ಏಕಾಂತವೆಂದರೆ
ಇಲ್ಲಿ
ಯಾರೂ
ಉಳುಕೊಳ್ಳುವುದಿಲ್ಲ
ಪ್ರೀತಿಸಿಬಿಡಿ ಎಲ್ಲರನೂ
***
ನನ್ನ ಮನೆಯೊಳಗೆ
ದೇವರಿಲ್ಲ
ನಿನ್ನ ನೆನಪುಗಳಷ್ಟೇ
***
ಟೀ ಹೀರುವುದರಲ್ಲಿ
ನಾ ಮುಂದು
ಮದವೇರಿಸುವ
ನನ್ನವಳ ತುಟಿಯ ಜೇನದು
***
ಪ್ರೀತಿಯ
ಗರ್ಭಗುಡಿಯಲ್ಲಿಟ್ಟು ಪೂಜಿಸುತ್ತಿರುವವರು ಯಾರು? ಗೆದ್ದವರೇ?
ಸೋತ ನನ್ನಂಥವರು
***
ನನ್ನ ಪುಸ್ತಕದೊಳಗೆ
ನೀ ಇಟ್ಟ
ನವಿಲುಗರಿ
ಮರಿ ಮಾಡಿರಬಹುದೆಂದು ತೆರೆದೆ
ಅದು
ನನ್ನ ಸಾವಿಗೆ
ನಾನೇ ಕಾರಣವೆಂದು ಬರೆದು ಸತ್ತು ಮಲಗಿತ್ತು
***
ಏಕಾಂತವೆಂದರೆ
ನನಗೆ ಬಲು ಪ್ರೀತಿ
ಎಲ್ಲಿದ್ದರೂ ಅವಳು ಪ್ರತ್ಯಕ್ಷವಾಗುತ್ತಾಳೆ
ಎದೆಗಾಕಿ ಕಷ್ಟ ಸುಖ ಕೇಳುತ್ತಾಳೆ
ಮಡಿಲಿಗಾಗಿ
ಹೀಗಲ್ಲ ಹೀಗೆಂದು
ತಲೆಗೂದಲ ನೇವರಿಸುತ್ತಾಳೆ
***
ನನ್ನ
ಗೆಲ್ಲಬೇಕೆಂಬ ಛಲಕ್ಕೆ
ಮುನ್ನುಡಿ ಬರೆದದ್ದು
ಅದು ನೀನೇ
ಓ ಪ್ರೀತಿಯೇ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ

