Advertisement
ಪ್ರಶಸ್ತಿಗಳು ಮತ್ತು ಸಮರ..: ಎಚ್. ಗೋಪಾಲಕೃಷ್ಣ ಸರಣಿ

ಪ್ರಶಸ್ತಿಗಳು ಮತ್ತು ಸಮರ..: ಎಚ್. ಗೋಪಾಲಕೃಷ್ಣ ಸರಣಿ

ಇದರ ಜತೆಗೆ ಮತ್ತೊಂದು ವಿಲಕ್ಷಣ ವಾದ ಬೇರೆ ಹುಟ್ಟಿತ್ತು. ಅದೇನು ಅಂದರೆ…. ನಾವು ಇಡೀ ಜೀವಮಾನದಲ್ಲಿ ಒಂದೇ ಒಂದು ಪುಟ ಬರೆಯಲು ಹೆಣಗಾಡಿ ಸುಸ್ತು ಹೊಡೆದು ಹೋಗ್ತೇವೆ. ಈ ಪ್ರಶಸ್ತಿ ಬಹುಮಾನ ಇನ್ನೂ ಏನೇನೋ ಹೊಡೆದು ಕೊಂಡಿರೋರು ಎಂಟು ನೂರು ಸಾವಿರ ಪುಟಗಳ ಹತ್ತು ಹದಿನೈದು ಪುಸ್ತಕ ಬರೆದವೇ ಅಂದರೆ ಅದು ಹೇಗೆ ನಂಬಲಿಕ್ಕೆ ಆಗ್ತದೆ? ಯಾರೋ ಪುಣ್ಯಾತ್ಮ ಹತ್ತು ಸಾಯಿರ ಪುಟ ಬರ್ದವನಂತೆ, ಇದು ನಂಬಲಿಕ್ಕೆ ಆಗ್ತದಾ? ನಮ್ಮವರ ಕೈಲಿ ಬರೆಸಿ ಅವರು ಅವರ ಹೆಸರು ಹಾಕೊಂಡವೆ…
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೭ನೇ ಬರಹ ನಿಮ್ಮ ಓದಿಗೆ

ಕೆಲವು ನಿಯಮಗಳನ್ನು ರೂಪಿಸಿತು. ಅದರಂತೆ ಮುಂದಿನ ಮೂರು ಸಾವಿರ ವರ್ಷಗಳು ಪ್ರಶಸ್ತಿ ಪಡೆದ ಜಾತಿಯವರು ಪ್ರಶಸ್ತಿಗೆ ಅರ್ಹರಲ್ಲ ಎಂಬುದು. ಈವರೆಗೆ ಪ್ರಶಸ್ತಿ ಪಡೆಯದಿರುವ ಜಾತಿಗಳಿಗೆ ಅವರ ಸಂಖ್ಯೆ ಬಲದ ಮೇಲೆ ಪ್ರಶಸ್ತಿ ನೀಡುವುದು. ಪ್ರಶಸ್ತಿಗಳನ್ನು ತಮ್ಮತಮ್ಮಲ್ಲೇ ಹಂಚಿಕೊಂಡ ಗುಂಪಿನ ಯಾರ ಚಿತ್ರವೂ ಎಲ್ಲೂ ಪ್ರದರ್ಶಿತವಾಗಬಾರದು. ಮುಂದೆ ಪ್ರಶಸ್ತಿ ನೀಡಲು ಇರುವ ಸಮಿತಿಯಲ್ಲೂ ಇವರಿಗೆ ಅವಕಾಶ ಇರಬಾರದು…

ಈ ವ್ಯವಸ್ಥೆ ಸ್ವಲ್ಪ ವರ್ಷ ನಡೆಯಿತು.

ಮೂರು ಸಾವಿರ ವರ್ಷ ಬ್ಯಾನ್ ಆದವರು ಒಗ್ಗೂಡಿದರು. ನಮ್ಮ ಪೂರ್ವಜರು ಮಾಡಿದ ಏನೋ ತಪ್ಪಿಗೆ ನಾವು ಹೇಗೆ ಹೊಣೆ? ತೋಳ ಕುರಿಮರಿ ನ್ಯಾಯ ಇದು ಎಂದು protest ಮಾಡಿದವು. ಮುಂದೇನಾಯಿತು ಎಂದು ವಿವರಿಸಲು ಹೊರಟೆ ತಾನೇ? ಒಂದರ ಮುಂದೆ ಒಂದು ಆಯಪ್ಪ ಅಂದರೆ ಇತಿಹಾಸಕಾರ ದಾಖಲೆ ಮಾಡಿದ ಪತ್ರಗಳು ಒಂದರ ಹಿಂದೆ ಒಂದು ಲಕ್ಷ ಕಿಮೀ ಸ್ಪೀಡ್ ನಲ್ಲಿ ಬಂದು ನನ್ನದು ಮೊದಲು ನನ್ನದು ಮೊದಲು ಎಂದು ಸ್ಟ್ರೈಕ್ ಮಾಡುತ್ತಿವೆ. ನಾನು ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಸಿಕ್ಕಿ ಹಾಕಿ ಕೊಂಡಿದೀನಿ. ಅದನ್ನು SIR ಕೇಸ್ ನಡೆಸುತ್ತಿರುವ ನ್ಯಾಯಾಧೀಶರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು…

ಅದರಿಂದ ಪ್ರಿಯ ಓದುಗ ಮೇಡಂ ಮತ್ತು ಸರ ಕೊಂಚ ಸಮಯ ಕೊಡಿ. ಮೇಲೆಮೇಲೆ ಬಂದು ಬೀಳುತ್ತಿರುವ ಇತಿಹಾಸಕಾರನ ಪುಟಗಳನ್ನು ಜೋಡಿಸಿಕೊಂಡು ನಿಮಗೆ ಒಂದು ಅಷ್ಟು ಕೆಟ್ಟದಲ್ಲದ ಒಂದು ಪರಿಪೂರ್ಣಚಿತ್ರ ಕೊಡಲು ಖಂಡಿತ ಕಾಯವಾಚಾ ಮನಸಾ ಯತ್ನಿಸುತ್ತೇನೆ…

……ಇಷ್ಟು ಬರೆದು ಮುಂದಿನ ಒಂದು ಲೈನ್ ಸೇರಿಸಿದ್ದೆ

ಕತೆಯ ಅಂಚಿಗೆ ಬಂದು ನಿಂತಿದ್ದೇನೆ. ಇಷ್ಟರಲ್ಲಿಯೇ ಕಥೆ ಮುಗಿಸಿ ನಿಮಗೆಲ್ಲಾ ಸಂತೋಷ ಹಂಚಲಿದ್ದೇನೆ…..

