ಮೂರ್ತಿ ಚಕ್ಕನೆ ಎದ್ದವನೇ ನನ್ನನ್ನು `ಲೇ ಆ ಕಡಿಂದ ಓಡಿ ಬಾರೋ’ ಅಂತ ನನಗೆ ಕೂಗಿ ಹೇಳುತ್ತಾ ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಬೇಗನೇ ಮೇಲೆದ್ದರೂ ಇದು ನಾನು ನೋಡಿದ್ದ ಮೊದಲ ಕಳ್ಳ ಹಾಗೂ ಕಳ್ಳತನವಾದ್ದರಿಂದ ಒಂಚೂರು ಗಲಿಬಿಲಿಗೊಂಡು ಅವರತ್ತ ತಕ್ಷಣ ಓಡಲಾಗಲಿಲ್ಲ. ಅವರಿಬ್ಬರೂ ಆಗಲೇ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ಉಸುರುಯ್ದುಕೊಂಡು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. `
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎಂಟನೆಯ ಕಂತು
ಸುಗ್ಗಿಯ ಕಾಲದಲ್ಲಿ ಹೊಲದ ಕೊಯ್ಲುಗಳು ಮುಗಿದು, ಕೊಯ್ದ ರಾಗಿಯ ಹುಲ್ಲನ್ನೆಲ್ಲಾ ಬಣವೆ ಒಟ್ಟಿ ಮಳೆಗಾಲ ಮುಗಿಯಿತು ಅನ್ನುತ್ತಿದ್ದಂತೆ ಕಣಗಾಲ ಶುರುವಾಗುತ್ತಿತ್ತು. ಹೊಲ, ತೋಟ ಅಥವಾ ಮನೆಯ ವಾರಾಸಿನಲ್ಲಿ ಒಂದು ನಿರ್ಧಿಷ್ಟ ಜಾಗದಲ್ಲಿ ಕಣ ಮಾಡಲಾಗುತ್ತಿತ್ತು. ಕಟಾವು ಮಾಡಿದ್ದ ಬೆಳೆಯ ಕೂಳೆಗಳನ್ನೆಲ್ಲಾ ಕೆತ್ತಿ ಆ ಕೆತ್ತಿದ ಜಾಗಕ್ಕೆ ನಾಳೆ ಕಣ ಮಾಡುವುದು ಅಂದಾದರೆ ಹಿಂದಿನ ದಿನವೇ ಕೈತೂಕದಲ್ಲಿ ಹೊತ್ತ ನೀರಿನಿಂದ ನೀರುಣಿಸಿ ಬಿಡಲಾಗುತ್ತಿತ್ತು. ಆ ರಾತ್ರಿ ಕಣ ತುಳಿಸಲೆಂದು ತಮ್ಮ ಮನೆಗಳ ದನಗಳ ಜೊತೆಗೆ ಹಳ್ಳಿಯಲ್ಲಿ ತಮಗೆ ಬೇಕಾದವರ ದನ ಮತ್ತು ಜನಗಳಿಗೆ ಹೇಳಿಕೊಳ್ಳುತ್ತಿದ್ದರು. ಮಾರನೆಯ ಬೆಳಿಗ್ಗೆ ಹದವಾಗಿ ನೆಂದಿರುತ್ತಿದ್ದ ಜಾಗದಲ್ಲಿ ದನಗಳನ್ನು ಸಾಲಾಗಿ ಕಟ್ಟಿ ಸುಮಾರು ಹೊತ್ತು ತುಳಿಸಲಾಗುತ್ತಿತ್ತು. ನೆಲ ಒಂದು ಹದಕ್ಕೆ ಕುಳಿತಿದೆ ಅಂತಾದ ಮೇಲೆ ದನಗಳನ್ನು ಬಿಚ್ಚಿ ನಂತರ ಹಸಿ ಸೋಗೆ ಗರಿಗಳು ಅಥವಾ ಕಾಡು ಗಿಡದ ಸೊಪ್ಪುಗಳನ್ನು ಅಗಲಕ್ಕೆ ದೊಡ್ಡದೊಂದು ಪೊರಕೆಯಂತೆ ಕಟ್ಟಿ ಅದನ್ನು ದನದ ಗೊರಸುಗಳು ಮಾಡಿರುತ್ತಿದ್ದ ಕುಳಿಗಳೆಲ್ಲಾ ಮಟ್ಟವಾಗಿ ಕೂರುವವರೆಗೂ ಕಣದಗಲಕೂ ಎಳೆಯಲಾಗುತ್ತಿತ್ತು. ನಾಲ್ಕೈದು ದಿನಗಳವರೆಗೆ ಒಣಗಲು ಬಿಟ್ಟು, ಆಮೇಲೆ ಪಕ್ಕದಲ್ಲೇ ತೋಡಿರುತ್ತಿದ್ದ ಬಗ್ಗಡದ ಗುಂಡಿಯಲ್ಲಿನ ಸಗಣಿಯ ನೀರಿನಿಂದ ಸಾರಿಸಲಾಗುತ್ತಿತ್ತು.
ಚಿಕ್ಕಪುಟ್ಟ ರೈತರು ಕೂಡ ತಮ್ಮದೇ ಆದ ಕಣಗಳನ್ನು ಮಾಡಿಕೊಳ್ಳುತ್ತಿದ್ದರು. ಮೇಟಿಗೆ ದನಗಳನ್ನು ಕಟ್ಟಿಯೋ ಇಲ್ಲಾ ರೋಣನ್ನು ಹೊಡೆದು ಹುಲ್ಲು ತುಳಿಸಿ ಕಾಳುಕಡ್ಡಿಗಳನ್ನೆಲ್ಲಾ ಹಸನು ಮಾಡುತ್ತಿದ್ದರು. ಹೀಗೆ ಹಸನಾದವುಗಳನ್ನು ರಾಶಿ ಮಾಡಿ, ನಂತರ `ರಾಶಿ ಪೂಜೆ’ ಮಾಡಿ ಮನೆ ತುಂಬಿಸಿಕೊಳ್ಳುತ್ತಿದ್ದರು. ಆಗ ಹಳ್ಳಿಯ `ಓಲಿಗ್ ಸ್ವಾಮಿ ಓಲ್ಗಾ’ದ ದನಿ ಹೊಲಮಾಳಗಳಗಳಲ್ಲೆಲ್ಲಾ ಅನುರಣಿಸುತ್ತಾ ಇಡೀ ಹೊಲಮಾಳಗಳು ಸಂಭ್ರಮದಲ್ಲಿ ಮುಳುಗುತ್ತಿದ್ದವು.
