ಹಾಲು ಹಾಕಿದರೆ ತನ್ನಷ್ಟಕ್ಕೆ ಮೊಸರಗುವ ಕಲ್ಲಿನ ಪಾತ್ರೆಯೊಂದು ನನ್ನನ್ನು ಅಚ್ಚರಿಗೆ ಕೆಡವಿತು. ನನ್ನ ವೈಜ್ಞಾನಿಕತೆ ಹೆಡೆಯೆತ್ತಿತು. ಅರೆ ನೋಡಿಯೇ ಬಿಡೋಣ ಎನ್ನುತ್ತ ಅದನ್ನು ತಿರುಗಿಸಿ ಮುರುಗಿಸಿ ನೋಡಿ ಮಾರುವಾತನಿಗೆ ನೂರಾರು ಪ್ರಶ್ನಾವಳಿಯ ಮಾಲೆ ಹಾಕಿ ಸುಸ್ತು ಹೊಡೆಸಿ ಕೊನೆಗೂ ಕೊಂಡುಕೊಂಡೆ. ಎಷ್ಟು ಬೈದುಕೊಂಡನೋ? ಮನೆಗೆ ಬಂದವನೆ ಪ್ರಯೋಗ ಮಾಡಿ ನೋಡಿದೆ. ಏನ್ ಅಚ್ಚರಿ ರಾತ್ರಿ ಹಾಕಿದ ಹಾಲು ಬೆಳಿಗ್ಗೆ ಮೊಸರಾಗಿತ್ತು. ಶತಮಾನಗಳ ಬ್ಯಾಕ್ಟೀರಿಯಾಗಳು ಇಲ್ಲಿ ದಂಡಿಯಾಗಿ ಸಂಗ್ರಹವಾಗಿ ಹಾಲನ್ನು ಮೊಸರುಮಾಡುತ್ತಿರಬೇಕು ಎಂದ ಗೆಳೆಯನೊಬ್ಬ!! ಬದುಕಿರುವ ಬ್ಯಾಕ್ಟೀರಿಯ ಮಾತ್ರ ಹಾಲನ್ನು ಮೊಸರು ಮಾಡುತ್ತದೆ ಮಾರಾಯ ಎಂದು ಸುಮ್ಮನಾದೆ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುಲಧಾರಾ ಪ್ರವಾಸದ ಕುರಿತ ಬರಹ ಇಲ್ಲಿದೆ
ನಾಲ್ಕೈದು ದಿನಗಳ ಮರುಭೂಮಿಯ `ಮರು’ ಹಬ್ಬಕ್ಕೆ ಬಾ ಎಂದು ಗೆಳೆಯ ಕರೆದಾಗ ಸುಮ್ಮನೆ ಒಪ್ಪಿಕೊಂಡೆ. ನೋಡುವ ಸಭ್ಯ ಹಳ್ಳಿಗಳಿಗಿಂತ ಇಂತಹ ಅಪರೂಪದ ಭಿನ್ನ ಹಳ್ಳಿಗಳನ್ನು ಹುಡುಕಿ ಹೊರಟಾಗ ದಕ್ಕಿದ್ದು ಕುಲ್ಧಾರಾ ನೋಡುವ ಥ್ರಿಲ್. ಹಬ್ಬದ ನಡುವೆಯೇ ಸ್ವಲ್ಪ ಬಿಡುವಿತ್ತು. ಆ ದಿನ ನಾವೆಲ್ಲಾ ಕುಲ್ಧಾರಾ ಎನ್ನುವ ವಿಶಿಷ್ಟ ಹಳ್ಳಿಗೆ ಥಾರ್ ಮರುಭೂಮಿಯಲ್ಲಿ ಒಂಟೆ ಪ್ರಯಾಣ ಮಾಡಿದೆವು.
