Advertisement
ಎಡಿಟರಾದ ನಾನು… ಮತ್ತು ನರಿ ತಿಂದ ನಸುಗುನ್ನಿಕಾಯಿ…: ಎಚ್. ಗೋಪಾಲಕೃಷ್ಣ ಸರಣಿ

ಎಡಿಟರಾದ ನಾನು… ಮತ್ತು ನರಿ ತಿಂದ ನಸುಗುನ್ನಿಕಾಯಿ…: ಎಚ್. ಗೋಪಾಲಕೃಷ್ಣ ಸರಣಿ

ವಿವರಣೆ ಕೊಟ್ಟೆ ಹೀಗೆ… ಈಗ ನೋಡಿ ನೀವು ಇಷ್ಟು ಇದೀರಿ. ನಾನು ಹೀಗಿದ್ದೀನಿ. ಎರಡನ್ನೂ ಸೇರಿಸಲು ಸಾಧ್ಯವೇ…..?” ಅಂದೆ. ಅವರಿಗೆ ತಾನು ಕುಳ್ಳು ಎನ್ನುವ ಹೆರೆಡಿಟರಿ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಈ ಎಕ್ಸಾಂಪಲ್ ಕೊಡ್ತಾ ಇರ್ಲಿಲ್ಲ. ಇದು ಆಮೇಲೆ ಯಾವಾಗಲೋ ಗೊತ್ತಾಗಿದ್ದು. ಪಾಪ ಅವರಿಗೆ ಅಷ್ಟೊಂದು ಜನರೆದುರು ನೆತ್ತಿ ಮೇಲೆ ಮೊಟಕಿದ ಹಾಗಾಗಿರಬೇಕು. ಒಂದೇ ವಾಕ್ಯ ಗಟ್ಟಿಯಾಗಿ ಹೇಳಿ ಅಲ್ಲಿಂದ ದೂರ ಸರಿದರು. ಅವರು ಹೇಳಿದ ವಾಕ್ಯ ಏನು ಗೊತ್ತಾ?
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೨ನೇ ಬರಹ ನಿಮ್ಮ ಓದಿಗೆ

ಹಿಂದಿನ ಎಪಿಸೋಡು ಹೀಗೆ ಮುಗಿಸಿದ್ದೆ..

ಹಾಸ್ಯೋತ್ಸವದಂತಹ ಕಾರ್ಯಕ್ರಮಗಳಿಂದ ಸಾಹಿತ್ಯಕ ಪ್ರಯೋಜನಗಳಿವೆಯೇ ಎನ್ನುವ ಪ್ರಶ್ನೆ ಮೊದಲಿಂದ ಕಾಡಿದೆ. ಬೌದ್ಧಿಕ ಮಟ್ಟ ಹೆಚ್ಚುತ್ತದೆ ಮತ್ತು ಹೊಸ ಯೋಚನೆಗಳು, ಚಿಂತನೆಗಳು ಹುಟ್ಟುತ್ತವೆ ಎಂದು ಸಾರಸ್ವತ ಲೋಕ ಗುರುತಿಸಿದೆ. ಹಾಸ್ಯ ಎನ್ನುವುದು ಹೊಟ್ಟೆ ತುಂಬಿದವರ ಉಸಾಬರಿ ಎನ್ನುವ ಲೇವಡಿ ಮಾತು ಮೊದಮೊದಲು ಕಿವಿಗೆ ಬೀಳುತ್ತಿತ್ತು. ಆದರೆ ಹಾಸ್ಯ ಬರೆಯಲು ಹೊರಟರೆ ಒಂದೇ ಒಂದು ಅಕ್ಷರವೂ ಜನ್ಮ ತಳೆಯದೆ ಕಕ್ಕಾಬಿಕ್ಕಿ ಆದವರು ನನಗೆ ಗೊತ್ತು. ಅಂತಹವರೂ ಸಹ ಅವರ ನಿಲುವಿನಿಂದ ಹೊರಬಂದಿದ್ದಾರೆ. ಒಟ್ಟಾರೆ ನಮ್ಮ ಶ್ರಮದಿಂದ ಈ ಪ್ರಾಕಾರಕ್ಕೆ ಹೊಸ ರಕ್ತ ತುಂಬಿದ ತೃಪ್ತ ಮನೋಭಾವ ನಮ್ಮ ಪೀಳಿಗೆಯವರಲ್ಲಿದೆ, ನಮಗಿದೆ!

ನಾಡಿನ ಪತ್ರಿಕೆಗಳು ನಮ್ಮ ಕಾರ್ಯಕ್ರಮಗಳಿಗೆ ಉತ್ತಮ ಪ್ರಚಾರ ಕೊಟ್ಟಿವೆ, ಕಾರ್ಯಕ್ರಮದ ಸುದ್ದಿ ಹರಡಿವೆ ಮತ್ತು ನಮ್ಮ ನೆರವಿಗೆ ಬಂದಿವೆ.

ವಾರಕ್ಕೊ ತಿಂಗಳಿಗೊ ಒಮ್ಮೆ ಹಾಸ್ಯ ಬರಹ ಪ್ರಕಟವಾಗುತ್ತಿದ್ದ ಕಾಲದಲ್ಲಿ ಮಹತ್ವ ಆಕಾಂಕ್ಷೆ ಇಲ್ಲದೇ ಈ ಪ್ರಾಕಾರವನ್ನು ಅಪ್ಪಿಕೊಂಡವರು ನಮ್ಮ ಪೀಳಿಗೆಯವರು. ಈಗ ಈ ಪ್ರಾಕಾರ ಹುಲುಸಾಗಿ ಬೆಳೆದಿರುವ ರೀತಿ ನೋಡಿದರೆ ನಮ್ಮ ಅರಿವಿಲ್ಲದೆ ನಾವು ಬಿತ್ತಿದ ಬೀಜ ಮರವಾಗಿರುವುದನ್ನು ನೋಡುವ ಸಂತೋಷ ಅಪ್ಪುತ್ತದೆ…..

ಈಗ ಮುಂದಕ್ಕೆ ಹೋಗೋಣವೇ….

ಉತ್ಸವಗಳು ನಡೆಯುವ ತನಕ ಅದರಲ್ಲಿ ನೇರವಾಗಿಯೋ ಪರೋಕ್ಷವಾಗಿಯೋ ಭಾಗವಹಿಸುವವರು ತುಂಬಾ ಚಟುವಟಿಕೆಗಳಿಂದ ತುಂಬಿರುತ್ತಾರೆ ಎಂದು ಸಾರ್ವಜನಿಕ ಅಭಿಮತ ಮತ್ತು ಅದು ಅನುಭವ ಸಹ. ಇಂತಹ ಕ್ರಿಯಾಶೀಲರು ಉತ್ಸವಗಳು ಮುಗಿದ ನಂತರ ಒಂದೆರೆಡು ತಿಂಗಳು ಒಂದು ರೀತಿ kicks ನಲ್ಲಿರುತ್ತಾರೆ. Kicks ಅಂದರೇನು ಅಂದರೆ ಯಶಸ್ಸಿನ ಅಮಲು ತಲೆ ತುಂಬಿರುತ್ತೆ ನೋಡಿ ಅದಕ್ಕೆ ಈ ಹೆಸರು! ಇದು ಕೆಲವು ಸಲ ಉತ್ತುಂಗ ಮುಟ್ಟುತ್ತದೆ ಮತ್ತು ಕೂತಲ್ಲಿ ನಿಂತಲ್ಲಿ ಇದೇ ಮಬ್ಬು ಆವರಿಸಿರುತ್ತದೆ. ಕುಂತಲ್ಲೂ ಅವಳೇ ನಿಂತಲ್ಲೂ ಅವಳೇ ಅವಳೇ ನನ್ನ ಗೆಣೆಗಾತಿ… ಅಂತ ಒಂದು ಜಾನಪದ ಹಾಡು ಇದೆ ಗೊತ್ತಲ್ಲಾ, ಆ ಹಾಡು ಸೃಷ್ಟಿಯಾಗಿದ್ದೇ ಈ kick ಪೀಡಿತರನ್ನು ನೋಡಿ ಎಂದು ನನ್ನ ಪ್ರಬಲವಾದ ನಂಬಿಕೆ. ಈ kick ಹಲವರನ್ನು ಹಲವು ರೀತಿ ಬಾಧಿಸುತ್ತದೆ. ಅದರ ಬಗ್ಗೆ ಒಂದು ಪುಟ್ಟ ಫುಟ್ ನೋಟ್ ಹಾಕಿಬಿಡ್ತೀನಿ, ನೆನಪು ಆವಿಯಾಗುವ ಮೊದಲು..

ಮೊದಲಿಗೆ ನನ್ನ ಸ್ವಾನುಭವದ ಮೇಲೆ ಈ kick ಉದ್ಭವಿಸುವ ಸಂದರ್ಭಗಳನ್ನು ಪಟ್ಟಿಸಿ (ಅಂದರೆ ಪಟ್ಟಿ ಮಾಡಿ!)ಹೇಳಿಬಿಡುತ್ತೇನೆ.

ಒಂದು ಪುಟ್ಟ ನಾಲ್ಕು ಸಾಲಿನ ಒಂದು ಕವನ ನೀವು ಬರೆದಿರೋದು ಯಾವುದೋ ಪತ್ರಿಕೆಯಲ್ಲಿ ಬೆಳಕು ಕಂಡಿತು ಅಂತ ಇಟ್ಟುಕೊಳ್ಳಿ…

ನಿಮ್ಮ ಯಾವುದೋ ಒಂದು ಪುಟ್ಟ ಲೇಖನ ಎಲ್ಲೋ ಅಚ್ಚಾಗಿದೆ ಅಂತ ಇಟ್ಟುಕೊಳ್ಳಿ..

ನೀವು ಯಾವುದೋ ಆರೇಳುಜನರ ಗುಂಪಿನಲ್ಲಿ ಆಡಿದ ಒಂದೂವರೆ ನಿಮಿಷದ ಮಾತು ಯಾರೋ ಮೆಚ್ಚಿದರು ಅಂತ ಇಟ್ಟುಕೊಳ್ಳಿ..

ಎಲ್ಲೋ ಒಂದು ಮೈಕ್‌ನಲ್ಲಿ ಒಂದು ಹಾಡು ಹಾಗೆ ಗುಣುಗಿರುತ್ತೀರಿ. ಅದರ ಕುರಿತು ನಿಮ್ಮ ಗೆಳೆಯಾನೋ ಗೆಳೆತಿಯೋ ಮೆಚ್ಚುಗೆ ಸೂಚಿಸಿದ್ದಾರೆ ಅಂತ ಇಟ್ಟುಕೊಳ್ಳಿ…

ನಿಮ್ಮ ಮನೆ ಮುಂದಿನ ಲೈಟ್ ಕಂಬದ ದೀಪ ಉರಿಯುತ್ತಿಲ್ಲ. ಹತ್ತು ಹದಿನೈದು ವರ್ಷದ ಮೊದಲಾಗಿದ್ದರೆ ಇದು ಪತ್ರಿಕೆಯ ವಾಚಕರ ವಾಣಿ ಸುದ್ದಿ. ಈಗ ಪತ್ರಿಕೆಗಳು ಇಂತಹ ಕ್ಷುಲ್ಲಕ ಸುದ್ದಿ ಹಾಕೋದಿಲ್ಲ. ನೀವೇನು ಮಾಡ್ತೀರಿ? ನಿಮ್ಮ ವಾಟ್ಸಾಪ್ ಗುಂಪಿನಲ್ಲಿ ಒಂದು ಲೇಖನ ಬರೀತೀರಿ. ಕಂಬದಲ್ಲಿ ಲೈಟ್ ಇಲ್ಲದೇ ಇರೋದರಿಂದ ಆಗುತ್ತಿರುವ ಅನಾಹುತಗಳ ಉದ್ದನೆ ಪಟ್ಟಿ (ಇದರಲ್ಲಿ ಸರಗಳ್ಳತನ, ಹೆಣ್ಣು ಮಕ್ಕಳಿಗೆ ರೌಡಿಗಳಿಂದ ಹಿಂಸೆ, ಬೀದಿ ನಾಯಿ ಕಚ್ಚುವುದು, ಕುಡುಕರ ಹಾವಳಿ…. ಹೀಗೆ )ನಿಮ್ಮ ಲೇಖನದಲ್ಲಿ ಅನಾವರಣಗೊಂಡಿರುತ್ತೆ. ಅದನ್ನು ನಿಮ್ಮ ವಾಟ್ಸಾಪ್ ಗುಂಪಿನ ಗೆಳೆಯರು ಮೆಚ್ಚಿ ಆರೇಳು ಜನ ತಮ್ಸ್ ಅಪ್ ಮುದ್ರೆ ಕೊಟ್ಟಿದ್ದಾರೆ… ಅಂತ ಇಟ್ಕೊಳ್ಳಿ.

ಇಂತಹ “ಇಟ್ಕೊಳ್ಳಿ”ಯ ಕೇಂದ್ರ ವಸ್ತು ನೀವು ಅಂತ ಮತ್ತೊಂದು ಊಹೆ ಖಂಡಿತ ಮಾಡಿ. ಆಯ್ತಾ?

ಇಂತಹ ಅಪೂರ್ವ ಅನುಭವಗಳ ಹಿಂದೆ ನೀವು ಇದ್ದರೆ ನಿಮಗೆ ಒಂದು ರೀತಿಯ euphoric(ಅಂದರೆ ಅತಿಯಾದ ಸಂತೋಷದಿಂದ ಕೂಡಿದ, ಪರಮಾನಂದದ, ತುಂಬಾ ಉಲ್ಲಾಸಭರಿತ ಎಂಬ ಅರ್ಥ)ಖುಷಿ ಹುಟ್ಟುತ್ತೆ ಮತ್ತು ನೀವು ಕಾಮನ ಬಿಲ್ಲಿನ ಮೇಲಿನ ತುದಿಯಲ್ಲಿ ಕೂತು ಕೆಳಗಿನ ಪ್ರಪಂಚವನ್ನು ಅವಲೋಕಿಸುತ್ತೀರಿ! ಇಂತಹ ರೀತಿಯ euphoric attack ಇದೆಯಲ್ಲಾ ಅದನ್ನು ನಾವು ಹೆಚ್ಚು ಓದಿಲ್ಲದ, ಪಾಂಡಿತ್ಯ ಇಲ್ಲದ, ವಿದ್ವತ್ ರಹಿತರು ಹಾಗೂ ಕಾರಖಾನೆಗಳಲ್ಲಿ ದುಡಿಯುವ ಪ್ರೊಲೆಟೇರಿಯನ್ಸ್‌ಗಳು kicks ಅಂತ ನಾಮಕರಣ ಮಾಡಿದ್ದೇವೆ. ಅಂದಹಾಗೆ ನಿಮಗೆ ನಾನು ಸಭ್ಯ ಸಮಾಜದ ಉದಾಹರಣೆ ಕೊಟ್ಟೆ. ಸಭ್ಯ ಅಲ್ಲದೇ ಇರೋ ಅಸಭ್ಯರ kicks ಅಂದರೆ ಕಂಠ ಪೂರ್ತಿ ಮತ್ತಿನ ಪಾನೀಯ ಕುಡಿಯೋದು ಮತ್ತು ಗಟಾರದಲ್ಲಿ ಪಲ್ಟಿ ಹೊಡೆಯೋದು. ಇನ್ನೂ ಒಂದು ತರಹದ kicks ಅಂದರೆ ಅದು ಸಭ್ಯ ಅಸಭ್ಯ ನಡುವಿನದ್ದು. ಅದು ಯಾವುದಪ್ಪಾ ಅಂದರೆ ಹೊಟ್ಟೆ ಬಿರಿಯ ಉಂಡು ಕೈ ತೊಳೆಯುವ ಮೊದಲೇ ಗೊರಕೆ ಹೊಡೆಯೋದು. ಸಭ್ಯ ಅಸಭ್ಯ ನಡುವಿನ ಗೆರೆ ತುಂಬಾ ತೆಳುವಾದದ್ದು ಮತ್ತು ಅವೆರೆಡನ್ನೂ ನಿಖರವಾಗಿ ಬೇರೆಬೇರೆ ಮಾಡುವುದು ಕೊಂಚ ತಲೆನೋವಿನ ಕೆಲಸ.

ಇಂತಹ kicks ಜನ್ಮ ಪೂರ್ತಿ ಕೆಲವರಲ್ಲಿ ಇರುತ್ತೆ. ಮತ್ತೆ ಕೆಲವರಲ್ಲಿ ಮುಂದಿನ kicks ಅನುಭವ ಆಗುವ ತನಕ ಅಷ್ಟೇ. ಕೆಲವರಲ್ಲಿ ಒಂದಾದನಂತರ ಮತ್ತೊಂದು ಯಶಸ್ಸು ಸಿಕ್ಕುತ್ತಾ ಮೇಲೆಮೇಲೆ ಹೋಗ್ತಾರೆ ನೋಡಿ ಅವರಿಗೆ ಮೊದಮೊದಲಿನದ್ದು ನೆನಪಿನಿಂದ ಕರಗಿಬಿಡುತ್ತವೆ. ಕಾರಣ ಅವರಿಗೆ ಹೊರೆ ಜಾಸ್ತಿ ಆಗಿರುತ್ತೆ. ಹೊರೆ ಅಂದೇನಾ? ಹೊರೆ ಕುರಿತ ಹಾಗೆ ಆಳದಲ್ಲಿ ಹೂತುಹೋಗಿದ್ದ ಒಂದು ನೆನಪು ಈಗ ಎದ್ದು ಆಚೆ ಬಂದು ತಲೆ ತಿನ್ನುತ್ತಿದೆ. ಮೊದಲು ಅದನ್ನು ಹೇಳಿಬಿಡ್ತೇನೆ. ಒಂದು ಪ್ರಬಂಧಗಳ ಸಂಕಲನದ ಸಂಪಾದಕ ನಾನಾಗಿದ್ದೆ. ಇದು ಸುಮಾರು ಹಿಂದಿನ ಸ್ಟೋರಿ. ಸುಮಾರು ಬರಹಗಾರರಿಂದ ಒಳ್ಳೊಳ್ಳೆಯ ಪ್ರಬಂಧ ತರಿಸಿಕೊಂಡು ದಪ್ಪನೆಯ ಪುಸ್ತಕವನ್ನು ತುಂಬಾ ಶ್ರಮವಹಿಸಿ ಚೆನ್ನಾಗಿ ಪ್ರಿಂಟ್ ಮಾಡಿಸಿ ಬಿಡುಗಡೆ ಸಹ ಮಾಡಿದೆವು. ಕೆಲವರ (ಕೆಲವರ ಏನು ಸುಮಾರು ಎಲ್ಲರ)ಲೇಖನ ಸುಮಾರು ಎಡಿಟ್ ಆಗಿದ್ದವು. ಪುಸ್ತಕದ ಗಾತ್ರ ಮಿತಿ ಮೀರಿತು. ಅದರಿಂದ ನಮ್ಮ ಪ್ರಕಾಶಕರು ಲೇಖಕರ ಪರಿಚಯ ಬೇಡಿ ಸಾರ್, ಅದೇ ನೂರಾ ಅರವತ್ತು ಪುಟ ಆಗಿಬಿಡುತ್ತೆ ಅನ್ನುವ ಯೋಚನೆ ಹೇಳಿದರು. ಪೂರ್ತಿ ಪ್ರಕಟಣೆ ಭಾರ ಅವರದ್ದು ಅಂದರೆ ಕಾಸು ಹಾಕೋದು ಅವರು ಮತ್ತು ಆರ್ಥಿಕವಾಗಿ ನಾವು ದೂರ ಇದ್ದೆವು. ಅವರ ಸಲಹೆಯಂತೆ ಪುಸ್ತಕ ಮುದ್ರಣವಾಗಿ ಹೊರಬಂದಿತು. ದೊಡ್ಡ ಗಾತ್ರದ ಒಳ್ಳೆಯ ಕಾಗದ ಹಾಕಿದ ಮುದ್ದಾದ ಮುಖ ಚಿತ್ರ ಹೊತ್ತ ಆಕರ್ಷಣೀಯ ಹೆಸರೂ ಸಹ ಹೊಂದಿದ್ದ ಪುಸ್ತಕ ಅದು..

ಪುಸ್ತಕ ಬಿಡುಗಡೆ ಆಗಿ ಲೇಖಕರ ಸಮಾಗಮ ಅಲ್ಲೇ ನಡೆದಿತ್ತು. ಅದಕ್ಕೆ ಮೊದಲು ಬಾದಾಮಿ ಹಾಲು, ಗ್ಲುಕೋಸ್ ಬಿಸ್ಕತ್ ಹಂಚಿದ್ದೆವು. ನಂತರ ವರ್ಕಿಂಗ್ ಲಂಚ್ ಎಂದು ಬಿಸಿಬೇಳೆ ಭಾತ್ ಮತ್ತು ಮೊಸರನ್ನ, ಜತೆಗೆ ಜಾಂಘಿರಿ ಇತ್ತು. ಪ್ರಸಂಗದ ನೆನಪು ಬಂತಲ್ಲಾ ಅದಕ್ಕೆ ಎಲ್ಲವನ್ನೂ ಒದರುತ್ತಾ ಇದೀನಿ!

ಕಾರ್ಯಕ್ರಮದ ನಂತರ ಗೆಳೆಯ ಬರಹಗಾರರು ಗುಂಪು ಸೇರಿ ವೇದಿಕೆ ಬಳಿ ಬಂದರು. ಮೊದಲಿನವರ ಪ್ರಶ್ನೆ “ನನ್ನ ಲೇಖನದ ಒಂದೂವರೆ ಪ್ಯಾರಾ ಇಲ್ಲ. ಅದನ್ನು ಯಾರು ತೆಗೆದದ್ದು….”.

“ಸಾರ್. ನಾನೇ ಎಡಿಟ್ ಮಾಡಿದ್ದು. ಎರಡೂ ಪ್ಯಾರಾ ಒಂದೇ ರೀತಿ ಇತ್ತು. ನಾನು ಅದನ್ನು ಮರೆತು ಎರಡೆರಡು ಸಲ ಕಾಪಿ ಅಂಡ್ ಪೇಸ್ಟ್ ಮಾಡಿದೀರಿ ಅಂದ್ಕೊಂಡೆ. ಈಗಲೂ ಓಟದಲ್ಲಿ ಅದೇ ಸ್ಪೀಡ್ ಇದೆ ನೋಡಿ….” ಅಂದೆ.

“ಹೋಗಯ್ಯಾ ನಾನು ಎಡಿಟರು. ನನಗೆ ಯಾವುದು ಸರಿನೋ ಅದೇ ಮಾಡೋದು. ನೀನ್ಯಾವನು ನನ್ನ ಕೇಳೋದಿಕ್ಕೆ…” ಅಂತ ಅಲ್ಲೇ ಅವರ ಶೇಪ್ (ಅಂದರೆ ಇಲ್ಲಿನ ಅರ್ಥ ಮರ್ಯಾದೆ!)ತೆಗಿಬಹುದಿತ್ತು. ಆದರೆ ನಾನು ಜೆಂಟಲ್ಮನ್ ನೋಡಿ ಅದರಿಂದ ಹಾಗೆ ಹೇಳಿದೆ. ಅವರು ಮಾರುತ್ತರ ಕೊಡುವಷ್ಟರಲ್ಲಿ ಅವರ ಜತೆಗೆ ಸಾಥ್ ಕೊಡಲು ಬಂದ ಮತ್ತೊಬ್ಬರು ಇನ್ನೊಂದು ಪ್ರಶ್ನೆ ಎಸೆದರು “ನಿಮ್ಮ ಬಗ್ಗೆ ಅಂದರೆ ಲೇಖಕರ ಬಗ್ಗೆ ಪುಟ್ಟ ಟಿಪ್ಪಣಿ ಬರೆದುಕೊಡಿ ಅಂತ ನಮ್ಮ ವಿವರ ಕೇಳಿದ್ರಿ. ನಾನೇ ನನ್ನ ಬಗ್ಗೆ ಹನ್ನೆರಡು ಪುಟ ಟೈಪ್ ಮಾಡಿ ಕೊಟ್ಟಿದ್ದೆ. ಅದೇ ಇಲ್ವಲ್ಲಾ….”

“ಓಹ್ ಅದಾ ಸಾರ್? ಅದೇನೇ ಆರು ಫಾರ್ಮ್ ಆಗುತ್ತೆ. ಪುಸ್ತಕದ ಗಾತ್ರ ಹೆಚ್ಚುತ್ತೆ

ಅದನ್ನ ಬಿಟ್ ಬಿಡೋಣ ಅಂದರು ಪ್ರಕಾಶಕರು…” ಅಂದೆ. ಒಂದು ಫಾರ್ಮ್ ಅಂದರೆ ಹದಿನಾರು ಪುಟದ ಒಂದು ಗೊಂಚಲು. ಇದು ಪ್ರಿಂಟಿಂಗ್ ಪಾರಿಭಾಶಿಕ ಪದ. ಈಗ ಈ ಫಾರ್ಮ್‌ಗೆ ಅದೇನು ಕರೀತಾರೆ ಅಂತ ತಿಳಿಯದು.

ಸ್ನೇಹಿತರು ಕನ್ವಿನ್ಸ್ ಆಗಲಿಲ್ಲ.

“ಅದು ಹೇಗೆ ಜಾಸ್ತಿ ಆಗುತ್ತೆ?” ಅಂತ ದನಿ ಏರಿಸಿದರು.

ವೇದಿಕೆ ಅಂಚಿನಲ್ಲಿ ಮೇಲೆ ನಾನು ಇದ್ದದ್ದು. ವೇದಿಕೆ ಕೆಳಗೆ ಅವರು ಇದ್ದದ್ದು, ಎದುರು ಬದುರು. ನನಗಿಂತ ಎರಡು ಮೂರು ಅಡಿ ಕುಳ್ಳಗೆ ಕಾಣುತ್ತಿದ್ದರು. ಆಗ ವೇದಿಕೆ ಮೇಲೆ ನಾನು ಇದ್ದದ್ದರಿಂದ. ಹಾಗೆ ನೋಡಿದರೆ ನಾನು ಎಲ್ಲರನ್ನೂ ಕುಳ್ಳು ಅಂತಲೇ ಹೇಳೋದು, ಯಾಕೆ ಅಂದರೆ ನಾನು ಆರಡಿ!

“ಅದು ಹೇಗೆ ಜಾಸ್ತಿ ಆಗುತ್ತೆ?” ಅಂದ್ರಾ. ಅದನ್ನು ಅವರಿಗೆ ವಿವರಿಸಿ ಹೇಳದೇ ಇದ್ದರೆ ಹೇಗೆ? ಅವರು ನನ್ನ ಬಗ್ಗೆ ತಪ್ಪು ತಿಳಿಯಬಾರದು ತಾನೇ?

ವಿವರಣೆ ಕೊಟ್ಟೆ ಹೀಗೆ… ಈಗ ನೋಡಿ ನೀವು ಇಷ್ಟು ಇದೀರಿ (ಅಂತ ನನ್ನ ಎಡಗೈ ಮೇಲೆ ಬಲಗೈ ಮುಖಾ ಮುಖಿ ಆಗುವ ಹಾಗೆಮಾಡಿದ್ದೆ, ಮಧ್ಯೆ ಒಂದಡಿ ಗ್ಯಾಪ್ ಇತ್ತು ). ನಾನು (ಈಗ ಎಡಗೈ ಮೇಲೆ ಬಲಗೈ ಮುಖಾ ಮುಖಿ ಆಗುವ ಅಂತರ ಮೂರು ಅಡಿಗೆ ಹೆಚ್ಚಿಸಿದ್ದೆ) ಹೀಗಿದ್ದೀನಿ. ಎರಡನ್ನೂ ಸೇರಿಸಲು ಸಾಧ್ಯವೇ…..?” ಅಂದೆ. ಅವರಿಗೆ ತಾನು ಕುಳ್ಳು ಎನ್ನುವ ಹೆರೆಡಿಟರಿ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಈ ಎಕ್ಸಾಂಪಲ್ ಕೊಡ್ತಾ ಇರ್ಲಿಲ್ಲ. ಇದು ಆಮೇಲೆ ಯಾವಾಗಲೋ ಗೊತ್ತಾಗಿದ್ದು. ಪಾಪ ಅವರಿಗೆ ಅಷ್ಟೊಂದು ಜನರೆದುರು ನೆತ್ತಿ ಮೇಲೆ ಮೊಟಕಿದ ಹಾಗಾಗಿರಬೇಕು. ಒಂದೇ ವಾಕ್ಯ ಗಟ್ಟಿಯಾಗಿ ಹೇಳಿ ಅಲ್ಲಿಂದ ದೂರ ಸರಿದರು. ಅವರು ಹೇಳಿದ ವಾಕ್ಯ ಏನು ಗೊತ್ತಾ?

“ಕಸದ ಬಂಡಿಗೆ ಮೊರ ಭಾರವೇ..” ಈ ವಾಕ್ಯ ಸುಮಾರು ವರ್ಷದಿಂದ ನನ್ನ ತಲೆಯ ಒಂದು ಮೂಲೆಯಲ್ಲಿ ಭದ್ರವಾಗಿ ಕುಳಿತುಬಿಟ್ಟಿದೆ! ಆಗಾಗ ಬೇಡದೆ ಇರೋ ಹೊತ್ತಿನಲ್ಲಿ ಒದ್ದುಕೊಂಡು ಮೆದುಳಿನ ಮೊದಲನೇ ಪದರಕ್ಕೆ ನುಗ್ಗಿ ಬರುತ್ತೆ. ಬಹುಶಃ ಈಗಲೂ ಹಾಗೇ ಬಂದಿರಬಹುದು.

ಕಸದ ಬಂಡಿಗೆ ಮೊರ ಭಾರವೇ… “ಇದರ ವಿವರಣೆ ಹೇಗೆ ಅಂದರೆ ಒಂದು ಬಂಡಿ ತುಂಬಾ ಕಸ ಒಯ್ತಾ ಇದಾರೆ ನಮ್ಮ ಕಾರ್ಪೋರೇಷನ್ ಅವರು ಅಂತ ನೆನೆಸಿಕೊಳ್ಳಿ. ಗಾಡಿ ಹಿಂದೆ ನೀವು ಹೋಗಿ ಕಸದ ರಾಶಿ ಮೇಲೆ ನಿಮ್ಮನೆ ಮೊರ ಹಾಕ್ತೀರಿ. ಗಾಡಿಗೆ ಇದು ಭಾರವೇ? ಬಳ್ಳಿಗೆ ಕಾಯಿ ಭಾರವೇ… ಹಳೇ ಹಾಡು ನೆನಪಾಯ್ತು.

ಕಸದ ಬಂಡಿ ಈಗ ಯಾಕೆ ಬಂತು ಅಂದರೆ kicks ವಿಷಯ ಬಂತಲ್ಲಾ. ಕೆಲವರಿಗೆ ಇಂತಹುದು ತಲೆ ತುಂಬಾ ತುಂಬಿಕೊಂಡು ಓವರ್ ಫ್ಲೋ ಆಗಿಬಿಡುತ್ತೆ. ಆಗ ಅವರು ತಮ್ಮ ತುರುಬು ನೆನೆಸಿಕೊಳ್ಳುವುದು ತುಂಬಾ ಸಹಜ ಎಂದು ಹೇಳಲು ಈ ವಾಕ್ಯ ಹೇಳಿದೆ.

ಹಾಗೆ kicks ಗಳನ್ನು ತಲೆ ಪೂರ್ತಿ ತುಂಬಿಕೊಂಡಿರುವ ಸುಮಾರು ಖ್ಯಾತನಾಮರು ನನಗೆ ಪರಿಚಿತರು. ಅವರ ಜತೆ ಸಂಜೆ ಹೊತ್ತು ಮಾತಿಗೆ ನಿಂತರೆ ಕನಿಷ್ಠ ನಾಲಕ್ಕೂ ಕಾಲು ಗಂಟೆ ನಿಮ್ಮ ತಲೆಯೊಳಗೆ ಅವರ ತಲೆಯಲ್ಲಿನ ಸರಕು transfer ಮಾಡಲು ಯತ್ನಿಸುತ್ತಾರೆ. ಮಧ್ಯರಾತ್ರಿ ಆದರೂ ಅವರು ಅವರ ನೆನಪಿನ ಒಂದು ಪರ್ಸೆಂಟ್ ಕೂಡ ಆಚೆ ಹಾಕಿರೋಲ್ಲ! ಇಂತಹ IQ ಜೀವಿಗಳ ಸಂಗಡ ನನ್ನ ವ್ಯವಹಾರ ತುಂಬಾ ಸೀಮಿತ.

IQ ಜೀವಿಗಳು ಅನ್ನುವ ಪದ ಬುದ್ಧಿ ಜೀವಿಗಳು ಎನ್ನುವ ಕನ್ನಡ ಸಾರಸ್ವತ ಲೋಕದ ಪದಕ್ಕೆ ಅತಿ ಸಮೀಪದ್ದು ಮತ್ತು ಅದರ ಜನಕ ಮಹಾರಾಜ ನಾನು.

ತಲೆ ಪೂರ್ತಿ kicks ತುಂಬಿಕೊಂಡಿರುವ ನರ ನಾರಾಯಣರ ದೊಡ್ಡ ಹಾಬಿ ಎಂದರೆ ಐವತ್ತು ಹತ್ತಿರ ಬರುತ್ತಿದ್ದ ಹಾಗೆಯೇ ಅದನ್ನು ಆತ್ಮಕತೆಯ ರೂಪದಲ್ಲಿ ಹರಿಯ ಬಿಡುವುದು. ಅದೂ ಹೇಗೆ ಅಂದರೆ ತಾವು ಒಂದನೇ ಕ್ಲಾಸಿನಲ್ಲಿ ತರಗತಿಗೇ ಮೊದಲಿಗನಾಗಿ ಪಡೆದ ಮಾರ್ಕ್ಸ್ ನಿಂದ ಕತೆ ಶುರುವಾಗಬಹುದು…! ಸುಮಾರು ಆತ್ಮಕತೆಗಳನ್ನು ಸಮಯ ಮಾಡಿಕೊಂಡು ಓದಿ ನೋಡಿ, ಈ ಸಂಗತಿ ಖಂಡಿತ ಸಾವಿರಕ್ಕೆ ಸಾವಿರದಷ್ಟು ಇದ್ದೇ ಇರುತ್ತೆ.

ಈಗ ಮತ್ತೆ ಟು ದಿ ಪಾಯಿಂಟ್..! ಕುಂತಲ್ಲೂ ಅವಳೇ ನಿಂತಲ್ಲೂ ಅವಳೇ ಅವಳೇ ನನ್ನ ಗೆಣೆಗಾತಿ.. ಅಂತ ಒಂದು ಜಾನಪದ ಹಾಡು ಇದೆ ಗೊತ್ತಲ್ಲಾ, ಆ ಹಾಡು ಸೃಷ್ಟಿಯಾಗಿದ್ದೇ ರೋಗ ಪೀಡಿತರಿಂದ ಅಂತ ಹೇಳಿ ಜಂಪ್ ಆಗಿದ್ದೆ ಅಲ್ಲವೇ? ಯಶಸ್ಸಿನ euphoric ಕಡಿಮೆ ಆದ ನಂತರ ಮತ್ತೆ ಹೊಸಾ ಹುಮ್ಮಸ್ಸಿನಿಂದ ಹೊಸಾ ಹೊಸಾ ಹಾದಿಗಳ ಅನ್ವೇಷಣೆ ನಡೆಯಿತು. ಗುಂಪಿನ ಕೆಲವರು ಗ್ರಂಥ ರಚನೆಯಲ್ಲಿ ತೊಡಗಿದರು, ಕೆಲವರು ತಮ್ಮ ಹಿಂದಿನ ಕಾಯಕಕ್ಕೆ ಹೊಸಾ ಜೋಶ್ ಕೊಟ್ಟರು, ಕೆಲವರು ಭಾಷಣ ಮಾಡುವುದನ್ನು ಹೆಚ್ಚು ಮಾಡಿದರು! ಕೆಲವರು ಪ್ರಕಾಶಕರು ಆದರು. ಅಂದರೆ ಒಮ್ಮೆ ಇಂತಹ ಚಟ ಅಂಟಿಸಿಕೊಂಡರೆ ಬಿಡುವುದು ತುಂಬಾ ಕಷ್ಟ ಎನ್ನುವ ಹಂತ ತಲುಪಿದ್ದೆವು ಅಂತಲೇ ಹೇಳಬೇಕು.

ನಮ್ಮಲ್ಲಿ ಒಬ್ಬರು ಹೆಸರಾಂತ ಕಲಾವಿದರು ಇದ್ದರು. ನಾಟಕಗಳಲ್ಲಿ, ಸಿನೆಮಾಗಳಲ್ಲಿ ಪಾತ್ರ ವಹಿಸೋರು. ಅದಕ್ಕಾಗಿ ರಜೆ ಹಾಕೋರು. ಎಷ್ಟೋ ಸಲ lwp ಆಗೋದು. Lwp ಅಂದರೆ ಲೀವ್ ವಿಥೌಟ್ ಪೇ ಅಂತ. ಅಂದರೆ ಸಂಬಳ ಕಟ್ ಆಗ್ತಾ ಇತ್ತು. ನಟನೆಯಿಂದ ಬಂದ ಕಾಸು ಸಂಜೆಯ ಖರ್ಚಿಗೆ ಸರಿ ಹೋಗ್ತಾ ಇತ್ತು. ಸಂಬಳದಿಂದ ಸಂಸಾರ ಸಾಗಬೇಕು. ಪಾಪ ತಿಂಗಳ ಮೊದಲ ವಾರದಲ್ಲೇ ಇವರಿಗೆ ತಾಪತ್ರಯ ಶುರು. ಕೆಲವಂ ಇರ್ಪರಿಂದ ಸಾಲವಂ ಪಡೆವರ್. ಅದು ಸಮಯಕ್ಕೆ ಸರಿಯಾಗಿ ವಾಪಸ್ ಮಾಡಲು ಆಗದೇ ಸಾಲಗಾರರು ಬಂದಾಗ ಕುರ್ಚಿ, ಮೇಜು, ಗೋಡೆ ಹಿಂದೆ ಬಚ್ಚಿಟ್ಟು ಕೊಳ್ಳುತ್ತಾ ಇದ್ದರು. ಕೆಲವು ಸಲ ಟಾಯ್ಲೆಟ್ ಬಾಗಿಲು ಹಾಕಿಕೊಂಡು ಎರಡು ಮೂರು ಗಂಟೆ ಸಾಲ ಕೊಟ್ಟ ಹದ್ದುಗಳಿಂದ ರಕ್ಷಣೆ ಪಡೆಯುತ್ತಿದ್ದರು. ನನ್ನ ಹತ್ತಿರ ಅವರ ಮಾತು ಕತೆ ಇರುತ್ತಿತ್ತು. ತಮಾಷೆಯಾಗಿ ಸಾಲ ಕೊಟ್ಟ ಕಿರಾತಕನನ್ನು ಹೇಗೆ ಏಮಾರಿಸಿದೆ ಎಂದು ವರ್ಣಿಸೋರು. ನಾನೂ ಆಗಾಗ ಈ ಕಿರಾತಕ ಪಾತ್ರದವನೇ?

“ಯಾಕೆ ರಾಜೂ ಹೀಗೆ ಸಾಲ ಮಾಡ್ತೀ? ಇದನ್ನ ಕಂಟ್ರೋಲ್ ಮಾಡ್ಕೋಪ್ಪ……” ಅಂತ ನಾನು ಪುಕ್ಕಟೆ ಸಲಹೆ ಕೊಡೋದು.

ರಾಜೂ (ಇದು ಅವರ ನಿಜ ಹೆಸರಲ್ಲ. ಈಗ ದೇವರ ಹತ್ತಿರ ಪಾದಸೇವೆ ಮಾಡುತ್ತಿರುವ ಅವರ ಹೆಸರು ಹೇಳಿ ಅವರನ್ನು ಮತ್ತೆ ಈ ಭೂಲೋಕಕ್ಕೆ ಎಳೆದು ತರಲು ನನಗೆ ಖಂಡಿತ ಮನಸ್ಸಿಲ್ಲ. ಅದರಿಂದ ಅವರ ನಿಜನಾಮ ಹೇಳಲಾರೆ!)ಆಗ ನರಿ ಕತೆ ಹೇಳೋರು. ನರಿ ನಸುಗುನ್ನಿ ಕಾಯಿ ತಿಂದ ಕತೆ ಅಂತೆ ಅದು. ಈಗ ಆ ಕಥೆಗೆ..

ಕಾಡಿನಲ್ಲಿ ನರಿ ಹೋಗುತ್ತಾ ಇತ್ತು. ಅದಕ್ಕೆ ಹಸಿವಾಗಿತ್ತು. ತಿನ್ನಲು ಏನೂ ಸಿಕ್ಕಿರಲಿಲ್ಲ ಮತ್ತು ಪ್ರಪಂಚ ಬೋರ್ ಹೊಡೆಸಿತ್ತು. ಯಾವುದಾದರೂ ಪಾಳು ಬಾವಿಗೆ ಬಿದ್ದು ಸಾಯುವ ಯೋಚನೆ ಶುರುವಾಗಿತ್ತು. ಬಾವಿ ಎಲ್ಲಿದೆಯೋ ನೋಡೋಣ ಅಂದುಕೊಂಡು ನಡೆದರೆ ಬಾವಿ ಸಿಗಲಿಲ್ಲ. ಮರ ಹತ್ತಿ ಮೇಲಿನಿಂದ ಬಾವಿ ಹುಡುಕಿದರೆ ಹೇಗೆ ಎನ್ನುವ ಯೋಚನೆ ನರಿಗೆ ಬಂದಿತು. ಪಕ್ಕದಲ್ಲಿನ ಮರ ನೋಡಿ ರೆಂಬೆ ಕೊಂಬೆ ಹಿಡಿದು ಮರ ಏರಿತು. ಮರದ ಮಧ್ಯದಲ್ಲಿಯೇ ಅದಕ್ಕೆ ನಸುಗುನ್ನಿ ಕಾಯಿ ಕಾಣಿಸಬೇಕೇ?(ಕಾಯಿ ಹೆಸರು ಬೇರೆ ಇದ್ದರೂ ಇರಬಹುದು )

ನರಿಗೆ ಕಳೆದ ತಿಂಗಳ ನೆನಪು ಒದ್ದುಕೊಂಡು ಬಂದಿತು. ಆಗಲೂ ಹೀಗೇ ಮರ ಹತ್ತಿತ್ತು. ಆಗ ಬಾವಿ ಹುಡುಕಲು ಅಲ್ಲ, ಬದಲಿಗೆ ಹೆಣ್ಣು ನರಿ ಹುಡುಕಲು (ಇದು ಕಥೆಗೆ ಪೋಲಿ ಟಚ್ ಕೊಡಲು ನನ್ನ ಗೆಳೆಯ ಹೇಳುತ್ತಿದ್ದ ಸಾವಿರ ಕಾರಣಗಳಲ್ಲಿ ಒಂದು. ಯಾವತ್ತಾದರೂ ನಿಮಗೆ ಈ ಪೋಲಿ ಟಚ್ ಕತೆಗಳ ಬಗ್ಗೆ ಹೇಳುತ್ತೇನೆ, ನೆನಪಿಸಿ!) ಅದು ಮರ ಹತ್ತಿತ್ತು. ಅದರ ಸುತ್ತಲೂ ನಸುಗುನ್ನಿ ಕಾಯಿಗಳು ನೇತಾಡುತ್ತಿದ್ದವು. ನರಿಗೆ ಅದನ್ನು ನೋಡಿ ಬಾಯಲ್ಲಿ ಸಮುದ್ರ ಉಕ್ಕಿ ಹರಿಯಿತು. (ರಾಜ ಕುಮಾರ್ ಅವರ ಒಂದು ಹಾಡಿನಲ್ಲಿ ಸಮುದ್ರ ಉಕ್ಕಿ ಹರಿಯುವ ಸಾಲು ಇದೆ.) ಹಿಂದಿನ ಬಾರಿ, ಅದರ ಹಿಂದಿನ ಬಾರಿ, ಹಿಂದಿನ ಬಾರಿ, ಅದರ ಹಿಂದಿನ ಬಾರಿ, ಹಿಂದಿನ ಬಾರಿ, ಅದರ ಹಿಂದಿನ ಬಾರಿ…. ಹೀಗೇ ಅದೆಷ್ಟೋ ಲಕ್ಷ ಲಕ್ಷ ವರ್ಷಗಳಿಂದ ಈ ನರಿ ವಂಶಕ್ಕೆ ನಸುಗುಣ್ಣಿಕಾಯಿನ ನಂಟು ಇದೆ ಮತ್ತು ಪ್ರತಿಸಲ ಈ ಕಾಯಿ ನೋಡಿದಾಗ ಹಿಂದಿನ ನೆನಪು ಒದೆಯುತ್ತೆ. ಈಗಲೂ ನೆನಪು ಬಂತಾ? ನರಿ ಕೇರ್ ಮಾಡಲಿಲ್ಲ. ರೆಂಬೆ ರೆಂಬೆ ರೆಂಬೆ ಹುಡುಕಿ ಹುಡುಕಿ ಹುಡುಕಿ ನಸುಗುಣ್ಣಿಕಾಯಿ ತಿಂದೇ ತಿಂದಿತು. ಹೊಟ್ಟೆ ತುಂಬಾ ಹಣ್ಣು ಬಿದ್ದ ನಂತರ ಅದರ ಕಣ್ಣು ಎಳೆಯಲು ಶುರು ಆಯಿತಾ? ನರಿ ಮರದ ಬುಡಕ್ಕೆ ಬಂದು ಭೂದೇವಿಗೆ ತಲೆ ಕೊಟ್ಟಿತು. ಅರ್ಧ ಗಂಟೆ ಮಲಗಿರಬಹುದು, ನರಿಗೆ ಎಚ್ಚರ ಆಯಿತು. ಅದಕ್ಕೆ ಸಹಿಸಲಾರದ ಹೊಟ್ಟೆನೋವು ಮತ್ತು ಟಾಯ್ಲೆಟ್ ಗೆ ಹೋಗಬೇಕಾದ ಹಿಂಸೆ. ಟಾಯ್ಲೆಟ್‌ಗೆ ಹೋಯ್ತು, ಟಾಯ್ಲೆಟ್‌ಗೆ ಹೋಯ್ತು, ಟಾಯ್ಲೆಟ್‌ಗೆ ಹೋಯ್ತು, ಟಾಯ್ಲೆಟ್‌ಗೆ ಹೋಯ್ತು…. ಅದರ ಜತೆಗೆ ಹೊಟ್ಟೆ ನೋವು, ನೋವು, ನೋವು…

“ಇನ್ಮೇಲೆ ಬದುಕಿರೋವರೆಗೂ ಈ ಹಾಳಾದ ಕಾಯಿ ತಿನ್ನೋಲ್ಲ, ಅದನ್ನು ಮೂಸಿ ಸಹ ನೋಡುಲ್ಲ, ದೇವರೇ ಇದೊಂದು ಸಲ ನನ್ನ ಬದುಕಿಸಿ ಬಿಡು, ಸಣ್ಣ ವಯಸ್ಸಿನ ಹೆಂಡತಿ, ಪುಟ್ಟ ಮಕ್ಕಳು ಇವೆ ನನಗೆ. ನಡು ನೀರಿನಲ್ಲಿ ಅವರ ಕೈ ಬಿಟ್ಟರೆ ಹೇಗೆ? ದೇವರೇ ಇದೊಂದು ಸಲ ನನ್ನ ಬದುಕಿಸಿ ಬಿಡು…. ಅಂತ ದೇವರನ್ನು ಬೇಡಿಕೊಂಡಿತು. ಮಾರನೇ ದಿವಸ ಬೆಳಿಗ್ಗೆ ಅಷ್ಟು ಹೊತ್ತಿಗೆ ಅದು ಮಾಮೂಲು ಸ್ಥಿತಿಗೆ ಬಂತಾ? ಇನ್ನುಮುಂದೆ ಖಂಡಿತ ಈ ಜೀವಮಾನದಲ್ಲಿ ಈ ಕಾಯನ್ನು ಎಡಗೈನಲ್ಲಿಯೂ ಮುಟ್ಟೋಲ್ಲ ಅಂತ ಶಪಥ ಮಾಡಿಕೊಂಡಿತು!

“…..ಇದು ಈ ಕತೆ ನರಿ ನಸುಗುನ್ನಿಕಾಯಿ ನೋಡಿದಾಗಲೆಲ್ಲಾ ಮತ್ತೆ ಮತ್ತೆ ರಿಪೀಟ್ ಆಗುತ್ತಲೇ ಬಂದಿದೆ. ಇದೇ ರೀತಿ ಸಾಲ ಪಡೆಯೋದೂ ಸಹ ಗೋಪಿ ಸಾರ್..” ಅಂತ ರಾಜೂ ಹೇಳುತ್ತಿದ್ದ.

ಇದಕ್ಕೆ ಯಾಕೆ ಬಂದೆ ಅಂದರೆ ಕೆಲವು ಚಟಗಳು ಏನು ಮಾಡಿದರೂ ನಿಮ್ಮನ್ನ ಬಿಡೋದೇ ಇಲ್ಲ. ಚಟ್ಟ ಹತ್ತಿದಾಗಲೇ ಚಟದಿಂದ ಮುಕ್ತಿ ಅಂತೆ. ಈ ಬರೆಯೋ ಚಟ ಇದೆ ನೋಡಿ ಅದು ಒಂದು ರೀತಿ ಬ್ರಹ್ಮ ರಾಕ್ಷಸ. ಕೊನೆವರೆಗೂ ನಿಮ್ಮನ್ನ ಬಿಟ್ಟರೆ ಕೇಳಿ..

ಕಥೆಗೆ ಕಾಲಿಲ್ಲವಂತೆ. ಎಲ್ಲೆಲ್ಲಿಗೋ ಎಳೆದುಕೊಂಡು ಹೋಗಿಬಿಟ್ಟಿದೆ ತಾನೇ? ಮುಂದಿನ ಸಲ ಇದನ್ನು ದಾರಿಗೆ ತರುವ ಯತ್ನ ಮಾಡುತ್ತೇನೆ….. !

ಇನ್ನೂ ಇದೆ

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ�‌ ಗೋಪಾಲ�‌ ಬರೆದ ಈ ಭಾನ�ವಾರದ ಕತೆ “ಆಟ�
https://tinyurl.com/5575hs6r

ಮದ�ವೆ ಮದ�ವೆ ಆ ಸಿಹಿ ಪದವೆ
ಲಾಸ�‌ ವೇಗಸ�‌ನ ‘ಲಿಟಲ� ವೈಟ� ವೆಡ�ಡಿಂಗ� ಚಾಪೆಲ�’ ಕ�ರಿತ� ಅಚಲ ಸೇತ� ಬರಹ
https://tinyurl.com/2v28abrv

ಭಾರತಕ�ಕೆ ಹತ�ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜ� ಅಂಕಣ “ಅನೇಕ ಅಮೆರಿಕಾ� ನಿಮ�ಮ ಓದಿಗೆ
https://tinyurl.com/35mrwwsn

ಭವ�ಯ ಟಿ.ಎಸ�. ಬರೆದ ಈ ದಿನದ ಕವಿತೆ

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