`ರಾಶಿ ಪೂಜೆ’ಗೂ ಮುಂಚಿನ ದಿನಗಳು ಕಣಗಾವಲಿನ ದಿನಗಳಾಗಿರುತ್ತಿದ್ದವು. ಕಣಗಳನ್ನು ಕಾಯಲು ಮಕ್ಕಳು ತುದಿಗಾಲಿನಲ್ಲಿರುತ್ತಿದ್ದರು. ಮಕ್ಕಳ ಜೊತೆಗೆ ಮನೆಯಲ್ಲಿ ಯಾರಾದರೊಬ್ಬರು ದೊಡ್ಡವರು ಇರುತ್ತಿದ್ದರು. ನಮ್ಮ ಮನೆಯಲ್ಲಿ ಬಹುತೇಕ ನಾನು ಮತ್ತು ನನ್ನ ಅಜ್ಜಿ ಹೋಗುತ್ತಿದ್ದೆವು. ಅಜ್ಜಿ ಅಂದರೆ ಅವ್ವನ ಅವ್ವ. ನನಗೆ ಬುದ್ಧಿ ಬಂದಾಗಿನಿಂದ ಕಡೆಯವರೆಗೂ ನಮ್ಮ ಮನೆಯಲ್ಲೇ ಬದುಕಿತ್ತು. ಅಜ್ಜಿಗೆ ಸುತ್ರಾಂ ಕಿವಿಗಳು ಕೇಳುತ್ತಿರಲಿಲ್ಲ. ಆದರೂ ಮನೆಯ ಒಳಗೆ ಮತ್ತು ಹೊರಗೆ ಬಿಡುವಿಲ್ಲದೆ ದುಡಿಯುತ್ತಿತ್ತು. ಕಣಕ್ಕೆ ಹುಲ್ಲು ಹಾಕಿದ ಮೊದಲ ದಿನದಿಂದ `ಕಡೆಕಣ’ಮಾಡುವವರೆಗೂ ನಾನು ಸಂಜೆಗೇ ಅಜ್ಜಿಯ ಜೊತೆ ಹೊದೆಯುವ ಕಂಬಳಿಯೊಂದಿಗೆ ಹೋಗುತ್ತಿದ್ದೆ. ನಮ್ಮ ಜೊತೆ ನನ್ನ ಪ್ರೀತಿಯ ಭೈರನೂ ತಪ್ಪದೆ ಬರುತ್ತಿದ್ದ. ಭೈರ ನಾನು ಸಾಕಿದ್ದ ನನ್ನ ಪರಮ ಪ್ರೀತಿಯ ನಾಯಿ ಹೆಸರು. ನಮ್ಮ ಮನೆಯಲ್ಲಿ ಬಹುತೇಕ ಕಣ ಮಾಡುತ್ತಿದ್ದದ್ದು ತೋಟದಲ್ಲಿಯೇ. ಮನೆಯಿಂದ ಸ್ವಲ್ಪ ದೂರದಲ್ಲಿ ಕರ‍್ಲು ಪಟ್ಟೆ ಅಂತ ಕರೆಯುವ ಒಂದಷ್ಟು ಖಾಲಿ ಜಾಗವಿತ್ತು. ಅದು ಪೂರಾ ಚೌಳು ನೆಲ. ಅಲ್ಲಿ ನಿರ್ಧಿಷ್ಟ ಕಾಲದಲ್ಲಿ ಮನೆಗೆ ಅಗುವಷ್ಟು ಚೌಳು ಏಳುತ್ತಿತ್ತು ಬಿಟ್ಟರೆ ಬೇರೇನೂ ಅಲ್ಲಿ ಬೆಳೆಯುತ್ತಿರಲಿಲ್ಲ. ಅದನ್ನಾಗಲೇ ಪ್ರಯೋಗ ಮಾಡಿಬಿಟ್ಟಿದ್ದರ ಕುರುಹಾಗಿ ಅಲ್ಲಿ ಒಂದು ಕೆನ್ನಿಂಗ ತೆಂಗಿನ ಮರವಿತ್ತು. ಅದರ ಎಳನೀರು ಬಲು ರುಚಿಯಾಗಿರುತ್ತಿದ್ದವು.
ಕಣಗಾಲ ಬರುತ್ತಿದ್ದುದೇ ಬಹುತೇಕ ಚಳಿಗಾಲದಲ್ಲಿ. ರಾತ್ರಿಯಿಡೀ ಸುರಿಯುತ್ತಿದ್ದ ಹಿಮಕ್ಕೆ ಹೊದೆಯುತ್ತಿದ್ದ ಕಂಬಳಿಯೆಲ್ಲಾ ತೋಯ್ದು ತೊಪ್ಪೆಯಾಗಿ ಬಿಡುತ್ತಿತ್ತು. ಹಂಗಾಗಿ ಅಜ್ಜಿ ಮಲಗಲು ನನಗಾಗಿ ಮಜವಾದ ಹಾಸಿಗೆಯನ್ನು ಮಾಡಿಕೊಡುತ್ತಿತ್ತು. ಮೊದಲು ನಾವು ಮಲಗುವ ಜಾಗದಲ್ಲಿ ಒಂದಷ್ಟು ಹುಲ್ಲನ್ನು ಹರವುತ್ತಿತ್ತು. ಆ ಹರವಿದ ಹುಲ್ಲಿನ ಮೇಲೆ ಈಚಲು ಚಾಪೆಯೊಂದನ್ನು ಹಾಸುತ್ತಿತ್ತು. ಆ ಚಾಪೆಯ ಮೇಲೆ ಅವತ್ತು ತುಳಿಸಿದ ಹುಲ್ಲನ್ನು ಚಾಪೆಯಗಲಕ್ಕೂ ಹರಡುತ್ತಿತ್ತು. ನಂತರ ಅದರ ಮೇಲೆ ಕಂಬಳಿಯ ಅರ್ಧ ಭಾಗವನ್ನು ಹಾಸಿ ಇನ್ನರ್ಧವನ್ನು ಹೊದ್ದು ಮಲಗಿದರೆ ಮೇಲೊಂದು ಚಾಪೆಯನ್ನು ಹೊದಿಸಿ ಅದರ ಮೇಲೆ ತೆಳ್ಳಗೆ ಮತ್ತೆ ಹುಲ್ಲನ್ನು ಹರವುತ್ತಿತ್ತು. ಇಂಥದೇ ಮತ್ತೊಂದನ್ನು ಅಜ್ಜಿ ಮಾಡಿಕೊಳ್ಳುತ್ತಿತ್ತು. ಒಮ್ಮೆ ಆ ಕಂಬಳಿಯೊಳಕ್ಕೆ ಸೇರಿಕೊಂಡರೆ ಮತ್ತೆ ಎಚ್ಚರವಾಗುತ್ತಿದ್ದದ್ದೇ ಬೆಳಕರಿದಾಗ. ಇಷ್ಟಾದರೂ ಬೆಳಗಿನ ಜಾವಕ್ಕೆಲ್ಲಾ ಚಳಿಯೆಂಬುದು ನಾನು ಹೊದ್ದ ಸಕಲ ಪರಿಕರಗಳನ್ನೆಲ್ಲಾ ದಾಟಿ ದಾಳಿ ಇಡುತ್ತಿತ್ತು. ಮಗ್ಗಲು ಬದಲಿಸುತ್ತಾ ಸುರುಟಿ ಸುರುಟಿ ಮಲಗುವಂತೆ ಮಾಡುತ್ತಿತ್ತು. ಹಾಗೆ ಬಟಾ ಬಯಲಿನಲಿ ಆ ಅನಂತ ಆಕಾಶದ ಕೆಳಗೆ ಹೊಳೆಯುತ್ತಿದ್ದ ಅಸಂಖ್ಯ ನಕ್ಷತ್ರಗಳ ಕೆಳಗೆ ಅಬ್ಬಾ ಎಂಥ ಚಂದದ ಚಣಗಳು. ಒಮ್ಮೆ ನಿದ್ದೆ ಹತ್ತಿದರೆ ಮತ್ತೆ ಎಚ್ಚರವಾಗುತ್ತಿದ್ದದ್ದು ಬೆಳಕರಿದ ಮೇಲೇಯೇ. ಅಷ್ಟೊತ್ತಿಗೆ ಪ್ರಾಣಿ ಪಕ್ಷಿಗಳು ಮಾತಿಗಿಳಿದಿರುತ್ತಿದ್ದವು.
ಕಣಗಾಲ ಅಲ್ಲದಿದ್ದರೆ ದನದ ಕೊಟ್ಟಿಗೆಯ ಜಗಲಿಯ ಮೇಲೆ ನಾನು ಅದಕ್ಕಾಗೇ ಹಾಕಿರುತ್ತಿದ್ದ ಗೋಣಿಚೀಲಗಳ ಮೇಲೆ ಬೆಚ್ಚಗೆ ಮಲಗುತ್ತಿದ್ದ ಭೈರ ಕಣಗಾಲ ಶುರುವಾಯ್ತು ಅಂದರೆ ಎಂಥದೇ ಚಳಿ ಇರಲಿ ಕಣಕ್ಕೆ ಬರುತ್ತಿದ್ದ. ಕಣದ ಮೂಲೆಯಲ್ಲಿ ಇರುತ್ತಿದ್ದ ಕುನಿಯ ರಾಶಿಯೊಳಗೆ ಮೈ ಹುದುಗಿಸಿ ಮಲಗುತ್ತಿದ್ದ. ದೂರದಲ್ಲಿ ಯಾರಾದರೂ ಸುಳಿದರೆ ಸಾಕು ಒಂಚೂರು ಸದ್ದಾದರೂ ಸಾಕು ಸಣ್ಣಗೆ ಬೊಗಳುತ್ತಾ ಕುಂಯ್‌ಗುಡುತ್ತಾ ಗದರಿಸುತ್ತಿದ್ದ. ಒಮ್ಮೊಮ್ಮೆ ಅಪರೂಪಕ್ಕೆ ಚಳಿಯಲ್ಲಿ ನನಗೆ ಉಚ್ಚೆಗೆ ಅವಸರವಾಗಿ ಎಚ್ಚರವಾಗಿಬಿಡುತ್ತಿತ್ತು. ಏಳುವುದು ಇರಲಿ ಕಂಬಳಿಯನ್ನು ಸರಿಸಿ ನೋಡಲೂ ಧೈರ್ಯ ಬಾರದಂತೆ ದೆವ್ವದ ಕಥೆಗಳು ನೆನಪಿಗೆ ಬಂದು ಅಸಾಧ್ಯ ಭಯಕ್ಕೆ ದೂಡುತ್ತಿದ್ದವು. ಆಗ ಪಕ್ಕದಲ್ಲಿ ಮಲಗಿರುತ್ತಿದ್ದ ಕಿವಿಗಳು ಕೇಳಲ್ಲ ಅಂತ ಗೊತ್ತಿದ್ದರೂ ಅಜ್ಜಿಯನ್ನು ಮೆಲ್ಲಗೆ ಕೂಗುತ್ತಿದ್ದೆ. ಅಜ್ಜಿ ಹೂಗುಡುತ್ತಿರಲಿಲ್ಲ. ಆದರೂ ಅಜ್ಜಿಯ ಮೆಲು ಗೊರಕೆಗಳು ಅಜ್ಜಿಯ ಇರುವನ್ನು ಖಾತ್ರಿಪಡಿಸುತ್ತಿದ್ದವು. ನನ್ನ ಕೂಗು ಕೇಳುತ್ತಲೇ ಮೆಲ್ಲಗೆ ಭೈರ ಚಕ್ಕನೆ ಓಡಿ ಬಂದು ನನ್ನ ತಲೆಯ ಭಾಗದಲ್ಲಿ ಮೂಸುತ್ತಾ ಅಲ್ಲೇ ಸುತ್ತಾಕುತ್ತಿದ್ದ. ಆಗ ರವಷ್ಟು ಧೈರ್ಯ ಬಂದಂತಾಗುತ್ತಿತ್ತು. ಕಂಬಳಿಯೊಳಗಿಂದ ಪಕ್ಕದಲ್ಲಿ ಮಲಗಿರುತ್ತಿದ್ದ ಅಜ್ಜಿಯನ್ನು ತಳ್ಳುತ್ತಿದ್ದೆ. ಅಜ್ಜಿಗೆ ಎಚ್ಚರವಾಗಿ ನನ್ನ ಕಷ್ಟ ಅರ್ಥವಾಗಿ ಉಚ್ಚೆ ಉಯ್ಯಲು ಕರೆದೊಯ್ಯುತ್ತಿತ್ತು. `ಹಾಂ ಹೆಂಗೆ ಸಿಗಾಕ್ಕೆಂಡೆ ನೋಡಿಗ’ ಅನ್ನುವಂತೆ ಚಳಿ ಮೂಳೆಗಳ ತಡಕುತ್ತಾ ನಡುಗಿಸಿಬಿಡುತ್ತಿತ್ತು. ಚಳಿಗೆ ಹಲ್ಲುಗಳು ಕಟಗುಟ್ಟುತ್ತಿದ್ದವು. ಆ ಸ್ಥಿತಿಯಲ್ಲೇ ಕಣ್ಣುಗಳನ್ನು ಮುಚ್ಚಿಕೊಂಡೇ ಉಚ್ಚೆ ಮಾಡಿ ಬಂದು ಮಾಮೂಲಿ ಹಾಸಿಗೆಯೊಳಕ್ಕೆ ತೂರಿಕೊಂಡುಬಿಡುತ್ತಿದ್ದೆ. ಬೆಳಿಗ್ಗೆ ನಾನು ಏಳುವ ಹೊತ್ತಿಗಾಗಲೇ ಅಜ್ಜಿ ಹುಚ್ಚೆಳ್ಳಿನ ಅಥವಾ ತೊಗರಿ ಪುಳ್ಳೆಗಳ ಬೆಂಕಿ ಹಾಕಿ ಅದು ಮಂಕಾದಂತೆ ಕಡ್ಡಿಗಳನ್ನು ಮತ್ಮತ್ತೆ ಹಾಕುತ್ತಾ ಬೆಂಕಿ ಕಾಯಿಸಿಕೊಳ್ಳುತ್ತಾ ಕೂತಿರುತ್ತಿತ್ತು. ಎದ್ದವನೇ ಬೆಂಕಿ ಮುಂದಕ್ಕೆ ದೌಡಾಯಿಸುತ್ತಿದ್ದೆ. ಚುರುಗುಡುವಂತೆ ಸುತ್ತ ತಿರುತಿರುಗಿ ಕೂತು ಸುಮಾರು ಹೊತ್ತು ಬೆಂಕಿ ಕಾಯಿಸಿಕೊಳ್ಳುತ್ತಿದ್ದೆ. ಅಷ್ಟೊತ್ತಿಗೆ ಕೊಟ್ಟಿಗೆಯ ದನಗಳನ್ನು ಆಚೆ ಕಟ್ಟಿ ಸಗಣಿ ಬಾಚುವ ಕೆಲಸ ಶುರು ಮಾಡುವ ಸಮಯವಾಗುತ್ತಿತ್ತು.

