Advertisement
ತಾಂತ್ರಿಕ ಕವಿಯ ಮಾಂತ್ರಿಕ ಕವಿತೆಗಳು….: ದೇವರಾಜ್‌ ಹುಣಸಿಕಟ್ಟಿ ಬರಹ

ತಾಂತ್ರಿಕ ಕವಿಯ ಮಾಂತ್ರಿಕ ಕವಿತೆಗಳು….: ದೇವರಾಜ್‌ ಹುಣಸಿಕಟ್ಟಿ ಬರಹ

ಪ್ರೇಮ, ಪ್ರೇಮ ವೈಫಲ್ಯದ ಕುರಿತು ಕವಿತೆಗಳು ನಿಮಗೆ ಈ ಸಂಕಲದಲ್ಲಿ ಢಾಳವಾಗಿಯೇ ಸಿಗುತ್ತವೆ. ಉದಾಹರಣೆಗೆ “ಕಾಳಜಿ”, ಕಟ್ಟಳೆಯೊಳಗೆ “ಗೋರಿ ಅಲ್ಲ ರೆಂಜಿ ಗಿಡ” ಹೀಗೆ ಅನೇಕ ಕವಿತೆಗಳು ನಿಮ್ಮ ವೈಯುಕ್ತಿಕ ಪ್ರೇಮ, ವೈಫಲ್ಯದ ನೋವು ಸುಖ ಎರಡಕ್ಕೂ ಜೊತೆಯಾಗಿ ರಮಿಸುತ್ತವೆ. ಹೀಗೆ ಕವಿಯೊಬ್ಬ ಆಪ್ತವಾಗುತ್ತಲೇ ಹೋಗುತ್ತಾನೆ. ಇಲ್ಲಿ ವೈನು, ವೇಶ್ಯೆ, ಮೆಟ್ಟು, ಪದ, ಕವಿ, ಕವಿತೆ ಹೀಗೆ ಅನೇಕ ವಿಷಯಗಳ ಕವಿತೆಗಳು ನಿಮ್ಮನ್ನ ಮಾಂತ್ರಿಕ ಸ್ಪರ್ಶದಿಂದ ಎದೆ ನೆಲವ ತೇವಗೊಳಿಸದೇ ಇರುವುದಿಲ್ಲ
ಸದಾಶಿವ ಸೊರಟೂರು ಅವರ “ಗಾಯಗೊಂಡ ಸಾಲುಗಳು” ಕವನ ಸಂಕಲನದ ಕುರಿತು ದೇವರಾಜ್‌ ಹುಣಸಿಕಟ್ಟಿ ಬರಹ, ನಿಮ್ಮ ಓದಿಗೆ.

ಹಸಿವಿದೆಯೇ
ಊಟ ತರಲೇನು? ನೀವು ನಮ್ಮ ಅತಿಥಿ
ಉಂಡ ಮೇಲೂ ಗುಂಡು
ನುಗ್ಗಿಸಬಹುದು
ನನ್ನ ಎದೆ ಸಿದ್ಧವಿದೆ….

ಹೀಗೆ ಪ್ರಸಕ್ತ ಜಾಗತಿಕ ಜಗತ್ತಿಗೆ ಮುಖಮಾಡಿ ಬರೆಯಬಹುದಾದ ಕವಿ… ಸದಾಶಿವ ಸೊರಟೂರು..

(ಸದಾಶಿವ ಸೊರಟೂರು)

ಇವರ ಕವಿತೆಗಳ ಮಾಂತ್ರಿಕತೆಗೆ ಸೋಲದವರಿಲ್ಲ. ಅಷ್ಟು ಎದೆಯ ಗಿಲಕಿಗೆ ಕೈ ಹಾಕಿ ಕಲಕಿ ಬಿಡುವ ಭಾವ ಹಂದರವ ಹರವಿ ನಿಲ್ಲುವ ಕವಿ ಇವರು. ಉದಾಹರಣೆಗೆ ಇವರ “ಅವ್ವ ಹಾಕಿದ ಕಸೂತಿ” ಕವಿತೆಯ ಸಾಲುಗಳ ಒಮ್ಮೆ ಓದಿ…

ಹೃದಯಗಳು ಹರಿದ ಮೇಲೆ
ದಯವಿಟ್ಟು ಹೊಲಿಸಿಕೊಳ್ಳಬೇಡಿ..
ತೇಪೆ ಹಾಕಲು ಹೃದಯ
ಬಾಲ್ಯದಲ್ಲಿ ಹರಿದ ಚಡ್ಡಿಯಲ್ಲ…

ಎಲ್ಲರೂ ಅವ್ವನಂತೆ
ಮಾನಕ್ಕಾಗಿ
ಪ್ರೀತಿಗಾಗಿ ಹೊಲೆಯುದಿಲ್ಲ!

