Advertisement
ವಾರಾನ್ನದ ಅರೆ ಆತ್ಮಚರಿತ್ರೆ: ಕೆ. ಸತ್ಯನಾರಾಯಣ ಕಥಾ ಸರಣಿ

ವಾರಾನ್ನದ ಅರೆ ಆತ್ಮಚರಿತ್ರೆ: ಕೆ. ಸತ್ಯನಾರಾಯಣ ಕಥಾ ಸರಣಿ

ಅರ್ಧ ಮನೆಗಳಲ್ಲಿ ವರ್ಷಕ್ಕೆ ಒಂದು ದಿನವೂ ಉಪ್ಪಿನಕಾಯಿ ಹಾಕ್ತಾ ಇರಲಿಲ್ಲ. ಆಯ್ತು ತಿಂಡಿ-ತೀರ್ಥ ಸಿಗುತ್ತಲ್ಲ ಅಂತ ಅಂದುಕೊಂಡರೆ, ವಿಪರೀತ ಪಾತ್ರೆ, ಪಡಗ, ನೆಂಟರಿಷ್ಟರ ಊಟದ ಎಲೆಗಳು. ಇಂತಹ ದಿನಗಳಲ್ಲಿ ರಾತ್ರಿ ಕೂಡ ಊಟ ಮಾಡಿಕೊಂಡು ಹೋಗು ಎಂದರೂ ಭಯವೇ! ಊಟ ಸಿಗುತ್ತೆ ಅಂತ ಉಳಿದುಕೊಂಡರೆ, ಮತ್ತೆ ಪಾತ್ರೆ, ಪಗಡಿ, ಎಂಜಲು, ಗೋಮ. ಮಕ್ಕಳೇ ಧೈರ್ಯ ಮಾಡಿ ಊಟ ಏನೂ ಬೇಡ, ಮಧ್ಯಾಹ್ನ ತಿಂದದ್ದೇ ಇನ್ನೂ ಅರಗಿಲ್ಲ ಅಂತ ಅರ್ಧ ಸುಳ್ಳು ಹೇಳೋರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ನಮ್ಮ ತಂದೆ ಮತ್ತ ದೊಡ್ಡಪ್ಪನವರು ಇಬ್ಬರೂ ವಾರಾನ್ನದಲ್ಲೇ ಓದಿದವರು. ಆದರೆ ಸಾಮಾನ್ಯವಾಗಿ ಅವರಿಬ್ಬರೂ ಅದರ ಕತೆಗಳನ್ನು ಹೇಳುತ್ತಿರಲಿಲ್ಲ. ಯಾವಾಗಲಾದರೂ ಪ್ರಸ್ತಾಪ ಬಂದಾಗ ರೋಚಕವಾಗಿ, ಅಸಹಾಯಕರಾಗಿ ಮಾತಾಡುತ್ತಿರಲಿಲ್ಲ. ಒಂದೇ ಒಂದು ಸಲ ನಮ್ಮ ತಂದೆ ನನ್ನನ್ನು ಮೈಸೂರು ಅನಾಥಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆವತ್ತಿನ ದಿವಸ ಅವರು ಸೂಟು, ಬೂಟು, ಹ್ಯಾಟ್‌ ಹಾಕಿಕೊಂಡಿದ್ದರು. ಪ್ಯಾಂಟ್‌ ಮತ್ತು ಬೂಟು ಎರಡೂ ಖಾಕಿ ಬಣ್ಣದ್ದು. ಇದೇ ನಾನು ಓದಿದ ಜಾಗ ಅಂತ ಒಂದು ಕೋಣೆ ಮತ್ತು ಊಟದ ಹಾಲ್‌ ತೋರಿಸಿದರು. ಮುಂದಿನ ವರ್ಷದಲ್ಲೇ ನಮ್ಮ ಬಂಧುಗಳಲ್ಲಿ ತೀರಾ ಅನುಕೂಲಸ್ಥರಾಗಿದ್ದವರೊಬ್ಬರು ಮಗನನ್ನು ಮೈಸೂರಿನಲ್ಲಿ ಓದಿಗೆ ಸೇರಿಸಿ, ಅನಾಥಾಲಯದಲ್ಲಿ ಒಂದು ರೂಮು ಗಿಟ್ಟಿಸಿಕೊಂಡರು. ಸಿಂಗಲ್‌ ರೂಮು. ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಟೇಬಲ್‌ ಫ್ಯಾನ್‌ ಕೊಡಿಸಿದ್ದರು. ಕ್ವಿಟ್‌ ಇಂಡಿಯಾ ಚಳುವಳಿ, ಜವಾಬ್ದಾರಿ ಸರ್ಕಾರದ ಚಳುವಳಿಯಲ್ಲಿ ಭಾಗವಹಿಸಿದ್ದ ಅವರಿಗೆ ಪಿಂಚಣಿ ಬರುತ್ತಿತ್ತು. ಮನೆಯ ಹಾಲ್‌ನಲ್ಲಿ ಮುಖ್ಯಮಂತ್ರಿಗಳು ಬಾಂಕ್ವೆಟ್‌ ಹಾಲ್‌ನಲ್ಲಿ ಅವರಿಗೆ ತಾಮ್ರಪತ್ರ ನೀಡುತ್ತಿದ್ದ ಫೋಟೋಗೆ ದೊಡ್ಡ ಫ್ರೇಮ್‌ ಹಾಕಿಸಿ ನೇತು ಹಾಕಿದ್ದರು.

