Advertisement
ಆವರಣ ಭಂಗ ಮಾಡಿಸುವ “ಪರಿಸರದ ಒಡನಾಟ”: ನಾರಾಯಣ ಯಾಜಿ ಬರಹ

ಆವರಣ ಭಂಗ ಮಾಡಿಸುವ “ಪರಿಸರದ ಒಡನಾಟ”: ನಾರಾಯಣ ಯಾಜಿ ಬರಹ

ದಟ್ಟಕಾಡು ಮರೆಯಾಗಿ ಕರಾವಳಿಯ ಬಯಲಿಗೆ ತೆರೆದುಕೊಳ್ಳುವ ಮಧ್ಯದ ಕೊಂಡಿಯಾಗಿ ಇರುವ ಊರುಗಳ ಹೆಸರುಗಳಾದ ಹರನ ಗುಡ್ಡ, ಚೇರ್ಕಿ, ಚೋರಾಡಿ, ಹಾಲಾಡಿ, ಹಕ್ಲಾಡೀ, ಕಬ್ಬಿನಾಲೆಗಳ ವಿವರ ಲೇಖನಗಳುದ್ದಕ್ಕೂ ಬರುತ್ತಲೇ ಹೋಗುತ್ತವೆ. ಯಾವುದೋ ಕಾಲದಲ್ಲಿ ‘ಮುದ್ದಳ’ ಎನ್ನುವ ಸಾಮಂತನಾಳಿದ ಈ ಊರಿನಲ್ಲಿ ಆತನ ನೆನಪು ಮರೆಯಾಗಿದೆ. ಆತನ ಅರಮನೆ ಇದೆ ಎನ್ನುವ ಜಾಗ ಅಸ್ಪಷ್ಟವಾಗಿ ಇದೆ. ಹಳ್ಳಿಗರ ಭಿತ್ತಿಯಲ್ಲಿ ಮಾಸಲು ತೊಡಗಿರುವ ಆ ಗುತ್ತುಗಳ ವಿಚಾರವನ್ನು ಹೇಳುತ್ತಲೇ, ತನ್ನ ಬಾಲ್ಯದ ಪರಿಸರದಲ್ಲಿ ಇದೀಗ ಮರೆಯಾಗುತ್ತಿರುವ ಹಳೆಯ ಕಾಡು, ಕರಡ ಹುಲ್ಲಿನ ಬೇಣ, ಒಳ್ಳೆ ಹಾವು, ವಿಷದ ಹಾವುಗಳೊಡನೆಯ ಬದುಕೆಲ್ಲವನ್ನೂ ಆಧುನಿಕ ಬದುಕು, ನಿಧಾನಕ್ಕೆ ಕಸಿಯತೊಡಗಿವೆ ಎನ್ನುವ ನೋವನ್ನು ಪರೋಕ್ಷವಾಗಿ ಲೇಖಕರು ತೋಡಿಕೊಳ್ಳುತ್ತಿದ್ದಾರೆ.
ಶಶಿಧರ ಹಾಲಾಡಿಯವರ “ಪರಿಸರದ ಒಡನಾಟ”ಕೃತಿಯ ಕುರಿತು ನಾರಾಯಣ ಯಾಜಿ ಬರಹ

ಶಶಿಧರ ಹಾಲಾಡಿಯವರ ಕೃತಿಗಳ ವಿಶೇಷವೆಂದರೆ ಪ್ರಕೃತಿಯ ಮಡಿಲಲ್ಲಿ ವಿಹರಿಸುವುದು. ಅವರ ಅಬ್ಬೆ ಕಾದಂಬರಿಯಿಂದ ಹಿಡಿದು ಅಮ್ಮಮ್ಮನ ದೀಪಾವಳಿ, ಪ್ರಕೃತಿ ಪ್ರಪಂಚ, ಬೆಟ್ಟಗುಡ್ಡಗಳ ನಡುವೆ ಪುಟ್ಟ ಮನೆ, ಹಾಲಾಡಿಯಲ್ಲಿ ಹಾರುವ ಓತಿ ಹೀಗೆ ಯಾವುದನ್ನು ತೆಗೆದುಕೊಂಡರೂ ಅದರಲ್ಲಿ ನಮ್ಮನ್ನು ಯುಟೋಪಿಯನ್ ಪ್ರದೇಶಕ್ಕೆ ಕರೆದೊಯ್ಯುತ್ತಾರೆ. ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ನಂತರ ಈ ಪರಿ ಬದುಕಿನ ಚಿತ್ರಣವನ್ನು ಕೊಡುವ ಸಾಹಿತ್ಯ ತುಂಬಾ ವಿರಳ. ಅವರ ಬರಹಗಳಲ್ಲಿ ತೇಜಸ್ವಿಯವರ ಪ್ರಭಾವ ಕಾಣಿಸುತ್ತದೆ. ಆದರೆ ಅದರ ಅರಿವು ಬಂದತಕ್ಷಣ ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. “ಅಬ್ಬೆ” ಕಾದಂಬರಿಯಲ್ಲಿ ಈ ಗುಣಗಳನ್ನು ಸ್ಪಷ್ಟವಾಗಿ ಕಾಣಬಹುದು. ಬಯಲು ಸೀಮೆಯ ನಾಡಿನಲ್ಲಿಯೂ ಪ್ರಕೃತಿಯನ್ನು ಅನ್ವೇಷಿಸುವ ಅವರ ಈ ಕಾದಂಬರಿ ಕನ್ನಡದ ಮಹತ್ವದ ಕಾದಂಬರಿಗಳಲ್ಲೊಂದು.

