Advertisement
ಇಂಗ್ಲೀಷ್ ಮೇಡಮ್ಮಿನ ಕನ್ನಡ ಪುರಾಣ: ಸುಕನ್ಯಾ ಕನಾರಳ್ಳಿ ಅಂಕಣ

ಇಂಗ್ಲೀಷ್ ಮೇಡಮ್ಮಿನ ಕನ್ನಡ ಪುರಾಣ: ಸುಕನ್ಯಾ ಕನಾರಳ್ಳಿ ಅಂಕಣ

ಷೇಕ್ಸ್ಪಿಯರ್ ತನ್ನ ಕಾಲದಲ್ಲಿ ಮಹಾನ್ ನಾಟಕಕಾರ ಎಂದು ಪರಿಗಣಿಸಲ್ಪಟ್ಟಿದ್ದನೊ ಇಲ್ಲವೋ. ವಾಸ್ತವವಾಗಿ ಆತ ಕೇವಲ ಎರಡನೆಯ ಅಥವಾ ಮೂರನೆಯ ದರ್ಜೆಯ ನಾಟಕಾರನಾಗಿದ್ದ ಎಂಬ ನಿಲುವಿದೆ. ನಮ್ಮ ವಿ. ಸೀತಾರಾಮಯ್ಯನವರ ಮಾತುಗಳು ಅದನ್ನೇ ಧ್ವನಿಸುತ್ತವೆ. ‘ಶೇಕ್ಸಪಿಯರನಲ್ಲಿ ಭವ್ಯವಾದ, ಸುಬದ್ಧವಾದ, ತಾರಕವಾದ ಜೀವನಮೌಲ್ಯಗಳಿಲ್ಲ; ದರ್ಶನವಿಲ್ಲ. ಆದುದರಿಂದ ಅವನು ಕೀಳನೆಂಬ ಒಂದು ವಿಚಿತ್ರ ತೀರ್ಮಾನ ಬಹುಕಾಲದಿಂದ ಬಂದಿದೆ. (ಪು. ೨೦). ಆದರೆ ಭಾರತದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಇಂಗ್ಲಿಷ್ ಶಿಕ್ಷಕರ ಕೈಯಲ್ಲಿ ಅವನು ಮಹಾನ್ ಎತ್ತರವನ್ನು ಏರಿದ ರೀತಿಗೆ ಕಾರಣವನ್ನು ಹುಡುಕಬೇಕೆಂದರೆ ವಸಾಹತುಶಾಹಿ ಇತಿಹಾಸದತ್ತ ಹೊರಳಿಕೊಳ್ಳಬೇಕು.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತನೆಯ ಬರಹ

ಒಮ್ಮೆ ನಮ್ಮ ಇಂಗ್ಲಿಷ್ ವಿಭಾಗಕ್ಕೆ ಸೇರಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸುಮಾರು ಐದಾರು ಮಂದಿಯನ್ನು ಆರಿಸಿ ತರಗತಿಯಲ್ಲಿ ಪಾಠ ಮಾಡಲು ಸೂಚಿಸಲಾಗಿತ್ತು. ಹಿಂದೆ ಕೂತು ಹೇಗೆ ಏನು ಎಂದು ಗಮನಿಸಲು ನಾವು ವಿಭಾಗದ ಐದು ಮಂದಿ. ಆಯ್ಕೆಯಾಗಿದ್ದು ಇಬ್ಬರು. ಕೊನೆಯ ಒಬ್ಬರು ಯಾರಾಗಿರಬೇಕು ಎಂಬ ಪ್ರಶ್ನೆ ಬಂದಾಗ ಮಾತ್ರ ವಸಾಹತುಶಾಹಿ ನೆನಪೆಂಬ ಸೆರೆಮನೆಯಲ್ಲಿ ಸಿಕ್ಕಿಬಿದ್ದವರಂತೆ ನಾವು ವರ್ತಿಸಿದ್ದು ಸ್ಪಷ್ಟವಾಗಿತ್ತು.

ಒಬ್ಬಳು ತುಮಕೂರಿನವಳು. ಅವಳ ಕುಟುಂಬದಲ್ಲಿ ಮೊದಲನೆಯ ಪೀಳಿಗೆಯ ವಿದ್ಯಾವಂತೆ. ಎಲ್ಲ ಕಷ್ಟಗಳ ನಡುವೆಯೂ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಗೆದ್ದು ಬಂದಿದ್ದಳು. ಉತ್ಸಾಹವಿತ್ತು. ಒಳ್ಳೆಯ ತರಬೇತಿ ಕೊಟ್ಟರೆ ಇಂಗ್ಲಿಷ್ ಶಿಕ್ಷಣದ ನೆಲೆಯಲ್ಲಿ ಕ್ರಿಯಾಶೀಲಳಾಗಿ ಉಳಿಯಬಲ್ಲಂತವಳು. ಇನ್ನೊಬ್ಬಳು ಬೆಂಗಳೂರಿನ ಒಂದು ಪ್ರತಿಷ್ಠಿತ ಕಾಲೇಜಿನಿಂದ ಬಂದವಳು. ಕಾನ್ವೆಂಟ್ ಶಿಕ್ಷಣ, ವಿದ್ಯಾವಂತ ಕುಟುಂಬ ಇತ್ಯಾದಿ ಸವಲತ್ತುಗಳನ್ನು ಪಡೆದಿದ್ದವಳು. ಸರಾಗವಾಗಿ ಹರಿದ ಇಂಗ್ಲಿಷ್ ಭಾಷೆ ಮೆಚ್ಚುವಂತಿತ್ತು.

