ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ. ಅದನ್ನೆಲ್ಲ ಯೋಚಿಸಬಾರದು. ಸುಮ್ಮನೆ ಬದುಕಬೇಕು. ಬದುಕು ಬಂದ ಹಾಗೆ. ನಂತರ ಸುಮ್ಮನೆ ಹೋಗಿಬಿಡಬೇಕು. ಮಧ್ಯಾಹ್ನ ಮುಗಿದ ಮೇಲೆ ಸಂಜೆ ಹರಡಿಕೊಳ್ಳುವ ಹಾಗೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಬಂಗಾರಪೇಟೆ ಸುಂದರರಾವ್ ದಂಪತಿಗಳ ವಿವಾಹದ ೫೦ನೇ ವಾರ್ಷಿಕೋತ್ಸವ ಸಮಾರಂಭವು ಎಲ್ಲ ದೃಷ್ಟಿಯಿಂದಲೂ ಚೆನ್ನಾಗಿ ನಡೆಯಿತು. ವಿದೇಶಗಳಲ್ಲಿದ್ದ ಮಕ್ಕಳು, ಮೊಮ್ಮಕ್ಕಳು ಬಂದಿದ್ದರು. ಹೋಮ-ಹವನಗಳಾದವು. ದಾನಧರ್ಮವಾಯಿತು. ಸಂಗೀತ ಕಛೇರಿಯಿತ್ತು. ಸ್ಮರಣ ಸಂಚಿಕೆ ಕೂಡ ಚೆನ್ನಾಗಿ ಮೂಡಿ ಬಂತು. ಸಮಾರಂಭಕ್ಕೆಂದು ಒಟ್ಟು ಮೂರು ಊಟ. ಬೇರೆ ಬೇರೆ ರೀತಿಯ ಭಿನ್ನ ರುಚಿಗಳ ಅಡುಗೆ. ಉಡುಗೊರೆ-ಹಾರ ತುರಾಯಿ ಬೇಡವೆಂದರು.
ಅವರ ಕುಟುಂಬದವರೊಡನೆ ಗುರುತಿಸಿಕೊಳ್ಳಲು, ಒಡನಾಡಲು ಯಾರಿಗೆ ಇಷ್ಟವಿಲ್ಲ? ಅನುಕೂಲಸ್ಥ ಹಿನ್ನೆಲೆ. ಬಂಧು-ಬಾಂಧವರೆಲ್ಲ ವಿದ್ಯಾವಂತರು, ವೃತ್ತಿಪರರು, ಪ್ರಭಾವಶಾಲಿ ಹುದ್ದೆಗಳಲ್ಲಿದ್ದವರು. ಜಗತ್ತಿನಲ್ಲಿ ಆರು ಖಂಡಗಳಿದ್ದರೆ, ೫ ಖಂಡಗಳಲ್ಲಿ ಹರಡಿ ಹೋಗಿದ್ದರು. ಎಲ್ಲಕ್ಕಿಂತ ಮುಖ್ಯವಾದ ಮಾತೆಂದರೆ, ಯಾರೇ ಯಾವುದೇ ಸಹಾಯ ಕೇಳಿದರೂ ಇಲ್ಲವೆನ್ನದೆ, ಅವರ ಕುಟುಂಬ ಜಾಲದ ಯಾವುದಾದರೂ ಒಂದು ತಂತು ಹಿಡಿದು ಕೆಲಸ ಮಾಡಿಸಿಕೊಡುತ್ತಿದ್ದರು.
