Advertisement
ಹಾಡಿನಾ ಹುಡುಗಿ ಮತ್ತು ನಡೆಯದಾ ವಾಚು: ಎಸ್. ಗಂಗಾಧರಯ್ಯ ಅನುಭವ ಕಥನ

ಹಾಡಿನಾ ಹುಡುಗಿ ಮತ್ತು ನಡೆಯದಾ ವಾಚು: ಎಸ್. ಗಂಗಾಧರಯ್ಯ ಅನುಭವ ಕಥನ

ಸೆಕೆಂಡಿನ ಮುಳ್ಳನ್ನು ಒಮ್ಮೆ ಮುಟ್ಟಿದೆ. ಅದು ಅಲ್ಲೇ ನಿಂತುಕಂಡಿತು. ಕೇವಲ ಸೆಕೆಂಡಿನ ಮುಳ್ಳು ಮಾತ್ರ ನಡೆಯುತ್ತಿದೆ ಚಿಕ್ಕ ಮುಳ್ಳು ಮತ್ತು ದೊಡ್ಡ ಮುಳ್ಳುಗಳು ಯಾಕೆ ನಡೆಯುತ್ತಿಲ್ಲ ಅನಿಸುತ್ತಲೇ ಮೆಲ್ಲಗೆ ಅವುಗಳನ್ನು ಹಿಡಿದು ಮೇಲೆತ್ತಿದೆ. ತಗೋ ಸೆಕೆಂಡಿನ ಮುಳ್ಳಿನ ಸಮೇತ ಮೂರು ಮುಳ್ಳುಗಳೂ ಆಚೆ ಬಂದವು. ಮತ್ತೆ ಅವುಗಳನ್ನು ಹಂಗೇ ಜೋಡಿಸಲು ಯತ್ನಿಸಿದೆ. ಎಷ್ಟು ತಿಣುಕಿದರೂ ಸಾಧ್ಯವಾಗದೇ ಹೋಯ್ತು. ಗಾಬರಿಯಾಗಿ ಆ ಮುಳ್ಳುಗಳನ್ನೆಲ್ಲಾ ಹಂಗೇ ಹಾಕಿ ಅವುಗಳ ಮೇಲೆ ಗಾಜನ್ನು ಅಮುಕಿ ಕೂರಿಸಿದೆ. ಭಯವಾಯ್ತು. ಎದೆ ಡವಗುಡತೊಡಗಿತು. ಅಷ್ಟರಲ್ಲಿ ನಾನು ಅಲುಗಾಡಿಸುತ್ತಿದ್ದ ರಭಸಕ್ಕೋ ಇಲ್ಲಾ ಕೆಳಗಿನಿಂದ ಏನೋ ತಾಕಿದ್ದ ಕಾರಣಕ್ಕೋ ಎರಡು ಚಕ್ರಗಳು ಕೆಳಗುದುರಿದ್ದವು.
ಎಸ್.‌
ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತೊಂದನೆಯ ಕಂತು

ಆಗ ನಮಗೆ ಏಳು ಮತ್ತು ಹತ್ತನೆಯ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಗಳಿದ್ದವು. ಪರೀಕ್ಷೆಗಳೆಂದರೆ ನಮಗಾಗ ಅಂಥ ದಿಗಿಲಿನ ಸಂಗತಿಗಳಾಗಿರಲಿಲ್ಲ. ಜತೆಗೆ ಈ ಪರೀಕ್ಷೆಗಳು ಮುಗಿಯುತ್ತಲೇ ಸಿಗುವ ಬೇಸಿಗೆ ರಜಾ, ಅದರಲ್ಲಿ ಅನುಭವಿಸಬಹುದಾದ ಮಜಾ, ಬರಲಿರುವ ಹಬ್ಬ, ಜಾತ್ರೆಗಳನ್ನು ನೆನೆಯುತ್ತಲೇ ನಮ್ಮ ಪರೀಕ್ಷೆಗಳ ಭಾರ ಹಗುರಾಗಿಬಿಡುತ್ತಿತ್ತು. ಆ ದಿನಗಳು ಬಲು ಬೇಗ ಬರುವಂತೆ ನಾವು ತುದಿಗಾಲಲ್ಲಿ ನಿಂತು ಕಾಯುತ್ತಿದ್ದೆವು. ಈ ಪರೀಕ್ಷೆಗಳು ಇನ್ನೇನು ಶುರುವಾಗುತ್ತವೆ ಅನ್ನುವ ಹೊತ್ತಲ್ಲಿ ಇಡೀ ಸ್ಕೂಲು ಒಂಥರಾ ಭಕ್ತಿಯ ಕೇಂದ್ರವಾಗಿಬಿಡುತ್ತಿತ್ತು. ಕಾರಣ ಪರೀಕ್ಷೆಗಳು ಶುರುವಾಗುವ ಮುನ್ನ ಕಡ್ಡಾಯವಾಗಿ ಸ್ಕೂಲಿನಲ್ಲಿ ಶಾರದಾ ಪೂಜೆ ಕಾರ್ಯಕ್ರಮ ಇರುತ್ತಿತ್ತು. ಆಗ ನಾವು ಪೂಜೆಗಾಗಿ ನಮ್ಮ ಮನೆಯಿಂದ ಹೂಗಳು ಹಾಗೂ ಸಾಧ್ಯವಾದವರು ಪಲ್ಲಾರಕ್ಕಾಗಿ ತೆಂಗಿನ ಕಾಯಿಗಳನ್ನು ತಂದು ಕೊಡುತ್ತಿದ್ದೆವು.

ನಾನು ಏಳನೇ ಕ್ಲಾಸಿನಲ್ಲಿದ್ದೆ. ನಾನು ಓದುತ್ತಿದ್ದ ಈ ಮಿಡ್ಲ್ ಸ್ಕೂಲ್ ಇದ್ದ ಊರಿನ ಹೆಸರು ಶೆಟ್ಟೀಕೆರೆ. ಇದು ಆಗಲೂ ಮತ್ತು ಈಗಲೂ ಒಂದು ಹೋಬಳಿ ಕೇಂದ್ರ. ಈಗಿನಂತೆ ಆಗ ಸ್ಕೂಲುಗಳು ಹೆಚ್ಚಿಗೆ ಇರಲಿಲ್ಲ. ಹಲವು ಹೋಬಳಿಗೆ ಸೇರಿ ಒಂದು ಮಿಡ್ಲ್ ಸ್ಕೂಲ್ ಮತ್ತು ಹೈಸ್ಕೂಲುಗಳು ಇರುತ್ತಿದ್ದವು. ಹಂಗಾಗಿ ಈ ಶೆಟ್ಟೀಕೆರೆಗೆ ಐದಾರು ಮೈಲಿ ದೂರದಲ್ಲಿದ್ದ ಕುಪ್ಪೂರು, ಮಂಚಸಂದ್ರ, ದುಗಡಿಹಳ್ಳಿ, ಸಿದ್ಧರಾಮನಗರ, ಗೋಪಾಲನಹಳ್ಳಿ, ಈರಲಗೆರೆ, ಹೆಸರಳ್ಳಿ, ಗೌಡ್ನಳ್ಳಿ ಮುಂತಾದ ಸುತ್ತಮುತ್ತಲ ಹಳ್ಳಿಗಳಿಂದ ಈ ಸ್ಕೂಲುಗಳಿಗೆ ಮಕ್ಕಳು ಬರುತ್ತಿದ್ದರು. ಆಗ ಶೆಟ್ಟೀಕೆರೆಯ ಈ ಮಿಡ್ಲ್ ಸ್ಕೂಲ್‌ನಲ್ಲಿ ಮಾತ್ರ ಪರೀಕ್ಷಾ ಕೇಂದ್ರವಿತ್ತು. ಈ ಸ್ಕೂಲಿನ ಮುಂದೆ ಮತ್ತು ಹಿಂಭಾಗದಲ್ಲಿ ವಿಶಾಲವಾದ ಆಟದ ಮೈದಾನವಿತ್ತು. ಸ್ಕೂಲಿನ ಮುಂಭಾಗದ ಅಂಗಳದಲ್ಲಿ ತುಂಬಾ ಎತ್ತರಕ್ಕೆ ಬೆಳೆದಿದ್ದ ಒಂದಾಳು ಅವುಚಲು ಆಗದಷ್ಟು ದಪ್ಪವಿದ್ದ ನೀಲಗಿರಿ ಮರಗಳಿದ್ದವು. ಈ ಅಂಗಳಕ್ಕೆ ವಿಷಮಧಾರಿ ಗಿಡದ ಬೇಲಿಯಿತ್ತು. ಕುರಿ, ಮೇಕೆ, ದನಕರುಗಳು ಯಾವ ಕಾರಣಕ್ಕೂ ಬಾಯಾಕದಂತೆ ಇರಲಿ ಅನ್ನುವ ಕಾರಣಕ್ಕೆ ಈ ಬೇಲಿಯನ್ನು ಬೆಳಸಿದ್ದರು. ಅಂತೆಯೇ ಈ ಬೇಲಿ ಯಾವುದೇ ಪ್ರಾಣಿಗಳು ನುಸಿಯದಂತೆ ಒತ್ತೊತ್ತಾಗಿತ್ತು. ಇದರ ಎಲೆಗಳನ್ನು ಮುಟ್ಟಿದರೆ ವಾಕರಿಕೆ ಬರುವಂಥ ವಾಸನೆ ಬರುತ್ತಿತ್ತು. ಹಂಗಾಗಿ ಬೇಲಿಯನ್ನು ಕಡಿಯುವುದಿರಲಿ ಆ ಬೇಲಿಯಲ್ಲಿ ಅರಳುತ್ತಿದ್ದ ಬೆಳ್ಳನೆಯ ಪುಟ್ಟ ಪುಟ್ಟ ಹೂಗಳನ್ನೂ ಯಾರೂ ಮುಟ್ಟುತ್ತಿರಲಿಲ್ಲ. ವರ್ಷಕ್ಕೊಮ್ಮೆ ಈ ಬೇಲಿಯನ್ನು ಸವರಿಸಿ ಆಳ್ತಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು. ಈ ಬೇಲಿಗೆ ಬಿದಿರ ಗಳಗಳಿಂದ ಕಟ್ಟಿದ್ದ ಹೊಳೆ ಬಾಗ್ಲು ಇತ್ತು. ಸ್ಕೂಲು ಮುಗಿಯುತ್ತಿದ್ದಂತೆ ಈ ಬಾಗಿಲಿಗೆ ಬೀಗ ಬೀಳುತ್ತಿತ್ತು.

