ಆ ದಾರಿಯೊಳಾಗ ನಡಕೊಂತ ಹೋಗೊದಂದ್ರ ಅದೊಂಥರಾ ಸಮಾಧಾನ ಅನ್ಸೋದು, ಆಕಡೆ ಈಕಡಿಗೆ ಹಸರು, ಗಿಡಗಳು ಅದರಾಗೂ ಹುಂಚಿ ಹೂವು ಬಿಟ್ಟಾಗ ಅದನ್ನ ಹರದು ತಿನ್ನಾಕ ಇನ್ನಷ್ಟು ಖುಷಿ ಆಗ್ತಿತ್ತು. ಆ ದಾರಿ ನಡಕ ಹೋದಾಗೆಲ್ಲಾ ಆ ಒಡಪಿನ ಕಟ್ಟಿ ಕಾಣ್ತಿತ್ತು. ಊರು ಬಿಟ್ಟು ದೂರ ಇದ್ದ ಆ ಕಟ್ಟಿ ಹತ್ರ ಗೌರಮ್ಮಜ್ಜಿ ಯಾವಾಗಲೂ ಇರ್ತಿದ್ಲು. ಆಕಿಗೆ ಗೊತ್ತಿರುವಷ್ಟು ಒಡಪುಗಳು ಆ ಊರಿನ್ಯಾಗ ಯಾರಿಗೂ ಗೊತ್ತಿರ್ಲಿಲ್ಲ, ಊರಾಗ ಯಾವ್ದನ ಮದುವಿ ಆದ್ರ ಅಕಿನ ಎಲ್ಲಾರೂ ಕರಿತಿದ್ರು, ಹಂಗಾಗಿ ಆಕಿ ಒಡಪು ಗೌರಮ್ಮ ಅಂತ ಕರಿತಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಹನ್ನೊಂದನೆಯ ಬರಹ
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದಲೇ ಬೇಕು.
ಪದ್ಯ ಹೇಳಿ ಸರಸ್ವತಿ ಮಿಸ್ ಕ್ಲಾಸಿಂದ ಹೊರಗ್ ಹೋದ್ರು. ಆದ್ರೆ ಅವರ ಪಾಠ, ಸೀಮನ್ ದಿ ಬೊವಾ, ಹೆಣ್ಣು, ಹುಡುಗಿ ಅವ್ವ ಅತ್ತಿ ಇವರೆಲ್ಲರ ಚಿತ್ರಗಳೂ ಮತ್ತೆ ಮತ್ತೆ ತಲಿ ತುಂಬಿಕೊಂಡು ಮತ್ತದೇ ಪ್ರಶ್ನೆ ಕಾಡತೊಡಗಿತು.
ಆಕಿ ಅಂದ್ರೆ?!
ಇಷ್ಟೆಲ್ಲಾ ಕಥೆಗಳ ನಡುವೆ, ಇಷ್ಟೆಲ್ಲಾ ಪದ್ಯ ಗದ್ಯಗಳ ನಡುವೆ ಇರೊ ಆಕಿ ಯಾರು?