ಯಾರನ್ನು ಆರಿಸಬೇಕು ಎಂದು ನಡೆದ ನಂತರದ ಚರ್ಚೆಯಲ್ಲಿ ಅಲ್ಲಿ ಇಲ್ಲಿ ಇಂಗ್ಲಿಷ್ ಬಳಕೆಯಲ್ಲಿ ಸ್ವಲ್ಪ ಎಡವಿದ್ದ ತುಮಕೂರಿನವಳನ್ನು ನಾನು ಬೆಂಬಲಿಸಿದೆ. ಅವಳಿಗೆ ಕನ್ನಡ ಗೊತ್ತಿತ್ತು. ಗಾಂಧಿಬಜಾರಿನ ಮಾರುಕಟ್ಟೆಯಲ್ಲಿ ತರಕಾರಿ ಮಾರುವವಳ ಮಗಳು ಸಹ ನಮ್ಮ ವಿದ್ಯಾರ್ಥಿಯಾಗಿರುತ್ತಾಳೆ. ಅಂತಹ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪಾಠ ಹೇಳಿಕೊಡಬಲ್ಲ ಈಕೆಗೆ ಕೆಲಸ, ಪ್ರೋತ್ಸಾಹಗಳನ್ನು ಕೊಟ್ಟರೆ ನಮ್ಮಲ್ಲೇ ಉಳಿಯುತ್ತಾಳೆ, ಎಂದೆಲ್ಲಾ ವಾದಿಸಿದ್ದೆ. ಇನ್ನೊಬ್ಬ ಸಹೋದ್ಯೋಗಿ ಸಹ ನನ್ನ ವಾದವನ್ನು ಒಪ್ಪಿದ್ದಳು.

ಆದರೆ ಕೊನೆಗೆ ಗೆದ್ದಿದ್ದು ಸಂಖ್ಯಾಬಲ ಮತ್ತು ಭಾಷೆಯ ಬಲ.  ಉಳಿದ ಮೂವರು ನಗರದಲ್ಲಿ ಹುಟ್ಟಿ ಬೆಳೆದು ತಪ್ಪಿಲ್ಲದ ಇಂಗ್ಲಿಷ್ ಮಾತಾಡುವಾಕೆಯನ್ನು ಆರಿಸಿದ್ದರು. ಅವಳು ಪಠ್ಯವನ್ನು ಅರ್ಥೈಸಿದ ರೀತಿಯಲ್ಲಿ ಯಾವ ರೀತಿಯ ಹೊಸತನವಿಲ್ಲದಿದ್ದರೂ ಸಹ. ಆರಿಸಲ್ಪಟ್ಟವಳು ಎರಡು ತಿಂಗಳು ಕೆಲಸ ಮಾಡಿ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಿ ಇನ್ಯಾವುದೋ ‘ಬೆಟರ್’ ಕಾಲೇಜಿಗೆ ಹೋಗಿದ್ದಳು. ತುಮಕೂರಿನಾಕೆಗೆ ಸಹ ಇನ್ನೆಲ್ಲೋ ಕೆಲಸ ಸಿಕ್ಕಿತ್ತು. ಅಂತೂ ಇಂತೂ ನಮ್ಮ ಕಾಲೇಜಿನ ಇಂಗ್ಲಿಷ್ ಶಿಕ್ಷಣದ ಕೂಸು ಬಡವಾಗಿತ್ತು. ಇಂಗ್ಲಿಷ್ ವಿಭಾಗಕ್ಕೆ ಸೇರಿಕೊಳ್ಳಲು ಬರುವವರಿಗೆ ಕನ್ನಡ ಗೊತ್ತಿರಲೇಬೇಕು, ಇಲ್ಲದಿದ್ದರೆ ಅರ್ಜಿಯನ್ನು ಪುರಸ್ಕರಿಸಬಾರದು ಎಂಬ ಮನವಿಯನ್ನು ನಾನು ಗುಟ್ಟಾಗಿ ಅಧ್ಯಕ್ಷರಿಗೆ ರವಾನಿಸಿದ್ದೆ.

ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳನ್ನು ಬೋಧಿಸುವ ನನ್ನ ವೃತ್ತಿಯಲ್ಲಿ ಈ ಸಾಹಿತ್ಯ ಬೋಧನೆ ಎಂದರೆ ಏನು ಎನ್ನುವ ಪ್ರಶ್ನೆ ಬಲವಾಗಿ ಕಾಡಿದೆ. ತಾವು ಹದಿಹರೆಯದ ಮನಸ್ಸುಗಳನ್ನು ತಿದ್ದಿ ರೂಪಿಸುವವರು ಎಂಬ ಹುಮ್ಮಸ್ಸಿನಲ್ಲಿ ಸಾಹಿತ್ಯ ಪಾಠ ಎನ್ನುವುದು ನೀತಿಬೋಧೆ ಮಾಡುವ ರಂಗಗಳಾಗಿ ಹೊಮ್ಮಿದ್ದು ಒಂದು ವ್ಯಂಗ್ಯವೇ. ಅದು ಕನ್ನಡ, ಹಿಂದಿ, ಸಂಸ್ಕೃತ ಯಾವುದೇ ಇರಬಹುದು, ಪಠ್ಯಕ್ರಮವನ್ನು ರೂಪಿಸುವವರು ಸಹ ನೀತಿಪಾಠ ಮಾಡಲೆಂದೇ ತಾತನ ಕತೆಗಳಿಗೆ ಮೊರೆ ಹೋಗಿದ್ದು; ಅವರು ಆರಿಸುವ ಪಠ್ಯಗಳು ಅಕಸ್ಮಾತ್ ವಿದ್ರೋಹದ ಸಾಮರ್ಥ್ಯವನ್ನು ಬಸಿರಲ್ಲಿ ಹೊತ್ತಿದ್ದರೂ ಸಹ ಶಿಕ್ಷಕರು ಅವು ನೀತಿಪಾಠಗಳನ್ನೆ ಹೆರುವಂತೆ ಮಾಡಿದ ಸೂಲಗಿತ್ತಿಯರಾಗಿದ್ದು ಪಠ್ಯಕ್ರಮವನ್ನು ರೂಪಿಸುವುದರಲ್ಲಿ ಭಾಗಿಯಾಗಿದ್ದ ನನ್ನನ್ನು ಹಲವೊಮ್ಮೆ ಬೆಚ್ಚಿ ಬೀಳಿಸಿದ್ದಿದೆ. ಷೇಕ್ಸ್ಪಿಯರನನ್ನು ಬೋಧಿಸುವ ಮಂದಿಯೂ ಅದಕ್ಕೆ ಹೊರತಾಗಿರಲಿಲ್ಲ. ಎಚ್. ವೈ. ಶಾರದಾಪ್ರಸಾದರ ಲೇಖನದಲ್ಲಿ ಇದರ ಪ್ರಸ್ತಾಪ ಬರುತ್ತದೆ:

ಷೇಕ್ಸ್ಪಿಯರ್ ಜಗತ್ತಿನ ಸ್ವತ್ತು; ಇಂಗ್ಲೆಂಡಿಗೆ ಆತ ಎಷ್ಟು ಸೇರಿದವನೋ ನಮಗೂ ಅಷ್ಟೇ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ… ನೂರೆಂಟು ವರ್ಷಗಳಿಂದ ಉಪಾಧ್ಯಾಯರು ನಮ್ಮ ದೇಶದಲ್ಲಿ ಶೇಕ್ಸಪಿಯರನ ಪಾಠ ಮಾಡುತ್ತಿದ್ದಾರೆ. ಆದರೆ ಈ ಸ್ವತ್ತಿನಲ್ಲಿ ಎಷ್ಟು ನಮ್ಮ ಪ್ರಯೋಜನಕ್ಕೆ ಬಂದಿದೆ ಎಂಬುದು ನೋಡಬೇಕಾದ್ದು. ಷೇಕ್ಸ್ಪಿಯರ್ ಆರಾಧನೆ ನಮ್ಮಲ್ಲಿ ಆರಂಭವಾದ ಕಾಲದಲ್ಲಿ, ಅವನ ಕೃತಿಯನ್ನು ಪಾಠ ಹೇಳುತ್ತಿದ್ದವರು ವಿಕ್ಟೋರಿಯನ್ ಆಂಗ್ಲೆಯರು, ಅಥವಾ ಸಂಪ್ರದಾಯಸ್ಥ ಸಂಸ್ಕೃತ ಮನೆತನಗಳಿಂದ ವಿಕ್ಟೋರಿಯನ್ ಪಥಕ್ಕೆ ಬಂದ ಭಾರತೀಯರು. ಇವರಿಬ್ಬರಿಗೂ ಸಾಮ್ಯ ಬಹಳ. ಇಬ್ಬರಿಗೂ ನಗೆಗಿಂತ ಗಾಂಭೀರ್ಯದ ಮೇಲೆ ಒಲವು; ಅಬ್ಬರಿಸುವ ಸಮುದ್ರಕ್ಕಿಂತ ನಿಂತ ಸರೋವರವೇ ಮೆಚ್ಚಿಗೆ. ಎಲ್ಲ ಶೀಲಗಳಲ್ಲೂ ಸಂಯಮವೇ ಶ್ರೇಷ್ಠವೆಂದು ಇವರ ನಂಬಿಕೆ. ನಮ್ಮ ದೇಶದ ಚರಿತ್ರೆಯಲ್ಲಿ ಆ ಯುಗ ಇನ್ನೂ ನಡೆಯುತ್ತಿದೆ. ಈ ಮನೋಧರ್ಮದವರನ್ನು ಕಂಡಾಗ ಒಮ್ಮೊಮ್ಮೆ ಆಂಗ್ಲ ಲೇಖಕನೊಬ್ಬನೊಂದಿಗೆ ಧ್ವನಿ ಕೂಡಿಸಿ ‘The reins are all right, but where is the bloody horse?’ ಎಂದು ಕೇಳಬೇಕೆನ್ನಿಸುತ್ತದೆ. (ಪು. ೧೨೭)

