ಹಲವರು ದೇವರಿಗೆ ತಮ್ಮ ಹರಕೆ ತೀರಿಸಲು ದೇವರಿಗೆ ಮುಡಿ ಕೊಡುತ್ತಾರೆ. ಆದರೆ ತಲೆಯಲ್ಲಿ ಕೂದಲಿಲ್ಲದೇ ಬೋಳಾಗಿರುವ ನನಗೆ ಈ ರೀತಿ ಮುಡಿ ಕೊಡಲು ಸಾಧ್ಯವಿಲ್ಲ ಎಂದು ಬೇಸರವಾಗುವುದಿಲ್ಲ. ತುಂಬಾ ಆಶಾವಾದಿ ನಾನು. ಇದಕ್ಕೆ ಬದಲಾಗಿ ನನ್ನ ಕೂದಲನು ಮುಡಿ ತೆಗೆದುಕೊಳ್ಳುವ ವಿಷಯದಲ್ಲಿ ದೇವರಿಗೇ ಅದೃಷ್ಟ ಇಲ್ಲ ಎಂದೇ ನಾನು ಭಾವಿಸುತ್ತೇನೆ! ಏಕೆಂದರೆ ಅನೇಕರು ಮಡಿ ಕೊಟ್ಟು ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ ಮುಡಿ ಕೊಡುವಷ್ಟು ಕೂದಲನ್ನು ನಮ್ಮಿಂದ ಈಗಾಗಲೇ ಕಿತ್ತುಕೊಂಡಿರುವುದರಿಂದ ಮುಡಿ ಕೊಡುವ ಪ್ರಮೇಯವೇ ಬರುವುದಿಲ್ಲ! ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೇಳನೆಯ ಕಂತು ನಿಮ್ಮ ಓದಿಗೆ
ನೀವೇನೇ ಹೇಳಿ. ತಲೆಯಲ್ಲಿ ಕೂದಲು ಇರಬೇಕು ರೀ…. ಈ ವಿಷಯದಲ್ಲಿ ನಾನು ತುಂಬಾ ಅಣಕಕ್ಕೊಳಗಾಗಿದ್ದೇನೆ. ಮುಜುಗರ ಪಟ್ಟಿದ್ದೇನೆ. ಬೇಸರ ಮಾಡಿಕೊಂಡಿದ್ದೇನೆ. ಹಲವು ವೇಳೆ ದೇವರನ್ನು ಶಪಿಸಿದ್ದೇನೆ. ಆದರೂ ಇದ್ದದ್ದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳಬೇಕಲ್ಲವಾ? ಕೆಲವರು ಅನೇಕ ಸಲ ಈ ಬಗ್ಗೆ ನನಗೆ ಅಣಕ ಮಾಡಿದಾಗ ನಾನೇ ನನ್ನ ಬಗ್ಗೆ ಅಣಕ ಮಾಡಿಕೊಳ್ಳುವುದು ಇವರ ಬಾಯಿ ಮುಚ್ಚಿಸೋ ಐಡಿಯಾ ಎಂದು ಮನಗಂಡು ನನ್ನ ಬಗ್ಗೆ ನಾನೇ ಹಾಸ್ಯ ಮಾಡಲು ಶುರು ಮಾಡಿಕೊಂಡೆ. ಆಗ ಶುರುವಾಗಿದ್ದೇ ಬೋಳುಮಂಡೆಯ ಕುರಿತು ಚುಟುಕುಗಳ ಬರೆಹ. ಅದರ ಬಗ್ಗೆ ಮುಂದೆ ಹೇಳುತ್ತೇನೆ. ಈಗ ನನ್ನ ಬಗ್ಗೆ ನಾನೇ ಹಾಸ್ಯ ಮಾಡಿಕೊಂಡು ಬರೆದ ಒಂದು ಲಲಿತ ಪ್ರಬಂಧದ ಸ್ವರೂಪದ ಬರೆಹ ನಿಮಗಾಗಿ… ಓದುವ ಖುಷಿ ನಿಮ್ಮದಾಗಲಿ…