ಹಾಲಾಡಿಯವರು ಮೂಲತಃ ಬ್ಯಾಂಕರ್. ಉದ್ಯೋಗದಲ್ಲಿ ಇರುವಾಗಲೇ ಸಾಹಿತ್ಯದೆಡೆಗೆ ಆಸಸಕ್ತಿಯನ್ನು ಬೆಳೆಸಿಕೊಂಡವರು. ನಂತರ ಸ್ವಯಂ ನಿವೃತ್ತಿ ಪಡೆದುಕೊಂಡು ಇದೀಗ ಪೂರ್ಣ ಪ್ರಮಾಣದ ಪತ್ರಿಕೋದ್ಯಮಿಯಾಗಿದ್ದಾರೆ. ಬ್ಯಾಂಕಿನಲ್ಲಿ ಪೋರ್ಟ್ ಪೋಲಿಯ್ ಅಡಿಟ್ ಎನ್ನುವುದೊಂದಿದೆ. ಇದ್ದದ್ದನ್ನು ಇದ ಹಾಗೇ ಹೇಳುವುದಷ್ಟೇ ಅಲ್ಲ; ಮುಂದೆ ಬರಲಿರುವ ಅಪಾಯವನ್ನು ಸೂಕ್ಷ್ಮವಾಗಿ ತಿಳಿಸಿ ಸುಮ್ಮನಾಗುವುದು ಆಡಿಟ್ಟಿಗೆ ಬಂದವರ ಕೆಲಸ. ಸಂಬಂಧಪಟ್ಟವರು ಅದನ್ನು ಗಮನಿಸಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು. ಹಾಲಾಡಿಯವರಿಗೆ ಈ ಗುಣ ಪರಿಸರದ ಬರಹಗಳನ್ನು ಬರೆಯುವಾಗಲೆಲ್ಲ ರೂಢಿಗತವಾಗಿದೆ. ಪರಿಸರ ನಾಶದ ಕುರಿತು ಅವರು ಹೇಳುವಾಗ ಅವರ ಬರಹದಲ್ಲಿ ಆಕ್ರೋಶವಿಲ್ಲ. ತಾನೇನೋ ಸುಧಾರಿಸಿಬಿಡುತ್ತೇನೆ, ಎಲ್ಲರಿಗಿಂತಲೂ ಮೊದಲು ತಾನು ಗಮನಿಸಿದೆ, ಅದಿಲ್ಲದಿದ್ದರೆ ಲೋಕವೇ ಹಾಳಾಗುತ್ತಿತ್ತು ಎನ್ನುವ ಅಹಂ ಸಹ ಇಲ್ಲ. ಇಲ್ಲಿನ ಈ ಬರಹಗಳಲ್ಲಿ ನಿಟ್ಟಿಸಿರು ಇದೆ, ಕಾಳಜಿ ಇದೆ. ಶಿವಾನಂದ ಕಳವೆಯವರ “ಮಧ್ಯಗಟ್ಟ” ಕಾದಂಬರಿಯಲ್ಲಿ ಈ ಸಹನೆಯ ಆತಂಕವನ್ನು ಕಾಣಬಹುದು. ಇನ್ನೊಂದು ನನ್ನನ್ನು ಕಾಡಿದ ಕೃತಿ ವಿ. ಟಿ. ಶೀಗೆಹಳ್ಳಿಯವರ “ತಲೆಗಳಿ”. ಅದರಲ್ಲಿಯೂ ಸಹ ತಲೆಮಾರುಗಳ ಬದುಕಿನ ಬೇರುಳನ್ನು ಪರಿಸರದೊಂದಿಗೆ ಗುರುತಿಸಬಹುದು.

