Advertisement
ಸ್ವ ಅರಿವಿನ ಸದ್ಭಾವವೇ ಗುರು ಕಾರುಣ್ಯದ  ಮೂಲ ಮಂತ್ರ.:  ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ

ಸ್ವ ಅರಿವಿನ ಸದ್ಭಾವವೇ ಗುರು ಕಾರುಣ್ಯದ  ಮೂಲ ಮಂತ್ರ.:  ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ

ನಮ್ಮನ್ನು ನಾವು ಅರಿತುಕೊಂಡಾಗ ಗುರುವನ್ನು ಅರಿತುಕೊಳ್ಳುವ ಪ್ರಜ್ಞೆ ಬಲಗೊಳ್ಳುತ್ತದೆ. ಗುರುವನ್ನು ಹೊರಗಡೆ ಹುಡುಕದೆ, ಒಳಗಡೆಯೇ ಹುಡುಕಬೇಕು. ಅಂದರೆ ಭೌತಿಕ ವಸ್ತುಗಳಲ್ಲಿ ಗುರುವನ್ನು ಕಾಣದೆ, ಅಂತರಾತ್ಮನಲ್ಲಿ ಬೆಳಕನ್ನು ಕಾಣಬೇಕು. ಗುರುವಿನ ಕೆಲಸ ಬೋಧಿಸುವುದು ಮಾತ್ರವಲ್ಲ, ನಮ್ಮಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಗುರುವಿನೊಂದಿಗೆ ಅನುಸಂಧಾನದ ದಾರಿ ನಿರ್ಮಿಸಿಕೊಳ್ಳಬೇಕೆಂಬ ಆಲೋಚನೆಯೇ ದೊಡ್ಡದು. ವಚನಕಾರ ಮೆರೆಮಿಂಡಯ್ಯನು ಕೂಡ.
ಗುರುಪೂರ್ಣಿಮೆಯ ನಿಮಿತ್ತ ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ ನಿಮ್ಮ ಓದಿಗೆ

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವ ಜಂತುಗಳು ಸೃಷ್ಟಿಕರ್ತನ ಮಡಿಲಲ್ಲಿ ನಲಿದಾಡುತ್ತವೆ. ಪ್ರಕೃತಿಯೇ ಜೀವಸಂಕುಲಕ್ಕೆ ಗುರುವಾಗಿದೆ. ಹಾಗೆಯೇ ಮಾನವನ ಜೀವಿತವೂ ಕೂಡ. ಯಶಸ್ಸಿನ ಪಯಣಕ್ಕೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. ವ್ಯಕ್ತಿ ತನ್ನ ಜೀವಿತ ಅವಧಿಯಲ್ಲಿ ಪ್ರಕೃತಿಯನ್ನು, ದೈವವನ್ನು, ವಿಷಯ ವಸ್ತುವನ್ನು, ತನಗಿಷ್ಟವಾದುದನ್ನು ಗುರುವೆಂದು ಸ್ವೀಕರಿಸುವ ಮನೋಭಾವವಿದೆ. ಗುರುವಿನ ಸಾಕ್ಷಾತ್ಕಾರವಾಗಲು ಭೌತಿಕವಾಗಿ, ಮಾನಸಿಕವಾಗಿ ಮನಸ್ಸು ಪರಿಶುದ್ಧವಾಗಿರಬೇಕು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ’ ಎಂಬ ದಾಸರವಾಣಿ ಜನಜನಿತ. ಇಲ್ಲಿ ಗುಲಾಮನಾಗುವುದೆಂದರೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಲ್ಲ, ಗುರುದರ್ಶನದಲ್ಲಿ ಹೊಸ ದಾರಿಗಳನ್ನು ಕಂಡುಕೊಳ್ಳುವುದು. ಕೆಲವರಿಗೆ  ಸಮಸ್ಯೆಗಳೇ ಗುರುವಾಗಿವೆ. ಮತ್ತೊಬ್ಬರಿಗೆ ಪ್ರಕೃತಿಯೇ ಗುರುವಾಗಿದೆ. ಇತರರಿಗೆ ವಿಚಾರಗಳು ಗುರುವಾಗಿವೆ. ಗುರುವಿನ ತತ್ವ ಏಕಮುಖವಾಗಿಲ್ಲ, ಅದು ಬಹುಮುಖವನ್ನು ಒಳಗೊಂಡಿರುವ ಆಯಾಮ. ಏಕಲವ್ಯನ ಗುರು ಪ್ರೇಮ, ಶ್ರದ್ಧೆ ಆತನನ್ನು ಮಹತ್ವದ ಬಿಲ್ಲುಗಾರನನ್ನಾಗಿ ರೂಪಿಸಿತ್ತು. ಜ್ಯೋತಿಷ್ಯ  ಶಾಸ್ತ್ರದಲ್ಲಿ ಗುರುವಿನ ಪ್ರಭಾವ ಬಹಳ ಮುಂಚೂಣಿಯಲ್ಲಿದೆ; ‘ಹರಮುನಿದರೆ  ಗುರು ಕಾಯುವನು’ ಎಂಬ ತತ್ವ ಚಾಲ್ತಿಯಲ್ಲಿದೆ. ದೈವಾನುಗ್ರಹಕ್ಕಿಂತ ಗುರುವಿನ ಅನುಗ್ರಹವೇ ಸಂಪನ್ನವಾಗಿರುವುದು.

