Advertisement
ತಂತ್ರಜ್ಞಾನದ ಬಿಗಿಮುಷ್ಟಿಯಲ್ಲಿ ಕಲಿಕೆ: ಡಾ. ವಿನತೆ ಶರ್ಮ ಅಂಕಣ

ತಂತ್ರಜ್ಞಾನದ ಬಿಗಿಮುಷ್ಟಿಯಲ್ಲಿ ಕಲಿಕೆ: ಡಾ. ವಿನತೆ ಶರ್ಮ ಅಂಕಣ

ಆಧುನಿಕತೆಯನ್ನು ಹಿಗ್ಗಿಸುತ್ತಾ ನಾವೆಷ್ಟು ಮುನ್ನಡೆಯುತ್ತಿದ್ದೇವೊ ಅಷ್ಟೆ ಪ್ರಮಾಣದಲ್ಲಿ ನಮ್ಮ ಅವಲಂಬನೆಗಳೂ ಹೆಚ್ಚುತ್ತಿವೆ. ಕಾರ್ಪೊರೇಟ್, ಐಟಿ ವಲಯದಲ್ಲಿ ಕೆಲಸ ಮಾಡುವವರು ದಿನವೂ ಕುಡಿಯುವ ಕಾಫಿ ಅವಲಂಬನೆ, ನರ್ಸರಿ ಮಕ್ಕಳ ಕೈಯಲ್ಲಿ ಇರುವ ಐಪ್ಯಾಡ್ ಅವಲಂಬನೆ, ತನ್ನ ಇಡೀ ಯೂನಿವರ್ಸಿಟಿ ಡಿಗ್ರಿ ಕಲಿಕೆಯನ್ನು ಕೈಯಲ್ಲಿರುವ ಫೋನ್ ಮೂಲಕವೇ ಮಾಡಿ ಮುಗಿಸುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಚಲಿಸುತ್ತಿರುವ ಬಸ್ಸಿನಲ್ಲಿ ಕೂತಿರುವ ಪ್ರಯಾಣಿಕನೊಬ್ಬ ಕೂತ ಜಾಗದಲ್ಲೆ ಲ್ಯಾಪ್-ಟಾಪ್ ಮತ್ತು ಹೆಡ್‌ಫೋನ್ಸ್ ಬಳಸುತ್ತಾ ಮೀಟಿಂಗ್‌ನಲ್ಲಿ ಭಾಗವಹಿಸುವುದು ಅದರ ಜೊತೆಗೆ ಸ್ಯಾಂಡ್ವಿಚ್ ತಿಂದು ಮುಂದಿನ ಮೀಟಿಂಗ್‌ಗೆ ತಯಾರಾಗುವುದು ಆಧುನಿಕತೆಯ ಕೆಲ ತಲ್ಲಣಗಳು.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಆಸ್ಟ್ರೇಲಿಯಾದ ಕೆಲ ಕಡೆ ಇದು ಇನ್ನೂ ಕಬ್ಬಿಣದ ಬಾಣಲಿಯಲ್ಲಿ ಕುದಿಯುತ್ತಿರುವ ಸುದ್ದಿ. ಕುದಿಯುವ ಕೊತಕೊತ ರಭಸ ಸ್ವಲ್ಪ ಕಡಿಮೆಯಾಗಿರಬಹುದೇನೊ. ಆದರೆ ನಿನ್ನೆ ಅಚಾನಕ್ಕಾಗಿ ಆ ಕುದಿತಕ್ಕೆ ಸಿಕ್ಕಿಕೊಂಡ ನನ್ನಂಥ ಬಡಪಾಯಿ ಅಧ್ಯಾಪಕರು ಮತ್ತು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಡು ಹೇಳತೀರದ್ದಾಗಿತ್ತು. ನಮ್ಮ ಜೊತೆ ಇದ್ದ ಇತರೆ ಬಡಪಾಯಿಗಳು ಇಡೀ ಶೈಕ್ಷಣಿಕ ಸಂಸ್ಥೆಯ ಸಿಬ್ಬಂದಿ. ಅಂತಹ ಸಂಸ್ಥೆಗಳು ಒಂದಲ್ಲಾ ಎರಡಲ್ಲಾ, ಹಲವುಹತ್ತು.