(ಶಶಿಧರ ಹಾಲಾಡಿ)

ಶಶಿಧರ ಹಾಲಾಡಿಯವರ “ಪರಿಸರದ ಒಡನಾಟ” ಕೃತಿಯಲ್ಲಿ ಒಟ್ಟೂ 42 ಲೇಖನಗಳಿವೆ. ಇವು ಅವರು ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣ “ಶಶಾಂಕಣ” ದಲ್ಲಿ ಪ್ರಕಟವಾದವಂತವುಗಳು. ಅಂಕಣದಲ್ಲಿ ಬರುವಂತಹ ಲೇಖನಗಳಿಗೆ ಅನೇಕಸಲ ಕಾಲದೊಂದಿಗೆ ರೆಲೆವೆನ್ಸಿಯಿರುವುದಿಲ್ಲ. ಓದುವಾಗ ಆ ಹೊತ್ತಿನಲ್ಲಿ ಬರುವ ವಿಶೇಷವಾದ ವಿಷಯಗಳನ್ನು ಆಯ್ದು ರಮ್ಯತೆಯೊಂದಿಗೆ ಪೋಣಿಸಿ ಬರೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲಿನ ವಿಷಯಗಳು ಖಂಡಖಂಡವಾಗಿರುತ್ತದೆ. ಮೊದಲ ಲೇಖನಕ್ಕೂ ನಂತರದ ಲೇಖನಕ್ಕೂ ಸಂಬಂಧವಿರದೇ ಎಲ್ಲೆಲ್ಲೋ ಓಡಾಡಿಸಿಬಿಡುತ್ತವೆ. ಆದರೆ ಇಲ್ಲಿನ ಲೇಖನಗಳು ಆ ಜಾತಿಗೆ ಸೇರಿದವುಗಳಲ್ಲ. ಪ್ರಕೃತಿಯೊಡನೇ ತಾದ್ಯಾತ್ಮಭಾವವನ್ನು ಹೊಂದಿವೆ. “ಗೂಬೆ ನತ್ತಿಂಗಗಳ ಲೋಕದಲ್ಲಿ” ಸಾಮಾನ್ಯವಾದ ಸಂಗತಿಯಾಗಿರಬಹುದಾದ ಗೂಬೆಯಲ್ಲಿ ಇರುವ ಪ್ರಬೇಧಗಳು ನಮ್ಮನ್ನು ಅಚ್ಚರಿಗೊಳಿಸುತ್ತದೆ. ಪಕ್ಷಿತಜ್ಞ ಸಲೀಂ ಅಲಿಯವರ “ಬುಕ್ ಆಫ್ ಇಂಡಿಯನ್ ಬರ್ಡ್ಸ್” ನ್ನು ಸಾರ್ವಜನಿಕ ಲೈಬ್ರರಿಯಿಂದ ತಂದು ಅದರಲ್ಲಿರುವ ಚಿತ್ರ ಮತ್ತು ವಿವರಣೆಯನ್ನು ಓದಿ ಪ್ರಭಾವಿತರಾಗಿ ತನ್ನ ಪರಿಸರದಲ್ಲಿ ಅದನ್ನು ಹುಡುಕಲು ತೊಡಗುವ ಯತ್ನ ಮೊದಲ ಓದಿಗೆ ಸೆಳೆಯುತ್ತದೆ. ಹಾಲಾಡಿ ಪರಿಸರದಲ್ಲಿಯೇ ಅವರಿಗೆ ಸಿಗುವ ವೈವಿಧ್ಯಮಯ ಗೂಬೆಗಳ ಲೋಕವನ್ನು ಓದುವಾಗ ಅರೆ! ಇದು ನಮ್ಮ ಪರಿಸರದಲ್ಲಿಯೂ ಇತ್ತಲ್ಲ ಎನ್ನುವದು ನೆನಪಾಗುವುದು.

