡಬೇಕು. ಇಲ್ಲದಿದ್ದರೆ ‘ಎತ್ತು ಏರಿಗೆ ಎಳೀತು ಕೋಣ ನೀರಿಗೆ ಎಳೀತು’ ಎಂಬಂತಾಗುತ್ತದೆ. ತನ್ನ ಕೆಲಸಗಾರರಿಂದ ಏನನ್ನು ಮಾಡಿಸಬೇಕು ಎಂದು ಬಯಸುತ್ತೇವೆಯೋ ಅದನ್ನು ಬಾಸ್ ಆದವರು ಮೊದಲು ಫಾಲೋ ಮಾಡಬೇಕು. ಜಗತ್ತಿನಲ್ಲಿ ಬಹುತೇಕರು ನಾವು ಹೇಳಿದ್ದಕ್ಕಿಂತ  ಮಾಡಿದ್ದನ್ನು ಅನುಸರಿಸುವವರೇ ಜಾಸ್ತಿ. ನುಡಿದಂತೆ ನಡೆ ಎಂಬ ನೀತಿಯನ್ನು ಅನುಸರಿಸಬೇಕೇ ಹೊರತು ‘ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ’ ಎಂಬಂತಾಗಬಾರದು.

ಇನ್ನು ಬರೀ ಬಾಸ್‌ಗಳಷ್ಟೇ ಅಲ್ಲ ಕೆಲವೊಮ್ಮೆ ಅವರ ಕೈಕೆಳಗೆ ಕಾರ್ಯನಿರ್ವಹಿಸುವವರು ತಮ್ಮ ಸೇಫ್ಟಿಗೆ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಕೆಲವೊಂದು ಸಲ ‘ಕತ್ತೆಯ ಹಿಂದೆ ಹೋಗಬಾರದು, ಬಾಸಿನ ಮುಂದೆ ಹೋಗಬಾರದು’ ಎಂಬ ನೀತಿಯನ್ನು ಪಾಲಿಸಬೇಕು. ಒಮ್ಮೆ ಹೀಗೆ ಆಯ್ತಂತೆ: ಒಮ್ಮೆ ಒಂದು ಕಚೇರಿಯವರ ಬಳಿ ದೇವರು ಪ್ರತ್ಯಕ್ಷನಾಗಿ ‘ನಿಮಗೇನು ವರ ಬೇಕು’ ಎಂದು ಕೇಳಿದನಂತೆ. ಆಗ ಬಾಸಿಗೂ ಮೊದಲೇ ಅವರ ಸಿಬ್ಬಂದಿಯೊಬ್ಬನು ‘ನಾನು ಅಮೇರಿಕಾಗೆ ಹೋಗುವ  ವರ ನೀಡು’ ಎಂದನಂತೆ. ತಕ್ಷಣ ದೇವರು ‘ತಥಾಸ್ತು’ ಎಂದನಂತೆ. ಮತ್ತೊಬ್ಬನೂ ಸಹ ‘ನಾನು ಲಂಡನ್‌ಗೆ ಹೋಗುವಂತೆ ಮಾಡು’ ಎಂದಾಗ ದೇವರು ಹಾಗೆ ಮಾಡಿದನಂತೆ. ಆಗ ಬಾಸಿನ ಸರದಿಯಲ್ಲಿ ದೇವರ ವರ ಕೇಳುವಾಗ ಅವನಿಗಿಂತ ಮುಂಚೆ ಅವರ ನೌಕರರು ವರ ಕೇಳಿದ್ದಕ್ಕೆ ಸಿಟ್ಟು ಬಂದು ಅವರಿಬ್ಬರೂ ಕಚೇರಿಗೆ ವಾಪಸ್ಸು ಬರುವ ಹಾಗೆ ಮಾಡು ಎಂದು ಕೇಳಿದನಂತೆ!!