ನಿನ್ನೆ ಶುಕ್ರವಾರ ಬೆಳ್ಳಂಬೆಳಗ್ಗೆ ಏಳುತ್ತಿದ್ದಾಗ ಆಹಾ ಇನ್ನೇನು ವಾರಾಂತ್ಯ ಬಂತು, ಕಂಪ್ಯೂಟರ್ ಸ್ಕ್ರೀನಿನಿಂದ ಕಣ್ಣು ತೆಗೆಯಬಹುದು, ಒಂದಷ್ಟು ಹಸಿರು ನೋಡಬಹುದು, ಮೈಗೆ ಒಂದಿಷ್ಟು ವ್ಯಾಯಾಮ, ಕೈಗೆ ಕ್ಯಾಮೆರಾ ಅಂತೆಲ್ಲಾ ಆಲೋಚನೆಗಳು ಹುಟ್ಟಿ ಅದಾಗಲೇ ಆಲಸ್ಯದ ಮನೋಭಾವ ಇಣುಕಿತ್ತು.

ಉಹುಂ, ಅಂದುಕೊಂಡಂತೆ ಅದೇನೂ ಆಗಲಿಲ್ಲ. ಶುಕ್ರವಾರ ಬೆಳಗ್ಗೆ ಎಂಟೂ ಇಪ್ಪತ್ತಕ್ಕೆ ಇನ್ಬಾಕ್ಸ್‌ನಲ್ಲಿ ಬಂದ ಇಮೇಲ್ ನನ್ನ ಹಣೆಯಲ್ಲಿ ನೆರಿಗೆ ಮೂಡಿಸಿತ್ತು. ಒಂಭತ್ತು ಗಂಟೆ ತುರ್ತು ಮೀಟಿಂಗ್ ಕರೆಗೆ ಓಗೊಟ್ಟು ವಿಷಯವನ್ನು ತಿಳಿದಾಗ ಸರಿ ಇನ್ನು ಶುಕ್ರವಾರದ ಆಲಸ್ಯಕ್ಕೆ ಜಾಗವಿಲ್ಲ ಎನ್ನುವುದು ಸ್ಪಷ್ಟವಾಯ್ತು.

ವಿಷಯವೇನೆಂದರೆ ಆಸ್ಟ್ರೇಲಿಯಾ, ಅಮೆರಿಕಾ, ಯುಕೆ, ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿ  ಉನ್ನತ ವ್ಯಾಸಂಗ ಒದಗಿಸುವ ಅನೇಕ ಶೈಕ್ಷಣಿಕ ಸಂಸ್ಥೆಗಳು (ಹೈಸ್ಕೂಲ್, ಕಾಲೇಜು, ವಿಶ್ವವಿದ್ಯಾಲಯಗಳು) ಉಪಯೋಗಿಸುವ ಕಲಿಕೆ-ಬೋಧನೆ ತಂತ್ರಜ್ಞಾನದ ಸಾಫ್ಟ್‌ವೇರ್ ವ್ಯವಸ್ಥೆ ಸ್ಥಗಿತವಾಗಿತ್ತು. ಈ ಸಂಸ್ಥೆಗಳು ಉಪಯೋಗಿಸುವ learning management system (LMS) ಹೆಸರು Canvas. ಅದನ್ನು ಯಾರೋ ಹ್ಯಾಕ್ ಮಾಡಿ ಪ್ರಪಂಚದ ಅನೇಕ ಕಡೆಗಳಲ್ಲಿ ಅವ್ಯವಸ್ಥೆ ಉಂಟಾಗುವಂತೆ ಮಾಡಿದ್ದರು.

Learning management system (LMS) ಅಂದರೆ ಈ ಆಧುನಿಕ ಇಪ್ಪತ್ತೊಂದನೆ ಶತಮಾನದಲ್ಲಿ ಸುಮಾರು ದೇಶಗಳ ಶೈಕ್ಷಣಿಕ ಸಂಸ್ಥೆಗಳು ಎಲ್ಲಾ ಕಲಿಕೆ ಮತ್ತು ಬೋಧನೆಗೆಂದು ಉಪಯೋಗಿಸುವ ಆನ್ಲೈನ್ ವ್ಯವಸ್ಥೆ. ಇವುಗಳಲ್ಲಿ ಹಲವಾರು ಬಗೆಗಳಿವೆ – Canvas, Blackboard, Moodle ಇತ್ಯಾದಿ. ಪ್ರಪಂಚದ ಸುಮಾರು ಒಂಭತ್ತು ಸಾವಿರ ಶೈಕ್ಷಣಿಕ ಸಂಸ್ಥೆಗಳು ಕ್ಯಾನ್ವಾಸ್ ವ್ಯವಸ್ಥೆಯನ್ನು ಉಪಯೋಗಿಸುತ್ತಿವೆ.

ಈ ವ್ಯವಸ್ಥೆ ಹೇಗಿರುತ್ತದೆ ಅಂದರೆ, ಪ್ರತಿಯೊಂದು ವಿಷಯವನ್ನು (ಸಬ್ಜೆಕ್ಟ್ ಅಥವಾ ಕೋರ್ಸ್ ಅಥವಾ ಸ್ಟಡಿ ಯೂನಿಟ್ ಎಂದು ಕರೆಯುತ್ತಾರೆ) ಬೋಧಿಸಲು ಮತ್ತು ಕಲಿಸಲು ಉಪಾಧ್ಯಾಯ/ಅಧ್ಯಾಪಕರು ಬೇಕಿರುವ ಸಂಪನ್ಮೂಲಗಳನ್ನು, ಸಬ್ಜೆಕ್ಟ್ ಸಿಲಬಸ್, ಲೆಕ್ಚರ್ ಮತ್ತು ಟುಟೋರಿಯಲ್ ವಸ್ತು, ಬೋಧನಾ ವಿಧಾನ, ಪರೀಕ್ಷೆ ಮತ್ತು ಅಸೈನ್ಮೆಂಟ್‌ಗಳು, ಎಲ್ಲವನ್ನೂ ಆಯಾ ಸಬ್ಜೆಕ್ಟ್‌ಗೆ ಎಂದು ಮೀಸಲಿರುವ ಕೋರ್ಸ್ ಸೈಟ್‌ನಲ್ಲಿ ಶೇಖರಿಸುತ್ತಾರೆ. ಪ್ರತಿ ಸೆಮಿಸ್ಟರ್ ಬೋಧನಾ ವಾರಗಳಲ್ಲಿ ಒಂದೊಂದು ವಾರಕ್ಕೆ ಒಂದೊಂದು ವಿಷ್ಯ ಸಂಬಂಧಿತ module ಇರುತ್ತದೆ. ಹೀಗೆ ಸೆಮಿಸ್ಟರ್‌ನಲ್ಲಿ ಹನ್ನೆರಡು ವಾರಗಳು, module ಗಳು ಎಂದು ಯೋಚಿಸಿದರೆ ಅಧ್ಯಾಪಕವರ್ಗದವರು ಪ್ರತಿಯೊಂದು module ಗೂ ಬಹಳಷ್ಟು ಶ್ರಮವಹಿಸಿ ಕಲಿಕೆ ಮತ್ತು ಬೋಧನೆ ಸಂಪನ್ಮೂಲಗಳನ್ನು ಕಲೆ ಹಾಕುತ್ತಾರೆ. ಇವೆಲ್ಲವೂ Canvas ನಲ್ಲಿ ಲಭ್ಯವಿರುತ್ತದೆ. ಇದನ್ನು ಉಪಯೋಗಿಸಲು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕ್ಯಾನ್ವಾಸ್‌ಗೆ ಲಾಗ್ ಇನ್ ಮಾಡಿಕೊಂಡು ಮುಂದುವರೆಯಬೇಕು. ಉದಾಹರಣೆಗೆ, ಮುಂದಿನ ಸೋಮವಾರ ಬೆಳಗ್ಗೆ ಇರುವ ನನ್ನ ತರಗತಿಗೆ ಬೇಕಾದ ಎಲ್ಲಾ ಕಲಿಕಾ-ಬೋಧನಾ ಸಾಮಗ್ರಿಗಳು ಲಭ್ಯವಾಗುವುದು ನಾನು ಬೋಧಿಸುವ ವಿಷಯಕ್ಕೆಂದು (ಸಬ್ಜೆಕ್ಟ್) ಮೀಸಲಾಗಿರುವ ಕ್ಯಾನ್ವಾಸ್ ಸೈಟ್‌ನಲ್ಲಿ ಮಾತ್ರ. ಅಷ್ಟೇ ಅಲ್ಲ, ನನ್ನ ವಿದ್ಯಾರ್ಥಿಗಳ ಇಮೇಲ್ ಅಡ್ರೆಸ್ ಕೂಡ ಕ್ಯಾನ್ವಾಸ್‌ನಲ್ಲಿ ಮಾತ್ರ ಸಿಗುತ್ತದೆ.