ಇಂಗ್ಲಿಷ್ ವಿಭಾಗದಲ್ಲಿ ಸಾಮಾನ್ಯವಾಗಿ ಒಂದು ಬಗೆಯ ಶ್ರೇಣೀಕರಣವಿತ್ತು. ಹೊಸಬರಿಗೆ ಪಾಠ ಮಾಡಲು ಷೇಕ್ಸ್ಪಿಯರ್ ದಕ್ಕುವ ಹಾಗಿರಲಿಲ್ಲ. ಅದಕ್ಕೆ ಅನುಭವ ಬೇಕಿತ್ತು. ಮೌಲ್ಯಮಾಪನ ಕೇಂದ್ರದಲ್ಲಿ ‘ನನಗಿನ್ನೂ ಷೇಕ್ಸ್ಪಿಯರ್ ಕೊಟ್ಟೇ ಇಲ್ಲ, ಗೊತ್ತಾ?’ ಎಂದು ಕೆಲವರು ಗೋಳುಕರೆಯುವ ರೀತಿಯಲ್ಲಿ ಹೇಳಿದ್ದು ಕೇಳಿಸಿದೆ. ಆದರೂ ಅವರು ಅವನ ರುದ್ರನಾಟಕಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಓದಿ (ಅಥವಾ ಕಣ್ಣು ಹಾಯಿಸಿ?) ಸ್ಟೈಲಾಗಿ ಅಂಕಗಳನ್ನು ದಾನ ಮಾಡುವುದನ್ನು ನೋಡಿದ್ದೆ.

ಒಮ್ಮೆ ಯಾವುದೋ ಕಾಲೇಜಿನ ಸಹೋದ್ಯೋಗಿಯನ್ನು ನೋಡಲು ಹೋದೆ. ಪಾಠಿಸಲು ಹೋಗಿದ್ದರು ಎಂದು ಕಾಯುತ್ತಾ ಕೂತೆ. ಬಂದವರೇ ‘ಹ್ಯಾಮ್ಲೆಟ್’ ಪ್ರತಿಯನ್ನು ಮೇಜಿನ ಮೇಲೆ ಇರಿಸಿ ನೀರಿನ ಬಾಟಲೆತ್ತಿ ಗಟಗಟನೆ ನೀರು ಕುಡಿದರು. ‘ಏನ್ಸಾರ್, ಹುಡುಗರು ನೀರು ಕುಡಿಸಿಬಿಟ್ರಾ?’ ಎಂದು ರೇಗಿಸಿದೆ. ‘ಹಾಗಲ್ಲ, ನೋಡಿ, ಷೇಕ್ಸ್ಪಿಯರ್ ಪಾಠ ಮಾಡಿ ಬಂದರೆ ನನ್ನ ಎದೆ ಭಾರವಾಗಿರುತ್ತದೆ, ಸುಧಾರಿಸಿಕೊಳ್ಳಲು ಗಂಟೆಗಳೇ ಬೇಕು,’ ಎಂದು ಶ್ರೀಮದ್ಗಾಂಭೀರ್ಯದಿಂದ ಹೇಳಿದಾಗ ಕಿಸಕ್ಕನೆ ಬಂದ ನಗುವನ್ನು ಮರೆಸುತ್ತಾ  ಮುಖದಲ್ಲಿ ಕಿಂಚಿತ್  ಕರುಣೆಯನ್ನು ತುಳುಕಿಸಿ ಪಾರಾಗಿದ್ದೆ.

ಷೇಕ್ಸ್ಪಿಯರ್ ತನ್ನ ಕಾಲದಲ್ಲಿ ಮಹಾನ್ ನಾಟಕಕಾರ ಎಂದು ಪರಿಗಣಿಸಲ್ಪಟ್ಟಿದ್ದನೊ ಇಲ್ಲವೋ. ವಾಸ್ತವವಾಗಿ ಆತ ಕೇವಲ ಎರಡನೆಯ ಅಥವಾ ಮೂರನೆಯ ದರ್ಜೆಯ ನಾಟಕಾರನಾಗಿದ್ದ ಎಂಬ ನಿಲುವಿದೆ. ನಮ್ಮ ವಿ. ಸೀತಾರಾಮಯ್ಯನವರ ಮಾತುಗಳು ಅದನ್ನೇ ಧ್ವನಿಸುತ್ತವೆ. ‘ಶೇಕ್ಸಪಿಯರನಲ್ಲಿ ಭವ್ಯವಾದ, ಸುಬದ್ಧವಾದ, ತಾರಕವಾದ ಜೀವನಮೌಲ್ಯಗಳಿಲ್ಲ; ದರ್ಶನವಿಲ್ಲ. ಆದುದರಿಂದ ಅವನು ಕೀಳನೆಂಬ ಒಂದು ವಿಚಿತ್ರ ತೀರ್ಮಾನ ಬಹುಕಾಲದಿಂದ ಬಂದಿದೆ. (ಪು. ೨೦). ಆದರೆ ಭಾರತದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಇಂಗ್ಲಿಷ್ ಶಿಕ್ಷಕರ ಕೈಯಲ್ಲಿ ಅವನು ಮಹಾನ್ ಎತ್ತರವನ್ನು ಏರಿದ ರೀತಿಗೆ ಕಾರಣವನ್ನು ಹುಡುಕಬೇಕೆಂದರೆ ವಸಾಹತುಶಾಹಿ ಇತಿಹಾಸದತ್ತ ಹೊರಳಿಕೊಳ್ಳಬೇಕು. ವಸಾಹತು-ಉತ್ತರದ ನೆಲೆಯಲ್ಲಿ ನಿಂತು ಅದರ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು.

