Advertisement
ನೀಲಿ ಕಲ್ಲಂಚೆ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ನೀಲಿ ಕಲ್ಲಂಚೆ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ನೀಲಿ ಕಲ್ಲಂಚೆಗಳಿಗೆ ವರ್ಷಪೂರ್ತಿ ಆಹಾರದ ಕೊರತೆಯೇ ಇಲ್ಲವಾದ್ದರಿಂದ, ಪ್ರಜನನ ಋತು ಎಂದೇನಿಲ್ಲ. ಮರದ ಮೇಲೆ, ಅಥವಾ ಸಂದುಗೊಂದುಗಳಲ್ಲಿ, ಕಡ್ಡಿಗಳಿಂದ ತಯಾರಾದ ಹರುಕು-ಮುರುಕು ಅಟ್ಟಣಿಗೆ ಗೂಡನ್ನು ಕಟ್ಟುತ್ತವೆ. ಹೆಣ್ಣು ಹಕ್ಕಿ ಸಾಮಾನ್ಯವಾಗಿ ಎರಡು ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಗಂಡು-ಹೆಣ್ಣು, ಎರಡೂ ಹಕ್ಕಿಗಳು ಕಾವು ಕೊಟ್ಟು, ಗುಟುಕು ನೀಡಿ, ಮರಿಗಳನ್ನು ಪೋಷಿಸುತ್ತವೆ. ಅಲ್ಲದೆ ಪಾರಿವಾಳಗಳ ಅನ್ನನಾಳದಲ್ಲಿ ಸ್ರವಿಸುವ ವಿಶಿಷ್ಟ ದ್ರವವನ್ನು ಮರಿಗಳಿಗೆ ಉಣಿಸುತ್ತವೆ.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನೀಲಿ ಕಲ್ಲಂಚೆ”ಯ ಕುರಿತ ಬರಹ ಇಲ್ಲಿದೆ

ಭಾರತದ ಅಂಚೆ ಇಲಾಖೆಗೆ ಆ ಹೆಸರು ಹೇಗೆ ಬಂದಿತು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಶುದ್ಧ ಕನ್ನಡದಲ್ಲಿ ಅಂಚೆ ಎಂದರೆ ಪಾರಿವಾಳ! ಒಂದು ಕಾಲದಲ್ಲಿ ಈ ಪಾರಿವಾಳಗಳನ್ನು ಸಂದೇಶ ರವಾನೆಗೆ ಬಳಸುತ್ತಿದ್ದ ವಿಚಾರ ನಿಮಗೆ ತಿಳಿದಿರಬಹುದು. ಮನೆಗೆ ಹಿಂದಿರುಗುವ, ಅಂದರೆ, ಹೋಮಿಂಗ್ ಇನ್ಸ್ಟಿಂಕ್ಟ್, ಸ್ವಭಾವವಿರುವ ಹಕ್ಕಿಗಳಾದ್ದರಿಂದ ಈಗಲೂ ಭಾರತೀಯ ಸೇನೆಯಲ್ಲಿ ಇದೇ ಅಂಚೆಗಳನ್ನು ಸಂವಹನಕ್ಕೆ ಬಳಸುತ್ತಾರೆ.

ಹಾಗಾಗಿ ನಮ್ಮ ಇಂದಿನ ಪಕ್ಷಿ, ನೀಲಿ ಕಲ್ಲಂಚೆ. ಕೊಲುಂಬಿಡೆ, Columbidae, ಕುಟುಂಬಕ್ಕೆ ಸೇರಿದ ಈ ಹಕ್ಕಿಯನ್ನು ಇಂಗ್ಲೀಷಿನಲ್ಲಿ Rock Dove, ಮತ್ತು ವೈಜ್ಞಾನಿಕವಾಗಿ Columba livia ಎಂದು ಕರೆಯುತ್ತಾರೆ.