ಆಕಿ ನನ್ನೊಳಗೂ ಇರಬಹುದಾ ಅನ್ನೋ ಪ್ರಶ್ನೆ ಮತ್ತೆ ಕಾಡಿತು. ಸುತ್ತ ದಿನಾಲೂ ನೋಡ್ತಿದ್ದ ಹೊಲ ಅದರಾಗಿನ ಹಸರು, ಸಡುವಿಲ್ದಂಗ ಹೊಲದಾಗ ದುಡಿತಿದ್ದ ಹೆಣ್ಮಕ್ಕಳು, ಅವ್ವ, ಅತ್ತಿ, ಜೂನಿ ಬೀರಮ್ಮ, ಬ್ಯಾಟಿ ಬಸಮ್ಮ, ಸರಸ್ವತಿ ಮಿಸ್, ಗಂಗಿ, ಗೌರಿ, ಸಾವಿತ್ರಿ ಬಾಯಿ ಫುಲೆ ಇವರೆಲ್ಲಾರೊಳಗೂ ಆಕಿ ಅದಾಳಲ? ಅಂತ ಮತ್ತ ಮತ್ತ ಕಾಡೊ ಪ್ರಶ್ನೆ ನಾ ನನಗ್ ನಾನೇ ಕೇಳ್ಕೊಂತ, ಸಾಲಿಯಿಂದ ಸೀದಾ ಹಳ್ಳದ ಕಡಿಗೆ ಹೋಗೊ ದಾರಿ ಹಿಡದೆ. ಆ ದಾರಿಯೊಳಾಗ ನಡಕೊಂತ ಹೋಗೊದಂದ್ರ ಅದೊಂಥರಾ ಸಮಾಧಾನ ಅನ್ಸೋದು, ಆಕಡೆ ಈಕಡಿಗೆ ಹಸರು, ಗಿಡಗಳು ಅದರಾಗೂ ಹುಂಚಿ ಹೂವು ಬಿಟ್ಟಾಗ ಅದನ್ನ ಹರದು ತಿನ್ನಾಕ ಇನ್ನಷ್ಟು ಖುಷಿ ಆಗ್ತಿತ್ತು. ಆ ದಾರಿ ನಡಕ ಹೋದಾಗೆಲ್ಲಾ ಆ ಒಡಪಿನ ಕಟ್ಟಿ ಕಾಣ್ತಿತ್ತು. ಊರು ಬಿಟ್ಟು ದೂರ ಇದ್ದ ಆ ಕಟ್ಟಿ ಹತ್ರ ಗೌರಮ್ಮಜ್ಜಿ ಯಾವಾಗಲೂ ಇರ್ತಿದ್ಲು. ಆಕಿಗೆ ಗೊತ್ತಿರುವಷ್ಟು ಒಡಪುಗಳು ಆ ಊರಿನ್ಯಾಗ ಯಾರಿಗೂ ಗೊತ್ತಿರ್ಲಿಲ್ಲ, ಊರಾಗ ಯಾವ್ದನ ಮದುವಿ ಆದ್ರ ಅಕಿನ ಎಲ್ಲಾರೂ ಕರಿತಿದ್ರು, ಹಂಗಾಗಿ ಆಕಿ ಒಡಪು ಗೌರಮ್ಮ ಅಂತ ಕರಿತಿದ್ರು. ಆಕಿ ನೋಡಾಕ ದುಂಡನ ಮುಖ, ದುಂಡನ ಮೂಗು, ಸಣ್ಣ ಕಣ್ಣು, ಉದ್ದ ಜಡಿ, ಕೆಂಪಗ ಗಿಡ್ಡಕ ಇದ್ಲು, ನಕ್ಕಾಗ ಮುಖ ಎಲ್ಲಾ ಅರಳಿ ಸೂರ್ಯಕಾಂತಿ ಕಂಡಂಗ ಕಾಣತಿತ್ತು. ನಾವು ಸಾಲಿ ಬುಟ್ಟು ಹೋದಾಗೆಲ್ಲ ಮುಖದಾಗ ನಗು ತುಂಬಿಕ್ಯಂಡು ಮಾತಾಡಸಾಕಿ.
‘ಅಲಲೇ…ಶಿವಮ್ಮ..
ಸಾಲಿ ಓದಾದು ಮುಗಿತ್ಯ… ಅಂತ ಮಾತಾಡ್ತಾ ಮಾತಾಡ್ತಾ ಒಂದೆರಡು ಹುಣಸಿಹಣ್ಣು ಕೈಯ್ಯಾಗಿಡಾಕಿ.
