Advertisement
ಕೇಂದ್ರತ್ಯಾಗಿ ಬಲ ಮತ್ತು ಕರ್ಣನ ಉದಾತ್ತತೆ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕೇಂದ್ರತ್ಯಾಗಿ ಬಲ ಮತ್ತು ಕರ್ಣನ ಉದಾತ್ತತೆ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕೃಷ್ಣನ ಸೂಚನೆಯಂತೆ ಕರ್ಣನ ಭೇಟಿಗೆ ಬಂದ ಕುಂತಿ ಮಮತೆಯ ಭಾವದಿಂದಲೇ ಮಾತನಾಡುತ್ತಾ, ತನ್ನ ಮಕ್ಕಳ ಜೊತೆ ಸೇರಿ ಧರಣಿಯನ್ನು ಆಳಬಹುದೆಂಬ ಆಮಿಷವನ್ನು ಒಡ್ಡುತ್ತಾಳೆ. ಆದರೆ ಅನ್ನದ ಋಣಕ್ಕೆ ತಪ್ಪಿ ನಡೆದು ಪ್ರಾಣವನ್ನು ಉಳಿಸಿಕೊಳ್ಳಲಾರೆನೆಂಬ ಆದರ್ಶ ಕರ್ಣನದ್ದಾಗಿರುತ್ತದೆ. ದೇಹ ಶಾಶ್ವತವಲ್ಲ; ಶರೀರವನ್ನು ನಿಮಿತ್ತವಾಗಿಸಿಕೊಂಡು ಸಂಪಾದಿಸಿದ ಕೀರ್ತಿ ಶಾಶ್ವತವಾದದ್ದು ಎನ್ನುವುದು ಅವನ ದೃಢನಂಬಿಕೆ. ಅದನ್ನೇ ತಾಯಿಗೆ ಅರುಹುತ್ತಾನೆ. ಮತ್ತೆ ತಾಯಿ ಶೋಕಿಸಿದಾಗ ಕರ್ಣನಲ್ಲಿ ಮಾತೃಭಕ್ತಿ ಜಾಗೃತವಾಗುತ್ತದೆ. ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ; ಅರ್ಜುನನನ್ನು ಬಿಟ್ಟು ಉಳಿದ ನಾಲ್ಕೂ ಮಕ್ಕಳನ್ನು ಕೊಲ್ಲುವುದಿಲ್ಲ ಎಂದು ತಾಯಿಗೆ ಮಾತು ಕೊಡುತ್ತಾನೆ.
ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಭೌತಶಾಸ್ತ್ರದಲ್ಲಿ ಕೇಂದ್ರಾಭಿಮುಖ ಬಲ ಮತ್ತು ಕೇಂದ್ರತ್ಯಾಗಿ ಬಲ ಎನ್ನುವ ಎರಡು ಬಗೆಯ ವೃತ್ತೀಯ ಚಲನೆಗಳಿವೆ. ವೃತ್ತದ ಪಥದಲ್ಲಿ ಚಲಿಸುವ ವಸ್ತುಗಳನ್ನು ವೃತ್ತದ ಕೇಂದ್ರದ ಕಡೆಗೆ ಎಳೆಯುವ ಬಲವನ್ನು ಕೇಂದ್ರಾಭಿಮುಖ ಬಲ ಎನ್ನಲಾಗುತ್ತದೆ. ವೃತ್ತದ ಪಥದಲ್ಲಿ ಚಲಿಸುವ ವಸ್ತುಗಳನ್ನು ವೃತ್ತದ ಹೊರಗೆ ಎಳೆಯುವ ಬಲವು ಕೇಂದ್ರತ್ಯಾಗಿ ಬಲ ಎನಿಸಿಕೊಳ್ಳುತ್ತದೆ. ವಾಶಿಂಗ್ ಮೆಶಿನ್, ಮಿಕ್ಸರ್, ಗ್ರೈಂಡರ್, ಮೊಸರು ಕಡೆಯುವ ಯಂತ್ರ ಇವುಗಳೆಲ್ಲವೂ ಕಾರ್ಯನಿರ್ವಹಿಸುವುದು ಕೇಂದ್ರತ್ಯಾಗಿ ಬಲವನ್ನು ಆಧರಿಸಿಕೊಂಡು. ಒಟ್ಟಾರೆಯಾಗಿ ಹೇಳುವುದಾದರೆ, ವೃತ್ತದಿಂದ ವಸ್ತುಗಳನ್ನು ವಿಮುಖಗೊಳಿಸುವ ಬಲವನ್ನು ಕೇಂದ್ರತ್ಯಾಗಿ ಬಲ ಎನ್ನಲಾಗುತ್ತದೆ.