ಆ ಏರು ತಗ್ಗುಗಳ ನಡುವೆ ಒಂಟೆಯ ಮೇಲೆ ಕುಳಿತು ಪಯಣಿಸುವ ಅನುಭವ ಬಹಳ ವಿಶಿಷ್ಟ. ಕೆಲವೊಮ್ಮೆ ಓಡುವ ಒಂಟೆ, ಕೆಲವೊಮ್ಮೆ ಬೀಳಿಸುವಂತೆ ನಡೆಯುತ್ತದೆ. ಸ್ವಲ್ಪ ಹೊತ್ತಿಗೆ ಈ ಒಂಟೆಯ ಸಹವಾಸವೇ ಬೇಡ ಎನಿಸುವಷ್ಟು ಭಯ ಹುಟ್ಟಿಸುತ್ತದೆ! ಭಯವಾಗಿ ಕಿರುಚಿದ್ದೂ ಇದೆ. ಮರುಭೂಮಿಯ ಕತೆಗಳ ಹೇಳುವ ಗೆಳೆಯನಂತಹ ಲಕ್ಷ ಲಕ್ಷ ಬೆಲೆಯ ಒಂಟೆಯ ಸಾಹುಕಾರ ನಡೆದೇ ಬರುತ್ತಿದ್ದ. ಪಾಪ. ಆದರೂ ಸುಡುವ ಬಿಸಿಲು ಬಿಸಿ ಮರಳಿನ ಮೇಲೆ ನಡೆಯುವುದಕ್ಕಿಂತ ಒಂಟೆಯೇ ವಾಸಿ ಎನಿಸಿ ಸುಮ್ಮನಿದ್ದೆ. ಅಲ್ಲಲ್ಲಿ ಸಣ್ಣ ಮಳೆಯಾಗಿ ರವೆ ಉಂಡೆಗಳಂತೆ ಮರಳು ಉಂಡೆ ಕಟ್ಟಿತ್ತು. ನೆತ್ತಿಗೇರಿದ ಸೂರ್ಯ ಕೆಂಡವಾಗಿದ್ದ.
ಕೆಂಡ ಉಗುಳುವ ಕಾಬಾ ಕೋಟೆ
ಸಾಮ್ ಡ್ಯೂನ್ನಲ್ಲಿ ನಡೆಯುತ್ತಿದ್ದ ಮರು ಮಹೋತ್ಸವದ ಒಂಟೆ ಕಂಬಳ ನೋಡಿಕೊಂಡು ನಮ್ಮ ಪಯಣ ಹೊರಟಿದ್ದು ಕಾಬಾ ಕೋಟೆ ಕಡೆಗೆ. ಸಿಲ್ಕ್ ರೂಟ್ನ ನಡುವೆ ಸಿಕ್ಕಿ ಹಾಕಿಕೊಂಡ ಚಿಕ್ಕ ಕೋಟೆ ಪಟ್ಟಣ. ಜೈಸಲ್ಮೇರ್ನಿಂದ ಬರೋಬ್ಬರಿ 18 ಕಿ.ಮೀ.
ಸಾಮ್ ಡ್ಯೂನ್ನಿಂದ ಒಂಟೆ ಮೇಲೆ ಕೂರಿಸಿ ಸ್ವಲ್ಪ ದೂರ ಮತ್ತು ಏಳು ಕಿಲೋಮೀಟರ್ ದೂರವನ್ನು ಥಾರ್ಮರುಭೂಮಿಯ ಬಿಳಿ ಉಸುಕಿನಲ್ಲಿ ನಮ್ಮನ್ನು ನಡೆಸಿಕೊಂಡು ಟೆಂಟ್ ರವಾನಿಸಲಾಯಿತು. ಜಾಲಿ ಜಾತಿಯ ವಿವಿಧ ಮರಗಳ ವಿಶಾಲ ಮರುಭೂಮಿ. ಕೇರ್ ಸಾಂಗ್ರಿಯ ಪಲ್ಯ ಮಿಲೆಟ್ಕಾಳಿನ ರೊಟ್ಟಿ ಜೊತೆಗೊಂದಿಷ್ಟು ಸಿಹಿ ಉಣಬಡಿಸಲಾಯಿತು. ಸ್ಮಶಾನ ಸದೃಶ ನೀರವ. ಅಲ್ಲಲ್ಲಿ ಸಣ್ಣ ಕಲ್ಲು ಹರಡಿ ಕಟ್ಟಿದ ಪುಟಾಣಿ ಜೋಪಡಿ. ಜಾಲಿ ಜಾತಿಯ ಮರಗಳ ನಡುವೆ ಸೂರ್ಯಮಾಮನ ಕಣ್ಣಾಮುಚ್ಚಾಲೆ. ಬಿಸಿ ಮರಳ ದಿಬ್ಬಗಳ ಮೇಲೆ ಮಲಗಿ ಬೆಳದಿಂಗಳ ರಾತ್ರಿಯಲಿ ಕವಿತಾ ವಾಚನವೇ ನಡೆಯಿತು. ಟೆಂಟ್ಗಳಿಗೆ ಮರಳಿ ಉಂಡು ಅಡ್ಡಾದೆವು. ನಡೆದು ಬಂದ ಸುಸ್ತು, ಮರುಭೂಮಿಯ ಶಾಖಕ್ಕೆ ನಿದ್ದೆ ನಮ್ಮನ್ನು ಆಪೋಷನ ತೆಗೆದುಕೊಂಡಿದ್ದೇ ತಿಳಿಯಲಿಲ್ಲ.