ಅಲಿಯವರು ನೀಡಿದ ವೈಜ್ಞಾನಿಕ ಹೆಸರುಗಳ ಜೊತೆ ಅವರ ಊರಲ್ಲಿ ಇರುವ ಸ್ಥಳೀಯ ಹೆಸರುಗಳನ್ನು ನೀಡಿದ್ದಾರೆ. ಉದಾ: ಬ್ರೌನ್ ಫಿಶ್ ಔಲ್- ಮೀನು ಗೂಬೆ, ಕೊಂಬು ಗೂಬೆ, ಜಕಣಿ ಹಕ್ಕಿ, ಫಾರೆಸ್ಟ್ ಈಗಲ್ ಔಲ್, ನೈಟ್ ಜಾರ್ – ರಾತ್ರಿಯಲ್ಲಿ ಕೀಟವನ್ನು ಹಿಡಿಯುವ ನತ್ತಿಂಗ ಎನ್ನುವ ಹಕ್ಕಿಗಳ ನಿಗೂಢ ಲೋಕ ಇವೆಲ್ಲವೂ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ. ಜಕಣಿ ಹಕ್ಕಿ ಕೂಗಿದರೆ ಮುದುಕಿಯೋರ್ವಳು ವಿಕಾರವಾಗಿ ಅಳುವ ಸ್ವರದಿಂದ ಕೂಗುವಂತೆ ಕೇಳುವ ಕಾರಣ, ಈ ಹಕ್ಕಿ ಅಪಶಕುನ ಎನ್ನುವ ನಂಬಿಕೆ ಇದರ ಕುರಿತಾಗಿ “ಭಯ ಹುಟ್ಟಿಸುವ ಆ ಹಕ್ಕಿಯ ಕೂಗು”ವಿನಲ್ಲಿ ವಿವರವಾಗಿ ಬಂದಿದೆ. ಹಾಲಾಡಿ ಎನ್ನುವುದು ಇತ್ತ ಕರಾವಳಿಯ ಪ್ರದೇಶವೂ ಅಲ್ಲ, ಅತ್ತ ಘಟ್ಟದ ಚಳಿಯ ಭಾಗವೂ ಅಲ್ಲ. ಮಲೆನಾಡಿಗೆ ಹತ್ತಬೇಕಾದಾಗ ಸಿಗುವ ತಪ್ಪಲಿನ ಊರು. ಹಾಡಿ, ಧೂಪದ ಮರ, ತಾರೆಮರ, ಕಿಸ್ಕಾರ ಇವೆಲ್ಲವೂ ಈ ಭಾಗವನ್ನು ಆವರಿಸಿಕೊಂಡಿದೆ(ತ್ತು). ದಟ್ಟಕಾಡು ಮರೆಯಾಗಿ ಕರಾವಳಿಯ ಬಯಲಿಗೆ ತೆರೆದುಕೊಳ್ಳುವ ಮಧ್ಯದ ಕೊಂಡಿಯಾಗಿ ಇರುವ ಊರುಗಳ ಹೆಸರುಗಳಾದ ಹರನ ಗುಡ್ಡ, ಚೇರ್ಕಿ, ಚೋರಾಡಿ, ಹಾಲಾಡಿ, ಹಕ್ಲಾಡೀ, ಕಬ್ಬಿನಾಲೆಗಳ ವಿವರ ಲೇಖನಗಳುದ್ದಕ್ಕೂ ಬರುತ್ತಲೇ ಹೋಗುತ್ತವೆ. ಯಾವುದೋ ಕಾಲದಲ್ಲಿ ‘ಮುದ್ದಳ’ ಎನ್ನುವ ಸಾಮಂತನಾಳಿದ ಈ ಊರಿನಲ್ಲಿ ಆತನ ನೆನಪು ಮರೆಯಾಗಿದೆ. ಆತನ ಅರಮನೆ ಇದೆ ಎನ್ನುವ ಜಾಗ ಅಸ್ಪಷ್ಟವಾಗಿ ಇದೆ. ಹಳ್ಳಿಗರ ಭಿತ್ತಿಯಲ್ಲಿ ಮಾಸಲು ತೊಡಗಿರುವ ಆ ಗುತ್ತುಗಳ ವಿಚಾರವನ್ನು ಹೇಳುತ್ತಲೇ, ತನ್ನ ಬಾಲ್ಯದ ಪರಿಸರದಲ್ಲಿ ಇದೀಗ ಮರೆಯಾಗುತ್ತಿರುವ ಹಳೆಯ ಕಾಡು, ಕರಡ ಹುಲ್ಲಿನ ಬೇಣ, ಒಳ್ಳೆ ಹಾವು, ವಿಷದ ಹಾವುಗಳೊಡನೆಯ ಬದುಕೆಲ್ಲವನ್ನೂ ಆಧುನಿಕ ಬದುಕು, ನಿಧಾನಕ್ಕೆ ಕಸಿಯತೊಡಗಿವೆ ಎನ್ನುವ ನೋವನ್ನು ಪರೋಕ್ಷವಾಗಿ ಲೇಖಕರು ತೋಡಿಕೊಳ್ಳುತ್ತಿದ್ದಾರೆ.