ಈ ಸ್ಕೂಲಿನಲ್ಲಿ ಆ ಕಾಲಕ್ಕೆ ತುಂಬಾ ಒಳ್ಳೆಯ ಮೇಷ್ಟ್ರುಗಳಿದ್ದರು. ಕನ್ನಡ ಕಲಿಸುತ್ತಿದ್ದ ಅದೇ ಊರಿನವರಾದ ನಾಗಣ್ಣ ಮೇಷ್ಟ್ರು, ಇಂಗ್ಲಿಷ್ ಕಲಿಸುತ್ತಿದ್ದ ಪಕ್ಕದ ಸಾಸಲಿನಿಂದ ಬರುತ್ತಿದ್ದ ಮಳ್ಳಯ್ಯ ಮೇಷ್ಟ್ರು, ರಾಮಕೃಷ್ಣಪ್ಪ ಅನ್ನುವ ಗಣಿತದ ಮೇಷ್ಟ್ರು ತುಂಬಾ ಚುರುಕಾಗಿ ಮತ್ತೆ ಕಟ್ಟುನಿಟ್ಟಾಗಿ ಹೇಳಿಕೊಡುತ್ತಿದ್ದರು. ಉಳಿದವರ ಹೆಸರು ಮರೆತು ಹೋಗಿವೆ. ನಾಗಣ್ಣವರು ಕಾವ್ಯವನ್ನು ಅದರಲ್ಲೂ ಹಳೆಗನ್ನಡ ಕಾವ್ಯವನ್ನು ತುಂಬಾ ಸೊಗಸಾಗಿ ಹಾಡುತ್ತಾ ಮನದಟ್ಟು ಮಾಡಿಸುತ್ತಿದ್ದ ಪರಿ ಇಂದಿಗೂ ನೆನಪಿದೆ. ಆಗ ಪದ್ಯಗಳನ್ನು ಕಂಠಪಾಠ ಮಾಡಿ ಒಪ್ಪಿಸಬೇಕಾಗುತ್ತಿತ್ತು. ಅಂತೆಯೇ ಪದ್ಯಗಳನ್ನು ಬರೆಯುವಂತೆ ಪರೀಕ್ಷೆಗಳಲ್ಲೂ ಕೇಳಲಾಗುತ್ತಿತ್ತು. ನಾಗಣ್ಣನವರು ಹೇಳಿಕೊಡುತ್ತಿದ್ದ ರೀತಿಗೆ ನಾವು ಪದ್ಯಗಳನ್ನು ಕಂಠಪಾಠ ಮಾಡಲೇಬೇಕಿರಲಿಲ್ಲ. ಮಳ್ಳಯ್ಯನವರು ಇದಕ್ಕೆ ತದ್ವಿರುದ್ಧವಾಗಿ ಪದ್ಯ ಮತ್ತು ಗದ್ಯಗಳನ್ನು ಗಟ್ಟು ಮಾಡಿಸುತ್ತಿದ್ದರು. ರಾಮಕೃಷ್ಣಪ್ಪನವರು ತುಂಬಾ ಸೊಗಸಾಗಿ ಗಣಿತವನ್ನು ಹೇಳಿಕೊಡುತ್ತಿದ್ದರು. ಆದರೆ ನನಗೆ ಗಣಿತದಲ್ಲಿ ಆಸಕ್ತಿ ಕಡಿಮೆ ಇದ್ದ ಕಾರಣಕ್ಕೆ ಅಷ್ಟಾಗಿ ನಾಟುತ್ತಿರಲಿಲ್ಲ. ಇದರ ಜತೆಗೆ ಇಡೀ ಸ್ಕೂಲಿನ ವಾತಾವರಣ ತುಂಬಾ ಲವಲವಿಕೆಯಿಂದ ಇರುವುದಕ್ಕೆ ಇವರೆಲ್ಲರೂ ಕಾರಣರಾಗಿದ್ದರು.

ಅಕ್ಕಪಕ್ಕದ ಹೋಬಳಿಯ ಮಕ್ಕಳು ಏಳನೆಯ ಕ್ಲಾಸಿನ ಪಬ್ಲಿಕ್ ಪರೀಕ್ಷೆ ಬರೆಯಲು ಇಲ್ಲಿಗೇ ಬರಬೇಕಾಗಿತ್ತು. ಹಂಗೆ ಬಂದ ಕೆಲವರು ನೆಂಟರ ಮನೆಗಳಿದ್ದರೆ ಅಲ್ಲಿ ಉಳುಕೊಳ್ಳುತ್ತಿದ್ದರು. ಇಲ್ಲದಿದ್ದರೆ ಬಾಡಿಗೆ ರೂಮುಗಳನ್ನು ಹಿಡಿಯುತ್ತಿದ್ದರು. ಪರೀಕ್ಷೆಯ ಕಾಲ ಬಂದರೆ ಸಾಕು ಇಡೀ ಊರು ಮಕ್ಕಳುಗಳಿಂದ ಕಿಕ್ಕಿರಿಯುತ್ತಿತ್ತು. ಇದು ನಮ್ಮೊಳಗೆ ಎಂಥದೋ ಹಬ್ಬದ ಭಾವನೆ ಮೂಡಿಸುತ್ತಿತ್ತು. ಜತೆಗೆ ಪರೀಕ್ಷೆಯ ಕಾವನ್ನು ಕೊಂಚ ಕಡಿಮೆ ಮಾಡುತ್ತಿತ್ತು. ಇಂಥ ಪರೀಕ್ಷೆಗಳು ನಡೆಯುತ್ತಿದ್ದುದು ಬಹುತೇಕ ಮಾರ್ಚ್ ತಿಂಗಳಿನಲ್ಲಿ. ಯುಗಾದಿ ಹಬ್ಬ ಇವುಗಳ ಆಸು ಪಾಸಿನಲ್ಲಿ ಬರುತ್ತಿತ್ತು. ನಂತರ ಸುತ್ತೇಳು ಹಳ್ಳಿಗಳಲ್ಲೂ ಜಾತ್ರೆಗಳು ಮೈದುಂಬಿಕೊಳ್ಳುತ್ತಿದ್ದವು.

