ಬೇಡದ ಸಾಲು
ದೂಡಬಹುದೇ ಸುಮ್ಮನೆ
ಯಾರನ್ನಾದರೂ
ಹೇಗೋ ನುಸುಳಿದ ಬೇಡದ ಸಾಲೊಂದನ್ನು
ಕವಿತೆಯೊಳಗಿಂದ ಅನಾಮತ್ತು
ಕಾಟು ಹಾಕಿದಂತೆ!
ಬರೆದ ಪದ್ಯದ ಪದಗಳ ಅದಲು ಬದಲಾಗಿಸಿ
-ದ ಹಾಗೆ
ಎದೆಯ ಗೂಡ ನೆನಪ ಚಿತ್ರಗಳನ್ನು
ಕತ್ತರಿಸಿ ನಕಲಿಸಿ ಅಂಟಿಸಿದಷ್ಟು ಸಲೀಸಲ್ಲ!
ಕೋಗಿಲೆಗೂ ಕಾವಿಗಿಷ್ಟು ಜಾಗ ಬೇಕು
ಕಾಗೆ ತತ್ತಿಯ ಹೊರ
ಹಾಕಿದ್ದು ಮಾಮರಕೂ ನೆನಪಿಲ್ಲ…
ನಾವಾದರೂ ಯಾಕೆ ದೂಡೋಣ?
ಬಂದ ಮಳೆ ಕಳೆದ ಋತುವ ಮತ್ತೆ
ನೆನೆದು ಅತ್ತಿದ್ದೋ, ಸಂಭ್ರಮಿಸಿದ್ದೋ ಬಲ್ಲವರಾರು
ಕಣ್ಣ ಹನಿಗಳ ಕೆನ್ನೆ ಮೇಲೆ
ಉರುಳಿಸಿದಂತೆ ಎದೆಗಿಳಿದವರ ಕೆಡವಲಾದೀತೆ ಹೇಳಿ?
ಬೇಕಾದ ಗಟ್ಟಿ ಬೀಜ ಪಡೆದ ಮಣ್ಣು
ಮೊಳಕೆ ಬರಿಸಿ
ಮುಗಿಲಿಗೆ ಮುಖ
ಮಾಡುವುದನ್ನು ಕಲಿಸಿ ಕಳಿಸುತ್ತದೆ; ಜೊಳ್ಳು
ತನ್ನೊಡಲಲ್ಲಿಯೇ ಕರಗಿಸಿದಂತೆ
ನಾವು ನೀವು ದೂಡಲಾದೀತೇ?
ಕಣ್ಮುಂದಿನ ಬಂಧನವಿದು ಬೇಡವಾದರೂ
ಬೆರಳ ಹಿಡಿದು ಸಾಗಬೇಕು
ಹಾಡುಗಳು ಮುಗಿದಿಲ್ಲ…