ಹಾಲಾಡಿಯವರಿಗೆ ‘ಮಿಣುಕು ಹುಳಗಳ ಬೆಳಕಿನ ಪರಿಷೆ’, ಮರೆಯಾಗುತ್ತಿದೆಯಲ್ಲಾ ಎನ್ನುವ ನೋವಿದೆ. ಅದೇ ರೀತಿ ರಷ್ಯಾದ ‘ಅರಾಲ್ ಸಮುದ್ರ’ ಒಂದೈವತ್ತು ವರ್ಷದಿಂದೀಚೆಗೆ ಮರುಭೂಮಿಯಾಗಿ ಪರಿವರ್ತನೆಯಾಗಿರುವ ನೋವೂ ಸಹ ಕಾಡುತ್ತದೆ. ಇದನ್ನು ಹೇಳುತ್ತಲೆ ನಮ್ಮಸುತ್ತಲೂ ನಡೆಯುವ ಯೋಜನೆಗಳ ವಿರುದ್ಧ ಗಮನ ಸೆಳೆಯುತ್ತಾರೆ. ಸರಕಾರಗಳು ಎತ್ತಿನ ಹೊಳೆಯೆನ್ನುವ ಅವೈಜ್ಞಾನಿಕ ಯೋಜನೆಗಳನ್ನು ಕೈಗೊಂಡಿದ್ದು. ಸಾಗರವನ್ನು ಸೇರುವ ನದಿಯನ್ನು ತಿರುಗಿಸಿ ವ್ಯರ್ಥವಾಗಿ ಹರಿಯುವ ನೀರಿಗೆ ಒಂದು ಗತಿಕಾಣಿಸುತ್ತೇವೆ ಎನ್ನುವ ಯೋಜನಾ ಪಂಡಿತರು ಈ ವಿಷಯಗಳನ್ನು ಗಮನಿಸುವುದು ಒಳ್ಳೆಯದು. ಅಮೇಜಾನ್ ದಟ್ಟಕಾಡಿನ ಸಣ್ಣಪುಟ್ಟ ಏರುಪೇರುಗಳೂ ಭಾರತದಲ್ಲಿ ಬೀಳುವ ಮಳೆಯಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪರಿಸರ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಪರಿಸರ ಎನ್ನುವುದಕ್ಕೆ ದೇಶದ ಗಡಿಯ ಮೇರೆಯಿಲ್ಲ. ಸಂಡೂರಿನಲ್ಲಿ 99000 ಮರಗಳನ್ನು ಕಡಿಯಲು ಅನುಮತಿ ನೀಡುವುದರ ಕುರಿತು ಕಳವಳ ಕಾಣುತ್ತದೆ. ಇಲ್ಲಿನ ಪರಿಸರದ ಹಾನಿ ಬೇರೆ ಯಾವುದೇ ದೇಶವನ್ನೂ ಸಹ ಕಾಡಬಹುದು. ಪ್ರಕೃತಿಯನ್ನು ಅರಿಯಲು ಚಾರಣ ಮುಖ್ಯ. ಆದರೆ ಚಾರಣ ಟೈಂ ಪಾಸ್ ಆದರೆ ಅದೇ ಚಾರಣವೂ ಪರಿಸರ ನಾಶಕ್ಕೆ ಕಾರಣವಾಗಬಹುದು ಎನ್ನುವುದು ‘ಚಾರಣದಿಂದ ಪರಿಸರಕ್ಕೆ ಹಾನಿಯಾದೀತೆ’ ಎನ್ನುವ ಲೇಖನದಲ್ಲಿ ಚರ್ಚಿಸುತ್ತಾ ಪರಿಸರ ರಕ್ಷಣೆಯ ನೆವದಲ್ಲಿ ಎತ್ತಿನಭುಜ ಶಿಖರಗಳಂತಹ ಪ್ರದೇಶಗಳಿಗೆ ಚಾರಣವನ್ನು ನಿಷೇಧಿಸುವುದನ್ನು ವಿರೋಧಿಸುತ್ತಾರೆ. ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ಸ್ಥಳೀಯ ಗೈಡ್ ಜತೆಯಲ್ಲಿಯೇ ಓಡಾಡುವ ನಿಯಮವಿರುವುದನ್ನು ನೆನಪಿಸಿಕೊಳ್ಳುತ್ತಾ ಸೂಕ್ತ ನಿಯಮಗಳೊಂದಿಗೆ ನಿಸರ್ಗವೀಕ್ಷಣೆಗೆ ಅವಕಾಶಮಾಡಿಕೊಡುವ win win ಮಾರ್ಗವನ್ನು ಸೂಚಿಸುತ್ತಾರೆ.