ಈ ನೀಲಿ ಕಲ್ಲಂಚೆ, ಬಹು ಕಾಲದ ಹಿಂದೆ ಅರಣ್ಯದಲ್ಲಿಯೇ ವಾಸವಾಗಿತ್ತು. ಬರಬರುತ್ತ ನಾಗರೀಕತೆ ಬೆಳೆದಂತೆ, ಅವೂ ಕೂಡ ಪಟ್ಟಣವಾಸಿಗಳಾಗಿ, ಈಗ ಮೂಲ ಅಸ್ತಿತ್ವವನ್ನೇ ಕಳೆದುಕೊಂಡುಬಿಟ್ಟಿವೆ. ಹಿಂದೆ ಪರ್ವತ ಕಣಿವೆ, ಕಮರಿಗಳಲ್ಲಿ ಮನೆ ಮಾಡಿದ್ದ ಈ ಹಕ್ಕಿಗಳು, ಇಂದು ನಗರಗಳ ಬಹುಮಹಡಿ ಕಟ್ಟಡಗಳು, ಜನವಾಸವಿಲ್ಲದ, ಪಾಳುಬಿದ್ದ ಮನೆಗಳು, ಹಳೆ ಕಟ್ಟಡಗಳು, ರೈಲ್ವೆ ನಿಲ್ದಾಣ, ಉಗ್ರಾಣಗಳಲ್ಲಿ, ಬಂಡೆಗಳ, ಸಂದು, ಪೊಟರೆಗಳಲ್ಲಿ ಗುಂಪುಗುಂಪಾಗಿ ವಾಸ ಮಾಡಿಕೊಂಡಿದ್ದು, ಪರಸ್ಪರ ಅಂತಸ್ಸಂಬಂಧದಿಂದ ತಮ್ಮ ಸ್ವಾಭಾವಿಕ ಚಹರೆಯನ್ನೇ ಕಳೆದುಕೊಂಡಿವೆ.

ನೀಲಿ ಕಲ್ಲಂಚೆ, 33 ಸೆಂಮೀ. ಗಾತ್ರದ, ಒತ್ತಾದ, ಮೃದುವಾದ ಪುಕ್ಕಗಳುಳ್ಳ ಪಕ್ಷಿ. ಒಟ್ಟಾರೆ ಬೂದು ಬಣ್ಣದ ದೇಹ, ಕೆಳಮೈ ತುಸು ತಿಳಿ; ಕತ್ತು, ಎದೆಯ ಮೇಲೆ ಹೊಳೆಯುವ ಹಸಿರು-ನೇರಳೆ-ಕಡುಗೆಂಪು ವರ್ಣ; ಕೆಂಪು ಕಣ್ಣು, ಮತ್ತು ಕಾಲುಗಳು; ಕಪ್ಪು ಬಾಲದ ತುದಿ ಮತ್ತು ರೆಕ್ಕೆಗಳ ಮೇಲೆ ಎದ್ದು ಕಾಣುವಂತೆ ಎರಡು ಕಪ್ಪು ಪಟ್ಟಿಗಳು. ಕತ್ತನ್ನು ತಿರುಗಿಸದೇ 300◦ ವಿಸ್ತಾರದ ದೃಶ್ಯವನ್ನು ನೋಡಬಲ್ಲದು. ಗಂಟಲನ್ನು ಉಬ್ಬಿಸಿ, ಆಳವಾದ ಗುಟ್ರ್.ಗೂ…ಗುಟ್ರ್.ಗೂ… ಕೂಗು. ಪಟಪಟನೆ ರೆಕ್ಕೆ ಬಡಿದುಕೊಂಡು ವೇಗದ, ನೇರವಾದ ಹಾರಾಟ.