ಕರ್ಣನ ಒಟ್ಟು ಬದುಕನ್ನು ಅವಲೋಕಿಸಿದಾಗ ಎದ್ದುಕಾಣುವ ಸಂಗತಿಯೆಂದರೆ ಅವನ ಉದಾತ್ತತೆ. ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಶ್ರೇಷ್ಠ ವ್ಯಕ್ತಿತ್ವ ಕರ್ಣನದ್ದಾಗಿತ್ತು. ಇದಕ್ಕೆ ನಿದರ್ಶನವಾಗಬಹುದಾದ ಹಲವು ಘಟನೆಗಳು, ಸನ್ನಿವೇಶಗಳು ಆತನ ಬದುಕಿನಲ್ಲಿ ಕಂಡುಬರುತ್ತವೆ. ಆತ ತನ್ನ ಕುಲವನ್ನು ಮರೆಮಾಚಿ ಪರಶುರಾಮನಲ್ಲಿ ವಿದ್ಯೆ ಕಲಿಯಹೊರಟದ್ದು ಮೇಲ್ನೋಟಕ್ಕೆ ಗುರುದ್ರೋಹವಾಗಿ ಕಂಡುಬರುತ್ತದೆ. ಆದರೆ ಇಂತಹ ಕಪಟತನದ ಹಿನ್ನೆಲೆಯಲ್ಲಿದ್ದದ್ದು ವಿದ್ಯಾರ್ಜನೆಯ ಆಕಾಂಕ್ಷೆಯೇ ಹೊರತು ಬೇರೇನೂ ಅಲ್ಲ. ಎದೆಯೊಳಗಿದ್ದ ಸುಳ್ಳನ್ನು ಒಳಗುಳಿಸಿಕೊಂಡೇ ತನ್ನ ಕಾರ್ಯವನ್ನು ಸಾಧಿಸಿಕೊಳ್ಳಬಹುದಾದ ಅಪೂರ್ವ ಅವಕಾಶವನ್ನು ಅವನು ಕಳೆದುಕೊಂಡದ್ದು ಅವನ ಉದಾತ್ತತೆಯಿಂದಾಗಿ. ಭೃಂಗಿಯ ರೂಪದಲ್ಲಿ ಬಂದ ಇಂದ್ರ ಕರ್ಣನ ತೊಡೆಯನ್ನು ಕೊರೆಯತೊಡಗಿದಾಗ ರಕ್ತದ ಧಾರೆ ಹರಿದರೂ ಅದನ್ನವನು ಸಹಿಸಿಕೊಂಡದ್ದು ಗುರುಗಳ ನಿದ್ರೆಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ. ಅಂದರೆ ಗುರುಭಕ್ತಿಯನ್ನು ಹೊಂದಿದ್ದ ಕರ್ಣ ಆ ಕಾರಣದಿಂದಲೇ ಗುರುಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.

ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಶ್ರೀಕೃಷ್ಣ ಕರ್ಣನ ಬಳಿಗೆ ಬರುತ್ತಾನೆ. ರಥದಲ್ಲಿ ತನ್ನ ಜೊತೆಗೇ ಕುಳ್ಳಿರಿಸಿ, ತುಸು ದೂರ ಕರೆದೊಯ್ಯುತ್ತಾನೆ. ಜನ್ಮರಹಸ್ಯ ತಿಳಿಸುತ್ತಾನೆ. ಜೊತೆಗೆ ಸತ್ಯಂತಪರೆಂಬ ದಿವ್ಯಜ್ಞಾನಿಗಳ ಆಶ್ರಮಕ್ಕೆ ದುರ್ಯೋಧನ ಮತ್ತು ಕರ್ಣ ಹೋಗಿದ್ದಾಗ ನಡೆದ ಘಟನೆಯನ್ನು ವಿವರಿಸುತ್ತಾನೆ. ಪಾಂಡವರಲ್ಲಿ ಹಿರಿಯನಾಗಿರುವ ಕರ್ಣನ ಮೂಲಕವೇ ಪಾಂಡವರನ್ನು ನಿರ್ಮೂಲನೆಗೊಳಿಸುವ ಯೋಚನೆ ದುರ್ಯೋಧನನನದ್ದು ಎನ್ನುವುದನ್ನು ಕೃಷ್ಣ ಕರ್ಣನಿಗೆ ಸತ್ಯಂತಪರ ಘಟನೆಯ ಮೂಲಕ ಮನವರಿಕೆ ಮಾಡಿಕೊಡುತ್ತಾನೆ. ಈ ಸಮಯದಲ್ಲಿಯೂ ದುರ್ಯೋಧನನ ಕುರಿತ ಕರ್ಣನ ನಿಲುವು ಬದಲಾಗುವುದಿಲ್ಲ. ಮಿತ್ರತ್ವದ ಪರಿಪಾಲನೆ ಮತ್ತು ಸ್ವಾಮಿನಿಷ್ಠೆ ಎಂಬ ಎರಡು ರೀತಿಯ ಆದರ್ಶಗಳ ಬಂಧನಕ್ಕೊಳಗಾದ ಕರ್ಣ ತಟಸ್ಥನಾಗುತ್ತಾನೆ. ತನ್ನನ್ನು ಅಂಗರಾಜ್ಯದ ಅಧಿಪತಿಯನ್ನಾಗಿಸಿದ ದುರ್ಯೋಧನನ ಕುರಿತಾದ ಅತೀವ ನಿಷ್ಠೆ ಪಾಂಡವ ಪಕ್ಷವನ್ನು ಸೇರಿಕೊಳ್ಳದಂತೆ ಆತನನ್ನು ಪ್ರೇರೇಪಿಸುತ್ತದೆ.

ಕೃಷ್ಣನ ಸೂಚನೆಯಂತೆ ಕರ್ಣನ ಭೇಟಿಗೆ ಬಂದ ಕುಂತಿ ಮಮತೆಯ ಭಾವದಿಂದಲೇ ಮಾತನಾಡುತ್ತಾ, ತನ್ನ ಮಕ್ಕಳ ಜೊತೆ ಸೇರಿ ಧರಣಿಯನ್ನು ಆಳಬಹುದೆಂಬ ಆಮಿಷವನ್ನು ಒಡ್ಡುತ್ತಾಳೆ. ಆದರೆ ಅನ್ನದ ಋಣಕ್ಕೆ ತಪ್ಪಿ ನಡೆದು ಪ್ರಾಣವನ್ನು ಉಳಿಸಿಕೊಳ್ಳಲಾರೆನೆಂಬ ಆದರ್ಶ ಕರ್ಣನದ್ದಾಗಿರುತ್ತದೆ. ದೇಹ ಶಾಶ್ವತವಲ್ಲ; ಶರೀರವನ್ನು ನಿಮಿತ್ತವಾಗಿಸಿಕೊಂಡು ಸಂಪಾದಿಸಿದ ಕೀರ್ತಿ ಶಾಶ್ವತವಾದದ್ದು ಎನ್ನುವುದು ಅವನ ದೃಢನಂಬಿಕೆ. ಅದನ್ನೇ ತಾಯಿಗೆ ಅರುಹುತ್ತಾನೆ. ಮತ್ತೆ ತಾಯಿ ಶೋಕಿಸಿದಾಗ ಕರ್ಣನಲ್ಲಿ ಮಾತೃಭಕ್ತಿ ಜಾಗೃತವಾಗುತ್ತದೆ. ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ; ಅರ್ಜುನನನ್ನು ಬಿಟ್ಟು ಉಳಿದ ನಾಲ್ಕೂ ಮಕ್ಕಳನ್ನು ಕೊಲ್ಲುವುದಿಲ್ಲ ಎಂದು ತಾಯಿಗೆ ಮಾತು ಕೊಡುತ್ತಾನೆ.