ಸಸ್ಯಶಾಸ್ತ್ರ ಮತ್ತು ಪರಿಸರ ಇವೆರಡೂ ಏಕಸೂತ್ರದಲ್ಲಿ ಸಾಗುವ ವಿಷಯಗಳು. ಎರಡರಲ್ಲಿಯೂ ಹುಡುಕಾಟವಿರುತ್ತದೆ. ಧ್ಯಾನಸ್ಥ ಅವಸ್ಥೆಯಲ್ಲಿ ಅವಲೋಕನ ಮಾಡಬೇಕಾಗುತ್ತದೆ. ಅಂತಹ ಒಂದು ಪ್ರಸಂಗ ಓದುಗರ ಗಮನವನ್ನು ಸೆಳೆಯುವುದು ‘ಕಪ್ಪೆ ಕೊಯ್ಯುವ ವಿದ್ಯಾರ್ಥಿ!’ ಲೇಖನದಲ್ಲಿ. ಪ್ರಾಣಿಶಾಸ್ತ್ರವನ್ನು ಅಧ್ಯಯನಮಾಡುವಾಗ ಜೀವಿಗಳ ಅಂಗಛೇದನವನ್ನು ಮಾಡಬೇಕು. ನಾವೆಲ್ಲರೂ ಪಿಯುಸಿಯಲ್ಲಿ ಕಪ್ಪೆಯನ್ನು ಕೊಯ್ದ ಘಟನೆ ನೆನಪಾಗುತ್ತದೆ. ಕಪ್ಪೆ ಜಿರಳೆ ಇವೆಲ್ಲವನ್ನು ಕೊಯ್ಯುವಾಗ ಮನಸ್ಸು ಹೇಸುತ್ತಿತ್ತು. ತಪ್ಪುಮಾಡುತ್ತಿದ್ದೇವೆ ಎನ್ನುವ ಭಾವನೆ ಮನಸ್ಸಿನಲ್ಲಿ ಇರುತ್ತಿತ್ತು. ಈಗ ಅದಿಲ್ಲವೆಂದು ಈ ಲೇಖನದಿಂದ ತಿಳಿಯಿತು. ಆದರೆ ಸಸ್ಯಶಾಸ್ತ್ರದಲ್ಲಿ ಗಿಡ ಮರ ಬೇರು ಕಾಂಡಗಳನ್ನು ಅರಸುವಾಗ ಪಾಠದಲ್ಲಿ ಓದಿದ ವಿಷಯದ ಪ್ರಬೇಧಗಳು ನಮ್ಮ ಸುತ್ತಮುತ್ತಲಲ್ಲಿ ಸಿಕ್ಕಾಗ ಅಪರಿಮಿತ ಸಂತಸವಾಗುತ್ತದೆ. ಅರ್ಥವಾಗದ ಲ್ಯಾಟಿನ್ ಭಾಷೆಯ ಹೆಸರು, ಉದಾಹರಣೆಗೆ ‘Eucalyptus globulus’ ಎಂದರೆ ನಮ್ಮ ಸುತ್ತಲಿರುವ ನೀಲಗಿರಿ ಮರ ಎಂದು ತಿಳಿದಾಗ ಆಗುವ ಆನಂದ ಆ ಮರದ ವಿಷಯದಲ್ಲಿ ಇನ್ನಷ್ಟು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ಅದೇರೀತಿ ಇಲ್ಲಿ “ಬಟ್ರಾಚೋಸ್ಪರ್ಮ್ ಪಾಚಿ” ಎನ್ನುವ ಪಾಚಿಪ್ರಬೇಧವೊಂದು ಅವರ ಮನೆಯ ತೋಡಿನಲ್ಲಿ ಸಿಕ್ಕಾಗ ಅವರ ಗುರುಗಳು, ಶ್ರೀ ದೇವೇಗೌಡ ಎನ್ನುವವರು ಮೆಚ್ಚಿದ ವಿಷಯವನ್ನು ವಿವರಿಸುತ್ತಾ ಮುಂದೆ ಆ ಶಾಲೆಯಲ್ಲಿ ಆ ಪಾಚಿಯನ್ನು ತಂದುಕೊಟ್ಟವರು ಶಶಿಧರ ಹಾಲಾಡಿ ಎನ್ನುವುದು ದಾಖಲಾಯಿತು ಎನ್ನುವುದನ್ನು ವಿವರಿಸುತ್ತಾರೆ. ಈ ವಿಷಯವನ್ನು ಹೇಳುವಾಗ ಶೌಚಾಲಯವಿಲ್ಲದ ಆ ಕಾಲದಲ್ಲಿ ಶೌಚಕ್ಕೆ ತೋಡಿಗೆ ಹೋಗಿ ಹತ್ತು ಹದಿನೈದು ನಿಮಿಷ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಕೊಂಡು ಇರುವ ವಿಷಯ ಬರುತ್ತದೆ. ನಾವೆಲ್ಲರೂ ಚಿಕ್ಕವರಿದ್ದಾಗ ಯಾರಮನೆಯಲ್ಲಿಯೂ ಶೌಚಾಲಯವಿರಲಿಲ್ಲ. ಮನೆಯ ಮೇಲಿನ ಗುಡ್ಡಕ್ಕೋ ತೋಡಿಗೋ ಹೋಗಿ ಹೀಗೆಯೇ ಕುಳಿತು ತಿಂಗಳ ಬೆಳಕಿನಲ್ಲಿ ಗಂಟೆಗಳ ಕಾಲ ಆಕಾಶವನ್ನು ವೀಕ್ಷಿಸುವ ದಿನಗಳು ನೆನಪಾದವು. ಹಕ್ಕಿಗಳ ಗೂಡಿನಲ್ಲಿರುವ ಮರಿಗಳನ್ನು ಗಮನಿಸುವುದು, ದುಂಬಿಗಳ ಹಾರಾಟವನ್ನು ನೋಡುತ್ತಾ ಮೈಮರೆಯುವುದು ಇವೆಲ್ಲವೂ ನಮ್ಮ ಗಮನಕ್ಕೆ ಬಂದಿರುವುದು ಶೌಚಕ್ಕೆಂದು ಹಾಡಿಯಲ್ಲಿಯೋ, ಗುಡ್ಡದ ಇಳಿಜಾರಿನಲ್ಲಿಯೋ ಕುಳಿತಾಗ. ಆಗಿನ ಮೌನ ನಿಜಕ್ಕೂ ತಪಸ್ಸೇ ಆಗಿತ್ತು. ನಾನು, ನನ್ನದು ಎನ್ನುವ ಉಪಾದಿಗಳೆಲ್ಲವೂ ಕಳಚಿ ಪ್ರಪಂಚದಲ್ಲಿ ಲೀನವಾಗಿಬಿಡುತ್ತಿದ್ದೆವು. ನಾಟ್ಯಶಾಸ್ತ್ರದಲ್ಲಿ ಬರುವ “ಆವರಣ ಭಂಗ” ಎಂದರೆ ಇದು ಎಂದು ಅನೇಕ ಸಲ ನನಗೆ ಅನಿಸಿದ್ದುಂಟು. ಬರಹವೊಂದು “ಆವರಣ ಭಂಗವನ್ನು” ಮಾಡುತ್ತದೆ ಎನ್ನುವುದೇ ಬರಹಗಾರನ ಯಶಸ್ಸು. ಈ ಕೃತಿಯಲ್ಲಿ ಅಂತಹ ಅನೇಕ ವಿಷಯಗಳನ್ನು ಗಮನಿಸಬಹುದಾಗಿದೆ.