ಈಗ ಅಂದರೆ ಇನ್ನುಮುಂದೆ ತುಂಬಾ ಅಂದರೆ ತುಂಬಾ ಫಾಸ್ಟ್ ಆಗಿ ಕಥೆ ಓಡುತ್ತದೆ!..

ಪ್ರಶಸ್ತಿಗಳ ಬಗ್ಗೆ ಹೇಳುತ್ತಿದ್ದೆ. ಕಾಲಾನುಗತಿಯಲ್ಲಿ ಅದು ಅಂದರೆ ಪ್ರಶಸ್ತಿ ಪುರಸ್ಕಾರಗಳು ಯಾವ ಯಾವ ರೂಪ ಪಡೆದವು ಎನ್ನುವುದನ್ನು ಕೊಂಚ ಚಿಕ್ಕದಾಗಿ ಹೇಳಿಬಿಡುತ್ತೇನೆ.

ಒಂದು ಜಾತಿಯವರನ್ನು ಮೂರುಸಾವಿರ ವರ್ಷ ಬ್ಯಾನ್ ಮಾಡಿದರು. ಅದು ಕೆಲವು ವರ್ಷ ನಡೆದ ನಂತರ ಸದರಿ ಜಾತಿ ಅವರು ಒಂದು ಅಹವಾಲು ಸಲ್ಲಿಸಿದರು ಅಂತ ಹೇಳಿದ್ದೆ ತಾನೇ? ಅದರ ಮುಂದುವರೆದ ಸ್ಟೋರಿ ಈಗ ತಮ್ಮ ಮುಂದೆ… ಅಹವಾಲು ಸಲ್ಲಿಕೆ ಆಯ್ತಾ? ಜೇನುಗೂಡು ಹೊಗೆಯಲ್ಲಿ ಬಿದ್ದ ಹಾಗಾಯಿತು. ಆಗಿನ ಜನಕ್ಕೆ ಜೇನುಗೂಡು ಅನ್ನುವುದು ತಿಳಿದಿತ್ತೇ ಎಂದರೆ ಖಂಡಿತ ಇಲ್ಲ. ಅಂದಿನ ಕತೆಯನ್ನು ಈಗ ಹೇಳುತ್ತಿದ್ದೇನಲ್ಲ ಅದರಿಂದ ಈಗ ಪ್ರಚಲಿತವಿರುವ ಶಬ್ದ ಸಂಪತ್ತನ್ನು ಉಪಯೋಗಿಸುತ್ತಿದ್ದೇನೆ. ಜೇನುಗೂಡಿಗೆ ಹೊಗೆ ಇಟ್ಟ ಹಾಗೆ ಆಯಿತು ತಾನೇ? ಈ ಮೂರುಸಾವಿರ ವರ್ಷ ಬ್ಯಾನ್ ಆದವರ ಮೇಲೆ ಇಡೀ ಜಗತ್ತಿನ ಜನ ಮುಗಿಬಿದ್ದರು. ಈ ಮುಗಿಬೀಳುವಿಕೆಯ ಕೆಲವು ಸ್ಯಾಂಪಲ್ ಹೀಗಿತ್ತು.

ಮೂರು ಸಾವಿರ ವರ್ಷ ಇವರು ನಮಗೆ ಬರೆಯೋದು ಹೇಳಿಕೊಡಲಿಲ್ಲ, ನಮ್ಮನ್ನು ಕಗ್ಗತ್ತಲೆಯ ಭಾವಿಯಲ್ಲಿ ಹುದುಗಿದ್ದರು. ಅದರಿಂದ ಇವರು ಸರ್ವರಿಗೂ ಸರ್ವವೂ ಎನ್ನುವ ನಮ್ಮ ಸಂವಿಧಾನದ pre amble ಅನ್ನೇ ಮೀರಿ ದೌರ್ಜನ್ಯ ಎಸಗಿದ್ದಾರೆ. ಈ ದುಷ್ಕೃತ್ಯ ಗಳಿಗಾಗಿ ಅವರು ಈ ಜಗತ್ತಿನಲ್ಲಿ ಇರುವುದಕ್ಕೆ ಅನರ್ಹರು. ಅವರು ಅವರ ಪೂರ್ವಜರು ಮಾಡಿದ ಕರ್ಮ ಫಲ ಉಣ್ಣಲೇಬೇಕು..

(AI ಚಿತ್ರ)

ಇನ್ನೊಂದು ಸ್ಯಾಂಪಲ್ ಹೀಗೆ :

ಪ್ರಶಸ್ತಿಗಳು ಬಹುಮಾನಗಳು ಅವುಗಳ ಹಣ ಇವುಗಳನ್ನು ತಮ್ಮತಮ್ಮ ಗುಂಪಿನಲ್ಲೇ ದೋಚಿಕೊಳ್ಳಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಇದರ ಫಲಿತಾಂಶ ಎಂದರೆ ಪ್ರಶಸ್ತಿ ಪುರಸ್ಕಾರಗಳಿಂದ ಅವರು ಕೊಬ್ಬುತ್ತಾ ಹೋದರು. ಶೋಷಿತರು ಇನ್ನೂ ಶೋಷಿಸಿಕೊಂಡೇ ಇರಬೇಕಾಯಿತು..

ಈಗ ಇನ್ನೊಂದು ಸ್ಯಾಂಪಲ್ ಹೀಗೆ ಎಂದು ಹೇಳುವುದು ನಿಲ್ಲಿಸಿ ಪುಟ್ಟ ಪುಟ್ಟ ಪ್ಯಾರಾಗಳಲ್ಲಿ ಅಂದಿನ ಪ್ರಜಾ ಪ್ರಭುಗಳ ಮಾನಸಿಕ ತುಮುಲವನ್ನು ಹೀಗೆ ದಾಖಲಿಸುತ್ತೇನೆ: ಪೆನ್ನು ತಯಾರಿಸಿದ್ದು ನಾವು, ಇಂಕ್ ತಯಾರಿಕೆ ನಮ್ಮದು, ಪೇಪರ್ ತಂದು ಕೊಟ್ಟವರು ನಾವು, ಮಾರಿದವರೂ ನಾವೇನೇ .. ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಶಸ್ತಿ ತಗೊಂಡೋರು ಅವರು. ಪಾಪ ನಮ್ಮ ಪೂರ್ವಜರ ಕಡಿಮೆ IQ ಮೇಲೆ (IQ ಅಂದರೆ ಇಂಟಲಿಜೆಂಟ್ ಕೊಶಂಟ್ ಅಂತ, ಹಾಗಂದರೆ ಬುದ್ಧಿ ಮಟ್ಟ ಅಂತ ಇಟ್ಕೊಳ್ಳಿ )ಇವರು ಹೆಚ್ಚು IQ ಇದ್ದವರು ದಬ್ಬಾಳಿಕೆ ಮಾಡಿದರು…

ನಾವು ಅಕ್ಷರ ಶೋಷಿತರೂ ಸಹ.

