ಬೆಳಿಗ್ಗೆ ಏಳರ ಸುಮಾರಿಗೆ ಅಮ್ಮ ಮನೆಯ ಮುಂದಿನ ಅಂಗಳಕ್ಕೆ ಬಂದು ಅಲ್ಲಿನ ಸೀಮೆಂಟ್ ನೆಲದ ಮೇಲೆ ಚಾಪೆ ಹಾಕುತ್ತಿದ್ದಳು. ನಂತರ ಒಳನಡೆದು ಅವತ್ತಿನ ಎರಡು ಕನ್ನಡ ಪತ್ರಿಕೆ ಆಚೆ ತಂದು ಚಾಪೆಯ ಮೇಲೆ ಕೂಡುತ್ತಿದ್ದಳು. ಕಣ್ಣಿಗೆ ಕನ್ನಡಕ ಏರಿಸಿ ಅವಳು ಮೊದಲ ಪುಟದ ಹೆಡ್ಡಿಂಗ್ ನೋಡುವಷ್ಟರಲ್ಲಿ ಹಿರಿಯ ಸೊಸೆ ಒಂದು ಒಂದೂವರೆ ಸೇರು ಹಿಡಿಯುವ ಹಿತ್ತಾಳೆ ಚೊಂಬು, ಎರಡು ಹಿತ್ತಾಳೆ ಲೋಟ ತಂದು ಚಾಪೆಯ ತುದಿಯಲ್ಲಿ ಇಡುತ್ತಿದ್ದಳು. ಚೊಂಬಿನ ತುಂಬಾ ಹಬೆಯಾಡುತ್ತಿದ್ದ ಕುದಿಯುವ ಕಾಫಿ, ಅದರ ಗಮ ಗಮ ಇಡೀ ರಸ್ತೆಗೆ ಹಬ್ಬುವುದಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೩ನೇ ಬರಹ ನಿಮ್ಮ ಓದಿಗೆ
ಹಿಂದಿನ ಕಂತು ನರಿಯ ನಸುಗುನ್ನಿಕಾಯಿ ಆಕರ್ಷಣೆ ಹೇಳುತ್ತಾ ಹೀಗೆ ಮುಗಿಸಿದ್ದೆ. ನರಿಗೆ ಕಳೆದ ತಿಂಗಳ ನೆನಪು ಒದ್ದುಕೊಂಡು ಬಂದಿತು. ಆಗಲೂ ಹೀಗೇ ಮರ ಹತ್ತಿತ್ತು. ಆಗ ಬಾವಿ ಹುಡುಕಲು ಅಲ್ಲ, ಬದಲಿಗೆ ಹೆಣ್ಣು ನರಿ ಹುಡುಕಲು (ಇದು ಕಥೆಗೆ ಪೋಲಿ ಟಚ್ ಕೊಡಲು ನನ್ನ ಗೆಳೆಯ ಹೇಳುತ್ತಿದ್ದ ಸಾವಿರ ಕಾರಣಗಳಲ್ಲಿ ಒಂದು. ಯಾವತ್ತಾದರೂ ನಿಮಗೆ ಈ ಪೋಲಿ ಟಚ್ ಕತೆಗಳ ಬಗ್ಗೆ ಹೇಳುತ್ತೇನೆ, ನೆನಪಿಸಿ!) ಅದು ಮರ ಹತ್ತಿತ್ತು. ಅದರ ಸುತ್ತಲೂ ನಸುಗುನ್ನಿ ಕಾಯಿಗಳು ನೇತಾಡುತ್ತಿದ್ದವು. ನರಿಗೆ ಅದನ್ನು ನೋಡಿ ಬಾಯಲ್ಲಿ ಸಮುದ್ರ ಉಕ್ಕಿ ಹರಿಯಿತು. (ರಾಜಕುಮಾರ್ ಅವರ ಒಂದು ಹಾಡಿನಲ್ಲಿ ಸಮುದ್ರ ಉಕ್ಕಿ ಹರಿಯುವ ಸಾಲು ಇದೆ.) ಹಿಂದಿನ ಬಾರಿ, ಅದರ ಹಿಂದಿನ ಬಾರಿ, ಹಿಂದಿನ ಬಾರಿ, ಅದರ ಹಿಂದಿನ ಬಾರಿ, ಹಿಂದಿನ ಬಾರಿ, ಅದರ ಹಿಂದಿನ ಬಾರಿ…. ಹೀಗೇ ಅದೆಷ್ಟೋ ಲಕ್ಷ ಲಕ್ಷ ವರ್ಷಗಳಿಂದ ಈ ನರಿ ವಂಶಕ್ಕೆ ನಸುಗುನ್ನಿಕಾಯಿಯ ನಂಟು ಇದೆ ಮತ್ತು ಪ್ರತಿಸಲ ಈ ಕಾಯಿ ನೋಡಿದಾಗ ಹಿಂದಿನ ನೆನಪು ಒದೆಯುತ್ತೆ. ಈಗಲೂ ನೆನಪು ಬಂತಾ? ನರಿ ಕೇರ್ ಮಾಡಲಿಲ್ಲ. ರೆಂಬೆ ರೆಂಬೆ ರೆಂಬೆ ಹುಡುಕಿ ಹುಡುಕಿ ಹುಡುಕಿ ನಸುಗುನ್ನಿಕಾಯಿ ತಿಂದೇ ತಿಂದಿತು. ಹೊಟ್ಟೆ ತುಂಬಾ ಹಣ್ಣು ಬಿದ್ದ ನಂತರ ಅದರ ಕಣ್ಣು ಎಳೆಯಲು ಶುರು ಆಯಿತಾ? ನರಿ ಮರದ ಬುಡಕ್ಕೆ ಬಂದು ಭೂದೇವಿಗೆ ತಲೆ ಕೊಟ್ಟಿತು. ಅರ್ಧ ಗಂಟೆ ಮಲಗಿರಬಹುದು, ನರಿಗೆ ಎಚ್ಚರ ಆಯಿತು. ಅದಕ್ಕೆ ಸಹಿಸಲಾರದ ಹೊಟ್ಟೆನೋವು ಮತ್ತು ಟಾಯ್ಲೆಟ್ಗೆ ಹೋಗಬೇಕಾದ ಹಿಂಸೆ. ಟಾಯ್ಲೆಟ್ಗೆ ಹೋಯ್ತು, ಟಾಯ್ಲೆಟ್ಗೆ ಹೋಯ್ತು, ಟಾಯ್ಲೆಟ್ಗೆ ಹೋಯ್ತು, ಟಾಯ್ಲೆಟ್ಗೆ ಹೋಯ್ತು…. ಅದರ ಜತೆಗೆ ಹೊಟ್ಟೆ ನೋವು, ನೋವು, ನೋವು…
“ಇನ್ಮೇಲೆ ಬದುಕಿರೋವರೆಗೂ ಈ ಹಾಳಾದ ಕಾಯಿ ತಿನ್ನೋಲ್ಲ, ಅದನ್ನು ಮೂಸಿ ಸಹ ನೋಡುಲ್ಲ, ದೇವರೇ ಇದೊಂದು ಸಲ ನನ್ನ ಬದುಕಿಸಿ ಬಿಡು, ಸಣ್ಣ ವಯಸ್ಸಿನ ಹೆಂಡತಿ, ಪುಟ್ಟ ಮಕ್ಕಳು ಇವೆ ನನಗೆ. ನಡು ನೀರಿನಲ್ಲಿ ಅವರ ಕೈ ಬಿಟ್ಟರೆ ಹೇಗೆ? ದೇವರೇ ಇದೊಂದು ಸಲ ನನ್ನ ಬದುಕಿಸಿಬಿಡು…. ಅಂತ ದೇವರನ್ನು ಬೇಡಿಕೊಂಡಿತು. ಮಾರನೇ ದಿವಸ ಬೆಳಿಗ್ಗೆ ಅಷ್ಟು ಹೊತ್ತಿಗೆ ಅದು ಮಾಮೂಲು ಸ್ಥಿತಿಗೆ ಬಂತಾ? ಇನ್ನುಮುಂದೆ ಖಂಡಿತ ಈ ಜೀವಮಾನದಲ್ಲಿ ಈ ಕಾಯನ್ನು ಎಡಗೈನಲ್ಲಿಯೂ ಮುಟ್ಟೋಲ್ಲ ಅಂತ ಶಪಥ ಮಾಡಿಕೊಂಡಿತು!