ವಿಶ್ವದ ಸಾಮ್ರಾಜ್ಯಗಳ ಇತಿಹಾಸವನ್ನು ಅವಲೋಕಿಸಿದಾಗ, ಪ್ರತಿಯೊಬ್ಬ ರಾಜನಿಗೆ ಗುರುವಿನ ಅವಶ್ಯಕತೆ ಇರುತ್ತಿತ್ತು. ಆಚಾರ್ಯರ ವಿಚಾರಧಾರೆಯನ್ನು ಮನಗಂಡು ರಾಜರು ತಮ್ಮ ಆಡಳಿತವನ್ನು ನಿರ್ವಹಿಸುತ್ತಿದ್ದರು. ಗುರುವಿಗೆ ಸಕಲ ಗೌರವಗಳು ಪ್ರಾಪ್ತಿಯಾಗುತ್ತಿದ್ದವು. ಗುರುವಿನ ಮಾತು ಕೇಳದೆ ರಾಜ ಮುನ್ನಡೆದರೆ ಅನಾಹುತಗಳನ್ನು ಎದುರಿಸಬೇಕಾಗಿತ್ತು. ಹಾಗಾಗಿ ಗುರುಪ್ರಜ್ಞೆ ಇತಿಹಾಸದಲ್ಲಿ ಅಜರಾಮರ. ಮಹಾತ್ಮ ಗಾಂಧೀಜಿಯವರು ಗೋಪಾಲಕೃಷ್ಣ ಗೋಖಲೆಯವರನ್ನು ತಮ್ಮ ರಾಜಕೀಯ ಗುರು ಎಂದು ಹೇಳಿಕೊಂಡಿದ್ದರು.

ಇಂದಿನ ರಾಜಕಾರಣ ಪದ್ಧತಿಯಲ್ಲಿ ಗುರು ಅವಜ್ಞೆಗೆ ಒಳಪಟ್ಟಿದ್ದಾನೆ. ಮಾರ್ಗದರ್ಶಕರ ಕೊರತೆ ರಾಜಕಾರಣಿಗಳಿಗಿದೆ. ಇಂದಿನ ದಿನಗಳಲ್ಲಿ ದುಡ್ಡಿದ್ದವರೇ ರಾಜಕಾರಣಿಗಳಾಗುತ್ತಿದ್ದಾರಲ್ಲವೇ? ಅವರಿಗೇಕೆ ಗುರುಗಳ ಅಭಯ ಹಸ್ತ? ಸಮಾಜವನ್ನು ಸುಸ್ಥಿತಿಗೆ ತರುವ ಬದಲು ಕೊಳ್ಳೆ ಹೊಡೆಯುವುದೇ ಅವರ ಜಾಯಮಾನವಾಗಿದೆ ಎಂಬ ಅಳಲು ಜನಸಾಮಾನ್ಯರಿಗಿದೆ.