ಆ ವರ್ಷವೂ ಯುಗಾದಿ ಹಬ್ಬ ಒಂದೆರಡು ದಿನ ಇರುವಂತೆಯೇ ಪರೀಕ್ಷೆಗಳು ಶುರುವಾಗಿದ್ದವು. ಪರೀಕ್ಷೆ ನಾಳೆ ಅನ್ನುವಂತೆ ಬಂದಿದ್ದ ಎಲ್ಲಾ ಮಕ್ಕಳನ್ನೂ ಸೇರಿಸಿ ಸ್ಕೂಲಿನಲ್ಲಿ ಎಂದಿನಂತೆ ಮಾಡುತ್ತಿದ್ದ ಶಾರದಾ ಪೂಜೆ ಏರ್ಪಡಿಸಲಾಗಿತ್ತು. ಅಷ್ಟೂ ಮಕ್ಕಳನ್ನು ಒಂದೆಡೆ ಕೂರಿಸಲಾಗಿತ್ತು. ಎದುರಿಗೆ ಟೇಬಲ್ಲೊಂದರ ಮೇಲೆ ದೊಡ್ಡದೊಂದು ಶಾರದೆಯ ಫೋಟೋವನ್ನು ಇಡಲಾಗಿತ್ತು. ಅದಕ್ಕೆ ಮಕ್ಕಳು ತಂದು ಕೊಟ್ಟಿದ್ದ ಥರಾವರಿ ಹೂಗಳನ್ನು ಮುಡಿಸಲಾಗಿತ್ತು. ಫೋಟೋದ ಪೂಜೆಯಾಗುತ್ತಿದ್ದಂತೆ ಕೆಲ ಮಕ್ಕಳು ಹೋಗಿ ಫೋಟೋಕ್ಕೆ ಹೂ ಹಾಕುವುದು, ಬೇಡಿಕೊಳ್ಳುವುದನ್ನು ಮಾಡಿದರು. ಆಗ ಸುಮಾರು ಸಾರ್ತಿ ಡುಮ್ಕಿ ಹೊಡೆದಿದ್ದ ನಮ್ಮೂರ ಅಗ್ಗೆಯಂಥ ಕೆಲವರು ಭಕ್ತಿ ಭಾವದಿಂದ ಫೋಟೋಕ್ಕೆ ಪೂಜೆ ಮಾಡುವುದನ್ನು ಕಂಡು ನಾನು ಮತ್ತು ನನ್ನೂರಿನಿಂದ ಬರುತ್ತಿದ್ದ ದಿವಾಕರ, ಶಂಕರ ಸೇರಿದಂತೆ ನನ್ನ ಕ್ಲಾಸಿನವರು ಜೋರಾಗಿ ನಕ್ಕಿದ್ದೆವು. ಅವತ್ತು ಊರಿಗೆ ಹೋಗುವಾಗ ದಾರಿಯಲ್ಲಿ ಅಗ್ಗೆ `ನನ್ಮಕ್ಳ ನಗ್ತೀರಾ?’ ಅಂತ ಮಣ್ಣ ಎಂಟೆಯೊಂದನ್ನು ಕೈಯ್ಯಲಿಡಿದು ಮೂವರನ್ನೂ ಓಡಿಸಿಕಂಡು ಬಂದಿದ್ದ. ಆ ಸಲವೂ ಅಗ್ಗೆ ಡುಮ್ಕಿ ಹೊಡೆದಿದ್ದ. ಹಂಗಾಗಿ ಅಲ್ಲಿಗೇ ಅವನು ಓದಿಗೆ ದೊಡ್ಡ ನಮಸ್ಕಾರ ಹೊಡೆದು ಮನೆ ಕಡೆ ಉಳುಕಂಡ.

ಪೂಜೆ ಮುಗಿದ ನಂತರ ಮನರಂಜನೆಯ ಕಾರ್ಯಕ್ರಮ ಶುರುವಾಗಿತ್ತು. ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಜಾನಪದಗೀತೆ ಹೀಗೆ ಕಂಠವಿದ್ದವರು, ಇಲ್ಲದವರು ಕೂಡಿ ಹಾಡುಗಳ ಸುರಿಮಳೆಗೈದರು. ಆ ಸಾರ್ತಿ ಈ ಹಾಡುಗಳ ಮಧ್ಯೆ ಪಕ್ಕದ ಊರಿಂದ ಬಂದಿದ್ದ ಹುಡುಗಿಯೊಬ್ಬಳು ತುಂಬಾ ಸೊಗಸಾಗಿ `ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’ ಅನ್ನುವ ಹಾಡನ್ನು ಹಾಡಿದ್ದಳು. ಅವಳು ಹಾಡಿದ ಧಾಟಿಗೆ ನನ್ನೆದೆಯೊಳಗೊಂದು ಮಿಂಚು ಫಳಾರಿಸಿದಂತೆ ಆಗಿಬಿಟ್ಟಿತ್ತು. ಈಗ ನೆನೆದರೆ ಅವಳು ಆ ವಯಸ್ಸಿಗೇ ಅದಾವ ಕಾರಣಕ್ಕೆ ಆ ಹಾಡನ್ನು ಹಾಡಿದ್ದಳೋ ಗೊತ್ತಿಲ್ಲ. ಆದರೆ ಪುಟ್ಟ ಲಂಗದ, ಜೋಡಿ ಜಡೆಯ, ಚುರುಕುಗಣ್ಣಿನ ಆ ಹುಡುಗಿ ನನ್ನನ್ನು ಆವರಿಸಿಕೊಂಡ ಪರಿ ಮಾತ್ರ ಇಂದಿಗೂ ಅಚ್ಚರಿ ಹುಟ್ಟಿಸುತ್ತಿದೆ. ಪರೀಕ್ಷೆಗಳು ಮುಗಿಯುವವರೆಗೂ ದಿನವೂ ಅವಳನ್ನು ಒಮ್ಮೆಯಾದರೂ ನೋಡದಿದ್ದರೆ ಎಂಥದೋ ಚಡಪಡಿಕೆಯಾಗುತ್ತಿತ್ತು. ಪರೀಕ್ಷೆಗಳೆಲ್ಲಾ ಮುಗಿದ ಮೇಲೆ ಅವಳು ಊರಿಗೆ ಹೋದಳು. ಆ ಹೊತ್ತಿಗಾಗಲೇ ಅವಳ ಊರು ಯಾವುದೆಂಬುದನ್ನು ತಿಳಿದುಕೊಂಡಿದ್ದೆ. ಅವಳ ಹಳ್ಳಿ ನನ್ನ ಹಳ್ಳಿಯಿಂದ ಕೇವಲ ಐದಾರು ಕಿಲೋಮೀಟರುಗಳಷ್ಟು ದೂರದಲ್ಲಿತ್ತು. ಅಲ್ಲಿ ಅವಳ ಹಳ್ಳಿಯ ಪಕ್ಕದಲ್ಲೇ ಗುಡ್ಡವೊಂದಿತ್ತು. ಅದರ ತುಂಬಾ ಜಾಲಗಿರಿ ಗಿಡಗಳಿದ್ದವು. ಹೂವಿನ ಕಾಲದಲ್ಲಿ ಆ ಇಡೀ ಗುಡ್ಡವೇ ಜಾಲಗಿರಿ ಹೂಗಳ ಘಮಲಿನಿಂದ ಘಮಗುಡುತ್ತಿತ್ತು. ಆ ಗುಡ್ಡ ಮಾತ್ರವಲ್ಲ ಹತ್ತಿರದ ಸುತ್ತಲ ಹಳ್ಳಿಗಳಿಗೂ ಈ ಪರಿಮಳ ಹರವಿಕೊಳ್ಳುತ್ತಿತ್ತು. ಕಾರಬ್ಬದಲ್ಲಿ ನಾನು ನನ್ನ ಅಣ್ಣನ ಜತೆ ಈ ಗುಡ್ಡಕ್ಕೆ ಜಾಲಗಿರಿ ಹೂಗಳನ್ನು ತರಲು ಹೋಗುತ್ತಿದ್ದೆ. ಹಂಗೆ ಹೋಗುವಾಗ ಆ ಹುಡುಗಿಯ ಹಳ್ಳಿಯ ಮೇಲಾಸಿಯೇ ಹೋಗಬೇಕಾಗಿದ್ದರಿಂದ ಆ ಹಳ್ಳಿ ಒಂಥರಾ ಪರಿಚಿತವಾಗಿತ್ತು. ಆ ಸಾರ್ತಿಯ ಪರೀಕ್ಷೆಗಳೆಲ್ಲಾ ಮುಗಿದು ಆ ಹುಡುಗಿ ಅವಳ ಊರಿಗೆ ಹೋದ ಮೇಲೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಅವಳನ್ನು ಕಾಣುವ ಸಲುವಾಗಿ ಸುಮಾರು ಸಲ ಅವಳ ಆ ಹಳ್ಳಿಗೆ ಹೋಗಿದ್ದೆ. ಆದರೆ ನೋಡುವ ಇಲ್ಲವೇ ಮಾತನಾಡಿಸುವ ಧೈರ್ಯ ಸಾಲದೆ ವಾಪಸ್ಸು ಬಂದಿದ್ದೆ.

ಅವಳ ಮೇಲಿನ ಮೋಹ ಅಷ್ಟಕ್ಕೇ ನಿಂತು ಹೋಗಿದ್ದರೆ ನಾನು ಮುಂದೆ ನಗೆಪಾಟಲಿಗೀಡಾಗುವ ಪ್ರಸಂಗಗಳಿಂದ ತಪ್ಪಿಸಿಕೊಳ್ಳಬಹುದಿತ್ತು. ಅವಳು ಅಂದು ಹಾಡಿದ ಆ ಹಾಡು ಅನಾಮತ್ತು ನನ್ನೆದೆಯೊಳಕ್ಕೇ ನಡೆದು ಬಂದು ಕೂತು ಬಿಟ್ಟಿತ್ತು. ಆ ಹಾಡಿನ ಅರ್ಥವನ್ನಾಗಲಿ, ಅದರ ಭಾವವನ್ನಾಗಲಿ ಗ್ರಹಿಸುವ ವಯಸ್ಸು ಅದಾಗಿರಲಿಲ್ಲ. ಆ ಕಾರಣಕ್ಕೆ ಮುಂದೆ ಕೆಲವು ದಿನ ನಾನು ಹಾಡುಗಾರನೂ ಆಗಿ ಬಿಟ್ಟಿದ್ದೆ. ಈಗಲೂ ನನ್ನರಿವಿಗೆ ಬಾರದಂತೆ ಈ ಹಾಡು ಯಾವಾಗಲಾದರೊಮ್ಮೆ ನನ್ನ ನಾಲಿಗೆಯಲ್ಲಿ ನುಡಿಯುತ್ತಿರುತ್ತೆ.


ನಾನು ತುಂಬಾ ಇಷ್ಟಪಡುವ ನಟ, ನಿರ್ದೇಶಕ ರೊಬೆರ್ತೊ ಬಿನೀನಿ ನಟಿಸಿ ನಿರ್ದೇಶಿಸಿರುವ `ದಿ ಟೈಗರ್ ಅಂಡ್ ದಿ ಸ್ನೋ’ ಚಿತ್ರದಲ್ಲಿ ನಾಯಕ ಕವಿ ಮತ್ತು ಮೇಷ್ಟ್ರು. ಅವನು ಮೊದಲ ನೋಟಕ್ಕೇ ಅಭಿಮಾನಿಯೊಬ್ಬಳನ್ನು ಪ್ರೀತಿಸತೊಡಗುತ್ತಾನೆ. ಪರಿಚಯವಾದ ಕೂಡಲೇ, `ನೀನ್ಯಾಕೆ ನನ್ನ ಮನೆಗೆ ಬರಬಾರದು?… ನಾನು ಎಲ್ಲಿ ಬದುಕುತ್ತಿದ್ದೇನೆ, ಎಲ್ಲಿ ಮಲಗುತ್ತೇನೆ, ಎಲ್ಲಿ ಕೂತು ಬರೆಯುತ್ತೇನೆ, ಎಲ್ಲಿ ಕೂತು ಓದುತ್ತೇನೆ ಅನ್ನೋದನ್ನ ನೋಡಬೇಕು ಅಂತ ನಿನಗೆ ಅನಿಸೋದಿಲ್ವ?’ ಅಂತ ಕೇಳುತ್ತಾನೆ. ಅವಳು ಮನೆಗೆ ಬಂದಾಗ ಅವಳದೊಂದು ಸ್ಪರ್ಷಕ್ಕಾಗಿ ಹಂಬಲಿಸುತ್ತಾನೆ.

ಪ್ರೀತಿ ಅಂದರೇನು ಅಂತ ಅರಿಯದ ವಯಸ್ಸಿನಲ್ಲೇ ನನ್ನೊಳಗೆ ಬೆಚ್ಚಗಿನ ಭಾವವನ್ನು ಸರುಕಾಡಿಸಿದ ಅವಳು ಮತ್ತೆ ನಾನು ಓದುತ್ತಿದ್ದ ಸ್ಕೂಲಿಗೇ ಬಂದು ನನ್ನೊಂದಿಗೆ ಎಂಟನೆಯ ಕ್ಲಾಸಿನ ಪರೀಕ್ಷೆಯನ್ನೂ ಬರೆದಳು. ಆಗಲೂ ಅವಳನ್ನು ಮಾತನಾಡಿಸಲು ಧೈರ್ಯ ಸಾಲದೆ ಪೇಚಾಡಿಕೊಂಡಿದ್ದೆ. ಆದರೆ ಆ ಪರೀಕ್ಷೆಯನ್ನು ಬರೆದು ಹೋದ ಅವಳನ್ನು ನೋಡಲೆಂದು ಮತ್ತೆ ಅದೇ ಉಮೇದಿನಲ್ಲಿ ಅವಳ ಹಳ್ಳಿಗೆ ಹೋದ ನನಗೆ ದೊಡ್ಡದೊಂದು ಆಘಾತ ಕಾದಿತ್ತು. `ದಿ ಟೈಗರ್ ಅಂಡ್ ದಿ ಸ್ನೋ,’ ಚಿತ್ರದ ನಾಯಕನಂತೆ ಭಾವಧಾರೆಯ ಮಾತುಗಳನ್ನು ನನ್ನಿಂದ ಆಡಿಸುವುದು ಕಾಲ ಅನ್ನುವುದಕ್ಕೆ ಬೇಕಾಗಿರಲಿಲ್ಲ ಅನ್ನುವಂತೆ ಪರೀಕ್ಷೆಗಳನ್ನು ಬರೆದು ಹೋಗಿ ಯಾವುದೊ ಜ್ವರ ಹಿಡಿದು ಮಲಗಿದವಳು ಮತ್ತೆ ಮೇಲೆದ್ದಿರಲಿಲ್ಲ. ಆ ಹಾಡಿನಾ ಹುಡುಗಿಯ ಸಾವಾಗುವ ಕೆಲವೇ ದಿನಗಳಿಗೆ ಮುಂಚೆ ಆಗಲೂ ಯುಗಾದಿ ಮುಗಿದಿತ್ತು.

ಬದುಕನ್ನೇ ಪ್ರೇಮದ ಮಹಾ ಕಾವ್ಯವನ್ನಾಗಿಸಿಕೊಳ್ಳುವ, ಇರಾಕ್‌ನ ಯುದ್ಧದ ಹಿನ್ನೆಲೆಯೊಂದಿಗೆ ಹೆಣೆದಿರುವ `ದಿ ಟೈಗರ್ ಅಂಡ್ ದಿ ಸ್ನೋ’ ಎಂಬ ಇಟಾಲಿಯನ್ ಚಿತ್ರದಲ್ಲಿ ನಾಯಕ ಹೇಳುವ, `ಫಾಲ್ ಇನ್ ಲವ್ ಅಂಡ್ ಎವೆರಿಥಿಂಗ್ ವಿಲ್ ಕಮ್ ಟು ಲೈಫ್,’ ಎಂಬ ಮಾತುಗಳು ಪ್ರೇಮದ ಮಹಾನ್ ಶಕ್ತಿಯನ್ನು ಹೇಳುತ್ತಲೇ ಸಾರ್ವಕಾಲಿಕ ಸತ್ಯದ ವಕ್ತಾರಿಕೆ ಮಾಡುತ್ತಿರುವಂತೆ ಕಾಣುತ್ತಿರುವಂಥ ಈ ಹೊತ್ತಲ್ಲಿ ಎಳೆಯ ಮನಸ್ಸಿನಲ್ಲಿ ಅರಿಯದೇ ಸರುಕಾಡಿದ ಭಾವಕ್ಕೆ ಅದು ಪ್ರೀತಿ ಅಂತ ತಿಳಿಯಲು ಹಾಗೂ ಇಟಾಲಿಯನ್ ಚಿತ್ರದ ನಾಯಕ ಆಡಿದ ಮಾತುಗಳು ನಿಜ ಅಂತ ಗೊತ್ತಾಗಲು ಸುಮಾರು ವರ್ಷಗಳೇ ಬೇಕಾದವು.