ಆ ಸಾರ್ತಿ ಕಣಗಾಲದಲ್ಲಿ ಮಾಮೂಲಿಗಿಂತ ಹೆಚ್ಚು ಚಳಿ ಇಕ್ಕಡಿಸುತ್ತಿತ್ತು. ಅಂಥ ಒಂದು ದಿನ. ಕಣದ ಕಾವಲಿನಲ್ಲಿ ಮಲಗಿದ್ದಾಗ ಯಾವುದೋ ಸದ್ದಿಗೆ ಚಕ್ಕನೆ ಎಚ್ಚರವಾಯ್ತು. ಮತ್ತೆ ಎಷ್ಟು ಹೊತ್ತಾದರೂ ನಿದ್ದೆ ಹತ್ತಲಿಲ್ಲ. ಏನೇನೋ ನೆನಪುಗಳು. ಭಯದಿಂದ ಅಜ್ಜಿಯನ್ನು ಕೂಗಿದೆ. ಅತ್ತ ಕಡೆಯಿಂದ ಹೂಗುಡುವಿಕೆ ಇರಲಿ ಗೊರಕೆಯ ಸದ್ದೂ ಕೇಳಿಸಲಿಲ್ಲ. ಹೊದಿಕೆಯೊಳಗಿನಿಂದ ಮೆಲ್ಲಗೆ ಕೈಯ್ಯನ್ನು ಹೊರಗಾಕಿ ಅಜ್ಜಿ ಮಲಗಿದ್ದ ಜಾಗವನ್ನು ತಡವಿದೆ. ಅದು ಪೂರಾ ಖಾಲಿಯಾಗಿತ್ತು. ಭಯ ಮತ್ತೂ ಅಟ್ಟಾಡಿಸತೊಡಗಿತು. ಭೈರನನ್ನು ಕೂಗಿದೆ. ಭೈರನೂ ನಾಪತ್ತೆ. ಭಯಕ್ಕೆ ಅಳುವೇ ಬಂತು. ಎದ್ದು ನೋಡಲು ಧೈರ್ಯ ಸಾಲಲಿಲ್ಲ. ಅಳುತ್ತಲೇ ಅಜ್ಜಿ ಅಂತ ಕಂಬಳಿಯೊಳಗಿಂದಲೇ ಜೋರಾಗಿ ಕೂಗಿಕೊಂಡೆ. ಅಜ್ಜಿಗೆ ಅದು ಕೇಳಿಸಿದರೆ ತಾನೆ! ಅಜ್ಜಿ ಏನನ್ನೋ ಗೊಣಗಿಕೊಂಡು ಬರುವ ಸದ್ದು ದೂರದಿಂದ ಕೇಳಿಸುತ್ತಿತ್ತು. ಹೋದ ಜೀವ ಬಂದಂಗಾಗಿತ್ತು. ಅಜ್ಜಿ ಹತ್ತಿರ ಬರುತ್ತಿದ್ದಂತೆ ಕತ್ತು ಹೊರಕ್ಕಾಕಿ ಇಣುಕಿದೆ. ತನ್ನ ಕಣ್ಮುಂದೆಯೇ ಕತ್ತೆ ಕಿರುಬ ಭೈರನನ್ನು ಎಳೆದೊಯ್ದದ್ದು, ಅವನನ್ನು ಬಿಡಿಸಿಕೊಳ್ಳಲು ಕಿರುಬನ ಒಂದಷ್ಟು ಓಡಿಸಿಕೊಂಡು ಹೋಗಿದ್ದನ್ನು ಹೇಳುತ್ತಾ `ಅದ್ರ ಅಬ್ರ ಅಡ್ಗ ಎಂಥ ನಾಯೀನ ಸಾಯ್ಗೊನಿಸಿ ಬಿಡ್ತಪ್ಪ’ ಅಂತ ನಿಟ್ಟುಸಿರಿಟ್ಟಿತು. ನನಗೆ ಕೈ ಕಾಲುಗಳೇ ಆಡದಾದವು. ಭೈರನ ಸಾವು ನನ್ನನ್ನು ದಿಕ್ಕೆಡಿಸಿತು. ಭೈರನನ್ನು ಇನ್ನು ಮುಂದೆ ನೋಡಕ್ಕಾಗಲ್ಲ ಅನ್ನುವ ಸಂಕಟಕ್ಕೆ ಅಳು ಮತ್ತೆ ಉಮ್ಮಳಿಸಿತು. ಆಗ ನನಗೆ ಸೊಂಟಕ್ಕೆ ಬರುತ್ತಿದ್ದ, ಸಿಕ್ಕುತ್ತಲೇ ಅಡರುಗಾಲು ಹಾಕಿ ಮೈ ಮೇಲೆ ಕುಣಿಯುತ್ತಿದ್ದ, ಇಡೀ ತೋಟವನ್ನು ತನ್ನ ಕಣ್ಣಳತೆಯಲ್ಲೇ ನಿಗಾ ಮಾಡುತ್ತಿದ್ದ ಭೈರನ ಸಾವಿನ ನಂತರ ಮತ್ತೆ ಯಾವತ್ತೂ ನಾನು ನಾಯಿಯನ್ನು ಸಾಕಲೇ ಇಲ್ಲ. ನಾನು ಮನೆಯಲ್ಲಿದ್ದರೆ ಸಾಕು ನನ್ನ ಬಿಟ್ಟು ಅಲುಗುತ್ತಿರಲಿಲ್ಲ. ನಾನು ಎಲ್ಲಿ ಹೋದರೂ ಅಲ್ಲಿ ಅವನ ಹಾಜರಿ ಇರುತ್ತಿತ್ತು. ಸ್ಕೂಲಿಗೆ ಹೊರಟರೆ ಮನೆಯಿಂದ ಸ್ಕೂಲಿನ ಕಾಂಪೌಂಡಿನವರೆಗೂ ಬಂದು ಬಿಟ್ಟು ಬರುತ್ತಿದ್ದ. ಸಂಜೆ ಹೊತ್ತಲ್ಲಿ ಅವರೆಕಾಯಿ ಗಿಡಗಳನ್ನು ಕಾಯಲು ಹೊಲಗಾವಲಿಗೆ ಹೊರಟರೆ ತಪ್ಪದೇ ಹಾಜರಾಗಿ ಕೊನೆಯವರೆಗೂ ಜೊತೆಯೇ ಇರುತ್ತಿದ್ದ. ಅಲ್ಲದೆ ಹೊಲಗಾವಲಿನಲ್ಲಿ ಯಾರೊಬ್ಬರೂ ನಮ್ಮ ಹೊಲಕ್ಕೆ ಕೈ ಹಾಕುವುದಿರಲಿ ಅತ್ತ ಬರುವುದಕ್ಕೂ ಬಿಡದೆ ಬೊಬ್ಬಿರಿಯುತ್ತಿದ್ದ. ಆ ಚಂದದ ಕಣ್ಣುಗಳ, ಆ ಕಂದು ಬಣ್ಣದ, ನುಣ್ಣಂತ ನುಣ್ಣನೆಯ ಮೈಯ್ಯ ಭೈರ ಆಗಾಗ ನೆನಪಿಗೆ ಬರುತ್ತಾನೆ. ಈಗ ಹಳ್ಳಿಗಳಲ್ಲಿ ಆಗಿನ ಕಣದ ಕಲ್ಪನೆಗಳೇ ಇಲ್ಲ. ಅಸಲಿಗೆ ದನ ಕರುಗಳಿರಲಿ ಹೊಲಮಾಳಗಳೆಲ್ಲಾ ಅಡಕೆ, ತೆಂಗಿನ ತೋಟಗಳಾಗಿಬಿಟ್ಟಿವೆ. ನಾಟಿ ರಾಸುಗಳ ಜಾಗದಲ್ಲಿ ಸೀಮೆ ಹಸುಗಳು ಬಂದಿವೆ.