ಒಡಪು ಗೌರಮ್ಮಜ್ಜಿಗೆ ಹಿಂದ ಮುಂದ ನೋಡಿಕ್ಯನಾಕಂತ ಯಾರೂ ಇರಲಿಲ್ಲ. ಅದಕಾ ಆಕಿ ದೇವರನ್ನ ತನ್ನ ಗಂಡ ಅನಕಂಡು ಕೆಂಪು ಮೂತಿ ಸರ ಕಟ್ಟಿಗ್ಯಂಡಿದ್ಲು. ಆಕಿ ಹಣಿಮ್ಯಾಗಿನ ದೊಡ್ಡ ಕುಂಕುಮ ನೋಡಿದಾಗೆಲ್ಲ ದೇವರನ್ನ ನೋಡಿದಂಗಾಗಿ ಅಂಜಿಕಿ ಬರ್ತಿತ್ತು. ಆದ್ರ, ಆಕಿ ಮುಖದಾಗಿನ ನಗು, ನೀರು ಹರದಂಗ ಹರಿತಿದ್ದ ಆಕಿ ಮಾತು ಎಲ್ಲಾರ್ನೂ ಆಕಿ ಕಡಿಗೆ ಸೆಳಿತಿತ್ತು.
ಅವತ್ತು…
ಆಕಿ ಗುಂಗಿನ್ಯಾಗ ಹೊಲದ ದಾರಿ ಹಿಡದು ಹೊಂಟಿದ್ದ ನನಿಗೆ ಒಡಪಿನ ಕಟ್ಟಿ ಹತ್ರ ಹೋಗ್ತಿದ್ದಂಗ ಗೌರಮ್ಮಜ್ಜಿ ನಕ್ಕಂತ ಕರದು
‘ಏಯ್…ಶಿವಮ್ಮ ಯಾರನ್ನ ಹುಡುಕಾಕತಿ ಹಿಂಗ?’ ಅಂತ ಕೇಳಿದ್ದೆ ತಡ
‘ಗೌರಮ್ಮಜ್ಜಿ ನಾ ಆಕಿನ ಹುಡುಕಾಕತಿದ್ದೆ ‘
‘ಯಾರಬೇ ಆಕಿ?’
ಅಜ್ಜಿ ಕೇಳಿದ್ದಕ್ಕ ಉತ್ತರ ಗೊತ್ತಿರ್ಲಿಲ್ಲ ಅದಕ್ಕ ನಕ್ಕಂತ
‘ನಂಗೂ ಗೊತ್ತಿಲ್ಲ ಆಕಿ ಎಲ್ಯದಾಳಂತ ಆದ್ರ, ಆಕಿನ ದಿನಾ ಹೊರಾಗ ಒಳಾಗ ಹುಡುಕಿ ಹುಡುಕಿ ಸಾಕಾತು ಅಜ್ಜಿ!’
ನನ್ನ ಮಾತಿಗೆ ಅಜ್ಜಿ ಮುಗುಳ್ನಕ್ಕು
‘ಹುಡುಕು… ಹುಡುಕು… ಒಂದಿನ ಆಕಿ ಸಿಗ್ತಾಳ ನಿನಗ, ನನ್ ಹಂತ್ಯಾಕ ಆಕಿ ಇಲ್ಲ ಬರೀ ಒಡಪುಗಳದಾವ ನೋಡವ’ ಅಂದು ಮತ್ತೆ ನಗತೊಡಗಿದ್ಲು.
‘ಅಜ್ಜಿ..! ನೀ ಒಡಪು ಹೆಂಗ್ ಕಟ್ಟತಿ? ಅ ಅಂಬ ಅಕ್ಷರ ಕಲತಿಲ್ಲ, ಸಾಲಿಗೂ ಹೋಗಿಲ್ಲ ಆದ್ರ ಈ ಸಣ್ಣ ಸಣ್ಣ ಒಡಪುಗಳ್ನ ಅಷ್ಟು ಚೆಂದ ಹೆಂಗ್ ಕಟ್ಟತಿ. ಮತ್ತ ಈ ಮದುವಿ ಮನ್ಯಾಗ ಏನೇನ್ ನಡಿತೈತಿ ಎನ್ ಕತಿ ಅಂತ ನಂಗೂ ಹೇಳಾssss’
ಅಜ್ಜಿ ನನ್ನ ಮಾತನ್ನ ಕೇಳಿದ್ದ ತಡ!