ಹಾಲಾಡಿಯವರ ಲೇಖನಗಳಲ್ಲಿ ಪದೇ ಪದೇ ಬರುವ ಪಾತ್ರವೊಂದುಂಟು. ಅದು ಅವರ ಅಮ್ಮಮ್ಮ. ಬಾಲಕ ಶಶಿಧರನ ಪಾಲಿಗೆ ಈಕೆಯೇ ವಿಕಿಪಿಡಿಯಾ. ಗೂಬೆಯ ವಿಚಾರ ಹೇಳುವಾಗ, ಸರಸ್ವತಿ ಚೇಳಿನ ವಿಷಯದಲ್ಲಿ, ಬಿರು ಬೇಸಿಗೆಯಲ್ಲಿ (ನನ್ನ ಅಮ್ಮಮ್ಮನ ಭಾಷೆಯಲ್ಲಿ ವೈಶಾಖ ಜ್ಯೇಷ್ಠಮಾಸದಲ್ಲಿ) ನೆಲದಾಳದಿಂದ ನೀರಿನಂಶ ಭೂಮಿಯ ಮೇಲ್ಪದರಿಗೆ ಬರುತ್ತದೆ. ಆಗ ಬಿತ್ತನೆ ಮಾಡಬಹುದೆನ್ನುವ ಹಳ್ಳಿಗರ ಅನುಭವದ ಮಾತು ಇವೆಲ್ಲವನ್ನೂ ತಿಳಿಸುವುದು ಅಮ್ಮಮ್ಮನೇ. ಸಾಲಾಗಿ ಮೊಮಕ್ಕಳನ್ನು ಕೂರಿಸಿ ಬದುಕಿನಲ್ಲಿ ಹೇಗಿರಬೇಕು, ಹೇಗಿರಬಾರದು ಎನ್ನುವ ನೀತಿಪಾಠದ ಮೊದಲ ಶಿಕ್ಷಕಿ ಅವರು. ದೇವರ ಹಾವಿಗೆ ಒಂದು ಹರಕೆ ಹೇಳಿ ಸಾಕು ಎಂದು ವಿಷದ ಪ್ರಾಣಿಗಳೂ ಸಹ ಪ್ರಕೃತಿಯ ಅಂಗಗಳು ಅವುಗಳಿಗೆ ನೋವುಂಟಾಗದಿದ್ದರೆ ಅವು ನಮಗೇನು ಮಾಡುವುದಿಲ್ಲ ಎನ್ನುವ ವಿಷಯಗಳನ್ನೆಲ್ಲವನ್ನೂ ತಿಳಿಸಿಕೊಡುವ, ಏಳು ಮಲ್ಲಿಗೆ ತೂಕದ ರಾಜಕುಮಾರಿಯನ್ನು ಏಳು ಸಮುದ್ರದ ಆಚೆಯಿಂದ ಬಿಡಿಸಿಕೊಂಡು ಬರುವ ರಾಜಕುಮಾರನ ಕಥೆ ನಮಗೆ ತಿಳಿಸಿದವಳು ಈ ಅಮ್ಮಮ್ಮನೇ. ತಾನು ಕಷ್ಟಪಟ್ಟರೂ ಬದುಕಿನಲ್ಲಿ ಶಾಂತಿಮಂತ್ರವನ್ನು ಬೋಧಿಸುವ ಅಮ್ಮಮ್ಮ ಮಕ್ಕಳಿಗೆ ಮೊದಲ ಪರಿಸರದ ಗುರು. ಈ ಅಮ್ಮಮ್ಮ ಹಾಲಾಡಿಯವರ ಲೇಖನಗಳಲ್ಲಿ ಆಗಾಗ ಪ್ರತ್ಯಕ್ಷಳಾಗಿ ಪರಿಸರದ ಕಥೆಯನ್ನ ವಿವರಿಸುತ್ತಾಳೆ. ಮಹತ್ವವನ್ನು ತಿಳಿಸುತ್ತಾಳೆ.