ವಾರಾನ್ನ ಪದ್ಧತಿಯಿಂದ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದರೂ ಅದಕ್ಕೊಂದು ಜಾತಿಯ ಆಯಾಮ ಇದೆ. ಬ್ರಾಹ್ಮಣ ಹುಡುಗರಿಗೆ ಮಾತ್ರ ಈ ಪದ್ಧತಿಯಿಂದ ಲಾಭವಾಯ್ತು ಅಂತ ಒಂದು ಟೀಕೆ ಇತ್ತು. ಮೊದಲು ಈ ಟೀಕೆ ತಪ್ಪೆನಿಸುತ್ತಿತ್ತು. ನಂತರ ಇಲ್ಲ ಈ ಟೀಕೆ ಸರಿಯಿದೆ, ಆದರೆ ಉತ್ಪ್ರೇಕ್ಷೆ ಮತ್ತು ಅಸೂಯೆಯಿಂದ ಕೂಡಿದೆ ಅನಿಸಿತು.

ನಾವು ಸೋದರ-ಸೋದರಿಯರೆಲ್ಲ ಓದಿ ಉದ್ಯೋಗ ಪಡೆದು, ಲಗ್ನ ಮಾಡಿಕೊಂಡು ದಡ ದಾಟಿದ ನಂತರದ ದಿನಗಳಲ್ಲಿ ನಮ್ಮ ತಂದೆ ಮಧ್ಯಾಹ್ನದ ಹೊತ್ತು ನಿದ್ದೆ ಬಾರದಿದ್ದಾಗ ಹಿಂದಿನ ದಿನಗಳ ಬಗ್ಗೆ ಮಾತನಾಡುವಾಗ ವಾರಾನ್ನದ ದಿನಗಳ ಬಗ್ಗೆ ಕೂಡ ಆಗಾಗ್ಗೆ ಹೇಳಲು ಪ್ರಾರಂಭಿಸಿದರು. ಯಾವುದನ್ನೂ ಸ್ಪಷ್ಟವಾಗಿ ಹೇಳುತ್ತಿರಲಿಲ್ಲ. ಹೇಳುತ್ತಿದ್ದವರು ಅರ್ಧಕ್ಕೇ ನಿಲ್ಲಿಸಿಬಿಡುತ್ತಿದ್ದರು. ಕೆಲವು ಪ್ರಸಂಗಗಳನ್ನು ಹೇಳುವಾಗ ನಗುವರು. ಇನ್ನು ಕೆಲವು ಪ್ರಸಂಗಗಳನ್ನು ಹೇಳುವಾಗ ಕಣ್ಣೆದುರಿಗೇ ಎಲ್ಲ ನಡೆಯುತ್ತಿದೆ ಅನ್ನುವ ರೀತಿಯಲ್ಲಿ ಉಗ್ರರಾಗುತ್ತಿದ್ದರು. ಹೆಸರುಗಳ ಗೊಂದಲವಾಗುತ್ತಿತ್ತೋ ಇಲ್ಲ ಬೇಕು ಬೇಕಂತಲೇ ಬದಲಾಯಿಸುತ್ತಿದ್ದರೋ ನನಗೆ ಗೊತ್ತಾಗುತ್ತಿರಲಿಲ್ಲ. ಇದೆಲ್ಲ ಯಾರಿಗೂ ಹೇಳೋಕೆ ಹೋಗಬೇಡ. ನಮ್ಮದು ಇಂತಹ ಹಿನ್ನೆಲೆ ಅಂತ ಯಾಕೆ ಈಗ ಎಲ್ಲರಿಗೂ ಗೊತ್ತಾಗಬೇಕು. ನಿನ್ನ ಮಕ್ಕಳಿಗಂತೂ ಅಪ್ಪಿ ತಪ್ಪಿ ಕೂಡ ಹೇಳಬೇಡ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು. ಒಂದು ದಿನ ವರದಿ, ಇನ್ನೊಂದು ದಿನ ಸಾರಾಂಶ, ಮತ್ತೊಂದು ದಿನ ವ್ಯಕ್ತಿ ಚಿತ್ರ, ಮುಂದಿನ ದಿನ ಕತೆ-ಪ್ರಸಂಗ, ಹೀಗೆ ಬೇಕು ಬೇಕಾದ ರೀತಿಯಲ್ಲಿ ಹೇಳುತ್ತಿದ್ದರು. ಎದುರಿಗೇ ಕುಳಿತಿರುತ್ತಿದ್ದ ನಮ್ಮ ತಾಯಿ, ಸಾಕು ಬಿಡಿ, ಈಗೇಕೆ ಅದೆಲ್ಲ ಎಂದು ಉದಾಸೀನ ಪ್ರಕಟಿಸುತ್ತಿದ್ದರು.