ನೋಡವಾ… ಮದುವಿಯೊಳಾಗ ಹೆಣ್ಣಿನ್ ಕಡೆ ಅಷ್ಟು ಕೆಲಸಾ ಇರಂಗಿಲ್ಲ ಒಂದು ವರನೀರು ಹಾಕಾದಿರುತ್ತ ಆದ್ರ ಗಂಡಿನ ಕಡೆ ಭಾಳ ಶಾಸ್ತ್ರ ಸಂಪ್ರದಾಯಗಳಿರ್ತಾವ. ಹೆಂಗಂದ್ರ ಮೊದಲು ಮದುವಿ ಪತ್ರ ಕಟ್ಟಸಾದಿರುತ್ತ ಅವತ್ತು ಲಗ್ನ ಪತ್ರಿಕೆಗೆ ಪೂಜೆ ಮಾಡಿ ಊರಿಗೆ ಸಂಬಂಧಿಕರಿಗೆ ಹಂಚತಾರ. ಆಮ್ಯಾಗ ಮದುವೆ ನಾಳೆ ಅನ್ನಂಗಿದ್ದಾಗ ಇವತ್ತು ದೇವರಹುಟ್ಟು ಅಂತ ಗಂಡಿನ ಮನ್ಯಾಗ ಮಾಡಬೊಕು. ಅವತ್ತು ಮೊದಲು ಎಲ್ಲಾರೂ ಸೇರಿ ಕಳಸಾ ತಗಂಡು ಅಂದ್ರ ತಪ್ಪಲ ಅಂತ ಒಂದು ರೀತಿಯ ಎಲೆಗಳ ರಾಶಿನ ಬಂಡ್ಯಾಗ ಅಕ್ಯಂಬಂದು ಮನಿಮುಂದ ಚಪ್ಪರದ ಶಾಸ್ತ್ರ ಮಾಡತಾರ, ಆಮ್ಯಾಗ ಚಟ್ಟು ಬಡ್ಯಾದಂತ ಇರುತ್ತ, ಹುಡುಗಗ ಮಾವ ಆಗ್ತಾರಲ ಅವರss ಈ ಕಾರ್ಯ ಮಾಡಬೊಕು. ಕೈಗೆ ಕೆಂಬಣ್ಣದ ಸುರಗಿ ಹಚ್ಚಿ ಎರಡೂ ಕೈಯಿಂದ ಮನಿ ಸುತ್ತಲ ಗ್ವಾಡಿಗೆ ಕೈಯಿಂದ ಐದು ಕೆಂಪು ಬೆರಳು ಗ್ವಾಡಿ ಮ್ಯಾಗ ಕಾಣಂಗ ಚಿತ್ರ ಮೂಡಸ್ತಾರ. ಇದಕ್ಕ ಚಟ್ಟ್ ಬಡ್ಯಾದು ಅಂತ ಕರೀತಿವಿ. ಮತ್ತ ಅವತ್ತು ರಾತ್ರಿನೇ ಹೆಣ್ಣಿನ ಕಡೆವ್ರು ಬಂದು ರಾತ್ರಿ ಇಳೇವು ಇಡೊ ಶಾಸ್ತ್ರ ಮಾಡತಾರ, ಗಂಡಿನ ಕಡೆವ್ರು ಹೆಣ್ಣಿನ ಕಡೆವ್ರು ಹುಡುಗಿಗೆ ಸೀರೆ, ವಾಲಿ, ಗೆಜ್ಜಿ ಕೊಟ್ಟು ಹೂ ಮುಡಸ್ತಾರ. ಮರುದಿನ ತಾಳಿ ಕಾರ್ಯಕ್ರಮ ಇರುತ್ತ. ಈ ದಿನ ಮೊದಲು ಸುರಗಿ ಸುತ್ತಾದಿರುತ್ತ, ಅಂದ್ರ ಚಪ್ಪರದ್ ಕೆಳಾಗ ಎರಡು