ಪತ್ರ ಓದುತ್ತಿದ್ದಂತೆ ಪಾಪ ಆ ಮಹಿಳೆ ಕಛೇರಿಯಲ್ಲೆ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಿಸಲಾಯಿತಂತೆ. ಆ ಮಹಿಳೆಗೆ ಮೂರು ದಿನಗಳ ಕಾಲ ಬಿ.ಪಿ,ಶುಗರೆಲ್ಲಾ ಜಾಸ್ತಿಯಾಗಿ ಹೇಗೋ ವೈದ್ಯರ ಆರೈಕೆಯಲ್ಲಿ ದೇಹಸ್ಥಿತಿ ಸುಧಾರಿಸಿ ಐದು ದಿನದ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಯಿತಂತೆ. ಆದರೆ ನಂತರ ನಡೆದದ್ದೆ ಬೇರೆ ಬಿ.ಜಯಂತ ಎಂಬ ಸಹಕಾರಿ ಸಂಘದ ನಿರ್ದೆಶಕನಿಗೆ ಕಳುಹಿಸುವ ಪತ್ರವನ್ನು ಬಿ.ಜಯಂತಿ ಹೆಸರಿಗೆ ಕಳುಹಿಸಿದ್ದೆ ಇಷ್ಟೆಲ್ಲ ಗಂಡಾಂತರಕ್ಕೆ ಕಾರಣವಾಯಿತೆಂದು ಆ ನಂತರ ತಿಳಿದು ಬಂದು ಬಿ.ಜಯಂತಿಗೆ ಜಯ ಸಿಕ್ಕಷ್ಟು ಸಮಾಧಾನವಾಯಿತೆಂದು ನನ್ನ ಸ್ನೇಹಿತ ಹೇಳಿದ್ದು ಈ ಕಾರಣಕೇಳಿ ನೋಟಿಸಿನ ಗಂಭೀರತೆಗೆ ಸಾಕ್ಷಿ.
ವಿನಾಯಕ ಎಸ್. ನಾಯಕ ಬರಹ ನಿಮ್ಮ ಬರಹ
ಇದೆಂತ ಶೀರ್ಷಿಕೆ ಅಂದುಕೊಂಡಿರಾ, ಸರ್ಕಾರಿ, ಅರೆಸರ್ಕಾರಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರೊಮ್ಮೆ ಕೇಳಿ; ಈ ಶೀರ್ಷಿಕೆಯ ಬಗ್ಗೆ ಪುಟಗಟ್ಟಲೆ ಸ್ಪಷ್ಟನೆ ಅವರಿಂದ ದೊರಕುವುದರಲ್ಲಿ ಯಾವ ಸಂಶಯವು ಇಲ್ಲಾ. ಹೆಸರೆ ಸೂಚಿಸುವಂತೆ ಯಾವುದೋ ಕಾರಣಕ್ಕೆ ಸ್ಪಷ್ಟೀಕರಣ ಕೇಳಿ ನೋಟಿಸ್ ಕಳುಹಿಸಿದ್ದು, ಅಥವಾ ಕಾರಣವೆ ಇಲ್ಲದೆ ಸ್ಪಷ್ಟಿಕರಣ ಬಯಸಿದ್ದು ಇವೆರಡು ಇಲ್ಲವಾದಲ್ಲಿ ಕಾರಣ ಗೊತ್ತಿದ್ದು ಕಾರಣ ತಿಳಿಸುವಂತೆ ಹಕ್ಕುಚ್ಯುತಿ ಮಂಡಿಸುವುದು, ಎಂದು ಸಹ ನಾವು ಗ್ರಹಿಸಬಹುದು. ಈ ಎಲ್ಲಾ ಹೇಳಿಕೆಗಳು ಸಂದರ್ಭಾನುಸಾರವಾಗಿ ತಮ್ಮ ಸೇವಾ ಅವಧಿಯಲ್ಲಿ ಒಂದಲ್ಲಾ ಒಂದೊಮ್ಮೆ ಎದುರಿಸಿಯೆ ತಮ್ಮ ಬದುಕನ್ನು ನೌಕರರು ಕಟ್ಟಿಕೊಂಡಿರುತ್ತಾರೆ. ಹಾಗಾದರೆ ಈ ಹೇಳಿಕೆಯ ಬಗ್ಗೆ ಇರುವ ಊಹಾಪೋಹಗಳ ಕುರಿತು ನಾವಿಲ್ಲಿ ಬೆಳಕು ಚೆಲ್ಲೋಣ.
ಯಾವುದೇ ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಮ್ಮ ಸೇವಾ ಅವಧಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದಲ್ಲಿ, ಕಛೇರಿ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡಿದ್ದಲ್ಲಿ, ಅನಧಿಕೃತ ಗೈರು ಹಾಜರಾಗಿದ್ದಲ್ಲಿ, ಸಾರ್ವಜನಿಕ ಅಹವಾಲಿಗೆ ಉಡಾಫೆ ಮಾಡಿದ್ದಲ್ಲಿ, ಕಛೇರಿ ಅವಧಿಯಲ್ಲಿ ಅನುಚಿತ ವರ್ತನೆ ತೋರಿದ್ದಲ್ಲಿ, ಸಂಸ್ಥೆಗೆ ಸಂಬಂಧಪಟ್ಟ ಸರಂಜಾಮುಗಳಿಗೆ ಹಾನಿ ಉಂಟು ಮಾಡಿದ್ದಲ್ಲಿ, ಮೇಲಧಿಕಾರಿಗಳ ಮಾತಿಗೆ ಎದುರಾಡಿದ್ದಲ್ಲಿ, ಅಥವಾ ಕಛೇರಿ ಅವಧಿಯಲ್ಲಿ ಮದ್ಯಪಾನ, ಧೂಮ್ರಪಾನ ಮಾಡಿ ಕೆಲಸ ನಿರ್ವಹಿಸುತ್ತಿದ್ದಲ್ಲಿ, ಈ ಕಾರಣ ಕೇಳಿ ನೋಟಿಸನ್ನು ಆಯಾ ಸಂಸ್ಥೆಯ ಮೇಲಾಧಿಕಾರಿಗಳು ಸ್ಪಷ್ಟನೆ ಕೋರಿ ನೌಕರರಿಗೆ ಕಳುಹಿಸುತ್ತಾರೆ. ಈ ಮೇಲೆ ತಿಳಿಸಲ್ಪಟ್ಟ ಯಾವುದೇ ಕಾರಣಗಳಿಗೂ ನೌಕರರೆ ಹೊಣೆಯಾಗಿರುವುದರಿಂದ ಇದಕ್ಕೆ ಸೂಕ್ತ ಸ್ಪಷ್ಟನೆ ನೌಕರನೇ ನೀಡಬೇಕಾಗಿರುತ್ತದೆ. ಸ್ಪಷ್ಟನೆ ಕೋರಿ ನೀಡಿದ ನೋಟಿಸಿಗೆ ಸಮಂಜಸವಾಗಿ ಉತ್ತರ ನೀಡಿದ್ದಲ್ಲಿ ಇಲ್ಲವಾದರೆ ಮುಂದೆ ಈ ರೀತಿ ಘಟನೆಯನ್ನು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಪ್ಪೊಪ್ಪಿಗೆ ಬರೆದು ಕೊಟ್ಟಲ್ಲಿ ನೌಕರರ ಮೇಲಿನ ದೂರನ್ನು ಬರ್ಕಾಸ್ತುಗೊಳಿಸಲಾಗುತ್ತದೆ. ಆ ನೌಕರನಿಗೆ ಮೇಲಾಧಿಕಾರಿಗಳಿಂದ ಷರತ್ತುಬದ್ಧ ನಿಯಮಾವಳಿಯನ್ನು ತಿಳಿಸಿ ಕೆಲಸದಲ್ಲಿ ಮುಂದುವರೆಯಲು ಅವಕಾಶ ನೀಡಲಾಗುತ್ತದೆ. ಆದರಿಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಈ ಕಾರಣ ಕೇಳಿ ನೋಟಿಸ್ ನೀಡುವುದು ಸಹ ತಮ್ಮ ಹಕ್ಕನ್ನು ಚಲಾಯಿಸುವ ಹಾಗೂ ತಮಗಾಗದ ನೌಕರರ ತೇಜೋವಧೆ ಮಾಡುವ ಮಾಧ್ಯಮವಾಗಿ ಮಾರ್ಪಾಡಾಗುವುದನ್ನು ನಾವು ನೋಡಬಹುದು. ಅದರ ಆಳ ಅಗಲವನ್ನೊಮ್ಮೆ ಇಲ್ಲಿ ನಾವು ಚರ್ಚಿಸೋಣ.
ಕೆಲವು ಎಂ.ಎನ್.ಸಿ ಕಂಪನಿಗಳಲ್ಲಿ ಈ ಪರಿಪಾಟ ತುಸು ಹೆಚ್ಚಿಗೆ ಎಂದು ನನ್ನ ಸ್ನೇಹಿತರು ಹೇಳುತ್ತಿರುತ್ತಾರೆ, ಅದೇನೆಂದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕೆಲವು ನೌಕರರು ತಮ್ಮ ಮೇಲಾಧಿಕಾರಿಗಳನ್ನು ಮೆಚ್ಚಿಸಲು ಬಕೆಟ್ ಸಿಸ್ಟಮ್ ಎಂದು ಕರೆಯುವ ಪರಿಪಾಟವನ್ನು ರೂಢಿಸಿಕೊಂಡಿರುತ್ತಾರಂತೆ. ಅದೇನೆಂದರೆ ತಮ್ಮ ಮೇಲಧಿಕಾರಿಗಳ ಪ್ರತಿ ಮಾತಿಗೆ ತಲೆ ಆಡಿಸುತ್ತಾ ಜೀ ಹೂಜೂರ ಸಂಸ್ಕೃತಿಯನ್ನು ನಕಲು ಹೊಡಿಯುತ್ತಾ ಕಛೇರಿ ಕೆಲಸದ ಜೊತೆಗೆ ಮೇಲಾಧಿಕಾರಿಗಳ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುತ್ತಾ, ಹೇಳಿದಕ್ಕೆಲ್ಲ ತಲೆ ಆಡಿಸುತ್ತಾ, ಶಹಬ್ಬಾಶ ಸೂಚಿಸುತ್ತ ಅವರ ಕೃಪಾಕಟಾಕ್ಷಕ್ಕೆ ಒಳಪಟ್ಟು ಹುದ್ದೆಯಲ್ಲಿ ಮುಂಬಡ್ತಿ ಪಡೆಯುವುದೋ, ಸಂಬಳ ಹೆಚ್ಚಿಸುವುದೋ ಅಥವಾ ಈ ಕಾರಣ ಕೇಳಿ ನೋಟಿಸಿನಿಂದ ನುಣುಚಿಕೊಳ್ಳುವ ಕೆಲಸವನ್ನು ಮಾಡುತ್ತಾರಂತೆ. ಹಾಗೂ ಇಂತಹ ಚಾಳಿಗೆ ಒಗ್ಗದ ನೌಕರರನ್ನು ವಿನಾಕಾರಣ ಮೇಲಾಧಿಕಾರಿಗಳು ಚಿಕ್ಕ ಚಿಕ್ಕ ತಪ್ಪುಗಳನ್ನು ಹುಡುಕಿ ಈ ಕಾರಣ ಕೇಳಿ ನೋಟಿಸನ್ನು ನೀಡಿ, ಕಿರುಕುಳ ನೀಡುವುದು ಹಾಗೂ ಕೆಲವೊಮ್ಮೆ ಕೆಲಸದಿಂದಲೂ ವಜಾಗೊಳಿಸುವ ಪರಿಪಾಟವು ಇದೆ ಎಂದು ನನ್ನ ಸ್ನೇಹಿತರ ಅಂಬೋಣ. ಆದರೆ ಎಲ್ಲಾ ಕಂಪೆನಿಯ ಮೇಲಾಧಿಕಾರಿಗಳು ಇದೆ ರೀತಿ ಇರುತ್ತಾರೆಂಬುದು ಸತ್ಯಕ್ಕೆ ದೂರವಾದ ಮಾತಾಗಬಹುದು, ಆದರೂ ಈ ಕಾರಣ ಕೇಳಿ ನೋಟಿಸ್ ಕೆಲವೊಮ್ಮೆ ವೈಯಕ್ತಿಕ ಹಗೆ ಸಾಧಿಸುವ ಮಾರ್ಗವಾಗಿರುವುದಂತು ಮೇಲ್ನೋಟಕ್ಕೆ ಕಂಡುಬರುತ್ತದೆ.

