Advertisement
ಜ್ಯೋತಿ ಬರೆದ ದೀಪಾವಳಿ ಕವಿತೆ

ಜ್ಯೋತಿ ಬರೆದ ದೀಪಾವಳಿ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ನೀವು ಬರೆದ, ಅನುವಾದಿಸಿದ ಕವಿತೆಗಳನ್ನು ನಮಗೆ ಕಳುಹಿಸಿ ಕೊಡಬಹುದು. ದಿನದ ಕವಿತೆ ಬರೆದವರು ಜ್ಯೋತಿ ಗುರುಪ್ರಸಾದ್.

ದೀಪ ಬೆಳಗುವ ಹೊತ್ತು

ದೀಪ ಬೆಳಗುವ ಹೊತ್ತು
ಒಡಲೇ ಸೊಡರಾಗಿ
ತುಟಿ ನಗುವೇ ಕುಡಿ ಬತ್ತಿಯಾಗಿ
ಕಣ್ಣ ಕಾಂತಿ ಎಣ್ಣೆಯಾಗಿ
ಉರಿವ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಕತ್ತಲೆಯ ಕುಡಿ ಕುಡಿದು
ಮತ್ತಾದ ಬೆಳಕಿನಲಿ
ಮುತ್ತಾದ ಮಾತು ಹುಟ್ಟಿ
ಬೆಸೆವ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಅಂಗಳದ ಹಕ್ಕಿ ಗೂಡೇ
ಗೂಡು ದೀಪ ವಿಸ್ಮಯ!
ಗುಟುಕು ಕೊಡುವ ತಾಯಿಹಕ್ಕಿ
ಕಲರವ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಕತ್ತಲೆ ಕೋಣೆ ನೆನಪು
ನಲ್ಲ-ನಲ್ಲೆ ಮುದ್ದುಗರೆದು
ದೀಪ ಹಚ್ಚದೆಯೇ
ಬೆಳಗಿದ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಹೂ ಅರಳುವ ಹೊತ್ತು
ಮನಸ ಮಗುವಿನ ಹುಟ್ಟು
ನಾವೆ ನಂದಾದೀಪ
ನಾವೆ ಒಲವು…..

About The Author

ಜ್ಯೋತಿ ಗುರುಪ್ರಸಾದ್

ಜ್ಯೋತಿ ಗುರುಪ್ರಸಾದ್ ಮೈಸೂರು ಜಿಲ್ಲೆಯ ಟಿ.ನರಸೀಪುರದವರು. ಸದ್ಯ ಕಾರ್ಕಳದಲ್ಲಿ ವಾಸಿಸುತ್ತಿದ್ದಾರೆ. ಹಲವು ಕಾಲೇಜುಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ಚುಕ್ಕಿ(ಕವನ ಸಂಕಲನ), ಮಾಯಾ ಪೆಟ್ಟಿಗೆ (ಕವನ ಸಂಕಲನ), ಈ ಕ್ಷಣ  (ಅಂಕಣ), ಕಣ್ಣ ಭಾಷೆ – (ಅಂಕಣ), ಜೋಲಿ ಲಾಲಿ  (ಅಂಕಣ)  

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