ಬೆಳಗಿನ ಬೆಳಕಿಗೆ ಮುಂಜಾನೆ ಕಣ್ಣು ಬಿಟ್ಟರೆ ಸುತ್ತಲೂ ವಿವಿಧ ಮಾಸ್ತಿ ಕಲ್ಲುಗಳಂತಹ ಕಲ್ಲುಗಳನ್ನು ನಮ್ಮ ಟೆಂಟ್ ಸನಿಹವೇ ಈಗಲ್ಲ ಸುಮಾರು ವರ್ಷಗಳ ಹಿಂದೆ ಹೂತಿದ್ದರು! ದೊಡ್ಡ ವಿಜ್ಞಾನಿಯ ಫೋಜು ಕೊಡುತ್ತಾ ಅವನ್ನೆಲ್ಲಾ ನಿರುಕಿಸಿ ಪುಂಗಿ ಊದುವ ಮುದುಕನೆದುರು ಅವನ ಸುಖ ಕಷ್ಟ ವಿಚಾರಿಸುತ್ತಾ ಕುಳಿತೆ. ಆತನ ಗೋಮುರ್ ಭಾಷೆಗೂ ನನ್ನದಕ್ಕೂ ಅಜಗಜಾಂತರ! ಹೃದಯಕ್ಕಿಳಿಯಲಿಲ್ಲ! ಅರ್ಥವಾಗಿದ್ದು ಆತನ ಸುಕ್ಕು ಮತ್ತು ಆತನ ಲಯ ವಿಜ್ಞಾನ. ಮೈತುಂಬ ಹೇರಿಕೊಂಡಿದ್ದ ವಿವಿಧ ಆಭರಣಗಳು, ಪುಂಗಿ ವಾದನದ ಕೊನೆ ತಲಮಾರಿನ ಕೊನೆಯ ಕೊಂಡಿಯಂತೆ ಕಾಣಿಸಿದ. ಆತನ ಮಕ್ಕಳೆಲ್ಲಾ ದೂರದೂರದ ಊರುಗಳಲ್ಲಿ ನೌಕರಿ ಹಿಡಿದಿದ್ದರು. ಬದುಕಿನ ಬಂಡಿ ನೂಕಲು ಈತ ಪುಂಗಿ ಹಿಡಿದಿದ್ದ. ಸನಿಹದ ಕೋಟೆದ್ವಾರದಲ್ಲೂ ಪುಂಗಿವಾದಕನೊಬ್ಬ ನಮ್ಮನ್ನು ಚುಂಬಕದಂತೆ ಆಕರ್ಷಿಸಿದ್ದ. ಶ್ವಾಸಕೋಶದಿಂದ ಕಡು ಕಂದು ಪುಂಗಿಗೆ ನಿರಂತರವಾಗಿ ಗಾಳಿಯೂದುತ್ತಲೇ ಇದ್ದ ಮುದುಕ. ಬದುಕಿನ ಆಟಕ್ಕೆ ನೂರು ಬಣ್ಣ.
ಮುಗಿದ ಬದುಕಿನೆದುರು ಬೆತ್ತಲಾಗಿ
ಈ ಕಡು ಮರುಭೂಮಿಯಲ್ಲಿ ನನ್ನ ಅಲೆಮಾರಿತನಕ್ಕೆ ಅಲೆವ ಇವನ ಅಲೆಮಾರಿತನ ಇಷ್ಟವಾಯಿತು. ಕಾಬಾ ಕೋಟೆಯಂತೆಯೇ ಇವನೊಬ್ಬ ಸೋಜಿಗ ಸಂಸ್ಕೃತಿಯ ನಡುಬಿಂದು ಮುಂದುವರಿಸಲಾಗದ ಹಿಂದಕ್ಕೂ ಮರಳಲಾಗದ ಸಂದಿಗ್ಧತೆಯಲ್ಲಿ ಬದುಕು ತಳ್ಳುವವ. ಹಿಮ್ಮರಳಿಸಲಾಗದ ಮುಂದುವರಿದ ಈ ಬದುಕು ಯಾವುದೋ ಊರಿನ ಪತನದೊಂದಿಗೆ ಮತ್ತೊಂದು ಊರಿನ ಕತೆಯೂ ಮುಗಿಯುವುದು ಒಂದು ಸೋಜಿಗವೆ ಸರಿ!