ಹೀಗೆ ತಮ್ಮ ಅನುಭವಗಳ, ಲೋಕ ಗ್ರಹಿಕೆಗಳ ತೀವ್ರ ಭಾವ ಸ್ಪರ್ಶಿಯಾಗಿ ಬರೆಯುವ ಅವರು ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳನ್ನು ಬಿಡುಗಣ್ಣಿಂದ ಗ್ರಹಿಸಿ ಬರೆಯಬಲ್ಲ ಸಮಕಾಲೀನ ದ್ವಂದ್ವಗಳಿಗೆ ಸ್ಪಂದಿಸಬಲ್ಲ ಕವಿ ಕೂಡ ಹೌದು. ಅವರ “ದಯವಿಟ್ಟು ಕ್ಷಮಿಸಿ” ಕವಿತೆಯ ಈ ಕೆಳಗಿನ ಸಾಲುಗಳೇ ಅದಕ್ಕೆ ಸಾಕ್ಷಿ.

“ಪದಗಳ ಮಧ್ಯೆ ತುಂಬಾ
ಅಂತರವಿದ್ದರೆ
ಅಪಾರ್ಥ ಹುಡುಕಬೇಡಿ..
ಮಕ್ಕಳನು ನಗರಕೆ ಕಳುಹಿಸಿ
ತಾವು ಅದೇ ಮನೆಯಲಿ ಉಳಿದ
ವೃದ್ಧ ತಂದೆ ತಾಯಿಗಳಿಂದ ಅವುಗಳನು ಕಡ ತಂದು ಕೂರಿಸಿದ್ದೇನೆ.!

ಅವರ ನೋಟ ದಿಕ್ಕೆಂದು ನಿಮ್ಮ ಚಿತ್ತ ಹಿಡಿದಿಡುತ್ತೆ. ನಿಮ್ಮ ಎದೆಗೂ ಗಾಯ ತಂತಾನೇ ರವಾನೆ ಆಗುವಂತೆ. ಸುಮ್ನೆ ಅವರ “ಕತ್ತಲೆ ಪಾಳಿ” ಕವಿತೆ ಸಾಲುಗಳ ಒಮ್ಮೆ ಓದಿ…

“ಈ ನಗರಗಳಂತೂ
ರಾತ್ರಿ ಮಲಗುವುದೇ ಇಲ್ಲ
ನಿದ್ದೆಗೆಟ್ಟು
ಅವೆಷ್ಟು ರೋಗಿಗಳಾಗಿವೆ
ನೋಡಿ…

ಆಚೆ ಈಚೆ ಸರಿದಾಡುತ್ತಾ
ಆಯಸ್ಸನ್ನು ಇಷ್ಟಿಷ್ಟೇ
ಕೊಯ್ಯುತ್ತವೆ.”

ಅವರ ಪ್ರತಿ ಕವಿತೆ ವೈಯುಕ್ತಿಕ ಭಾವದಿಂದ ಜಿಗಿದು ಸಾರ್ವತ್ರಿಕಗೊಳ್ಳುವ ಬಗೆ ದಿಗಿಲು ಹುಟ್ಟಿಸುತ್ತೆ. ಅಂದ್ರೆ ಕವಿ ತ್ರಾಸ ಇಲ್ಲದಂಗ ಕವಿತೆ ಬರದಾನ ಅಂತಾ. ಒಂದು ಒಳನೋಟ ಮತ್ತು ಸಹಜತೆ ಇವೆರಡು ಅವರ ಕವಿತೆಗಳಲ್ಲಿ ಸರಾಗವಾಗಿ ಸಂಚರಿಸಿವೆ ಅಂತಾ ಹೇಳಬಹುದು. ಜಾತ್ರೆ ಮುಗಿದ ಮಾರನೇ ದಿನ” ಕವಿತೆಯ ಈ ಸಾಲುಗಳ ಒಮ್ಮೆ ಓದಿ.

“ತೇರಿನ ಕೊರಳಿನಿಂದ ಬಿದ್ದ
ಹಾರವನ್ನು ಯಾರೊ ಪೊರಕೆಯಲ್ಲಿ ಗುಡಿಸಿ ಹಾಕಿ ಎದ್ದು ಹೋಗಿದ್ದಾರೆ
ನಗರ ಸಭೆ ಗಾಡಿ ತುಂಬ ಸುವಾಸನೆ..

