ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಡಿಪಾರ್ಟ್ಮೆಂಟ್ ಇರುತ್ತೆ ಅಂತ ಮೊದಲೇ ತಿಳಿದುಕೊಳ್ಳದ ನನ್ನ ಬುದ್ಧಿಗೆ ಎಕ್ಕಡದಲ್ಲಿ ಬಾರಿಸಬೇಕು ಎಂದುಕೊಂಡು ನೇರ ನಡೆದೆ. ಎಡಕ್ಕೆ ತಿರುಗಿದೆ. ಅಲ್ಲಿ ಕನ್ನಡ ವಿಭಾಗ ಅಂತ ಬೋರ್ಡ್ ಕಾಣಿಸಲಿಲ್ಲ. ತೆರೆದ ಬಾಗಿಲು, ಒಳಗಡೆಯಿಂದ ನಗುವಿನ ಪ್ರವಾಹ ಹರಿದು ಬರುತ್ತಿತ್ತು, ಜತೆಗೆ ಕನ್ನಡದಲ್ಲಿ ಮಾತು ಮಾತು. ರೂಮಿನ ಒಳಗೆ ನಡೆದೆ. ಮೂರು ಜನ ಟೇಬಲ್ಲಿನ ಆಕಡೆ ಇಬ್ಬರು ಈಕಡೆ ಒಬ್ಬರು ಕೂತಿದ್ದರು. ಮೂರೂ ಜನ ಸೂಟು ಟೈ ಧಾರಿಗಳು! ಅದರಿಂದ ಗುಂಪಿನಲ್ಲಿ ಮಿತ್ರ ಸಾರ್ ಇಲ್ಲ ಎನ್ನುವುದು ಖಚಿತ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೬ನೇ ಬರಹ ನಿಮ್ಮ ಓದಿಗೆ
ಹೋದ ಕಂತು ಹೀಗೆ ಮುಗಿದಿತ್ತು ತಾನೇ… ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪಿತಾಮಹ ಎಂದು ಖ್ಯಾತಿ ಪಡೆದಿದ್ದ ಶ್ರೀ ಎ ಎನ್ ಮೂರ್ತಿರಾವ್ ಅವರ ಸಂದರ್ಶನವನ್ನು ಬೆಂಗಳೂರು ದೂರದರ್ಶನ ಅಂದು ಅವರ ಮನೆಯಲ್ಲಿ ರೆಕಾರ್ಡ್ ಮಾಡುತ್ತಿತ್ತು. ನಮ್ಮ ಕಾರ್ಯಕ್ರಮಕ್ಕೆ ಅವರೂ ಸಹ ಒಬ್ಬರು ಸಂಪನ್ಮೂಲ ತಜ್ಞರು. ದೂರದರ್ಶನದ ಸಿಬ್ಬಂದಿ ಕಾಮೆರಾ ಹೊತ್ತು ನಮ್ಮ ಕಮ್ಮಟಕ್ಕೆ ಮೂರ್ತಿರಾವ್ ಅವರ ಜತೆ ಬಂದರು. ಶೂಟಿಂಗ್ ಮತ್ತು ನಮ್ಮ ಜತೆ ವಿಚಾರ ವಿನಿಮಯ ನಡೆಯಿತು.
ದೂರದರ್ಶನಕ್ಕೆ ಲಾಟರಿ ಹೊಡೆದ ಹಾಗೆ ಕನ್ನಡ ಸಾಹಿತ್ಯದ ಅಂದಿನ ಮತ್ತು ಮುಂದಿನ ಮಹಾ ದಿಗ್ಗಜರು(ಅಂದರೆ ನಾನು ಮತ್ತು ನನ್ನ ಗೆಳೆಯರು!) ಒಂದೇ ಕಡೆ ಸಿಕ್ಕಿದರು! ದೂರದರ್ಶನ ಈಗಲೂ 1997ರಲ್ಲಿ ನಡೆದ ಈ ಕಾರ್ಯಕ್ರಮವನ್ನು ಆಗಾಗ ಪ್ರಸಾರ ಮಾಡುತ್ತದೆ. ಪ್ರಸಾರ ಆದಾಗಲೆಲ್ಲಾ ನಮ್ಮ ಮೈ ನವಿರೇಳುತ್ತದೆ..! ಹೃದಯ ಕುಣಿದಾಡುತ್ತದೆ, ಕುಮಾರವ್ಯಾಸನು ಹಾಡಿದನೆಂದರೆ.. ಹಾಗೇನೇ!