ಇಂಥ ಭಕ್ತಿ ಭಾವವನ್ನು ಹುಟ್ಟಾಕುವ ಹಾಗೂ ಮಕ್ಕಳನ್ನು ಮಾನಸಿಕವಾಗಿ ಪರೀಕ್ಷೆಗಳಿಗೆ ಅಣಿಗೊಳಿಸುವ ಶಾರದಾ ಪೂಜೆಗಳು ಬಹುತೇಕ ಆಗ ಎಲ್ಲಾ ಸ್ಕೂಲುಗಳಲ್ಲೂ ನಡೆಯುತ್ತಿದ್ದವು. ನನಗೆ ಒಂಚೂರು ಬುದ್ಧಿ ಬರುವವರೆಗೂ ಈ ಶಾರದಾ ಮಾತೆಯನ್ನು ಜ್ಞಾನ, ಬುದ್ಧಿವಂತಿಕೆ ಮತ್ತು ವಿದ್ಯೆಯ ದೇವತೆ ಅಂತ ನಂಬಿದ್ದೆ. ಅಥವಾ ನಂಬಿಸಲಾಗಿತ್ತು. ಮಿಡ್ಲ್ ಸ್ಕೂಲ್ ಪಾಸಾಗಿ ಹೈಸ್ಕೂಲ್‌ಗೆ ಹೋದ ಮೇಲೆ ಶಾರದಾ ಪೂಜೆಯ ಜತೆಗೆ ಈ ಭಕ್ತಿ ಮತ್ತೊಂದು ರೂಪದಲ್ಲಿತ್ತು. ನಾನು ಹೈಸ್ಕೂಲ್ ಓದಿದ್ದು ಶೆಟ್ಟೀಕೆರೆಯ ಜನತಾ ಹೈಸ್ಕೂಲ್‌ನಲ್ಲಿ. ಅದೊಂದು ಖಾಸಗೀ ಸ್ಕೂಲ್. ಸ್ಥಳೀಯರು ಹಾಗೂ ತೋಪಯ್ಯ ಅನ್ನುವ ಜನಪರ ಡಾಕ್ಟರು ಒಗ್ಗೂಡಿ ಇದನ್ನು ಸ್ಥಾಪಿಸಿದ್ದರು. ಇದನ್ನು ಬಿಟ್ಟರೆ ನಮ್ಮ ಸುತ್ತಲಿನಲ್ಲಿ ಹೈಸ್ಕೂಲ್ ಅಂತ ಇದ್ದದ್ದು ಚಿಕ್ಕನಾಯಕನಹಳ್ಳಿಯಲ್ಲಿ. ಅಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂಗಳಿದ್ದವು. ಆ ಕಾಲಕ್ಕೇ ಇಂಗ್ಲಿಷ್ ಮೀಡಿಯಂ ಓದಬೇಕು ಅನ್ನುವವರು ಅಲ್ಲಿಗೆ ಸೇರುತ್ತಿದ್ದರು. ನನ್ನ ಅಣ್ಣ ಆ ಸ್ಕೂಲಿನಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದರಿಂದ ನನಗದು ಗೊತ್ತಿತ್ತು. ಎಲ್ಲೋ ಹಂಗೊಬ್ಬರು ಹಿಂಗೊಬ್ಬರು ಮಾತ್ರ ಅಲ್ಲಿಗೆ ಸೇರುತ್ತಿದ್ದರು. ಮಿಕ್ಕವರಿಗೆ ಶೆಟ್ಟೀಕೆರೆಯ ಈ ಸ್ಕೂಲೇ ಗತಿಯಾಗಿತ್ತು. ಇದಕ್ಕೂ ಅಷ್ಟೇ ತುಂಬಾ ದೂರದ ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಇಡೀ ಸ್ಕೂಲಿನ ವಾತಾವರಣವೇ ಲವಲವಿಕೆಯ ತಾಣವಾಗಿತ್ತು. ಕಲಿಸುವುದಕ್ಕೆ ಮತ್ತು ಕಲಿಯುವುದಕ್ಕೆ ಹೇಳಿ ಮಾಡಿಸಿದಂತಿತ್ತು. ಈ ಕಾರಣಕ್ಕೇ ವಿದ್ಯಾಥಿಗಳಿಂದ ತುಂಬಿ ತುಳುಕುತ್ತಿತ್ತು. ಕಪ್ಪು ಚೆಡ್ಡಿ, ಬಿಳಿಯ ಅಂಗಿ ಇಲ್ಲಿನ ಯೂನಿಫಾರ್ಮ್ ಆಗಿತ್ತು. ಜತೆಗೆ ತಲೆಯಲ್ಲಿ ದಿನವೂ ಕಡ್ಡಾಯವಾಗಿ ಬಿಳಿಯ ಟೋಪಿ ಇರಲೇಬೇಕಾಗಿತ್ತು. ಇಲ್ಲದಿದ್ದಲ್ಲಿ ಲಾತು ತಿನ್ನಬೇಕಾಗಿತ್ತು.

ಇಂಥ ಈ ಸ್ಕೂಲಿನಲ್ಲಿ ಬೆಳಗಿನ ಜನಗಣಮನ ಪ್ರಾರ್ಥನೆಯ ಜತೆಗೆ ಸಂಜೆ ಸ್ಕೂಲು ಬಿಡುವುದಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳನ್ನು ಹಿಡಿಸುವಂಥ ದೊಡ್ಡದೊಂದು ರೂಮಿನಲ್ಲಿ ಕೂರಿಸಿ `ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯಾ, ಮೃತ್ಯೋರ್ಮಾ ಅಮೃತಂಗಮಯಾ, ಓಂ ಶಾಂತಿ ಶಾಂತಿ ಶಾಂತಿಃ’ ಅನ್ನುವ ಪ್ರಾರ್ಥನೆಯೂ ಕಡ್ಡಾಯವಾಗಿತ್ತು. ಎಂಥದೇ ಸಂದರ್ಭಗಳಲ್ಲಿ ಕೂಡಾ ಇದನ್ನು ಹಾಡಿಸದೆ ಮನೆಗೆ ಕಳಿಸುತ್ತಿರಲಿಲ್ಲ. ಇಡೀ ಸ್ಕೂಲಿನ ಮಕ್ಕಳು ಒಕ್ಕೊರಳಿನಲ್ಲಿ ಹಾಡುತ್ತಿದ್ದ ಈ ಪ್ರಾರ್ಥನೆ ಆ ದೊಡ್ಡ ರೂಮಿನಲ್ಲಿ ಮಾರ್ದನಿಸುತ್ತಿತ್ತು. ಆ ಮಾರ್ದನಿ ಇಂದಿಗೂ ಮರೆಯಾಗಿಲ್ಲ. ನಮಗಾಗ ಅದರ ಅರ್ಥ ಗೊತ್ತಿರಲಿಲ್ಲ. ಅದನ್ನು ತಿಳಿಸುವ ಕೆಲಸವನ್ನು ಯಾರೂ ಆಗ ಮಾಡಿರಲೂ ಇಲ್ಲ.

ಇದರ ಜತೆಗೆ ನಮಗೆ ಹೆಡ್ ಮಾಸ್ಟರ್ ಆಗಿದ್ದ ಶಂಕರಲಿಂಗಪ್ಪನವರು ವಾರಕ್ಕೊಮ್ಮೆ ತಿಪಟೂರಿನಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಿಂದ ಬ್ರಹ್ಮಕುಮಾರಿಯೊಬ್ಬರನ್ನು ಕರೆಸುತ್ತಿದ್ದರು. ಅದು ಬಹುತೇಕ ಶುಕ್ರವಾರದಂದು ಇರುತ್ತಿತ್ತು. ಅವರು ಹೇಳುತ್ತಿದ್ದ ಮಾತುಗಳನ್ನು ಎಲ್ಲಾ ಮಕ್ಕಳೂ ತಪ್ಪದೇ ನೋಟ್‌ಬುಕ್ಕಿನಲ್ಲಿ ಬರೆದುಕೊಳ್ಳಬೇಕಿತ್ತು. ಹಾಗೂ ಮಾರನೆಯ ದಿನ ಅದನ್ನು ಹೆಡ್‌ಮಾಸ್ಟರಿಗೆ ತೋರಿಸಿ ಸಹಿ ಹಾಕಿಸಿಕೊಳ್ಳಬೇಕಿತ್ತು. ಆಗ ನಮಗ್ಯಾವ ಆಧ್ಯಾತ್ಮ? ಅದೆಲ್ಲಿ ತಲೆಗೆ ಹೋಗುತ್ತಿತ್ತು? ಸುಮ್ಮನೆ ಬರೆದುಕೊಳ್ಳುತ್ತಿದ್ದೆವು. ಹಿಂಗೆ ಬರೆದುಕೊಳ್ಳುತ್ತಿದ್ದದ್ದು ವರ್ಷದ ಕೊನೆಗೆ ನೂರು ಪೇಜಿನ ಒಂದು ನೋಟ್‌ಬುಕ್ ತುಂಬುತ್ತಿತ್ತು. ಇದರಿಂದ ಯಾವ ಮಕ್ಕಳಿಗೆ ಏನು ಉಪಯೋಗ ಆಯ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹೈಸ್ಕೂಲ್ ಮುಗಿಸಿ ತಿಪಟೂರಿನ ಕಲ್ಪತರು ಕಾಲೇಜಿಗೆ ಪಿ.ಯೂ.ಸಿ ಸೈನ್ಸ್ ವಿಭಾಗಕ್ಕೆ ಸೇರಿದಾಗ ನನಗಂತೂ ಇದು ತುಂಬಾ ಉಪಯೋಗಕ್ಕೆ ಬಂದಿತ್ತು. ಯಾಕೆಂದರೆ ಸೈನ್ಸ್ ಓದಿನಲ್ಲಿ ಆಸಕ್ತಿ ಕಳಕಂಡು ಕಾಲೇಜಿಗೆ ಹೋಗದೆ ಸುಮ್ಮನೆ ಅಲೆಯುವಾಗ ಮಧ್ಯಾಹ್ನಕ್ಕೆಲ್ಲಾ ಹೊಟ್ಟೆ ಚುರುಗುಟ್ಟುತ್ತಿತ್ತು. ಆಗ ಬ್ರಹ್ಮಕುಮಾರಿ ಕೇಂದ್ರ ತಿಪಟೂರಿನ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಹಡಿಯ ಮನೆಯೊಂದರಲ್ಲಿತ್ತು. ಈ ಮುಂಚೆ ಹೈಸ್ಕೂಲಿಗೆ ಉಪನ್ಯಾಸ ನೀಡಲು ಬರುತ್ತಿದ್ದ ಬ್ರಹ್ಮಕುಮಾರಿಯೊಬ್ಬರು ಪರಿಚಯ ಇದ್ದ ಕಾರಣಕ್ಕೆ ಅದೊಂದು ದಿನ ಧೈರ್ಯ ಮಾಡಿ ಅಲ್ಲಿಗೆ ಹೋಗಿದ್ದೆ. ಅವರು ನನ್ನನ್ನು ಗುರುತು ಹಿಡಿದು ಪ್ರೀತಿಯಿಂದ ಮಾತನಾಡಿಸಿದ್ದ ಕಾರಣಕ್ಕೆ ದಿನವೂ ಮಧ್ಯಾಹ್ನದ ಹೊತ್ತು ಅಲ್ಲಿಗೆ ಹೋಗಲು ಪ್ರಾರಂಭಿಸಿದ್ದೆ. ಅವರು ಮುಂಚಿಗಿಂತ ಚಂದ ಕಾಣತೊಡಗಿದ್ದರು. ಉಪನ್ಯಾಸ ಕೇಳುವ ಸಲುವಾಗಿ ಅಲ್ಲ. ಆ ಹೊತ್ತಲ್ಲಿ ಅವರು ಕೊಡುತ್ತಿದ್ದ ಹಣ್ಣುಗಳ ಸಲುವಾಗಿ. ಆ ಸೇಬು, ದ್ರಾಕ್ಷಿ, ಬಾಳೇಹಣ್ಣುಗಳು ನನ್ನ ಹಸಿವನ್ನು ತಕ್ಕ ಮಟ್ಟಿಗೆ ತಣಿಸುತ್ತಿದ್ದವು. ನಾನು ಕಾಲೇಜನ್ನು ಬಿಟ್ಟು ಬೆಂಗಳೂರಿನ ದಾರಿಯನ್ನು ಹಿಡಿದ ಮೇಲೆ ಮತ್ತಲ್ಲಿಂದ ಬಂದು ಚಿಕ್ಕನಾಯಕನಹಳ್ಳಿಯ ಪಿ.ಯೂ ಕಾಲೇಜಿಗೆ ಸೇರಿಕಂಡ ಮೇಲೆ ತಿಪಟೂರಿನತ್ತ ಮುಖ ಹಾಕಿರಲಿಲ್ಲ. ಹಂಗಾಗಿ ಆ ಬ್ರಹ್ಮಕುಮಾರಿ ಹಾಗೂ ಅವರ ಕೇಂದ್ರ ಮರೆತುಹೋಗಿತ್ತು. ಈಗಲೂ ತಿಪಟೂರಿನ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೋಗುವಾಗ ಇದೆಲ್ಲಾ ನೆನಪಾಗುತ್ತೆ. ಈಗ ಈ ಬ್ರಹ್ಮಕುಮಾರಿ ಕೇಂದ್ರ ತಿಪಟೂರಿನಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ.