ಹಿಂದೆ ಹಳ್ಳಿಗಳಲ್ಲಿ ಕಳ್ಳತನಗಳು ಜಾಸ್ತಿ ಇದ್ದವು. ಅದೇರೀತಿ ಕದ್ದ ಮಾಮಲುಗಳನ್ನು ಕದ್ದು ಖರೀದಿಸುತ್ತಿದ್ದ ಖದೀಮರೂ ಇದ್ದರು. ಅವರುಗಳ ಕುಮ್ಮಕ್ಕು ಕಳ್ಳರುಗಳಿಗೆ ಸದಾ ಇರುತ್ತಿತ್ತು. ಕೆಲವೊಮ್ಮೆ ವೈಶಮ್ಯಕ್ಕೆ ಆಗದವರ ಹೊಲ ತೋಟಗಳಲ್ಲಿ ಕಳ್ಳತನ ಮಾಡಿಸುವ ಮನಸ್ಸುಗಳೂ ಹಳ್ಳಿಗಳಲ್ಲಿದ್ದವು. ಹಂಗಾಗಿ ಅವರೆ, ಕಡಲೆ, ತೊಗರಿ, ಜೋಳ ಮುಂತಾದ ಹೊಲ ಬೆಳೆಗಳ ಫಸಲನ್ನು ಕಾಯುವುದಿತ್ತು. ಇವುಗಳ ಕಾವಲು ಆ ಬೆಳೆಗಳು ಬಂದಾಗ ಮಾತ್ರ ಇರುತ್ತಿತ್ತು. ಆದರೆ ತೆಂಗಿನ ತೋಟದ ಕಾವಲು ಮಾತ್ರ ವರ್ಷವಿಡೀ ಇರುತ್ತಿತ್ತು. ಅದಕ್ಕೆ ಮಕ್ಕಳನ್ನು ಕಳಿಸುತ್ತಿರಲಿಲ್ಲ. ಅವರದು ಏನಿದ್ದರೂ ಹೊಲಗಾವಲಿನ ಕೆಲಸ. ಹೊಲಗಳ ಅಕ್ಕಡಿ ಸಾಲುಗಳ ಅವರೆಗಿಡದ ಕಾಯಿ ಬಲಿಯ ತೊಡಗಿದಂತೆ ಹಳ್ಳಿಯ ಬಹುತೇಕ ಮಕ್ಕಳಿಗೆ ಅವುಗಳನ್ನು ಕಾಯುವ ಕೆಲಸ ಶುರುವಾಗುತ್ತಿತ್ತು. ಬೆಳಿಗ್ಗೆ ಸ್ಕೂಲಿಗೆ ಹೋಗುವುದಕ್ಕೆ ಮುಂಚೆ ಸಂಜೆ ಸ್ಕೂಲಿನಿಂದ ಬಂದ ನಂತರ ಈ ಕೆಲಸವಿರುತ್ತಿತ್ತು. ಸಂಜೆಯಾಗುತ್ತಿದ್ದಂತೆ ಹೊಲದತ್ತ ಹೋಗುತ್ತಿದ್ದ ನಮಗೆ ಆ ಹೊತ್ತಿನಲ್ಲಿ ದನಕರುಗಳನ್ನು ಮೇಸಲು ಹೋದವರು ಹೊಲಗಳಿಗೆ ಅವುಗಳ ಬಾಯಾಕಿಸಿ ಲೇವಡಿ ಮಾಡದ ಹಾಗೆ ನೋಡಿಕೊಳ್ಳುತ್ತಿದ್ದದ್ದು ಹಾಗೂ ಸಂಜೆಯನ್ನು ಮೈಗಾಕಿಕೊಂಡು ಕಂಡವರ ಹೊಲಗಳಲ್ಲಿ ಅವರೆಕಾಯಿಗಳನ್ನು ಕದಿಯುತ್ತಿದ್ದವರ ಮೇಲೆ ನಿಗಾ ಇಡುವುದು ನಮ್ಮ ಕೆಲಸವಾಗಿರುತ್ತಿತ್ತು. ಇಲ್ಲೊಂದು ವಿಚಿತ್ರ ಸಂಗತಿ ಇತ್ತು. ಅದೆಂದರೆ ಸಾಮಾನ್ಯವಾಗಿ ಈ ಕಳ್ಳತನವನ್ನು ಮಾಡುತ್ತಿದ್ದ ಬಹುತೇಕರು ಹೊಲಗಳಿದ್ದವರು ಹಾಗೂ ತಾವೂ ಅವರೆಗಿಡಗಳನ್ನು ಬೆಳೆಯುತ್ತಿದ್ದವರೇ ಆಗಿರುತ್ತಿದ್ದರು.
ಹದವಾಗಿ ಬಲಿತ ಅವರೆ ಕಾಯನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದು ಅಂದರೆ ಈಗಲೂ ಆಸೆಯಾಗುತ್ತೆ. ಆ ಸುಡುಸುಡುವ ಅವರೆಕಾಯಿಗಳು, ಅವುಗಳ ಆ ಕಮ್ಮನೆಯ ಘಮಲು, ಆ ರುಚಿಯನ್ನು ಬಲ್ಲವರೇ ಬಲ್ಲರು. ಈ ಅವರೆ ಕಾಯಿಯ ಕಾಲ ಒಳ್ಳೆ ಚಳಿಗಾಲಕ್ಕೆ ಬರುತ್ತಿದ್ದುದರಿಂದ ಸಂಜೆ ಹೊಲದ ಹತ್ತಿರ ಹೋಗುತ್ತಿದ್ದಂತೆ ಗಟ್ಟಿ ಕೆಂಡ ಆಗುವಂಥ ಸಣ್ಣಪುಟ್ಟ ಕಡ್ಡಿಗಳನ್ನೆಲ್ಲಾ ಕೂಡಾಕಿಕೊಂಡು ಬೆಂಕಿ ಹಾಕಿಕೊಳ್ಳುತ್ತಿದ್ದೆವು. ಅದು ಚಳಿ ಮತ್ತು ಅವರೆಕಾಯಿಗಳನ್ನು ಸುಡಲೂ ಆಗುತ್ತಿತ್ತು. ಆ ಬೆಂಕಿ ಕೆಂಡವಾದ ಮೇಲೆ ಸೊಗಡವರೆ ಕಾಯಿಗಳನ್ನು ಕೆಂಡದ ಮೇಲೆ ಆ ಕೆಂಡ ಆರದಂತೆ ಇಷ್ಟಿಷ್ಟೇ ಹಾಕಿ ಹದವಾಗಿ ಸುಡುತ್ತಿದ್ದೆವು. ಬೆಂದ ಅವರೆಕಾಯಿಗಳನ್ನು ಒಂದೊಂದೇ ತೆಗೆತೆಗೆದು