*****

ಕರ್ಣನಲ್ಲಿದ್ದ ಇಂತಹ ಉದಾತ್ತ ಮೌಲ್ಯಗಳು ಆತನನ್ನು ಬದುಕಿನ ಕೇಂದ್ರದಿಂದ ವಿಮುಖಗೊಳಿಸುತ್ತವೆ. ಇದು ಸ್ಪಷ್ಟವಾಗಿ ಗೋಚರವಾಗುವುದು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ. ಭೀಷ್ಮ, ದ್ರೋಣರ ನಂತರ ಕೌರವ ಸೇನಾಧಿಪತಿಯಾದ ಕರ್ಣ ಅರ್ಜುನನಿಗೆ ಮುಖಾಮುಖಿಯಾದಾಗ ತನ್ನ ನೈಜಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ವಿಫಲನಾಗುತ್ತಾನೆ. ಇದಕ್ಕೆ ಪ್ರಮುಖ ಕಾರಣ ಆತನನ್ನು ಪದೇ ಪದೇ ಕಾಡುವ ಉದಾತ್ತತೆಯ ಮನೋಭಾವ. ಅರ್ಜುನನಿಗೆ ಮುಖಾಮುಖಿಯಾದ ಆರಂಭಿಕ ಹಂತದಲ್ಲಿಯೇ ಕರ್ಣನಾಡುವ ಮಾತು ಆತನ ಮನೋಧರ್ಮವನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ದೇಹ ನಾಶವಾಗುತ್ತದೆ; ಪ್ರಾಣವೂ ಇನ್ನಿಲ್ಲವಾಗುತ್ತದೆ. ಆದರೆ ನಾಶವಾಗದೆ ಉಳಿಯುವುದು ಯಶಸ್ಸು ಮಾತ್ರ. ಅದನ್ನು ನಾನು ಆಶ್ರಯಿಸಿದ್ದೇನೆ ಎನ್ನುವ ಅವನ ಮಾತು ಮುಂದಿನ ಹಂತದಲ್ಲಿ ನಿಜ ಎನಿಸುತ್ತದೆ. ಬಾಣವನ್ನು ಹೂಡಲು ಮುಂದಾದ ಅವನಿಗೆ ಸಾರಥಿ ಶಲ್ಯ ಅರ್ಜುನನ ಎದೆಗೆ ಗುರಿಯಿಟ್ಟು ಬಾಣ ಪ್ರಯೋಗಿಸುವಂತೆ ಸಲಹೆ ನೀಡುತ್ತಾನೆ. ಅರ್ಜುನ ಪ್ರಾಣ ಕಳೆದುಕೊಂಡರೆ ಅದೇ ದುಃಖದಿಂದ ಧರ್ಮರಾಯನೂ ಸಾಯುತ್ತಾನೆ. ಆಗ ತಾಯಿ ಕುಂತಿಗೆ ತಾನು ಕೊಟ್ಟ ಮಾತನ್ನು ಮೀರಿದಂತಾಗುತ್ತದೆ ಎಂದು ಯೋಚಿಸಿದ ಕರ್ಣ ಶಲ್ಯನ ಮಾತನ್ನು ಕಡೆಗಣಿಸಿ ಅರ್ಜುನನ ತಲೆಯನ್ನು ಗುರಿಯಾಗಿಸಿ ಬಾಣ ಪ್ರಯೋಗಿಸುತ್ತಾನೆ. ಆಗ ಕೃಷ್ಣನು ರಥ ಎಂಟಂಗುಲ ಆಳಕ್ಕಿಳಿಯುವ ಹಾಗೆ ಬೆರಳಿನಿಂದ ಒತ್ತಿದ್ದರಿಂದ ಅರ್ಜುನನಿಗೇನೂ ಹಾನಿಯಾಗುವುದಿಲ್ಲ. ಬಾಣದ ರೂಪವನ್ನು ಪಡೆದಿದ್ದ ಅಶ್ವಸೇನನೆಂಬ ಹಾವು ಅರ್ಜುನನ ಬಗ್ಗೆ ಪೂರ್ವದ್ವೇಷವನ್ನು ಹೊಂದಿರುತ್ತದೆ. ಅದು ತನ್ನನ್ನು ಅರ್ಜುನನ ಮೇಲೆ ಪ್ರಯೋಗಿಸುವಂತೆ ಕರ್ಣನನ್ನು ಕೇಳಿಕೊಳ್ಳುತ್ತದೆ. ಅರ್ಜುನನನ್ನು ಕೊಲ್ಲುವುದಾಗಿ ತಿಳಿಸುತ್ತದೆ. ಈಗಲೂ ಸಹ ಕರ್ಣನು ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬಯಸುತ್ತಾನೆ. ಆ ಬಾಣದ ಪ್ರಯೋಗವನ್ನೇ ತಿರಸ್ಕರಿಸಿಬಿಡುತ್ತಾನೆ. ಇದರಿಂದಾಗಿ ಕೋಪಗೊಂಡ ಸಾರಥಿ ಶಲ್ಯ ರಥದಿಂದಿಳಿದು ಹೊರಟುಹೋಗುತ್ತಾನೆ. ಇದರಿಂದಾಗಿ ಕರ್ಣ ಏಕಾಂಗಿಯಾಗುತ್ತಾನೆ.

ಕರ್ಣ ವಿದ್ಯಾಕಾಂಕ್ಷೆಯಿಂದ ಪರಶುರಾಮನ ಶಿಷ್ಯತ್ವವನ್ನು ಪಡೆದುಕೊಂಡವನು. ಜೊತೆಗೆ ಗುರುನಿಷ್ಠೆಯನ್ನು ಪ್ರದರ್ಶಿಸಿದವನು. ಆದರೆ ಇಂತಹ ಮೌಲ್ಯಯುತವಾದ ಶಿಷ್ಯತ್ವವೇ ಆತನಿಗೆ ಯುದ್ಧರಂಗದಲ್ಲಿ ಬಹುದೊಡ್ಡ ತೊಡಕನ್ನುಂಟುಮಾಡುತ್ತದೆ. ಸಾರಥಿಯಿಲ್ಲದ ರಥವನ್ನು ತಾನೇ ನಿಭಾಯಿಸುತ್ತಾ ಯುದ್ಧ ಮಾಡುತ್ತಿದ್ದ ಕರ್ಣನ ರಥದ ಚಕ್ರವನ್ನು ಭೂಮಿ ಇದ್ದಕ್ಕಿದ್ದ ಹಾಗೆಯೇ ನುಂಗಿಬಿಡುತ್ತಾಳೆ. ಇದರಿಂದಾಗಿ ಚಕ್ರ ಭೂಮಿಯಲ್ಲಿ ಹೂತುಹೋಗಿ, ರಥ ಚಲಿಸದಂತಾಗುತ್ತದೆ. ಭೂಮಿ ಹೀಗೆ ಮಾಡುವುದಕ್ಕೆ ಕರ್ಣನ ಗುರು ಪರಶುರಾಮನ ಮೇಲೆ ಅವಳಿಗಿದ್ದ ಕೋಪವೇ ಕಾರಣವಾಗಿರುತ್ತದೆ. ಇಪ್ಪತ್ತೊಂದು ಸಲ ಭೂಪ್ರದಕ್ಷಿಣೆ ನಡೆಸಿದ ಪರಶುರಾಮ ಕ್ಷತ್ರಿಯ ಅರಸರನ್ನು ಸಂಹಾರ ಮಾಡಿರುತ್ತಾನೆ. ತನ್ನೊಡೆಯರನ್ನು ನಾಶಮಾಡಿದ ಪರಶುರಾಮನ ಮೇಲಿನ ಕೋಪವನ್ನು ಭೂಮಿ ತೀರಿಸಿಕೊಂಡದ್ದು ಅವನ ಶಿಷ್ಯ ಕರ್ಣನ ರಥದ ಚಕ್ರವನ್ನು ನುಂಗುವ ಮೂಲಕ.

ಕರ್ಣ ಉದಾತ್ತತೆಯನ್ನು ತ್ಯಜಿಸಿ, ಸ್ವಾರ್ಥಕ್ಕೆ ಒತ್ತುಕೊಟ್ಟಿದ್ದರೆ ಸಂಪತ್ತು, ಅಧಿಕಾರ ಎಲ್ಲವನ್ನೂ ಗಳಿಸಿಕೊಳ್ಳುತ್ತಿದ್ದ ಎನ್ನುವುದು ಸ್ಪಷ್ಟ. ವಸ್ತುವಿನ ಮೇಲೆ ಪ್ರಯೋಗವಾಗುವ ಬಲವು ಆ ವಸ್ತುವನ್ನು ವೃತ್ತೀಯ ಪಥದಿಂದ ಹೊರಗೆಳೆದು ಹಾಕುವಂತೆ ಕರ್ಣನಲ್ಲಿದ್ದ ಉದಾತ್ತ ಮೌಲ್ಯಗಳು ಆತನನ್ನು ಬದುಕಿನ ಚಲನೆಯಿಂದ ವಿಮುಕ್ತಗೊಳಿಸಿದವು. ಆದರೆ ಇಂತಹ ಆದರ್ಶಗಳನ್ನು ಅಳವಡಿಸಿಕೊಂಡ ಕಾರಣದಿಂದಲೇ ಕರ್ಣನ ವ್ಯಕ್ತಿತ್ವ ಬಹುಮಾನ್ಯವಾಗುವಂತಾಯಿತು. ಈ ಕಾರಣದಿಂದಲೇ ಕವಿ ಪಂಪ ತನ್ನ ಕಾವ್ಯನಾಯಕ ಅರ್ಜುನ ಎನ್ನುವುದನ್ನೂ ಮರೆತವನಂತೆ ಕರ್ಣನನ್ನು ಮನದುಂಬಿ ಹೊಗಳಿದ್ದಾನೆ. ಅನ್ನದ ಋಣವನ್ನು ತೀರಿಸಬೇಕಾದ ಅನಿವಾರ್ಯತೆಯ ಮಧ್ಯೆಯೂ ಪಂಪ ಒಂದೆ ಚಿತ್ತದಿಂ ಕರ್ಣನಂ ನೆನೆವಂತೆ ಮಹಾಭಾರತವನ್ನು ಕರ್ಣ ರಸಾಯನವಾಗಿಸಿರಬೇಕಾದರೆ ಕರ್ಣನ ಶ್ರೇಷ್ಠತೆಯ ಮಟ್ಟ ಏನು ಎನ್ನುವುದು ಅರಿವಾಗುತ್ತದೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