ಹಿಂಗೆ ವರ್ಷವಿಡೀ ಆಟ ಪಾಠದ ಜತೆಗೆ ಆಧ್ಯಾತ್ಮ, ಜೀವನ ಪಾಠಗಳನ್ನು ಒದಗಿಸುತ್ತಿದ್ದ ಈ ಜನತಾ ಹೈಸ್ಕೂಲಿನ ವಾತಾವರಣ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಹತ್ತಿರವಾಗತೊಡಗಿದಂತೆ ಗಂಭೀರವಾಗಿಬಿಡುತ್ತಿತ್ತು. ಆಗ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಚಿಕ್ಕನಾಯಕನಹಳ್ಳಿಗೆ ಹೋಗಬೇಕಿತ್ತು. ಇನ್ನೇನು ಪರೀಕ್ಷೆ ಹತ್ತಿರ ಬರುತ್ತಿದೆ ಅನ್ನುವಾಗ ಶಾರದಾ ಪೂಜೆ ಮತ್ತೆ ಗ್ರೂಪ್ ಫೋಟೋ ಕಾರ್ಯಕ್ರಮ ಇರುತ್ತಿತ್ತು. ಫೋಟೋ ತೆಗೆಯಲು ಚಿಕ್ಕನಾಯಕನಹಳ್ಳಿಯ ಸ್ಟೂಡಿಯೋ ಒಂದರಿಂದ ಫೋಟೋಗ್ರಾಫರ್ ಒಬ್ಬರು ಅವತ್ತು ಬೆಳಗ್ಗೆಯೇ ಬಂದುಬಿಡುತ್ತಿದ್ದರು. ನಾವು ನಮ್ಮಲ್ಲಿ ಇರುತ್ತಿದ್ದ ಮಡಗಿ ಹಾಕಿಕೊಳ್ಳುತ್ತಿದ್ದ ಚೆಡ್ಡಿ ಮತ್ತು ಅಂಗಿಗಳನ್ನು ಅವತ್ತು ಹಾಕಿಕಂಡು ಬರುತ್ತಿದ್ದೆವು. ಶಾರದಾ ಪೂಜೆ ಮುಗಿಯುತ್ತಲೇ ಈ ಫೋಟೋ ತೆಗೆಯುವ ಕಾರ್ಯಕ್ರಮದ ತಯಾರಿ ಶುರುವಾಗುತ್ತಿತ್ತು. ಮೇಷ್ಟ್ರುಗಳು ಕೂರುವ ಸಲುವಾಗಿ ಕುರ್ಚಿಗಳು, ಅದರ ಹಿಂದೆ ಹೆಣ್ಣು ಮಕ್ಕಳು. ಆ ಹೆಣ್ಣು ಮಕ್ಕಳ ಹಿಂದೆ ಉದ್ದಕ್ಕೆ ಎರಡು ಸಾಲು ಬೆಂಚುಗಳನ್ನು ಹಾಕಲಾಗುತ್ತಿತ್ತು. ಮೊದಲ ಸಾಲಿನಲ್ಲಿ ಸ್ವಲ್ಪ ಕುಳ್ಳಗಿರುವ, ಅದರ ಹಿಂದಿನ ಸಾಲಿನಲ್ಲಿ ಎತ್ತರಕ್ಕಿದ್ದ ಹುಡುಗರು ಹತ್ತಿ ನಿಲ್ಲಬೇಕಿತ್ತು. ಜಾಗದ ಸಿಗದ ಹೆಣ್ಣು ಮಕ್ಕಳು ಮೇಷ್ಟ್ರುಗಳ ಕುರ್ಚಿಗಳ ಮುಂದೆ ಈರುಮಂಡಿ ಹಾಕಿಕಂಡು ಕೂರುತ್ತಿದ್ದರು. ಆ ದಿನ ಸಾಧ್ಯವಿದ್ದ ಹುಡುಗ ಹುಡುಗಿಯರು ಚಂದದ ಧಿರಿಸುಗಳ ಜತೆಗೆ ಯಾರನ್ನಾದರೂ ಅಂಗಲಾಚಿ ವಾಚುಗಳನ್ನು ಕಟ್ಟಕಂಡು ಬರುತ್ತಿದ್ದರು. ಹಂಗೆ ಕಟ್ಟಿಕಂಡು ಬಂದವರೆಲ್ಲಾ ಎರಡೂ ಕೈಗಳನ್ನು ಕಟ್ಟಿ ನಿಲ್ಲುತ್ತಿದ್ದರು. ಆದರೆ ವಾಚನ್ನು ಕಟ್ಟಿದ್ದ ಕೈಯ್ಯಿ ಮೇಲಿರುತ್ತಿತ್ತು. ಮತ್ತು ಆ ವಾಚು ಎದ್ದು ಕಾಣುವಂತಿರುತ್ತಿತ್ತು. ಆಗ ಸ್ಕೂಲಿಗೆ ಮಕ್ಕಳು ವಾಚನ್ನು ಕಟ್ಟಿಕೊಂಡು ಬರುತ್ತಿರಲಿಲ್ಲ. ಯಾಕೆಂದರೆ ಆಗ ವಾಚು ಅನ್ನುವುದು ತುಂಬಾ ಅಪರೂಪದ ಹಾಗೂ ಆಕರ್ಷಣೆಯ ಸಂಗತಿಯಾಗಿತ್ತು. ನಮ್ಮಂಥ ಮಕ್ಕಳು ವಾಚು ಕಟ್ಟಿಕೊಂಡವರನ್ನು ತುಂಬಾ ಕುತೂಹಲದಿಂದ ನೋಡುತ್ತಿದ್ದೆವು. ಅವತ್ತು ಫೋಟೋ ಕಾರ್ಯಕ್ರಮಕ್ಕೆ ನಾನೂ ಒಂದು ವಾಚನ್ನು ಕಟ್ಟಕಂಡು ಹೋಗಬೇಕು ಅಂದುಕೊಂಡಿದ್ದೆ. ಹಂಗಂತ ನನ್ನ ಹತ್ತಿರ ವಾಚೇನೂ ಇರಲಿಲ್ಲ. ಅಣ್ಣನ ಬಳಿ ಇತ್ತು. ಅಣ್ಣನಿಗೆ ನಾನು ಹೈಸ್ಕೂಲಿನಲ್ಲಿ ಓದುವ ಕಾಲಕ್ಕೇ ಕೃಷೀ ಇಲಾಖೆಯಲ್ಲಿ ಹುಮ್ನಾಬಾದ್‌ನಲ್ಲಿ ಕೆಲಸ ಸಿಕ್ಕಿತ್ತು. ದೂರದ ಹುಮ್ನಾಬಾದಿನಿಂದ ಒಂದು ವಾರ ರಜೆಯ ಮೇಲೆ ಅಣ್ಣ ಊರಿಗೆ ಬಂದಿದ್ದರು. ಹಂಗೆ ಬರುವಾಗ ಅವರ ಕೈಯ್ಯಲ್ಲಿ ದಪ್ಪನೆಯ ಗಡಿಯಾರವನ್ನು ನೋಡುತ್ತಲೇ ನನ್ನ ಜೀವ ಮಿಳ್ಳೆಂದಿತ್ತು. ಅದು ಆಗಷ್ಟೇ ಹೊಸದಾಗಿ ಬಂದಿದ್ದ ಹೆಚ್.ಎಂ.ಟಿ ಆಟೋಮ್ಯಾಟಿಕ್ ವಾಚ್. ವಾಚುಗಳಿಗೆ ಕೀ ಕೊಡಬೇಕು ಅನ್ನುವುದು ನನಗೆ ಗೊತ್ತಿತ್ತು. ಆದರೆ ಕೀನೇ ಕೊಡದಂಗೆ ನಡೆಯುವ ಈ ವಾಚಿನ ಬಗ್ಗೆ ತುಂಬಾ ಕುತೂಹಲ ಹುಟ್ಟಿತ್ತು. ಅವತ್ತೊಂದು ದಿನ ಅಣ್ಣ ವಾಚನ್ನು ಮನೆಯಲ್ಲೇ ಬಿಟ್ಟು ಊರೊಳಕ್ಕೆ ಹೋಗಿದ್ದರು. ಆಗ ನಾನು ತೆಪ್ಪಗಿದ್ದರೆ ಅಣ್ಣನನ್ನು ಕಾಡಿಬೇಡಿ ಕಾರ್ಯಕ್ರಮಕ್ಕೆ ಕಟ್ಟಿಕಂಡು ಹೋಗಬಹುದಿತ್ತು. ಆದರೆ ನನ್ನ ತೀಟೆ ಮನಸ್ಸು ಅಲ್ಲೀವರೆಗೂ ಕಾಯಲು ತಯಾರಿರಲಿಲ್ಲ. ಹಂಗಾಗಿ ರೂಮಿನ ಗೂಟಕ್ಕೆ ನೇತಾಕಿದ್ದ ವಾಚನ್ನು ಮೆಲ್ಲಗೆ ಎತ್ತಿಕಂಡು ಪಕ್ಕದ ಕೊಟ್ಟಿಗೆ ಮನೆಯ ಜಗಲಿಯಲ್ಲಿ ಕೂತು ಸುಮಾರು ಹೊತ್ತು ಅದನ್ನೇ ದಿಟ್ಟಿಸಿದ್ದೆ. ಅದರ ಟಿಕ್ ಟಿಕ್ ಸದ್ದು ನನ್ನೊಳಗೆ ರೋಮಾಂಚನ ಹುಟ್ಟಾಕುತ್ತಿತ್ತು. ಆದರೆ ಕೀ ಇಲ್ಲದೆ ಇದು ನಡೆಯುವುದಾದರೂ ಹೆಂಗೆ ಅನ್ನುವ ಅನುಮಾನ ಶುರುವಾಯ್ತು. ಹಂಗನಿಸಿದ್ದೇ ತಡ ಮೆಲ್ಲಗೆ ವಾಚಿನ ಹಿಂಭಾಗದಿಂದ ಅದನ್ನು ಬಿಚ್ಚಲು ನೋಡಿದೆ. ಸ್ವಲ್ಪ ಹೊತ್ತಾದ ಮೇಲೆ ಹೆಂಗೆ ಬಿಚ್ಚಬೇಕು ಅನ್ನುವುದು ತಿಳಿಯುತ್ತಲೇ ಮೆಲ್ಲಗೆ ಒಂದೆರಡು ಸುತ್ತು ಸುತ್ತಿಸುತ್ತಲೇ ಅದರ ಸ್ಟೀಲ್ ಮುಚ್ಚಳ ಸಲೀಸಾಗಿ ಬಿಚ್ಚಿಕಂಡಿತು. ಅಲ್ಲಿ ಸಣ್ಣಸಣ್ಣ ಮತ್ತು ಒಂಚೂರು ದೊಡ್ಡನೆಯ ಚಕ್ರಗಳು ಹಾಗೂ ಮತ್ತಿತರ ತುಂಬಾ ಚಿಕ್ಕದಾದ ಭಾಗಗಳಿದ್ದವು. ಇದನ್ನು ನೋಡಿಯಾದ ಮೇಲೆ ಮುಂದುಗಡೆ ಗಾಜಿನಡಿಯಲ್ಲಿ ಸುತ್ತುತ್ತಿದ್ದ ಮುಳ್ಳುಗಳತ್ತ ಮನಸ್ಸು ಹೋಯ್ತು. ಹಂಗಾಗಿ ಬ್ಲೇಡಿನ ಸಹಾಯದಿಂದ ಮೇಲಿನ ಗಾಜನ್ನು ಬಿಚ್ಚಿದೆ. ಸೆಕೆಂಡಿನ ಮುಳ್ಳನ್ನು ಒಮ್ಮೆ ಮುಟ್ಟಿದೆ. ಅದು ಅಲ್ಲೇ ನಿಂತುಕಂಡಿತು. ಕೇವಲ ಸೆಕೆಂಡಿನ ಮುಳ್ಳು ಮಾತ್ರ ನಡೆಯುತ್ತಿದೆ ಚಿಕ್ಕ ಮುಳ್ಳು ಮತ್ತು ದೊಡ್ಡ ಮುಳ್ಳುಗಳು ಯಾಕೆ ನಡೆಯುತ್ತಿಲ್ಲ ಅನಿಸುತ್ತಲೇ ಮೆಲ್ಲಗೆ ಅವುಗಳನ್ನು ಹಿಡಿದು ಮೇಲೆತ್ತಿದೆ. ತಗೋ ಸೆಕೆಂಡಿನ ಮುಳ್ಳಿನ ಸಮೇತ ಮೂರು ಮುಳ್ಳುಗಳೂ ಆಚೆ ಬಂದವು. ಮತ್ತೆ ಅವುಗಳನ್ನು ಹಂಗೇ ಜೋಡಿಸಲು ಯತ್ನಿಸಿದೆ. ಎಷ್ಟು ತಿಣುಕಿದರೂ ಸಾಧ್ಯವಾಗದೇ ಹೋಯ್ತು. ಗಾಬರಿಯಾಗಿ ಆ ಮುಳ್ಳುಗಳನ್ನೆಲ್ಲಾ ಹಂಗೇ ಹಾಕಿ ಅವುಗಳ ಮೇಲೆ ಗಾಜನ್ನು ಅಮುಕಿ ಕೂರಿಸಿದೆ. ಭಯವಾಯ್ತು. ಎದೆ ಡವಗುಡತೊಡಗಿತು. ಅಷ್ಟರಲ್ಲಿ ನಾನು ಅಲುಗಾಡಿಸುತ್ತಿದ್ದ ರಭಸಕ್ಕೋ ಇಲ್ಲಾ ಕೆಳಗಿನಿಂದ ಏನೋ ತಾಕಿದ್ದ ಕಾರಣಕ್ಕೋ ಎರಡು ಚಕ್ರಗಳು ಕೆಳಗುದುರಿದ್ದವು. ಏನು ಮಾಡಿದರೂ ಅವುಗಳು ತಾವು ಮುಂಚೆ ಇದ್ದ ತಾವಿನಲ್ಲಿ ಕೂರಲು ಒಪ್ಪಲೇ ಇಲ್ಲ. ಸರಿ ಬಿದ್ದಿದ್ದವುಗಳನ್ನೆಲ್ಲಾ ತುಂಬಿ ಮುಂಬದಿಯ ಗಾಜಿನಂತೆ ಹಿಂಬದಿಯ ಸ್ಟೀಲಿನ ಮುಚ್ಚಳವನ್ನೂ ಹಂಗೇ ಅದುಮಿ ಕೂರಿಸಿದೆ. ನನ್ನ ಕೆಟ್ಟ ಕುತೂಹಲ ಮತ್ತು ರಾಪಾಟಕ್ಕೆ ವಾಚು ಹಸಗೆಟ್ಟು ಹೋಗಿತ್ತು. ನಡೆಯುವದನ್ನು ನಿಲ್ಲಿಸಿತ್ತು. ಇದಕ್ಕಾಗಿ ಅಣ್ಣ ತುಂಬಾ ಬೇಜಾರು ಮಾಡಿಕಂಡರು. ಸಂಜೆ ಅಯ್ಯನಿಂದ ಮಹಾ ಮಂಗಳಾರತಿಗಳಾದವು. ಅದಾದ ಒಂದೆರಡು ದಿನಕ್ಕೆ ಅಣ್ಣ ಮತ್ತೆ ಹುಮ್ನಾಬಾದಿಗೆ ಹೋದರು. ಮತ್ತೆ ಬರುವಾಗ ಅಣ್ಣನ ಕೈಯ್ಯಲ್ಲಿ ಬೇರೊಂದು ಹೊಸಾ ವಾಚಿತ್ತು. ಯಾಕೆಂದರೆ ನಾನು ಆ ಆಟೋಮ್ಯಾಟಿಕ್ ವಾಚನ್ನು ರಿಪೇರಿಗೆ ಬಾರದಷ್ಟು ಪತಗೆಡಿಸಿದ್ದೆ. `ತಗಾ ಇನ್ಮೇಲೆ ಇದು ನಿಂಗೇಯಾ. ಏನಾರಾ ಮಾಡ್ಕ’ ಅಂತ ನಾನು ಕೆಡಿಸಿದ್ದ ವಾಚನ್ನು ಅಣ್ಣ ನನ್ನ ಕೈಗಿತ್ತಿದ್ದರು. ನನ್ನ ಪಾಲಿಗೆ ವಾಚು ಅಂದರೆ ಅದು ವಾಚೇ. ಅದು ನಡೆಯೋತ್ತೋ ಬಿಡುತ್ತೋ ಅನ್ನುವುದು ನನಗೆ ಮುಖ್ಯವೇ ಆಗಿರಲಿಲ್ಲ ಆಗ. ಕೈಗೆ ವಾಚು ಬಂದ ಚಣದ ಖುಷಿ ಹೇಳತೀರದಾಗಿತ್ತು.