ದೊಡ್ಡಪ್ಪನವರ version ನನಗೆ ಸಿಗಲೇ ಇಲ್ಲ. ನನಗೆ ಇಪ್ಪತ್ತು ವರ್ಷವಾಗಿದ್ದಾಗ, ಅಂದರೆ ೫೧ ವರ್ಷಗಳ ಹಿಂದೆಯೇ ಅವರು ತೀರಿ ಹೋದರು. ಗೆಜೆಟಡ್‌ ಅಧಿಕಾರಿಯಾಗಿದ್ದರೂ, ಹೆಂಡತಿ ಮಕ್ಕಳೆಲ್ಲ ತಾನು ಬಾಲ್ಯದಲ್ಲಿ ಕಂಡಿದ್ದ-ಅನುಭವಿಸಿದ್ದ ಬಡತನದ ಮಟ್ಟದಲ್ಲೇ ಬದುಕಬೇಕೆಂಬ ನಿಯಮ ರೂಪಿಸಿದ್ದರು. ರೇಡಿಯೋ ಕೊಂಡಿದ್ದರು, ಆದರೆ ಹಾಕುತ್ತಿರಲಿಲ್ಲ. ವಾರಕ್ಕೆ ಮೂರೇ ದಿನ ತರಕಾರಿ. ಇಷ್ಟಾದರೂ ಅವರು ಸತ್ತ ಶೈಲಿ ಅನಾಥವಾದದ್ದು. ಹೆಣವನ್ನು ಬೆಂಗಳೂರಿನಿಂದ ಕುಣಿಗಲ್‌ಗೆ ಸಾಗಿಸುತ್ತಿದ್ದಾಗ ಕಾರ್‌ ಪಂಕ್ಚರ್‌ ಆಯಿತು. ಮುಸ್ಸಂಜೆ ಕುಣಿಗಲ್‌ ತಲುಪಿದಾಗ ಜಡಿ ಮಳೆ. ಹೆಣವನ್ನು ಸ್ಮಶಾನಕ್ಕೆ ಸಾಗಿಸುವುದಕ್ಕೆ, ಸುಡುವುದಕ್ಕೆ ತುಂಬಾ ಕಷ್ಟವಾಗಿ, ಜನ ಸರಿಯಾಗಿ ಹೊಂದಿಕೆಯಾಗದೆ, ಬೆಳಗಿನ ಜಾವದ ತನಕ ಸ್ಮಶಾನದಲ್ಲೇ ಇರಬೇಕಾಯಿತು. ಅಷ್ಟಾದರೂ, ಬೆಳಿಗ್ಗೆ ಒಂಭತ್ತು ಗಂಟೆಗೆ ಸ್ಮಶಾನದಿಂದ ತಿಮ್ಮಯ್ಯ ಬಂದು ಹೆಣ ಸರಿಯಾಗಿ ಬೆಂದಿಲ್ಲ, ಬನ್ನಿ ಇನ್ನೊಂದು ಸಲ ಸರಿಯಾದ ಸೌದೆ ಹಾಕಿ ಸುಡಬೇಕು ಅಂತ ಮೈಕೈ ನೋವು ಬಂದು ಮಲಗಿದ್ದ ನಮ್ಮ ತಂದೆಯನ್ನು ಎಬ್ಬಿಸಿಕೊಂಡು ಹೋದರೆ, ಹೆಣದ ಸುತ್ತ ತಿಗಣೆ, ನಾಯಿ, ಎಲ್ಲ ಜಮಾಯಿಸಿತ್ತಂತೆ. ಇಂತಹ ದೊಡ್ಡಪ್ಪ ಅನಾಥಾಲಯದ ದಿನಗಳ ಬಗ್ಗೆ ಹೇಳಿದ್ದರೆ, ಏನೇನು ಹೇಳುತ್ತಿದ್ದರೋ ಗೊತ್ತಿಲ್ಲ. ಅವರ ಮಕ್ಕಳ ಹತ್ತಿರ ಹೇಳಿಕೊಂಡಿದ್ದರೂ ನನಗೆ ಏನೂ ತಿಳಿಯಲಿಲ್ಲ. ಏಕೆಂದರೆ, ದೊಡ್ಡಪ್ಪನ ತಿಥಿ ಆದ ಮೇಲೆ, ನಾವು ಸಂಬಂಧ ಕಡಿದುಕೊಂಡೆವು. ಇದನ್ನೆಲ್ಲ ಈಗ ಹೇಗೆ ಬರೆಯಬೇಕು, ಯಾವ ಪ್ರಕಾರದಲ್ಲಿ ಬರೆದರೆ ಸರಿ ಹೋಗುತ್ತದೆ ಎಂದು ಮತ್ತೆ ಮತ್ತೆ ಬರೆದೆ; ತೃಪ್ತಿಯಾಗದೆ ಹರಿದು ಹಾಕಿ ಮತ್ತೆ ಬರೆದೆ. ಇಲ್ಲ, ಇದು ಯಾವ ಪ್ರಕಾರಕ್ಕೂ ಒಗ್ಗಲ್ಲ. ಒಂದೊಂದು ಭಾಗ ಒಂದೊಂದು ರೀತಿ ಇದೆ ಎಂಬುದು ಖಚಿತವಾಗಿ, ನಮ್ಮ ತಂದೆ ಹೇಳುತ್ತಿದ್ದ ರೀತಿಯಲ್ಲೇ ಬರೆಯಲು ಪ್ರಯತ್ನಿಸಿರುವೆನು. ವಾರಾನ್ನ ಪದ್ಧತಿಯ ಬಗ್ಗೆ ಯಾರಾದರೂ ಸಂಶೋಧನೆ ಮಾಡಿದರೆ, ನಮ್ಮ ತಂದೆ ಹೇಳಿದ್ದನ್ನು ಕೂಡ ಪರಿಗಣಿಸಿ ಪೂರ್ಣ ಚಿತ್ರ ಕೊಡಬೇಕೆಂದು ಕೋರುವೆನು.