ಸಮಾರಂಭಕ್ಕೆಂದು ಆಹ್ವಾನಿಸಿದವರಲ್ಲಿ ಯಾರೊಬ್ಬರೂ ಬರುವುದನ್ನು ತಪ್ಪಿಸಿಕೊಳ್ಳಲಿಲ್ಲ. ಚರಿತ್ರೆ, ಸಂದರ್ಭ, ಸನ್ನಿವೇಶ ಹೀಗೆಲ್ಲ ಇರುವಾಗ, ಸಮಾರಂಭದಲ್ಲಿ ಸುಂದರರಾಯರು ತಣ್ಣನೆಯ ಧ್ವನಿಯಲ್ಲಿ ಹೀಗೆ ಹೇಳಿಬಿಟ್ಟರು:
ಎಲ್ಲ ಸರಿ, ಸುಖ, ಸಂಪತ್ತು, ನೆಮ್ಮದಿ, ಪ್ರಸಿದ್ಧಿ ಎಲ್ಲವೂ ಸರಿ. ಆದರೆ ನನಗೆ ಲೈಂಗಿಕತೆಯ ವಿಷಯದಲ್ಲಿ Self-Realization ಆಗಲೇ ಇಲ್ಲ. ಕನಸುಗಳು, ಹಗಲುಗನಸುಗಳು ಹಾಗೇ ಉಳಿದುಬಿಟ್ಟವು. ಹಾಗಿದ್ದರೂ ಮಕ್ಕಳು, ಮೊಮ್ಮಕ್ಕಳು, ನಿರಂತರ ಸುಖ ಎಲ್ಲವೂ ಸಿಕ್ಕಿ, ಎಲ್ಲವೂ ಬೆಳೆಯುತ್ತಾ ಹೋಯಿತು. ಈ ಆತ್ಮಸಾಕ್ಷಾತ್ಕಾರ ಇಲ್ಲದೆ ಕೂಡ ನಾನು ಹಾಗೆಲ್ಲ ಆಗಿದೆ ಎಂದು ಗೊತ್ತಾಗದ ಹಾಗೆ ಕೂಡ ಬದುಕಿದೆ. ಇದು ಗೊತ್ತಾಗುವ ಹೊತ್ತಿಗೆ ಮಂಡಿ ಸವೆದಿತ್ತು, ಹಿಮ್ಮಡಿ ದಿನವೂ ಊದಿಕೊಳ್ಳುತ್ತಿತ್ತು. ತೊಗಲಿನ ಸುಕ್ಕನ್ನು ಮುಚ್ಚಿ ಹಾಕುವುದು ಕಷ್ಟವಾಯಿತು. ಎರಡು ಸಲ valve ಬದಲಾಯಿಸಿದರು. ಮೂರು ಸಲ ಪೊರೆ ತೆಗೆಸಿದರು.
ಆದರೆ ಎಲ್ಲ ಮನುಷ್ಯರಿಗೂ ಸಾವಿನ ಮುಂಚೆ ಆತ್ಮಸಾಕ್ಷಾತ್ಕಾರವಾಗುತ್ತದೆ ಎಂದು ಹಿರಿಯರು ಹೇಳುತ್ತಾರಲ್ಲ ಹಾಗೆ ಈವತ್ತು ಈ ಶುಭ ಸಂದರ್ಭದಲ್ಲಿ ನನಗೆ ನಿಮ್ಮೆಲ್ಲರ ಎದುರಿಗೆ ಹೀಗೆಲ್ಲ ಹೇಳಲು ಸಾಧ್ಯವಾಗುತ್ತಿದೆಯಲ್ಲ, ಅದೇ, ಅಷ್ಟೇ ನನ್ನ ಆತ್ಮಸಾಕ್ಷಾತ್ಕಾರ. ಉಳಿದದ್ದೆಲ್ಲ ನೀರ ಮೇಲಿನ ಗುಳ್ಳೆ.