ಹಳ್ಳ ಹಿಡಿದ ಕೋಟೆ ಕತೆ
ಕಾಂನ್ಸ್ಟಾಂಟಿನೋಪಲ್ ಪತನದೊಂದಿಗೆ ಈ ರೇಷ್ಮೆದಾರಿಯೂ ಹಳ್ಳಹಿಡಿದಿತ್ತು! ಯಾವುದೇ ವಸ್ತುಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಬರುತ್ತಲೇ ಇರಲಿಲ್ಲ. ಅರಬರಂತೂ ಬಿಲ್ಕುಲ್ ಬರಬಾದ್ ಆಗಿದ್ದರು! ಆಗಲೇ ಈ ಕೋಟೆ ಊರಿನ ಅಸ್ತಿತ್ವ ಅಲುಗಾಡ ಹತ್ತಿದ್ದು. ಯಶಸ್ಸಿನ ಉತ್ತುಂಗದಿಂದ ಅವನತಿಯತ್ತ ಹೆಜ್ಜೆ ಹಾಕಿದ್ದು ಆದರೂ ಅಪಘಾನಿಸ್ತಾನದಿಂದ ಖರ್ಜೂರ, ಬಾದಾಮಿ, ಪಿಸ್ತಾಗಳೂ ರಫ್ತಾಗುತ್ತಲೇ ಇದ್ದವು. ಆಗಲೇ ರೇಗಿಸ್ಥಾನದ ಈ ಊರು ಖಬರಸ್ಥಾನವಾಗುವ ಸೂಚನೆ ಸಿಕ್ಕಿದ್ದು.
ರೇಗಿಸ್ತಾನದ ರೇವಿನಲ್ಲೇ ನಮ್ಮ ವಾಸ. ಮರುಭೂಮಿಯ ನಡುವೆ ಚಹ ಹೀರಿ ಉಪಹಾರ ಮುಗಿಸಿ ಕಾಬಾ ಕೋಟೆ ಎಡೆಗೆ ಹೆಜ್ಜೆ ಹಾಕಿದೆವು. ನಿನ್ನೆಯಷ್ಟೇ ಬಿದ್ದ ನಾಲ್ಕು ಹನಿ ಮಳೆಗೆ ಮಣ್ಣು ಮುದ್ದೆ ಕಟ್ಟಿತ್ತು. ಮರಳುಗಾಡಿನಲ್ಲೂ ಮಳೆಯೆ ಎಂಬ ಅಚ್ಚರಿ. ಸುಮಾರು ಅರ್ಧಗಂಟೆ ಬಿಳಿ ಮರಳಿನಲ್ಲಿ ನಡೆದೆವು. ದೂರದಲ್ಲಿ ಚಿಂಕಾರ ಎಂಬ ಜಿಂಕೆಯನ್ನು ತೋಳದಂತಹ ಮಾಂಸ ಹಾರಿ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗುವುದು ನನ್ನ ನೆನಪಿನಲ್ಲಿ ಸೆರೆಯಾಯಿತು.
ಮಾಘ ಮಾಸದ ಮುಂಜಾವಿಗೆ ಬಿದ್ದ ಮಳೆಗೆ ಮುದ್ದೆ ಕಟ್ಟಿದ ಮರಳು ನಡು ಉಳುಕಿಸುವ ನಡಿಗೆ. ಥಾರ್ ಮರುಭೂಮಿಯ ನಡು ಸ್ಪರ್ಶಿಸುವ ತವಕದಲಿ ಮುಂದಡಿ ಇಟ್ಟೆ! ಅಬ್ಬಾ ಎಂತಹ ಬಿಸಿಲು ಇಂತಹ ದುರ್ಗಮ ದಾರಿಯಲ್ಲೂ ಕೋಟೆ ಮತ್ತು ಊರು ನಿರ್ಮಿಸಿದ ಅಂದಿನ ಪಾಲಿವಾಲಿ ಬ್ರಾಹ್ಮಣರ ಚಾತುರ್ಯಕ್ಕೆ ಮೆಚ್ಚಲೇಬೇಕು. ರೇಷ್ಮೆದಾರಿಯ ನಡುವಿನ ನಿಲ್ದಾಣ.