ಪೆನ್ನು ಪೇಪರು ಜತೆಗೆ ಕೂಡಕ್ಕೆ ಕುರ್ಚಿ ಬರೆಯಕ್ಕೆ ಟೇಬಲ್ಲು, ಒರಗೋಕೆ ದಿಂಬು, ಮಲಗೋಕೆ ಮಂಚ ಇರೋಕೆ ಸೂರು… ಇವೆಲ್ಲಾ ನಾವು ಕೊಟ್ಟದ್ದೇ ಇವರದ್ದು ಸ್ವಂತ ಏನಿತ್ತು….? ಸುಮ್ಮನೆ ಇದ್ದುಕೊಂಡು ಇರಲಿ ಅಂತ ನಾವು ಬಿಟ್ಟಿದ್ದು..

ಇದರ ಜತೆಗೆ ಮತ್ತೊಂದು ವಿಲಕ್ಷಣ ವಾದ ಬೇರೆ ಹುಟ್ಟಿತ್ತು. ಅದೇನು ಅಂದರೆ…. ನಾವು ಇಡೀ ಜೀವಮಾನದಲ್ಲಿ ಒಂದೇ ಒಂದು ಪುಟ ಬರೆಯಲು ಹೆಣಗಾಡಿ ಸುಸ್ತು ಹೊಡೆದು ಹೋಗ್ತೇವೆ. ಈ ಪ್ರಶಸ್ತಿ ಬಹುಮಾನ ಇನ್ನೂ ಏನೇನೋ ಹೊಡೆದು ಕೊಂಡಿರೋರು ಎಂಟು ನೂರು ಸಾವಿರ ಪುಟಗಳ ಹತ್ತು ಹದಿನೈದು ಪುಸ್ತಕ ಬರೆದವೇ ಅಂದರೆ ಅದು ಹೇಗೆ ನಂಬಲಿಕ್ಕೆ ಆಗ್ತದೆ? ಯಾರೋ ಪುಣ್ಯಾತ್ಮ ಹತ್ತು ಸಾಯಿರ ಪುಟ ಬರ್ದವನಂತೆ, ಇದು ನಂಬಲಿಕ್ಕೆ ಆಗ್ತದಾ? ನಮ್ಮವರ ಕೈಲಿ ಬರೆಸಿ ಅವರು ಅವರ ಹೆಸರು ಹಾಕೊಂಡವೆ…

ಅವರು ಬೇರೆಯವರದ್ದು ಕದ್ದು ತಮ್ಮ ಎಸರು ಮಡಕ್ಕೊಂಡಿರಬೇಕು. ಇಲ್ಲ ಅಂದರೆ ಇವರು ಬರೆದದನ್ನ ಅವರು ಕಳ್ಳತನ ಮಾಡಿರಬೇಕು. ಬೇರೆಯವರು ಬರೆದದ್ದು ಕದಿಯೋ ಜನ ಎಂತಹ ಕೆಲಸಕ್ಕೂ, ಯಾತಕ್ಕೂ ಹೇಸುಲ್ಲ….

ತಮ್ಮ ಪೂರ್ವಜರನ್ನು ಸಮರ್ಥಿಸಿಕೊಳ್ಳಲು ಹೊರಟ ಪಡೆಯನ್ನು ಲೇವಡಿ ಮಾಡಿ ದೂರ ಇಟ್ಟಾಯಿತು!

ಪ್ರಜಾ ಧ್ವನಿ(ಹೀಗಂದರೆ ಆಗಿನ ವಾಚಕರ ವಾಣಿ ತರಹದ್ದು )ಹೀಗೆ ಏರುಮುಖ ಆಯ್ತು. ಇದೆಲ್ಲದರ ಪರಿಣಾಮ ಅಂದರೆ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರ ಒಂದು ಉಪಸಮಿತಿ ರಚಿಸಿದ್ದು. ಇದರ ಸದಸ್ಯರು ಅಂದರೆ ಎಪ್ಪತ್ತು ವರ್ಷದ ಆತನ ಜೀವಮಾನದಲ್ಲಿ ಅರ್ಧ ಪುಟ ಬರೆದ ಹಿರಿಯರು ಇದರ ನಾಯಕ ತುಳಿತ ಸಮುದಾಯದ ಮುಖಂಡ. ಇದಕ್ಕೆ ಸದಸ್ಯರು ಅಂದರೆ ಈ ವರೆಗೂ ಪ್ರಶಸ್ತಿ ಪುರಸ್ಕಾರ ಪಡೆಯದ ಸಿಕ್ಸ್ಟಿ ಪ್ಲಸ್ ಯುವಕರು. ಇದರ ಕಾರ್ಯವ್ಯಾಪ್ತಿ ಅಂದರೆ ತುಂಬಾ ವಿಸ್ತಾರವಾದದ್ದು. ಬಹುಮಾನಗಳು ಸ್ಥಾಪಿತವಾದ ದಿನದಿಂದ ಹಿಡಿದು ಅದರ ಹಿನ್ನೆಲೆ ಚರಿತ್ರೆ ಫಲಾನುಭವಿಗಳ ಪಟ್ಟಿ ಅವರ ಜಾತಿ ಅವರನ್ನು ನೇಮಿಸಿದವರ ಯಾದಿ….. ಇತ್ಯಾದಿ ಇತ್ಯಾದಿಗಳು ಅದರ ಕಾರ್ಯ ಪರಿಧಿ ಆದವಾ? ಮುಂದೆ ಇಂತಹ ಸ್ವಜನ ಪಕ್ಷಪಾತ ವಶೀಲಿ ಬಾಜಿ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು(ಜೈಲು ಶಿಕ್ಷೆಯೂ ಸೇರಿದಂತೆ … )ಹೀಗೆ ಅದರ ರೂಪು ರೇಷೆ ಇತ್ತು.