ಇಡೀ ಸಂಗ್ರಹದಲ್ಲಿ ಪರಿಸರವಿಲ್ಲದಿದ್ದರೆ ಮನುಷ್ಯನಿಗೆ ಅಸ್ತಿತ್ವವಿಲ್ಲವೆನ್ನುವ ಸಂದೇಶವಿದೆ. ಕೋಣಗಳನ್ನು ಮೀಯಿಸಲು ಕೊಂಡೊಯ್ದು ಅದರ ಸಂಗಡವೇ ನಾವುಗಳು ಈಜಾಡಲು ಕಲಿತ ಸನ್ನಿವೇಶ ನೆನಪಾಗುವ “ಕೋಣಗಳಿಗೂ ಮನುಷ್ಯರಿಗೂ ಸಮಾನ ಸ್ಥಾನ” ಲೇಖನ ನಾವು ಕಳೆದುಕೊಂಡಿದ್ದೇನು ಎನ್ನುವುದನ್ನು ನೆನಪಿಸುತ್ತದೆ. “ನಗರದತ್ತ ಮುಖಮಾಡಿದ ಗ್ರಾಮೀಣ ಬದುಕು” ಅರಣ್ಯನಾಶದ ಕಾರಣ ಬತ್ತಿಹೋದ ತೊರೆಗಳ ವಿಷಾದದ ವರ್ತಮಾನವನ್ನು ವಿವರಿಸುತ್ತದೆ. ಶಾಲೆಯ ಬದುಕಿನ, ಬಾಲ್ಯದ ಗೆಳೆಯನಿಗೆ ಹಾವು ಕಚ್ಚಿ ಸತ್ತ ಸಂಗತಿ ಕರುಳನ್ನು ಹಿಂಡಿದರೂ ಹಾವಿನ ಮೇಲೆ ದ್ವೇಷ ಮೂಡಿಸುವುದಿಲ್ಲ. ಪರಸ್ಪರ ಹೊಂದಾಣಿಕೆಯಲ್ಲಿ ಏರುಪೇರಾದರೆ ಇಂತಹ ಅನಾಹುತ ಆಗುತ್ತದೆ ಎನ್ನುವುದನ್ನು ಅವರು ತಿಳಿಸುತ್ತಾರೆ. ಮರೆಯಾಗಿರುವ ಗರ್ಚಿ ಹಣ್ಣು, ಮಿಡಿ ಉಪ್ಪಿನ ಕಾಯಿ, ಮುಳ್ಳಹಣ್ಣು, ಬ್ರಹದಾಕಾರದ ಮರಗಳ ವಿಷಯ ಇವೆಲ್ಲವುಗಳನ್ನು ಮನಮುಟ್ಟುವಂತೆ ವಿವರಿಸುವಾಗ, ಅವರ ಅಮ್ಮಮ್ಮ ಅವರಿಗೆ ಹೇಳಿರಬಹುದಾದ ದಾಟಿಯಲ್ಲಿ ವಿವರಿಸುತ್ತಾರೆ.

ಕಾರಂತರ ‘ಹುಚ್ಚುಮನಸ್ಸಿನ ಹತ್ತು ಮುಖಗಳಲ್ಲಿʼ ಗಳಲ್ಲಿ, ‘ಬೆಟ್ಟದ ಜೀವ’ ದಲ್ಲಿ, ಕುವೆಂಪು ಅವರ “ಮಲೆಗಳಲ್ಲಿ ಮಲೆ ಮದುಮಗಳು” ಅನಂತ ಮೂರ್ತಿಯವರ “ಮೌನಿ” ಬಿ ಜಿ ಎಲ್ ಸ್ವಾಮಿಯವರ “ಹಸಿರು ಹೊನ್ನು” ಇವೆಲ್ಲವೂ ಸಾರುವ ಪರಿಸರದ ಒಡನಾಟದ ಅನುಭವಗಳು ಪ್ರಬಂಧವಾಗಿ ಈ ಕೃತಿಯಲ್ಲಿ ಮೂಡಿಬಂದಿದೆ.

(ಕೃತಿ: ಪರಿಸರದ ಒಡನಾಟ, ಲೇಖಕರು: ಶಶಿಧರ ಹಾಲಾಡಿ, ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಂಗಳೂರು, ಬೆಲೆ: 250/-, ಪುಟ: 240+ 4)

About The Author

ನಾರಾಯಣ ಯಾಜಿ

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