*****

ಯಾರೊಬ್ಬರ ಮನೆಯಲ್ಲೂ ವಾರಾನ್ನದ ಮಕ್ಕಳಿಗೆ “ಸುಖಾಗಮನ” ಕೋರುವ ಬೋರ್ಡ್‌ ಕಾಣುತ್ತಿರಲಿಲ್ಲ. ಬೋರ್ಡ್‌ ಇಲ್ಲದಿದ್ದರೂ ಹೃತ್ಪೂರ್ವಕವಾಗಿರಬಹುದಿತ್ತು. ಬಹುಪಾಲು ಮಕ್ಕಳನ್ನು “ಬಾಲಕಾರ್ಮಿಕರಂತೆ” ನೋಡಿಕೊಳ್ಳುತ್ತಿದ್ದರು. ಆಯಿತು ಏನೇ ಆದರೂ ಅವರು ಪ್ರಭುಗಳು, ಬಾಲಕರು ಪ್ರಜೆಗಳು. ಅಂದರೆ ಯಾವುದಾದರೂ ಊರಿಗೋ, ಪ್ರವಾಸಕ್ಕೋ ಹೋಗಬೇಕಾಗಿ ಬಂದರೆ, ಬಾಲಕರ್ಮಿಕರಿಗೆ ಹೇಳುತ್ತಲೇ ಇರಲಿಲ್ಲ. ಊಟಕ್ಕೆ ಅಂತ ಮಕ್ಕಳು ಮನೆಗೆ ಬಂದರೆ ಬಾಗಿಲಿಗೆ ಹಾಕಿರುವ ಬೀಗ ಇವರನ್ನು ನೋಡಿ ನಗುತ್ತಿತ್ತು. ಮಕ್ಕಳು ಸಪ್ಪೆ ಮುಖ ಹಾಕಿಕೊಂಡು ಹಿಂದಕ್ಕೆ ಹೋಗುವಾಗ, ಬಡವರೆಂದರೆ ಇಷ್ಟು ಸಿಟ್ಟು, ಸ್ವಾಭಿಮಾನ ಇರಬಾರದಪ್ಪ ಅಂತ ದಪ್ಪ ಬೀಗ ಕಟಕಟ ಶಬ್ದ ಮಾಡಿ ಲೊಚಗುಟ್ಟುತ್ತಿತ್ತು. ಇದ್ದಕ್ಕಿದ್ದಂತೆ ಹೀಗೆ ಊಟ ನಿಂತುಹೋದಾಗ, ಮಕ್ಕಳನ್ನು ಕೊಳಾಯಿ ನಲ್ಲಿ ಗಾಡಿಗಳ ಹತ್ತಿರ ಗುಂಪು ಗುಂಪಾಗಿ ಕಾಣಬಹುದಿತ್ತು. ಬೊಗಸೆಯಲ್ಲಿ ನೀರು ಹಿಡಿದುಕೊಂಡು ಗಟಗಟ ಅಂತ ಬಾಯಿ ತುಂಬಾ ಹೊಟ್ಟೆ ತುಂಬ ಕುಡಿದಾಗ ಹೊರ ಬರುವ ತೇಗಿನ ಶಬ್ದ ಅರಮನೆಯವರಿಗೂ ತಲುಪುತ್ತಿತ್ತು. ದ್ವಾರಪಾಲಕರು ತೇಗಿನ ಶಬ್ದವನ್ನು ಅರಮನೆಯ ಆವರಣದೊಳಕ್ಕೆ ಬಿಡುತ್ತಲೇ ಇರಲಿಲ್ಲ. ತೇಗಿನ ಶಬ್ದ ವಾತಾವರಣದಲ್ಲಿ ಸೇರಿಕೊಂಡು ಮೈಸೂರು ನಗರವನ್ನೆಲ್ಲ ಪ್ರದಕ್ಷಿಣೆ ಹಾಕೋದು.

ವಾರಾನ್ನ ನೀಡುತ್ತಿದ್ದ ಮನೆಗಳಲ್ಲೇ ಗಂಡ-ಹೆಂಡತಿ ಇಬ್ಬರಲ್ಲೂ ಒಮ್ಮತ ಇರಲಿಲ್ಲ. ಇವರಲ್ಲಿ ಒಬ್ಬರಿಗಾದರೂ ಉದಾಸೀನ, ಸ್ವಪ್ರತಿಷ್ಠೆ, ಹೀಯಾಳಿಸಿ ಬಾಯಿ ಚಪ್ಪರಿಸಿ ಕುಹಕವಾಗಿ ನಗುವ ವರಸೆ ಇದ್ದೇ ಇರೋದು. ಬಾಲಕಾರ್ಮಿಕರಿಗೆ ಊಟಕ್ಕೆ ಬೆಲೆಯಾಗಿ ನೀಡುತ್ತಿದ್ದ ಕೆಲಸಗಳು ಕೂಡ ಅಮೋಘ ರೀತಿಯದಾಗಿರುತ್ತಿದ್ದವು.