ಈ ನಡೆಯದಾ ವಾಚು ಹಗಲು ರಾತ್ರಿ ಅನ್ನದೇ ನಾನು ಪಿ.ಯೂಗಾಗಿ ತಿಪಟೂರಿನ ಕಾಲೇಜಿಗೆ ಸೇರುವ ತನಕ ನನ್ನ ಕೈಯ್ಯಲ್ಲಿತ್ತು. ನನ್ನಿಂದ ಪಡಬಾರದ ಕಷ್ಟ ಅನುಭವಿಸಿತ್ತು. ಕಾಲೇಜಿಗೆ ಸೇರಿದ ಮೇಲೆ ಈ ನಡೆಯದಾ ವಾಚನ್ನು ಕಟ್ಟಿಕೊಂಡಿರುವುದು ಯಾರಿಗಾದರೂ ಗೊತ್ತಾದರೆ ಲೇವಡಿ ಮಾಡುತ್ತಾರೆ ಅನ್ನುವ ಕಾರಣಕ್ಕೆ ಇದನ್ನು ಕಾಲೇಜಿಗೆ ಕಟ್ಟಿಕಂಡು ಹೋಗುತ್ತಿರಲಿಲ್ಲ. ಅಲ್ಲಿಂದ ಬರುತ್ತಲೇ ಮತ್ತೆ ಅದನ್ನು ಕಟ್ಟಿಕೊಳ್ಳುತ್ತಿದ್ದೆ. ನಾನು ಕಾಲೇಜು ಬಿಟ್ಟು ಸೀದಾ ಬೆಂಗಳೂರಿಗೆ ಹೋಗಿ ವಾಪಸ್ಸು ಬರುವ ಹೊತ್ತಿಗೆ ಅದು ಮನೆಯಿಂದ ಕಣ್ಮರೆಯಾಗಿತ್ತು. ಅದನ್ನು ವಿಚಾರಿಸುವ ಮನಸ್ಸೂ ನನ್ನಲ್ಲಿ ಇಲ್ಲದಾಗಿತ್ತು. ಆದರೆ ಈಗಲೂ ಈ ಚಣಕ್ಕೂ ಆ ನಡೆಯದಾ ವಾಚಿನ ಚಿತ್ರ ನನ್ನಿಂದ ಮರೆಯಾಗಿಲ್ಲ.

(ಹಿಂದಿನ ಕಂತು: ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