ರಾಜಕೀಯ ಪ್ರಾಬಲ್ಯವನ್ನು ಸಾಧಿಸಲು ಸಾಂಸ್ಕೃತಿಕ ಶಕ್ತಿ ನೆರವಾಗುತ್ತದೆ. ಇಟಲಿಯ ಆಂಟೋನಿಯೊ ಗ್ರಾಂಶಿ (Antonio Gramsci) ಎಂಬ ಬೆಂಕಿಯಂತ ಚಿಂತಕ ಶಕ್ತಿರಾಜಕಾರಣದಲ್ಲಿ ಸಾಂಸ್ಕೃತಿಕ ಯಜಮಾನ್ಯದ ಪಾತ್ರ ಮತ್ತು ಅದರ ಹಲವು ಒಳಸುಳಿಗಳತ್ತ ನಮ್ಮ ಗಮನ ಹರಿಯುವಂತೆ ಮಾಡುತ್ತಾನೆ.

ಹತ್ತೊಂಬತ್ತನೆಯ ಶತಮಾನದ ಸಿಪಾಯಿ ದಂಗೆಯ ನಂತರ ಬ್ರಿಟಿಷರು ಭಾರತದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಸರಕಾರಿ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸುವುದಕ್ಕೆ ಶಕ್ತಿ ರಾಜಕಾರಣದ ಹಲವಾರು ಆಯಾಮಗಳು ಒದಗಿ ಬಂದಿದ್ದವು. ಅದು ಆಳ್ವಿಕೆಗೆ ಒಳಪಟ್ಟವರನ್ನು ಬೌದ್ಧಿಕವಾಗಿ ನಿಯಂತ್ರಿಸುವ ಒಂದು ರಾಜಕೀಯ ಸಾಧನವಾಗಿತ್ತು. ತಮ್ಮದು ನಾಗರಿಕ ಮತ್ತು ನೈತಿಕ ಶಕ್ತಿ. ನಾವು ಆಳಲು ತಕ್ಕವರು, ಕಗ್ಗತ್ತಲೆಯ ಖಂಡದ ನಿಮ್ಮನ್ನು ನಾಗರಿಕಗೊಳಿಸಿ ಬೆಳಕಿನತ್ತ ಒಯ್ಯಬಲ್ಲವರು ಎಂದು ಸಾಧಿಸುವ ಇರಾದೆ ಅಲ್ಲಿತ್ತು. ತಾವು ಹುಟ್ಟು ಹಾಕಿದ್ದ ಆಡಳಿತಶಾಹಿ ವ್ಯವಸ್ಥೆಯಲ್ಲಿ ಕೇವಲ ಕ್ಲಾರ್ಕುಗಳಾಗಿ ಒದಗಿ ಬರುವಂತೆ ಭಾರತೀಯರಿಗೆ ತರಬೇತಿ ನೀಡುವ ಅಗತ್ಯ ಸಹ ಅಲ್ಲಿತ್ತು.

ಕ್ರಿಶ್ಚಿಯನ್ ಮೌಲ್ಯಗಳನ್ನು ನೇರವಾಗಿ ಹೇರಿ ಅದು ಮತಾಂತರದ ವಿರುದ್ಧ ದಂಗೆಯನ್ನು ಹುಟ್ಟು ಹಾಕಿಬಿಟ್ಟರೆ? ಅದಕ್ಕಾಗಿ ಪರೋಕ್ಷವಾಗಿ ಆ ಮೌಲ್ಯಗಳ ಹಿರಿಮೆಯನ್ನು ಸಾರಲು ಇಂಗ್ಲಿಷ್ ಸಾಹಿತ್ಯದ ಅಧ್ಯಯನವನ್ನು ಬಳಸುವ ಬಗ್ಗೆ ಚರ್ಚೆಗಳು ಸಾಕಷ್ಟು ನಡೆದವು. ಆ ವಸಾಹತುಶಾಹಿ ಯೋಜನೆಗೆ ಷೇಕ್ಸ್ಪಿಯರ್ ಒದಗಿ ಬಂದ. ಹಾಗಾಗಿಯೇ ಬ್ರಿಟನ್ನಿನ ವಿಶ್ವವಿದ್ಯಾಲಯಗಳಲ್ಲಿ  ವಿದ್ಯಾರ್ಥಿಗಳು ಅವನ ನಾಟಕಗಳನ್ನು ಓದುವ ಮುಂಚೆಯೇ ಭಾರತೀಯ ಸುಶಿಕ್ಷಿತ ವರ್ಗ  ಅವನ ಹೆಸರನ್ನು ಪಠಿಸಲಾರಂಭಿಸಿತ್ತು.

ತಮ್ಮ ವಸಾಹತು ಪ್ರಜೆಗಳ ತಲೆ ಸವರುವ ಬ್ರಿಟಿಷರ ಉದ್ದೇಶ ಈಡೇರಿತೆ? ಅದು ಸ್ವಾತಂತ್ರ್ಯದ ಕಿಡಿಯನ್ನು ಸಹ ಹೊತ್ತಿಸಿತು ಎನ್ನುವುದನ್ನು ಒಂದು ಚಾರಿತ್ರಿಕ ವ್ಯಂಗ್ಯದಂತೆ ಅರ್ಥ ಮಾಡಿಕೊಳ್ಳಬಹುದು. ಇರಲಿ, ಬ್ರಿಟಿಷರ ಅಂದಿನ ಉದ್ದೇಶವನ್ನೇ ಇಂಗ್ಲಿಷ್ ಸಾಹಿತ್ಯ ಬೋಧಿಸುವವರು ಹಲವಾರು ರೀತಿಯಲ್ಲಿ ಇವತ್ತಿಗೂ ಮುಂದುವರೆಸಿದ್ದಾರೆ ಎನ್ನುವುದು ಮಾತ್ರ ಒಂದು ಮಹಾ ವಿಪರ್ಯಾಸವೇ. ಶಾರದಾಪ್ರಸಾದರ ಮಾತುಗಳಲ್ಲಿ:

ಚೌಕಟ್ಟು ಈ ರೀತಿ ‘ನೈತಿಕ’ ವಾಗಿದ್ದುದರಿಂದ ನಮ್ಮ ಉಪಾಧ್ಯಾಯರಿಗೆ ಷೇಕ್ಸ್ಪಿಯರ್ ನೀತಿವಾಕ್ಯಗಳ ಉಗ್ರಾಣವಾದ. ಒಬ್ಬ ಗೃಹಸ್ಥರಿಗಂತೂ ‘neither a lender nor a borrower be’ ಎಂಬುದೇ ಷೇಕ್ಸ್ಪಿಯರ್ ಬರೆದ ಸಾಲುಗಳಲ್ಲೆಲ್ಲ ಸರ್ವೋತ್ಕೃಷ್ಟವೆಂಬ ಭಾವನೆ. ಅವರ ಹುಡುಗನಿಗೆ ಅದನ್ನು ಹೇಳಿದ್ದೇ ಹೇಳಿದ್ದು. ಮುದುಕನೊಬ್ಬನ ಬಾಯಲ್ಲಿ ಈ ವಾಕ್ಯವಿಟ್ಟು ಷೇಕ್ಸ್ಪಿಯರ್ ಮುಸಿನಗು ನಕ್ಕಿರಬಹುದೆಂಬ ಊಹೆ ಆ ಗೃಹಸ್ಥರಿಗೆ ಹೊಳೆದಿರಲಾರದು. (ಪು. ೧೨೭).

ನನ್ನಂತಹ ಶಿಕ್ಷಕರ ಸಾಹಿತ್ಯ ಬೋಧನೆಯಲ್ಲಿ ಸಾಮಾನ್ಯವಾಗಿ ಅದು ಪದ್ಯವೇ ಆಗಲಿ, ಗದ್ಯವೇ ಆಗಲಿ, ನಾಟಕವೇ ಆಗಲಿ ಅಥವಾ ಇನ್ನೊಂದೇ ಆಗಲಿ ಎಲ್ಲವನ್ನೂ ಒಂದೇ ರೀತಿ ಬೋರು ಹೊಡೆಸುವ ನೀತಿಪಾಠ ಮಾಡುತ್ತಿದ್ದಿದ್ದು ಸರ್ವೇ ಸಾಮಾನ್ಯವಾಗಿತ್ತು. ಒಂದು ಸಣ್ಣ ಉದಾಹರಣೆ ಇಲ್ಲಿ ಅಪ್ರಸ್ತುತವಾಗಲಾರದು.

Robert Frost ಎಂಬ ಇಂಗ್ಲಿಷ್ ಕವಿಯ Road Not Taken ಎಂಬ ಪದ್ಯವಿದೆ. ನಡೆವ ಹಾದಿ ಎರಡಾಗಿ ಕವಲೊಡೆದಾಗ ಯಾವ ಹಾದಿಯನ್ನು ತುಳಿಯಬೇಕು ಎನ್ನುವ ಗೊಂದಲಕ್ಕೆ ನಿರೂಪಕ ಬಿದ್ದಿದ್ದು ಎರಡನ್ನೂ ತುಳಿಯುವ ಆಸೆಯಿದ್ದರೂ ಸಹ ಅಸಹಾಯಕತೆಯಲ್ಲಿ, ಬಿಡಿಸಲಾಗದ ದ್ವಂದ್ವದಲ್ಲಿ ಸುಮ್ಮನೆ ನಿಂತಿದ್ದಾನೆ. ಅಳೆದು ಸುರಿದು ಕೊನೆಗೂ ಒಂದನ್ನು ತುಳಿದ ಮೇಲೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ದರ್ದು ಅವನಿಗೆ. ಕೊನೆಯ ಚರಣ ಹೀಗಿದೆ:

Two roads diverged in a wood, and I —
I took the one less traveled by,
And that has made all the difference.