ಇಲ್ಲೇ ಕರವನ್ನು ಸಹ ವಸೂಲಿ ಮಾಡಲಾಗುತ್ತಿತ್ತು! ಅವ್ಯಾಹತವಾಗಿ 1291 ರಿಂದ 1825 ರವರೆಗೆ ನಡೆಸಿತ್ತೆನ್ನುವುದೇ ಒಂದು ಅಚ್ಚರಿ. 1453 ರ ನಂತರ ಹಲವು ವರ್ಷ ಅರಬರು ಈ ರೇಷ್ಮೆದಾರಿ ಬಳಸಿದ್ದುಂಟು. ಯಾವುದೇ ಕರೆಕರೆ ಇಲ್ಲದೆ ನೂರಾರು ರೂಪಾಯಿ ಕರ ಸಂಗ್ರಹವಾಗುವ ಮಜಭೂತಾದ ಕೋಟೆಯನ್ನು ತೊರೆಯ ಬೇಕಾದರೆ ಮಹತ್ತರ ಕಾರಣವಿರಲೇಬೇಕು. ಪ್ರಕೃತಿಯನ್ನೂ ಸಹ ತಮಗೆ ಬೇಕಾದಂತೆ ಒಗ್ಗಿಸಿಕೊಂಡು ಬದುಕಿನ ಜನಾಂಗವೊಂದು ಏಕಾಏಕಿ ತಮ್ಮ ನೆಲೆಗಳನ್ನು ತೊರೆಯ ಬೇಕಾದರೆ ಅವರಿಗೊದಗಿದ ಆಪತ್ತು ವಿಪರೀತದ್ದೇ! ಕಟ್ಟಿಕೊಂಡ ಬದುಕನ್ನು ಬರಿದಾಗಿಸಿಕೊಂಡು ಹೊರಡಬೇಕಾದ ದರ್ದು ಎಂತಹದೋ ಕಾಬಾದ ಸುತ್ತಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದ ನೂರಾರು ಮನೆಗಳ ಅವಶೇಷ. ಪ್ರತಿ ಕಲ್ಲಿಗೂ ಅದರದೇ ಆದ ಕತೆಗಳು ಸುತ್ತಲಿನ 2000 ಮನೆಗಳನ್ನು ಅವರು ಬಿಟ್ಟು ಹೋಗುವಂತಹ ಘಟನೆ ನಡೆದಿದ್ದಾದರು ಏನು? ಮಜಭೂತಾದ ಕೋಟೆಯೊಂದನ್ನು ಬಿಟ್ಟು ಹೋಗಿದ್ದಾದರೂ ಎಲ್ಲಿಗೆ? ಸನಿಹದ ಪಾಕಿಸ್ತಾನಕ್ಕಾ? ಇಲ್ಲ ಗುಜರಾತ್ಗೆ ವಲಸೆ ಹೋದರಾ? ಗೊತ್ತಿಲ್ಲ. ಯಾರಿಗೂ ತಿಳಿಯದಂತೆ ಅಷ್ಟೊಂದು ದೊಡ್ಡ ಸಮೂಹ ದಿನ ಬೆಳಗಾಗುವುದರೊಳಗೆ ಕಣ್ಮರೆಯಾದುದಾರೂ ಹೇಗೆ?
ಕಾಬಾ ಕೋಟೆಯ ಕತೆ
ಮರುಭೂಮಿಯ ಎತ್ತರದ ದಿಬ್ಬದಲ್ಲೆಲ್ಲಾ ಎಲ್ಲೆಲ್ಲಿಂದಲೋ ಸಾಗಿಸಿ ತಂದ ಹಳದಿ ಮರಳು ಕಲ್ಲಿನಿಂದ ನಿರ್ಮಿಸಲಾದ ಕೋಟೆ. ಕೋಟೆ ನೋಡಿದಾಕ್ಷಣ ಮನಸ್ಸಿಗೆ ಹಾಯುವುದು ದೊಡ್ಡ ವಿಶ್ರಾಂತಿ ಗೃಹದಂತೆ ಭಾಸವಾಗುವುದು. ಎರಡಂತಸ್ತಿನ ಕಟ್ಟಡದಂತೆ ತೋರುತ್ತದೆ ಎದುರಿನ ವಿಶಾಲ ಹಜಾರ, ನಡುಮನೆ, ಮೇಲೇರಲು ವಿಶಾಲ ಮೆಟ್ಟಿಲು, ಮನೆ ಎಂಬ ಭಾವ ಒತ್ತರಿಸಿ ಬರುವಂತೆ ಮಾಡುತ್ತದೆ. ಕೋಟೆ ಎದುರಿಗೆ ಕಲ್ಲು ಕೆತ್ತಿ ತೆಗೆದ ಆಳ ಕಣಿವೆಯೊಂದಿದೆ.
ಕೋಟೆಯ ಮೊದಲ ಮಹಡಿಯಲ್ಲಿ ವಿವಿಧ ಪಳೆಯುಳಿಕೆಯ ವಿಚಿತ್ರ ಕಲ್ಲು ಶತಮಾನದ ನೆಲದ ಕತೆ ಹೇಳುತ್ತದೆ. ಭೂಮಿಯ ವಿಕಾಸದ ಕತೆಯೂ ಅದರ ಜೊತೆ ಜೋಡಿಸಿದೆ. ಬಹುಶಃ ಉತ್ಖನನ ಮಾಡುವಾಗ ಸಿಕ್ಕಿದ್ದಿರಬೇಕು. ಅದರ ಜೊತೆಗೊಂದು ಬರೆಹ! ಮಿಲಿಯಾಂತರ ವರ್ಷಗಳ ಕೆಳಗೆ ಇದೊಂದು ಸಮುದ್ರವಾಗಿತ್ತು ಎಂಬುದಕ್ಕೆ ಇಲ್ಲಿ ಲಭ್ಯವಿರುವ ಕಲ್ಲುಗಳೇ ಸಾಕ್ಷಿ ನುಡಿಯುತ್ತದೆ.