ಮಣಿ ಇಟ್ಟು ಅದರ್ಮ್ಯಾಗ ಗಂಡು ಹೆಣ್ಣನ್ನ ಕುಂದ್ರಿಸಿ ನೀರ್ ಹಾಕಿ ಆಮ್ಯಾಗ ತಾಳಿ ಕಟ್ಟತಾರ. ತಾಳಿ ಕಟ್ಟಿದ ಮ್ಯಾಗ ಅಕಿನ ಮನಿ ತುಂಬಿಸಿಗ್ಯಂತಾರ. ಆಗ ಹೊಸ್ತಿಲಿಗೆ ಸೇರಿಟ್ಟು ಮನಿ ತುಂಬಿಸಿಗ್ಯಂತಾರ. ಹಿಂಗ್ ಸೇರು ಒದ್ದು ಬರುವಾಗ ಆಕಿ ಗಂಡನ ಹೆಸರು ಒಡಪಿಟ್ಟು ಹೇಳಬೇಕು’
ಗೌರಮ್ಮಜ್ಜಿ ಇದನ್ನೇಲ್ಲಾ ಹೇಳುವಾಗ ನನ್ನ್ ಕೈ ಗಲ್ಲದ ಮ್ಯಾಗ ಕುಂತಿತ್ತು, ಒಡಪು ಹೇಳಾದು ಅಂದಕೂಡ್ಲೆ ಇನ್ನಷ್ಟು ಕುತೂಹಲ ಹುಟ್ಟಿದಂಗಾಗಿ ಕೇಳೇಬಿಟ್ಟೆ.
‘ಅಜ್ಜಿ! ನಾ ಕಾಪಿ ಪೆನ್ನು ತಗಂಡು ಒಂದಷ್ಟು ಒಡಪು ಬರಕೊತೀನಿ, ಒಡಪು ಹೇಳಾ… ಒಡಪು ಹೇಳಾ..’ ಅಂತ ಗಂಟುಬಿದ್ದೆ ಅದಕ್ಕೆ ಅಜ್ಜಿ ನಗ್ತಾ, ‘ಬರಕವಾ ಬರಕ… ಮುಂದ ಗಂಡ ಬಂದಾಗ ಹೇಳುವಂತಿʼ ಅಂತ ಮತ್ತಷ್ಟು ಜೋರಾಗಿ ನಕ್ಕು ಹಾಡಿನಂಗ ಒಡಪು ಹೇಳಾಕ ಶುರು ಮಾಡಿದ್ಲು.
ಮಲ್ಲಿಗಿ ಅಂಗಿ ಮೈಯ್ಯಾಗ
ಮಲ್ಲಿಗಿ ಹೂವ ಕೈಯ್ಯಾಗ
ಮಲ್ಲಮ್ಮನಂತಾಕಿ ನನ್ನ ಕರಕಂಡು
ಮಲ್ಲಿಕಾರ್ಜುನ ದೇವಸ್ಥಾನಕ್ಕ ಹೋಗ್ತಾನ
….
ಶ್ರೀಗಂಧದ ತೋಟ
ಸಿರಿಧಾನ್ಯದ ಊಟ
ಸಿದ್ಧಾರೂಢನ ಮಠದಾಗ ಕುಂತಗಂಡು
ಶಿವನ ಪೂಜೆ ಮಾಡತಾನ
…
ಅತ್ತಿ ಹೆಸರು ಅತ್ತಿ ಹೂವ
ಮಾವನ ಹೆಸರು ಮಲ್ಲಿಗೆ ಹೂವ
ನನ್ನ ಹೆಸರು ಸುಗಂಧದ ಹೂವ
ಸುಗಂಧದ ಸುತ್ತ ಸುಳದಾಡತಾನ
…
ಅರ್ದದೊಟು ಅಡಗಿ ಮನಿ
ಪಾವಲೇಟು ಪಡಸಾಲಿ
ಪಡಸಾಲ್ಯಾಗ ಕುಂತು ಪಗಡಿ ಆಡತಾನ
….