ಆಗಾಗಲೇ ತಿನ್ನುತ್ತಿದ್ದೆವು. ಆ ಚಳಿಗೆ ಅವುಗಳ ಬಿಸಿಗೆ ಮೈ ನಚ್ಚಗಾಗುತ್ತಿತ್ತು. ಅವುಗಳನ್ನು ತಿಂದು ಮುಗಿಸುವ ಹೊತ್ತಿಗೆ ಕೈ ಬಾಯಿ, ಅಂಗಿ ಚೆಡ್ಡಿಗಳಿಗೆಲ್ಲಾ ಮಸಿಮಯವಾಗಿಬಿಡುತ್ತಿದ್ದವು. ನಾವು ಒಂದಿನವೂ ಸುಟ್ಟವರೆಯನ್ನು ತಿನ್ನದೇ ಮನೆಗೆ ಹಿಂದಿರುಗುತ್ತಿರಲಿಲ್ಲ. ಆದರೆ ಎಂದೋ ಒಂದು ದಿನ ಮಾತ್ರ ಆ ಅವರೆಕಾಯಿಗಳು ನಮ್ಮ ಹೊಲದವುಗಳಾಗಿರುತ್ತಿದ್ದವು. ಅವುಗಳಿಗೆ ಅದೆಂಥಾ ಸೊಗಡು ಇರುತ್ತಿತ್ತು ಅಂದರೆ ಒಮ್ಮೆ ಅವುಗಳನ್ನು ಮುಟ್ಟಿದರೂ ಸಾಕು ಯಾವ ಸೋಪು ಸೀಗೇಪುಡಿಗಳನ್ನು ಹಾಕಿ ತೊಳೆದರೂ ಸೊಗಡಿನ ಜಿಡ್ಡು ಮತ್ತು ಘಮಲು ಜಪ್ಪಯ್ಯ ಅಂದರೂ ಹೋಗುತ್ತಿರಲಿಲ್ಲ. ಅಷ್ಟು ಸೊಗಡಿನಿಂದ ಬೀಗುತ್ತಿದ್ದವು ಆಗಿನ ಅವರೆಕಾಯಿಗಳು. ಕೆಲವೊಮ್ಮೆ ಇದೇ ಈ ಘಮಲು ಮತ್ತು ಜಿಡ್ಡುಗಳು ನಮ್ಮನ್ನು ಕಳ್ಳತನದಲ್ಲಿ ಸಿಕ್ಕಾಕಿಸುತ್ತಿದ್ದವು. ಏಕೆಂದರೆ ನಾವು ದಿನವೂ ಅವರೆಕಾಯಿಗಳನ್ನು ಸುಟ್ಟು ತಿನ್ನುವುದು ಗೊತ್ತಿತ್ತು. ಹಂಗೇನೇ ತಿನ್ನುವುದು ನಮ್ಮ ಹೊಲದವುಗಳಲ್ಲ ಅನ್ನುವುದೂ ಗೊತ್ತಿತ್ತು. ಹಂಗಾಗಿ ಮನೆಯಿಂದ ಹೊರಡುವಾಗ, `ಬೇಕಾದರೆ ನಂಬುದ್ರಾಗೆ ಆಗಾವಷ್ಟು ಕಿತ್ಕಂಡು ತಿನ್ನಿ. ಕಂಡವರ ಹೊಲಕ್ಕೆ ಕೈ ಕಾಕಿದ್ರೆ ಅಷ್ಟೇ,’ ಅನ್ನುವ ಎಚ್ಚರಿಕೆಯ ಮಾತುಗಳು ಮಾಮೂಲಿಯಾಗಿರುತ್ತಿದ್ದವು. ಆದರೆ ಅವರ ಮಾತುಗಳಿಗೆ ವಿನಯವಾಗಿರುತ್ತಿದ್ದದು ಕದಿಯಲು ಸಾಧ್ಯವಾಗದ ದಿನಗಳಲ್ಲಿ ಮಾತ್ರ.
ನನ್ನ ಜೊತೆ ಹೈಸ್ಕೂಲಿಗೆ ಮೂರ್ತಿ ಅನ್ನುವ ಹುಡುಗನೊಬ್ಬ ನಮ್ಮ ಮನೆಯಿಂದಲೇ ನನ್ನದೇ ಕ್ಲಾಸಿಗೆ ಸ್ಕೂಲಿಗೆ ಬರುತ್ತಿದ್ದ. ಅವನು ನನಗೆ ಹತ್ತಿರದ ಸಂಬಂಧಿಯಾಗಿದ್ದ. ನಾವಿಬ್ಬರೂ ಜೊತೆಯಾಗಿ ಹೊಲಗಾವಲಿಗೆ ಹೋಗುತ್ತಿದ್ದೆವು. ಹೋಗುವಾಗ ಜೇಬಿನಲ್ಲಿ ಬೆಂಕಿಕಡ್ಡಿ ಪೆಟ್ಟಿಗೆ ಮತ್ತು ಕೈಯ್ಯಲ್ಲಿ ಒಂದು ಕುಲ್ಡು ಲಾಟೀನು ತಪ್ಪದೇ ಇರುತ್ತಿದ್ದವು. ಕತ್ತಲಿಗೂ ನನಗೂ ಆಗ ಅಷ್ಟಕ್ಕಷ್ಟೇ. ಆದರೆ ಮೂರ್ತಿ ಧೈರ್ಯವಂತ. ಊರಿಗೆ ಒತ್ತಿಕೊಂಡಂತೆ `ಮಳ್ಳೊಲ’ಅಂತ ಕರೆಯುವ ಹೊಲವಿದೆ. ಸಾಮಾನ್ಯವಾಗಿ ಈ ಹೊಲದಲ್ಲಿ ಅವರೆಕಾಯಿಗಿಡವನ್ನು ಹೆಚ್ಚಾಗಿ ಹಾಕುತ್ತಿದ್ದರು. ಅಲ್ಲಿ ಅವರೆಯ ಫಸಲು ಚೆನ್ನಾಗಿ ಬೆಳೆಯುತ್ತಿದ್ದುದು ಒಂದು ಕಾರಣವಾದರೆ ಜಾಸ್ತಿ ಲೇವಡಿ ಆಗುವುದಿಲ್ಲ ಅನ್ನುವುದು ಮತ್ತೊಂದು ಕಾರಣವಾಗಿತ್ತು. ಕೊಂಚ ದೂರದಲ್ಲಿ ಮನೆಗಳಿದ್ದುದರಿಂದ ಹೆಚ್ಚುಕಮ್ಮಿ ಆದರೆ ಕೂಗಾಕಿದರೆ ಸಾಕು ಯಾರಾದರೂ ಬಂದು ಬಿಡುತ್ತಾರೆ ಅನ್ನುವುದು ನಮಗೆ ಅದರಲ್ಲೂ ನನಗೆ ರವಷ್ಟು ಸಮಾಧಾನದ ಸಂಗತಿಯಾಗಿತ್ತು.