ಈಗ ಬಾಸ್ ಆದವರು ಹಿಂದೊಮ್ಮೆ ತಾವು ಕೆಲಸಗಾರರಾಗಿಯೇ ಈ ಹುದ್ದೆಗೆ ಬಂದಿರಬಹುದು. ಆ ಸಮಯದಲ್ಲಿ ಅವರ ಅನುಭವ ಹೆಚ್ಚಿರುತ್ತದೆ. ಅವರ ಅನುಭವದಡಿಯಲ್ಲಿ ಕೆಲವೊಂದು ತೀರ್ಮಾನ ಕೈಗೊಳ್ಳಬಹುದು. ಆಗ ಅವರು  ನಮ್ಮನಿಸಿಕೆ, ಅಭಿಪ್ರಾಯಗಳನ್ನು ಒಪ್ಪುವವರಾದರೆ ಸಲಹೆ, ಸೂಚನೆ ಕೊಡಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು. ಹಾಗಲ್ಲ, ಹೀಗೆ ಎಂದು ಅವರ ಬಳಿ ವಾದ ಮಾಡಲು ಹೋಗಬಾರದು. ಆಗ ಸುಖಾಸುಮ್ಮನೇ ವಾದ ಮಾಡಿದವರು ಬಾಸಿನ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ನಿಮ್ಮ ಬಗ್ಗೆ ಪಿತೂರಿ ಮಾಡಬೇಕೆಂದು ಬಯಸುವವರು ಬಾಸ್‌ನ ಕಿವಿಯೂದಿ ನಿಮಗೂ ಬಾಸಿಗೂ ತಂದಿಟ್ಟು ಆ ಪರಿಸ್ಥಿತಿಯ ಲಾಭ ಮಾಡಿಕೊಳ್ಳಬಹುದು. ಈ ಸಮಯದಲ್ಲಿ ಬಾಸ್ ಆದವರು ಹಿತ್ತಾಳೆ ಕಿವಿ ಹೊಂದಿರಬಾರದು. ಬಾಸ್ ಆದವರು ‘ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂಬ ಮನೋಭಾವ ಹೊಂದಿರಬೇಕು. ಹಾಗೆಯೇ ಬಾಸ್ ಆದವರು ಸ್ಟೇಟ್ಸ್ ಮ್ಯಾನ್ ರೀತಿ ವರ್ತಿಸಬೇಕು. ಯಾರದ್ದೋ ಪರ‌ ವಹಿಸುವ ನಡೆ ತೋರಬಾರದು. ಈ ಜಗತ್ತಿನಲ್ಲಿ ಯಾವುದೂ ಫ್ರೀ ಆಗಿ ಸಿಗುವುದಿಲ್ಲ. ಹಾಗೆಯೇ ಬಾಸ್ ಕೇಳುವವರೆಗೂ ನಿಮ್ಮ ಕ್ರಿಯಾಶೀಲ ಐಡಿಯಾಗಳನ್ನು ಕೊಡಬಾರದು.

ನೇರವಾದಿಯಾಗಿರುವವರಿಗೆ ವಿರೋಧಿಗಳು ಜಾಸ್ತಿ. ಪ್ರಿಯವಾದ ಮಾತುಗಳನ್ನಾಡುವವರಿಗೆ ಮಿತ್ರರು ಜಾಸ್ತಿ. ಕಚೇರಿಯಲ್ಲಿ ಬಾಸ್ ಜೊತೆಗೆ ಕಠೋರವಾಗಿ ನೇರವಾದ ಮಾತುಗಳನ್ನಾಡದಿರಿ. ಏಕೆಂದರೆ ಎಷ್ಟೇ ಪರ್ಫೆಕ್ಟ್ ವರ್ಕರ್ ಅಂದ್ರೂ ಕೆಲವೊಂದು ತಪ್ಪುಗಳು ಕೆಲಸದಲ್ಲಿ ನುಸುಳಿರಬಹುದು. ಆಗ ಬಾಸ್‌ಗಳಾದವರು ಇಂತಹ ಸನ್ನಿವೇಶವನ್ನೇ ಕಾಯುತ್ತಿರುತ್ತಾರೆ. ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಇಂಥಾ ನೆವಗಳನ್ನಿಟ್ಟುಕೊಂಡು ನಿಮ್ಮನ್ನು ಕೆಲಸದಿಂದ  ತೆಗೆಯುವ ಬಗ್ಗೆ ಕಂಪೆನಿಯ ಮಾಲೀಕನಿಗೆ ಬರೆಯಬಹುದು. ಆದ್ದರಿಂದ ಬಾಸ್ ಜೊತೆ ಮಾತು ಹಿತಮಿತವಾಗಿರಲಿ. ಆ ಮಾತೂ ಸಹ ಕೆಲಸಕ್ಕಷ್ಟೇ ಸೀಮಿತವಾಗಿರಲಿ. ಗುಂಪಿನಲ್ಲಿ ತಮಗಿಂತಲೂ ತಮ್ಮ ಅಡಿಯಲ್ಲಿ ಕೆಲಸ ಮಾಡುವವರು ಮಿಂಚುವುದು ಕೆಲ ಬಾಸ್ ಗಳಿಗೆ ಇಷ್ಟವಿಲ್ಲದೇ ಹೋಗಬಹುದು. ಆಗ ಆ ಸನ್ನಿವೇಶದಿಂದ ದೂರ ಇರುವುದು ಬುದ್ಧಿವಂತ ಕೆಲಸಗಾರರ ಲಕ್ಷಣ.