ಬಡಾವಣೆಗಳಲ್ಲಿ ನಾವು ನಡೆಸಿದ ಕಾರ್ಯಕ್ರಮಗಳು, ಕೈಲಾಸಂ ಸ್ಮರಣೆ.. ಮೊದಲಾದ ಪ್ರಸಂಗಗಳು ಇನ್ನೂ ನೆನ್ನೆ ಮೊನ್ನೆ ನಡೆದ ಹಾಗೆ ಮನಸಿನಲ್ಲಿ ಪ್ರಿಂಟ್ ಆಗವೆ. ಅದರ ಬಗ್ಗೆ ತುಂಬಾ ಚಿಕ್ಕದಾಗೆ ಮುಂದಿನ ಸಲ ಹೇಳುತ್ತೇನೆ. ಅದರ ಜತೆಗೆ ನಮ್ಮ ಹಾಸ್ಯೋತ್ಸ ವದ ಬಗ್ಗೆ ತಮ್ಮಟೆ ಬಜಾಯಿಸಬೇಕು. ನಮ್ಮ ಬಳಗ ಹಾಗೂ ಅಪರಂಜಿ ಬಳಗ ಹೇಗೆ ಸದಭಿರುಚಿಯ ಹಾಸ್ಯ ಪ್ರಸರಣಕ್ಕೆ ಭುಜಕ್ಕೆ ಭುಜ ಕೊಟ್ಟು ಒಂದು ವ್ರತದ ಹಾಗೆ ನಡೆಸಿದೆವು ಅಂತ ತಿಳಿಸಬೇಕು…
ಈಗ ಮುಂದಕ್ಕೆ ಹೋಗೋಣವೇ.. ಅಪರಂಜಿ ಹತ್ತು ವರ್ಷದ ಹಬ್ಬ ಮಾಡಿದ ಕತೆ ಹೇಳಿದ್ದೆ. ಹಾಸ್ಯಬ್ರಹ್ಮ ನಗೆ ಬರಹಗಾರರ ಒಕ್ಕೂಟ ಹುಟ್ಟಿದ ಕತೆ ಮಧ್ಯ ಬಂತು. ನಂತರ ನಡೆದ ಮುಂದಿನ ಬೆಳವಣಿಗೆಗಳನ್ನು ನಿಮಗೆ ಹೇಳಬೇಕು. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಹಾಸ್ಯಬ್ರಹ್ಮ ಸಂಘಟನೆ ಔಪಚಾರಿಕವಾಗಿ ಉದ್ಘಾಟನೆ ಆಯಿತು. ನಂತರ ಹೆಚ್ಚೂ ಕಡಿಮೆ ನಮ್ಮ ಕಾರ್ಯಕ್ರಮಗಳು ಇಲ್ಲಿ ಸ್ಥಗಿತಗೊಂಡವು ಅಂತ ಹೇಳಬೇಕು. ಇದಕ್ಕೆ ದೊಡ್ಡ ಕಾರಣ ಅಲ್ಲಿನ ಸಭಾಂಗಣ. ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚೆಚ್ಚು ಸಭಿಕರು ಸೇರುವುದು ಹೆಚ್ಚಾದಂತೆ ಜನ ಕುರ್ಚಿ ಸಿಗದೇ ಆಚೆ ನಿಲ್ಲುವುದು, ಹಾಗಿಂದ ಹಾಗೇ ಹೋಗುವುದು.. ಗಮನಕ್ಕೆ ಬಂದಿತ್ತು. ಜತೆಗೆ ಬೆಂಗಳೂರಿನ ಇನ್ನೊಂದು ಭಾಗದಲ್ಲಿದ್ದ ಸದಸ್ಯರು ಸ್ಥಳ ಬದಲಾವಣೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕ್ರಮಗಳ ಸ್ಥಳ ಬೇರೆ ಕಡೆ ಮಾಡುವುದು ಒಂದು ಅನಿವಾರ್ಯದ ಅವಶ್ಯಕತೆ ಎನ್ನುವ ಅಭಿಪ್ರಾಯ ಮೂಡಿತು.
ಈ ನಡುವೆ ನಮ್ಮ ಅರಿವೇ ಇಲ್ಲದ ಹಾಗೇ ಹಾಸ್ಯ ಬರಹಗಾರರು ಅರಾ ಮಿತ್ರ ಅವರ ಪ್ರಭಾವಕ್ಕೆ ಒಳಗಾಗಿದ್ದೆವು. ಅವರ ವಿದ್ವತ್ತು ಅವರ ಮಾತುಗಾರಿಕೆ ಅದರಲ್ಲಿನ ಒತಪ್ರೋತ ಹಾಸ್ಯ ಇಡೀ ಸಮುದಾಯವನ್ನು ಸೆಳೆದಿತ್ತು ಮತ್ತು ನಾವೂ ಸಹ ಅದರಿಂದ ಹೊರತಿರಲಿಲ್ಲ.
ಪ್ರೊ ಮಿತ್ರಾ ಅವರ ಜತೆ ನನ್ನ ಮೊದಮೊದಲ ಭೇಟಿಯ ಬಗ್ಗೆ ಹೇಳಿ ನಂತರ ಮುಂದಿನ ವಿಷಯಕ್ಕೆ ಹಾರುತ್ತೇನೆ. ಇದು ಯಾಕೆ ಬೇಕು ಅಂದರೆ ಮುಂದೆ ಯಾರಾದರೂ ಇತಿಹಾಸ ಬರೆಯುವವರು ಮಿತ್ರಾ ಅವರು ಏಕ್ ದಮ್ ಇಂತಹ ಸಾಹಿತ್ಯ ಪರಿಚಾರಿಕೆಗೆ ಧುಮ್ಮಿಕ್ಕಿದರು ಎಂದು ಬರೆಯಬಾರದು ಅದಕ್ಕಾಗಿ! ಒಂದು ಹಾಸ್ಯಲೇಖನ ಈ ಬಗ್ಗೆ ಅಂದರೆ ಮಿತ್ರಾ ಅವರನ್ನು ನಾನು ಹುಡುಕಿಕೊಂಡು ಸುತ್ತಾಡಿದ್ದ ಪ್ರಸಂಗ ಕುರಿತು ಆಗ ಬರೆದಿದ್ದೆ. ಅದರ ನೆನಪಿನ ಮೇಲೆ ಮತ್ತೆ ಆ ಪ್ರಸಂಗವನ್ನು ಪತ್ತೇದಾರಿ ಪೊಲೀಸರು ಹೇಳುವ ಹಾಗೇ restructure ಮಾಡುತ್ತಿದ್ದೇನೆ!