ಹೀಗೆ ಸೊಗಡವರೆಯ ಸವಿಯನ್ನೂ ಕೆಲವೊಮ್ಮೆ ಸಂಜೆಯ ಚಂದಿರನ ಸೊಬಗನ್ನೂ ಸವಿಯುತ್ತಾ ಈ ಕಾವಲು ಕೆಲಸ ಅನ್ನುವುದು ವರ್ಷವಿಡೀ ಹೀಗೆ ಇದ್ದರೆ ಎಷ್ಟು ಚಂದ ಅಂತ ಅನಿಸುತ್ತಿತ್ತು. ಮನೇಲಿ ಇದ್ದರೆ ಅವವೇ ಸ್ಕೂಲಿನ ಪುಸ್ತಕಗಳನ್ನು ಹಿಡಿದು ಕೂರಬೇಕಾಗುತ್ತಿತ್ತು. ಆದರೆ ಹೀಗೆ ನಾವು ಕಾವಲಿಗೆ ಹೋದ ದಿನಗಳಲ್ಲಿಯೂ ಕೆಲವೊಂದು ಸಾರ್ತಿ ಕಳ್ಳರು ನಮಗೆ ಚಳ್ಳೆಹಣ್ಣು ತಿನಿಸಿಬಿಡುತ್ತಿದ್ದರು. ಆಗ ಮನೆಯವರಿಗೆ ನಮ್ಮ ಕಾವಲಿನ ಮೇಲೆ ಅನುಮಾನ ಬರುತ್ತಿತ್ತು. ಅವತ್ತೊಂದು ದಿನ ಸಂಜೆಗೇ ಕಾವಲಿಗೆಂದು ನಾವಿಬ್ಬರೂ ಹೋಗಿದ್ದೆವು. ಬೆಳಿಗ್ಗೆ ನೋಡಿದರೆ ನಾವು ಬೆಂಕಿ ಹಾಕಿಕೊಂಡು ಕೂರುತ್ತಿದ್ದ ತಾವಿನಿಂದ ಕೊಂಚವೇ ಕೊಂಚ ದೂರದಲ್ಲಿ ಬದುವಿನ ಪಕ್ಕದ ಒಂದೆರಡು ಸಾಲುಗಳಲ್ಲಿ ಕಾಯಿ, ಈಚು ಅಂತ ನೋಡದೆ ನುಣ್ಣಗೆ ತರೆದುಕೊಂಡು ಹೋಗಿಬಿಟ್ಟಿದ್ದರು. `ನೀವು ಇನ್ನೊಬ್ರುದಾಗೆ ಕದ್ಯಾಕೆ ಹೋದಾಗ, ಅವ್ರು ನಿಂಬುದ್ರಾಗೆ ಎಗರಿಸ್ಕಂಡು ಹೋಗವ್ರೆ ಬಿಡು,’ ಅಂದ ಅಜ್ಜ ಹುಸಿನಗು ನಕ್ಕಿತ್ತು. ಹಂಗಾಗಿ ಅದು ನಮ್ಮನ್ನು ಹೆಂಗಾರಾ ಮಾಡಿ ಕಳ್ಳನನ್ನು ಹಿಡಿಯಲೇಬೇಕು ಅನ್ನುವ ನಿರ್ಧಾರಕ್ಕೆ ಬರುವಂತೆ ಮಾಡಿತ್ತು.
ಅದಾದ ಮೇಲೆ ಒಂದಷ್ಟು ದಿನ ನಮ್ಮ ಕಾಯುವಿಕೆಯ ತಂತ್ರವನ್ನು ಬದಲಿಸಿಕೊಂಡೆವು. ಹೊಲದ ಬಳಿ ಹೋಗುತ್ತಿದ್ದಂತೆ ಬೆಂಕಿಯನ್ನು ಹಾಕಿ ಕಾಯಲು ಬಂದಿದ್ದಾರೆ ಅನ್ನುವ ಸೂಚನೆಯನ್ನು ಕೊಡುತ್ತಿದ್ದೆವು. ಆದರೆ ಅದರ ಮುಂದೆ ಕೂರದೆ ಅಲ್ಲೇ ಹೊಲದ ಮತ್ತೊಂದು ತುದಿಯ ಬದುವಿನಲ್ಲಿದ್ದ ಹಲಸಿನ ಮರವನ್ನು ಹತ್ತಿ ಕೂರುತ್ತಿದ್ದೆವು. ಬೆಂಕಿಯ ಮುಂದೆ ಯಾರೂ ಕಾಣದಿದ್ದಾಗ ಬೆಂಕಿ ಹಾಕಿ ಮನೆಗೆ ಹೋಗಿದ್ದಾರೆ ಅಂತ ಕಳ್ಳರನ್ನು ಯಾಮಾರಿಸುವುದು ನಮ್ಮ ತಂತ್ರವಾಗಿತ್ತು. ಹೀಗೆ ಒಂದು ದಿನ ಕಾಯುತ್ತಿದ್ದಾಗ ಇನ್ನೇನು ಮನೆಯ ಕಡೆ ಹೊರಡಬೇಕು ಅಷ್ಟರಲ್ಲಿ ನಾವು ಕೂತಿದ್ದ ಹಲಸಿನ ಮರದ ಎದುರಿಗೆ ಕೊಂಚ ದೂರದಲ್ಲಿ ಒಂಚೂರು ಮುಖವಷ್ಟೇ ಕಾಣುವಂತೆ ಮೈ ತುಂಬಾ ರಗ್ಗೊಂದನ್ನು ಹೊದ್ದಿದ್ದ ಆಕೃತಿಯೊಂದು ಹೊಲದೊಳಕ್ಕೆ ಕಾಲಿಟ್ಟಿತು. ಅವತ್ತು ಸಂಜೆಗೇ ಚಂದ್ರ ಬಂದಿದ್ದ. ಅವನು ನಮ್ಮ ಹೊಲದೊಳಕ್ಕೆ ಬರುವುದು ಹಲಸಿನ ಮರದ ಕೊಂಬೆಗಳಲ್ಲಿ ಕೂತಿದ್ದ ನಮಗೆ ಚೆನ್ನಾಗಿ ಕಾಣಿಸುತ್ತಿತ್ತು. ಕಳ್ಳ ಸುತ್ತ ಮುತ್ತ ಕಣ್ಣಾಡಿಸುತ್ತಾ ಹೆಚ್ಚೂ ಕಡಿಮೆ ಹೊಲದ ನಡೂಮಧ್ಯದವರೆಗೂ ಬಂದ. ಯಾವಾಗ ಯಾರೂ ಕಾಣಲಿಲ್ಲವೋ ಒಂದೇ ಉಸುರಿಗೆ ಕೈಗೆ ಸಿಕ್ಕ ಅವರೆಕಾಯಿಗಳನ್ನು ಕುಯ್ದುಕೊಂಡು ಹೊದ್ದಿದ್ದ ರಗ್ಗಿಗೆ ಹಾಕಿಕೊಳ್ಳುತ್ತಿದ್ದ. ತಕ್ಷಣಕ್ಕೆ ನಮಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಒಬ್ಬರ ಮುಖವನ್ನೊಬ್ಬರು ಸುಮ್ಮನೆ ನೋಡಿಕೊಂಡೆವು.