ತೀರ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೋಳು ಮಂಡೆಯ ಕುರಿತಾಗಿ ಒಬ್ಬ ವ್ಯಕ್ತಿಯು ಹೇಳಿದ ಹಾಸ್ಯ ಕವನವು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಆಗಿತ್ತು. ಅನೇಕರು ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಇದನ್ನು ಹಂಚಿಕೊಂಡಿದ್ದರು. ಅನೇಕ ನನ್ನ ಸ್ನೇಹಿತರು ಮುಂದಲೆ ಖಾಲಿಯಾಗಿರುವ ನನಗೂ ಆ ವಿಡಿಯೋ ಹಂಚಿ ಖುಷಿಪಟ್ಟಿದ್ದರು! ಹಿಂದೆ ಇದೇ ಬೋಳು ಮಂಡೆಯ ಬಗ್ಗೆ ಚಲನಚಿತ್ರವಾದ ಒಂದು ‘ಮೊಟ್ಟೆಯ ಕಥೆ’ ಬಂದಾಗ ಅದು ಇಷ್ಟು ಶೇರ್ ಆಗಿರಲಿಲ್ಲವೇನೋ! ಅಷ್ಟರ ಮಟ್ಟಿಗೆ ಬೋಳು ಮಂಡೆ ಒಂದು ಹಾಸ್ಯದ ವಸ್ತುವಾಗಿದೆ. ಈ ಬೋಳು ಮಂಡೆ ಅನ್ನೋದು ಬರೀ ಪುರುಷರಿಗೆ ಮಾತ್ರ ಮೀಸಲಾಗಿರುತ್ತೆ! ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಇರೋಲ್ಲ. ಬಹುಷಃ ಹಿಂದಲೆಯಲ್ಲಿ ಜಡೆ ಇರುವ ಹೆಂಗಸರ ಬಗ್ಗೆ ಗಂಡಸರು ತಲೆಕೆಡಿಸಿಕೊಂಡಿದ್ದಕೇನೋ(?!) ಬರೀ ಗಂಡಸರ ಮುಂದಲೆಯಲ್ಲಿ ಕೂದಲು ಕಮ್ಮಿ ಆಗುತ್ತಿದೆ!? ಇತ್ತೀಚೆಗಂತೂ ಈ ರೀತಿ ಕೂದಲು ಉದುರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ನನ್ನಂತವರು ತುಸು ಸಮಾಧಾನ ಮಾಡಿಕೊಳ್ಳುವ ಹಾಗಾಗಿದೆ!!
ಆದರೂ ಕೂದಲಿದ್ದುದಕ್ಕಿಂತ ಇಲ್ಲದೇ ಇರುವ ಮಂಡೆಯ ಮೇಲೆ ಏನೇ ಬಿದ್ದರೂ ಗೊತ್ತಾಗುತ್ತದೆ. ಇದ್ದುದರಲ್ಲಿಯೂ ಮರದಡಿಯಲ್ಲಿ ಕುಳಿತಾಗ ನಮ್ಮಂತಹವರು ತುಸು ಎಚ್ಚರವಹಿಸಬೇಕು. ಮಕ್ಕಳೂ ನಮ್ಮನ್ನು ನೋಡಿ ನಗುವಂತಾಗಬಾರದು. ಕಾರಣವಿಷ್ಟೇ;
ಮರದ ಕೆಳಗೆ ಕುಳಿತವನ
ತಲೆ ಮೇಲೆ ಎದ್ದು ಕಾಣುತಿದೆ
ಕಾಗೆ ಮಾಡಿದ ಕಕ್ಕ
ಕಾರಣ ತಲೆಯಾಗಿದೆ
ಸಂಪೂರ್ಣ ಬೊಕ್ಕ!!
ಈ ಕೂದಲುದುರುವ ಸಮಸ್ಯೆಗೆ ಕಾರಣಗಳನ್ನು ಕೇಳಿದರೆ ವಿಟಮಿನ್ ಪ್ರಾಬ್ಲಮ್, ಒತ್ತಡ, ನೀರಿನ ಸಮಸ್ಯೆ, ಹಾರೈಕೆಯ ಸಮಸ್ಯೆ ಮುಂತಾದ ಕಾರಣಗಳನ್ನು ಕೊಡುತ್ತಾರೆ. ಆದರೆ ಎಲ್ಲಾ ರೀತಿಯಲ್ಲೂ ಆರೋಗ್ಯವನ್ನು ಕಾಪಾಡಿಕೊಂಡಿದ್ದಾಗ್ಯೂ ಕೆಲವರಿಗೆ ಕೂದಲು ಇರೋಲ್ಲ. ಏನೂ ಕೇರ್ ಮಾಡಿಕೊಳ್ಳದವರ ಕೂದಲು ದಟ್ಟವಾಗಿರುವುದನ್ನು ನೋಡಿ ಸೋಜಿಗ ಎನಿಸುತ್ತೆ. ಏನೂ ಕೇರ್ ಮಾಡದೆಯೋ ಕೆಲ ಪ್ರಾಣಿಗಳಿಗೆ ಕೂದಲು ಚೆನ್ನಾಗಿರುವುದನ್ನು ನೋಡಿ ಇದನ್ನು ಹೇಳಬೇಕೆನಿಸುತ್ತದೆ.