“…..ಇದು ಈ ಕತೆ ನರಿ ನಸುಗುನ್ನಿಕಾಯಿ ನೋಡಿದಾಗಲೆಲ್ಲಾ ಮತ್ತೆ ಮತ್ತೆ ರಿಪೀಟ್ ಆಗುತ್ತಲೇ ಬಂದಿದೆ. ಇದೇ ರೀತಿ ಸಾಲ ಪಡೆಯೋದೂ ಸಹ ಗೋಪಿ ಸಾರ್..” ಅಂತ ರಾಜೂ ಹೇಳುತ್ತಿದ್ದ.
ಇದಕ್ಕೆ ಯಾಕೆ ಬಂದೆ ಅಂದರೆ ಕೆಲವು ಚಟಗಳು ಏನು ಮಾಡಿದರೂ ನಿಮ್ಮನ್ನ ಬಿಡೋದೇ ಇಲ್ಲ. ಚಟ್ಟ ಹತ್ತಿದಾಗಲೇ ಚಟದಿಂದ ಮುಕ್ತಿ ಅಂತೆ. ಈ ಬರೆಯೋ ಚಟ ಇದೆ ನೋಡಿ ಅದು ಒಂದು ರೀತಿ ಬ್ರಹ್ಮ ರಾಕ್ಷಸ. ಕೊನೆವರೆಗೂ ನಿಮ್ಮನ್ನ ಬಿಟ್ಟರೆ ಕೇಳಿ..
ಕಥೆಗೆ ಕಾಲಿಲ್ಲ ವಂತೆ. ಎಲ್ಲೆಲ್ಲಿಗೋ ಎಳೆದುಕೊಂಡು ಹೋಗಿಬಿಟ್ಟಿದೆ ತಾನೇ? ಮುಂದಿನ ಸಲ ಇದನ್ನು ದಾರಿಗೆ ತರುವ ಯತ್ನ ಮಾಡುತ್ತೇನೆ…..
ಈಗ ಮುಂದಕ್ಕೆ ಹೋಗಲೇ
ಅಂಟಿಕೊಂಡ ಚಟಗಳು ಚಟ್ಟ ಏರುವವರೆಗೆ ನಿಮ್ಮ ನಂಟು ಬಿಡಲ್ಲ ಎನ್ನುವುದು ಲಾಗಾಯ್ತಿನಿಂದ ನಡೆದು ಬಂದದ್ದು. ಹೀಗಾಗಿ ನನಗೆ ಅಂಟಿರುವ ಹಲವು ಚಟಗಳನ್ನು ಇನ್ನೂ ಬಿಡಲಾಗಿಲ್ಲ. ಅವುಗಳಲ್ಲಿ ಪ್ರಮುಖವಾದದ್ದು ಎಂದರೆ ಮೊದಲನೆಯದು ಕಾಫಿ ಚಟ. ಎರಡನೆಯದು ಓದುವ ಚಟ, ಮೂರನೆಯದು ಬರೆಯುವ ಚಟ… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಸುಮಾರು ಸಿಗುತ್ತೆ. ಅದೆಲ್ಲವನ್ನೂ ಬರೆದು ನಿಮ್ಮನ್ನು ಗೋಳು ಹೊಯಿದುಕೊಳ್ಳುವ ಇರಾದೆ ಖಂಡಿತ ನನಗಿಲ್ಲ. ಹಿಂಸೆ ತಪ್ಪಿದರೆ ಯಾರಿಗೆ ತಾನೇ ಆಗಲಿ ಖುಷಿ ಆಗುವುದು ನೈಸರ್ಗಿಕ ನಿಯಮ. ಪಟ್ಟಿ ಕಡಿಮೆ ಆಗುತ್ತೆ, ಅದರಿಂದ ನೀವು ಖುಷಿ ಪಡಬಹುದು. ಆದರೆ ಅದಕ್ಕೆ ಮೊದಲು ನಿಮಗೆ ನನ್ನ ಈಗ ತಾನೇ ಹೇಳಿದ ಚಟದ ಬಗ್ಗೆ ಕೊಂಚ ವಿವರಿಸು ಎಂದು ನನ್ನ ಅಂತರಾತ್ಮ ಕಟುವಾಗಿ ಆಜ್ಞಾಪಿಸಿದೆ…(ಆಜ್ಞೆ ಮಾಡಿದೆ )ಅದರಿಂದ ಮೊದಲು ಅತ್ತ…
ಕಾಫಿ ಬಗ್ಗೆ ಹೇಳಬೇಕು ಅಂದರೆ ದಿವಸಕ್ಕೆ ಕನಿಷ್ಠ ಅಂದರೂ ಸರಾಸರಿ ಹದಿನೈದು ಕಪ್ ಕಾಫಿ ಹಿರುವ ನರಮಾನವ ನಾನು. ಏಳುತ್ತಿದ್ದ ಹಾಗೆ ಪ್ರಾತಃ ಕರ್ಮದ ನಂತರ ಮೊದಲಿನ ಕಾಫಿ, ವಾಕಿಂಗ್ ಹೊರಡುವ ಮೊದಲು ಎರಡನೆಯದು, ವಾಕಿಂಗ್ ನಂತರ ಮೂರನೆಯದು… ಹೀಗೆ ಪಟ್ಟಿ ಬೆಳೆಯುತ್ತಾ ಬೆಳೆಯುತ್ತಾ ಹೋಗಿ ಸಂಜೆ ಆರರ ಸುಮಾರಿಗೆ ಹದಿನೈದು ಮೀರಿರುತ್ತೆ. ಇನ್ನು ರಾತ್ರಿ ಮಲಗುವ ಮುನ್ನ ಮತ್ತೆ ಐದಾರು ಕಪ್ ಹೊಟ್ಟೆ ಸೇರುತ್ತೆ. ಮಧ್ಯರಾತ್ರಿ ಎಚ್ಚರವಿದ್ದು ಕಾಫಿ ಬಸಿಯುವ ಗುಣಾಡ್ಯ ಯಾರಾದರೂ ಇದ್ದರೆ ಅದು ಅದು ಖಂಡಿತ ನಾನೇ!