ಸಮಿತಿ ಎಂದಿನ ಹಾಗೇ ಹಲವು ವರ್ಷ ಕೂತು, ನಿಂತು ಮಲಗಿ, ಎದ್ದು ಆಕಳಿಸಿ…. ಹಲವು ಕೋಟಿಗಳನ್ನು ಖರ್ಚು ಮಾಡಿ ತನ್ನ ವರದಿ ಕೊಟ್ಟಿತು. ಅದರಲ್ಲಿನ ಮುಖ್ಯ ಅಂಶಗಳು ಹೀಗಿದ್ದವು.

ಬರಹಗಾರರು ಅವರನ್ನೇ ಸರಸ್ವತಿ ಪುತ್ರರು ಎಂದು ಕರೆದುಕೊಂಡಿದ್ದು ದೊಡ್ಡ ಅಪರಾಧ. ಸರಸ್ವತಿಗೂ ಇವರಿಗೂ ಎಲ್ಲಿಂದ ಎಲ್ಲಿಗೆ? ಸರಸ್ವತಿ ಪುತ್ರ ಅಂದರೆ ಇವರಪ್ಪ ಯಾರು? ಜತೆಗೆ ರಾಜ್ಯದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ತಾವು ತಾವೇ ಹಂಚಿಕೊಂಡದ್ದು ಅಕ್ಷಮ್ಯ. ದುಡಿವ ಜನರ ದುಡಿಮೆಯನ್ನು ಹೀಗೆ ಅಪವ್ಯಯ ಮಾಡಿದ್ದು ಅಕ್ಷಮ್ಯ. ಒಂದು ಕಡೆ ದುಡಿಯುತ್ತಲೇ ಇರುವವರು ಮತ್ತೊಂದು ಕಡೆ ಇವರ ಹಾಗೆ ದುಡಿತದ ಮೌಲ್ಯವನ್ನು ಉಣ್ಣುತ್ತಲೇ ಇರುವವರಿಂದ ಸಾಮಾಜಿಕ ಅಸಮತೋಲನ ಆಗಿದೆ ಎನ್ನುವುದು ಸಾಬೀತಾಗಿದೆ. ಜತೆಗೆ ಇಷ್ಟು ದೀರ್ಘಕಾಲ ಶೋಷಣೆಗೆ ಒಳಗಾದ ತುಳಿಯಲ್ಪಟ್ಟ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಲೇಬೇಕಾದ ಅನಿವಾರ್ಯತೆ ಒದಗಿದೆ. ಈ ಎಲ್ಲಾ ಅಂಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸಾಮಾಜಿಕ ಕಳಕಳಿಯಿಂದ ಪರಿಶೀಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.

(ಇದರಲ್ಲಿ ಹಲವು ಸಹಸ್ರ ಕ್ರಮಗಳನ್ನು ಸೂಚಿಸಲಾಗಿತ್ತು. ಅವುಗಳಲ್ಲಿ ಪ್ರಮುಖ ಅನಿಸಿದ ಕೆಲವು ಅಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ )

ಸರ್ಕಾರವು ಪ್ರಶಸ್ತಿ ಪುರಸ್ಕಾರ ನಿರ್ಧರಿಸಲು ಇರುವ ಸಮಿತಿಯನ್ನು ವಿಸರ್ಜಿಸತಕ್ಕದ್ದು, ಮುಂದೆ ಇಂತಹ ಸಮಿತಿಗಳ ರಚನೆ ನಿಲ್ಲಿಸತಕ್ಕದ್ದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಉಳಿತಾಯ ವಾಗುತ್ತದೆ. ಅಲ್ಲದೇ ಅಕಾಡೆಮಿ ಮುಂತಾದ ಆಯಕಟ್ಟಿನ ಜಾಗಗಳಿಗೆ ಪ್ರಭಾವ ಬೀರುವವರು ನಶಿಸುತ್ತಾರೆ. ಅಕಾಡೆಮಿ ಮತ್ತು ಅಂತಹ ಸಾವಿರಾರು ಕ್ವಾಸಿ ಸಂಸ್ಥೆಗಳ, ಲೋಕಲ್ ಪವರ್ ಕೇಂದ್ರಗಳ ಹತೋಟಿ ತಪ್ಪುತ್ತದೆ. ಇದರಿಂದ ಅಪಾರ ಪ್ರಮಾಣದಲ್ಲಿ ಮಾನವ ಗಂಟೆಗಳು (ಇದಕ್ಕೆ man hours ಎಂದು ಹೆಸರು )ಉಳಿಯುತ್ತವೆ ಮತ್ತು ಇದನ್ನು ದೇಶ ಕಟ್ಟುವ ಸಮೃದ್ಧಿ ಪಡಿಸುವ ಪ್ರಭುತ್ವದ ಆಶಯಕ್ಕೆ ಪೂರಕವಾಗಿ ಉಪಯೋಗಿಸಬಹುದು. ಇದು ಜಾರಿಗೆ ಬಂದರೆ ಸರ್ಕಾರಕ್ಕೆ ಹಲವು ಸಹಸ್ರ ರೀತಿಯ ಪ್ರಯೋಜನಗಳು ಉಂಟು. ಪ್ರಮುಖವಾಗಿ ಅಕಾಡೆಮಿ ಮೊದಲಾದ ಅದೇ ಹೆಸರಿನ ಬೇರೆಬೇರೆ ಕಾರ್ಯಗಳ ಮುಖವಾಡ ಹೊತ್ತ ಸಂಸ್ಥೆಗಳು ಇರುವುದಿಲ್ಲ ಮತ್ತು ಅವುಗಳಲ್ಲಿ ನೇಮಕಾತಿಗಳಿಗಾಗಿ ಒತ್ತಡ ಸಹ ಇರದು. ಸರ್ಕಾರದ ಪ್ರಭುಗಳು ಹೀಗೆ ಉಳಿದ ಸಮಯವನ್ನು ಪ್ರಜೆಗಳ ಏಳ್ಗೆಗಾಗಿ ಮೀಸಲಿಡಬಹುದು. ಜತೆಗೆ ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳಿಸಿದ ವ್ಯಕ್ತಿಗಳ ಫೋಟೋಗಳನ್ನು ಗಲ್ಲಿ ಗಲ್ಲಿಯಲ್ಲಿ, ಸಾರಿಗೆ ವಾಹನಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಪ್ರದರ್ಶಿಸುವುದು ಖಡ್ಡಾಯ ನಿಲ್ಲಿಸಲು ಯೋಜನೆ ಹಾಕಬೇಕು. ಹೀಗೆ ನಿಲ್ಲಿಸುವುದರಿಂದ ಆಸ್ಪತ್ರೆ ಖರ್ಚು ಕಡಿಮೆ ಆಗುತ್ತದೆ..!(ಇದು ಹೇಗೆ ಅಂತ ಆಶ್ಚರ್ಯ ಪಟ್ಟವನು ನಾನು. ಫೋಟೋ ನಿಲ್ಲಿಸುವುದರಿಂದ ಆಸ್ಪತ್ರೆ ಖರ್ಚು ಕಡಿಮೆ ಹೇಗೆ ಆಗುತ್ತೆ ಅಂತ ತಲೆ ಕೆಡಿಸಿಕೊಂಡೆ. ವರದಿ ಪೂರ್ಣ ವಾಚಿಸಿದಾಗ ಅದು ಅರ್ಥವಾಯಿತು. ಅದನ್ನು ನಿಮಗೆ ಹೇಳಲೇ ಬೇಕು. ಎಲ್ಲೆಲ್ಲೋ ಆಯಕಟ್ಟಿನ ಜಾಗಗಳಲ್ಲಿ ಪುರಸ್ಕೃತರ ಫೋಟೋ ಇರ್ತಾ ಇತ್ತಲ್ಲ, ಅದನ್ನು ನೋಡಿ ಇನ್ನೂ ಫೋಟೋ ಹಾಕಿಲ್ಲದವರು ಹೊಟ್ಟೆ ಉರಿ ಪಟ್ಕೋತಿದ್ದರು ಮತ್ತು ಅವರ ಬಂಧು ಬಳಗ ಅದರಲ್ಲೂ ಹೆಂಡಿರು -ಕೆಲವರಿಗೆ ಇದು ಜೋಡಿ ಜೋಡಿ ಇತ್ತಂತೆ -ಸಂಕಟ ಪಟ್ಟು ಔಷಧಿ ವೆಚ್ಚ ಹೆಚ್ಚಾಗಿತ್ತು ಅಂತ ವರದಿ) ಹೀಗೆ ಉಳಿದ ಅಪಾರ ಪ್ರಮಾಣದ ಹಣದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಪಬ್‌ಗಳು, ಬಾರ್ ಗಳು, ಸ್ವಿಮ್ಮಿಂಗ್ ಪೂಲ್‌ಗಳು ಮತ್ತು ರೆಸಾರ್ಟ್‌ಗಳನ್ನು ನಿರ್ಮಿಸಬಹುದು. ಇವುಗಳಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಬಹುದು. ಮುಂದಿನ ಸಭ್ಯ ಸಜ್ಜನ ರಾಜಕಾರಣಿಗಳು ರೂಪುಗೊಳ್ಳಲು ವಿಶೇಷ ಯೋಜನೆ ಹಮ್ಮಿಕೊಳ್ಳಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ವಿಶೇಷ ಪ್ರಶಸ್ತಿ ಪಡೆದು ಸರ್ಕಾರದ ಖರ್ಚಿನಲ್ಲಿ ಎಲ್ಲೆಂದರಲ್ಲಿ ತಮ್ಮ ಭಾವಚಿತ್ರ ಹಾಕಿಸಿಕೊಳ್ಳುವ ಬುದ್ಧಿಜೀವಿಗಳ ಹಾವಳಿಯನ್ನು ಸಂಪೂರ್ಣ ನಿಯಂತ್ರಿಸಬಹುದು… ಬುದ್ಧಿಜೀವಿಗಳ ಹಾವಳಿ ನಿಂತರೆ ಎಂತಹ ಸಮಾಜವನ್ನಾದರೂ ನಿಭಾಯಿಸಬಹುದು ಎನ್ನುವುದು ಆಳುವವರ inside thinking!

(AI ಚಿತ್ರ)

ಹೀಗೆ ವರದಿ ಹಲವು ಸಾವಿರ ಪುಟ ಮತ್ತು ಹಲವು ಹತ್ತು ಹೊಸಾ ಹಿಸಾ (ಇದು ಟೈಪಿಂಗ್ ಮಿಸ್ಟೇಕ್ ಅಲ್ಲ, ಹೊಸಾ ಹೊಸಾ ಬದಲಿಗೆ ಹೊಸಾ ಹಿಸಾ ಅಂತ ನಾನೇ ಬೇಕಂತ ಹಾಕಿದ್ದು! ನಾವೂ ಕ್ರಾಂತಿಯಲ್ಲಿ ಪಾಲುದಾರರು ತಾನೇ…) ಕ್ರಾಂತಿಕಾರಕ ಐಡಿಯಾಗಳನ್ನು ಕೊಟ್ಟಿತು. ವರದಿ ಸರ್ಕಾರದ ಕೈ ಸೇರುವ ಮೊದಲೇ ಜನ ಸಾಮಾನ್ಯರ ಆಕ್ರೋಶ ಭುಗಿಲೆದ್ದಿತು! ಇದರ ಪರಿಣಾಮ ಎಂದರೆ ಇದರ ಅಂದರೆ ವರದಿಯ ಪರಿಷ್ಕರಣೆ. ಇದಕ್ಕೊಂದು ಸಮಿತಿ ಮತ್ತು ಅದಕ್ಕೆ ಮೊಟ್ಟ ಮೊದಲಬಾರಿಗೆ ಕಾಲಮಿತಿ ನೀಡಲಾಯಿತು. ಈ ಸಮಿತಿ ನೊಂದವರಿಂದ ಸಮಜಾಯಿಷಿ ಅಪೇಕ್ಷೆ ಪಟ್ಟಿತು.

ಹೀಗೆ ಬಂದ ಕೆಲವು ಸಲಹೆಗಳು /ಸಮಜಾಯಿಷಿ ಹೀಗಿದ್ದವು.

ಬುದ್ಧಿಜೀವಿಗಳು… ಪ್ರಶಸ್ತಿ ಬಹುಮಾನ ಇವುಗಳು ಇಲ್ಲ ಅಂದರೆ ಸಾರಸ್ವತಲೋಕ ಸತ್ತ ಹಾಗೆ. ಯಾವುದೇ ನೆಲದ ಸಾಂಸ್ಕೃತಿಕ ಘನತೆ ಅಲ್ಲಿರುವ ಸಾಹಿತಿಗಳ ಮೂಲಕವೇ. ಅದರಿಂದ ಸರ್ಕಾರ ಇಂತಹ ಅವರ ಬುದ್ಧಿ ಮತ್ತು ವ್ಯಾಪ್ತಿಗೆ ಮೀರಿದ ಕೆಲಸಕ್ಕೆ ಕೈ ಹಾಕದೇ ಮೊದಲಿನ ಸ್ಥಿತಿ ಮುಂದುವರೆಸಬೇಕು.