*****
ಈ ಇಷ್ಟು ಮಾತುಗಳನ್ನು ಕೇಳಿಸಿಕೊಂಡ ನಾವೆಲ್ಲ ತಲೆ ತಗ್ಗಿಸಿದೆವು. ಪಕ್ಕದಲ್ಲಿದ್ದ ನಮ್ಮ ಮುತ್ತೈದೆ ಪತ್ನಿಯರ ಮುಖ ನೋಡಲು ಹೆದರಿಕೆಯಾಗಿ, ಸುಂದರರಾಯರ ಪತ್ನಿ ರುಕ್ಮಿಣಿಯಮ್ಮನ ಮುಖದ ಕಡೆ ನೋಡಿದೆವು. ಅವರ ಮುಖದಲ್ಲಿ ಯಾವ ರೀತಿಯ ಪ್ರತಿಕ್ರಿಯೆಯೂ ಕಾಣಲಿಲ್ಲ. ಸುಂದರರಾಯರು ಮಾತು ಮುಗಿಸಿದ ಮೇಲೆ, ಪತ್ನಿಯು ಅವರ ಎಡಭುಜವನ್ನು ಎರಡು ಸಲ ಸವರಿದರು. ನಂತರ ರುಕ್ಮಿಣಿಯಮ್ಮ ಮಾತನಾಡಿದರು. ಧ್ವನಿ ಸ್ವಲ್ಪ ತೇವವಾಗಿದ್ದುದು ಎಲ್ಲರಿಗೂ ಕಾಣಿಸಿತು, ನಂತರ ಕೇಳಿಸಿತು:
ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ. ಅದನ್ನೆಲ್ಲ ಯೋಚಿಸಬಾರದು. ಸುಮ್ಮನೆ ಬದುಕಬೇಕು. ಬದುಕು ಬಂದ ಹಾಗೆ. ನಂತರ ಸುಮ್ಮನೆ ಹೋಗಿಬಿಡಬೇಕು. ಮಧ್ಯಾಹ್ನ ಮುಗಿದ ಮೇಲೆ ಸಂಜೆ ಹರಡಿಕೊಳ್ಳುವ ಹಾಗೆ. ಇದೆಲ್ಲವೂ ದೊಡ್ಡ ಮಾತೇ. ಹೇಳಬಾರದಿತ್ತು ಹೇಳಿಬಿಟ್ಟೆ. ನಾವು ಎಷ್ಟೇ ಸಾಮಾನ್ಯರಾಗಿದ್ದರೂ ಮಾತಾಡಲು ಹೋದರೆ ತಕ್ಷಣ ಮಾತುಗಳು ಮಾತ್ರ ನಮಗಿಂತ ದೊಡ್ಡದಾಗಿರುತ್ತವೆ, ದಪ್ಪಗಾಗಿರುತ್ತವೆ.
ನಾನೇ ಹೇಳಬಹುದಾದ ನಿಜವಾದ ಮಾತೆಂದರೆ, ನನಗೆ ಮದುವೆಗೆ ಮುಂಚೆಯೇ ಕಾಮದ ಬಗ್ಗೆ, ಗಂಡು-ಹೆಣ್ಣಿನ ಸಂಬಂಧ, ಪ್ರೀತಿಯ ಬಗ್ಗೆ, ಮದುವೆಯ ಬಗ್ಗೆ ನಿರರ್ಥಕ ಭಾವನೆ ಇತ್ತು. ಎಲ್ಲವೂ ಸಪ್ಪೆಯೆನಿಸುತ್ತಿತ್ತು. ನಮ್ಮದು ಜೋಡಿದಾರರ ಕುಟುಂಬ. ನಮ್ಮ ಬಂಧುಗಳಲ್ಲೇ ಎಂಟು ಜನ ಬಾಲವಿಧವೆಯರಿದ್ದರು. ಆರು ಜನ ಸೋದರ ಸಂಬಂಧಿಗಳಿಗೆ ಮದುವೆಯೇ ಆಗಿರಲಿಲ್ಲ, ಆಗಲೂ ಇಲ್ಲ. ಅವರು ಕೂಡ ನಮ್ಮ ಹಾಗೇ ಮಲಗುತ್ತಿದ್ದರು, ಕೂರುತ್ತಿದ್ದರು, ಏಳುತ್ತಿದ್ದರು. ಅವರವರ ಕೆಲಸ ಅವರು ಮಾಡಿಕೊಂಡು ಯಾರ ಯಾರದೋ ಮನೆಗಳಲ್ಲಿ ಜೀವನ ಯಾಪನೆ ಮಾಡುತ್ತಿದ್ದರು. ಅವರಲ್ಲೇ ಕೆಲವರು ನನ್ನ ನಾಲ್ಕೂ ಬಾಣಂತನವನ್ನು ನಗನಗತಾ ಮಾಡಿದರು. ನನ್ನೆದುರಿಗೆ ಯಾವತ್ತೂ ಅತ್ತವರಲ್ಲ. ಒಬ್ಬಳಂತೂ ನಕ್ಕಾಗ ಅವಳ ಎರಡು ಹುಳುಕಲ್ಲುಗಳು ಚೆನ್ನಾಗಿಯೇ ಕಾಣುತ್ತಿತ್ತು. ಯಾವತ್ತೂ ಅವರು ಅದೃಷ್ಟ-ದುರಾದೃಷ್ಟ ಎಂಬ ಮಾತನ್ನು ಅಡಿದವರೇ ಅಲ್ಲ. ಕೆಲವರಂತೂ ನಿದ್ರೆಯಲ್ಲೇ ಸತ್ತು ಹೋದರು. ಅವರಿಗೆಲ್ಲ ತಾವು ಸಾಯುತ್ತೇವೆಂದು ಕೂಡ ಗೊತ್ತಾಗದೆ ಹೋಗಿರಬಹುದು. ಗೊತ್ತಾಗಬೇಕೆಂಬ ಆಸೆ ಕೂಡ ಅವರಿಗಿಲ್ಲದೆ ಹೋಗಿರಬಹುದು.

ನಾನು ಸುಂದರರಾಯರನ್ನು ಮದುವೆಯಾಗಲು ಕಾರಣ ಸುಂದರರಾಯರಲ್ಲ, ಸುಂದರರಾಯರ ತಂದೆ. ನನ್ನನ್ನು ನೋಡಲು ಮಗನ ಜೊತೆ ಬಂದಿದ್ದರಲ್ಲ ಎಷ್ಟೊಂದು ಆಸ್ಥೆ ಅವರಿಗೆ ಮಗನ ಬಗ್ಗೆ, ಮಗನ ಮೂಲಕ ಬರುವ ಸೊಸೆಯ ಬಗ್ಗೆ. ನಾನು ಸಾಧಾರಣವಾಗಿ ಪದಗಳನ್ನು ನುಂಗಿಕೊಂಡು ಹೇಳಿದ ಭಾಮೆಯ ನೋಡಲು ತಾ ಬಂದ ಹಾಡಿಗೆ ಮುಖ ಅರಳಿಸಿ, ತಾಳ ಹಾಕಿ, ಒಟ್ಟು ಎಷ್ಟು ಕೀರ್ತನೆ ಬಾಯಿಪಾಠ ಆಗಿದೆ ಮಗು ಎಂದು ಕೇಳಿದರಲ್ಲವಾ ಅವರು. ಸಂದರ್ಶನದುದ್ದಕ್ಕೂ ಅವರದೇ ಮಾತು, ಅವರದೇ ನಗು. ಎಷ್ಟೊಂದು ವಾತ್ಸಲ್ಯ ತುಂಬಿದ ಕಣ್ಣುಗಳಿಂದ ಅವರು ನೋಡುತ್ತಿದ್ದರು. ಇಲ್ಲ ಇಲ್ಲ ಈ ಹಿರಿಯರು ನನ್ನನ್ನು ಚೆನ್ನಾಗಿ ಬಾಳಿಸುತ್ತಾರೆಂದು ಅನಿಸಿತು. ಹಾಗಾಗಿ ನಾನು ಸುಂದರರಾಯರನ್ನು ಮದುವೆಯಾಗಲು ಒಪ್ಪಿಕೊಂಡೆ.
ಈ ಸಮಾರಂಭಕ್ಕೆ ಬಂದು ಶುಭ ಹಾರೈಸಿದ ನಿಮಗೆಲ್ಲ ನಮ್ಮೆಲ್ಲರ ವಂದನೆಗಳು.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