ಜಾಗತೀಕರಣದ ಇಂದಿನ ಯುಗದಲ್ಲಿ ಬುದ್ಧಿವಂತಿಕೆಯಿದ್ದರೆ ಹೇಗಾದರೂ ಬದುಕಬಹುದು. ಹಾಗಂತಾ ಇರೋ ಕೆಲಸವನ್ನು ಬಿಟ್ಟು ಹೋಗಿ ಅಂತಾ  ಹೇಳೋಲ್ಲ. ಸ್ವಾಭಿಮಾನಕ್ಕೆ ತೀರಾ ಧಕ್ಕೆಯಾಗುವುದಾದರೆ ಅಲ್ಲಿದ್ದಾಗಲೇ ಬೇರೆ ಕೆಲಸಕ್ಕೆ ಪ್ರಯತ್ನಿಸಿ ಹೋಗಬಹುದು. ಬೇರೆಡೆಯೂ ಇರುವ ಬಾಸ್‌ಗಳೂ ಹೀಗೆ ಇದ್ದರೆ?? ಆಗಲೂ ಕಷ್ಟವಾಗಬಹುದು. ‘ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂಬಂತೆ ಎಲ್ಲೇ ಹೋದರೋ ಕಾಲೆಳೆಯುವವರು ಇರುತ್ತಾರೆ. ಹೀಗೆ ಕಾಲೆಳೆಯುವವರು ಇರುವುದು ನಿಮ್ಮ ಕಾಲ ಬುಡದಲ್ಲಿ ಎಂಬುದನ್ನು ಅರಿತು ಮುನ್ನಡೆಯಬೇಕು. ಇಂದೂ ಸಹ ಅನೇಕ ಕಡೆ ಬಾಸ್ ನಿವೃತ್ತಿ ಆಗಿದ್ದಕ್ಕೋ, ವರ್ಗಾವಣೆ ಆಗಿದ್ದಕ್ಕೋ, ನಿಧನರಾಗಿದ್ದಕ್ಕೋ ಅಲ್ಲಿನ ನೌಕರ ವರ್ಗದವರು ನೋವುಂಡ ಅನೇಕ ಸನ್ನಿವೇಶಗಳನ್ನು ನಾವು ಕಂಡಿದ್ದೇವೆ. ತಾನು ಸಾಯುವಾಗ ತನ್ನ ಖಾಲಿ ಕೈಗಳನ್ನು ಹಾಗೆಯೇ ಸಮಾಧಿಯ ಮೇಲೆ ಬಿಟ್ಟು ಹೂತು ಬಿಡಿ ಎಂದು ಹೇಳಿದ ಅಲೆಗ್ಸಾಂಡರ್  ಮಾತು ನಾವು ಎಂಥದ್ದೇ ಹುದ್ದೆಯಲ್ಲೇ ಇರಲಿ ಎಷ್ಟೇ ಗಳಿಸಿರಲಿ, ಸತ್ತಾಗ ಖಾಲಿ ಕೈಯಲ್ಲೇ ಹೋಗುತ್ತೇವೆ ಎಂಬ ಕಹಿ ಸತ್ಯವನ್ನು ಅರುಹುತ್ತದೆ. ಆದ್ದರಿಂದ ಒಂದು ಸಂಸ್ಥೆಯು ಬೆಳೆಯುವುದು ಅಲ್ಲಿನ ಆಧಾರಸ್ಥಂಭವಾದ ನೌಕರರ ಜೊತೆಗೆ ಅಷ್ಟೇ ಅಲ್ಲದೇ ದಿಕ್ಸೂಚಿಯಂತೆ ಬಾಸೂ ಸಹ ಮುಖ್ಯ. ಇಬ್ಬರೂ ಸೇರಿ ಮುನ್ನೆಡೆಸುವುದು ಮುಖ್ಯ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