ಇಲ್ಲಿ ಮೊದಲನೆಯ ಸಾಲಿನ ಕೊನೆಯಲ್ಲಿ and I ನಂತರ ಒಂದು ಹೈಫನ್ ಇದೆ. ಅದು ದ್ವಂದ್ವವನ್ನು ಸೂಚಿಸಲೆಂದು ಬಳಸಿಕೊಂಡಿರುವ ಒಂದು ಚಿಹ್ನೆ. ಆದರೆ ಒಂದೇ ಒಂದರ ಆಯ್ಕೆ ಎನ್ನುವುದು ಎಷ್ಟು ಅನಿವಾರ್ಯವೋ, ಅದನ್ನು ನಂತರದಲ್ಲಿ ಸಮರ್ಥಿಸಿಕೊಳ್ಳುವುದು ಸಹ ಅಷ್ಟೇ ಅನಿವಾರ್ಯ. ಹಲಮಂದಿ ನಡೆದಿರದ ಹಾದಿಯನ್ನು ತಾನು ಆಯ್ಕೆ ಮಾಡಿಕೊಂಡೆ ಎಂದು ಮೇಲರಿಮೆಯ ನೆಲೆಯಲ್ಲಿ ಸಮರ್ಥಿಸಿಕೊಂಡರೂ ಸಹ ಅದು ಸತ್ಯವಿರಲಾರದು ಎಂದವನಿಗೆ ಗೊತ್ತು. ನಡೆದಿರದ ಹಾದಿ ಹೇಗಿದೆ ಎನ್ನುವುದು ಅನುಭವಕ್ಕೆ ದಕ್ಕಲು ಹೇಗೆ ಸಾಧ್ಯ? ಆ ಸಮರ್ಥನೆ ಪೊಳ್ಳಿರಬಹುದು ಎನ್ನುವುದು ಅರಿವಿಗೆ ಬರುವ ಮುನ್ನವೇ, ‘that has made all the difference’ ಎಂಬ ಇನ್ನಷ್ಟು ಪುಷ್ಟಿ ನೀಡುವ ಪ್ರಯತ್ನವಿದೆ. ಹಾದಿಯ ಆಯ್ಕೆ ಅಂತರಾತ್ಮಕ್ಕೆ  ಸಂಬಂಧಪಟ್ಟಿದ್ದು. ಯೋಚಿಸುವ ಮುಂಚೆಯೇ ಆಯ್ಕೆ ನಡೆದುಹೋಗಿರುತ್ತದೆ. ನಂತರ ಅದನ್ನು ಸಮರ್ಥಿಸಿಕೊಳ್ಳುವ ಹಂಗು ಇರುವುದು ಪ್ರಜ್ಞೆಗೆ, ತರ್ಕಕ್ಕೆ. ತುಳಿದ ಹಾದಿಯ ಆಯ್ಕೆಯನ್ನು ಇಷ್ಟೆಲ್ಲಾ ಹೇಳಿ ಸಮರ್ಥಿಸಿಕೊಂಡರೂ ಸಹ ಅವನ ಮನಸ್ಸಿನ್ನೂ road not taken ಕಡೆಯೇ ಇದೆ. ಪದ್ಯದ ಶೀರ್ಷಿಕೆಯೇ ಅದು. ಬದುಕಿನಲ್ಲಿ ಎದುರಾಗುವ ಆಯ್ಕೆಯ ಮತ್ತು ನೈತಿಕ ಬಿಕ್ಕಟ್ಟನ್ನು ಪದ್ಯ ಹಿಡಿದಿಡಲು ಪ್ರಯತ್ನಿಸುತ್ತದೆ.

ಇಷ್ಟಾದರೂ ಮೌಲ್ಯಮಾಪನಕ್ಕೆ ಹೋದಾಗ ಒಂದೇ ರೀತಿಯ ಉತ್ತರವನ್ನು ಹಲವರು ಬರೆದಿದ್ದು ನನ್ನನ್ನು ಬೆಚ್ಚಿ ಬೀಳಿಸಿತ್ತು. ಕವಿಯ ಎದುರಿಗೆ ಬದುಕಿನ ಎರಡು ಆಯ್ಕೆಗಳಿದ್ದವು. ಒಂದೋ ಕುಲಕಸುಬಾದ ವ್ಯವಸಾಯಕ್ಕೆ ಅಂಟಿಕೊಳ್ಳುವುದು, ಇಲ್ಲಾ ಧೈರ್ಯ ಮಾಡಿ ಕವಿಯಾಗುವುದು. ಕೊನೆಗೆ ಕವಿಯೇ ಆದನಂತೆ, ಅದರ ಬಗ್ಗೆ ಅವನಿಗೆ ತೃಪ್ತಿ ಇದೆಯಂತೆ! ಬಜಾರು ಗೈಡುಗಳ ಮಹಿಮೆ ಇದು, ಕರ್ಮ!