ನನ್ನ ವಾಕಿಂಗ್ ಗೆಳೆಯ ಮೂರ್ತಿ ಅಂತ ಒಬ್ಬರು, ಬೆಳಿಗ್ಗೆ ಬೆಳಿಗ್ಗೆ ಸಿಕ್ಕಕೂಡಲೇ ಎದುರು ನಿಲ್ಲುತ್ತಾರೆ. ಎಷ್ಟಾಯಿತು ಅಂತ ಪ್ರಶ್ನಿಸುತ್ತಾರೆ. ಅವರು ಕಾಫಿ ಅಂತ ಹೇಳುಲ್ಲ! ನನಗೆ ಅದು ಅರ್ಥವಾಗುತ್ತೆ. ಉತ್ತರ ಪಡೆದ ನಂತರ ನಿನ್ನೆ ಎಷ್ಟಾಯ್ತು ಎನ್ನುವ ಪ್ರಶ್ನೆ ಶೂಟ್ ಆಗುತ್ತೆ. ನಿನ್ನೆ ಲೆಕ್ಕ ನೆನಪಿಸಿ ನೆನಪಿಸಿಕೊಂಡು ಹೇಳುತ್ತೇನೆ. ಕಣ್ಣು ಬಾಯಿ ಅಗಲಿಸಿ ಈ ವಿವರಣೆ ಅರಗಿಸಿಕೊಳ್ಳ ಬೇಕಾದರೆ ನನಗೆ ವುಡ್ ಹೌಸ್ನ ಬರ್ಟಿ ನೆನಪಾಗುತ್ತಾನೆ. ಬರ್ಟಿ ಅಂದರೆ ಗೊತ್ತು ತಾನೇ? ಬರ್ಟಿ ವೂಸ್ಟರ್ ಹೆಸರಿನ ವುಡ್ ಹೌಸ್ ಕಾದಂಬರಿಗಳ ನಾಯಕ ಆತ! ಈತನ ನೆನಪು ಬಂದರೆ ಸಾಕು ಅವನ ಎಡವಟ್ಟುಗಳ ಮಹಾ ಪರ್ವತ ಎದುರು ನಿಂತು ನಿಮ್ಮ ಬಾಯಿ ಅಗಲವಾಗುತ್ತದೆ ಮತ್ತು ದಂತ ಪಂಕ್ತಿ ಎದ್ದು ತೋರುತ್ತದೆ! ಇದು ಹಾಗಿರಲಿ.

ಹಾಲಿನ ಬಗ್ಗೆ ಒಂದು ರೀತಿಯ ಹುಟ್ಟು ಅಲರ್ಜಿಯ ವಿಶಿಷ್ಟಗುಣ ಹೊಂದಿರುವ ನನ್ನ ಮತ್ತೊಬ್ಬ ಗೆಳೆಯರು ನನ್ನ ಕಾಫಿ ಪುರಾಣ ಕೇಳುತ್ತ ಕೇಳುತ್ತ ಆಶ್ಚರ್ಯ ಚಕಿತರಾಗುತ್ತಾರೆ. ಮತ್ತೊಬ್ಬ ಗೆಳೆಯ ಚಿಕ್ಕಮಗಳೂರು ಮಡಿಕೇರಿ ಮುಂತಾದ ಕಾಫಿ ಬೆಳೆಯುವ ಕಡೆ ಹೋದಾಗಲೆಲ್ಲ ಅಲ್ಲಿಂದ best of the best ಕಾಫೀಪುಡಿ ತಂದು ಕೊಡುತ್ತಾನೆ. ನನ್ನಾಕೆ ನನ್ನ ಸಂಗಡ ಯಾವುದೇ ನಂಟರ ಮನೆಗೆ ಬಂದರೂ ಅಡುಗೆ ಮನೆಗೆ ಮನೆಯೊಡತಿ ಜತೆ ಹೋಗುತ್ತಾಳೆ. ದಯವಿಟ್ಟು ಅವರನ್ನ ಕಾಫಿ ಬೇಕಾ ಅಂತ ಕೇಳಬೇಡಿ ಎನ್ನುವ ಸೂಚನೆ ಕೊಟ್ಟುಬಿಡುತ್ತಾಳೆ. ಈ ಮಧ್ಯೆ ಮತ್ತೊಂದು ನೆನಪು ನುಸುಳಿ ಬಂದು ನಾನು ಮೊದಲು ಎಂದು ನೆತ್ತಿ ಮೇಲೆ ಕೂತಿದೆ. ಮೊದಲು ಅದಕ್ಕೆ ಮಣೆ ಹಾಕಿಬಿಡುತ್ತೇನೆ!