ಬಾಯಿಯ ಕಟ್ಟಿ ಮೇಲೆ
ಬಂಗಾರದ ಒಲಿ ಹೂಡಿ
ಬಂಗಾರದ ಹಂಚಿಟ್ಟು
ಬೆಳ್ಳಿ ಅಕ್ರ ಮಾಡಿ
ಸಕ್ಕರಿ ಸಾರು ಮಾಡಿ
ಅವಲಕ್ಕಿ ಅನ್ನ ಮಾಡಿ
ಊಟಕ್ಕ ಬಾ ಅಂದ್ರ
ಹುಬ್ಬಳ್ಳಿ ನಾಟಕಕ್ಕ ಹೋಗ್ತಾನ
*****
ಗೌರಮ್ಮಜ್ಜಿ ಒಡಪು ಹೇಳ್ತಾ ಹೇಳ್ತಾ ಒಮ್ಮೇಲೆ ಉಸರು ತಗೊಂಡು ಇಷ್ಟದಾವ ನೋಡವಾ ಇನ್ನಾ ಭಾಳ ಕಟ್ಟಿನಿ ಅಂತ ಮತ್ತೆ ನಕ್ಕು ಗಲ್ಲ ಹಿಂಡಿದ್ಲು.
ಒಡಪು ಗೌರಮ್ಮಜ್ಜಿಗೆ ಹೇಳಿದ್ದು ಕೇಳಿ ನಗು ಬಂದು ನಾನು ಅವಳೊಂದಿಗೆ ನಕ್ಕೆ. ಹಾಗೆ ಇಷ್ಟೆಲ್ಲಾ ಒಡಪು ಹೆಂಗ್ ಕಟ್ಯಾಳೀಕಿ ಅಂತ ಆಶ್ಚರ್ಯ ಆಯ್ತು. ಹಂಗ ಅಜ್ಜಿ ಮದುವಿ ಬಗ್ಗೆ ಅದರ ಸಂಪ್ರದಾಯಗಳ ಬಗ್ಗೆ ಹೇಳಿದ್ದು ಕೇಳಿ
ಮನ್ಯಾಗಿದ್ದ ಬುಕ್ಕಿನೊಳಾಗ ಪೂರ್ಣಚಂದ್ರ ತೇಜಸ್ವಿ ಅವರು ಬರದಿದ್ದ ಸಾಲುಗಳು ನೆನಪಾದ್ವು ‘ಮದುವೆ ಎಂದೂ ಮಹತ್ತರ ಘಟನೆಯಲ್ಲ. ಅನಂತರದ ಬದುಕು ಮುಖ್ಯವಾದುದು’ ಅಂತ. ಅದನ್ನ ಕೇಳಿದ ಅಜ್ಜಿ,
‘ನೋಡವಾ ಮದುವಿ ಅನ್ನಾದು ಆಡಂಬರ, ಚಪ್ಪರ, ಊಟ ಜಾತಿ ಇದನ್ನೆಲ್ಲಾ ಮೀರಿ ಎರಡು ಮನಸ್ಸುಗಳು ಜೊತೆಯಾಗಿ ಸಾಗೋದು ಅಷ್ಟ!

ಮೊದಲಿನಿಂದ ಈ ಹಬ್ಬ ಹರಿದಿನಗಳು ಬರೊದು ನಾಕುಮಂದಿ ಸೇರಿ ಕಷ್ಟ ಸುಖ ಹಂಚಿಗ್ಯಂಡು ಬದುಕಿನ ಕಸುವನ್ನ ಮತ್ತೆ ಪಡಕನಾಕ, ಹಾಡು ಒಡಪು ಕಟ್ಟಿ ಮನಸ್ಸು ತುಂಬಿ ನಗಾಕ,ಆದ್ರೀಗ ಎಲ್ಲಾ ರೊಕ್ಕದ ಮ್ಯಾಗ ನಡಿತೈತಿ’ ಅಂತಂದು ಸುಮ್ಮನಾದಳು.
ಅವಳ ಮಾತು ನಿಜ ಅನ್ನಿಸ್ತು. ಅವಳೊಳಾಗ ನಾ ಹುಡುಕ್ತಿದ್ದ ಆಕಿಯ ಒಂದು ಗೆರೆ ಮಿಂಚಿದಂಗಾತು!

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