ಒಂದೇ ಒಂದು ಪುಟ ಬರೆದ ಸಾಹಿತಿಗಳು… ಪುಸ್ತಕ ಅಥವಾ ಗ್ರಂಥ ಅಂದರೆ ಪುಟಗಳ ಮಿತಿ ಇರಲಿ. ನೂರು ಪುಟ ಬರೆಯೋದು ಸಹ ಶೋಷಿತ ಸಮಾಜಕ್ಕೆ ಆಗದ ಕಾರ್ಯ. ಸಮಾಜದ ಕೊಟ್ಟ ಕೊನೆಯ ವ್ಯಕ್ತಿಗೂ ಸಹ ಪ್ರಜಾಪ್ರಭುತ್ವದ ಲಾಭ ಸಿಗಬೇಕು. ಅದರಿಂದ ಹತ್ತು ಪದ, ಐದು ಸಾಲು ಬರೆದರೂ ಅದನ್ನು ಸಾಹಿತ್ಯ ಎಂದು ಪರಿಗಣಿಸಿ ಅದಕ್ಕ ಪ್ರಶಸ್ತಿ ನೀಡಬೇಕು.

ಫೋರ್ ಲೈನರ್ಸ್ ಸಂಘ… ಸಾಮೀ ಬರೆವೆ ನಾವು ನಾಲ್ಕು ಸಾಲನು, ಕೊಡಿ ನೀವದಕೆ ಬಹುಮಾನವನು  ಸಾಕೆಮೆಗೆ ಅಷ್ಟೇ, ಚಿರಋಣಿ ನಾವು ನಿಮಗೆ..

ಟೂ ಲೈನರ್ಸ್, ಸಿಂಗಲ್ ಲೈನರ್ಸ್, thousand pagers, hundred pagers. ಹೀಗೆ ಹಲವಾರು ಗುಂಪುಗಳು ತಮ್ಮ ಸಲಹೆ ಸೂಚನೆ ಕೊಟ್ಟವು. ಅದಕ್ಕೆ ಪೂರಕವಾಗಿ ಸೆಮಿನಾರುಗಳು, ಸಂಕಿರಣಗಳು ನಡೆದವು. ಇವು ಯಾವಾಗ ತನ್ನ ಬಿಸಿ ಹೆಚ್ಚಿಸಿಕೊಂಡು ಹೋಯಿತೋ ಸರ್ಕಾರಕ್ಕೆ ಮಂಡೆ ಬಿಸಿಯಾಯಿತು. ಇಲ್ಲಿ ಮಂಡೆ ಅನ್ನುವ ಪದ ಯಾಕೆ ಬಳಸಿದೆ ಅಂದರೆ ಸರ್ಕಾರಕ್ಕೆ ತಲೆ ಇಲ್ಲ ಎನ್ನುವ ಮಾತಿದೆ. ಮಂಡೆ ಎಂದರೆ ತಲೆಯೂ ಆಗುತ್ತೆ ಸೋಮವಾರವೂ ಆಗತ್ತೆ. ಅದರಿಂದ ತಲೆ ಇಲ್ಲ ಎನ್ನುವ ಗುಂಪು ಸೋಮವಾರ ಎಂದು ಓದಿಕೊಳ್ಳಿ!

ಸರ್ಕಾರದ ಮುದಿ ಮತ್ತು ಮೂಡಿ ತಲೆಗಳು ಕೂತವು. ಬುದ್ಧಿಜೀವಿಗಳ ಒಂದು ಪಟಾಲಂ ಮುಂದೆ ಇತ್ತು. ಚಿಂತನ ಮಂಥನ ನಡೆಸಿದ ಹಾಗೆ ಮಾಡಿದವು. ಸರ್ಕಾರದ ಸೀನಿಯರ್ ಮೋಸ್ಟ ಹಿರಿ ಸಚಿವ ಸರ್ಕಾರದ ಸಮಸ್ಯೆ ಎಳೆ ಎಳೆಯಾಗಿ ಬಿಡಿಸಿಟ್ಟಿತು. ಅದರ ಪ್ರಕಾರ ಹಿಂದೆ ಬೆಂಗಳೂರು ಅನ್ನುವ ಹೆಸರಿನ ಒಂದು ನಗರ ಇತ್ತು. ಅದಕ್ಕೆ ನೂರು ಇನ್ನೂರು ಮುನ್ನೂರು.. ಹೀಗೆ ಕೆಲವು ನೂರು ಕಿಲೋಮೀಟರು ದೂರದಲ್ಲಿ ಬೇರೆ ಬೇರೆ ನಗರ ಇತ್ತೋ. ಅದರಿಂದ ಸರ್ಕಾರದ ಕೆಲಸ ಸುಲಭ ಅನಿಸಿತ್ತು. ಅಷ್ಟೊಂದು ಜನ ಸಿಬ್ಬಂದಿ ಕೆಲಸ ಮಾಡಿಕೊಂಡು ಲಂಚ ಪಂಚ ಹೊಡೆದುಕೊಂಡು ಮಂತ್ರಿಗಳನ್ನು ಓಲೈಸಿ ಅನ್ಯೋನ್ಯವಾಗಿದ್ದರು. ಮಧ್ಯೆ ಯಾವನೋ ತರಲೆ ಪೊಲಿಟಿಶಿಯನ್ ಬಂದ. ಎಲ್ಲಾ ಒಂದೇ ಮಾಡಾನ, ಕೆಲಸ ಸುಲಭ ಆಗತೈತಿ ಅಂತ ಇಡೀ ಸ್ಟೇಟ್ ನ ಬೆಂಗಳೂರು ಅಂದುಬಿಟ್ಟ. ಈಗಿನ ಎಲ್ಲಾ ಸಮಸ್ಯೆಗಳಿಗೂ ಅದೇ ಮೂಲ. ಈಗ ನಾವು ಎಂಥ ಇಕ್ಕಟ್ಟಿನ ಇಕ್ಕಳದಲ್ಲಿ ಸಿಲ್ಕಿದೀವಿ ಅಂದರೆ ಹಿಂದಿನದು ಮಾಡಾ ಹಂಗಿಲ್ಲ, ಮುಂದಿನದು ಯೋಚಿಸಬೇಕು. ನೀವೆಲ್ಲಾ ಹಿರಿತಲೆಗಳು, ಅನುಭವಸ್ಥರು intellectuals ಇದೀರಿ. ನೀವು ಡಿಸೈಡ್ ಮಾಡ್ರಿ, ಯಾರಿಗೂ ನೋವಾಗಬಾರದು, ಯಾವ ಪಂಗಡದವರೂ ನಮಗೆ ಮೋಸ ಆಗಿದೆ ಅನ್ನಬಾರದು. ಸರ್ವರಿಗೂ ಸಮಪಾಲು ಎನ್ನುವ ನಮ್ಮ ಸಂವಿಧಾನ ತತ್ವ ಅಡಗಿರಬೇಕು ಅಂತ ಪ್ರಾಸ್ತಾವಿಕ ಭಾಷಣ ಮುಗಿಸಿ ಪಕ್ಕದ ರೂಮಿಗೆ ವಿಶ್ರಾಂತಿಗೆ ಹೋದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕನ್ನಡದ ಬುದ್ಧಿಜೀವಿಗಳು ಈ ಸಭೆಯಲ್ಲಿದ್ದರು. ಅಳೆದೂ ಸುರಿದೂ ಕೆಲವು ಪ್ರಪೋಸಲ್ ಕೊಟ್ಟರು.