ಮಹಿಳಾ ಉದ್ಯೋಗಿಗಳಲ್ಲಿ ನಾನಾ ಪ್ರಕಾರದಲ್ಲಿ ಈ ಕಾರಣ ಕೇಳಿ ನೋಟಿಸ್ ಅವರ ಘನತೆ, ಗೌರವಕ್ಕೂ ಚ್ಯುತಿ ಉಂಟುಮಾಡುವಲ್ಲಿ ಬೆದರಿಕೆಯ ಪತ್ರದಂತೆ ಇಕ್ಕಟ್ಟಿನಲ್ಲಿ ಸಿಲುಕಿಸಬಹುದು, ಇನ್ನು ಸರಕಾರಿ ಹಾಗೂ ಅರೆ ಸರ್ಕಾರಿ ವರ್ಗಗಳಲ್ಲಿ ಈ ಕಾರಣ ಕೇಳಿ ನೋಟಿಸಿನ ಬಗ್ಗೆ ಇರುವ ಅಭಿಪ್ರಾಯ ತುಸು ವಿಭಿನ್ನವಾಗಿದೆ. ಗುತ್ತಿಗೆ ನೌಕರರು, ಅರೆಕಾಲಿಕ ಹುದ್ದೆಯಲ್ಲಿರುವವರು ಈ ನೋಟಿಸಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣವೆನೆಂದರೆ ಅವರಿಗೆ ಸೇವಾ ಭದ್ರತೆಯ ಬಗ್ಗೆ ಸ್ವಲ್ಪ ಸಂಶಯವಿರುತ್ತದೆ, ವರ್ಷ ಪೂರ್ತಿ ದುಡಿಸಿಕೊಂಡು ವರ್ಷದ ಕೊನೆಯಲ್ಲಿ ಒಂದು ದಿನದ ನಿರ್ಗಮ ರಜಾ ನೀಡಿ ಮತ್ತೆ ಪುನರ್ ಸೇವೆಗೆ ಸೇರಿಸಿಕೊಳ್ಳುವ ಈ ಪ್ರಕ್ರಿಯೆಯಲ್ಲಿ ಸೇವಾ ಭದ್ರತೆ ಸ್ವಲ್ಪ ಕಡಿಮೆ ಹಾಗೂ ಬಹಳಷ್ಟು ಕೆಲಸದ ಅವಕಾಶಗಳು ಇರುವುದರಿಂದ ಒಂದೆ ಸಂಸ್ಥೆಯನ್ನು ನಂಬಿ ಬದುಕು ಕಟ್ಟಿಕೊಳ್ಳುವುದು ದೂರದ ಮಾತಾಗಬಹುದು. ಆದರೂ ಕೆಲವೊಮ್ಮೆ ಈ ಕಾರಣ ಕೇಳಿ ನೋಟಿಸನ್ನು ಗಂಭೀರವಾಗಿ ತೆಗೆದುಕೊಂಡರು ತಮ್ಮ ಅಸಹಾಯಕತೆಯನ್ನು ಹೊರಗೆ ಹಾಕುತ್ತಾರೆ ಹೊರತು ಅದರಿಂದಾಗುವ ಪರಿಣಾಮದ ಬಗ್ಗೆ ಅಷ್ಟೋಂದು ತಲೆ ಕೆಡಿಸಿಕೊಳ್ಳುವುದಿಲ್ಲಾ. ನಿಜವಾಗಿಯೂ ಈ ವರ್ಗದಲ್ಲಿ ಕೆಲಸದ ಒತ್ತಡಕ್ಕಿಂತಲೂ ಕೆಲಸದ ಪ್ರಮಾಣ ಜಾಸ್ತಿ ಇರುತ್ತದೆ ಎಂದು ನೌಕರರ ಅಂಬೋಣ. ಇನ್ನೂ ಖಾಯಂ ಸರ್ಕಾರಿ ನೌಕರರಿಗೆ ಮಾತ್ರ ಈ ನೋಟಿಸಿನ ಭಯ ಇರುತ್ತದೆ. ಪ್ರತಿಷತ 95 ರಷ್ಟು ಕಾರಣ ಕೇಳಿ ನೋಟಿಸುಗಳು ನೌಕರರು ಕೆಲಸ ಮಾಡುವ ಕಛೇರಿಯಲ್ಲೆ ಇತ್ಯರ್ಥಗೊಳ್ಳುತ್ತದೆ. ಸ್ವಲ್ಪ ಗಂಭಿರವಾಗಿ ಆರೋಪವಿದ್ದಲ್ಲಿ ಉದಾಹರಣೆಗೆ ಲಂಚ, ದುರ್ನಡತೆಯವು ಇಲಾಖಾ ವಿಚಾರಣೆಯ ಹಂತಕ್ಕೆ ಹೋಗಿ ಇತ್ಯರ್ಥಕ್ಕೆ ಸಮಯವನ್ನು