ಇಡೀ ಕ್ಯಾನ್ವಾಸ್ ವ್ಯವಸ್ಥೆಯನ್ನೇ ಹ್ಯಾಕ್ ಮಾಡಿದ ಕಿಡಿಗೇಡಿಗಳು ಉಂಟುಮಾಡಿದ ಕೋಲಾಹಲವನ್ನು ಅನುಭವಿಸಿದಾಗಲೆ ಅದರ ಪರಿಣಾಮ ಅರ್ಥವಾಗುವುದು. ಅವರು ಕ್ಯಾನ್ವಾಸ್ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಆರಂಭಿಸಿದ್ದು ಇದೆ ತಿಂಗಳ ಎರಡರಂದು. ಕ್ರಮೇಣ, ಇದಕ್ಕೆ ನೂರಾರು ಸಂಸ್ಥೆಗಳು ಬಲಿಯಾಗಿವೆ. ಅವುಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ, UCLA, ಡ್ಯೂಕ್ ಯೂನಿವರ್ಸಿಟಿ ಮುಂತಾದ ಹೆಸರುವಾಸಿ ಸಂಸ್ಥೆಗಳೂ ಸೇರಿದಂತೆ ನಮ್ಮ ರಾಣಿರಾಜ್ಯದ ಹಲವಾರು ವಿಶ್ವವಿದ್ಯಾಲಯಗಳು, ಶಾಲೆಗಳೂ ಇವೆ.

ನಿನ್ನೆ ಶುಕ್ರವಾರ ಒಂಬತ್ತು ಗಂಟೆ ಮೀಟಿಂಗಿನಲ್ಲಿ ಮೇಲಧಿಕಾರಿಗಳು ಹೇಳಿದ್ದು ಈ ದಿನ ಪೂರ್ತಿ ನೀವುಗಳು ಜಾಗರೂಕತೆಯಿಂದಿರಬೇಕು. ಕ್ಯಾನ್ವಾಸ್ ಅನ್ನು ತೆರೆಯಲಾಗದೆ ಗಾಬರಿಗೊಂಡು ಕಂಗೆಟ್ಟ ವಿದ್ಯಾರ್ಥಿಗಳಿಗೆ ಸಮಾಧಾನ ಹೇಳಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಅಸೈನ್ಮೆಂಟ್ ಮತ್ತು ಪರೀಕ್ಷೆಗಳ ಸಮಯ. ಇವನ್ನೆಲ್ಲಾ ಮುಂದೂಡಬೇಕು. ಕ್ಯಾನ್ವಾಸ್ ಮೂಲಕವೇ ಮಾಡುತ್ತಿದ್ದ ಎಲ್ಲಾ ಸಂವಹನ ಚಟುವಟಿಕಗಳು ಬಂದ್ ಆಗಿದ್ದವು. ತರಗತಿಗಳನ್ನು ಮುಂದೂಡಬೇಕು ಆದರೆ ಕ್ಯಾನ್ವಾಸ್ ಬಳಸದೆ ವಿದ್ಯಾರ್ಥಿಗಳಿಗೆ ಅದನ್ನು ತಿಳಿಸುವುದು ಹೇಗೆ ಎನ್ನುವ ಪ್ರಶ್ನೆ. ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಇಮೇಲ್ ಮಾಡಬೇಕೆಂದರೆ ಅದೂ ಕಷ್ಟ. ಏಕೆಂದರೆ ಒಬ್ಬ ವಿದ್ಯಾರ್ಥಿಯ ಇಮೇಲ್ ID ಮತ್ತೊಬ್ಬ ವಿದ್ಯಾರ್ಥಿಗೆ ಸಿಗುವಂತೆ ಅವನ್ನು ನಾವು ಬಹಿರಂಗಪಡಿಸುವಂತಿಲ್ಲ. ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಾಗಿ ಪರಿಪಾಲಿಸುವ ‘ಖಾಸಗಿತನ ಮತ್ತು ಗೌಪ್ಯತೆ’ಗಳನ್ನು ಚಾಚೂತಪ್ಪದೆ ಪಾಲಿಸಬೇಕು. ನಮ್ಮೆಲ್ಲರ ನಡೆ-ಕ್ರಮಗಳಿಗೆ ಕಾನೂನಿನ ಕಟ್ಟುಪಾಡುಗಳಿದ್ದವು.