ಆಟಿಕೆಯ ಗಂಟಿನಿಂದ ತಪ್ಪಿಸಿಕೊಂಡ
ಗೊಂಬೆಯೊಂದು
ಒಂಟಿತನಕ್ಕೆ ನಡುಗಿ ಬಿಕ್ಕುತ್ತಿದೆ
ರಮಿಸುವವರಿಲ್ಲದೆ “

ಬದುಕಿನ ವಿಷಣ್ಣತೆಯನ್ನು ಹೀಗೆ ಹಿಡಿದಿಡುವ ಸಾಮರ್ಥ್ಯ ಅವರಿಗೆ ದಕ್ಕಿದೆ. ಅವರ ಕಾವ್ಯ ದೃಷ್ಟಿ ತೀಕ್ಷಣ ಅನ್ನುವುದಕ್ಕೆ ಇದು ಸಾಕ್ಷೀ. ತಂದೆಯ ಕುರಿತು ಅವರು ಬರೆದ ಕವಿತೆಗಳು ಕೂಡ ಗಮನಾರ್ಹ.. “ಅಪ್ಪ ತೊಟ್ಟ ಗಾಯ” ಕವಿತೆಯಲ್ಲಿ…

ಅಪ್ಪನು ತೊಟ್ಟ ಹಳೆಯ
ಬನಿಯನ್ನಿನ ನಾಲ್ಕಾಣೆ ಗಾತ್ರದ ತೂತುಗಳಲ್ಲಿ..
ಉಳಿದೆ ಇರುವ ಗಾಯ
ಬಾಳಲೇಬೇಕಾದ ದರ್ದನ್ನು
ಅಪ್ಪ ಸುಖಿಸುತ್ತಿದ್ದ…

ಅಲಮಾರಿನಲಿ ಅಪ್ಪನಿಗೆಂದು ತಂದ ಅಂಗಿಗಳು ಎಷ್ಟೊಂದು
ಒಂದಾದರೂ ತೊಡಲಿಲ್ಲ
ದೂರ ಸರಿಯುತ್ತಿದ್ದ
ಕಡಿಸಿ ಕೊಂಡಂತೆ ಚೇಳು… “

ಹೀಗೆ ಬದುಕಿನ ಸಂಕಟ ನೋವು ನಿಟ್ಟುಸಿರು ಎಲ್ಲವನ್ನು ಕಾವ್ಯವಾಗಿಸುವ ಮೂಲಕ ನಮಗೆ ಆಪ್ತವಾಗುವ ಕವಿ ಸದಾಶಿವ ಸೊರಟೂರು. ಸಣ್ಣ ಸಣ್ಣ ಸಂಗತಿಗಳಲ್ಲಿ ದೊಡ್ಡ ದೊಡ್ಡ ಪರಿಕರಗಳ ಹಾಸು ಹೊಕ್ಕಾಗಿಸುವ ಚಾಕಚಕ್ಯತೆ, ರೂಪಕ ಭಾಷೆ ಎರಡೂ ಇವರಿಗೆ ದಕ್ಕಿದೆ. ಉದಾಹರಣೆಗೆ “ಹೊಂದಿಸಿ ಬರೆಯಿರಿ” ಮತ್ತು “ಊರು ಸೇರದ ಬಸ್ಸನ್ನು ಯಾರೂ ಹತ್ತುವುದಿಲ್ಲ” ಕವಿತೆಗಳೇ ಸಾಕ್ಷೀ.

ಒಂದು ಸರಿಯಾದ ಪದಕ್ಕೆ
ಇಡೀ ಬದುಕು ಸಾಲದಿರುವಾಗ
ಒಂದು ಬಿಟ್ಟ ಸ್ಥಳಕ್ಕೆ
ಪದದ ತಲಾಷು ಸುಲಭವಲ್ಲ…

ಬರೆಯುವ ಉಸಾಬರಿ
ಬೇಡವೆಂದರೆ ಮೌಖಿಕ ಪ್ರಶ್ನೆಗಳಿವೆ
ಎದುರಿಗೆ ನಿಂತು ಉಗುಳು ನುಂಗ ಬೇಕು
ಅಂಕವನ್ನಲ್ಲದೆ ನಮ್ಮ
ಉಸಿರನ್ನು ನಾವೇ ನುಂಗ ಬೇಕು…

ಪ್ರೇಮ, ಪ್ರೇಮ ವೈಫಲ್ಯದ ಕುರಿತು ಕವಿತೆಗಳು ನಿಮಗೆ ಈ ಸಂಕಲದಲ್ಲಿ ಢಾಳವಾಗಿಯೇ ಸಿಗುತ್ತವೆ. ಉದಾಹರಣೆಗೆ “ಕಾಳಜಿ”, ಕಟ್ಟಳೆಯೊಳಗೆ “ಗೋರಿ ಅಲ್ಲ ರೆಂಜಿ ಗಿಡ” ಹೀಗೆ ಅನೇಕ ಕವಿತೆಗಳು ನಿಮ್ಮ ವೈಯುಕ್ತಿಕ ಪ್ರೇಮ, ವೈಫಲ್ಯದ ನೋವು ಸುಖ ಎರಡಕ್ಕೂ ಜೊತೆಯಾಗಿ ರಮಿಸುತ್ತವೆ. ಹೀಗೆ ಕವಿಯೊಬ್ಬ ಆಪ್ತವಾಗುತ್ತಲೇ ಹೋಗುತ್ತಾನೆ. ಇಲ್ಲಿ ವೈನು, ವೇಶ್ಯೆ, ಮೆಟ್ಟು, ಪದ, ಕವಿ, ಕವಿತೆ ಹೀಗೆ ಅನೇಕ ವಿಷಯಗಳ ಕವಿತೆಗಳು ನಿಮ್ಮನ್ನ ಮಾಂತ್ರಿಕ ಸ್ಪರ್ಶದಿಂದ ಎದೆ ನೆಲವ ತೇವಗೊಳಿಸದೇ ಇರುವುದಿಲ್ಲ.