ಹಾಲು ಮೊಸರಾಗುವ ವಿಚಿತ್ರ ಪಾತ್ರೆ
ಹಾಲು ಹಾಕಿದರೆ ತನ್ನಷ್ಟಕ್ಕೆ ಮೊಸರಗುವ ಕಲ್ಲಿನ ಪಾತ್ರೆಯೊಂದು ನನ್ನನ್ನು ಅಚ್ಚರಿಗೆ ಕೆಡವಿತು. ನನ್ನ ವೈಜ್ಞಾನಿಕತೆ ಹೆಡೆಯೆತ್ತಿತು. ಅರೆ ನೋಡಿಯೇ ಬಿಡೋಣ ಎನ್ನುತ್ತ ಅದನ್ನು ತಿರುಗಿಸಿ ಮುರುಗಿಸಿ ನೋಡಿ ಮಾರುವಾತನಿಗೆ ನೂರಾರು ಪ್ರಶ್ನಾವಳಿಯ ಮಾಲೆ ಹಾಕಿ ಸುಸ್ತು ಹೊಡೆಸಿ ಕೊನೆಗೂ ಕೊಂಡುಕೊಂಡೆ. ಎಷ್ಟು ಬೈದುಕೊಂಡನೋ? ಮನೆಗೆ ಬಂದವನೆ ಪ್ರಯೋಗ ಮಾಡಿ ನೋಡಿದೆ. ಏನ್ ಅಚ್ಚರಿ ರಾತ್ರಿ ಹಾಕಿದ ಹಾಲು ಬೆಳಿಗ್ಗೆ ಮೊಸರಾಗಿತ್ತು. ಶತಮಾನಗಳ ಬ್ಯಾಕ್ಟೀರಿಯಾಗಳು ಇಲ್ಲಿ ದಂಡಿಯಾಗಿ ಸಂಗ್ರಹವಾಗಿ ಹಾಲನ್ನು ಮೊಸರುಮಾಡುತ್ತಿರಬೇಕು ಎಂದ ಗೆಳೆಯನೊಬ್ಬ!! ಬದುಕಿರುವ ಬ್ಯಾಕ್ಟೀರಿಯ ಮಾತ್ರ ಹಾಲನ್ನು ಮೊಸರು ಮಾಡುತ್ತದೆ ಮಾರಾಯ ಎಂದು ಸುಮ್ಮನಾದೆ. ಇದರ ಮಿಸ್ಟರಿ ಇನ್ನೂ ನನಗೆ ಪರಿಹರಿಸಲಾಗಿಲ್ಲ! ಕಲ್ಲಿಗೆ ವಿಶಿಷ್ಟವಾದ ಪಳೆಯುಳಿಕೆಗಳ ವಿನ್ಯಾಸ ಮಿಲಿಯಾಂತರ ವರ್ಷದ ನೆಲದ ಹಾಡುಪಾಡನ್ನು ಮರು ಕಟ್ಟಿಕೊಡುತ್ತದೆ.
ಅಕಾಲ್ ವಸ್ತು ಸಂಗ್ರಹಾಲಯ
ಮಿಲಿಯಾಂತರ ವರ್ಷದ ಮರುಭೂಮಿಯ ಕತೆ ಕೇಳಲು ನೀವು ಅಕಾಲ್ನಲ್ಲಿನ ಫಾಸಿಲ್ ಮ್ಯೂಸಿಯಂಗೆ ಬರಬೇಕು. ಇಲ್ಲಿ 180 ಮಿಲಿಯನ್ ವರ್ಷ ಹಳೆಯ ಫಾಸಿಲ್ ಪಿಳೆಯುಳಿಕೆಗಳು ಇವೆ. ಜುರಾಸಿಕ್ ಕಾಲಕ್ಕಿಂತ ಹಿಂದೆ ಇದ್ದ ಪಿಳೆಯುಳಿಕೆ ಸನಿಹದ `ಹಾರ್ಬುರ್’ ಹಳ್ಳಿಯಲ್ಲಿ ಸಿಕ್ಕಿವೆ! ಕನಾಯ್ ಹಳ್ಳಿಯಲ್ಲಿ ಸಿಕ್ಕ ಶಾರ್ಕ್ ಹಲ್ಲು ಸಮುದ್ರದ ಕತೆ ಹೇಳಿದೆ. ಹೀಗೆ ಒಂದರಮೇಲೊಂದು ಅಚ್ಚರಿ ಹೊತ್ತ ಕಾಬಾಕೋಟೆಯ ಸುತ್ತ ಸುಮಾರು 2000 ಅಧಿಕ ಮನೆಗಳ ಪಳೆಯುಳಿಕೆ ಸ್ಮಶಾನ ಸದೃಶ ದೃಶ್ಯಾವಳಿ ನಮ್ಮನ್ನು ದಂಗು ಬಡಿಸುತ್ತವೆ. ಇಲ್ಲಿನ ಕಲ್ಲಿಗಂಟಿದ ಮೃದ್ವಂಗಿಗಳು, gymnosperm, ಫಾಸಿಲ್ಗಳು ಭೂಮಿಯ ಸಂರಚನೆಯ ಕತೆ ಹೇಳುತ್ತವೆ. ಮೇಘಾಲಯದ ಗುಹೆಗಳೂ ಸಹ ಇಂತಹ ನೂರಾರೂ ಪಳೆಯುಳಿಕೆಗಳ ಬಯಲು ಸಂಗ್ರಹಾಲಯವಾಗಿದೆ! ಒಂದು ದಿನವಿಡಿ ನೋಡಿದರೂ ಮುಗಿಯದಷ್ಟು ಜರಿಸಸ್ಯ ಮತ್ತು ಮೃದ್ವಂಗಿಗಳ ಕತೆ ಅರಹುತ್ತದೆ. ಅದೇ ರೀತಿ ಅಕಾಲ್ನಲ್ಲಿ ಚಿರ್ ದೇವದಾರ್, ರೆಡ್ವುಡ್ ಮರಗಳು ಕಲ್ಲಿನೊಂದಿಗೆ ಬೆರೆತು ಅಚ್ಚಾಗಿರುವುದು ಒಂದು ಅಚ್ಚರಿ. ಭೂಖಂಡಗಳ ಚಲನೆ, ರಚನೆ, ಜೀವಿಗಳು, ಸಸ್ಯಗಳ ಅಧ್ಯಯನಕ್ಕೆ ವಿಫಲಾವಕಾಶ ತೆರೆದಿಟ್ಟ ಬಂದಿಲ ಮ್ಯೂಸಿಯಂಗಳು.

ಕುಲೀನ ಹಳ್ಳಿಯ ಕಮರಿದ ಕತೆ!
ಅದೆಲ್ಲಿಂದಲೋ ಇಲ್ಲಿಗೆ ಬಂದ ಪಾಲಿವಾಲಿ ಬ್ರಾಹ್ಮಣರು ರೂಪಿಸಿದ ಕುಲಧಾರಾ ಎಂಬ ವಿಶಿಷ್ಟ ಹಳ್ಳಿ. ಕಾಕನಿ ನದಿಯ ಹರಿವನ್ನು ತಿರುಗಿಸಿಕೊಂಡು ತಮಗೆ ಬೇಕಾದಂತೆ ಹಳ್ಳಿಯ ರೂಪಿಸಿದ್ದಾರೆ! 1757ರಲ್ಲಿ ತೇಜಪಾಲ್ ನಿರ್ಮಿಸಿದ ಮೆಟ್ಟಿಲಬಾವಿ ಇವರ ನೀರ ನಿರ್ವಹಣೆಯ ಕತೆ ಹೇಳುತ್ತವೆ. 13ನೆಯ ಶತಮಾನದಿಂದ 19ನೆಯ ಶತಮಾನದ ಆರಂಭದವರೆಗೂ ಅಚ್ಚುಕಟ್ಟಿನ ಜೀವನ ನಡೆಸಿದ ಹಳ್ಳಿಗರು ಊರ ಖಾಲಿ ಮಾಡಿ ಹೋದದ್ದಾರೂ ಎಲ್ಲಿಗೆ ಎಂಬುದು ಮುಗಿಯದ ಶೋಧ ಕುತೂಹಲ!
ಕೆಲವರು ಭೂಕಂಪದಿಂದ ಇವರು ಊರ ತೊರೆದಿರಬೇಕು ಎಂದು ತರ್ಕಿಸುತ್ತಾರೆ. ಬಿದ್ದ ಜಾಯಿಂಟ್, ಲಿಂಟಲ್ ಕಂಬಗಳು ಕಂಪನದ ಕತೆಗೆ ಪುಷ್ಟಿ ನೀಡುತ್ತದೆ ಎನ್ನುತ್ತಾರೆ A.B. Roy ರವರು. ಇವರು 2017ರಲ್ಲಿ ಕುಲಧಾರದ ಕುರಿತು ಅಧ್ಯಯನ ನಡೆಸಿದ್ದಾರೆ.
ಟಿಸಿಲೊಡೆದ ಇನ್ನೊಂದು ಕತೆ ಜಾಲಿಮ್ ಸಿಂಗನತ್ತ ಬೆರಳು ತೋರಿಸುತ್ತದೆ. ಈತ ಹೇರಿದ ಅತಿಯಾದ ಕರದಿಂದಾಗಿ ಕುಲಧಾರ ಮತ್ತು ಸುತ್ತಲಿನ ಹಳ್ಳಿಗಳೆಲ್ಲಾ ಖಾಲಿಯಾಗಿರಬೇಕೆಂದು ಮತ್ತೊಂದು ಟಿಸಿಲಿನ ಕತೆ ಕಟ್ಟುತ್ತಾರೆ.
ಇನ್ನೊಂದು ಕತೆಯ ಪ್ರಕಾರ ಜೈಸಲ್ಮೀರನ ದಿವಾನ ಜಾಲಿಮ್ ಸಿಂಗ್ ಕುಲಧಾರಾದ ಮುಖ್ಯಸ್ಥನ ಮಗಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಆಜ್ಞೆ ಹೊರಡಿಸಿದ. ಹಾಗಾಗಿ ಆತನಿಗೆ ಮದುವೆ ಮಾಡಿಕೊಡಲು ಒಪ್ಪದ ಗ್ರಾಮದ ಮುಖ್ಯಸ್ಥ ತನ್ನವರನ್ನೆಲ್ಲಾ ಇಲ್ಲಿಂದ ಹೊರಡಿಸಿದ ಎನ್ನುತ್ತಿದೆ ಮತ್ತೊಂದು ಕತೆ.
ಹೀಗೆ ಖಾಲಿಯಾದ ಹಳ್ಳಿ ತನ್ನೊಡಲಿನಲ್ಲಿ ನೂರಾರು ಕತೆಗಳನ್ನು ಬಚ್ಚಿಟ್ಟುಕೊಂಡಿದೆ ಮೊಗೆದಷ್ಟು ಸಿಗುವ ಹೊಸ ಹೊಸ ರೀತಿಯ ಅವಶೇಷಗಳು, ನಿಲ್ಲದ ಜನರ ಆಕರ್ಷಣೆ, ಹೊಸ ಹೊಸ ಕತೆಗೆ ಕುಲಧಾರಾ ಎಂಬ ಹಳ್ಳಿ ಸಾಕ್ಷಿಯಾಗುತ್ತಲೇ ಇರುತ್ತದೆ. ಇಲ್ಲಿ ದಿನೇ ದಿನೇ ಕ್ಷೀಣಿಸುತ್ತಲೇ ಬಂದ ನೀರು ಸಹ ಊರು ಖಾಲಿಯಾಗಲು ಒಂದು ಕಾರಣ ಎನ್ನುತ್ತಾರಾದರೂ ಅಷ್ಟೊಂದು ಜನರು ಒಮ್ಮಿಂದೊಮ್ಮೆಲೇ ಕಾಣೆಯಾಗುವುದು ಸಣ್ಣ ವಿಚಾರವಲ್ಲ.
ಇಲ್ಲಿನ ಬಿದ್ದು ಹೋದ ಮನೆಗಳು ವಿಶಾಲಬೀದಿ ಮನೆಯ ವಿನ್ಯಾಸ, ಶಿಸ್ತುಬದ್ಧ ಒಳಚರಂಡಿ ಯೋಜನಾಬದ್ಧ ಊರು ಒಂದು ವಿಭಿನ್ನ ಸಂಸ್ಕೃತಿಯ ಕಥನವನ್ನು ಅರಹುತ್ತದೆ. ಕುಲಧಾರ ಹಳ್ಳಿಯನ್ನು ಪುರ್ನನಿರ್ಮಿಸುವಲ್ಲಿ ಸರಕಾರ ಕೆಲವು ಅಪೂರ್ವ ಹೆಜ್ಜೆಯನ್ನಿಟ್ಟಿದೆ. ಕಟ್ಟಿಗೆಯ ಅನೇಕ ಮನೆಗಳನ್ನು ಮೊದಲಿನಂತೆ ರೂಪಿಸಿದ್ದಾರೆ. ಇಲ್ಲಿ ದೊರೆತ ವಸ್ತುಗಳನ್ನು ಸಂಶೋಧನೆಗೆ ಹಚ್ಚಬೇಕಾಗಿದೆ. 84 ಹಳ್ಳಿಗಳ ನಿಗೂಢ ಕಣ್ಮರೆ ನಂಬಲಸಾಧ್ಯವಾದ ಹೊಸ ವಿಚಾರಗಳ ಹೊಳಪನ್ನು ಹೊತ್ತು ತರುತ್ತಲಿವೆ.

ಹೀಗೆ ಕತೆ ಹೆಕ್ಕಿ ಪೋಣಿಸಿದ ಕುಲಧಾರದ ಹಾರ ನನ್ನ ಕತ್ತಿನ ಸುತ್ತಲೇ ಸದಾ ಗಿರಕಿ ಹೊಡೆಯುತ್ತಲೇ ಇರುತ್ತದೆ. ಇನ್ನಾದರೂ ಬಿಡುಗಡೆಗೆ ಹಂಬಲಿಸಿ…..
(ಫೋಟೋಗಳು: ಲೇಖಕರವು)

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.