ಊಟ ಇರುವ ಮನೆಗೆ ಒಂದೆರಡು ಗಂಟೆ ಮುಂಚೆ ಹೋಗಬೇಕು. ಹೋದ ತಕ್ಷಣವೇ ಕಣ್ಣುಗಳನ್ನೆಲ್ಲ ಚುರುಕು ಮಾಡಿಕೊಂಡು ಒಂದೇ ದೃಷ್ಟಿಯಲ್ಲಿ ಮನೇಲಿ ಏನೇನು ಕೆಲಸ ಉಳಿದಿದೆ, ಎಲ್ಲೆಲ್ಲಿ ಸಾಮಾನು ಸರಂಜಾಮೆಲ್ಲ ಹರಡಿಕೊಂಡಿದೆ ಎಂದು ಒಂದೇ ನೋಟದಿಂದಲೇ ಗ್ರಹಿಸಿ, ಅದೆಲ್ಲವನ್ನೂ ಅಚ್ಚುಕಟ್ಟು ಮಾಡಬೇಕು. ಮಕ್ಕಳು ಆಟ ಆಡಿ ಬಿಸಾಕಿ ಹೋಗಿರುವ ಆಟದ ಸಾಮಾನುಗಳನ್ನು ಎತ್ತಿಡಬೇಕು. ಒಣಗಿ ಹಾಕಿರುವ ಬಟ್ಟೆಗಳನ್ನು ತಂತಿಯಿಂದ ತೆಗೆದು ಮಡಿಸಿ ಜೋಡಿಸಿಡಬೇಕು. ಒಣಗಿದ ಸೌದೆ ಒಟ್ಟು ಮಾಡಬೇಕು. ಸೌದೆ ಒಟ್ಟು ಮಾಡುವಾಗ ಸುತ್ತ ಹರಡಿರುವ ಚೆಕ್ಕೆಯ ಚೂರುಗಳನ್ನು ತೆಗೆದುಕೊಂಡು ಹೋಗಿ ಬಚ್ಚಲು ಮನೆಯಲ್ಲಿರುವ ಗೋಡೆಗೆ ಹಾಕಬೇಕು. ಆತುರಾತುರವಾಗಿ ಇವನ್ನೆಲ್ಲ ಮಾಡುವಾಗ ಅಂಗೈಗೋ, ಬೆರಳ ತುದಿಗೋ ಸಿಬರು ಸಿಕ್ಕಿ ಹಾಕಿಕೊಂಡರೆ, ಯಾರಿಗೂ ಹೇಳುವುದಕ್ಕೆ ಹೋಗಬಾರದು. ಬಾ ನೀನು ಬರುವುದನ್ನೇ ಕಾಯುತ್ತಿದ್ದೆ, ಅಂಗಡಿಗೆ ಹೋಗಿ ಹುರಿಗಡ್ಲೆಯನ್ನೋ, ಕಾಯಿ ಚೂರನ್ನೋ ತಗೊಂಡು ಬಾ ಅಂದರೆ ಚಡ್ಡಿ ಲಾಡಿಯನ್ನು ಸರಿ ಮಾಡಿಕೊಳ್ಳುತ್ತಲೇ ಓಡೋಡಿ ಅಂಗಡಿಯಿಂದ ತರಬೇಕು. ಮನೆಯಲ್ಲಿ ಹಿರಿಯರು ಯಾರಾದರೂ ಹಾಸಿಗೆ ಹಿಡಿದು ಮಲಗಿದ್ದರೆ, ಅವರ ಶುಶ್ರೂಷೆಯು ಕೂಡ ಬಾಲಕಾರ್ಮಿಕರ ಜವಾಬ್ದಾರಿಯೇ!

ಕೆಲ ಸಂದರ್ಭಗಳಲ್ಲಿ ಒಂದೊಂದು ದಿನ ಬಿಸಿ ಊಟ ಹಾಕುತ್ತಿರಲಿಲ್ಲ. ತಂಗಳನ್ನವನ್ನೇ ಬಡಿಸಿ ಅಟ್ಟುತ್ತಿದ್ದರು. ಹಾಗೆ ಬಡಿಸಿ ಅಟ್ಟುವಾಗಲೂ ಅದೇನು ನಯ, ನಾಜೂಕು. ಈವತ್ತು ಅಡುಗೆ ತಡವಾಗುತ್ತೆ. ಯಾಕೋ ಸೌದೆ ಸರಿಯಾಗಿ ಉರೀತಾನೇ ಇಲ್ಲ. ನಿನ್ನ ಸ್ಕೂಲಿಗೆ ಹೊತ್ತಾಗಬಾರದಲ್ಲವೇ ಮಗು. ತಂಗಳನ್ನ ಇದೆ. ಹಳಸಿಲ್ಲ. ಇದೊಂದು ಸಲ ಊಟ ಮಾಡಿಕೊಂಡು ಹೋಗು.

ಹೀಗೆ ಹೇಳುವಾಗಲೇ ಅಡುಗೆ ಮನೆಯಿಂದ ಅನ್ನದ ಬಿಸಿ ಬಿಸಿಯ ವಾಸನೆ ಮಗುವಿನ ಮೂಗಿನ ಹೊರಳಗೆ ತಲುಪೋದು. ಮಕ್ಕಳಿಗೆ ಸೂಕ್ಷ್ಮ ಸುಳಿವು ಜಾಸ್ತಿ. ಜಾಣತನ ಕೂಡ. ನಗನಗತಾ ತಂಗಳನ್ನವನ್ನೇ ಊಟ ಮಾಡುವರು. ವಕೀಲ ಶಾಮರಾಯರ ಹೆಂಡತಿ ಜಲಜಮ್ಮ ನಯ ನಾಜೂಕಿನಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ. ತಂಗಳನ್ನು ಊಟಕ್ಕೆ ಹಾಕುವಾಗ, ಬಾ ಮಗು ಈವತ್ತು ನಿನಗೆ ಕೈ ತುತ್ತು ಹಾಕಬೇಕೆನಿಸುತ್ತದೆ ಅಂತ ಮಮಕಾರದಿಂದ ಕರೆಯುವರು ಎಂದು ಹೇಳುವಾಗ ನಮ್ಮ ತಂದೆಯ ಕಥನ ಶೈಲಿಯಲ್ಲಿ ವ್ಯಂಗ್ಯ ತೀಕ್ಷ್ಣವಾಗಿರುತ್ತಿತ್ತು. ಒಂದೆರಡು ಸಲ ಹಲ್ಲು ಕೂಡ ಕಡಿದರು.