ಅದರಲ್ಲಿ ಪ್ರಮುಖ ಅಂದರೆ ಯಾವುದೇ ಸಾಹಿತ್ಯ ಪ್ರಶಸ್ತಿಗೆ ಅರ್ಹತೆ ಪಡೆಯಬೇಕು ಅಂದರೆ ಅದು ಇಷ್ಟೇ ಗಾತ್ರ ಇರಬೇಕು ಎಂದರೆ ಪ್ರಭುತ್ವ ಒಂದು ಜನಾಂಗದ ಮೇಲೆ ಮಾಡುವ ಅತ್ಯಾಚಾರ. ಸರ್ಕಾರಕ್ಕೆ ಬುದ್ಧಿ ಹೇಳಿ ಸರಿಯಾದ ಮಾರ್ಗದರ್ಶನ ಮಾಡಬೇಕಾದವರು ನಾವು. ನಮ್ಮ ಒಟ್ಟಾರೆ ಅಭಿಪ್ರಾಯ ಏನು ಅಂದರೆ ಒಂದು ಸಾಲಿನ ಸಾಹಿತ್ಯವೂ ಸಹ ಪ್ರಶಸ್ತಿಗೆ ಅರ್ಹತೆ ಪಡೆಯುತ್ತದೆ. ಪ್ರಶಸ್ತಿ ಪಡೆಯುವ ಸಾಹಿತ್ಯವು ದೇಶದ ಸಮಾಜದ ಹಾಗೂ ಶೋಷಿತರ ಮುಖವಾಣಿ ಆಗಿರ ಬೇಕು. ಪ್ರಶಸ್ತಿ ಮಾನದಂಡ ಸರ್ಕಾರ ತೀರ್ಮಾನಿಸಲಿ ಮತ್ತು ಅದಕ್ಕೆ ನಮ್ಮ ಸಹ ಮತ ಉಂಟು. ಜತೆಗೆ ಸರ್ಕಾರದ ಉನ್ನತ ಅಧಿಕಾರಕ್ಕೆ ಒಂದು ಸಲಹೆ ಎಂದರೆ ಉನ್ನತ ಪ್ರಶಸ್ತಿ ವಿಜೇತರ ಭಾವ ಚಿತ್ರಗಳನ್ನು ಪ್ರದರ್ಶಿಸುವ ಪರಿಪಾಠ ಮುಂದುವರೆಯಬೇಕು. ಸಾಹಿತ್ಯ ಚಿಕ್ಕದು ಚೊಕ್ಕದು ಆಗಿದ್ದರೆ ಭಾವ ಚಿತ್ರದ ಮೇಲೋ ಕೆಳಗೋ ಪಕ್ಕದಲ್ಲೋ ಅದನ್ನೂ ಬರೆಯಬಹುದು. ಯಾವುದೇ ದೇಶದ ಸಾಹಿತ್ಯ ಸಂಸ್ಕೃತಿ ಬಿಂಬಿತವಾಗುವುದು ಅಲ್ಲಿನ ಕಲಾವಿದರಿಗೆ, ಸಾಹಿತಿಗಳಿಗೆ, ಮೇಧಾವಿಗಳಿಗೆ ದೊರಕುವ ಸಾರ್ವಜನಿಕ ಗೌರವಗಳಿಂದ….. ಈ ರೂಪದಲ್ಲಿ ಮತ್ತಷ್ಟು ವಿಶೇಷಣಗಳೊಂದಿಗೆ ಸರ್ಕಾರಕ್ಕೆ ವರದಿ ಹೋಯಿತು.

ಅಸೇತು ಹಿಮಾಚಲದಿಂದ ಬಂದು ಸೇರಿದ್ದ ಬುದ್ಧಿಜೀವಿಗಳ ವರದಿ ಇಟ್ಟುಕೊಂಡು ಸರ್ಕಾರ ಮಾತಿಗೆ ಕೂತಿತು. ಅದರಲ್ಲಿ ಕೆಲವು ಸಾಹಿತಿ converted ರಾಜಕಾರಣಿಗಳು ಇದ್ದರು. ಅವರು ವರದಿ ಪೂರ್ತಿ ಓದಿದರು. ಒಂದು ಸಾಲಿನ, ಎರಡು ಸಾಲಿನ ಮೂರು ಸಾಲಿನ ಸಾಹಿತ್ಯ ಕೃತಿ ಪ್ರಶಸ್ತಿಗೆ ಗಮನಿಸಬೇಕಾದ ಅಂಶ. ಇಂತಹ ಪ್ರಶಸ್ತಿ ವಿಜೇತರಿಗೆ ಸನ್ಮಾನ, ಅವರ ಫೋಟೋಗಳು ನಾಡಿನ ಎಲ್ಲೆಡೆ ರಾರಾಜಿಸಬೇಕಾದ್ದು ಅತ್ಯಂತ ಸಹಜವಾದ ಅನಿಸಿಕೆ. ಇದಕ್ಕೆ ನಮ್ಮ ಒಪ್ಪಿಗೆ ಇದೆ. ಕೆಲವು ಅಂಶಗಳನ್ನು ಸೇರಿಸಿ ಒಂದು ಕಾನೂನು ಮಾಡಿಬಿಡಾಣ, ಇನ್ನು ಸಾವುರ ವರ್ಷ ಆದರೂ ಯಾರೂ ಬದಲಾಯಿಸಲು ಆಗಬಾರದು ಹಾಗೇ… ಅಂತ ನಿರ್ಧಾರ ತಗೊಂಡರು. Magnacarta of literature ಅಂತ ಒಂದು ಕಾನೂನು ಕರಡು ರೆಡಿ ಆಯ್ತು!