ನಮ್ಮ ಡೈರೆಕ್ಟರ್ ಒಬ್ಬರು ಹೊಸದಾಗಿ ಬಂದರು (ನಾನಿನ್ನೂ ಆಗ ಸರ್ವಿಸ್ ನಲ್ಲಿದ್ದೆ ಮತ್ತು ಒಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆಗಿದ್ದೆ) ಹೊಸಬರಿಗೆ ಶುಭ ಹಾರೈಸುವ ಸಂಪ್ರದಾಯಗಳು ನಾವೇ ಬೆಳೆಸಿದ್ದೆವು. ಕೈಯಲ್ಲಿ ಎರಡೂವರೆ ಕೇಜಿ ತೂಕದ ಬೊಕೆ ಹೊತ್ತು ನಾನು ನಮ್ಮ ಅಧ್ಯಕ್ಷರು ಪಶುಪತಿ (ಈಗ ಅವರು ದೇವರ ಪಾದ ಸೇರಿದ್ದಾರೆ) ಅವರ ಕಚೇರಿಗೆ ಹೋದೆವು. ಸಂಜೆ ನಾಲ್ಕರ ಸಮಯ. ಅವರ ಆಪ್ತ ಸಿಬ್ಬಂದಿ (ಅಂದರೆ ಪಿ ಎ)ನಮ್ಮನ್ನು ಕೂಡಿಸಿದರು. ಏನೋ ಹೇಳಲು ಹಿಂಜರಿಕೆ ತೋರುತ್ತಿದ್ದಾರೆ ಅನಿಸಿತು, ಅವರೊಂದಿಗೆ ಒಂದೆರೆಡು ನಿಮಿಷ ಮಾತು ಆಡಿದ ನಂತರ.
“ಹೇಳಿ ಶಿವಕುಮಾರ್ ಏನು ತೊಂದರೆ..?” ಅಂದೆ. ನನಗೆ ಅವರು ಸುಮಾರು ದಿವಸದ ಪರಿಚಯ.
“ಗೋಪಾಲ್, ಒಂದು ರಿಕ್ವೆಷ್ಟು…..” ಅಂದರು!
“ಹೇಳಿ ಶಿವು….” ಅಂದೆ.
“ಸಾರ್ ಒಳಗಡೆ ಕಾಫಿನೋ ಕೋಕಾ ಕೋಲಾನೋ ಆಫರ್ ಮಾಡ್ತಾರೆ. ಬೇಡ ಅನ್ನಬೇಕು ನೀವು..” ಅಂದರು.
ಡೈರೆಕ್ಟರ್ಗಳ ಬಳಿ ಹೋಗೋದಕ್ಕೆ ಎಲ್ಲರಿಗೂ ಅತ್ಯುತ್ಸಾಹ. ಕಾರಣ ಅಲ್ಲಿ ಅಪರೂಪದ ಡ್ರಿಂಕ್ಸ್, ಖಾರದ ಗೋಡಂಬಿ, ಹುರಿದ ಬಾದಾಮಿ… ಇಂತಹ ನಮ್ಮ ಲೆವೆಲ್ನವರಿಗೆ ತುಂಬಾ ತುಂಬಾ ಅಪರೂಪ ಎನ್ನುವ ತಿಂಡಿ ತೀರ್ಥಗಳು ಸಿಗುತ್ತೆ. ದೊಡ್ಡವರ ಸಂಗಡ ಮೀಟಿಂಗ್ ಅಂದರೆ ಮೊದಲು ತಲೆಗೆ ಬರುವುದು ಈ ಕೋಕಾ ಕೋಲಾ, ಹಲವು ರೀತಿಯ ಸಾಫ್ಟ್ ಡ್ರಿಂಕ್ಸ್, ಪಿಸ್ತಾ, ಗೋಡಂಬಿ, ಬಾದಾಮುಗಳೇ. ಹೀಗಿರಬೇಕಾದರೆ ಈ ಪಿ ಎ ಸಾಹೇಬರು ಬೇಡ ಅನ್ನಿ ಅಂತ ಹೇಳುತ್ತಿದ್ದಾರಲ್ಲಾ.. ಅಂತ ಆಶ್ಚರ್ಯ ಆಯಿತು. ಒಂದು ದೊಡ್ಡ ಆಪರ್ಚೆನುಟಿ ಕಳೆದುಕೊಳ್ಳುತ್ತಾ ಇದ್ದೀವಿ ಎನ್ನುವ ನಿರಾಸೆಯ ಕಾರ್ಮೋಡ ಆವರಿಸಿತು.
“ಯಾಕೆ ಶಿವಕುಮಾರ್? ಎನಿ ಪ್ರಾಬ್ಲಮ್?” ಅಂದೆ.
“ಬೆಳಿಗ್ಗೆಯಿಂದ ಅವರಿಗೆ ವಿಶ್ ಮಾಡೋಕ್ಕೆ ಅಂತ ನೂರಾರು ಜನ ಬರ್ತಿದ್ದಾರೆ ಗೋಪಾಲ್. ಬಂದವರ ಜತೆ ಇವರೂ ಕೋಕಾಕೋಲ ಕಾಫಿ ಕುಡಿಯುತ್ತಲೇ ಇದಾರೆ. ಎರಡು ಲೀಟರಿನ ಇಪ್ಪತ್ತಎರಡು ಬಾಟಲು ಕೋಕಾಕೋಲ ಆಯ್ತು. ಹತ್ತು ಫ್ಲಾಸ್ಕ್ ಅಷ್ಟು ಕಾಫಿ ಆಯ್ತು.. ಅವರ ಗತಿ ಏನು ಅಂತ ನಮಗೆ ಚಿಂತೆ ಆಗಿದೆ. ಅದಕ್ಕೆ ದಯವಿಟ್ಟು ಏನೇ ಆಫರ್ ಮಾಡಿದರೂ ಬೇಡ ಅನ್ನಿ ಪ್ಲೀಸ್….” ಅಂತ ಕೈ ಮುಗಿದರು.
ಪಶುಪತಿ ಮುಖ ನೋಡಿದೆ. ಇಬ್ಬರೂ ಹಾಗೇ ಆಗಲಿ ಶಿವಕುಮಾರ್ ಅಂತ ಆಶ್ವಾಸನೆ ಕೊಟ್ಟೆವು. ಒಳಗೆ ಹೋದೆವಾ… ಡೈರೆಕ್ಟರು ಟೇಕ್ some thing ಅಂತ ಹೇಳಿ ಎದುರಿನ ಬೆಲ್ ಮಾಡಲು ಕೈ ಚಾಚಿದರು. ಏನು ಹೇಳಲಿ ಅಂದಾಗ ಬೇಡ ಸಾರ್. ಊಟ ಈಗ ತಾನೇ ಆಯ್ತು ಅಂತ ಸುಳ್ಳು ಬಿಟ್ಟೆವು.