ತೆಗೆದುಕೊಳ್ಳುತ್ತದೆ. ಇಂತಹ ಕಾರಣಗಳು ಕೆಲವೊಮ್ಮೆ ಖಾಯಂ ನೌಕರರ ನೌಕರಿಗೆ ಕುತ್ತು ಬಂದರು ಬಂದಿತು ಎಂಬ ಸಣ್ಣ ಹಿಂಜರಿಕೆ ಅವರಲ್ಲಿ ಮನೆಮಾಡಿರುತ್ತದೆ. ಕಾರಣ ಈ ಕಾರಣ ಕೇಳಿ ನೋಟಿಸ್ ನೌಕರರ ಸೇವಾ ವಹಿಯಲ್ಲಿ ನಮೂದಾಗುತ್ತದೆ. ಈ ನಮೂದಾದ ನೋಟಿಸ್‌ಗಳು ಅವರ ಸೇವಾ ನಿವೃತ್ತಿಯ ಸಮಯದಲ್ಲಿ ನಿವೃತ್ತಿವೇತನವನ್ನು ಪೂರ್ಣಪ್ರಮಾಣದಲ್ಲಿ ತಮ್ಮ ಖಾತೆಗೆ ನಗದಾಯಿಸಿ ವರ್ಗಾಹಿಸಲು ಸಮಯ ಹಿಡಿಯಬಹುದು. ಇಲ್ಲವೆ ಇಲಾಖಾ ವಿಚಾರಣೆಯ ನೆಪ ಹೇಳಿ ಅದನ್ನು ಕಡಿತಗೋಳಿಸಬಹುದು. ಕಾರಣ ಕೇಳಿ ನೋಟಿಸಿನ ಸಂಪೂರ್ಣವಿವರ ಪಡೆದು ಅದರಿಂದಾಗಿ ಸೇವಾ ಹಿಂಬಡ್ತಿ, ಇಲ್ಲವೆ ಆರು ತಿಂಗಳ ಕಾಲ ಕಡ್ಡಾಯ ಸೇವಾ ಕಡಿತವೆಲ್ಲ ಪರಿಶೀಲಿಸಿ ಹೊಸದಾಗಿ ನಿವೃತ್ತಿ ವೇತನವನ್ನು ನಿಗದಿಗೊಳಿಸಬಹುದು. ಈ ಎಲ್ಲ ಪ್ರಕ್ರಿಯೆಯ ಭಯದಿಂದಾಗಿ ಸರಕಾರಿ ಖಾಯಂ ನೌಕರರಿಗೆ ಈ ಕಾರಣ ಕೇಳಿ ನೋಟಿಸಿನ ಭಯ ತುಸು ಜಾಸ್ತಿಯೆ. ಇಷ್ಟೆಲ್ಲ ಗೋಜಲುಗಳ ನಡುವೆ ಈ ಕಾರಣ ಕೇಳಿ ನೋಟಿಸಿನ ಮತ್ತೊಂದು ಮುಖ ಮಾತ್ರ ಸ್ವಲ್ಪ ಹಾಸ್ಯಾಸ್ಪದವಾಗಿ ಹಾಗೂ ಗಂಭೀರವಾಗಿ ನಾವಿದನ್ನು ಪರಿಗಣಿಸಬಹುದು. ಅದೇನೆಂದರೆ ನನಗೆ ಯಾರೋ ಹೇಳಿದ ನೈಜ ಘಟನೆ ಇದು. ಬಿ.ಜಯಂತಿ ಎಂಬ ಹೆಸರಿನ ಒಂದು ಸಹಕಾರಿ ಸಂಘದಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸಮಾಡುವ ಮಹಿಳೆಗೆ ಒಮ್ಮೆ ಲೆಕ್ಕ ಪರಿಶೀಲನಾ ವಿಭಾಗದಿಂದ ಈ ಕಾರಣ ಕೇಳಿ ನೋಟಿಸ ಜಾರಿಮಾಡಿ ತಕ್ಷಣವೆ ಇಲಾಖಾವಿಚಾರಣೆಗೆ ಹಾಜರಾಗುವಂತೆ ಹಾಗೂ ಸಹಕಾರಿ ಸಂಘದ ವಾರ್ಷಿಕ ಲೆಕ್ಕ ಪತ್ರದಲ್ಲಿ ಗಂಭೀರ ಪ್ರಮಾಣದ ವಂಚನೆ ನಡೆದದ್ದು ಮೇಲ್ನೋಟಕ್ಕೆ ಸಾಬಿತಾಗಿದ್ದು ಅದಕ್ಕೆ ಸ್ಪಷ್ಟನೆ ನೀಡುವಂತೆ ನೋಟಿಸನ್ನು ಜಾರಿಗೊಳಿಸಲಾಗಿತ್ತಂತೆ. ಈ ಪತ್ರ ಓದುತ್ತಿದ್ದಂತೆ ಪಾಪ ಆ ಮಹಿಳೆ ಕಛೇರಿಯಲ್ಲೆ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಿಸಲಾಯಿತಂತೆ. ಆ ಮಹಿಳೆಗೆ ಮೂರು ದಿನಗಳ ಕಾಲ ಬಿ.