ಹಲವು ಬಗೆಗಳ ಈ ಸಂಕಷ್ಟಗಳನ್ನು ಅನುಭವಿಸುತ್ತಾ, ಹಲವಾರು ತಂಡಗಳಲ್ಲಿ, ಮಜಲುಗಳಲ್ಲಿ ಚರ್ಚಿಸುತ್ತಾ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್‌ರಿಂದ ಹಿಡಿದು ಅಧ್ಯಾಪಕರ ತನಕ ಎಲ್ಲಾರೂ ಸೇರಿದ್ದೆವು. ಶುಕ್ರವಾರ ಮಾಡಬೇಕಿದ್ದ ಬೇರೆಲ್ಲಾ ಕೆಲಸಕಾರ್ಯಗಳಿಗೆ ಕೊಕ್. ವಾರಾಂತ್ಯದ ಸಿಹಿಕನಸು ಕಹಿಯಾಗಿತ್ತು.

ದಿನ ಮುಗಿಯುವ ಹೊತ್ತಿನಲ್ಲಿ ಸಂಸ್ಥೆಯ ಕಾನೂನು ತಜ್ಞರ ತಂಡವು ಮತ್ತು ವೈಸ್ ಚಾನ್ಸಲರ್ ಮತ್ತಿತರ ಮೇಲಧಿಕಾರಿಗಳು ಕೊಟ್ಟ ಸೂಚನೆಗಳನ್ನು ನಮ್ಮನಮ್ಮ ಡಿಪಾರ್ಟ್ಮೆಂಟ್ ಮುಖ್ಯಸ್ಥರು ನಮಗೆ ರವಾನಿಸಿ ಸೂಚ್ಯ ಸಲಹೆಗಳನ್ನು ಕೊಟ್ಟರು. ಕ್ಯಾನ್ವಾಸ್ ಬಳಸದೆ ಹೇಗೆ ನಾವು ವಿದ್ಯಾರ್ಥಿಗಳ ಇಮೇಲ್ ಪಟ್ಟಿಗಳನ್ನು ಪಡೆಯಬಹುದು ಎಂದು ತೋರಿಸಿಕೊಟ್ಟರು. ಆ ನಂತರ ನಾವು ಅಧ್ಯಾಪಕ ಮಂದಿ ವಿದ್ಯಾರ್ಥಿಗಳಿಗೆ ಇಮೇಲ್ ಮಾಡಿ ಪ್ರಸ್ತುತ ಕ್ಯಾನ್ವಾಸ್ ಬಳಕೆ ಸಮಸ್ಯೆ ಏನು ಎಂತು, ಪರ್ಯಾಯ ಕ್ರಮಗಳು ಯಾವುದು ಹೇಗೆ ಎಂತೆಲ್ಲಾ ವಿವರಿಸಿದ್ದೀವಿ.

ಇದೆಲ್ಲಾ ಅನುಭವದಿಂದ ಮನವರಿಕೆಯಾಗಿರುವುದು ನಾವು ಮನುಷ್ಯರು ಅದೆಷ್ಟು ಮಟ್ಟಿಗೆ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದೀವಿ, ಅದು ಕೈಕೊಟ್ಟಿತೆಂದರೆ ನಾವು ಕೈಚೆಲ್ಲಿ ಕೂರಬೇಕು. ನಾವು ತಂತ್ರಜ್ಞಾನ ಮತ್ತು ಯಂತ್ರಗಳ ಮೇಲೆ ಅಖಂಡ ಹಿಡಿತ ಹೊಂದಿದ್ದೀವಿ ಎಂದು ಬೀಗುವ ಗಳಿಗೆಯಲ್ಲೆ ಅದೇ ತಂತ್ರಜ್ಞಾನ ನಮ್ಮನ್ನು ಗುಲಾಮರಾಗಿಸಿರುವ ನಿಜವನ್ನು ಅರಿಯಬೇಕು.