ಹೆಚ್ಚು ಬೆಲೆಯ ಶ್ಯಾಂಪೂ,
ಕೂದಲೆಣ್ಣೆ ಬಳಸಿಯೂ ಕೂಡ
ಬೆಳೆಸಲಾಗಲಿಲ್ಲ ಕೇಶವನು
ಬೋಳು ಮಂಡೆಗೆ
ಏನು ಸೃಷ್ಟಿಯ ವೈಚಿತ್ರ್ಯ
ಏನನ್ನೂ ಬಳಸದೆಯೋ
ಮೈ ತುಂಬಾ ಕೂದಲು ಕರಡಿಗೆ!!
ಈ ಕೂದಲುದುರುವ ಸಮಸ್ಯೆ ಹಿಂದಿಗಿಂತಲೂ ಇಂದು ಹೆಚ್ಚಾದಂತೆ ಕಾಣುತ್ತಿದೆ. ‘ಬೋಡ ಬಡವನಲ್ಲ’, ‘ಕೂದಲು ಕಮ್ಮಿ ಇರುವವರಿಗೆ ಬುದ್ಧಿ ಜಾಸ್ತಿ’ ಎಂಬ ಮಾತುಗಳನ್ನು ಕೆಲವರು ಆಡುವುದನ್ನು ನಾವು ಕೇಳಿದ್ದೇವೆ. ಇದಕ್ಕೆ ಪೂರಕವೆಂಬಂತೆ ಅನೇಕ ವಿಜ್ಞಾನಿಗಳ ಫೋಟೋ ನೋಡಿದಾಗ ನಿಜ ಎನಿಸುವುದು. ಆದರೆ ಕೆಲವು ವಿಜ್ಞಾನಿಗಳಿಗೆ ತಲೆ ತುಂಬಾ ಕೂದಲು ಇರುವುದು ನೋಡಿದಾಗ ಇದನ್ನು ಸಾರ್ವತ್ರೀಕರಣಗೊಳಿಸಲಾಗುವುದಿಲ್ಲ. ಕೆಲವರಂತೂ ದೇವರು ಕೊಟ್ಟ ರೂಪ ಏನ್ಮಾಡೋಕಾಗುತ್ತೆ? ಎಂದು ನಿಟ್ಟುಸಿರು ಬಿಡುತ್ತಾರೆ. ಇದೇ ಮಾತು ನಿಜವಾಗುವುದಾದರೆ ಇಂಥ ಸ್ಥಿತಿ ಕೊಟ್ಟ ಆ ದೇವರಿಗೆ ಬಯ್ಯಬೇಕೆನಿಸುತ್ತದೆ.
ಬೋಳು ತಲೆಯವರ ಗೋಳು
ಮೊರೆ, ದುಃಖ ದುಮ್ಮಾನ
ಅರ್ಥವಾಗುತ್ತಿಲ್ಲವೇನೋ ದೇವರಿಗೆ ..
ಒಂದೊಮ್ಮೆ ಇದ್ದಿದ್ದರೆ ಗೊತ್ತಾಗುತ್ತಿತ್ತು
ಬೋಳು ತಲೆ ಅವನಿಗೆ!!
ಹಲವರು ದೇವರಿಗೆ ತಮ್ಮ ಹರಕೆ ತೀರಿಸಲು ದೇವರಿಗೆ ಮುಡಿ ಕೊಡುತ್ತಾರೆ. ಆದರೆ ತಲೆಯಲ್ಲಿ ಕೂದಲಿಲ್ಲದೇ ಬೋಳಾಗಿರುವ ನನಗೆ ಈ ರೀತಿ ಮುಡಿ ಕೊಡಲು ಸಾಧ್ಯವಿಲ್ಲ ಎಂದು ಬೇಸರವಾಗುವುದಿಲ್ಲ. ತುಂಬಾ ಆಶಾವಾದಿ ನಾನು. ಇದಕ್ಕೆ ಬದಲಾಗಿ ನನ್ನ ಕೂದಲನು ಮುಡಿ ತೆಗೆದುಕೊಳ್ಳುವ ವಿಷಯದಲ್ಲಿ ದೇವರಿಗೇ ಅದೃಷ್ಟ ಇಲ್ಲ ಎಂದೇ ನಾನು ಭಾವಿಸುತ್ತೇನೆ! ಏಕೆಂದರೆ ಅನೇಕರು ಮಡಿ ಕೊಟ್ಟು ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ ಮುಡಿ ಕೊಡುವಷ್ಟು ಕೂದಲನ್ನು ನಮ್ಮಿಂದ ಈಗಾಗಲೇ ಕಿತ್ತುಕೊಂಡಿರುವುದರಿಂದ ಮುಡಿ ಕೊಡುವ ಪ್ರಮೇಯವೇ ಬರುವುದಿಲ್ಲ! ಆದರೂ ಸುಂದರ ಹುಡುಗಿಯರು ನನ್ನನ್ನು ‘ಅಂಕಲ್’ ಎಂದು ಕರೆದಾಗ ಮನಸ್ಸಿಗೆ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಅದಕ್ಕೆಂದೇ ತಿಮ್ಮಪ್ಪನಿಗೆ ಹೀಗೆ ಬೇಡಿಕೊಳ್ಳುತ್ತೇನೆ.
ವರ್ಷಕ್ಕೆರಡು ಬಾರಿ
ಹರಕೆಯ ಮುಡಿಯನು
ಕೊಡುವೆನು ತಿಮ್ಮಪ್ಪಾ ನಿನಗೆ
ಬೇಡುವೆನು ನಿನಗೆ
ತರಿಸು ಕೂದಲನು ತಲೆಗೆ… !
ಈ ಪ್ರಕೃತಿಯಲ್ಲಿರುವ ಮರಗಳ ಎಲೆಯೂ ಸಹ ನನ್ನ ಕೂದಲು ಬಿದ್ದಂತೆ ಬೀಳುತ್ತದೆ. ಆದರೆ ಅಲ್ಲಿ ಆಗುವುದೇ ಬೇರೆ.
ಬಿದ್ದ ಎಲೆಗಳು ಮತ್ತೆ ಚಿಗುರಿ
ಮರದಲ್ಲಿ ಹೊಸ ಎಲೆಗಳು ಬೆಳೆಯುತ್ತವೆ.
ಏನಿದರ ಮರ್ಮ?
ಬಿದ್ದ ಕೂದಲು ಮತ್ತೆ ಬೆಳೆಯುತ್ತಿಲ್ಲ
ಥೂ… ಏನು ನನ್ನ ಕರ್ಮ?!
ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಅದರಲ್ಲೂ ವಿಧ ವಿಧದ ಕಟಿಂಗ್ ಸ್ಟೈಲಿನಲಿ ಮಿಂಚುವ ಹುಡುಗರನ್ನು ನೋಡಿ ನನಗೆ ಬೇಸರವೆನಿಸುತ್ತದೆ. ಇನ್ನು ಕಟಿಂಗ್ ಶಾಪಿನವರೂ ಅಷ್ಟೇ. ಕೂದಲು ಕಟ್ ಮಾಡುವ ವಿಷಯದಲ್ಲಿ ಕೂದಲು ಇರುವವರಿಗೆ ತೆಗೆದುಕೊಳ್ಳುವ ಹಣವನ್ನು ನನಗೂ ತೆಗೆದುಕೊಳ್ತಾರೆ! ಇದರಿಂದ ನನಗೆ ಕೋಪ ಬರುವುದಲ್ಲದೇ ಅನೇಕ ಬಾರಿ ಅವರಿಗೆ ಪ್ರಶ್ನಿಸಿದ್ದುಂಟು. ಆಗ ಅವರು ಸರ್ ಕೂದಲಿದ್ದಾಗ ನಮಗೆ ಕಟಿಂಗ್ ಮಾಡುವುದು ಸುಲಭ. ಆದರೆ ನಿಮ್ಮಂತೆ ಇದ್ದರೆ ಅಲ್ಲಲ್ಲಿ ಹುಡುಕಿ ಕಟ್ ಮಾಡುತ್ತಾ ಹೋಗುವುದು ನಮಗೆ ರಿಸ್ಕ್ ಕೆಲಸ, ಸಮಯವೂ ವ್ಯರ್ಥ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದೂ ಉಂಟು. ಆದರೂ ನನಗೆ ಇನ್ನೂ ಕಾಡುತ್ತಿರುವ ಪ್ರಶ್ನೆ ಏನೆಂದರೆ
ತಲೆಯಲ್ಲಿ ಕಮ್ಮಿ ಇರುವ ನನ್ನ
ಕೂದಲನು ಮಾಡಬಹುದು
ಯಾರು ಬೇಕಾದರು ಕೌಂಟು..
ಆದರೂ ಹೇರ್ ಸೆಲ್ಯೂನ್ ನವರೇಕೆ
ಕೊಡುತ್ತಿಲ್ಲ ನನಗೆ ಡಿಸ್ಕೌಂಟು?!

ಕೂದಲು ಇಲ್ಲದ್ದು ಕೆಲವೊಮ್ಮೆ ನನಗೆ ವರವೂ ಆಗಿದೆ. ಹೇಗೆಂದರೆ ಹೇನು, ಸೀರುವಿನ ಕಡಿತಕ್ಕೆ ಸಿಕ್ಕುತಲೆ ಕೆರೆದುಕೊಳ್ಳುವ ಕಾಟವಿಲ್ಲ. ತಲೆಹೊಟ್ಟು ಹೆಚ್ಚಾಗಿ ಅದನ್ನು ತೆಗೆಯಲು ಶ್ಯಾಂಪು, ಡಾಕ್ಟ್ರು ಅಂತಾ ಅಲೆಯುವ ಸಮಸ್ಯೆ ಇಲ್ಲ. ತೊಳೆದುಕೊಂಡ ತಲೆ ಆರಿಸಿಕೊಳ್ಳಲು ಹೇರ್ ಡ್ರೈಯರಿನ ಅವಶ್ಯಕತೆಯೂ ಇಲ್ಲ. ಈಗೀಗ ಅನೇಕ ಹುಡುಗಿಯರು ಸೂರ್ಯನ ಬಿಸಿಲಿಗೆ ತಲೆ ಒಡ್ಡಿಸಿ ತಲೆ ಆರಿಸಿಕೊಳ್ಳಲು ಹೋಗದೇ ಹೇರ್ ಡ್ರೈಯರ್ ಬಳಕೆ ಮಾಡ್ತಾರೆ. ಬೋಳಾದ ನಮ್ಮಂತವರಿಗೆ ಇದರ ಅವಶ್ಯಕತೆ ಇಲ್ಲ.
ಲಾಟರಿಯಲ್ಲಿ ಬಹುಮಾನ ಬಂದರೂ
ಸಪ್ಪೆಯಾಗಿಹರು ನಮ್ಮ ಸಾಹೇಬರು
ಕಾರಣ
ಬೋಳು ತಲೆಯ ಅವರಿಗೆ
ಲಾಟರಿಯಲ್ಲಿ ಸಿಕ್ಕಿದ್ದು
ಹೇರ್ ಡ್ರೈಯರು!!
ಇಂದು ಜನರು ತಮ್ಮ ನಿಜ ಸ್ಥಿತಿಯನ್ನು ಮುಚ್ಚಿಕೊಳ್ಳಲು ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ. ಬೊಕ್ಕ ತಲೆಯ ವಿಷಯದಲ್ಲೂ ಹಲವರು ಬೋಡ, ಬಾಂಡ್ಲಿ ಎಂದು ಕರೆಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ವಿಗ್ಗನ್ನು ಹಾಕಿಸಿಕೊಳ್ಳುತ್ತಾರೆ. ಕೆಲ ಸ್ಥಿತಿವಂತರು ನಾಟಿ ಮಾಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇದರ ಬೆಲೆಯಂತೂ ತುಂಬಾ ಹೆಚ್ಚಾಗುತ್ತದೆ. ಆದರೂ ಸಹ ಹಾಕಿಸಿದ ಕೃತಕ ಕೂದಲಿನ ಕುರುಹು ಎದ್ದು ಕಂಡು ಯಾವುದನ್ನು ನಾವು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದೆವೋ ಅದರ ನಿಜಸ್ಥಿತಿ ಗೊತ್ತಾಗುತ್ತದೆ. ಅನ್ಯ ಗ್ರಹಗಳಿಗೂ ಹೋಗಿ ಬರುವಂತಹ ಸಾಧನೆಗೈದಿರುವ ವಿಜ್ಞಾನಿಗಳು, ಹೆಣ್ಣನ್ನು ಗಂಡೋ, ಗಂಡನ್ನು ಹೆಣ್ಣೋ ಬದಲಾಯಿಸೋ ವೈದ್ಯಕೀಯ ಚಿಕಿತ್ಸೆ ಇರೋ ಇಂತಹ ಕಾಲದಲ್ಲೂ ಬೋಳು ಮಂಡೆಯಲಿ ಕೂದಲನು ಬೆಳೆಸಲು ಯಾಕೆ ಪ್ರಯತ್ನಿಸುತ್ತಿಲ್ಲ? ಎಂದು ಅನೇಕ ಬಾರಿ ನನ್ನಷ್ಟಕ್ಕೆ ನಾನೇ ಕೇಳಿಕೊಂಡು ಅವರಿಗೆ ಮನದಲ್ಲಿ ಶಪಿಸಿದ್ದೇನೆ! ಈಗೀಗ ನೈಜ ಕೂದಲನ್ನೇ ಮೀರಿಸುವಂತಹ ಕೂದಲ ಕಸಿಯಂತಹ ತಂತ್ರಜ್ಞಾನಗಳು ಬಂದಿದ್ದರೂ ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಅದನ್ನು ಮಾಡಿಸಲು ಸಾಧ್ಯವಿಲ್ಲ ಎಂದು ಹೇಳಲು ಮನಸ್ಸಿಗೆ ಬೇಸರವೆನಿಸುತ್ತದೆ. ಆದರೂ ಇದರ ಬಗ್ಗೆ ತೀರಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹಣ ಗಳಿಕೆಯ ಕಡೆಗೆ ಗಮನ ಹರಿಸಬೇಕು. ಈ ಕಾರಣ ಮದುವೆಗೆ ಹುಡುಗಿಯರನ್ನು ಒಪ್ಪಿಸಲು ನಾವು ಒಂದೊಳ್ಳೆ ಕೆಲಸವನ್ನು ಪಡೆದುಕೊಂಡರೆ ಸಾಕು. ಹೆಣ್ಣೆತ್ತವರು ನಮಗೆ ಹೆಣ್ಣು ಕೊಡುತ್ತಾರೆ. ಸರ್ಕಾರಿ ನೌರಕನಾದರಂತೂ ಮುಗೀತು. ತುಂಬಾ ಡಿಮ್ಯಾಂಡು!
ಇದ್ದರೂ ಒಂದೂ
ಕೂದಲಿಲ್ಲದ ಮಂಡೆ
ನಾನು ವಧುವಿನ ಪೋಷಕರಿಗೆ
ಸರ್ಕಾರಿ ನೌಕರನೆಂಬ ಕಾರಣ
ಸುಂದರವಾಗಿ ಕಂಡೆ!
ನನ್ನ ಕೆಲಸಕ್ಕೆಂದು ಕಚೇರಿಗೆ ಹೋಗುವಾಗ ಅಲ್ಲೊಬ್ಬಳು ಯಾವಾಗ್ಲೂ ನನ್ನ ತಲೆ ಕೂದಲಿನ ಬಗ್ಗೆ ಅಣಕ ಮಾಡುತ್ತಿದ್ದಳು. ಸಿಟ್ಟು ಮಾಡಿಕೊಂಡರೆ ಎಲ್ಲಿ ಮತ್ತೆ ಅಣಕ ಮಾಡುವರೋ ಎಂದು ಸುಮ್ಮನಿರುತ್ತಿದ್ದೆ. ಅಣಕ ತೀರಾ ಜಾಸ್ತಿಯಾದಾಗ ಇವರಿಗೆ ಬುದ್ಧಿ ಕಲಿಸಬೇಕೆಂದುಕೊಂಡಿದ್ದೆ. ಒಮ್ಮೆ ಇದೇ ರೀತಿ ಕಚೇರಿಗೆ ಹೋದಾಗ ಅವಳು ಅಣಕ ಮಾಡುವಷ್ಟರಲ್ಲಿ ನಾನೇ ಅವಳನ್ನು ಮೊದಲೇ ಮಾತನಾಡಿಸಿ ‘ಮೇಡಂ ಒಂದು ಮಾತು ಕೇಳಿ’ ಎಂದೆ. ಅವಕ್ಕವಳು ‘ಹೇಳಿ ಸರ್’ ಎಂದಳು. “ಕಾಲಿನಲ್ಲಿ ಚಪ್ಪಲಿ ಇಲ್ಲವೆಂದು ಕೊರಗಬೇಡಿ; ಕಾಲೇ ಇಲ್ಲದವರು ಬಹಳ ಮಂದಿ ಇದ್ದಾರೆ” ಎಂದೆ. ಅದಕ್ಕವಳು ‘ವ್ಹಾ.. ವ್ಹಾ!’ ಎಂದಳು. ಆಗ ನಾನು ‘ಇನ್ನೂ ಮುಗಿದಿಲ್ಲ ಮೇಡಂ ನನ್ ಮಾತು’ ಎಂದು ಮುಂದುವರೆಸಿ ‘ತಲೆಯಲ್ಲಿ ಕೂದಲಿಲ್ಲವೆಂದು ಕೊರಗಬೇಡಿ… ತಲೆಯಲ್ಲಿ ಬುದ್ಧಿಯಿಲ್ಲದ ನಿಮ್ಮಂತವರು ಬಹಳ ಮಂದಿ ಇದ್ದಾರೆ’ ಎಂದೆ. ಆಗ ಕಚೇರಿಯವರೆಲ್ಲರೂ ‘ಗೊಳ್’ ಎಂದು ನಕ್ಕರು. ಈಗ ತಬ್ಬಿಬ್ಬಾಗುವ ಸರದಿ ಅವಳದಾಗಿತ್ತು. ‘ಸರ್ ಎಂಥಾ ಮಾತು ಆಡಿಬಿಟ್ರಿ’ ಎಂದು ಅವಳು ಅಂದಿನಿಂದ ಅಣಕವಾಡುವುದನ್ನು ನಿಲ್ಲಿಸಿ ನನ್ನಭಿಮಾನಿಯಾಗಿಬಿಟ್ಟಳು. ತಲೆಯಲ್ಲಿ ಕೂದಲಿಗಿಂತ ತಲೆಯ ಬುದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹಾಗಂತ ತಲೆ ಕೂದಲೇ ಬೇಡ ಅಂತಲ್ಲ… ಇಲ್ಲದ ಮೇಲೆ ಕೊರಗಿದರೆ ಏನು ಫಲ? ಮತ್ತೊಂದಿಷ್ಟು ಕೂದಲು ಕಳೆದುಕೊಳ್ಳಬೇಕಾಗುತ್ತದೆಯಷ್ಟೇ!!

‘ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂಬ ಕಗ್ಗದ ನುಡಿಯಂತೆ ನಾವು ನಮ್ಮ ಹತ್ತಿರ ಏನಿದೆಯೋ ಅದನ್ನು ನೋಡಿ ಖುಷಿ ಪಟ್ಟುಕೊಳ್ಳಬೇಕು. ಇಲ್ಲದಿರುವುದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ಕೊರಗಿ ಆರೋಗ್ಯ ಹಾಳು ಮಾಡಿಕೊಳ್ಳಬಾರದು. ನಿಮ್ಮನ್ನು ಇಷ್ಟಪಡುವವರು ನೀವು ಹೇಗಿದ್ದರೂ ಇಷ್ಟಪಡುತ್ತಾರೆ. ಅದೇ ರೀತಿ ಇಷ್ಟಪಡದವರು ಹೇಗಿದ್ರೂ ಇಷ್ಟಪಡೋದಿಲ್ಲ. ಇರುವ ಸ್ಥಿತಿಯನ್ನು ಒಪ್ಪಿಕೊಳ್ಳಬೇಕು… ಹಾಗಾದಲ್ಲಿ ಮಾತ್ರ ನಾವು ಸುಖವಾಗಿರಲು ಸಾಧ್ಯ. ಆ ಸುಖ ನಿಮ್ಮದಾಗಲಿ. ಬೋಳಾಯ ತಸ್ಮೈ ನಮಃ!!

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