ಪಿ,ಶುಗರೆಲ್ಲಾ ಜಾಸ್ತಿಯಾಗಿ ಹೇಗೋ ವೈದ್ಯರ ಆರೈಕೆಯಲ್ಲಿ ದೇಹಸ್ಥಿತಿ ಸುಧಾರಿಸಿ ಐದು ದಿನದ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಯಿತಂತೆ. ಆದರೆ ನಂತರ ನಡೆದದ್ದೆ ಬೇರೆ ಬಿ.ಜಯಂತ ಎಂಬ ಸಹಕಾರಿ ಸಂಘದ ನಿರ್ದೆಶಕನಿಗೆ ಕಳುಹಿಸುವ ಪತ್ರವನ್ನು ಬಿ.ಜಯಂತಿ ಹೆಸರಿಗೆ ಕಳುಹಿಸಿದ್ದೆ ಇಷ್ಟೆಲ್ಲ ಗಂಡಾಂತರಕ್ಕೆ ಕಾರಣವಾಯಿತೆಂದು ಆ ನಂತರ ತಿಳಿದು ಬಂದು ಬಿ.ಜಯಂತಿಗೆ ಜಯ ಸಿಕ್ಕಷ್ಟು ಸಮಾಧಾನವಾಯಿತೆಂದು ನನ್ನ ಸ್ನೇಹಿತ ಹೇಳಿದ್ದು ಈ ಕಾರಣಕೇಳಿ ನೋಟಿಸಿನ ಗಂಭೀರತೆಗೆ ಸಾಕ್ಷಿ.

ಇನ್ನು ಈ ಕಾರಣ ಕೇಳಿ ನೋಟಿಸಿಗೆ ಕೊನೆಯಿಲ್ಲ; ಹೇಳುತ್ತಾ ಹೋದಂತೆ ಹಲವಾರು ಪ್ರಕರಣಗಳು ಈ ನೋಟಿಸಿನ ವ್ಯಾಪ್ತಿಗೆ ಒಳಪಟ್ಟು ಬೆಳೆಯುತ್ತಾ ಹೊಗುತ್ತದೆ, ಎಂದು ಮುಗಿಯದ ನೀಳ್ಗವಿತೆಯಂತೆ ಉದ್ದವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಕೊನೆಯಿಲ್ಲದ ಕಡಲಂತೆ ಭಾಸವಾಗಬಹುದು ಎಂಬ ಕಾರಣಕ್ಕಾಗಿ ಈ ನೋಟಿಸಿನ ಆಳವಿಸ್ತಾರವನ್ನು ಮನಗಂಡು ಇಲ್ಲಿಗೆ ಮುಕ್ತಾಯಗೋಳಿಸುತ್ತಿದ್ದೇನೆ ನಮಸ್ಕಾರ.

ವಿನಾಯಕ ಎಸ್ ನಾಯಕ ವಿನಾಯಕ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಖರ್ವಾದಲ್ಲಿ ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. “ಕಾಲಮಾನ” (ಕವನ ಸಂಕಲನ-೨೦೧೭), ನಗೆಯ ಹೂ ಚೆಲ್ಲಿ (ಕವನ ಸಂಕಲನ), ಬೊಂಬೆಮಿಠಾಯಿ (ಕಥಾಸಂಕಲನ), ಖಂಡತುಂಡೋಕ್ತಿ (ಹೇಳಿಕಾ ಗುಚ್ಚ) ಕುಚ್ಚೋಡಿ (ಕಾದಂಬರಿ) ಸೇರಿ ಒಟ್ಟು ಎಂಟು ಕೃತಿಗಳು ಪ್ರಕಟವಾಗಿವೆ.