ಗುರು ಎಂದರೆ ಕಲಿಸುವವನು ಎಂಬ ಅರ್ಥ. ಆದರೆ ಪ್ರತಿಯೊಂದು ವಿಷಯವನ್ನು ಕಲಿಸುವವನು ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾನೆಂಬ ಮನೋಭಿಲಾಷೆ ಬಲಗೊಳ್ಳಬೇಕು. ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎಂಬ ಕವಿ ನಾಗಚಂದ್ರನ ಮಾತು ನಿಜ.

ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ ಗುರು ಪರಂಪರೆಯನ್ನು ಕಾಣುತ್ತೇವೆ. ಹಾಗೆಯೇ ಕನ್ನಡ ಸಾಹಿತ್ಯ ಪರಂಪರೆಯಲ್ಲೂ ಕೂಡ ಗುರು ಶಿಷ್ಯರ ಸಂಬಂಧಗಳು ದಾಖಲಾಗಿವೆ.

ಗುರುವಿನ ಕುರಿತಾಗಿ ವಚನಕಾರರ ದೃಷ್ಟಿಕೋನ ಏನಾಗಿತ್ತು ಎಂಬುದನ್ನು ಕೆಲವು ವಚನಗಳ ಮೂಲಕ ಚರ್ಚಿಸೋಣ. ‘ಬಸವಣ್ಣನಿಗೆ ಶರಣರೇ ಗುರುಗಳಾಗಿದ್ದರು, ಶರಣರಿಗೆ ಬಸವಣ್ಣನೇ ಗುರುವಾಗಿದ್ದ. ‘ತನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ’ ಎಂಬ ವಾಕ್ಯವೇ ಗುರುವಿನ ಮಹತ್ವವನ್ನು ತಿಳಿಸುತ್ತದೆ. ಈ ಕೊಡುಕೊಳ್ಳುವಿಕೆಯೇ ಜ್ಞಾನದಿಂದಲೇ ವಚನ ಸಾಹಿತ್ಯದ ಸಾಗರ ವಿಶಾಲವಾಗಿದೆ.

ವಚನಗಳಲ್ಲಿ ಗುರುವನ್ನು ಗುರುತಿಸುವಿಕೆ:

ಕಾಯಕ್ಕೆ ಕರ್ಮ ಗುರುವಾಗಬೇಕು
ಉಭಯವ ವೇದಿಸಿ ನಿಂದಲ್ಲಿ
ಸ್ವಾನುಬಾವ ಸನ್ನದ್ಧನಾಗಿ ಗುರುವಾಗಬೇಕು ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು
 ಅದೇ ವಸ್ತು ನಿಶ್ಚಯ
 ಸದಾಶಿವಮೂರ್ತಿಲಿಂಗವು ತಾನಾಗಿ… ಎಂದು

ಅರಿವಿನ ಮಾರಿತಂದೆ ತನ್ನ ವಚನದಲ್ಲಿ ಗುರುವನ್ನು ಕಾಣುವ ಇಂಗಿತ ವ್ಯಕ್ತಪಡಿಸುತ್ತಾರೆ. ಈ ಜಡತ್ವದ ಶರೀರಕ್ಕೆ ಕೆಲಸವೇ ಗುರು. ತನ್ನ ಸ್ವ ಅನುಭವದ ಅರಿವಿನ ಮೇಲೆ ಗುರುವನ್ನು ನಿರ್ಮಿಸಿಕೊಳ್ಳುವ ಪ್ರಜ್ಞೆ ಒಳಗೊಳ್ಳಬೇಕು. ಬುದ್ಧಿ ಮತ್ತು ಕೆಲಸ ಸಮ ಬಿಂದುಗಳಾಗಿ ಕಾರ್ಯನಿರ್ವಹಿಸಿದಾಗ ಬಂಧುತ್ವದ ಬಲ ಹೆಚ್ಚುತ್ತದೆ ಎಂಬ ಆಲೋಚನೆ ಅರಿವಿನ ಮಾರಿ ತಂದೆಯದು. ಗುರುವನ್ನು ಎಲ್ಲೆಲ್ಲೋ ಹುಡುಕುವುದು ತರವಲ್ಲ, ನಿನ್ನ ಅಂತರಂಗ ಬಹಿರಂಗಗಳನ್ನು ಗುರುತಿಸುವ ಕೆಲಸ ಮಾಡಿದರೆ  ಗುರುವನ್ನು ಕಂಡುಕೊಳ್ಳುವ ದಾರಿ  ಸುಲಭವಾಗುವುದೆಂಬ ಆಲೋಚನೆ ಇದೆ. ಜೇಡರ ದಾಸಿಮಯ್ಯನವರು ಕೂಡ  ಸ್ವ-ಅರಿವಿನ ಮಹತ್ವವೇ ಗುರುವಿನ ಸ್ಥಾನವನ್ನು ತೋರ್ಪಡಿಸುತ್ತದೆ ಎಂಬ ನಿಲುವನ್ನು ತಾಳುತ್ತಾರೆ.

ಎನ್ನ ನಾನರಿವುದಕ್ಕೆ ಮುನ್ನ ಎಲ್ಲಿದ್ದೆಯಯ್ಯ ಎನ್ನೊಳಗೆ ಇದ್ದೆಯಯ್ಯಾ
ಎನ್ನ ನಾನರಿಯಲು
ಮುಂದೆ ಗುರುರೂಪವಾಗಿ
ಎನ್ನೊಳಗೆ ಅಡಗಿದ್ದೆಯಲ್ಲ ರಾಮನಾಥ 

ನಮ್ಮನ್ನು ನಾವು ಅರಿತುಕೊಂಡಾಗ ಗುರುವನ್ನು ಅರಿತುಕೊಳ್ಳುವ ಪ್ರಜ್ಞೆ ಬಲಗೊಳ್ಳುತ್ತದೆ. ಗುರುವನ್ನು ಹೊರಗಡೆ ಹುಡುಕದೆ, ಒಳಗಡೆಯೇ ಹುಡುಕಬೇಕು. ಅಂದರೆ ಭೌತಿಕ ವಸ್ತುಗಳಲ್ಲಿ ಗುರುವನ್ನು ಕಾಣದೆ, ಅಂತರಾತ್ಮನಲ್ಲಿ ಬೆಳಕನ್ನು ಕಾಣಬೇಕು. ಗುರುವಿನ ಕೆಲಸ ಬೋಧಿಸುವುದು ಮಾತ್ರವಲ್ಲ, ನಮ್ಮಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಗುರುವಿನೊಂದಿಗೆ ಅನುಸಂಧಾನದ ದಾರಿ ನಿರ್ಮಿಸಿಕೊಳ್ಳಬೇಕೆಂಬ ಆಲೋಚನೆಯೇ ದೊಡ್ಡದು. ವಚನಕಾರ ಮೆರೆಮಿಂಡಯ್ಯನು ಕೂಡ

ತನ್ನ ತಾನರಿದೊಡೆ ತನ್ನರಿವೆ ಗುರು
 ತಾನೇ ಲಿಂಗ ತನ್ನ ನಿಷ್ಠೆಯೇ ಜಂಗಮ
 ಇಂತಿ ತ್ರಿವಿಧ ಒಂದಾದಡೆ
ಐಘಟ ದೂರ ರಾಮೇಶ್ವರ ಲಿಂಗವು ತಾನೇ 

ಎಂದು ನಿನ್ನನ್ನು ಹೊರಗಡೆ ಹುಡುಕದೆ, ನಿನ್ನೊಳಗೆ ನೀ ಹುಡುಕು ಎಂಬ ತತ್ವಪದಕಾರರ ಹಿನ್ನೆಲೆಯಲ್ಲಿಯೂ ಕೂಡ ವಚನಗಳು ಮಾತಾಡುತ್ತವೆ.

ಅಲ್ಲಮಪ್ರಭುವಿನ ದೃಷ್ಟಿಯಲ್ಲಿ ಗುರು-ಶಿಷ್ಯ

ಅಲ್ಲಮಪ್ರಭುಗಳು  ಭೌತಿಕ- ಅಭೌತಿಕ ನಡುವಿನ ವ್ಯತ್ಯಾಸದ ಮೂಲಕ ಗುರುವಿನ ಮಹಿಮೆ ಹೇಳುತ್ತಾರೆ.

ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದಹೆನೆಂದರೆ
 ಸಿಕ್ಕದೆಂಬ ಬಳಲಿಕೆಯ ನೋಡಾ
 ಕಂಡುದನೆ ಕಂಡು
 ಗುರುಪಾದವ ಹಿಡಿದಲ್ಲಿ
 ಕಾಣದುದ ಕಾಣಬಹುದು ಗುಹೇಶ್ವರ  

ನಾವು ಯಾವ ವಿಷಯದಲ್ಲಿ ಪರಿಣಿತಿ ಹೊಂದಿರುತ್ತೇವೋ ಆ ವಿಷಯದಲ್ಲಿ ಮಾತಾಡಿದರೆ ಒಳಿತು. ಗೊತ್ತಿರದ ವಿಷಯದಲ್ಲಿ ಮಾತಾಡತೊಡಗಿದರೆ ಅಪ್ರಸಂಗಿತನ ಉಂಟಾಗುತ್ತದೆ ಎಂಬ ಭೌತಿಕ ನಿಲುವಿದೆ. ಗುರುವಿನ ಕರುಣೆ ನಮ್ಮ ಮೇಲೆ ಇದ್ದರೆ ತಿಳಿದ ವಿಷಯ ಅವಿರ್ಬಾವಗೊಂಡು, ತಿಳಿಯದ ವಿಷಯವನ್ನು ಕೂಡ ಕಂಡಂತೆ ವಿಶ್ಲೇಷಿಸಲು ಸಾಧ್ಯ ಎಂಬ ಅಭೌತಿಕ ನಿಲುವಿದೆ. ಗೋಚರ ಅಗೋಚರಗಳ ನಡುವಿನ ಅಂತರವನ್ನು ಸಮತೋಲನಗೊಳಿಸಿ ಅರಿವಿನ ಜ್ವಾಲೆಯನ್ನು ಗುರು ಶಿಷ್ಯರು ಪ್ರತಿಬಿಂಬಿಸುತ್ತಾರೆ ಎಂಬ ನಿಲುವುವಿರಬಹುದೆನಿಸುತ್ತದೆ.

ಅಲ್ಲಮಪ್ರಭುವಿನ ಇನ್ನೊಂದು ಪ್ರಸಿದ್ಧ ವಚನ ಗುರು -ಶಿಷ್ಯರಿಗೆ ಸಂಬಂಧಿಸಿದ್ದು.

ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ  ಮಹಾಪ್ರಸಾದವೆಂದನಯ್ಯ
 ತೇತ್ರಾಯುಗದಲ್ಲಿ
 ಶ್ರೀ ಗುರು ಶಿಷ್ಯಂಗೆ  ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯ
ದ್ವಾಪರಯುಗದಲ್ಲಿ  ಶ್ರೀ ಗುರು ಶಿಷ್ಯಂಗೆ  ಜಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯ
ಕಲಿಯುಗದಲ್ಲಿ ಶ್ರೀ ಗುರು ಶಿಷ್ಯನಿಗೆ ನಿಂದಿಸಿ ಬುದ್ಧಿಯ ಕಲಿಸಿದರೆ ಆಗಲಿ  ಮಹಾಪ್ರಸಾದವೆಂದನಯ್ಯ
 ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದನು ಗುಹೇಶ್ವರ 

ಇಲ್ಲಿ ಗುರು ಶಿಷ್ಯರ ಕಾಲಘಟ್ಟವನ್ನು ಪರಿಗಣನೆ ಮಾಡಿದ್ದಾರೆ. ಇಲ್ಲಿ ಗುರುವಿನ ಕಾರ್ಯವೈಖರಿ ಬದಲಾಗುತ್ತಿದೆ, ಆದರೆ ಶಿಷ್ಯನ ಕಾರ್ಯ ಬದಲಾವಣೆಗೊಳಪಟ್ಟಿಲ್ಲ. ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆಗಳ ನಡುವಿನ ಸಂಬಂಧದ ಏರು-ಪೇರುಗಳನ್ನು ವಚನ ದಾಖಲಿಸುತ್ತದೆ. ಗುರುವಿಗೆ ಶಿಷ್ಯ ಹೇಗಾದರೂ ಕಲಿಯಬೇಕೆಂಬ ಹಂಬಲ. ಶಿಷ್ಯನಿಗೆ ಗುರು ಹೇಗಾದರೂ ಕಲಿಸಲಿ ಎಂಬ ತುಡಿತ. ಒಬ್ಬರಿಗೊಬ್ಬರು ಆಸರೆಯಾಗಿದ್ದಾರೋ ಅಥವಾ ನಿರಾಶೆ ಮಾಡಿಸುತ್ತಿದ್ದಾರೋ ಎಂಬ ಚಿಂತನೆ ಮಡುಗಟ್ಟಿದೆ. ಆದರೂ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟುಕೊಡದ ಗುರು ಶಿಷ್ಯರ ಸಂಬಂಧವೆನ್ನಬಹುದೇನೋ? ಗೊತ್ತಿಲ್ಲ.