ಕಡೆಗೆ ಮೂರ್ತಿಯೇ ಧೈರ್ಯ ಮಾಡಿದ್ದ. `ನಾನು ಅವುನ್ನ ಆ ಕಡಿಂದ ಬಳಿಸ್ಕಂಡು ಬರ್ತೀನಿ. ನೀನು ಅವನ ಪಕ್ಕದಲ್ಲಿ ಅಕ್ಕಡಿ ಸಾಲುಗಳ ಮರೆ ಮಾಡ್ಕಂಡು ಹಿಂದ್ಲಿಂದ ಬಾ’ ಅಂತ ಹೇಳಿದವನೇ ಮೆಲ್ಲಗೆ ಮರದಿಂದ ಕೆಳಗಿಳಿದು ಹೋದ. ನಾನೂ ಇಳಿದವನೇ ಹಲಸಿನ ಮರದ ನೆರಳಿನ ಅಕ್ಕಡಿ ಸಾಲುಗಳ ನಡುವೆ ಕೂತುಕೊಂಡು ಹಾಗೇ ಮೆಲ್ಲಗೆ ತೆವಳ ತೊಡಗಿದೆ. ಆ ಕಳ್ಳನಿಗೆ ಯಾರೂ ಇಲ್ಲದಿರುವುದು ಖಾತ್ರಿಯಾಗಿತ್ತು. ಹಂಗಾಗಿ ಈಗ ಕೊಂಚ ನಿಧಾನವಾಗಿ ಅವರೆಕಾಯಿಗಳನ್ನು ಕುಯ್ದುಕೊಳ್ಳುತ್ತಿದ್ದ. ಆ ಹೊತ್ತಿಗಾಗಲೇ ಊರೊಳಗೆ `ದೇವಿ ಮಹಾತ್ಮೆ; ನಾಟಕದ ತಲೀಮು ನಡೆಯುತ್ತಿತ್ತು. ಹಾರ್ಮೋನಿಯಂ ಶೃತಿಯ ಸದ್ದು ಮತ್ತು ಮೇಳದ ಮೇಷ್ಟ್ರು ಹೇಳಿಕೊಡುತ್ತಿದ್ದ ಮಟ್ಟುಗಳ ಸದ್ದನ್ನು ಸಂಜೆ ಗಾಳಿ ಊರಾಚೆಯ ಹೊಲಮಾಳಕ್ಕೆ ಸಾಗಾಕುತ್ತಿತ್ತು. ಮೂರ್ತಿ ಅತ್ಲ ಕಡೆಯಿಂದ ಕಳ್ಳನನ್ನು ಬಳಸಿಕೊಂಡು ಹೆಚ್ಚೂ ಕಡಿಮೆ ಅವನ ಹತ್ತಿರಕ್ಕೆ ಬರುತ್ತಿದ್ದ. ನನಗೆ ರಾಗಿ ಕೂಳೆಗಳಿಂದ ಚುಚ್ಚಿಸಿಕೊಂಡು ದೇಗುವುದು ತ್ರಾಸವಾಗುತ್ತಿತ್ತು. ಹಂಗಾಗಿ ನಾನು ಮೆಲ್ಲಗೆ ಅಕ್ಕಡಿ ಸಾಲುಗಳ ನೆರಳಿನಂತೆ ಸಾಗುತ್ತಿದ್ದೆ. ಈ ನಿಧಾನಕ್ಕೆ ನನ್ನೊಳಗಿನ ಭಯವೂ ಕಾರಣವಾಗಿತ್ತು. ಮೂರ್ತಿ ಅಷ್ಟು ಹತ್ತಿರಕ್ಕೆ ಹೋದರೂ ಆ ಕಳ್ಳನಿಗೆ ಒಂಚೂರೂ ದ್ಯಾಸವೇ ಇರಲಿಲ್ಲ. ಇನ್ನೇನು ಹತ್ತಿರಕ್ಕೆ ಹೋಗಿ ಅವನನ್ನು ಹಿಂದಿನಿಂದ ಹಿಡಿದುಕೊಂಡುಬಿಡಬೇಕು ಅಂತ ಓಡುವ ಭರದಲ್ಲಿ ಅವನು ಅವರೆ ಬಳ್ಳಿಯೊಂದನ್ನು ಎಡವಿ ಸೀದಾ ಆ ಕಳ್ಳನ ಮೇಲೇ ಮುಗ್ಗರಿಸಿ ಬಿದ್ದ. ಅದು ಅನಿರೀಕ್ಷಿತವಾಗಿದ್ದರಿಂದ ಕಳ್ಳ ಒಂದೇಟಿಗೇ `ಅಯ್ಯಯ್ಯಪ್ಪೋ’ಅಂತ ಕಿರುಚಿಕೊಳ್ಳುತ್ತಾ ಹೊಲದಿಂದ ಆಚೆ ಓಡತೊಡಗಿದ. ಮೂರ್ತಿ ಚಕ್ಕನೆ ಎದ್ದವನೇ ನನ್ನನ್ನು `ಲೇ ಆ ಕಡಿಂದ ಓಡಿ ಬಾರೋ’ ಅಂತ ನನಗೆ ಕೂಗಿ ಹೇಳುತ್ತಾ ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಬೇಗನೇ ಮೇಲೆದ್ದರೂ ಇದು ನಾನು ನೋಡಿದ್ದ ಮೊದಲ ಕಳ್ಳ ಹಾಗೂ ಕಳ್ಳತನವಾದ್ದರಿಂದ ಒಂಚೂರು ಗಲಿಬಿಲಿಗೊಂಡು ಅವರತ್ತ ತಕ್ಷಣ ಓಡಲಾಗಲಿಲ್ಲ. ಅವರಿಬ್ಬರೂ ಆಗಲೇ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ಉಸುರುಯ್ದುಕೊಂಡು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. `ಬಡ್ಡಿ ಮಗ ತಪ್ಪಿಸ್ಕಂಡ್ ಬಿಟ್ಟ,’ ಅಂತ ಏದುಸಿರು ಬಿಡುತ್ತಾ ಕೈಯ್ಯಲ್ಲಿದ್ದ ಕಳ್ಳನ ರಗ್ಗನ್ನು ತೋರಿಸಿದ. `ಈ ರಗ್ಗು ಇರಲಿಲ್ಲ ಅಂದಿದ್ರೆ, ಸಿಗಾಕ್ಕಂಡು ಬಿಡ್ತಿದ್ದ. ಕೊನೆ ಪಕ್ಷ ಯಾರು ಅಂತನಾದ್ರೂ ಗೊತ್ತಾಗಿಬಿಡ್ತಿತ್ತು’ಅಂತ ಒಂದೇ ಉಸುರಿಗೆ ಬಡಬಡಿಸಿದ. ಪಾಪ ಕಳ್ಳ ತಾನು ಕುಯ್ದುಕೊಂಡಿದ್ದ ಅವರೆಕಾಯಿಗಳನ್ನು ಈ ರಗ್ಗಿಗೇ ತುಂಬಿಕೊಂಡಿದ್ದರಿಂದ ಓಡುವ ಭರದಲ್ಲಿ ಅವೆಲ್ಲಾ ಅಲ್ಲಲ್ಲೇ ಬಿದ್ದು ಚೆಲ್ಲಾಡಿದ್ದವು. ಆ ಚಣ ನನಗೆ ಭೈರ ನೆನಪಾಗಿದ್ದ. ಅವನು ತೀರಿಕೊಂಡು ಆಗಲೇ ನಾಲ್ಕೈದು ವರ್ಷಗಳಾಗಿದ್ದವು. ಅವತ್ತು ಆ ನನ್ನ ಭೈರನೇನಾದರೂ ಇದ್ದಿದ್ದರೆ ಆ ಕಳ್ಳನನ್ನು ನಿಂತ ನಿಲುವಿನಲ್ಲೇ ನಿಲಾಕಿಬಿಡುತ್ತಿದ್ದ.

ಆದರಿದನ್ನು ಮನೆಯಲ್ಲಿ ಹೇಳಲಿಲ್ಲ. ಮಾರನೆಯ ದಿನ. ಆ ರಗ್ಗು ಯಾರದು ಅದನ್ನು ಹೊದ್ದಿದ್ದ ಕಳ್ಳ ಯಾರು ಅನ್ನೋದನ್ನ ಪತ್ತೆ ಹಚ್ಚಿದ್ವಿ. ಆದರೆ ಅದನ್ನು ಬೇರೆಯವರಿಗೆ ಹೇಳುವ ಮತ್ತು ಅವನನ್ನು ಕೇಳುವ ಧೈರ್ಯ ನಮಗಿರಲಿಲ್ಲ. ಯಾಕೆ ಅಂದರೆ `ಸುಟ್ಟವರೆ’ಗಾಗಿ ಪುಟ್ಟವರೆಕಾಯಿಗಳನ್ನು ಹೆಚ್ಚೂ ಕಡಿಮೆ ನಾವು ಕದಿಯುತ್ತಿದ್ದದ್ದು ಆ ಕಳ್ಳನ ಹೊಲದಿಂದಲೇ!
(ಹಿಂದಿನ ಕಂತು: ಮಿಂಚುಳಗಳು ಮತ್ತು ಕಲ್ಬಾವಿ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