Magnacarta ಜಾರಿ ಆಗಿ ಕಾನೂನು ರೂಪ ಪಡೆಯಲು ಶಾಸನ ಸಭೆ ಮುಂದೆ ಹೋಗಬೇಕು ತಾನೇ. ಅಲ್ಲಿ ಇದು ಲಿಸ್ಟ್ ಆಯಿತು. ಒಂದು ಆರು ತಿಂಗಳು ಘನ ಘೋರ ಭಾಷಣಗಳು ಆದವು. ಕೆಲವು ತಿದ್ದುಪಡಿಗಳು ಮಂಡಿಸಲ್ಪಟ್ಟವು. ಅದರಲ್ಲಿ ಪ್ರಮುಖ ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದನ್ನು ಪ್ರಜಾಪ್ರಭುತ್ವದ ತಳಹದಿಯಂತೆ ಮಾಡುವುದು. ಅಂದರೆ ಶ್ರೇಷ್ಠ ಯಾವುದು ಎಂದು ತೀರ್ಮಾನಿಸಲು voting ಇಡುವುದು. ವೋಟಿಂಗ್ ಇಟ್ಟಾಗ voting machine ಗಳನ್ನು hack ಮಾಡಬಹುದು, ಅದರಿಂದ ಬ್ಯಾಲೆಟ್ ಪೇಪರ್ ಇರಲಿ ಎಂದು ಕೆಲವು ಸದಸ್ಯರು ಅನುಮಾನ ಪಟ್ಟರು. ಕೊನೆಗೆ ತಾಡಿ ಪತ್ರ ಇಲ್ಲವೇ ಅಡಕೆ ಪಟ್ಟೆ ಉಪಯೋಗಿಸಿ ಮತದಾನ ಮಾಡುವುದು ಎಂದು ತೀರ್ಮಾನವಾಯಿತು. ಪ್ರತಿವರ್ಷ ಒಬ್ಬ ಶ್ರೇಷ್ಠ ಸಾಹಿತಿಗೆ ನಂಬರ್ ಒನ್ ಪ್ರಶಸ್ತಿ ಕೊಡುವುದರಿಂದ ಅಂತಹ ಸಾಹಿತಿಗಳ ಫೋಟೋ ಒಂದು ಕಾಲಮಿತಿಗೆ ಒಳಪಟ್ಟಿರಲಿ, ಇದು ಒಂದು ವರ್ಷ ಇದ್ದರೆ ಸಾಕು ಎನ್ನುವ ತಿದ್ದುಪಡಿ ಸೇರಿತು. ಮಿಕ್ಕಂತೆ ಬಹುಮಾನದ ಹಣ ಪ್ರತಿವರ್ಷವೂ ಶೇಖಡ ಇಪ್ಪತ್ತು ಹೆಚ್ಚಿರಬೇಕು ಎಂದಾಯಿತು. ಎಲ್ಲವೂ ಹೀಗೆ ಸರಾಗವಾಗಿ ನಡೆದು ಸರ್ವ ಸಮ್ಮತ ವಾಗಿ ಸಾಹಿತ್ಯ ಪ್ರಶಸ್ತಿಗಳು ಮರು ಆರಂಭ ಗೊಂಡಿತು. ಅದರ ಚೆನ್ನ ಮತ್ತು ಅದರ ಕತೆ ಮತ್ತೊಂದು ಮೈ ನವಿರೇಲಿಸುವ ಕಥಾನಕ.

ಕಥಾನಕಕ್ಕೆ ಹಾರುವ ಮೊದಲು ಈ ಕೆಳಗಿನ ಪ್ರಶಸ್ತಿ ವಿಜೇತ ಸಾಹಿತ್ಯ ಕೃತಿಗಳು ತಮ್ಮ ಮನಸ್ಸಿನಲ್ಲಿರಲಿ. ಕತೆಗೊಂದು ಕೊನೆ ಕಾಣಿಸುವ ಸಮಯ ಬಂದಿದೆ. ಅದರಿಂದ ನಾನು ಕೊಂಚ ಫಾಷ್ಟು. ಈಗ ಇದು ನಿಮ್ಮ ಮನದಲ್ಲಿರಲಿ…

“ಅವಳು ನಿದ್ರೆಯಿಂದ ಎದ್ದಾಗ ಎದುರಿತ್ತು ಅನ್ನದ ತಟ್ಟೆ…

“ಭಾರತದ ಹೆಮ್ಮೆ ನಮ್ಮೂರ ಎಮ್ಮೆ…..

“ಸೀರೆಉಟ್ಟ ಹೆಂಗಸು ಭಾರತದ ಸೊಗಸು…

“ಮಗು ನಕ್ಕಿತು ಆಕಾಶ ಉಕ್ಕಿತು

ಚೆಡ್ಡಿ ಇಲ್ಲವಾದರೆ ಬಡ್ಡಿ ಬಿಡಲಾದೀತೇ

ಪರ್ವತದ ತುದಿಯಲ್ಲಿ ದೇವರು

ಪಾತಾಳದಲ್ಲಿ ನಾವು

ಕೈತುತ್ತು ಇಕ್ಕಿದ ಅಮ್ಮ ಕಣಕ್ಕಿಳಿಸಿದ ತಮ್ಮ

ಗಾಳಿಗೆ ಹೊಯ್ದಾಡಿದ ಮರ ಭೂಮಿ ತಬ್ಬಿದ ಹಣ್ಣು..”

ಇವುಗಳ ಹಿನ್ನೆಲೆ ಮುನ್ನೆಲೆ ಮತ್ತು ಪ್ರಶಸ್ತಿ ಪುರಾಣ ಮುಂದಿನ ಸಂಚಿಕೆಯಲ್ಲಿ…

ಇನ್ನೂ ಇದೆ.

 

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