ಮಿತ್ರಾ ಅವರು ಮಹಾರಾಣಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಕಂ ಪ್ರಾಧ್ಯಾಪಕರು ಆಗಿದ್ದಾಗ ಅವರನ್ನು ಒಂದು ಸಭೆಗೆ ಮುಖ್ಯ ಭಾಷಣಕಾರರನ್ನಾಗಿ ಆಹ್ವಾನಿಸುವ ಜವಾಬ್ದಾರಿ ನಾನು ಹೊತ್ತಿದ್ದೆ. ಅವರನ್ನು ಕಾಲೇಜಿನಲ್ಲಿಯೇ ನೋಡಿ ಮಾತನಾಡಿಸುವುದು ಎಂದು ತೀರ್ಮಾನ ಆಗಿತ್ತು. ಮಿಕ್ಕ ಗೆಳೆಯರಿಗೆ ಬಿಡುವು ಅಂದರೆ ಸಂಜೆ ಆರರ ನಂತರ. ನನಗೆ ಮೂರುವರೆ ನಂತರ ಬಿಡುವು, ಫಸ್ಟ್ ಶಿಫ್ಟ್ನಲ್ಲಿದ್ದೆ. ಹಾಗಾಗಿ ನಾನೇ ಅವರನ್ನು ಭೇಟಿಸುವುದು ಎಂದಾಯಿತು. ಫ್ಯಾಕ್ಟರಿ ಬಸ್ ಹತ್ತಿ ಮಹಾರಾಣಿ ಕಾಲೇಜಿನ ಬಳಿ ಒಂದು ರಿಕ್ವೆಸ್ಟ್ ಸ್ಟಾಪ್ ಕೇಳಿ ಅಲ್ಲಿ ಇಳಿದೆ. ರಿಕ್ವೆಸ್ಟ್ ಸ್ಟಾಪ್ ಯಾಕೆ ಅಂದರೆ ಫ್ಯಾಕ್ಟರಿ ಬಸ್ಸುಗಳು ಕೆಲಸಗಾರರನ್ನು ಮನೆಯ ಬಳಿ ಬಿಡಲು ಉಪಯೋಗ ಆಗುತ್ತದೆ. ಮಹಾರಾಣಿ ಕಾಲೇಜಿನ ಬಳಿ ಯಾವ ಮನೆಯೂ ಆಗ ಇರಲಿಲ್ಲ. ಬಹುಶಃ ಈಗಲೂ ಇರಲಾರದು. ತೀರ ಈಚೆಗೆ ನಾನು ಅತ್ತ ಠಲಾಯಿಸಿಲ್ಲ! ಅದರಿಂದ ಈಚಿನ ಬೆಳವಣಿಗೆ ಬಗ್ಗೆ ನಾನು ದಡ್ಡ..!
ಬಹುಶಃ ಈ ಸಂಗತಿ 83 -84ರ ಆಸು ಪಾಸು ಇರಬೇಕು. ಇಸವಿ ಯಾಕೆ ಹೇಳಿದೆ ಅಂದರೆ ಮಹಾರಾಣಿ ಕಾಲೇಜಿನ ಸುತ್ತು ರೌಂಡ್ ಹೊಡೆಯುವ ವಯಸ್ಸಿನ ಪ್ರೌಢ ನಾನು ಆಗ! ಮಿತ್ರಾ ಅವರ ಹೆಸರು ಕೇಳಿದ್ದೆ, ಅವರ ಬರಹಗಳನ್ನು ಓದಿದ್ದೆ. ಅವರನ್ನು ಪ್ರತ್ಯಕ್ಷ ನೋಡಿರಲಿಲ್ಲ. ಸೀದಾ ಕಾಲೇಜಿಗೆ ಹೋಗಿ ಅವರ ಚೇಂಬರ್ ಗೆ ಹೋಗಿ ಪರಿಚಯ ಮಾಡಿಕೊಂಡು ಅವರನ್ನು ಸಭೆಗೆ ಆಹ್ವಾನಿಸುವ ಯೋಜನೆಯನ್ನು ತಲೆಯಲ್ಲಿಯೇ ರೂಪಿಸಿಕೊಂಡು ಮಹಾರಾಣಿ ಕಾಲೇಜಿನ ಗೇಟು ತಲುಪಿದೆ. ಗೇಟ್ನಲ್ಲಿ ಒಬ್ಬ ಖಾಕಿ ಬಟ್ಟೆ ತೊಟ್ಟು ನಿಂತಿದ್ದ. ಡ್ರೆಸ್ ನೋಡಿದರೆ ಪೋಲಿಸು ಅಲ್ಲ, ಕಾಲೇಜಿನ ನಾಲ್ಕನೇ ದರ್ಜೆ ಕೆಲಸಗಾರ ಇರಬಹುದು. ಆಗ ಬೆಂಗಳೂರಿಗೆ ಇನ್ನೂ ನಾರ್ತ್ ಇಂಡಿಯಾದವರ ಲಗ್ಗೆ ಶುರು ಆಗಿರಲಿಲ್ಲ. ಮತ್ತು ಸರಿ ಸುಮಾರು ಗೇಟ್ ಕೀಪರ್ಗಳು ಮತ್ತು ಅಂತಹ ಹುದ್ದೆಯವರು ಕನ್ನಡದವರೇ ಆಗಿದ್ದರು. ಹಿಂದಿವಾಲಾಗಳ ಎಂಟ್ರಿ ಇನ್ನೂ ಕಲ್ಪಿಸಿಕೊಳ್ಳಲು ಸಹ ಆಗಿರದ ಕಾಲ ಅದು . ಬೆಂಗಳೂರಿನ ಸಾರ್ವಜನಿಕ ಸಂಪರ್ಕ ವ್ಯವಸ್ಥೆಗಳಾದ ರೈಲ್ವೆ ಸ್ಟೇಷನ್ನು, ಪೋಸ್ಟ್ ಆಫೀಸು, ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ..ಅಂತಹ ಕಡೆ ತಮಿಳರು ತುಂಬಿದ್ದರು. ಕಾರಣ ಕೆಲಸಕ್ಕೆ ಸೇರ್ಪಡೆ ತಾಣಗಳು ಮದರಾಸಿನಲ್ಲಿ ಇದ್ದದ್ದು ಮತ್ತು ಸಾಕಷ್ಟು ಪ್ರಭಾವಿ ರಾಜಕಾರಣಿಗಳು ಅಲ್ಲಿ ಇದ್ದದ್ದು! ಈ ದೃಷ್ಟಿಯಲ್ಲಿ ನಮ್ಮ ಕನ್ನಡದವರು ನಿರಂತರವಾಗಿ ತಮ್ಮ ಸ್ಟ್ಯಾಂಡ್ ಕಾಪಾಡಿಕೊಂಡು ಬಂದಿದ್ದಾರೆ! ಎಲ್ಲೂ ಪ್ರಭಾವ ಬೀರಲಾರದ ತನ್ನ ಅಸ್ತಿತ್ವವೇ ಗೊತ್ತಿಲ್ಲದ ಯಾರಾದರೂ ರಾಜಕಾರಣಿ ಇದ್ದರೆ ಅಂವ ಖಂಡಿತ ಕನ್ನಡದೋನು! ಫ್ಯಾಕ್ಟರಿ ಅಂತಹ ಕಡೆ ಇಡೀ ಭಾರತ ತುಂಬಿತ್ತು, ಆದರೆ ಕಾಲೇಜು ಮತ್ತು ಅಲ್ಲಿನ ಸಿಬ್ಬಂದಿ ಇನ್ನೂ ನಮ್ಮೋರೇ ಕನ್ನಡದವರೆ ಇದ್ದ ಕಾಲ! ಈಗ ಅದೂ ಸಹ ನಮ್ಮ ನಿಯಂತ್ರಣ ತಪ್ಪಿದೆ. ಇದು ಅಂತಿರಲಿ…
ಗೇಟ್ ಹತ್ತಿರ ಹೋದೇನಾ?
ಯಾರು ಬೇಕು ಸ್ವಾಮಿ? ಅಂತ ಕೇಳಿದ, ಖಾಕಿ ಬಟ್ಟೆಯ ಓನರ್.
“ಹೀಗೆ ಸಾರ್, ಮಿತ್ರಾ ಅಂತ ಪ್ರೊಫೆಸರು ಅವರನ್ನ ನೋಡಬೇಕಿತ್ತು….” ಅಂದೆ.
“ಅಯ್ಯೋ ಅವರಾ? ಅರ್ಧ ಗಂಟೆನೋ ಒಂದು ಗಂಟೆನೋ ಆತು ಅವರು ಹೋಗಿ..” ಅಂದ!
“ಸರಿಯಾಗಿ ಗೊತ್ತಾ? ಅವರೇನಾ ಹೋಗಿದ್ದು?” ಅಂತ ಕೇಳಿದೆ. ಯಾರಿಗೆ ಯಾರನ್ನೋ ಕನ್ಫ್ಯೂಸ್ ಮಾಡಿಕೊಂಡಿದ್ದಾನೋ ಅಂತ ನನಗೆ ಡೌಟ್ ಬಂದಿತ್ತು.
“ಅಯ್ಯೋ ಸ್ವಾಮಿ ಅವರನ್ನ ಎಷ್ಟು ವರ್ಷದಿಂದ ನೋಡ್ತಾ ಅವ್ನಿ. ಅವರೇ ಬತ್ತೀನಿ ಚನ್ನಯ್ಯ ಅಂತ ಹೇಳಿ ಹೋದರು…” ಅಂದ.
“ಎಲ್ಲಿಗೆ ಹೋದರು ಗೊತ್ತಾ?”
“ಎದುರು ಕಾಲೇಜು ಅದೇ ಓಂ ಸೈನ್ಸ್ ಕಾಲೇಜು ಅಲ್ಲಿ ಅವರ ಫ್ರೆಂಡ್ ಅವ್ರೆ. ಅವ್ರನ್ನ ನೋಡೋಕ್ಕೆ ಹೋಗವ್ರೆ….”
“ತಿರ್ಗ ಇಲ್ಲಿಗೆ ಬರ್ತಾರಾ” ಅಂತ ಕೇಳಿದೆ.
“ಬಂದರೆ ಬಂದ್ರು ಇಲ್ಲಾಂದ್ರೆ ಇಲ್ಲ. ಏಳಕ್ಕೆ ಆಗಕಿಲ್ಲ..” ಅಂದ!
ಅವರನ್ನ ಹುಡುಕಿ ಎದುರಿನ ಕಾಲೇಜಿಗೆ ಹೋಗೋದು. ಅಕಸ್ಮಾತ್ ಅವರೇ ಎದುರು ಬಂದರೆ ಅವರ ಗುರುತು ಹೇಗೆ ಹಿಡಿಯೋದು?
ಅವರು ಹೇಗಿದ್ದಾರೆ ಅಂತ ತಿಳಕೊಂಡು ಬರ್ಬೇಕಿತ್ತು ಅಂತ ಅನಿಸಿಬಿಡ್ತು!
ಇವನನ್ನೇ ಅವರು ಹೇಗಿದ್ದಾರೆ ಅಂತ ಕೇಳಿದರೆ ಹೇಗೆ?
ಆಗ ಕಾಲೇಜಿನ ಪ್ರೊಫೆಸರ್ ಅಂದರೆ ಪೂರ್ತಿ ಸೂಟ್ನಲ್ಲಿ ಇರುತ್ತಿದ್ದರು. ಮಿತ್ರಾ ಅವರೂ ಸೂಟ್ ಧರಿಸಿ ಬಂದಿರಬಹುದು, ಅವರ ಸೂಟ್ ಬಣ್ಣ ಕೇಳೋಣ ಅನಿಸಬೇಕೆ?