ಹತ್ತು ನಿಮಿಷ ಆದಮೇಲೆ ಹೊರಗೆ ಬಂದೆವು. ಪಿ ಎ ಶಿವಕುಮಾರ್ ಎರಡೂ ಕೈ ಹಿಡಿದು ಧನ್ಯವಾದ ಹೇಳಿದರು. ಬಹುಶಃ ಅವರ ರಿಕ್ವೆಸ್ಟ್ಗೆ ಓಗೊಟ್ಟವರು, ಅವತ್ತು ನಾವೇ ಮೊದಲಿಗರು ಇರಬೇಕು. ಅಲ್ಲಿಂದ ಹೊರಗೆ ಹೊರಟಾಗ ಒಂದು ಕೈಚೀಲ ಕೊಟ್ಟರಾ? ಆಚೆ ಬಂದಮೇಲೆ ಅದನ್ನು ತೆರೆದು ನೋಡಿದರೆ ಎರಡು ಪಾಕೆಟ್ ಖಾರದ ಗೋಡಂಬಿ ತಲಾ ಒಂದು ಕೇಜಿಯವು, ಇಬ್ಬರಿಗೂ ಒಂದೊಂದು ಅಂತ ಲೆಕ್ಕ! ಕಾಶಿಯಲ್ಲಿ ಬಿಟ್ಟದ್ದು ಬೆಂಗಳೂರಿನಲ್ಲಿ ಪ್ರತ್ಯಕ್ಷ ಆದರೆ ನಿಮಗೆ ಏನಾಗುತ್ತೆ? ನಮಗೂ ಅದೇ ಆಗಿದ್ದು.
ಅಲ್ಲಿನ ತ್ಯಾಗ ಇಲ್ಲಿನ ಭಾಗ್ಯ ಅಂತ ಒಂದು ಹೊಸಾ ಗಾದೆಯ ಹುಟ್ಟಿಗೆ ಇದು ಕಾರಣವಾಯಿತು.
ಈಗ ಪುನಃ ಟ್ರ್ಯಾಕ್ಗೆ ಹೊರಳುತ್ತೇನೆ.
ಇಷ್ಟೆಲ್ಲಾ ಅಡೆ ತಡೆ ಇದ್ದರೂ ನನ್ನ ಚಟ ಮುಂದುವರೆದಿದೆ. ಕಾಫಿ ಚಟ ನನಗೆ ಹೇಗೆ ಹುಟ್ಟಿತು ಎಂದು ತಲೆ ಕೆಡಿಸಿಕೊಂಡಿದ್ದೇನೆ. ಸಿಗರೇಟು ಬೀಡಿ ಚಟ ಇರುವವರು ಅವರು ಮೊದಲು ಹೊಗೆ ಬಿಟ್ಟ ದಿವಸ ಮತ್ತು ಸಂದರ್ಭ ಹಾಗೂ ಅಂದು ಅವರ ಜತೆಯಲ್ಲಿ ಪಾರ್ಟ್ನರ್ ಆಗಿದ್ದವರ ಹೆಸರು ಕುಲಗೋತ್ರ ಇವುಗಳನ್ನು ಸಾವಿನತನಕ ನೆನಪಿಟ್ಟುಕೊಂಡು ಹೇಳುವುದು ಕೇಳಿದ್ದೇನೆ. ಅದೇ ರೀತಿ ಆಲ್ಕೋಹಾಲ್ ಚಟದವರ ಕತೆ ಸಹ ಇದೇ ರೀತಿಯದು. ನನ್ನ ಗೆಳೆಯ ಒಬ್ಬ ಅವನು ಮೊದಲು ಕುಡಿದದ್ದು ಯಾರ ಜತೆ, ಯಾವ ಬೆಟ್ಟಿಂಗ್ನಲ್ಲಿ ಸೋತದ್ದಕ್ಕೆ, ಅವತ್ತು ಯಾವ ವಾರ, ಯಾವ ಬಾರು, ಅದಕ್ಕೆಷ್ಟು ಮೆಟ್ಟಲು ಹತ್ತಿ ಹೋದದ್ದು ಮತ್ತು ಅಂದು ಹೀರಿದ ಆಲ್ಕೋಹಾಲಿಗೆ ತೆತ್ತ ರೊಕ್ಕ ಎಷ್ಟು ಒಂದು ಬಾಟಲಿಗೆ ಆಗ ಎಷ್ಟು ರೇಟು ಇತ್ತು ಮೊದಲಾದ ಸಕಲ ವಿವರಗಳನ್ನೂ ನಿನ್ನೆ ನಡೆದ ಹಾಗೆ ವಿವರಿಸುವ ಮನೋಶಕ್ತಿ ಹೊಂದಿದ್ದಾನೆ! ಇದು ಅಡ್ಡಿಕ್ಟ್ ಆಗಿರುವ ಆಲ್ಕೋಹಾಲಿಕ್ಸ್ಗಳಲ್ಲಿ ಸರ್ವೇ ಸಾಮಾನ್ಯ ಎನ್ನುತ್ತಾರೆ. ಇಂತಹ ಸರ್ವೇ ಸಾಮಾನ್ಯದ ಪರಿಧಿಗೆ ಕಾಫೀಗೆ ಅಡ್ಡಿಕ್ಟ್ ಆದವರು ಕಾಣಿಸದು.
ನನಗೆ ಹೇಗೆ ಈ ಚಟ ಅಂಟಿರಬಹುದು ಎಂದು ನೆನಪಿನ ಹಾಳೆಗಳನ್ನು ಮೊಗಚಿದಾಗ ನನ್ನ ಅಮ್ಮನ ನೆನಪು ಬರುತ್ತದೆ. ಅಮ್ಮ ನಿಗೆ ಕಾಫಿ ಚಟ ಇತ್ತು ಮತ್ತು ಅವಳ ದಿನಚರಿ ಮನೆಗೆ ಸೊಸೆಯರು ಬoದಮೇಲೆ ಹೀಗಿತ್ತು. ಮೊದಲು ಇದನ್ನು ವಿವರಿಸಿಬಿಡುತ್ತೇನೆ.