ಷೇಕ್ಸ್ಪಿಯರ್ ಹೋಗಲಿ, ನಾಟಕ ಎನ್ನುವುದು ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ ಎನ್ನುವುದನ್ನೇ ಮರೆಯುವುದರಲ್ಲಿ ಶಿಕ್ಷಕರೇ ಮುಂದು. ನಾಟಕವನ್ನು ಆಡಬೇಕು, ಇಲ್ಲದಿದ್ದರೆ ಆಡಿಸಬೇಕು. ಅದನ್ನು ಪಾಠ ಮಾಡಬಾರದು, ಯಾಕೆಂದರೆ ರಂಗಶಿಕ್ಷಣಕ್ಕೆ ನಾಟಕ ಕೇವಲ ಒಂದು ನೆಪ. ಜನ್ಮದಲ್ಲಿ ಯಾವತ್ತೂ ನಾಟಕವನ್ನೇ ನೋಡಿರದ ಮಂದಿ ನಾಟಕ ಪಾಠ ಮಾಡುವುದು ಒಂದು ಮಹಾ ಘೋರವೇ.

ವಿಜಯ್ ತೆಂಡೂಲ್ಕರರ Silence! The Court is in Session ಎಂಬ ಸಾಮಾಜಿಕ ನಾಟಕವನ್ನು ಒಮ್ಮೆ ನಾನು ನಿರ್ವಹಿಸಬೇಕಿತ್ತು. ಒಂದೆರಡು ಗಂಟೆಗಳಲ್ಲಿ ನಾಟಕದ ಚರಿತ್ರೆ ಇತ್ಯಾದಿಗಳ ಬಗ್ಗೆ ಕೊರೆದ ಮೇಲೆ ಆರು ಗುಂಪುಗಳಾಗಿ ಮಾಡಿ ಪ್ರತಿಯೊಂದು ತರಗತಿಯಲ್ಲಿ ನಾಟಕವನ್ನು ಓದಿಸುತ್ತಿದ್ದೆ. ಸುಮಾರು ಹತ್ತು ಶನಿವಾರಗಳ ಮಧ್ಯಾಹ್ನ ನಾಟಕ ತೋರಿಸಲು ಅವರನ್ನು ರಂಗಶಂಕರಕ್ಕೆ ಕರೆದೊಯ್ದಿದ್ದೆ. ನಡುವೆ ನಾನು ಯಾವ ಕಾರಣಕ್ಕೂ ಪ್ರವೇಶಿಸಲಿಲ್ಲ. ಮೂರು ತಿಂಗಳ ನಂತರ ಬಯಲು ರಂಗಮಂದಿರದಲ್ಲಿ ಅತ್ಯಂತ ಕಮ್ಮಿ ವೇಷಭೂಷಣದ ಸಹಿತ ಇಡೀ ನಾಟಕವನ್ನು ತಮ್ಮದೇ ಶ್ರಮದ ಮೇಲೆ ರಂಗದ ಮೇಲೆ ಅವರು ತಂದಾಗ ನನ್ನ ಕಣ್ಣಲ್ಲಿ ನೀರೂರಿತ್ತು. ಭಾವಕ್ಕೆ ತಕ್ಕ ಧ್ವನಿಯ ಏರಿಳಿತ, ಪ್ರಸಾಧನ ಇತ್ಯಾದಿಗಳ ಬಗ್ಗೆ ನಾನು ಅಪ್ರಾಣೆ ಯಾವ ತರಬೇತಿಯನ್ನೂ ಒದಗಿಸಿರಲಿಲ್ಲ.

ಕೊನೆಯಲ್ಲಿ ಒಂದು ಮಾತು. ಶಾರದಾಪ್ರಸಾದರು ತಮ್ಮ ಲೇಖನಕ್ಕೆ ಮುಕ್ತಾಯ ಹಾಡಿರುವ ರೀತಿ ಮಾತ್ರ  ನಾವು ಷೇಕ್ಸ್ಪಿಯರನನ್ನು ಪಾಠಿಸುವ ರೀತಿಗೆ ಸಾರಾಂಶದಂತಿದೆ:

ಶೇಕ್ಸ್ಪಿಯರ್, ನೀ ಬಂದೆ,
ಹೊಸ ಭುವನವೊಂದನೆ ತೆರೆದೆ ಕಣ್ಮುಂದೆ,
ಆದರೀ ಶಿಕ್ಷಕರ ಕೈಯಲ್ಲಿ ಸಿಕ್ಕಿಬಿದ್ದೆಯಲ್ಲೋ ತಂದೆ!

***

ಬೌದ್ಧಿಕ ಋಣ
-ಶಾ. ಬಾಲುರಾವ್ (ಸಂ.) ಷೇಕ್ಸ್ಪಿಯರಿಗೆ ನಮಸ್ಕಾರ  ಹೊಸದಿಲ್ಲಿ: ಕನ್ನಡ-ಭಾರತೀ. ೧೯೬೬
-ಅದೇ ಕೃತಿಯಲ್ಲಿ, ವಿ. ಸೀತಾರಾಮಯ್ಯ, ‘ಷೇಕ್ಸ್ಪಿಯರ್ — ಒಂದು ನೋಟ’.  ಪು. ೧೧-೨೨.
– ಅದೇ ಕೃತಿಯಲ್ಲಿ, ಎಚ್. ವೈ. ಶಾರದಾಪ್ರಸಾದ್. ‘ಶಿಕ್ಷಕರ ಕೈಯಲ್ಲಿ ಷೇಕ್ಸ್ಪಿಯರ್’. ಪು. ೧೨೫-೧೩೦.

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