ತಿಥಿ, ಹಬ್ಬ, ಹರಿದಿನಗಳಲ್ಲಿ ಊಟಕ್ಕೆ ಕರೆಯುತ್ತಿದ್ದರು ಎಂದು ನಿಜ ಹೇಳಬೇಕು. ಆದರೆ ಹೊತ್ತು ಗೊತ್ತು ಎಂಬುದೇ ಇರಲಿಲ್ಲ. ಕ್ಲಾಸ್‌ಗೆ ಸಂಚಕಾರ ಬರೋದು. ಒಂದೇ ಒಂದು ಬೆನೆಫಿಟ್‌ ಅಂದರೆ, ಇಂತಹ ಸಂದರ್ಭದಲ್ಲೇ ನಮಗೆ ಸ್ವಲ್ಪ ತಿಂಡಿ items ಸಿಗೋದು. ಇಲ್ಲದೇ ಹೋದರೆ, ದಿನಾ ಅದೇ ಅನ್ನ-ಸಾರು, ಮಜ್ಜಿಗೆ. ಅರ್ಧ ಮನೆಗಳಲ್ಲಿ ವರ್ಷಕ್ಕೆ ಒಂದು ದಿನವೂ ಉಪ್ಪಿನಕಾಯಿ ಹಾಕ್ತಾ ಇರಲಿಲ್ಲ. ಆಯ್ತು ತಿಂಡಿ-ತೀರ್ಥ ಸಿಗುತ್ತಲ್ಲ ಅಂತ ಅಂದುಕೊಂಡರೆ, ವಿಪರೀತ ಪಾತ್ರೆ, ಪಡಗ, ನೆಂಟರಿಷ್ಟರ ಊಟದ ಎಲೆಗಳು. ಇಂತಹ ದಿನಗಳಲ್ಲಿ ರಾತ್ರಿ ಕೂಡ ಊಟ ಮಾಡಿಕೊಂಡು ಹೋಗು ಎಂದರೂ ಭಯವೇ! ಊಟ ಸಿಗುತ್ತೆ ಅಂತ ಉಳಿದುಕೊಂಡರೆ, ಮತ್ತೆ ಪಾತ್ರೆ, ಪಗಡಿ, ಎಂಜಲು, ಗೋಮ. ಮಕ್ಕಳೇ ಧೈರ್ಯ ಮಾಡಿ ಊಟ ಏನೂ ಬೇಡ, ಮಧ್ಯಾಹ್ನ ತಿಂದದ್ದೇ ಇನ್ನೂ ಅರಗಿಲ್ಲ ಅಂತ ಅರ್ಧ ಸುಳ್ಳು ಹೇಳೋರು.

ತಂದೆ-ತಾಯಿಗಳು ಇರಲಿ, ಇಂತಹವರ ಮನೆ ಮಕ್ಕಳು ಕೂಡ ನಮ್ಮ ಮೇಲೆ ದರ್ಬಾರು ಮಾಡೋರು. ನಮ್ಮ ಕ್ಲಾಸಿನಲ್ಲೇ ಇಂತಹವರ ಮಕ್ಕಳು ಕೂಡ ಓದುತ್ತಿದ್ದರು. ನಮ್ಮ ಜೊತೆ ಬೆರೆಯುತ್ತಿರಲಿಲ್ಲ. ಬೇರೆ ಮಕ್ಕಳಿಗೂ ಕೂಡ, ನೋಡ್ರೋ ಇವನು ನಮ್ಮ ಮನಗೆ ವಾರಾನ್ನಕ್ಕೆ ಬರ‍್ತಾನೆ, ಯಾರೂ ಇವನನ್ನ friend ಮಾಡ್ಕೋಬೇಡಿ. ನಮ್ಮ ಗ್ರೇಡಿನವರೆಲ್ಲ ಇಂಹವರು ಎಂದು ಹೇಳಿ ಒಂಟಿ ಮಾಡಿ. ಆಮೇಲೆ ಗುಂಪಾಗಿ ಸೇರಿಕೊಂಡು ಒಂಟಿಬಡುಕು ಸುಂಟರಗಾಳಿ ಅಂತ ಪದ್ಯ ಕಟ್ಟಿ ಹೇಳುವರು. ಮಧ್ಯಾಹ್ನ ಅವರೆಲ್ಲ ಸ್ಕೂಲ್‌ ಕಾಂಪೋಂಡಿನಲ್ಲಿ ಕುಳಿತು ಊಟ ಮಾಡುವಾಗ ನಾವು ಅಲ್ಲೇ ಸುತ್ತ ಠಳಾಯಿಸ್ತಾ ಇರ‍್ತಿದ್ವಿ. ಅವರು ಊಟ ಮಾಡ್ತಾ ಇದ್ದರೆ, ನಮಗೆ ಬಾಯಾರಿಕೆ ಆಗೋದು, ಬಿಕ್ಕಳಿಕೆ ಬರೋದು. ಏನು ಮಾಡೋದು? ಸ್ಕೂಲ್‌ ಜಗುಲಿ ಮೇಲೆ ಇಟ್ಟಿದ್ದ ಹೂಜಿಯಿಂದ ನೀರು ಬಗ್ಗಿಸಿಕೊಂಡು ಕುಡೀತಿದ್ವಿ. ಒಂದೊಂದು ಸರಲ ಎರಡು-ಮೂರು ಗ್ಲಾಸ್‌ ನೀರು ಕುಡೀತಿದ್ವಿ.

ನಾನೊಬ್ಬನೇ ಅಲ್ಲ ಹಾಗೆ ನೀರು ಕುಡಿಯುತ್ತಿದ್ದುದು ಅಂತ ಹೇಳುವ ಸಾಲುಗಳು ಬಂದಾಗ, ನಮ್ಮ ತಂದೆ ತಲೆ ತಗ್ಗಿಸುತ್ತಿದ್ದರು. ತಲೆ ತಗ್ಗಿಸಿಕೊಂಡೇ ನಮ್ಮನ್ನೆಲ್ಲ ಪರೀಕ್ಷೆ ಮಾಡುವಂತೆ ನೋಡುತ್ತಿದ್ದರು.

ಎಲ್ಲ ಹುಡುಗರಿಗೂ ಇಂತಹವರ ಮನೆ ಹೆಣ್ಣುಮಕ್ಕಳನ್ನು ಕಂಡರೆ ಆಸೆಯಾಗೋದು. ಶಿವರಾಂ ಅನ್ನೋ ಕಾಂಪೋಂಡರ್‌ ಮನೇಲಿ, ಪಾರ್ವತಿ ಅಂತ ಒಬ್ಬ ಹುಡುಗಿ ಇದ್ದಳು. ಕುಳ್ಳಗಿದ್ದರೂ ಚೆನ್ನಾಗಿದ್ದಳು. ತಲೆ ತುಂಬಾ ಗುಂಗುರು ಕೂದಲು. ಸದಾನಂದ ಅವರ ಮನೇಲಿ ಊಟ ಮಾಡಿಕೊಂಡು ಬಂದ ದಿನ ಸ್ವರ್ಗದಲ್ಲೇ ಇರುತ್ತಿದ್ದ. ಒಂದಲ್ಲ ಒಂದು ದಿನ ನಾನು ಗ್ರಾಜುಯೇಟ್‌ ಆಗ್ತೀನಿ. ನೇರವಾಗಿ ಫಸ್ಟ್‌ ಡಿವಿಷನ್‌ ಕ್ಲರ್ಕ್‌ ಆಗೇ ಆಗ್ತೀನಿ. ಪಾರ್ವತೀನ ಮದುವೆ ಆಗೇ ಆಗ್ತೀನಿ ಅಂತ ಹಗಲುಗನಸು ಕೊಚ್ಕೋತಾ ಇದ್ದ. ಅದೇನಾಯಿತೋ ಮುಂದಿನ ಕ್ಲಾಸಿಗೆ ಬಂದಾಗ ಸದಾನಂದನಿಗೆ ಶಿವರಾಂರವರ ಮನೇಲಿ ವಾರಾನ್ನಕ್ಕೆ ದಿನಾನೇ ಕೊಡಲಿಲ್ಲ. ಹಾಳು ಪಾರ್ವತಿ ಕೈಲಾಸಕ್ಕೆ ಒಬ್ಬಳೇ ಹೋಗಿರಬೇಕು ಬಿಡಿ ಎಂದು ನಮ್ಮ ತಂದೆ ಗಹಗಹಿಸಿ ನಕ್ಕರು.

ಗಹಗಹಿಸಿ ನಗುವುದನ್ನು ಮುಂದುವರೆಸುತ್ತಾ, ಪಾರ್ವತಿ ಕೈಲಾಸಕ್ಕೆ ಒಬ್ಬಳೇ ಹೋದಳೋ ಇಲ್ಲವೋ ಗೊತ್ತಿಲ್ಲ. ರಾಧಾಕೃಷ್ಣನಿಗಂತೂ ಸ್ಕೂಲ್‌ ಟಿಸಿ ಸಿಕ್ಕೇ ಬಿಡ್ತು. ಅವನು ವಾರಾನಕ್ಕೆ ಹೋಗುತ್ತಿದ್ದ ಮನೆಯ ಹುಡುಗಿಯ ಹೆಸರು ರಾಧಾ ಅಂತ. ಅಷ್ಟಕ್ಕೇ ಇವನು ಅವಳ ಮೇಲೆ ಪ್ರೀತಿ ಇದೆ, ಚೆನ್ನಾಗಿ ಓದಿ ಬರೆದು ಮಾಡಿ ಅವಳನ್ನೇ ಮದುವೆ ಆಗ್ತೀನಿ ಅಂತ ರಾಧಾಮಾಧವ ವಿನೋದ ಹಾಸ ಅಂತೆಲ್ಲಾ ಯಾವಾಗಲೂ ಹಾಡು ಹೇಳಿಕೊಂಡು ಓಡಾಡ್ತಾ ಇದ್ದ. ಹುಡುಗಿ ಜೊತೆ ಸದರವಾಗಿ ಕೂಡ ಮಾತನಾಡೋಕೆ ನೋಡಿದ. ಪ್ರೀತಿ ಸರಿ. ಪ್ರೀತಿ ಮಾಡುವಾಗ, ಅಂತಸ್ತು, family ಎಲ್ಲ ನೋಡ್ಕೊಂಡು ಅಲ್ಲವಾ ಮಾಡೋದು. ರಾಧಾ ತಂದೆ ದೊಡ್ಡ ವಕೀಲರು. ಸ್ಕೂಲಿಗೇ ಬಂದುಬಿಟ್ಟರು. ಹೆಡ್‌ ಮೇಷ್ಟರ ರೂಮಲ್ಲೇ ಕುಳಿತುಕೊಂಡು, ಜಗಳ ಕಾದು ರಾಧಾಕೃಷ್ಣನಿಗೆ ಟಿಸಿ ಬರೆಸಿ conduct unsatisfactory ಅಂತ ಬರೆಸಿದರು. ಸ್ಕೂಲಿನಿಂದ ತೆಗೆಸಿದರು. ಕೊನೆಗೆ ಏನಾಯಿತು ರಾಧಾಕೃಷ್ಣನ ಕತೆ? ಹೀಗೆಲ್ಲ ಆಗಿದೆ ಅಂತ ಹಳ್ಳಿಗೆ ವಾಪಸ್‌ ಹೋದರೆ, ಸುಮ್ಮನೆ ಬಿಡುತ್ತಾರಾ? ಹೆಡ್‌ ಮೇಷ್ಟರ ಮನೇಲೇ ಉಳಿದುಕೊಂಡು ಅವರ ಮನೆ ಕೆಲಸದಾಳಾಗಿ ಮುಂದಿನ ವರ್ಷ ತಿರುಗಿ ಹಿಂದಿನ ವರ್ಷದ ಕ್ಲಾಸಿಗೇ ಸೇರಿಕೊಂಡ.

ಎಲ್ಲ ಹುಡುಗರಿಗೂ ಹೀಗೇ ಆಯ್ತು ಅಂತಲ್ಲ. ಅನಂತಕೃಷ್ಣ ಅಂತಾ ಒಬ್ಬ ಶಿವಮೊಗ್ಗದ ಕಡೆ ಹುಡುಗ. ಅವರ ಕಡೆಯವರದೇ ಪುರಭವನದ ಎದುರುಗಡೆ ಒಂದು ದೊಡ್ಡ ಮನೇಲಿ ಊದುಕಡ್ಡಿ ಮಾಡೋ ಫ್ಯಾಕ್ಟರಿ. ಅನಂತಕೃಷ್ಣ ತುಂಬಾ ಬುದ್ಧಿವಂತ ಅಂತ ಮನೆಯವರು ಮಕ್ಕಳಿಗೆಲ್ಲ ಇವನ ಕೈಲೇ ಪಾಠ ಹೇಳಿಸಬಹುದು ಅಂತ ಮನೇಲೇ ಇಟ್ಟುಕೊಂಡು ಓದಿಸಿದರು. ಮಧ್ಯದ ಹುಡುಗಿ ಲೋಲಾಕ್ಷಿ ಅಂತ. ಅವಳಿಗೇ ಇವನನ್ನು ತಂದುಕೊಂಡು ಮದುವೆ ಮಾಡಿದರು. ಅಳಿಯ ಬುದ್ಧಿವಂತ ಅನ್ನುವ ಕಾರಣಕ್ಕೇ ಆನರ್ಸ್‌ ಫಸ್ಟ್‌ ಬ್ಯಾಚ್‌ಗೆ ಸೇರಿಸಿದರು. ನಂತರ ಅವನು ರೆವಿನ್ಯೂ ಪ್ರೊಬೇಷನರ್‌ ಆಗಿ ಕೂಡ ಆಯ್ಕೆಯಾದ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗೆ ಹಾಕುವಾಗ ವಾರಂಟ್‌ ಬರೆದು ರುಜು ಮಾಡುತ್ತಿದ್ದೋನು ಈ ಅನಂತಕೃಷ್ಣನೇ!

ನಮ್ಮ ತಂದೆ, ಮಕ್ಕಳ ಬದುಕೆಲ್ಲ ತಂಪಾಯ್ತು ಅನ್ನುವ ದಿನಗಳಲ್ಲಿ ಆಗಾಗ್ಗೆ ಚೂರುಪಾರಾಗಿ ಹೇಳುತ್ತಿದ್ದದ್ದೆಲ್ಲ ನನಗೆ ಮೊದಮೊದಲು ಒಂದಕ್ಕೊಂದು ಸಂಬಂಧವಿಲ್ಲದ ಹಳಹಳಿಕೆಯ ಮಾತುಗಳಾಗಿ ಕಂಡಿತ್ತು. ಆದರೆ ಈಗ ಅದರ ಬಗ್ಗೆ ಒಂದು ರೀತಿಯ ಅಕರ್ಷಣೆ ಬೆಳೀತಾ ಇದೆ. ಒಂದು ಕೆಲಸ ಏನು ಮಾಡ್ತೀನಿ ಅಂದರೆ, ಇದೆಲ್ಲ ನಮ್ಮ ಮನೆತನದ ಕತೆ ಅಂತ ಹೇಳುವ ಬದಲು ಇನ್ನಾರದೋ ಮನೆ ಕತೆ ಅಂತ ಮೊಮ್ಮಕ್ಕಳಿಗೆ ಹೇಳ್ತೀನಿ. They will simply love these stories.

ಓದೋಕೆ ತುಂಬಾ ಚೆನ್ನಾಗಿರುತ್ತೆ ಬರಿ ಅಂತ ಅವರೇ ಹೇಳಿಕೊಟ್ಟದ್ದು, ಒತ್ತಾಯ ಮಾಡಿದ್ದು.

(ಹಿಂದಿನ ಕತೆ: ವಿಶ್ವಸಂಸ್ಥೆ ಮತ್ತು ದಾಂಪತ್ಯದ ಪ್ರಶ್ನೆ)

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