ಕಾಫಿ ಮತ್ತು ಚೊಂಬು ಅಮ್ಮನಕತೆ
ಬೆಳಿಗ್ಗೆ ಏಳರ ಸುಮಾರಿಗೆ ಅಮ್ಮ ಮನೆಯ ಮುಂದಿನ ಅಂಗಳಕ್ಕೆ ಬಂದು ಅಲ್ಲಿನ ಸೀಮೆಂಟ್ ನೆಲದ ಮೇಲೆ ಚಾಪೆ ಹಾಕುತ್ತಿದ್ದಳು. ನಂತರ ಒಳನಡೆದು ಅವತ್ತಿನ ಎರಡು ಕನ್ನಡ ಪತ್ರಿಕೆ ಆಚೆ ತಂದು ಚಾಪೆಯ ಮೇಲೆ ಕೂಡುತ್ತಿದ್ದಳು. ಕಣ್ಣಿಗೆ ಕನ್ನಡಕ ಏರಿಸಿ ಅವಳು ಮೊದಲ ಪುಟದ ಹೆಡ್ಡಿಂಗ್ ನೋಡುವಷ್ಟರಲ್ಲಿ ಹಿರಿಯ ಸೊಸೆ ಒಂದು ಒಂದೂವರೆ ಸೇರು ಹಿಡಿಯುವ ಹಿತ್ತಾಳೆ ಚೊಂಬು, ಎರಡು ಹಿತ್ತಾಳೆ ಲೋಟ ತಂದು ಚಾಪೆಯ ತುದಿಯಲ್ಲಿ ಇಡುತ್ತಿದ್ದಳು. ಚೊಂಬಿನ ತುಂಬಾ ಹಬೆಯಾಡುತ್ತಿದ್ದ ಕುದಿಯುವ ಕಾಫಿ, ಅದರ ಗಮ ಗಮ ಇಡೀ ರಸ್ತೆಗೆ ಹಬ್ಬುವುದಾ? ಅಮ್ಮ ಚೊಂಬಿನಿಂದ ಲೋಟಕ್ಕೆ ಕಾಫಿ ಸುರಿದುಕೊಂಡು ನಿಧಾನಕ್ಕೆ ಅದನ್ನು ಗುಟುಕು ಗುಟುಕಾಗಿ ಹೀರುತ್ತಾ ಹೀರುತ್ತಾ ಪೇಪರ್ ಓದುವಳು. ಅಕ್ಕ ಪಕ್ಕದ ಅವಳ ಫ್ರೆಂಡ್ಸ್ ಬಂದರೆ (ಬಂದರೆ ಏನು ಕಾಫಿಯ ಗಮ ಗಮ ಅವರನ್ನೂ ಸೆಳೆಯುತ್ತಿತ್ತು) ಅವರಿಗೂ ಕಾಫಿ ಕೊಟ್ಟು ಉಪಚರಿಸುವಳು. ಒಟ್ಟಿನಲ್ಲಿ ಒಂದು ಸೇರಿನಷ್ಟಾದರೂ ಕಾಫಿ ಅವಳ ಹೊಟ್ಟೆ ಸೇರುತ್ತಿತ್ತು. ಆಗ ಕಾಫೀಗೆ ಸಕ್ಕರೆ ಹಾಕುತ್ತಿರಲಿಲ್ಲ. ಬೆಲ್ಲದ ಪುಟ್ಟ ಪುಟ್ಟ ಉಂಡೆಗಳು ಶೆಟ್ಟರ ಅಂಗಡಿಗಳಲ್ಲಿ ಗೋಣಿ ಚೀಲದ ಮೂಟೆಯಲ್ಲಿಟ್ಟು ಮಾರುತ್ತಿದ್ದರು. ಸಕ್ಕರೆ ಮಾರ್ಕೆಟ್ನಲ್ಲಿ ಲಭ್ಯವಿದ್ದರೂ ಬೆಲೆ ಅತಿ ಜಾಸ್ತಿ. ಅದರಿಂದ ಬೆಲ್ಲಕ್ಕೆ ಮೊದಲ ಪ್ರಾಶಸ್ತ್ಯ. ಇದರಲ್ಲಿ ಈಗಿನ ಹಾಗೇ ಆರೋಗ್ಯ ಚಿಂತನೆ ಇರಲಿಲ್ಲ. ಬದಲಿಗೆ cost reduction ತತ್ವ ಇತ್ತು. ಯಾವಾಗ ಬೆಲ್ಲಕ್ಕೆ ಆರೋಗ್ಯದ ಗಾಳಿ ಬೀಸಿತೋ ಅದರ ಬೆಲೆ ಏರುತ್ತಾ ಏರುತ್ತಾ ಹೋಗಿ ಈಗ ಸಕ್ಕರೆ ಬೆಲೆಯ ದುಪ್ಪಟ್ಟು ಮುರಪಟ್ಟು ಆಗಿದೆ. ಶೆಟ್ಟರ ಅಂಗಡಿಯಲ್ಲಿ ಬೆಲ್ಲ ಕೇಳಿ ಪಡೆದು ಅದನ್ನು ಬಾಯಲ್ಲಿಟ್ಟು ಚೀಪುವ ಸುಖ ಈಗ ಯಾರಿಗೂ ಇಲ್ಲ. ಅಂದು ಸಿಗುತ್ತಿದ್ದ ಬೆಲ್ಲದ ಉಂಡೆಗಳನ್ನು ನಾನು ಈಚೆಗೆ ಕಂಡಿಲ್ಲ. ಈಗ ಮುದ್ದೆ ಬೆಲ್ಲ ಇರುತ್ತೆ, ಆದರೆ ಅದು ದಪ್ಪ ಉಂಡೆ. ಬಾಯಲ್ಲಿ ಹಾಕಬೇಕು ಅಂದರೆ ಮುರಿದು ಹಾಕಿಕೊಳ್ಳಬೇಕು.
ಅಮ್ಮ ಕಾಫಿ ಕುಡಿಯುತ್ತಿದ್ದ ಮೇಲಿನ ಕತೆ ಸೊಸೆಯರು ಮನೆಗೆ ಬಂದ ನಂತರ ನಾನು ಕಣ್ಣಾರೆ ಕಂಡದ್ದು.