“ಚನ್ನಣ್ಣ ಅವರನ್ನ ನಾನು ನೋಡಿಲ್ಲ. ಅವರು ಎದುರು ಬಂದರೆ ಗುರುತು ಹಿಡಿಯೋಕ್ಕೆ ಅಂತ.. ಇವತ್ತು ಯಾವ ಕಲರ್ ಸೂಟು ಅವರು ಹಾಕಿದ್ದು?…”
ನಿಮಗೆ ಈ ಮಾತಿನಲ್ಲಿ ಏನಾದರೂ ಜೋಕು ಇದೆ ಅನ್ನಿಸ್ತಾ?
ಆದರೆ ಚನ್ನಯ್ಯನಿಗೆ ಜೋಕ್ ಇದೆ ಅನಿಸಿಬಿಡ್ತು.
“ಹಾಹಾಹಾ…” ಅಂತ ಜೋರಾಗಿ ನಕ್ಕ. ಅಲ್ಲೇ ಮುಂದೆ ಹೋಗುತ್ತಿದ್ದ ಅವನ ಕಲಿಗು ಇರಬೇಕು ಅವಳನ್ನ ಕರೆದ.
“ಲಚ್ಚವ್ವಾ ಬಾ ಇಲ್ಲಿ… ಮಿತ್ರ ಸಾರು ಯಾವ ಕಲರ್ ಸೂಟು ಹಾಕವ್ರೆ ಅಂತ ಈ ಸಾಮಿ ಕೇಳ್ತಾ ಅವ್ರೆ..” ಅಂತ ಅವನ ಹಾಹಾಹಾ ಮುಂದುವರೆಸಿದ! ಅವನ ಹಾಹಾಹಾ ಗೆ ಲಚ್ಚವ್ವ ಕೂಡ ಸೇರಿಕೊಂಡಳು.
“ಏಕಪ್ಪಾ ಹಾಗೆ ನಗ್ತೀ? ನಾನು ನಗೋಂತ ಮಾತು ಅದೇನಾಡಿದೆ…?” ಅಂತ ತಬ್ಬಿಬ್ಬಾಗಿ ಕೇಳಿದೆ.
“ಸಾರೂ ಅವರು ಸೂಟ್ ಹಾಕೋಲ್ರ. ಈ ಗಂಟ ಅವರು ಸೂಟ್ ಹಾಕಿದ್ದು ನಾವ್ ನೋಡಿಲ್ರಾ..” ಅಂದ. ಅವನ ಹಹಹ ದ ಗುಟ್ಟು ಗೊತ್ತಾಯ್ತು.
ಮುಂದೆ ನಾವೂ ಸಹ ಮಿತ್ರಾ ಅವರನ್ನು ಸೂಟ್ನಲ್ಲಿ ನೋಡೇ ಇಲ್ಲ.
ಲಚ್ಚವ್ವ “ಈ ಅಣ್ಣನ ತರಾನೇ ಶರ್ಟ್ ಆಕವ್ರೆ ಬಿಳೀದು, ಇವತ್ತು ನೀಲಿ ಪ್ಯಾಂಟ್ ಆಕವ್ರೆ.. ಅವರದು ಯಾವಾಗ್ಲೂ ಅದೇ ಡ್ರೆಸು…” ಅಂತ ನಗು ನಿಲ್ಲಿಸಿದಳು. ಚನ್ನಯ್ಯ ಒಂದು ಖಾಕಿ ಬುಷ್ ಶರ್ಟ್ ಖಾಕಿ ಪ್ಯಾಂಟ್ ಧರಿಸಿದ್ದ. ಸರಿ ಮಿತ್ರಾ ಅವರೂ ಸಹ ಪ್ಯಾಂಟ್ ಬುಷ್ ಶರ್ಟ್ ವೇಷದಲ್ಲಿದ್ದಾರೆ ಅಂತ ತಲೆಯಲ್ಲಿ ರೂಪಿಸಿಕೊಂಡೆ. ಬಿಳಿಯ ಬುಷ್ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರ ರೂಪ ತಲೆಯಲ್ಲಿ ಸಿದ್ಧವಾಯಿತು.
ಹೋಮ್ ಸೈನ್ಸ್ ಕಾಲೇಜಿಗೆ ಹೋಗಿ ಅವರು ಅಲ್ಲಿ ಸಿಕ್ಕಿದರೆ ಭೇಟಿ ಮಾಡಬೇಕು ಅಂತ ನಿರ್ಧರಿಸಿದೆ! ಈಗ ಅಂದಿನ ಟಾಪೋಗ್ರಾಪಿ ನಿಮಗೆ ವಿವರಿಸಬೇಕು. ಮಹಾರಾಣಿ ಕಾಲೇಜಿಗೆ ಡಯಾಗೋಗನಾಲ್ ಆಗಿ ವಿಶಿನ್ ದೇವಿ ಭಗವಾನ್ ದಾಸ್ ಕಾಲೇಜು. ಅದಕ್ಕೆ ಹೋಮ್ ಸೈನ್ಸ್ ಕಾಲೇಜು ಎಂದು ಶಾರ್ಟ್ ಫಾರ್ಮ್. ಹೆಸರು ಇದೇ ಇರಬಹುದೇನೋ, ತಪ್ಪಿದ್ದರೆ ಕ್ಷಮಿಸಿ. ಪೂರ್ಣ ಹೆಸರು ಇದಿರಬಹುದು.. ಶ್ರೀಮತಿ ಬಿಂದು ಮಾಧವ ವಿಶ್ವಾಸ್ ದೇವಿ ಭಗವಾನ್ದಾಸ್ ಹೋಮ್ ಸೈನ್ಸ್ ಕಾಲೇಜು” ಸರಿಯಾಗಿ ತಿಳಿಯದು.