ಹಳೆಯಕಾಲವೆ ಚೆನ್ನಿತ್ತು ಅನ್ನಿಸಿತ್ತು. ಮುದ್ರಿತ ಪುಸ್ತಕ, ಬರೆಯಲು ಪೆನ್ ಮತ್ತು ನೋಟ್ಬುಕ್, ಕಲಿಕಾ ಚಟುವಟಿಕೆಗಳನ್ನು ನಡೆಸಲು ಬಳಸುತ್ತಿದ್ದ ದೊಡ್ಡಹಾಳೆಗಳು ಮತ್ತು ಬಣ್ಣಗಳ ಪೆನ್, ಇತ್ಯಾದಿಗಳು ಬೇಕಲ್ಲವೆ, ಕಿರಿವಯಸ್ಸಿನ ಮಕ್ಕಳಿಗೂ ಕಂಪ್ಯೂಟರ್-ಕೇಂದ್ರಿತ ಕಲಿಕೆ ಬೇಕು ಎಂದಾದರೆ ಇದರ ಪರಿಣಾಮಗಳೇನು, ಎನ್ನಿಸಿತ್ತು. ಕ್ಯಾನ್ವಾಸ್ ಮುಖಾಂತರ ಕಲಿಕೆ ಸಾಧ್ಯವಿಲ್ಲವಾದ್ದರಿಂದ ಮುಂದಿನ ಸೋಮವಾರದ ತರಗತಿಗೆ ನಾನು ಬೇರೆ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ತರಗತಿಯ ಪಠ್ಯವನ್ನು ಮುದ್ರಿಸಿ ಅದರ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದು. ಕಂಪ್ಯೂಟರ್ ಬಳಕೆ ಇಲ್ಲದೆ ಹೊರಾಂಗಣದಲ್ಲಿ ಕೂತು ಮಾತು-ಕತೆ ವಿಧಾನವನ್ನು ಅನುಸರಿಸಿ ಕಲಿಯುವುದು, ಚಟುವಟಿಕೆಗಳನ್ನು ಹೊರಾಂಗಣದ ಪರಿಸರಕ್ಕೆ ಒಗ್ಗುವಂತೆ ಹೊಂದಿಸಿ ಬೇಕಿರುವ ಸಂಪನ್ಮೂಲ ಸಾಮಗ್ರಿಗಳನ್ನು ಈ ವಾರಾಂತ್ಯ ಸಿದ್ಧಪಡಿಸುವುದು, ಹೀಗೆ ಒಂದಷ್ಟು ಉಪಾಯಗಳು ಹೊಳೆದಿವೆ.

ಆಧುನಿಕತೆಯನ್ನು ಹಿಗ್ಗಿಸುತ್ತಾ ನಾವೆಷ್ಟು ಮುನ್ನಡೆಯುತ್ತಿದ್ದೇವೊ ಅಷ್ಟೆ ಪ್ರಮಾಣದಲ್ಲಿ ನಮ್ಮ ಅವಲಂಬನೆಗಳೂ ಹೆಚ್ಚುತ್ತಿವೆ. ಕಾರ್ಪೊರೇಟ್, IT ವಲಯದಲ್ಲಿ ಕೆಲಸ ಮಾಡುವವರು ದಿನವೂ ಕುಡಿಯುವ ಕಾಫಿ ಅವಲಂಬನೆ, ನರ್ಸರಿ ಮಕ್ಕಳ ಕೈಯಲ್ಲಿ ಇರುವ ಐಪ್ಯಾಡ್ ಅವಲಂಬನೆ, ತನ್ನ ಇಡೀ ಯೂನಿವರ್ಸಿಟಿ ಡಿಗ್ರಿ ಕಲಿಕೆಯನ್ನು ಕೈಯಲ್ಲಿರುವ ಫೋನ್ ಮೂಲಕವೇ ಮಾಡಿ ಮುಗಿಸುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಚಲಿಸುತ್ತಿರುವ ಬಸ್ಸಿನಲ್ಲಿ ಕೂತಿರುವ ಪ್ರಯಾಣಿಕನೊಬ್ಬ ಕೂತ ಜಾಗದಲ್ಲೆ ಲ್ಯಾಪ್-ಟಾಪ್ ಮತ್ತು ಹೆಡ್‌ಫೋನ್ಸ್ ಬಳಸುತ್ತಾ ಮೀಟಿಂಗ್‌ನಲ್ಲಿ ಭಾಗವಹಿಸುವುದು ಅದರ ಜೊತೆಗೆ ಸ್ಯಾಂಡ್ವಿಚ್ ತಿಂದು ಮುಂದಿನ ಮೀಟಿಂಗ್‌ಗೆ ತಯಾರಾಗುವುದು ಆಧುನಿಕತೆಯ ಕೆಲ ತಲ್ಲಣಗಳು. ಈ ತಲ್ಲಣಗಳನ್ನು ನಾವು ಗಮನಿಸುವುದು, ಅರಿವಿಗೆ ತಂದುಕೊಂಡು ಚಿಂತಿಸುವುದು, ಆ ಮೂಲಕ ನಾವು ಯಂತ್ರಗಳಾಗುವ ಅಪಾಯವನ್ನು ತಪ್ಪಿಸಿ ಆರೋಗ್ಯಕರ ಜೀವನ ಗುಣಮಟ್ಟವನ್ನು ಉಳಿಸಿಕೊಳ್ಳುವ ಅಗತ್ಯವಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