ಅಡುಗೆ ಮನೆ ಜವಾಬ್ದಾರಿ ಅವಳದೇ ಆಗಿದ್ದಾಗ ಎರಡು ಸೇರು ಕಾಫಿ ಹೊತ್ತಿಗೆ ಅಲ್ಲೇ ಅಡುಗೆ ಮನೆಯಲ್ಲೇ ಕುಡಿಯುತ್ತಿದ್ದಳು! ಅದಕ್ಕೆ ಅಂತಲೇ ಒಂದು ಬೇರೆ ಪಾತ್ರೆ ಮತ್ತು ಕಾಫಿ ಶೋಧಿಸಲು ಒಂದು ಬಟ್ಟೆ ಇತ್ತು. ಕಾಫಿ ಫಿಲ್ಟರ್ ಆಗಲೀ instant ಪುಡಿಯಾಗಲಿ ಇನ್ನೂ ಜನ್ಮ ತಳೆದಿರಲಿಲ್ಲ. ಕಾಫೀಪುಡಿಯನ್ನು ಬಿಸಿನೀರಿನಲ್ಲಿ ಮರಳಿಸಿ ಅದನ್ನು ಬಟ್ಟೆಯಲ್ಲಿ ಶೋಧಿಸಿ ಡಿಕಾಕ್ಷನ್ ಒಂದು ಪಾತ್ರೆಯಲ್ಲಿ ಹಿಡಿದು ಇಡುತ್ತಿದ್ದರು. ಬಟ್ಟೆಯಲ್ಲಿ ಕಾಫಿ ಪುಡಿ ಶೋಧಿಸಿ ಅದನ್ನು ಪೂರ್ಣ ತಿರುವಿ ಡಿಕಾಕ್ಷನ್ ಕೊನೆಯ ಹನಿ ಪಾತ್ರೆಗೆ ಬೀಳಿಸುತ್ತಿದ್ದರು. ಕಾಫಿ ಪುಡಿ ಒಡಲಲ್ಲಿ ತುಂಬಿಕೊಂಡ ಬಟ್ಟೆ ಅಮ್ಮ ಉಡುತ್ತಿದ್ದ ಸೀರೆಯ ಬಾಳೆಕಾಯಿ ತರಹ ಕಾಣುತ್ತಿತ್ತು. ಸೀರೆಯಲ್ಲಿ ಎಲ್ಲಿಯ ಬಾಳೆಕಾಯಿ ಎನ್ನುವ ಆಶ್ಚರ್ಯ ನಿಮಗೆ ಹುಟ್ಟಿದೆ ತಾನೇ?
ಅಮ್ಮನ ಕಾಲದಲ್ಲಿ ಪೆಟ್ಟಿಕೋಟ್ ಪ್ರವೇಶ ಆಗಿರಲಿಲ್ಲ ಮತ್ತು ಹೆಂಗಸರು ಹದಿನಾರು ಮೊಳದ ಸೀರೆ ಉಡುತ್ತಿದ್ದರು. ಸೀರೆ ಸುತ್ತಿಕೊಳ್ಳುವಾಗ ಒಂದು ಕಡೆ ಸೊಂಟದಲ್ಲಿ ಗಂಟು ಹಾಕಿಕೊಂಡು ಸೀರೆ ನೆರಿಗೆ ಹಿಡಿದು ಸುತ್ತಿಕೊಂಡು ಹೊಟ್ಟೆಯ ಭಾಗದಲ್ಲಿ ಸೀರೆಯ ಅಂಚು ಹೊರಮುಖವಾಗಿ ಸಿಕ್ಕಿಸುತ್ತಿದ್ದರು. ಈ ಹೊರಮುಖ ಬಾಳೆಕಾಯಿ ಆಕಾರದಲ್ಲಿ ಇರುತ್ತಿತ್ತು. ಅಡುಗೆ ಮನೆಗೆ ಹೋದಾಗಲೆಲ್ಲ ನನಗೆ ಕಾಫಿ ಚರಟದ ಬಾಳೆಕಾಯಿ ಮತ್ತು ಅಮ್ಮನ ಹೊಟ್ಟೆಯ ಭಾಗದ ಬಾಳೆಕಾಯಿ ಒಂದು ಆಶ್ಚರ್ಯದ ವಸ್ತುವಾಗಿತ್ತು. ಈಗ ಈ ಎರಡೂ ಅಂದರೆ ಬಾಳೆಕಾಯಿ ಸೀರೆ ಹಾಗೂ ಶೋಧಿಸಿದ ಕಾಫೀಪುಡಿಯ ಬಾಳೆಕಾಯಿ ಎಲ್ಲೂ ಔಷಧಕ್ಕೂ ಕಾಣದು. ಒಂದು ಸಂಸ್ಕೃತಿ ಹೀಗೆ ನಾಮಾವಶೇಷ ಆಯಿತು ಎನ್ನುವ ನನ್ನ ಪೀಳಿಗೆಯವರ ದುಃಖ ನನಗೂ ಇದೆ!
ಇಂತಹ ತಾಯಿ ದೇವತೆಯಿಂದ ಕಾಫಿ ಚಟ ನನಗೆ ಬಳುವಳಿ ಎಂದು ನನ್ನ ಬಂಧುಗಳ ಅನ್ವೇಷಣೆ! ಕಾಫಿ ಕುರಿತು ಬರೆಯುತ್ತಾ ಹೋದರೆ ನಾನು ಆದಿಶೇಷ ಆಗುವ ಚಾನ್ಸ್ ಇದೆ. ಆದಿಶೇಷ ಯಾರು ಅಂದ್ರಾ? ಆದಿಶೇಷನ ಕತೆ ಹೇಳುಕ್ಕೆ ಹೊರಟರೆ ಒಂದು ಇಡೀ ವಾರ ಬೇಕು. ಅವರಿಗೆ ಸಾವಿರ ನಾಲಗೆ ಇತ್ತು ಅಂತ ಮಾತ್ರ ಸದ್ಯಕ್ಕೆ ತಿಳ್ಕಲಿ, ಅಷ್ಟು ಸಾಕು. ಒಂದು ನಾಲಿಗೆ ಹೊಡೆತವನ್ನೇ ತಡೆದುಕೊಳ್ಳಲು ಆಗದ ನರಮನುಸರು ನಾವು, ಇನ್ನು ಸಾವಿರ ನಾಲಗೆ ಅಂದರೆ? ನೆನೆಯಲು ಸಹ ಭಯ ತಾನೇ? ಅದರಿಂದ ಬಿಡಿ, ಮಿಕ್ಕಿದ್ದು ಅದು ಈಗ ಬೇಡಿ.
ಕಾಫಿ ಚಟ ಆಯ್ತಾ? ಈಗ ಮುಂದಿನ ಚಟದ ಬಗ್ಗೆ…
ಮುಂದಿನ ಚಟ ನಂಬರ್ ಒನ್ ಓದೋದು, ಅದರ ನಂತರ ಬರೆಯೋದು. ಇವೆರಡನ್ನೂ ಶಾರ್ಟ್ ಅಂಡ್ ಸ್ವೀಟ್ ಆಗಿ ಹೇಳಿಬಿಟ್ಟು ಮುಂದಕ್ಕೆ ಹೋಗ್ತೀನಿ, ತಾವು ಹೂಂ ಅಂದರೆ. ಸರಿ ತಾನೇ…
ಓದುವ ಚಟಕ್ಕೆ ಬಂದರೆ ನಿಮಗೆ ಹಿಂದೇನೆ ಹೇಳಿದ್ದೆ, ಪುಸ್ತಕಗಳನ್ನು ಹೇಗೆ ಹೇಗೆ ಕೊಂಡು ಓದಿದೆ, ಕೊಂಡು ಮುಂದೆ ಓದಲು ಇಟ್ಟೆ ಹಾಗೂ ಯಾರು ಯಾರೋ ಕೊಟ್ಟ ಪುಸ್ತಕಗಳನ್ನು (ಅವರ ಮನೆ ಕಸ ನಿನ್ನ ತಲೆಗೆ ಕಟ್ಟಿ ಅವರು ಆರಾಮವಾಗಿದ್ದಾರೆ… ಇದು ಯಾರು ಯಾವಾಗ ಯಾತಕ್ಕೆ ಹೇಳಿದರು ಎನ್ನುವುದು ನಿಮಗೆ ಚೆನ್ನಾಗಿ ಗೊತ್ತಿದೆ )ತಂದು ಮನೆಯಲ್ಲಿ ಜೋಡಿಸಿದೆ ಎಂದು. ಕಳೆದ ವರ್ಷ ಈ ರೀತಿಯ ಶೇಖರಿಸಿದ ಪುಸ್ತಕಗಳನ್ನು ಮನೆಯಾಕೆಯ ಒತ್ತಡದ ಫಲವಾಗಿ ವಿಲೇವಾರಿ ಮಾಡಬೇಕಾಯಿತು. ಸುಮಾರು ಐನೂರು ಆರನೂರು ಕೇಜಿ ಪುಸ್ತಕ ಟೆಂಪೋದಲ್ಲಿ ಹೋಗಬೇಕಾದರೆ ನನಗೆ ಹೃದಯ ಭಾರವಾಗಿತ್ತು, ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನೂ… ಹಾಡು ಹೃದಯದ ಆಳದಿಂದ ಸಖತ್ ನೋವಿನೊಂದಿಗೆ ಆಚೆ ಬರಲು ದಾರಿ ಹುಡುಕುತ್ತಿತ್ತು! ಅಷ್ಟೊಂದು ಸರಸ್ವತಿ ಹೋದರೂ ಇನ್ನೂ ಅಷ್ಟೇ ಭಾರದ ಸರಸ್ವತಿ ಅಮ್ಮ ಮನೇಲಿದೆ. ಅದಕ್ಕೆ ಯಾವಾಗ ಮುಕ್ತಿ ತಿಳಿಯದು!
ಇನ್ನು ಬರೆಯೋ ಚಟಕ್ಕೆ ಬಂದರೆ ನನ್ನ ಪೀಳಿಗೆಯವರಲ್ಲಿ ಇದು ಅತಿ ಹೆಚ್ಚು. ಜೇಬಿನಲ್ಲಿ ಮೂರು ನಾಲ್ಕು ಪೆನ್ ಇಟ್ಟುಕೊಂಡು ಇವರು ಓಡಾಡುತ್ತಾರೆ. ಜತೆಗೆ ದಿವಸಕ್ಕೆ ಇಂತಿಷ್ಟೇ ಪುಟ ಬರೆಯಬೇಕು ಅಂತ ಪ್ರತಿಜ್ಞೆ ಮಾಡಿರುತ್ತಾರೆ. ಅದಕ್ಕೆ ಅನುಗುಣವಾಗಿ ಅವರ ಈ ಚಟ ಹೊರಹೊಮ್ಮತ್ತದೆ. ಸರಿಸುಮಾರು ನನ್ನೆಲ್ಲ ಗೆಳೆಯರಿಗೂ ಈ ಚಟ ಒಂದು ರೀತಿ ಸಾಂಕ್ರಾಮಿಕ ಜಾಡ್ಯ.

ಕೋವಿಡ್ ಕಾಲದಲ್ಲಿ ನನ್ನ ವಿಮರ್ಶಕ ಗೆಳೆಯರು ಹಠ ಹಿಡಿದು ಹಳೆಯ ಕವಿಗಳ ಗ್ರಾಚಾರ ಬಿಡಿಸಿದರು. ಆಗ ಅವರು ಬರೆದ ಸುಮಾರು ಕವಿಚರಿತ್ರೆ ಗಳನ್ನು ಓದುವ ಸೌಭಾಗ್ಯ ನನ್ನದಾಗಿತ್ತು . ಹೀಗೆ ಚಟ ಅಂಟಿಸಿಕೊಂಡವರು ಅದನ್ನು ಮಿಕ್ಕವರಿಗೂ ಅಂಟಿ ಸುವುದುಂಟು. ಕೆಲವರು ತಮ್ಮ ಈ ಚಟವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುತ್ತಾರೆ. ಮತ್ತೆ ಕೈಯಲ್ಲಿ ಕಿಸಿಯದ ಕುದುರೆಯ ಬೆನ್ನೇರಿ ಬಂತು ಕಲ್ಪನಾ ವಿಳಾಸ ಅಂತೇನೋ ಒಂದು ಹಾಡಿದೆಯಂತೆ. ಕಲ್ಪನೆ ಎನ್ನುವ ಕುದುರೆ ಹತ್ತಿದರೆ ಅದು ಎಲ್ಲೆಲ್ಲಿಗೆ ಕರೆದೊಯ್ಯುತ್ತೆ ಎಂದು ಹೇಳಲು ಆಗದು. ಇದು ಒಂದು ರೀತಿ ನಮ್ಮ ಟಿವಿ ಸೀರಿಯಲ್ಗಳ ಹಾಗೆ. ಹೇಗೋ ಶುರು ಆಗುತ್ತೆ ಎಲ್ಲೆಲ್ಲೋ ಸುತ್ತುತ್ತೆ. ತಾನು ಯಾತಕ್ಕೆ ಹೊರಟೆ ಎನ್ನುವುದು ಬಿಟ್ಟು ಮಿಕ್ಕದ್ದೆಲ್ಲಾ ಬುರುಡೆ ಬಿಡುತ್ತೆ. ಅರ್ಥ ಆಗಲಿಲ್ಲ ತಾನೇ ನಾನು ಹೇಳಿದ್ದು…?
ಕೊಂಚ ತಡೆದುಕೊಳ್ಳಿ, ವಿಷದವಾಗಿ ವಿವರಿಸುತ್ತೇನೆ. ಕತೆಯ ಕೊನೆ ಕೊನೆಗೆ ಬರ್ತಾ ಇದ್ದೀನಿ…..
ಇನ್ನೂ ಇದೆ…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