ಅದರ ಎದುರು ಅಂದರೆ ಮಹಾರಾಣಿ ಕಾಲೇಜಿನ ಬಲಗಡೆಗೆ ರಸ್ತೆ ದಾಟಿದ ನಂತರ ಜಯಚಾಮರಾಜೇಂದ್ರ ಇನ್ಸ್ಟಿಟ್ಯೂಟ್ ಅಂದರೆ SJP ಅಂದಿನ ಶಾರ್ಟ್ ಫಾರ್ಮ್. ಹೋಮ್ ಸೈನ್ಸ್ ಕಾಲೇಜಿನ ಉದ್ದಕ್ಕೂ ಬಂದರೆ ಕಬ್ಬನ ಪಾರ್ಕಿಗೆ ರಸ್ತೆ. ಕಾಲೇಜಿನ ಪಕ್ಕ ಬಲಕ್ಕೆ ತಿರುಗಿದರೆ ಅಲ್ಲಿ ಕೊಂಚ ಮುಂದಕ್ಕೆ ಸೆಂಟ್ರಲ್ ಕಾಲೇಜು, ಅದರ ಎದುರು ಸರ್ಕಾರೀ ಕಾಲೇಜು. ಆಗ ಅದರ ಹೆಸರು Govt Arts And Science College ಅಂತ. ಶಾರ್ಟ್ ಫಾರ್ಮ್ನಲ್ಲಿ ಇದು gas ಕಾಲೇಜ್ ಆಗಿತ್ತು. GAS ಕಾಲೇಜು ಆಗ ಎಲ್ಲಾ ರೀತಿಯ ಹೋರಾಟಗಳ ತವರು. ಮುಂದಿನ ರಾಜಕಾರಣಿಗಳ ತರಬೇತಿ ಕೇಂದ್ರ. ಇದು ಮಾತ್ರ ನಿಮ್ಮ ತಲೆಯಲ್ಲಿರಲಿ.
ಮಿತ್ರ ಅವರನ್ನು ಹುಡುಕಿ ಹೋಮ್ ಸೈನ್ಸ್ ಕಾಲೇಜು ಗೇಟ್ ಸೇರಿದೆ. ಅಲ್ಲಿ ಯಾರನ್ನು ಕೇಳುವುದು? ಎದುರು ಬಂದ ಸುಮಾರು ಐವತ್ತರ ಆಸು ಪಾಸಿನ ಒಬ್ಬರು ಮೇಡಂ ಅವರನ್ನು ನಿಲ್ಲಿಸಿದೆ.
“ಮೇಡಂ ಮಿತ್ರ ಅವರು ಇಲ್ಲಿಗೆ ಬಂದರಂತೆ. ಅವರನ್ನು ಕಾಣಬೇಕು, ಎಲ್ಲಿ ಸಿಗುತ್ತಾರೆ?…” ಎಂದು ಹರಕು ಮುರುಕು ಇಂಗ್ಲಿಷ್ ನಲ್ಲಿ ಕೇಳಿದೆ. ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಬರುವವರು ಇರುತ್ತಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ! ಮೇಡಂ ಎರಡು ನಿಮಿಷ ನನ್ನನ್ನು ಮೇಲಿನಿಂದ ಕೆಳಕ್ಕೆ ನಂತರ ಬಲದಿಂದ ಎಡಕ್ಕೆ ಅವಲೋಕಿಸಿದರು.
“ವಿಚ್ ಮಿತ್ರ? ವಿಚ್ ಸೆಕ್ಷನ್ ಶಿ ಇಸ್ ಸ್ಟಡೀಯಿಂಗ್?” ಅಂದರು!
ಮಿತ್ರ ಎನ್ನುವ ಹೆಸರಿನ ಹುಡುಗಿಯರು ಸಹ ಇರುತ್ತಾರೆ ಎಂದು ಅವತ್ತು ಗೊತ್ತಾಯಿತು! ಸುಮಾರು ಈ ಹೆಸರಿನ ಹುಡುಗಿಯರು ನಂತರ ನನಗೆ ಗೊತ್ತಾದರು.
“ನೋ ಮೇಡಂ. ಮಿತ್ರ ಇಸ್ ಹಿ ಮೇಡಂ. ಹಿ ಇಸ್ ಬಾಯ್ ಮೇಡಂ. ಹಿ ಇಸ್ ಇನ್ ದಟ್ ಕಾಲೇಜ್ ಮೇಡಂ..” ಅಂತ ಕೈ ಮಹಾರಾಣಿ ಕಾಲೇಜಿನ ಕಡೆ ತೋರಿಸಿದೆ.
ಮೇಡಂ ನಾನು ಕೈ ತೋರಿಸಿದ ಕಡೆ ನೋಡಿದರು. ಮಹಾರಾಣಿ ಕಾಲೇಜು ಅಂತ ನಾನು ತೋರಿಸಿದ್ದು ಅವರಿಗೂ ಅರ್ಥ ಆಗಿರಬಹುದು. ಒಂದು ನಿಮಿಷ ನಿಂತು ಯೋಚಿಸಿದರು.
“ವಾಟ್ ಡಿಡ್ ಯು ಸೇ… ವಾಟ್ ಇಸ್ ಹಿಸ್ ನೇಮ್…?”
ನನಗೆ ಆಕಾಶ ಕೈಗೆ ಸಿಕ್ಕ ಹಾಗಾಯಿತು. ನಾನು ಹೇಳಿದ್ದು ಅವರಿಗೆ ಅರ್ಥ ಆಗಿದೆ ಎನ್ನುವ ಒಂದು ಖುಷಿ ಮತ್ತು ಇವರಿಗೆ ಅವರು ಗೊತ್ತಿರಬಹುದು ಎನ್ನುವ ಆಡಿಷನಲ್ ಖುಷಿ. ಒಂದು ರೀತಿ ಡಬಲ್ ಬೋನಾಂಜ!