ನೀಲಿ ಕಲ್ಲಂಚೆಗಳು ಮಿಶ್ರಾಹಾರಿಗಳು. ವಿವಿಧ ಕಾಳು, ಧಾನ್ಯ, ಬೀಜಗಳು, ಹಣ್ಣುಗಳು, ವಿವಿಧ ಹುಳ-ಹುಪ್ಪಟೆ, ಕೀಟ, ಜೇಡಗಳು, ಈ ಹಕ್ಕಿಗಳ ಮುಖ್ಯ ಆಹಾರವಾದರೂ, ಮಾನವನ ನಿಕಟ ಸಂಬಂಧದಿಂದ ನಾವು ತಿಂದು ಬಿಸಾಡಿದ ಎಲ್ಲ ರೀತಿಯ ತ್ಯಾಜ್ಯಗಳನ್ನೂ ನೀಲಿ ಕಲ್ಲಂಚೆಗಳು ತಿಂದು ಜೀರ್ಣಿಸಿಕೊಳ್ಳಬಲ್ಲವು. ಬಾಯಾರಿದಾಗ ಕೊಕ್ಕನ್ನು ನೀರಿನಲ್ಲಿರಿಸಿ, ತಲೆಯೆತ್ತದೆ, ನೇರವಾಗಿ ತಡೆಯಿಲ್ಲದೆ ನೀರು ಹೀರುತ್ತವೆ.

ನೀಲಿ ಕಲ್ಲಂಚೆಗಳಿಗೆ ವರ್ಷಪೂರ್ತಿ ಆಹಾರದ ಕೊರತೆಯೇ ಇಲ್ಲವಾದ್ದರಿಂದ, ಪ್ರಜನನ ಋತು ಎಂದೇನಿಲ್ಲ. ಮರದ ಮೇಲೆ, ಅಥವಾ ಸಂದುಗೊಂದುಗಳಲ್ಲಿ, ಕಡ್ಡಿಗಳಿಂದ ತಯಾರಾದ ಹರುಕು-ಮುರುಕು ಅಟ್ಟಣಿಗೆ ಗೂಡನ್ನು ಕಟ್ಟುತ್ತವೆ. ಹೆಣ್ಣು ಹಕ್ಕಿ ಸಾಮಾನ್ಯವಾಗಿ ಎರಡು ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಗಂಡು-ಹೆಣ್ಣು, ಎರಡೂ ಹಕ್ಕಿಗಳು ಕಾವು ಕೊಟ್ಟು, ಗುಟುಕು ನೀಡಿ, ಮರಿಗಳನ್ನು ಪೋಷಿಸುತ್ತವೆ. ಅಲ್ಲದೆ ಪಾರಿವಾಳಗಳ ಅನ್ನನಾಳದಲ್ಲಿ ಸ್ರವಿಸುವ ವಿಶಿಷ್ಟ ದ್ರವವನ್ನು ಮರಿಗಳಿಗೆ ಉಣಿಸುತ್ತವೆ.

ನಗರ ಪ್ರದೇಶಗಳಲ್ಲಿ ಎಡೆಯಿಲ್ಲದೆ ತಮ್ಮ ಸಂತತಿಯನ್ನು ಬೆಳಸಿಕೊಳ್ಳುತ್ತಿರುವ ನೀಲಿ ಕಲ್ಲಂಚೆಗಳು, ಎಲ್ಲೆಂದರಲ್ಲಿ ನೆಲೆಸಿ, ತಮ್ಮ ವಸಾಹತು ಸ್ಥಾಪಿಸಿವೆ. ಕಂಡಕಂಡಲ್ಲಿ ರಾಶಿ ರಾಶಿ ಹಿಕ್ಕೆಯನ್ನು ಹಾಕಿ ಹೊಲಸು ಮಾಡುತ್ತವೆ. ರೈತರ ಹೊಲಗಳಲ್ಲಿ, ಹಣ್ಣಿನ ತೋಪುಗಳಲ್ಲಿ ದಾಂಧಲೆ ಎಬ್ಬಿಸುತ್ತವೆ. ನಗರ ಪ್ರದೇಶಗಳಲ್ಲಿ ಹಾರಾಡಿಕೊಂಡಿರುವ ಗಿಡುಗ, ಹದ್ದು, ಮುಂತಾದ ಬೇಟೆ ಹಕ್ಕಿಗಳು, ನಾಯಿ-ಬೆಕ್ಕುಗಳು, ನೀಲಿ ಕಲ್ಲಂಚೆಗಳನ್ನು ಹೊಂಚುಹಾಕಿ, ತಿನ್ನುತ್ತವೆ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