ಹಸಿವೆಯೇ ಗುರುವಾಗುವುದು:

ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ನಿಜವಾದ ಗುರು ಯಾರು ಎಂಬುದನ್ನು ತಿಳಿಯಪಡಿಸುತ್ತಾರೆ.

ಆನೆಗಾರ್ ಇರುವೆ ಗಾರ್ ಕಾಗೆ ಗಾರ್,  ಕಪ್ಪೆಗಾರ್
ಕಾಣಿಸುವರನ್ನವನು ಹಸಿವವರ ಗುರುವು
 ಮಾನವನುಮಂತುಧರ ಶಿಷ್ಯನವನ ದರ
ಶಿಷ್ಯ ನವನ ಕಸನೆ ನಾನಾ ವಯವಗಳಲಿ ಮಂಕುತಿಮ್ಮ,

ಆನೆ, ಇರುವೆ, ಕಪ್ಪೆಗಳಿಗೆ ಯಾರು ಆಹಾರ ಒದಗಿಸುವುದಿಲ್ಲ. ಅವುಗಳ ಹಸಿವೆ ಅವುಗಳಿಗೆ ದಾರಿ ತೋರುವ ಗುರುವಾಗಿದೆ. ಮಾನವನಾದರೂ ಹೊಟ್ಟೆಯ ಶಿಷ್ಯನಾಗಿ ಹೋಗಿದ್ದಾನೆ. ಹಸಿವು ಮತ್ತು ಹೊಟ್ಟೆ ಗುರು ಶಿಷ್ಯರ ಸಂಬಂಧವಾಗಿದೆ. ನಮ್ಮ ಜ್ಞಾನದ ತೃಷೆ ಕೂಡ ಇವೆರಡರ ಮಾದರಿಯಲ್ಲಿ ರೂಪುಗೊಳ್ಳಬೇಕೆಂಬ ಆಶಯ ಡಿವಿಜಿಯವರದು. ಒಂದು ವೇಳೆ ಹಸಿವಾದರೆ ಹೊಟ್ಟೆಯನ್ನು ನಾವು ತುಂಬಿಸದೆ ಹೋದರೆ ಆರೋಗ್ಯ ಹದಗೆಡುವ ಸಂಭವವಿರುತ್ತದೆ. ಹಾಗೆಯೇ ಬದುಕಿನಲ್ಲಿ ಪುಸ್ತಕಗಳ ಓದಿನ ಅಭಿರುಚಿ ಇಲ್ಲದೆ ಹೋದರೆ ಸೃಜನಶೀಲತೆ ನಮ್ಮನ್ನು ಅನಾರೋಗ್ಯಕ್ಕೀಡು ಮಾಡುತ್ತದೆ. ಗುರುವಾದವನಿಗೆ ಶಿಷ್ಯನ ಸಾಂಗತ್ಯವಿಲ್ಲದಿದ್ದರೆ  ಅಥವಾ  ಶಿಷ್ಯನಾದವನಿಗೆ ಗುರುವಿನ ಸಾಂಗತ್ಯವಿಲ್ಲದಿದ್ದರೆ  ಗುರು ಶಿಷ್ಯರ ಸಂಬಂಧ ಮುಗಿದ ಅಧ್ಯಾಯ. ಗುರುವಾದವನು ಶಿಷ್ಯನಿಗೆ ಮತ್ತೊಂದು ಲೋಕದ ಕಣ್ಣನ್ನು ಕೊಡುವ ಕಾರ್ಯಕ್ರಮವೇ ಉಪನಯನ. ಅದು ಧಾರ್ಮಿಕವಾಗಿ ಗೋಚರಿಸಿದರೂ, ಅಂತರಂಗದ ಕಣ್ಣಿನ ಪ್ರವೇಶವಾಗುವುದು ಶಿಷ್ಯನು ಗುರುವಿನ ಆಲೋಚನೆ, ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ. ಗುರುಗಳು ತಮ್ಮ ಶಿಷ್ಯರಿಗೋಸ್ಕರ ತಮ್ಮ ತಪಸ್ಸನ್ನೆಲ್ಲ ಧಾರೆ ಎರೆದ ಸನ್ನಿವೇಶಗಳನ್ನು ಪುರಾಣಗಳಲ್ಲಿ ಓದುತ್ತೇವೆ.

ವರ್ತಮಾನದ ದಿನಗಳಲ್ಲಿ ಗುರುವಿನ ಸ್ಥಾನ:

ಪ್ರಾಥಮಿಕ ಶಾಲೆಗಳಲ್ಲಿ ಕಲಿಸಿದ ಗುರುವನ್ನು ಶಿಷ್ಯನಾದವನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಮಕ್ಕಳಲ್ಲಿ ಪ್ರೀತಿ, ವಾತ್ಸಲ್ಯ, ಮಮತೆ, ಶಾಂತಿ ಸಮಾಧಾನ ತುಂಬುವ ವ್ಯವಧಾನ ಗುರುವಿಗೆ ಇತ್ತು. ತಂದೆ ತಾಯಿಯ ಮಾತಿಗಿಂತ ಗುರುವಿನ ಮಾತನ್ನು ವಿದ್ಯಾರ್ಥಿ ಬಹಳವಾಗಿ ನಂಬುತ್ತಿದ್ದ. ಏಕೆಂದರೆ ಗುರು ಎಂದು ತಪ್ಪು ಮಾಡಲಾರ ಎಂಬ ಭಾವನೆ, ಆ ಮಗುವಿಗೆ ಇರುತ್ತೆ. ಬಹಳಷ್ಟು ಗುರು ವಂದನ ಕಾರ್ಯಕ್ರಮಗಳು ನಡೆಯುವುದು ಕೂಡ ಪ್ರಾಥಮಿಕ ಪ್ರೌಢಶಾಲೆಯ ಹಂತದ ಗುರುಗಳಿಗೆ ಮಾತ್ರ. ಬಾಲ್ಯದಲ್ಲಿ ಕಲಿಸಿದ ಗುರುವನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ಉನ್ನತ ವಿದ್ಯಾಭ್ಯಾಸದ ಪ್ರಸ್ತುತ ದಿನಮಾನಗಳಲ್ಲಿ ಗುರು-ಶಿಷ್ಯರ  ಸಂಬಂಧ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಏಕೆಂದರೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಬಂಧ ತಾತ್ಕಾಲಿಕವಾಗಿದೆ. ಗುರು ಶಿಷ್ಯರ ಪರಂಪರೆಯ ಕೊಂಡಿ ಕಳಚುತ್ತಲಿದೆ. ಏಕೆಂದರೆ ಇಂದಿನ ಗುರು-ಶಿಷ್ಯರ ಸಂಬಂಧ ಜಾತಿಗೆ ಮಾತ್ರ ಸೀಮಿತವಾಗಿದೆ. ಗುರು ಗೋವಿಂದ ಭಟ್ಟರು ಮತ್ತು ಶಿಶುನಾಳ ಶರೀಫರ ಗುರು ಶಿಷ್ಯರ ಸಂಬಂಧ ಜಾತಿಯನ್ನು ಮೀರಿ ಬೆಳೆದದ್ದು. ಸಂಗೀತ ಪರಂಪರೆಯಲ್ಲಿ ಗುರು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಅದು ಕೂಡ ಜಾತಿಯನ್ನು ಮೀರಿ ಬೆಳೆದ ಉದಾಹರಣೆಗಳಿವೆ. ಇವುಗಳು ನಮಗೆ ಮಾದರಿಯಾಗಬೇಕಲ್ಲವೇ?

ಆಗ ಮಾತ್ರ ಗುರುಪೂರ್ಣಿಮೆ ಅರ್ಥಪೂರ್ಣವಾಗುವುದು.

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