“ಮಿತ್ರ ಮೇಡಂ, ಹಿಸ್ ನೇಮ್ ಇಸ್ ಮಿತ್ರ. ಇಟ್ ಇಸ್ ಹಿ ಮೇಡಂ. ಹಿ ರೈಟ್ಸ್ ಕನ್ನಡ ಮೇಡಂ….” ಅಂತ ಒಂದೇ ಉಸಿರಲ್ಲಿ ಬೊಮ್ಮಡ ಬಜಾಯಿಸಿದೆ!
ಮೇಡಂ ಮುಖ ಅರಳಿದೆ ಅನಿಸಿತಾ? ಮೇಡಂ ನಕ್ಕರು ಅನಿಸಿತಾ? ಅವರ ಕೆನ್ನೆಯಲ್ಲಿ ಹೆಬ್ಬೆರೆಳು ಇಡುವಷ್ಟು ಗುಳಿ ಬಿದ್ದಿತಾ… ಇವು ಯಾವೂ ನನ್ನ ಗಮನಕ್ಕೆ ಬಂದಿಲ್ಲ ಅಂದರೆ ನನಗೆ ನಾನೇ ಮೋಸ ಮಾಡ್ಕೋತಾ ಇದೀನಿ ಅಷ್ಟೇ!
“ಓಹೋ ನೀವು ಮಿತ್ರಾ ಸರ್ ನ ಹುಡುಕಿ ಬಂದ್ರಾ? ಅಲ್ಲಿ ಕನ್ನಡ ಡಿಪಾರ್ಟ್ಮೆಂಟ್ ಇದೆ. ನೇರ ಹೋಗಿ ಎಡಕ್ಕೆ ತಿರ್ಗಿ, ಅಲ್ಲಿ ಯಾರನಾದರೂ ಕೇಳಿ..” ಅಂತ ಸೀರೆ ಸೆರಗು ಸರಿ ಮಾಡಿಕೊಂಡು ವಾನಿಟಿ ಬ್ಯಾಗ್ ಹೆಗಲಲ್ಲಿ ಸರಿಯಾಗಿ ನೇತುಬಿದ್ದಿದೆ ಅಂತ ಕನ್ಫರ್ಮ್ ಮಾಡಿಕೊಂಡು ಮೇಡಂ ಮುಂದೆ ಹೆಜ್ಜೆ ಇಟ್ಟರು.
ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಡಿಪಾರ್ಟ್ಮೆಂಟ್ ಇರುತ್ತೆ ಅಂತ ಮೊದಲೇ ತಿಳಿದುಕೊಳ್ಳದ ನನ್ನ ಬುದ್ಧಿಗೆ ಎಕ್ಕಡದಲ್ಲಿ ಬಾರಿಸಬೇಕು ಎಂದುಕೊಂಡು ನೇರ ನಡೆದೆ. ಎಡಕ್ಕೆ ತಿರುಗಿದೆ. ಅಲ್ಲಿ ಕನ್ನಡ ವಿಭಾಗ ಅಂತ ಬೋರ್ಡ್ ಕಾಣಿಸಲಿಲ್ಲ. ತೆರೆದ ಬಾಗಿಲು, ಒಳಗಡೆಯಿಂದ ನಗುವಿನ ಪ್ರವಾಹ ಹರಿದು ಬರುತ್ತಿತ್ತು, ಜತೆಗೆ ಕನ್ನಡದಲ್ಲಿ ಮಾತು ಮಾತು. ರೂಮಿನ ಒಳಗೆ ನಡೆದೆ. ಮೂರು ಜನ ಟೇಬಲ್ಲಿನ ಆಕಡೆ ಇಬ್ಬರು ಈಕಡೆ ಒಬ್ಬರು ಕೂತಿದ್ದರು. ಮೂರೂ ಜನ ಸೂಟು ಟೈ ಧಾರಿಗಳು! ಅದರಿಂದ ಗುಂಪಿನಲ್ಲಿ ಮಿತ್ರ ಸಾರ್ ಇಲ್ಲ ಎನ್ನುವುದು ಖಚಿತ ಆಯಿತು.
ಸೂಟ್ ಧಾರಿಗಳು ಏನು ಎನ್ನುವ ಹಾಗೆ ನನ್ನನ್ನು ನೋಡಿದರಾ..?
“ಇವರನ್ನು ನೋಡಬೇಕಿತ್ತು…..” ಅಂದೆ.
ಮತ್ತೆ ನಗುವಿನ ಅಟ್ಟಹಾಸ ಹೊರಡ ಬೇಕೇ..? ಅವರಲ್ಲೇ ಆ ಕಡೆ ಕೂತಿದ್ದವರು ಉತ್ತರಿಸಿದರು
“ನೋಡಿ ಯಾರು ಬೇಡ ಅಂದೋರು..?” ಮತ್ತೆ ನಗು.
ನಾನು ಕಕ್ಕಾಬಿಕ್ಕಿ ಆಗಿದ್ದೀನಿ ಅಂತ ಈ ಕಡೆ ಕೂತವರಿಗೆ ಅನಿಸಿರಬೇಕು.
“ಯಾರನ್ನು ನೋಡಬೇಕಿತ್ತು ಇವರೇ….” ಅಂತ ಕೇಳಿದರು. ಮಿಕ್ಕವರಿಗೆ ಸುಮ್ಮನಿರಿ ಎನ್ನುವ ಸಂಜ್ಞೆ ಬೇರೆ ಇತ್ತು.