ಕವಿತೆಯ ಸಾಲುಗಳಿಂದ
ತಿವಿಸಿಕೊಂಡು
ಯಾವುದೊ ಪುಟದಲ್ಲಿ
ಪ್ರಜ್ಞೆ ತಪ್ಪಿ ಬೀಳಬಹುದು..
ವೈನು ಕೂಡ ಕೆಡವಬಹುದು
ಬಿದ್ದವನಷ್ಟೇ ಏಳಬಹುದು..
ಕವಿತೆಗೆ ಸೋತವನಿಗೆ ಮುಕ್ತಿ ಎಲ್ಲಿ?

ಇಷ್ಟೆಲ್ಲಾ ಕಾವ್ಯ ಪ್ರೇಮದ ಕವಿಯ ಕವಿತೆಗಳು ಕೆಲವೊಮ್ಮೆ ಅವಸರಕ್ಕೆ ಬಿದ್ದು ಬರದಾರೇನೋ ಅನ್ನಿಸುತ್ತೆ? ಧಾವಂತ ಓಟ ಅಲ್ಲಲ್ಲಿ ಸಹಜ ಓಘಕ್ಕೆ ತಡವರಿಸಿದಂತೆ ಭಾಸವಾಗುತ್ತೆ. ಒಮ್ಮೊಮ್ಮೆ ಒಂದೇ ಅಚ್ಚಿಗೆ ಬಿದ್ದಂತ ಕವಿತೆಗಳು ಕಾಣುತ್ತವೆ.

ಗಾಯಗೊಂಡ ಸಾಲುಗಳು ಈ ಸಂಕಲನಕ್ಕೆ ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ದೊರೆತಿದೆ. ವೀರಲೋಕ ಪ್ರಕಾಶನ ಈ ಸಂಕಲನ ಪ್ರಕಟಿಸಿದೆ. ಮಹೇಶ ಬಳ್ಳಾರಿ ಅವರು ಕಿರು ಅಭಿಪ್ರಾಯ ಕೂಡ ಇಲ್ಲಿ ದಾಖಲಿಸಿದ್ದಾರೆ. ಒಟ್ಟು ಈ ಸಂಕಲನದಲ್ಲಿ 40 ಕವಿತೆಗಳಿವೆ. ಕವಿ ಸದಾಶಿವ ಸೊರಟೂರು ಸಂಕಲನವನ್ನು ಅರ್ಧ ಬರೆದಿಟ್ಟ ಕವಿತೆಗೆ, ಮರೆಯಲಾಗದ ಹಾಡು, ಹುಡುಗಿ ಮತ್ತು ಗಾಯಗೊಂಡ ಬದುಕಿಗೆ ಅರ್ಪಿಸಿದ್ದಾರೆ. ಜಿ. ಎನ್. ಮೋಹನ್ ಬೆನ್ನುಡಿ ಬರೆದು ಹಾರೈಸಿದ್ದಾರೆ. ಅತ್ಯಂತ ಆಪ್ತ ಕವಿತೆಗಳ ನಮ್ಮ ಓದಿಗೆ ಒದಗಿಸಿದ ಸದಾಶಿವ ಸೊರಟೂರವರಿಗೆ ಧನ್ಯವಾದಗಳನ್ನು ಹೇಳುತ್ತಾ…

(ಕೃತಿ: ಗಾಯಗೊಂಡ ಸಾಲುಗಳು (ಕವನ ಸಂಕಲನ), ಲೇಖಕರು: ಸದಾಶಿವ ಸೊರಟೂರು, ಪ್ರಕಾಶಕರು: ವೀರಲೋಕ ಪುಸ್ತಕ, ಬೆಲೆ: 110/-)

About The Author

ದೇವರಾಜ್‌ ಹುಣಸಿಕಟ್ಟಿ

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. "ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು" ಇವರ ಪ್ರಕಟಿತ ಕೃತಿ ಕವಿತೆಯ ಓದು, ಬರೆಯುವುದು ಇವರ ಹವ್ಯಾಸ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