ನನ್ನ ತಪ್ಪು ಈಗ ಅರಿವಾಗಿತ್ತು. ಇವರನ್ನ ನೋಡಬೇಕು ಅಂದರೆ ಯಾವ ಬ್ರಹ್ಮನಿಗೆ ಅರ್ಥವಾಗುತ್ತೆ ಎನ್ನುವ ಪ್ರಾಥಮಿಕ ಜ್ಞಾನ ನನಗಿರಬೇಕಿತ್ತು ಅಂತ ಆ ಕ್ಷಣಕ್ಕೆ ಅನಿಸಿತ್ತು.
“ಮಿತ್ರ ಸಾರ್ ಅವರನ್ನು ಹುಡುಕಿ ಮಹಾರಾಣಿ ಕಾಲೇಜಿಗೆ ಹೋಗಿದ್ದೆ. ಇಲ್ಲಿಗೆ ಹೋದರು ಅಂತ ಅಲ್ಲಿ ಹೇಳಿದರು. ಅವರನ್ನ ನೋಡಬೇಕಿತ್ತು…..” ಅಂದೆ.
“ಈಗ ತಾನೇ ಹೋದ್ರಲ್ಲಾ!ನಿ ಮ್ಮೆದುರಿಗೆ ಸಿಗಲಿಲ್ಲವೇ…?”
“ಇಲ್ಲ ಇವರೇ. ಅವರನ್ನ ನೋಡಿಲ್ಲ ನಾನು….” ಅಂದೆ. ಅವರು ಎದುರು ನಿಂತಿದ್ದರೂ ಗುರುತು ಹಿಡಿಯಲು ಅಸಮರ್ಥ ಎಂದು ಈ ಸೂಟು ಧಾರಿಗಳಿಗೆ ಕನ್ವಿನ್ಸ್ ಮಾಡಬೇಕಿತ್ತು.
“ಅಯ್ಯೋ ಅದೇನೂ ಕಷ್ಟ ಇಲ್ಲ.. ನೋಡಿ ಇವರು ಇದ್ದ ಹಾಗೇ ಅವರೂ ಇರೋದು. ಇವರಿಗಿಂತ ಎತ್ತರ ಸ್ವಲ್ಪ ಕಡಿಮೆ, ಕೊಂಚ ಎರಡು ಸುತ್ತು ಕಲರ್ ಹೆಚ್ಚು.. ಇವರ ಹಾಗೆ ಗಂಟು ಮುಖ ಅಲ್ಲ ಸ್ಮೈಲಿಂಗ್ ಫೇಸು……” ಅಂತ ವಿವರಣೆ ಕೊಟ್ಟರು. ಹೇಳಿ ಕೇಳಿ ಕಾಲೇಜು ಮೇಷ್ಟ್ರು, ಬಾಯಿ ತೆರೆದರೆ ಒಂದು ಗಂಟೆ ಪಿರಿಯಡ್ ಪಾಠ ಮಾಡಿದ ಹಾಗೆ ಮಾತಾಡಬೇಕೇನೋ ಅನಿಸಿತು. ಇವರ ಹಾಗೆ ಅವರು ಇರೋದು ಅಂತ ಪಕ್ಕದವರನ್ನು ತೋರಿಸಿದ್ದರು ನೋಡಿ ಅವರನ್ನು ನೋಡಿದೆ..
ನನ್ನ ತಲೆಯಲ್ಲಿದ್ದ ಮಿತ್ರ ಅವರಿಗೂ ಎದುರು ಅವರ ಹಾಗೇ ಇದ್ದಾರೆ ಅಂತ ಹೇಳಿದ್ದ ವ್ಯಕ್ತಿಗೂ ಅಜಗಜಾಂತರ!
ಮಿತ್ರ ಅವರನ್ನು ಮೊದಲ ಬಾರಿ ಭೇಟಿಮಾಡಿದ ಕತೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಕೆಲವೇ ಪುಟ್ಟ ಪುಟ್ಟ ವಾಕ್ಯದಲ್ಲಿ ಹೇಳಿ ಮುಗಿಸಿ ಮುಂದಕ್ಕೆ ಓಡಿಬಿಡೋಣ ಅಂತ ಪ್ಲಾನಿಸಿದ್ದೆ. ಆದರೆ ಪ್ಲಾನ್ ಪೂರಾ ಉಲ್ಟಾ ಹೊಡೆಯಿತು. ತಾನೊಂದು ಬಗೆದರೆ ದೈವ ಮತ್ತೊಂದು ಬಗೆದೊಡಮ್.. ಎಂದು ಕವಿ ರಾಘವಾಂಕ ಅವನ ಒಂದು ಮಹಾಕಾವ್ಯದಲ್ಲಿ ಹೇಳಿದ್ದಾನೆ ನೋಡಿ, ಹಾಗಾಯಿತು. ನಾವೇನೋ ಅಂದುಕೊಳ್ಳೋದು ಮೇಲಿರುವ ದೇವರು ಮತ್ತೇನೋ ಅಂದುಕೊಳ್ಳುವುದು. ಕೊನೆಗೆ ಆ ಜಗನ್ನಿ ಯಾಮಾಕ ನಡೆಸಿದ ಹಾಗೆ ನಡೆವುದು.. ಇದು ಹುಲು ಮಾನವರ ರೀತಿ ನೀತಿ ಅಂತೆ! ಅದರಿಂದ ಕತೆ ಮುಂದುವರೆಯುತ್ತೆ. ಮುಂದಿನ ಎಪಿಸೋಡ್ ನಲ್ಲಿ ಇದರ ಉಳಿದ ಕತೆಯನ್ನು ಬಿಸಿಬಿಸಿಯಾಗಿ ಹರವಲು ತಮ್ಮ ಅನುಮತಿ ಇರಲಿ..
ಇನ್ನೂ ಇದೆ …

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
